Oppanna.com

ಬೆಳವ ಬೈಲಿಂಗೆ ಎಂಟರ ನಂಟು; ನಂಟಿನ ಅಂಟು

ಬರದೋರು :   ಒಪ್ಪಣ್ಣ    on   01/01/2016    5 ಒಪ್ಪಂಗೊ

ಹೋ, ಮಕ್ಕೊಗೆ ಪ್ರಾಯ ಹೋಪದು ಗೊಂತೇ ಆವುತ್ತಿಲ್ಲೆ – ಹೇದು ಸುಭಗಣ್ಣ ಒಂದೊಂದರಿ ಹೇಳುಲಿದ್ದು.
ಮೊನ್ನೆ ಮೊನ್ನೆ ವರೆಗೆ ಲೂಟಿ ಮಾಡಿಂಡಿದ್ದ ಜಾಣ ಈಗ ಓ ಅಲ್ಲಿ ಕೋಲೇಜು ಕಲಿತ್ತಾ ಇಪ್ಪದರ ಗ್ರೇಶಿರೆ, ಸಮಯ ಎಷ್ಟು ಬೇಗ ಹೋವುತ್ತಪ್ಪೋ – ಹೇದು ಅವಕ್ಕೆ ಮನಸ್ಸಿಂಗೆ ಆಲೋಚನೆ ಬಪ್ಪಲಿದ್ದು.
ಮೊನ್ನೆ ಸುಳ್ಯಲ್ಲಿ ಸಮಾವೇಶ ಆತಲ್ದೋ – ಆ ಲೆಕ್ಕಲ್ಲಿ ಅವಕ್ಕೆ ಹಲವು ಉಸ್ತುವಾರಿಗೊ ಇದ್ದತ್ತು.
ಸುಮಾರು ಸಮಯಂದ ಆ ಕೆಲಸದ ಲೆಕಲ್ಲಿ ಬೈಲಿಲಿ ಕಾಂಬಲಿಲ್ಲೆ.
ಕಾಂಬಲಿಲ್ಲೆ ಹೇದರೆ – ಕಂಡು ನಮಸ್ಕಾರ ಮಾಡುಸ್ಸು ಮಾಂತ್ರ; ಮಾತಾಡ್ಳೆ ಸಿಕ್ಕಿಗೊಂಡು ಇತ್ತಿದ್ದವಿಲ್ಲೆ.
ಕಾರ್ಯಕ್ರಮ ಮುಗುದಪ್ಪದ್ದೇ – ಸಿಕ್ಕಿದವು. ಪುರುಸೊತ್ತಿಲಿ ಎಲೆ ತಿಂದೊಂಡು ಮಾತಾಡಿದವು.
ಅಷ್ಟಪ್ಪಗಳೇ ಹೇಯಿದ್ದು – ಸಮಯ ಹೋಪದು ಗೊಂತೇ ಆವುತ್ತಿಲ್ಲೆ – ಹೇದು.
~
ಪ್ರಭವ-ವಿಭವ-ಶುಕ್ಲ ಎಲ್ಲ ಕಳುದು ಕ್ರೋಧನ-ಅಕ್ಷಯ ಒರೆಂಗೆ ಎತ್ತಿ ಪುನಾ ಪ್ರಭವಂದ ಲೆಕ್ಕ. ಎಷ್ಟು ಸರ್ತಿ ಆತೋ ಏನೋ ಹಾಂಗೆ. ಆರು ಲೆಕ್ಕ ಮಡಗಿದ್ದ!? ಕಾಲ ಪುರುಶಂಗೆ ಬೊಡಿತ್ತಿಲ್ಲೆ.
ಕಾಲಚಕ್ರ ಹೇಳುಸ್ಸು ಅದರನ್ನೇ ಅಲ್ಲದೋ – ನಿರಂತರ ತಿರುಗುತ್ತ ಚಲನೆ ಅದು.
ಕಾಲಿಂಗೆ ಚಕ್ರ ಕಟ್ಟಿಗೊಂಡು ತಿರುಗುತ್ತ ಕಾಲಪುರುಷ. ಎಲ್ಲಿಯೂ ನಿಂಬಲಿಲ್ಲೆ. ನಿಂದರೆ ಲೋಕವೇ ನಿಂಗು.

ಈ ಕಾಲಚಕ್ರನ ಓಡಾಟವ ಅರ್ಥೈಸಿಗೊಂಬಲೆ ಮನುಷ್ಯರು ಕೆಲವು ಗುರ್ತ ಹಾಕಿದ ಕಾಲದರ್ಶಿನಿಗಳ ಮಾಡಿಗೊಂಡಿದವು. ಕೆಲವು ಜೆನ ಅದರ ಸಂವತ್ಸರ ಹೇಳುಗು, ಕೆಲವು ಜೆನ ಕೆಲೆಂಡ್ರು ಹೇಳುಗು, ಕೆಲವು ಜೆನ ಪಂಚಾಂಗ – ಹೇಳುಗು. ಎಂತದೇ ಆದರೂ – ಅದು ಈ ಕಾಲಚಕ್ರನ ಚಲನೆಯ ಆಧಾರಲ್ಲೇ ಇಪ್ಪದು.

ಗ್ರೆಗೋರಿಯನ್ ಕೆಲೆಂಡರ್ ಪ್ರಕಾರಲ್ಲಿ ಲೆಕ್ಕ ಹಾಕಿರೆ ಇಂದು ಒಂದು ವಿಶೇಷ ದಿನ.
~
ಕ್ರಿಸ್ತ ಶಕೆ ಲೆಕ್ಕಾಚಾರಲ್ಲಿ ಇಂದಿಂಗೆ ೨೦೧೫ ಒರಿಶ ಕಳುದು ೨೦೧೬ನೇ ಒರಿಶ ಸುರು ಆವುತ್ತಾಡ ಇದಾ.
ಹಾಂಗಾಗಿ, ತಿಂಗಳು ಲೆಕ್ಕಾಚಾರಲಿ ಇಂದು ಸುರೂವಾಣ ತಿಂಗಳ ಸುರೂವಾಣ ದಿನ.
ಜೆನವರಿ ಒಂದು – ಹೇಳ್ತವು.
ನಮ್ಮಲ್ಲಿ ಚೈತ್ರ ಪಾಡ್ಯ ಪ್ರಥಮಿ ಹೇಳ್ತಿಲ್ಲೆಯೋ; ಅಥವಾ ಮೇಷ ಮಾಸ ಒಂದು ಹೊದ್ದು – ಹೇಳ್ತಿಲ್ಲೆಯೋ – ಹಾಂಗೆ.
ಪಾಶ್ಚಾತ್ಯರು, ಗ್ರೆಗೋರಿ ಕೆಲೆಂಡ್ರು ಆಚರಣೆ ಮಾಡ್ತೋರಿಂಗೆ ಅದೊಂದು ಗೌಜಿಯ ದಿನ.
ಮುನ್ನಾಣ ದಿನ ಇರುಳೇ ತಲೆ ಒರೆಂಗೆ ಕುಡುದು, ಉದೆಕಾಲ ಒರೆಂಗೆ ಕೊಣುದು – ಒಂದನೇ ತಾರೀಕಿಂಗೆ ಬೋದತಪ್ಪಿ ಬಿದ್ದು ಒರಗುಸ್ಸು – ಅವಕ್ಕಿಪ್ಪ ಗೌಜಿ.
ನಮ್ಮಲ್ಲಿ ಹೊಸ ಒರಿಶ ಹೇದರೆ ಹೂಗು, ರಂಗೋಲಿ, ಅಲಂಕಾರ, ದೀಪ, ನಮಸ್ಕಾರ, ಪೂಜೆ-ಪುನಸ್ಕಾರ ಎಲ್ಲ ಇಕ್ಕು. ಇದು ನಮ್ಮ ಸಂಸ್ಕಾರ; ಅದು ಅವರ ಸಂಸ್ಕಾರ. ಅದಿರಳಿ.
~
ನಾವು ೨೦೧೬ ಬಂತು ಹೇದು ಗೌಜಿ ಮಾಡುದಲ್ಲ; ಆದರೆ ಬೈಲಿಂಗೆ ಅದರದ್ದೇ ಆದ ಒಂದು ಗೌಜಿ-ಕೊಶಿ ಇದ್ದು.
ಎಂತ್ಸರ?
ಬೈಲು ಹುಟ್ಟಿ ಬೆಳದು – ಎಂಟನೇ ಒರಿಶಕ್ಕೆ ಕಾಲು ಮಡಗುತ್ತಾ ಇದ್ದು.
ಅಪ್ಪು, ೨೦೦೯ ರ ಜೆನವರಿ ಒಂದನೇ ತಾರೀಕಿಂಗೆ ಅಂತರ್ಜಾಲಲ್ಲಿ ಪ್ರಕಟ ಆದ ಬೈಲು, ಮುಂದೆ ೨೦೧೦, ೧೧, ೧೨, ೧೩, ೧೪, ೧೫ ಇಸವಿಲಿ ಬೆಳಕ್ಕೊಂಡೇ ಬಂದು, ಇದೀಗ ೧೬ನೇ ಇಸವಿಲಿ ಎಂಟನೇ ಒರಿಶಕ್ಕೆ ಕಾಲು ಮಡಗಿದ್ದು.
ಎಂಟೊರಿಶದ ಮಕ್ಕಳ ಹಾಂಗೇ – ಎಲ್ಲವನ್ನೂ ತಿಳಿವ ಕುತೂಹಲ, ಎಲ್ಲವನ್ನೂ ಅರ್ತುಗೊಂಬ ಕುತೂಹಲ – ಈಗ ಬೈಲಿಂಗೆ.

ಶ್ರೀ ಗುರುಗಳ ಕೃಪಾಅಶೀರ್ವಾದಲ್ಲಿ ಬೆಳಕ್ಕೊಂಡು ಬಂದ ಬೈಲು, ಪ್ರತಿ ಒರಿಶ ಶ್ರೀ ಮಠಲ್ಲಿ ಪಾದುಕಾಪೂಜೆ ಸೇವೆ ಸಲ್ಲುಸಿದ್ದು. ಕೆಲವು ಒರಿಶ ಶ್ರೀ ಗುರು ಭೇಟಿಯನ್ನೂ ಮಾಡಿಗೊಂಡಿದು. ಅಂಬಗಂಬಗ ಶ್ರೀ ಗುರುಗೊ ನಮ್ಮ ಬೈಲಿನ ಯೋಗಕ್ಷೇಮವನ್ನೂ ವಿಚಾರ್ಸಿಗೊಂಡು “ಒಪ್ಪಣ್ಣ ಹೇಂಗಿದ್ದೆ? ಬೈಲಿಲಿ ಎಲ್ಲೊರು ಎಂತ ಮಾಡ್ತವು?” – ಹೇದು ಯೋಗಕ್ಷೇಮ ವಿಚಾರ್ಸಿ ಆಶೀರ್ವಾದ ಕೊಡ್ತಾ ಇರ್ತವು.
ಇದು ನಮ್ಮ ಬೈಲಿನ ಎಲ್ಲ ನೆಂಟ್ರಿಂಗೂ ಅತೀ ಹೆಮ್ಮೆಯ, ಅತ್ಯಂತ ಕುಒಶಿಯ ಸಂಗತಿ.
~
ಸ್ನೇಹ – ಹೇದರೆ ಜಿಡ್ಡು ಹೇದು ಒಂದರ್ಥ ಇದ್ದಾಡ, ವಿದ್ವಾನಣ್ಣ ಹೇಳಿತ್ತಿದ್ದವು.
ಚೆಂಙಾಯಿಪ್ಪಾಡುದೇ ಹಾಂಗೇ ಅಲ್ದೋ – ಒಂದು ಬಗೆಯ ಅಂಟು ಅಲ್ದೋ?
ಒಂದರಿ ಅಂಟಿರೆ, ಅದು ಮತ್ತೆ ಸುಲಭಲ್ಲಿ ಹೋಗ; ಹಾಂಗೇ ಇರ್ತು ಸ್ನೇಹ.

ಬೈಲಿಲಿಯೂ ಹಾಂಗೇ – ಒಂದರಿ ಬೆಳದ ನೆಂಟಸ್ತಿಗೆ, ಸ್ನೇಹ – ಸದಾ ಇರ್ತು.
ಅದುವೇ ಬೈಲಿನ ಪರಸ್ಪರ ಬಂಧಿಸುವ ಶೆಗ್ತಿ.
ಜೆನಂಗೊ ಎಲ್ಲ ಒಟ್ಟಾಗಿ ಕೆಲಸ ಮಾಡಿರೆ ಎಂತ ಕಾರ್ಯವನ್ನೂ ಸಾಧಿಸಲೆ ಎಡಿಗು – ಹೇಳ್ಸರ ಬೈಲು ಎಷ್ಟೋ ಸರ್ತಿ ತೋರ್ಸಿದ್ದು.
ಬೈಲಿನ ಜೆನಂಗೊ ಒಟ್ಟಾಗಿ ಬೈಲ ಶುದ್ದಿಗಳ ಪುಸ್ತಕ ಮಾಡಿದ್ದವು.
ದೊಡ್ಡಭಾವ, ಬೊಳುಂಬು ಮಾವನ ಹಾಂಗಿಪ್ಪ ಮಹನೀಯರು ಆ ಪುಸ್ತಕವ ವೆಗ್ತಿ-ವೆಗ್ತಿಗೆ, ಮನೆ ಮನೆಗೆ ಎತ್ತುಸಿದ್ದವು;
ಶರ್ಮಪ್ಪಚ್ಚಿ, ಮುಳಿಯಭಾವನ ಹಾಂಗಿಪ್ಪ ಸ್ವಯಂ ಸೇವಕರು ವಿದ್ಯಾನಿಧಿ, ಲಲಿತ ಕಲೆಗಳಲ್ಲಿ ತೊಡಗುಸಿಗೊಂಡು ಸಾಮಾಜಿಕ, ಸಾಂಸ್ಕೃತಿಕ ಕೆಲಸಂಗಳ ಮಾಡಿದ್ದವು.
ವಿಜಯತ್ತೆ, ಚೆನ್ನೈಭಾವ, ಗೋಪಾಲಣ್ಣ, ಮುಳಿಯಭಾವ ಇತ್ಯಾದಿ ನೆಂಟ್ರುಗೊ ಬೈಲಿಲಿ ಸದಾ ಶುದ್ದಿ ಒರತ್ತೆ ಇಪ್ಪ ಹಾಂಗೆ ನೋಡಿಗೊಂಡಿದವು.
ಮಾಷ್ಟ್ರುಮಾವ, ವಿದ್ವಾನಣ್ಣ, ಎಡಪ್ಪಾಡಿ ಭಾವ, ಗಣೇಶಮಾವ, ಶ್ರೀಅಕ್ಕ ಇತ್ಯಾದಿ ಹಲವೂ ಹಿರಿಯರು ಕಾಲಕಾಲಕ್ಕೆ ಒಪ್ಪಣ್ಣಂಗೆ ಸಲಹೆಗಳ, ಮಾರ್ಗದರ್ಶನಂಗಳ ಕೊಡ್ತಾ ಮುನ್ನಡೆಶುತ್ತಾ ಇದ್ದವು.
ಇಷ್ಟೇ ಅಲ್ಲ, ತೆರೆಮರೆಲಿ ನೂರಾರು ಜೆನ – ಎಲ್ಲೋರುದೇ – ಕೈ ಜೋಡುಸಿಗೊಂಡು ಒಂದೊಂದು ವಿಭಾಗಲ್ಲಿ ತನ್ನ ತೊಡಗುಸಿಗೊಂಡು ಮುನ್ನಡೆಶುತ್ತಾ ಇದ್ದವು.
ಬೆಳವ ಬೈಲಿಂಗೆ ಇದೇ ಅಲ್ಲದೋ ಕೊಶಿ?
ಇನ್ನೂ ನೂರ್ಕಾಲ ಗುರುದೇವರ ಆಶೀರ್ವಾದಲ್ಲಿ ಈ ಬೈಲು ಮುಂದೆ ಬೆಳದರೆ, ಒಪ್ಪಣ್ಣನ, ಬೈಲಿನ ಶ್ರಮ ಸಾರ್ಥಕ.
~

ಎಂಟೊರಿಶಲ್ಲಿ ಬೈಲಿಲಿ ಆದ ಬದಲಾವಣೆ ಹಲವಿದ್ದು.
ಬದಲಾವಣೆ ನಿರಂತರ; ಅದರ ನಿಲ್ಲುಸಲೆ ಎಡಿಯ.
ಎಂತ ಮಾಡ್ಳೆಡಿಗು ಹೇದರೆ, ಬದಲಾವಣೆಗೆ ನಾವು ಹೊಂದಿಗೊಂಬಲೆ ಎಡಿಗು.
ಬದಲಾವಣೆಯ ಒಟ್ಟಿಂಗೆ ಈಜಲೆ ಎಡಿಗು.
ಅದೇ ನಮ್ಮ ಬೈಲಿನ ಮೂಲ ಧ್ಯೇಯ.
ಬದಲಾವಣೆಗಳ ಸವಾಲಾಗಿ ಸ್ವೀಕಾರ ಮಾಡೆಕ್ಕು; ಅದರೊಟ್ಟಿಂಗೆ ಸೇರಿಗೊಳ್ಳೆಕ್ಕು.

ಇದು ನಿತ್ಯಜೀವನಲ್ಲಿಯೂ ಅಪ್ಪು; ನಿಜ ಜೀವನಲ್ಲಿಯೂ ಅಪ್ಪು; ಬೈಲ ಜೀವನಲ್ಲಿಯೂ ಅಪ್ಪು.
~

ಎಂಟೊರಿಶದ ವೇಗ ನೋಡಿರೆ – ಅದ್ಭುತ ಅನಿಸುವಷ್ಟು ಕೊಶಿ ಆವುತ್ತು. ಮೊನ್ನೆ ಮೊನ್ನೆ ಸುರು ಆತು – ಹೇಳ್ತಾಂಗೆ ಅನುಸುತ್ತು; ಅಪ್ಪೋ.
ಅಂತೇ ಅಲ್ಲ, ಸುಭಗಣ್ಣಂಗೆ ಆಶ್ಚರ್ಯ ಅಪ್ಪದು. ಅದಿರಳಿ.
ಬೈಲಿನ ಬೆಳೆಶುವಲ್ಲಿ ಪ್ರತ್ಯಕ್ಷ – ಪರೋಕ್ಷವಾಗಿ ಕೈಜೋಡುಸಿಗೊಂಡ ಎಲ್ಲ ಮಹನೀಯರಿಂಗೂ, ಹಿರಿಯರಿಂಗೂ ಒಪ್ಪಣ್ಣನ ಅನಂತ ಕೃತಜ್ಞತೆಗೊ.
ಎಂಟನೇ ಒರಿಶಕ್ಕೆ ಎತ್ತಿದ್ದು. ಇನ್ನೂ ಈ ನೆಂಟು ಬ್ರಹ್ಮಗೇಂಟಾಗಿ ಇರಳಿ.
ಬೆಳವಗ ಒಟ್ಟಿಂಗೇ ಬೆಳವ. ಎಲ್ಲೋರುದೇ ಕೊಶಿಲಿಪ್ಪ.

~

ಒಂದೊಪ್ಪ: ಎಂಟನೇ ಒರಿಶಕ್ಕೆ ಬ್ರಹ್ಮಗೆಂಟಿನ ನೆಂಟು ಇರಳಿ.

5 thoughts on “ಬೆಳವ ಬೈಲಿಂಗೆ ಎಂಟರ ನಂಟು; ನಂಟಿನ ಅಂಟು

  1. ಹಳೆ ಬೇರು ಹೊಸ ಚಿಗುರು ಸೇರಿ ಬೈಲು ಹೆಮ್ಮರವಾಗಿ ಬೆಳೆಯಲಿ , ಹವ್ಯಕ ಸಾಹಿತ್ಯ ಕ್ಷೇತ್ರಲ್ಲಿ ಧ್ರುವ ತಾರೆಯಾಗಲಿ .

  2. ಬೈಲು ಸುರುವಾದ ಲಾಗಾಯ್ತು ಅದರೊಟ್ಟಿಂಗೆ ಸೇರ್ಯೊಂಡು, ಅದರಲ್ಲಿಪ್ಪ ಹಲವಾರು ನೆಂಟ್ರ ಒಟ್ಟಿಂಗೆ ಬೆರಕ್ಕೊಂಡು ಇದ್ದವರಲ್ಲಿ ಆನೂ ಒಬ್ಬ ಹೇಳ್ಯೊಂಬಲೆ ಕೊಶಿ ಆವ್ತಾ ಇದ್ದು. ಬೈಲಿನ ಬೆಳವಣಿಗೆಲಿ ಎಲ್ಲೋರು ತೊಡಗುಸಿಕೊಂಡದು ಕಾಂಬಗ ತುಂಬಾ ಸಂತೋಷ ಆವ್ತಾ ಇದ್ದು. ಬೈಲಿಂಗೆ ಎಂಟನೆ ವರ್ಷ ಹಿಡುದತ್ತು. ಮನ್ನೆ ಮನ್ನೆ ಪುಟುಪುಟುನೆ ಒಡ್ಯೊಂಡಿದ್ದ ಮಾಣಿ ಕಣ್ಣೆದುರಿಲ್ಲೇ ದೊಡ್ಡ ಆವ್ತ ಇಪ್ಪದು, ಎಲ್ಲೋರ ಸಹಕಾರಲ್ಲಿ ಬೆಳೆತ್ತ ಇಪ್ಪದು ಸಂತೋಷದ ಸಂಗತಿ. ಒಪ್ಪಣ್ಣಂಗೆ ಅಭಿನಂದನೆಗೊ. ಒಪ್ಪಣ್ಣ ಎಲ್ಲೋರಿಂಗೂ ಬೇಕಾದವ ಆಗಿ ಇನ್ನಷ್ಟು ಬೆಳೆಯಲಿ. ಹವ್ಯಕ ಭಾಷೆಯ ಕೃಷಿ ಬೈಲಿಲ್ಲಿ ಚೆಂದಕೆ ನೆಡತ್ತಾ ಇರಳಿ.

  3. ಹರೇ ರಾಮ
    ಆನು ಬೈಲಿಂಗೆ ಹೊಸಬ.
    ೮ನೇ ವರ್ಷದ ಬೈಲಿಲಿ ಎನ್ನ ಹೊಸ ಪ್ರವೇಶ ಇಂದು.
    ಶ್ರೀ ಗುರುಗಳ ಅನುಗ್ರಹಂದ ಬೈಲು ಹಸಿರು ತುಂಬಿ ಬೆಳಗಲಿ ಹೇಳಿ ಹಾರೈಸುತ್ತೆ

  4. ಹರೇ ರಾಮ . ಶ್ರೀಗುರುದೇವತಾನುಗ್ರಹಂದ ಬೈಲು ನಿರಂತರ ಬೆಳೆಕ್ಕೊಂಡು ಮುಂದುವರ್ಕೊಂಡಿರೆಕು. ಬೈಲ ಕುಟುಂಬ ಹೆಮ್ಮೆಂದ ಏವತ್ತೂ ಕಂಗೊಳುಸೆಕು ಹೇಳ್ಸು ನಮ್ಮ ಸದಾಶಯ

  5. ಈಗ ಸೊಂಟ ಮುರಿವಂಗೆ ಕೊನಿದಿಕ್ಕಿ ಬಂದು, ಒಪ್ಪಣ್ಣನ ಸುದ್ದಿ ಓದಿ ಅತಿದ 😛

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×