Oppanna.com

ಪರಮಾಣು ಹೊಟ್ಟುಸಿ ಪರಮಾಪ್ತ ಆದವ°..!

ಬರದೋರು :   ಒಪ್ಪಣ್ಣ    on   25/12/2009    28 ಒಪ್ಪಂಗೊ

ಭಾರತದ ಇತಿಹಾಸಲ್ಲಿ ಸುಮಾರು ಜೆನ ಬಂದು ಹೋಯಿದವು, ಸಾರಡಿತೋಡಿಲಿ ನೀರು ಹರುದು ಹೋದ ಹಾಂಗೆ.
ಇನ್ನುದೇ ಬತ್ತಾ ಇದ್ದವು. ಅವುದೇ ಇತಿಹಾಸದ ಒಂದು ಪುಟಲ್ಲಿ ಸೇರಿ ಹೋವುತ್ತವು.!
ಇಡೀ ಜನಪ್ರವಾಹ, ತಲೆಮಾರಿನ ಪ್ರವಾಹಲ್ಲಿ ಕೆಲವು ಮುತ್ತುಗೊ ಮಾಂತ್ರ ನೆಂಪೊಳಿತ್ತು, ಮತ್ತೆ ಒಳುದವೆಲ್ಲ ಯಥಾಯೋಗ್ಯ ಕಾರ್ಯ ಮಾಡಿ ಸೇರೆಕ್ಕಾದ ಸಮುದ್ರ ಸೇರಿಗೊಳ್ತವು.

ಆ ಕೆಲವು ಮುತ್ತೊಗೊ, ಒಳುದವು ನೆಂಪೊಳಿತ್ತ ಕೆಲಸ ಮಾಡಿದ್ದು Günstige Replica Uhren ಮಾಂತ್ರ ಅಲ್ಲದ್ದೇ, ಮತ್ತೆ ಬತ್ತವಕ್ಕೆ ದಾರಿದೇ ತೋರುಸಿಕ್ಕಿ ಹೋವುತ್ತವು. ’ಕೌರವರಲ್ಲಿ ಮೂವತ್ತೈದನೇ ಜೆನದ ಹೆಸರೆಂತರ?’ ಕೇಳಿರೆ ಶೇಣಿ ಅಜ್ಜಂಗೆ ಬಿಟ್ಟು ಬೇರೆ ಆರಿಂಗೂ ನೆಂಪಿರ! ಆದರೆ ಪಾಂಡವರಲ್ಲಿ ದೊಡ್ಡವನ ಹೆಸರು? ಅದು ಶೇಣಿ ಬಾವಂಗೂ ಗೊಂತಿಕ್ಕು!! ಇಬ್ರುದೇ ಒಂದೇ ಕಾಲಘಟ್ಟಲ್ಲಿ ಇದ್ದದುದೇ, ಒಬ್ಬ ನೆಂಪೊಳುದ, ಇನ್ನೊಬ್ಬ ಎಲ್ಲಿಗೋ ಮರದು ಹೋದ..! ಇತಿಹಾಸಲ್ಲಿ ಬಂದ ಎಷ್ಟೋ ರಾಜರುಗಳ ಅವಸ್ತೆ ನೋಡಿ, ಹೆಚ್ಚಿನವರ ಜಾತಕವೇ ಗೊಂತಿಲ್ಲೆ ಈಗ. ಕೆಲಾವು ಜೆನರ ಇಂದಿಂಗೂ ನೆಂಪು ಮಡಗುತ್ತು. ರಾಮ, ಧರ್ಮರಾಯ°, ಅಶೋಕ°, ಚಂದ್ರಗುಪ್ತ°, ಶಿವಾಜಿ, ಕೃಷ್ಣದೇವರಾಯ° – ಇವೆಲ್ಲ ಇಂದಿಂಗೂ, ಎಂದೆಂದಿಂಗೂ ನೆಂಪಾಗಿದ್ದವು.

ನಮ್ಮ ಆಧುನಿಕ ಭಾರತಕ್ಕೆ ಸ್ವತಂತ್ರ ಬಂದು ಸರೀ ಅರುವತ್ತೆರಡು ಒರಿಷ ಕಳಾತು – ಒಂದು ಸಂವತ್ಸರಚಕ್ರ ಕಳುದು ಎರಡೊರಿಷ! ಪ್ರಜಾಪ್ರಭುತ್ವ ಬಂದೂ ಆತು. ಪ್ರಜೆಗಳೇ ಪ್ರಭುಗಳ ಹೆರ್ಕಿ ಹೆರ್ಕಿ ಕಳುಸುದಡ, ಊರೂರಿಂದ. ಎಷ್ಟೋ ಜೆನ ಪ್ರಭುಗೊ ಆದವು, ಹೆಚ್ಚಿನವು ಪ್ರಜೆಗಳೇ ಆಗಿ ಒಳುದವು! ಪ್ರಭುಗಳಲ್ಲಿದೇ – ಎಲ್ಲ ಪ್ರಭುಗಳೂ ನೆಂಪಿಲಿಲ್ಲೆ. ಕೆಲವೇ ಕೆಲವು ಮುತ್ತುಗೊ ಮಾಂತ್ರ ನೆಂಪಿಪ್ಪದು. ಹಾಂಗಿಪ್ಪ ಒಬ್ಬ ಮುತ್ತಿನ ಬಗೆಗೆ ಈ ವಾರದ ಶುದ್ದಿ.

ಓ ಮೊನ್ನೆ ಗೆಡ್ಡದ ಜೋಯಿಷರ ಹತ್ರೆ ಪಟ್ಟಾಂಗಕ್ಕೆ ಕೂದಿಪ್ಪಗ ಬಂದ ಶುದ್ದಿ. ಅವಕ್ಕೆ ರಜ ರಜ ರಾಜಕೀಯ ಎಲ್ಲ ಅರಡಿಗಿದಾ! ಹಾಂಗೆ ನೋಡಿರೆ ಅವಕ್ಕೆ ಜ್ಯೋತಿಷ್ಯಂದ ರಾಜಕೀಯಲ್ಲಿ ಆಸಕ್ತಿ. ಪ್ರತಿಸರ್ತಿ ಕವುಡೆ ಮೊಗಚ್ಚುವಗಳೂ ಮಂತ್ರಿ, ಸಚಿವರ ಸೀಟು ಅವರ ಕಣ್ಣಮುಂದೆ ಬಂದು ಉದುರಿದ ಹಾಂಗೆ ಅಪ್ಪದು. ಅವು ಹೇಳಿದ ಪೂರ ವಿಷಯ ಶುದ್ದಿಲಿ ಹೇಳಿರೆ ಅಜೀರ್ಣ ಅಕ್ಕು, ಅದಕ್ಕೆ ಅದರ ಸಾರಾಂಶ ಮಾಂತ್ರ ಹೇಳ್ತೆ. ಆಗದೋ?

ಓಜುಪೇಯಿ ಅಜ್ಜ ನೆಗೆಮಾಡುದು!

ಅವರ ಹೆಸರು ಅಟಲು ಬಿಹಾರಿ ವಾಜುಪೇಯಿ.  ಹೆಚ್ಚುಕಮ್ಮಿ ಶಂಬಜ್ಜನ ಕಾಲಲ್ಲಿ ಹುಟ್ಟಿದವು. ನವಗೆಲ್ಲ ಓಜುಪೇಯಿ ಅಜ್ಜ°..!
1924ರಲ್ಲಿ ಮಧ್ಯಪ್ರದೇಶದ ಗ್ವಾಲಿಯರು ಹೇಳ್ತಲ್ಲಿ ಹುಟ್ಟಿ, ಕಾನುಪುರಲ್ಲಿ ಕಲ್ತು, ರಾಜಸ್ತಾನ, ಮದ್ಯಪ್ರದೇಶ, ದೆಲ್ಲಿ – ಹೀಂಗೆಲ್ಲ ಓಡಾಡಿ, ಮುಂದೆ ದೇಶಕ್ಕೇ ಪರಿಚಿತ ಆದ ಆಜನ್ಮ ಬ್ರಹ್ಮಚಾರಿ. ಬೆಳಿಕಚ್ಚೆ, ಬೆಳಿ ಅಂಗಿ, ಅದರ ಮೇಗೆ ಕಂದು ಚಳಿಅಂಗಿ (ಸ್ವೆಟರು)! ಉರುಟು ಮೋರೆ, ಅರ್ದ ಮುಚ್ಚಿದ ಕಣ್ಣು, ಹಲ್ಲು ಕಾಣದ್ದ ಹಾಂಗೆ ಮುಚ್ಚಿದ ತೊಡಿ, ಮುಗ್ಧ ನೆಗೆ, ನಿಧಾನ ನಡಿಗೆ, ಕೈಕರಣದ ಮಾತುಗೊ, ವಿಶ್ವಾಸದ ನಿಲುವು,ಸ್ವತಃ ಕವಿ…. ಎಲ್ಲವೂ ಒಟ್ಟಾಗಿ ಓಜುಪೇಯಿ ಅಜ್ಜ°!

ಸಣ್ಣ ಇಪ್ಪಗಳೇ ಹಿರಿಯರಾದ ಗುರೂಜಿ, ಶ್ಯಾಮ ಪ್ರಸಾದ್ ಮುಖರ್ಜಿ, ಇತ್ಯಾದಿ ದೇಶಭಕ್ತ ಜೆನಂಗಳ ಸಂಸರ್ಗ ಸಿಕ್ಕಿ, ಮನಸ್ಸು ಒಳ್ಳೆತ ಪಕ್ವ ಇಪ್ಪ ವೆಗ್ತಿ(ವ್ಯಕ್ತಿ). ಮುಂದೆ ದೇಶಕ್ಕೆ ಸ್ವತಂತ್ರ ಬಪ್ಪ ಸಮಯಲ್ಲಿ, ’ಬ್ರಿಟಿಷರೇ, ಭಾರತ ಬಿಟ್ಟು ಹೆರಡಿ’ ಚಳುವಳಿ, ಇತ್ಯಾದಿಗಳಲ್ಲಿ ಭಾಗವಹಿಸಿದ ಲೆಕ್ಕಲ್ಲಿ ಜೈಲಿಂಗೆ ಹೋದ ವೆಗ್ತಿ. ಒಂದು ಭಾರತವ ಮೂರು ತುಂಡಾಗಿ ಮಾಡಿ ಬ್ರಿಟಿಷರು ಬಿಟ್ಟು ಹೋದವಲ್ದ, ’ದೊಡ್ಡರ್ದ ಎನಗೆ…!’ ಹೇಳಿ ನಮ್ಮ ನೆಹರು ಕುಶಿಪಟ್ಟೋಂಡು (ಒಪ್ಪಕ್ಕನ ಹಾಂಗೆ!?) ಇಪ್ಪ ಕಾಲಲ್ಲಿ, ’ಛೇ, ಭಾರತ ಅನ್ಯಾಯವಾಗಿ ತುಂಡಾತನ್ನೇ!’ ಹೇಳಿ ಬೇಜಾರು ಮಾಡಿದ ಅನೇಕ ಭಾರತೀಯರ ಪೈಕಿ ಒಬ್ಬ ವೆಗ್ತಿ, ಹಿಂದುಗೊ-ಮಾಪ್ಳೆಗೊ ಒಡದು ಆಳುವ ನೀತಿಯ ಆ ಸರಕಾರವ ವಿರೋಧಿಸಿಗೊಂಡು ಇದ್ದ ಗುಂಪಿಲಿ ಮುಂಚೂಣಿಲಿ ಇದ್ದ ವೆಗ್ತಿ. ಮೊರಾರ್ಜಿ ದೇಸಾಯಿಯ ಕೋಂಗ್ರೇಸೇತರ ಸರ್ಕಾರ ಬಂದಿಪ್ಪಗ ವಿದೇಶ ಮಂತ್ರಿ ಆಗಿದ್ದ ಚಾಲಾಕಿ ವೆಗ್ತಿ. ಅದಾಗಿ ಇಪ್ಪತ್ತೊರಿಷ ಕಳುದು ನಮ್ಮ ದೇಶದ ಪ್ರಧಾನಮಂತ್ರಿ ಕುರ್ಶಿಲಿ ಮೂರು ಸರ್ತಿ ಕೂದು, ಅವ° ಆಗಿಯೇ ಎದ್ದ ಅಪರೂಪದ ವೆಗ್ತಿ. ಸಣ್ಣ ಇಪ್ಪಗಳೇ ’ಸಂಘ’ಜೀವನವ ದತ್ತು ತೆಕ್ಕೊಂಡು, ಮನೆಯ ಪ್ರೀತಿಗೆ ಬೇಕಾಗಿ ಎರಡು ಮಗಳಕ್ಕಳ ದತ್ತು ತೆಕ್ಕೊಂಡು, ಕಳೆದ 85 ಒರಿಷಂದ ಸಂತೋಷಲ್ಲಿ ಜೀವನ ಮಾಡಿಗೊಂಡು ಇಪ್ಪ ವೆಗ್ತಿ. ಇದಿಷ್ಟು ಆ ಜೆನರ ಬಗೆಗೆ ಕೊಟ್ಟ ಸಣ್ಣ ಪೀಠಿಕೆ.!

ಅವನ ಸಾಧನೆ ಇವಿಷ್ಟೇ ಆಗಿದ್ದರೆ ಸಾರಡಿತೋಡಿನ ನೀರಿನ ಹಾಂಗೇ ಆವುತಿತವು. ಹಾಂಗಲ್ಲದ್ದ ಕಾರಣ ಅಷ್ಟು ಜೆನ ಪ್ರಭುಗಳ ಎದುರುದೇ ಎದ್ದು ಕಾಣ್ತ° ಈ ಅಜ್ಜಯ್ಯ!!
ಭಾರತವ ತುಂಬ ಪ್ರೀತಿಸಿ, ಗೌರವಿಸಿ, ರಕ್ಷಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘಲ್ಲಿ ನಿಷ್ಠೆಯೇ ಪ್ರಧಾನ.
ಅಲ್ಲಿ ಬೆಳದ ಹೆಚ್ಚಿನವುದೇ ರಾಜಕೀಯ ಜೀವನಂದ ದೂರ ಇದ್ದರೂ, ಕೆಲವು ಜೆನ ರಾಜಕೀಯ ರಂಗಕ್ಕೆ ಬಯಿಂದವು. ಕೆಲವೇ ಕೆಲವು ಜೆನ ಇನ್ನೂ ನಿಷ್ಠಾವಂತ, ಮಡಿವಂತ ರಾಜಕಾರಣಿ ಆಗಿದ್ದವು. ಅಂತಾ ನಿಷ್ಟಾವಂತ ರಾಜಕಾರಣಿಲಿ ಓಜುಪೇಯಿ ಒಬ್ಬ° ಹೇಳುದರ ಇಡೀ ದೇಶವೇ ಒಪ್ಪುತ್ತು. ಒಳುದವೆಲ್ಲ ಬೇಡಂಗಟ್ಟೆ ತಿಂದು ಹೊಟ್ಟೆ ಬೆಳೆಶಿಗೊಂಡಿದವು! ಗುಣಾಜೆಮಾಣಿಗೆ ಪಾನಿಪೂರಿ ತಿಂದು (ಈಗ ಬಿಟ್ಟಿದ°, ಮೂರು ತಿಂಗಳಾತು- ತಿಂತ°ಯಿಲ್ಲೆ) ಹೊಟ್ಟೆ ಬೆಳದ ಹಾಂಗೆ!
ಸಂಘದ ಕೆಲವು ಅಜ್ಜಂದ್ರ ಮಾರ್ಗದರ್ಶನಲ್ಲಿ ಕಟ್ಟಿದ ರಾಜಕೀಯ ಪಕ್ಷ ’ಭಾರತೀಯ ಜನ ಸಂಘ’ದ ಆರಂಬಂದ ಈ ಯುವಕ ರಾಜಕೀಯಲ್ಲಿ ಇದ್ದವು. ಮುಂದೆ ಪಕ್ಷದ ಆಧಾರಸ್ತಂಭ ಆಗಿದ್ದಿದ್ದವು. ಅದೇ ಪಕ್ಷಕ್ಕೆ ’ಜನತಾ ಪಾರ್ಟಿ’ ಹೇಳಿ ಹೊಸ ರೂಪ ಕೊಟ್ಟವು. ಅದರ್ಲಿದೇ ಹಾಂಗೆ, ಈ ಜೆನ ಒಳ್ಳೆ ಚುರ್ಕುಮಂಡೆ ಆಗಿ ಕೆಲಸ ಮಾಡಿದವು. ಆದರೆ ಜನತಾ ಪಾರ್ಟಿಲಿ ಇಪ್ಪಗ ಆರೋ ಕೆಲವು ಜೆನಂಗೊ ಸೇರಿಗೊಂಡು ’ಎಂಗಳ ಪಾರ್ಟಿಲಿ ಇದ್ದೊಂಡು ಸಂಘದ ಸಂಪರ್ಕ ಹೊಂದಿಪ್ಪಲೆ ಎಡಿಯ!’ ಹೇಳಿ ಒಂದು ವಾದ ಮಾಡಿದವಡ. ’ಅಂಬಗ ನಿಂಗಳ ಪಾರ್ಟಿಲಿ ಇಪ್ಪಲೇ ಎಂಗೊಗೆ ಎಡಿಯ!, ಸಂಘ ಬಿಡ್ಳೆ ಎಡಿಯಲೇ ಎಡಿಯ!’ ಹೇಳಿ ಈ ಓಜುಪೇಯಿ ಅಜ್ಜನೂ, ಅದೇ ನಮುನೆಯ ಇನ್ನು ಕೆಲವು ಜೆನವುದೇ ಸೇರಿಗೊಂಡು ’ಭಾರತೀಯ ಜನತಾ ಪಾರ್ಟಿ’ ಹೇಳ್ತದರ ಸುರು ಮಾಡಿದವಡ. ಇಂದಿಂಗೆ ಸುಮಾರು ಮೂವತ್ತೊರಿಷ ಅಪ್ಪಲಾತು ಅದು ಸುರು ಆಗಿ.

ಈ ಪಕ್ಷ ಹುಟ್ಟಿದ ಕೂಡ್ಳೇ ಬೆಳದ್ದಿಲ್ಲೆ. ಬೆಳವಲೆ ಸುಮಾರು ಕಷ್ಟ, ನಷ್ಟಂಗೊ ಬಯಿಂದು. ಶಂಬಜ್ಜನ ಕಾಲಲ್ಲಿ ಗಾಂಧಿ, ಶಾಸ್ತ್ರಿ – ಅವು ಇವು ಎಲ್ಲ ಇತ್ತಿದ್ದವಲ್ದ? ಬ್ರಿಟಿಷರ ಎದುರು ಮಾತಾಡಿದವು, ಹೋರಾಡಿದವು, ಬ್ರಿಟಿಷರ ಓಡುಸಿದವು – ಹಾಂಗಾಗಿ ಕೋಂಗ್ರೇಸು ಹೇಳಿರೆ ದೇಶಕ್ಕೆ ಅಕ್ಕಾದ್ದು ಹೇಳಿ ಒಂದು ವರ್ಗ ತಿಳ್ಕೊಂಡಿತ್ತು. ದೇಶಾದ್ಯಂತ ಕೋಂಗ್ರೇಸಿನ ಅಲೆ ಇತ್ತು. ಬ್ರಿಟಿಷರ ಓಡುಸುಲೆ ಸಂಘದ ಗುರೂಜಿಯುದೇ ಇತ್ತಿದ್ದವು, ವಿವೇಕಾನಂದನ ಮಾತುಗಳ ಪ್ರತಿಧ್ವನಿಗಳೂ ಇತ್ತಿದ್ದು ಹೇಳ್ತದು ಎಷ್ಟೋ ಜೆನಕ್ಕೆ ಗೊಂತಿಲ್ಲೆ! ಪಾಪ. ಅದಲ್ಲದ್ದೇ ಮುಂದೆ ಸ್ವತಂತ್ರ ಸಿಕ್ಕಿದ ಕೂಡ್ಳೆ, ಬ್ರಿಟಿಷರಿಂಗೆ ಮತ್ತೆ ಕೋಂಗ್ರೇಸಿಂಗೆ ಸಂಕ ಹಾಕಿದವ° ಒಬ್ಬ° ಪ್ರಧಾನಮಂತ್ರಿ ಆದ°. ಅವನ ಕುರ್ಶಿಗೆ ಬೇಕಾಗಿ ಏನೇನಾರು, ಏನಕ್ಕೇನಾರು ಮಾಡಿದ°. ವಿಶ್ವದ ಎಲ್ಲ ದೇಶಗಳ ಎದುರು ಎಡಿಗಾದಾಷ್ಟು ಮರಿಯಾದಿ ತೆಗದು, ಹೇಸಿಗೆ ಮಾಡಿ ಹಾಕಿದ°. ಅವನ ಕಾಲದ ಮತ್ತೆ ಅವನ ಕೊಂಡಾಡುವವೇ ಇರೆಕ್ಕು ಹೇಳಿ ತನ್ನ ಮನೆಯವರನ್ನೇ ಕೂರುಸಿದ°. ರಾಜಪ್ರಭುತ್ವದ ಕುಟುಂಬ ರಾಜಕಾರಣ ಬೇಡ ಹೇಳಿ ಪ್ರಜಾಪ್ರಭುತ್ವ ಸುರು ಮಾಡಿರುದೇ, ಈ ಜನದ ಮತ್ತೆ ಅವನ ಕುಟುಂಬವೇ ಇತ್ತು – ಹೆಚ್ಚು ಕಮ್ಮಿ ಐವತ್ತು ಒರಿಷ! ಇದೆಲ್ಲ ಪಾಪದ ಜೆನಂಗೊಕ್ಕೆ ಗೊಂತೇ ಆಯಿದಿಲ್ಲೆ. ಅಂತೂ ಕೋಂಗ್ರೇಸು ಹೇಳಿತ್ತು ಕಂಡ್ರೆ ದೇವರು. ಜೆನಂಗೊಕ್ಕೆ ಇಪ್ಪ ವಿಚಾರಂಗಳ ಗೊಂತು ಮಾಡ್ಲೆ ಎಷ್ಟು ಕಷ್ಟ!! ತುಂಬ ಬಂಙ ಅಲ್ದೋ? ಆ ಕಷ್ಟದ ಹೆಚ್ಚಿನ ಪಾಲು ಈ ಪಕ್ಷಕ್ಕೆ ಬಂದಿತ್ತು. ಆ ಸಮಯಲ್ಲಿ ಪಕ್ಷದ ಗುರಿಕ್ಕಾರ್ತಿಗೆ ಈ ಅಜ್ಜಂಗೆ ಬಂದಿತ್ತು!!!

’ದೇವಸ್ಥಾನ ಇರೆಕಾದಲ್ಲಿದ್ದ ಪಳ್ಳಿಯ ಒಡವ’ಗಳಿಗೆಲಿ ಒಳಾಂದೊಳ ಸಪೋರ್ಟು ಮಾಡಿದ್ದವು ಹೇಳಿ ಗುಣಾಜೆಮಾಣಿ ಹೊಗಳುಗು! ಪಕ್ಷದ ಶಕ್ತಿ ಇನ್ನುದೇ ವೃದ್ಧಿ ಅಪ್ಪಲೆ ಒಟ್ಟಾರೆ ಸನಾತನ ಪರ ಅಲೆ ಸಹಕಾರಿ ಆತು! ಮುಂದೆ ಪಕ್ಷ ಬೆಳದತ್ತು, ಸರಕಾರ ಯಂತ್ರದಷ್ಟೇ ಶಕ್ತಿಯುತವಾಗಿ ಬೆಳದತ್ತು. ಮತ್ತಾಣ ಓಟಿಲಿ (ಮತದಾನಲ್ಲಿ) ಶಕ್ತಿವಂತ ಸಂಘಟನೆಯಾಗಿ, ಮಾಂತ್ರ ಅಲ್ಲದ್ದೇ ಅತಿ ಹೆಚ್ಚು ಸ್ಥಾನ ಬಂದ ಪಕ್ಷ ಆಗಿ ಮುಂದೆ ಬಂತು. ಅದೇ ದಿನ ಒಂದು ಸರಕಾರ ರಚನೆ ಮಾಡಿತ್ತು. ’ಓಜುಪೇಯಿ ಅಜ್ಜನೇ ಪ್ರಧಾನಮಂತ್ರಿ ಆಯೆಕ್ಕು’ ಹೇಳ್ತದರ ಆ ಪಕ್ಷಲ್ಲಿ ಎಲ್ಲೊರುದೇ ಅವಿರೋಧವಾಗಿ ಒಪ್ಪಿಗೊಂಡವು. ಪಕ್ಷದೊಳವೇ ಇದ್ದೊಂಡು ಪಕ್ಷಾತೀತವಾಗಿ ಬೆಳದವು. ಆರಂಭಂದಲೂ ಆ ಪಕ್ಷದ ಮೋರೆ (ಮುಖ) ಆಗಿ ಕೆಲಸ ಮಾಡಿ, ಯೋಚನಾಶಕ್ತಿಯಾಗಿ ಬೆಳದು ಬೆಳದು ಮುಂದೆ ಬಂದು, ತಾನೇ ಕಟ್ಟಿದ ಅರಮನೆಯ ಸಿಂಹಾಸನಲ್ಲಿ ಕೂದಿದ್ದವು. ಸೊಂತಕ್ಕೆ ಏನುದೇ ಮಡಿಕ್ಕೊಳದ್ದೆ ಸರ್ವಸ್ವವನ್ನುದೇ ಪಕ್ಷಕ್ಕಾಗಿ, ತತ್ವಕ್ಕಾಗಿ ಯೋಚನೆ ಮಾಡಿದವು. ಮತ್ತೆ ಮುಂದಕ್ಕೆ ಅವು ಎದ್ದಮತ್ತೆ ಎಷ್ಟೇ ಕಚ್ಚಾಟ, ಕೂಗಾಟ ಇದ್ದರೂ, ಈ ಅಜ್ಜ ಕೂದಿಪ್ಪನ್ನಾರ ಯಾವದೇ ಎದುರುವಾದಿ ಇತ್ತವಿಲ್ಲೆ, ಎಲ್ಲೊರೂ ತಳೀಯದ್ದೆ ಕೂದಿತ್ತಿದ್ದವು. ಇದಕ್ಕೆ ಅವರ ಮೃದುವರ್ತನೆಯೇ ಕಾರಣ – ಇದು ಎಲ್ಲೊರಿಂಗೂ ಗೊಂತಿದ್ದು. ಎಲ್ಲೊರಿಂಗೂ ಅಕ್ಕಾದವ ಹೇಳಿ ಎಲ್ಲರ ತಲಗೂ ಹೊಕ್ಕಿ ಹೋಯಿದು. ಪಕ್ಷದ ಲೆಕ್ಕ ಇಲ್ಲೆ, ಜಾತಿಯ ಲೆಕ್ಕ ಇಲ್ಲೆ, ದೇಶದ ಲೆಕ್ಕ ಇಲ್ಲೆ, ಎಲ್ಲೊರುದೇ ಈ ಅಜ್ಜನ ವ್ಯಕ್ತಿಗತವಾಗಿ ಪ್ರೀತುಸುಲೆ ಸುರು ಮಾಡಿತ್ತಿದ್ದವು.

ಅತಿದೊಡ್ಡ ಪಕ್ಷ ಆದರೆಂತಾತು, ಬಹುಮತ ಇಲ್ಲೆನ್ನೆ! ಪಕ್ಷದ ವೈರಿಗಳ ಪೈಕಿಯ ಆಜನ್ಮ ವೈರಿಗಳೂ ಪರಸ್ಪರ ಒಟ್ಟಾಗಿ ಈ ಅಜ್ಜನ ಕೆಳ ಇಳುಸಿದವು, ಬರೇ 13 ದಿನಲ್ಲಿ. ಶುಬತ್ತೆ ಹೆತ್ತಿದ್ದು ಸೂತಕ ಕಳಿವ ಮದಲೇ ಅಜ್ಜಂಗೆ ಹತ್ತಿ – ಕೂದು – ಇಳುದೂ ಆಯಿದು! ಪರಿಶುದ್ಧವಾದ ಪಕ್ಷಂಗಳ ಸಮ್ಮಿಲನ, ಆದರೆ ಬಹುಮತ ಇಲ್ಲೆ.!

ಮುಂದಾಣ ಮತದಾನಲ್ಲಿ ಮತ್ತೊಂದರಿ ಹಾಂಗೇ ಆತು! ಆದರೆ ಓಜುಪೇಯಿ ಅಜ್ಜನ ಕೆಲಾವು ಪುಳ್ಳ್ಯಕ್ಕೊ – ಅಂಬಗಾಣ ಜವ್ವನಿಗ ಪ್ರಮೋದು ಮಹಾಜನಿನ ಹಾಂಗಿರ್ತವು – ಕೆಲಾವು ಪಿರಿಮದ್ದು ಮಾಡಿ, ಬೇರೆ ಬೇರೆ ಸ್ಥಳೀಯ ಪಕ್ಷಂಗಳ ಸೇರಿಸಿಗೊಂಡು ಬಹುಮತ ಮಾಡಿಗೊಂಡವಡ.
ಏನೇ ಇರಳಿ, ಆ ಸರ್ತಿಯಾಣದ್ದು ಅರ್ಧಂಬರ್ಧ ಸಮ್ಮಿಲನ, ಅರ್ಧಂಬರ್ಧ ಬಹುಮತ.

ಅಜ್ಜ° ಕೂದಕೂಡ್ಳೇ ದೇಶದ ಪ್ರಗತಿಯ ಬಗೆಗೆ ಚಿಂತನೆ ಮಾಡಿದವಡ.
ಆ ವಿಷಯಲ್ಲಿ ತಡವು ಮಾಡುದೇ ಬೇಡ ಹೇಳ್ತ ಉದ್ದೇಶಂದ ಮರಾದಿನಂದಲೇ ದೇಶಸೇವೆ ಕೆಲಸ ಸುರು. ಬರೇ ಹದಿಮೂರು ತಿಂಗಳಿಲಿ ಅದ್ಭುತ ಪ್ರಗತಿ ಆತಡ. ಹಿಂದಾಣ ಐವತ್ತೊರಿಶ ಅಂತೇ ಚೆಪ್ಪುಗುದ್ದಿದ ಪೈಲುಗ ಎಲ್ಲ ಒಂದರಿ ದೂಳು ಕುಡುಗಿ ಒತ್ತರೆ ಮಾಡಿದವಡ. ಹಳೇ ಕೆಲವು ಹಂದದ್ದ ಕಾಗತಂಗೊ, ರಿಜಿಸ್ತ್ರಿ ಎಲ್ಲ ಬೇಗ ಬೇಗ ಹಂದುಲೆ ಸುರು ಆತಡ. ದೇಶದ ಒಳಾಣ, ದೇಶದ ಹೆರಾಣ ಎಷ್ಟೋ ಬಂಧಂಗೊ- ಸಂಬಂಧಂಗೊ ಪುನಃ ಸೃಷ್ಟಿ ಆತಡ. ಅಜ್ಜನ ಕಾಲಲ್ಲಿ ಶಾಸ್ತ್ರಿ ಹೇಳಿದ “ಜೈ ಜವಾನ್, ಜೈ ಕಿಸಾನ್” ಧ್ಯೇಯಕ್ಕೆ ಇನ್ನೊಂದು ಗೆರೆ ಸೇರಿಸಿದವಡ, ಅದುವೇ “ಜೈ ವಿಜ್ಞಾನ್“. ಒಂದು ಬಹುಮುಖ್ಯವಾದ ಗೆರೆ ಸೇರ್ಲೆ ಹತ್ತರತ್ತರೆ ಅರುವತ್ತು ಒರಿಷ!!
ಈ ನಮುನೆ ಸುಮಾರು ಇದ್ದು ಹೇಳ್ತಾ ಹೋದರೆ..

ಅದಲ್ಲದ್ದೇ, ಇನ್ನೂ ಒಂದು ಇದ್ದು, ಮದಲಾಣ ಜವ್ವನಿಗ ಪ್ರಧಾನಿಗೂ ಎಡಿಯದ್ದು.!

ಈ ಅಜ್ಜಂದೇ, ಅಡ್ವಾಣಿ ಅಜ್ಜಂದೇ ಕೂದುಗೊಂಡು – ದೇಶದ ಭದ್ರತೆಯ ಬಗೆಗೆ ದೊಡ್ಡ ಚಿಂತನೆ ನಡೆಸಿ, ’ನಮ್ಮ ದೇಶಕ್ಕುದೇ ಒಂದು ಪರಮಾಣು ಬೋಂಬು ಆಯೆಕ್ಕಲ್ದಾ!’ ಹೇಳಿ ಯೋಚನೆ ಮಾಡ್ಳೆ ಸುರುಮಾಡಿದವು.
ಅಂದೊಂದರಿ ಇಂದಿರಾಗಾಂಧಿ ಹೇಳ್ತ ಗೆಂಡುಮಕ್ಕೊ ಅರ್ದ ಹೊಟ್ಟುಸಿದ್ದು. ಮತ್ತೆ ಯೇವದೂ ಅದಕ್ಕೆ ಕೈ ಹಾಕಲೆ ಹೋಯಿದವಿಲ್ಲೆ.
ಈಗ ಅದರಿಂದ ದೊಡ್ಡ ಸಾಹಸ – ಅಂದ್ರಾಣ ಪರಿಸ್ಥಿತಿಯೇ ಬೇರೆ, ಇಂದಿಂದೇ ಬೇರೆ. ಈಗ ದೇಶ ದೇಶದ ನಡುವಿನ ಅವಲಂಬನ ಜಾಸ್ತಿ ಆಯಿದು. ದೇಶದ ಒಳಿತಿಂಗೆ ಬೇಕಾಗಿ ಇದರ ಹಂದುಸೆಕ್ಕಾವುತ್ತು. ಅದುದೇ ಕೆಲವು ಬೋಂಬು ಇಪ್ಪ ದೇಶಂಗೊ ’ಇನ್ನು ಆರತ್ರೂ ಇಪ್ಪಲೆಡಿಯ..!’ ಹೇಳಿ ಅರೆದ್ದಿಗೊಂಡು ಇದ್ದಿದ್ದ ಕಾಲ.! ‘ಬೋಂಬು ಕಟ್ಟಿ ಮಡಗಿರೆ ಪೈಸೆ ಸಾಲ ಕೊಡೆಯೊ°‘ ಹೇಳಿ ಹೆದರಿಸಿಗೊಂಡಿದ್ದ ಕಾಲ! ಇಡೀ ದೇಶವೇ ಸಾಲದ ಮೇಲೆ ನಿಂದಿತ್ತಿದ್ದಲ್ದ, ಹಾಂಗಿಪ್ಪಗ ’ಸಾರ ಇಲ್ಲೆ,ಹೊಟ್ಟುಸುವ°’ ಹೇಳೆಕ್ಕಾರೆ ಯೇವ ಮಟ್ಟಿನ ಧೈರ್ಯ ಬೇಕು ನಿಂಗಳೇ ಯೋಚನೆ ಮಾಡಿ.!

ಹಾಂಗೆ, ದೇಶದ ಕೆಲವು ಅತ್ಯಂತ ನಂಬಿಕಸ್ಥ ವಿಜ್ಞಾನಿಗಳ ದಿನಿಗೆಳಿ, ’ಬೋಂಬು ಕಟ್ಟುಲೆ’ ಹೇಳಿದವಡ. ರಾಜಾರೋಷವಾಗಿ ಅಲ್ಲ – ಅದಾ ಓ ಮೊನ್ನೆ ಕರೋಪಾಡಿಲಿ ಮಾಪ್ಳೆಗೊ ತೆಯಾರು ಮಾಡಿದ ಹಾಂಗೆ – ಗುಟ್ಟಿಲಿ ಅಡ, ಚೆಂಬರ್ಪು ಅಣ್ಣ ಹೇಳುಗು! ಅದರ ಮತ್ತೆ ರಾಜಸ್ಥಾನದ ಪೋಖ್ರಾಣ್ ಹೇಳ್ತ ಜಾಗೆಲಿ ದೊಡಾ ಗುಂಡಿ ಮಾಡಿ, ಹುಗುದು, ಹೊಟ್ಟುಸಿ, ಪರೀಕ್ಷೆ ಮಾಡ್ಳೆಡ.

ಅತ್ಯಂತ ಗುಟ್ಟಿನ ಕೆಲಸ, ಓಜುಪೇಯಿ ಅಜ್ಜ° ಮಾಂತ್ರ ಗುಟ್ಟು ಒಳಿಶಿರೆ ಸಾಲ, ವಿಷಯ ಗೊಂತಿಪ್ಪ ಕೆಲಾವು ಮಂತ್ರಿಗೊ, ಸಹಾಯಕಂಗೊ, ಸೈನ್ಯದ ಅಧಿಕಾರಿಗೊ, ವಿಜ್ಞಾನಿಗೊ – ಎಲ್ಲೊರುದೇ! ಆರೆಲ್ಲ ಈ ವಿಷಯಲ್ಲಿ ಬತ್ತವೋ – ಎಲ್ಲೊರುದೇ.
ವಾಹ್! ಆ ತಂಡದ ಎಲ್ಲೊರುದೇ ಈ ಅಜ್ಜಯ್ಯನ ಧೈರ್ಯ, ಯೋಚನೆಯ ಮೆಚ್ಚಿಯೇ ಮೆಚ್ಚುತ್ತವು.!

ದೇಶದ ವಿಜ್ಞಾನಿಗೊ ಎಲ್ಲ ಒಟ್ಟುಸೇರಿ, ಪರಮಾಣು ಬೋಂಬು ಕಟ್ಟಿ, ಪೋಕ್ರಾಣಿಲಿ ಗುಂಡಿ ತೆಗದು, ಹೊಟ್ಟುಸಿ – ಇಷ್ಟೆಲ್ಲ ಮಾಡಿರೂ ಯೇವ ನರಪಿಳ್ಳೆಗೂ ಗೊಂತಾಯಿದಿಲ್ಲೆ. ಬೋಂಬು ಹೊಟ್ಟಿದ ಕೂಡ್ಳೇ ಈ ಅಜ್ಜನ ಕೆಮಿಗೆ ಸೂಚನೆ ಬಂತಡ – ’ಬುದ್ದ° ನೆಗೆಮಾಡಿದ°’ – ಅದೊಂದು ಗುಟ್ಟು ಶಬ್ದ!!! ಅಷ್ಟಪ್ಪಗ ಒಂದು ನೆಮ್ಮದಿಯ ನೆಗೆ ಬಂತಡ ಈ ಅಜ್ಜಂಗೆ!
( ಗುಣಾಜೆಮಾಣಿಯ ಹಾಂಗೆ ಬೊಬ್ಬೆಹೊಡದು ನೆಗೆ ಅಲ್ಲ, ಕುಂಞಿಬಾಬೆಯ ಹಾಂಗೆ ತೊಡಿಒಳಾದಿಕೆ!) ದೇಶವ ನಿಜವಾಗಿ ಪ್ರೀತಿಸುವವಕ್ಕೆ ಕುಶಿ ಆಗದ್ದೆ ಇಕ್ಕೋ?! ಅಲ್ದೋ?

ಕೂಡ್ಳೇ ಒಂದು ಪೇಪರಿನವರ ಎಲ್ಲ ದಿನಿಗೆಳಿ (ಪತ್ರಿಕಾಗೋಷ್ಠಿ) ಓಜುಪೇಯಿ ಅಜ್ಜ ಹೇಳಿದವಡ, ಮೂರೇ ವಾಕ್ಯ – ಹೆಚ್ಚಿಲ್ಲೆ ಕಮ್ಮಿ ಇಲ್ಲೆ: ’ಎಂಗೊ ಪರಮಾಣು ಬೋಂಬು ಹೊಟ್ಟುಸಿದೆಯೊ°. ಎಲ್ಲ ಪರಿಪೂರ್ಣ ಆಯಿದು. ಊರಿಂಗೆ ಎಂತದೂ ಉಪದ್ರ ಆಗದ್ದ ಹಾಂಗೆ ನೋಡಿಗೊಂಡಿದೆಯೊ°.’ ಪೇಪರಿನವರ ಪೆನ್ನು ಕೆಳ ಉದುರಿತ್ತೋ ಏನೋ, ಮುಳಿಯಾಲದಪ್ಪಚ್ಚಿಗೇ ಗೊಂತು!!
ಕುಶಿ, ಆಶ್ಚರ್ಯ – ಎರಡೂ ಒಟ್ಟಿಂಗೆ ಆತು!

ಇಲ್ಲಿ ಒಂದು ಚೋದ್ಯ ನೋಡಿ ನಿಂಗೊ: ಇಡೀ ಲೋಕಲ್ಲಿ ಎಂತ ವೆತ್ಯಾಸ ಆದರೂ ಅಮೇರಿಕದ ಗುರಿಕ್ಕಾರಂಗೆ ಗೊಂತಾವುತ್ತಡ. ಹುಲ್ಲುಕಡ್ಡಿ ಹಂದಿರೂ, ಚಳಿ ಹೋಗಿ ಮಳೆ ಬಂದರೂ, ಇರಾಕಿಲಿ ಬೆಡಿಮಡಗಿರೂ, ಸೌದಿಲಿ ಒಲೆಮಡಗಿರೂ, ಲಂಕೆಲಿ ಕಿಚ್ಚು ಹಾಕಿರೂ – ಎಂತ ಆದರೂ ಗೊಂತಾವುತ್ತಡ – ಬೇರೆ ಆರಾರು ಹೇಳಿದ್ದಲ್ಲ, ಇದು ಅಮೇರಿಕದವೇ ಹೇಳಿಗೊಂಬದು. ಆದರುದೇ, ಈ ಅಜ್ಜಯ್ಯ ಪರಮಾಣುಬೋಂಬು ಹೊಟ್ಟುಸಿದ್ದರ ಅಜ್ಜ° ಆಗಿಯೇ ಪೇಪರಿಂಗೆ ಹೇಳುವನ್ನಾರ ಗೊಂತಾಯಿದಿಲ್ಲೆ ಅವಕ್ಕೆ, ಚೆ ಚೆ!
ಬೋಂಬು ಹೊಟ್ಟಿ ಹತ್ತು ನಿಮಿಷಲ್ಲಿ ಅಮೇರಿಕದವು ಹೇಳಿದವಡ, “ರಾಜಸ್ಥಾನಲ್ಲಿ ಬೂಕಂಪ ಆತೋ ಕಾಣ್ತು, ಭೂಮಿಯ ಕಂಪನಂಗೊ ಜೋರಿದ್ದು. ನಿಂಗಳ ಮೀಟ್ರಿಂಗೆ ಗೊಂತಾಗಿರ, ಹೋಗಿ ನೋಡಿಕ್ಕಿ ಒಂದರಿ” ಹೇಳಿ. ಪಾಪ! ಅವರ ಅವಸ್ತೆ ಗ್ರೇಶಿರೆ ಬೇಜಾರಾವುತ್ತು!!! ಅಲ್ಲದೋ?!

ಬೇರೆ ದೇಶಂಗೊಕ್ಕುದೇ ಬೆಶಿ ಆತಡ!
ನಿಂಗೊಗೆ ಪೈಸೆ ಕೊಡ್ತಿಲ್ಲೆ’ ಹೇಳಿ ಅಳಪ್ಪುಸಿದವಡ. ’ಕೊಡದ್ರೆ ಬೇಡ, ಕೂರಿ’ ಹೇಳಿ ಅಜ್ಜಯ್ಯ ಹೇಳಿದವಡ. ಇಡೀ ಲೋಕಲ್ಲಿ ಇಪ್ಪ ಭಾರತೀಯರಿಂಗೆ ಒಂದು ಸಂದೇಶ ಕೊಟ್ಟವಡ. ’ನಿಂಗಳ ದೇಶ ಕಷ್ಟಲ್ಲಿದ್ದು. ರಜಾ ಪೈಸೆ ಬಡ್ಡಿಗೆ ಮಡಗಿ, ನಿಧಾನಕ್ಕೆ ಕೊಡ್ತೆಯೊ’ ಹೇಳಿ. ತೆಕ್ಕೊಳಿ: ಒಂದೇ ತಿಂಗಳಿಲಿ ಅಮೇರಿಕ ಸಾಲ ಕೊಡ್ತದರ ಮೂರುಪಾಲು ಬಂದು ಬಿದ್ದತ್ತಡ. ಇದುವೇ ಅಲ್ಲದೋ ದೇಶಪ್ರೇಮ ಹೇಳಿತ್ತುಕಂಡ್ರೆ!?

ನಾಯಕ ಗಟ್ಟಿಗ° ಆದರೆ ಕೆಲಸ ಸಾಗುತ್ತು. ಅದೇ ವಿಜ್ಞಾನಿಗೊ, ಅದೇ ಅಧಿಕಾರಿಗೊ, ಅದೇ ವಿದೇಶದ ಭಾರತೀಯರು ಮೊದಲೂ ಇತ್ತಿದ್ದವು, ಮತ್ತೆಯೂ ಇದ್ದವು. ಅಂತಾ ಕೆಲಸ ಸಾಗಿದ್ದು ಈ ಅಜ್ಜಯ್ಯ ಇಪ್ಪಗಳೇ, ಅಲ್ದೋ? ಅಡ್ವಾಣಿ ಅಜ್ಜ°, ಜೋಷಿ, ಜೋರ್ಜು ಪೆರ್ನಾಂಡೀಸು, ಕಲಾಮು, – ಇಂತಾ ಮುತ್ತುಗಳ ಎಲ್ಲ ಹೆರ್ಕಿ ಹೆರ್ಕಿ ಈ ಒಯಿವಾಟು ಮಾಡೆಕ್ಕಾರೆ ಧೈರ್ಯದ ಒಟ್ಟಿಂಗೆ ಮಂಡೆಯುದೇ ಚುರ್ಕು ಬೇಡದೋ?!

ಇದು ಅಜ್ಜನ ಪಾರ್ಟಿ ಮಾಂತ್ರ ಆಗಿ ಮಾಡಿದ ಕೆಲಸ ಎಂತೂ ಅಲ್ಲ, ನೂರೈವತ್ತು ಸಣ್ಣ ಸಣ್ಣ ಪಕ್ಷಂಗೊ ಎಲ್ಲ ಸೇರಿದ ಅವಿಲು ಸರಕಾರ ಇಪ್ಪಗ ಮಾಡಿದ ಕೆಲಸ. ಹದಿಮೂರನೇ ತಿಂಗಳು ಬಪ್ಪಗ ತೆಮುಳುನಾಡಿನ ಜಯಲಲಿತ ಎಂತದೋ ಒಂದು ಸಣ್ಣ ಅರ್ಗೆಂಟು ಸುರು ಮಾಡಿತ್ತಡ. ಈ ಅಜ್ಜ ಪರಂಚಿದವೋ ಏನೋ! ’ನಿಂಗಳ ಸರಕಾರಕ್ಕೆ ಎಂಗೊ ಸಕಾಯ ಮಾಡ್ತಿಲ್ಲೆ’ ಹೇಳಿತ್ತಡ. ಎಂತೆಲ್ಲಾ ಮಾಡಿ ಅಳಪ್ಪುಸಿರೂ ಮತ್ತೆ ಕೇಳಿತ್ತಿಲ್ಲೆ. ಅಂತೂ ಅದು ಸರಕಾರಂದ ಹೆರ ಹೋತು.! ಅಲ್ಲಿಗೆ ಈ ಬಂಗಾರದಂತಾ ಸರಕಾರ ಮುಗಾತು!!!

ಹದಿಮೂರು ತಿಂಗಳಿಲಿ ಮಾಡ್ಳೆಡಿಯದ್ದಂತಾ ಸಾಧನೆಯ ಈ ಅಜ್ಜಯ್ಯ ಮಾಡಿದವಲ್ದಾ, ಅದುವೇ ಅವರ ’ಮುತ್ತು’ ಹೇಳಿ ಪರಿಗಣನೆಗೆ ತಂದು ನಿಲ್ಲುಸಿದ್ದು.
ಮತ್ತಾಣ ಓಟಿಲಿ ಇದೇ ಅಜ್ಜ ಪುನಾ ಬಂದವು. ಜನರ ಪ್ರೀತಿಯೇ ಅದಕ್ಕೆ ಕಾರಣ ಅಡ.

ರಸ್ತೆ ಅಭಿವೃದ್ಧಿ ಮಾಡ್ಳೆ ಒಂದು ಸ್ಕೀಮು ಮಡಗಿದವಡ. ಅದಕ್ಕೆ ಅವನ ಹೆಸರು ಮಡಗಿದ್ದಯಿಲ್ಲೆ, ಬದಲಾಗಿ ’ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ ಹೇಳಿಯೇ ಮಡಗಿದವಡ. ಸರಕಾರದ ಯೋಜನೆಗೊಕ್ಕೆಲ್ಲ ಆ ಗಾಂಧಿ, ಈ ಗಾಂಧಿ ಹೇಳಿ ಹೆಸರು ಮಡಗುವಗ ಇದೊಂದು ನಿಜವಾಗಿಯೂ ಮೆಚ್ಚೆಕ್ಕಾದ್ದೇ! ಎಂತ ಹೇಳ್ತಿ?
ಅಂತೂ ಅರುವತ್ತು ಒರಿಷಂದ ದೇಶದ ಮಾರ್ಗಂಗಳಲ್ಲಿ ಇದ್ದಿದ್ದ ಗುಂಡಿಗಳ ಎಲ್ಲ ಮುಚ್ಚಿದ°. ’ಓಜುಪೇಯಿ ರೋಡು’ ಹೇಳಿಯೇ ಹೇಳುವಷ್ಟ್ರ ಮಟ್ಟಿಂಗೆ ಬೆಳದತ್ತು ಅದು. ಸಂಪರ್ಕ ಹೆಚ್ಚಾದರೇ ಅಲ್ದೋ, ದೇಶದ ಅಭಿವೃದ್ಧಿ?

ಇದೇ ಸಮಯಲ್ಲಿ ನಮ್ಮದೇ ದೇಶದ ಕುಂಞಿ ಪಾಕಿಸ್ತಾನ ಇದ್ದಲ್ದೋ, ನೆಹರುವಿನ ಕಾಲಲ್ಲಿ ಅದು ಕಾಶ್ಮೀರವ ಅರ್ದ ತಿಂದದು ಸಾಲದ್ದೆ, ಈ ಅಜ್ಜನ ಕಾಲಲ್ಲಿ ಕಾರ್ಗಿಲ್ಲು ಹೇಳ್ತಲ್ಲಿ ನುಂಗುಲೆ ಬಂತು. ಎಲ್ಲಾ ಅಜ್ಜಂದ್ರು ಒಂದೇ ನಮುನೆ ಹೇಳಿ ಗ್ರೇಶಿತ್ತೋ ಏನೊ, ಪಾಕಿಸ್ತಾನ. ಪಾಪ- ಪೆಟ್ಟುತಿಂದ ಖಂಡುನಾಯಿಯ ಹಾಂಗೆ ಬೀಲಮಡುಸಿ ಓಡಿತ್ತು…!
ಕಾರ್ಗಿಲ್ ದಿಗ್ವಿಜಯ.!

ಇದರ ಎಲ್ಲ ಕಂಡು, ತಲೆ ಗಿರ್ಮಿಟ್ಟು ಹಿಡುದು, ಎಂಗಳಿಂದ ಎಂತೂ ಹರಿತ್ತಿಲ್ಲೆ ಹೇಳಿಗೊಂಡು, ಅಂದು ಪೈಸೆ ಕೊಡದ್ದೆ ಕೂದ ಅಮೇರಿಕ ಮುಂದೆ ಅದಾಗಿಯೇ ’ಧಾರಾಳ ಪೈಸೆ ಕೊಡ್ಳಕ್ಕು’ ಹೇಳಿಗೊಂಡು ಬಂತಡ.

2004ರಲ್ಲಿ ಐದೊರಿಷ ಪೂರ್ತಿಮಾಡಿಕ್ಕಿ, ಯೇವದೇ ಕಪ್ಪುಚುಕ್ಕಿ ಇಲ್ಲದ್ದೆ ಆ ಸ್ಥಾನಂದ ಇಳುದಿಕ್ಕಿ ಹೋಯಿದ°. ಹದಿಮೂರು ದಿನ, ಹದಿಮೂರು ತಿಂಗಳುಗಳ ಎರಡು ಅಧಿಕಾರಾವಧಿ ಪೂರೈಸಿ, ಇನ್ನು ಹದಿಮೂರೊರಿಷ ಆವುತ್ತೋ – ಹೇಳಿ ಗುಣಾಜೆಮಾಣಿಯ ಹಾಂಗೆ ಎಷ್ಟೋ ಜೆನ ಕಾದು ಕೂದಿತ್ತಿದ್ದವು. ಆದರೆ, 2004 ರ ಓಟಿಲಿ ಎದುರಾಣ ಪಾರ್ಟಿ ಬಂತು. ಎಂತಕೆ ಹಾಂಗಾತೋ – ಸ್ವತಃ ಸೋನಿಯಾಗಾಂಧಿಗೇ ಗೊಂತಿದ್ದೋ ಇಲ್ಲೆಯೋ! ಉಮ್ಮ!! ಗೆದ್ದ ಕುಶಿಲಿ ಪಟಾಕಿಗೆ ಕಿಚ್ಚುಕೊಡುದೂ ಮರದಿತ್ತಿದ್ದು ಅವಕ್ಕೆ!

ನಮ್ಮ ದೇಶದ ಅರುವತ್ತೈದೊರಿಷದ ಇತಿಹಾಸಲ್ಲಿ ಹೇಳುವಂತಾ ಸಾದನೆಗೊ ಹಲವು ಇದ್ದರುದೇ, ಹೇಳಿಗೊಂಬಂತಾ ಸಾಧನೆಗೊ ಕೆಲವೇ ಕೆಲವು ಇಪ್ಪದು.! ಅದರ್ಲಿದೇ ಕೇವಲ ಆರು ಚಿಲ್ರೆ ಒರಿಷ ಅಧಿಕಾರಲ್ಲಿದ್ದ ಓಜುಪೇಯಿದೇ ಹೆಚ್ಚಿನಪಾಲು ಹೇಳಿತ್ತುಕಂಡ್ರೆ ಆಶ್ಚರ್ಯ, ಹೆಮ್ಮೆ ಆವುತ್ತು. ಅಲ್ಲದೋ?

ಎರಡು ದತ್ತು ಮಗಳಕ್ಕಳ ಮದುವೆ ಮಾಡಿ ಕೊಟ್ಟಾಯಿದು. ನೆಮ್ಮದಿಲಿ ಹಳತ್ತರ ನೆಂಪು ಮಾಡಿಗೊಂಡು ಜೀವನದ ಮೋಹನರಾಗಲ್ಲಿ ತಾರಕ ಷಡ್ಜವ ಕಾದು ಕೂದೋಂಡು ಇದ್ದವು. ಎಲ್ಲವೂ ಪಾರದರ್ಶಕ, ಎಲ್ಲವೂ ಸಾಮಾಜಿಕ – ಸ್ವಂತದ ಸಂಸಾರವೇ ಇಲ್ಲದ್ದ ಜೆನ ಸ್ವಂತಕ್ಕೆ ಹೇಳಿ ಎಂತರ ಮಾಡುಗು ಬೇಕೆ!
ಲೋಕಸಭೆಯ ಸುರುವಾಣ ದಿನಂಗಳಲ್ಲಿ ಸಾಮಾನ್ಯ ಮನುಷ್ಯರ ಹಾಂಗೆ ಸ್ಕೂಟ್ರಿಲಿ ಬಂದುಗೊಂಡು ಇದ್ದದಡ. ಈಗಳೂ ಹಾಂಗೆ, ಕೊಟ್ರೆ ಬಿಡುಗೋ ಏನೋ! ಸರಳತೆ ಎಷ್ಟು ಕಷ್ಟ!!!

ದೇಶದ ಹಿತದೃಷ್ಟಿಂದ ನೋಡಿರೆ, ಬೋಂಬು, ಮಾರ್ಗ, ಸೈನ್ಯ, ಯುದ್ಧ -ಅದು ಇದು.. ಎಲ್ಲವುದೇ ಬೇಕು. ಇಂತಾ ಕಾರ್ಯಂದಾಗಿ ಎಷ್ಟೋ ದೇಶಭಕ್ತರಿಂಗೆ ’ಪರಮಾಪ್ತ°’ ಆಯಿದವು. ಎಷ್ಟೋ ಜೆನಕ್ಕೆ ಸ್ವತಃ ’ಪರಮಾತ್ಮ’ನೇ ಆಯಿದವು.

ಇಂದು (ದಶಂಬ್ರ 25), ಆ ಅಜ್ಜನ ಹುಟ್ಟುಹಬ್ಬ!
ನವಗೆಲ್ಲ, ನಮ್ಮಾಂಗಿಪ್ಪ ಎಷ್ಟೋ ಪುಳ್ಳಿಯಕ್ಕೊಗೆಲ್ಲ ಪುರ್ಬುಗಳ ಹಬ್ಬದ ಗೌಜಿಂದಲೂ ಪ್ರಾಮುಖ್ಯವಾದ ವಿಷಯ!
ಎಂಬತ್ತೈದು ಒರಿಷಂದ ದೇಶಕ್ಕೆ ಬೇಕಾಗಿ ಉಸಿರಾಡುವ ಆ ಜೆನರ ಇಂದು ನೆಂಪು ಮಾಡೆಡದೋ?
ಈ ವಾರಕ್ಕೆ ಇದರಿಂದ ಒಳ್ಳೆ ಶುದ್ದಿ ಬೇರೆಂತರ ಸಿಕ್ಕುಗು, ನಿಂಗಳೇ ಹೇಳಿ!

ಒಬ್ಬನೇ ಒಬ್ಬನ ಮೇಲೆ ಜಗಳ ಮಾಡದ್ದೆ ’ಅಜಾತಶತ್ರು’ವೇ ಆಗಿ, ಶುದ್ಧರಾಜಕೀಯ ಮಾಡಿದ ಈ ಅಜ್ಜಯ್ಯಂಗೆ ಒಂದು ಒಪ್ಪಣ್ಣನ ಒಪ್ಪಂಗೊ..!
(ಓಜುಪೇಯಿ ಅಜ್ಜನ ಜಾತಕಪಟ: http://en.wikipedia.org/wiki/Atal_Bihari_Vajpayee )

ಓಜುಪೇಯಿ ಅಜ್ಜ° ಬರದ ಪದ್ಯಂಗೊ ಕೆಲವರ ಲತಾ ಮಂಗೇಶ್ಕರ್ ಹಾಡಿದ್ದಡ. ದೊಡ್ಡಣ್ಣನ ಪೆಟ್ಟಿಗೆಲಿ ಅದರ ಕೇಸೆಟ್ಟು ಮಡಿಕ್ಕೊಂಡು ಇತ್ತು. ಒಂದರ ನಿಂಗೊಗೂ ಕೇಳುಲೆ ಹೇಳಿ ತಯಿಂದೆ ಇದಾ:

ಬರದ್ದು: ಓಜುಪೇಯಿ ಅಜ್ಜ | ಹಾಡಿದ್ದು: ಲತಾ ಅಜ್ಜಿ | ಕೊಟ್ಟದು: ದೊಡ್ಡಣ್ಣ

(ಈ ಸಂಕೊಲೆಲಿ ನೇತರೆ ಅಲ್ಲಿಯೇ ಕೇಳುಲಕ್ಕು)

ಒಂದೊಪ್ಪ: ಅಮೇರಿಕ ಒಂದರಿ ಪರಮಾಣು ಹೊಟ್ಟುಸಿ ಪರಮಶತ್ರು ಆಯಿದು. ಈ ಅಜ್ಜ ಪರಮಾಣು ಹೊಟ್ಟುಸಿ ಪರಮಾಪ್ತ ಆಯಿದವು. ಅದೇ ಪರಮಾಣು, ಉದ್ದೇಶ ಬೇರೆ ಬೇರೆ. ಫಲಿತಾಂಶ ಬೇರೆಬೇರೆ!
ಎಂತಾ ಚೋದ್ಯ ಅಲ್ದೋ?

ಸೂ:
2009 ಮುಗಾತು!
ಒಪ್ಪಣ್ಣ ಶುದ್ದಿ ಹೇಳುಲೆ ಸುರು ಮಾಡಿ ಒಂದೊರಿಶ ಮುಗಾತು.
ಸಾರಡಿತೋಡಿಲಿ ಎಷ್ಟೋ ಹಳೆ ನೀರುದೇ ಮುಗಾತು, ಹರಿಪ್ಪು ಕಟ್ಟಿತ್ತು.
ಒಪ್ಪಣ್ಣನ ಶುದ್ದಿಗೊ ಐವತ್ತು ಆತು. ನೆರೆಕರೆಯ ಎಲ್ಲೊರಿಂಗುದೇ ಕುಶಿಯ ಸಂಗತಿ!
ಓಜುಪೇಯಿ ರಾಜಕೀಯ ಮುಗುಶಿದವು, ಹಾಸಿಗೆ ಹಿಡುದು ಮನುಗಿದ್ದವು.
ಒಪ್ಪಣ್ಣನೂ ಅವನ ಶುದ್ದಿಯ ಮುಗುಶುತ್ತನೋ?
ಹಾಂಗೊಂದು ಗಾಳಿಶುದ್ದಿ!!
ಬಪ್ಪ ವಾರಂದ ಈ ಶುದ್ದಿಗೊ ಇಲ್ಲಿ ಕಾಣದೋ? ಕಾಣೆಕ್ಕೋ? ಬೇಡದೋ?
ನಿಂಗಳೇ ಹೇಳಿಕ್ಕಿ..

ಬಪ್ಪವಾರವೇ ನೋಡಿಕ್ಕಿ…!

28 thoughts on “ಪರಮಾಣು ಹೊಟ್ಟುಸಿ ಪರಮಾಪ್ತ ಆದವ°..!

  1. ವಿಷಯಲ್ಲಿ ಗಂಭೀರತೆ, ಆಸ್ಥೆ, ತಾನೇ ತಾನಾಗಿ ಇದ್ದದಕ್ಕೆ ಹೇಳಿ ಅಲ್ಲ, ( ನೀನೇನೆ ಬರದರೂ ಆಸ್ಥೆ’ ಅಕ್ಕರೆ ವಹಿಸಿಯೇ ಬರೆತ್ತೆ! 🙂 )
    ಆದರೂ ಸಹಜವಾಗಿಯೇ ತುಂಬ ಶ್ರದ್ಧೆ ಮಡಿಗಿ ಗಮನ ಕೊಟ್ಟು ಬರದ್ದೆ..

    ಈ ಶ್ರದ್ಧೆ ಸದಾ spontaineous ಆಗಿಪ್ಪವ0 ನೀನು, blog ನಿಲ್ಸುವ ಮಾತೆಂತಕೆ………
    ಬೇಡ ಆಗದಾ………………

    ಪ್ರೀತಿಂದ
    ಪ್ರೇಮಕ್ಕ.

  2. ಒಪ್ಪಣ್ಣ- ಮಹೇಶಂಗೆ ನಮಸ್ಕಾರ. ಎನ್ನ ಬಹುಶಃ ನಿಂಗೊಗೆ ಗುರ್ತ ಇರ. ಆದರೆ ನಿಂಗಳ ‘ಒಪ್ಪಕ್ಕಂಗೆ’ ಗುರ್ತ ಇದ್ದು. ಸಾರಡಿ ಭಾವಂಗೂ ಗೊಂತಿದ್ದು. ಆನು ಸಾರಡಿ ಗಿರೀಶ ಭಾವನ ಹೆಂಡತಿಯ ತಮ್ಮ. ಮಂಗಳೂರಿಲ್ಲಿ ವಿಜಯ ಕರ್ನಾಟಕ ಪೇಪರಿಲ್ಲಿ ಹಿರಿಯ ಉಪಸಂಪಾದಕ ಆಗಿ ಕೆಲಸ ಮಾಡ್ತಾ ಇದ್ದೆ. ಮೊನ್ನೆ ಸಾರಡಿಗೆ ಹೋಗಿಪ್ಪಗ ವಿಷಯ ಗೊಂತಾತು. ಹವ್ಯಕ ಭಾಷೆಲಿಪ್ಪ ನಿಂಗಳ ಬ್ಲಾಗ್ (ವೆಬ್ ಸೈಟ್) ಗುರ್ತವೂ ಆತು.
    ನಮ್ಮ ಭಾಷೆಲಿ ಇಷ್ಟು ಚೆಂದಕೆ ಬರವಲಾವ್ತು ಹೇಳಿ ಅಂತರ್ಜಾಲದ ಮೂಲಕ ಇಡೀ ಪ್ರಪಂಚಕ್ಕೇ ತೋರ್ಸಿಕೊಟ್ಟದಕ್ಕೆ ಅಭಿನಂದನೆಗೊ. ಇದು ಚಿರಕಾಲ ಮುಂದುವರಿಯಲಿ.
    ಧನ್ಯವಾದ.

    1. ಓ! ಕುಳಮರುವ ಮಾವ ಬಂದಿರಾ, ನಮಸ್ಕಾರ.
      ಒಪ್ಪಣ್ಣಂಗೂ ನಿಂಗಳ ಸರೀ ಗೊಂತಿದ್ದು, ಸರೀ ಗುರ್ತ ಇದ್ದು.
      ಬೇಕಾರೆ, ಆ ತುಳು ಸಮ್ಮೇಳನದ ಶುದ್ದಿಯ ಸರೀ ನೋಡಿ.. ಅದರ್ಲಿ ನಿಂಗಳ ಶುದ್ದಿಯೂ ಹೇಳಿದ್ದ°…
      ಲೇಂಡುಲಿಂಕಿಲಿ ಕೂದಂಡು ವೆಬ್‌ಲಿಂಕ್ ಮಾಡಿದ್ದು ಸಾಕು ನಿಂಗೊ, ಕೊಶಿ ಆತು ಒಪ್ಪಣ್ಣಂಗೆ.. 😉
      ಬನ್ನಿ, ಬರೆತ್ತಾ ಇರಿ.. ಆತಾ?

  3. ಕಲಾಮ್ ಮಾಷ್ಟ್ರ ರಾಷ್ಟ್ರಪತಿಯ ಕುರ್ಶಿಲ್ಲಿ ಕೂರಿಸಿ ರಾಜಕೀಯಕ್ಕೆ ಒಂದು ಚೆಂದ ತಂದು ಕೊಟ್ಟದೂ ವಾಜಪೇಯಿ ಅಜ್ಜನೆ ಅಲ್ಲದ ?

  4. ನಿನ್ನ ’ಶುದ್ದಿ’ಗೊ ಎಲ್ಲ ಲಾಯಕ್ಕಿದ್ದು ಮಿನಿಯ.
    ಬರಕ್ಕೊಮ್ಡು ಇರು……
    ಗುಡ್ ಲಕ್…….

  5. ಇವರ ಬಗ್ಗೆ ಬೇರೆಂತ ಹೇಳುಲಕ್ಕು ಬಾವ..
    ಆದರ್ಶಕ್ಕೆ ಅಟಲ್… ಆಸರೆಗೆ ಅಟಲ್…
    ಆದರ್ಶ ರಾಜಕಾರಣಕ್ಕು ಅಟಲ್.. ಅಗತ್ಯ ಮಾರ್ಗಕ್ಕು ಅಟಲ್.. ಅತ್ಮರಕ್ಷಣೆಗು ಅಟಲ್…

    ವಾಜುಪೇಯಿ ಅಜ್ಜ ಪ್ರಧಾನ ಮಂತ್ರಿ ಅಪ್ಪಲ್ಲಿವರೆಗೆ ಇಂತದ್ದೆಲ್ಲ ಮಾಡುಲಕ್ಕು ಹೇಳಿ ಆರಾದ್ರು ಯೊಚಿಸಿದ್ದವಾ ಹೇಳು ಬಾವ…

  6. Hi Oppanna,

    Sarady thodinge enthake ashtu pramukhyathe? Namma oorilli bere sumaru todugu iddu allada? Sarady thodina specialty enthadu?

    Clarify maduthiya?

    1. ಚೆ, ಇದೆಂತ ಜಯರಾಮಪ್ಪಚ್ಚಿಗೆ ಈ ನಮುನೆ ಸಂಶಯ ಬಂದದು..!!!
      ಅಪ್ಪು, ತೋಡುಗೊ ಸುಮಾರಿದ್ದು. ಆದರೆ ಬೈಲಿಂಗೆ ಹತ್ತರಾಣದ್ದು ಸಾರಡಿತೋಡೇ ಇದಾ!
      ನಾವು ಉದಾಹರಣೆ ಕೊಡುವಗ ಹತ್ತರಾಣದ್ದು ಕೊಡುದಲ್ಲದೋ? ಕನಿಷ್ಠಪಕ್ಷ ಮನಸ್ಸಿಂಗಾದರೂ ಹತ್ತರಾಣದಾಗಿರೇಕು!
      ಬೇರೆ ತೋಡಿನ ಉದಾಹರಣೆ ಹೇಳಿರೆ ಕೆಲವೇ ಜೆನಕ್ಕೆ ಗೊಂತಕ್ಕಷ್ಟೆ, ಆದರೆ ಸಾರಡಿತೋಡಿನ – ನೆರೆಕರೆಯ ಎಲ್ಲೊರಿಂಗುದೇ ಗುರ್ತ ಇದ್ದಲ್ದ..!

      ಯೇವ ರೀತಿ, ನದಿಯ ಉಪಮೆಗೆ ಗಂಗಾನದಿಯೋ, ಯೇವ ರೀತಿ ಕಡಲಿನ ಉಪಮೆಗೆ ಕುಂಬ್ಳೆ ಕಡಲೋ, ನಾಯಿಯ ಉಪಮೆಗೆ ಸ್ಕೂಬಿ ನಾಯಿಯೋ, ಬೈಕ್ಕಿನ ಉಪಮೆಗೆ ಅಜ್ಜಕಾನಬಾವನ ಬೈಕ್ಕೋ- ಅದೇ ರೀತಿ ತೋಡಿನ ಉಪಮೆಗೆ ಸಾರಡಿತೋಡೇ ಬಪ್ಪದು ನವಗೆ, ಪಕ್ಕನೆ.!
      ಒಂದರ ಹಿಡ್ಕೊಂಡ್ರೆ ಮತ್ತೆ ಅದನ್ನೇ ಹೇಳುದು – ಎಲ್ಲೊರುದೇ ಹಾಂಗೇ, ಅಲ್ದೋ!
      ಎಂತ ಹೇಳ್ತಿ?
      ಹೆ ಹೆ..!

      ಮತ್ತೆಂತ ಶುದ್ದಿ?
      ಸದ್ಯ ಊರಿಂಗೆ ಬಯಿಂದಿರೋ? 😉

  7. ಶುಭಾಷಯಗಳು ಒಪ್ಪಣ್ಣ.. ಅಂತರ್ಜಾಲ ತಾಣ ಒಯ್ನಾಗಿದ್ದು!!

  8. ಒಪ್ಪಣ್ಣ – ಬ್ಲಾಗ website ಆಗಿ ಪರಿವರ್ತನೆ ಆದ್ದು ನೋಡಿದರೆ ಇದರ ಹಿಂದೆ ಅಪಾರ ಓದುಗರ ಪ್ರೋತ್ಸಾಹ ಇರುವುದು ಗೋಚರವಾಗುತ್ತದೆ. ಹೀಗಿರುವಾಗ ಖಂಡಿತ ಈ ಯಾತ್ರೆ ನಿಲ್ಲಬಾರದು. ಇದೆ ರೀತಿ ಉತ್ತಮ ಲೇಖನಗಳು ಬರಲಿ, ಸಮಾಜಕ್ಕೂ – ಯುವ ಮನಸ್ಸುಗಳಿಗೂ ಪ್ರೇರಣೆ ನೀಡುವಂತಾಗಲಿ ಎಂದು ಆಶಿಸುತ್ತೇನೆ. ಹವ್ಯಕ ಭಾಷೆ ಗೊತ್ತಿಲ್ಲದಿದ್ದರೂ, ಒಪ್ಪಣ್ಣ – ಬ್ಲಾಗನ ಸಂಪರ್ಕದಿಂದಾಗಿ ಸ್ವಲ್ಪಾದರೂ ಕಲಿಯಲು ಪ್ರಯತ್ನಿಸುವೆ. ಅಂತು ಭಾರಿ ಲಾಯಕ್ ಇದ್ದು.

  9. ಓಜುಪೇಯಿ ಅಜ್ಜನ ಬಗ್ಗೆ ಓದಿ ಕುಶಿ ಆತು.. ಅದೇ ಬೀಜೇಪಿ ಲಿ ಈಗ ನರ್ಸು ರೇಣುಕನ ಎಲ್ಲ ಮ೦ತ್ರಿ ಮಾಡಿದ್ದು ನೋಡಿರೆ ಹೇ೦ಗೇ೦ಗೋ ಆವುತ್ತು ಒಪ್ಪಣ್ಣೋ

  10. @ Sri,
    ಗುರುಗಳೇ ಹೊಡಾಡ್ತೆ..!
    ಒಪ್ಪಣ್ಣಂಗೆ ತುಂಬಾ ತುಂಬಾ ಕುಶಿ ಆತು ನಿಂಗಳ ಪ್ರತಿಕ್ರಿಯೆ ನೋಡಿ.
    ಇನ್ನೂರು ಮಾರ್ಕು ನೋಡಿ ಇನ್ನೂ ಕುಶಿ ಆತು. ಆದೇಶ ಕೇಳಿ ಆವೇಶವೇ ಬಂತು!
    ಶುದ್ದಿಗೊ ಖಂಡಿತ ನಿಲ್ಲುತ್ತಿಲ್ಲೆ ಗುರುಗಳೇ…

    @ All,
    ಗುರುಗಳ ಆದೇಶ ನವಗೆಲ್ಲ ಇದ್ದು.
    ಅದು ಶುದ್ದಿ ಹೇಳ್ತ ಒಪ್ಪಣ್ಣಂಗೆ ಮಾಂತ್ರ ಅಲ್ಲ – ಪ್ರತಿ ಶುದ್ದಿಗೆ ಒಪ್ಪಕೊಡ್ತ ನೆರೆಕರೆಯವಕ್ಕುದೆ ಸೇರಿ. ಗೊಂತಾತಲ್ದೋ?
    ಬನ್ನಿ, 'ಗುರುಗಳ ಆದೇಶ ಶಿರಸಾ ಪಾಲುಸುತ್ತೆಯೊ°..' – ಹೇಳುವೊ° ಗುರುಗಳತ್ರೆ.

  11. ಲಾಯಿಕಾಯಿದು. ಓಜುಪೇಯಿ ಅಜ್ಜನ ವ್ಯಕ್ತಿತ್ವವ ಚೆಂದಲ್ಲಿ ಮನಸ್ಸಿಂಗೆ ಮುಟ್ಟುವಾಂಗೆ ವಿವರುಸಿದ್ದಿ.

    ಇಷ್ಟು ಲಾ‍ಯಿಕದ ಬ್ಲೋಗಿನ ನಿಲ್ಲುಸುವ ಆಲೋಚನೆ ಏಕಪ್ಪಾ? ಶುದ್ದಿ ಹೇಳಿಮುಗಿವದೂಳಿ ಇದ್ದೋ? ನಿಲ್ಲುಸಿರೆ ಬಂಡಾಡಿ ಅಜ್ಜಿ ಮಾಡಡಿಲಿ ಮಡಗಿದ ಬಡಿಗೆ ತೆಕ್ಕೊಂಡು ಬತ್ತಡ, ಎನಗೊಂತಿಲ್ಲೆ. 😀

  12. ಹೊಸ ವ್ಯವಸ್ಥೆಗೆ ಹೋಪದು ಸಂತೋಷ. ಆದರೆ ಈಗಾಗಲೇ ಭರ್ಜರಿ ಓದುಸಿಗೊಂಡಿಪ್ಪ ಈ ಬ್ಲಾಗ್ ಪುಟಂಗಳನ್ನೂ ಹಾಂಗೇ ಮುಂದುವರಿಸೊಗೊಂಡು ಹೋಯೆಕ್ಕು. ಆತಾ…

  13. ವಾಹ್..! ಅದ್ಭುತ ಲೇಖನ..ಒಪ್ಪಣ್ಣ..೧೦೦ಕ್ಕೆ ೨೦೦ ಮಾರ್ಕು..!! ಓಜುಪೇಯಿ ಅಜ್ಜ ಮಾತ್ರ ಅಲ್ಲ, ನಿನ್ನ ಲೇಖನವೂ ಮುತ್ತಿನ ಹಾಂಗೆ ಇದ್ದು..

    ಮತ್ತೆ… ಬರವದರ ನಿಲ್ಲುಸುಲೆಡಿಯ.. ಇದೆಂಗಳ ಉಪದೇಶ ಅಲ್ಲ ಆದೇಶ..! ಆತಾ..?

  14. ಒ೦ದು ವರುಷ ಆದರೆ ಬ್ಲೋಗ್ ನಿಲ್ಸುದೆ೦ತಕೆ? ಹಾಫ್ ಸೆ೦ಚುರಿ ಮಾಡಿದ ಮೇಲೆ ಫುಲ್ ಸೆ೦ಚುರಿ ಮಾಡ್ಲೆ೦ತ ಕಷ್ಟ?

  15. oppanno ajjana jataka nodi laiku barade.
    great, soooper aidu ninage modale ajjana kushi
    baraddude kushi aatu.13dina aadaru 13tingalu aadaru avara saadhanega smarisuvanthadde.bharatha maatheya elloru mechhuva raajakarani. avakke devaru olleya aarogya kodali heli navu devaratre beduva aagada.innu mundeyu tumba vajapeyigo hutti barali.avara bagge helule astondu shakti ille.indiya is great.avara hangippa muttugo innu hutti barali.namma bharatha subhiksha aagali.good luck.

  16. ವಿಶಯದ ವಿಶಯ ಬಿಡಿ.
    ಹವ್ಯಕ ಬಾಷೆ ಬ್ಲೊಗ್ ಲಿ
    ಓದುದೇ ಚೆ೦ದ..
    ಖುಷಿ ಆವುತ್ತು..
    ಬರೆತ್ತಾ ಇರಿ..ಆತಾ..

  17. ಅಷ್ಟೇ ಅಲ್ಲ, "ಓಜಪೇಯಿ ಆಯಿದವಿಲ್ಲೆ. ಒಂದಲ್ಲ ಒಂದು ದಿನ ಅನು ಪ್ರಧಾನಿ ಆಗಿ ಹದಿಮೂರು ಒರುಷ ಅಧಿಕಾರ ನಡೆಸ್ತೆ" ಹೇಳಿ ಈಗ ಗುಣಾಜೆ ಮಾಣಿ ಹೇಳ್ತವಡ. 🙂

      1. oppanna indu ondu swaamiji rahul gandhi 2014rinda 16 varsha prime minister heli heliddu… gunaje maanige bechcha akko henge..

          1. ye oppanna ninage gunaaje maani ellidda gontiddaa.. patteye ille engala putturu hodenge.. illi joru galatege nadetta iddidaa.. ava engoge beku iga…

  18. ಅಂತಹ ಅನೇಕ ರಾಜಕಾರಣಿಗಳ ಅಗತ್ಯ ನಮಗಿದೆ. ಆದ್ರೆ ಈಗಿನ ರಾಜಕೀಯ ನೋಡಿದ್ರೆ ಬೇಜಾರಾಗುತ್ತೆ. ಏನು ಮಾಡೋದು?
    ಈಗ ಜೈ ಪೊಲಿಟೀಷಿಯನ್ ಅಂತ ರೇಣುಕಾಚಾರ್ಯ ಸೇರಿಸಿದ್ರಂತೆ.
    ನಾರಾಯಣ ನಾರಾಯಣ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×