ಒಣಗಿದ ಗೆದ್ದೆ ನೋಡಿ ಕೆರೆಯ ತೂಂಬು ಬಿಡುಸಿದವು..!

May 7, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ಶಂಬಜ್ಜನ ಕಾಲದ ಶುದ್ದಿ, ಅಲ್ಲ ಅದರಿಂದಲೂ ಮದಲಾಣ ವೆಂಕಪ್ಪಜ್ಜನ ಕಾಲದ್ದೋ ಏನೋ!
ಕಂಡಿಗೆದೊಡ್ಡಪ್ಪ° ಹೇಳಿದ್ದು ಮೊನ್ನೆ.
ಕಂಡಿಗೆದೊಡ್ಡಪ್ಪ, ನೆರಿಯದೊಡ್ಡಪ್ಪನತ್ರೆ ಹೀಂಗಿರ್ತ ಕತೆಗೊ ಸುಮಾರಿರ್ತು.
ಹಳಬ್ಬರು, ಹಳಬ್ಬರ – ಹಳಬ್ಬರು ಹೇಳಿಗೊಂಡಿದ್ದ ಅವರ ಹಳಬ್ಬರ ಕತೆಗೊ ಎಲ್ಲವುದೇ ಸ್ಮೃತಿ ಕೋಶಲ್ಲಿ ಒಟ್ಟಾಗಿರ್ತು, ಅಗಾಧ ಸ್ಮರಣಶಕ್ತಿಯ ಸಂದಿಲಿ.
ಪುರುಸೋತಿಲಿ ಸಿಕ್ಕಿರೆ ಒಂದೊಂದಾಗಿ ಬತ್ತು!ಮೊನ್ನೆ ಜೋಯಿಷಪ್ಪಚ್ಚಿಯಲ್ಲಿ ತಿತಿ!
ಬೈಲಿಲೆ ನೆಡಕ್ಕೊಂಡು ಹೋಪಲೆ ನೆರಿಯದೊಡ್ಡಪ್ಪ ಮಾಷ್ಟ್ರುಮಾವನ ಮನೆಗೆ ಬಂದವು, ಈಚೊಡೆಂದ ಕಂಡಿಗೆ ದೊಡ್ಡಪ್ಪಂದೇ ಬಂದವು.
ಎಂಗೊ ಎಲ್ಲ ಅಲ್ಲಿ ಒಟ್ಟಾಗಿ ನೆಡಕ್ಕೊಂಡು ಹೋದೆಯೊ°. ನೆಡವಲೆ ಸುಮಾರಿದ್ದಿದಾ – ಹೀಂಗೇ ಮಾತಾಡಿಗೊಂಡು ಹೋದ್ದು, ಲೋಕಾಬಿರಾಮ!
~

ಕಂಡಿಗೆದೊಡ್ಡಪ್ಪ° ಸಣ್ಣ ಇಪ್ಪಗ – ಬೌಷ್ಷ ಎಂಟತ್ತು ಒರಿಶದ ಪ್ರಾಯವೋ ಏನೋ – ಶುದ್ದಿ ಹೇಳುವ ಉತ್ಸಾಹ ಕೇಳಿರೆ ಹಾಂಗಿತ್ತು – ಇರಳಿ, ಅವು ಸಣ್ಣ ಇಪ್ಪಗ ಆಟಕ್ಕೆ ಹೋದ್ದಡ.
ಅವು ಒಬ್ಬನೇ ಹೋದ್ದಲ್ಲ, ದೊಡ್ಡವರ ಒಟ್ಟಿಂಗೆ ಹಲವು ಪುಳ್ಳರುಗೊ, ಪುಳ್ಳರುಗಳ ಪುಂಡಿಲಿ ಇವುದೇ ಒಬ್ಬ, ಅಷ್ಟೆ.
ದೊಡ್ಡವು ಇಬ್ರು, ಪುಳ್ಳರುಗೊ ಒಂದು ಪುಂಡೆಲು..!!
ಮದಲಿಂಗೆ ಆಟಕ್ಕೆ ಹೋಪದು ಹೇಳಿತ್ತು ಕಂಡ್ರೆ,  ಈಗಾಣ ಹಾಂಗೆ ಒಂದು ಗಳಿಗೆಗೆ ಹೋಗಿ ಬಪ್ಪದಲ್ಲ.

ಮುನ್ನಾದಿನ ಹೊತ್ತಪ್ಪಗ ಬೈಲಿಂದ ನೆಡಕ್ಕೊಂಡು ಆಟಕ್ಕೆ ಹೆರಟ್ರೆ, ಇರುಳಿಡೀ ಆಟ ನೋಡಿ, ಮರದಿನ ಉದೆಕಾಲಕ್ಕೆ ಇತ್ತಂತಾಗಿ ಹೆರಡ್ತದು, ಹೋಪಗ-ಬಪ್ಪಗ ಅದರ ವಿಮರ್ಶೆ ಬೇರೆ, ಹೀಂಗೆ.
ಇದರ ಬಗ್ಗೆ ಅಂದೊಂದು ಶುದ್ದಿಲಿ ಮಾತಾಡಿದ್ದು ನಾವು.
(http://oppanna.com/oppa/yakshagana-dharma-kallugundi-devastana)
ಇವುದೇ ಹೆರಟವು, ಮಾತಾಡಿಗೊಂಡು.

ಪಾರೆ ಅಜ್ಜಂದೇ, ಪಾಡಿಅಜ್ಜಂದೇ ದೊಡ್ಡವು, ಇವೆಲ್ಲ ಪುಳ್ಳರುಗೊ.
ದೊಡ್ಡವು ದೊಡ್ಡ ದೊಡ್ಡ ಶುದ್ದಿಗೊ ಮಾತಾಡಿಗೊಂಡು ಇತ್ತಿದ್ದವು, ಸಣ್ಣವು ಸಣ್ಣಸಣ್ಣ ವಿಶಯದ ಚರಿಪಿರಿ ಪಂಚಾತಿಗೆ ಮಾಡಿಗೊಂಡು ಇತ್ತಿದ್ದವು.
~

ನಮ್ಮ ಊರಿಲಿ ಹಾಂಗೇ ಅಲ್ಲದೋ – ಒಂದು ತಟ್ಟುಜಾಗೆ, ನೀರಿನ ಆಶ್ರಯ ಇಪ್ಪಂತಾದ್ದು.

ಒಣಗಿದ ಕೆದ್ದೆ
ಒಣಗಿದ ಗೆದ್ದೆ ; ಕೆರೆನೀರು ಯೇವತ್ತು ಬತ್ತೋ ಹೇಳಿ ಕಾದುಗೊಂಡಿದ್ದೆ! - ಈಗ ಗೆದ್ದೆಯೇ ಕಾಂಬಲಿಲ್ಲೆ.

ಅಲ್ಲೇ ಬಟ್ಟಕ್ಕಳ ಅಡಕ್ಕೆತೋಟ, ಮನೆ, ತೋಡು, ಕೆರೆ, ಬಾವಿ ಎಲ್ಲ ಇಪ್ಪದು – ಇದು ಒಂದು ಬೈಲು.
ಆ ಇಡೀ ಪ್ರದೇಶವ ಆವರುಸಿಗೊಂಡು ಇಪ್ಪಂತಾದ್ದು ಗುಡ್ಡೆ.
ಗುಡ್ಡೆ ಹೇಳಿರೆ – ಬೋಳುಗುಡ್ಡೆಯೇ ಆಗಿಕ್ಕು, ಅತವಾ ಒಕ್ಕಲೋ ಮತ್ತೊ ಇದ್ದರೆ ನೀರಿನ ಏರ್ಪಾಡುದೇ ಮಾಡಿಕ್ಕು, ಹಾಂಗೆ.
ಒಂದು ಬೈಲು ದಾಂಟಿ ಗುಡ್ಡೆ, ಗುಡ್ಡೆ ನೀರು ಒಟ್ಟುಸುಲೆ ಕೆರೆಗೊ, ಗುಡ್ಡೆ ಹತ್ತಿಳುದರೆ ಮತ್ತೊಂದು ಮಜಲು, ಮಜಲಿಲಿ ಕೆಲಾವು ಒಕ್ಕಲುಗೊ, ಇದ್ದರೆ ಗೆದ್ದೆ – ಮಜಲುಗೆದ್ದೆ ಹೇಳ್ತದು ಅದರ, ಮಜಲು ಕಳುದರೆ ತಟ್ಟಿನ ಬೈಲು, ಬೈಲಿಲಿ ಹಲವು ತೋಟಂಗೊ, ಗೆದ್ದೆಗೊ, ಬಾವಿಗೊ, ಕಟ್ಟಪುಣಿಗೊ, ಬಿಡುನೀರ ಕಣಿಗೊ, ಮತ್ತೊಂದು ತೋಡು – ಸಾರಡಿತೋಡಿನ ಹಾಂಗಿರ್ತದು – ಇದು ನಮ್ಮ ಊರಿನ ಪರಿಸರದ ಮಾದೆರಿ, ಅಲ್ಲದೋ!
ಹಳಬ್ಬರಿಂಗೆ ಅರಡಿಗು, ಇನ್ನಾಣೋರಿಂಗೆ ಗೊಂತಿಕ್ಕೋ – ಉಮ್ಮಪ್ಪ! ಅದಿರಳಿ..

~

ಕಂಡಿಗೆದೊಡ್ಡಪ್ಪನವು ಹೋದ ದಾರಿಲಿಯೂ ಹಾಂಗೇ ಇತ್ತು.
ಹೆರಟು ನೆಡಕ್ಕೊಂಡೇ ಇತ್ತಿದ್ದವು, ಸುಮಾರು ದೂರ ಹೋತು.
ಹಲವು ಬೈಲುದಾಂಟಿದವು ಒಂದು ಗುಡ್ಡೆ ಹತ್ತಿದವು, ಮಜಲಿಂಗೆ ಇಳುದವು..
ಅಜ್ಜಂದ್ರು ಮಾತಾಡಿಗೊಂಡೇ ಇತ್ತಿದ್ದವು – ಪಾಡಿಅಜ್ಜ ಮಾತಾಡುವಗ ಪಾರೆಅಜ್ಜ ಹೂಂಕುಟ್ಟುಗು, ಪಾರೆಅಜ್ಜ ಮಾತಾಡುವಗ ಪಾಡಿಅಜ್ಜ ಹೂಂಕುಟ್ಟುಗು.
ಮಾತಾಡ್ತರೆ ಅವರತ್ರೆ ವಿಶಯ ಎಷ್ಟುದೇ ಇದ್ದು, ನಮ್ಮ ಹಾಂಗೆ ಒಂದೇ ಗಳಿಗೆ ಮಾತಾಡಿ ಕಾಲಿ ಆಗವು!

ಅವು ಮಾತಾಡುದು ರಜ ಕುಶಾಲಿನ, ಬಿಂಗಿ ಶುದ್ದಿ ಆದರೆ ಪುಳ್ಳರುಗಳೂ ಕೆಮಿಕೊಟ್ಟು ಕೇಳುಗು.
ಗಂಭೀರದ್ದಾದರೆ ಅದು ಅವಕ್ಕೆ ಸಂಬಂದ ಇಲ್ಲೆ – ಪುನಾ ಅವರದ್ದು ಬೇರೆಯೇ ಲೋಕ. ಹೀಂಗೆ ದಾರಿ ಸಾಗಿಯೊಂಡಿತ್ತು.

ನೆಡಕ್ಕೊಂಡು ಬಂದು ಒಂದು ಗೆದ್ದೆಹುಣಿಗೆ ಎತ್ತಿದವು, ಅಲ್ಲಿ ಮಾಂತ್ರ ಪಾರೆಅಜ್ಜ ಒಂದು ಕ್ಷಣ ನಿಂದಿಕ್ಕಿದವು –
ಅಲ್ಯಾಣ ಪರಿಸರ ಅವರ ಮನಸ್ಸಿನ ಎಳಕ್ಕೊಂಡತ್ತು.
ಎಂತ ಇತ್ತು ಹಾಂಗಿರ್ತದು?!
~

ಒಂದು ಮಜಲುಗೆದ್ದೆ, ಗುಡ್ಡೆಕಡುದು ಮಾಡಿದ್ದು.
ಶ್ರದ್ದೆಲಿ ಕಟ್ಟಿದ ಗೆದ್ದೆಹುಣಿ, ಅದಕ್ಕೆ ರಕ್ಷಣೆ, ಮಾದು, ಉಜಿರುಕಣಿ, ಎಲ್ಲವುದೇ ಇತ್ತು, ವೆವಸ್ತಿತವಾಗಿ.
ಗೆದ್ದೆ ಕಟ್ಟುಲೆ ಮಾಡಿದ ಶ್ರಮ ಗೊಂತಾವುತ್ತು.
ಗೆದ್ದೆಲಿಡೀ ಕೊರಳು (ಪೈರು) ಬಪ್ಪಲಾಯಿದು, ಎಲ್ಲ ಸೆಸಿಗಳೂ ಫಲಕೊಡ್ತ ಉತ್ಸಾಹಲ್ಲಿತ್ತು, ಕಾಂಬಲುದೇ ಚೆಂದ ಇತ್ತು.
ಆದರೆ, ಇದು ಕೊಳಕ್ಕೆ ಬೇಸಾಯ.

~
ಏಣಿಲು – ಸುಗ್ಗಿ – ಕೊಳಕ್ಕೆ ಹೇಳಿಗೊಂಡು ಮೂರು ಬೇಸಾಯ ತೆಗಗಡ ನಮ್ಮ ಹೆರಿಯೋರು.
ಮಳೆಗಾಲ ಏಣಿಲು ಸುರು ಆದರೆ, ಎರಡುಮೂರುತಿಂಗಳಿಲಿ ಕೊಯಿವಲಾವುತ್ತು, ಮಳೆನೀರೇ ಇರ್ತನ್ನೆ!
ಮತ್ತಾಣದ್ದು ಸುಗ್ಗಿ – ಚಳಿಗಾಲಲ್ಲಿದೇ ನೆಡಕ್ಕೊಂಡಿರ್ತು, ಅಂಬಗ ಹರಿತ್ತ ಬಿಡುನೀರೇ ಇತ್ತು, ಈಗಾಣಷ್ಟು ’ಅಪುರೂಪ’ ಆಯಿದಿಲ್ಲೆ ಇದಾ ಒರತ್ತೆಗೊ!
ಎಲ್ಲ ಗೆದ್ದೆಲಿದೇ ಕೊಳಕ್ಕೆಗೆ ಸಮಗಟ್ಟು ನೀರಿರ..
ಮತ್ತೂ ಪುಣ್ಯವಂತರ ಭೂಮಿ ಆದರೆ ಕೊಳಕ್ಕೆ ಮಾಡುಗು.
ಬೇಸಗೆಲಿ ಒಂದರಿ ಹೂಟೆಮಾಡಿ, ಬಿತ್ತಿ, ಬತ್ತನೀರಿಂಗೆ ಅವಕಾಶ ಮಾಡಿಕೊಡುಗು
ಕೆರೆಯೋ ಮತ್ತೊ ಇದ್ದರೆ, ಅದರ್ಲಿ ನೀರಿದ್ದರೆ ಸಮ, ಹೇಂಗಾರು ವೆವಸ್ಥೆ ಆವುತ್ತು, ಅಲ್ಲದೋ.
(ಕೊಳಕ್ಕೆಗೆದ್ದೆಯ ಜಾಗೆ ತೆಗವಲೆ ಹೆರಟ್ರೆ ಈಗಳೂ ಕ್ರಯ ಜಾಸ್ತಿಯೇ ಇರ್ತು ಭಾವಯ್ಯ, ಅಲ್ಲದೋ?)

ಕೊಳಕ್ಕೆಗೆದ್ದೆಯುದೇ ಕೊಯಿದು ಆದಮತ್ತೆ ನೆಟ್ಟಿಬೇಸಾಯ ಮಾಡುಗು.
ಸೌತ್ತೆಯೋ, ಚೀನಿಕಾಯಿಯೋ, ಕುಂಬ್ಳಕಾಯಿಯೋ – ಹೀಂಗೆಂತಾರು.
ಅದಿರಳಿ..

~ಹಾಂಗೆ, ಪಾರೆಅಜ್ಜ° ನೋಡಿದ್ದುದೇ ಇದನ್ನೇ.. ಕೊಳಕ್ಕೆಗೆದ್ದೆ ಮಾಡಿತ್ತಿದ್ದವು, ಕಷ್ಟಪಟ್ಟು. ಒಳ್ಳೆ ಪ್ರತಿಕ್ರಿಯೆಯುದೇ ಬಯಿಂದು.
ಆದರೆ, ನೆಲ ಒಣಗಿತ್ತಿದ್ದು!
ಪಲಬರೆಕ್ಕಾರೆ ಇನ್ನೂ ಎರಡು ವಾರ ಬೇಕು – ಕೊಯಿವಲೆ. ಈಗಳೇ ನೆಲಕ್ಕ ಒಣಗಿತ್ತಿದ್ದು, ಕಾಲುಮುಡಿಯಷ್ಟು ದೊಡ್ಡ ಗೆದ್ದೆ ಬೇರೆ!
ಎಜಮಾನಂಗೆ ಹದಿನೈದು ದಿನ ಕಳುದು ಎಷ್ಟು ಬೇಜಾರಕ್ಕೋ, ಪಾರೆಅಜ್ಜಂಗೆ ಈಗಳೇ ಅಷ್ಟು ಬೇಜಾರಾತು,
ಛೇ! ತುಂಬ ವ್ಯರ್ಥ ಅಕ್ಕನ್ನೇ! ಹೇಳಿಗೊಂಡು.
ಪಾಡಿಅಜ್ಜ° ಹೂಂಕುಟ್ಟಿದವುದೇ..

~

ಅದೇಬೇಜಾರಲ್ಲಿ ನೆಡಕ್ಕೊಂಡು ಮೇಗೆಹತ್ತಿದವು – ನೂರುಮಾರು ಮೇಗೆ ಹೋಪಗ ಕಂಡತ್ತು ಒಂದು ಕೆರೆ!
ಕೆರೆಲಿ ಸಜ್ಜಿಲಿ ನೀರಿದ್ದು. ಮೀಸಲಕ್ಕು – ಅಷ್ಟು.
ಈ ಒಯಿಶಾಕಲ್ಲಿದೇ ಇಷ್ಟು ನೀರಿದ್ದನ್ನೆ, ಹೇಳಿ ಪಾಡಿಅಜ್ಜಂಗೆ ಕೊಶೀ ಆತು!

ಸೀತ ಹೋಗಿ ಕೆರೆದಂಡೆಲಿ ನಿಂದು ಮೋರೆಬೆಗರು ತೊಳಕ್ಕೊಂಡವು. ಮೂರುಸಂದ್ಯೆಕಳುದು ಮಸ್ಕುಮಸ್ಕು ಆಯ್ಕೊಂಡು ಬಂತುದೇ.
ಪಾರೆಅಜ್ಜಂಗೆ ಗೆದ್ದೆದೇ ಚಿಂತೆ ಇತ್ತಿದಾ. ಕೆರೆಯ ಕರೆಂದ ಗೆದ್ದೆಗೆ ಒಂದರಿ ನೋಡಿದವು.
ಆಶ್ಚರ್ಯ ಆತು ಅವಕ್ಕೆ – ವೆವಸ್ಥಿತ ನೀರು ಸರಬರಾಜು ವೆವಸ್ಥೆ ಇತ್ತು.
ಆ ಕೆರಗೆ ಒಂದು ತೂಂಬು, ಅದರಿಂದ ಹೋದ ನೀರು ಸೀತ ಒಂದು ಕಣಿಲೆ ಹೋಪಲೆ, ಆ ಕಣಿಂದ ಒಂದು ಕೈ ಈ ಗೆದ್ದಗೆ, ಕಣಿ ಅಲ್ಲಿಂದಲೂ ಮುಂದರುದು ಸೀತ ಕೆಳಾಣ ವೆವಸ್ತೆಗೊಕ್ಕೆ ಹೋವುತ್ತು..

ಓಹೋ, ಕೆರೆಯೂ ಗೆದ್ದೆಯೂ ಒಂದೇ ವೆವಸ್ತೆಗೆ ಒಳಪ್ಪಟ್ಟಿದು – ಹೇಳಿ ಅಂದಾಜಿ ಆತು ಪಾರೆಅಜ್ಜಂಗೆ.
“ಈ ಮುಂಢ್ಯಾಮಗ° ಇಷ್ಟು ನೀರು ಮಡಿಕ್ಕೊಂಡು ಗೆದ್ದೆಯ ಅಂತೇ ಒಣಗುಸುತ್ತಲ್ಲದೋ…!!!, ಎರೆಪ್ಪು” – ಹೇಳಿ ಬೈದವಡ ಒಂದರಿ.
(ಅಜ್ಜಂದ್ರು ಮಾತಾಡ್ತ ನಮುನೆಲೇ ಇದ್ದು, ಮೆಚ್ಚದ್ರೆ ಓದೆಡಿ ಆ ಗೆರೆಯ, ಆತೋ? )

ಗೆದ್ದೆ ಇನ್ನು ಹೆಚ್ಚು ದಿನಕ್ಕೆ ಬಾರ, ಇನ್ನೊಂದು ಎರಡು ವಾರಲ್ಲಿ ಒಣಗ್ಗು – ಬೌಶ್ಷ ಯೆಜಮಾನಂಗೆ ಗೊಂತಾಯಿದಿಲ್ಲೆಯೋ ತೋರುತ್ತು – ಹೇಳಿ ಗ್ರೇಶಿಗೊಂಡವು ಈ ಅಜ್ಜ°.
ಸರಿ, ಯೆಜಮಾನಂಗೆ ಗೊಂತಾಯಿದಿಲ್ಲೆ ಹೇಳಿ ಗೆದ್ದೆಯ ಅಂತೇ ಹಾಳುಮಾಡುದಕ್ಕೆ ಅರ್ತ ಇದ್ದೋ,

ಆಟಕ್ಕೆ ಹೋಪದರ ಎಡೆಲಿಯುದೇ ನೀರಾವರಿ ವೆವಸ್ಥೆ ಸುರು…!!
ಕಣಿಯ ಕಸವು ಬಿಡುಸಿ, ಗೆದ್ದೆಯ ಓಳಿಗೆ ದಾರಿ ಮಾಡಿ, ಗೆದ್ದೆಯ ಮಾದು ಮುಚ್ಚಿಕ್ಕಿ, ನೀರು ಎರ್ಕುತ್ತ ವೆವಸ್ಥೆ ಮಾಡಿ ಕೆರೆಯ ತೂಂಬು ಬಿಡುಸಿಯೇ ಬಿಡುಸಿದವು!!!
ಪುಳ್ಳರನ್ನೂ ಕೂಡುಸಿಗೊಂಡವು ಈ ಕಾರ್ಯಕ್ಕೆ – ಅಂತೂ ಕೆರೆಯ ನೀರು ಗೆದ್ದಗೆ ಎತ್ತುವನ್ನಾರವೂ ಅವಕ್ಕೆ ಸಮದಾನ ಆಯಿದಿಲ್ಲೆ.
ಗೆದ್ದಗೆ ನೀರು ಎತ್ತಿ, ಗೆದ್ದೆಯ ಜೀವ ಇನ್ನೂ ಹದಿನೈದು ದಿನಕ್ಕೆ ಎಂತದೂ ಆಗ ಹೇಳಿ ಧೃಡ ಆದ ಮತ್ತೆ ಹೆರಟವು.

ಇಷ್ಟೆಲ್ಲ ಅಪ್ಪಗ ಕಸ್ತಲೆಕಸ್ತಲೆ ಆಗಿತ್ತು!
ಕಟ್ಟಿತಂದ ಸೂಟಗೆ ಕಿಚ್ಚುಮಾಡಿಗೊಂಡು, ಸೂಟೆ ಬೀಸಿಗೊಂಡು ಆಟಕ್ಕೆ ಹೋದವು.
ಪಾರೆಅಜ್ಜನ ಸಾಮಾಜಿಕ ಕಳಕಳಿಗೆ ಒಳುದವೆಲ್ಲ ಸಾಕ್ಷಿ ಆದವು.
ಪಾರೆಅಜ್ಜ ಕೊಶೀಲಿ ಆಟನೋಡಿದವು! :-)

~

ಮರದಿನ ಉದೆಕಾಲಕ್ಕೆ ಶಿವನ ವೇಶ ಬಂದು ಆಟ ಮುಗಾತು!
ಎಲ್ಲೊರುದೇ ಒಪಾಸು ಹೆರಟವು. ಇವರ ಪುಂಡುದೇ ಹೆರಟತ್ತು.

ಗಮ್ಮತ್ತಿಪ್ಪದು ಇನ್ನು!
~

ಆಟಮುಗುಶಿ ಅದೇ ದಾರಿಲಿ ಬಪ್ಪಗ ಅದೇ ಗೆದ್ದೆ, ಅದೇ ಕೆರೆ ಸಿಕ್ಕಿತ್ತು.
ಗೆದ್ದೆಯ ಹತ್ತರೆ ಜೆನಂಗೊ ಸುಳುಕ್ಕೊಂಡು ಇತ್ತಿದ್ದವು. ಒಂದು ಕರೇಲಿ ಜೋರು ಮಾತುಕತೆ ಆವುತ್ತಾ ಇತ್ತು.

ಅದೆಂತರ ಹೇಳಿರೆ, ಅಣ್ಣ – ತಮ್ಮ ಜಗಳ.
ಇಬ್ರ ಪೈಕಿಗುದೇ ಒಂದಷ್ಟು ಜೆನಂಗೊ ಸೇರಿಯೊಂಡು, ಎರಡು ಹೊಡೆಂದಲು ಜೋರು ಜೋರು ಬೊಬ್ಬೆ ಆಯ್ಕೊಂಡಿದ್ದು.

ದಾರಿ ಹೋಪ ಇವುದೇ ಅಲ್ಲಿಗೆ ಎತ್ತಿದವು.

ಮತ್ತೆ ನೋಡಿರೆ, ಕೆರೆ ಅಣ್ಣಂದು, ಗೆದ್ದೆ ತಮ್ಮಂದಡ.
ಮದಲಿಂಗೆ ಒಬ್ಬಂದೇ ಆಗಿದ್ದರೂ, ಈಗ ಪಾಲಾಯಿದು!
ನೀರಾವರಿ ವೆವಸ್ತೆ ಮದಲಾಣವ ಮಾಡಿದ್ದರೂ, ಈಗಾಣ ಯೆಜಮಾನಂದ್ರಿಂಗೆ – ಅವಕ್ಕೆ ಪರಸ್ಪರ ಸರಿ ಇಲ್ಲೆ.

ತಮ್ಮನ ಪೈಕಿಯವು ಕೆರೆಯ ಒಡದವು – ಹೇಳಿ ಅಣ್ಣನ ಪೈಕಿ ಬೊಬ್ಬೆ ಹೊಡಕ್ಕೊಂಡು ಇತ್ತಿದ್ದವು.
ಕೆರೆಯ ಎಂಗೊ ಒಡದ್ದಲ್ಲ, ಅದರಷ್ಟಕೇ ಒಡದ್ದು – ಹೇಳಿ ತಮ್ಮನವು ವಾದುಸಿಗೊಂಡು ಇತ್ತಿದ್ದವು.
ಅಪ್ಪಪ್ಪು, ಅದರಷ್ಟಕೇ ಒಡದ್ದಾಯಿಕ್ಕು – ಹೇಳಿ ಇವುದೇ ಎಲ್ಲೊರುದೇ ಹೇಳಿಗೊಂಡವು..!
ಎಂಗಳೇ ಒಡದ್ದದು ಹೇಳಿದರೆ ಜಗಳ ಇವರ ಹೊಡೆಂಗೆ ತಿರುಗಿ ಇನ್ನೊಂದು ಕತೆ ಅಕ್ಕು ಹೇಳಿ..

ಇಡೀ ವೆವಸ್ತೆಲಿ ಕೊಶೀ ಆದ್ದು ಗೆದ್ದಗುದೇ, ಪಾರೆ ಅಜ್ಜಂಗೂ ಮಾಂತ್ರವೋ, ಹೇಳಿಗೊಂಡು!

~ಇಲ್ಲಿ ಗಮನುಸೆಕ್ಕಾದ್ದು ಎಂತರ ಹೇಳಿತ್ತುಕಂಡ್ರೆ,
ನಮ್ಮ ಹಿರಿಯೋರು “ಹಾಳಪ್ಪಲಾಗ” ಹೇಳ್ತ ಚಿಂತನೆಲಿ ಜೀವನ ನೆಡೆಶಿಗೊಂಡು ಇತ್ತಿದ್ದವು.
ಸೊತ್ತು ಆರದ್ದೇ ಆಗಿರಳಿ, ಅಂತೇ ವೆರ್ತ ಅಪ್ಪಲಾಗ.
ಅತವಾ, ಇನ್ನೊಬ್ಬನ ಸೊತ್ತು ವೆರ್ತ ಆವುತ್ತರೆ ತಡೇಕು, ಅವುದೇ ನಮ್ಮ ಹಾಂಗೇ ಬಂಙ ಬಪ್ಪೋರನ್ನೆ ಹೇಳಿ – ಈ ನಮುನೆಯ ಸಾಮಾಜಿಕ ಚಿಂತನೆ ಅವರ ಮನಸ್ಸಿಲಿತ್ತು.
ಎಂತಾರು ಸೊತ್ತು ಹಾಳಪ್ಪದಾದರೆ ತನಗೆ ಏನೂ ಲಾಬ ಇಲ್ಲದ್ರೂ ಗಮನ ಕೊಟ್ಟು ಕೆಲಸ ಮಾಡುಗು.

~
ಮದಲಿಂಗೆ ಊರದನಗೊಕ್ಕೆ ಗುಡ್ಡೆಲಿ ಮೇದು ಆಸರಪ್ಪದಕ್ಕೆ ಹೇಳಿಗೊಂಡು ಒಂದು ದೊಡ್ಡ ನೀರಿನ ಗುಂಡಿಗೆ ನೀರೆಳದು ತುಂಬುಸುಗಡ ಅಜ್ಜಿಯಕ್ಕೊ.
ಹೋವುತ್ತ ಬತ್ತ ಜೆನಂಗೊಕ್ಕೆ ಬೆಲ್ಲ-ನೀರು ಸಿಕ್ಕಲೆ ಹೇಳಿ ದಳಿಯ ಕರೆಲಿ ಮಡಗ್ಗು, ದಾರಿಲೆ ಹೋಗಿ ಬಚ್ಚುವಗ ಮನೆಗೆ ಹೊಕ್ಕು ಆಸರಿಂಗೆ ಕುಡುದು ಹೆರಡ್ಳೆ.
ಮದಲಿಂಗೆ “ಧರ್ಮದ ತೆಂಗು” ಹೇಳಿ ನೆಡುಗಡ. ಆರ ಜಾಗೆಲಿಯೂ ಅಲ್ಲ – ದಾರಿಲಿ ಹೋವುತ್ತ ಜೆನಂಗೊಕ್ಕೆ ಕುಡಿವಲೆ ಬೊಂಡಕ್ಕೆ ಹೇಳಿಗೊಂಡು.
ಬರೇ ನೆಡುದು ಮಾಂತ್ರ ಅಲ್ಲ, ಅದಕ್ಕೆ ನೀರೆರದು ಸಾಂಕುಗು, ನೆಟ್ಟವ..!
ನೆಡುಮದ್ಯಾನ್ನ ಆರಾದರೂ ಮನೆಹತ್ತರೆ ನೆಡಕ್ಕೊಂಡು ಹೋವುತ್ತಾ ಇಪ್ಪದು ಕಂಡ್ರೆ ದಿನಿಗೇಳಿ ಉಂಬಲೆ ಬಳುಸಿ, ರಜ ವಿಶ್ರಾಂತಿ ತೆಕ್ಕೊಂಡು ಹೋಪಲೆ ಹೇಳುಗು. ಮೂರುಸಂಧ್ಯೆ ಹೊತ್ತಿಲಿ ಆದರೆ ಇರುಳು ನಿಂಬಲೂ ವೆವಸ್ತೆ ಮಾಡಿಕೊಡುಗು.
ಇದೆಲ್ಲ ಧರ್ಮಕಾರ್ಯ...!ಆನು ಒಬ್ಬ ಉದ್ದಾರ ಆದರೆ ಸಾಲ, ಊರುದೇ ನಮ್ಮ ಒಟ್ಟಿಂಗೇ ಬೆಳೇಕು – ಹೇಳುವ ಯೋಚನೆ ಇದ್ದರೆ ಮಾಂತ್ರ ಅದು ಸಾಧ್ಯ.
ಅಲ್ಲದೋ?

ನವಗೆ ಮಾಂತ್ರ ಅಲ್ಲದ್ದೆ, ಸಮಾಜಕ್ಕೆ ಬೇಕಪ್ಪ ಹಾಂಗುದೇ ನಾವು ಬದುಕ್ಕೆಕ್ಕು – ಹೇಳ್ತ ಸಂದೇಶ ಈ ಶುದ್ದಿಲಿ ಇದ್ದಲ್ಲದಾ ಒಪ್ಪಣ್ಣ- ಹೇಳಿದವು ಒಟ್ಟಿಂಗಿದ್ದ ಮಾಷ್ಟ್ರುಮಾವ°.
ಈ ಸರ್ತಿ ತುಪ್ಪುಲೆ ಎಲೆ ಇತ್ತಿಲ್ಲೆ – ಕಂಡಿಗೆ ದೊಡ್ಡಪ್ಪನ ಶುದ್ದಿಲಿ ಪಾರೆಅಜ್ಜ ಕೆರೆಯ ತೂಂಬು ಬಿಡುಸೊಗಳೇ ಬಾಯಿಲಿದ್ದ ಎಲೆ ತುಪ್ಪಿ ಮುಗುದ್ದಿದಾ!
~
ಅಷ್ಟಪ್ಪಗ ಜೋಯಿಷಪ್ಪಚ್ಚಿಮನೆ ಎತ್ತಿತ್ತು. ಕಂಡಿಗೆ ದೊಡ್ಡಪ್ಪನ ಈ ಹಳೇ ಮರಪ್ಪಿನ ಶುದ್ದಿ ಕೇಳಿಗೊಂಡು ದಾರಿ ಬಚ್ಚಲು ಗೊಂತೇ ಆಯಿದಿಲ್ಲೆ!
ವಿಷಯ ತಿರುಗಿ ಹೊಸವಿಷಯ ಸುರು ಆತು.
ಬಪ್ಪ ಸರ್ತಿ ಮಾತಾಡುವ – ಅದರ ಬಗ್ಗೆ. ಆಗದೋ?

~

ನಮ್ಮ ಹೆರಿಯೋರು ತನ್ನದಲ್ಲದ್ದ, ಲೋಕೋಪಕಾರೀ ಕೆಲಸ ಮಾಡಿದವು, ನಾವೆಷ್ಟು ಮಾಡ್ತು?

ಹತ್ತರಾಣವ ಬಚ್ಚಿ ಬಿದ್ದರೂ ತಾಂಗುಲೆಡಿಯದ್ದ ಕೈ ಇಪ್ಪದಾದರೂ ಯೇವ ಸಾರ್ತಕತೆಗೆ?
ಅಲ್ಲದೋ? ಏ°?
ನಮ್ಮ ಮಕ್ಕೊಗೆ ಆದರ್ಶ ಕತೆಗಳ ಕಾರ್ಟೂನುಗಳಲ್ಲಿ ಹುಡುಕ್ಕುಸ್ಸು ಬೇಡ, ನಮ್ಮ ಊರಿಲೇ ದಾರಾಳ ಇದ್ದು, ನೆಂಪು ಮಡಾಗಿ ಮತ್ತಾಣೋರಿಂಗೆ ಹೇಳ್ತದು ನಮ್ಮ ಕೈಲಿದ್ದು,  ಅಷ್ಟೆ!

ಒಂದೊಪ್ಪ: ತನ್ನ ನೀರಿನ ಸಾರ್ಥಕತೆಯ ಕಂಡು ಗೆದ್ದೆಯಷ್ಟೇ ಕೆರೆಗೂ ಕುಶಿ ಆಗಿಕ್ಕಲ್ಲದಾ?

ಒಣಗಿದ ಗೆದ್ದೆ ನೋಡಿ ಕೆರೆಯ ತೂಂಬು ಬಿಡುಸಿದವು..!, 4.9 out of 10 based on 9 ratings

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಗಣೇಶ ಮಾವ°
  ಗಣೇಶ ಮಾವ

  ಸುಮಾರು ನಲ್ವತ್ತುವರುಷ ಹಿಂದಾಣ ಘಟನೆಗಳ ಅಜ್ಜ ಹೇಳಿಗೊಂಡು ಇತ್ತದು ನೆಮ್ಪಾತು.ಕೊಯ್ಲಿನ ಸಮಯಲ್ಲಿ ಇರುಳು ಒರಕ್ಕು ಕೆಟ್ಟುಗೊಂಡು ಗೆದ್ದೆಕಾವಲು ಮಾಡಿದ ಅನುಭವವ ಅಜ್ಜ ಹೇಳಿದ್ದು ಪುನಃ ಅನುಭವಿಸಿದೆ. ಧನ್ಯವಾದ, ನೈಜ ಚಿತ್ರಣ ಹಾoಗೂ ಭತ್ತದ ಸಾಗುವಳಿ ಮಾಡುವ ಅಜ್ಜಂದ್ರ ಕಷ್ಟದ ಜೀವನದ ಚಿತ್ರಣ ಲಾಯಿಕ ಆಯಿದು..

  [Reply]

  VA:F [1.9.22_1171]
  Rating: 0 (from 0 votes)
 2. ಡಾಮಹೇಶಣ್ಣ
  ಮಹೇಶ, ಕೂಳಕ್ಕೋಡ್ಲು

  ವ್ಹಾ!
  “ತನ್ನ ನೀರಿನ ಸಾರ್ಥಕತೆಯ ಕಂಡು ಗೆದ್ದೆಯಷ್ಟೇ ಕೆರೆಗೂ ಕುಶಿ ಆಗಿಕ್ಕಲ್ಲದಾ?”
  ಈ ಒಂದೊಪ್ಪ ಓದಿಯಪ್ಪಗ ತುಂಬ ಸಂತೋಷ ಆತು.:)
  ಅಪ್ಪಡ, ಸಾರ್ಥಕತೆ ಬರೆಕಾರೆ ಸ್ವಾರ್ಥ ಕಮ್ಮಿ ಆಯೆಕಡ.

  ಒಪ್ಪಣ್ಣನ ಒಪ್ಪಂಗ ಎಂಥ ಬೆಪ್ಪನಲ್ಲಿಯೂ ಮಾರ್ಪಾಟು ತಕ್ಕು.

  [Reply]

  VA:F [1.9.22_1171]
  Rating: +1 (from 1 vote)
 3. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಗೆದ್ದೆಗೂ, ಕೆರೆಗೂ ಖಂಡಿತಾ ಭಾರೀ ಕೊಶಿ ಆದಿಕ್ಕು. ಪ್ರಕೃತಿಲಿ ಯಾವುದಕ್ಕೂ ಸ್ವಾರ್ಥ ಇಲ್ಲೆ. ಸ್ವಾರ್ಥ ಇಪ್ಪದು ಮನುಷ್ಯರಿಂಗೆ ಮಾತ. ನಮ್ಮಲ್ಲಿ ಒಂದು ಮಾತು ಇದ್ದು: “ ಒಂದೋ ನಂಬ್ರ ಇಲ್ಲದ್ರೆ ಜಂಬ್ರ” ಹೇಳಿ. ಪಾರೆ ಅಜ್ಜನ ಜೀವನ ಸಾರ್ಥಕ ಆತು. ತಾನು ಯಾವುದೂ ತೆಕ್ಕೊಳ್ಳದ್ದೆ ತನ್ನಿಂದ ಬೇರೆಯವಕ್ಕೆ ಉಪಕಾರ ಆಯೆಕ್ಕು ಹೇಳುವದೇ ಪ್ರಕೃತಿ ಧರ್ಮ.

  [Reply]

  ಡಾಮಹೇಶಣ್ಣ

  ಮಹೇಶ, ಕೂಳಕ್ಕೋಡ್ಲು Reply:

  ಅಪ್ಪು, ಶರ್ಮಪ್ಪಚ್ಚಿ.
  ನಿಂಗೊ ಹೇಳಿದ ಹಾಂಗೆ ಪ್ರಕೃತಿಯ ನೋಡಿ ಕಲಿವದದೇ ನಮ್ಮ ಸಂಸ್ಕೃತಿ.
  ನಮ್ಮ ಹಿರಿಯವು ಪ್ರಕೃತಿಯ ನೋಡಿಯೇ ತುಂಬ ಕಲ್ತಿದವು, ನವಗೆ ಕಲುಶಿದ್ದವು ಹೇಳುವದಕ್ಕೆ ಒಂದು ಉದಾಹರಣೆ :

  ಪರೋಪಕಾರಾಯ ಫಲಂತಿ ವೃಕ್ಷಾ:
  ಪರೋಪಕಾರಾಯ ವಹಂತಿ ನದ್ಯಃ |
  ಪರೋಪಕಾರಾಯ ದುಹಂತಿ ಗಾವಃ
  ಪರೋಪಕಾರಾರ್ಥಮಿದಂ ಶರೀರಮ್ ||

  ಇದರ ನಮ್ಮ ಪೂರ್ವಜರು ವ್ಯವಹಾರಲ್ಲಿ ತಯಿಂದವು ಹೇಳುವದಕ್ಕೆ ಒಪ್ಪಣ್ಣ ಹೇಳಿದ ಅಜ್ಜಂದ್ರ ಕಥೆಯೇ ಸಾಕ್ಷಿ.

  [Reply]

  VA:F [1.9.22_1171]
  Rating: +1 (from 1 vote)
 4. ಬೊಳುಂಬು ಮಾವ°
  ಗೋಪಾಲ ಮಾವ

  ಪಾರೆ ಅಜ್ಜನ ಸಾಮಾಜಿಕ ಕಳಕಳಿ ಮನಸ್ಸಿಂಗೆ ತಟ್ಟಿತ್ತು. ಮದಲಾಣವರ ಪ್ರೀತಿ ವಿಶ್ವಾಸ ನಿಸ್ವಾರ್ಥಂಗಳ ಕಾಂಬಗ ಈಗಾಣ ಕಾಲದ ನಾವು ತಲೆತಗ್ಗುಸೆಕು. ಅಂದ್ರಾಣ ಹಾಂಗೆ ಈಗಲೂ ಇದ್ದಿದ್ರೆ ಅದೆಷ್ಟು ಒಳ್ಳೆದಿತ್ತು. ಆನು ನೀರ್ಚಾಲು ಶಾಲೆಗೆ ಹೋಪಗ ಖಂಡಿಗೆ ಮನೆಯವರ ಲೆಕ್ಕಲ್ಲಿ ನೆಡಕ್ಕೊಂಡಿದ್ದಿದ್ದ ಮಜ್ಜಿಗೆ ಕಟ್ಟೆಲಿ ದಿನಾಲು ಮಜ್ಜಿಗೆ ಕುಡುಕ್ಕೊಂಡಿದ್ದದು ನೆಂಪಾತು. ಹನ್ನೊಂದು ಗಂಟೆಗೆ ಬೆಲ್ಲು ಹೊಡದ ಕೂಡಲೇ ಓಡುತ್ತದು ಮಜ್ಜಿಗೆ ಕುಡಿವಲೆ ! ಸಾರ್ವಜನಿಕರ ಆಸರು ತಣುಶಲೆ ಅದೆಷ್ಟು ಒಳ್ಳೆ ಏರ್ಪಾಡು.

  ಪೇಟೆ ಮಟ್ಟಿಂಗೆ ಹೇಳುವುದಾದರೆ, ನಾವು ಹೋವ್ತ ದಾರಿಲಿ ಅದೆಷ್ಟೋ ಕಡೆ ಸಾರ್ವಜನಿಕ ನಳ್ಳಿನೀರು ಅನಾವಶ್ಯಕ ಪೋಲು ಆಗೆಂಡಿರುತ್ತು. ಅದರ ನಾವು ಕಟ್ಟಿ ನೀರು ಒಳುಸಲಕ್ಕು. (ಎನಗೆ ಕಂಡ್ರೆ ಆನು ಮಾಡ್ತೆ !) ಹಗಲು ಹೊತ್ತು ಬೀದಿ ದೀಪ ಬೇಡದ್ರೂ ಹೊತ್ತೆಂಡು ಇರುತ್ತು. ಸುಚ್ಚು ಎಲ್ಲಿ ಹೇಳಿ ಗೊಂತಿದ್ದರೆ ನವಗೇ ಆಫ್ ಮಾಡ್ಳೆ ಅಕ್ಕು. ಇಲ್ಲದ್ರೆ ಕಾರ್ಪೊರೇಶನ್ ನವಕ್ಕೆ ಹೇಳಲಾದರು ಅಕ್ಕು.

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಶುದ್ದಿ ಬರದ್ದು ಲಾಯಕ ಆಯಿದು ಒಪ್ಪಣ್ಣ.. ನಮ್ಮ ಹಿರಿಯೋರ ಸುಮಾರು ಕ್ರಮಂಗಳ ನಾವು ಅನುಸರುಸುತ್ತಿಲ್ಲೇ ಹೇಳುದು ಈ ಶುದ್ದಿ ಓದಿ ಅಪ್ಪಗ ಗೊಂತಾವುತ್ತು.. ಮದಲಾಣವು ಪಾಲು ಅಪ್ಪದು ಹೇಳಿರೆ ಇದ್ದ ಜಾಗೆಯ ಒಬ್ಬಂಗೆ ಅನುಭವಿಸುಲೇ ಬಿಟ್ಟು ಮತ್ತೊಬ್ಬ ತನ್ನ ಪಾಲಿನ ಪೈಸೆ ತೆಕ್ಕೊಂಡು ಬೇರೆ ಕಡೇ ಜಾಗೆ ಮಾಡುದು…. ಎಂತಕ್ಕೆ ಹೇಳಿರೆ ಇಪ್ಪ ಜಾಗೆಲಿ ಒಬ್ಬನೇ ಚೆಂದಲ್ಲಿ ಇರಲಿ ಹೇಳಿ… ಇಲ್ಲದ್ದರೆ, ಈ ಕತೇಲಿ ಆದ ಹಾಂಗೆ ಗೆದ್ದೆ ಒಂದು ಪಾಲಿಂಗೆ, ಕೆರೆ ಒಂದು ಪಾಲಿಂಗೆ ಆವುತ್ತು ಹೇಳಿ… ಒಂದೇ ಹೊಟ್ಟೆಲಿ ಹುಟ್ಟಿದ ಮಕ್ಕಳೇ ಆದರೂ, ವ್ಯವಹಾರಂಗ ಎಷ್ಟು ಭಿನ್ನ ಇರ್ತು.. ತಮ್ಮನ ಗೆದ್ದೇ ಹಾಳಾವುತ್ತಾರೂ, ತನ್ನ ಕೆರೇಲಿ ನೀರು ತುಂಬಾ ಇದ್ದರೂ, ಅದರ ಗೆದ್ದೆಗೆ ಹಾಯಿಸುವ ವೆವಸ್ತೆ ಇದ್ದರೂ ತನಗೆ ಸಂಬಂಧ ಇಲ್ಲೆ ಹೇಳಿ ಕೂದೋನ ಎಂತ ಹೇಳೆಕ್ಕು? ಅಲ್ಲಿ ಹಿರಿಯರಾದ ಪಾರೆ ಅಜ್ಜ° ಮಾಡಿದ್ದೆ ಸರಿ.. ಅವು ಎನಗೆ ಇದು ಅಗತ್ಯ ಇಲ್ಲೆ ಹೇಳಿ ಹೋಗಿದ್ದರೆ ಆ ಫಸಲು ಹಾಳಾವುತ್ತಿತ್ತು.. ಆ ಅಣ್ಣ, ತಮ್ಮಂದ್ರಿಂಗೆ ಅಜ್ಜ° ಮಾಡಿದ್ದು ಗೊಂತಾಗಿರ.. ಆದರೆ ಅಜ್ಜನ ಒಟ್ಟಿನ್ಗೆ ಇದ್ದ ಪುಳ್ಳರುಗೊಕ್ಕೆ ಇದು ಮಾದರಿ ಆಗಿಕ್ಕು.. ಅವು ಅದರ ಜೀವನಲ್ಲಿ ನೆನಪ್ಪು ಮಡಿಗಿ ಅಳವಡಿಸಿದರೆ ಸಾಕಲ್ಲದಾ? ಎಲ್ಲಾ ದಿಕ್ಕಂಗೆ ಪಾರೆ ಅಜ್ಜಂಗೆ ಸರಿ ಮಾಡ್ಲೆ ಬಂದುಗೊಂಬಲೆ ಎಡಿಯ.. ಈ ಕತೆಯ ನೋಡಿ ಆದರೂ ನಮ್ಮಲ್ಲೇ ನಾವು ಬದಲಿಗೊಂದರೆ ನಮ್ಮ ನಂತ್ರಾಣವಕ್ಕೆ ನಾವು ಮಾದರಿ ಅಪ್ಪಲೇ ಎಡಿಗಷ್ಟೇ..

  [Reply]

  VA:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ

  ಒಪ್ಪಣ್ಣೊ ಲಾಯ್ಕ ಆಯಿದು ಬರದ್ದು, ಎಲ್ಲರನ್ನು ಚಂತನೆಗೆ ಹಚ್ಚುವ ಲೇಖನ. ಪಾರೆ ಅಜ್ಜನಾಂಗಿಪ್ಪ ಅಜ್ಜಂದ್ರು ಈಗಲೂ ನಮ್ಮ ಸುತ್ತ ಇದ್ದರೆ ಎಷ್ಟು ಚೆಂದ
  ಒಂದೊಪ್ಪ ಅಂತೂ ಸೂಪರ್‌ ಮರಾಯಾ, ನಿನ್ನ ಸಾರ್ಥಕತೆ ಬರವಣಿಗೆಯ ಕಂಡು ಎನಗೆ ಕೊಶಿ ಆತು
  ಹೀಂಗೆ ಬರೆ ಆತೋ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಪಟಿಕಲ್ಲಪ್ಪಚ್ಚಿಪವನಜಮಾವಮುಳಿಯ ಭಾವಉಡುಪುಮೂಲೆ ಅಪ್ಪಚ್ಚಿಶ್ರೀಅಕ್ಕ°ಬೋಸ ಬಾವಅನು ಉಡುಪುಮೂಲೆವೇಣೂರಣ್ಣವಾಣಿ ಚಿಕ್ಕಮ್ಮಡಾಮಹೇಶಣ್ಣದೀಪಿಕಾಮಾಷ್ಟ್ರುಮಾವ°ಅನಿತಾ ನರೇಶ್, ಮಂಚಿದೊಡ್ಮನೆ ಭಾವಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿದೊಡ್ಡಭಾವಪುಣಚ ಡಾಕ್ಟ್ರುಯೇನಂಕೂಡ್ಳು ಅಣ್ಣತೆಕ್ಕುಂಜ ಕುಮಾರ ಮಾವ°ಡಾಗುಟ್ರಕ್ಕ°ಶುದ್ದಿಕ್ಕಾರ°ಜಯಗೌರಿ ಅಕ್ಕ°ಡೈಮಂಡು ಭಾವಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ