Oppanna.com

ಒಗ್ಗಟ್ಟಿದ್ದರೆ ಸ್ವಾಭಿಮಾನಕ್ಕೆ ಬೆಲೆ ಜಾಸ್ತಿ!

ಬರದೋರು :   ಒಪ್ಪಣ್ಣ    on   13/07/2012    16 ಒಪ್ಪಂಗೊ

ಬೈಲಕರೆ ಮದುವೆ ಜೆಂಬ್ರದ್ದೇ ಗವುಜಿ ಕಳುದ ವಾರ.
ಪಂಜಸೀಮೆಂದ ಹೊಸದುರ್ಗ ಸೀಮೆ ಒರೆಂಗೆ ಎಲ್ಲಾ ಊರಿನ ನೆಂಟ್ರುಗಳನ್ನೂ ಒಂದರಿ ಕಾಂಬಲೆ ಸಿಕ್ಕಿತ್ತು.
ದೂರದೂರಿನ ಜೆನಂಗೊ, ಅಪುರೂಪದ ನೆಂಟ್ರುಗೊ, ಎಲ್ಲೋರನ್ನೂ ಕಾಂಬಲೆ ಸಿಕ್ಕಿತ್ತು.
ದೂರದ ನೆಂಟ್ರುಗೊ ಮಾಂತ್ರ ಅಲ್ಲದ್ದೆ ನಮ್ಮ ನೆರೆಕರೆ ನೆಂಟ್ರುಗಳೂ ಸೇರಿ, ದುಡುದು, ದಣುದು, ಮಾಷ್ಟ್ರುಮಾವನ ಎಲೆತೊಟ್ಟೆ ಕಾಲಿಮಾಡಿಕ್ಕಿ ಹೋದವಿದ್ದವು.
ಆಚಮನೆ ದೊಡ್ಡಪ್ಪ, ದೊಡ್ಡಬಾವ, ಸುಭಗಣ್ಣ, ಶರ್ಮಪ್ಪಚ್ಚಿ, ಯೇನಂಕೂಡ್ಳಣ್ಣ, ಶ್ರೀಅಕ್ಕ, ಅಭಾವ ಎಲ್ಲೋರುದೇ ಬಂದು ಮಾಷ್ಟ್ರುಮಾವನ ಎಲೆತೊಟ್ಟೆಗೆ ಕೈ ಹಾಕಿ ಅಪ್ಪಗ, ಸುರೂವಿಂಗೆ ಎಲೆ ಕಾಲಿ, ಮತ್ತೆ ಅಡಕ್ಕೆ ಕಾಲಿ, ಮತ್ತೆ ಹೊಗೆಸೊಪ್ಪು ಕಾಲಿ, ಮತ್ತೆ ಸುಣ್ಣದಂಡೆಯೇ ಕಾಲಿ!
ಮಾಷ್ಟ್ರುಮಾವ ಆ ದಿನ ಹೊತ್ತೋಪಗ ಮನಗೆತ್ತಿ ಮದಾಲು ಮಾಡಿದ ಕೆಲಸ – ಎಲೆಮರಿಗೆ ತುಂಬುಸಿಗೊಂಡದು!

ಏನೇ ಆಲಿ, ಹಲವು ಜೆನ ಸೇರಿ ದುಡುದ್ದರಲ್ಲಿ ಜೆಂಬ್ರ ಗೌಜಿಲಿ ಕಳಾತು.

~

ಮದುವೆ ಮರದಿನ ಸಟ್ಟುಮುಡಿ.
ಸಟ್ಟುಮುಡಿ ದಿನ ವಧೂವರರ ದಿಬ್ಬಾಣ ಎದುರುಗೊಂಬಲಪ್ಪಗ ಒಂದರಿ ಶಾಲು ಹಾಕಿಗೊಳೇಕು. ಮತ್ತೆ ಅದರ ತೆಗದು, ಕರೆಲಿ ಮಡುಸಿ ಮಡಗಿರೆ ಒಸಗ್ಗೆ ಅಪ್ಪಗಳೇ ಬೇಕಪ್ಪದು!
ಮನ್ನೆಯುದೇ ಹಾಂಗೇ.  ನಾವು ಹಲವು ಜೆನ ಬೇಗವೇ ಎತ್ತಿದ್ದರೂ, ಬೇರೆ ಜೆಂಬ್ರ ಸುದಾರ್ಸಲೆ ಇದ್ದಿದ್ದ ಇನ್ನೂ ಹಲವು ಜೆನಂಗೊ ಬಪ್ಪಗ ತಡವಾಯಿದು.
ದೊಡ್ಡಣ್ಣ ಆಚಮನೆ ದೊಡ್ಡಪ್ಪನ ಬೈಕ್ಕಿಲಿ ಕರಕ್ಕೊಂಡು ಬಂದು ಬೇಗ ಬಿಟ್ಟಿಕ್ಕಿ ಪಂಜಕ್ಕೆ ಹೋಗಿತ್ತಿದ್ದ°. ಅಭಾವ ಮುನ್ನಾಣ ದಿನವೇ ಬಂದು ಮಾಷ್ಟ್ರುಮಾವನಲ್ಲಿ ನಿಂದಿತ್ತಿದ್ದ ಕಾರಣ ಅಭಾವನೂ ಮಾಷ್ಟ್ರುಮಾವನೂ, ಮಾಷ್ಟ್ರುಮಾವನ ಎಲೆತೊಟ್ಟೆಯೂ – ಮಾಧವನ ರೀಕ್ಷಲ್ಲಿ ಬೇಗ ಬಂದವು; ನಾವುದೇ ಅದರ್ಲೇ ಸೇರಿಗೊಂಡಿದು ಉಪಾಯಲ್ಲಿ.
ಬಾಕಿದ್ದೋರು – ದೂರಂದ ಬಪ್ಪೋರು – ಬರೆಕ್ಕಷ್ಟೆ; ಅಲ್ಲ, ಬಂದರೂ –ತೋಡಕರೆಂಗೆ ದಾಸನ ಕೊಯಿವಲೆ ಹೋಯಿದವೋ, ಅಂತೂ – ಮದುವೆ ಮಂದಿರಲ್ಲಿ ಸೇರೇಕಟ್ಟೆ.

ದಿಬ್ಬಣ ಎದುರುಗೊಂಡಾತು, ಇನ್ನು ಶಾಲು ಬೇಕಪ್ಪದು ಒಸಗ್ಗಪ್ಪಗಳೇ. ಹಾಂಗೆ, ಮಡುಸಿ ಕರೆಲಿ ಮಡಗಿ ಆಗಿತ್ತು.
ಎಡೆಹೊತ್ತಿನ ಪುರ್ಸೋತಿಲಿ – ಎಂಗೊ ಇದ್ದ ಕೆಲವುಜೆನ ಕುರ್ಶಿ ಕಳ ಮಾಡಿ ಕೂದುಗೊಂಡು ಎಲ್ಲೋರುದೇ ಮಾತಾಡಿಗೊಂಡು ಇತ್ತಿದ್ದೆಯೊ.

ಆಚಮನೆ ದೊಡ್ಡಪ್ಪ ಇಪ್ಪಗ ಹಳೆಕತೆಗೊಕ್ಕೆ ಏನೂ ದರಿದ್ರ ಇಲ್ಲೆ; ಬೇಕಾದಷ್ಟಿದ್ದು ಅವರ ಸಂಗ್ರಹಲ್ಲಿ.
ಅದೇ ರೀತಿ, ಅಭಾವ ಇದ್ದರೆ ಹೊಸ ಕತೆಗಳ ಒಕ್ಕಿ ಒಕ್ಕಿ ಹೆರ ತಪ್ಪದರ್ಲಿ ಏನೂ ತೊಂದರೆ ಇಲ್ಲೆ; ಅವಂಗೆ ಅದು ಸರುವೀಸಿನ ಕಾರ್ಯ!
ಮಾಷ್ಟ್ರುಮಾವನ ಬಾಯಿಲಿ ಎಲೆ ಇಲ್ಲದ್ದರೆ ಹೂಂಕುಟ್ಟುಲೂ ಹೆದರಿಕೆ ಇಲ್ಲೆ!

ಮನ್ನೆಯೂ ಹಾಂಗೇ ಆತು. ಆಚಮನೆ ದೊಡ್ಡಪ್ಪ ಒಂದು ಕತೆ ಹೇಳುಲೆ ಸುರುಮಾಡಿದವು.
ಇದು ಇಂದು ನಿನ್ನೇಣ ಕತೆ ಅಲ್ಲ, ಕಡಮ್ಮೆಲಿ ನಾಕು ತಲೆಮಾರು ಹಿಂದಾಣ ಕತೆ. ಆಚಮನೆ ದೊಡ್ಡಪ್ಪ ಸಣ್ಣ ಇಪ್ಪಾಗ, ಅವರ ಅಜ್ಜಂಗೆ ಕೇಳಿದ ಕತೆ. ಕತೆ ಹೇದರೆ – ಕತೆ ಅಲ್ಲ, ನೆಡದ ಘಟನೆ. ಕ್ರಮೇಣ ನಮ್ಮೋರ ಇತಿಹಾಸಲ್ಲಿ ಉದ್ದಿ ಹೋಪಂತಾ ಕತೆ.
ದೊಡ್ಡಪ್ಪಂಗೆ ಗೊಂತಿಪ್ಪ ಹಲವು ಕತೆಗಳಲ್ಲಿ ಇದೊಂದು ಆದರೂ – ಒಪ್ಪಣ್ಣಂಗೆ ಇದರ ಕೇಳಿ ಕೊಶೀ ಆತು.!

~

ಮದಲಿಂಗೆ ಒಂದರಿ ಬೈಲಿನೊಳದಿಕೆ ಯೇವದೋ ಒಂದು ಮನೆಲಿ ಎಂತದೋ ಜೆಂಬ್ರ.
ಮನೆ ಹೆಸರು ಎಂತದೋ ಹೇಳಿದವು ದೊಡ್ಡಪ್ಪ, ಒಪ್ಪಣ್ಣಂಗೆ ಗವುಜಿ ಎಡಕ್ಕಿಲಿ ಪಕ್ಕನೆ ಮರದ ಹಾಂಗಾಯಿದು! 🙁
ಜೆಂಬ್ರವೂ ಹಾಂಗೇ, ಎಂತದೋ ಸಣ್ಣ ಮಟ್ಟಿಂದು.

ಈಗ ಯೇವ ಜೆಂಬ್ರಂಗೊಕ್ಕೆ ಆದರೂ ಜಿಲುಬಿ, ಹೋಳಿಗೆ, ಲಾಡು ಮಾಡ್ತದು ಸಾಮಾನ್ಯ ಆಯಿದು; ಮದಲಿಂಗೆ ಹಾಂಗಿದ್ದತ್ತಿಲ್ಲೇಡ.
ಸರ್ವೇಸಾಮಾನ್ಯವಾಗಿ ಇದ್ದ “ಚೀಪೆ” ಹೇದರೆ ಬಾಳೆಹಣ್ಣು-ಶೆಕ್ಕರೆ. ತಪ್ಪಿರೆ ಶೆಕ್ಕರೆ ಬೆರಟಿ.
ಬರೇ ಚೆಪ್ಪುಡಿ ಅಲ್ಲದ್ದೆ, ರಜಾ ಗವುಜಿ ಮಾಡ್ತ ಅಂದಾಜಿ ಇದ್ದರೆ, ಶುಕ್ರುಂಡೆ ಮಾಡುಗಡ.
ಪಾಯಿಸದ ಬೆನ್ನಾರೆ ಬತ್ತ ಬಾಳೆಹಣ್ಣಿನ – ಶೆಕ್ಕರೆಗೆ ಅದ್ದಿ ತಿಂದುಗೊಂಡು ಚೂರ್ಣಿಕೆ ಹೇಳ್ತ ಹಳಬ್ಬರ ಗವುಜಿಯೇ ಬೇರೆ – ದೊಡ್ಡಪ್ಪ ನೆಂಪುಮಾಡಿಗೊಂಡವು.

ಈಗ ಕೊಟ್ರೂ ಬೇಡ ಆರಿಂಗೂ – ಹೊದಳು ಹೊಡಿಯ ಚೀಪೆ ಪಾಕಲ್ಲಿ ಅದ್ದಿ ಉಂಡೆಕಟ್ಟಿರೆ ಅದುವೇ ಸ್ವೀಟು!
ಹೀಂಗೇ ಹೋದರೆ ಕ್ರಮೇಣ ಹೋಳಿಗೆಯೂ “ಆರಿಂಗೂ ಬೇಡ” ಹೇದು ಬಕ್ಕೋ ಏನೋ – ಹೇಳಿದವು ಎಡೆಲಿ.
ಮಾಷ್ಟ್ರುಮಾವನ ಬಾಯಿಲಿ ಎಲೆ ಇಕ್ಕು, ಆದರೆ ಅಭಾವಂಗೆ ಎಂತದೂ ತೊಂದರೆ ಇದ್ದತ್ತಿಲ್ಲೆ – ಹೂಂ ಹೂಂ – ಹೇಳಿಗೊಂಡೇ ಇತ್ತಿದ್ದ, ಕತೆ ಓಡಿಗೊಂಡೇ ಇತ್ತು.

~

ದೊಡ್ಡಪ್ಪನ ಕತೆ ಮುಂದುವರುತ್ತು; ಕತೆಲಿ ಜೆಂಬ್ರ ಆವುತ್ತಾ ಇತ್ತು. ಊಟವೂ ಸುರು ಆತು.
ಈಗಾಣ ಹಾಂಗೆ ಹಸ್ತೋದಕ ಹಂತಿ – ಹೇದು ಬೇರೆ ಇಲ್ಲೆ ಇದಾ, ಹಂತಿ ಹೇದರೆ ಒಂದೇ ಊಟದ ಹಂತಿ – ಅದರ್ಲಿಯೂ ಒಂದನೇ ಹಂತಿ. ಸಾರು-ಕೊದಿಲು-ಮೇಲಾರ ಬಂದ ಮತ್ತೆ ಪಾಯಿಸ ಬರೆಕ್ಕಲ್ಲದೋ? ಬಂತು.
ಆ ದಿನ ಗವುಜಿ ಊಟ – ಶುಕ್ರುಂಡೆ ಮಾಡ್ಸಿತ್ತಿದ್ದವು. ಪಾಯಿಸದ ಹಿಂದಂದಲೇ ಶುಕ್ರುಂಡೆಯೂ ಬಂತು.
ದೊಡ್ಡಪ್ಪ ಹೇಳಿಅಪ್ಪದ್ದೇ ಅಭಾವ ತಿರುಗಿ ನೋಡಿದ°, ಶುಕ್ರುಂಡೆ ಪಾತ್ರ ಇದ್ದೋ ಹೇದು – ಬಂದದು ಕತೆಲಿ ಮಾಂತ್ರ.
ಶುಕ್ರುಂಡೆ ಬಂದದು ಮಾಂತ್ರ ಅಲ್ಲ, ವಿಚಾರಣೆಯೂ ಆತು.
ಹಾಂಗೆ, ಆ ಜೆಂಬ್ರಲ್ಲಿ ಎಲ್ಲವೂ ಚೆಂದಕೆ ನೆಡಕ್ಕೊಂಡಿಪ್ಪಾಗ ಒಂದು ಸಣ್ಣ ಸಂಗತಿ ನೆಡದತ್ತಾಡ. ಅದೆಂತದು?!
~

ಆರಿಂಗೂ ಯೇವದರ್ಲಿಯೂ ಕಮ್ಮಿ ಅಪ್ಪಲಾಗ ಹೇದು ರಜ ಹೆಚ್ಚೇ ಶುಕ್ರುಂಡೆ ಮಾಡ್ಸಿತ್ತಿದ್ದನಾಡ ಮನೆ ಎಜಮಾನ.
ಜೆಂಬ್ರ ಸಣ್ಣದಾದರೂ, ಜೆಂಬ್ರದ ಮನೆ ಎಜಮಾನನ ಬಾಯಿ ರಜ ದೊಡ್ಡವೇ ಇದ್ದತ್ತಾಡ.
ಹದಾಕೆ ದೊಡ್ಡ ಇದ್ದರೆ ತೊಂದರೆ ಇಲ್ಲೆ, ಆದರೆ ಬಾಯಿ ತುಂಬ ದೊಡ್ಡ ಆದರೆ ಬಂದೋರಿಂಗೆ ಕಿರಿಕಿರಿ, ಅಲ್ಲದೋ?
ಶುಕ್ರುಂಡೆ ಹೆಚ್ಚು ಮಾಡುಸಿದ್ದರ ತನ್ನಷ್ಟಕ್ಕೇ ಮಡಿಕ್ಕೊಂಡದಲ್ಲ, ಸಬೆಲಿ ಎಲ್ಲೋರಿಂಗೂ ತಿಳುಶೇಕಾತು; ತಿಳುಶಿ ತನ್ನ ದೊಡ್ಡತನವ ಹೊಗಳಿಂಬಲೆ – ಬೈಲಿನ ಭಾಷೆಲಿ ಹೇಳ್ತರೆ ರೂಪತ್ತೆ ಅಪ್ಪಲೆ ಹೆರಟನಡ, ಪಾಪ!

ಶುಕ್ರುಂಡೆ ಬಳುಸಿದೋನು ಅವನಷ್ಟಕೇ ವಿಚಾರಣೆ ಮಾಡ್ಳೆ ಬಂದನಡ. ಹಂತಿ ಕರೇಲಿ ಕೂದ ಮೀಸೆ ಶಂಕರಜ್ಜ “ಹ್ಮ್, ಒಂದು ಬಳುಸು, ಸಾಕು” ಹೇಳಿದವಡ.
ಅಲ್ಲೇ ನಿಂದ ಎಜಮಾನಂಗೆ ಅದು ಕೇಳಿತ್ತೋ, ದೊಡ್ಡಸ್ತಿಕೆ ತೋರ್ಸುಲೆ ಅನುಸಿತ್ತೋ, ಬಳುಸುತ್ತೋನಿಂಗೆ – “ಕೇಳುದೆಂತರ? ಎಲ್ಲೋರಿಂಗೂ ಬಳುಸೊ° ನೀನು. ತಿನ್ನಲಿ. ಒಳ ಧಾರಾಳ ಇದ್ದು, ಗೊಂತಿಲ್ಲೆಯೋ?” ಹೇಳಿದನಡ.
ಅಷ್ಟೇ ಅಲ್ಲದ್ದೆ, ಹಂತಿಕರೆಲಿ ಕೂದ ಶಂಕರಜ್ಜಂಗೂ “ಎಂತ ಶಂಕರಣ್ಣ, ಶುಕ್ರುಂಡೆ ಬೇಕಾದಷ್ಟು ತಿಂಬಲಕ್ಕು. ಧಾರಾಳ ಇದ್ದು. ಗೊಂತಾತೋ?!” ಹೇಳಿದನಾಡ, ದರ್ಪದ ನೆಗೆ ಮಾಡಿಂಡು.
~

ಹಳಬ್ಬರಿಂಗೆ ಸ್ವಾಭಾವಿಕವಾಗಿ ಇದ್ದಿದ್ದ ಎರಡು ಅಂಶಂಗೊ – ಒಂದು ಪಿಸುರು, ಇನ್ನೊಂದು ಸ್ವಾಭಿಮಾನ!
ಪ್ರಾಯ ಅಂಬಗಳೇ ಹತ್ತರುವತ್ತರ ಆಸುಪಾಸು ಇದ್ದಿದ್ದ ಶಂಕರಜ್ಜಂಗೆ ಮೂಗಿನ ಕೊಡಿಲಿಯೇ ಪಿಸುರು ಇದ್ದತ್ತಾಡ.
ಉಂಬಲೆ ತಿಂಬಲೆ ಇನ್ನೊಬ್ಬನ ಒತ್ತಾಯದ ಹೇಳಿಕೆ ಸಿಕ್ಕಿರೆ ಪರಂಚಿಯೇ ಬಿಡುಗು. ಆ ದಿನ ಸುರುವಿಂದಲೇ ಶುಕ್ರುಂಡೆ ಧಾರಾಳ, ಶುಕ್ರುಂಡೆ ಧಾರಾಳ ಇದ್ದು – ಹೇಳುಸ್ಸು ಕೇಳಿಕೇಳಿ ಶಂಕರಜ್ಜಂಗೂ ಬೊಡುದೇ ಹೋಗಿತ್ತಾಡ.
ಎಷ್ಟೇ ಸ್ವಾಭಿಮಾನಿ ಆಗಿದ್ದರೂ, ಎಷ್ಟೇ ಪಿಸುರು ಇದ್ದರೂ – ಒಗ್ಗಟ್ಟಿದ್ದರೆ ಮಾಂತ್ರಾ ಎಂತಾರು ಮಾಡಿತೋರ್ಸಲೆಡಿಗಷ್ಟೇ?
ಇದು ಕೇವಲ ಶಂಕರಜ್ಜಂಗೂ, ಎಂಕುಂಞಿಗೂ ಮಾಂತ್ರ ಅಲ್ಲದ್ದೆ, ಇಡೀ ಹಂತಿಗೇ ಸ್ವಾಭಿಮಾನದ ಪ್ರಶ್ನೆ ಆಗಿತ್ತು.
ಆ ಊರಿನ ಅಂಬಗಾಣ ಗೌರವದ ಶಂಕರಜ್ಜಂಗೆ ಹಾಂಗೆ ಲಘುವಾಗಿ ಹೇಳಿದ್ಸು ಹಂತಿಲಿ ಕೂದೋರಿಂಗೆ ಸಮ ಕಂಡತ್ತಿಲ್ಲೆ.
ಚೆಲ, ಇವನ ಹಾಂಕಾರವ ಹೀಂಗೇ ಬಿಟ್ರಾಗ ಹೇದು – ಹಂತಿಲಿ ಕೂದ ಎಲ್ಲೋರಿಂಗೂ ಅಸಮಧಾನ ಆಗಿತ್ತಾಡ.

ಹಂತಿಯ ಎದುರಾಣ ಹೊಡೆ, ಆಚಕರೇಲಿ ಕಾವೇರಿಕಾನ ಎಂಕಪ್ಪಜ್ಜ ಕೂದಿತ್ತವಡ. ಸಮಪ್ರಾಯದವು ಎಂಕುಂಞಿ – ಹೇಳುಗು.
ಶಂಕರಜ್ಜಂಗೆ ಪಿಸುರು ತಡೆಯದ್ದೆ ಅಪ್ಪಗ “ಯೇ ಎಂಕುಂಞಿ” ಹೇಳಿದವು. “ಎಂತಾ?” ಕೇಳಿದವು ಎಂಕಪ್ಪಜ್ಜ° ಅಲ್ಲಿಂದ!
ಇದಾ, ಶುಕ್ರುಂಡೆ ಧಾರಾಳಡವೊ°” ಹೇಳಿದವು ಶಂಕರಜ್ಜ°.
ಮದಲೇ ಮನೆ ಎಜಮಾನ ಹೇಳುದು ಕೇಳಿಂಡಿದ್ದರೂ, ಶಂಕರಜ್ಜ ಆ ಮಾತಿನ ಹೇಳುವಗ ಇದ್ದಿದ್ದ ಭಾವನೆ ಎಂಕುಂಞಿಗೆ ಅರ್ತ ಆತು. “ಬರಳಿ ಅಂಬಗ” ಹೇಳಿದವಡ.
ಎಂಕುಂಞಿ ಬರಳಿ ಅಂಬಗ ಹೇಳುವಗ ಆ ಹಂತಿಲಿ ಇದ್ದಿದ್ದ ಎಲ್ಲೋರುದೇ ಬಾಳೆಲಿ ಜಾಗೆ ಮಾಡಿಗೊಂಡವು.
ಬಾಳೆಲಿ ಮಾಂತ್ರ ಅಲ್ಲದ್ದೆ – ಹೊಟ್ಟೆಲಿಯೂ ಜಾಗೆ ಮಾಡಿಗೊಂಡವು!!

~

ಒಗ್ಗಟ್ಟು - ಹಳತ್ತಾದರೂ ಗಟ್ಟಿಯೇ, ಹೊಸತ್ತಾದರೂ ಗಟ್ಟಿಯೇ!

ಬರಳಿ ಹೇದು ಎಂಕುಂಞಿ ಹೇಳಿದ್ದರ ಎಲ್ಲೋರುದೇ ಕ್ರೀಡಾತ್ಮಕವಾಗಿ ತೆಕ್ಕೊಂಡು ಹಟ ಕಟ್ಟಿ ತಿಂಬಲೆ ಸುರುಮಾಡಿದವು.
ಮೀಸೆ ಶಂಕರಜ್ಜ, ಕಾವೇರಿಕಾನ ಎಂಕಪ್ಪಜ್ಜ ಮಾಂತ್ರ ಅಲ್ಲದ್ದೆ, ಹಂತಿಲಿ ಕೂದ ಎಲ್ಲೋರುದೇ!
ಸಣ್ಣ ಹಂತಿಯೇ ಆದರೂ ಅದರ್ಲಿ ಕೂದಿದ್ದದು ಆರು?
ಎಡಪ್ಪಾಡಿ ಕಿಟ್ಟಜ್ಜ°, ಮರಿಮನೆ ಮಾಲಿಂಗಜ್ಜ°, ಕರಡಾಲು ಕೇಚಜ್ಜ°, ಸಾರಡಿ ವೆಂಕಪ್ಪಜ್ಜ°, ಪಾಡಿ ಪುರುಷಜ್ಜ°, ಆರೊಳಿ ಅನಂತಜ್ಜ°,  ಎಯ್ಯೂರು ಗೋವಿಂದಜ್ಜ°, ಹೊಯಿಗೆದ್ದೆ ರಾಮಜ್ಜ°, ಬೀಚಿತ್ಲು ಶಂಬಜ್ಜ°,  ಪಂಜೆ ಪಾರ್ಥಜ್ಜ°, ಪಂಜನಮನೆ ಪಂಬೆಚ್ಚಜ್ಜ°, ಕೋಡಿಮೂಲೆ ಕೃಷ್ಣಜ್ಜ°, ಕುಳ್ಳಂಬೆಟ್ಟು ನಾರಾಯಣಜ್ಜ°, ಕಾನ ಚಂದ್ರಜ್ಜ°, ಕಿದೂರು ಕೇಶವಜ್ಜ°, ಶೇಡ್ಯಮ್ಮೆ ಸಂಕಪ್ಪಜ್ಜ°, ಗುಂಪೆ ಗೆಣವತಿಜ್ಜ°, ಅಡ್ಕ ಉದ್ದಜ್ಜ – ಎಲ್ಲೋರುದೇ!
ನಾವು ಮಾತಾಡುವಗ ಅಜ್ಜ ಹೇಳಿರೂ, ಅಂಬಗ ಎಲ್ಲೋರುದೇ ಅಜ್ಜಂದ್ರಾಗಿತ್ತಿದ್ದವಿಲ್ಲೆ – ಹೇಳಿಗೊಂಡವು ದೊಡ್ಡಪ್ಪ°.
ಕೆಲವು ಜೆನ ಆ ಕಾಲದ ತುಂಡು ಜವ್ವನಿಗರು; ಎಳಕ್ಕದ ಮಾಣಿಯಂಗೊ, ಬೆಳವಿನ ಅಣ್ಣಂದ್ರು, ಪಿಸುರಿನ ಅಜ್ಜಂದ್ರು!
ಅವರ ಹೀಂಗೆ ಎಳಗುಸಿರೆ ಅಕ್ಕೋ?
ಒಬ್ಬೊಬ್ಬನೂ ವೀರಭದ್ರನ ತುಂಡುಗಳೇ ಆಗಿ ಹೋದವು.

ಶುಕ್ರುಂಡೆ ತಿಂದವೂ ತಿಂದವೂ ತಿಂದವೂ – ಎಷ್ಟು?
ಬಳುಸುಲೆ ನಿಂದ ಪಾಪದ ನೆಂಟ ಒಳಾಂದ ತಂದು ತಂದು ಸೊರುಗಿದ.
ತಪಲೆ ತಪಲೆ ತಂದು ಬಾಳೆ ಮೇಗೆ ಕವುಂಚಿದ°. ಊಹೂಂ, ಇನ್ನೂ “ಸಾಕು” ಹೇಳ್ತವಿಲ್ಲೆ ಹಂತಿಯೋರು.
ಇನ್ನು ಕೊಡಿ ಎತ್ತುಸೆಂಬಲೆ ಎಡಿಯ, ಮರಿಯಾದಿ ಹೋವುತ್ತು – ಹೇಳುವ ಸನ್ನಿವೇಶ ಬಂದಪ್ಪಾಗ ಆ ಮನೆ ಎಜಮಾನಂಗೆ ತನ್ನ ತಪ್ಪು ಅರ್ತ ಆತಾಡ.
ನಿಂಗಳ ಹೊಟ್ಟೆ ತುಂಬುಸುವಷ್ಟು ಎನ್ನತ್ತರೆ ಇಲ್ಲೆ, ಹೇಳಿದ್ದು ಹೆಚ್ಚಾತು” ಹೇದು ಹಂತಿಲಿ ಕೇಳಿಗೊಂಡನಾಡ.
ಅಷ್ಟಪ್ಪಗ ಆಗಲೇ ಹೊತ್ತು ಕಳುದಿದ್ದತ್ತು; ಮಾಡಿದ ಒಂದೂವರೆ ಸಾವಿರ ಶುಕ್ರುಂಡೆ ಇಪ್ಪತ್ತೈದು ಜೆನರ ಹಂತಿಲಿ ಕಾಲಿ!!

ತಪ್ಪು ಒಪ್ಪಿಗೊಂಡದೇ, ಎಲ್ಲ ಕೋಪವನ್ನೂ ಮರದು “ಆತಂಬಗ, ಒಂದು ಕೊಡಪ್ಪಾನ ನೀರು ತನ್ನಿ ಇನ್ನು” ಹೇಳಿದವಡ ಹಂತಿಯೋರು. ಹೊಡಿ ಹೊದಳು ತಿಂದು ನೀರು ಕುಡಿಯದ್ರೆ ಅಕ್ಕೋ?!
ಒಳುದೋರ ಪ್ರೇರೇಪಿಸೆಂಡು ಎಡೆಡೆಲಿ ಒಂದೊಂದು ತಿಂದುಗೊಂಡು – ಆ ಪ್ರಾಯದ ಶಂಕರಜ್ಜ ಆ ದಿನ ಒಟ್ಟು ಅರುವತ್ತು ಶುಕ್ರುಂಡೆ ತಿಂದಿತ್ತವಾಡ!
ಅವ್ವೇ ಅರುವತ್ತು ತಿಂದಿಪ್ಪಾಗ ತುಂಡು ಜವ್ವನಿಗರು ಎಷ್ಟು ತಿಂದಿಕ್ಕು?!

~

ದೊಡ್ಡಪ್ಪಂಗೆ ಕತೆ ಹೇಳುವಗ ಆ ಸನ್ನಿವೇಶಲ್ಲಿ ಬಂದ ಮುಖ್ಯ ಭಾವನೆಯೇ ಬಕ್ಕು.
ಮನ್ನೆಯೂ ಹಾಂಗೇ, ಮನೆ ಎಜಮಾನನ ಹಾಂಕಾರ ವಿವರುಸುವಾಗ ಕಣ್ಣು ಪೂರ ಕೆಂಪಾಗಿ, ಒಳ್ಳೆತ ಪಿಸುರು ಬಂದಿತ್ತು. ಹಾಂಗಾಗಿಯೇ ಮತ್ತಾಣ ಕತೆ ಹೇಳುಲೆ ಅಭಾವ ಒತ್ತಾಯ ಮಾಡದ್ದದು.
~

ಈ ಕತೆಯ ಮೇಗಂದ ಮೇಗೆ ಕೇಳಿದೋನಿಂಗೆ “ಹೊಟ್ಟೆಬಾಕ ಅಜ್ಜಂದ್ರು” ಹೇದು ಉದಾಸ್ನ ಅನುಸಿರೂ, ಆಳವಾಗಿ ಆಲೋಚನೆ ಮಾಡಿದೋನಿಂಗೆ ಹಲವು ಸಂಗತಿಗೊ ಅರ್ತ ಅಕ್ಕು.
ದೊಡ್ಡಪ್ಪ ಒಂದೊಂದನ್ನೇ ವಿವರುಸುವಾಗ ಮಾಷ್ಟ್ರುಮಾವನೂ ಸೊರ ಸೇರುಸಿಗೊಂಡಿತ್ತವು.

ಒಂದನೇದಾಗಿ ಗಮನುಸೇಕಾದ್ಸು ಸ್ವಾಭಿಮಾನ.
ಗೌರವದ ಅಜ್ಜಂಗೆ ರಜ ಅವಮಾನ ಅಪ್ಪದ್ದೇ, ಇಡೀ ಸಮುದಾಯ ಅವಕ್ಕೋಸ್ಕರ ಎದ್ದು ನಿಂದತ್ತು.
ಮನೆಯೋನ ತಪ್ಪಿನ ತಿಳುಶಲೆ ಬೇಕಾಗಿ ಒಟ್ಟಿಂಗೆ ಹೋರಾಡ್ಳೆ ಹೆರಟತ್ತು.
ಇಡೀ ಹಂತಿಲಿ ಒಬ್ಬಂಗೆ ಅವಮರಿಯಾದೆ ಆದ್ಸಕ್ಕೆ ಆ ಹಂತಿಲಿ ಕೂದ ಎಲ್ಲೋರುದೇ ಪ್ರತಿಕ್ರಿಯಿಸಿದ ರೀತಿಯ ನಾವು ನೋಡೇಕು.
ಅವಕ್ಕೆ ಬೇಕಾಗಿ ಆರೂ ತಿಂದದಲ್ಲ, ಆದರೆ ಹಂತಿಯ ಪುಸ್ಕ ಮಾಡಿದ್ದಕ್ಕಾಗಿಯೇ ಅವರ ಬೇಜಾರು.
ಉಂಬಲೆ ಕೂದಲ್ಲಿ ಇನ್ನು ಹೇಂಗೆ ಕೋಪ ತೋರ್ಸುಸ್ಸು? ಉಂಡುಗೊಂಡೇ ತೋರ್ಸೇಕಟ್ಟೆ!

ಎರಡ್ಣೇ ವಿಚಾರವಾಗಿ ಕಾಂಬದು ಒಗ್ಗಟ್ಟು.
ಎನ್ನಂದ ಎಡಿಯ, ಎನಗೆ ಸಾಕು – ಹೇದು ಒಬ್ಬೊಬ್ಬನೇ ಈ ಹೋರಾಟಂದ ಕೈ ಬಿಟ್ಟಿದ್ದಿದ್ದರೆ ಆ ಅಜ್ಜನದ್ದೇ ಮರಿಯಾದಿ ಹೋವುತಿತು, ಅಪ್ಪೋ?  ಗೌರವದ ಶಂಕರಜ್ಜನ ಮಾತಿನ ಒಳಿಶಲೆ ಎಲ್ಲೋರುದೇ ಟೊಂಕ ಕಟ್ಟಿ ನಿಂದವು.
ಹೆರಟ ಮತ್ತೆ ಕಾಲಿ ಅಪ್ಪನ್ನಾರವೂ ತಿಂಬದೇ ಹೇದು ಎಲ್ಲೋರುದೇ ಗಟ್ಟಿ ನಿಂದ ಕಾರಣವೇ ಮನೆಯೋನಿಂಗೆ ಪಾಟ ಕಲಿಶಲೆ ಎಡಿಗಾತು.
ಉಂಬಲೆ ಕೂದಲ್ಲೇ ಹಾಂಗಿತ್ತಿದ್ದವು, ಅಂಬಗ ಇನ್ನು ಬಾಕಿ ಒಳುದ ಹೊತ್ತು ಹೇಂಗಿದ್ದಿಕ್ಕು?
ಪರಸ್ಪರ ಒಬ್ಬನ ಒಬ್ಬ ಬಿಟ್ಟು ಹಾಕದ್ದೆ, ಎಲ್ಲೋರ ಆತ್ಮಗೌರವ ಒಳಿಶಲೆ ಒಗ್ಗಟ್ಟಿಲಿ ಇದ್ದಿಕ್ಕು. ಹಾಂಗೆ ಇದ್ದ ಕಾರಣವೇ ನಾವು ನಾವಾಗಿ ಒಳುದ್ದು. ಅಲ್ಲದೋ?

ತಿಂಬ ಸಾಮರ್ಥ್ಯ ಅಂತೂ ಗಮನುಸಲೇ ಬೇಕಾದ ಮತ್ತೊಂದು ಅಂಶ.
ಅವಕ್ಕೆ ತಿಂಬಲೆ ಮಾಂತ್ರ ಎಡಿಗಾದ್ಸು ಅಲ್ಲ, ಮೈ ಮುರುದು ದುಡಿವಲೂ ಅರಡಿಗಾಗಿತ್ತು – ಹೇಳುಗು ದೊಡ್ಡಪ್ಪ.
ಈಗ ನವಗೆ ತಿಂಬಲೂ ಎಡಿಯ, ದುಡಿವಲೂ ಎಡಿಯ.
ಸುರೂವಾಣ ಸರ್ತಿ ಹೋಳಿಗೆ ಬಪ್ಪಗ “ಅರ್ದ” ಬಳುಸಲೆ ಹೇಳುಸ್ಸು, ಎರಡ್ಣೇ ಸರ್ತಿ “ಬೇಡ” ಹೇಳುದು.
ಆರಾರೊಬ್ಬ ಎಡೇಲಿ “ಒಂದು ಬಳುಸಿ” ಹೇಳಿರೆ ಅವನ ಬೇರೆ ಲೋಕಂದ ಬಂದೋನ ಹಾಂಗೆ ನೋಡ್ಳಿದ್ದು ಒಂದರಿ! ಅಲ್ಲದೋ? – ಕೇಳಿದವು ದೊಡ್ಡಪ್ಪ°.

ಹಾಂಗೆಯೇ ಮತ್ತಾಣ ಸಂಗತಿ ನಾವು ಗಮನುಸೇಕಾದ್ಸು – ತಾಳ್ಮೆ.
ಹೆರಟದರ್ಲಿ ಇಡೀ ಶುಕ್ರುಂಡೆರಾಶಿ ಮುಗಿತ್ತನ್ನಾರವೂ ಆರೊಬ್ಬನೂ ಹಂದಿದ್ದವಿಲ್ಲೆ.
ಆ ಕೆಲಸದ ಎಡೆಲಿ ಅವಕ್ಕೆ ಎಂತ ಅಂಬೆರ್ಪುದೇ ಬಯಿಂದಿಲ್ಲೆ.
ನವಗೆಡಿಗೋ?
ಶುಕ್ರುಂಡೆ ಮುಗಿವದು ಬಿಡಿ, ಆಚ ಹೊಡೆಂಗೆ ಮಜ್ಜಿಗೆ ಎತ್ತುಲೆ ಪುರ್ಸೊತ್ತಿಲ್ಲೆ, ಇಲ್ಲಿ ಎಂಜಲು ಕೈ ಬೀಸಿಂಡು ಎದ್ದಾತು!
ಒಟ್ಟಿಂಗೇ ಕೂದೋರು ಒಟ್ಟಿಂಗೇ ಏಳುವೊ° – ಹೇದು ರಂಗಮಾವನ ಹಾಂಗಿಪ್ಪ ಕೆಲವು ಜೆನ ಬೊಬ್ಬೆ ಹೊಡಕ್ಕೊಂಡೇ ಬಾಕಿ! ನವಗೆ ಅಂಬೆರ್ಪು.
ಅಲ್ಲದೋ?

~

ದೊಡ್ಡಪ್ಪ ಈ ಕತೆ ಮುಗುಶಿಂಡಿಪ್ಪಗಳೇ ಸುಭಗಣ್ಣನೂ, ಕುಂಬ್ಳೆಜ್ಜನೂ ಎತ್ತಿದವು. ಒಟ್ಟಿಂಗೇ ಬೈಕ್ಕಿಲಿ ಬಂದ್ಸಡ.
ಬಪ್ಪಾಗ ಮಳೆಲಿ ಚೆಂಡಿ ಆದ ಶುದ್ದಿ ಮಾತಾಡ್ಳೆ ಸುರುಮಾಡಿ, ಆಸರಿಂಗೆ ಕುಡಿವಲೆ ಸುರುಮಾಡಿ ಅಪ್ಪದ್ದೇ, ದೂರಲ್ಲಿ ಕಂಡ ಕೋಳಿಕ್ಕಜೆ ಮಾವನ ಮಾತಾಡ್ಸಿ ಬಪ್ಪಲೆ ದೊಡ್ಡಪ್ಪ ಎದ್ದವು.
~

ಅಪ್ಪಲೆ, ಬರೇ ಒಂದು ಊಟದ ಕತೆ ಆದರೂ – ಸ್ವಾಭಿಮಾನಿಗೊಕ್ಕೆ ಒಗ್ಗಟ್ಟಿನ ಪಾಟ ಹೇಳ್ತು.
ನಮ್ಮ ಹಳಬ್ಬರ ಒಂದೊಂದು ಕತೆಗಳೂ, ಅಲ್ಲಿಪ್ಪ ಒಂದೊಂದು ನೆಡವಳಿಕೆಗಳೂ ನಮ್ಮ ಸ್ವಾಭಿಮಾನವ ಕೆರಳುಸುತ್ತು.
ಹೀಂಗಿರ್ಸ ಕತೆ ಕೇಳಿರೆ ಪುನಾ ನಮ್ಮ ಒಗ್ಗಟ್ಟು ಹೆಚ್ಚುಸಲೆ ಎಡಿಯದೋ?
ಎಂತ ಹೇಳ್ತಿ?

ಒಂದೊಪ್ಪ: ಸ್ವಾಭಿಮಾನಿಗೊ ಒಗ್ಗಟ್ಟಾಯೇಕಾರೆ ಇತಿಹಾಸ ಗೊಂತಿರೇಕಡ; ಮಾಷ್ಟ್ರುಮಾವ ಹೇಳಿದವು°.

ಸೂ:

  • ದೊಡ್ಡಪ್ಪ ಹೇಳಿದ ಕತೆಯ ಘಟನೆ ಸತ್ಯ ಆದರೂ, ಅದರ್ಲಿದ್ದ ಜೆನಂಗೊ ಬೇರೆ. ಆತೋ? 🙂
  • ಸಾಂದರ್ಭಿಕ ಚಿತ್ರ, ಅಂತರ್ಜಾಲ ಕೃಪೆ. (ministerlane.wordpress.com)

16 thoughts on “ಒಗ್ಗಟ್ಟಿದ್ದರೆ ಸ್ವಾಭಿಮಾನಕ್ಕೆ ಬೆಲೆ ಜಾಸ್ತಿ!

  1. ಆನೂ ಹೂ೦ಗುಟ್ಟಿದೆ ಇಲ್ಲಿ೦ದಲೆ.
    ಮದಲು ಇದು ಖ೦ಡಿತಾ ನೆಡದಿಕ್ಕು,ನಮ್ಮ ಹಿ೦ದಾಣ ತಲೆಮಾರಿನ ಹಿರಿಯರ ಮನಸ್ಸಿನ ಸರಿಯಾಗಿ ಬಿ೦ಬಿಸುವ ಶುದ್ದಿ.ನಾವು ಕಲಿಯೆಕ್ಕಾದ ವಿಷಯ೦ಗೊ ಸುಮಾರು ಇದ್ದು.
    ಹ್ಮ್..ಎನಗೊ೦ದು ಹಳೇ ಘಟನೆ ನೆ೦ಪಾತು.ಒ೦ದು ಜೆ೦ಬ್ರದ ಮುನ್ನಾಣ ದಿನ ಇರುಳಿ೦ಗೆ ಊಟದ ಹ೦ತಿಲಿ ಮನೆ ಯೆಜಮಾನ ಊಟಕ್ಕೆ ಕೂದ ಸಣ್ಣ ಮಾಣಿಯ ಹತ್ರೆ ”ನಿನಗೆ೦ತ ಬೇಕು ಹೇಳು,ಕೂಡ್ಲೆ ಬಳುಸುವೊ°” ಹೇಳಿ ಕೇಳಿಯಪ್ಪಗ ಆ ಮಾಣಿ ” ಅಜ್ಜಾ°,ಎನಗೆ ಮೇಲಾರ ಬೇಕು” ಹೇಳಿದ°.ಶನಿಶನಿಗೆ ಅ೦ದು ಮೇಲಾರ ಮಾಡಿದ್ದವಿಲ್ಲೆ!
    ಮತ್ತೆ ಒಳ ಹೋಗಿ ಕೊದಿಲ ಬಾಗಕ್ಕೆ ಮಜ್ಜಿಗೆ ಕಲಸಿ ಮೇಲಾರ ಮಾಡಿ ಬಳುಸೆಕ್ಕಾತು !

  2. ಓ ಒಪ್ಪಣ್ಣಂದ್ರೇ…
    ನಿಂಗ ಮಾತು ಮಾತಿಂಗೂ ಜೆಂಬ್ರ ಶುದ್ದಿ ತೆಗದರೆ ಮೆಸ್ಸಶನ ಉಂಬ ಎನಗೆ ಕೊದಿ ಆವ್ತನ್ನೇ….

  3. ಲಾಯಕ ಆಯಿದು ಒಪ್ಪಣ್ಣಾ….
    ಧನ್ಯವಾದ೦ಗೊ…

  4. ಶುದ್ದಿಯ ಆಶಯ ಮತ್ತೆ ವಿವರಣೆ ನೈಜವಾಗಿ ಬಂದು ಲಾಯಿಕ ಆಯಿದು.
    ಆರಿಂಗಾರೂ ಅನ್ಯಾಯ ಆದರೆ, ಅಥವಾ ಅವಮಾನ ಆದರೆ, ಎದುರುಸಲೆ ಈ ರೀತಿ ಎಲ್ಲರೂ ಒಗ್ಗಟ್ಟು ಆದರೆ ಪ್ರತಿಭಟನೆಯ ಕೆಲಸ ಹಗುರ ಅಕ್ಕು. ನಿರೀಕ್ಷಿತ ಫಲವೂ ಸಿಕ್ಕುಗು.
    “ಒಗ್ಗಟ್ಟಿಲ್ಲಿ ಬಲ ಇದ್ದು” ಹೇಳುವದರ ಸರಿಯಾಗಿ ತೋರಿಸಿಕೊಟ್ಟ ಪ್ರಸಂಗ ನವಗೆ ಮಾದರಿ ಆಯೆಕ್ಕು.
    ಸಮಾಜ ಮುಂದೆ ಹೋಯೆಕ್ಕಾರೂ ಒಗ್ಗಟ್ಟು, ಪರಸ್ಪರ ಪ್ರೀತಿ ವಿಶ್ವಾಸ ಮುಖ್ಯ.

  5. ಮೊದಲಾಣವು ತಿಂಬದರಲ್ಲೂ ದುಡಿವದರಲ್ಲೂ ಬಲ.
    ನಮ್ಮ ಊರಿಲಿ ಒಬ್ಬರು ಇನ್ನೊಬ್ಬರಿಂಗೆ ಸಕಾಯ ಮಾಡಿ,ಅಡಿಗೆ ಮಾಡುದೂ ಇತ್ತಡ.ಪಂಥ ಕಟ್ಟಿ ತಿಂಬದೂ ಇತ್ತಡ.
    ಒಂದಾರಿ ಒಬ್ಬ ಅಜ್ಜನ ಹೀಂಗೆ ಮರುಳುಕಟ್ಟಿಸಿ,ಹೋಳಿಗೆ ತಿನ್ನಿಸಿದವಡ.ಮರುದಿನ ಸುಮಾರು ಸರ್ತಿ ಭೇದಿ ಆಗಿ ಅಜ್ಜ ಹರೋಹರಃ
    ಆರಿಂಗೆ ಸ್ವಾಭಿಮಾನ,ಅರಗಿಸಿಕೊಂಬ ಸಾಮರ್ಥ್ಯ ಇಲ್ಲೆಯೋ ಅಂತವರಿಂದ ಒಪ್ಪಣ್ಣ ಹೇಳಿದ ಈ ಕತೆಯ ಅನುಕರಿಸಲೆ ಎಡಿಯ.
    ಲೇಖನ ಲಾಯ್ಕ ಆಯಿದು ಹೇಳಿ ಮೆಚ್ಚಿಗೆಯ ಮಾತು ಹೇಳುತ್ತೆ.

  6. ಹೋಯ್, ಶುದ್ದಿ ಚೊಲೋ ಆಯ್ದು ಹಾ….
    ಪ್ರಾಮಾಣಿಕವಾಗಿ ಹೇಳಕ್ಕೂ ಅ೦ದ್ರೆ ಆನು ಪೂರ್ತಿ ಶುದ್ದಿ ಓದುಲೆ ಸ್ವಲ್ಪ ಜಾಸ್ತಿನೇ ಟೈ೦ ತೆಕ್ಕೊಡಿದಿ! ನಿ೦ಗಳು ಉಪಯೋಗಿಸೋ ಆ ಒರಿಜಿನಲ್ ’ನುಡಿಗಟ್ಟು’ ರಾಶಿ ಕೊಶಿ ಕೊಡ್ತು. ನಮ್ಮ ಭಾಷೆ ಎಶ್ಟು ಮೈ ತು೦ಬಿಕೊ೦ಡಿದ್ದು ಅ೦ತ ಅನ್ನುಸ್ತು. ನಮ್ಮಲ್ಲಿಯ ಮದುವೆ ಪ್ರಸ೦ಗ ನೈಜವಾಗಿ ಮೂಡಿ ಬೈ೦ದು. ಅಜ್ಜ೦ದ್ರ ಹೆಸರಿನ ಉದ್ದ ಲಿಸ್ಟ್ ಚೊಲೊ ಇದ್ದು!

  7. ಶುದ್ದಿ ಪಷ್ಟಾಯ್ದು ಒಪ್ಪಣ್ಣ..!!..ನವಗೆ ೨-೩ ಹೋಳಿಗೆ ತಿಂದು ಗೊಂತಿದ್ದರೂ, ಚೂಂತಾರು ಪ್ರಸಾದಣ್ಣನ ಹಾಂಗೆ ೧೫-೨೦ ಎಡಿಯ ಇದಾ..!!

  8. ಒಳ್ಳೆ ಶುದ್ದಿ..ಹೆರಿಯೋರ ಒಗ್ಗಟ್ಟು ನಮಗೆ ಯೇವಾಗಳೂ ಮಾದರಿಯಾಗಲಿ
    ‘ಸ್ವಾಭಿಮಾನಿಗೊ ಒಗ್ಗಟ್ಟಾಯೇಕಾರೆ ಇತಿಹಾಸ ಗೊಂತಿರೇಕಡ’ ಖಂಡಿತವಾಗಿಯೂ ಅಪ್ಪು ಒಪ್ಪಣ್ಣ. ಹೀಂಗಿಪ್ಪ ಕತೆ ಕೆಳಿರೆ ನವಗೂ ಪಾಟ..

  9. ಬಹುಷಃ ನಿಜವಾಗಿಯೂ ನೆಡದ ಘಟನೆ ಇದು. ಆನು ತಿಳುದ ಮಟ್ಟಿಂಗೆ ಮನೆ ಯಜಮಾನ ಹಾಂಕಾರ ಮಾಡಿದ್ದಲ್ಲ, ಪಾಪದವ° ಒಬ್ಬ° ಹೊಸ ಬಗೆಯ ಸ್ವೀಟು ಮಾಡ್ಸಿದ್ದು ಊರ ಗುರಿಕ್ಕಾರಂಗೆ ತಡವಲೆಡಿಯದ್ದೆ ಎಲ್ಲೋರಿಂಗೂ ಸರೀ ತಿನ್ನುಸಿ ಸ್ವೀಟು ಖಾಲಿ ಹೇಳಿ ಆವುತ್ತ ಹಾಂಗೆ ಮಾಡಿದ್ಸು ಅಪ್ಪು. ಅದು ಗುರಿಕ್ಕಾರನ `ಈಗೋ’ಕ್ಕೆ ಬೇಕಾಗಿ ಬಾಕಿಪ್ಪವು ಒಟ್ಟು ಸೇರಿದ ಕಥೆ. ಮೊದಲಾಣ ಕಾಲಲ್ಲಿ ಹಾಂಗೆಲ್ಲ ನೆಡಕ್ಕೊಂಡು ಇದ್ದಿಕ್ಕು, ಈಗ ಹಾಂಗೆ ಆರೂ ಮಾಡ್ತವಿಲ್ಲೆ. ಗೋಪಾಲ ಮಾವ° ಹೇಳಿದ ಹಾಂಗೆ ಎರಡ್ನೇ ಸರ್ತಿ ಸ್ವೀಟು ಬಪ್ಪಗಳೇ ಬೇಡ ಹೇಳ್ತವು ಜಾಸ್ತಿ. ಹಾಂಗಾಗಿ ಕವಂಗ ಕವಂಗ ಸೀವು ತಿಂಬವು, ಕೆರುಷಿ ಹೋಳಿಗೆ ತಿಂಬವು ಈಗಾಣ ಕಾಲಲ್ಲಿ ಕಮ್ಮಿಯೇ.

  10. ಮನೆ ಎಜಮಾನನ ಹಾಂಕಾರದ ಮಾತಿಂಗೆ ಶಂಕರಜ್ಜ ಪಿರಿ ಕಾಸಿದ್ದು ಲಾಯಕಾಯಿದು. ಮಾತಿಲ್ಲಿಪ್ಪ ಭಾವನೆಯನ್ನೇ ಅರ್ಥ ಮಾಡ್ಯೊಂಡು ಅಸಹಕಾರ ಚಳವಳಿ ಮಾಡಿದ ಇಡೀ ಹಂತಿಯ ಒಗ್ಗಟ್ಟು ಕಂಡು ಕೊಶಿ ಆತು. ಸ್ವಾಭಿಮಾನ, ಒಗ್ಗಟ್ಟು, ತಾಳ್ಮೆಗಳ ತೋರುಸಿತ್ತು ಕಥೆ. ಸ್ವೀಟು ಬಡುಸೆಂಡು ಬಪ್ಪಗ ಎರಡ್ನೇ ಸರ್ತಿ ಬೇಕು ಹೇಳಿದವನ, ಬೇರೆ ಏವದೋ ಲೋಕಂದ ಬಂದವನೋ ಹೇಳ್ತ ಹಾಂಗೆ ಬಾಕಿ ಇಪ್ಪವು ನೋಡ್ತದು, ನಿಜವಾಗಿಯೂ ಅಪ್ಪು ! ಬಡುಸಲೆ ಗೊಂತಿಲ್ಲದ್ದವು, ಹಂತಿಲಿ ಸುರುವಾಣ ಸರ್ತಿ ಬಡುಸುವಗಳೇ “ಬೇಕೊ, ಬೇಕೊ” ಹೇಳಿ ವಿಚಾರುಸೆಂಡು ಬತ್ತದುದೆ ಕೆಲವು ದಿಕ್ಕೆ ಕಂಡು ಬತ್ತು. ನಿಜವಾಗಿಯೂ ತಿನ್ನೆಕು ಹೇಳಿ ಇದ್ದವಂಗೆ ದಾಕ್ಷಿಣ್ಯ ಆಗದ್ದೆ ಇಕ್ಕೊ ?! ಎಂತದೇ ಇರಳಿ. ಸ್ವಾಭಿಮಾನ/ ಒಗ್ಗಟ್ಟಿನ ಬಗೆಲಿ ಒಳ್ಳೆ ಶುದ್ದಿ.

    1. ಮಾವಾ

      ಈ ಸುದ್ದಿಂದ ಒಂದು ನಾಟಕದ ಕತೆ ಅಕ್ಕೋ..

      ಈ ವರುಷದ ಹವ್ಯಕ ಕಾರ್ಯಕ್ರಮಕ್ಕೆ ಅಕ್ಕಿದಾ..

      1. ಕಥಾ – ನಿರ್ದೇಶನ – ಹಿನ್ನಲೆ – ಸಂಭಾಷಣೆ ಆರು ಬರವದು ಭಾವ ? ಎಷ್ಟು ಸುಕ್ರುಂಡಗೆ ನಿಂಗೊ ರೆಡಿ ?! ಹೆಹೆಹೆಹೆ!!

    2. ಹಹ್ಹಹ್ಹಾ… ಎಂಗೊ ಸಣ್ಣ ಇಪ್ಪಗ ಬಳುಸುಲೆ ಕಲಿವಲೆ ಸುರು ಮಾಡುವಗ ಸುರುವಿಂಗೆ ಬೇಕಾ ಬೇಕಾ ಕೆಳಿಯಪ್ಪಗ ಹಿರಿಯರು ತಿದ್ದಿದ್ದು ನೆಂಪಾತು ಬೊಳುಂಬು ಗೋಪಾಲ ಅಣ್ಣಾ…

  11. ಸಮಯೋಚಿತವಾದ ಲೇಖನ ಉತ್ತಮವಾಗಿ ಮೂಡಿ ಬಯಿಂದು ಒಪ್ಪಣ್ಣ… ಇಂದು ಯಾವ ಕ್ಷೆತ್ರಲ್ಲಿಯೇ ಆಗಲಿ ಹವ್ಯಕರು ಮುಂದೆ ಇದ್ದವು. ಹಾಂಗಾಗಿ ಜಗತ್ತಿನ ಗೆಲ್ಲುಲೆ ಹವ್ಯಕರಿಂಗೆ ಏನೇನೂ ಕಷ್ಟ ಇಲ್ಲೇ… ಒಂದೇ ಒಂದು ಕೊರತೆ ಹೇಳಿರೆ ಒಗ್ಗಟ್ಟು. ಪ್ರತಿಯೊಬ್ಬನೂ ಎನ್ನ ಕ್ಷೇತ್ರವೇ ಮೇಲೆ ಹೇಳುವವೇ ಇಪ್ಪದು ಅಲ್ಲದ್ದೆ ಯಾವುದರ ಮೂಲಕ ನಾವು ಒಗ್ಗಟ್ಟು ಸಾಧುಸಲಕ್ಕು? ಯಾವುದರಲ್ಲಿ ನಮ್ಮೆಲ್ಲರ ಹಿತ ಅಡಗಿದ್ದು? ಹೇಳುದು ಗೊಂತಿದ್ದರೂ ಅಳವಡಿಸಿಗೊಮ್ಬಲೇ ತಯಾರಿಲ್ಲೇ.ಹವ್ಯಕರ ಈ ಗುಣವ ಇತರರು ದುರುಪಯೋಗ ಮಾಡುತ್ತಾ ಇದ್ದವು.

    ಎನಗೆ ಅನ್ನಿಸುದು ಈ ಕಾಲಲ್ಲಿ ಪ್ರತಿಯೊಬ್ಬನೂ ಅಮ್ಮನಾಗಿ ಆಲೋಚನೆ ಮಾಡೆಕ್ಕು. ಹತ್ತು ಹನ್ನೆರಡು ಮಕ್ಕೋ ಬೇರೆ ಬೇರೆ ಸ್ವಭಾವದವು,ಪಿಸುರಿನ ಗೆಂಡ ಇವರೆಲ್ಲರ ಹೊಂದುಸಿ ಯಶಸ್ಸು ಸಾಧಿಸಿದ ಆ ಅಮ್ಮಂದ್ರ ಕಥೆ ನಮಗೆ ಸಿಕ್ಕುವ ಹಾಂಗೆ ಆಯೆಕ್ಕು. ಹೆಚ್ಚಿನವರದ್ದೂ ಕಣ್ಣೀರಿನ ಕಥೆ ಆದಿಕ್ಕು. ಆದರೆ ಇಂದಿನ ಯುವ ಜನಾಂಗಕ್ಕೆ ಅದು ಅತೀ ಅಗತ್ಯವಾಗಿ ಬೇಕು. ಅಮ್ಮನ್ದ್ರು ಯಾವಾಗಲೂ ಸೋತು ಗೆಲ್ಲುವವು, ತಾನು ಸೋತು ಮಕ್ಕಳ ಗೆಲ್ಲಿಸಿ,ಮಕ್ಕಳ ನಲಿವಿನ ಜೊತೆ ತಾನು ನಲಿಯುವವಳು. ಇಂದು ಸಮಾಜವ ಒಂದು ಸರಿದಾರಿಗೆ ಕೊಂಡು ಹೋಯೆಕ್ಕಾರೆ ಅದೇ ಮಾರ್ಗ ಆಯೆಕ್ಕಷ್ಟೇ. ಆ ಅಮ್ಮನ್ದ್ರು ವಿವಿಧ ಸಂದರ್ಭಲ್ಲಿ ಅಳವಡಿಸಿಗೊಂಡ ಉಪಾಯಂಗೋ, ತೆಕ್ಕೊಂಡ ದೃಢ ನಿರ್ಧಾರನ್ಗೋ ಇವುಗಳೆಲ್ಲ ನಮಗೆ ಮಾರ್ಗದರ್ಶನ ನೀಡುಗು.

  12. “ಅಬ್ಬ! ಅಜ್ಜಂದ್ರೇ!!” ಹೇದು ಹೇಳಿಹೋತು ಕತೆ ಕೊಡಿಯೆತ್ತಿಯಪ್ಪಗ. “ಅಪ್ಪನ್ನೆ! ಅಪ್ಪು!!” ಗ್ರೇಶಿಹೋತು ಒಂದೊಪ್ಪ ಓದಿಯಪ್ಪಗ.

    ಎಂತಾರು ಭಾವ., “ಸುದ್ಧಿ ಪಷ್ಟಾಯ್ದು – ಪಾಯಿಂಟ್ ಲಾಯಕ್ಕಾಯ್ದು” ಹೇಳಿತ್ತು – ‘ಚೆನ್ನೈವಾಣಿ’

  13. ಯಬ್ಬಾ! ಎಂತಾ ನೀತಿ ಇಪ್ಪ ಕತೆ ಒಪ್ಪಣ್ಣಾ…
    ನಿಜವಾಗಿದೆ ಇಂದ್ರಾಣ ದಿನಲ್ಲಿ ನಾವೆಲ್ಲ ಕಲಿವಲೇ ಬೇಕಾದ ಪಾಠ ಅಲ್ಲದಾ?
    ದೊಡ್ಡಪ್ಪ ಹೇಳಿದ ಕತೆಯ ನಂತರ ಒಪ್ಪಣ್ಣ ಬರದ ನಾವು ಗಮನಿಸೆಕ್ಕಾದ ಅಂಶಂಗಳ ನಿಜವಾಗಿ ನಾವು ನಮ್ಮ ಜೀವನಲ್ಲಿ ಅಳವಡಿಸಿಗೊಳೆಕ್ಕು…
    ಇನ್ನಾಣ ವಾರ ಇನ್ನೆಂತ ಶುಧ್ಧಿ?
    ~ಸುಮನಕ್ಕಾ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×