Oppanna.com

ಒಕ್ಕಲು, ಗೆಯ್ಮೆ, ಗೇಣಿ, ಆರ್ವಾರ…

ಬರದೋರು :   ಒಪ್ಪಣ್ಣ    on   22/02/2013    17 ಒಪ್ಪಂಗೊ

ಆಚಮನೆ ದೊಡ್ಡಪ್ಪನ ಬಾಯಿಲಿ ಎಲೆ ಇಲ್ಲದ್ದರೆ ಒಪ್ಪಣ್ಣಂಗೆ ಅದೇ ಕೊಶಿ.
ಎಂತಗೆ? ಹಲವಾರು ಹಳೆಕತೆಗೊ, ಸನ್ನಿವೇಶಂಗೊ, ಸಂದರ್ಭಂಗೊ ಏವದಾರು ನೆಂಪಾದ್ಸರ ಹೇದೊಂಡೇ ಇರ್ತವು.
ಅವ್ವಾಗಿ ನೆಂಪು ಮಾಡದ್ದರೂ – ಈಗಾಣ ಸನ್ನಿವೇಶಂಗೊ ಒಂದೊಂದು ನೆಂಪುಮಾಡುಸುತ್ತು.
ಅಂಬಗ ಬಾಯಿಲಿ ಎಲೆ ಇದ್ದರೆ? ಸುದ್ದಿಲ್ಲೆ! ಮಾತಾಡಿಕ್ಕಲೆಡಿಯ, ಹೂಂಕಾರಲ್ಲೇ ಪೂರ್ತ ಪ್ರತಿಕ್ರಿಯೆ.
ಏನೂ? – ಹೂಂ. ಚಾಯ ಬೇಕೋ? ಹೂಂ. ಚಾಯ ಬೇಡದೋ – ಉಹೂಂ – ಹೀಂಗೆ. ಪೇಪರುದೇ ಹುಂ-ಹೂಂ-ಹುಂ-ಹುಂ-ಹೂಂ – ಹೇಳಿಗೊಂಡೇ ಓದುಸ್ಸು ಅವು.
ಹಾಂಗೆ ಹೇಳಿಗೊಂಡು, ಎಲೆ ತಿಂದಿಪ್ಪಗ ಏನಾರು ಅತ್ಯಾಸಕ್ತಿ ವಿಶಯ ಬಂದು ಅವಕ್ಕೆ ಮಾತಾಡೇಕು ಅನುಸಿರೆ, ಕೂದಲ್ಲಿಂದ ಸೀತ ಎದ್ದು ಜಾಲಕೊಡಿಯಂಗೆ ಹೋಕು;
ಪುರೂಲನೆ ಎಲೆತುಪ್ಪಿ ಬೀಸಕೆ ಬಂದು ವಿಶ್ಯಂಗಳ ಸುರುಮಾಡುಗು.
ಅಂತೂ – ಎಲೆ ತಿಂತ ಸಾಜ ನೆತ್ತರಿಲೇ ಬಂದದಾಡ; ಮಾಷ್ಟ್ರುಮಾವಂಗೂ ಅವಕ್ಕೂ ಇಪ್ಪ ಸಾಜ ಅದುವೇ ಅಲ್ಲದೋ?
~

ಮೊನ್ನೆಯೂ ಹಾಂಗೇ ಆತು.
ಪುತ್ತೂರು ಕರಸೇವೆ ಕಳುಶಿಕ್ಕಿ ನಾವು ಮಾಷ್ಟ್ರುಮಾವನ ಮನೆಗೆ ಆಗಿಂಡೇ ಬಂದ್ಸು.
ಆಗಳೇ ಬಂದ ಆಚಮನೆ ದೊಡ್ಡಪ್ಪಂಗೆ ಎಲೆತಿಂದಾಯಿದಷ್ಟೆ; ಬಾಯಿಪಾಕ ಏರದ್ದೆ ಅವು ಎಷ್ಟು ಪೇಪರು ಓದಿ ಆದರೂ ಹೆರಡವು.
ಮಾಷ್ಟ್ರುಮಾವ° ಕರಸೇವೆ ಶುದ್ದಿಯ ಅತ್ತೆಗೆ ವಿವರ್ಸೆಂಡು ಇಪ್ಪಾಗ ದೊಡ್ಡಪ್ಪಂದೇ ಕೇಳಿಗೊಂಡಿತ್ತವು. ಅಷ್ಟಪ್ಪಗಳೇ ಆತಿದಾ ನಾವು ಎತ್ತಿದ್ದು.
ಆರೆಲ್ಲ ಬಂದಿತ್ತವು ಹೇದು ಮಾಷ್ಟ್ರುಮಾವ ಒಂದು ಸಣ್ಣಮಟ್ಟಿನ ಪಟ್ಟಿ ಹೇಳಿ ಮುಗುಶಿದವಷ್ಟೆ,
ಕರಸೇವೆಯ ಸಭೆಲಿ ಮಾಷ್ಟ್ರುಮಾವಂಗೆ ಅಪುರೂಪದ ಒಬ್ಬ ನೆಂಟ್ರು – ಸೂರಂಬೈಲಿಲಿ ಎಲ್ಲಿಯೋ ಗೇಣಿಗೆ ಇದ್ದಿದ್ದ ಮಾವಯ್ಯರ ಮಗ ಭಾವಯ್ಯ° ಸಿಕ್ಕಿದವಾಡ.
ಈಗ ಬೆಳ್ತಂಗಡಿ ಹೊಡೆಲಿ ಎಲ್ಲಿಯೋ ಮಾಷ್ಟ್ರ ಆಗಿ ಇದ್ದವಾಡ ಅವು. ಮೋರೆ ಸಾಜಲ್ಲಿ ಅವಕ್ಕೆ ಗುರ್ತ ಸಿಕ್ಕಿದ್ಸಾಡ; ಸುಮಾರು ಮಾತಾಡಿದವಾಡ; ಇನ್ನೊ ಏನೇನೋ ಹೇಳಿದವು.

ದೊಡ್ಡಪ್ಪ ಸೀತ ಎದ್ದು ಜಾಲಕರೆಲಿ ಎಲೆತುಪ್ಪಿ ಬಂದವು.
ಎಂತಾರು ವಿಶೇಷದ್ದು ಹೇಳುಲೆ ಊಕು ಬಂದರೆ ಬಾಯಿಪಾಕ ಏರುವನ್ನ ಮದಲೇ ತುಪ್ಪಿಕ್ಕುಗು ಆಚಮನೆ ದೊಡ್ಡಪ್ಪ! 😉
“ಹ್ಹೋ, ಅದು ದಿವಾಣ ಮಗುಮಾವನ ಪೈಕಿ ಅಲ್ಲದೋ,
ಮಗುಮಾವನ ಭಾವನ ತಮ್ಮನ ಮಗ ಅಲ್ಲದೋ..
ಅವ° ಅಲ್ಲದೋ – ಇವ° ಅಲ್ಲದೋ” – ಹೇದು ಆ ಜೆನರ ಜಾತಕ ಇಡೀ ವಿವರ್ಸಿದವು!
ಅವು ಎಲ್ಲಿ ಗೇಣಿಗೆ ಇದ್ದದು, ಮತ್ತೆ ಎಲ್ಲಿಗೆ ಹೋದ್ಸು – ಎಲ್ಲ ವಿವರ ಗೊಂತಿದ್ದ ಕಾರಣ ಆ ವಿವರುಸುತ್ತ ಊಕು ಬಂದದು ಹೇದು ನವಗೆ ಗೊಂತಾತು.
~

ಆ ಭಾವಯ್ಯ ಗೇಣಿಗೆ ಇದ್ದದೋ? – ಹೇದರೆ ಅದು ಅವರ ಜಾಗೆ ಅಲ್ಲದೋ? ಆ ಜಾಗೆಂದ ಮತ್ತೆ ಏಳೇಕಾತೋ? ಏವ ಇಸವಿಲಿ ಎದ್ದದು? ಬೆಳ್ತಂಗಡಿಲಿ ಜಾಗೆ ಮಾಡಿದ್ಸೋ?
ಅಪ್ಪಡ, ಆಯಿಕ್ಕು; ಮಾಷ್ಟ್ರುಮಾವ° ಹೇಳಿಂಡೇ ಹೋದವು.
ಹೀಂಗಿರ್ತ ವಿಶಯಲ್ಲಿ ಹೆಚ್ಚಿನ ವಿವರ ಬೇಕಾರೆ ದೊಡ್ಡಪ್ಪನ ಕೈಲೇ ಕೇಳಿರೆ ಒಳ್ಳೆದು.
ಯೇವ ವಿವರ? – ಭಾವಯ್ಯನ ವಿವರ ಅಲ್ಲ – “ಗೇಣಿ”ಯ ವಿವರ!
ಹಾಂಗೆ ಹೇದರೆಂತ್ಸು, ಹಾಂಗಿರ್ಸು ಬೇರೆಂತೆಲ್ಲ ಇದ್ದು – ಹೇಳ್ತ ವಿವರ.
“ಗೇಣಿ, ಗೇಣಿಯ ವಿವರಂಗೊ, ಹಾಂಗಿರ್ಸು ಬೇರೆಂತೆಲ್ಲ ಇದ್ದು ದೊಡ್ಡಪ್ಪಾ?” – ಕೇಳಿ ಅಪ್ಪದ್ದೇ, ಒಂದೊಂದಾಗಿ ವಿವರ್ಸಿದವು.
ಮಾಷ್ಟ್ರುಮಾವನೂ ಎಲೆತಿಂಬನ್ನಾರ ಮಾತುಕತೆಲಿ ಸೇರಿಗೊಂಡವು. ಒಪ್ಪಣ್ಣಂಗೆ ಪೂರ್ತ ನೆಂಪಿಲ್ಲೆ, ಶ್ರೀಅಕ್ಕನ ರಿಕಾರ್ಡು ಇದ್ದಿದ್ದರೆ ದೊಡ್ಡಪ್ಪ ಹೇಳುವಗ ಸುಚ್ಚು ಒತ್ತಿ ಮಡಗುತಿತೆ.
ನೆಂಪಿಪ್ಪಷ್ಟು ಇಲ್ಲಿದ್ದು.
~

ಭತ್ತದ ತೆನೆ - ಮೂರರಲ್ಲಿ ಎರಡು ಧಣಿಗೊಕ್ಕೆ, ಒಂದು - ಬೆಳೆಶಿದೋನಿಂಗೆ!
ಭತ್ತದ ತೆನೆ – ಮೂರರಲ್ಲಿ ಎರಡು ಧಣಿಗೊಕ್ಕೆ, ಒಂದು – ಬೆಳೆಶಿದೋನಿಂಗೆ!

ದೇವರು ಎಲ್ಲೋರನ್ನೂ ಸಮವಾಗಿಯೇ ಸೃಷ್ಟಿ ಮಾಡಿರೂ, ಮನುಷ್ಯರ ನೆಡುಗಾಣ ವಿತ್ಯಾಸಂದಾಗಿ ಕೆಲವು ಜೆನ ಪಾಪದೋರು, ಕೆಲವು ಜೆನ ದೊಡ್ಡೋರು; ಕೆಲವು ಜೆನ ಶ್ರೀಮಂತರು, ಕೆಲವು ಜೆನ ಬಡವರು – ಹೀಂಗೆಲ್ಲ ಆಗಿ ಹೋಯಿದು.
ದೊಡ್ಡೋರ ಕೈಲಿ ಬೇಕಾಷ್ಟು ಜಾಗೆ, ತೋಟ; ಆದರೆ ದುಡಿಯಲೆ ಜೆನ ಇಲ್ಲೆ; ಪಾಪದೋರ ಹತ್ತರೆ ಬೇಕಾಷ್ಟು ಜೆನ, ಆದರೆ ದುಡಿಯಲೆ ಜಾಗೆ ಇಲ್ಲೆ – ಹೀಂಗೆಲ್ಲ ಅಸಮತೋಲನ.
ಎಲ್ಲಾ ಸಮಾಜಲ್ಲಿಯೂ, ಎಲ್ಲಾ ಊರಿಲಿಯೂ ಇರ್ತು; ನಮ್ಮ ಊರಿಲಿಯೂ ಇದ್ದು. ಅದರ್ಲಿ ಏನೂ ಬೇಜಾರಿಲ್ಲೆ, ದೊಡ್ಡ ಸಂಗತಿಯೂ ಅಲ್ಲ.
ಆದರೆ, ಈ ಅಸಮತೋಲನದ ಎಡೆಲಿಯೂ ಎಲ್ಲೋರಿಂಗೂ ಹೊಟ್ಟೆ ತುಂಬುಸುತ್ತ ವೆವಸ್ತೆ ಎಷ್ಟು ಚೆಂದಲ್ಲಿ ನೆಡದ್ದು ಹೇಳ್ತದು ಸಮಾಜದ ಅನ್ಯೋನ್ಯತೆಗೆ ಹಿಡುದ ಕೈಕನ್ನಾಟಿ – ಹೇಳಿದವು ಮಾಷ್ಟ್ರುಮಾವ°.

ಮಾಷ್ಟ್ರುಮಾವ ನಿಲ್ಲುಸಿದಲ್ಲಿಂದ ಆಚಮನೆದೊಡ್ಡಪ್ಪ ಮಾತು ಮುಂದುವರುಸಿದವು.
“ಹಾಂಗೆ, ದೊಡ್ಡೋರು-ಪಾಪದೋರು ನೆಡುಗೆ ಹಲವು ವ್ಯವಹಾರಂಗೊ, ಮುಖ್ಯವಾಗಿ ಜಾಗೆಗೆ ಸಮ್ಮಂದ ಪಟ್ಟ ಹಾಂಗೆ- ನೆಡಕ್ಕೊಂಡು ಇದ್ದಿದ್ದಾಡ.
ಅದರ್ಲಿ ಈ ಒಕ್ಕಲು-ಗೇಣಿ-ಆರ್ವಾರ – ಹೀಂಗಿರ್ಸೂ ಇದ್ದು”. ಹೇಳಿದವು.
~
ಒಕ್ಕಲು:
ಒಬ್ಬನ ಜಾಗೆಲಿ ಮತ್ತೊಬ್ಬ ತಾತ್ಕಾಲಿಕವಾಗಿ ವಾಸ ಆಗಿಪ್ಪದಕ್ಕೆ ಒಕ್ಕಲು ಪದ್ಧತಿ ಹೇದು ಹೇಳುಸ್ಸಾಡ. “ಇದಾ, ನಿನ್ನ ಜಾಗೆಲಿ, ಈಗ, ಆನು, ಬಂದು, ಕೂದರೆ – ಅಷ್ಟಪ್ಪಗ ಆನು ನಿನ್ನ ಒಕ್ಕಲು ಹೇಳಿ ಲೆಕ್ಕ” – ಹೇಳಿದವು ದೊಡ್ಡಪ್ಪ. ಅವು ಉದಾಹರಣೆ ಕೊಡುವಾಗಳೂ, ಎದುರಾಣೋನಿಂಗೆ ಯೇವದೇ ಬೇನೆ ಆಗದ್ದ ಹಾಂಗೆ ನೋಡಿಗೊಂಡು ವಿವರುಸುತ್ತದು ನಿಜವಾಗ್ಯೂ ಮೆಚ್ಚೇಕಾದ್ಸೇ!
ಮದಲಿಂಗೆ, ಒಬ್ಬ ದೊಡ್ಡೋನ ಎಕ್ರೆಗಟ್ಳೆ ಆಸ್ತಿಲಿ ಹಲವು ಒಕ್ಕಲುಗೊ ಇದ್ದುಗೊಂಡಿತ್ತಿದ್ದವು. ಅಲ್ಲದ್ದರೆ ಆ ಜಾಗೆಯ ನೋಡಿಗೊಂಬಲೆ ದೊಡ್ಡೋನಿಂಗೂ ಎತ್ತ! ಧೈರ್ಯಕ್ಕೂ ಆತು, ಸುಖಕ್ಕೂ ಆತು – ಹೇದು ಹತ್ತು ಒಕ್ಕಲುಗಳ ಕೂರ್ಸಿಗೊಂಗು ಮದಲಿಂಗೆ.

ಒಕ್ಕಲಿನ ಒಳ ಹಲವು ವಿಧ ಇದ್ದು. ಕೆಲವು ಸರ್ತಿ ಕೆಲವು ಷರತ್ತಿನ ಮೇಗೆ ಒಕ್ಕಲಾಗಿ ಬಂದು ಕೂರ್ಸು. ಯೇವ ಷರತ್ತೂ ಇಲ್ಲದ್ದೆ ಬಂದು ಕೂದರೆ ಅದಕ್ಕೆ ಬರೇ “ಒಕ್ಕಲು” ಹೇಳುಸ್ಸು. ಎಜಮಾನ ತನಗೆ ಮನಸ್ಸು ಬಂದಷ್ಟು ಜಾಗೆಯ ಕೊಟ್ಟರೆ, ಅವನ ಮನಸ್ಸು ಇಪ್ಪನ್ನಾರ, ಅಲ್ಲಿ ಬದ್ಕಿಂಡು ಇಪ್ಪಲಕ್ಕು. ಅವನ ಮನೆಗೆ ಹೇಳಿ ಅಪ್ಪಗ ಕೆಲಸಕ್ಕೆ ಹೋಗಿಂಡು ಇದ್ದರಾತು; ಇತರ ಬಿಟ್ಟಿಚಾಕ್ರಿಗೊ ಮಾಡಿಂಡಿದ್ದರಾತು. ಹೊಟ್ಟಗೆ ಏನೂ ಸಮಸ್ಯೆ ಇಲ್ಲೆ. ತುಂಬ ಮದಾಲಿಂಗೆ ಬಟ್ಯನ ಹೆರಿಯೋರು ಶಂಬಜ್ಜನ ತರವಾಡುಮನೆ ಒಕ್ಕಲಾಗಿಯೇ ಇದ್ದದಾಡ. ಬಟ್ಯ ಈಗಳೂ ತರವಾಡು ಮನೆಯೋರ “ದನಿಕ್ಕುಳು” ಹೇಳಿಯೇ ದಿನಿಗೆಳುದು. ಜಾಗೆಯ ಎಜಮಾನಂಗೆ “ದನಿ” / ಧಣಿ ಹೇಳುಸ್ಸು ಇದಾ!
ಈಗ ನಾವೆಲ್ಲೋರುದೇ ಆ ಮಹಾಲಿಂಗೇಶ್ವರನ ಒಕ್ಕಲೇ ಅಲ್ಲದೋ – ದೊಡ್ಡಪ್ಪ° ಹೇಳಿಗೊಂಡವು ಎಡೆಲಿ!
~
ಅಂತೇ ಒಬ್ಬನ ಜಾಗೆಲಿ ಇನ್ನೊಬ್ಬ° ಕೂದರೆ ಕೆಲವು ಸ್ವಾಭಿಮಾನಿಗೊಕ್ಕೆ ಹಿತ ಆಗ. ಅವನ ಜಾಗೆಲಿ ಇವ ಕೂರ್ಸು; ಅವ ಹೇಳಿಅಪ್ಪಗ ಈಚವ ಕೂಲಿಮಾಡ್ಳೆ ಹೋವುಸ್ಸು – ಹೀಂಗೆಲ್ಲ ವೆವಸ್ತೆಗೊ; ಎಲ್ಲಾ ಕಾಲಲ್ಲಿಯೂ ಪ್ರಸ್ತುತ ಹೇಳುಲೆಡಿಯ. ಅದಕ್ಕಾಗಿ, ಬೇರೆ ವೆವಸ್ತೆಗೊ ಇದ್ದತ್ತು. ಗೆಯ್ಮೆ, ಗೇಣಿ ಹೇಳಿ ಎಲ್ಲ ಇದ್ದತ್ತು ಹೇಳಿದವು – ಮಾಷ್ಟ್ರುಮಾವ°.
“ಗೆಯ್ಮೆ” ಹೇದರೆಂತ್ಸು – ಆಚಮನೆ ದೊಡ್ಡಪ್ಪ ವಿವರ್ಸಿದವು.
~

ಗೆಯ್ಮೆ:
ಒಬ್ಬ ಧಣಿಯ ಹತ್ತರೆ “ಇಂತಿಷ್ಟು ಜಾಗೆ” ಹೇಳಿ ವಹಿಸಿಗೊಂಡು, ಆ ಜಾಗೆಲಿ ಕೃಷಿ ಮಾಡಿ ಗೈಕ್ಕೊಂಡು ಇಪ್ಪದೇ ಈ ಗೈಮೆ. ಆ ಜಾಗೆಲಿ ಇವ° ಗೆಯ್ದರ್ಲಿ ಫಲ ಸಿಕ್ಕುತ್ತಲ್ಲದೋ; ಅದರ್ಲಿ – ಮದಲೇ ನಿಘಂಟು ಮಾಡಿದ ಪ್ರಮಾಣಲ್ಲಿ – ಧಣಿಗೆ ಕೊಡೆಕ್ಕು. ಇದು ಗೆಯ್ಮೆಯ ಕರಾರು. ಸಾಮಾನ್ಯವಾಗಿ ಬೆಳೆಯ ಮೂರನೇ ಎರಡಂಶ ಧಣಿಗೆ, ಒಂದಂಶ ಗೆಮೆಯ ಒಕ್ಕಲಿಂಗೆ – ಹೇಳಿದವು ಆಚಮನೆ ದೊಡ್ಡಪ್ಪ.
ಕೂಲಿಗೆ ಕೆಲಸ ಮಾಡ್ತದು ಅಲ್ಲದ್ದ ಕಾರಣ ಎಡೆಹೊತ್ತಿಲಿ ನೀರುತೋಕಲೆ, ಅದಕ್ಕೆ ಇದಕ್ಕೆ- ಮನೆಯ ಎಲ್ಲೊರುದೇ ಸೇರುಗಾಡ. ಇದೂ ಒಕ್ಕಲೇ. ಆದರೆ ಪೂರ್ತಿ ಎಜಮಾನನ ಮರ್ಜಿಯೇ ಅಲ್ಲ; ಬದಲಾಗಿ ದುಡುದ್ದಕ್ಕೆ ಪ್ರತಿಫಲ ತೆಕ್ಕೊಂಬ ಸ್ವಾತಂತ್ರ ಇದ್ದು – ಹೇಳ್ತದು ಗೆಯ್ಮೆಯ ಹಿರಿಮೆ – ಹೇದು ಮಾಷ್ಟ್ರುಮಾವ° ಹೇಳಿದವು.
~
ಅಂಬಗ ಈ ಗೆಯ್ಮೆಗೆ ಒಪ್ಪಿಗೊಂಡೋನಿಂಗೆ ಧೈರ್ಯ ಎಂತರ? ಒರಿಶ ಪೂರ್ತಿ ದುಡುದು ಅಕೇರಿಗೆ ಬಿಟ್ಟಿಕ್ಕಿ ಹೋಪಗ ಎಂತ ಸಿಕ್ಕುತ್ತು? ಕೇಳಿದೆ. “ಬಿಟ್ಟಿಕ್ಕಿ ಹೋಪಗ ಎಂತೂ ಇಲ್ಲೆ, ಕೈ ಬೀಸಿಗೊಂಡು ಹೋಪದು ಅಷ್ಟೇ” ಹೇಳಿದವು ಆಚಮನೆ ದೊಡ್ಡಪ್ಪ°.
ಬಿಟ್ಟಿಕ್ಕಿ ಹೋಪಗಳೂ ಎಂತಾರು ಸಿಕ್ಕೇಕಾರೆ “ಗೇಣಿ” ಆಯೇಕು. ಅದರ್ಲಿ ಆದರೆ ಅಧಿಕೃತ ಪತ್ರ ವ್ಯವಹಾರ ಇದ್ದು – ಮಾಷ್ಟ್ರುಮಾವ° ಹೇಳಿದವು.
~

ಗೇಣಿ:
ಆಗ ಮಾತಾಡಿದ ಹಾಂಗೆ ಇದು ಗೆಯ್ಮೆಯ ಹಾಂಗೆಯೇ. ಆದರೆ ಎರಡು ವಿಷಯಲ್ಲಿ ಇದು ಹೆಚ್ಚು ಅಧಿಕೃತ. ಅದೆಂತೆಲ್ಲ?
ಒಂದನೇದು – ಧಣಿಗೂ – ಒಕ್ಕಲಿಂಗೂ ನೆಡುಗೆ ಆದ ಮಾತುಕತೆಯ ಪತ್ರವ್ಯವಹಾರಲ್ಲಿ ಬರೆಶಿ ಅಧಿಕೃತ ಮಾಡುಸ್ಸು. ಇದಕ್ಕೆ ಗೇಣಿಚೀಟು – ಹೇಳ್ತದು. ಎರಡ್ಣೇದು – ಒಕ್ಕಲು ಆ ಜಾಗೆಲಿ ಮಾಡಿದ ಹೊಸ ಕೆಲಸಂಗೊಕ್ಕೆ ಬೆಲೆ ಕಟ್ಟಿ, ಧಣಿ ಅಷ್ಟು ಪೈಶೆಯ ಒಕ್ಕಲಿಂಗೆ ಕೊಡ್ಸು ಕ್ರಮ – ಹೇಳಿದವು ದೊಡ್ಡಪ್ಪ°. ಇದಕ್ಕೆ “ಕೃತ” ಹೇಳುಸ್ಸು.
ಈ ಗೇಣಿಲಿಯೂ ಅದರ ವಾಯಿದೆಗೆ ಅನುಸಾರವಾಗಿ ಹಲವು ವಿಧ ಇದ್ದು. ಅದರ್ಲಿ ಮುಖ್ಯಪಟ್ಟದು ಮೂರು ನಮುನೆದಾಡ.

  1. ಚಾಲುಗೇಣಿ:
    ಚಾಲುಗೇಣಿ ಹೇದರೆ, ಗೇಣಿಚೀಟಿನ ಒಂದು ಒರಿಶದ ವಾಯಿದೆಗೆ ಮಾಡುಸ್ಸು. ಸಾಮಾನ್ಯವಾಗಿ ವಿಷುವಿಂದ ವಿಷುವಿಂಗೆ ಹೇಳಿ ಲೆಕ್ಕ ಆಡ. ಈ ಸಂವತ್ಸರದ ವಿಷುವಿಂಗೆ ಒಬ್ಬನ ಜಾಗೆಲಿ ಇನ್ನೊಬ್ಬ ವಾಯ್ದೆಗೇಣಿ ಒಪ್ಪಿಗೊಂಡ್ರೆ, ಈ ಸರ್ತಿಯಾಣ ಬೆಳೆ ತೆಗದ ಮತ್ತೆ ಇನ್ನಾಣ ವಿಷುವಿಂದ ಮದಲೇ ವಾಯಿದೆ ಆತು. ಮತ್ತಾಣ ಒರಿಶ ಪುನಾ ಚಾಲ್ತಿಗೆ ತರೆಕಾರೆ ಪುನಾ ಗೇಣಿಚೀಟು ಮಾಡಿ ಆಯೇಕಿದಾ!
    ಅಂಬಗ, ಗೆಯ್ಮೆಗೂ ಇದಕ್ಕೂ ವಿತ್ಯಾಸ ಎಂತರ ದೊಡ್ಡಪ್ಪಾ? ಕೇಳಿದೆ.
    ಗೆಯ್ಮೆಯೂ ಒರಿಶಂದ ಒರಿಶಕ್ಕೇ ಲೆಕ್ಕ ಆದರೂ, ಚಾಲುಗೇಣಿಗೂ –ಗೆಯ್ಮೆಗೂ ವಿತ್ಯಾಸ ಇದ್ದು. ಅದೆಂತರ – ಧಣಿಗೊಕ್ಕೆ ಕೊಡ್ತ ಅಂಶಲ್ಲೇ ವಿತ್ಯಾಸ.
    ಗೆಯ್ಮೆಲಿ ಆದರೆ – ಸಿಕ್ಕಿದ ಫಲಲ್ಲಿ ಮೂರನೇ ಎರಡು ಧಣಿಗೊಕ್ಕೆ ಹೇದು ಲೆಕ್ಕ. ಗೇಣಿಲಿ ಆದರೆ, ಒಟ್ಟು ಇಂತಿಷ್ಟು ಮೌಲ್ಯ ಧಣಿಗೊಕ್ಕೆ ಕೊಡುದು ಹೇಳಿ ಲೆಕ್ಕ – ಹೇಳಿದವು. ಕೇಸುಭಟ್ರಾದರೆ ಒಂದೇ ಸರ್ತಿಲಿ ಲೆಕ್ಕ ತಲಗೆ ಹೋಕು, ನವಗೆಲ್ಲಿ. ಉದಾಹರಣೆ ಕೊಡದ್ದೆ ಅರ್ತವೇ ಆತಿಲ್ಲೆ.
    ಉದಾಹರಣೆಗೆ, ಅಡಕ್ಕೆ ತೋಟಲ್ಲಿ ಒಬ್ಬ ಗೆಯ್ಮೆಗೆ ನಿಂದರೆ – ಮೂರುಖಂಡಿ ಅಡಕ್ಕೆ ಆ ಒರಿಶ ಆದರೆ – ಮೂರನೇ ಎರಡು – ಎರಡುಖಂಡಿ ಅಡಕ್ಕೆಯೂ ಧಣಿಗೊಕ್ಕೇ ಹೋಪದು. ಒಳುದ ಒಂದುಖಂಡಿ ಅಡಕ್ಕೆ ಆ ಗೆಯ್ದವಂಗೆ ಆ ಒರಿಶದ ಸಂಬಳ / ಉತ್ಪತ್ತಿ. ಆದರೆ ಗೇಣಿಲಿ ಹಾಂಗಲ್ಲ – ಸುರುವಿಂಗೇ ನಿಘಂಟು ಮಾಡ್ತದು, ಇದಾ- ಈ ತೋಟಲ್ಲಿ ಮೂರು ಖಂಡಿ ಅಕ್ಕು. ಅದರ್ಲಿ ಎರಡು ಖಂಡಿ ಧಣಿಗೊಕ್ಕೆ ಕೊಡ್ಸು- ಹೇದು. ಒಕ್ಕಲಿನ ಜೆನ ಹಟಗಟ್ಟಿ ದುಡುದು ಆ ತೋಟಲ್ಲಿ ಆರುಖಂಡಿ ತೆಗದರೆ, ಧಣಿಗೊಕ್ಕೆ ಕೊಡೆಕ್ಕಾದ್ಸು ಎರಡೇಖಂಡಿ; ಒಳುದ ನಾಲ್ಕು ಖಂಡಿಯೂ ಒಕ್ಕಲಿಂಗೇ!
  2. ವಾಯಿದೆ ಗೇಣಿ:
    ಚಾಲುಗೇಣಿ ವಿವರ್ಸಿ ಅರ್ತ ಆದೋನಿಂಗೆ ಈ ವಾಯ್ದೆಗೇಣಿ ಅರ್ತ ಅಪ್ಪಲೆ ದೊಡ್ಡ ಬಂಙ ಇಲ್ಲೆ.
    ಚಾಲುಗೇಣಿ ಒಂದೊರಿಶಕ್ಕೆ, ವಾಯಿದೆಗೇಣಿ – ಎಷ್ಟು ಒರಿಶ ಹೇದು ನಿಘಂಟು ಮಾಡಿತ್ತೋ – ಅಷ್ಟು ಒರಿಶಕ್ಕೆ. ಉದಾಹರಣೆಗೆ, ಇಪ್ಪತ್ತೈದು ಒರಿಶಕ್ಕೆ, ಇಂತಾ ಜಾಗೆಲಿಪ್ಪ ಇಂತಿಷ್ಟು ಅಡಕ್ಕೆಮರದ ತೋಟವ ಗೇಣಿಗೆ ಕೊಡುದು; ಅದರ್ಲಿ ಒರಿಶಕ್ಕೆ ನಾಲ್ಕು ಖಂಡಿ ಗೇಣಿ ಕೊಡೇಕು – ಹೇದು ಗೇಣಿಚೀಟು ನಿಘಂಟಾದರೆ, ಅಷ್ಟು ಒರಿಶಕ್ಕೆ ಆ ಜಾಗೆ ಒಕ್ಕಲು ಕೂದೋನಿಂಗೇ. ಬೇರೆ ಆರೇ ಬಂದರೂ ಏಳುಸಲೆಡಿಯ. ಇಪ್ಪ ಅಡಕ್ಕೆಮರ ಅಲ್ಲದ್ದೆ ಹೊಸ ತೋಟ, ಹೊಸ ಕೆರೆ, ಹೊಸ ಮನೆ – ಎಂತ ಬೇಕಾರೂ ಮಾಡಿಗೊಂಬಲಕ್ಕು.
    ಆದರೆ, ಆ ವಾಯಿದೆ ಕಳುದು ಬಿಟ್ಟಿಕ್ಕಿ ಹೋಪಾಗ, ಆ ಮಾಡಿದ “ಕೃತ”ವ ಧಣಿಗೊ ಅವಂಗೆ ಕೊಡೇಕು – ಇದು ಎರಡೂ ಹೊಡೆಂಗೆ ಗೊಂತಿಪ್ಪದೇ! – ಹೇಳಿದವು ಆಚಮನೆ ದೊಡ್ಡಪ್ಪ.
  3. ಮೂಲ ಗೇಣಿ:
    ಚಾಲುಗೇಣಿ ಒಂದೊರಿಶಕ್ಕೆ. ವಾಯಿದೆಗೇಣಿ ವಾಯಿದೆಯಷ್ಟು ಸಮೆಯಕ್ಕೆ. ಆದರೆ, ಈ ಮೂಲಗೇಣಿ ಹೇದರೆ, ಹೆಚ್ಚುಕಮ್ಮಿ, ಶಾಶ್ವತವಾಗಿ ಇನ್ನೊಬ್ಬಂಗೆ ಗೇಣಿಹಕ್ಕು ಕೊಟ್ಟುಬಿಡ್ಸು. ಧಣಿ ಅವನ ಜಾಗೆಯ ಮೂಲಗೇಣಿ ಆಗಿ ಕೊಟ್ಟ° ಹೇದರೆ, ಆ ಜಾಗೆಯ ಸರ್ವ ಹಕ್ಕುದೇ ಆ ಒಕ್ಕಲಿಂದೇ ಆಗಿರ್ತು. ಆ ಜಾಗೆಗೆ ತೀರ್ವೆ ಕಟ್ಟುಸ್ಸರಿಂದ ಹಿಡುದು, ಅದಕ್ಕೆ ಬೇಕಾದ ವಿನಿಯೋಗಂಗಳ ಮಾಡುದು – ಎಲ್ಲವುದೇ ಒಕ್ಕಲಿನ ಹಕ್ಕು/ ಕರ್ತವ್ಯ.
    ಗೇಣಿಗೆ ಕೊಟ್ಟೋನಿಂಗೆ ಒರಿಶಂಪ್ರತಿ ನಿಘಂಟಾದ ಗೇಣಿ ಒಂದು ಲಾಭ; ಬತ್ತಾ ಇರ್ತು ಇದಾ!
    ಈ ಸಂಗತಿ ಹೇಳಿಂಡು ಹೋಪಗ ದೊಡ್ಡಪ್ಪ ಮತ್ತೆರಡು ಸಣ್ಣ ವಿಷಯಂಗಳ ಹೇಳಿದವು:

    • ಮುಂಗೇಣಿ:
      ಒಂದು ಜಾಗೆಯ ಮೂಲಗೇಣಿಗೆ ಇನ್ನೊಬ್ಬಂಗೆ ಕೊಡ್ತರೆ, ಒರಿಶಕ್ಕಿಷ್ಟು ಗೇಣಿ ಕೊಡ್ತದು ಹೇದು ನಿಘಂಟು ಮಾಡ್ತಪ್ಪೋ. ಆದರೆ, ಹಾಂಗೆ ನಿಘಂಟು ಮಾಡುವ ಮದಲೇ ಈ ಒಕ್ಕಲಾಗಿ ಬತ್ತೋನು ರಜ ಪೈಶೆ ಕೊಟ್ರೆ, ಒರಿಶಂಪ್ರತಿ ಗೇಣಿ ರಜಾ ಕಮ್ಮಿ ಮಾಡ್ಳಾವುತ್ತು. ಆ ಗೇಣಿಯ ಮುಂದೆ ಕೊಡ್ತ ಮೌಲ್ಯಕ್ಕೆ “ಮುಂಗೇಣಿ” ಹೇದು ಹೆಸರಾಡ.
      ಗೇಣಿ ಬಿಡುವಾಗ ಧಣಿ ಆ ಮುಂಗೇಣಿಯನ್ನೂ, ಗೇಣಿಜಾಗೆಲಿ ಮಾಡಿದ ಕೆಲಸದ ಮೌಲ್ಯ “ಕೃತ”ವನ್ನೂ ಕೊಟ್ಟು ಕಳುಸಿರಾತು. ಅದು ಕೊಡುವನ್ನಾರ ಒಕ್ಕಲು ಆ ಜಾಗೆ ಬಿಡೆಕಾದ್ಸಿಲ್ಲೆ.
    • ಗೇಣಿಹಕ್ಕು:
      ಒಬ್ಬ ಅವನ ಜಾಗೆಯ ಗೇಣಿಗೆ ಕೊಟ್ಟಿದ° ಹೇದು ಆದರೆ, ಅಲ್ಲಿಂದ ಒರಿಶಂಪ್ರತಿ ಗೇಣಿ ಬತ್ತಾ ಇರ್ತು. ಆ ಗೇಣಿ ಎಜಮಾನನ ಹಕ್ಕು. ಆ ಹಕ್ಕಿನ ಅಡವು ಮಡಗಿ ಹಲವು ವ್ಯವಹಾರಂಗಳ ಮಾಡ್ಳಾಗಿಂಡಿದ್ದತ್ತಾಡ. ಉದಾಹರಣೆಗೆ, ಇದಾ, ಎನಗೆ ಒರಿಶಕ್ಕೆ ಎರಡು ಖಂಡಿಯ ಗೇಣಿ ಹಕ್ಕು ಇದ್ದು, ಆ ಗೇಣಿಚೀಟು ಮಡಿಕ್ಕೊಂಡು ಇಂತಿಷ್ಟು ಸಾಲ ಕೊಡು – ಹೇದು ಒಬ್ಬ ಧಣಿ, ಇನ್ನೊಬ್ಬ ದೊಡ್ಡ ಮನಿಶ್ಶನ ಹತ್ತರೆ ಹೋಪಲಾಗಿಂಡಿತ್ತಾಡ.
  4. ಆರುವಾರ:
    ಸುರುವಾಣ ಮೂರು ಅಂಶಂಗಳೂ – ಒಕ್ಕಲು-ಧಣಿಯ ನೆಡುಗಾಣ ಸಂಬಂಧಕ್ಕೆ ಸಂಬಂಧಿಸಿದ್ದು. ಆದರೆ ಇದು ಇನ್ನೊಂದು; ಆರುವಾರ ಹೇದು. ಇಂಗ್ಳೀಶಿನ “ಲೀಸ್”ಗೆ ಅತೀ ಹತ್ತರಾಣ ವೆವಸ್ಥೆ.
    ಒಂದು ಸನ್ನಿವೇಶ ಸಹಿತ ದೊಡ್ಡಪ್ಪ ವಿವರುಸುವಾಗ ನವಗೆ ಬೇಗ ಅರ್ಥ ಅಪ್ಪದಿದಾ.
    ಇದಾ, ಒಬ್ಬಂಗೆ ರಜಾ ಪೈಶೆ ಅಂಬೆರ್ಪು ಇದ್ದು – ಮಡಿಕ್ಕೊಂಬ. ಅವನ ಹತ್ತರೆ ಎರಡು ಖಂಡಿ ಅಡಕ್ಕೆ ಅಪ್ಪ ಜಾಗೆ ಇದ್ದು. ಆ ಊರಿನ ಒಬ° ಶ್ರೀಮಂತರ ಹತ್ತರೆ ಹೋಗಿ, “ಇದಾ, ಎನ್ನ ಆ ತೋಟದ ಹಕ್ಕಿನ ನಿಂಗೊಗೆ ಆರ್ವಾರ ಬರದು ಕೊಡ್ತೆ, ಎನಗೆ ಇಂತಿಷ್ಟು ಪೈಶೆ ಬೇಕು” – ಹೇಳುಗು. ಆ ಶ್ರೀಮಂತ ಇವಂಗೆ ಪೈಶೆ ಕೊಡ್ತ, ತೋಟದ ದಾಖಲೆಪತ್ರವ ಮಡಿಕ್ಕೊಳ್ತ°. ತೆಕ್ಕೊಂಡೋನು ಪೈಶೆ ತೀರ್ಸುವನ್ನಾರವೂ ಆ ತೋಟಂದ ಅಡಕ್ಕೆ ಕೊಯಿಕ್ಕೊಂಬ ಅಧಿಕಾರ ಪೈಸೆ ಕೊಟ್ಟೋನದ್ದು.
    ಅಕೇರಿಗೆ ಒಂದು ದಿನ ತೀರ್ಸಿದ ಮತ್ತೆ ತೋಟದ ದಾಖಲೆ ಪತ್ರ ಒಪಾಸು ಹಳೆ ಎಜಮಾನಂಗೆ ಬತ್ತು. ತೀರ್ಸಲೆಡಿಯದ್ದರೆ? ಆ ಜಾಗೆ ಅವಂಗೇ ಹೋತು!!
    ಇದರ್ಲಿ, ಪೈಸೆ ತೆಕ್ಕೊಂಡೋನಿಂಗೂ, ಕೊಟ್ಟೋನಿಂಗೂ ಯೇವದೇ ಮರ್ಜಿಯ ಸಂಬಂಧ ಇಲ್ಲೆ. ಪೈಸೆಕೊಟ್ಟೋನು ತೆಕ್ಕೊಂಡೋನ ಧಣಿಗೊ ಅಲ್ಲ, ಬರೇ ಇವನ ತೋಟದ ಅಧಿಕಾರ ಮಾಂತ್ರ.

~
ಹೋ – ದೊಡ್ಡಪ್ಪ ಹೇಳಿಗೊಂಡು ಹೋದ ಹಾಂಗೇ, ನಮ್ಮ ಸಾಮಾಜಿಕ ಜೀವನದ ಹಲವು ಅಂಶಂಗೊ ಒಂದೊಂದಾಗಿ ಕಣ್ಣಿಂಗೆ ಕಾಂಬಲೆ ಸುರು ಆತು.
ಒಬ್ಬ ಭಾವಯ್ಯ ಇನ್ನೊಬ್ಬನ ಜಾಗೆಲಿ ಗೇಣಿಗೆ ಇಪ್ಪದು; ಬಟ್ಯನ ಅಜ್ಜ ಕೂಲಿ ಒಕ್ಕಲಾಗಿಪ್ಪದು;
ಇನ್ನೊಬ್ಬ ಆರುವಾರ ಮಾಡಿಗೊಂಬದು,
ಮತ್ತೊಬ್ಬ ಚಾಲುಗೇಣಿಗೆ ಗೇಣಿಚೀಟು ಮಾಡಿಗೊಂಡು ಕೂಪದು;
ಮತ್ತೊಬ್ಬ ವಿಷುವಿನ ಸಮೆಯಲ್ಲಿ ಅಲಫಲಂಗಳ ಲೆಕ್ಕಹಾಕಿ ಗೆಯ್ಮೆ ಕೊಡುದು – ಇದೆಲ್ಲವೂ ಮನಸ್ಸಿಂಗೆ ಬಂದು ಹೋತು.
ಬರೇ ಆಧುನಿಕ ಪರಿಸರಲ್ಲಿ ಮಾಂತ್ರ ಅಲ್ಲ, ಈ ನಮುನೆ ಲೀಸು-ರೆಂಟು – ಹೇದು ಇದ್ದದು, ನಮ್ಮ ಅಜ್ಜಂದ್ರ ಲೆಕ್ಕಾಚಾರಲ್ಲಿಯೂ ಇದ್ದತ್ತು – ಹೇಳ್ತದು ದೊಡ್ಡಪ್ಪ ವಿವರುಸುವಗಳೇ ಅರಡಿಗಾತು.
~
ತೀರಾ ಮದಲಾಣ ಈ ವ್ಯವಸ್ಥೆ, ಇಂಗ್ಳೀಶರ ಆಡಳ್ತೆಲಿಯೂ ಇದ್ದತ್ತು.
ಈ ವ್ಯವಸ್ಥೆಲಿ – ಆಗಳೇ ಮಾತಾಡಿದ ಹಾಂಗೆ – ಒಳ್ಳೆದೂ ಇತ್ತು, ದೋಷವೂ ಇದ್ದತ್ತು. ಹಲವು ಜೆನ ಧಣಿಗೊ ಒಳ್ಳೆಯವೇ ಆಗಿದ್ದುಗೊಂಡು ಒಕ್ಕಲಿನ ಅಭಿವೃದ್ಧಿಗೆ ಪೂರವಕಾಗಿದ್ದರೂ, ಕೆಲವು ಜೆನ ಒಕ್ಕಲಿನೋರ ಸಂಪೂರ್ಣವಾಗಿ ಸೋಲುಸಿ ತಾನು ದೊಡ್ಡ ಅಪ್ಪ ನಮುನೆ ನೋಡಿಗೊಂಡವಾಡ.
ಹಾಂಗಾಗಿ – ಇದರ ವಿರುದ್ಧ ಪ್ರತಿಭಟನೆಗೊ, ಹರತಾಳಂಗೊ ನೆಡದು ಮುಂದೆ ಸ್ವತಂತ್ರ ಭಾರತ ಬಂದ ಮತ್ತೆ ಈ “ಗೇಣಿ” ಪದ್ಧತಿ ಸಂಪೂರ್ಣವಾಗಿ ಹೋತಾಡ.
ಕೇರಳಲ್ಲಿ ಅರುವತ್ತೈದರ ಆಸುಪಾಸಿಲಿ ನಂಬೂದಿರಿಪ್ಪಾಡ್ ಸರಕಾರ ಈ ಗೇಣಿ ಪದ್ಧತಿಯ ತೆಗದು – ಆರು ದುಡಿತ್ತಾ ಇದ್ದನೋ – ಆ ಜಾಗೆ ಅವಂದೇ – ಹೇದು ಕಾನೂನು ಮಾಡಿತ್ತಾಡ.
ಜಾಗೆ ಇಲ್ಲದ್ದ ಎಷ್ಟೋ ಜೆನ ಇದರ್ಲಿ ಜಾಗೆ ಸಿಕ್ಕಿ ಕೊಶಿಪಟ್ಟರೆ, ಕೆಲವು ಪಾಪದ ಧಣಿಗೊ ಸರ್ವಸ್ವವನ್ನೂ ಕಳಕ್ಕೊಂಡು ದಾರಿಲಿ ಬಿದ್ದಿದವಾಡ!
ಕರ್ನಾಟಕಲ್ಲಿ ಎಪ್ಪತ್ತಮೂರರಲ್ಲಿ ದೇವರಾಜ ಅರಸು ಕಾರ್ಬಾರಿಲಿ ಇದೇ ಕಾನೂನು ಬಂತಾಡ. ಅಂಬಗಳೂ – ಕೆಲವು ಪಾಪದ ಧಣಿಗೊ ಸೋತವು, ಜೋರಿನ ಒಕ್ಕಲುಗೊ ಗೆದ್ದಿದವು – ಹೀಂಗೆಲ್ಲ ಆಯಿದಾಡ.
ಮಾಷ್ಟ್ರುಮಾವಂಗೆ ಈ ಬಗ್ಗೆ ಹೆಚ್ಚಿನ ವಿವರ ಗೊಂತಿದ್ದು. ಬಾಯಿಲಿ ಎಲೆ ಇಲ್ಲದ್ದ ಹೊತ್ತಿಲಿ ಕೇಳಿರೆ ಹೇಳುಗು.
~

ದೊಡ್ಡಪ್ಪಂಗೆ ಬಾಯಿ ಚೆಪ್ಪೆ ಅಪ್ಪಲೆ ಸುರು ಆತೋ ಏನೋ – ಪುನಾ ಒಂದು ಈಡು ಹಾಕಲೆ ಸುರುಮಾಡಿದವು.
“ಮಾತು ಬಲ್ಲವಂಗೆ ಹೇಂಗೆ ಜಗಳ ಇಲ್ಲೆಯೋ, ಹಾಂಗೇ ದುಡಿಮೆ ಬಲ್ಲವಂಗೆ ಹಶು ಹೊಟ್ಟೆ ಇಲ್ಲೆ!
ದುಡಿಮೆ ಮಾಡ್ಳೆ ಎಡಿತ್ತೋ, ದೇಹಲ್ಲಿ ಆ ಶೆಗ್ತಿ ಇದ್ದೋ – ಹಾಂಗಾರೆ ಸ್ವಂತ ಜಾಗೆ ಕಮ್ಮಿ ಇದ್ದರೆ – ಇನ್ನೊಬ್ಬನ ಜಾಗೆಲಿ ಆದರೂ –ದುಡಿಮೆ ಮಾಡಿಂಡು ಸ್ವಂತವಾಗಿ ಸ್ವತಂತ್ರವಾಗಿ ಬದ್ಕುತ್ತ ಅವಕಾಶ ನಮ್ಮ ಊರುಗಳಲ್ಲಿ ಇದ್ದತ್ತು.
ಅದಕ್ಕೆ ಬೇಕಾದ ವೆವಸ್ತೆಗೊ, ವಿಂಗಡಣೆಗೊ, ವೆವಹಾರಂಗೊ – ಎಲ್ಲವೂ ನಮ್ಮ ಊರೊಳವೇ ಇದ್ದತ್ತು.
ಈಗ– ಬಾಡಿಗೆ, ಲೀಸು –ಹೇಳುಸ್ಸು; ಆದರೆ ಮದಲು ಎಲ್ಲವುದೇ ನಮ್ಮ ಅಜ್ಜಂದ್ರದ್ದೇ – ಬೇರೆಯೇ ಆದ ಲೆಕ್ಖಂಗೊ ಇದ್ದತ್ತು” – ಹೇಳಿಂಡು ಕನ್ನಡ್ಕ ಸರಿ ಮಾಡಿಗೊಂಡವು.
ಕನ್ನಡ್ಕ ಸರಿಮಾಡುವಗ ಬೆರಳು ತಾಗಿ ಆಗಾಣ ಎಲೆತೊಟ್ಟು ಅಂಟುಸಿದ್ದು ಉದುರಿತ್ತು,
ಹೋಗಲಿ. ಈಗ ಪುನಾ ಅಂಟುಸುಲಿದ್ದನ್ನೇ!
~
ಒಂದೊಪ್ಪ: ನಾವು ಒಕ್ಕಲು, ಧಣಿ ಎಂತದೇ ಆಗಿರಳಿ, ಎಲ್ಲೋರುದೇ ಆ ಮಹಾಲಿಂಗೇಶ್ವರಂಗೆ ಗೆಯ್ಮೆ ಸಲ್ಲುಸೆಂಡು ಇದ್ದರೆ – ಅವ° ಕೃತ ಕೊಟ್ಟೇ ಕೊಡ್ತ°. ಅಲ್ಲದೋ? 🙂

17 thoughts on “ಒಕ್ಕಲು, ಗೆಯ್ಮೆ, ಗೇಣಿ, ಆರ್ವಾರ…

  1. ningala opinion keli bari kushiyatu…ningala basha kalajiya hinde yengala gadinadina jeevana smskrti ashte alla jeevapara preeti iddu… , basheyondu sattare janangave sattante..! ningala jate enagoo ondu jaga kottadakke thanks…pursottalli anude havyaka basheli bareve….support madi. anna…innondivishya…engala ‘kanipura’ mgzn bagge bailina annandirige heli support madteera..?

  2. super item. oppanna odalu bari kushi. e reetili ondu mgzn yengala kannada basheli madidre yeshtu chenda ikku allado?

    1. ಗಡಿನಾಡು ಕು೦ಬ್ಳೆಲಿ ”ಕಣಿಪುರ” ಕನ್ನಡ ಮಾಸಪತ್ರಿಕೆಯ ಪ್ರಕಟ ಮಾಡುತ್ತಾ ಯಕ್ಷಗಾನ,ಸ೦ಗೀತಾದಿ ಕಲೆಗಳ ಬೆಳವಣಿಗೆಗೆ ವಿಶಿಷ್ಟ ಸೇವೆ ಸಲ್ಲಿಸುತ್ತಾ ಇಪ್ಪ ಚ೦ಬಳ್ತಿಮಾರು ಅಣ್ಣನ ಬೈಲಿಲಿ ಕ೦ಡು ಭಾರೀ ಕೊಶಿಯಾತು.
      ಆತ್ಮೀಯ ಸ್ವಾಗತ.ಬತ್ತಾ ಇರಿ,ಶುದ್ದಿಗಳ ಓದುತ್ತಾ ,ಬರೆತ್ತಾ ಇರಿ.

    2. ಚೆಂಬ್ಳಿತ್ತಿಮಾರು ಎಂ.ನಾ ಅಣ್ಣಂಗೆ ಬೈಲಿಂಗೆ ಆತ್ಮೀಯ ಸ್ವಾಗತಮ್.
      ಬನ್ನಿ, ಬೈಲಿನ ಎಲ್ಲಾ ಶುದ್ದಿಗಳ ಓದಿ – ಒಪ್ಪ ಕೊಡಿ.
      ಹಾಂಗೇ, ನಿಂಗಳ ಪುರುಸೊತ್ತು ನೋಡಿಗೊಂಡು “ಶುದ್ದಿ ಹೇಳಿ”, ಎಂಗೊ ಎಲ್ಲೊರುದೇ ಕೇಳ್ತೆಯೊ°..

      ಇದು ನಮ್ಮದೇ ಬೈಲು, ನಾವೆಲ್ಲರೂ ಕನ್ನಡಿಗರೇ. ಇದು ಕನ್ನಡವೇ. 🙂
      ಸಂಪೂರ್ಣ ಕನ್ನಡಲ್ಲಿ ಈಗಾಗಲೇ ಹಲವಿದ್ದು; ನಿಂಗಳ ನೇತೃತ್ವದ “ಕಣಿಪುರ”ವೇ ಇದ್ದಲ್ಲದಾ, ಅದುದೇ ನಮ್ಮದೇ 🙂

      ಪ್ರೀತಿ ಇರಳಿ…

  3. ಒಕ್ಕಲು, ಗೆಯ್ಮೆ, ಗೇಣಿ, ಆರ್ವಾರದ ಬಗ್ಗೆ ಇಷ್ಟೆಲ್ಲ ವಿಶಯ ಇದ್ದು ಹೇಳಿಯೇ ಗೊಂತಿತ್ತಿಲ್ಲೆ. ತುಂಬಾ ಮಾಹಿತಿ ಸಿಕ್ಕಿತ್ತು ಒಪ್ಪಣ್ಣಾ… ದುಡಿವೋನಿಂಗೆ ಭೂಮಿ ಸಿಕ್ಕಿ ಅವº ಕೃಷಿ ಮಾಡಿ ಅವº ಅಭಿವೃದ್ಧಿ ಆದರಾದರೂ ಅಕ್ಕನ್ನೇ!!! ಬೇಜಾರಾವ್ತಿಲ್ಲೆ, (ನವಗೆ ಹೋತನ್ನೇ ಹೇಳಿ ಬೇಜಾರು ಇದ್ದರೂ) ಕೆಲಾ..ವು ಜನ ಕುಡುಕ್ಕಂಗೊಕ್ಕೆ ಜಾಗೆ ಸಿಕ್ಕಿ, ಕುಡುಕ ಒಕ್ಕಲುಗಳೇ ದಣಿ ಆಗಿ… ಕುಡಿತಕ್ಕೇ ಎಲ್ಲಾ ಮುಗಿಶಿ ಭೂಮಿ ಎಲ್ಲಾ ಹಾಳಾಗಿ ಆ ಭೂಮಿಯನ್ನೂ ಕಳಕ್ಕೊಂಡು ಅತ್ಲಾಗಿ ಅವಂಗೂ ಇಲ್ಲೆ ಇತ್ಲಾಗಿ ನವಗೂ ಹೋತು ಹೇಳಿ ಅಪ್ಪಗ ಹೊಟ್ಟೆ ಉರಿವದು ಇದಾ…. ಮತ್ತೆ ಅವು ಪುನಾ ನಮ್ಮಲ್ಲಿಗೇ ಬಂದು ಮೊದ್ಲಾಣಾಂಗೆ ನಮ್ಮಂದ ಅಪೇಕ್ಷೆ ಪಟ್ಟುಗೊಂಡಿದ್ದದು… ವಿಶುವಿಂಗೆ ಅದು..ಇದು… ಅವರ ಮನೆ ರಿಪೇರಿಗೆ ಸಹಾಯ… ಮಕ್ಕಳ ಮದುವೆಗೆ… ಹಾಂಗೆ..ಹೀಂಗೆ… ಹೇಳಿ.. ಅವರ ಕೂಲಿ ಪೈಸೆ ಎಲ್ಲಾ ಅವರ ಚಟಕ್ಕೇ ಆತು… ನಾವು ಮರ್ಯಾದಿಲಿ ಜೀವನ ಮಾಡಿಗೊಂಡು ಹೊಟ್ಟೆಬಟ್ಟೆ ಕಟ್ಟಿ … ಸೂಕ್ಷ್ಮಲ್ಲಿ ಜೀವನ ಮಾಡುದು ಹೇಳಿ ಅವಕ್ಕೆ ಅರ್ಥ ಆಯೆಕ್ಕನ್ನೆ!!! ಈಗ ಎಲ್ಲಾ ವೆತ್ಯಾಸ ಆಯಿದು ಹೇಳುವಾº….

    1. ಜಯತ್ತೇ, ನಿಂಗೊ ಹೇಳಿದ ಸಂಗತಿ ಅಪ್ಪದ್ದೇ.
      ಹಲವು ದಿಕ್ಕೆ ಹೀಂಗಿರ್ಸ ಸಂಗತಿಗೊ ನೆಡದ್ದು.

      ಅದಾರದ್ದೋ ಕೈಲಿ ಮಾಣಿಕ್ಯ – ಹೇಳ್ತವಲ್ಲದೋ; ಧರ್ಮಕ್ಕೆ ಜಾಗೆ ಸಿಕ್ಕಿ ಅಪ್ಪಗ ಕೆಲವು ಜೆನಕ್ಕೆ ಹಾಂಗೆ ಆಯಿದಾಡ! ಆಚಮನೆ ದೊಡ್ಡಪ್ಪ ಒಂದೊಂದರಿ ಹೇಳುಗು 🙂

  4. ಚೊಕ್ಕ ಆಯ್ದು ಶುದ್ದಿ ಹೇದು ಹೇಳಿತ್ತಿತ್ಲಾಗಿಂದ ಒಂದು ಒಪ್ಪ.

    1. ಚೆನ್ನೈಭಾವನ ಒಪ್ಪ ಯೇವತ್ತೂ ಮುಂಗೇಣಿಯ ಹಾಂಗೆ ಸುರೂವಾಣ ಜಾಗೆಲಿರ್ತು, ಈ ಸರ್ತಿ ಹದಾಕೆ ಆದ್ಸು ಎಂತ – ಹೇದು ಎಲ್ಲೋರುದೇ ಮಾತಾಡ್ತವು. ಶೇಡ್ಯಮ್ಮೆ ಗೋಪಾಲಣ್ಣನೂ ಕೂಡ. 🙂

  5. ಗೇಣಿಯ ಬಗೆಲಿ ಇಷ್ಟೆಲ್ಲಾ ಸಂಗತಿ ಇದ್ದೂ ಹೇಳಿ ಈಗ ಗೊಂತಾತು. ಒಪ್ಪಣ್ಣನದ್ದು ಒಳ್ಳೆ ಶುದ್ದಿ. ಉಳುವವನೇ ಹೊಲದೊಡೆಯ ಹೇಳುವ ಕಾನೂನಿಲ್ಲಿ ತುಂಬಾ ಜೆನ ಭೂಮಿ ಕಳಕ್ಕೊಂಡದಂತೂ ನಿಜ. ದುಡಿತ್ತವಂಗೆ ಹೊಲ ಸಿಕ್ಕಿ ಕೃಷಿಂದಾಗಿ ದೇಶ ಸುಭಿಕ್ಷ ಆವ್ತ ಹಾಂಗಾದರೆ
    ತೊಂದರೆ ಇಲ್ಲೆ. ಆದರೆ, ದುಡಿಯದ್ದವಂಗೆ ಹೀಂಗಿಪ್ಪ “ಉಚಿತ” ಭೂಮಿ ಸಿಕ್ಕಿ ರಿಯಲ್ ಎಸ್ಟೇಟಿನ ಹೆಸರಿಲ್ಲಿ ಒಕ್ಕಲುಗೊ ಬಲುದೊಡ್ಡ ಧನಿಗೊ ಆವ್ತದು ಕಾಂಬಗ ನಿಜವಾಗಿಯೂ ಬೇಜಾರು ಆವ್ತು.

    1. ಬೊಳುಂಬು ಮಾವಾ, ಸಂಗತಿ ಅಪ್ಪಾದ್ಸೇ.
      ಗೇಣಿಜಾಗೆ ಅವರದ್ದಪ್ಪಗ ಮದಾಲು ಬೇಂಕಿಂಗೆ ಬಂದು ಸಾಲ ತೆಗದ್ದವಾಡ; ಮತ್ತೆ ಕುಡುದು ಕಳದು ತೀರ್ಸಿದ್ದವೂ ಇಲ್ಲೆ ಸಮಗಟ್ಟಿಂಗೆ – ಹೇದು ನಿಂಗೊ ಅಂದೊಂದರಿ ಪರಂಚಿಂಡಿದ್ದಾದು ನೆಂಪಾತು 🙂

  6. ಆಚಮನೆ ದೊಡ್ಡಪ್ಪ ಎಲೆತುಪ್ಪಿಕ್ಕಿ ಬಂದು ನಮ್ಮ ಎದುರೇ ಕೂದೊಂಡು ಶುದ್ದಿ ಹೇಳಿದಾಂಗಾತು.
    “ಕನ್ನಡ್ಕ ಸರಿಮಾಡುವಗ ಬೆರಳು ತಾಗಿ ಆಗಾಣ ಎಲೆತೊಟ್ಟು ಅಂಟುಸಿದ್ದು ಉದುರಿತ್ತು,
    ಹೋಗಲಿ. ಈಗ ಪುನಾ ಅಂಟುಸುಲಿದ್ದನ್ನೇ!”
    ಆಹಾ! ಒಪ್ಪಣ್ಣನ ಬರವಣಿಗೆ ಶೈಲಿಯೆ! ಶಂಬಜ್ಜ ಈಗ ಇದ್ದಿದ್ದರೆ ಕೊಶೀಲಿ ನಾಕೆಕ್ರೆ ಜಾಗೆಯೇ ಕೊಡ್ಸಿತ್ತವೊ ಏನ.. 🙂
    ಮೊದಲಾಣ ಕಾಲದ ವೆವಸ್ತೆಗಳ ಮಾಹಿತಿ ಎಲ್ಲ ಒಪ್ಪಕ್ಕೆ ತಿಳಿಶಿಕೊಟ್ಟದಕ್ಕೆ ಧನ್ಯವಾದಂಗ ಒಪ್ಪಣ್ಣ.

  7. “ಗೇಣಿ”ಯ ಹಾಂಗೆ ಬಳ್ಳಾರಿ ಹೊಡೆಲಿ ಇನ್ನೊಂದು ಪದ್ದತಿ ಇದ್ದಡ. ಅಲ್ಲಿನ ಧಣಿಗೊ ಪಾಪದ ಜೆನಂಗಳ ಬಡಿದು ಓಡಿಸಿ ಅವರ ಜಾಗೆಯ ಮಣ್ಣಿನ ಮಾರ್ತವಡ. ಅದಕ್ಕೆ “ಗಣಿ” ಹೇಳ್ತವಡ 😉 🙂

    ಲೇಖನ ತುಂಬಾ ಒಪ್ಪ ಆಯಿದು..

  8. ಬಹಳ ಲಾಯ್ಕ ಆಯಿದು.
    ದನಗಳನ್ನೂ ಕೂಡ ಒಂದು ಕರವಿನ ಮಟ್ಟಿಂಗೆ ಇನ್ನೊಬ್ಬಂಗೆ ಗೇಣಿಗೆ ಕೊಡುವ ಕ್ರಮ ಇತ್ತಡ ಮೊದಲು! [ಅದಕ್ಕೆ ಅಳಪಾಯ ಹೇಳುತ್ತವೋ ತೋರುತ್ತು..ಹಳಬರಿಂಗೆ ಗೊಂತಿಕ್ಕು].
    ಗೇರು ಬೀಜದ ಗೇಣಿ ಹೇಳಿರೆ ಆ ಜಾಗೆಯ ಸ್ವಾಧೀನ ಧನಿಯ ಹತ್ತರೇ ಇರುತ್ತು.ವರ್ಷದ ಫಲವ ಕೊಯಿವ ಕೆಲಸ ಇನ್ನೊಬ್ಬಂದು,ಅವ ಅದರ ಮಾರಿ, ಮೊದಲೇ ಒಪ್ಪಿದ ಪೈಸೆಯ ಧನಿಗೆ ಕೊಡೆಕ್ಕು.ತಮ್ಮ ವಳಚಾಲಿನ ಬೀಜವ ತಾವೇ ಕೊಯ್ವಲೆ ಎಡಿಯದ್ದವು[ಪುರುಸೊತ್ತಿಲ್ಲದ್ದವು] ಮಾಡಿಕೊಂಬ ವ್ಯವಸ್ಥೆ! ಫಲಗೇಣಿ [ಲೀಸ್] ಹೇಳಿ ಬೇಕಾದರೆ ಹೇಳುಲಕ್ಕು.
    ಇನ್ನೊಂದು ವಿಚಿತ್ರ ಇತ್ತಡ-ಕೋಳಿ ತಿನ್ನದ್ದ ಸಾಂಕದ್ದ ಬ್ರಾಹ್ಮಣರು ಕೋಳಿಗಳ ತೆಕ್ಕೊಂಬದು,ಸಾಂಕಲೆ ಆಳುಗಳ ಮನೆಗೆ ಕೊಡುವದು,ಅದಕ್ಕೆ ತಿಂಬಲಿಪ್ಪ ಬತ್ತವನ್ನೂ ಕೊಡುದು,ಮತ್ತೆ ಅದರಲ್ಲಿ ಸಿಕ್ಕಿದ ಮೊಟ್ಟೆಯನ್ನೋ ಕೋಳಿಯನ್ನೊ ಮಾರುದೂ ಸಹ ಆಳುಗಳೇ,ಸಿಕ್ಕಿದ ಪೈಸೆ ಧನಿಗೆ,ಸಾಂಕಿದ್ದಕ್ಕೆ ಕೂಲಿ ಆಳಿಂಗೆ-ಇದೆಲ್ಲಾ ನಂಬಿಕೆಲಿ ನಡಕ್ಕೊಂಡು ಇತ್ತಿದ್ದಡ!

  9. ಹಳೆಕಾಲದ ಹಲವಾರು ವ್ಯಸ್ಥೆ ಬಗ್ಗೆ ಒಳ್ಳೆ ಮಾಹಿತಿ.
    ಗೇಣಿಲಿ ಬೇರೆ ಬೇರೆ ನಮೂನೆ ಹೆಸರು ಕೇಳಿತ್ತಿದ್ದೆ ಅಲ್ಲದ್ದೆ ಇಷ್ಟೆಲ್ಲಾ ವಿವರ ಗೊಂತಿತ್ತಿದ್ದಿಲ್ಲೆ.
    ವಿಷುವಿಂಗೆ ಅಪ್ಪಗ ಗೇಣಿ ಬೀಜ ಹೇಳಿ ರೆಜ ತಂದು ಕೊಟ್ಟೊಂಡಿತ್ತಿದ್ದವು.
    ಕೆಲವೊಂದು ವ್ಯವಸ್ಥೆಗೊ ಬೇರೆ ಹೆಸರಿಲ್ಲಿ ಈಗಲೂ ಚಾಲ್ತಿಲಿ ಇದ್ದು.
    ಸಮಾಜಕ್ಕೆ ಮೂಲ ಗೇಣಿ ಕೊಟ್ಟೊಂಡು ಬಂದರೆ ನಮ್ಮ ಧಣಿಗೆ (ದೇವರಿಂಗೆ) ಸಮರ್ಪಣೆ ಆದ ಹಾಂಗೆ ಆಲ್ಲದಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×