Oppanna.com

ಆ ಮೂರೊರಿಶಲ್ಲಿ ಮಂತ್ರ ಮಾಂತ್ರ ಕಲ್ತದಲ್ಲ!

ಬರದೋರು :   ಒಪ್ಪಣ್ಣ    on   27/04/2012    41 ಒಪ್ಪಂಗೊ

ಬೇಸಗೆ ಸುರು ಆದರೆ ಸಾಕು, ಬೈಲಿನ ಮಕ್ಕೊಗೆಲ್ಲ ಪುರುಸೊತ್ತೇ.
ಆಟ ಆಡುದು, ಅಜ್ಜನ ಮನಗೆ ಹೋಪದು, ನೆಂಟ್ರು ಕಟ್ಟುದು, ಉಯ್ಯಾಲೆ ತೇಲುದು – ಇದೆಲ್ಲವೂ ಮದಲಿಂಗೇ ನೆಡಕ್ಕೊಂಡಿತ್ತು. ಈಗ ಹೀಂಗೆ ಊರು ತಿರುಗುತ್ತದು ರಜ ಕಮ್ಮಿ ಆದರೂ, ಒರಿಶ ಇಡೀ ಕಲ್ತ ಶಾಲೆಮಕ್ಕೊಗೆ ರಜೆ ಸಮೆಯ ರಜ ಹೊಸ ಹುರುಪು ಕೊಡ್ತದು ನಿಘಂಟೇ.
ಬೇಸಗೆ ರಜೆಲಿ ಮಕ್ಕೊಗೆ ಹೇದು ನೆಡೆತ್ತ ವಿಶೇಷ ಕಾರ್ಯಂಗಳಲ್ಲಿ ಒಂದು “ವಸಂತ ವೇದ ಪಾಠ ಶಾಲೆ”.
ನಮ್ಮ ಬೈಲಿಲಿಯೂ ಹಲವು ವಸಂತ ವೇದಪಾಠ ಶಾಲೆಗೊ ಇದ್ದು.
ಮದಲಿಂದಲೇ ಇದ್ದದು ಕೆಲವು ಆದರೂ, ಇತ್ತೀಚೆಗೆ ಅಲ್ಲಲ್ಲಿ ಹಲವು ಸುರು ಆದ್ದದು ಒಳ್ಳೆ ಲಕ್ಷಣವೇ.
ಮಕ್ಕಳ ರಜೆಯ ಕಾಲಲ್ಲಿ ಮಾಂತ್ರ ನೆಡೆತ್ತ ಈ ಮೂರೊರಿಶದ ಶಾಲೆ, ಒರಿಶಕ್ಕೊಂದು ಕ್ಲಾಸಿನ ಹಾಂಗೆ ನೆಡೆತ್ತು, ಮೂರೊರಿಶದ ಈ ಕ್ಳಾಸಿಂಗೆ ಎಲ್ಲೋರಂತೆ ಒಪ್ಪಣ್ಣನೂ ಹೋಗಿತ್ತಿದ್ದ.
ಆ ಕತೆ ರಜ್ಜ ಮಾತಾಡುವನೋ?
~

ಚಾಕೊಟೆ ಶ್ರೀ ಷಣ್ಮುಖದೇವಸ್ಥಾನ ಹೇಳಿತ್ತುಕಂಡ್ರೆ, ನಮ್ಮ ಬೈಲಕರೆಯ ಹತ್ತರೆ ಇಪ್ಪದು.
ಬಯಂಕರ ದೊಡ್ಡ ದೇವಸ್ಥಾನ ಏನಲ್ಲ, ಹದಾದ್ದು; ಆದರೆ ಚೆಂದದ್ದು. ಸಣ್ಣ ಷಣ್ಮುಖಮೂರ್ತಿ ಮಡಗಿದ ಸಣ್ಣ ಗರ್ಭಗುಡಿ. ಅದರ ಹೆರ ಸಣ್ಣ ಅಂಗಣ, ಗೋಪುರ – ಶೀಟಿನ ಮಾಡು ಹಾಕಿ – ಒಂದೇ ಹನಿಯೂ ಒಳ ಬೀಳದ್ದ ನಮುನೆ ಮನಾರಕ್ಕೆ ವೆವಸ್ತೆ.
ಹೆರಾಣ ಸುತ್ತಿಲಿ – ಮೂಡು ಗೋಪುರಂದ ಹೆರ ಇಪ್ಪ ಅಂಗಣಕ್ಕೆ ಶೀಟು ಹಾಕಿದ್ದವು.
ದೇವಸ್ಥಾನದ ಬಲತ್ತಿಂಗೆ “ಷಣ್ಮುಖ ಪ್ರಸಾದ” ಹೇದು ಒಂದು ಅಡಿಗೆ ಕೋಣೆ, ಅದರ ಒತ್ತಕ್ಕೆ ಅತಿಥಿ ಗೃಹ, ಅದರ ಹತ್ತರೆ – ದೇವಸ್ಥಾನದ ಆಪೀಸು, ಚಾಕೊಟೆಮಾವ ಕೂದು ಬರಕ್ಕೊಂಡಿದ್ದದು.
ಒಪ್ಪಣ್ಣಂಗೆ ಉಪ್ನಾನ ಆದ ಕಾಲಲ್ಲಿ ಚಾಕೊಟೆ ಮಾವ – ಶಂಕರನಾರಣ ಭಟ್ರು – ದೇವಸ್ಥಾನದ ಮೋಗ್ತೇಸರರು.  ಸ್ವತಃ ವೈದಿಕ ಧರ್ಮದ ಭಕ್ತರಾದ ಅವು ವಿಶೇಷ ಶ್ರದ್ಧೆಲಿ ದೇವಸ್ಥಾನವ ನೆಡೆಶಿಂಡಿತ್ತವು.
~
ಆ ಚಾಕೊಟೆ ದೇವಸ್ಥಾನಲ್ಲಿ ವೇದಪಾಠ ಶಾಲೆ ನೆಡಕ್ಕೊಂಡಿತ್ತು.
ಮಧೂರಿಲಿ, ಸುಬ್ರಮಣ್ಯಲ್ಲಿ – ಹೀಂಗಿರ್ತ ‘ಹೆಸರು ಹೋದ’ ಕೆಲವೇ ಇದ್ದೊಂಡಿಪ್ಪಗ ಅವುಗಳೊಟ್ಟಿಂಗೆ ಚಾಕೊಟೆ ದೇವಸ್ಥಾನವೂ ಒಂದಾಗಿತ್ತು!
~

ವೇದಪಾಠಶಾಲೆಯ ಶುದ್ದಿ ಹೇಳೇಕಾರೆ ಉಪ್ನಾನಂದಲೇ ಸುರುಮಾಡೆಕ್ಕಪ್ಪೋ – ಒಪ್ಪಣ್ಣಂಗೆ ಉಪ್ನಾನ ಆದ ಸಮೆಯಂದ ತೊಡಗಿ, ಆ ಒರಿಶದ ರಜೆ ಬಪ್ಪನ್ನಾರವೂ ಮನೆಲಿ ಜೋರು ಕೇಳಿಗೊಂಡಿತ್ತು – ಇವನ ಚಾಕೊಟೆಗೆ ಹಾಕೆಕ್ಕು, ಚಾಕೊಟೆಗೆ ಕಳುಸೇಕು – ಹೇಳಿಗೊಂಡು.
ಪೇಟಗೆ ಹೋಗಿ ಬಂದ ಅಪ್ಪನ ಬೇಗಿಲಿ ಎಂತ ಇದ್ದು – ಹೇದು ಅರಟುತ್ತ ಕಾಲ ಅದು; ತಿಂಬಲೆಯೋ, ಗುರುಟುಲೆಯೋ ಮಣ್ಣ ಎಂತಾರು ಸಿಕ್ಕಿರೆ ದೆಸೆ ಇದಾ!
ಒಂದು ದಿನ, ಪೇಟಗೆ ಹೋಗಿದ್ದ ಅಪ್ಪ° ಬಪ್ಪಗ ಬೇಗಿಂದಲೂ ದೊಡ್ಡ ಪ್ಲೇಷ್ಟಿಗು ಟ್ರಂಕುಪೆಟ್ಟಿಗೆ ತಂದವು, ನೇಲುಸಿಂಡು; ‘ಸೂಟುಕೇಸು ’ (suitcase)  ಹೇಳ್ತದು ಅದರ –  ಆರುದೇ ನಂಬ್ರ ಮಾಡದ್ರೂ ಅದು ದೊಡ್ಡ‘ಕೇಸು’ವೇ!
ಅದಿರಳಿ. 🙂

ಟಿಕ್ಕನೆ ಹಾರ್ತ ಕೊಳಿಕ್ಕೆಮುಚ್ಚಲು ಬಿಡುಸಿ , ಒಳ ತೆಗದು ನೋಡಿರೆ – ಕಾಲಿ! 😉
ಎಂತಾರಿಕ್ಕು ಹೇಳಿರೆ, ಎಂತದೂ ಇತ್ತಿಲ್ಲೆ. ಇದೆಂತಕೆ ಈಗ – ಹೇದು ವಿಚಾರುಸಿದ್ದು ಮತ್ತೆಯೇ.
ಇದು ಒಪ್ಪಣ್ಣಂಗೆ ಚಾಕೊಟೆಗೆ ಹೋಪಗ ಸರಂಜಾಮು ತುಂಬುಸಲೆ – ಹೇಳುವಗಳೇ ಒಪ್ಪಣ್ಣಂಗೆ  ಬೆಶಿ ಗೊಂತಾದ್ದು!
~
ಅಷ್ಟ್ರೊರೆಂಗೆ –ಅಮ್ಮನ ಒಟ್ಟಿಂಗೆ ಅಜ್ಜನಮನೆಗೆ ಹೋಗಿ ಗೊಂತಿತ್ತು.
ಹಲಸಿನ ಕಾಯಿ ಹದಾ ಬೆಳದಪ್ಪಗ ಹೋಗಿ ಕೂದರೆ, ಒಳ್ಳೆತ ಬೆಳದು, ಬೇಶಿ, ಹಪ್ಪಳ ಉಂಡೆ ತಿಂದು, ಒಳುದ್ದರ ಒತ್ತಿ, ಒಳುದ್ದರ ಒಣಗುಸಿ, ಒಳುದ್ದರ ಕಟ್ಟುವನ್ನಾರವೂ – ಅಜ್ಜನಮನೆಲೇ ಕೂದುಗೊಂಡಿದ್ದದು.
ಆದರೆ, ಆ ಸಮೆಯಲ್ಲಿ ಅಮ್ಮನ ಬೇಗಿದ್ದ ಕಾರಣವೋ ಏನೋ – ಇಷ್ಟುದೊಡ್ಡ ಪೆಟ್ಟಿಗೆ ಬೇಕಾಯಿದಿಲ್ಲೆ!
ಆದರೆ ಈಗ ಹಾಂಗಲ್ಲ, ಒಪ್ಪಣ್ಣ ಮಾಂತ್ರ – ಇಷ್ಟು ಸಾಮಾನು ತೆಕ್ಕೊಂಡು!
~

ಮರದಿನ ಉದಿಯಪ್ಪಗಾಣ ಬಸ್ಸಿಂಗೆ ಅಪ್ಪನೊಟ್ಟಿಂಗೆ ಚಾಕೊಟೆಗೆ ಹೋಪದು –  ಹೇದು ನಿಗಂಟಾತು.
ಹೊಸ ಜಾಗೆ, ಹೊಸ ಜೀವನ, ಹೊಸ ವಾತಾವರಣ, ಹೇಂಗಿಕ್ಕೋ? ಚಾಕೊಟೆ ಎಲ್ಲಿ? ಇಲ್ಲೇ ಹತ್ತರೇಡ, ಉಮ್ಮಪ್ಪ. ಕಂಡೂ ಗೊಂತಿಲ್ಲೆ. ನಾಳೆ ಅಪ್ಪ ಒಪ್ಪಣ್ಣನ ಅಲ್ಲಿ ಬಿಟ್ಟಿಕ್ಕಿ ಒಪಾಸು ಬತ್ತವು!
ಮತ್ತೆ ಇತ್ಲಾಗಿ ಮನಗೆ ಬತ್ತದು ಯೇವತ್ತೋ?! ಒಂದು ಗಳಿಗೆ ಪುರುಸೊತ್ತಿಲ್ಲದ್ದೆ ಮಂತ್ರಪಾಟ ಅಡ!
ಎರಡು ತಿಂಗಳಿನ ಕ್ಳಾಸು ಅಡ ಅದು! ಷೇ!

ಬರವಲೆ ಪುಸ್ತಕ, ಪೆನ್ನು, ಪೆನ್ಸಿಲು, ಪೆನ್ನುಕಡ್ಡಿ, ಮೂರು ಜೆತೆ ಒಸ್ತ್ರಂಗೊ, ತೋರ್ತು (ಚೆಂಡಿಹರ್ಕು), ಹೊದಕ್ಕೆ – ಇದೆಲ್ಲವನ್ನೂ ಮನಾರಕ್ಕೆ ಸೂಟುಕೇಸಿಲಿ ತುಂಬುಸಿದ್ದದು ಅಮ್ಮನೇ.
ಅಕೇರಿಗೆ ಒಂದು ಕೌಳಿಗೆ ಸಕ್ಕಣವೂ ಮಡಗಿ -ಚೆಟ್ಟೆ ಸೂಟುಕೇಸು ಉರುಟಪ್ಪನ್ನಾರ ತುಂಬುಸಿ ಅಪ್ಪಗ ಸೂಟುಕೇಸು ತೆಯಾರಾತು.
ಸೂಟುಕೇಸು ಗುರ್ತ ಸಿಕ್ಕುಲೆ ಹೇಳಿಗೊಂಡು – ಇಂಗ್ಳೀಶು ಅಕ್ಷರದ ಷ್ಟಿಕ್ಕರಿಂದ ಒಪ್ಪಣ್ಣನ ಹೆಸರು ಜೋಡುಸಿ ಬರದೂ ಆತು! ಒಳುದ ಷ್ಟಿಕ್ಕರುಗೊ ಮತ್ತೆ ಒಪ್ಪಕ್ಕ ಮೈಗಿಡೀ ಅಂಟುಸಿದೋ ಏನೋ, ನೋಡ್ಳೆ ಒಪ್ಪಣ್ಣ ಅಲ್ಲಿದ್ದರಲ್ಲದೋ?
ದಿನಾಗುಳೂ ಜಗಳ ಮಾಡಿದ ಒಪ್ಪಕ್ಕನ ಹತ್ತರೆ ಆ ದಿನ ಜಗಳವೇ ಮಾಡಿದ್ದಿಲ್ಲೆ ;-(
~

ಉದಿಯಪ್ಪಗ ಅಪ್ಪನೊಟ್ಟಿಂಗೆ ಹೆರಟಾತು.
ನಿನ್ನೆ ತುಂಬುಸಿದ ಬಾಧಿ ಸೂಟುಕೇಸಿನ ಟ್ರಂಕುಪೆಟ್ಟಿಗೆ ಅಪ್ಪನ ಕೈಲಿ, ಒಂದು ಪಾಟೆ, ಸಾಬೊನು ಪೆಟ್ಟಿಗೆ – ಒಳ ಒಂದು ಸಾಬೊನು, ಹಲ್ಲು ತಿಕ್ಕುತ್ತ ಹತ್ಯಾರುಗೊ – ಇದೆಲ್ಲ ತುಂಬುಸಿದ ಹಗೂ..ರದ ನೀಲಿ ಬಾಲ್ದಿ ಒಪ್ಪಣ್ಣನ ಕೈಲಿ!
ಬೇರೆಯೇ ಯೇವದೋ ಒಂದು ಊರಿಂಗೆ ಹೋವುತ್ತ ನಮುನೆ ಒಪ್ಪಣ್ಣಂಗೆ ಅನುಸಿತ್ತು ಒಂದರಿ
ಅಲ್ಲಿಗೆತ್ತುವಗ ಕಾಲಿಕಾಲಿ ಇದ್ದರೂ, ಮತ್ತೆ ಜೆನ ಸೇರಿತ್ತು.
ಒಪ್ಪಣ್ಣ ಅಲ್ಲದ್ದೆ, ಸುಮಾರು ನೂರು-ನೂರೈವತ್ತು ಜೆನ ಮಂತ್ರ ಕಲಿವಲೆ ಬಂದೋರು, ಅಷ್ಟೇ ಜೆನಂಗೊ ಅವರ ಹೆರಿಯೋರುದೇ ಇದ್ದಿದ್ದವು!
ಕಪ್ಪುಕರೆ ಕನ್ನಡ್ಕದ ಬೆಳಿವೇಷ್ಟಿ ಮಾವಂದ್ರು “ವೈದಿಕ ಸಮುದಾಯಕ್ಕೆ ಇಷ್ಟು ಜೆನ ಸೇರ್ತಾ ಇಪ್ಪದು ತುಂಬಾ ಸಂತೋಷದ ವಿಚಾರ” ಹೇಳ್ತ ಸತ್ವವ ಭಾಶಣ ಮಾಡಿದವು.
ಆ ದಿನ ಮಧ್ಯಾಹ್ನದ ಊಟ ಆಗಿ, ಕಿಸಗೆ ನೂರೈವತ್ತು ರುಪಾಯಿ ಕೊಟ್ಟು, ಅಪ್ಪ ಒಪಾಸು ಮನೆಗೆ ಹೆರಟವು! 🙁
~

ಪರಸ್ಪರ ಹೊಸ ಮೋರೆಗೊ, ಹೊಸ ಜೆನಂಗೊ, ಹೊಸ ವಾತಾವರಣ, ಹೊಸ ಏರ್ಪಾಡುಗೊ.
ಎಲ್ಲೋರಿಂಗೂ ಎಲ್ಲಿ ಹೋದರೂ, ಎಂತ ನೋಡಿರೂ ಮನೆಯೇ ನೆಂಪಪ್ಪದು; ಕೆಲವು ಮಕ್ಕೊಗಂತೂ ಕೂಗುಲೇ ಬಪ್ಪದು.
ಅಪ್ಪಮ್ಮ ಬಿಟ್ಟಿಕ್ಕಿ ಹೋಪದು ಕಂಡ್ರೆ ಭಗತ್ತುಸಿಂಗನ ಉರುಳಿಂಗೆ ಕರಕ್ಕೊಂಡು ಹೋಪದು ಹೇಳ್ತ ಚಿತ್ರಣ ನೆಂಪಕ್ಕು! 🙁

~

ಅಲ್ಲಿಪ್ಪಗ ಗುರುಗಳೇ ಅಪ್ಪಮ್ಮ, ಗುರುಗಳೇ ಡಾಗುಟ್ರು, ಗುರುಗಳೇ ಎಲ್ಲವೂ.
ಮೂರು ಕ್ಲಾಸಿಂಗೆ ಒಬ್ಬೊಬ್ಬರ ಹಾಂಗೆ ಮೂರು ಗುರುಗೊ.
ಬೆಳಿ ಒಸ್ತ್ರ, ಶಾಲು. ಬೆಳಿ ವಿಭೂತಿಯ ನಾಮ, ಕರಿ ಜೊಟ್ಟು! ಕೈಲಿ ಒಂದು ದಾಸನ ಕೋಲು! ಸ್ವರ ಹೇರಡುಸಲೆ – ಮಂತ್ರದ್ದು! (ಲೂಟಿ ಮಾಡಿರೆ ಸ್ವರ ಜೋರು ಹೆರಡುಗಿದಾ!!) 😉
ಗುರುಗಳೇ – ಹೇದು ದಿನಿಗೆಳುವಗ ಎಂತ? – ಹೇದು ನಗುಮುಖಲ್ಲಿ ಕೇಳ್ತ ಮೂರು ಹೊಸ ವೆಗ್ತಿತ್ವಂಗೊ!
ಒಂದೇ ವಾರಲ್ಲಿ ಹೊಸ ಪರಿಸರ ಎಲ್ಲವೂ ಅಭ್ಯಾಸ ಆಗಿಬಿಡ್ತು!
~

ಮತ್ತಾಣದ್ದು ದಿನಚರಿ.
ದಿನಚರಿಯ ವಿವರುಸುತ್ತರೆ ದಿನದ ಯೇವ ಹೊತ್ತಿಂದಲೂ ವಿವರುಸಲಕ್ಕು; ಆದರೆ ಉದಿಯಾಂದಲೇ ಹೇಳ್ತರೆ ಕೇಳುಲೆ ಸುಲಬ, ಅಲ್ಲದೋ?
ಉದಿ ಬೆಣ್ಚಿ ಆಯೇಕಾರೇ – ಐದು ಗಂಟೆ ಅಂದಾಜಿಂಗೆ ಎದ್ದತ್ತು.
ಮುನ್ನಾಣದಿನವೇ ಬ್ರೆಶ್ಶಿಂಗೆ ಪೇಷ್ಟು ಹಾಕಿ, ಬಾಳ್ದಿ ಒಳದಿಕ್ಕೆ ಮಡಗಿರ್ತಲ್ಲದೋ – ಹೊತ್ತೊಂಡು ಓಡಿತ್ತು.
ಮೀಯಲೆ ಸಾಬೊನು, ಮೈ ಉದ್ದಲೆ ಚೆಂಡಿಹರ್ಕು ಎಲ್ಲವೂ ಆ ಬಾಳ್ದಿಲೇ ರೂಢಿ ಆಗಿರ್ತು ಮುನ್ನಾದಿನವೇ.
ರೂಪತ್ತೆಯ ಪ್ರಿಜ್ಜಿಂದಲೂ ತಂಪಿಂಗೆ ಇಪ್ಪ ಸೊರಂಗ ನೀರು ಟೇಂಕಿಲಿ ಎರ್ಕಿರ್ತು. ಉದೆಕಾಲದ ಛಳಿಛಳಿಗೆ ಬಳಬಳನೆ ನಾಕು ಪಾಟೆ ಎರದತ್ತು, ಸಾಬೊನು ಹಾಕಿದ ಹಾಂಗೆ ಮಾಡಿತ್ತು, ಮಿಂದುಗೊಂಡು ಒಪಾಸು ಬಂತು.
ನಿನ್ನೆ ಒಗದು ಒಣಗಿ ಗರಿಗರಿಯಾಗಿ ಸಿಕ್ಕಿದ – ಇಂದು ಸುತ್ತಲೆ ಇಪ್ಪ ಒಸ್ತ್ರವ ಸುತ್ತಿಗೊಂಡತ್ತು.
ಆರು ಗಂಟೆ ಆಯೇಕಾರೇ ಗೋಪಿಚಂದನವೋ, ಗಂಧವೋ ಹಾಕಿಂಡು ಸಂಧ್ಯಾವಂದನೆಗೆ ತೆಯಾರಾತು.
ಪುರ್ಸೊತ್ತು ಸಿಕ್ಕಿರೆ ನಿನ್ನೆ ಕಲಿಯಲೆ ಕೊಟ್ಟ ಶ್ಲೋಕವನ್ನೋ, ಮಂತ್ರವನ್ನೋ ಬಾಯಿಪಾಟ ಮಾಡಿತ್ತು.
ಉದಿಯಪ್ಪಗಾಣ ನಿರುಮ್ಮಳ ಮನಸ್ಸಿಂಗೆ ಕಲಿಯಲೆ ಎಳ್ಪ ಆವುತ್ತು.
~

ಎಲ್ಲೋರುದೇ ಒಟ್ಟಿಂಗೇ ಕೂದು ಮಾಡ್ತ ಸಾಮೂಹಿಕ ಸಂಧ್ಯಾವಂದನೆ ಆರೂವರೆಂದ ಏಳೂವರೆ ಒರೆಂಗೆ.
ವಿವರವಾದ, ದೀರ್ಘವಾದ ಪ್ರಾತಃ ಸಂಧ್ಯೆಲಿ ಆಚಮನ, ಪ್ರಾಣಾಯಾಮ, ಅರ್ಘ್ಯ, ನೂರೆಂಟು ಗಾಯತ್ರಿ, ಇನ್ನೂರ ಹದ್ನಾರು ಅಷ್ಟಾಕ್ಷರಿ, ಐನ್ನೂರ ಹನ್ನೆರಡು ಪಂಚಾಕ್ಷರಿ, ಸಂದಿ ತಿರುಗುದು – ಎಲ್ಲವುದೇ ಮಾಡೇಕು.
ಎಲ್ಲ ಮಕ್ಕಳುದೇ ಒಟ್ಟಿಂಗೇ ಮಂತ್ರ ಹೇಳಿಂಡು ಮಾಡ್ತ ಕಾರಣ ಕ್ರಮವೂ, ಮಂತ್ರವೂ ಬೇಗ ಕಲ್ತುಗೊಂಬಲೆ ಆವುತ್ತು.

ಉದಿಯಪ್ಪಗ ಏಳೂವರೆಗೆ ದೇವಸ್ಥಾನದ ಗುಂಡದೊಳಾಣ ದೇವರಿಂಗೆ ಮಹಾಪೂಜೆ.
ಸಂಧ್ಯಾವಂದನೆಂದ ಎದ್ದತ್ತು, ಸೀತ ಹೋಗಿ ಒಂದೊಂದು ಗಂಟೆ-ಜಾಗಟೆ ಹಿಡುದು ತಾಳಲ್ಲೆ ಹೆಟ್ಟಿತ್ತು.
ಆರತಿ ತೆಕ್ಕೊಂಡ ಮತ್ತೆ ಗಣಾನಾಂತ್ವವೂ, ಪ್ರಾತಃ ಸೂಕ್ತವೂ ಹೇಳಿತ್ತು.
ಪ್ರಸಾದ ತೆಕ್ಕೊಂಡು ನಮಸ್ಕಾರ ಮಾಡಿರೆ, ಅವರವರ ಗ್ಲಾಸು-ಬಟ್ಳು ತೆಕ್ಕೊಂಡು ಹೆರ ಬಪ್ಪದೇ.

~
ಇದರೆಡಕ್ಕಿಲಿ ಹರಟೆ ಆಗದ್ದ ಹಾಂಗೆ ಗುರುಗೊ ಬೆತ್ತ ಹಿಡ್ಕೊಂಡು ಬಕ್ಕು.
ಮಕ್ಕೊ ಮುಂಡು / ಚೆಂಡಿಹರ್ಕು ಸುತ್ತಿದ್ದರೆ ಗುರುಗೊ ವೇಷ್ಟಿ ಸುತ್ತಿಂಡು, ಗರಿಗರಿ ಶಾಲು ಹೊದಕ್ಕೊಂಡು ಬಪ್ಪದರ ಕಾಂಬಲೇ ಒಂದು ಕೊಶಿ!

~

ಎಲ್ಲ ಮಕ್ಕಳೂ ಬಂದು ಸೇರಿ, ಹೆರಾಣ ಅಂಗಣಲ್ಲಿ ಬಟ್ಳು ಮಡಗಿ ಸಾಲಾಗಿ ಕೂದ ಮತ್ತೆಯೇ ಅಣ್ಣಂದ್ರು ಬಳುಸುತ್ತವು.
ಬಳುಸುದಾರು? – ಅದಕ್ಕೆ ಗ್ರೂಪುಗೊ ಇದ್ದು.
ಸೋಮವಾರ ಒಂದು ಗ್ರೂಪು, ಮಂಗ್ಳವಾರ ಇನ್ನೊಂದು ಗ್ರೂಪು, ಬುಧವಾರ ಮತ್ತೊಂದು – ಇತ್ಯಾದಿ.
ಒಂದೊಂದು ಗ್ರೂಪುಗೊಕ್ಕೆ ಒಬ್ಬೊಬ್ಬ ಅಣ್ಣಂದ್ರು ಲೀಡ್ರು.
ಆ ದಿನ ಉದಿಯಪ್ಪಗ ಬಳುಸುದರಿಂದ ಹಿಡುದು, ಆ ದಿನ ಇರುಳು ನೆಲ ಉದ್ದುವನ್ನಾರ ಆ ಗ್ರೂಪಿಂಗೆ ಜೆವಾಬ್ದಾರಿ.
ಮೈಗಳ್ಳರೇ ಇಲ್ಲದ್ದಲ್ಲಿ ಜಗಳ ಅಪ್ಪ ಸಾಧ್ಯತೆಯೂ ಇಲ್ಲೆ ಭಾವಾ! ಅದಿರಳಿ.

~

ಉದಿಯಪ್ಪಗ ಹೆಜ್ಜೆ, ಉಪ್ಪು, ಉಪ್ಪಿನಾಯಿ, ಶುಂಠಿ ಚಟ್ಣಿ / ಕೆಂಪು ಚಟ್ಣಿ, ಮಜ್ಜಿಗೆ.
ಬಳುಸೆಂಡು ಬಪ್ಪಗಳೇ ಉಂಬಲಿದ್ದೋ – ಇಲ್ಲೆ.
ಇಬ್ರು ಅಣ್ಣಂದ್ರು ಭಗವದ್ಗೀತೆಯ ಧ್ಯಾನ ಶ್ಲೋಕವ ಹೇಳಿಕೊಡುಗು – “ಪಾರ್ಥಾಯ ಪ್ರತಿಬೋಧಿತಾಂ….” ಎಲ್ಲೋರುದೇ ಅದರ ಹೇಳೇಕು. ಬಳುಸಿ ಆದರೂ, ಆ ಶ್ಲೋಕ ಮುಗಿವನ್ನಾರ ಊಟ ಸುರುಮಾಡ್ಳಿಲ್ಲೆ.
ಊಟ ಹಾಂಗಿರಳಿ, ಎರಡು ವಾರಲ್ಲಿ ಅಲ್ಲಿಪ್ಪ ಅಷ್ಟೂ ಮಕ್ಕೊಗೆ ಪಾರ್ಥಾಯ ಪ್ರತಿಬೋಧಿತಾಂ – ಬಾಯಿಪಾಟ!!
ಹಶು ಹೊಟ್ಟಗೆ ಹೆಜ್ಜೆ ತೆಳಿಯ ತಂಪಿನ ಊಟ ಸುರು, ಚೆಂದಕೆ ಉಂಡಿಕ್ಕಿ ನಾಕುನಾಕೇ ಜೆನ ಕೈ ತೊಳವಲೆ ಹೋಪ ಚೆಂದ!
ಅವರವರ ಗ್ಲಾಸು-ಬಟ್ಳಿನ ಅವ್ವವ್ವೇ ತೊಳೆತ್ತದಿದಾ! ಒಂದೇ ಸರ್ತಿ ಹೋಗಿ ರಶ್ಶು ಅಪ್ಪದು ಬೇಡ – ಹೇದು.
ಊಟ ಆತೋ? ಊಟ ಆದ ಜಾಗೆಯ ಉಡುಗಿ ಮನಾರ ಮಾಡ ಜೆವಾಬ್ದಾರಿ ಬಳುಸುತ್ತ ಗ್ರೂಪಿಂದಿದಾ.
ಎಲ್ಲ ಒತ್ತರೆ ಆದ ಮತ್ತೆ – ಆ ದಿನದ ಪಾಠ ಸುರು.

~

ಗುರುಗೊ ಬಪ್ಪ ಮದಲೇ ಗುರುಗೊಕ್ಕಿಪ್ಪ ಮಣೆ, ಪುಸ್ತಕ ಮಡಗುತ್ತ ಪೀಠ, ಸ್ವರ ತಿದ್ದಲೆ ಇಪ್ಪ ದಾಸನಬೆತ್ತ – ಎಲ್ಲವನ್ನುದೇ ಮಕ್ಕಳೇ ಜೋಡುಸಿ ಮಡಗ್ಗು. ಎಂಟೂವರೆ ಗಂಟೆ ಅಂದಾಜಿಗೆ – ಶ್ರೀಗುರುಭ್ಯೋ ನಮಃ, ಹರಿಃ, ಓಂ – ಹೇದು ಆ ದಿನದ ಪಾಠವನ್ನೂ ಸುರುಮಾಡುಗು.
ಇದರೆಡಕ್ಕಿಲಿ ಗುರುಗಳೂ ಕ್ಲಾಸುಗೊಕ್ಕೆ ಬಂದು ಎತ್ತಿಗೊಂಗು. ಆ ದಿನದ ಪಾಟ ಸುರುಮಾಡುಗು.

~

ಮಂತ್ರಪಾಟ ಹೇದರೆ ಯೇವದೆಲ್ಲ?
ಒಂದನೇ ಕ್ಲಾಸಿನವಕ್ಕೆ ಸಂಧ್ಯಾವಂದನೆ ಪಾಟ.
ಇಲ್ಲಿಪ್ಪ ಮಕ್ಕೊಗೆ ಸ್ವರಜ್ಞಾನವೇ ತುಂಬೇಕಟ್ಟೆ. ಮಂತ್ರದ ಸ್ವರಂಗಳ ಏರಿಳಿತ, ಅದರ ಪಡವಲೆ ಸುರುವಿಂಗೆ ತಲೆ ಆಡುಸಲೆ ಅಭ್ಯಾಸ ಮಾಡುತ್ಸು, ಮತ್ತೆ ತಲೆ ಆಡುಸದ್ದೆ ಹೇಳುಲೆ ಅಭ್ಯಾಸ ಮಾಡುತ್ಸು – ಎಲ್ಲವುದೇ.
ಸಂಧ್ಯಾವಂದನೆಲೇ ಬಹುಪಾಲು ಹೊತ್ತು ಕಳಿಗು; ಹತ್ತರತ್ತರೆ ಒಂತಿಂಗಳೇ ಮುಗಿಗು.
ಅಷ್ಟನ್ನಾರ ಅವು ಸಾಮೂಹಿಕ ಸಂಧ್ಯಾವಂದನೆಗೂ ಕೂಪಲೆಡಿಯ ಇದಾ!
ಇದರೆಡಕ್ಕಿಲಿ ಒಬ್ಬೊಬ್ಬಂಗೆ ಅಬ್ಬೆಯನ್ನೋ, ಅಪ್ಪನನ್ನೋ, ಅಕ್ಕನನ್ನೋ – ನೆಂಪಾಗಿ ಜ್ವರ, ತಲೆಬೇನೆ, ಉರಿಶೀತ, ಬೆನ್ನುಬೇನೆ – ಎಲ್ಲವುದೇ ಬಂದು ಕೂಗಲಿದ್ದು. ಗುರುಗೊ ಸಮಾದಾನ ಮಾಡುಸಲಿದ್ದು! 😉
ಅದಿರಳಿ.
ಅದಾದ ಮತ್ತೆ ಗಣಾನಾಂತ್ವವೋ, ಪುರುಷ ಸೂಕ್ತವೋ, ದುರ್ಗಾ ಸೂಕ್ತವೋ, ಶಾಂತಿ ಮಂತ್ರವೋ – ಹೀಂಗೇನಾರು.
~

ಎರಡ್ಣೇ ಕ್ಲಾಸಿನವಕ್ಕೆ ಅಲ್ಲಿಂದ ಮುಂದುವರುದ ಪಾಠ.
ಒಂದನೇ ಕ್ಳಾಸಿನವರ ಹಾಂಗೆ ಬುಡಂದ ಹೇಳೇಕು ಹೇದು ಏನಿಲ್ಲೆ, ಆದರೆ ಮೂರ್ನೇ ಕ್ಲಾಸಿನವರಷ್ಟು ಸಲಿಗೆಯೂ ಇಲ್ಲೆ.
ಪ್ರಾತಃ ಸೂಕ್ತ, ನಾರಾಯಣ ಸೂಕ್ತ, ಸನ್ಯಾಸ ಸೂಕ್ತ, ತ್ರಿಸುಪರ್ಣ ಸೂಕ್ತ, ಮೇಧಾಸೂಕ್ತ, ದೇವೀ ಸೂಕ್ತವೇ ಇತ್ಯಾದಿ ಸೂಕ್ತಂಗಳೂ,
ಅದಾದ ಮತ್ತೆ ರುದ್ರ (ನಮಕ) ಪಾಠ; ರುದ್ರಪಾಠವೇ ಬಹುಪಾಲು ಸಮಯ ಹಿಡಿವದಿದಾ! ಹನ್ನೊಂದು ಅನ್ವಾಕದ ದೊಡಾ ಮಂತ್ರ ಅದು.
ಅದಾದ ಮತ್ತೆ ಸರ್ವೋವೈ ರುದ್ರದ ಪಾಠವೋ, ನವಗ್ರಹ ಜೆಪವೋ – ಎಲ್ಲವುದೇ ನೆಡಗು.
~

ಮೂರ್ನೇ ಒರಿಶದೋರು ಹೇದರೆ ಅಣ್ಣಂದ್ರು. ಒರಿಶಲ್ಲಿ ದೊಡ್ಡೋರು ಆಗಿರೇಕು ಹೇದು ಏನಿಲ್ಲೆ, ಆದರೂ ಅಣ್ಣಂದ್ರು!
ಪ್ರಾಯ – ಅವರವರ ಉಪ್ನಾನ ಆಗಿ ಬಂದ ಹಾಂಗಲ್ಲದೋ – ಅಣ್ಣಂದ್ರು ಹೇದರೆ- ಸ್ಥಾನಲ್ಲಿ.
ಆ ಪರಿಸರ, ಅಲ್ಯಾಣ ನಡವಳಿಕೆ, ಪಠ್ಯ – ಎಲ್ಲವುದೇ ಅವಕ್ಕೆ ಜಾಸ್ತಿ ಅರಡಿವ ಕಾರಣ ಅವರ ಅಣ್ಣಂದ್ರು ಹೇಳುಸ್ಸು.
ಸ್ವರಜ್ಞಾನ ಅದಾಗಲೇ ಎಲ್ಲೋರಿಂಗೂ ಇರ್ತ ಕಾರಣ – ಮೂಲಪಾಠ ಮಾಡ್ಳಿಲ್ಲೆ; ಸೀತ ಮುಂದುವರುಸುದೇ.
ಕೆಲವು ಶಾಂತಿಮಂತ್ರಂಗಳಿಂದ ಆರಂಭ ಆದ ಪಾಠ, ಚಮಕ ಪ್ರಶ್ನಲ್ಲಿ ಮುಂದುವರುದು, ಲಘುನ್ಯಾಸ, ಪಂಚಾಯತನ ದೇವರಪೂಜೆ, ಇತ್ಯಾದಿಗಳ ಪಾಠ.
ಇದರೆಡಕ್ಕಿಲಿ, ಒಂದ್ನೇ, ಎರಡ್ಣೇ ಕ್ಲಾಸಿನವರ ನೋಡಿಗೊಂಬ ಒಯಿವಾಟೂ ಇರ್ತು ಇದಾ; ಗುರುಗೊ ಎಲ್ಯಾರು ಅನುಪ್ಪತ್ಯ ಮಾಡುಸಲೆ ಹೋಗಿದ್ದರೆ.. ;-)!

~

ಮಂತ್ರದ ಪ್ರತಿ ಪಾಠಂಗಳೂ ಬಿದಿಗೆ, ರಟ್ಟೆ, ಸಂತೆ- ಈ ಮೂರು ಪ್ರಾಕಾರಂಗಳಲ್ಲಿ ಮಾಡ್ತದು.
ಅಂದೊಂದರಿ ಬೈಲಿಲಿ ಈ ಬಗ್ಗೆ ಮಾತಾಡಿದ್ದು ಅರಡಿಗಲ್ಲದೋ?
~

ಎಂಟೂವರೆಗೆ ಆರಂಭ ಆದ ತರಗತಿ, ಹತ್ತೂವರೆ ಗಂಟೆಗೆ ಒಂದರಿ ಕಷಾಯ ಕುಡಿವಲೆ ನಿಂಗು.
ಕಾಪಿ-ಚಾ ವರ್ಜ್ಯ ಇದಾ, ಹಾಂಗಾಗಿ ಕೊತ್ತಂಬರಿ-ಜೀರಕ್ಕಿ ಕಷಾಯ ಮಾಂತ್ರ!
ಬಳುಸುತ್ತ ಗ್ರೂಪಿನ ಅಣ್ಣಂದ್ರು ದೊಡಾ ಹಂಡೆಂದ ಒಂದೊಂದೇ ಲೋಟ ಬಗ್ಗುಸಿ ಬಗ್ಗುಸಿ ಕೊಡ್ತದರ, ಎಲ್ಲ ಮಕ್ಕಳೂ ಅವರವರ ಗ್ಲಾಸಿಲಿ ಎರೆಶಿಂಡು, ದೂರಲ್ಲಿ ಹೋಗಿ – ಕೂದೊಂಡು ಕುಡಿಯೇಕು.
ಗುರುಗೊ ಅಲ್ಲೇ ತಿರುಗೆಂಡು ಇಕ್ಕು, ನಿಂದೊಂಡು ಕುಡಿತ್ತೋರು ಆರಾರಿದ್ದರೆ ತಲಗೊಂದು ಕುಟ್ಟಿ ಹಾಕಲೆ!!
ಹನ್ನೊಂದು ಗಂಟೆಗೆ ಪುನಾ ತರಗತಿ ಆರಂಭ. ಪಾಠ ಮುಂದುವರಿತ್ತು.
~

ಸಂಗ್ರಹಂದ ಹುಡ್ಕಿ ಶಿವಪ್ರಸಾದಪ್ಪಚ್ಚಿ ಕಳುಗಿದ ವೇದಪಾಟಶಾಲೆಯ ಪಟ

ಹನ್ನೆರಡೂ ಇಪ್ಪತ್ತೈದಕ್ಕೆ ಪೂಜೆಯಣ್ಣ ಡೈಂ ಡೈಂ ಡೈಂ – ಹೇದು ಗಂಟೆ ಬಡುದಪ್ಪದ್ದೇ – ಕ್ಲಾಸುಗೊ ಹರಿಃ, ಓಂ –ಹೇಳಿಗೊಂಡು ಬಿರುದತ್ತು.
ಹನ್ನೆರಡೂವರೆಗೆ ಗುಂಡದೊಳಾಣ ದೇವರಿಂಗೆ ಮಧ್ಯಾಹ್ನದ ಮಹಾಪೂಜೆ.
ಪುನಃ ಆಗಾಣ ಹಾಂಗೇ ತಾಳಲ್ಲಿ ಗಂಟೆ-ಜಾಗಂಟೆ ಕುಟ್ಟಿ, ಆರತಿ ತೆಕ್ಕೊಂಡಿಕ್ಕಿ, ಸ್ವರ ಪ್ರಕಾರ ಗಣಾನಾಂತ್ವಾ ಹೇಳಿಕ್ಕಿ, ಬ್ರಹ್ಮಮುರಾರಿ – ಲಿಂಗಾಷ್ಟಕವನ್ನುದೇ ಹೇಳಿಗೊಂಡು – ಗಂಧ ಪ್ರಸಾದ ತೆಕ್ಕೊಂಗು.
ಅದಾದ ಮತ್ತೆ ಮಧ್ಯಾಹ್ನದ ಊಟದ ತಯಾರಿ

~.
ಎಲ್ಲ ಮಕ್ಕಳೂ ಸಾಲಾಗಿ ಕೂದುಗೊಂಡ ಮತ್ತೆ ತ್ರಿಸುಪರ್ಣ ಸೂಕ್ತವ ಹೇಳುಗು. ಬ್ರಹ್ಮಮೇತುಮಾಮ್…
ಬಪ್ಪೋರು ಹೇಳುಗು, ಒಳುದೋರು ಕೇಳುಗು.
ಸೂಕ್ತ ಮುಗಿವದೂ, ಬಳುಸುದೂ – ಎರಡೂ ಆದ ಮತ್ತೆ ಊಟ ಸುರುಅಕ್ಕು.
ತಾಳು, ಸಾರು, ಸಾಂಬಾರು / ಮೇಲಾರ, ಮಜ್ಜಿಗೆ, ಉಪ್ಪು, ಉಪ್ಪಿನಾಯಿ – ಇಷ್ಟರ ಒಳಗೊಂಡ ಚೆಂದದ ಊಟ.
ಊಟ ಮಾಂತ್ರ ಅಲ್ಲ, ಪ್ರತಿಯೊಬ್ಬನೂ ಚೂರ್ಣಿಕೆ ಹೇಳೇಕು ಇದಾ!
ಚೂರ್ಣಿಕೆ ಯೇವದಾದರೂ ಸಮ, ಮುನ್ನಾಣದಿನ ಹೇಳಿಕೊಟ್ಟ ಶ್ಲೋಕ ಆದರೂ ಸಮ, ಒಂದು ಹೇಳುಲೇಬೇಕು.
ಚೂರ್ಣಿಕೆ ಮುಗುದ ಮತ್ತೆ “ಭೋಜನಕಾಲೇ…ಮಾದೇವ” ಹೇಳುಲಿಲ್ಲೆ, ಬದಲಾಗಿ, ಒಬ್ಬಂದು ಮುಗುದ ಮತ್ತೆ ಇನ್ನೊಬ್ಬಂದು ಸುರು; ಅಷ್ಟೇ. ಉಂಬಲೆ ಕೂದೋರ ಚೂರ್ಣಿಕೆ ಆದ ಮತ್ತೆ ಬಳುಸುತ್ತ ಅಣ್ಣಂದ್ರ ಚೂರ್ಣಿಕೆ, ಅದೂ ಆದ ಮತ್ತೆ, ಗುರುಗಳು, ಬಂದೋರು, ಆಸಕ್ತರು – ಇವರ ಚೂರ್ಣಿಕೆಗೊ.
ಹಂತಿ ಮುಗಿವಗ ಎಲ್ಲೋರದ್ದುದೇ ಚೂರ್ಣಿಕೆ ಮುಗಿಗು.
ಹೀಂಗೇ ಎರಡುವಾರ ಅಪ್ಪಗ ಚೂರ್ಣಿಕೆ ಹೇಳುಲೆ ಹೆದರ್ತ ಮಾಣಿಯ ಹೆದರಿಕೆಯೂ ಮುಗಿಗು.

ಒಂದೂವರೆ ಅಪ್ಪಗ ಊಟದ ಏರ್ಪಾಡು ಪೂರ ಮುಗಿಗು.
ಮತ್ತೆ ಪಾಟ ಸುರು ಅಪ್ಪದು ಎರಡೂವರೆಗೆ. ಅದರೆಡಕ್ಕಿಲಿ ಪುರ್ಸೊತ್ತಿಪ್ಪಲ್ಲಿ – ಮುನ್ನಾಣ ದಿನ ಆರ್ಸಿದ ಒಸ್ತ್ರಂಗಳ ಮಡುಸಿ ಮಡಗುತ್ತ ಕಾರ್ಯವೋ, ಹೊತ್ತಪ್ಪಗಾಣ ಶ್ಲೋಕ ಕ್ಲಾಸಿಂಗೆ ಶ್ಲೋಕ ಬಾಯಿಪಾಟ ಮಾಡ್ತ ಕೆಲಸವೋ – ಎಂತಾರು ಇರ್ತು.
~

ಎರಡೂವರೆಗೆ ಮಕ್ಕೊ ಕೂದವು, ಮತ್ತಾಣ ಕ್ಲಾಸಿಂಗೆ.
ಗುರುಗೊ ಬಂದು ಪಾಟ ಮುಂದುವರುಸಿದವು. ಬಿಂಗಿ ಮಕ್ಕೊಗೆ ಹೊಟ್ಟೆ ತುಂಬ ಉಂಡ ಕಾರಣ ಒರಕ್ಕು ತೂಗಲೂ ಸಮಯ ಆತು ಇದಾ!
~
ಮಂತ್ರ ಪಾಟದ ಎಡಕ್ಕಿಲಿ ಒರಗುತ್ತ ಮಾಣಿಯ ಹಿಡಿಯಲೆ ಗುರುಗೊ ಒಂದು ಕೆಣಿ ಮಾಡುಗು! ಎಂತರ?
ನಾರಾಯಣನ ನೋಡಿಂಡು “ಅನಂತ ಎದ್ದು ನಿಲ್ಲು” – ಹೇಳುಗು;
– ಅನಂತ ಒರಗಿಂಡಿದ್ದರೆ ಅನಂತ° ಏಳ°.
– ನಾರಾಯಣ ಒರಗಿಂಡಿದ್ದರೆ ನಾರಾಯಣ ಏಳುಗು!

ಅಂತೂ ಇಂತೂ ಒಂದೇ ಗುಂಡಿಲಿ ಎರಡು ಹಕ್ಕಿ ಹಿಡುದ ಕಾರಣ – ಕ್ಲಾಸಿನ ಎಲ್ಲೋರುದೇ ನೆಗೆ ಮಾಡುದರ್ಲಿ, ಎಲ್ಲೋರ ಒರಕ್ಕು ಬಿಟ್ಟತ್ತು ಒಂದರಿ. ಅಲ್ಲದೋ?!
~

ನಾಕೂವರೆಗೆ ಕ್ಲಾಸು ಬಿರುದತ್ತು; ತಿಂಡಿ ತೆಯಾರಾತು.
ಎಲ್ಲೋರುದೇ ಅವರವರ ಬಟ್ಳು ತಂದು ಸಾಲಾಗಿ ಕೂದುಗೊಂಗು.
ಸಜ್ಜಿಗೆಯೋ, ಅವಲಕ್ಕಿಯೋ, ಉಪ್ಪಿಟ್ಟೋ – ಹೀಂಗೆಂತಾರು ತಿಂಡಿ; ತ್ರಾಣ ಕೊಡ್ಳೆ ತಕ್ಕ.
ಸಹನಾವವತು – ಹೇದು ಒಟ್ಟಿಂಗೆ ತಿಂಗು; ತಿಂದಾದ ಮತ್ತೆ ಏಳುಗು.
~

ಇನ್ನು ಆರೂವರೆ ಒರೆಂಗೆ ಪುರುಸೊತ್ತೇ.
ಕ್ರಿಗೇಟು ಆಡುದು, ಕಂಬಾಟ ಆಡುದು, ಮೀವದು, ಒಸ್ತ್ರ ಒಗವದು, ಬೇರೆಂತಾರು ಬರವದು, ಓದುದು – ಎಂತ ಬೇಕಾರೂ ಮಾಡ್ಳಕ್ಕು.
~

ಮರದಿನ ಆರದ್ದಾರು ಮನೆಲಿ ಜೆಂಬ್ರ ಇದ್ದರೆ ಈ ಹೊತ್ತಿಂಗೆ ಮಕ್ಕೊ ಹೆರಟಿಕ್ಕಿ ಮನೆಗೆ ಹೋಕು.
ಹೋಪದು ಹೇದರೆ ಹೇಂಗೆ? ಸೀತ ಎದ್ದಿಕ್ಕಿ ಹೋಪದಲ್ಲ; ಗುರುಗಳಿಂಗೆ– ಶ್ರೀಮದ್ಯಜುಃಶಾಖಾ… – ಅಭಿವಾದನೆ ಮಾಡಿಕ್ಕಿ, ಒಪ್ಪಿಗೆ ತೆಕ್ಕೊಂಡು ಹೋಪದು.
ಒಪಾಸು ಬಂದ ಮತ್ತೆಯೂ ಹಾಂಗೇ ಅಭಿವಾದನೆ ಮಾಡಿಕ್ಕಿ ಕ್ಲಾಸಿಂಗೆ ಬಂದು ಕೂಪದು ಕ್ರಮ.

~

ಆರೂವರೆಗೆ ಜೆಪ ಸುರು. ಸಾಯಂ ಸಂಧ್ಯೆ; ಏಳೂವರೆ ಒರೆಂಗೆ.
ಉದಿಯಪ್ಪಗಾಣ ಹಾಂಗೇ – ದೀರ್ಘವಾದ ಜೆಪ; ಎಲ್ಲೋರುದೇ ಕೂದುಗೊಂಡು.

~

ಏಳೂವರೆಗೆ ಎದ್ದತ್ತು; ಪೂಜೆಗೆ ಹೊತ್ತಾತು.
ತಾಳದ ಗಂಟೆ-ಜಾಗಂಟೆ, ಸ್ವರದ ಗಣಾನಾಂತ್ವಾ, ರಾಗದ ಮುದಾಕರಾತ್ತ ಮೋದಕಂ – ಶ್ಲೋಕಂಗಳನ್ನೂ ಹೇಳಿಕ್ಕಿ ಗಂಧ ಪ್ರಸಾದ ತೆಕ್ಕೊಂಡು ಹೆರ ಬಂತು.
ಇನ್ನೆಂತರ? ಊಟವೋ? ಏಳೂವರೆಗೆ ಎಂತರ ಊಟ? – ಇನ್ನು ಶ್ಲೋಕ ತರಗತಿ!!

~

ಮಂತ್ರಪಾಠ ಅಲ್ಲದ್ದೆ, ದಿನಕ್ಕೊಂದು ಶ್ಲೋಕವ ಕಲಿಶುತ್ತ ಪದ್ಧತಿ ವಿಶೇಷವಾದ್ದು.
ದಿನಾಗುಳೂ ಹೊತ್ತಪ್ಪಗ ಮಾಡ್ತ ಈ ಕ್ಲಾಸಿಲಿ, ಲಿಂಗಾಷ್ಟಕವೋ, ಮುದಾಕರಾತ್ತವೋ, ಭಜಗೋವಿಂದವೋ, ದಕ್ಷಿಣಾಮೂರ್ತಿ ಶ್ಲೋಕವೋ, ಚಂದ್ರಶೇಖರಾಷ್ಟಕವೋ – ಯೇವದಾರು ಒಂದರ ಸುರುಮಾಡಿರೆ ಮುಗಿವನ್ನಾರ- ದಿನಕ್ಕೊಂದು ಶ್ಲೋಕದ ಹಾಂಗೆ ಹೇಳಿಕೊಡುಗು.
ಹೇಳಿಕೊಡುವಗಳೂ ಹಾಂಗೇ, ಶ್ಲೋಕವ ಅದರದ್ದೇ ರಾಗಲ್ಲಿ, ಅದರದ್ದೇ ಏರಿಳಿತಲ್ಲಿ, ಒಂದೊಂದೇ ಗೆರೆ ಹೇಳಿದ್ದರ ಮಕ್ಕೊ ಪುಸ್ತಕ ನೋಡಿಗೊಂಡು ಓದಲೆ. ಹಾಂಗೇ ಹತ್ತಿಪ್ಪತ್ತು ಸರ್ತಿ ಹೇಳುಸಿದ್ದರ್ಲಿ ಮತ್ತೆ ಪುಸ್ತಕ ಬಿಟ್ಟು ಹೇಳೇಕು.
ಮನಸ್ಸು ಮಾಡಗಿ ಹೇಳಿದ ಮಕ್ಕೊಗೆ ಶ್ಲೋಕ ಕ್ಲಾಸು ಮುಗಿವಗಳೇ ಶ್ಲೋಕ ಬಂದಿರ್ತು; ಅದಿರಳಿ.

ಇಂದು ಇರುಳಾಣ ತರಗತಿಲಿ ಕೊಟ್ಟ ಶ್ಲೋಕವ – ವಿದ್ಯಾರ್ಥಿಯೊಬ್ಬ° ಅವನ ಪುರುಸೊತ್ತಿಲಿ, ಅವನ ಬಿಡುವಿನ ಸಮೆಯಲ್ಲಿ, ಕಲ್ತುಗೊಳೇಕು. ನಾಳೆ ಇರುಳಾಣ ತರಗತಿಲಿ ಅದರ ಹೇಳೇಕು.
ಎಲ್ಲೋರುದೇ ಗುರುಗಳ ಹತ್ತರೆ ಬಂದು ಹೇಳುದಾದ ಮತ್ತೆ, ಎಲ್ಲೋರುದೇ ಒಟ್ಟಿಂಗೆ ರಾಗಲ್ಲಿ ಹೇಳುವಗ ನಿನ್ನೇಣ ಶ್ಲೋಕದ ಕತೆ ಮುಗುತ್ತು.
ಇಂದು ಹೊಸತ್ತೊಂದು ಶ್ಲೋಕವ ಹಾಡ್ಳೆ ಹೇಳಿಕೊಡ್ತವು.

~

ಎಂಟೂ ವರೆಗೆ ಶ್ಲೋಕ ಕ್ಲಾಸು ಮುಗಾತು; ಮತ್ತೆ ಊಟ.
ಮಕ್ಕೊ ಸಾಲಾಗಿ ಬಂದು ಕೂದವು. ಶ್ರೀರಾಮ ಜಯರಾಮ, ಜಯ ಜಯ ರಾಮ..|| ಹೇದು ಪಠನ ಮಾಡ್ತವು.
ಅಣ್ಣಂದ್ರು ಬಳುಸಿದವು. ಅಶನ, ಸಾರು, ಸಾಂಬಾರು, ಮಜ್ಜಿಗೆ – ಚೆಂದಲ್ಲಿ ಉಂಡತ್ತು; ಎದ್ದತ್ತು.
ಎಲ್ಲೋರದ್ದುದೇ ಊಟ ಆದ ಮೇಲೆ ಬಳುಸಿದ ಅಣ್ಣಂದ್ರು ಹಂಡೆ ಹಂಡೆ ನೀರು ತಂದು ಉಂಡ ಜಾಗೆಗೆ ನೀರು ಹಾಕಿ ತೊಳದು, ಮನಾರ ಮಾಡುಗು; ಮರದಿನಕ್ಕಪ್ಪಗ ಪರಿಪೂರ್ಣವಾಗಿ ಶುದ್ಧಲ್ಲಿರ್ತು.
~

ಎಲ್ಲೋರದ್ದು ಒತ್ತರೆ ಆದ ಮತ್ತೆ, ಒಂಭತ್ತೂವರೆ ಅಂದಾಜಿಗೆ ದೀಪ ನಂದುಸಿ ಆವುತ್ತು. ನಾಳಂಗೆ ಬೇಗ ಏಳೇಕಿದಾ!
ಕೆಲವು ಜೆನ ಅಣ್ಣಂದ್ರು ಮತ್ತುದೇ ಕುಣುಕುಣು ಮಾತಾಡಿಗೊಂಡು ಹೊತ್ತುಕಳಗು; ಆದರೆ ಅದೆಲ್ಲ ಗುರುಗೊಕ್ಕೆ ಕಾಣದ್ದ ಹಾಂಗೆ, ಎಡೆಡೇಲಿ.

~

ಇದಿಷ್ಟು ಯೇವತ್ರಾಣ ನಿತ್ಯ ದಿನಚರಿ.
ಇದಲ್ಲದ್ದೇ ಕೆಲವು ದಿನ ಸಣ್ಣ ಸಣ್ಣ ಬದಲಾವಣೆಗೊ ಆವುತ್ತು.
ಅದೆಂತರ?

~
ಆರದ್ದಾರು ಜೆನಿವಾರ ಕಡುದಿದ್ದರೆ, ಮೂರ್ನೇ ಕ್ಲಾಸಿನ ಒಬ್ಬ ಅಣ್ಣನ ಪೌರೋಹಿತ್ಯಲ್ಲಿ ಅದರ ಹಾಕುಸೇಕು.
ಹೊಸ ಒಂದು ಜೆನಿವಾರವನ್ನೂ, ಅಡಿಗೆ ಕೋಣೆಂದ ದೊಡ್ಡತುಂಡು ಬೆಲ್ಲವನ್ನೂ (ನೈವೇದ್ಯಕ್ಕೆ) ತಪ್ಪದು ಜೆನಿವಾರ ತುಂಡಾದವನ ಜೆಬಾದಾರಿ! ಜೆನಿವಾರ ತುಂಡಾದವನೂ, ಹಾಕುಸಿದವನೂ ನೈವೇದ್ಯ ಆದ ಬೆಲ್ಲವ ಅರ್ಧರ್ಧ ತುಂಡುಸಿ ಸ್ವಾಹಾ..!!
ಒಂದುಗಂಟೆ ಕೂದು ಮಾಡೇಕಾದ ಸಾಮೂಹಿಕ ಜೆಪಂದ ಆ ಇಬ್ರಿಂಗೆ ಮಾಪಿ! 😉
~
ಪ್ರತಿ ಶೆನಿವಾರ ಸಾಮೂಹಿಕ ಸಾಯಂ ಸಂಧ್ಯಾವಂದನೆ ಬದಲು ಭಜನೆ ಕಾರ್ಯಕ್ರಮ.
ಭಜನೆ ಆದ ಮತ್ತೆ ಮಹಾಪೂಜೆ. ಅದಾದ ಮತ್ತೆ ಸಭಾ ಕಾರ್ಯಕ್ರಮ.
ಆ ದಿನ ಬಂದ ಹಿರಿಯೋರಲ್ಲಿ ಒಬ್ಬರ ಅಧ್ಯಕ್ಷರಾಗಿ ಮಾಡಿಗೊಂಡು, ಮತ್ತೊಬ್ಬ ಮುಖ್ಯ ಅತಿಥಿ, ಮತ್ತೊಬ್ಬ ಅತಿಥಿ, ಮತ್ತೆ ಗುರುಗೊ – ಎಲ್ಲೋರನ್ನೂ ವೇದಿಕೆಲಿ ಕೂರ್ಸಿಗೊಂಡು; ಮಕ್ಕೊ ಅವರವರ ಪ್ರತಿಭೆಯ ತೋರ್ಸುತ್ತ ಕಾರ್ಯಕ್ರಮ.
ಪದ, ಪದ್ಯ, ಭಾಷಣ, ನಾಟಕ, ಯಕ್ಷಗಾನ – ಎಲ್ಲವುದೇ.
ಶಿಬಿರ ಮುಗಿಯಲಪ್ಪಗ ಸ್ಪರ್ಧೆಯೂ ಇದ್ದತ್ತು; ಪ್ರೈಸುದೇ ಇದ್ದತ್ತು!
ಚಾಕೊಟೆ ಮಾವನ ಹಾಂಗಿಪ್ಪ ಆಸಕ್ತರಿಪ್ಪನ್ನಾರ ಉತ್ಸಾಹಿ ಮಕ್ಕೊಗೆ ಕೊರತೆ ಇತ್ತಿಲ್ಲೆ!
~

ಅಡಿಗೆ ಉದಯಣ್ಣ ಒಬ್ಬನೇ ಇಪ್ಪಗ ಕೆಲವು ಮಕ್ಕೊಗೆ “ಜೋರು ಹಲ್ಲುಬೇನೆ, ಎರಡುಕಲ್ಲು ಉಪ್ಪು ಬೇಕು” ಹೇಳುವಷ್ಟು ಸಸಾರ. ಉಪ್ಪೆಂತಕೆ? – ಅಲ್ಲೇ ಆಚೊಡೆಲಿ ನೆಕ್ಕರೆ ಮರಲ್ಲಿ ಮೆಡಿ ಇತ್ತಿದಾ.
ಮೆಡಿಯ ಹಾಂಗೇ ತಿಂಬಲೆ ಹುಳಿ ಆವುತ್ತು; ಹಾಂಗೆ ಉಪ್ಪು ಎರಡುಕಲ್ಲು! 😉
~

ಮಧ್ಯಾಹ್ನದ ಪೂಜೆ ಆಗಿ ಪೂಜೆಯಣ್ಣ ಪೇಟಗೆ ಹೋಪಗ ಮಕ್ಕೊ ಅವರವರ ಪಟ್ಟಿಯನ್ನೇ ಕೊಡುಗು!
ಮಕ್ಕೊಗೆ ತಿಂಡಿ ತೀರ್ಥ ಬೇಕಾರೆ ಪೂಜೆಯಣ್ಣಂದೇ ಮನೆ ಕಿಟುಕಿಲಿ ಅಂಗುಡಿ.
ಚೋಕ್ಲೇಟು, ಸಾಬೊನು, ಉಜಾಲ, ಬ್ರೆಶ್ಶು, ಪೇಷ್ಟು – ಎಲ್ಲವುದೇ ಸಿಕ್ಕಿಂಡಿದ್ದತ್ತು; ಪೈಶಕ್ಕೆ.
~
ನೂರಾರು ಮಕ್ಕೊ ಇಪ್ಪ ಕಾರಣ ಒಬ್ಬೊಬ್ಬನ ಅಪ್ಪಮ್ಮಂದ್ರು ಒಂದೊಂದಿನ ಬಂದರೂ, ಹೆಚ್ಚಿನ ದಿನವೂ ಆರಾರೊಬ್ಬನ ಮನೆಯೋರು ಇದ್ದುಗೊಂಡಿತ್ತವು. ಬಪ್ಪಗ ಕಾಲಿಕೈಲಿ ಬಕ್ಕೋ – ಎಂತಾರು ಚೋಕ್ಲೇಟೋ ಮಣ್ಣ ಹಿಡ್ಕೊಂಡು ಬಕ್ಕಿದಾ!
ಅಪ್ಪಮ್ಮ ಬಂದಿದ್ದ ದಿನ ಆ ಮಾಣಿಯ ಚೂರ್ಣಿಕೆ ಸ್ವರವೇ ಬೇರೆ! ಉಫ್!!

~

ಆ ದೇವಸ್ಥಾನವೇ ಜೆಂಬ್ರಂಗಳ ಕಲ್ಯಾಣಮಂಟಪ ಆದ ಕಾರಣ ಅಲ್ಲಿ ಅಂಬಗಂಬಗ ಮದುವೆಗಳೂ, ಉಪ್ನಾನಂಗಳೂ ನೆಡಕ್ಕೊಂಡಿದ್ದತ್ತು. ಮುನ್ನಾಣದಿನದ ಗವುಜಿ ಕೇಳೇಕೋ – ಬೆಂದಿಗೆ ಕೊರವದರಿಂದ ಹಿಡುದು, ಒತ್ತರೆ ಮಾಡುವ ಒರೆಂಗೆ – ಎಲ್ಲದಕ್ಕೂ ಆಸಕ್ತ ಮಕ್ಕೊ ಸೇರುಗಿದಾ!
~

ಇಷ್ಟೆಲ್ಲ ವೈವಿಧ್ಯತೆ ಇಪ್ಪ ಒಂದು ಗುರುಕುಲ ಪದ್ಧತಿಯ ವೇದಪಾಠಶಾಲೆಗೆ ಒಬ್ಬ ಮಾಣಿ ಹೋದರೆ ಎಂತೆಲ್ಲ ಕಲಿಗು?
ಮೂರೂ ಹೊತ್ತೂ ಮಂತ್ರವನ್ನೇ ಗುನುಗುನುಸುವ ಕಾರಣ ಮಂತ್ರ ಕಲಿಗು.
ಆದರೆ, ಬರೇ ಮಂತ್ರ ಮಾಂತ್ರವೋ? ಅಲ್ಲ!
ಮನೆ ಬಿಟ್ಟು ಕೊಂಗಾಟವ ಬಿಟ್ಟು, ಅಸಕ್ಕವ ಬಿಟ್ಟು ಬೇರೆದೇ ಒಂದು ಲೋಕಲ್ಲಿ ಬದ್ಕುವ ಶಕ್ತಿಯ ಕಲಿಗು;
ಉದೆಕಾಲಕ್ಕೆದ್ದು, ತಣ್ಣೀರಿಲಿ ಮೀಯಲೆ ಕಲಿಗು;
ಚೂರ್ಣಿಕೆ ಹೇಳುದರ ಕಲಿಗು; ಬಳುಸುದರ ಕಲಿಗು, ಉಂಬದರ ಕಲಿಗು;
ಜೆಂಬ್ರಲ್ಲಿ ಬಳುಸುದು, ಬೆಂದಿಗೆ ಕೊರವದು, ಸುಧರಿಕೆ ಮಾಡುದು – ಇದೆಲ್ಲವನ್ನೂ ಕಲಿಗು.
ಸಭಾಕಂಪನ ಬಿಟ್ಟು, ನಾಕು ಜೆನ ಇಪ್ಪಗ ಧೈರ್ಯವಾಗಿ ಮಾತಾಡುದರ ಕಲಿಗು;
ಒಸ್ತ್ರ ಒಗಕ್ಕೊಂಬದು ಕಲಿಗು; ವೇಷಭೂಷಣ ಚೆಂದಕೆ ಮಡಿಕ್ಕೊಂಬದರ ಕಲಿಗು;
ಕೂದುಗೊಂಡು ಆಹಾರ ಸೇವನೆ, ನಿಂದುಗೊಂಡು ಗುರುಗಳ ಹತ್ತರೆ ಮಾತುಕತೆ, ಅಭಿವಾದನೆ, ಗುರುವಂದನೆ – ಎಲ್ಲ ಕ್ರಮಂಗಳನ್ನೂ ಕಲ್ತುಗೊಂಗು.
ದಿನಕ್ಕೊಂದರ ಹಾಂಗೆ ಕಲ್ತ ಶ್ಲೋಕಂಗೊ – ಹೇದರೆ ಎರಡು ತಿಂಗಳ ಸಂಗ್ರಹ ಬೆಳೆಶಿ ಒಳಿಶಿಗೊಂಬದರ ಕಲಿಗು.
ಸುಮಾರು ಮಂತ್ರಂಗೊ, ಪ್ರಯೋಗಂಗೊ, ನಮ್ಮತನಂಗೊ, ನಮ್ಮ ಕ್ರಮಂಗೊ, ನಮ್ಮ ಅಬ್ಬೆಪ್ಪ ಬೆಳೆಶಿ ಒಳುಶಿದ ಧರ್ಮ ಸಂಸ್ಕಾರಂಗೊ ಕಲಿಗು.
ಎಲ್ಲದರಿಂದಲೂ ಹೆಚ್ಚಾಗಿ – ಬೇರೆಬೇರೆ ನಮುನೆ ಜೆನರೊಟ್ಟಿಂಗೆ ಹೊಂದಿಗೊಂಡು, ಕೂಡಿ ಬಾಳುದರ ಕಲಿಗು.
~

ವೇದಪಾಟಶಾಲೆ ಬಿಟ್ಟ ಮತ್ತೆ – ಆಚಮನೆ ದೊಡ್ಡಣ್ಣ, ಮಾಶ್ಟ್ರುಮಾವ, ಬೈಲಕರೆ ಗಣೇಶಮಾವನ ಕೈಲಿ – ಹಲವು ಮಂತ್ರಂಗಳ ಕಲ್ತರೂ, ಕಲ್ತು ಮರದರೂ, ಚಾಕೊಟೆದೇವಸ್ತಾನಲ್ಲಿ ಕಲ್ತದು ಈಗಳೂ ಹಸಿರಾಗಿದ್ದು ಒಪ್ಪಣ್ಣಂಗೆ!
~
ಅದಾ, ಈ ಒರಿಶದ ಪಾಠಶಾಲೆಗೊ ಸುರುಅಪ್ಪ ಸಮೆಯ ಆತಿದಾ!
ಕಳುದೊರಿಶ, ಆಚೊರಿಶ ಉಪ್ನಾನ ಆದ ಮಕ್ಕೊ ಎರಡ್ಣೇ ಮೂರ್ನೇ ಕ್ಲಾಸಿಂಗೆ ಹೋಪ ಸಮೆಯ ಆತು.
ಈ ಒರಿಶದ ಹೊಸ ವಟುಗೊ ಒಂದನೇ ಕ್ಲಾಸಿಂಗೆ ಹೋಗಿ ಕೂದುಗೊಂಬ ಸಮೆಯ ಆತು.
ಅದರಿಂದಲೂ ಮುಖ್ಯವಾಗಿ, ವಟುಗೊ ಆರಾರು ನಮ್ಮ ಪೈಕಿಲಿದ್ದರೆ ಈ ರಜೆಲಿ ಅಂತೇ ಕೂದುಗೊಳ್ತರೆ – “ವೇದಪಾಠಶಾಲೆ”ಗೆ ಹೋಪಲೆ ಉತ್ತೇಜನ ಕೊಡಿ.
ಯೇವ ಪಾಠಶಾಲೆಯೂ ಅಕ್ಕು; ಅದರ್ಲಿಯೂ – ಇರುಳಿಡೀ ಅಲ್ಲೇ ಇದ್ದುಗೊಂಡು ಗುರುಕುಲದ ನಮುನೆ ಪಾಠಶಾಲೆ ಇದ್ದರೆ ಅಂಥಾದ್ದಕ್ಕೆ ಅಕ್ಕು.
ಇದು ಒಪ್ಪಣ್ಣನ ಸಲಹೆ ಮಾಂತ್ರ ಅಲ್ಲ, ವಿನಂತಿಯೂ.
~

ಬೈಲಿಲೇ ನೆಡಕ್ಕೊಂಡು ಹೋಪಗ ಅಲ್ಲಲ್ಲಿ ಪಾಟ ಸುರುಆದ್ಸರ ಬಗ್ಗೆ ಕೇಳಿತ್ತು; ಅಷ್ಟಪ್ಪಗ ಒಪ್ಪಣ್ಣಂಗೂ ಹಳತ್ತೆಲ್ಲ ನೆಂಪಾತು.
ಒಂದ್ನೇ ಒರಿಶದ ಮಾಣಿಂದ ತೊಡಗಿ, ಮೂರ್ನೇ ಒರಿಶದ ಅಣ್ಣನ ಒರೆಂಗೆ– ಎಷ್ಟೆಲ್ಲ ಕಲ್ತುಗೊಂಡಿದು ಹೇದು ಹೆಮ್ಮೆ ಪಡುದರಿಂದಲೂ ಹೆಚ್ಚು, ಅದೆಲ್ಲ ಕಲಿವದರ ಒಂದು ಭಾಗ ಆಗಿತ್ತಿದ್ದೇದು ಅಭಿಮಾನವೇ ಒಪ್ಪಣ್ಣಂಗೆ ಹೆಚ್ಚು ಹಿತ.

ನಿಂಗಳೂ ವೇದಪಾಠ ಶಾಲೆಲಿ ಕಲ್ತಿದ್ದರೆ ಈ ನಮುನೆ ಅನುಭವಂಗೊ ಇಕ್ಕಲ್ಲದೋ?
ಬೈಲಿಲಿ ಹಂಚಿಗೊಳ್ಳಿ ಆತೋ?
~
ಒಂದೊಪ್ಪ: ಮಂತ್ರ ಕಲಿತ್ತರ ಒಟ್ಟಿಂಗೆ ಸಹಬಾಳ್ವೆಯ ಜೀವನವನ್ನೂ ಕಲಿಯೇಕಾದ್ಸು ಮುಖ್ಯ.  ಅಲ್ಲದೋ?

ಸೂ:

  • ಚಾಕೊಟೆ ದೇವಸ್ಥಾನದ ಹೆಸರು ಹಾಂಗಲ್ಲ! 😉
  • ಅಮೂಲ್ಯ ಪಟವ ಕೊಟ್ಟು ಕಳುಸಿದ ಶಿವಪ್ರಸಾದಪ್ಪಚ್ಚಿಗೆ ವಿಶೇಷ ವಂದನೆಗೊ
  • ಕಾನಾವಣ್ಣನ ಉಪ್ನಾನ ಕಳುಸಿ ಮನಗೆ ಬಂದು ಕಾಲುನೀಡಿ ಕೂದಪ್ಪದ್ದೇ, ವಟುವಿನ ಬಗ್ಗೆ ಯೋಚನೆ ಮಾಡುವಗ ಈ ಶುದ್ದಿ ನೆಂಪಾತು.

41 thoughts on “ಆ ಮೂರೊರಿಶಲ್ಲಿ ಮಂತ್ರ ಮಾಂತ್ರ ಕಲ್ತದಲ್ಲ!

  1. ಆ ಕಳ್ಳ ಎ೦ತದೂ ತೆಕ್ಕೊ೦ಡು ಹೊಯಿದಿಲ್ಲೆ.ಒ೦ದು ಟಿವಿಯುದೆ, ಪ್ರಿಜ್ಜುದೆ, ಕವಾಟುದೆ ಮಾತ್ರ ಅಲ್ಲಿ ಇದ್ದದು.
    ಆ ಟಿವಿಯ ಮಾರಿರೆ ಅದರ ಸಾಗಟದ ಖರ್ಚೂ ಸಿಕ್ಕ ,ಆ ಪ್ರಿಜ್ಜಿನ ಯಾವ ಗುಜಿರಿಯವೂ ತೆಕ್ಕೊಳ್ಳವು ಹೇದು ಗ್ರೇಶಿತ್ತೊ ಎ೦ತೊ………!
    ಅಡ್ದ ಬಿದ್ದ ಕವಾಟಿನ ಸರ್ತ ನಿಲ್ಸುದುದೆ, ಕಳ್ಳ ಪೀ೦ಕುಸಿದ ಗಿಳಿಬಾಗಿಲಿನ ಸರಳಿನ ವಾಪಾಸು ಸಿಕ್ಕುಸುದುದೆ ದೊಡ್ಡಜ್ಜ೦ಗೆ ಇನ್ನು ಮು೦ದೆ ಇಪ್ಪ ದೊಡ್ಡ ಜಬಾವುದಾರಿ…….!

    1. ಹೂ…!!
      ಆ ಕಳ್ಳನ ಹೆಸರು – “ಹೆಬಗನೋ” 😉

      1. ಕಡ್ಡಿದೂಮ ಹೆಳಿ ಮಡುಗುವ ಭಾವಯ್ಯ..ಎ೦ತಕೆ ಹೇದರೆ ಅದು ಗಿಳುಬಾಗಿಲಿನ ಒ೦ದೇ ಸರಳು ಪೀ೦ಕುಸಿ ಬ೦ದದು….

        1. ಕಡ್ಡಿಯ ಹಾ೦ಗೆ ಒಳಹೊಕ್ಕು ಧೂಮದ ಹಾ೦ಗೆ ಮಾಯ ಆತೊ?ಒಳ್ಳೆ ನಾಮಕರಣ.
          ‘ಜಾಣನಹುದಹುದೋ..”

        2. ಓಯೀ ಜಾಣೋ..
          ಕಡ್ಡಿದೂಮ ಹೇದರೆ ಬಟ್ಯನ ಪುಳ್ಳಿ ಅಲ್ಲದೋ?

          ಓಯೀ ಆ ಒಂಟೆಯಾಂಗೆ ಬಗ್ಗುಸಿ ಕುಡಿತ್ತ ಜೆನ.. ಅದರ ಹೊಸ ಮನೆ ಒಕ್ಕಲಿಂಗಪ್ಪಗ ಎಂತ್ಸಾರು ಸಿಕ್ಕುಸ್ಸೋ ನೋಡಿದ್ದಾದಿಕ್ಕು..

          1. ಹ್ಹೆ ಹ್ಹೆ…….ಅದ್ರತ್ರೆ ಕೇಳುತ್ಸು ಹೇಂಗಡ….
            ಅದು ಬುದ್ದಿಮುಟ್ಟು ಅಕ್ಕೊ ಹೇದು……

          2. ಅದೋ.. ಅದಕ್ಕೆ ಮಂಡೆಬೆಚ್ಚ ಎಂತ್ಸಕೆ!?
            ಓ ಆ ಜೆನ ಇಲ್ಲೆಯೋ ಅವನತ್ರೆ ಹೇದರಾತು.. ಗುಟ್ಟಿಲಿ ಊಟಕ್ಷಿಣೆ ಇದ್ದು ಹೇದರೆ ಬೇಗ ಕೆಲ್ಸ ಮುಗ್ಸುಗು..

  2. ನಿ೦ಗಗೆಲ್ಲಾ ದೊಡ್ದಜ್ಜನ ನೀಲೇಶ್ವರ ಮನೆಗೆ ನಿನ್ನೆ ಕಳ್ಳ ನುಗ್ಗಿದ ಕಥೆ ಗೊ೦ತಿದ್ದ…..?

  3. ಏನಗೆ ಸುಳ್ಯದ ”ಕೇಶವ ಕ್ಪಪಾ ವಸoತ ವೇದ ಶಿಬಿರ ” ನೆನಪ್ಪಾವುತ್ತು.ಅಲ್ಲಿ ವೇದಾಧ್ಯನ ಮಾತ್ರ ಅಲ್ಲದ್ದೆ ವರುಶಕ್ಕೆ ಒoದರಿ ಪ್ರವಾಸವುದೆ ಇತ್ಥಿದು.ಮೂರು ವರುಷ ಪೂರೈಸಿದವರ ಮನೆಲಿ ಪ್ರತಿ ಆದಿತ್ಯವಾರ ಪ್ರಾಯೊಗಿಕವಾಗಿ ”ಸರಣಿ ಶಿವ ಪೂಜೆ” ಇತ್ತಿದು.ಅಲ್ಲಿ ಎoಗೊ ಸೊಕ್ಕಿದ್ದರ ನೆನಸಿಗೊoಡು ಈಗಲೂ ಅಲ್ಲಿಗೆ ಹೊಪಲೆ ಕೊಶಿ ಆವುತ್ತು. ~ ಮತ್ತೊoದು ವಿಶಯ ಎoತರ ಹೇದರೆ ಈಗ ನಿoಗಳ ಪೈಕೆ ಈಗ ಆರನ್ನಾರು ಅಲ್ಲಿಗೆ ಸೇರುಸೆಕ್ಕಾದರೆ ಸುಮಾರು ಸಮಯ ಮೊದಲೆ ಅಲ್ಲಿಗೆ ತಿಳಿಸೆಕ್ಕು.ಹಾoಗೆ ಒoದು ಪರೀಕ್ಷೆ ಬರೆಯಕ್ಕಾವುತ್ತು….! ಅಶ್ಟು ತೆರಕ್ಕು ಇದ್ದು ಅಲ್ಲಿ….!

    1. ಅದಕ್ಕೇ ನೀ ಜಾಣ ಆದ್ದು ನೋಡು

      1. ಮೀಸೆ ಬತ್ತಾ ಇಪ್ಪವ ಆದಿಕ್ಕು.

    2. ಯಬ್ಬ…
      ಇವ° ಜಾಣ ಅಪ್ಪು ಮಾವ…
      ನಾವು ಒಂದು ಒಪ್ಪ ಬರದಪ್ಪದ್ದೆ, ಆ ಪಟವನ್ನೇ ಬದಲುಸಿ ಬಿಟ್ಟ° ಮಾಣಿ.
      ಯಬ್ಬಾ…

      1. ಎರಡಿದ್ದದು ಒಂದಾಗಿ ಈಗ ಮೋನೆ ಮಾಂತ್ರ ಕಾಣ್ತನ್ನೇ ದೊಡ್ಡ ಬಾವಾ…

  4. ಮಕ್ಕಳ ಜೀವನ ವಿಕಸನಕ್ಕೆ ವೇದಪಾಠಶಾಲೆ ಸರಿಯಾದ ಜಾಗೆ.
    ಒಪ್ಪಣ್ಣನ ಈ ಶುದ್ದಿಯನ್ನೂ,ವಿನ೦ತಿಯನ್ನೂ ನಾವು ಮನಸ್ಸಿಲಿ ಮಡಗಿಗೊ೦ಡು ಅನುಸರಿಸೆಕ್ಕಾದ್ದೆ.
    ಧನ್ಯವಾದ.

  5. ಮಂತ್ರ ಮಾಂತ್ರ ಅಲ್ಲ ಜೀವನಕ್ಕೆ ಬೇಕಾಗಿಪ್ಪ ತಂತ್ರ, ಸೂತ್ರಂಗಳ ಕಲುಶುವ ವಸಂತ ವೇದಪಾಠ ಶಿಬಿರದ ಅನುಭವ ರಸವತ್ತಾಗಿ ಬಯಿಂದು. ವೇದಪಾಠಶಾಲೆಗೆ ಹೋಪವಕ್ಕೆ ಅಲ್ಲಿ ಕಲಿಯಲೆಡಿಗಪ್ಪಂತಹ ತುಂಬಾ ವಿಷಯಂಗೊ ಇಪ್ಪದಂತೂ ಅಪ್ಪು. ಮಧೂರಿಲ್ಲಿ ನೆಡದ ಹೀಂಗಿಪ್ಪ ಶಿಬಿರಕ್ಕೆ ಆನುದೆ ಒಂದು ವರ್ಷ ಹೋದ್ದರ ನೆಂಪು ಮಾಡಿತ್ತು.

  6. ಒಪ್ಪಣ್ಣನ ವಸಂತ ವೇದ ಪಾಠ ಶಾಲೆಯ ಅನುಭವ ಲಾಯಕಾಗಿದ್ದು. ”ಆ ಕಾಲ ಒಂದಿತ್ತು.ದಿವ್ಯ ತಾನಾಗಿತ್ತು….”; ”ವ್ಯಾಕುಲ ವ್ಯಥಾ ಮಿಠಾನೇವಾಲಿ ಮೇರಿ ಬಚಪನ್ ಫಿರ್ ಏಕ್ ಬಾರ್ ದೇ ದೇ ಅಪ್ ನೀ ನಿರ್ಮಲ ಶಾಂತಿ” ಇತ್ಯಾದಿ ಕವಿ ಸೊಲ್ಲುಗೊ ನೆಂಪಾತು.”ಬಾಲ್ಯ ವೇ ಹೋದೆಯಾ! ಮರಳಿ ಬಾರೆಯಾ?” ಹೇದೆಲ್ಲಾ ತೋರ್ತು ”ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.”- ಕವಿ ಅಡಿಗರ ಮಾತು ಮನಸ್ಸಿಂಗೆ ಸಮಾಧಾನ ಕೊಟ್ಟತ್ತು. ಅನುಭವ ಕಯ್ಕೆ ಆದರೂ ಅದರ ನೆಂಪಿಲ್ಲಿ ಸೀವಿದ್ದನ್ನೆ ಅಣ್ಣ ನಿಂಗಳ ಈ ನೆಂಪಿನ ಉಣಿಶಿದ್ದಕ್ಕೆ ಧನ್ಯವಾದಂಗೊ.ನಿಂಗಳ ಮನ್ನೆ ಶ್ರೀಯಕ್ಕನ ಮನೆ ಉಪ್ನಾನಲ್ಲಿ ಕಂಬಾಲೆಡೆಯಾದಕ್ಕೆ ಕೋಶಿಯಾತು

  7. (ಸಜ್ಜಿಗೆಯೋ, ಅವಲಕ್ಕಿಯೋ, ಉಪ್ಪಿಟ್ಟೋ – ಹೀಂಗೆಂತಾರು ತಿಂಡಿ;)
    ಸಜ್ಜಿಗೆಯೂ, ಉಪ್ಪಿಟ್ಟೂ ಒಂದೆಯಾ? ಬೇರೆಬೇರೆಯಾ?

      1. ಅದಕ್ಕೆ ಅನ್ನ ಉಪ್ಪಿಟ್ಟು ಹೇಳಿ ಹೇಳುದಲ್ಲದಾ?

        1. ಆನು ಸಣ್ಣಾದಿಪ್ಪಗ ಎಂಗಳ ಕಡೆ ಒಬ್ಬ ಮಾಡಿಕೊಂಡಿತ್ತ ಉಪ್ಪಿಟ್ಟಿಂಗೆ ಹಿಟ್ಟುಪ್ಪು ಹೇಳಿಕೊಂಡಿತ್ತೆಯ…. ಉಪ್ಪು ಜಾಸ್ತಿ…. 😉

    1. ಬೆಂಗಳೂರು ಕಡೆಯವು ಸಕ್ಕರೆ ಹಾಕಿ ಬೇಯಿಸಿದ ಗೋಧಿ ರವೆಯ ಸಜ್ಜಿಗೆ ಹೇಳುತ್ತವು. ನಾವು ಹೇಳುವ’ ಸಜ್ಜಿಗೆ ಒಗ್ಗರಿಸಿದ್ದರ’ ಉಪ್ಪಿಟ್ಟು ಹೇಳಿ ಹೇಳುತ್ತವು. ಅಕ್ಕಿ ತರಿಯ ಉಪ್ಪಿಟ್ಟು ಕೂಡ ರೂಢಿಲಿ ಇದ್ದು.

  8. ಲೇಖನ ಲಾಯಕ ಆಯಿದು ಒಪ್ಪಣ್ಣಾ.ಮುಜು೦ಗಾವು ವಿದ್ಯಾ ಪೀಟಲ್ಲಿ ಈಗ ಎರಡನೆಯ ವರಿಶ ವೇದ ಶಿಬಿರ ಅವ್ತಾ ಇದ್ದು….ವೇದಮೂರ್ತಿ ಕೊಣಮ್ಮೆ ಮಹಾದೇವ ಭಟ್ ಅವರ ಸ೦ಚಾಲಕತ್ವಲ್ಲಿ.

  9. ಲೇಖನ ತುಂಬಾ ಒಳ್ಳೆದಾಯಿದು ಒಪ್ಪಣ್ಣ… ಇಂದು ಶಾಲೆಗಳಿಂದ ಅಥವಾ ಸಮಾಜಂದ ಮಕ್ಕೋ ಹಲವು ದುರ್ಬುದ್ದಿಗಳ ಕಲ್ತು ಹಲವು ಅನಾಹುತಂಗ ಸಂಭವಿಸಿದ ಉದಾಹರಣೆಗ ನಿತ್ಯ ಕೇಳಿ ಬತ್ತು… ನಮ್ಮ ಮಕ್ಕೊಗೆ ಒಪ್ಪಣ್ಣ ವಿವರುಸಿದ ಹಾಂಗಿಪ್ಪ ಆದರ್ಶ ವಾತಾವರಣಲ್ಲಿ ಕಲಿವ ಹಾಂಗಿದ್ದ ಗುರುಕುಲ ಮಾದರಿಯ ಶಿಕ್ಷಣ ಸಿಕ್ಕಿದರೆ ಎಷ್ಟು ಒಳ್ಳೆದಿತ್ತು… ನಾವೆಲ್ಲ ಒಂದು ಚೂರು ಮನಸ್ಸು ಮಾಡಿದರೆ ಇದೇನು ಕಷ್ಟದ ಕೆಲಸ ಅಲ್ಲ… ಎಲ್ಲರೂ ಒಂದಾಗಿ ನಮ್ಮ ಮಕ್ಕಳ ಆದರ್ಶ ವಾತಾವರಣಲ್ಲಿ ಬೆಳವ ಹಾಂಗೆ ಮಾಡುದು…

    ಬೇಸಿಗೆ ರಜೆಲಿ ಆದರೂ ಮಕ್ಕೊಗೆ ‘ವಸಂತ ವೇದ ಪಾಠ ಶಾಲೆ’ ಲ್ಲಿ ಕಲಿವ ಸುಯೋಗ ಇದ್ದು ಹೇಳುದೆ ಖುಷಿಯ ವಿಚಾರ… ಆದಷ್ಟು ಬೇಗ ನಮ್ಮೆಲ್ಲರ ಮಕ್ಕೊಗೆ ಅತ್ಯುತ್ತಮ ವಾತಾವರಣಲ್ಲಿ ಅತ್ಯುತ್ತಮ ಶಿಕ್ಷಣ ಸಿಕ್ಕುವ ಹಾಂಗೆ ಆಗಲಿ…

  10. ಈ ವರ್ಷ ಮಗ ಸುಳ್ಯದ ಕೇಶವ ಕೃಪಾ ವಸಂತ ವೇದ ಶಿಬಿರಕ್ಕೆ ವೇದ ಕಲಿವಲೆ ಹೋವುತ್ತಾ ಇದ್ದ. ಅವನ ಅನುಭವ ಹೇಂಗಿತ್ತು ಹೇಳಿ ಕೇಳೆಕ್ಕಷ್ಟೆ.

    ಈ ಸುದ್ದಿ ಓದುವಾಗ ಎನ್ನ ಅಣ್ಣ ಕಾಂಚೋಡಿಲಿ ವೇದ ಕಲ್ತಿಕ್ಕಿ ಬಂದು ಹೇಳಿಗೊಂಡಿದ್ದದೆಲ್ಲ ನೆಂಪಾತು. ಆಲ್ಲಿಯ ಸುದ್ದಿ ಎಲ್ಲ ಕೇಳಿ ಆನುದೆ ವೇದ ಕಲಿವಲೆ ಹೋವುತ್ತೆ ಹೇಳಿ ಆನು ಕೂಗಿ ರಂಪ ಮಾಡಿದ್ದರ ಎನ್ನ ಅಪ್ಪ ಈಗಲೂ ನೆನಪ್ಸಿಗೊಳ್ತವು……

  11. ಹೇಳಿದ ಹಾಂಗೆ,ಮರೆತೆ-ಈ ಬರಹದ ಶೀರ್ಷಿಕೆ ತುಂಬಾ ಲಾಯ್ಕ ಆಯಿದು.[ಆ ಮೂರು ವರ್ಷ ಮಂತ್ರ ಮಾತ್ರ ಕಲ್ತದಲ್ಲ].ಮಂತ್ರಂದ ಬಾಕಿ ವಿಷಯ ಕಲ್ತದೇ ಜಾಸ್ತಿ ಹೇಳಿ ತೋರುತ್ತು!ಸ್ವತಂತ್ರ ಜೀವನದ ಅನುಭವ ಮಕ್ಕೊಗೆ ಅಪ್ಪದರ ಚಂದವಾಗಿ ವಿವರಿಸಿದ್ದವು.

  12. ವಸಂತ ವೇದ ಪಾಠ ಶಾಲೆಯ ನೆಂಪು ಮಾಡಿ ಕೊಟ್ಟತ್ತು ಈ ಶುದ್ದಿ. ಹೀಂಗಿಪ್ಪ ವೆವಸ್ಠೆಲಿ, ೮-೧೦ ವರ್ಷ ಪ್ರಾಯದ ಮಕ್ಕೊಗೆ ರೆಜ ರೆಜ ಜವಾಬ್ದಾರಿ ತೆಕ್ಕೊಂಬ ಅಕಾಶ ಸಿಕ್ಕಿ ಅದೂದೆ ಒಂದು ಅನುಭವವೇ ಆವ್ತು.
    ಒಂದು ವರ್ಷದ ರಜೆಲಿ ಹೀಂಗೆ ಪೆರಡಾಲಕ್ಕೆ ಹೋಗಿತ್ತಿದ್ದೆ. ಅಲ್ಲಿ ಉಳಕ್ಕೊಂಬ ವೆವಸ್ಥೆ ಇತ್ತಿದ್ದಿಲ್ಲೆ. ಹಾಂಗಾಗಿ ಶ್ಲೋಕಂಗಳ ಅಭ್ಯಾಸ ಆಯಿದಿಲ್ಲೆ. ಸಂಧ್ಯಾವಂದನೆ, ಪುರುಷ ಸೂಕ್ತ, ಮಂಗಳಾಷ್ಟಕ ಅಗಿತ್ತಿದ್ದು.
    ಎಂಗೊಗೆ ನಿತ್ಯಾ ಹೋಗಿಂಡು ಬಪ್ಪಲೆ ಅವಕಾಶ ಇಲ್ಲೆ ಹೇಳಿ ಅಲ್ಲಿಯೇ ಸಂಬಂಧಿಕರಲ್ಲಿ ಉಳಕ್ಕೊಂಡು ಇತ್ತಿದ್ದೆಯೊ°.
    ಅಲ್ಲಿ ಒಂದು ದೀಪದ ಕಂಬಲ್ಲಿ ಇರ್ಳು ದೀಪ (ಲೇಂಪ್) ಹೊತ್ತುಸಿ ಮಡುಗುವ ಕಾರ್ಯಕ್ರಮ ನಡಕ್ಕೊಂಡು ಇತ್ತಿದ್ದು. ದಾರಿ ಹೋಪವಕ್ಕೆ ಇರ್ಳು ಕಾಂಬಲೆ ಹೇಳಿ ಅಡ. ಅದಕ್ಕೆ ಬೇಕಾದ ಚಿಮಿಣಿ ಎಣ್ಣೆ ಸರ್ಕಾರಂದ ಸಿಕ್ಕುತ್ತು ಹೇಳಿತ್ತಿದ್ದವು.
    ಹೊಳೆಲಿ ಮೀವದು (ಸೊಕ್ಕುವದು), ಸೆಖಗೆ ದೇವಸ್ಥಾನದ ಜೆಗಲಿಲಿ ಮನುಗುವದು, ಹತ್ರೆ ಎಲ್ಲಿಯಾರೂ ಆಟ ಇದ್ದರೆ ರೆಜ ಹೊತ್ತು ನೋಡಿಕ್ಕಿ ಬಪ್ಪದು, ವಿರಾಮ ಇಪ್ಪ ದಿನ ಕೊತ್ತಳಿಂಕೆ ಬೇಟಿಲ್ಲಿ ಕ್ರಿಕೆಟ್ ಆಡುವದು ಎಲ್ಲಾ ಹೊಸ ಅನುಭವಂಗೊ.
    ದೇವಸ್ಥಾನಲ್ಲಿ ಜೆಂಬ್ರಂಗೊ ಇಪ್ಪಗ ಊಟ ದಕ್ಷಿಣೆ ಸಿಕ್ಕುವದು ಅಂಬಗ ಎಂಗೊಗೆ ವಿಶೇಷವೇ ಸೈ.

    1. [ದೇವಸ್ಥಾನಲ್ಲಿ ಜೆಂಬ್ರಂಗೊ ಇಪ್ಪಗ ಊಟ ದಕ್ಷಿಣೆ ಸಿಕ್ಕುವದು ಅಂಬಗ ಎಂಗೊಗೆ ವಿಶೇಷವೇ ಸೈ] – ನೈಜ ಚಿತ್ರಣ ಅಪ್ಪಚ್ಚಿ.

  13. ಈ ವಾರದ ಈ ಶುದ್ದಿ ಬೈಲ ಸಮಸ್ತರ ಆ ಹಳೇ ದಿನವ ನೆಂಪು ಮಾಡಿ ಮೆಲುಕು ಹಾಕಲೆ ಯೋಗ್ಯ ಸಹಾಯ ಆತು. ಕಾನಾವಣ್ಣನ ಉಪ್ನಾನ ಮುಗುಶಿ ಬಪ್ಪಗ ಪೆರಡಾಲ(ಎನ್ನ ಹಳೇ ವೇದಪಾಠ ಶಾಲೆ) ವೇದಪಾಠ ಶಾಲೇಲಿ ನೂರಕ್ಕೂ ಹೆಚ್ಚಿನ ಕುಂಞಿಮಕ್ಕೊ ಏಕ ಕಂಠಲ್ಲಿ ಒಂದು ಹೊಡೆಲಿ ಅರ್ಘ್ಯಜೆಪ ಮಂತ್ರ, ಮತ್ತೊಂದು ಕ್ಲಾಸಿಲ್ಲಿ ರುದ್ರ, ಮೂರನೇ ಕ್ಲಾಸಿಲ್ಲಿ ಪಂಚಾಯತನ ಪೂಜೆ ಮಂತ್ರಂಗಳ ಸಂತೆ ಹಾಕುವದು ನೋಡಿ ನಾವು ಪಿಕ್ಲಾಟ ಮಾಡಿಗೊಂಡು, ಅತ್ತಿತ್ತೆ ಚೂಂಟಿಗೊಂಡು ಲಾಗಹಾಕಿಯೊಂಡು ಮತ್ತೆ ರಜಾ ಮಂತ್ರ ಕಲ್ತುಗೊಂಡೂ ಇತ್ತಿದ್ದ ಆ ದಿನಂಗಳ ನೆಂಪುಮಾಡಿಸಿತ್ತು.

    ಶುದ್ದಿ ಲಾಯಕ ಮೂಡಿಬೈಂದು ಹೇಳಿಗೊಂಡು – ‘ಚೆನ್ನೈವಾಣಿ’.

    1. ಒಪ್ಪಣ್ಣನ ಶುದ್ದಿ ಬಂದರೆ ಸುರೂವಾಣ ಒಪ್ಪ ಚೆನ್ನೈ ಭಾವಂದು ಹೇಳಿ ಒಂದು ನಿಯಮವೇ ಆಗಿ ಹೋಗಿತ್ತಿದ್ದು. ಕಾನಾವಣ್ಣನ ಉಪ್ನಾನದ ಗೌಜಿಯ ಎಡಕ್ಕಿಲಿ ಪೆರಡಾಲ ಮಕ್ಕಳ ವೇದ ಪಾಠ ಕೇಳಿ ಚೆನ್ನೈ ಭಾವ° ಶುದ್ದಿ ಓದುವಾಗ ತಡವಾತೋ ತೋರ್ತು… 🙂

      1. ಅಪ್ಪು ಭಾವ, ನಾವಲ್ಲೆ ತಿರಿಗಿಯೊಂಡಿದ್ದಾಂಗೆ ಇಲ್ಲಿ ದಿನ ಬದಲಿದ್ದು ಗೊಂತೇ ಆತಿಲ್ಲೆ ಇದಾ. ನಮ್ಮತ್ತೆ ಮತ್ತೆ ಮೊಬೈಲು ನೆಟ್ಟನೂ ಇಲ್ಲೆ. ಇಲ್ಲಿ ಬಂದಿಕ್ಕಿಯೇ ಆತಟ್ಟೇ. ಎಂತಾರು ಭಾವ ಶುದ್ದಿಯ ಬೆಶಿ ಬೆಶಿಗೇ ನೋಡಿರೇ ಅದರಲ್ಲಿ ಸತ್ವ. ತಣುದ ಹೋಳಿಗೆ, ಮೈಸೂರು ಪಾಕು ಬೇಕಾರೆ ನಿಂಗೊ ನಾಕು ದಿನ ಕಳುದೂ ತಿಂಬಲಾವ್ತು, ಆದರೆ., ಬೈಲ ಶುದ್ದಿ ಬೆಶಿ ಬೆಶಿಗೇ ಆಯೇಕು. ಎಂತ ಹೇಳ್ತಿ !

  14. ವಸಂತ ವೇದ ಪಾಠ ಶಾಲೆಯ ನೆನಪ್ಪು ಮಾಡಿದ್ದಕ್ಕೆ ಧನ್ಯವಾದಗಳು ಒಪ್ಪಣ್ಣ..:-)

  15. ಅರ್ಜೆಂಟರ್ಜೆಂಟಿಲಿ ವಾಕ್ಯಂಗಳ ಸೇರ್ಸಿದ್ದೆ. ಲಿಂಕ್ ಸಿಕ್ಕದ್ರೆ ಮುಖತಾ ಕೇಳಿ ತಿಳ್ಕೊಳ್ಲಿ…. 😉

  16. ಮಂಗ್ಳೂರು ಮಾಣಿಂದ ನಾಕೈದೊರಿಷ ಮದಲು ನಾವುದೇ ಸುಬ್ರಮಣ್ಯಲ್ಲೇ ಕಲ್ತಿದು… ಅವಗಳೇ ಅದಾ ಕುಮಾರ ಪರ್ವತ ಯಾತ್ರೆ ಕೈಗೊಂಡದು.
    ತುಂಬಾ ಚೆಂದದ ಅನುಭವಂಗೋ. ಜೀವನ ಪಾಟಂಗೊ.
    ವೇದ ಪಾಟ ಶಾಲೆ ನೆಡಶುತ್ತೋವು ಆರು ಹೇಳ್ತದರ ಮೇಲೆ ಅಲ್ಯಾಣ ಕ್ವಾಲಿಟಿ ಇರ್ತು. ಸುಬ್ರಮಣ್ಯಲ್ಲಿ ಎಂಗ ಇಪ್ಪಗ ತುಂಬಾ ರಾಜಕೀಯ ನೆಡಕ್ಕೊಂಡಿತ್ತು. ಭಾರತ ಪಾಕಿಸ್ತಾನ ಯುದ್ಧವೂ ಆಯ್ಕೊಂಡಿತ್ತು. ಋಗ್ವೇದ v/s ಯಜುರ್ವೇದ ಮಕ್ಕೊಗೆ ಪೆಟ್ಟುಗುಟ್ಟೂ, ಗುರುಗಳದ್ದು ಒಳಾಂದೊಳ ಸಪೋರ್ಟೂ ಇತ್ತು.
    ಅಂತೂ ಮುಗಿಶಿ ಹೆರ ಬಂದದು ಸಾಹಸವೇ ಸರಿ.
    ೧ನೇ ಕ್ಲಾಸಿಂಗೆ ಸುಳ್ಯದ ನಾಗರಾಜ ಗುರುಗೋ ಇತ್ತಿದ್ದವು. ಅವು ಇಪ್ಪಗ ದಿನಾಲೂ ಅಗ್ರಹಾರಕ್ಕೆ ಮೀವಲೆ ಹೋಕು ಎಂಗಳ ಮೆರವಣಿಗೆ. ಅವಗ ತುಂಬಾ ಶಿಸ್ತಿತ್ತು. ನಂತ್ರ ಬಂದೋರು ಸಣ್ಣ ಪ್ರಾಯದೋರುದೇ ಅನುಭವ ಕಮ್ಮಿ ಇಪ್ಪೋರುದೇ.
    ಅವಗ ಪ್ರತಿದಿನ ದೇವಸ್ತಾನಕ್ಕೆ ದಾನ ತೆಕ್ಕೊಂಬಲೆ ಹೋಪಲಿತ್ತು. ಅಲ್ಯೂ ರಾಜಕೀಯ. ತುಂಬಾ ದಾನ ಸಿಕ್ಕುವ ದಿನ ಗುರುಗೊ, ಕಮ್ಮಿ ಇಪ್ಪ ದಿನ ಮಕ್ಕೊಗೆ ಅವಕಾಶ 😉
    ಅಂತೂ ಅದೊಂದು ಅದ್ಭುತ ಅನುಭವ.
    ಒಪ್ಪಣ್ಣಂಗೊಂದೊಪ್ಪೊಪ್ಪ…. 🙂

    1. ಆಚಕರೆ ಮಾಣಿದೇ ಆನುದೇ ಒ೦ದೆ ಕ್ಲಾಸುಃ), ಅಲ್ಲಿ ಪೈಲು ಮಾಡ್ತ ಇತ್ತವಿಲ್ಲೆಃ) ಸುಬ್ರಮಣ್ಯದ ಖುಶಿಯೀ ಬೇರೆ…

    2. ಮಾಣಿ ಹೋಗಿಯೊಂಡಿದ್ದ ಕಾಲಲ್ಲಿ ಹಾಂಗೆಂತ ಇತ್ತಿಲ್ಲೆ.
      ಹಾಂಗೆ – ರಜ್ಜ ಬೇರೆ 😉

      ಮಕ್ಕಳೂ ಮದಲಾಣೋರಿಂದ ಸುಮಾರು ಪಾಪ 🙂
      ಆಚಕರೆ ಮಾಣಿ ಸುಬ್ರಹ್ಮಣ್ಯಕ್ಕೆ ಹೋಗಿಯೊಂಡಿಪ್ಪಗ, ‘ಅಣ್ಣಂದ್ರು’ ಎಷ್ಟು ಜೋರು ಹೇಳಿರೆ, ಆರನ್ನೋ ನೆಡು ಇರುಳು ಏಳುಸಿ ರುದ್ರ ಹೇಳುಸಿದ್ದವಡ ಅಪ್ಪೋ?? 😉

  17. ಶುದ್ಧಿ ಬಾರಿ ಚೆಂದ ಇದ್ದು..ಎನಿಗೆ ಆನು ವೇದಪಾಠಕ್ಕೆ ಹೋದ ನೆನ್ಪಾತು..ಆ ಹಳೆಯ ನೆನಪುಗಳ ನೆನಪಿಸಿದಕ್ಕೆ ಧನ್ಯವಾದ..ನಿಜವಾಗಿಯು ಸಣ್ಣ ಪ್ರಾಯಲ್ಲಿ ಸಹಜೀವನ ಎಂಥ ಹೇಳಿ ಕಲ್ತ್ರೆ ಜೀವಮಾನಲ್ಲಿ ಮರ್ತು ಹೋಗ..ಆದರೆ ಈಗ ಎರಡು ತಿಂಗಳು ವೇದ ಕಲಿವಾಗ ಜಪ ಎಲ್ಲ ಇರ್ತು ಅದದ ಮತ್ತೆ ಮನೆಲಿ ಮಾಡ್ಲಿಲ್ಲೆ ಮತ್ತೆ ಬಪ್ಪ ವರ್ಷವೆ..ಹೀಂಗೆ ಹೇಳುದರ ಕೇಳಿದ್ದೆ..
    ಮತ್ತೊಂದು ಎಂಥ ಹೇಳಿದ್ರೆ ಈಗ ವೇದಪಾಠಲ್ಲಿ ವಸತಿ ಇಲ್ಲೆ ಮನೆಗೆ ಬಪ್ಪುದು ಹಾಂಗೆ ಸಹಜೀವನ ಹೆಚ್ಚು ಗೊತ್ತಗ್ತಿಲ್ಲೆ..

  18. {ನಿಂಗಳೂ ವೇದಪಾಠ ಶಾಲೆಲಿ ಕಲ್ತಿದ್ದರೆ ಈ ನಮುನೆ ಅನುಭವಂಗೊ ಇಕ್ಕಲ್ಲದೋ?
    ಬೈಲಿಲಿ ಹಂಚಿಗೊಳ್ಳಿ ಆತೋ?} – ನೀನು ಹೇಳಿ ಮುಗಿಶಿದರೆ ಮತ್ತೆಂತಾರು ಒಳಿವದಿದ್ದೋ ಒಪ್ಪಣ್ಣಾ?
    ಇದೇ ನಮೂನೆ.. ಇದೇ ಇದೇ ಇದೇ.. 🙂
    ಸುಬ್ರಹ್ಮಣ್ಯಲ್ಲಿ ವೇದ ಪಾಠ ಕಲ್ತದು ನೆಂಪಾತು.

    ಸುರೂಆಣ ವರ್ಷ ತಣ್ಣೀರಿಲ್ಲಿ ಮೀಯಾಣ.
    ಎರಡ್ಣೇ ವರ್ಷಕ್ಕಪ್ಪಗ ಅಪರೂಪಕ್ಕೆ ಬೆಶಿ ನೀರು ಸಿಕ್ಕಿಂಡಿದ್ದತ್ತು.
    ಮೂರನೇ ವರ್ಷಲ್ಲಿ ಊರಿಗೆ ನಾನೇ ಹಿರಿಯ ಹೇಳುವಾಂಗೆ – ಯಾವಗಳೂ ಬೆಶಿನೀರೇ..
    (ಅಡಿಗೆ ಬಟ್ರು ಉದಿಯಪ್ಪಗಾಣ ಹೆಜ್ಜೆಗೆ ಹೇಳಿ ಇರುಳೇ ಕಠಾರಕ್ಕೆ ಕೆಂಡ ಹಾಕುತ್ತವಿದಾ, ಪ್ರತಿಯೊಬ್ಬನೂ ಒಂದೊಂದು ಬಕೆಟು ನೀರು ತೆಗದು ತಣ್ಣೀರು ಹಾಕಿದರೆ ಅವ್ವು ಬಪ್ಪಗ ಬೆಶಿ ನೀರು ತಣುದಿರ್ತು.)

    {ಸ್ವರ ತಿದ್ದಲೆ ಇಪ್ಪ ದಾಸನಬೆತ್ತ} – ಒಪ್ಪಣ್ಣನ ಸ್ವರ ಇಷ್ಟು ಚೆಂದ ಇಪ್ಪದೆಂತ ಹೇಳಿ ಈಗ ಗೊಂತಾತಿದಾ 😉
    ಸುಬ್ರಹ್ಮಣ್ಯಲ್ಲಿ ಬೆತ್ತ ಹಿಡಿಯದ್ದ ಗುರುಗೊ ಹೇಳಿರೆ ನಮ್ಮ ಗಣೇಶಮಾವ°ನೇ.. 🙂

    ನಿಂಗಳ ಪೂಜೆ ಸಮಯಲ್ಲಿ ಎಂಗ ದೇವಸ್ಥಾನಕ್ಕೆ ಸುತ್ತು ಬಂದೊಂಡಿತ್ತಿದ್ದೆಯ°.. ಕ್ರಿಕೆಟ್ಟು ಆಡ್ತ ಸಮಯಲ್ಲಿ ಕುಮಾರಧಾರೆಗೆ ಮೀವಲೆ 🙂

    ಅನಂತ – ನಾರಾಯಣನ ಕಥೆ ಓದಿರೆ ಗಣೇಶ ಮಾವ°ಂಗೆ ನಮ್ಮ ಗೋಪಾಳಿ ಮಾಣಿಯ ನೆಂಪಕ್ಕೋ? 😉

    ಸುಬ್ರಹ್ಮಣ್ಯಲ್ಲಿ ವಾರಕ್ಕೊಂದರಿ ಜ್ಯೋತಿಷ್ಯ ಕ್ಲಾಸು ಆಗಿಂಡಿದ್ದತ್ತು.
    ನಕ್ಶತ್ರಾತ್ ಹರತೇ ಪಾಪಂ ಯೋಗಾದ್ರೋಗ ನಿವಾರಣಂ ಹೇಳಿ ಎಲ್ಲ ಹೇಳಿಕೊಟ್ಟೊಂಡಿತ್ತಿದ್ದವು… 🙂

    ಮತ್ತೆಲ್ಲ ಹಾಂಗೇ…
    ಏನೂ ವೆತ್ಯಾಸ ಇಲ್ಲೆ. 🙂

    1. ನವಗೂ ಸುಬ್ರಹ್ಮಣ್ಯದ್ದು ನೆಂಪು ಸರೀ ಇದ್ದಿದಾ…ಉಡುಪರ ಜ್ಯೊತಿಷ್ಯ ಕ್ಲಾಸು, ಸುಬ್ರಹ್ಮಣ್ಯ ಭಟ್ರ ಯೋಗಾ ಕ್ಲಾಸು ಎಲ್ಲ ಇನ್ನೂ ಹಾಂಗೆ ತಲೆಲಿ ಇದ್ದಿದಾ..
      ಒಪ್ಪಣ್ಣನ ಸುದ್ದಿ ಪಷ್ಟಾಯ್ದು..

  19. ವೇದ ಪಾಠ ಶಾಲೆಯ ಅನುಭವ ಚೆಂದವಾಗಿ ಮೂಡಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×