Oppanna.com

ಹೊಸತ್ತರೆಡಕ್ಕಿಲಿ “ಊರ ಸೊತ್ತು”ಗಳನ್ನೇ ಮರೆತ್ತ ಊರೋರ ಶುದ್ದಿ..!

ಬರದೋರು :   ಒಪ್ಪಣ್ಣ    on   08/02/2013    14 ಒಪ್ಪಂಗೊ

ಮನ್ನೆ ಕೊಡೆಯಾಲಲ್ಲಿ ಸಂಘದ ಕಾರ್ಯಕ್ರಮ ಇದ್ದದು ಎಲ್ಲೋರಿಂಗೂ ಅರಡಿಗು.
ಲಕ್ಷಗಟ್ಳೆಲಿ ಜೆನ ಬಂದು ಚೆಂದಕೆ ಸೇರಿದ್ದು; ಅಷ್ಟೇ ಚೆಂದಕೆ ಬಿರುದ್ದು, ಆ ಶಿಸ್ತು, ಒಗ್ಗಟ್ಟು – ಎಲ್ಲವನ್ನೂ ಗ್ರೇಶಿಂಡ್ರೆ ಅದೇ ಒಂದು ಗುಂಗು ಅಡ.
ಕಾರ್ಯಕ್ರಮ ಕಳುದು ಒಂದು ವಾರ ಆದರೂ – ಅದರ ಗುಂಗು ಬಿರುದ್ದಿಲ್ಲೆ ಹೇಳ್ತವು ಅಕ್ಷರದಣ್ಣ. ಕುಂಟಾಂಗಿಲ ಭಾವಂಗೆ ಅಂತೂ – ಒಂದು ತಿಂಗಳಿಂದ ಕಟ್ಟಿ ಮಡಗಿದ ಒರಕ್ಕು ಈಗ ಬಿರುತ್ತಷ್ಟೆ.
ಸಂಪರ್ಕ ಸಮಯಂದಲೇ ತಯಾರಿಯ ಅಂಬೆರ್ಪಿಲಿ ಇದ್ದದಲ್ಲದೋ, ಪಾಪ!
ಹಲವು ದಿಕ್ಕೆ ನೀರು ಕುಡುದ ಕಾರಣವೋ ಎಂತ್ಸೋ – ಕುಂಟಾಂಗಿಲ ಭಾವಂಗೆ ಈಗ ರಜಾ ಶೀತವೂ ದೊಂಡೆಬೇನೆಯೂ ಇದ್ದು.
~

ಮಾತಿಂದ ಮಾತಿಂಗೆ ಹಾರುವ ಶುದ್ದಿ ನಾವು ಕಳುದ ವಾರ ಮಾತಾಡಿದ್ದಷ್ಟೆ. ಗೊಂತಿದ್ದುಗೊಂಡೇ ನಾವು ಹಾಂಗೆ ಮಾಡುಸ್ಸು ಬೇಡ- ಸೀತ ವಿಷಯ ಹೇಳಿಬಿಡ್ತೆ; ಆಗದೋ? 😉
ಹಾಂಗೆ, ಕುಂಟಾಂಗಿಲ ಭಾವಂಗೆ ಶೀತ – ದೊಂಡೆಬೇನೆ ಆತು.
ಓ ಮನ್ನೆ ದೊಡ್ಡಜ್ಜನ ಮನೆಗೆ ಹೋಪಾಗ – ದೊಡ್ಡಜ್ಜಿ ಕೇಳಿದವಾಡ, ‘ಎಂತ ಶೀತ ತೆಕ್ಕೊಂಡು ಬಂದೆಯೋ’ದು. “ಅ..ಆ…ಪ್ಪು…ಕ್ಷೀ” ಹೇದನಾಡ.
ಈಗಾಣ ಮಕ್ಕೊ ಇದಾ – ಹೋದಲ್ಲಿ ಆಸರಿಂಗೆ ಕುಡಿಯೇಕು, ಕಂಡಲ್ಲಿ ತಿಂಡಿ ತಿನ್ನೇಕು – ಯೇವ ನೀರೋ, ಏವ ಎಣ್ಣೆಯೋ – ಒಟ್ಟು ನಮ್ಮ ದೇಹಕ್ಕಾಗದ್ದು ಹೋದರೆ ಹೀಂಗೆ ಅಸೌಖ್ಯ ಅಕ್ಕಿದಾ; ಮದಲಿಂಗೆ ಹೀಂಗಲ್ಲನ್ನೇ!? – ದೊಡ್ಡಜ್ಜಿ ಹೇಳಿಂಡೇ – ಸೀತ ಒಂದು ಕುಂಟುಕತ್ತಿ ಹಿಡ್ಕೊಂಡು ಓ ಅಲ್ಲಿ, ಜಾಲ ತಲೆಂಗೆ ಹೋದವು.
ಬಪ್ಪಗ, ಎರಡು ಗೆಂಡೆ ಶುಂಠಿ – ಖಾರದ ಶುಂಠಿ ತೆಕ್ಕೊಂಡೇ ಬಂದವು.
ಅಂತೆ ತಂದದಲ್ಲ, ಸಜ್ಜಿಗೆ ಒಗ್ಗರ್ಸುಲೆ ತಂದದೂ ಅಲ್ಲ, ಈ ಕುಂಟಾಂಗಿಲಭಾವಂಗೆ ಶೀತಲ್ಲಿ ಕಣ್ಣು ಗುಂಡಿ ಆದ್ಸರ ಕಾಂಬಲೆಡಿಯದ್ದೆ ತಂದದು. ತಂದ ಶುಂಠಿಯ ಮನಾರ ಮಾಡಿಕ್ಕಿ ಕುಂಟಾಂಗಿಲ ಭಾವಂಗೆ ಕೊಟ್ಟೇಬಿಟ್ಟವು.
ಭಾವಯ್ಯಂಗೂ ಹಾಂಗೇ – ಈ ಶೀತಲ್ಲಿ ಶುಂಠಿ ಅಲ್ಲ, ಮೆಣಸೇ ಕೊಟ್ರೂ ಬಾಯಿರುಚಿ ಇಲ್ಲದ್ದೆ ಗುರ್ತ ಸಿಕ್ಕ – ಹಾಂಗೆ ತೆಕ್ಕೊಂಡ°.
ಮಾತಾಡಿಗೊಂಡೇ – ಒಂದು ತುಂಡು ತೆಗದು ಬಾಯಿಗೆ ಹಾಕಿಂಡ°.

ಬಾಯಿಗೆ ಹಾಕಿದ್ದೊಂದು ನೆಂಪಿದ್ದು. ಮತ್ತೆ ನೆಂಪು ಬಪ್ಪಗ ಹನ್ನೊಂದನೇ ಗ್ಳಾಸು ನೀರು ಕುಡ್ಕೊಂಡು ಇದ್ದ°!
ಎಂತಾತು? ಶುಂಠಿ ಆ ನಮುನೆ ಖಾರ!!
ಅಡಕ್ಕೆ ಅಮಲು ತಲೆಗೆ ಹಿಡುದಪ್ಪಗ ಸುಭಗಣ್ಣಂಗೆ ಅಪ್ಪ ಹಾಂಗೆ ಆತು – ಈ ಕುಂಟಾಂಗಿಲ ಭಾವಂಗೆ!
ಹನ್ನೆರಡು ಗ್ಲಾಸು ನೀರುದೇ, ಒಂತುಂಡು ಬೆಲ್ಲವೂ ತಿಂದಪ್ಪಗ ವಿಷಯ ಕಂಟ್ರೋಲಿಂಗೆ ಬಂದ ಕಾರಣ ಮಾತಾಡ್ಳೆ ಎಡಿಗಾತು!
“ದೊಡ್ಡಜ್ಜೀ, ಇದು ಶುಂಠಿಯೋ, ಅಲ್ಲ ಬೇರೆಂತಾರು ಮಿಶ್ರ ಮಾಡಿದ್ದಿರೋ – ಕೇಳಿಯೇ ಬಿಟ್ಟ°..!
ಶುಂಠಿಯೇಯೋ° – ಅದು ನಮ್ಮ ಮನೆ ಶುಂಠಿ; ಪೇಟೆದಲ್ಲ – ಹೇಳಿಕ್ಕಿ ಒಳ ಹೋದವು.

ಇದಿಷ್ಟರಲ್ಲಿ ಊರ ತರಕಾರಿ ಕಾಣ್ತೋ? (ಪಟ: ಇಂಟರ್ನೆಟ್ಟಿಂದ)
ಇದಿಷ್ಟರಲ್ಲಿ ಊರ ತರಕಾರಿ ಕಾಣ್ತೋ? (ಪಟ: ಇಂಟರ್ನೆಟ್ಟಿಂದ)

~
ಅಲ್ಲಿಗೆ ಶೀತದ ಸಂಗತಿ ಮುಗಾತು. ಇನ್ನು ಬೇರೆ ಸಂಗತಿ ಮಾತಾಡುವೊ.°
ಅದೇ, ಆ “ಶುಂಠಿ”ಯ ಸಂಗತಿ!! ಅದರ್ಲಿಯೂ – ಆ ಊರ ಶುಂಠಿಯ ಬಗ್ಗೆ.
~

ಅಪ್ಪು, ಮದಲಿಂಗೆ ಶುಂಠಿ ಮನೆಮನೆಗಳಲ್ಲಿ ಇದ್ದತ್ತು; ಬೇಕಪ್ಪಗ ಸೀತ ಹೋಗಿ ಒಕ್ಕಿಂಡು ಬಂತು.
ಶುಂಠಿ ಮಾಂತ್ರ ಅಲ್ಲ, ಆ ನಮುನೆದು ಎಲ್ಲವೂ ಮನೆ ಮನೆಗಳಲ್ಲೇ ಇದ್ದತ್ತು. ಸ್ವಾವಲಂಬನೆ ಧಾರಾಳ ಇದ್ದತ್ತು. ಈಗ ಮಾಂತ್ರ ಎಲ್ಲದಕ್ಕೂ ಪೇಟೆಂದಲೇ ಆಯೇಕು!
ಎಲ್ಲವೂ ಎಲ್ಲರಿಂಗೂ ಪೇಟೆಂದಲೇ ಬರೆಕ್ಕಾರೆ – ಪೇಟಗೆ ಧಾರಾಳ ಬರೆಡದೋ? ಹಾಂಗಾಗಿ “ಬೇಗ ಬೆಳವ”, “ಹೆಚ್ಚು ಬೆಳವ” ನಮುನೆ ಸೆಸಿಗಳ ಮಾರ್ಪಾಡು ಮಾಡಿದವು, ಕಶಿ ಕಟ್ಟಿದವು.
ಹಳ್ಳಿಗಳಲ್ಲಿ ಸಣ್ಣ ಗೆಂಡೆಯ ಶುಂಠಿ ಆವುತ್ತರೆ, ಪೇಟಗೆ ಕಶಿ ಶುಂಠಿ – ದೊಡ್ಡದು ಬಪ್ಪಲೆ ಸುರು ಆತು. ಶುಂಠಿಯ ಗಾತ್ರ ಮಾಂತ್ರ ದೊಡ್ಡ ಆದ್ದು, ಸತ್ವ ಅಷ್ಟೇ ಇದ್ದಷ್ಟೆ!! ಹಾಂಗಾಗಿ, ಪೇಟೆ ಶುಂಠಿ ಊರ ಶುಂಠಿಗೆ ಹೋಲುಸುವಾಗ “ಚಪ್ಪೆ” ಹೇಳಿ ಅನುಸಲೆ ಸುರು ಆತು.

ಇದೇ ನಮುನೆ ಹಲವು ತರಕಾರಿಗೊ. ಊರಿಲಿ ಬೆಳವ ತರಕಾರಿಗೊ ಸಣ್ಣ ಸಣ್ಣ ಇದ್ದರೂ – ಸತ್ವ ಧಾರಾಳ ತುಂಬಿಕ್ಕು. ಅಷ್ಟು ಸಣ್ಣ ಇದ್ದರೆ ಪೇಟೆಯವಕ್ಕೆ ಕಿಲ ಲೆಕ್ಕಲ್ಲಿ ಬೆಳವಗ ಅಸಲಾಯೇಕೇ!
ಕಶಿನಮುನೆ ಎಂತೆಂತದೋ ಮಾಡಿ, ತರಕಾರಿಗೊ ಇಷ್ಟಿಷ್ಟು ದೊಡ್ಡ ಅಪ್ಪ ಹಾಂಗೆ ಮಾಡಿದವು. “ಗಟ್ಟದ ಮೇಗಾಣ ತರಕಾರಿಗೊ” ಹೇದು ಒಂದೇ ಹೆಸರು ಮಡಗಿದವು.
ನಮ್ಮ ಊರ ಪಟಕಿಲ – ಇಷ್ಟು ಸಣ್ಣಕೆ ಇದ್ದರೆ ಗಟ್ಟದ ಮೇಗಾಣದ್ದು ಈ..ಷ್ಟು ದೊಡ್ಡ; ನಮ್ಮ ಊರ ನೆಲ್ಲಿಕಾಯಿ ಇಷ್ಟು ಪಿಟ್ಟೆ; ಗಟ್ಟದ ನೆಲ್ಲಿಕಾಯಿ ಈ..ಷ್ಟು ದೊಡ್ಡ.
ಆದರೆ ಊರದ್ದು ರಣ ಹುಳಿ; ಗಟ್ಟದ ಮೇಗಾಣದ್ದು – ಹೇಳ್ತ ಆ ಕಶಿ – ಅದು ಛೆಪ್ಪೆ!!

ಹೀಂಗೇ ಆಲೋಚನೆ ಮಾಡುವಾಗ, ಸುಲಭ ಅಪ್ಪಲೆ ಪೇಟೆಯ ಅವಲಂಬನೆ ಮಾಡಿಗೊಂಡು – ನಮ್ಮ ಹಳ್ಳಿಯ ಎಷ್ಟೋ ವೈವಿಧ್ಯಂಗಳ ಮರದೇ ಬಿಟ್ಟಿದು ನಾವು – ಹೇದು ಕಂಡತ್ತು.
ಊರಿಂದೇ ಆಗಿ, ಈಗ ಕಣ್ಮರೆ ಅಪ್ಪ / ಆದ ಸಂಗತಿಗಳ ಬಗ್ಗೆ ಮೊನ್ನೆ ಮಾಷ್ಟ್ರುಮಾವನ ಹತ್ತರೆ ಮಾತಾಡಿದೆ.
ಅವುದೇ ಕೆಲವೆಲ್ಲ ಪಟ್ಟಿ ಕೊಟ್ಟವು. ಎಲ್ಲವನ್ನೂ ಒಟ್ಟಾಗಿ ಈ ವಾರಕ್ಕೆ ಮಾತಾಡುವನೋ?
~

  • ಊರದ್ದರ ದೂರಮಾಡಿ ಹೆರಾಣ ಆಕ್ರಮಣದ ಪ್ರಭಾವ ಮುಖ್ಯವಾಗಿ ಪರಿಗಣಿಸೇಕಾದ್ಸು – “ಹಾಲಿನ” ಮೇಗೆ.
    ಹೇದರೆ, ದನಗಳ ಮೇಗೆ. ಊರ ದನಗಳ ಸಂಪೂರ್ಣವಾಗಿ ದೂರೀಕರುಸಿ, ಹೆಚ್ಚು ಹಾಲು ಸಿಕ್ಕುತ್ತು – ಹೇದು ಜರ್ಸಿ ದನಗಳ ತಂದವಲ್ಲದೋ
    – ಅಂಬಗಳೇ ದೊಡ್ಡ ಅಧಃಪತನ ಆಯಿದು – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
  • ದನವ ದೂರ ಮಾಡಿದ್ದೇ – ಅದಕ್ಕಿಪ್ಪ ಹುಲ್ಲುದೇ ದೂರ ಆತು.
    ದೊಡ್ಡ ಜಾತಿ ದನಗೊಕ್ಕೆ ದೊಡ್ಡ ಪ್ರಮಾಣದ ಹುಲ್ಲು ಬೇಕು ಅಪ್ಪೋ!
    ಅಷ್ಟು ಹುಲ್ಲು ಬೇಕಾರೆ ಅದಕ್ಕೆ “ದೊಡ್ಡ” ಹುಲ್ಲುಗಳೇ ಆಯೇಕಟ್ಟೆ. ಕ್ರಮೇಣ – ನಮ್ಮ ತೋಟದ ಹುಲ್ಲು ಹೋಗಿ; ನೆಟ್ಟು ಮಾಡುವ ನಮುನೆ ದೊಡ್ಡ ಹುಲ್ಲು ಬಂತು. ಗಟ್ಟದ ಸೀಮೆಲಿ ನಮ್ಮಂದ ಮದಲೇ ಇದರ ಬೆಳಕ್ಕೊಂಡಿದ್ದಿದ್ದವೋ ಏನೋ – ಹಾಂಗಾಗಿ ನಾವು “ಸೀಮೆ ಹುಲ್ಲು” ಹೇಳಿಯೂ ಗುರ್ತ ಹಿಡಿಯಲೆ ಸುರುಮಾಡಿತ್ತು.
  • ಬರೇ ಹುಲ್ಲಿನ ಕತೆ ಬಿಡಿ – ಭತ್ತದ ಗೆಡುವಿನ ಕತೆ ಎಂತರ ಮತ್ತೆ!
    ಅಜ್ಜಂದ್ರ ಕಾಲಲ್ಲಿ ಬೆಳಕ್ಕೊಂಡಿದ್ದ ಭತ್ತದ ಪ್ರಭೇದಂಗೊ ಈಗ ಇಲ್ಲೆ!
    ಕಯಮ್ಮೆ, ರಾಜಕಯಮ್ಮೆ, ತೊನ್ನೂರ°, ಅತ್ತಿಕ್ಕ್ರಾಯ° – ಹೇಳ್ತ ಪ್ರಭೇದಂಗೊ ಕಾಂಬಲೇ ಇಲ್ಲೆ ಈಗ ಏನಿದ್ದರೂ – ಐ.ಆರ್.ಎಯ್ಟ್ (IR8), ಜಪಾನಿ, ಚೀನಿ – ಹೇಳ್ತ ಹೊಸ ನಮುನೆಯ ತಳಿಗೊ.
    ಬೇಗ ಇಳುವರಿ ಬತ್ತು; ಬೆಳುಲುದೇ ಉದ್ದದ್ದು ಸಿಕ್ಕುತ್ತು – ಹೀಂಗಿರ್ಸೇ ಆತು!
    ಮದಲಿಂಗೆ ಬೆಳುಲು ಬೇಕಾರೆ ರಾಮಣ್ಣುವ ಗೆದ್ದೆಲಿ ಆಗಿಂಡಿದ್ದರ ಮಾರಿಂಡಿತ್ತು; ಹಿಡಿಸೂಡಿಯಷ್ಟಕಿಪ್ಪ ಕಟ್ಟಂಗೊ!
    ಈಗ? ಗಟ್ಟದ ಮೇಗಂದ ಬತ್ತಿದಾ – ಇಷ್ಟೆತ್ತರದ ಬೆಳುಲು! ಎಲ್ಲ ಹೈಬ್ರೀಡೇ!
    ತಿಂಬ ದನಗಳೂ ಹೈಬ್ರೀಡೇ ಆದ ಕಾರಣ ಸರೀ ಆತು!
  • ಊಟದ ಬತ್ತವೇ ಬದಲಿದ ಮತ್ತೆ ಬೆಳೆಯ ಅಡಕ್ಕೆ ಒಳಿಗೋ?
    ಊರತಳಿ ಹೋತು, ಹೊಸನಮುನೆದು ಬಂತು.
    ಮಂಗಳ, ಇಂಟರು, ವಿಂಟರು ಹೇದು ಕಶಿನಮುನೆ ಗೆಡುಗೊ ಧಾರಾಳ ಬಂತು. ಸೆಸಿ ಜಾಸ್ತಿ ಎತ್ತರ ಹೋಗದ್ದೆ, ಇಳುವರಿಯೂ ಬೇಗ ಬತ್ತ ನಮುನೆಯ ಅಡಕ್ಕೆಜಾತಿಗೊ!
    ಒಂದು ರಜ ಹೆಚ್ಚುಕಮ್ಮಿ ಆದ ಕೂಡ್ಳೇ ರೋಗ ಸುರು ಆತು. ಮಳೆಗಾಲ ಕೊಳೆರೋಗ; ಬೇಸಗೆಲಿ ಒಣರೋಗ!!
  • ಅಡಕ್ಕೆ ಒಟ್ಟಿಂಗೇ – ತೆಂಗುದೇ ಬಂತು.
    ಮದಲಾಣ ಊರನಮುನೆದು ಹೋಗಿ, ಈಗ ಹೈಬ್ರೀಡು ತೆಂಗಿನ ಗೆಡುಗೊ; ನರಸರಿ ಗೆಡುವಿನಂಗುಡಿಂದ ತಪ್ಪದು; ನೆಡುದು.
    ಮೂರೇ ಒರಿಶಲ್ಲಿ ತೆಂಙಿನಕಾಯಿ ಕೈಗೆ ಸಿಕ್ಕುತ್ತು. ಕೈಗೆ ಸಿಕ್ಕುತ್ತು ಹೇದರೆ – ಕೈಗೆ ಸಿಕ್ಕುವಷ್ಟೇ ಎತ್ತರ ಅಕ್ಕಷ್ಟೇ, ಮೂರೊರಿಶದ ಮರ!!
  • ತರಕಾರಿಗೊ ಹೇಂಗಿದ್ದರೂ ಇದ್ದನ್ನೇ!
    • ಊರ ಹಾಗಲ ರಣ ಕೈಕ್ಕೆ; ಈಗಾಣ “ಪೇಟೆ ಹಾಗಲ” ಹೇಂಗೆ? ಕರುಕುರುನೆ ತಿಂಬಲಾವುತ್ತ ನಮುನೆದು.
      ಅಂತೇ – ಹಾಗಲದ ಜಾತಿ ಮಾಂತ್ರ, ಸತ್ವ ಕಡಮ್ಮೆಯೇ – ಹೇದು ಅಡಿಗೆರಾಜಣ್ಣ ಹೇಳುಗು ಒಂದೊಂದರಿ.
    • ಊರ ಪಟಕಿಲವ ಪಕ್ಕನೆ ಬೋಚಬಾವ° ಮುಟ್ಟಿರೆ ನಾಕುದಿನ ಕೈತೊಳಗು; ವಾಸನೆ ತಡೆಯದ್ದೆ.
      ಆದರೆ, ಓ ಮೊನ್ನೆ ಪೆರ್ಲದಣ್ಣನ ಮದುವೆಗೆ ತಂದ ಪಟಕಿಲ ವಾಸನೆಯೂ ಇತ್ತಿಲ್ಲೆ, ಪರಿಮ್ಮಳವೂ ಇತ್ತಿಲ್ಲೆ; ಅದು ಪೇಟೆ ಪಟಕಿಲ!
    • ಊರ ಅಳತ್ತೊಂಡೆ ಹೇದರೆ ಸಣ್ಣದು. ರಜ ಬೆಳದ ಕೂಡ್ಳೇ ಗಟ್ಟಿಯೂ ಅಕ್ಕು.
      ಆದರೆ, “ಮೀಟ್ರು ಅಳತ್ತೊಂಡೆ” ಹೇದು ಕಶಿ ಜಾತಿದು ಒಂದಿದ್ದಲ್ಲದೋ – ಅದರ್ಲಿ ಗುಳ ಕಂಡಾಬಟ್ಟೆ. ಉದ್ದ ಆವುತ್ತುದೇ!
    • ಹೇಳಿಂಡು ಹೋದರೆ – ಬೆಂಡೆ, ತೊಂಡೆ,.. ಎಲ್ಲ ತರಕಾರಿದೂ ಇದೇ ಅವಸ್ಥೆ..
  • ದ್ರಾಕ್ಷೆ ಹುಳಿ” ಹೇಳಿರೆ ದೊಡ್ಡಳಿಯಂಗೆ ಬೇರೆಂತದೋ ನೆಂಪಾತಡ. ಇರಳಿ.
    ಆ ಹುಳಿ ದ್ರಾಕ್ಷೆಲಿ ಮದಲಿಂಗೆ ಬಿತ್ತು ಇತ್ತು. ಈಗ? ಆ ಬಿತ್ತು ಇದ್ದರೆ ಕರ್ಕನೆ ಅಗಿಯಲೆ ಸಿಕ್ಕಿ ಉಪದ್ರ ಆವುತ್ತು ಹೇದು – ಬಿತ್ತನ್ನೇ ತೆಗದು ಹೊಸನಮುನೆ ದ್ರಾಕ್ಷೆ ಮಾಡಿದ್ದವು.
    ಇನ್ನು ಏನಿದ್ದರೂ ಗುಳ ಮಾಂತ್ರ!!
    ಸೆಸಿ ಬೇಕಾರೆ ಗೆಡುನೆಟ್ಟೇ ಆಯೇಕಟ್ಟೆ.
    ಗೆಡು ಎಲ್ಲಿಂದ? ಮಾರ್ತೋರ ಕೈಂದಲೇ ತೆಕ್ಕೊಳೇಕಟ್ಟೆ; ಗೆಡುಮಾರ್ತೋರ ದೊಡ್ಡಮಾಡಿಯೇ ಆಯೇಕಟ್ಟೆ!
  • ದ್ರಾಕ್ಷೆಬಳ್ಳಿ ಇರಳಿ, ಗೆಣಮೆಣಸು ಬಳ್ಳಿ ಎಂತಾತು?
    ಮದಲಿಂಗೆ ಇದ್ದದು ಊರ ಜಾತಿ ಮಾಂತ್ರ; ಈಗ ಎಷ್ಟೂ ಬಗೆ ಎಷ್ಟು ಬಗೆ – ಪಣಿಯೂರು, ಅದು ಇದು ಹೇದು!!
    ಎಲ್ಲ ಹೊಸ ಜಾತಿಗೊ, ಹೆಚ್ಚು ಹಿಡಿಸ್ಸು; ಬೇಗ ಹಿಡಿಸ್ಸು – ಇತ್ಯಾದಿ!
    ಆದರೆ ಊರ ನಮುನೆದರ ಬೆಲೆ ಆಯುರ್ವೇದ ವೈದ್ಯರಿಂಗೇ ಗೊಂತು; ಅಪ್ಪೋ!
  • ಆಗಳೇ ಹೇಳಿದಾಂಗೆ, ನೆಲ್ಲಿಕಾಯಿ!?
    ಮಾಷ್ಟ್ರುಮಾವನ ವಳಚ್ಚಲಿಲಿ ಒಂದು ಮರ ಇದ್ದು – ಓ ಅಷ್ಟೆತ್ತರ.
    ಒರಿಶಕ್ಕೊಂದರಿ ನೆಲ್ಲಿಕಾಯಿ ಆದರೂ ಆತು ಅದರ್ಲಿ. ಇಷ್ಟಿಷ್ಟು ಸಣ್ಣದು – ನೆಲ್ಲಿಕಾಯಿಯಷ್ಟು ದೊಡ್ಡದು! ಅಂಬಗ ಪೇಟೆಲಿ ಸಿಕ್ಕುತ್ತದು? – ನಿಂಬೆಹುಳಿಯ ನಮುನೆದು! ಹು..
    “ನೆಲ್ಲಿಕಾಯಿ ಗಾತ್ರ” ಹೇಳಿಕ್ಕಲೆ ಗೊಂತಿಲ್ಲೆ ಇನ್ನು, ಅಪ್ಪೋ?!
  • ಗಿರಿಗೆದ್ದೆ ಗುಡ್ಡೆಹತ್ತಿರೆ ಧಾರಾಳ ಪೇರಳೆ ಸಿಕ್ಕುಗು. ಯೇವದು? ನಮ್ಮದೇ ಊರಿನ ಬೆಳಿತಿರುಳಿನ ಪೇರಳೆ.
    ಆದರೆ, ಬೈಲಿಲಿ ಧಾರಾಳ ಇದ್ದು ಈಗ – ಯೇವದು? ಕೆಂಪು ತಿರುಳಿನ ಕಶಿ ಪೇರಳೆ!!
    ಈಗ ನೆಡ್ತೋರುದೇ ಕಶಿಪೇರಳೆಯನ್ನೇ ಹುಡ್ಕುತ್ತವು; ಅಂಬಗ ಬೆಳಿತಿರುಳಿಂದು ಗಿರಿಗೆದ್ದೆಲಿ ಮಾಂತ್ರ ಒಳಿಗಷ್ಟೇಯೋ!?
  • ಮಾವಿನಣ್ಣು!!
    ಕಶಿಮಾವಿನ ಹಣ್ಣಿನ ಭರಲ್ಲಿ ನಮ್ಮ ಊರ ಜಾತಿಗೊ ಎಲ್ಲಿ ಹೋತಪ್ಪೋ!?
    ಉಪ್ಪಿನಕಾಯಿ ಮೆಡಿಗಪ್ಪಗ ಊರ “ಕಾಟುಮಾವಿನ” ಮೆಡಿಯೇ ಆಯೇಕಾದರೂ – ಅದರ ನೆಡುವೋರು ಆರೂ ಇಲ್ಲೆ.
    ನೆಡೆಕ್ಕಾರೆ ನೀಲಮ್ಮನೋ, ಸುಂದರಿಯೋ, ಆಲ್ಪೋನ್ಸೋ – ಹೀಂಗೇನಾರು ದೊಡ್ಡಜಾತಿಯೇ ಆಯೇಕಟ್ಟೆ.
    ನೆಕ್ಕರೆ, ಕಾಟು, ಕೊಡೆಯಾಲ – ಈಗ ಇಪ್ಪ ಸೆಸಿಗೊ ಇದ್ದು, ಇನ್ನು ಮುಂದಕ್ಕೆ ಇಕ್ಕು ಹೇದು ಧೈರ್ಯ ಇಲ್ಲೆ!!
  • ಜಾಲಕರೆಲಿ ನೆಡ್ತ ಹೂಗಿನ ಗೆಡುಗೊ?
    ಮದಲಿಂಗೆ ಶಂಖಪುಷ್ಪ, ಜಾಜಿ, ಮಂದಾರ – ಹೀಂಗಿರ್ಸು ಇದ್ದರೂ – ಕ್ರಮೇಣ ರೋಸಮ್ಮ, ಡೇಲಿಯ, ಝರ್ಬೇರ – ಹೀಂಗಿರ್ಸೇ ತುಂಬಿ ಹೋಯಿದು.
    ಹೀಂಗೇ ಆದರೆ ಎನಗೆ ಜಾಗೆ ಇಕ್ಕೋ – ಹೇದು ಪುಟ್ಟಗಸೆ ಗೆಡುವಿಂಗೆ ತಲೆಬೆಶಿ ಸುರು ಆಯಿದು!
  • ಜಾಲಕರೆಯ ಗೆಡುವಿನ ಸಂಗತಿ ಬಿಡಿ, ಜಾಲಿಲೇ ಓಡಾಡೇಕಾದ ನಾಯಿಯ ಅವಸ್ಥೆ ಎಂತರ?
    ಮದಲಿಂಗೆ ಊರ ಜಾತಿಯೇ ಇದ್ದರೂ – ಈಗ ಆಶ್ಲೇಷ, ಡೋಬರುಮೇನು – ಹೇದು ಊರದನದಷ್ಟು ದೊಡ್ಡ ಜಾತಿ ನಾಯಿಗೊ ಬಂದು ತುಂಬಿದ್ದವು.
    ನಮ್ಮದೇ ಊರಿನ ನಾಯಿಜಾತಿಯ ನಾಯಿಗೊಕ್ಕೆ ಆರಿದ್ದವು!?

ಹೋ, ಒಂದೋ ಎರಡೋ – ಹಲವು ಸಂಗತಿಗೊ!
ಹೆರಾಣದ್ದು ಬಂದಪ್ಪದ್ದೇ – ಊರದ್ದು ಅಳುದೇ ಹೋಪ ಸನ್ನಿವೇಶ ಬಯಿಂದು!!
~

ಊರದ್ದು ಸಣ್ಣ ಆದರೂ ಸತ್ವ ಜಾಸ್ತಿಯೇ.
ಅದಕ್ಕೇ ಕುಂಟಾಂಗಿಲ ಭಾವಂಗೆ ಭಾಯಿ ಅಷ್ಟು ಹೊಗದ್ದು! ಪೇಟೆ ಶುಂಠಿ ಆಗಿದ್ದರೆ ಶುಂಟಿಮಿಟಾಯಿ ತಿಂದ ಹಾಂಗೆ ತಿಂತಿತನೋ ಏನೋ!
ಈ ಶುಂಠಿಯ ಕಾರಕ್ಕೆ ಶೀತವೂ ಅಂಬಗಳೇ ಇಳುದ್ದು!! ಪೇಟೆದರ್ಲಿ ಶೀತವೂ ಇಳಿತ್ತಿತಿಲ್ಲೆ, ಎಂತ ಮಣ್ಣೂ ಇರ್ತಿತಿಲ್ಲೆ – ಹೇಳುಗು ದೊಡ್ಡಜ್ಜಿ!
ಈಗ ಆ ಊರ ಶುಂಠಿ ಕಾಂಬಲೇ ಇಲ್ಲೆಪ್ಪೋ!
ಊರ ಅರಿಶಿನವೂ ಈಗ ನಾಪತ್ತೆ- ಹೇದು ಆಚಮನೆ ದೊಡ್ಡಪ್ಪ ಹೇಳಿತ್ತಿದ್ದವು.
~

ಇದೆಲ್ಲವೂ ಆರಂಭ ಆದ್ಸು ಪಾಶ್ಚಿಮಾತ್ಯ ಪ್ರಭಾವಂದ – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
ಪಾಶ್ಚಾತ್ಯ ವೇಷಭೂಷಣವೇ ಸರಿ; ನಮ್ಮದು ಪುಸ್ಕ – ಹೇದು ತಲಗೆ ಬಂತು ಮದಾಲಿಂಗೆ.
ರಜಾ ವಿದ್ಯಾಭ್ಯಾಸ ಆದೋರು ವೇಷ್ಟಿ, ಧೋತಿ ಬಿಟ್ಟು ಟೈ ಕೋಟು ಸೂಟು ಕಟ್ಳೆ ಸುರುಮಾಡಿದವು.
ಕೈಲಿ ತಿಂದರೆ “ಎಬೇಕ್ಕ್ಲೇ” ಹೇದು ಚಮ್ಚಲ್ಲೇ ಬಾಯಿಗೆ ಹಾಕಲೆ ಸುರುಮಾಡಿದವು, ಅಲ್ಲಿಂದ ಬೆಳದು ಬಂದ ಸಂಪರ್ಕ ಮತ್ತೆ ನಮ್ಮ ಆಹಾರ ವ್ಯವಸ್ಥೆ, ಜನಜೀವನ ವ್ಯವಸ್ಥೆ – ಎಲ್ಲದಕ್ಕೂ ಧಾಳಿ ಮಾಡಿತ್ತು.

~
ಪಾಶ್ಚಾತ್ಯ ಎಲ್ಲವೂ ಹಾಳು; ಊರಿಂದು ಎಲ್ಲವೂ ಒಳ್ಳೆದು ಹೇಳ್ತದಲ್ಲ ಇಲ್ಲಿ ಉದ್ದೇಶ. ಅದು ಅಪ್ಪಲೂ ಅಲ್ಲ.
ಹೆರಾಣದ್ದರ್ಲಿಯೂ ಒಳ್ಳೆದಿದ್ದು; ಊರಿಂದರ್ಲಿಯೂ ಕೆಡುಕಿದ್ದು.
ಆದರೆ – ಕೇವಲ ಮಾನವನ ಲಾಭಕ್ಕಾಗಿ ಬೇರೆ ಯೇವದೋ ಊರಿಂದರ ತಂದು – ತಪ್ಪದು ತಪ್ಪಲ್ಲ – ಆದರೆ ತಂದು ಊರಿಂದರ ನಿರ್ನಾಮದ ಹತ್ತರಂಗೆ ತಂದರೆ ಹೇಂಗಕ್ಕು?
ಹೆರಾಣದ್ದರ ಬೆಳೆಶುವೊ°, ಊರದ್ದರ ಒಳಿಶುವೊ°!! ಎಂತ ಹೇಳ್ತಿ?
~
ಒಂದೊಂದು ಹೊಸ ವಸ್ತುಗೊ ಊರಿಂಗೆ ಬಂದರೂ – ಅದರಿಂದ ಮದಲು ನಾವು ಉಪಯೋಗಿಸೆಂಡಿದ್ದದಾರ ಮರದಿಕ್ಕಲೆಡಿಯ ನಾವು.
ನಮ್ಮ ಇಲ್ಯಾಣ ಭೌಗೋಳಿಕ ಪ್ರದೇಶಲ್ಲಿ ಅದರದ್ದೇ ಆದ ಪ್ರಭೇದಂಗೊ ಹುಟ್ಟಿ ಬೆಳದ್ದು.
ಅದರ ಧಿಕ್ಕರುಸಿ ಬೇರೆ ಯೇವದೋ ಊರಿಂದರ ಅಳವಡುಸಿಗೊಂಡರೆ, ಒಂದು ಊರಿನ ಸಮಗ್ರ ಜೀವ ವೈವಿಧ್ಯದ ಅಳಿವಿಂಗೆ ನಾವು ಕಾರಣ ಅಕ್ಕು.
ಮುಂದಾಣೋರಿಂಗೆ “ನಮ್ಮ ಊರಿಂದೇ ಆಯೇಕು” ಹೇದು ಮನಸುಕಂಡ್ರೆ ಮದ್ದಿಂಗೆ ತಕ್ಕ ತೋರ್ಸುಲೂ ಒಂದೂ ಒಳಿಶದ್ದರೆ, ನಾಗರೀಕತೆಗೆ ಮಾಡಿದ ಮಹಾ ಅಪಚಾರ ಆಗಿ ಹೋಕು – ಹೇಳ್ತದು ಒಂದು ಅಭಿಪ್ರಾಯ.
ಬೆಳವ°, ಅಭಿವೃದ್ಧಿ ಅಪ್ಪ° – ಅದರೊಟ್ಟಿಂಗೆ ನಮ್ಮ ಅಜ್ಜಂದ್ರ ಜೀವನ, ಜೀವನ ಶೈಲಿಗಳನ್ನೂ ನೆಂಪು ಮಡಗುವ°.
ಅವು ಉಪಯೋಗುಸೆಂಡಿದ್ದ ನೈಸರ್ಗಿಕ ಆಹಾರವಸ್ತುಗಳ ನಾವುದೇ ಬಳಕೆ ಮಾಡುವೊ°.

ವಿಷ ತುಂಬಿದ, ಕಶಿಕಟ್ಟಿದ, ಹೊಸನಮುನೆಯ ಆಹಾರ-ತರಕಾರಿಗಳ ನಾವು ಉಪಯೋಗುಸುದರ ಕಮ್ಮಿ ಮಾಡಿ, ನಮ್ಮ ಊರ ಪ್ರಭೇದಂಗಳನ್ನೇ ನೆಟ್ಟು, ಬೆಳೆಶಿ ಅನುಭವಿಸುವೊ°.
ಇಳುವರಿ ರಜ ಕಮ್ಮಿ ಆದರೂ – ನಮ್ಮ ಊರಿನ ಜೆನಂಗೊಕ್ಕೆ ನಮ್ಮ ನಿಸರ್ಗದ ಕೊಡುಗೆಯ ಅಳವಡುಸಿಗೊಂಬ°.
ಎಂತ ಹೇಳ್ತಿ?
~
ಒಂದೊಪ್ಪ: ಇಪ್ಪಗಳೇ ಒಳಿಶಿಗೊಳದ್ದರೆ ಅಳುದ ಮೇಗೆ ಒಳಿಶಿಗೊಂಬಲೆಡಿಗೋ?

14 thoughts on “ಹೊಸತ್ತರೆಡಕ್ಕಿಲಿ “ಊರ ಸೊತ್ತು”ಗಳನ್ನೇ ಮರೆತ್ತ ಊರೋರ ಶುದ್ದಿ..!

  1. ಕೆಟ್ಟ ಮೇಲೆ ಬುದ್ಧಿ ಹೇಳಿ ಆಗದ್ರೆ ಸಾಕು..ಶುದ್ಧಿಗೆ ಒಂದು ಒಪ್ಪ..

  2. `ಮಾರ್ಕೇಟಿಲಿ ಒಳಿಯೆಕ್ಕಾದರೆ ಎಟ್ಟ್ರಾಕ್ಟಿವ್ ಆಗಿರೆಕ್ಕು’ ಇದು ಈಗಾಣ ಮನೋಭಾವ . ಮೊದಲಾಣವರ ಚಿಂತನೆ ಈಗಾಣ ಕಾಲಕ್ಕೂ ಸರಿಯಾಗಿಯೇ ಹೊಂದುತ್ತು . “ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು”. ಅಳುದ ಮೇಲೆ ಚಿಂತಿಸಿ ಫಲವಿಲ್ಲೆ. ನೂರಕ್ಕೆನೂರುದೇ ಸರಿಯಾದ ವಿಚಾರ.

  3. ಯೋಚನೆ ಮಾಡೆಕ್ಕಾದ ಶುದ್ದಿ.”ದೂರದ ಬೆಟ್ಟ ನುಣ್ಣಗೆ” ಆದರೆ ಹತ್ತರ೦ಗೆ ಬ೦ದಪ್ಪಗ ಮುಳ್ಳು ಗು೦ಡಿಗಳ ಅನುಭವ ಅಪ್ಪದು.

  4. ಆನಿದರ ಒಪ್ಪುತ್ತೆ. ಕಶಿ ಹೇಳಿ ಎಲ್ಲವನ್ನೂ ಉಪಯೋಗಿಸಿರೆ ಮುಂದೆ ಭಾರೀ ತೊಂದರೆ ಅಕ್ಕು. ಈಗೀಗ ಸಾವಯವ ಆಹಾರ ಹೇಳಿ ಒಂದಕ್ಕೆ ೩ ಬೆಲೆ ಕೊಟ್ಟು ಮಾಡಿದ ಕರ್ಮವ ಅನುಭವಿಸುತ್ತಾ ಇದ್ದವು. ನಮ್ಮ ಮನಸ್ಥ್ಥಿತಿಯೇ ಈ ಕಶಿ ಆಹಾರ ವಸ್ತುಗಳ ಹಾಂಗೆ ಆಯ್ದು. ವೇಷ ಭೂಷ ಎಲ್ಲವೂ ಬದಲಾಯಿದು. ಮುಂದೆ ಒಂದು ದಿನ ನಮ್ಮ ಜೆಂಬಾತಗಳಲ್ಲಿ ಸ್ಪೂನ್-ಫೋರ್ಕ್ ಹಿಡುಕ್ಕೊಂಡು ಉಂಬ ದೃಶ್ಯ ಕಾಂಬಲೆ ಸಿಕ್ಕುಗು.

  5. ಒಂದೊಪ್ಪ ಲಾಯಿಕ ಆಯಿದು.
    ಕೆಲವು ಸಮಯ ಕಳುದರೆ ಮದ್ದಿಂಗು ಕೂಡಾ ಸಾಂಪ್ರದಾಯಿಕ ಬೆಳೆಗೊ ಕಾಂಬಲೆ ಸಿಕ್ಕ.
    ಬೆಳೆಗೊ ಹೆಚ್ಚು ತೆಗೆಕು ಹೇಳಿ ಆಮದು ಕೃಷಿ ಪದ್ಧತಿಯ ಅಳವಡಿಸಿ ಆತು. ಮಣ್ಣಿಲ್ಲಿ ಸಾರ ಕಮ್ಮಿ ಹೇಳಿ ರಸಗೊಬ್ಬರ ತುಂಬಿಸಿತ್ತು. ಕ್ರಿಮಿಕೀಟಂಗೊ ಅದರ ಒಳುಶತ್ತವಿಲ್ಲೆ ಹೇಳಿ ಕೀಟ ನಾಶಕ ಹಾಕಿತ್ತು. ಪ್ರಕೃತಿಗೆ ವಿರುದ್ದವಾದ್ದೆಲ್ಲಾ ಮಾಡಿ ಒಂದರಿಯಂಗೆ ಬಂಪರ್ ಬೆಳೆ ಬಂತು ಹೇಳಿ ಸಂತೋಷಿಸಿತ್ತು.
    ಸಾಂಪ್ರದಾಯಿಕ ರೀತಿ ಕೃಷಿ ಪದ್ದತಿಲಿ ಹೆಚ್ಚು ಇಳುವರಿ ತೆಗವದು ಹೇಂಗೆ ಹೇಳಿ ಸಂಶೋಧನೆ ಮಾಡಿದ್ದು ಕಮ್ಮಿ ಆತು.
    ಬೆಳ್ಳಗಿರುವುದೆಲ್ಲಾ ಹಾಲಲ್ಲ ಹೇಳಿ ಗಾದೆ ಮಾತು. ಬೆಳ್ಳಂಗಿಪ್ಪದೆಲ್ಲಾ ಹಾಲು ಹೇಳಿ ನಾವು ನಂಬಿತ್ತು. ಅದಕ್ಕೆ ಸರಿಯಾಗಿ ನಮ್ಮ ಯೋಜನೆಗ ಮುಂದುವರಿಸಿತ್ತು. ಹೆರ ದೇಶಂದ ಆಮದಾದ್ದೆಲ್ಲವೂ ಉತ್ತಮ ಹೇಳಿ ತಿಳ್ಕೊಂಡತ್ತು.
    ದೂರಾಲೋಚನೆ ಮಾಡದ್ದೆ ಊರಿಡೀ ಬೋರ್ ಹೊಡೆಸಿತ್ತು. ನೀರಿನ ಮಟ್ಟ ಕೆಳ ಇಳುದ್ದು ಹೇಳಿ ಬೊಬ್ಬೆ ಹೊಡದತ್ತು.
    ಇದು ನಮ್ಮ ಇಂದ್ರಾಣ ಪರಿಸ್ಥಿತಿ

  6. ಒಪ್ಪಣ್ಣಾ, ಈ ಸುದ್ದಿ ಸಂದರ್ಬೊಚಿತ ನಮ್ಮದು ಬಿಂದು ಹೇಳಿ ಕಂಡ್ರೂ ಗುಣವೋ ಸಿಂದು; ಹೆರಾಣ ಸೊತ್ತುಗೊ ಸಿಂದುವಾಂಗಿದ್ದರೆ
    ಅದರ ಗುಣಮಾತ್ರ ಬಿಂದುವಾಗಿಕ್ಕು. ಇದಕ್ಕೊಂದು ಒಪ್ಪ

  7. ಒಪ್ಪಣ್ಣೋ…! ಈಗಾಣ ಮಾಣಿಯಂಗೊ ಕೂಸುಗಳನ್ನೂ ಪರವೂರಿಂದ ತಪ್ಪಲೆ ಶುರುಮಾಡಿದ್ದವು 😉 😛
    ಎಂಗಳಲ್ಲಿ ಒಂದು ಅಂಬಟೆ ಸೆಸಿ ಇದ್ದು. ಅದರಲ್ಲಿ ಗೊರಂಟೇ ಇಲ್ಲೆ. ಹಾಂಗಾಗಿ ಇನ್ನು ಮುಂದೆ “ಅಂಬಟೆ ಕಾಯಿ ಗೊರಂಟು” ಹೇಳಿ ಪೆದಂಬು ಮಾತನಾಡುವವು ರಜ್ಜ ಆಲೋಚನೆ ಮಾಡೆಕ್ಕಕ್ಕು 😉
    ಲೇಖನ ತುಂಬಾ ಒಪ್ಪ ಆಯಿದು… 🙂

  8. “ಹೆರಾಣದ್ದರ ಬೆಳೆಶುವೊ°, ಊರದ್ದರ ಒಳಿಶುವೊ°!” ಅಪ್ಪಪ್ಪು..
    ಲೇಖನ ಲಾಯಿಕಾಯಿದು ಒಪ್ಪಣ್ಣಾ..

  9. “ಕಶಿ”ಲಿ ಕೊಶಿ ಕಾಣ್ತವಕ್ಕೆ ಬೆಶಿ ಮುಟ್ಟುಸುವ ಹೊಸ ಶುದ್ದಿ ತುಂಬಾ ಚಂದಕೆ ಬಯಿಂದು. ಸಾವಯವ ವಸ್ತುಗೊ ನಿಜವಾಗಿಯೂ ಒಳ್ಳೆದು. ಆದರೆ, ಈಗಾಣ ಕಾಲಲ್ಲಿ ಎಲ್ಲವೂ ಹೆರಂದ ಸುಂದರವಾಗಿ ಆಕರ್ಷಕವಾಗಿ ಕಾಣೆಕು, ಅಂಬಗ ಡಿಮಾಂಡ್ ಜಾಸ್ತಿ. Packing ಚೆಂದ ಮಾಡಿಕ್ಕಿ ಒಳಾಣ ಆಹಾರ ವಸ್ತುವಿಲ್ಲಿ ಹುಳು ಮಿಜುಳಿದರೂ ಜೆನಂಗವಕ್ಕೆ ಗೊಂತಾಗ ಎಂತ ಹೇಳ್ತಿ. ಚಿನ್ನದ ಬಣ್ಣದ ಮಾವಿನ ಹಣ್ಣು ಕಂಡು ಪೈಸೆ ಸೊರುಗಿ ತೆಕ್ಕೊಂಡ್ರೆ, ಅದು ಹುಳಿ ಪಿಂಡ ಆಗಿಪ್ಪಲೂ ಸಾಕು. ಪಟಗಿಲಕ್ಕೆ ವಾಸನೆ, ಹಾಗಲಕ್ಕೆ ಕಹಿ ಇಲ್ಲದ್ರೆ ಅದು ಪಟಗಿಲವೂ ಆಗ, ಹಾಗಲವೂ ಆಗ. ಒಪ್ಪಣ್ಣಾ, ಪುನಃ ಮುಟ್ಟಾಳೆ ನೆಗ್ಗಿ ಹಿಡುದ್ದೆ.

  10. ಜನಸಂಖ್ಯೆ ಹೆಚ್ಚಪ್ಪಗ ಉತ್ಪತ್ತಿ ಹೆಚ್ಚಾಯೆಕ್ಕನ್ನೆ? ಹಾಂಗಾಗಿ ಹೊಸ ತಳಿಗೊ ಬಂದವು.ಅದು ಅನಿವಾರ್ಯ.ನಮ್ಮ ಊರಿನ ತಳಿಗಳ ಒಳಿಸೆಕ್ಕು-ಅದರಲ್ಲಿ ಎರಡು ಮಾತಿಲ್ಲೆ.ಆದರೆ,ಅದರಿಂದ ಮಾತ್ರ ನಮ್ಮ ಪಥ ನಡೆಯ.
    ಊರ ತಳಿಯ ತರಕಾರಿಗೆ ಹೆಚ್ಚು ಕ್ರಯ,ಹೆರಂದ ಬಂದದಕ್ಕೆ ಕಮ್ಮಿ-ಇದು ನಮ್ಮೂರಲ್ಲಿ ಮಾತ್ರ ಹೇಳಿ ಕಾಣುತ್ತು.ಬೆಂಡೆ ಇತ್ಯಾದಿ.
    ಊರ ಹೊಗೆಸೊಪ್ಪು,ಊರ ಬೆಲ್ಲ-ಕೂಡಾ ಇತ್ತು.ಹಿಂದೆ ನಮ್ಮೂರಲ್ಲಿ ರಾಗಿ,ಜೋಳ,ಸೆಣಬು-ಇಂತಾದ್ದನ್ನೂ ಮಾಡಿಕೊಂಡು ಇತ್ತಿದ್ದವಡ[ಹಿರಿಯರು ಹೇಳಿದ್ದು ಕೇಳಿದ್ದು].ಆವಾಗ ಸಾರಿಗೆ ಸೌಕರ್ಯ ಕಮ್ಮಿ ಆದ ಕಾರಣ ಸ್ವಾವಲಂಬನೆಗೆ ಒತ್ತು ಇತ್ತು.
    ಆರ್ಥಿಕ ವಾತಾವರಣ ಬದಲಾವುತ್ತಾ ಇರುತ್ತು.ಮನುಷ್ಯರ ಆದ್ಯತೆಗೊ,ಅಭಿರುಚಿ ಎಲ್ಲಾ ಬದಲುತ್ತು.ಇನ್ನು ಅದು ಹಿಂದೆ ಹೋಪಲೆ ಸಾಧ್ಯ ಇಲ್ಲೆ.

  11. ಹಿತ್ತಿಲ ಗಿಡ ಮದ್ದಲ್ಲ ಹೇಳುತ್ತವು.ಆದರೆ ಈಗ ಹಿತ್ತಿಲಿಲ್ಲಿಯೇ ಮದ್ದಿನ ಗಿಡಂಗೊ ಇಲ್ಲೆ.ಅಂಥ ಗಿಡಂಗಳ ಉಪಯೋಗವೋ ಗೊಂತಿಲ್ಲೆ. ಬೇಗನೆ ಗುಣ ಸಿಕ್ಕೆಕ್ಕಾರೆ ಮದ್ದಿನಂಗ್ಡಿಲ್ಲಿ ಮದ್ದುಗೊ ಸಿಕ್ಕುತ್ತಿಪ್ಪಗ ಕಷಾಯ ಮಡಿಕ್ಕೊಂಡು ಒದ್ದಾಡುವದೆಂತಗೆ!ಆಹಾರವೂ ರೆಅದು ಮಡ್ ಸಿಕ್ಕುತ್ತಲ್ಲದೋ? ಆಯುರ್ವೇದ ಮದ್ದಾದರೂ ಅವು ಕೊಟ್ಟದರ ಕುಡಿವದು. ಅಜ್ಜಿಯಕ್ಕಳ ಮದ್ದುಗೊ ಆರಿಂಗೂ ಬೇಕಾವುತ್ತಿಲ್ಲೆ.ಈ ಮಟ್ಟಿಂಗೆ ಗೊಂತಿದ್ದೋರಾದರು ಅಳುವಳಿಯ ಹಾಂಗೆ ಹೆರಟರೆ ರಜ ಪರಿಣಾಮ ಬೀರುತ್ತೋ ಎಂತದೋ?ಗೋ ಮಾತೆಗಳ ಬಗ್ಗೆ ಗುರುಗಳೇ ಹೆರಟುದೆ ಏನೋ ಬರಳೆಣಿಕೆ ಜನಂಗೊ ಎಅತ್ತವು.ಹಾಂಗೆ ಹೆರಟರೆ ಪರಿಣಾಮ ಅಕ್ಕು ಹೇಳಿ ಕಾಣುತ್ತು. ಒಪ್ಪಣ್ಣ ಹೇಳಿದ್ದು ಅಕ್ಷರಶಃ ಸತ್ಯವಾದರೂ ನಾವು ತುಂಬಾ ಮುಂದೆ ಬಂದಾತು. ನಮ್ಮ ತೋಟಕ್ಕೆ ಬೇಲಿ ಕಟ್ಟಿಗೊಂಡರೆ ಅಕ್ಕೋ ಎಂತದೋ?ಶುದ್ದಿ ಲಾಯಿಕ ಆಯಿದು.

  12. [ಊರದ್ದು ಸಣ್ಣ ಆದರೂ ಸತ್ವ ಜಾಸ್ತಿಯೇ] – ತುಂಬಾ ಒಪ್ಪ ಆಯ್ದು ಶುದ್ದಿ. ವಿಷಯಂಗಳೂ ನೂರಕ್ಕೆ ನೂರು ಸತ್ಯ. ಅದರಿಂದ ಹೆಚ್ಚಿಗೆ ಹೇಳಿಕ್ಕಲೆ ಗೊಂತಿಲ್ಲೆ ಈಗ. ಮದಲಾಣೋರ ಶ್ರಮ ಜೀವನ, ಸಹಿಷ್ಣುತೆ ಅದ್ಭುತವೇ ಸರಿ. ವ್ಯಾವಹಾರಿಕ ಸತ್ಯ.
    ಈಗಾಣೋರಿಂಗೆ ಸಾಮರ್ಥಿಕೆಯೂ ಇಲ್ಲೆ ಶಕ್ತಿಯೂ ಇಲ್ಲೆ ಹೇಳ್ವದು ಖೇದಕರ ಸತ್ಯ. ಹಳೆ ವಿಷಯದತ್ತ ಮೆಲುಕು ಹಾಕಿದ ಶುದ್ದಿ ಒಪ್ಪ ಆಯ್ದು ಹೇಳಿತ್ತಿತ್ಲಾಗಿಂದ.

  13. ಯ್ಯೋ… ಒಪ್ಪಣ್ಣಾ.. ಭಾರೀ ಲಾಯ್ಕಾಯಿದು ಬರದ್ದು…
    ಇಲ್ಲಿಯುದೆ ಹಾ೦ಗೆ, ಬೆ೦ದಿ ಮಾಡ್ಳೆ ಸುಪರ್ ಮಾರ್ಕೆಟಿಲ್ಲಿ ಕಡ್ಳೆ ಸಿಕ್ಕುತ್ತು, ಮೊದಲಾಣ ಊರನೆಲ್ಲಿಕಾಯಿಯ ಗಾತ್ರ ಆವುತ್ತು ಬೇಶಿಯಪ್ಪಗ.. ನೆಲ್ಲಿಕಾಯಿ ನಿ೦ಬೆಹುಳಿಯಷ್ಟಕ್ಕೆ ಇದ್ದು, ಇನ್ನು ನಿ೦ಬೆಹುಳಿಯೋ.. ಬ್ರಜೀಲಿನದ್ದಾಡ, ನಿಜವಾಗಿ ಒಪ್ಪಣ್ಣ, ನಮ್ಮ ಊರಿನ ಚಿತ್ತುಪ್ಪುಳಿಯ ಗಾತ್ರ ಇದ್ದು. ಉಪ್ಪಿನಕಾಯಿ ಹಾಕಿರೆ ನಿ೦ಬೆಹುಳಿ ಉಪ್ಪಿನಕಾಯಿ ಹೇಳಿ ಬರದು ಉಪ್ಪ್ಪಿನಕಾಯಿ ಕುಪ್ಪಿಗೆ ಅ೦ಟುಸೆಕು, ಅ೦ದರೆ ಗೊ೦ತಕ್ಕಷ್ಟೆ, ಅಲ್ಲದ್ರೆ ನಿ೦ಬೆಹುಳಿ ಹೇಳಿ ಗೊ೦ತಾಗ. ದೇವರ ದಯ, ಎನಗೆ ಇ೦ದು ಚೂರು ಊರಿನ ನಿ೦ಬೆಹುಳಿ ಕಮ್ಮಿಕ್ರಯಕ್ಕೆ ಸಿಕ್ಕಿತ್ತು, ತ೦ದು ಕೊರದು ಉಪ್ಪಿಲ್ಲಿ ಹಾಕಿದ್ದೆ.
    ಲೇಖನ ಭಾರೀ ಲಾಯಿಕಾಯಿದು. ಒಪ್ಪ೦ಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×