Oppanna.com

ಮಾರ್ಗಸೂಚಿಗೊ ಹಲವಿರಳಿ; ದಾರಿ ನಮ್ಮದೇ ಇರಳಿ..

ಬರದೋರು :   ಒಪ್ಪಣ್ಣ    on   28/10/2011    19 ಒಪ್ಪಂಗೊ

ಹಬ್ಬ, ಪಟಾಕಿ, ಬೆಡಿ – ಈ ಅಂಬೆರ್ಪಿಲಿ ಊರೊಳದಿಕ್ಕೇ ಇದ್ದವು ಮಾತಾಡ್ಳೆ ಸಿಕ್ಕುತ್ತವಿಲ್ಲೆ ಇದಾ!
ಸುಮಾರು ಸಮೆಯ ಕಳುದ ಮತ್ತೆ ನಿನ್ನೆ ಮಾಷ್ಟ್ರುಮಾವನ ಹತ್ತರೆ ಮಾತಾಡ್ಳೆ ಸಿಕ್ಕಿತ್ತು.
ಗೋಪೂಜೆ ಏರ್ಪಾಡಿಲಿ ಅತ್ತೆ ಅಂಬೆರ್ಪಿಲಿ ಇದ್ದರೂ, ಮಾಷ್ಟ್ರುಮಾವ ಎಲೆತಟ್ಟೆ ಬುಡಲ್ಲಿ ಪುರುಸೋತಿಲೇ ಇದ್ದಿದ್ದವು.
ಲೋಕಾಭಿರಾಮ ಮಾತಾಡಿಗೊಂಡು ಹೋದ ಹಾಂಗೇ – ಜೀವನ, ಬದ್ಕಲೆ ಇನ್ನೊಬ್ಬನ ಸಲಹೆ ಸೂಚನೆಗೊ, ಬದ್ಕುತ್ತ ರೀತಿ, ರಿವಾಜುಗಳ ಬಗ್ಗೆ ಮಾತು ತಿರುಗಿತ್ತು. ಅದರೊಟ್ಟಿಂಗೇ ಒಂದು ವಿಶೇಷ ವಿಚಾರವ ಹೇಳಿದವು.
ಈ ವಾರಕ್ಕೆ ಒಂದು ತೂಕದ ಶುದ್ದಿ ಮಾಡಿ ಬೈಲಿಂಗೆ ಹೇಳಿರೆ ಹೇಂಗಕ್ಕು – ಹೇಳಿಗೊಂಡು ಬಂದದು.

~

ಪ್ರಪಂಚಲ್ಲಿ ಇಪ್ಪ ಜೀವ ಸಂಕುಲಲ್ಲಿ ಮನುಶ್ಶರೂ ಇಪ್ಪದು. ನಮ್ಮ ಬದ್ಕಾಣಕ್ಕೆ ರಜ್ಜ ಆದೂ ಇನ್ನೊಂದು ಜೀವಿಯ ಪ್ರಭಾವಳಿ ಬಿದ್ದೇ ಬೀಳ್ತು.
ಹುಟ್ಟಿದ ಲಾಗಾಯ್ತು, ಇತರರ ನೋಡಿಗೊಂಡು, ಕಲ್ತುಗೊಂಡು, ಸಂಸ್ಕಾರ ಬೆಳೆಶಿಗೊಂಡು – ಬದ್ಕುತ್ತು.
ಬಾಲ್ಯಾವಸ್ಥೆಲಿ ಅಡಿಪಾಯದ ಸಂಸ್ಕಾರ ಸಿಕ್ಕಿದ ಮತ್ತೆ, ಯೌವ್ವನಲ್ಲಿ ಬೆಳದು ಸ್ವತಂತ್ರ ಆವುತ್ತು.
ಸ್ವತಂತ್ರವಾಗಿ ಬದ್ಕುವ ಬೌದ್ಧಿಕ ಶೆಗ್ತಿ ಇಪ್ಪಗಳೂ – ನವಗೆ ಜೆತೆಗಾರಂಗಳ ಸಲಹೆ ಸೂಚನೆಗೊ ಬೇಕಾವುತ್ತು.
ಹಾಂಗೆ ತೆಕ್ಕೊಂಬಗ ಹಲವಾರು ತಿರ್ಗಾಸುಗೊ, ಮಾರ್ಗದರ್ಶನಂಗೊ, ಬೇಡದ್ದು-ಬೇಕಾದ್ದು ಉಪದೇಶಂಗೊ ಧಾರಾಳ ಸಿಕ್ಕುತ್ತು.
ಸಿಕ್ಕಿದ ಎಲ್ಲಾ ಸಲಹೆಗಳ ತೆಕ್ಕೊಂಬದಲ್ಲ, ಬದಲಾಗಿ ವಿವೇಕಯುತವಾಗಿ ಆಲೋಚನೆ ಮಾಡಿಗೊಂಡು, ಯೇವದು ಸೂಕ್ತವೋ ಅದರ ಮಾಂತ್ರ ತೆಕ್ಕೊಳೇಕು
ಎಲ್ಲಾ ಉಪದೇಶಂಗೊ ಅತವ ಮಾರ್ಗಸೂಚಿಗೊ – ಸಲಹೆ ಕೊಡುವೋರ ಮನಸ್ಥಿತಿಯನ್ನೂ ಒಳಗೊಂಡಿರ್ತು – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.

~

ನಮ್ಮದೇ ಜೀವನಲ್ಲಿ ನೋಡಿಬೇಕಾರೆ, ಮನಸ್ಸಿಂಗೆ ಅಕ್ಕಾದೋರು / ಹತ್ತರಾಣೋರು – ಹೇಳಿ ಒಂದಷ್ಟು ಜೆನ ಇರ್ತವು, ಹಾಂಗೆಯೇ- ಮನಸ್ಸಿಂಗೆ ಅಷ್ಟು ಹಿತ ಆಗದ್ದೋರು ಹೇಳಿ ಕೆಲವು ಜೆನ ಇರ್ತವು.
ಹಾಂಗಾಗಿ ಜೆನರ ಬಗ್ಗೆ ನಾವು ವಿವರಣೆ ಕೊಡುವಗ, ನಮ್ಮ ಮನಸ್ಸಿನ ಭಾವನೆಯನ್ನೂ ಸೇರುಸಿ ಮಾತಾಡ್ತು.
ಆರೊಬ್ಬನ ಬಗ್ಗೆಯೇ ಆಗರಳಿ, ನೇರ-ನಿಷ್ಠುರ ಅಭಿಪ್ರಾಯ ಬತ್ತ ಬದಲು, ಅದರ ಮೇಗೆ ನಮ್ಮ ರಾಗ-ದ್ವೇಷದ ಲೇಪ ಮಾಡಿಕ್ಕಿಯೇ ನಾವು ಮಾತು ಮಾಡುದು.

ಇದನ್ನೇ, ಸೂಕ್ಷ್ಮವಾಗಿ ಒಂದೆರಡು ಉದಾಹರಣೆಲಿ ವಿವರಣೆ ಕೊಟ್ಟವುದೇ.
ಮಾಷ್ಟ್ರುಮಾವ ಸಣ್ಣ ಸಣ್ಣ ಉದಾಹರಣೆ ಕೊಟ್ರೂ – ಒಪ್ಪಣ್ಣ ಅದರ ರಜಾ ರಂಗು ಮಾಡಿ ಹೇಳ್ತದು ಇದ್ದನ್ನೇ ! 🙂

~
ನಮ್ಮ ನರೆಕರೆಲೇ ಆರಾರು ಒಬ್ಬವೆಗ್ತಿ ಪೈಶೆಯ ರಜ ಹದಾಕೆ ಕರ್ಚು ಮಾಡಿ ಜೀವನ ತೆಗೆತ್ತನೋ? ಆರಾರು ಇದ್ದೇ ಇಕ್ಕು ಆ ನಮುನೆಯೋರು. ಅವಂಗೆ ಅಕ್ಕಾದೋರದ್ದು ಒಂದು ಗುಂಪು ಇಕ್ಕು, ಅವನ ಕಂಡ್ರೆ ಆಗದ್ದೋರು ಇಕ್ಕು ಕೆಲವು ಜೆನ.

  • ಆ ವೆಗ್ತಿ ಅಕ್ಕಾದೋನಾದರೆ ‘ಅವ ತುಂಬ ಸರಳ ಜೀವನ’ ನೆಡೆಶುತ್ತ ಹೇಳುಗು.
  • ಆಗದ್ದೋನಾದರೆ ‘ಅವ ಕಂಜೂಸು / ಪಿಟ್ಟಾಸು / ಕುರೆ’ ಹೇಳುಗು.
    ವೆಗ್ತಿ ಅವನೇ ಆದರೂ – ನಾವು ನೋಡ್ತ ರೀತಿ ಬೇರೆಬೇರೆ ಆಗಿರ್ತು.

ಇನ್ನೊಬ್ಬ ಪಾಪದೋನು ಆರಾರು ರಜ್ಜ ನೆಗೆನೆಗೆ ಮಾಡಿ ಮಾತಾಡುಸಿಗೊಂಡು ಹೋದನೋ. ಅಲ್ಲಿಯೂ ಅಭಿಪ್ರಾಯ ಭೇದ ಇದ್ದು!
ಹೇಂಗೆ? –

  • ಅಕ್ಕಾದೋನಾದರೆ ‘ಅವ ತುಂಬ ಹೊಂದಾಣಿಕೆಯೋನು (friendly). ಅವಂಗೆ ಎಲ್ಲೋರು ಬೇಕು’ ಹೇಳುಗು.
  • ಆಗದ್ದೋನಾದರೆ ‘ಅವಂಗೆ ರಜಾ ಬೆಗುಡು. ಆರತ್ರೆ ಎಷ್ಟು ಮಾತಾಡೇಕು ಹೇಳಿ ಅರಡಿಯಲಿಲ್ಲೆ’ಹೇಳುಗು.

ಅದೆಲ್ಲ ಬಿಡಿ, ಯೇವದಾರ ಜೆಂಬ್ರಲ್ಲಿ ಜವ್ವನಿಗ ಮಾಣಿ ಒಬ್ಬ ರಜ್ಜ ಜೋರಿಲಿ ಸುದರಿಕೆ ಮಾಡ್ತ ಹೇದು ಮಡಿಕ್ಕೊಳಿ; ಅದುದೇ ಸಾಕು ಮಾತಾಡ್ತೋರಿಂಗೆ; ಎಂತರ?-

  • ಅವ ಅಕ್ಕಾದೋನಾದರೆ – ‘ಹೋ, ಒಳ್ಳೆ ಸುದರಿಕೆ ಮಾಡ್ತ ಆ ಮಾಣಿ’ ಹೇಳುಗು.
  • ಆಗದ್ದೋನಾದರೆ, ‘ಅದಾ, ಕೆಮರಲ್ಲಿ ಪಟ ಬಪ್ಪಲೆ ಬೇಕಾಗಿ ಶಾಲು ಬೀಸೆಂಡು ರೈಸುತ್ತನದಾ’ ಹೇಳಿಕ್ಕುಗು..

ಆರದ್ದಾರು ಮನೆಲಿ ಪೂರೇಸದ್ದಕ್ಕೆ ಮನೆಕೆಲಸಕ್ಕೆ ನಾಕು ಆಳುಗಳ ಬರುಸಿದವೋ, ಅವರ ಕೈಲಿ ಕೆಲಸ ಮಾಡುಸಿತ್ತು ಕಂಡ್ರೆ, ಅದನ್ನೂ ಹೇಳುಗು;

  • ಅಕ್ಕಾದೋರಾದರೆ ‘ಎಲ್ಲವೂ ಆಯೆಕ್ಕನ್ನೆ, ಪೂರೈಸುತ್ತಿಲ್ಲೆ ಪಾಪ!’ ಹೇಳುಗು
  • ಆಗದ್ದೋನಾದರೆ ‘ಕೈಗೆ ಕಾಲಿಂಗೆ ಆಳುಗೊ ಬೇಕು, ದರ್ಬಾರು  ಮಾಡ್ಳೆ’ ಹೇಳುಗು.

ಅದು ಬಿಡಿ, ನಮ್ಮ ಉಶಾರಿ ಮಾಣಿ ರಾಮಜ್ಜನ ಕೋಲೇಜಿಂಗೆ ಹೋಪದು. ನಿತ್ಯವೂ ಹೊಗಿ ಬಪ್ಪಲೆ ಎಡಿಯೆಕ್ಕೇ, ಹಾಂಗಾಗಿ ಪೇಟೆಲಿ ಒಂದು ಬಾಡಿಗೆ ಬಿಡಾರ ಮಾಡಿಗೊಂಡು ನಿಂದಿದನೋ –

  • ಓದಿಗೊಂಡು ಊರಿಂಗೆ ಬಂದು ಹೋಪಲೆ ಕಷ್ಟ ಆವುತ್ತಾಯಿಕ್ಕು ಪಾಪ – ಹೇಳುಗು ಅಕ್ಕಾದೋರ ಮಕ್ಕೊ ಆದರೆ.
  • ಚೆಂಙಾಯಿಗಳ ಒಟ್ಟಿಂಗೆ ಪೇಟೆ ತಿರುಗಲೆ ನಿಂದದಾಯಿಕ್ಕು ಅವ – ಹೇಳಿ ಆಗದ್ದೋನ ಮಕ್ಕಳ ಬಗ್ಗೆ ಅಭಿಪ್ರಾಯ!

ಎಂತದೋ ಕಾರಣಲ್ಲಿ ನೆರೆಕರೆಯ ಒಬ್ಬ ವೆಗ್ತಿ ಜಾಗೆ ಕೊಟ್ಟು ಪೇಟಗೆ ಹೋದನೋ ಮಡಿಕ್ಕೊಳಿ, ಅದರನ್ನೂ ವಿತ್ಯಾಸ ಮಾಡದ್ದೆ ಇಲ್ಲೆ.

  • ಅಕ್ಕಾದೋನಾದರೆ ‘ಸಣ್ಣ ಜಾಗೆಲಿ ಎಂತದೂ ಹುಟ್ಟು ಇಲ್ಲೆ, ಹಾಂಗಾಗಿ ಹೆರಟ’ ಹೇಳುಗು
  • ಆಗದ್ದೋನ ಬಗ್ಗೆ ‘ಇಷ್ಟೊಳ್ಳೆ ಜಾಗೆ ಹಡಿಲುಬಿಟ್ಟು ಪೇಟೆ ಗೂಡಿಲಿ ಕೂದ’ ಹೇಳುಗು.

ಆಚಕರೆ ಮಾಣಿಗೆ ಕಂಪ್ಲೀಟ್ರು ರಜ್ಜ ಹೆಚ್ಚು ಕೊಶಿ. ಹಾಂಗಿಪ್ಪ ಬಿಂಗಿಮಾಣಿಯಂಗಳ ಕಂಡ್ರೆ ಅಜ್ಜಂದ್ರಿಂಗೆ ಪಿಸುರು ಎಳಗುದು ಜೋರು,.
ಅವ ಕೈಗೆ ಸಿಕ್ಕಿದ ಕಂಪ್ಲೀಟರಿಲಿ ಇಂಟರುನೆಟ್ಟಿಲಿ ಕೂದುಗೊಂಡು ಹೊತ್ತು ತೆಗೆತ್ತನೋ,

  • ಅಕ್ಕಾದೋನಾದರೆ ‘ಉಶಾರಿ! ಎಲ್ಲ ಅರಡಿಗು; ಕಂಪ್ಲೀಟರಿಲಿ ಓದಿ ತಿಳ್ಕೊಳೇಕು’ – ಹೇಳುಗು.
  • ಆಗದ್ದೋನಾದರೆ ‘ಉದಿಯಾದರೆ ಕಂಪ್ಲೀಟ್ರು ಹಿಡಿಗು, ಆರು ಬಂದರೂ –ಹೋದರೂ ಮಾತಾಡ’ ಹೇಳುಗು

ಈ ನಮುನೆ, ನಾವೆಲ್ಲೊರೂ ನಿತ್ಯಕ್ಕೆ ಕಂಡುಗೊಂಡಿರ್ತು. ಇನ್ನುದೇ ಸುಮಾರು ಪಟ್ಟಿ ಮಾಡ್ಳಕ್ಕು..
ಚೆನ್ನೈಬಾವ ಒಂದು ಗಳಿಗೆಲಿ ಇಪ್ಪತ್ನಾಕು ಬರಗು ಹೀಂಗಿರ್ತದರ.
ಹೀಂಗೆ, ನಾವೆಲ್ಲ ಕಾಣದ್ದ ಸಂಗತಿ ಅಲ್ಲ, ನಿತ್ಯವೂ ಕಾಂಗು.
ಒಂದಲ್ಲ ಒಂದು ಕಾಲಲ್ಲಿ ನಮ್ಮನ್ನುದೇ ಇದೇ ನಮುನೆ ಹೇಳಿ, ಅಳದು ಮಾಡಿದ್ದವು ಹೆರಿಯೋರು. ನಾವುದೇ ಇನ್ನೊಬ್ಬನ ಮಾಡುಗು!
~
ಮುಖ್ಯವಾಗಿ, ಇಲ್ಲಿ ಸಾರ ಎಂತ್ಸರ ಹೇಳಿತ್ತುಕಂಡ್ರೆ, ಪ್ರತಿ ಮಾತುಗಳಲ್ಲಿಯೂ, ಪ್ರತಿ ಘಟನೆಗೂ, ಪ್ರತಿ ವಸ್ತುವಿಂಗೂ, ಪ್ರತಿ ವಿವರಣೆಗೂ, ಪ್ರತಿ ಮಾರ್ಗದರ್ಶನಕ್ಕೂ – ಎರಡು ಮುಖಂಗೊ (version) ಇರ್ತು.
ಒಂದೇ ವಿಚಾರವ – ಮನಸ್ಸಿಂಗೆ ಹತ್ತರಾಣೋನು ಮಾಡಿರೆ ಅದಕ್ಕೆ ಕಾರಣ / ಪರಿಹಾರ ಹುಡ್ಕಲೆ ಪ್ರಯತ್ನ ಮಾಡ್ತು ನಮ್ಮ ಮನಸ್ಸು. ಅದೇ ಕಾರ್ಯವ ನವಗೆ ಆಗದ್ದೋನು ಮಾಡಿತ್ತುಕಂಡ್ರೆ, ಅದಕ್ಕೆ ತಪ್ಪು ಹುಡ್ಕಲೆ ಪ್ರಯತ್ನ ಮಾಡ್ತು.
ಅಕ್ಕಾದೋನ ಬಗ್ಗೆ ಹೇಳ್ತರೆ ಒಂದು ಮೋರೆ ಕಾಣ್ತರೆ, ಆಗದ್ದೋನ ಬಗ್ಗೆ ಹೇಳುವಗ ಇನ್ನೊಂದು ರೀತಿಲಿ ಪ್ರಕಟ ಆವುತ್ತು.
ಜೀವನಲ್ಲಿ ನವಗೆ ಆರಾರು ಉಪದೇಶಮಾಡುವಗಳೂ, ಇದೇ ಅಂಶ ಪರಿಗಣನೆಗೆ ಬತ್ತು.
ಬುದ್ಧಿವಂತರಾದ ನಾವು ಅದರ ಅಳವಡುಸಿಗೊಂಬಗ ಯೋಚನೆ, ಚಿಂತನೆ ಮಾಡಿಗೊಂಡು, ಎರಡರಲ್ಲಿ ಯೇವದು ಒಳ್ಳೆದೋ – ಅದರ ತೆಕ್ಕೊಳೇಕು – ಹೇಳ್ತದು ಇದರ ತಾತ್ಪರ್ಯ.
~
ಹಾಂಗೆಯೇ, ಇದಕ್ಕೇ ಹೊಂದಿಗೊಂಡ ಇನ್ನೊಂದು ಸಂಗತಿ ಇದ್ದು.
ಜನಂಗೊ ನಮ್ಮ ಬಗ್ಗೆ ಮಾತಾಡಿದವು (comment) ಹೇಳಿಗೊಂಡು ನಾವು ಬದಲಪ್ಪದಕ್ಕೆ ಅರ್ಥ ಇಲ್ಲೆ.
ಅವು ಸೂಚನೆ ಕೊಟ್ಟರೆ ಅದಕ್ಕೆ ಯೇವದಾರು ಅಂಶ ಕಾರಣ ಆಗಿಕ್ಕು. ನಾವು ಕಾರ್ಯ ಮಾಡ್ತ ಮೊದಲು ವಿವೇಚನೆಲಿ ತಲಗೆ ತೆಕ್ಕೊಳೇಕು. ಅತ್ತಿತ್ತೆ ನೋಡದ್ದೆ ನಾವು ಬದಲಾದರೆ ನಮ್ಮಟ್ಟು ಹೆಡ್ಡು ಬೇರೆ ಇಲ್ಲೆ – ಹೇಳಿಗೊಂಡು ಒಂದು ನೀತಿಕತೆಯನ್ನೂ ಹೇಳಿದವು.
ಯೇವದೇ ಕತೆ ಆಗಲಿ  ಮಾಷ್ಟ್ರುಮಾವ ಹೇಳುಲೆ ಸುರು ಮಾಡಿರೆ ಒಪ್ಪಣ್ಣ ಇಪ್ಪತ್ತೊರಿಶ ಸಣ್ಣ ಅಪ್ಪದು! 🙂
~

ಒಂದೂರಿಲಿ ಒಂದರಿ ಅಪ್ಪ-ಮಗ ಒಂದು ಕತ್ತೆಯ ಬೆನ್ನಿಲಿ ಸಾಮಾನು ಮಡಿಕ್ಕೊಂಡು, ನೆಡೆಶಿಗೊಂಡು ಪ್ರಯಾಣ ಹೆರಟವಡ – ಹಳೆ ಕಾಲ ಇದಾ, ಈಗಾಣ ಹಾಂಗೆ ಕಾರು-ಜೀಪುಗೊ ಇಲ್ಲೆ!
ಸುಮಾರು ದೂರ ಹೀಂಗೇ ಹೋಪಗ, ದಾರಿಲಿ ಒಬ್ಬ ಸಿಕ್ಕಿ ಹೇಳಿದನಾಡ – ಚೆ, ಇಬ್ರುದೇ ನೆಡೆವದೆಂತಕೆ, ಒಬ್ಬಂಗೆ ಕತ್ತೆಯ ಬೆನ್ನಿಲಿ ಕೂಬಲಕ್ಕನ್ನೇ – ಹೇಳಿಗೊಂಡು.
ಇವಕ್ಕೂ ಅಪ್ಪನ್ನೇ ಕಂಡತ್ತು, ಹಾಂಗೆ ಮಗ ಸೀತ ಕತ್ತೆಯ ಬೆನ್ನಿಂಗೆ ಹತ್ತಿ ಕೂದನಾಡ.

ರಜ ದೂರ ಹೋಪಗ ಇನ್ನೊಬ್ಬ ಹೇಳಿದ, ಅದ, ಆ ಮಗನ ಹಾಂಕಾರ, ಅಪ್ಪನ ನೆಡೆಶುತ್ತಾ ಇದ್ದ – ಹೇದು.
ಹೋ – ಅಪ್ಪನ್ನೆ ಕಂಡತ್ತು ಇವಕ್ಕೆ, ಅಪ್ಪನೂ ಕತ್ತೆಯ ಮೇಗೆ ಹತ್ತಿ ಕೂದುಗೊಂಡನಾಡ.

ಇನ್ನೂ ರಜ ದೂರ ಹೋಪಗ ಮತ್ತೊಬ್ಬ ಹೇಳಿದ, ‘ಅಷ್ಟು ಸಣ್ಣ ಕತ್ತೆಯ ಮೇಗೆ ಇಬ್ರು ಕೂಯಿದವು. ಕುಂಞಿ ಅದು, ಪಾಪ.’ ಹೇಳಿಗೊಂಡು.
ಅಪ್ಪನ್ನೇ – ಆತು ಮತ್ತೊಂದರಿ.
ಹಾಂಗೆ, ಇಬ್ರುದೇ ಇಳುದು, ಮತ್ತೆ ಕತ್ತೆಯನ್ನೇ ಹೊತ್ತುಗೊಂಡು ನೆಡದವಡ!

ನೂ(ಮೂ)ರು ದಾರಿಲಿ ನಮ್ಮ ದಾರಿ ಯಾವುದು?

ನೆಗೆಮಾಡಿಗೊಂಡೇ ಹಲ್ಲೊಕ್ಕಿದವು ಒಂದರಿ, ಅಡಕ್ಕೆ ಹೋಳು ತೆಗವಲೆ!
– ಲೊಟ್ಟೆಕತೆ ಆಯಿಕ್ಕು ಇದು, ಆದರೆ ಅದರ ನೀತಿ ನೋಡಿರೆ ನಿಜವಾಗಿಯೂ ತೆಕ್ಕೊಳೇಕಾದ್ದೇ  – ಹೇಳಿದವು ಮಾಷ್ಟ್ರುಮಾವ.
ಸುತ್ತಮುತ್ತ ಇಪ್ಪ ಜೆನಂಗೊ ಹೇದವು ಹೇಳಿಗೊಂಡು ನಾವು ಕೂಡ್ಳೇ ಅದಕ್ಕೆ ಪರಿವರ್ತನೆ ಅಪ್ಪಲಾಗ – ಹೇಳ್ತದು ಈ ಕತೆಯ ಸಾರ.
ಕತೆ ಲೊಟ್ಟೆಯೇ ಆದರೂ, ನೆಗೆಬಂದದು ಲೊಟ್ಟೆ ಅಲ್ಲ!
~
ಈಗ ಹೊಸ ಸಂಶಯ ಬಂತು ಒಪ್ಪಣ್ಣಂಗೆ, ಅಂಬಗ, ಆರು ಹೇಳಿದ್ದನ್ನೂ ಕೇಳುಲಿಲ್ಲೆಯೋ? ಬೋಚಬಾವನ ಹಾಂಗೆ ಇಪ್ಪದೋ?!
ಅಲ್ಲ, ಅದಕ್ಕೂ ಉತ್ತರ ಇತ್ತು ಮಾಷ್ಟ್ರುಮಾವನ ಹತ್ತರೆ.
ನಂಬಿಕೆಯ ಹೆರಿಯೋರು, ಅಪ್ಪಮ್ಮ ಹೇಳ್ತದರ ಬಾಲ್ಯಲ್ಲಿ ಕೇಳುಲಿದ್ದು. ಅದುವೇ ಜೀವನದ ಬುನಾದಿ ಆಗಿರ್ತು.
ಗುರುಗೊ ಹೇಳಿದ್ದರ, ಕಲುಶಿದ್ದರ ಮುಂದೆ ಕೇಳೇಕು. ಅದುವೇ ಮೌಲ್ಯ ಪಾಠ ಆಗಿರ್ತು.
ಅದಲ್ಲದ್ದೆ, ಜೀವನ ಪರ್ಯಂತವೂ ಇತಿಹಾಸ ಹೇಳಿದ್ದರ ಕೇಳೆಕ್ಕು, ಅದುವೇ ನೀತಿ ಪಾಠ ಆಗಿರ್ತು.
ಇದು ಮೂರು ಅತಿ ಮುಖ್ಯವಾದ ಪಾಟಮೂಲಂಗೊ – ಹೇಳಿದವು ಮಾಷ್ಟ್ರುಮಾವ.
ಅವು ಸ್ವತಃ ಇತಿಹಾಸ ಪಾಟಮಾಡಿಗೊಡಿದ್ದ ಕಾರಣ ಹಾಂಗೆ ಹೇಳಿದ್ದೊ – ಉಮ್ಮಪ್ಪ, ನವಗರಡಿಯ

ಗೋಪೂಜೆ ತೆಯಾರಿ ಸುರು ಆಗಿಂಡಿಪ್ಪಗ – ಹೋ, ಮನೆಲಿಯೂ ಏರ್ಪಾಡು ಆಯೇಕಪ್ಪೋ – ಹೇಳ್ತದು ನೆಂಪಾತು. ಸೀತ ಹೆರಟು ಬಂದೆ.
ಅಲ್ಲಿಂದ ಹೆರಟು ಮನಗೆತ್ತುವನ್ನಾರವೂ, ತಲೆಲಿ ಇದೇ ವಿಶಯ ತಿರುಗೆಂಡು ಇದ್ದತ್ತು.
~

ಆರಾರು ಸಲಹೆ ಕೊಟ್ಟ ಕೂಡ್ಳೇ ಬದಲಾಗಿಂಡು, ನವಗೆ ಏನೂ ಅರಡಿಯ – ಹೇಳ್ತ ಕೀಳರಿಮೆ ಭಾವನೆಲಿ ಬದ್ಕುತ್ತ ಜೆನಂಗೊಕ್ಕೆ ಸೂಚನೆಯ ಶುದ್ದಿ.
ದಾರಿಲಿ ನೆಡಕ್ಕೊಂಡು ಹೋಪಗ ಸಾವಿರ ಮಾರ್ಗಸೂಚಿಗೊ, ಕೈಕಂಬಂಗೊ, ಬೋರ್ಡುಗೊ ಕಾಂಗು.
ಆದರೆ, ನವಗೆ ಎಲ್ಲಿಗೆ ಹೋಯೇಕೋ – ಅದೇ ಗುರಿ ಹುಡ್ಕಿಂಡು ಹೋಯೇಕು.
ಚೆಂದ ಕಾಂಬ ಬೋರ್ಡನ್ನೇ ನೋಡಿಗೊಂಡು ಹೆರಟ್ರೆ ಎಂತಕ್ಕು? ಕಾಸ್ರೋಡಿಂಗೆ ಹೆರಟ ಬೋಚಬಾವ – ಬೀಸ್ರೋಡಿಂಗೆ ಎತ್ತುಗು.
ನಮ್ಮ ಮೂಲ ಉದ್ದೇಶವ ಎದುರು ಮಡಿಕ್ಕೊಂಡು, ಜೀವನ ಸಾರವ ತಿಳ್ಕೊಂಡು, ಸದಾಚಾರದ ಹೊಡೆಂಗೆ ಹೋಯೆಕ್ಕು ಹೇಳಿ ಆದರೆ, ನಮ್ಮದೇ ಧ್ಯೇಯೋದ್ದೇಶ ಇದ್ದಿರೇಕು – ಹೇಳ್ತದು ಅಭಿಪ್ರಾಯ.

ಒಂದೊಪ್ಪ: ನಮ್ಮದೇ ದಾರಿಲಿ ಹೋಪಲೆ ಮದಲೇ, ನಮ್ಮದೇ ಗುರಿ ನಿಘಂಟು ಮಾಡ್ತಷ್ಟು ಬುದ್ಧಿ ಬಂದಿರೇಕು. ಎಂತ ಹೇಳ್ತಿ? 🙂

ಸೂ: ಪಟ ಇಂಟರುನೆಟ್ಟಿಂದ.

19 thoughts on “ಮಾರ್ಗಸೂಚಿಗೊ ಹಲವಿರಳಿ; ದಾರಿ ನಮ್ಮದೇ ಇರಳಿ..

  1. ಒಪ್ಪಣ್ಣ ಇಪ್ಪತ್ತೊರಿಶ ಸಣ್ಣ ಆದ್ದು ನವಗಂತೂ ಭಾರೀ ಅನುಕೂಲ ಆತು..! 😉

    ನಮ್ಮಂದ ಇಪ್ಪತ್ತೊರಿಶ ಹೆರಿಯ ಮಾಷ್ಟ್ರುಮಾವನ ಕಾಲಬುಡಲ್ಲಿ ಕೂದು, ಅವು ಹೇಳ್ತ ಸ್ವಾರಸ್ಯಪೂರ್ಣ ದೃಷ್ಟಾಂತ ಕತೆಗಳ; ಅವರ ಜೀವನಾನುಭವಂಗಳ ಕೇಳಿ, ಅದರ ಚೆಂದಕೆ ಪಾಕಮಾಡಿ ಶುದ್ದಿಯ ರೂಪ ಕೊಟ್ಟು ಬೈಲಿನೋರಿಂಗೆ ಹಂಚುವಾಂಗೆ ಆತನ್ನೆ- ನವಗದು ಲಾಭವೇ ಅಲ್ಲದೋ?

    ದಾರಿ ಮೂರಿರಲಿ ನೂರಿರಲಿ – ನಮ್ಮ ದಾರಿ ನೇರವಾಗಿಯೇ ಇರಲಿ..
    ನೇರದಾರಿ ಯೇವದು ಹೇದು ನಿಗೆಂಟು ಮಾಡ್ತ ವಿವೇಚನೆ ನವಗೆ ಏವತ್ತೂ ಬರಲಿ..

    ಶುದ್ದಿ ಲಾಯ್ಕಾಯಿದು ಒಪ್ಪಣ್ಣೋ.

  2. ಈ ಒಪ್ಪ ಈ ಲೇಖನಕ್ಕೆ ಸಂಬಂಧ ಪಟ್ಟದು ಅಲ್ಲ. ಸೂತಕ ಆಚರಣೆಯ ಕ್ರಮಂಗಳ ಬಗ್ಗೆ ಯಾವುದಾದರೂ ಲೇಖನ ಇದ್ದರೆ ಗೊಂತಿಪ್ಪವು ಅದರ ಸಂಕೋಲೆ ಕೊಡೆಕ್ಕು… ಇಲ್ಲದ್ದರೆ ತಿಳುದವು ಒಂದು ಲೇಖನ ಬರೆಕು ಹೇಳಿ ಅಪೇಕ್ಷೆ… ಒಪ್ಪಣ್ಣ ತಾಣ ಎಂಗೊಗೆಲ್ಲ ಎಷ್ಟು ಹತ್ತರೆ ಆಯಿದು ಹೇಳಿರೆ ನಮ್ಮ ಆಚರಣೆಗಳ ಬಗ್ಗೆ ಎಂತಾರೂ ಸಂಶಯ ಬಂದರೆ ‘ಒಪ್ಪಣ್ಣಲ್ಲಿ ನೋಡು’ ಹೇಳುವಷ್ಟು ಹತ್ತರೆ.

  3. ಒಪ್ಪಣ್ಣಾ,
    ಚಿಂತನೆಗೆ ಆಹಾರ ಒದಗಿಸಿದ ಲೇಖನ-ಧನ್ಯವಾದಂಗೊ.
    ನಮ್ಮ ಪ್ರತಿಯೊಂದು ಚಿಂತನೆಗಳೂ ರಾಗ-ದ್ವೇಷಕ್ಕೆ ಹೊರತಾಗಿ ಇರ್ತಿಲ್ಲೆ.
    ಇನ್ನೊಬ್ಬನ ಬಗ್ಗೆ ನಮ್ಮ ಅಭಿಪ್ರಾಯಂಗಳೂ ಇದಕ್ಕೆ ಹೊರತಲ್ಲ.
    ಅಷ್ಟೊಂದು ಸಮ ಚಿತ್ತಲ್ಲಿ ಅಭಿಪ್ರಾಯ ಕೊಡೆಕಾರೆ ಅವನ ಬೌದ್ಧಿಕ ಮಟ್ಟ ಅಷ್ಟು ಎತ್ತರಲ್ಲಿ ಇರೆಕು.
    ನಮ್ಮ ಕಾರ್ಯಂಗೊಕ್ಕೆ ಕೂಡಾ ಬೇರೆ ಅನುಭವಸ್ತರ ಸಲಹೆ, ಮಾರ್ಗದರ್ಶನ ತೆಕ್ಕೊಳೆಕ್ಕಾವು. ಆದರೆ, ವಿವೇಚನೆ ಮಾಡಿ ಹೋಯೆಕ್ಕಾದ ಮಾರ್ಗ ಯಾವುದು ಹೇಳ್ತ ನಿರ್ಧಾರ ನಾವೇ ತೆಕ್ಕೊಳೆಕ್ಕು ಮತ್ತೆ, ಅದಕ್ಕೆ ನಾವು ಸಂಪೂರ್ಣ ಜವಾಬ್ದಾರರೂ ಆಗಿರೆಕು.

  4. ಬೋಸಭಾವ ಪೋಕಿ ಮಾಡಿ ಕೋಕಿ ಅಪ್ಪದು ಸುಮಾರು ದಿನ ಅತು. ಅಪ್ಪು, ಅದೇ ಇದು…
    ನಿನ್ನ ಮಂಡಗೆ ಅಷ್ಟಾರೂ ಹೊಳದ್ದು ಸಾಕು!

  5. “ನಾವು ಕಾರ್ಯ ಮಾಡ್ತ ಮೊದಲು ವಿವೇಚನೆಲಿ ತಲಗೆ ತೆಕ್ಕೊಳೇಕು. ಅತ್ತಿತ್ತೆ ನೋಡದ್ದೆ ನಾವು ಬದಲಾದರೆ ನಮ್ಮಟ್ಟು ಹೆಡ್ಡು ಬೇರೆ ಇಲ್ಲೆ”
    ಇದು highlight ಮಾಡೆಕ್ಕಾದ ವಿಷಯ.

    1. ಏ ಭಾವ High-lightO??
      “ಎತ್ತರಲ್ಲಿ ಲೈಟು” ಮಡುಗೆಕಾದ್ದೊ?
      ಆತು ಅಮಬಗ… 😉

  6. ಒಪ್ಪಣ್ಣನ ಲೇಖನ ತುಂಬಾ ತುಂಬಾ ಇಷ್ಟ ಆತು. ಇಡೀ ಜಗತ್ತು ಇಪ್ಪದು ನಾವು ನೋಡುವ ದ್ರುಷ್ಟಿಲ್ಲಿ ಹೇಳುದು ನೂರಕ್ಕೆ ನೂರರಷ್ಟು ಸತ್ಯ. ಅದಕ್ಕೆ ಮೊದಲಾಣವು ಹೇಳಿಕೊಟ್ಟದು… ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸಿ… ಅಸ್ಟಪ್ಪಗ ನಾವು ಪ್ರತಿಯೊಂದನ್ನೂ ಧನಾತ್ಮಕವಾಗಿ ತೆಕ್ಕೊಳ್ಳುತ್ತು. ಇದರಿಂದ ನಮಗೆ ತುಂಬಾ ಲಾಭ ಆವುತ್ತು.

  7. ಒಪ್ಪಣ್ಣೊ…ಭಾರಿ ಲಾಯ್ಕ ಆಯಿದು…ಶುದ್ದಿ…
    ನಾಲ್ಕು ಮಾರ್ಗ ಕೂಡುತ್ತ ಜಾಗೆಲಿ ಬೋರ್ಡ್‌ ಮಣ್ಣ ಇಲ್ಲದ್ರೆ ಅಲ್ಲಿ ಹತ್ತರೆ ಇಪ್ಪವರತ್ರೆ ಕೇಳುವುದು ಕ್ರಮ..ಕನ್‌ಫ್ಯೂಸ್‌ ಅಪ್ಪಲಾಗ ಹೇಳಿ… ದಾರಿ ಹೇಳಿದ ಮನುಷ್ಯ ಸರಿ ದಾರಿ ಹೇಳಿದರೆ ಆತನ್ನೆ. ಒಂದು ವೇಳೆ ಅದು ತಪ್ಪು ದಾರಿ ಆಗಿದ್ದರೆ.. ನಾವು ಅದರ ತಕ್ಷಣ ತಿಳುಕ್ಕೊಳೆಕ್ಕು.. ಕೂಡ್ಳೆ ಸರಿ ದಾರಿಲಿ ಹೋಯೆಕ್ಕು. ಸರಿ ನಿರ್ಧಾರ ತೆಕ್ಕೊಂಬದು ನಮ್ಮ ಬುದ್ಧಿ ಮೇಲೆ ಅವಲಂಬಿತವಾಗಿದ್ದು.
    (ಜೆನರ ಬಗ್ಗೆ ನಾವು ವಿವರಣೆ ಕೊಡುವಗ, ನಮ್ಮ ಮನಸ್ಸಿನ ಭಾವನೆಯನ್ನೂ ಸೇರುಸಿ)-ಇದು ನಮ್ಮ ಸಮಾಜಲ್ಲೇ ಇಪ್ಪಂತದ್ದೇ ಅದಕ್ಕೆ ಎಂತು ಮಾಡ್ಳೆ ಎಡಿಯ..
    ಎಲ್ಲರೂ ಓದೆಕ್ಕಾದ ಲೇಖನ… ಕೊಶಿ ಆತು

  8. ಬಾರಿಲಾಯಕೆ ಆಯಿದು ಭಾವ ಬರದ್ದು, ಮನುಶ್ಯನ ಮನೋಭಾವ ಸ್ತಿರ ಇಲ್ಲೆ ಹೇಳಿ ಸರೀ ತೋರ್ಸಿಕೊಟ್ಟೆ. ಮನಸ್ಸು ನಮ್ಮ ಹಿಡಿತಲ್ಲಿ ಇಲ್ಲದ್ರೆ ಹೀ೦ಗೆಲ್ಲ ಅಪ್ಪದು ಅಲ್ಲದೊ?
    ಎನ್ನ ಪ್ರಕಾರ ನಾವು ಇನ್ನೊಬ್ಬನ ಅಳವ ಮೊದಲು ಅವನ ಸ್ತಿತಿಲಿ ನಾವು ಇದ್ದರೇ ಹೇ೦ಗೆ ಮಾಡ್ತಿತ್ತು ಹೇಳ್ತರ ಮೊದಲು ಆಲೋಚನೆ ಮಾಡಿರೆ ರಜ್ಜ ಮಟ್ಟಿ೦ಗೆ ಅಳವದು ಕಮ್ಮಿ ಅಕ್ಕೊ ಏನೋ.. ಎ೦ದಿ೦ಗೂ ನಾಮ ಹಾರಿ-ಬಿದ್ದು ಅವ ಹೀ೦ಗೆ ಇವ ಹಾ೦ಗೆ ಮತ್ತೊ೦ದು ಮಗದೊ೦ದು ಹೇಳಿ ಕೂಲ೦ಕುಶವಾಗಿ ನೋಡದ್ದೆ – ತಿಳಿಯದ್ದೆ ಮಾತಾಡ್ಲಾಗ ಅಪ್ಪೊ?
    ಒ೦ದು ವಿಚಾರ ಮಾತಾಡುವ ಮೊದಲು ೧೦ ತ್ತು ಸಲ ಆಲೋಚನೆ ಮಾಡಿ ಮಾತಾಡೆಕು.

    ಏನೇ ಆದರು ನಾವು, ಬೆಳೆದ ಬ೦ದ ದಾರಿ, ನಮ್ಮ ಬೆಳೆಶಿ ದೊಡ್ಡ ಮಾಡಿದ ಅಬ್ಬೆಯಪ್ಪಾ, ತಲೆ ತಲಾ೦ತರ೦ದ ಬ೦ದ ವಿವೇಚನೆ, ಗುರು ಹಿರಿಯರು ತಿಳುಶಕೊಟ್ಟ ಮೌಲ್ಯ, ಎ೦ದಿ೦ಗೂ ಮರವಲಾಗ.

    ಹುಟ್ಟುವಾಗ ಎಲ್ಲರು ಮುಗ್ಧರು,
    ಬೆಳೆತ್ತಾ ಬೆಳೆತ್ತಾ ಅಪ್ಪದು ಬುದ್ಧಿವ೦ತರು?
    ಬುದ್ದಿ ಹೆಚ್ಚಾದಪ್ಪಗ ಅಪ್ಪದು ಅತೀ-ಬುದ್ದಿವ೦ತರು???
    ಬುದ್ದಿ ಕಮ್ಮಿಯಾದಾ೦ಗ ಅಪ್ಪದು ವೃದ್ಧರು!!!

    ಒಪ್ಪಣ್ಣನ ಶುದ್ದಿ ಒಪ್ಪ ಆಯಿದು.. 🙂

  9. ಒಪ್ಪಣ್ಣನ ಶುದ್ದಿ ಒಪ್ಪ ಆಯಿದು ಹೇಳಿ, ಒಪ್ಪ.

  10. ಇದು ನಿಜ. ತುಂಬಾ ಚೆಂದಕೆ ಜೀವನ ಕ್ರಮವ ಬರದ್ದೆ . ನಿನ್ನ ಹೆಸರಿನ ಹಾಂಗೆ ಒಪ್ಪಣ್ಣಾ.

  11. ಇದೆಂತಹ ಮಹಾ ಬರದ್ದದು ಒಪ್ಪಣ್ಣ. ಆನು ಇದರ ಮೊದಲೇ ತಿಳುಕ್ಕೊಂಡಿದೆ!
    ನಿಜ ಹೇಳೆಕ್ಕಾ ಒಪ್ಪಣ್ಣ. ಅಳವಡಿಸಿಕೊಂಡಿದೆನೊ? ಇಲ್ಲೆ! ನಾಳೆ, ನಾಲ್ಕು (ಎರಡೇ ಹೇಳಿಯೇ ಹೇಳುಲಕ್ಕು) ಜನರತ್ತರೆ ಅವರವರ ದೃಷ್ಟಿಕೋನದ ಅಭಿಪ್ರಾಯ ಕೇಳಿ, ತಿಳುಕ್ಕೊ೦ಡು, ನಿರ್ದಾರಕ್ಕೆ ಬಪ್ಪದು ನಿ೦ಗೊ ಹೇಳಿದ ಅಪ್ಪ-ಮಗ-ಕತ್ತೆ ೦ದಲೂ ಕಡೆ. ನವಗೆ ಅದು ಬೇಡ – ಅವನ ಬಗ್ಗೆ ಒಳ್ಳೆ ಅಭಿಪ್ರಾಯ ಇಲ್ಲೆ, ಹೇಳಿಯೇ.
    ತಾತ್ಪರ್ಯ:- ಒಪ್ಪಣ್ಣ ಮೇಲೆ ಬರದ್ದದರ ಎರೆಡೆರಡು ಸರ್ತಿ ಓದೆಕ್ಕು. ಅಷ್ಟು ಸರಿಯಾಗಿ, ನಮ್ಮ ಜೀವನ ಕ್ರಮವ ಬರದ್ದ. ಹೀ೦ಗಿಪ್ಪ ನೀತಿ ದೊಡ್ಡ ಆದವಕ್ಕೂ ಅ೦ಬಗ೦ಬಗ ಬೇಕಾವುತ್ತು – ದಾರಿ ಸರಿ ಮಾಡಿಗೊ೦ಬಲೆ, ನೆ೦ಪು ಮಾಡುಲೆ!

  12. ಚೆಂದದ ಲೇಖನ:)
    {ನೇರ-ನಿಷ್ಠುರ ಅಭಿಪ್ರಾಯ ಬತ್ತ ಬದಲು, ಅದರ ಮೇಗೆ ನಮ್ಮ ರಾಗ-ದ್ವೇಷದ ಲೇಪ ಮಾಡಿಕ್ಕಿಯೇ ನಾವು ಮಾತು ಮಾಡುದು.} ಅಪ್ಪಪ್ಪು…

  13. ನಮ್ಮದೇ ದಾರಿಲಿ ಹೋಪಲೆ ಮದಲೇ, ನಮ್ಮದೇ ಗುರಿ ನಿಘಂಟು ಮಾಡ್ತಷ್ಟು ಬುದ್ಧಿ ಬಂದಿರೇಕು. ಅಪ್ಪು ಅಪ್ಪು ೧೦೦% ಸತ್ಯ .

  14. [ಜೆನರ ಬಗ್ಗೆ ನಾವು ವಿವರಣೆ ಕೊಡುವಗ, ನಮ್ಮ ಮನಸ್ಸಿನ ಭಾವನೆಯನ್ನೂ ಸೇರುಸಿ ಮಾತಾಡ್ತು.] – ಅಷ್ಟಪ್ಪಗ ನಮ್ಮ ಗುಣ ಸ್ವಭಾವವೂ, ನಮ್ಮ ಈ ಅತಿಬುದ್ದಿಕೆಂದ ನವಗರಿವಿಲ್ಲೆದ್ದೆ ನಾವೇ ಬಯಲುಗೊಳುಸುತ್ತು ಹೇಳ್ತದರ ಹಲವರು ತಿಳ್ಕೊಳ್ಳುತ್ತವಿಲ್ಲೆ .

    ಇದಾ ಭಾವ, ಓ ಅಲ್ಲಿ ಒಬ್ಬ ಹೇಳ್ತ , ಅವು ಪೈಸೆ ಮಾಡ್ಳೇ ಮಾಡುವದು ಹೇಳಿ. ಅವನ ಲೆಕ್ಕಲ್ಲಿ ವ್ಯಾಪಾರಿಗೊ ಪೈಸೆ ಮಾಡ್ತವು, ದೇವಸ್ಥಾನಾದವು ಪೈಸೆ ಮಾಡ್ತವು, ಆಪೀಸರಕ್ಕೋ ಪೈಸೆ ಮಾಡ್ತವು, ಬಸ್ಸು ಇಪ್ಪದು ಪೈಸೆ ಮಾಡ್ಳೇ, ವಕೀಲಕ್ಕೊ ಇಪ್ಪದು ಪೈಸೆ ಮಾಡ್ಳೆ, ಭಟ್ಟಕ್ಕೊ ಪೈಸೆ ಮಾಡ್ತವು, ಸಂಘ ಸಂಸ್ಥೆ ಇಪ್ಪದು ಪೈಸೆ ಮಾಡ್ಳೇ, ರಶೀದಿ ಪುಸ್ತಕ ಹಿಡ್ಕೊಂಡು ಹೋಪವೂ ಪೈಸೆ ಮಾಡ್ಳೇ. ನಮ್ಮ ಸುಭಗ ಬಾವ ಒಂದೊಂದರಿ ಹೇಳುಗು ಅಂಬಗ ಅವ ಇಪ್ಪದು ಎಂತಕೋ?!

    ಒಬ್ಬ ಜೀವನಲ್ಲಿ ಕಷ್ಟಪಟ್ಟು ಮುಂದಕ್ಕೆ ಬಂದರೆ – “ಇದಾ ಅದು ಅವನಿಂದ ಮಾತ್ರ ಎಡಿಗಷ್ಟೇ. ಬೇರಾರಿಂದಲೂ ಎಡಿತ್ತಿತ್ತಿಲ್ಲೆ”!. ಅದೇ ಮನುಷ್ಯ ಸೋತಿದ್ರೆ – “ಇದಾ ಅದು ಆನು ಮದಲೇ ಗ್ರೇಶಿತ್ತಿದ್ದೇ, ಅವ ಹಾಂಗೇ ಮಾಡುಗಷ್ಟೇ, ಅವ ಹಾಂಗೇ ಅಕ್ಕಷ್ಟೇ.!!”

    ಗೋವಿಂದ ಭಟ್ಟ° ತನ್ನ ಉಪಹಾರ ಗೃಹದ ಎದುರು ಒಂದು ಬೋರ್ಡು ಹಾಕಿದ – “ಇಲ್ಲಿ ಉಪಹಾರ ಲಭ್ಯವಿದೆ” ಅದರ ನೋಡಿದ ಕೇಡ ಕೇಶವ ಭಟ್ಟ° ಗೋವಿಂದನ ನೋಡಿ ಕೇಳಿದನಡಾ – ಇಲ್ಲಿ ಉಪಹಾರ ಲಭ್ಯವಿದೆ ಹೇಳಿ ಎಂತಕೆ ಬರದ್ದು. ಇಲ್ಲಿ ಉಪಹಾರ ಗೃಹಲ್ಲಿ ಇಲ್ಲದ್ದೆ ಮತ್ತೆಲ್ಲಿ ಹತ್ರಾಣ ಬಳೆ ಅಂಗಡಿಲಿಯೋ ಇಪ್ಪದು ಹೇಳಿ. ಓ ಅಪ್ಪನ್ನೇ ಹೇಳಿ ‘ಇಲ್ಲಿ’ ಅಳಿಸಿಬಿಟ್ಟ°. ಈಗ ‘ಉಪಹಾರ ಲಭ್ಯವಿದೆ’ ಹೇಳಿ ಬೋರ್ಡ್ ಆತು. ಅದರ ನೋಡಿ ಕೇಳಿದ° – ಉಪಹಾರ ಗೃಹಲ್ಲಿ ಉಪಹಾರ ಲಭ್ಯ ಅಲ್ಲದ್ದೆ ಎಂತರ ಬೊಂಡವೋ ಲಭ್ಯ?! . ಓಹ್, ಅದಪ್ಪು ಹೇಳಿ ‘ಉಪಹಾರ’ ತೆಗದಾತು. ಈಗ ಬರೇ ‘ಲಭ್ಯವಿದೆ’. ಅವ° ತಮಾಷೆ ಮಾಡಿದ – ಎಂತರ ಇದು ಬರೇ ‘ಲಭ್ಯವಿದೆ’ ಹೇಳಿ ಬೋರ್ಡ್ ಹಾಕಿ ಮಡಿಗಿದ್ದು. ಆಹ್, ಅದಪ್ಪು ಅದು ಬೇಡ ಹೇಳಿ ಅದನ್ನೂ ಉದ್ದಿ ಬಿಟ್ಟ. ಎಂತೂ ಬರಕ್ಕೊಂಡಿಲ್ಲದ್ದ ಈ ಬೋರ್ಡ್ ಎಂತಕೆ ಹೇಳಿ ಆತು. ಅದನ್ನೂ ತೆಗದು ಬಿಟ್ಟ° ಕಡೇಂಗೆ!!!

    ಭಾವ, ನಮ್ಮದೇ ಗುರಿ ನಿಘಂಟು ಬೇಕು ಹೇಳ್ವ ವಿಷಯವ ಆಧರಿಸಿ ರಂಗು ಮಾಡಿದ್ದು ರಂಗು ರಂಗಾಗಿ ಮೂಡಿಬಯಿಂದು ಹೇಳಿ ಹೇಳುತ್ತು ‘ಚೆನ್ನೈವಾಣಿ’.

  15. ಯಬ್ಬ! ಭಾರಿ ಲಾಯಿಕಾಯಿದು ಬರದ್ದು.
    ನಿಜವಾದ ಸಂಗತಿದೆ ಅದು.
    ಎನಗೆ ಇದಕ್ಕೆ ಹೇಂಗೆ ಬೇರೆ ಬರೆಯೆಕು ಹೇಳಿ ಅರ್ಠ ಆವ್ತಾ ಇಲ್ಲೆ…
    ಮಾಷ್ಟ್ರು ಮಾವ ಹೇಳಿದ್ದು ಎಲ್ಲ ಅಷ್ಟು ಸರಿಯಾಗಿದ್ದು….
    ತುಂಬಾ ಲಾಯಿಕದ ಶುದ್ಧಿ ಒಪ್ಪಣ್ಣ…
    ~ಸುಮನಕ್ಕ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×