ಅದಾಗ – ಇದಾಗ, ಅಜ್ಯಕ್ಕಳ `ನಿಷೇಧಂಗಳ’ ಮರವಲಾಗ..!

ಆಟಿಲಿ ಅರೆಗ್ಗಾಲವೇ ಬಯಿಂದಿಲ್ಲೆಯೋ ಹೇದು!
ಮಳೆ ಬಿರುದತ್ತೋ ನಿಂಗಳ ಹೊಡೆಲಿ? ನವಗಂತೂ ತಲೆ ಹೆರ ಹಾಕಲೆ ಎಡೆ ಇಲ್ಲೆ; ಹಾಂಗುದೇ ಮಳೆ!
ನೋಡಿಂಡಿದ್ದ ಹಾಂಗೇ ಹಲಸ್ನಾಯಿ ನಾನಾ ಬಗೆಗೊ ಮಾಡಿ ತಿಂದೂ ಆತು; ಹಳಸುತ್ತರ ಮದಲೇ ಮುಗುಶಿಯೂ ಆತು!
ಇನ್ನೆಂತರ? ಆಟಿಲಿ ಸುಮ್ಮನೇ ಕೂದುಗೊಂಬದು.
ಕೂದುಗೊಂಡು ಪುರುಸೊತ್ತಾದರೆ ಶುದ್ದಿ ಹೇಳುದು, ಅಲ್ಲದೋ?

ಬೇರೆ ಅದರಿಂದ ಒಳ್ಳೆ ಕಾರ್ಯ ಮಾಡ್ಳಾದರೂ ಎಂತ ಇದ್ದು ಬೇಕೇ?
ಬೈಲಿಲಿ ಒಳ್ಳೆ ಜೆಂಬ್ರಂಗೊ ಮಾಡಿರೆ ಅಲ್ಲದೋ, ನವಗೂ ಒಳ್ಳೆಕಾರ್ಯ ಮಾಡ್ಳೆ ಅವಕಾಶ ಸಿಕ್ಕುತ್ತದು! 😉
ಹೇಂಗೂ, ಆಟಿಲಿ ಒಳ್ಳೆ ಜೆಂಬ್ರ ತೆಗವಲೇ ಆಗ ಹೇಳ್ತದು ನಮ್ಮ ಪರಿವಾಡಿ!
ಓ, ಹೇಳಿದಾಂಗೆ – ಅದೆಂತಕೆ ಹಾಂಗೆ? ಆಟಿಲಿ ಒಳ್ಳೆಜೆಂಬ್ರ ಮಾಡ್ಳಾಗ ಹೇಳಿಗೊಂಡು? – ಉಮ್ಮಪ್ಪ!
ಅದೆಂತಕಾದಿಕ್ಕಪ್ಪಾ – ಹೇಳಿಗೊಂಡು ಮೊನ್ನೆ ಯೋಚನೆ ಮಾಡಿಂಡಿಪ್ಪಾಗಳೇ ತಲಗೆ ಒಂದು ವಿಶಯ ಬಂದಿಕ್ಕಿತ್ತು.
ಅದೆಂತರ?
~

ಮನುಜಕುಲದ ಕೆಲವು ಸೂತ್ರಂಗಳ ಮನುಸ್ಮೃತಿಲಿ ಕಾಂಗು. ಆದರೆ ಎಷ್ಟೋ ಸೂತ್ರಂಗೊ ಕೇವಲ ಸೂಕ್ತಿರೂಪಲ್ಲಿ ತಲೆಮಾರುಗಳಲ್ಲಿ ಸಾಗಿ ಬಯಿಂದು!

ನಮ್ಮ ಸಂಸ್ಕಾರಲ್ಲಿ ಹಲವಾರು ’ಹೇಳಿಕೆ’ಗೊ ಇದ್ದು.
ಹೇಳಿಕೆ ಹೇಳಿತ್ತುಕಂಡ್ರೆ, ಜೆಂಬ್ರದ ಹೇಳಿಕೆ ಮಾಂತ್ರ ಅರಡಿಗು ನಮ್ಮ ಬೋಚಬಾವಂಗೆ! ಇದು ಆ ಹೇಳಿಕೆ ಅಲ್ಲ!
ಈ ಹೇಳಿಕೆಗೊ ಒಂದರ್ಥಲ್ಲಿ ಕಟ್ಟುಪಾಡುಗೊ; ಚೆಂದದ ಜೀವನ ನೆಡೆಶಲೆ ಇಪ್ಪ ಸೂಕ್ತಿಗೊ.
ಅಜ್ಜಿಯಕ್ಕಳ ತಲೆಮಾರಿನ ಜೀವನಲ್ಲಿ ಕಂಡುಗೊಂಡ ಸತ್ಯಂಗಳ, ದಾರಿಗಳ ಮುಂದಾಣೋರಿಂಗೂ ನೆಂಪೊಳಿಶಿ ಹೇಳ್ತ ವಾಕ್ಯಂಗೊ!

ಹ್ಮ್, ಹಾಂಗೆ ಮಾಡ್ಳಾಗ, ಅದರ ಕಿಟ್ಳಾಗ, ಇದರ ತಟ್ಳಾಗ, ಹೀಂಗೇ ಮಾಡೇಕು,ಹಾಂಗೆಯೇ ಮಾಡೇಕು – ಹೇಳಿ ಹಲವಾರು ಸೂಚನೆಗೊ ನಮ್ಮ ಮನೆಗಳಲ್ಲಿ ಹೆರಿಯೋರು ಹೇಳ್ತದರ ನಾವು ಕೇಳಿದ್ದು. ನೆಂಪಿದ್ದೋ?
ಕೆಲವಕ್ಕೆ ಸೋದಾಹರಣೆಲಿ ವಿವರಣೆ ಕೊಟ್ಟುಗೊಂಡು ಹೇಳುಗು; ಕೆಲವಕ್ಕೆ ಉದಾಹರಣೆ ಇರ, ಬರೇ ಹೇಳಿಗೊಂಡು ಹೋಕು – ಅಷ್ಟೆ.

ಅದೊಂದು ನಂಬಿಕೆಗಳ ಕಟ್ಟ. ಹಾಂಗೇ ನೆಡದರೆ ಸರಿ, ಹೊರತು – ಅದಕ್ಕೆ ತಪ್ಪಿಗೊಂಡು ಮುಂದುವರುದತ್ತು ಹೇಳಿ ಆದರೆ ಪಕ್ಕನೆ ಹೇಳಿಯೇ ಬಿಡುಗು – ಹಾಂಗೆ ಮಾಡ್ಳಾಗ! – ಹೇಳಿ.
ಹಾಂಗೆ ಮಾಡಿರೂ, ಮಾಡದ್ದರೂ ಅವಕ್ಕೇನೂ ತೊಂದರೆಇಲ್ಲೆ, ಆದರೂ ಹೇಳುಗು; ಹೇಳಿಯೇ ಹೇಳುಗು.
ಕೆಲವಕ್ಕಂತೂ – ಎಂತಕೆ ಮಾಡ್ಳಾಗ ಹೇಳ್ತರ ನಿರ್ದಿಷ್ಟ ಕಾರಣ ಅವಕ್ಕೂ ಅರಡಿಯ, ಅತವಾ ಅರಡಿಯಲೂ ಸಾಕು.
ಕಾಂಬುಅಜ್ಜಿ ಅಂತೂ ಅವರ ಜೀವನಲ್ಲಿ ಸಿಕ್ಕಿದ ಎಲ್ಲಾ ಕಿರಿಯರಿಂಗೂ ಈ ಬುದ್ಧಿವಾದಂಗಳ ಹೇಳಿಗೊಂಡಿತ್ತವು.
ಇದೇ ಕಾರಣಕ್ಕೆ ಸಣ್ಣ ಇಪ್ಪಗ ಒಪ್ಪಣ್ಣಂಗೆ ಒಂದೊಂದರಿ ’ಕಾಂಬುಅಜ್ಜಿ ಜೋರು’ ಹೇಳಿಯೂ ಅನುಸಿದ್ದದು ಇದ್ದು! 😉
~
ಹೇಳಿದಾಂಗೆ, ಈ ವಾರ ಬೈಲಿಲಿ ಅದರ ಬಗ್ಗೆಯೇ ಮಾಡಿರೆ ಹೇಂಗೆ?
ಮತ್ತೆ, ಒಂದು ವೇಳೆ ಅಜ್ಜಿಯಕ್ಕೊಗೇ ಮರದರೂ ಬೈಲಿನೋರಿಂಗೆ ಮರೆಯ – ಅಲ್ಲದೋ?! 🙂

ಇದೇ ಲೆಕ್ಕಲ್ಲಿ ಮೂರ್ಸಂದೆ ಹೊತ್ತಿಂಗೆ ಮಾಷ್ಟ್ರುಮಾವನ ಮನೆಗೆ ಹೋದೆ. ಮಾಷ್ಟ್ರಮನೆ ಅತ್ತೆಯ ಕೈಲಿ ಕೇಳುವೊ° –  ಹೇಳಿಗೊಂಡು!
ಒಪ್ಪಣ್ಣ ಎತ್ತುವ ಹೊತ್ತಿಂಗೆ ಅವು ಅವರ ಅಪ್ಪನ ಮನೆಲಿ ಆಟಿಗೆ ಕೂದು, ದುರ್ಗಾಪೂಜೆ ಉತ್ಥಾನ ಕಳಿಶಿಂಡು ಎತ್ತಿ, ಒಂದರಿಯಾಣ ಕೆಲಸ ಆಗಿ ಕೂದ್ದಟ್ಟೇ. ಒಳುದ ಸಣ್ಣಪುಟ್ಟ ಕೆಲಸಂಗಳ ಮಾಡ್ಳೆ ಹೇಂಗೂ ಮಾ.ಮ.ಮಗಳು ಇದ್ದನ್ನೇ! 🙂
ಅಂತೂ, ಇವು ಕಾಲುನೀಡಿ ಕೂದೊಂಡು ಶುದ್ದಿ ಮಾತಾಡಿಗೊಂಡು ಹೋಪಗ – ಈ ಸಂಗತಿಯನ್ನೂ ಹೇಳಿದೆ.
ಕಾಂಬುಅಜ್ಜಿ ಹೇಳಿಗೊಂಡಿದ್ದದರಿಂದ ಹಿಡುದು – ಈಗ ಬಂಡಾಡಿ ಅಜ್ಜಿ ಹೇಳ್ತಲ್ಲಿ ಒರೆಗಾಣ ದೊಡ್ಡ ಸಂಗ್ರಹ ಮಾಡ್ತ ಬಗ್ಗೆ ಹೇಳಿದೆ.
‘ಒಪ್ಪಣ್ಣಂಗೆ ಮರುಳು’ ಗ್ರೇಶಿಗೊಂಡವೋ ಏನೋ – ಒಂದರಿ ನೆಗೆಮಾಡಿದವು!
ಅಂತೂ ದೊಡ್ಡ ಪಟ್ಟಿಯೇ ಸುರು ಆತು. ಎಡೆಡೆಲಿ ಅವಕ್ಕೆ ಅರಡಿಗಾದ್ಸರನ್ನೂ ಸೇರುಸಿಗೊಂಡವು.
ಮಾಷ್ಟ್ರುಮಾವ° ನೀರಡಕ್ಕೆ ಕೆರಸಿಗೊಂಡು ಒಂದೊಂದೇ ನೆಂಪುಮಾಡಿ ಕೊಟ್ಟುಗೊಂಡಿತ್ತಿದ್ದವು.
~

ಪಟ್ಟಿ ಬೆಳದ ಹಾಂಗೇ ನವಗೆ ಅದರ ನೆಂಪುಮಡಿಕ್ಕೊಂಬಲೆ ಕಷ್ಟ ಆದ ಕಾರಣ ಆ  ಕ್ರಮಂಗಳ ಬೇರೆಬೇರೆ ರೀತಿಲಿ ವಿಂಗಡಣೆ ಮಾಡಿ ನೆಂಪುಮಡಿಕ್ಕೊಂಡತ್ತು ನಾವು.
ಅದು  ಹೇಂಗೆ ಹೇಳಿತ್ತುಕಂಡ್ರೆ:

ನೆಡವಳಿಕೆ:
ಹಲವಾರು ಅಂಶಂಗೊ ನಮ್ಮ ನಡವಳಿಕೆಗೆ ಸಮ್ಮಂದ ಪಟ್ಟ ಹಾಂಗೆ ಇದ್ದು:

 • ಎರಡು ಕೈಲಿ ತಲೆ ತೊರುಸುಲಾಗ! ಎಂತಾರು ಯೋಚನೆ ಮಾಡ್ತ ಸಂದರ್ಭಲ್ಲಿ ಹೀಂಗೆ ಮಾಡಿರೆ ಪಕ್ಕನೆ ಹೆರಿಯೋರು ಬೈಗು!
  ಹಾಂಗೇ  – ತಲೆಮೇಲೆ ಕೈ ಮಡಿಕ್ಕೊಂಬಲಾಗ ಹೇಳುಗು.
 • ತಲೆಕಸವು ಬಿಕ್ಕಿ ಹಾಕಿಗೊಂಡಿಪ್ಪಲಾಗ, ಚೆಂದಲ್ಲಿ ಬಾಚಣಿಗೆ ಮುಟ್ಟುಸಿ ಮನಾರ ಮಾಡಿ ಬಡುಗಿರೇಕು – ಹೇಳ್ತದು ಉದ್ದೇಶ. ಬೌಶ್ಷ ತಿತಿದಿನ (ಅಪರ ಕಾರ್ಯದ ದಿನ) ತಲೆಬಾಚದ್ದೆ ಇರೆಕ್ಕಪ್ಪ ಕಾರಣವೇ ಆಯಿಕ್ಕು ಹೇಳಿದವು ಮಾಷ್ಟ್ರುಮಾವ°.!
  ಕೂಸುಗೊ ಅಂತೂ, ತಲೆಕಸವಿನ ಒಂದು ಜೊಟ್ಟಾದರೂ ಕಟ್ಟೇಕು!
  – ಬೆಂಗುಳೂರಿಲಿ ಶುಬತ್ತೆ ಪಾರ್ಟಿಗೊಕ್ಕೆಲ್ಲ ಹೋಪಾಗ ತಲೆಕಸವಿನ ಬಿಕ್ಕಿಗೊಂಡೇ ಹೋಕು.
  ಪೇಟೆಲಿ ಅದುವೇ ಪೇಶನು ಅಡ, ಅಪ್ಪೋ? ಉಮ್ಮಪ್ಪ!
 • ಮಂಚಲ್ಲಿಯೋ, ಕುರ್ಚಿಲಿಯೋ ಮಣ್ಣ ಕೂದುಗೊಂಡು ಕಾಲು ಆಡುಸಲಾಗ.
  ಮಗ° ಹೀಂಗೆ ಕಾಲು ಆಡುಸಿರೆ, ಅಪ್ಪಂಗೆ ಜೀವನಲ್ಲಿ ಸಾಲ ಆವುತ್ತು – ಹೇಳಿ ಅಜ್ಯಕ್ಕೊ ಹೆದರುಸುಗು.
 • ಕಾಲು ತೊಳವಾಗ ಹಿಂಗಾಲು ಒಣಕ್ಕಿಪ್ಪಲಾಗ.
  ಹೇಳಿತ್ತುಕಂಡ್ರೆ, ಕಾಲಿನ ಮುಂದಾಣ ಹೊಡೆಂಗೆ ಮಾತ್ರ ಆಗಿ ನೀರು ಹಾಕುಲಾಗ – ಹಿಮ್ಮಡಿದೆ ಚೆಂಡಿ ಆಯೆಕ್ಕು
  ಅಲ್ಲದ್ದರೆ, ಆ ಒಣಕ್ಕಿನ ಜಾಗೆಲೆ ಆಗಿ ಶೆನಿ ಹತ್ತಿಗೊಂಡು ಬತ್ತನಾಡ ನಮ್ಮ ಮೇಲಂಗೆ!
  ಉಮ್ಮ, ದಾರಿಕುರೆ ಸರೀ ಹೋಯೇಕು ಹೇಳ್ತ ಉದ್ದೇಶಲ್ಲಿ ಹೀಂಗೆ ಮಾಡಿದ್ದವೋ – ಎಂತ್ಸೋ!.
 • ಮೂರ್ಸಂದೆ ಹೊತ್ತಿಂಗೆ ಮನುಗುಲಾಗ, ಓದುಲಾಗ, ಉಂಬಲಾಗ, ತಿಂಬಲಾಗ!
  ಅದೊಂದು ಸಂಧ್ಯಾಕಾಲ ಆದ ಕಾರಣ – ಅಂತರ್ಮುಖಿ ಆಗಿದ್ದೊಂಡು ದೇವರ ಸ್ಮರಣೆ ಮಾಡೇಕು ಹೇಳ್ತ ಉದ್ದೇಶಲ್ಲಿ ಹೀಂಗೆ ಬಂದ್ಸೋ – ಎಂತ್ಸೊ! ಅಲ್ಲದೋ?
 • ಮುತ್ತೈದೆ ಹೆಮ್ಮಕ್ಕೊ ಬೊಟ್ಟು ಹಾಕದ್ದೆ ಇಪ್ಪಲಾಗ.
  ವಿಶೇಷವಾಗಿ ದೇವರದೀಪ ಹೊತ್ತುಸುವಗ ಇತ್ಯಾದಿ  – ಪಾತಿ ಅತ್ತೆ ಎರಡೆರಡು ಸರ್ತಿ ಕಣ್ಣಾಟಿ ನೋಡಿಕ್ಕಿ ಬಕ್ಕು, ಬೊಟ್ಟು ಸರಿ ಇದ್ದನ್ನೇ ಹೇಳಿಗೊಂಡು!
 • ಕನ್ನಟಿ ಹೇಳುವಗ ನೆಂಪಾತು, ಒಡದ ಕನ್ನಟಿ ನೋಡ್ಳಾಗ.
  ನಮ್ಮ ಮನಸ್ಸುದೇ ಒಡಗು ಹೇಳ್ತ ಹೆದರಿಕೆಯೋ ಎಂತ್ಸೋ!
 • ಒಡದ ಬಳೆ ಹಾಕಲಾಗ – ಹೇಳ್ತದು ಇನ್ನೊಂದು ನಿಯಮ.
  ಹಾಕುತ್ತ ಆಭರಣಂಗೊ ಕಮ್ಮಿ ಆದರೂ, ಎಲ್ಲವೂ ಪರಿಪೂರ್ಣ ಇರೇಕು – ಹೇಳ್ತ ಕಾರಣವೋ ಏನೋ!
 • ಇರುಳು ಉಗುರು ತೆಗವಲಾಗ; ತೆಗದ ಉಗುರಿನ ಹನಿಕ್ಕದ ಎದುರಂಗೆ ಇಡ್ಕಲಾಗ!
  ಮನೆಂದ ದೂರ ಇಡ್ಕೇಕು.
  ಹತ್ತರೆಯೇ ಇಡ್ಕಿರೆ ಅದು ಮನೆಗೇ ಮಾಟ – ಹೇಳಿ ಹೆದರುಸುಗು ಅಜ್ಯಕ್ಕೊ!
  ಹೇಳಿದಾಂಗೆ, ಉಗುರು ಕಚ್ಚುಲಾಗ, ಉಗುರು ತುಂಡು ತಿಂದುಹೋತಿಕ್ಕಲಾಗ – ಹೇಳ್ತದು ಕಟ್ಟುಪಾಡು.
 • ಬಿದ್ದ ಹಲ್ಲಿನ ಜಾಲಿಂಗೆ ಇಡ್ಕಲಾಗ!
  ಆ ಹಲ್ಲಿನ ಮಾಡಿಂಗೇ ಇಡ್ಕೇಕು ಹೇಳುಗು ಬಂಡಾಡಿ ಅಜ್ಜಿ!
 • ಬಂಡಾರಿಕೊಟ್ಟಗೆಲಿ ಕುಚ್ಚಿತೆಗೆಶಿಕ್ಕಿ ಮೀಯದ್ದೆ ಎಂತದೂ ಮುಟ್ಳಾಗ.
  ಮೈಲಿ ಇಡೀ ಇಪ್ಪ ತಲೆಕಸವಿನ ತುಂಡುಗೊ ಊರಿಡೀ ಬಿಕ್ಕದ್ದ ಹಾಂಗೆ ಈ ಕ್ರಮ ಬಂದದಾಯಿಕ್ಕು.
 • ತಲಗೆ ಎಣ್ಣೆ ಕಿಟ್ಟಿದ ಕೂಡ್ಳೇ ಮೀವಲಾಗ.
  ತಿತಿದಿನ ಎಣ್ಣೆಕೊಟ್ಟ ತಕ್ಷಣ ಮೀಯಲೆ ಹೇಳ್ತವಲ್ಲದೋ –  ಹಾಂಗೆ ಈ ಕ್ರಮ ಬಂದದೋ ಏನೋ – ಹೇಳಿಗೊಂಡವು ಮಾಷ್ಟ್ರುಮಾವ°.
 • ಉಂಡ ಕೈ ಒಣಗುಸುಲಾಗ – ಹೇಳ್ತದು ಇನ್ನೊಂದು ವಿಶಯ!
  ಉಂಡಾದ ಮತ್ತೆಯೂ ಉಂಬಲೆ ಕೂದಲ್ಲೇ ಕೂದುಗೊಂಡು, ಏನಾರು ಲೊಟ್ಟೆಪಟ್ಟಾಂಗ ಹಾಕಿ ಹೊತ್ತು ಕಳವಲೆ ಸುರುಮಾಡಿರೆ ಹೀಂಗೆ ಬೈಗು!
 • ಉಂಬಲೆ ಕೂದಿಪ್ಪಗ – ಎಡಕ್ಕಿಲಿ ಒಂದರಿ ಎದ್ದು, ಕೈತೊಳದು –ಪುನಾ ಉಂಬಲೆ ಕೂದಿಕ್ಕಲಾಗ!
  ಒಬ್ಬನ ಊಟ ಎಲ್ಲಿ, ಎಷ್ಟು ಹೇಳ್ತರ ಚಿತ್ರಗುಪ್ತ ಬರಕ್ಕೊಳ್ತನಾಡ. ನಾವು ಹೀಂಗೆ ಎರಡೆರಡು ಊಟವ ಒಂದೇ ಬಾಳೆಲಿ ಮಾಡಿರೆ ಚಿತ್ರಗುಪ್ತಂಗೆ ಕನುಪ್ಯೂಸು ಆವುತ್ತೋ ಏನೋ! ಉಮ್ಮಪ್ಪ!
 • ಮನೆಂದ ಹೆರಡುವಗ ಕಾಲು ತೊಳಕ್ಕೊಂಡು ಹೋಪಲಾಗ.
  ಇದು ನಮ್ಮ ಮನೆಲೇ ಆಯಿಕ್ಕು, ಬೇರೆವರ ಮನೆಂದಲೇ ಆಗಿಕ್ಕು – ಹೆರಡುವಗ ಕಾಲು ತೊಳಕ್ಕೊಂಡತ್ತುಕಂಡ್ರೆ, ಮನೆಯನ್ನೂ ತೊಳದ ಹಾಂಗೆ  – ಎಲ್ಲವೂ ಹರಹರ ಅಕ್ಕು, ಹೇಳುಗು ಮದಲಿಂಗೆ.
 • ಉಡುಗುವಾಗ ಹಿಡಿಸುಡಿಯ ಬೇರೆಯವರ ಕಾಲಿಂಗೆ ಮುಟ್ಸುಲಾಗ.
  ಹಿಡಿಸುಡಿ ಕಿಟ್ಟೆಡಾ, ಮೀಸೆಬತ್ತಿಲ್ಲೆ – ಹೇಳಿ ಎಳೆಮಕ್ಕೊಗೆ ಹೆದರುಸುಗು, ಅಲ್ಲದೋ? 😉
 • ದೇವರಿಂಗೆ ಮಡುಗುಲಿಪ್ಪ ಹೂಗಿನ ಮೂಸುಲಾಗ.
  ಒಂದರಿ ಮೂಸಿರೆ ಅದು ’ಪ್ರಸಾದ’ ಹೇಳಿ ಆತು. ಹಾಂಗಾಗಿ, ಮೂಸದ್ದೇ ದೇವರಿಂಗೆ ಸಮರ್ಪಣೆ ಮಾಡೇಕು.
  ಈಗಾಣ ಬಾಯಮ್ಮನ ಮಲ್ಲಿಗೆ ಮಾಲೆಗಳ ಅದು ಬಳ್ಳಿ ತುಂಡುಸುವ ನೆಪಲ್ಲಿ ಬಾಯಿ ಹಾಕಿ ಕಚ್ಚುತ್ತದರ  ಕಂಡ ಮಿಂಚಿನಡ್ಕಬಾವ° ಹೇಳ್ತವು – ಬಾಯಮ್ಮ ನಕ್ಕಿದ ಹೂಗು – ಹೇಳಿಗೊಂಡು!!
  ಹಾಂಗೆಯೇ, ನಿನ್ನೇಣ ಹೂಗಿನ ಇಂದು ಹಾಕಲಾಗ.
 • ಯೇವದಾರು ತಿಂತ ವಸ್ತು ಇದ್ದರೆ ಕಚ್ಚಿ ತಿಂಬಲಾಗ – ಹೇಳುಗು.
  ಬಾಳೆಹಣ್ಣೋ, ಮಾಯಿನಣ್ಣೋ ಮತ್ತೊ ಇದ್ದರೆ, ಕಚ್ಚಿ ಕಚ್ಚಿ ತಿಂತ ಪುಳ್ಯಕ್ಕಳ ಕಂಡ್ರೆ ಅಜ್ಜಿ ಪರಂಚುಗು  – ತುಂಡುಸಿ ತಿನ್ನೋ – ಹೇಳಿಗೊಂಡು!
 • ಊಟದ ಬಾಳಗೆ ನೀರು ಅಂತೊಂಬಲಾಗ ಹೇಳ್ತ ಸಂಗತಿ ಗೊಂತಿದ್ದೋ?
  ಕೆಲವು ಸರ್ತಿ ಅಶನಕ್ಕೆ ಬಳುಸಿದ ಮಜ್ಜಿಗೆ ಬಯಂಕರ ಹುಳಿ ಆದರೆ ಬಟ್ಯ ಅರ್ದ ಗ್ಲಾಸು ನೀರು ಎರಕ್ಕೊಂಗು.
  ನಾವು ಹಾಂಗೆ ಮಾಡಿಕ್ಕಲೆ ಗೊಂತಿಲ್ಲೆ ಇದಾ!
  (ಬಾಳಗೆ ನೀರು ಹಾಕಲಾಗ- ಹೇಳಿದ್ದಕ್ಕೆ ಬೋಚಬಾವನ ತೋಟದ ಬಾಳೆಗೆಡುಗೊ ಕಳುದೊರಿಶ ಒಯಿಶಾಕಲ್ಲಿ ಒಣಗಿದ್ದಾಡ!)
 • ಹನಿಕ್ಕಲ್ಲಿ ತಲೆಬಾಚಲಾಗ ಹೇಳ್ತವು ಅಜ್ಯಕ್ಕೊ.
  ಹನಿಕ್ಕ – ಹೇಳಿತ್ತುಕಂಡ್ರೆ ಎಂತರ ಗೊಂತಿದ್ದನ್ನೇ? ಜೋರು ಗಾಳಿಮಳೆಗೆ ಹನಿ ಬಡಿವಲೆ ಸಾಧ್ಯ ಇಪ್ಪ ಮನೆಯ ಜೆಗಿಲಿ ಹೆರಾಣ ಭಾಗ! ಅಲ್ಲಿ ನಿಂದೊಂಡು ತಲೆಬಾಚಲಾಗ ಹೇಳ್ತದು ಹೇಳಿಕೆ.
 • ನೆಡು ಇರುಳು ಕಳುದು ಉಂಬಲಾಗ ಹೇಳ್ತವು.
  ಬೂತ, ಪ್ರೇತಂಗೊ ಉಂಬ ಹೊತ್ತು ಅಡ ಅದು. ನಮ್ಮ ಊಟ ಏನಿದ್ದರೂ ಅದರಿಂದ ಮದಲೇ ಮುಗುಶಿಗೊಳೆಕ್ಕು – ಹೇಳ್ತವು. ದೊಡ್ಡಜ್ಜನಲ್ಲಿ ತ್ರಿಕಾಲಪೂಜೆ ದಿನ ಊಟ ತಡವಪ್ಪಗ ಈ ವಿಶಯ ನೆಂಪಪ್ಪಲಿದ್ದು ಒಂದೊಂದರಿ! 😉
 • ಕೆರಮಣೆಲಿ, ಕಡವಕಲ್ಲಿಲಿ, ತಲೆಕೊಂಬಿಲಿ – ಕೂಪಲಾಗ.
  ಅಪ್ಪು, ಕೆರಮಣೆಲಿ ಕೆರವಗ ಕೂಪಲಕ್ಕು, ಆದರೆ ಅಂತೇ – ಊಟಕ್ಕೋ ಮಣ್ಣ ಕೂರ್ತರೆ ಕೂಬ ಹಾಂಗೆ ಇಲ್ಲೆ.
  ಕಡವಕಲ್ಲಿಲಿ ಕೂದರೆ ದೇಹದೊಡ್ಡ ಆವುತ್ತು ಹೇಳಿ ನೆಗೆಮಾಣಿಯ ಹೆದರುಸಿದ್ದಕ್ಕೆ ಈಗ ಕೂರು ಹೇಳಿರೂ ಕೊರ್ತನಿಲ್ಲೆ ಅವ°! 😉

ನಿತ್ಯ ಜೀವನ:
ನಿಷೇಧಂಗಳಲ್ಲಿ ಸುಮಾರು ಅಂಶಂಗೊ ನಮ್ಮ ನಿತ್ಯ ಜೀವನಕ್ಕೆ ಸಮ್ಮಂದಪಟ್ಟದು:

 • ಕಾಲಿ ತೊಟ್ಳಿನ ತೂಗುಲಾಗ! ತೊಟ್ಳಿನೊಳ ಬಾಬೆ ಇದ್ದರೆ ಮಾಂತ್ರ ತೂಗೇಕು.
  ಅಷ್ಟೇ ಅಲ್ಲದ್ದೆ, ತೊಟ್ಳಿಂಗೆ ಕಾಲು ಮಡುಗುಲಾಗ; ತೊಟ್ಳಿಲಿ ನಿಂಬಲಾಗ. ತೊಟ್ಳಿನ ಕಾವ ದೇವತೆಯ ಅಂಶಕ್ಕೆ ಗೌರವ ಕೊಡ್ತ ಉದ್ದೇಶ ಇದರ ಹಿಂದೆ ಇದ್ದಿಕ್ಕಲ್ಲದೋ?
 • ಮನೆಲಿ ಕಂಚಿನ ವಸ್ತುಗೊ ಕೈ ತಪ್ಪಿಯೂ ಒಡವಲಾಗ. ಒಡದರೆ ಅದು ಮನೆಗೆ ಅನಿಷ್ಟ ಹೇಳ್ತದು ನಂಬಿಕೆ.
 • ಒಡದ ಕಾಯಿಗಡಿಯ ಜೋಡುಸಲಾಗ ಹೇಳುಗು ಮದಲಿಂಗೆ.
  ಬೌಶ್ಶ ಅಪರಕಾರ್ಯ ಆರಂಭದ ದಹನದ ದಿನಕ್ಕೆ ಹೀಂಗೆ ಉದ್ದೇಶಪೂರ್ವಕ ಜೋಡುಸಲಿದ್ದು. ಆ ಕಾರಣಲ್ಲಿಯೋ ಏನೋ!
 • ತೆಂಕ ಮೋರೆ ಮಾಡಿಗೊಂಡು ಕೂಪಲಾಗ!
  ಅದು ಉಂಬಲೇ ಆಗಲಿ, ಮೆಟ್ಟುಕತ್ತಿಲಿ ಕೊರವಲೇ ಆಗಲಿ, ಮಂತ್ರ ಹೇಳುಲೇ ಆಗಲಿ, ಜೆಪಕ್ಕೇ ಆಗಲಿ – ತೆಂಕಮೋರೆ ನಿಷಿದ್ಧ!
  ಮಂತ್ರಪಠಣ ಕಾಲಲ್ಲಿ ಅಭಿಮುಖ ಆದರೆ ಅಕ್ಕು ಹೇಳುಗು ಬಟ್ಟಮಾವ°. ಅಭಿಮುಖ ಹೇಳಿತ್ತುಕಂಡ್ರೆ, ಎದುರಾಎದುರು ಕೂದುಗೊಂಬ ಪ್ರಮೇಯ!
 • ತೆಂಕಬಡಗ ಆಗಿ ಸೌದಿ ಓಶಲಾಗ!
  ದಹನದ ಕಾಷ್ಟಕ್ಕೆ ಇದೇ ದಿಕ್ಕಿಲಿ ಓಶುತ್ತ ಕಾರಣ ನಿತ್ಯಜೀವನಲ್ಲಿ ಈ ನಿಷೇಧ ಇಪ್ಪದಾಯಿಕ್ಕು.
 • ಮೂರು ಒಲೆ ಹಾಕಲಾಗ ಅಡ.
  ಒಂದು ಒಲೆ ಅಕ್ಕು, ಅತವಾ ಒಂದರಿಂದ ಹೆಚ್ಚಿನ ಯೇವದೇ ಸಮಸಂಕ್ಯೆ ಅಕ್ಕು (ಎರಡು, ನಾಕು, ಆರು…).
  ಆದರೆ ಮೂರು ಒಲೆ ಆಗಿ ಹಾಕಲೇ ಆಗ ಅಡ.
 • ಹಾಲಿಂಗೆ ಉಪ್ಪು ಹಾಕಿ ಉಂಬಲಾಗ ಅಡ!
  ಮಜ್ಜಿಗೆಗೆ ಆದರೆ ಉಪ್ಪು ಹಾಕುತ್ತವು, ಆದರೆ ಹಾಲಿಂಗೆ ಉಪ್ಪು ಹಾಕುತ್ತ ಮರಿಯಾದಿ ಇಲ್ಲೆ!
 • ಜೇನು-ತುಪ್ಪ ಸಮಪ್ರಮಾಣಲ್ಲಿ ಕಲಸಲೆ ಆಗ!
  ಎರಡುದೇ ಒಂದೇ ಪ್ರಮಾಣಲ್ಲಿ ಹಾಕಿ ಕಲಸಿರೆ ಅದು ವಿಷಕ್ಕೆ ಸಮಾನ ಹೇಳುಗು ಚೌಕ್ಕಾರುಮಾವ°.
  ಆದ ಕಾರಣ ಚೂರ್ಣ ಇತ್ಯಾದಿ ಕಲಸುವಗ ಯೇವದಾರು ಒಂದರ ರಜ ಜಾಸ್ತಿಯೇ ಹಾಕುತ್ಸು!
 • ಮಧ್ಯಾಂತಿರುಗಿ ತೊಳಶಿ ಕೊಯಿವಲಾಗ ಹೇಳ್ತದು ಒಂದು ವಾಡಿಕೆ.
  ಅತಿಮೀರಿ ಅಗತ್ಯ ಕಂಡ್ರೆ ಗೆಂಡುಮಕ್ಕೊ ಕೊಯಿದಿಕ್ಕಲಕ್ಕು ಆದರೆ, ವಿಶೇಷವಾಗಿ ಹೆಮ್ಮಕ್ಕೊ ಕೊಯಿವಲೇ ಆಗ!
 • ಮಧ್ಯಾಂತಿರುಗಿ ಮಜ್ಜಿಗೆ ಕಡವಲಾಗ ಮತ್ತೆ ಆರಿಂಗಾರು ಕೊಡ್ಳೂ ಆಗ.
  ಒಂದುವೇಳೆ ಕೊಡ್ತರೆ, ಒಂದು ಕಲ್ಲು ಉಪ್ಪೋ, ಒಂದು ಇಡಿಮೆಣಸೋ ಮಣ್ಣ ಹಾಕಿ ಕೊಡೆಕ್ಕು.
 • ಹಿಡಿಸುಡಿಯ ಕುತ್ತಕಂಡೆ ಮಡುಗಲಾಗ.
  ಅದರ ಕಡೆ ನೆಲಕ್ಕಲ್ಲಿ ನಿಂದು, ಕಡ್ಡಿಗಳ ಪೂರ ಅರಳುಸಿ ಮಡಗಿರೆ ಮನೆಲಿ ಕೆಟ್ಟ ದಿನಂಗಳೂ ಅರಳ್ತಾಡ!
 • ಇರುಳು ಕೂಕಿಲು ಹಾಕುಲಾಗ ಹೇಳಿ ಪಾತಿಅತ್ತೆ ವಿನುವಿನ ಬೈಗು.
  ಇರುಳು ಬಿಗಿಲು ಹಾಕಿರೆ ಕೊಲೆಗೊ ಬತ್ತವು, ಅವರ ದೆನಿಗೆಳಿದ ಹಾಂಗೆ – ಹೇಳ್ತದು ವಾಡಿಕೆ.
  ಈ ಶುದ್ದಿ ಸಣ್ಣ ಇಪ್ಪಾಗ ಗೊಂತಾದ ಒಪ್ಪಣ್ಣ, ಒಂದಿನ ಇರುಳು ಉಂಡಿಕ್ಕಿ ಕೈ ತೊಳವಗ ಸಣ್ಣಕೆ ಕೂಕಿಲು ಹಾಕಿ ಓಡಿಗೊಂಡು ಮನೆಒಳ ಬಂದಿಕ್ಕಿದ್ದು ಈಗಳೂ ನೆಂಪಾವುತ್ತು! ಕೊಲೆಗೊ ಬಂದು ಹೆರ ಕಾದು ನಿಂದಿತ್ತವೋ ಏನೊ! ಉಮ್ಮಪ್ಪ!!
 • ಇರುಳು ವಸ್ತ್ರ ಒಗವಲಾಗ ಹೇಳ್ತದು ಇನ್ನೊಂದು ಬಹುಮುಖ್ಯ ಕಟ್ಟುಪಾಡು.
  ಒಂದುವೇಳೆ ಅನಿವಾರ್ಯ ಆದರೆ ಕೈಲೇ ಕುಸುಂಬಿ ಹಾಕಲಕ್ಕು, ಆದರೆ ಕಲ್ಲಿಲಿ ಬಡಬಡನೆ ಬಡುದು ಒಗದು ಆರುಸುದು ನಿಷಿದ್ಧ!
 • ಇರುಳು ಕಸವು ಉಡುಗಲಕ್ಕು, ಆದರೆ ಕಸವು ಇಡ್ಕುಲಾಗ.
  ಮದಲಾಣ ಕಾಲಲ್ಲಿ ಸೂಕ್ಷ್ಮದ ವಸ್ತುಗೊ ಕಸವಿನ ಒಟ್ಟಿಂಗೆ ಕಾಣೆ ಆಗಿ, ಕಸವು ಇಡ್ಕಿದ್ದರ್ಲಿ ಪೂರ್ತಿ ಕಾಣೆ ಆಗಿ ಹೋವುತ್ಸು ಬೇಡ ಹೇಳಿ ಹಾಂಗೆ ಮಾಡಿದ್ದಾಯಿಕ್ಕು ಅಜ್ಯಕ್ಕೊ. ಅಲ್ಲದೋ?
 • ಗ್ರಹಣದ ಸಮೆಯಲ್ಲಿ ಆಹಾರ ಉಂಬಲಾಗ ಹೇಳ್ತದು ಇಡೀ ಲೋಕಕ್ಕೇ ಗೊಂತಿದ್ದು ಈಗ.
  ಸಾಮಾನ್ಯವಾಗಿ ಗ್ರಹಣಕಾಲಂದ ಒಂದೆರಡು ಜಾವ (೧ ಜಾಮ = ಮೂರು ಗಂಟೆ) ಮೊದಲು, ಮತ್ತೆ – ಇಪ್ಪ ಅವಧಿಲೇ ಊಟ ನಿಷಿದ್ಧ – ಹೇಳ್ತದು ಒಯಿಜಯಂತಿ ಹೇಳ್ತಾಡ, ಮಾಷ್ಟ್ರುಮಾವಂಗೆ ಅರಡಿಗು.
 • ತೋಟಂದ ಬಾಳೆಗೊನೆಯ ಕಡುದು ಮನೆಗೆ ತಪ್ಪಾಗ, ಅದರ ಮೋತೆಯ ತುಂಡುಸಿ ತರೆಕ್ಕಾಡ.
  ಎರಡನ್ನೂ ಒಟ್ಟಿಂಗೇ ತಪ್ಪಲಾಗ ಹೇಳ್ತದು ಸಂಪ್ರದಾಯ.
 • ಮನೆಲಿ ಪೂಜೆ ಆಯ್ಕೊಂಡಿಪ್ಪಾಗ ಉಡುಗುಲಾಗ ಆಡ.
  ಮನೆಲಿಡೀ ಪಸರಿಸೆಂಡಿಪ್ಪ ದೈವೀಕ ಅಂಶವ ದೂಡಿದ ಫಲ ಆವುತ್ತು ಹೇಳ್ತದು ಅಜ್ಜಂದ್ರ ವಿಶ್ವಾಸ.
  ಹಾಂಗಾಗಿ, ಪೂಜೆ ಆಗಿ, ನೀರು ಮಡಗಿದ ಮತ್ತೆಯೇ ಉಡುಗಿ ಬಾಳೆ ಹಾಕುತ್ಸು ಮರಿಯಾದಿ. ಅಲ್ಲದೋ?
 • ಕೆಲವು ವಸ್ತುಗಳ ಕೈಂದ ಕೈ ಕೊಡ್ಳಾಗ.
  ಉದಾಹರಣೆಗೆ ಹೊತ್ತಿಂಡಿದ್ದ ದೀಪವ, ಕತ್ತಿ-ಪೀಶಕತ್ತಿ ಇತ್ಯಾದಿ ಆಯುಧಂಗಳ, ಹಿಡಿಸುಡಿ –ಇತ್ಯಾದಿ ವಸ್ತುಗಳ ಕೈಯಾನ ಕೈ ಪಗರುಸಲೇ ಇಲ್ಲೆ. ಒಬ್ಬ ಕೆಳ ಮಡಗಿದ್ದರ ಇನ್ನೊಬ್ಬ ತೆಕ್ಕೊಳ್ತದು ಮರಿಯಾದಿ.
  ಹಾಂಗೆ ಕೈಯಾರೆ ಕೊಟ್ರೆ ಅವರ ಹತ್ತರೆ ಜಗಳ ಆವುತ್ತು ಹೇಳ್ತದು ನಂಬಿಕೆ!
 • ಎರಡು ದೀಪ ಒಟ್ಟಿಂಗೆ ಹೊತ್ತುಸುಲಾಗ ಹೇಳ್ತವು.
  ಈಗಾಣ ಕರೆಂಟಿನ ಕಾಲಲ್ಲಿ ಈ ಮಾತು ನೆಡೆಯ, ಆದರೆ ಮದಲಿಂಗೆ ಎಣ್ಣೆ ದೀಪ ಎರಡೆರಡು ಹೊತ್ತುಸಿರೆ ಒಂದರ ನಂದುಸಲೆ ಹೇಳುಗು ಅಜ್ಜಿ!
 • ಸಣ್ಣವು ಸೂಡಿದ ಹೂಗಿನ ದೊಡ್ಡವು ಸೂಡ್ಳಾಗ – ಹೇಳಿ ಒಂದು ನಂಬಿಕೆ ಇದ್ದು, ಹೆಮ್ಮಕ್ಕಳ ವಲಯಲ್ಲಿ.
  ಹೇಳಿದಾಂಗೆ, ದೊಡ್ಡವು ಸೂಡಿದ್ದರ ಸಣ್ಣವು ಸೂಡ್ಳಕ್ಕಾಡ –ದೊಡ್ಡವರ ಪ್ರಸಾದ ಹೇಳಿ ಲೆಕ್ಕ ಆಡ ಅದು!
 • ಕೂದುಗೊಂಡಿಪ್ಪವಕ್ಕೆ ಅಥವಾ ನಿಂದುಗೊಂಡಿಪ್ಪವಕ್ಕೆ ಸುತ್ತು ಬಪ್ಪಲಾಗ ಹೇಳುಗು.
  ದೇವರಿಂಗೆ ಸುತ್ತು ಬಂದ ಹಾಂಗೆ ಮನಿಶ್ಶರಿಂಗೆ ಸುತ್ತು ಬಂದರೆ ಆಯುಷ್ಯ ಕಮ್ಮಿ ಆವುತ್ತಾಡ!
 • ಮನುಷ್ಯ-ಮನುಷ್ಯಂಗೆ ಅತ್ತಿತ್ತೆ ಮೆಟ್ಟಿಕ್ಕಲೆ ಆಗ.
  ಕಾಲಿಲಿ ಹುಳು ಅಕ್ಕು ಹೇಳಿ ಬೈಗು ಅಜ್ಯಕ್ಕೊ. ಹಾಂ!
 • ಬಾಳೆ ಎಲೆಯ ಕೀತುಕೀತು ಹರಿವಲಾಗ ಹೇಳುಗು.
  ಒಂದು ವೇಳೆ ಹರುದಿಕ್ಕಿರೆ ಸೋದರಮಾವಂಗೆ ಸಾಲ ಆವುತ್ತಾಡ.
  ಅಪ್ಪೋ? ಉಮ್ಮಪ್ಪ!!.
 • ಹಾಲು-ಮಜ್ಜಿಗೆ ಎರಡನ್ನೂ ಒಟ್ಟಿಂಗೆ ಆಗಿ ಒಬ್ಬನ ಕೈಲೇ ಕೊಡ್ಳಾಗ ಅಡ.
  ಅತವಾ, ಎರಡನ್ನೂ ಒಟ್ಟಿಂಗೇ ಆಗಿ ತೆಕ್ಕೊಂಡೂ ಹೋಪಲಾಗ ಅಡ.
 • ದನಗಳ ಬೆನ್ನು ಮುಟ್ಳಾಗ ಹೇಳುಗು ಮದಲಿಂಗೆ.
  ಹಾಂಗೆ ಮುಟ್ಟಿರೆ ದನಗಳ ಬೆಳವಣಿಗೆ ನಿಲ್ಲುತ್ತಾಡ.
 • ಎಲೆಬಳ್ಳಿ ಜಾಲಕರೆಲೇ ಇದ್ದರೂ, ಇರುಳು ಎಲೆ ಚೂಂಟುಲಾಗ ಅಡ.
  ಸುಣ್ಣದ ಅಳಗೆಂದ ಸುಣ್ಣವನ್ನೂ ತೆಗವಲಾಗ ಅಡ!! ಚೆಲ, ಇದು ಮಾಷ್ಟ್ರುಮಾವಂಗೆ ಕಷ್ಟವೇ ಅಲ್ಲದೋ –ಗ್ರೇಶಿದೆ.
  ಅಲ್ಲಡ, ಅದಕ್ಕೊಂದು ಪಿರಿ ಇದ್ದಾಡ – ಒಂದು ವೇಳೆ ಹಾಂಗೆ ಎಲೆಕೊಯ್ಯೆಕ್ಕಾಗಿ ಬಂದರೆ “ಮದುವೆಗೆ ಹೋಪಲಿದ್ದು” ಹೇಳೆಕ್ಕಡ ಬಳ್ಳಿಯ ಕೈಲಿ!! ಚೆಲ, ಈ ಅಜ್ಜಂದ್ರೇ!.
 • ಓದಿಗೊಂಡಿಪ್ಪ ಪುಸ್ತಕವ ಬಿಡುಸಿ ಮಡುಗಲಾಗ ಅಡ.
  ಹಾಂಗೆ ಬಿಡುಸಿ ಮಡಗಿರೆ ಅದರ ಕಲಿ ಓದುಗು – ಹೇಳ್ತದು ನಂಬಿಕೆ!
  ಹಾಂಗೇ, ಸರಸ್ವತೀ ರೂಪದ ಪುಸ್ತಕಲ್ಲಿ ಕೂಬಲಾಗ, ಅದಕ್ಕೆ ಮೆಟ್ಳಾಗ ಹೇಳಿ ಎಲ್ಲ ನಮ್ಮ ನಂಬಿಕೆ.
  ಶುಬತ್ತೆ ಟಿಶ್ಯೂ ಟಿಶ್ಯೂ ಹೇಳಿಗೊಂಡು ಮೋರೆಚೋಲಿ ಉದ್ದಿಗೊಂಗು ಇದೇ ಪೇಪರಿಲಿ!!
 • ಒಂದು ತೆಂಗಿನಕಾಯಿಯ ತಲೆಲಿ ಹೊತ್ತುಗೊಂಡು ಬಪ್ಪಲಾಗ ಅಡ.
  ತೆಂಗಿನಕಾಯಿ ಕಟ್ಟವನ್ನಾರೂ ಹೊತ್ತುಗೊಂಡು ಬಪ್ಪಲಕ್ಕು, ಆದರೆ ಒತ್ತೆ ಆಗಿ ಹೊತ್ತುಗೊಂಡು ಬಪ್ಪದು ಅಶಕುನ ಹೇಳ್ತದು ನಂಬಿಕೆ.
 • ಹೇಳಿದಾಂಗೆ, ಬಡಗ ತಲೆ ಹಾಕಿ ಮನುಗುಲಾಗ ಹೇಳ್ತದು ಶಾಸ್ತ್ರ ಹೇಳ್ತಡ.
  ಸಣ್ಣ ಇಪ್ಪಗ ತೊಟ್ಳಿಂದಲೇ ಈ ವೆವಸ್ತೆ ಸುರು ಆವುತ್ತು. ಮೂಡ ತಲೆ ಹಾಕಿಯೇ ಮನುಗುತ್ಸು ಹೆಚ್ಚು ಸೂಕ್ತ ಹೇಳ್ತಾಡ ಶಾಸ್ತ್ರ.
 • ಹೊಸ್ತಿಲಿಲಿ ಕೂಪಲಾಗ ಹೇಳ್ತವು ಅಜ್ಯಕ್ಕೊ.
  ವಾಸ್ತುಪುರುಷ ವಾಸ ಆಗಿ ಇಪ್ಪ ಹೊಸ್ತಿಲಿ ಕೂದು / ನಿಂದು ಮಾಡಿರೆ ಅವಂಗೆ ಕೋಪ ಬತ್ತಾಡ.
 • ಉಪ್ಪು ಸಾಲ ಕೊಡ್ಳಾಗ ಅಡ.
  ಬೇರೆ ಯೇವದೇ ವಸ್ತುವಿನ ಸಾಲಕ್ಕೆ ಕೊಂಡು ಹೋದರೂ, ಉಪ್ಪಿನ ಪೈಸೆ ಕೊಟ್ಟೇ ಕೊಂಡು ಹೋಕು ಹಳ್ಳಿಯೊಳ!

ದೇವರೊಳ:

ಕೆಲವು ಕ್ರಮಂಗೊ ದೇವರೊಳಂಗೆ ಸಮ್ಮಂದ ಪಟ್ಟದಿದ್ದು:

 • ಶಂಖವ ನೆಲಕ್ಕಲ್ಲಿ ಮಡುಗುಲಾಗ. ಮೊಗಚ್ಚಿ ಮಡುಗುಲಾಗ ಹೇಳಿಗೊಂಡು.
  ಹಾಂಗಾಗಿ, ತಲೆಮೇಲ್ಕಟೆ ಇಪ್ಪ ಹಲಗೆಲಿ, ಪೂರ್ವಪಶ್ಚಿಮ ಆಗಿ ಕವುಂಚಿ ಮಡಗುತ್ತದು ಹೆಮ್ಮಕ್ಕಳ ಕ್ರಮ.
 • ಜಯಗಂಟೆಯ, ಉರುಳಿಯ ಕವುಂಚಿ ಮಡುಗುಲಾಗ ಹೇಳ್ತವು.
  ಹಾಂಗಾಗಿ, ಜಯಗಂಟೆ ಹೆಟ್ಟಿ ಆದ ಕೂಡ್ಳೇ ಅದರ ಕೋಲೂ ಸೈತ ಮೊಗಚ್ಚಿ ಮಡಗ್ಗು ಬಟ್ಟಮಾವಂದ್ರು.
 • ದರ್ಭೆಯ ಮೂಡಪಡುವಾಗಿ ಮಡುಗೇಕು ಹೇಳ್ತದು ಇನ್ನೊಂದು ನಂಬಿಕೆ.
  ಅಪರ ಕಾರ್ಯದ ದಿನ ತೆಂಕಮೋರೆ ಆಗಿ ಮಡಗುತ್ತ ಕಾರಣವೋ ಏನೋ! ಉಮ್ಮ!!
 • ಪೂಜೆ ಹೂಗಿನ ನೆಲಕ್ಕಲ್ಲಿ ಮಡುಗಲಾಗ.
  ಪೂಜೆ ಆದ ಮತ್ತೆ ಮಡಗಿರೂ ಸಾರ ಇಲ್ಲೆ. ಸಮರ್ಪಣೆ ಅಪ್ಪಲೆ ಇಪ್ಪ ಹೂಗಿನ ಸೆಸಿಂದ ನೇರವಾಗಿ ದೇವರ ತಲಗೇ ಎತ್ತೇಕು, ಅದರ ಎಡಕ್ಕಿಲಿ ಅದು ಎಲ್ಲಿಯೂ ನೆಲ ಮುಟ್ಳೆ ಆಗ ಅಡ!!
 • ಒತ್ತೆನೆಣೆಲಿ ಆರತಿ ಮಾಡ್ಳಾಗ ಹೇಳ್ತದು ಶಾಸ್ತ್ರ.
  ಏಕಾರತಿಗೆ ಎರಡಾದರೂ ಇರೇಕು. ಕೆಲವು ಸರ್ತಿ– ತ್ರಿವರ್ತಿ ಸಂಯುಕ್ತಂ – ಮೂರು ನೆಣೆ ಇರೇಕು ಹೇಳ್ತವು ಶಾಸ್ತ್ರ ಅರಡಿವೋರು.

ಅಟ್ಟುಂಬೊಳ:
ಹಾಂಗೇ ಕೆಲವು ಕ್ರಮಂಗೊ ಅಡಿಗೆ ಕೋಣಗೆ ಹೊಂದಿಗೊಂಡು ಇಪ್ಪದೂ ಇದ್ದು

 • ಸೇರಿನ ತೊಳವಲಾಗ ಹೇಳುಗು.
  ಇದರ ಬಗ್ಗೆ ನಾವು ಒಂದರಿ ಮಾತಾಡಿದ್ದು.
  ನಿತ್ಯ ಉಪಯೋಗ ಮಾಡಿಯೂ ತೊಳೆಯದ್ದ ಒಂದೇ ಒಂದು ಪಾತ್ರವೇ ಸೇರು!
  ಅದರ ತೊಳದರೆ ಮತ್ತೆ ಮನೆಯೇ ತೊಳದು ಹೋಕು ಹೇಳ್ತದು ನಮ್ಮ ನಂಬಿಕೆ.
 • ಅಕ್ಕಿಅಳಗೆಯ ಡಬ್ಬಿಯ ಕಾಲಿ ಮಾಡ್ಳಾಗ ಅಡ.
  ಒಂದು ವೇಳೆ ಪೂರ್ತಿ ಕಾಲಿ ಮಾಡೇಕಾದ ಪರಿಸ್ಥಿತಿ ಬಂದರೂ, ಕೂಡ್ಳೇ ಒಂದು ಮುಷ್ಟಿ ಅಕ್ಕಿ ಹಾಕುತ್ತ ಕ್ರಮ ಇದ್ದಾಡ.
  ಇದೇ ಪರಿಸ್ಥಿತಿ ಕಾಯಿಅಟ್ಟವ ಕಾಲಿ ಮಾಡುವಗಳೂ ಬತ್ತು. ಎಲ್ಲಾ ಕಾಯಿಯ ತೆಗದಾದ ಕೂಡ್ಳೇ, ಒಂದೆರಡು ಕಾಯಿಯ ಪುನಾ ಆ ಕಾಯಿ ಅಟ್ಟಕ್ಕೆ ಹಾಕುಗು ಬಟ್ಯ. ಅದಕ್ಕೆ ಪೊಲ್ಸು(ಶೋಭೆ) ಹೇಳುಗು ತುಳುವಿಲಿ.
 • ಅಶನದಳಗೆಯ ಒಲೆಲಿ ಓರೆ ಮಡಗಲಾಗ ಅಡ.
  ಒಂದು ವೇಳೆ ಅದು ಓರೆ ಆದರೆ, ಮನೆ ಯೆಜಮಾನನ ಹಣೆಬಾರವೂ ಓರೆ ಅಕ್ಕು ಹೇಳ್ತದು ನಂಬಿಕೆ.
 • ಅಬ್ಬೆಪ್ಪ° ಇಪ್ಪವು ಕುಂಬ್ಳಕಾಯಿಯ ಗಡಿ ತುಂಡುಸುಲಾಗ ಅಡ.
  ಗಡಿಯ ತುಂಡುಮಾಡ್ಳಕ್ಕಾರೂ, ಇಡಿ ಕುಂಬ್ಳವ ಗಡಿ ಮಾಡ್ಳೆ ಆಗ ಅಡ!
 • ಒಲೆ ಅಂತೇ ಹೊತ್ತುಸುಲಾಗ ಅಡ.
  ಎಂತಾರು ಮಡಗಿರೆ ಮಾಂತ್ರ ಒಲೆ ಹೊತ್ತುಸಲೆ ಅಕ್ಕಾಡ!
 • ಕಡೆಬಾಳೆಲಿ ಉಂಬಲಾಗ ಅಡ. ಒಂದು ವೇಳೆ ಉಣ್ತ ಪ್ರಮೇಯ ಬಂದರೂ, ಕಡೆಬಾಳೆಯ ಕೊಡಿಹೊಡೆಯ ಸಣ್ಣ ನಾರು ತೆಗದು ಗೆಂಟು ಕಟ್ಟಿ – ಕೊಡಿ ಕಲ್ಪನೆಮಾಡಿಗೊಳೆಕ್ಕಡ!
 • ಒಲೆಕ್ಕಟೆಗೆ ಮೆಟ್ಳಾಗ ಹೇಳುಗು ಮಾಷ್ಟ್ರಮನೆ ಅತ್ತೆ.
  ಪಕ್ಕನೆ ಕಾಣದ್ದೆ ಕಿಚ್ಚಿನ ಮೆಟ್ಟಿಕ್ಕುದು ಬೇಡ ಹೇಳಿ ಆ ಕಾರಣ ಹಿಡುದ್ದೋ ಏನೋ!  ಏನೇ ಆಗಿರಳಿ, ಆ ಕ್ರಮ ಹಾಂಗೆ ಬಯಿಂದು!
 • ತೆಂಕಬಡಗ ಆಗಿ ಸೌದಿ ಓಶುಲಾಗ.
  ಮಳೆಗಾಲಕ್ಕೆ ಸೌದಿ ಓಶುತ್ತ ಸಂದರ್ಭ ಬಂದಪ್ಪಾಗ ಮೂಡಪಡು ಆಗಿಯೇ ಓಶೆಕ್ಕು.

ಇನ್ನೂ ಏನೇನೋ ಇದ್ದು. ಪ್ರತಿ ಕೋಣಗೂ ಒಂದೊಂದು ಕಟ್ಟುಗೊ, ಕಟ್ಟಕಟ್ಟ ಕಟ್ಟುಗೊ.

~

ಅಬ್ಬ! ಇಷ್ಟಾದರೂ ಮುಗುದ್ದಿಲ್ಲೆ.
ಇನ್ನೂ ಸುಮಾರಿದ್ದು, ಇದ್ದೇ ಇದ್ದು. ಇಲ್ಲಿ ಬಿಟ್ಟು ಹೋದ್ಸದಿದ್ದರೆ ನೆಂಪು ಮಾಡಿಕ್ಕಿ ಆತೋ?
ಕಳುದವಾರ ಹಲಸ್ನಾಯಿ ವಿಶೇಷವ ನೆಂಪುಮಾಡಿಕೊಟ್ಟಿದಿ ಇದಾ, ಅದೇ ನಮುನೆಲಿ!

ಒಂದರಿಯಾಣ ಪಟ್ಟಿ ಎಲ್ಲ ಮುಗುದ ಮತ್ತೆ ಮಾಷ್ಟ್ರುಮಾವ° ಹೇಳಿದವು: ಈ ನಿಷೇಧಂಗೊ ಎಲ್ಲವುದೇ ಒಟ್ಟಾಗಿ ಒಂದು ಜನಾಂಗದ ಜೀವನ ಪದ್ಧತಿಯ ತೋರುಸುತ್ತು. ಉದಾಹರಣೆಗೆ, ಈ ಮೇಲ್ಕಂಡ ಸಮಾನ ಆಚರಣೆಗೊ ಇದ್ದಾರೆ ಅವು ನಮ್ಮೋರು,   ಮಾಂಸಾಹಾರಿಗೊ ಆಗಿದ್ದೊಂಡು ಹಂದಿ ತಿಂಬಲಾಗ ಹೇಳಿ ಬಂದರೆ ಅದು ಮಾಪ್ಳೆಗೊ – ಹೀಂಗೆಲ್ಲ ಇಪ್ಪದು, ಒಂದು ಕಾಲಲ್ಲಿ ನಿಷೇಧಂಗೊ ಆಗಿ ಬೆಳದು ಬಂದದು! – ಹೇಳಿದವು.

ಇದೆಲ್ಲ ಮೂಢನಂಬಿಕೆಗೊ ಅಲ್ಲ; ಇವೆಲ್ಲ ಮೂಲ ನಂಬಿಕೆಗೊ.
ನಮ್ಮ ಸಂಸ್ಕಾರದ ಮೂಲಂಗೊ ಅಲ್ಲೇ ಇಪ್ಪದು. ಹಲವಾರು ಕಟ್ಟುಪಾಡುಗಳಿಂದಾಗಿ ’ಇದು ನಮ್ಮ ಜೀವನ’ ಹೇಳ್ತದು ರಚನೆ ಅಪ್ಪದು.
ಇದೆಲ್ಲ ಎಷ್ಟೋ ಒರಿಶ ಹಿಂದೆ ಆದ ಕಾರಣ ಇಂದು ನಾವು ಈ ನಮುನೆಲಿ ಬದ್ಕುತ್ತು. ಆ  ಹಳೆತನಕ್ಕೆ ’ಸನಾತನ’ ಹೇಳ್ತದು – ಹೇಳಿದವು ಮಾಷ್ಟ್ರುಮಾವ°.

ಜಾಸ್ತಿ ಎಂತೂ ಅರ್ತ ಆಗದ್ದರೂ, ಮಾಷ್ಟ್ರುಮನೆ ಅತ್ತೆ ಗಂಟೆ ನೋಡಿಗೊಂಡು ಏಳುವಗ ’ಏಳುಗಂಟೆ ಕಾಪಿ’ಗೆ ಸಮೆಯ ಆತು ಹೇಳಿ ಅರ್ತ ಆತು. ಅವ್ವೇ ಮಾಡಿದ ಪಷ್ಟ್ಲಾಸು ಬಾಳೆಹಣ್ಣು ಹಲುವದೊಟ್ಟಿಂಗೆ, ಅವರ ಅಪ್ಪನ ಮನೆಂದ ತಂದ ಸಜ್ಜಿಗೆ ಕ್ಷೀರವನ್ನೂ ರುಚಿನೋಡಿಗೊಂಡು, ಕಾಪಿಯನ್ನೂ ಕುಡ್ಕೊಂಡು ಮನಗೆತ್ತಿದೆ!
~

ಹಳಬ್ಬರ ಜೀವನಲ್ಲಿ ನೆಮ್ಮದಿಲಿ ಬದ್ಕಲೆ ಹೇಂಗೆ ಇರೆಕ್ಕು, ನಮ್ಮ ಕ್ರಮಂಗೊ ಹೇಂಗೆ ಮಾರ್ಪಾಡು ಆಯೇಕು ಹೇಳ್ತರ ಚೆಂದಕೆ ಮನನ ಮಾಡಿಂಡಿತ್ತಿದ್ದವು.
ಈಗ ಹಲವಾರು ಕ್ರಮಂಗೊ ಮರಕ್ಕೊಂಡು ಬಯಿಂದು. ಎಷ್ಟೋ ಕ್ರಮಂಗೊ ನೆಂಪಿದ್ದರೂ “ ಮದಲಿಂಗೆ ಹೀಂಗೆ ಮಾಡ್ಳಾಗ ಹೇಳುಗು” ಹೇಳಿ ನೆಂಪುಮಾಡಿಗೊಂಡೇ ಮಾಡ್ತು.
ಇನ್ನಾಣ ಮುಂದುವರುದ ಸಮಾಜಲ್ಲಿ ಎಲ್ಲವನ್ನೂ ಒಳಿಶಿಗೊಂಡು ಹೋತಿಕ್ಕಲೆ ಎಡಿಯ, ಕನಿಷ್ಟ ಎಷ್ಟು ಸಾಧ್ಯವೋ, ಅಷ್ಟು ಕ್ರಮಂಗಳ ನೆಂಪು ಮಡಾಗಿ, ಮುಂದರುಸಿಗೊಂಡು ಹೋವುತ್ಸರ ಬಗ್ಗೆ ಯೋಚನೆ ಮಾಡುವನೋ?

ಒಂದೊಪ್ಪ: ಶುದ್ದಿ ಓದಿಕ್ಕಿ ಒಪ್ಪ ಕೊಡದ್ದೆ ಹೋಪಲಾಗ! 😉

ಸೂ: ನಿಂಗಳ ಹೆರಿಯೋರು ನೆಂಪುಮಾಡಿಗೊಂಡಿದ್ದ, ಇಲ್ಲಿ ಬಿಟ್ಟು ಹೋದ ’ನಿಷೇಧಂಗಳ’ ಬೈಲಿಂಗೆ ತಿಳಿಶಿಕೊಡುವಿರೋ?

(ಚಿತ್ರ: ಅಂತರ್ಜಾಲ)

ಒಪ್ಪಣ್ಣ

   

You may also like...

85 Responses

 1. jayashree.neeramoole says:

  ತಲೆ ಕಸವು ಬಿಕ್ಕಿ ಹಾಕುಲಾಗ ಹೇಳಿ ಹೇಳುದು ಎಂತಕೆ ಹೇಳಿರೆ…
  http://oppanna.com/lekhana/doddamatu/harate-hanevara-gedda ಲಿ ಗೆಡ್ಡದ ಮಹತ್ವದ ಬಗ್ಗೆ ಹೇಳಿದ್ದವಲ್ಲ… ಹಾಂಗೆ ನಮ್ಮ ತಲೆಕಸವಿಂಗೂ ಮೆದುಳಿನ್ಗೂ ಸಂಬಂಧ ಇದ್ಡದ… ‘ತಲೆಕಸವು ಬಿಕ್ಕಿ ಹಾಕಿಗೊಂಡು ಇದ್ದರೆ ಮನಸ್ಸು ನಿಯಂತ್ರನಲ್ಲಿ ಇರುತ್ತಿಲ್ಲೇ…’ (ಗುರುಗೋ ಯಾವುದೋ ಒಂದು ಪ್ರವಚನಲ್ಲಿ ಹೇಳಿದ್ದು) ಈಗಣ ಕೂಸುಗೊಕ್ಕೆ,ಮಾನ್ಯಂಗೊಕ್ಕೆ ಎಲ್ಲ ಮನಸ್ಸಿನ ನಿಯಂತ್ರನಲ್ಲಿ ಮಡುಗುಲೆ ಎಡಿಯದ್ದೆ ಇಪ್ಪಲೇ ಇದೂ ಒಂದು ಕಾರಣ …

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *