Oppanna.com

ಅಭಿಜ್ಞಾನದ ನಾಕು ಶ್ಲೋಕ; ಅನುಭವಿಸಿರೆ ಬದುಕು ನಾಕ!!

ಬರದೋರು :   ಒಪ್ಪಣ್ಣ    on   22/10/2010    17 ಒಪ್ಪಂಗೊ

ಮಾಷ್ಟ್ರುಮಾವಂಗೆ ಪುರುಸೊತ್ತೇ ಇಲ್ಲೆ; ಒಟ್ಟು ಅಂಬೆರ್ಪು -ಗಡಿಬಿಡಿ.
ಬೌಷ್ಷ ನೂರುಗ್ರಾಮಿನ ಕುಣಿಯ ಹೊಗೆಸುಪ್ಪು ಪೂರ್ತ ಮುಗುತ್ತೋ ಏನೋ – ಎಲೆ ತಿಂತದರ್ಲಿ!
ಎಂತರ ಮಾಡುಸ್ಸು, ತಲೆಬೆಶಿ ಏರುವಗ ಎಲೆ ತಿಂದು ಹೋವುತ್ತಡ.
– ಜೆಂಬ್ರ ಎಳಗುಸಲೆ ಹೆರಟ್ರೆ ಹಾಂಗೇ ಅಲ್ಲದೋ! ಜೆಂಬ್ರಕಳಿವನ್ನಾರ ನಿತ್ಯ ತಲೆಬೆಶಿ!!
ಅಲ್ಲಿಯದೇ ಹಾಂಗೆ, ಒಂದು ಜೆಂಬ್ರ ಎಳಗಿ ಎಲ್ಲೋರುದೇ ಅಂಬೆರ್ಪು.

ಮಾಷ್ಟ್ರುಮಾವಂಗೆ ಅಂಬೆರ್ಪು ಬಂದರೆ ನಾವುದೇ ರಜ ಕೆಡಗ್ಗುತ್ತು ಇದಾ!
ಹ್ಮ್, ಸಣ್ಣ ಸಂಶಯ ಬಂದರೂ ಅವರ ಹತ್ತರಂಗೆ ಹೋವುತ್ತದು ನಾವು, ಹಾಂಗಿಪ್ಪಗ  ಅವ್ವೇ ಮಾತಾಡ್ಳೆ ಸಿಕ್ಕದ್ದರೆ ಹೇಂಗಕ್ಕು!
ಮೊನ್ನೆಂದ  ಕರಿಕ್ಕಳ – ಪುತ್ತೂರು – ಮುಳ್ಳೇರಿಯ – ಹೊಸಮೊಗ್ರು – ಹೇಳಿಗೊಂಡು ತಿರುಗಾಟ ಇಪ್ಪಗ ಬೈಲಿಲೇ ಇಪ್ಪ ಒಪ್ಪಣ್ಣಂಗೆ ಸಿಕ್ಕುದಾದರೂ ಹೇಂಗೆ! 🙁
~

ಗಣೇಶಮಾವ° ನಿನ್ನೆ ಮನಗೆ ಬಂದಿತ್ತವು – ಬೈಕ್ಕಿಲಿ.
ಅವು ಚೌಕ್ಕಾರುಮಾವನಲ್ಲಿಗೆ ಸಂಸ್ಕೃತಪಾಟಕ್ಕೆ ಹೋಪೋರು, ದಾರಿಲೆ ಒಂದರಿ ಇಣುಕ್ಕಿಕ್ಕಿ ಶುದ್ದಿಮಾತಾಡಿಕ್ಕಿ ಹೋಪದಿದಾ!
ಅಪ್ಪು, ಗಣೇಶಮಾವಂದು ಅದೊಂದು ಕೊಶಿ ಅಪ್ಪದು ಒಪ್ಪಣ್ಣಂಗೆ – ಯೇವ ಕಾಲ, ಯೇವ ಪ್ರಾಯ ಹೇಳಿ ಲೆಕ್ಕ ಇಲ್ಲೆ, ಮನಸ್ಸಿಂಗೆ ಕೆಲಿಯೆಕ್ಕು ಕಂಡ್ರೆ ಅಂಬಗ ಕಲಿವಲೆ ಸುರು ಮಾಡುಗು!
ಹಾಂಗೆ, ಸದ್ಯದ್ದು ಚವುಕ್ಕಾರುಮಾವನಲ್ಲಿ ಸಂಸ್ಕೃತಪಾಟ!

ಮನೆಲಿ ಒಂದು ಗಳಿಗೆ ಮಾತಾಡಿ ಬೈಕ್ಕು ಶ್ಟಾರ್ಟುಮಾಡಿಕ್ಕಿ ಹೆರಟವು.
ನವಗೂ ಬೇರೆಂತ ಪರಿವಾಡಿಇತ್ತಿಲ್ಲೆ, ನಾವುದೇ ’ಬರೆಕ್ಕೋ’ ಕೇಳಿತ್ತು! ನೆಗೆಮಾಡಿಗೊಂಡು ’ಬಾ, ಒಪಾಸು ಎತ್ತುವಗ ರಜ ತಡವಕ್ಕು!’ ಹೇಳಿದವು ನೆಗಮಾಡಿಗೊಂಡು.
ಒಪ್ಪಣ್ಣಂಗೆ ಸಂಸ್ಕೃತಕಲಿತ್ತ ಮರುಳು ಹಿಡುದತ್ತೋ – ಹೇಳಿ ನೆಗೆಮಾಡಿಗೊಂಡದೋ – ನವಗರಡಿಯ.
~

ಚವುಕ್ಕಾರು ಮಾವಂಗೆ ನೀರ್ಚಾಲು ಮಹಾಜನ ಸಂಸ್ಕೃತ ಕೋಲೇಜಿಲಿ ಕಲಿಯುವಿಕೆ ಆದ್ದು.
ಮಾಂತ್ರ ಅಲ್ಲ, ಅದಾದಮತ್ತೆ ಮೆಡ್ರಾಸಿಲಿ ಆಯುರ್ವೇದ, ಹಿಂದಿ, ಕನ್ನಡ – ಎಲ್ಲವನ್ನೂ ಕಲ್ತುಗೊಂಡಿದವು.
ನಾರಾಯಣಮಾವನ ಮಡಿಕೇರಿಲಿ ಲೆಗುಚ್ಚರು ಆಗಿ ಇದ್ದಂಡು, ಈಗ ವಿಶ್ರಾಂತ ಜೀವನಲ್ಲಿದ್ದವು.
ಬೈಲಿಂಗೆ ಬತ್ತ ಮಾರ್ಗದಕರೆಲಿ ಸಣ್ಣ ಒಂದು ವಳಚ್ಚಲು ಮಾಡಿಗೊಂಡು ಹಿತ್ತಿಲುಮನೆಲಿ ಇದ್ದವು. ಹೀಂಗೆ ಆರಾರು ವಿದ್ಯಾಸಕ್ತರು ಬಂದರೆ ತುಂಬಾ ಕೊಶಿ ಆವುತ್ತು ಅವಕ್ಕೆ.
ಅವರ ಹಳೆ ಅನುಭವಂಗಳನ್ನೂ ಸೇರುಸಿಗೊಂಡು, ಲೋಕಾಭಿರಾಮ ಮಾತಾಡಿಗೊಂಡೇ ಪಾಟಮಾಡ್ತವಡ, ಬೈಕ್ಕಿಲಿ ಹೋಪಗ ಗಣೇಶಮಾವ ಹೇಳಿದವು. ಬೈಕ್ಕಿಲಿ ಹೋಪಗ ಮಾತಾಡಿರೆ ಸರಿ ಕೇಳ್ತೂ ಇಲ್ಲೆ! ಏ° – ಏ° ಹೇಳೆಕ್ಕಾವುತ್ತು.. 🙂
~

ಮನೆಂದ ಹೆರಟು ಕಾಲುಗಂಟೆಲಿ ಅಲ್ಲಿಗೆ ಎತ್ತಿತ್ತು ಅಲ್ಲಿಗೆ.
ಅತ್ತೆ ಎದುರು ಸಿಕ್ಕಿ ಏನೂ – ಹೇಳಿದವು – ಹೊತ್ತೋಪಗಾಣ ಕೆಲಸಲ್ಲಿ ಅಂಬೆರ್ಪು ಅವಕ್ಕೆ.
ಚವುಕ್ಕಾರುಮಾವ° ಮನೆ ಒಳದಿಕೆ ಇತ್ತಿದ್ದವು, ಎಂತರನ್ನೋ ಓದಿಗೊಂಡು.
ಅವು ಪುರಸೊತ್ತು ಸಿಕ್ಕಿರೆ ಓದುಗು, ವಿದ್ಯಕ್ಕ° ಪುರುಸೊತ್ತು ಸಿಕ್ಕಿರೆ ಒರಗ್ಗು! 😉
ಓದುತ್ತಲ್ಲಿಂದಲೇ ಒಂದರಿ ಕೊರಳುತಿರುಗುಸಿ ನೋಡಿದವು, ಸುರೂವಿಂಗೆ ಒಪ್ಪಣ್ಣನ ಕಂಡಪ್ಪಗ ’ಎಂತಾ’ ಕೇಳಿ ಮಾತಾಡುಸಿದವು. ಗಣೇಶಮಾವನ ಕಂಡಪ್ಪಗ ’ಹಾಂ’ ಹೇಳಿದವು ಅಲ್ಲಿಂದಲೇ.
~

ಇಬ್ರುದೇ ಲೋಕಾಬಿರಾಮ ಮಾತಾಡುಲೆ ಸುರುಮಾಡಿದವು.
ಅತ್ತೆ ಸಣ್ಣ ಆಸರಿಂಗೆ ತಂದುಕೊಟ್ಟವು.
ಮಾತಾಡಿಮಾತಾಡಿ ನವಗೇ ಗೊಂತಿಲ್ಲದ್ದೆ ಮಾತುಕತೆ ಪಾಟದ ಹೊಡೆಂಗೆ ತಿರುಗಿತ್ತು.
~

ಒಪ್ಪಣ್ಣಂಗೆ ಕೇಳುದು ಮಾಂತ್ರ ಕೆಲಸ.
ಗಣೇಶಮಾವ ಸಂಜೀವಶೆಟ್ಟಿ ತೊಟ್ಟೆಂದ ಎರಡು ಪುಸ್ತಕ ತೆಗದವು, ಪರಪರನೆ..
ಚೌಕ್ಕಾರುಮಾವ ಕಾಳಿದಾಸನ ಬಗ್ಗೆ ಮಾತಾಡಿಗೊಂಡು ಇತ್ತಿದ್ದವು. ಗಣೇಶಮಾವ ಕೇಳಿಗೊಂಡು ಇತ್ತಿದ್ದವು.
ರಾಜುಕುಮಾರಿನ ಸಿನೆಮವೋ, ಶೇಣಿಅಜ್ಜನ ಆಟವೋ – ಎಲ್ಲ ಒಪ್ಪಣ್ಣನ ತಲಗೆ ಬಂತು.
ಅವ° ಬರದ ಶಾಮಲದಂಡಕ ಒಂದರಿ ಅರ್ದಂಬರ್ದ ನೆಂಪಾತು. ಚಾಂಗುಳಿಅಕ್ಕ ಮೊನ್ನೆ ನವರಾತ್ರಿಗೆ ಶಾಮಲದಂಡಕ ಹೇಳಿಕ್ಕು – ಪೂರ್ತಿ!
ಚೌಕ್ಕಾರುಮಾವ° ಕಾಳಿದಾಸನ ಬಗ್ಗೆ ವಿವರುಸಿಗೊಂಡು ಹೋದವು. ಗಣೇಶಮಾವ° ಎಂತೆಂತದೋ ಗುರ್ತಮಾಡಿಗೊಂಡು ಹೋದವು.
ಮಾಷ್ಟ್ರುಮಾವಂಗೆ ಪುರುಸೊತ್ತು ಇರೆಕ್ಕಾತು – ಹೇಳಿ ಆತೊಂದರಿ!
ಗಟ್ಟಿಕಲ್ಲುಗೊ ಒಟ್ಟಿಂಗೆ ಹಚ್ಚಿಗೊಂಡಷ್ಟು ಕಿಚ್ಚಿನ ಬೆಣಚ್ಚು ಜಾಸ್ತಿ ಬಕ್ಕಿದಾ!!
~

ಅಲ್ಲೇ ಇದ್ದಿದ್ದ ಒಂದು ಹೊಸದಿಗಂತ ತೆಗದು ಓದಲೆ ಸುರುಮಾಡಿದೆ!
ಕರ್ನಾಟಕದ ಗೋರ್ಮೆಂಟು ಉದುರುತ್ತೋ ಏನೋ – ಹೇಳ್ತ ಶುದ್ದಿ ಬಂದಿತ್ತ ಪೇಪರಿಲಿ!
ಎಡಕ್ಕೆಡಕ್ಕಿಲಿ ಒಂದುಕೆಮಿ ಅವರ ಮಾತುಕತೆಯ ಮೇಗುದೇ ಇತ್ತಿದಾ..!
~

ಕಾಳಿದಾಸ ಹೇಳಿರೆ ದೇವಿಯೇ ಒಲುದ ಒಬ್ಬ ಕವಿ ಅಡ.
ಹೆಬಗ, ಹೆಡ್ಡ ಆಗಿದ್ದಿದ್ದ ಒಬ್ಬ ಮೂಪಂಗೆ ದೇವಿ ಒಲುದು ಉಶಾರಿ ಕವಿ ಆಗಿತ್ತಿದ್ದ.
ಹಾಂಗೆ, ಅವನ ಕೈಂದ ಅದ್ಭುತ ಕೃತಿಗೊ ಬಯಿಂದಡ, ಅದರ್ಲಿ ಅಭಿಜ್ಞಾನ ಶಾಕುಂತಲಾ – ಹೇಳ್ತ ನಾಟಕವುದೇ ಒಂದು!
~
ನವಗೆ ಇಷ್ಟೇ ಅರಡಿಗಾದ್ದು.
ಅದರಿಂದ ಮೇಗಾಣದ್ದು ಚವುಕ್ಕಾರು ಮಾವನೇ ಹೇಳೆಕ್ಕಷ್ಟೆ.
ಗಣೇಶಮಾವಂಗೆ ಅರಡಿಗಾರೂ, ಒಪ್ಪಣ್ಣಂಗೆ ಅರಡಿಯದ್ದ ಲೆಕ್ಕಾಚಾರಲ್ಲಿ ಚೌಕ್ಕಾರುಮಾವ ವಿಚವರುಸುಲೆ ಸುರುಮಾಡಿದವು.
ಕಾಲಿದಾಸನ ಒಂದು ನಾಟಕ ಇದ್ದಡ, ಅಭಿಜ್ಞಾನ ಶಾಕುಂತಲಾ – ಹೇಳಿ ಹೆಸರಡ.
ಅದರ ಕೇಳಿ ಗೊಂತಿದ್ದು ನವಗೆ, ಅರ್ದಂಬರ್ದ.
ಗಣೇಶಮಾವಂಗೆ ನಮ್ಮಂದ ಜಾಸ್ತಿ ಗೊಂತಿತ್ತು.
ಚವುಕ್ಕಾರುಮಾವಂಗೆ ಅದರಿಂದಲೂ ಹೆಚ್ಚಿಗೆ ಅರಡಿಗು.
~

ಅಭಿಜ್ಞಾನ ಶಾಕುಂತಲಾ ಹೇಳಿರೆ ತುಂಬಾ ಚೆಂದದ ನಾಟಕ ಅಡ. ಸಾಮಾಜಿಕ ಜೀವನದ ಅಂತಃಸತ್ವ ಅದರಲ್ಲಿ ಭಾರೀ ಚೆಂದಕೆ ಹೇಳಿದ್ದನಡ. ಸಾವಿರ ಒರಿಶ ಮೊದಲೇ ಅವನ ಚಿಂತನೆಗೊ, ಅದರ್ಲಿಪ್ಪ ಜೀವನಮವುಲ್ಯಂಗೊ – ಇದರ ನೋಡಿತ್ತುಕಂಡ್ರೆ ಎಂತವಂಗೂ ಹೆಮ್ಮೆ ಅನುಸುಗಡ. ಯೇವ ಶೇಕುಸ್ಪಿಯರುದೇ ಸ್ಪಿಯರಿನ ನಮುನೆ ಉಂಡೆ ಆಗಿ ಇವನ ಎದುರಂದ ರಟ್ಟುಗಡ!
ಕಾಲಿದಾಸನ ಅದ್ಭುತ ಕಲಾಶೈಲಿ ಅಡ..
~

ವಿಶ್ವಾಮಿತ್ರ- ಮೇನಕೆಗೆ ಚೆಂಙಾಯಿ ಆವುತ್ತು.
ಚೆಂಙಾಯಿ ಜೋರಾಗಿ ಒಂದು ಬಾಬೆ ಆವುತ್ತು.
ಮೇನಕೆ ಬಂದ ಕೆಲಸ ಮುಗಾತು, ವಿಶ್ವಾಮಿತ್ರನ ಜೆಪ ಹಾಳಾತು, ಹುಟ್ಟಿದ ಮಗಳಿಂಗೆ ಅಪ್ಪಮ್ಮ ಇಲ್ಲದ್ದೆ ಆತು.
ಅಪ್ಪಮ್ಮ ಇಲ್ಲದ್ದ ಮಕ್ಕಳ ದೇವರೇ ನೋಡ್ತವಡ, ಅಲ್ಲದೋ? ಹಾಂಗೆ ಶಕುಂತಪಕ್ಷಿಗೊ ಈ ಬಾಬೆಕೂಸಿಂಗೆ ರೆಂಕೆ ಅಗಲುಸಿ ನೆರಳುಮಾಡಿದವಡ.
ಅದೇ ದಾರಿಲೆ ಆಗಿ ಬಂದ ಕಣ್ವಋಷಿಗೊಕ್ಕೆ ಇದರ ಕಂಡು, ಅವರ ಆಶ್ರಮಕ್ಕೆ ತಂದು ಸಾಂಕಿದವಡ.
ಶಕುಂತಪಕ್ಷಿಗೊ ಸಾಂಕಿದ ಈ ಬಾಬೆಗೆ ಶಕುಂತಲಾ – ಹೇಳಿ ಹೆಸರು ಮಡಗಿದವಡ!
ಶಕುಂತೇನ ಲಾಲಿತಾ ಸಾ ಶಕುಂತಲಾ – ಸಂಸ್ಕೃತಲ್ಲಿದೇ ಹೇಳಿದವು, ಗಣೇಶಮಾವ ಆ ಗೆರೆಯ ಬರಕ್ಕೊಂಡವು.
~

ಕಣ್ವರ ಆಶ್ರಮಲ್ಲಿ ಬೆಳದ ಕೂಸಿನ ಒಂದು ದಿನ ಮಹಾವೀರ ದುಶ್ಶಂತ ನೋಡ್ತನಡ.
ಇಬ್ರ ಮನಸ್ಸಿಲೂ ಪರಸ್ಪರ ಪ್ರೀತಿ ಬಂದು ಗಾಂಧರ್ವ ವಿವಾಹ ಆವುತ್ತಡ.
ಮಾಣಿ ದುಶ್ಶಂತ ಮದುವೆ ಅಪ್ಪ ಯೋಚನೆಲಿ ಒಂದು ಕಾಣಿಕೆ ಕೊಟ್ಟು, ಬಂದ ದಾರಿಲೇ ಹೋವುತ್ತ.
ಕಾಣಿಕೆಗೆ ಅಭಿಜ್ಞಾನ ಹೇಳ್ತದಡ. ಶಾಕುಂತಲಾ ಹೇಳಿರೆ ಶಕುಂತಲೆಗೆ ಸಮ್ಮಂದುಸಿದ್ದು ಹೇಳಿ ಅರ್ತ ಅಡ.
ಹಾಂಗಾಗಿ ನಾಟಕದ ಹೆಸರು ’ಅಭಿಜ್ಞಾನ ಶಾಕುಂತಲಾ’ ಹೇಳ್ತದು.
ಅಂತೂ, ಆ ಕಾಣಿಕೆ ಕೊಟ್ಟು ಹೋದಮೇಗೆ – ಕೂಸಿಂಗೆ ಮಾಣಿದೇ ಚಿಂತೆ, ಮಾಣಿಗೆ ಕೂಸಿಂದೇ ಚಿಂತೆ, ಲೋಕಜ್ಞಾನದ ಪರಿವೇ ಇಲ್ಲದ್ದೆ.
~
ಕಣ್ವರು ಊರಮೇಗೆ ಹೋಗಿದ್ದ ಸಮೆಲ್ಲಿ ಒಂದರಿ ಆಶ್ರಮಕ್ಕೆ ದುರ್ವಾಸಮುನಿ ಬತ್ತನಡ.
ಮೊದಲೇ ಕೋಪ ಜಾಸ್ತಿ, ಬಂದ ದಾರಿಬಚ್ಚಲು ಬೇರೆ!
ಅವ ಬಂದಿಪ್ಪಗಳೂ ಈ ಶಕುಂತಳೆ ಈ ಯೋಚನೆಲೇ ಇತ್ತು, – ಯೇನು – ಒಳ್ಳೆದು ಕೇಳುಲೆ ಮರದು!

ಯೇವತ್ತಿನಂತೆ ದೂರ್ವಾಸನ ಪಿಸುರು ಜಾಸ್ತಿ ಆತು – ಶಾಪ ಕೊಡ್ತ, ’ನೀನು ಆರ ಬಗ್ಗೆ ಯೋಚನೆ ಮಾಡ್ತೆಯೋ – ಅವ° ನಿನ್ನ ಮರದೇ ಬಿಡ್ಳಿ’ ಹೇಳ್ತ ನಮುನೆಲಿ.
ಮತ್ತೆ ಶಕುಂತಳೆಯ ಸಖಿಯರು – ಅನುಸೂಯಾ, ಪ್ರಿಯಂವದ – ಸಮಾದಾನ ಪಡುಸಿದಮತ್ತೆ, ಅವ ಕೊಟ್ಟ ಕಾಣಿಕೆಯ ತೋರುಸಿರೆ ನೆಂಪಕ್ಕು – ಹೇಳ್ತನಡ.
~

ಕಣ್ವರು ಮನಗೆ ಬಂದಪ್ಪಗ ಸಾಕುಮಗಳ ಗಾಂಧರ್ವ ವಿವಾಹ ಆಗಿ, ಮನಸ್ಸು ಒಪ್ಪುಸಿದ್ದು ಗೊಂತಾವುತ್ತು.
ಅಲ್ಲಿಂದ ಮತ್ತೆ ಸಂತೋಷಲ್ಲೇ ಕೂಸಿನ ಒಪ್ಪುಸಿಕೊಡ್ತ ಕಾರ್ಯವ ಮಾಡ್ತನಡ.
~
ಕೂಸು ದುಶ್ಶಂತನ ಹತ್ತರೆ ಹೋಪ ದಾರಿಲಿ – ಶಕ್ರತೀರ್ಥ ಹೇಳ್ತಲ್ಲಿ ಆ ಉಂಗುರ ನೀರಿಂಗೆ ಬಿದ್ದು ಕಾಣೆಆಗಿ, ಅಲ್ಲಿಂದ ಮತ್ತೆ ಶಕುಂತಳೆಯ ಮರದು, ಮತ್ತೆ ನೆಂಪಾಗಿ, ಹುಡ್ಕಲೆ ಹೋಗಿ, – ಎಂತೆಂತದೋ ಅಪ್ಪದು.
ಆ ದಿನ ನಾಟಕ ಪೂರ್ತಿ ಪಾಟ ಮಾಡಿದ್ದವಿಲ್ಲೆ. ಅಷ್ಟು ದೊಡ್ಡ  -ಒಂದು ತಲೆಮಾರಿನ ನಾಟಕ – ಒಂದೇ ದಿನ ಮುಗಿಗೋ?
ಒಳ್ಳೆ ಮಾಷ್ಟ್ರಂಗೊಕ್ಕೆ ಮುಗಿಶಲೆ ಎಡಿಯಲೇ ಎಡಿಯ..!!
~

ಅನುಬವದ ಮಾಷ್ಟ್ರಂಗೊ ಪೂರಕ ಶುದ್ದಿಗಳ ದಾರಾಳ ಹೇಳುಗು. ಶುದ್ದಿಂದ ಜಾಸ್ತಿ ಪೂರಕ ಶುದ್ದಿಗಳೇ ಇಪ್ಪದು ಅದರಲ್ಲಿ – ಬಂಡಾಡಿ ಅಜ್ಜಿಯ ಅಡಿಗೆಯ ನಮುನೆ!
ಹಾಂಗೆಯೇ, ಚವುಕ್ಕಾರುಮಾವಂದೇ ಶಕುಂತಳೆಯ ಬಗ್ಗೆ, ಶಾಕುಂತಲಾ – ದ ಬಗ್ಗೆ ಹೇಳಿಗೊಂಡು ಹೋದವು!
ಕೆಲವರ ಎಲ್ಲ ಗಣೇಶಮಾವ ನೆಂಪುಮಡಾಗಿ ಬರಕ್ಕೊಂಡವು, ಕೆಲವರ ಕೇಳುವ ಕುತೂಹಲಲ್ಲಿ – ಬರವಲೂ ನೆಂಪಾಗದ್ದೆ ಮರದೇಬಿಟ್ಟವು!
~
ಚವುಕ್ಕಾರುಮಾವ ಹೇಳಿದ್ದರ, ಗಣೇಶಮಾವ ಬರಕ್ಕೊಂಡದರ ಮತ್ತೆ ವಿವರುಸಿ ಹೇಳುವಗ ನೆಂಪೊಳುದ ಕೆಲವು ವಿಚಾರಂಗೊ:
ಈ ನಾಟಕಲ್ಲಿ ಸಾಮಾಜಿಕ ಜೀವನವ ಭಾರೀ ಚೆಂದಕೆ ಬರದ್ದನಡ, ಕವಿ ಕಾಳಿದಾಸ.

ಅದರ್ಲಿಯೂ, ಕಣ್ವ ಅವನ ಸಾಕುಮಗಳು ಶಕುಂತಳೆಯ ದುಶ್ಶಂತನ ಹತ್ತರಂಗೆ ಕಳುಸಿಕೊಡ್ತ ಸಂದರ್ಭವ ಇನ್ನೂ ಸ್ಪಷ್ಟವಾಗಿ ವಿವರಣೆ ಕೊಟ್ಟಿದನಡ.
ಸನ್ಯಾಸಿ, ಸಾಂಕಿದಪ್ಪ (ಸಾಕುತಂದೆ) ಆದ ಮಹರ್ಷಿ ಕಣ್ವನ ಮನಸ್ಸಿನ ಭಾವನೆಗಳ ಭಾರೀ ಚೆಂದಕೆ ವಿವರುಸಿದ್ದನಡ.
ವಿಶೇಷವಾಗಿ ಕೆಲವು ಶ್ಲೋಕಂಗೊ ಇದ್ದಡ, ಅದರ್ಲಿ ಆ ಭಾವನೆಗಳ ಅತ್ಯಂತ ಸ್ಪುಟವಾಗಿ ವಿವರುಸಿದ್ದನಡ!
~

ಈ ನಾಟಕದ ಬಗ್ಗೆ, ನಾಟಕಲ್ಲಿ ಬತ್ತ ಆ ಕೆಲವು ಶ್ಲೋಕಂಗಳ ಬಗ್ಗೆ,  ಒಂದು ಶ್ಲೋಕ ಬರದ್ದವಡ.. ಚೌಕ್ಕಾರುಮಾವ° ಹೇಳಿದವು.
ಆರು ಬರದ್ದು ಕೇಳಿದೆ- “ಆರೋ, ಉಮ್ಮಪ್ಪ” – ಹೇಳಿದವು!!

ಅದು ಹೀಂಗಿದ್ದು:
ಕಾವ್ಯೇಷು ನಾಟಕಂ ರಮ್ಯಂ – ತತ್ರರಮ್ಯಾ ಶಕುಂತಲಾ |
ತತ್ರಾದಪಿ ಚತುರ್ಥೋಂಕಃ – ತತ್ರ ಶ್ಲೋಕ ಚತುಷ್ಟಯಮ್ ||

ಗದ್ಯ, ಪದ್ಯ, ನಾಟಕ – ಹೇಳಿ ಮೂರು ಬಗೆತ್ತರದ (ನಮುನೆಯ) ಕಾವ್ಯಂಗೊ ಇದ್ದಡ.
ಗದ್ಯ-ಪದ್ಯಂಗೊ ಕೇಳ್ತದು ಮಾಂತ್ರ – ಶ್ರಾವ್ಯಕಾವ್ಯ, ಆದರೆ ನಾಟಕ – ನೋಡ್ತದು – ದೃಶ್ಯಕಾವ್ಯ.

ಸಂಸ್ಕೃತಲ್ಲಿ ಇಪ್ಪ ಆ ಮೂರು ನಮುನೆ ಕಾವ್ಯಂಗಳಲ್ಲಿ ನಾಟಕವೇ ಹೆಚ್ಚು ಮುದ ಕೊಡ್ತ ನಮುನೆದು.
ಸಾಹಿತ್ಯಲ್ಲಿ ಇಪ್ಪ ಎಲ್ಲಾ ನಾಟಕಂಗಳಲ್ಲೂ ಶಕುಂತಲಾ ನಾಟಕವೇ ಹೆಚ್ಚು ರಮಣೀಯ!
ಒಂದು ಸಂಸ್ಕೃತ ನಾಟಕಲ್ಲಿ ಒಟ್ಟು ಏಳು ಅಧ್ಯಾಯ ಬೇಕಡ, ಸುರುವಾಣ ಆರರಲ್ಲಿ ಕಥೆಯ ಶುದ್ದಿ ಹೇಳಿಕ್ಕಿ, ಏಳನೇದರ್ಲಿ ’ಎಲ್ಲ ಒಳ್ಳೆದಾತು’ ಹೇಳುವ ಶುದ್ದಿ ಬರೆಕ್ಕಡ.
ಹಾಂಗಾಗಿ ಶಾಕುಂತಲಾ ನಾಟಕಲ್ಲಿ ನಾಲ್ಕನೇ ಅಧ್ಯಾಯ ಅತ್ಯಂತ ರಮಣೀಯ ಆಗಿದ್ದಡ.
ಒಂದು ಅಧ್ಯಾಯಲ್ಲಿ ಸುಮಾರು ಶ್ಲೋಕಂಗೊ ಇರ್ತಿದಾ,
ಹಾಂಗಾಗಿ, ಆ ನಾಲ್ಕನೇ ಅಧ್ಯಾಯಲ್ಲಿಯೂ ನಾಲ್ಕು ಶ್ಲೋಕಂಗೊ ಇದ್ದಡ – ಅದು ತುಂಬಾ ಮುದ ಕೊಡ್ತು ಮನಸ್ಸಿಂಗೆ –
ಹೇಳ್ತದು ಈ ಶ್ಲೋಕದ ತಾತ್ಪರ್ಯ.
~

ದುಶ್ಶಂತನ ಯೋಚನೆಲಿ ಶಕುಂತಳೆ! ಕಣ್ವ ಬುದ್ಧಿಮಾತುಗೊ ಹೇಳುವ ಮೊದಲು!!

ಇಷ್ಟಪ್ಪಗ ಒಪ್ಪಣ್ಣಂಗೆ ರಜಾ ಆಸಗ್ತಿ ಬಂತು,
ಯೇವದು ಮಾವ ಆ ಶ್ಲೋಕಂಗೊ? ಕೇಳಿದೆ.

ಗಣೇಶಮಾವಂಗೆ ಅದು ಗೊಂತಿತ್ತು, ಒಂದೊಂದೇ ಆಗಿ ವಿವರುಸುಲೆ ಸುರುಮಾಡಿದವು ಚವುಕ್ಕಾರುಮಾವ°.
ಗಣೇಶಮಾವನೂ ಸೊರ ಸೇರುಸಿಗೊಂಡವು.
~
ನಾಕು ಶ್ಲೋಕಂಗೊ ನಾಕು ಸಂದರ್ಭಲ್ಲಿ ಹೇಳ್ತದಡ. ಚಿನ್ನದ ಅಕ್ಷರಲ್ಲಿ ಬರದು ಮಡಗೆಕ್ಕಾದ ನಮುನೆದಡ. ಯೇವತ್ತಿಂಗೂ ಅಕ್ಕಾದ ನಮುನೆಯ ಭಾವಂಗೊ ಆ ಶ್ಲೋಕಲ್ಲಿ ಇದ್ದಡ.
ಒಂದೊಂದೇ ಆಗಿ ವಿವರಣೆ ಸಿಕ್ಕುವಗ ಅಪ್ಪನ್ನೇ – ಹೇಳಿ ಆತೊಂದರಿ.

1. ಶಕುಂತಲ ಮನೆ ಹೆರಡುವ ಸಂದರ್ಭ:

ಎಲ್ಲಾ ಜಾತಿ, ಕಾಲಲ್ಲೂ ಈ ಒಂದು ಸನ್ನಿವೇಶ ರಜಾ ಭಾರವಾದ್ದೇ, ಅಲ್ಲದೋ?
ಕಣ್ವಂಗೂ ಶಕುಂತಳೆಯ ಕಳುಸಿಕೊಡುವಗ ಹಾಂಗೇ ಆಯಿದು.

ಯಾಸ್ಯತ್ಯದ್ಯ  ಶಕುಂತಲೇತಿ ಹೃದಯಂ ಸಂಸ್ಪೃಷ್ಟಮುತ್ಕಂಠಯಾ
ಕಂಠಃಸ್ತಂಭಿತಬಾಷ್ಪವೃತ್ತಿ ಕಲುಷಶ್ಚಿಂತಾಜಡಂ ದರ್ಶನಂ |

ವೈಕ್ಲವ್ಯಂ ಮಮ ತಾವದೀದೃಶಮಿದಂ ಸ್ನೇಹಾದರಣ್ಯೌಕಸಃ

ಪೀಡ್ಯಂತೇ ಗೃಹಿಣಃ ಕಥಂ ನು ತನಯಾವಿಶ್ಲೇಷದುಃಖೈಃ ನವೈಃ ||


ಇಂದು ಶಕುಂತಲೆ ನಮ್ಮ ಬಿಟ್ಟು ಹೋವುತ್ತು – ಗಂಟಲು ಕಟ್ಟಿ ಕಣ್ಣು ಮಂಜಾಯಿದು, ಎದುರಿಪ್ಪದು ಸರಿ ಕಾಣ್ತಿಲ್ಲೆ.ದೊಂಡೆ ಕಟ್ಟಿದ ಹಾಂಗಾಗಿ, ಮಾತಾಡ್ಳೇ ಎಡಿತ್ತಿಲ್ಲೆ. ದುಃಖಂದಾಗಿ ಈ ನಮುನೆ ಕಷ್ಟ ತುಂಬಾ ಕಷ್ಟ ಆತು.
ಎನ್ನ ಹಾಂಗಿರ್ತ ಅರಣ್ಯವಾಸಿಗೊಕ್ಕೇ ಇಷ್ಟು ಬೇಜಾರಾಯೆಕ್ಕಾರೆ, ಇನ್ನು ಗೃಹಸ್ಥರ ಅವಸ್ಥೆ ಎಂತರ!!

2. ಶಿಷ್ಯರ ಹತ್ತರೆ ದುಶ್ಶಂತಂಗೆ ಹೇಳಿಕಳುಸುತ್ತ ಮಾತುಗೊ:
ಶಕುಂತಳೆಯ ಕಳುಸಿಕೊಡುವಗ ಒಬ್ಬನನ್ನೇ ಬಿಡ್ತನಿಲ್ಲೆ ಕಣ್ವ. ಒಟ್ಟಿಂಗೆ ಇಬ್ರ – ಧೈರ್ಯವೂ ಆತು, ಮರಿಯಾದಿಯೂ ಆತು – ಹೇಳ್ತ ನಮುನೆಲಿ ಕಳುಸಿಕೊಡ್ತನಡ. ಆ ಸಂದರ್ಭಲ್ಲಿ ಒಟ್ಟಿಂಗೆ ಹೋಪ ಪಾಸಾಡಿಗೊಕ್ಕೆ – ದುಶ್ಶಂತನ ಹತ್ತರೆ ಹೇಳುಲೆ ಕೆಲವು ಒಳ್ಳೆಮಾತುಗಳ ಹೇಳ್ತನಡ.
ಅಸ್ಮಾನ್ ಸಾಧು ವಿಚಿಂತ್ಯ ಸಮ್ಯಮ ಧನಾನ್ ಉಚ್ಚೈಃ ಕುಲಂ ಚಾತ್ಮನಃ
ತ್ವಯ್ಯಸ್ಯಾಃ ಕಥಂ ಅಪಿ ಬಾಂಧವ ಕೃತಾಮ್ ಸ್ನೇಹ ಪ್ರವೃತ್ತಿಂ ಚ ತಾಮ್ |
ಸಾಮಾನ್ಯ ಪ್ರತಿಪತ್ತಿಪೂರ್ವಕಂಇಯಂ ಧಾರೇಷು ದೃಶ್ಯಾ ತ್ವಯಾ
ಭಾಗ್ಯಾಯತ್ತಮತಃ ಪರಂ ನ ಖಲು ತದ್ ವಾಚ್ಯಮ್ ವಧೂ ಬಂಧುಭಿಃ ||
ಎಂಗೊ, ಋಷಿಗೊ ಸಂಯಮ ಇಪ್ಪವು, ಎಂಗೊ ಹೇಳುವ ಮಾತು ನಿನಗೆ ಒಳ್ಳೆದು ಹೇಳಿ ಗ್ರೇಶಿ, ಆನು ಎನ್ನ ಮಗಳ ಕಳುಸಿ ಕೊಡ್ತಾ ಇದ್ದೆ, ಸ್ವೀಕರುಸಿಗೊ. ಒಳ್ಳೆದಾಗಲಿ – ಹೇಳ್ತ ಭಾವಾರ್ಥ ಇದರ್ಲಿ ಬತ್ತಡ.

3. ಶಕುಂತಳೆಯ ಪ್ರಕೃತಿ ಪ್ರೇಮವ ಅಲ್ಲಿಪ್ಪ ಸೆಸಿಗೊಕ್ಕೆ ಹೇಳುಗು
ಶಕುಂತಳೆಗೆ ಪ್ರಕೃತಿಪ್ರೇಮ ತುಂಬ ಇತ್ತು. ಆಶ್ರಮದ ಪರಿಸರಲ್ಲಿ ಇದ್ದಿದ್ದ ಸೆಸಿಗಳ ತುಂಬ ಚೆಂದಕೆ ನೋಡಿಗೊಂಡಿತ್ತು.
ಕಣ್ವಂಗೆ ಅದರ ಕಂಡು – ಮನಬಿಟ್ಟು ಹೆರಡ್ತ ಶಕುಂತಳೆಯ ಗ್ರೇಶಿ  ತುಂಬ ಬೇಜಾರಾವುತ್ತು!
ಆ ಸಂದರ್ಭಲ್ಲಿ ಕಣ್ವ ಸೆಸಿಗೊಕ್ಕೆ ಹೇಳ್ತ ಮಾತುಗೊ:
ಪಾತುಂ ನ ಪ್ರಥಮಂ ವ್ಯವಸ್ಯತಿ ಜಲಂ ಯುಶ್ಮಾಸ್ವಪೀತೇಷು ಯಾ
ನಾದತ್ತೇ ಪ್ರಿಯಮಂಡನಾಪಿ ಭವತಾಂ ಸ್ನೇಹೇನ ಯಾ ಪಲ್ಲವಂ |
ಆದ್ಯೇ ವಃ ಕುಸುಮ ಪ್ರಸೌತಿ ಸಮಯೇ ಯಸ್ಯಾ ಭವತ್ಯುತ್ಸವಃ
ಸಾಯಂ ಯಾತಿ ಶಕುಂತಲಾ ಪತಿಗೃಹಂ ಸರ್ವೈರನುಘ್ಯಾಯತಾಂ ||

ಹೂಗಿನ ಸೆಸಿಗಳತ್ರೆ ಹೇಳುದು-
ನಿಂಗೊಗೆ ನೀರು ಎರೆಯದ್ದೆ ಅದು ನೀರುದೇ ಕುಡುಕ್ಕೊಂಡು ಇತ್ತಿಲ್ಲೆ…
ಹೂಗು ಅರಳುವಗ ಕೆಲಸ ಸುರು ಆದರೆ ಹೊತ್ತೋಪಗ ಒರೆಂಗೂ ನಿಂಗಳ ಚಾಕಿರಿ ಮಾಡಿಗೊಂಡು ಇತ್ತು, ಆ ಶಕುಂತಳೆ ಹೋದ ಮತ್ತೆ ನಿಂಗೊಗೆ ಆರು ಈ ಉಪಚಾರ ಮಾಡ್ತವು – ಇತ್ಯಾದಿ ಭಾವಾರ್ಥದ ಶ್ಲೋಕ ಅಡ ಇದು!

4. ಶಕುಂತಳೆಗೆ ಹೊಸ ಮನೆಲಿ ಹೇಂಗಿರೆಕು ಹೇಳ್ತದರ ವಿವರಣೆ ಕೊಡ್ತ ಶ್ಲೋಕ:

ಹೊಸ ಮನೆಯ ಹೊಸ ಪರಿಸರಲ್ಲಿ ಹೇಂಗಿರೆಕು ಹೇಳ್ತದರ ಕಣ್ವ ಸೂಚ್ಯವಾಗಿ ಹೇಳಿಕೊಡ್ತನಡ..

ಶುಶ್ರೂಷಸ್ವ ಗುರೂನ್ ಕುರು ಪ್ರಿಯಸಖೀ ವೃತ್ತಿಂ ಸಪತ್ನೀಜನೇ |

ಭರ್ತುರ್ವಿಪ್ರಕೃತಾಪಿ ರೋಷಣತಯಾ ಮಾ ಸ್ಮ ಪ್ರತೀಪಂ  ಗಮಃ |
ಭೂಯಿಷ್ಠಂ  ಭವ ದಕ್ಷಿಣಾ ಪರಿಜನೇ ಭಾಗ್ಯೇಷ್ವನುತ್ಸೇಕಿನೀ |
ಯಾಂತ್ಯೇವಂ ಗೃಹಿಣೀ ಪದಂ ಯುವತಯೋ ವಾಮಾಃ ಕುಲಸ್ಯಾಧಯಃ ||

ಹೋದ ಮನೆಲಿ ದೊಡ್ಡವರ ಸೇವೆ ಮಾಡು, ಗೆಂಡ ಕೋಪ ಮಾಡಿರೂ ನೀನು ತಾಳ್ಮೆ ಬಿಡ್ಳಾಗ, ಕೆಲಸದವರ  ಶ್ರಮವ ಗೌರವಿಸೆಕ್ಕು, ಹಾಂಕಾರ ಬಾರದ್ದ ಹಾಂಗೆ ವರ್ತನೆ ಮಾಡೇಕು – ಇತ್ಯಾದಿ ಅರ್ತಂಗೊ ಬಪ್ಪ ಸುಂದರ ಶ್ಲೋಕ ಇದು!
~

ಆರೇ ಈ ಶ್ಲೋಕಂಗಳ ಹೇಳಲಿ – ಕಣ್ವನೇ ಹೇಳಲಿ, ಕಾಳಿದಾಸನೇ ಹೇಳಲಿ, ಚೌಕಾರುಮಾವನೇ ಹೇಳಲಿ – ಅದೇ ಭಾವ, ಅದೇ ಸಾಂದ್ರತೆ, ಅದೇ ತೂಕ ಇರ್ತು! ಅಲ್ಲದೋ?
ಒಂದು ಕೂಸಿನ ಮನೆಬಿಟ್ಟು ಕಳುಸುತ್ತ ಕಾರ್ಯ ಇದ್ದನ್ನೇ, ಅದರ ಕಾಲಿದಾಸನಷ್ಟು ಸ್ಪಷ್ಟವಾಗಿ ವಿವರುಸುಲೆ ಆರಿಂದಲೂ ಎಡಿಯ ಅಡ.
ಅದು ಪ್ರಪಂಚದ ಯೇವದೇ ಜಾತಿ ಇರಳಿ, ಯೇವದೇ ಕ್ರಮ ಇರಳೀ – ಆ ಕೂಸುಒಪ್ಪುಸುವ ಸಂದರ್ಭಲ್ಲಿ ಕೂಸಿನ ಅಪ್ಪನ ಮನೆಯೋರಿಂಗೆ ಅಪ್ಪ ಬೇಜಾರ ಇದ್ದನ್ನೇ, ಅದು ಸಹಸ್ರ ಸಹಸ್ರ ಒರಿಶ ತೂಕದ್ದು!
ನಿನ್ನೆ ಒರೆಂಗೆ ಒಂದು ಮನೆಲಿ ಬೆಳಗಿದ ಕೂಸಿನ, ಇಂದಿಂದ ಮತ್ತೆ ಇನ್ನೊಂದು ಮನೆ ಬೆಳಗಲೆ ಕಳುಸಿಕೊಡ್ತ ಆರ್ದ್ರ ಸನ್ನಿವೇಶ!
~

ಅಂದು-ಇಂದು-ಮುಂದು-ಎಂದೆಂದೂ ಆ ಸಂದರ್ಭಂಗೊ ಇರ್ತು!
ಇಂದು ಮಗಳ ಕಳುಶಿಕೊಡ್ತ ಆ ಮಗಳ ಅಮ್ಮನೂ ಒಂದು ಕಾಲಲ್ಲಿ ಇದೇ ಪರಿಸ್ಥಿತಿಯ ದಾಂಟಿ ಬಂದದಲ್ಲದೋ?!
ಅವು ಬಪ್ಪಗ ಈ ಕೂಸಿನ ಅಪ್ಪನ ಮನೆಯೋರು ಸಂತೋಷಲ್ಲಿ ಸ್ವೀಕರುಸಿಗೊಂಡಿದವಿದಾ!
ಬಪ್ಪ ಮನೆಲಿ ಇಪ್ಪ ಅತ್ತೆಯೂ ಅಂದೊಂದು ದಿನ ಇದೇ ನಮುನೆ ಬಂದದು!
ಅಲ್ಲಿ ಇಪ್ಪ ಸಣ್ಣ ಕೂಸುಗೊ ಇದೇ ನಮುನೆ ಇನ್ನೊಂದು ಮನೆಗೆ ಹೋವುತ್ತವು, ಆ ಮನೆ ತುಂಬುಸಲೆ..

ಒಂದು ಮನೆಲಿ ಹುಟ್ಟಿದ ಕೂಸು ಇನ್ನೊಂದು ಮನೆ ಬೆಳಗುಲೆ, ಇನ್ನೊಂದು ಮನೆಲಿ ಹುಟ್ಟಿ ಬೆಳದ ಕೂಸು ಮತ್ತೊಂದು ಮನೆ ಬೆಳಗುಲೆ!!
ಸಂಸಾರ – ಹೇಳ್ತದರ ಕೇಂದ್ರಸ್ಥಾನ – ಸ್ತೀತ್ವಲ್ಲೇ ಇದ್ದೋ ಹೇಳಿ ಚವುಕ್ಕಾರುಮಾವಂಗೆ ಸಂಶಯ ಬಪ್ಪದು ಒಂದೊಂದರಿ!
~

ಇಂದ್ರಾಣ ಪರಿಸ್ಥಿತಿಲಿಯೂ ಆ ಹೆಣ್ಣೊಪ್ಪುಸುತ್ತ ಸನ್ನಿವೇಶ ಎಷ್ಟು ಸ್ಪುಟವಾಗಿದ್ದು!!
ಅಭಾವಲ್ಲಿ ವಸ್ತುವಿನ ಬೆಲೆ ಅರಿವದಡ ನಾವು.
ನಿನ್ನೆ ಒರೆಂಗೆ ಅಪ್ಪನ ಮನೆಲೇ ಇದ್ದಿಪ್ಪಗ ಕಂಡಿದ್ದದರಿಂದ ವಿಶೇಷವಾಗಿ ಇಂದಿನ ದಿನ ಮಗಳ ಮೇಲಾಣ ಮಮತೆ ಕಾಣ್ತು.
ಮಗಳು ಹುಟ್ಟಿಅಪ್ಪಗ ಸಂಭ್ರಮಿಸಿದ ಕ್ಷಣಂಗೊ, ಮುಂದೆ ದೊಡ್ಡ ಅಪ್ಪಗ ಅದರ ಅರ್ಗೆಂಟಿನ ದಿನಂಗೊ, ಮತ್ತೆ ದೊಡ್ಡ ಅಪ್ಪಗ ನಮುನೆ ನಮುನೆ ಅಂಗಿಗಳ ತೆಗದು ಕೊಡ್ತ ಸನ್ನಿವೇಶಂಗೊ – ಕೆಂಪಂಗಿ,ನೀಲಿ ಅಂಗಿ, ಯಕ್ಷಗಾನದ ಅಂಗಿ – ಅದಕ್ಕೆ ಒಂದೊಂದು ಹೆಸರು ಮಡಗುತ್ತ ಆತ್ಮೀಯ ಸನ್ನಿವೇಶಂಗೊ, ಮುಂದೆ ಅದರ ಶಾಲಗೆ ಸೇರುಸಿದ ಗವುಜಿ, ಬೇಗು ಹಾಕಿ ಶಾಲಗೆ ಕೊಶೀಲಿ ಹೆರಟು, ಶಾಲಗೆತ್ತುವಗ ಮನೆ ನೆಂಪಾಗಿ ಕೂಗಿದ್ದು!
ಮುಂದೆ ಮಾರ್ಕು ಸಿಕ್ಕಿದ್ದು, ಅಷ್ಟಪ್ಪಗ ಕೊಶಿ ಆದ್ದು.. ಮಾಷ್ಟ್ರ ಬೈದಪ್ಪಗ ಬೇಜಾರಾದ್ದು..
ಎಲ್ಲವುದೇ ಒಂದೊಂದಾಗಿ ಕಣ್ಣಿಲಿ ಕಟ್ಟಲೆ ಸುರು ಆತು ಕೂಸಿನ ಅಪ್ಪಮ್ಮಂಗೆ!!

ದೊಡ್ಡ ಆದ ಮೇಗೆ ಕೋಲೇಜಿಂಗೆ ಹೋದ್ದು!
ಮಗಳು ಕೋಲೇಜಿಂಗೆ ಹೋಪದು ಹೇಳ್ತ ಹೆಮ್ಮೆಯ ಅನುಬವುಸಿದ್ದು.
ಮುಂದೆ ಕಲಿಯುವಿಕೆ ಆದ ಮೇಗೆ ಕೆಲಸಕ್ಕೆ ಸೇರಿದ್ದು,
ಕೆಲಸದ ಸಂಬಳಲ್ಲಿ ಸುರೂ ಒಂದಂಗಿ ತಂದು ಕೊಟ್ಟದು..
ಕಷ್ಟದ ಸಂದರ್ಭಲ್ಲಿ ಸಲಹೆಗಳ ಕೊಟ್ಟದು – ಎಲ್ಲವುದೇ ಹೆತ್ತೋರಿಂಗೆ ಅನುಭವ ಆವುತ್ತು!

ಮನೆಲಿ ನಿತ್ಯ ಜಗಳ ತೆಗಕ್ಕೊಂಡಿದ್ದ ಅಣ್ಣ-ತಂಗೆಕ್ಕೊಗುದೇ ಮನೆ ಹೆರಡುವಗ ಬೇಜಾರು ಬತ್ತು.
ಕಂಡ್ರಾಗದ್ದ ಪುಚ್ಚೆಕುಂಞಿಯ ಗ್ರೇಶಿರೆ ಕೂಸಿಂಗೆ ಬೇಜಾರಾವುತ್ತು..
ಯೇವದೇ ರಕ್ತಸಮ್ಮಂದ ಇಲ್ಲದ್ದ ನೆರೆಕರೆಯೋರಿಂಗೂ ಮನಸ್ಸು ಭಾರ ಆವುತ್ತು..
ಹೆಣ್ಣೊಪ್ಪುಸುತ್ತ ಕಾರ್ಯವ ಮಾಣಿಯ ಕಡೆಯೋರು ಮಾಂತ್ರ ಸರಿ ನೋಡುದು, ಕೂಸಿನ ಕಡೆಯೋರಿಂಗೆ ಕಣ್ಣು ಮಂಜಾಗಿ ಸರಿ ನೋಡ್ಳೇ ಎಡಿಯ – ಹೇಳಿ ಚವುಕ್ಕಾರುಮಾವ ಹೇಳಿದವು, ಗಂಭೀರವಾಗಿ!
ಅದಪ್ಪುದೇ ಇದಾ!
ಅಲ್ಲಿಪ್ಪ ಬಟ್ಟಮಾವನಿಂದ ಹಿಡುದು, ಬಂದ ಎಲ್ಲೋರುದೇ ಅತ್ಯಂತ ಸಾಂದ್ರವಾಗಿಪ್ಪ ಸನ್ನಿವೇಶ!
~
ನಮ್ಮ ಸಮಾಜ ಬೆಳದು ಬಂದದೇ ಹಾಂಗೆ,
ಈ ಮನೆಲಿ ಹುಟ್ಟಿ, ಬೆಳದು, ಇಲ್ಯಾಣ ಸಂಸ್ಕೃತಿ ಅಭ್ಯಾಸ ಆದ ಒಂದು ಕೂಸು – ಗುರ್ತವೇ ಇಲ್ಲದ್ದ ಇನ್ನೊಂದು ಮನೆಗೆ ಹೋಗಿ, ಅಲ್ಯಾಣ ಹೆಮ್ಮಕ್ಕೊ ಆಗಿ, ಆ ಮನೆಯ ನೆಡೆಶುತ್ತ ಜೆವಾಬ್ದಾರಿ ತೆಕ್ಕೊಂಡು, ಯಶಸ್ವಿಯಾಗಿ ಬದುಕ್ಕುತ್ತ ಒಂದು ಕಟ್ಟಳೆ ನಮ್ಮದರ್ಲಿ ಇಪ್ಪದು!
ಒಂದೆರಡು ದಿಕ್ಕೆ ಅದು ಪೈಲು ಆದರೂ, ನೂರಕ್ಕೆ ತೊಂಬತ್ತೊಂಬತ್ತುದೇ ಅದು ಸಫಲ ಅಪ್ಪದೇ ಜಾಸ್ತಿ!

ಹಾಂಗಾಗಿ, ಮನೆಗೆ ಬಪ್ಪ ಎಲ್ಲಾ ಹೆಮ್ಮಕ್ಕಳುದೇ ಮನೆ ಬೆಳಗಲಿ – ಹೇಳಿ ಎರಡೂ ಕಡೆಯೋರು ಹಾರಯಿಕೆ ಮಾಡ್ತವಡ.
ಮನೆಬಿಟ್ಟು ಹೆರಡುವ ಬೇಜಾರು ಕೂಸಿನ ಅಪ್ಪಮ್ಮಂಗೆ ಇದ್ದರೂ, ಇನ್ನೊಂದು ಮನೆ ಬೆಳಗಲಿ ಹೇಳಿ ಸಂತೋಷಲ್ಲೇ ಕಳುಸಿಕೊಡ್ತವಡ!
ಚವುಕ್ಕಾರುಮಾವ ಅವರ ಅನುಭವ ಹೇಳ್ತದೋ ಒಂದು ಸಂಶಯ ಬಂತು ಒಪ್ಪಣ್ಣಂಗೆ – ಅವುದೇ ಒಂದು ಮನೆಂದ ಹೆಣ್ಣೊಪ್ಪುಸಿಗೊಂಡಿದವು, ಮುಂದೆ ಒಂದು ಹೆಣ್ಣೊಪ್ಪುಸಿ ಕೊಟ್ಟಿದವು!
ಗಣೇಶಮಾವಂಗುದೇ ತಂಗೆಯ ಕೊಡ್ತ ಬೇಜಾರವ ನುಂಗಿ ಗೊಂತಿದ್ದು!
ಒಂದು ಮನೆಲಿ ಬೆಳಗಿ ಇನ್ನೊಂದು ಮನೆಯ ಬೆಳಗುಸುತ್ತ ಕಾರ್ಯ ಅಂದಿಂದ ಇಂದಿನ ಒರೆಂಗೆ, ಮುಂದಂಗೆ – ಎಂದೆಂದಿಂಗೂ ಶ್ರದ್ದೇಲಿ ಮಾಡ್ತ ನಮ್ಮ ಹೆಮ್ಮಕ್ಕಳ ಗ್ರೇಶಿ ಒಪ್ಪಣ್ಣಂಗೆ ಅಭಿಮಾನ ಬಂತು!
~
ಹೆಣ್ಣೊಪ್ಪುಸುತ್ತ ಸಂದರ್ಭಲ್ಲಿ ಜೀವನವನ್ನೇ ತಿಳಿಶುತ್ತ ಅರ್ತಂಗೊ ಈ ನಾಕು ಶ್ಲೋಕಲ್ಲಿ ಇದ್ದಡ.
ಅಭಿಜ್ಞಾನದ ಈ ನಾಲ್ಕು ಶ್ಲೋಕವ ಅರ್ತವಂಗೆ ಅವರ ಜೀವನವೇ ಸ್ವರ್ಗ ಆಗಿ ಬಿಡುಗು – ಹೇಳ್ತದು ಚವುಕ್ಕಾರುಮಾವನ ಅಭಿಪ್ರಾಯ.
~

ಒಂದೊಪ್ಪ: ನಾಕು ಶ್ಲೋಕದ ಅರ್ತ ಗೊಂತಿದ್ದರೆ ಸಾಲ, ಅದರ ಅನುಭವಿಸಲೂ ಅರಡಿಯೇಕು – ಹೇಳ್ತದು ಚವುಕ್ಕಾರುಮಾವನ ಭಾವಾರ್ಥ!

17 thoughts on “ಅಭಿಜ್ಞಾನದ ನಾಕು ಶ್ಲೋಕ; ಅನುಭವಿಸಿರೆ ಬದುಕು ನಾಕ!!

  1. ಒಪ್ಪಣ್ಣ ಅತ್ಯುತ್ತಮವಾದ ಸಾಂದರ್ಭಿಕ ಲೇಖನ….
    ಒಪ್ಪಂಗ ಒಂದಕ್ಕಿಂತ ಒಂದು ಲಾಯ್ಕ ಇದ್ದು….
    ಒಪ್ಪಕ್ಕೆ ರಜ್ಜ ಲೇಟಾತು…..

  2. ಅಭಿಜ್ಞಾನ ಶಾಕುಂತಲದ ನಾಲ್ಕು ಶ್ಲೋಕವ ಸರಿಯಾದ ಸಮಯಲ್ಲಿ ಸರಿಯಾಗಿ ಅರ್ಥ ಮಾಡಿಯೊಂಡ ಒಪ್ಪಣ್ಣನ ಜೀವನ ಚವುಕ್ಕಾರು ಮಾವ ಹೇಳ್ತ ಹಾಂಗೆ ಸ್ವರ್ಗವೇ ಆಗಲಿ!
    ನಾಕು ಶ್ಲೋಕದ ಅರ್ತ ಗೊಂತಿದ್ದರೆ ಸಾಲ, ಅದರ ಅನುಭವಿಸಲೂ ಅರಡಿಯೇಕು ಹೇಳುವ, ಒಂದು ಮನೆಲಿ ಬೆಳಗಿ ಇನ್ನೊಂದು ಮನೆಯ ಬೆಳಗುಸುತ್ತ ನಮ್ಮ ಹೆಮ್ಮಕ್ಕಳ ಬಗ್ಗೆ ಅಭಿಮಾನ ಪಡುವ, ಒಪ್ಪಣ್ಣನ ಮಾತುಗಳ ಓದಿ ಒಪ್ಪಣ್ಣನ ಬಗ್ಗೆಯೇ ಅಭಿಮಾನ ತುಂಬಿ ಬಂತು!

  3. ಒಪ್ಪಣ್ಣನ ಬರವ ಶೈಲಿಗೆ ಒಪ್ಪಣ್ಣನೇ ಸಾಟಿ.ಆನು ಸ೦ಸ್ಕ್ರುತದ ಗ೦ದ ಗಾಳಿ ಇಲ್ಲದ್ದವ೦.ಆದರೆ ಕನ್ನಡ ಅನುವಾದ ಓದಿದ್ದೆ ಆರು ಬರದ್ದು ಹೇಳ್ಲೆ ಗೊ೦ತಿಲ್ಲೆ.ಕಾಳಿದಾಸನ ಕ್ರುತಿ ಗಳಲ್ಲೇ ಇದು ಅತಿ ಶ್ರೇಷ್ಟ ಹೆಳ್ತವು.ಎನ್ನ ಅಪ್ಪ೦ ಇಪ್ಪಗ ಪುರುಸೊತ್ತು ಇದ್ದರೆ ಹಿ೦ಗಿದ್ದ ಕಾವ್ಯ೦ಗಳ ಓದಿ ಅರ್ಥ ಹೇಳುಗು.ಅ೦ಬಗ ಹುಡುಗ ಬುದ್ದಿ.ಹೆಚ್ಹು ಶ್ರದ್ದೆ ಇತ್ತಿಲ್ಲೆ.ಅಪ್ಪ೦ ಬಯಿಗು ಹೆಳ್ತ ಹೆದರಿಕಗೆ ಕೇಳಿಯೊ೦ಡಿತ್ತಿದ್ದದು.ಇ೦ದು ತಿಳಿವಾಗ ಅಪ್ಪ೦ ಇಲ್ಲೆ.ಲೋಕವೇ ಹಾ೦ಗೆ ಅಲ್ಲದೊ.ಒಪ್ಪಣ್ಣ ಈ ಲೆಖನಕ್ಕೆ ಒ೦ದು super ಒಪ್ಪ.ಒಪ್ಪ೦ಗಳೊಟ್ಟಿ೦ಗೆ.

  4. ಜೀವನಲ್ಲಿ ವಿದಾಯ ಹೇಳುದು ಮತ್ತೊಂದು ವಿಷಯ ಆರಂಭ ಹೇಳಿ ಅರ್ಥ.ಅಭಿಜ್ಞಾನ ಶಾಕುಂತಲೆ ನಾಟಕಲ್ಲಿ ಇಪ್ಪಂತಹ ಶಾಕುಂತಲೆಯ ವರ್ಣನೆಯ ವಿಷಯ ಎಂಥವರ ಮನಸ್ಸೂ ಕರಗುಗು. ನಿಜವಾಗಿ ಆ ಹೆಣ್ಣು ಒಪ್ಪಿಸಿಕೊಡುವ ಸಮಯಲ್ಲಿ ಅಪ್ಪಂತಹ ವೇದನೆ ಮಾತ್ರ ವರ್ಣಿಸುಲೆ ಸಾಧ್ಯ ಇಲ್ಲೆ. ಈ ಲೇಖನ ತುಂಬಾ ಸಾಂದರ್ಭಿಕ ಆಯಿದು…ಧನ್ಯವಾದ…

  5. Sandarbhochitha arthapoorna lekhana Maheshanna,,,odi khushi aatu…..adu belada manenda innondu manege hogi allina badalavanege bekadahange hondigondu hopadu kusugokke matra sadhya!!!!!!!! hum…oppulakku…aadre adakke adu anivarya….allada?? Purusha pradhana samajalli maanyango hogi kusina maneli nimbadu heli ondu krama ittille…..Athava iddaru adu MANEALIYA heluva DODDA hanepatti kattigonde iddadu…allada????? Hennu makkoge poojya sthaana kottidu heli helvaga naavu innondu vishayava aalochane madeku…..naavu poojisudu matadadda devara maatra…haange kusugaluu mathadlagaddavu…haange mathadire ambaga ade gouravisuva hemmakkala buddi monakaalinda kela heliyuu halikondittiddavilleya???Antu ottili gandasara dabbalikeya kaalalli maataadadde banda novugala ellavannu anubhavisigondu gadi ettina haange……(gadi ettugokkadaru raja vishranti irthu) geikondidda henninge poojyatha sthaana allada….Ondu garbhini hetthattu heli aade modalu keludu kusa maniya heli…kusu helire more peentusigondu kuuusaaaaaaaaaa heli ondu raga…Maani helire nege nege madigondu ladelliddambaga heli kelva style nodire……..Indingu kelavu kade idu munduvarittale iddu……ningogu haange ansiddilleya??

  6. ಅಭಿಜ್ಞಾನ ಶಾಕುಂತಲಾ….ಕಾಳಿದಾಸನ ಒಂದು ಅದ್ಭುತ ಸೃಷ್ಟಿ. ಕಥೆಯ ಸಣ್ಣ ಮೂಲವ ಇಷ್ಟು ಅರ್ಥಪೂರ್ಣವಾಗಿ ಭಾವಪೂರ್ಣವಾಗಿ ಬರವಲೆ ಆ ಮಹಾನ್ ಕವಿಗೆ ಮಾಂತ್ರ ಸಾಧ್ಯ ! ಈ ನಾಟಕದ ರಜ್ಜ ಭಾಗವ ಓದಿದ್ದೆ, ಪೂರ ಓದೆಕು ಹೇಳಿ ಯಾವಗಳೂ ಗ್ರೆಶುದು..ಆದರೆ ಆವ್ತೇ ಇಲ್ಲೆ 🙁 ಒಪ್ಪಣ್ಣ ಇಲ್ಲಿ ಬರದ ಮೇಲೆ ಓದಿಯೇ ಓದೆಕು ಹೇಳಿ ನಿರ್ಧಾರ ಮಾಡಿದ್ದೆ. ಒಪ್ಪಣ್ಣನ ನಿರೂಪಣೆಯೇ ಚಂದ…ಅದೂ ಕಾಳಿದಾಸನ ನಾಟಕ !!
    ಕಾಳಿದಾಸನ ಭಾರತದ ಶೇಕ್ಸ್ ಪಿಯರ್ ಹೇಳಿ ಹೇಳ್ತವು !! ಆಶ್ಚರ್ಯ ಆವ್ತು…ಇಷ್ಟು ದೊಡ್ಡ ತಪ್ಪು ಹೇಳಿಕೆ ಕೊಟ್ಟವ್ವು ಆರು ಹೇಳಿ!! ಕಾಳಿದಾಸನ ಕಾಲಲ್ಲಿ ಶೇಕ್ಸ್ ಪಿಯರ್ ಹುಟ್ಟಿತ್ತನೇ ಇಲ್ಲೆನ್ನೆ !! ಕಾಳಿದಾಸಂದು ಹೆಚ್ಚು ಕಮ್ಮಿ ಒಂದೂವರೆ ಸಾವಿರ ವರ್ಷದಷ್ಟು ಹಿಂದಾಣ ಕಾಲ, ಶೇಕ್ಸ್ ಪಿಯರ್ ಇದ್ದದು ಹದಿನಾರನೇ ಶತಮಾನಲ್ಲಿ !!
    ಶೇಕ್ಸ್ ಪಿಯರ್ ನ ಬಗ್ಗೆ ಎರಡು ಮಾತಿಲ್ಲೆ, ಅವಂದೇ ಅದ್ಭುತ ನಾಟಕಕಾರ…….ಪೂರ್ವ ಮತ್ತೆ ಪಶ್ಚಿಮದ ಈ ಇಬ್ಬರಿಂಗೂ ಒಂದು ನಮನ.

  7. ಓದಿ ಕಣ್ಣಿಲಿ ನೀರು ಬಂತು ಮಾರಾಯ. ಮಹೇಶನ ಮದುವೆಗೆ ಹೋಗಿ ಹೆಣ್ಣು ಒಪ್ಪಿಸುವುದು ಹತ್ತರಂದ ನೋಡಿದಾಂಗೆ ಕಾಣ್ತು ನೀನು. ಕೆಲವೊಂದರಿ ಎನಗೆ ಕಾಂಬದು, ವಿಚಿತ್ರ ಕ್ರಮ ಹೇಳಿ, ಹುಟ್ಟಿ, ಬೆಳೆದ ಮನೆ, ರಕ್ತ ಹಂಚಿಗೊಂಡಿಪ್ಪೋರ ಎಲ್ಲಾ ಬಿಟ್ಟು ಒಳಿದ ಜೀವನವಿಡೀ ಬೇರೆ ಮನೇಲಿ ಇಪ್ಪದು ಹೇಳಿದರೆ?!!!!!!…. ಮತ್ತೆ ಗೊತ್ರ ಕಡುದ ಮೇಲೆ, ನಿನ್ನೆ ವರೆಗೆ ಮನೆಯ ಏಲ್ಲಾ ಕರ್ಯಕ್ರಮಂಗಳಲ್ಲಿಯೂ ಹೊಡಾಡುಲೆ ಸೇರಿಗೊಂಬೊರು, ಇಂದಿಂದ ಮತ್ತೆ …’ಮನೆಯವರಲ್ಲ’… ಹೇಳಿ ಅಪ್ಪದು.
    ಅದರೂ ಜಗತ್ತು ನಡವದೆ ಹೀಂಗೆ ಅಲ್ಲದೊ.

  8. “ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು….” ಕೂಸಿನ ಗೆಂಡನ ಮನಗೆ ಕಳಿಸಿ ಕೊಡುವ ಪದ್ಯವ ನೆಂಪು ಮಾಡಿತ್ತು ಒಪ್ಪಣ್ಣನ ಲೇಖನ. ಕೋಂಗೋಟು ಅತ್ತೆ ಮಾವನ ಮನಸ್ಥಿತಿಯ ಸರಿಯಾಗಿ ಅರ್ಥೈಸಿಕೊಂಡು ಒಪ್ಪಣ್ಣ ಬರದ ಲೇಖನ ಸಾಂದರ್ಭಿಕವಾಗಿತ್ತು. ಮಗಳ ಕೈಯೆತ್ತಿ ಕೊಡುವಗ ಹೆತ್ತು ಬೆಳಸಿದವಕ್ಕೆ ಮಾಂತ್ರ ಅಲ್ಲ, ಅಲ್ಲಿದ್ದ ಎಲ್ಲೋರಿಂಗು ಒಂದು ಕ್ಷಣ ದು:ಖ ಉಮ್ಮಳಿಸಿ ಬತ್ತದು ನಿಜ. ಮದುವೆ ವಿಡಿಯೋ/ಪಟ ತೆಗತ್ತವಕ್ಕೆ ಒಂದು ಸರ್ತಿ ಮದುಮ್ಮಾಳಿನ ಅಬ್ಬೆ/ಅಪ್ಪನ ಹತ್ರಂದ ತೋರುಸದ್ರೆ ಸಮಾಧಾನವೇ ಆಗ. ಅಭಿಜ್ಞಾನ ಶಾಕುಂತಲವ ವಿವರಿಸಲೆ ಸುರು ಮಾಡಿ ಅಪ್ಪಗ ಸಂಜೀವ ಶೆಟ್ಟಿಯ ತೊಟ್ಟೆ (ಬಟ್ಯನ ತೊಟ್ಟೆ ಅಲ್ಲ)ತೆಗದು ಅದರಿಂದ ಪುಸ್ತಕ ಹೆರ ತೆಗದ ವಿಚಾರ ಅಷ್ಟು ಸಹಜವಾಗೆ ಬಯಿಂದು. ಎಷ್ಟೊಂದು ಸಣ್ಣ ವಿಷಯವನ್ನು ಮನಸ್ಸಿಂಗೆ ತಟ್ಟುವ ಹಾಂಗೆ ವಿವರಿಸುತ್ತ ಶೈಲಿ ಒಪ್ಪಣ್ಣನದ್ದು, ಹಾಂಗೆ ಅವನ ಯಾವುದೇ ಲೇಖನ ಓದುತ್ತವಕ್ಕೆ ಕೊಶಿ ಕೊಡುತ್ತು.

  9. ಹಳೆ ಶಬ್ದಂಗಳ ಹೊಸ ಪರಿಚಯ:
    ಪರಿವಾಡಿಇತ್ತಿಲ್ಲೆ
    ಪಾಸಾಡಿಗೊಕ್ಕೆ
    ***
    ಎನಗೆ ಕೊಶೀ ಆದ ವಾಸ್ತವ ಚಿತಣ:
    [ಬೈಕ್ಕಿಲಿ ಹೋಪಗ ಮಾತಾಡಿರೆ ಸರಿ ಕೇಳ್ತೂ ಇಲ್ಲೆ! ಏ° – ಏ° ಹೇಳೆಕ್ಕಾವುತ್ತು.] ಬೈಕಿಲಿ ಹೋಪ ಎಲ್ಲರ ಅನುಭವ ಕೂಡಾ. ಹಿಂದೆ ಕೂದೊಂಡು ಕೇಳ್ತವನಂದ ಹೆಚ್ಚು, ದಾರಿ ಕರೆಲಿ ಇಪ್ಪವಕ್ಕೆ ಕೇಳುಗು.
    [ಒಪ್ಪಣ್ಣನ ಕಂಡಪ್ಪಗ ’ಎಂತಾ’ ಕೇಳಿ ಮಾತಾಡುಸಿದವು. ಗಣೇಶಮಾವನ ಕಂಡಪ್ಪಗ ’ಹಾಂ’ ಹೇಳಿದವು ಅಲ್ಲಿಂದಲೇ].- ನಿತ್ಯಾ ಸಿಕ್ಕುವವರ, ತುಂಬಾ ಹತ್ರಾಣವರ ಕಂಡಪ್ಪಗ ’ಹಾಂ’-ಹೇಳಿ ವಿಚಾರಿಸಿರೆ, ಬೇರೆಯವರ ಹಾಂಗೆ ಹೇಳ್ಲೆ ಆವ್ತಿಲ್ಲೆ. ’ಏನು, ಎಂತ’ ಹೇಳಿಯೇ ವಿಚಾರ್ಸೆಕಾವ್ತು.
    ***
    ಅನುಭವದ ಮಾತುಗೊ:
    ಗಟ್ಟಿಕಲ್ಲುಗೊ ಒಟ್ಟಿಂಗೆ ಹಚ್ಚಿಗೊಂಡಷ್ಟು ಕಿಚ್ಚಿನ ಬೆಣಚ್ಚು ಜಾಸ್ತಿ ಬಕ್ಕಿದಾ!!
    ಅಭಾವಲ್ಲಿ ವಸ್ತುವಿನ ಬೆಲೆ ಅರಿವದಡ ನಾವು.
    ***
    [ಶೇಕುಸ್ಪಿಯರುದೇ ಸ್ಪಿಯರಿನ (sphere) ನಮುನೆ ಉಂಡೆ ಆಗಿ ಇವನ ಎದುರಂದ ರಟ್ಟುಗಡ!
    ಕಾಲಿದಾಸನ ಅದ್ಭುತ ಕಲಾಶೈಲಿ ಅಡ..] -ತಮಾಶೆಲಿ ಒಂದು ಸತ್ಯ. ಇಂಗ್ಲೀಶ್ ಜಾಸ್ತಿ ಕಲ್ತವಕ್ಕೆ ಶೇಕ್ಸ್ ಪಿಯರ್ great.
    ***
    [ಶಕುಂತಪಕ್ಷಿಗೊ ಸಾಂಕಿದ ಈ ಬಾಬೆಗೆ ಶಕುಂತಲಾ
    …….ನಾಟಕದ ಹೆಸರು ’ಅಭಿಜ್ಞಾನ ಶಾಕುಂತಲಾ’ ಹೇಳ್ತದು.]
    ’ಶಕುಂತಲಾ’ ಮತ್ತೆ ’ಅಭಿಜ್ಞಾನ ಶಾಕುಂತಲಾ’ ಹೆಸರು ಎಂತಕೆ ಬಂತು ಹೇಳಿ ವಿವರಿಸಿದ್ದು ಲಾಯಿಕ ಆಯಿದು.
    ***
    [ಆ ಕೂಸುಒಪ್ಪುಸುವ ಸಂದರ್ಭಲ್ಲಿ ಕೂಸಿನ ಅಪ್ಪನ ಮನೆಯೋರಿಂಗೆ ಅಪ್ಪ ಬೇಜಾರ ಇದ್ದನ್ನೇ, ಅದು ಸಹಸ್ರ ಸಹಸ್ರ ಒರಿಶ ತೂಕದ್ದು!
    ನಿನ್ನೆ ಒರೆಂಗೆ ಒಂದು ಮನೆಲಿ ಬೆಳಗಿದ ಕೂಸಿನ, ಇಂದಿಂದ ಮತ್ತೆ ಇನ್ನೊಂದು ಮನೆ ಬೆಳಗಲೆ ಕಳುಸಿಕೊಡ್ತ ಆರ್ದ್ರ ಸನ್ನಿವೇಶ!
    ಅಲ್ಲಿಪ್ಪ ಬಟ್ಟಮಾವನಿಂದ ಹಿಡುದು, ಬಂದ ಎಲ್ಲೋರುದೇ ಅತ್ಯಂತ ಸಾಂದ್ರವಾಗಿಪ್ಪ ಸನ್ನಿವೇಶ!]
    ಎಲ್ಲಾ ಮದುವೆ ಮನೆಗಳಲ್ಲಿ ಕೂಸು ಒಪ್ಪುಸುವಾಗಾಣ ಸನ್ನಿವೇಶವ ಮನಸ್ಸಿಂಗೆ ಮುಟ್ಟುವ ಹಾಂಗೆ ತಿಳಿಸಿದ್ದೆ.
    ***
    [ಒಂದು ಮನೆಲಿ ಹುಟ್ಟಿದ ಕೂಸು ಇನ್ನೊಂದು ಮನೆ ಬೆಳಗುಲೆ, ಇನ್ನೊಂದು ಮನೆಲಿ ಹುಟ್ಟಿ ಬೆಳದ ಕೂಸು ಮತ್ತೊಂದು ಮನೆ ಬೆಳಗುಲೆ!!
    ಸಂಸಾರ – ಹೇಳ್ತದರ ಕೇಂದ್ರಸ್ಥಾನ – ಸ್ತ್ರೀತ್ವಲ್ಲೇ ಇದ್ದೋ ಹೇಳಿ ಚವುಕ್ಕಾರುಮಾವಂಗೆ ಸಂಶಯ ಬಪ್ಪದು ಒಂದೊಂದರಿ!]
    ಅಪ್ಪಲ್ಲದಾ?. ಮನೆತನದ ನಕ್ಷೆ ಮಾಡುವಾಗ ಗೆಂಡು ಮಕ್ಕೊ (ಪತ್ನೀ ಸಮೇತ), ಅವರ ಮಕ್ಕೊ, ಪುಳ್ಳಿಯಕ್ಕೊ ಹಾಂಗೇ ಮುಂದುವರಿತ್ತು. ಅದೇ ರೀತಿ ಒಂದು ವೇಳೆ ನಾವು ಹೆಮ್ಮಕ್ಕೊ ಎಲ್ಲಿಂದ ಬಂದವು ಹೇಳ್ತ ಒಂದು ನಕ್ಷೆ ಮಾಡಿರೆ ಹೇಂಗಿಕ್ಕು?
    ***
    [ಒಂದು ಮನೆಲಿ ಬೆಳಗಿ ಇನ್ನೊಂದು ಮನೆಯ ಬೆಳಗುಸುತ್ತ ಕಾರ್ಯ ಅಂದಿಂದ ಇಂದಿನ ಒರೆಂಗೆ, ಮುಂದಂಗೆ – ಎಂದೆಂದಿಂಗೂ ಶ್ರದ್ದೇಲಿ ಮಾಡ್ತ ನಮ್ಮ ಹೆಮ್ಮಕ್ಕಳ ಗ್ರೇಶಿ ಒಪ್ಪಣ್ಣಂಗೆ ಅಭಿಮಾನ ಬಂತು!]
    ಒಪ್ಪಣ್ಣನ ಈ ’ಅಭಿಮಾನದ’ ಮಾತಿಂಗೆ ಎಲ್ಲರದ್ದೂ ಸಹಮತ ಇಕ್ಕು ಹೇಳಿ ಎನ್ನ ಅಭಿಪ್ರಾಯ.
    ***
    ಒಂದೊಪ್ಪ
    [ನಾಕು ಶ್ಲೋಕದ ಅರ್ತ ಗೊಂತಿದ್ದರೆ ಸಾಲ, ಅದರ ಅನುಭವಿಸಲೂ ಅರಡಿಯೇಕು]- ಜೀವನಲ್ಲಿ ಇದರ ಅನುಭವಿಸಿದವನೇ ಶ್ರೇಷ್ಠ.

  10. ಎಳ್ಯಡ್ಕ ಮಹೇಶನ ಸಟ್ಟುಮುಡಿ ದಿನ ಒಪ್ಪಣ್ಣನ ಈ ಲೇಖನ ತುಂಬಾ ಸಾಂದರ್ಭಿಕ.
    ಕೂಸು ಹುಟ್ಟಿ ಅಪ್ಪಗಳೇ ಮುಂದೊಂದು ದಿನ ಈ ಕೂಸು ಇನ್ನೊಂದು ಮನೆ ಬೆಳಗುವ ದೀಪ ಹೇಳಿ ಅಪ್ಪ ಅಮ್ಮಂಗೆ ಗೊಂತಿದ್ದರೂ, ಮಗಳ ಮದುವೆ ಮಾಡಿ ಕಳುಸುವಾಗಿನ ಭಾವನೆಗಳ ಶಬ್ದಲ್ಲಿ ವಿವರ್ಸಲೆ ಕಷ್ಟವೇ ಸೈ. ಅದು ಹೃದಯದ ಭಾಷೆ.
    [ಹೆಣ್ಣೊಪ್ಪುಸುತ್ತ ಕಾರ್ಯವ ಮಾಣಿಯ ಕಡೆಯೋರು ಮಾಂತ್ರ ಸರಿ ನೋಡುದು, ಕೂಸಿನ ಕಡೆಯೋರಿಂಗೆ ಕಣ್ಣು ಮಂಜಾಗಿ ಸರಿ ನೋಡ್ಳೇ ಎಡಿಯ]-ಮಗಳ ಮದುವೆಲಿ ಇದು ಎನ್ನ ಅನುಭವ ಕೂಡಾ.

  11. ಹದಿನೈದು ವರುಷ ಮದಲು ಮದುವೆ ಕಳುದು ಸಟ್ಟು ಮುಡಿ ದಿಬ್ಬಣ ಹೆರಡುವಗ,ಅಬ್ಬೆಯೂ ಮಗಳೂ ಕಣ್ಣು ನೀರು ಹಾಕಿದ ದೃಶ್ಯ ಮತ್ತೆ ಕಣ್ಣ ಮುಂದೆ ಬಂತು. ದಾಗುಟ್ರಕ್ಕನ ಒಪ್ಪ ನೋಡಿ ಭಾವನೆಗಳೂ ಮನಸ್ಸಿಂಗೆ ತಟ್ಟಿತ್ತು.ಧನ್ಯವಾದ ಒಪ್ಪಣ್ಣ,ಶಕುಂತಲೆಯ ವಿವರಣೆಯೊಟ್ಟಿ೦ಗೆ ನಿಜಜೀವನದ ಭಾವನೆಗಳ ಬೈಲಿ೦ಗೆ ತಂದದಕ್ಕೆ.

  12. ಅಪ್ಪು ಈ ಬದಲಾವಣೆ ಗೆಂಡು ಮಕ್ಕೊಗೆ ಸಾದ್ಯ ಇಲ್ಲೆ..ವಿವಿದ ರೂಪಲ್ಲಿ ಕುಟುಂಬವ ನಡೆಸುದು ಹೆಮ್ಮಕ್ಕೊಗೆ ಸಾದ್ಯ.ಅಜ್ಜಿ ಸತ್ತರೆ ಅಜ್ಜ ಸತ್ತಹಾಂಗೆ.ಅಜ್ಜ ಸತ್ತರೆ ಅಜ್ಜಿಯೆ ಮನೆ ನಡೆಶುತ್ತು.ಇದು ಪ್ರಕ್ರಿತಿ ಹೆಮ್ಮಕ್ಕೊಗೆ ಕೊಟ್ಟ ಶಕ್ತಿ….. ಲೇಖನ ಬಾರೀ ಲಾಯಿಕ ಆಇದು..ಒಂದು ದೊಡ್ದ ಒಪ್ಪ.

  13. ಓ.. ಅಂದ? ಸಂಜೀವ ಶೆಟ್ರೆನ ಅಂಗಡಿಡು ತೊಟ್ಟೆಲಾ ತಿಕ್ಯೇರ ಸುರು ಅಂಡ?
    ತೊಟ್ಟೆ ಪಣ್ನಾಗ ನೆಂಪಾಂಡ್, ಈರು ಇತ್ತೆ ಪುಲ್ಯ ಕಾಂಡೆ ಲಕ್ಕುದ್ ಬಲಿಪುನೆ ಉಂತಾಯರ? ಯಾನ್ ತೊಟ್ಟೆಗ್ ಪೋನಾಗ ತೋಜ್ಯಾರ್…

  14. ಹಾಂಗಾಗಿಯೇ ಎನ್ನ ಹಾಂಗಿಪ್ಪವು ಹೆಮ್ಮಕ್ಕೊಗೆ ಹೆಚ್ಚು ಮರ್ಯಾದಿ ಕೊಡುದು.ಈ ಬದಲಾವಣೆ ಗೆಂಡು ಮಕ್ಕೊಗೆ ಸಾಧ್ಯ ಇಲ್ಲೆ.ಹಾಂಗೇ ಆ ನಮುನೆ ಪ್ರೀತಿಲಿ ಗೆಂಡನ ಮನೆಯವ್ರ ಹಾಂಗೂ ಮತ್ತೆ ಮಕ್ಕಳ ನೋಡಿಯೊಂಬದು ಕೂಸುಗೊ/ಹೆಮ್ಮಕ್ಕೊಗೆ ಮಾಂತ್ರ ಸಾಧ್ಯ.

  15. ಒಪ್ಪಣ್ಣ ಸರಿಯಾದ ಮಾತು ಹೇಳಿದ್ದೆ..ಒಂದು ಕೂಸಿಂಗೆ ಮದುವೆ ಆಗಿ ಇನ್ನೊಂದು ಮನೆಗೆ ಹೋಪಗ ಅಪ್ಪ ಅಂಜಿಕೆ,ಹೆದರಿಕೆ ಅನುಭವಿಸಿಯೇ ಗೊಂತಾಯೆಕ್ಕಷ್ಟೇ.. ಮದುವೆ ಆಗಿ ಹೋಪ ಮನೆಯವರ ಕ್ರಮ ಹೇಂಗೋ ಎಂತದೋ ಹೇಳಿ ತುಂಬಾ ಹೆದರಿಕೆ ಇರ್ತು..ಅದರ ಮೇಲೆ ಎನ್ನಂದ ಎಂತ ತಪ್ಪು ಅಪ್ಪಲಾಗ ಹೇಳಿ ಜಾಗ್ರತೆ.. ಅಪ್ಪನ ಮನೆಲಿ ಎಂತ ತಪ್ಪಾದರೂ ಸಣ್ಣ ಕೂಸು,ಎಂತದೋ ತಪ್ಪಾತು ಹೇಳುಲೆ ಅಪ್ಪ-ಅಮ್ಮ ಇರ್ತವು ಬೆಂಗಾವಲಾಗಿ.. ಆದರೆ ಅದೇ ಕೂಸು ಮದುವೆ ಆದ ಮರುದಿನಂದಲೇ ಸಣ್ಣ ಕೂಸು ಹೋಗಿ ಹೆಮ್ಮಕ್ಕೊ ಹೇಳ್ಸಿಗೊಳ್ತು,ಅಷ್ಟಪ್ಪಗ ತಪ್ಪು ಮಾಡ್ಲೆ ಯಾವ ಅವಕಾಶವೂ ಇಲ್ಲೆ..ಒಂದೇ ದಿನಲ್ಲಿ ಆ ಪ್ರೌಢತೆ ಬರೆಕ್ಕು ಕೂಸುಗೊಕ್ಕೆ..
    ಇಷ್ಟರವರೆಗೆ ಎನ್ನ ಮನೆ ಹೇಳಿಗೊಂಡಿದ್ದ ಮನೆ ಮದುವೆ ಆದ ಕೂಡ್ಲೆ ಅಪ್ಪನ ಮನೆ ಆವುತ್ತು..ಈ ಒಂದು ವಿಷಯವ ಮನಸ್ಸಿಲಿ ಗ್ರೇಶುವಗಳೇ ಬೇಜಾರಾವುತ್ತು..ಅದು ಸಣ್ಣದಿಪ್ಪಗಂದಲೂ ಉಪಯೋಗ್ಸಿದ ಮನೆ,ಸಾಮಾನು,ಇಷ್ಟದ ಜಾಗೆಗೊ ಎಲ್ಲವನ್ನೂ ಬಿಟ್ಟು ಬರೆಡದಾ?ಹೊಸ ಮನೆಲಿ ಹಾಂಗಿಪ್ಪ ಆತ್ಮೀಯತೆ ಬಪ್ಪಲೆ ಸುಮಾರು ಸಮಯ ಬೇಕಕ್ಕು…
    ಶಕುಂತಲೆಯ ಕಥೆ ಎಲ್ಲಾ ಕೂಸುಗಳ ಕಥೆ.. ಈ ಸರ್ತಿಯಾಣ ಲೇಖನ ಕಣ್ಣಿಲಿ ನೀರು ಬರ್ಸಿತ್ತು ಅಣ್ಣಾ… ಮದುವೆ ಆಗಿ ಮನೆ ಬಿಟ್ಟು ಬಂದ ದಿನ ನೆಂಪಾತು.. 🙁
    ಮದುವೆ ನಂತರ ಜೀವನ ಎಷ್ಟೇ ಸುಖ ಸಂತೋಷಲ್ಲಿ ಇರಲಿ,ಆದರೆ ಹುಟ್ಟಿದ ಮನೆಲಿ ಸಿಕ್ಕಿದ ಆತ್ಮೀಯತೆ,ಅಪ್ಪ-ಅಮ್ಮನ ಪ್ರೀತಿ,ಅಣ್ಣ-ಅಕ್ಕಂದ್ರ ಒಡನಾಟ ಬೇರೆ ಎಲ್ಲಿಯೂ ಸಿಕ್ಕ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×