Oppanna.com

ಪರೀಕ್ಷೆಲಿ ತಾನು ಗೆದ್ದರೆ ಸಾಲ, ಆಚವನ ಸೋಲುಸೇಕು..!?

ಬರದೋರು :   ಒಪ್ಪಣ್ಣ    on   01/06/2012    14 ಒಪ್ಪಂಗೊ

ಕೂಳಕ್ಕೂಡ್ಳಿಲಿ ಮದುವೆ ಎದ್ದರೆ ಪೆರಡಾಲ ಸಂಕಂದ ಮೇಗೆ-ಕೆಳ ಇಪ್ಪೋರಿಂಗೆಲ್ಲ ಸಂಭ್ರಮವೇ.
ನಿನ್ನೆ ಡಾಮಹೇಶಣ್ಣಂಗೆ ಮದುವೆ – ಬೆಂಗುಳೂರಿಲಿ. ನೆರೆಕರೆಯ ಮಿಂಚಿನಡ್ಕ, ಅಣಬೈಲು, ಕೈಲಂಕಜೆ ಮಾವಂದ್ರಿಂದ ಹಿಡುದು, ಹೆರಿಯೋರು ಕಿರಿಯೋರು ಎಲ್ಲೋರುದೇ ದಿಬ್ಬಣಕ್ಕೆ ಹೆರಟೊಂಡವು.
ಮಿಂಚಿನಡ್ಕ ಮಾವ ಚಿಟ್ಟೆಕರೆಲಿ ಕೂದುಗೊಂಡು ಅಡಕ್ಕೆ ಕೆರಸುದು ಕಂಡತ್ತು ಮೊನ್ನೆ ಹೊತ್ತೋಪಗ. ಬೆಂಗುಳೂರಿಂಗೆ ಹೋಪದು ಹೇದರೆ ಸುಲಭವೋ? – ಕನಿಷ್ಠ ನಾಲ್ಕಾದರೂ ಹಣ್ಣಡಕ್ಕೆ ಬೇಗಿಂಗೆ ಹಾಕಿಳೆಕ್ಕು; ಅಲ್ಲದ್ದರೆ ಒಪಾಸು ಊರಿಂಗೆ ಎತ್ತುವನ್ನಾರ ಗಟ್ಟದ ಮೇಗೆ ಸಿಕ್ಕುತ್ತ ಚೆಪ್ಪೆ ಮಾಲೆಕ್ಕಾಯಿಯನ್ನೇ ತಿನ್ನೇಕಟ್ಟೆ – ಹೇಳಿದವು ಮಾವ. ಓಹೋ – ಹೇಳಿಗೊಂಡೆ.
ಬೆಂಗುಳೂರಿಲಿ ಶುಬತ್ತೆಯ ಮನೆ ಒಂದು ಬಿಟ್ರೆ ಒಪ್ಪಣ್ಣಂಗೆ ಜಾಸ್ತಿ ಏನರಡಿಯ!

~
ಒಪ್ಪಣ್ಣಂಗೆ ಅತ್ತೆಕ್ಕೊ ಧಾರಾಳ.
ಅತ್ತೆಕ್ಕಳ ಪೈಕಿ ಮೂರು ನಮುನೆ ವಿಶೇಷವಾದ ಅತ್ತೆಕ್ಕೊ ಇದ್ದವು; ಪಾತಿಅತ್ತೆ, ರೂಪತ್ತೆ, ಶುಭತ್ತೆ!
ಹಳ್ಳಿಜೀವನವನ್ನೇ ಒಪ್ಪಿಗೊಂಡು, ಅಪ್ಪಿಗೊಂಡು ತರವಾಡುಮನೆಲಿ ನೆಮ್ಮದಿಯ ಜೀವನ ಮಾಡ್ತದು ಪಾತಿಅತ್ತೆಯ ಗರಿಮೆ.
ಹಳ್ಳಿಲೇ ಇದ್ದರೂ ಪೇಟೆನಮುನೆ ಜೀವನವ ಹಾತೊರೆತ್ತದು; ಸವುಕರಿಯಂಗಳ ಹೇಳಿಗೊಂಬದು ರೂಪತ್ತೆಯ ಕ್ರಮ.
ಪೇಟೆಲೇ ಇದ್ದೊಂಡು ಪೇಟೆಯನ್ನೇ ನೆಚ್ಚಿಗೊಂಡು ಪೇಟೆಹೆಮ್ಮಕ್ಕಳೇ ಆಗಿಬಿಟ್ಟಿದು ನಮ್ಮ ಶುಬತ್ತೆ.
ಇದಿವರ ಮೂಲಭೂತ ವಿತ್ಯಾಸ ಆದರೂ, ಎಲ್ಲೋರಮೇಗೆಯೂ ಭಯಭಕ್ತಿ ಇದ್ದು ಒಪ್ಪಣ್ಣಂಗೆ. 🙂
ಇನ್ನೂ ಹಲವು ಅತ್ತೆಕ್ಕೊ ಇದ್ದವು; ಎಲ್ಲೋರನ್ನೂ ಇಲ್ಲಿ ಪಟ್ಟಿಮಾಡ್ಳೆ ಸುರುಮಾಡಿರೆ ಅಜ್ಜಕಾನ ಭಾವ ಕೋಂಗಿ ಮಾಡ್ಳೆ ಸುರುಮಾಡುಗು.
ಈಗ ಆ ವಿಶಯ ಎಲ್ಲ ಎಂತಕೆ ಮಾತಾಡಿಗೊಂಬದು – ಹೇದು ಅಜ್ಜಕಾನಬಾವಂಗೆ ಕಾಂಬ ಮದಲೇ ವಿಶಯ ಹೇಳಿಗುತ್ತೆ.

ಒರಿಶಕ್ಕೊಂದರಿ ನೆಡೆತ್ತ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಪ್ಪ ಸಮೆಯ ಇದಾ ಈಗ – ಪರೀಕ್ಷೆ ಬರದ ಎಲ್ಲೋರಿಂಗೂ ’ಎಂತಾವುತ್ತೋ, ಹೇಂಗಿರ್ತೋ’ ಹೇದು ಒಂದು ಕುತೂಹಲ!
ಮಕ್ಕೊಗೆ ಕುತೂಹಲ ಇಪ್ಪದು ಸಹಜವೇ; ಅದು ಮಕ್ಕಳ ಮಟ್ಟಿಂಗೇ ಇರೇಕು. ಪರೀಕ್ಷೆಯ ಆದೇಚ ಮಕ್ಕಳ ಮಟ್ಟಿಂಗೇ ಇರೆಕು, ತೀರಾ ಅಬ್ಬೆಪ್ಪನ ಮಟ್ಟಕ್ಕೆ ಬಂದು ಎತ್ತಿರೆ ಎಂತಕ್ಕು? ಹಾಂಗೇ ಆದ ಕತೆ ಈ ವಾರ!
~

ಬೆಂಗುಳೂರಿನ ಶುಬತ್ತೆ ಬೆಂಗುಳೂರಿಲಿ ಇಪ್ಪ ಕಾರಣ ರೂಪತ್ತೆಗೆ – ನೆಂಟಸ್ತನಂದಲೂ ಹೆಚ್ಚು – ಪರಮಾಪ್ತ ಸ್ನೇಹಿತೆ.
ಆ ಶುಬತ್ತೆಗೆ ಇಬ್ರು ಮಕ್ಕೊ – ಒಬ್ಬ ಮಗ, ಸಣ್ಣವ. ಇನ್ನೊಂದು ಮಗಳು – ದೊಡ್ಡದು. ಬಂದಿಪ್ಪಗ ಕೊಂಡಾಟ ಮಾಡಿದ ನೆಂಪು ರೂಪತ್ತೆಗೆ ಇದ್ದು!
ಶುಬತ್ತೆಯ ಮಗಳು ಈ ಒರಿಶ ಹತ್ನೇ ಕ್ಲಾಸು.
ಒಳ್ಳೆ ಉಶಾರಿ ಕೂಸು ಅದು. ಮದಲಿಂದಲೇ ಹಾಂಗೆ – ಎಷ್ಟು ಹೊತ್ತಿಂಗೂ ಓದಿಂಡಿಕ್ಕು.
ಶಾಲೆ ಬಿಟ್ಟು ಮನಗೆ ಬಂದಪ್ಪದ್ದೇ ಕೋಣೆಲಿ ಕೂದರೆ ಇರುಳು ಊಟಕ್ಕಪ್ಪಗಳೇ ಹೆರ ಬಕ್ಕಷ್ಟೆ – ಎಡೆ ಹೊತ್ತಿಲಿ ತಿಂಬಲೆ ಕರ್ಕುರೆ, ಕಡ್ಳೆಮಿಟಾಯಿ, ಉದಾಸ್ನ ಅಪ್ಪಗ ಗುರುಟುಲೆ ಮೊಬೈಲು – ಎಲ್ಲವೂ ರೂಮಿನೊಳದಿಕೆಯೇ ಇರ್ತು ಇದಾ!
ಶಾಲೆ ಯೇವದು – ದೊಡ್ಡಬಾವ ಹೇಳಿಕೊಡ್ತ ಕನ್ನಡ ಪಾಟಂಗೊ ಅಲ್ಲಪ್ಪಾ – ಇಂಗ್ಳೀಶಿಲಿ ಕಲಿತ್ತದು. ತುಂಬ ಬರವಲೆ ಕೊಡ್ತವಡ. ಓದಲೆ ಬರವಲೆ ತುಂಬ ಇರ್ತು ಹೇಳ್ತ ಕಾರಣಕ್ಕೇ ಈ ಒರಿಶ ತರವಾಡುಮನೆ ಪೂಜೆಗೂ ಬಾರದ್ದದು.
ಈ ಸರ್ತಿ ದೊಡ್ಡ ಪರೀಕ್ಷೆ ಆದ ಕಾರಣವೋ ಏನೊ, ಶುಬತ್ತೆಯೂ ತುಂಬ ಕಾಳಜಿ ಮಾಡಿದ್ದು.
ಹೊತ್ತುಹೊತ್ತಿಂಗೆ ಕೂದಲ್ಲಿಗೇ ಹೋರ್ಲಿಕ್ಸು, ಬೂಟ್ಸು, ಶರ್ಬತ್ತು ಕೊಂಡೋಗಿ ಕೊಟ್ಟಿದು. ಪ್ರತಿ ಪರೀಕ್ಷೆ ಆದ ಮತ್ತೆ ಕ್ಲಾಸಿನ ಎಲ್ಲೋರ ಮಾರ್ಕನ್ನೂ ಕೇಳಿ ತಿಳ್ಕೊಂಡಿದು. ತನ್ನ ಮಗಳು ಆರಿಂದ ಎಷ್ಟು ಮಾರ್ಕು ಮುಂದೆ ಇದ್ದು ಹೇಳ್ತದರ ಪ್ರತಿ ಸರ್ತಿಯೂ ನಿಗಂಟು ಮಾಡಿಂಡಿದು.

ಚೆಂದಕೆ ಓದುಸಿ, ಎಲ್ಲಾ ಪರೀಕ್ಷೆಗಳಲ್ಲಿ ಒಳ್ಳೆ ಮಾರ್ಕು ಬಪ್ಪ ಹಾಂಗೆ ನೋಡಿಗೊಂಡಿದು.
~

ರೂಪತ್ತೆಗೆ ಜೀವನಲ್ಲಿ ಇಪ್ಪ ಹಲವು ಕುತೂಹಲಂಗಳಲ್ಲಿ ಒಂದು ಕೆಟ್ಟ ಕುತೂಹಲ; ಎಂತರ?
ಆಯಾ ಒರಿಶ ಆರೆಲ್ಲ ಮಕ್ಕೊ ಹತ್ನೇ, ಹನ್ನೆರಡ್ಣೇ ಬರೆತ್ತವೋ – ಅವರೆಲ್ಲರ ಮನಗೆ ಪೋನು ಮಾಡಿ ವಿಚಾರ್ಸುದು.
ಆರಿಂಗೆ ಹೆಚ್ಚು, ಆರಿಂಗೆ ಕಮ್ಮಿ ಮಾರ್ಕು ಹೇದು ಲೆಕ್ಕ ಹಾಕುದು.

ಅಷ್ಟು ಮಾಂತ್ರ ಅಲ್ಲ, ಸಿಕ್ಕಿದ ಎಲ್ಲೋರ ಹತ್ತರೆಯೂ ಹೇಳಿಂಡು ಬಪ್ಪದು!
ಒಪ್ಪಕ್ಕಂದಕ್ಕಪ್ಪಗಳೂ ಇದೇ ನಮುನೆ; ಮಾಷ್ಟ್ರುಮಾವನ ಮಗಳದ್ದಕ್ಕಪ್ಪಗಳುದೇ ಇದೇ ರೀತಿ; ಚೂರಿಬೈಲು ಡಾಗುಟ್ರ ಮಗಂದಕ್ಕುದೇ ಇದೇ ಕತೆ, ಜೋಗಿಬೈಲು ಭಾವಂದಕ್ಕೂ ಹಾಂಗೇ! ಒರಿಶ ಇಡೀ ಪೋನು ಮಾಡ್ಳೆ ನೆಂಪಾಗದ್ದೋರಿಂಗೆ, ಪೂಜೆ ಹೇಳಿಕೆಗೆ ಪೋನ್ನಂಬ್ರ ಹುಡ್ಕಿ ಸಿಕ್ಕದ್ದ ರೂಪತ್ತೆಗೆ, ಆ ಒರಿಶದ ರಿಸಲ್ಟು ಕೇಳುಲೆ ಪೋನ್ನಂಬ್ರ ಸಿಕ್ಕುತ್ತ ಬಗೆ ಮಾಷ್ಟ್ರಮನೆ ಅತ್ತೆಗೆ ಆಶ್ಚರ್ಯ ಅಪ್ಪದು ಒಂದೊಂದರಿ!

ಶ್- ನಿಂಗೊ ಯೇವ ಕ್ಲಾಸು ಹೇದು ಗೊಂತಾದರೆ, ಒರಿಶಗಟ್ಳೆ ನೆಂಪುಮಡಗಿ ಫೋನು ಮಾಡಿಕ್ಕುಗು, ನಂಬ್ರ ಮತ್ತೊ ಕೊಟ್ಟಿಕ್ಕೆಡಿ, ಆತೋ?! 🙂
ಅದಿರಳಿ.
~

ಮೊನ್ನೆಯೂ ಹಾಂಗೆ,
ಶುಬತ್ತೆಯ ಮಗಳಿಂಗೆ ಪರೀಕ್ಷೆ ಸುರು ಆದ್ದು, ಪರೀಕ್ಷೆ ಮುಗುದ್ದು ರೂಪತ್ತೆಗೆ ಗೊಂತಾಗದ್ದರೂ, ಪಾಸುಪೈಲು ಬಪ್ಪಲಪ್ಪಗ ಗೊಂತಾಗಿಯೇ ಆತು – ಜೆಂಬ್ರದ ಮನೆ ನೆಳವು ಬೋಚಬಾವನ ಮೂಗಿಲಿ ಕೂದ ಹಾಂಗೆಯೋ ಏನೋ.

ಪ್ರೆಂಡಿನ ಮಗಳು ಹತ್ತುನೇ ಕ್ಲಾಸು – ಈ ಸರ್ತಿ ಅಂತೂ ರೂಪತ್ತೆಯೇ ಹತ್ನೆ ಬರದ ಹಾಂಗೆ ಆಗಿತ್ತು, ಪಾಪ!
ನಿತ್ಯಾ ತಲೆಬೆಶಿ, ಅಂಬಗಂಬಗ ಹತ್ನೇ ಪಾಸುಪೈಲು ಗೊಂತಾತೋ – ಹೇದು ಎಲ್ಲೋರ ಹತ್ರೂ ಕೇಳಿಂಬದು.

ಶುಬತ್ತೆಯ ಕೈಲಿ ಮಾಂತ್ರ ಕೇಳಿರೆ ಪಾಪ, ಅದಕ್ಕೂ ಟೆನ್ಷನು ಇದಾ, ಹಾಂಗೆ ಒಳುದ ಎಲ್ಲೋರ ಹತ್ತರೂ ಕೇಳಿಗೊಂಡಿದ್ದತ್ತು; ಎರಡು ದಿನಕ್ಕೊಂದರಿ.
ಅಜ್ಜಕಾನಬಾವನ ಹತ್ತರೆ ಹಾಂಗೆ ಕೇಳಿ ಅಪ್ಪಗ –ಈ ಒರಿಶ ಆರೆಲ್ಲ ಇದ್ದವು ಅತ್ತೇ’ ಕೇಳಿ ಕೋಂಗಿಮಾಡಿದನಡ. ಪಾಪ!
~

ಅಂತೂ, ಕಳುದವಾರ ರಿಸಲ್ಟು ಬಂತು.
ಟೀವಿಲಿ ಕೆಂಪಕ್ಷರಲ್ಲಿ – ಹತ್ನೇ ರಿಸಲ್ಟು ಬತ್ತಾ ಇದ್ದು ಬತ್ತಾ ಇದ್ದು – ಬಪ್ಪಲೆ ಸುರು ಆದಪ್ಪದ್ದೇ, ಶುಬತ್ತೆಗೆ ಪೋನು ಮಾಡ್ಳೆ ಸುರುಮಾಡಿತ್ತು ರೂಪತ್ತೆ.
“ಹೇಂಗಾತು” ಕೇಳುಲೆ.
ಸುಮಾರು ಹೊತ್ತು ನಂಬರು ಬೆಶಿ ಬಂದುಗೊಂಡಿತ್ತು, ಮತ್ತೆ ಮಾತಾಡ್ಳೆ ಸಿಕ್ಕಿತ್ತು.

ಶುಬತ್ತೆಯ ಮಗಳಿಂಗೆ ಭರ್ತಿ ತೊಂಬತ್ತಾರು ಶೇಕಡಾ ಮಾರ್ಕಡ!
ಆರ್ನೂರಕ್ಕೆ ಎರಡು ಮಾರ್ಕು ಕಮ್ಮಿ.
ಎಡಿಯಪ್ಪಾ ಎಡಿಯ – ನೂರಕ್ಕೆ ತೊಂಬತ್ತಾರು ಹೇದರೆ, ಬರೇ ನಾಕು ಶೇಕಡಾ ಕೈ ತಪ್ಪಿದ್ದು.
ಬೋಚಬಾವಂದೂ – ಆ ಕೂಸಿಂದೂ ಮಾರ್ಕು ಒಟ್ಟು ಸೇರ್ಸಿರೆ ಭರ್ತಿ ನೂರು ಶೇಕಡಾ ಅಕ್ಕೋದು! 🙂
ಬೈಲಿನ ಎಲ್ಲೋರಿಂಗೂ ಪೋನು ಮಾಡಿ ವಿಚಾರ್ಸಲೆ ಸುರು ಮಾಡಿದ ರೂಪತ್ತೆಗೆ ಗೊಂತಾದ್ಸು ಎಂತರ – ಈ ಒರಿಶದ ಹತ್ನೇ ಕ್ಲಾಸಿಲಿ ಅದರ ನೆಂಟ್ರ ಪೈಕಿ, ಗುರ್ತದೋರ ಪೈಕಿ ಶುಬತ್ತೆಯ ಮಗಳಿಂಗೇ ಹೆಚ್ಚು ಮಾರ್ಕಡ.
ಓ ಅಲ್ಲಿ ಗುತ್ತಿಗಾರು ಹೊಡೇಣ ಶಿವಳ್ಯದೋರ ಮಗಳಿಂಗೆ ನಾಕು ಮಾರ್ಕು ಕಮ್ಮಿ ಅಡ.

~

ಪರೀಕ್ಷೆ ಫಲಿತಾಂಶ ನೋಡುಗ - ಒಬ್ಬಂಗೆ ಕೊಶಿ, ಮತ್ತೊಬ್ಬಂಗೆ ಬೆಶಿ!

ತನಗೇ ತೊಂಬತ್ತೈದು ಮಾರ್ಕು ಸಿಕ್ಕಿರೆ ಹೇಂಗಕ್ಕು – ಹಾಂಗೇ ಆಯಿದು ನಮ್ಮ ರೂಪತ್ತೆಗೆ.
ಅಷ್ಟೂ ಕೊಶಿ! ಈ ಕೊಶಿಲೇ ಕಾಶಿಹಲುವ ಮಾಡ್ಳೆ ಮಾವನ ಹತ್ತರೆ ಹೇಳಿತ್ತೋ ಏನೋ, ನವಗರಡಿಯ! 😉
ಆದರೆ, ಈ ಕೊಶಿ ಜಾಸ್ತಿ ಸಮೆಯ ನಿಂದಿದಿಲ್ಲೆ – ಬೈಲಿನ ಎಲ್ಲೋರ ಕೈಲಿ ಈ ಕೊಶಿಯ ಹೇಳಿ ಹಂಚಿಂಡಿಪ್ಪಗಳೇ
– ಮಾರ್ಕು ಬಂದದರ್ಲಿ ಶುಬತ್ತೆಗೆ ಬೇಜಾರಿದ್ದು ಹೇಳ್ತ ’ಸು’ ಶುದ್ದಿ ಗೊಂತಾತು ರೂಪತ್ತೆಗೆ.
~

ಮದಲಿಂಗೆಲ್ಲ ಶಾಲೆಗೊ ಕಮ್ಮಿ, ಸೌಕರ್ಯಂಗೊ ಕಮ್ಮಿ. ಆ ಕಾಲಲ್ಲಿ ಮಾರ್ಕುಗಳೂ ಕಮ್ಮಿ ಕಮ್ಮಿ.
ನೂರಕ್ಕೆ ಎಪ್ಪತ್ತರ ಮೇಗೆ ಸಿಕ್ಕಿರೆ ವಿಶೇಷ ಶ್ರೇಣಿ ಹೇದು ಲೆಕ್ಕ. ರೇಂಕು ಬಪ್ಪಲೂ ಸಾಕು ಒಂದ್ಸಮಯ!
ಅರುವತ್ತರಿಂದ ಎಪ್ಪತ್ತರೊಳ ಆದರೆ ಪಷ್ಟ್ಳಾಸು ಮಾರ್ಕು ಇದಾ! ಭಾರೀ ಉಶಾರಿ ಹೇದು ಲೆಕ್ಕ.
ಐವತ್ತರಿಂದ ಮೇಗೆ, ಅರುವತ್ತರ ಒಳ ಆದರೆ ಸೆಕೆಂಡು ಕ್ಲಾಸು – ಸಾರ ಇಲ್ಲೆ.
ಮೂವತ್ತೈದರಿಂದ ಐವತ್ತರ ಒರೆಂಗೆ ಆದರೆ “ಅಬ್ಬ, ಪಾಸು” ಇನ್ನಾಣ ಕ್ಲಾಸು! 😉
ಮೂವತ್ತೈದರಿಂದಲೂ ಕಮ್ಮಿ ಬಂದರೆ – ಇನ್ನಾಣ ಒರಿಶವೂ ಅದೇ ಕ್ಲಾಸು!

ಆರಿಂಗೆ ಎಷ್ಟೇ ಸಿಕ್ಕಲಿ, ಅದು ಮಕ್ಕಳೊಳದಿಕೆ ಮಾಂತ್ರ. ಅವು ಎಷ್ಟೇ ಮಾರ್ಕು ತೆಗದರೂ – ಪಾಸು ಅತವಾ ಪೈಲು – ಇಷ್ಟೇ ಮಾಹಿತಿ ಅಬ್ಬೆಪ್ಪಂಗೆ ಬೇಕಾದ್ಸು.
ಈಗ ಸೌಕರ್ಯಂಗೊ ಹೆಚ್ಚಾದ ಹಾಂಗೆ ಮಕ್ಕೊ ತೆಗೆತ್ತ ಮಾರ್ಕುದೇ ಹೆಚ್ಚಾಯಿದಲ್ಲದೋ!
~

ಅದೆಲ್ಲ ಇರಳಿ, ಶುಬತ್ತೆಗೆ ಸಮದಾನ ಮಾಡುಸಲೆ ಹೇದು ಪೋನು ಮಾಡೇಕಾದ್ಸು ರೂಪತ್ತೆಯ ಕರ್ತವ್ಯ ಅಲ್ಲದೋ!
ಈಗ – ತೊಂಬತ್ತಾರು ಶೇಕಡಾ ಮಾರ್ಕು ಸಾಲದ್ದ ಶುಬತ್ತೆಗೆ ಬೇಜಾರಪ್ಪಲೆ ಕಾರಣ ಎಂತರ ಅಂಬಗ? ಒಕ್ಕಿ ಒಕ್ಕಿ ಕೇಳುವಗ ರೂಪತ್ತೆಗೆ ಗೊಂತಾತು.
ಶುಬತ್ತೆ ಮಗಳ ಕ್ಲಾಸಿಲಿ ಒಂದು ತೆಮುಳೆತ್ತಿ ಇದ್ದಾಡ.
ಒಟ್ಟಿಂಗೇ ಕಲ್ತುಗೊಂಡಿದ್ದದಡ ಅವಿಬ್ರು. ಮದಲಾಣ ಎಲ್ಲಾ ಪರೀಕ್ಷೆಲಿಯೂ ಶುಬತ್ತೆ ಮಗಳೇ ಪಷ್ಟು ಬಂದುಗೊಂಡಿದ್ದರೂ, ಈಗಾಣ ಪರೀಕ್ಷೆಲಿ ಆಚದಕ್ಕೆ ಈ ಕೂಸಿಂದ ರಜಾ ಜಾಸ್ತಿ ಮಾರ್ಕಡ. ಹಾಂಗಾಗಿ ರಿಸಲ್ಟು ಬಂದ ಲಾಗಾಯ್ತು ಶುಬತ್ತೆ ಮಗಳಿಂಗೆ ಊಟ ಮೆಚ್ಚದ್ದೆ ಮೇಗಿ ಮಾಂತ್ರ ತಿಂಬದಾಡ! 🙁

ಅದರ ಹೇಳುವಗ ಶುಬತ್ತೆಗೆ ಅಂತೂ ದುಖ್ಖ ಉಮ್ಮಳುಸಿ ಉಮ್ಮಳುಸಿ ಬಂತು – ಛೇ – ಮಗಳ ಬೇಜಾರು ಅಬ್ಬೆಗೇನೂ ಕೊಶಿಯ ಶುದ್ದಿ ಅಲ್ಲ ಇದಾ!
ಊರೇ ಅಡಿಮೇಲೆ ಆವುತ್ತ ಹಾಂಗೆ ಕೂಗಿತ್ತನ್ನೇಪ್ಪಾ! – ಎಂತ ಮಾಡೇಕು ಗೊಂತಾಗದ್ದೆ – ರೂಪತ್ತೆಯೂ ಕಣ್ಣೀರು ಹಾಕಿಂಡತ್ತಾಡ ಪಾಪ.
ಹಾಂಗುದೇ ಕೂಗಲೆ ಪುಗ್ಗೆ ಹೊಟ್ಟಿತ್ತೋ – ಕೇಳುಗು ನೆಗೆಮಾಣಿ.
~

ಕಲ್ತದಕ್ಕೆ ಸರೀಯಾಗಿ ಮಕ್ಕೊ ಬರೆತ್ತವು, ಬರದ್ದಕ್ಕೆ ಸರೀಯಾಗಿ ತಿದ್ದುತ್ತವು; ತಿದ್ದಿದ್ದಕ್ಕೆ ಸರೀಯಾಗಿ ಕೈ ತುಂಬ ಮಾರ್ಕೂ ಕೊಡ್ತವು.
ಈಗ ಅದರ ಕ್ಲಾಸಿನ ಯೇವದೋ ಕೂಸಿಂಗೆ ಇದರಿಂದ ರಜ ಮಾರ್ಕು ಜಾಸ್ತಿ ಸಿಕ್ಕಿತ್ತು ಹೇಳಿಗೊಂಡು ಹೀಂಗೆಲ್ಲ ರಂಪ ಮಾಡಿರೆ ಅಕ್ಕೋ?!
ಅಂಬಗ, ಎಷ್ಟೋ ಮಕ್ಕೊಗೆ ಪಾಸು ಅಪ್ಪಲೂ ಎಡಿಯದ್ದ ಪರಿಸ್ಥಿತಿಲಿ ಇದ್ದವು, ಅವು ಎಂತ ಮಾಡೇಕು?

ಒಂದು ವೇಳೆ ಕೇಡಿನ ದುಃಖ ತಡವಲೆಡಿಯದ್ದೆ ಕೂಸಿಂಗೆ ಬೇಜಾರಾತು ಮಡಿಕ್ಕೊಂಬೊ, ಕೂಸು ಕೂಗಲಿ, ಅದರೊಟ್ಟಿಂಗೆ ಕೂಸಿನ ಅಬ್ಬೆ, ಶುಬತ್ತೆಯೂ ಕೂಗಿರೆ ಹೇಂಗಕ್ಕು?
ಅಷ್ಟಕ್ಕೂ ಇದು ಪಾಸಿ ಶಿಕ್ಷೆ ಅಲ್ಲ, ಪರೀಕ್ಷೆ ಮಾರ್ಕು.
ಜೀವ ಹೋಪ ಪರೀಕ್ಷೆ ಅಲ್ಲ, ಬರೇ ಹತ್ತನೇ ಕ್ಳಾಸಿನ ಪರೀಕ್ಷೆ ಅಷ್ಟೆ.
ಒಂದೊಂದರಿ ಆಲೋಚನೆ ಮಾಡುವಗ ವಿಚಿತ್ರ ಕಾಣ್ತಪ್ಪೋ!

~

ಶುಬತ್ತೆ ಮಗಳಿಂಗೆ ಪರೀಕ್ಷೆಲಿ ಮಾರ್ಕು ತೆಗದು ಉಶಾರಿ ಅಪ್ಪದರಿಂದಲೂ ಮುಖ್ಯವಾಗಿ, ಆಚ ಕೂಸಿಂಗೆ ಕಮ್ಮಿ ಸಿಕ್ಕೇಕು ಹೇದು ಮನಸ್ಸಿಲಿದ್ದತ್ತು. ಶುಬತ್ತೆಯೇ ದಿನಾಗುಳೂ ಓದುಸುವಗ ಮನಸ್ಸಿಂಗೆ ತುಂಬುಸಿದ್ದೋ ಏನೋ – ಅಲ್ಲದ್ದರೆ ಆ ಮಗುವಿನ ಹಸಿ ಮನಸ್ಸಿಲಿ ಹಾಂಗೊಂದು ಕೇಡು ಎಳಗುತ್ಸು ಹೇಂಗೆ?!
ಜೀವನಲ್ಲಿ ತಾನು ಗೆಲ್ಲೇಕು ನಿಜ, ಆದರೆ ಆಚವನ ಸೋಲುಸಿಯೇ ತಾನು ಗೆಲ್ಲೇಕು ಹೇದರೆ ಹೇಂಗಕ್ಕು?

~

ಶುಬತ್ತೆ ಕೂಗಿತ್ತೋ, ರೂಪತ್ತೆ ಕೂಗಿತ್ತೋ – ಹೀಂಗಿರ್ತ ವಿಚಿತ್ರ ಸಂಗತಿ ಕೇಳಿ ಒಪ್ಪಣ್ಣಂಗಂತೂ ನಿಜವಾಗಿ ಬೇಜಾರಾತು!
ಮತ್ತೆ, ಈ ಒರಿಶದ ಶಾಲೆ ಸುರು ಆತು. ಹೊಸ ಕ್ಲಾಸು, ಹೊಸ ಮಕ್ಕೊ.
ಚೆಂದಕೆ ಪಾಟ ಕಲ್ತು, ಸಹಪಾಟಿಗಳನ್ನೂ ಗೆಲ್ಲುಸಿ, ತಾನೂ ಗೆಲ್ಲುವ ಶುಭ್ರವಾದ ಮನಸ್ಸಿಂದ ಮಕ್ಕಳ ಬೆಳೆಶುವ ಜೆಬಾದಾರಿ ಎಲ್ಲ ಅಪ್ಪಮ್ಮಂದ್ರಿಂಗೆ ಇರ್ತು. ಅಲ್ಲದೋ?
ಮಕ್ಕಳ ಹಸಿಮನಸ್ಸಿಂಗೆ ಕೇಡು ತುಂಬುಸುತ್ತ ಬದಲು ಜ್ಞಾನ ತುಂಬುಸಿರೆ ಮುಂದಕ್ಕೆ ಸದುಪಯೋಗ ಸಿಕ್ಕುಗು.

~

ಒಂದೊಪ್ಪ: ಧೈರ್ಯ ತುಂಬುಸೇಕಾದ ಅಬ್ಬೆಪ್ಪನೇ ಬೆಪ್ಪನ ಹಾಂಗೆ ಮಾಡಿರೆ ಅಕ್ಕೋ?

ಸೂ: ಪಟ ಅಂತರ್ಜಾಲ ಕೃಪೆ

14 thoughts on “ಪರೀಕ್ಷೆಲಿ ತಾನು ಗೆದ್ದರೆ ಸಾಲ, ಆಚವನ ಸೋಲುಸೇಕು..!?

  1. ಈಗಣ ಕಾಲಲ್ಲಿ ಮಾರ್ಕ್ಸ್ ಇಂಪಾರ್ಟೆಂಟ್ ಬರೆ ಇಂಟರ್ವ್ಯೂ ಎಟೆ೦ಡ ಮಾಡಲೇ(CUT OFF)……………..ಇಂಟರ್ವ್ಯೂಲಿ ಬೆಕಪ್ಪದು ನಮ್ಮ KNOWLEDGE………..

  2. ಈ ಲೇಖನ ಓದಿ ಅಪ್ಪಗ ಸಧ್ಯ ಓದಿದ ಒ೦ದು ಮೈಲ್ ನೆನಪಾತು. ಅದರ ಹಾ೦ಗೇ ಹಾಕುತ್ತಾ ಇದ್ದೆ.

    Topic: Culling of Creativity
    ——————————————————————————–

    Creativity is a combination of imagination and original ideas, that requires fearless and no inhibition exploration of the ordinary and accepted. Question the unquestionable. Kids tend do this naturally. You will be amazed at the depth of some of the questions thrown by kids. For instance, “what is beyond the blue sky?”. However, the society and education system seems to cultivate the exact opposite. The moment any questions/thoughts are ridiculed, laughed at, ignored, society and education system sends a message “watch out before you talk/think”, a real constraint on creativity. Lot of times it is the grown-ups that unconsciously impose their own limitations on the hidden potentials of next generation. I seem to think, the more one is educated, the more the person becomes institutionalized, and less creative. No wonder the list of famous smart guys who dropped out of education system, -Henry Ford, Bill Gates, Mark Zuckerberg , Walt Disney, Albert Einstein, Isaac newton, Steven Spielberg – is really long. I am sure there are highly educated, creative people too, but I guess they had the right mentors to encapsulate them from the restraints of traditional education system!

    Here is a great hilarious and insightful video, (http://www.ted.com/talks/ken_robinson_says_schools_kill_creativity.html) a must watch. Education system, world over, needs a big overhaul, until then take it upon yourself to encourage creativity.

  3. ಒಟ್ಟಾರೆ ತಮಿಳೆತ್ತಿಗೆ ನಾಕು ಮಾರ್ಕು ಜಾಸ್ತಿ ಬಂದು ಶುಬತ್ತೆಗೆ ತಲೆಬೆಶಿಯೇ ತಲೆ ಬೆಶಿ. ಮಗಳಿಂಗೆ ಬೇಜಾರು ಆಗಿ ಊಟ ಮೆಚ್ಚದ್ದೆ ಮ್ಯಾಗಿ ತಿಂದದು ಲಾಯಕಾಯಿದು. ಈಗಾಣ ಕಾಲದ ಹೆಚ್ಚಿನ ಅಬ್ಬೆ ಅಪ್ಪಂದ್ರ ಪರಿಸ್ಥಿತಿ ಇದುವೇ. ಪರೀಕ್ಷೆಲಿ ಒಳ್ಳೆ ಮಾರ್ಕು ಬರೆಕು ನಿಜ. ಆದರೆ ಮಾರ್ಕೇ ಸರ್ವಸ್ವ ಅಪ್ಪಲಾಗ. ಕಡೇಣ ಒಪ್ಪ ಒಪ್ಪುವ ಹಾಂಗಿದ್ದು. ಒಪ್ಪಣ್ಣನ ಸ್ವಾರಸ್ಯಕರ ಸುದ್ದಿ ಓದಲೆ ನಾಕು ದಿನ ತಡ ಆತಾನೇ ಹೇಳಿ ಬೇಜಾರು ಮಾಡ್ಯೊಂಡೆ.

  4. ಈ ಸುದ್ದಿ ಓದುಗ ಒಂದು ಕಥೆ ನೆಂಪಾವುತ್ತು.
    ಆಚೀಚೆ ಮನೆಯ ಎರಡು ಜೆನ ತಪಸ್ಸು ಮಾದ್ಲೆ ಹೆರಟವಡ. ಒಬ್ಬನ ಕಂಡರೆ ಒಬ್ಬಂಗೆ ಆವುತ್ತಿಲ್ಲೆ.
    ಒಬ್ಬಂಗೆ ದೇವರು ಮದಲು ಪ್ರತ್ಯಕ್ಶ ಆಗಿ ಎಂತ ಬೇಕು ಹೇದು ಕೇಳಿದನಡ . ಆಗ ‘ಆಚೆಯವಂಗೆ ಎಂತ ಕೊಡ್ತೆ ಅದರ ಡಬ್ಬಲ್ ಎನಗೆ ಕೊಟ್ತರೆ ಸಾಕು’ ಹೇದನಡ.
    ‘ತಥಾಸ್ತು ‘ ಹೇದಿಕ್ಕಿ ದೇವರು ಹೋದನಡ.

    ಮತ್ತೆ ಇನ್ನೊಬ್ಬಂಗೆ ಪ್ರತ್ಯಕ್ಶ ಆಗಿ ದೇವರು ‘ಎಂತ ವರ ಬೇಕು’ ಕೇಳಿದನಡ . ಆಗ ಅವ ಆಚೆಯವ ಎಂತ ಕೇಳಿದ್ದ ಹೇದು ಕೇಳಿದನಡ.
    ಅವ ನೀನು ಎಂತ ಕೇಳ್ತೆಯೋ ಅದರ ಡಬ್ಬಲ್ ಆವುತ್ತ ವರ ಕೇಳಿದ್ದ ಹೇದು ದೇವರು ಹೇಳಿಯಪ್ಪಗ ಇವಂಗೆ ಬೆಶಿ ಆತಡ.
    ಎಂತ ಮಾಡುದು ಹೇದು ಆಲೋಚನೆ ಮಾಡಿ ಒಂದು ಕಾಲು ,ಒಂದು ಕೈ, ಒಂದು ಕೆಮಿ , ಒಂದು ಕಣ್ಣು ಕಾಣದ್ದ ವರ ಕೊಡು ಹೇದನಡ.
    ದೇವರು ‘ತಥಾಸ್ತು’ ಹೇದಪ್ಪಗ ಇವನ ಒಂದು ಕಾಲು, ಕೈ, ಕೆಮಿ ,ಕಣ್ನು ಹೋತಡ . ಆಚೆಯವನದ್ದು ಎರಡೂ ಹೋತಡ!!!!!!!!

  5. {…….“ಮದಲಿಂಗೆಲ್ಲ ಶಾಲೆಗೊ ಕಮ್ಮಿ, ಸೌಕರ್ಯಂಗೊ ಕಮ್ಮಿ. ಆ ಕಾಲಲ್ಲಿ ಮಾರ್ಕುಗಳೂ ಕಮ್ಮಿ ಕಮ್ಮಿ.}
    ಹೋ.. ಆದಿಕ್ಕು ಭಾವ, ಆನು ಕಳುದ 25ದು ವರುಶ೦ದ ಬರೆತ್ತೆ.. ಮಾರ್ಕು ಕಮ್ಮಿಯಾವುತ್ತೇವಿನ.. ಹಿಚ್ಚುತ್ತಿಲ್ಲೆ….

  6. ಮಾರ್ಕು..!! ಈ ಪದವ ಕೇಳುವಾಗಲೆ ಇ೦ದ್ರಾಣ ದಿನಲ್ಲಿ ಇಪ್ಪ ಒ೦ದು tuff competition ನೆ೦ಪಾವುತ್ತು.. ಶರ್ಮಪ್ಪಚ್ಚಿ ಹೇಳಿದಾ೦ಗೆ, ಮಾರ್ಕು ಇಲ್ಲದ್ರ ಇ೦ದ್ರಾಣ ದಿನಲ್ಲಿ ( ಈ ರಿಸರ್ವೇಶನ್, ಇನ್ಫುವೆನ್ಸ್, ಮತ್ತೊ೦ದು ) ಇಪ್ಪ ಜಗತ್ತಿಲ್ಲಿ ನಮ್ಮ೦ತ್ತವಕ್ಕೆ ಉದ್ಯೊಗ ಆಗಲಿ, ಒಳ್ಳೆ ಕೋಲೆಜಿಲ್ಲಿ ಸೀಟು ಸಿಕ್ಕುದು ಕಷ್ಟವೇ ನಿಜ… ಹಾ೦ಗಾಗಿ ನಾವು ತೆಗವ ಮಾರ್ಕು ನಮ್ಮ ಮು೦ದಾಣ ಭವಿಷ್ಯಕ್ಕೆ ಒ೦ದು ಅಡಿಪಾಯವೇ ಸರಿ…
    ಆದರೂ, ಒ೦ದು ಲೆಕ್ಕಲ್ಲಿ ನೋಡಿರೆ ಒಪ್ಪಣ್ಣ ಹೇಳಿದ ಒ೦ದು ಮಾತು ೧೦೦ ರಕ್ಕೆ ೧೦೦ರು ಸತ್ಯ..
    “… ’ಜೀವನಲ್ಲಿ’ ತಾನು ಗೆಲ್ಲೇಕು ನಿಜ, ಆದರೆ ಆಚವನ ಸೋಲುಸಿಯೇ ತಾನು ಗೆಲ್ಲೇಕು ಹೇದರೆ ಹೇಂಗಕ್ಕು?”
    ಆದರೆ ಒಪ್ಪಣ್ಣೊ, ಒಬ್ಬಗೆಲ್ಲೆಕಾರೆ ಮತ್ತೊಬ್ಬ ಸೋಲಲೇ ಬೇಕು ಅಲ್ಲದೋ ಒಪ್ಪಣ್ಣೋ?? ಎಲ್ಲರೂ ಗೆಲ್ಲಲ್ಲೆ ಎಡಿಯ… ಎಲ್ಲರೂ ಪಷ್ಟು ಬಪ್ಪಲೆ ಎಡಿಯಾ..!!
    ಆದರೆ ಇದರ ಹಿ೦ದೆ ಇಪ್ಪ, ಒ೦ದು ಅ೦ಶವ ನಾವು ಅರಿಯೆಕು… ಪರೀಕ್ಷೆಲಿ ಆಗಲಿ, ಜೀವನಲ್ಲೆಯೇ ಆಗಲಿ ಎಲ್ಲರೂ ಗೆಲ್ಲಲೆ ಪ್ರಯತ್ನಮಾಡೆಕು.. ಹಾ೦ಗೆ ಹೇಳಿ ಏವತ್ತು ಗೆಲ್ಲೆಕು ಹೇಳಿಯೂ ಇಲ್ಲೆ, ಸೋಲೆಕು ಹೇಳಿಯೂ ಇಲ್ಲೆ..!! ಸೋತರೂ, ನಾವು ಸೋಲಿನ ಹೇ೦ಗೆ ತೆಕ್ಕೊಳ್ತು ಅದರಲ್ಲಿ ಇಪ್ಪದು.. ನಮ್ಮ ಮಕ್ಕಗೆ ಇದರ ನಾವು ಕಲುಶೆಕು, ಬಿಟ್ಟು ಯಾವತ್ತು ನೀನು ಅವನ ನೋಡು, ಇವನ ನೋಡು ಹೇಳಿ ಒಬ್ಬನ ಒಬ್ಬ ಅಳವ ಕೆಟ್ಟ ಅಬ್ಯಾಸವ ಸಣ್ಣದಿಪ್ಪಗಳೇ ಕಲುಶುದು ಬಾರಿ ದೊಡ್ಡ ತಪ್ಪು…. ಬದಲಾಗಿ ನಾವು ನಮ್ಮ ಹಿ೦ದಿನ ಸ್ತಿತಿಗು ಇ೦ದ್ರಾಣ ಸ್ತಿತಿಗೂ ಅಳದು ಮು೦ದೆ ಹೋಪ ಇನ್ನು ಹೆಚ್ಚು ಬೆಳವ ಗುರಿ ನಮ್ಮಲ್ಲಿ ಬೆಳೆಶುದು ಉತ್ತಮ ಹೇಳಿ ಕಾಣ್ತು..

  7. ಮಾರ್ಕ್ ಹೇಳುವದು ಪ್ರಯೋಜನಕ್ಕೆ ಬಪ್ಪದು ಮುಂದಾಣ ವಿದ್ಯಾಭ್ಯಾಸಕ್ಕೆ ಹೋಪಗ, ಅಲ್ಲಿ ಲಿಮಿಟೆಡ್ ಸೀಟ್ ಇಪ್ಪಗ. ಅದು ಬಿಟ್ರೆ ರೇಂಕ್ ತೆಕ್ಕೊಂಡವಾದರೂ ಜೀವನಲ್ಲಿ ಯಶಸ್ವಿ ಆಯಿದವು ಹೇಳ್ಲೆ ಬತ್ತಿಲ್ಲೆ. ಕಮ್ಮಿ ಮಾರ್ಕ್ ತೆಗದವು ಅದೆಷ್ಟೋ ಜೆನಂಗೊ ಜೀವನಲ್ಲಿ ಎತ್ತರಕ್ಕೆ ಏರಿದವು ಇದವು.
    ಮೂರು ವರ್ಶ ಅಪ್ಪಗಳೇ ಶಾಲೆಗೆ ಕಳುಸಿ, ಅವಕ್ಕೆ ಹೋಂ ವರ್ಕ್ ಹೇಳಿ ಹಿಂಸೆ ನೀಡಿ, ಬೇರೆ ಮಕ್ಕಳೊಟ್ಟಿಂಗೆ ಆಡ್ಲೆ ಕೂಡಾ ಬಿಡದ್ದೆ, ಮಾರ್ಕ್ ತೆಗವದೇ ಜೀವನದ ಗುರಿ ಹೇಳಿ ತಲೆಗೆ ತುರ್ಕಿಸಿ ಮಡುಗವ ಹೆತ್ತವು.
    ಈ ವಿಶ್ಯಲ್ಲಿ ಮೊದಾಲು ಜಾಗೃತಿ ಮೂಡೆಕ್ಕಾದ್ದು ಹೆತ್ತವಕ್ಕೆ.

    1. ಅಪ್ಪಚಿ ಸತ್ಯ ಮಾತು..

  8. ಮಾರ್ಕ್ ರಾಂಕ್ ಎಲ್ಲಾ ಕೇವಲ ಹೆಸರಿಂಗೆ ಮಾತ್ರ ಕೆಲವೊಂದರಿ ಉಪಕಾರಕ್ಕೆ ಬಕ್ಕು ಆದರೆ ಎನ್ನ ಲೆಕ್ಕಲ್ಲಿ ಜೀವನದ ಅನುಭವ ಆದರೆ ಮಾತ್ರ ಜೀವನಲ್ಲಿ ಯಶಸ್ಸು ಸಾಧುಸುಲೆ ಸಾಧ್ಯ.ಕೇವಲ mark ಒಂದರಿಂದ ಎಲ್ಲವನ್ನು ಅಳವ ಬುಧ್ಧಿಯ ಹಿರಿಯರು ಬಿಡೆಕ್ಕು..ಅದೂ ಅಲ್ಲದ್ದೆ mark ತೆಗವಲೆ ಒತ್ತಡ ಹಾಕುಲಾಗ ಹೇಳಿ ಎನ್ನ ಅಭಿಪ್ರಾಯ..ಕಲ್ತ ವಿಶಯವ ಉಪಯೋಗುಸುಲೆ ಗೊತ್ತಿಲ್ಲದ್ರೆ ಎಸ್ಟೇ mark ಬಂದರೂ ಪ್ರಯೋಜನ ಇಲ್ಲೆ…

  9. ತು೦ಬಾ ಲಾಯಿಕಾಯಿದು. { ಜೀವನಲ್ಲಿ ತಾನು ಗೆಲ್ಲೇಕು ನಿಜ, ಆದರೆ ಆಚವನ ಸೋಲುಸಿಯೇ ತಾನು ಗೆಲ್ಲೇಕು ಹೇದರೆ ಹೇಂಗಕ್ಕು? } ಎನಗೆ ಇಷ್ಟ ಆತು.

  10. ಒಪ್ಪಣ್ಣೋ…
    ಫಕ್ಕನೆ,ಯೇವಗಳೋ ಒಂದರಿ ಆ ಆಮಿರ್ ಖಾನನ “ತ್ರಿ ಈಡಿಯಟ್ಸ್” ನೆಂಪಾತೆನಗೆ ಈ ಶುದ್ದಿ ಓದಿಯಪ್ಪದ್ದೆ. ಮಕ್ಕಳ ಮಾರ್ಕು ತೆಗವ ಮೆಶಿನ್ನಿನ ಹಾಂಗೆ ಬೆಳೆಸಿದರೆ ಸಾಕೋ.? ಒಳ್ಳೆ ಶುದ್ದಿಯ ಹಾಸ್ಯಮಯವಾಗಿ ಬರದ್ದು ಲಾಯಕಾಯಿದು.
    ಅದಿರಳಿ, ಡಾ. ಮಹೇಶನ ಮದುವೆ ಗೌಜಿಯೋ..? ಎಷ್ಟು ಬಗೆ ತಾಳ್ಳು,? ಭಕ್ಷ್ಯ ಎಂತೆಲ್ಲ ?, ಜೆನ ಎಷ್ಟಕ್ಕು ?, ಊಟಕ್ಷಿಣೆ ಸರ್ವಾಣಿಯೋ, ಅಲ್ಲ ಹಂತಿಲಿ ಕೂದವಕ್ಕೆ ಮಾಂತ್ರವೋ..? ಎಂತ ಕತೆ ?

  11. ಮಾರ್ಕಿನ ತೆಗೆದು ಹಾಕಿ ಗ್ರೇಡ್ ಪದ್ಧತಿ ಮಾಡಿರೂ ಇಂತ ರಂಪ ಇದ್ದೇ ಇದ್ದು. ಡಿ.ವಿ.ಜಿ .ಕಗ್ಗಲ್ಲಿ ಹೇಳಿದ ಹಾಂಗೆ

    ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ ।
    ಅವರೆಷ್ಟು ಯಶವಂತರೆನುವ ಕರುಬಿನಲಿ॥
    ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು।
    ಶಿವನಿಗೆ ಕೃತಜ್ಞತೆಯೆ? – ಮಂಕುತಿಮ್ಮ॥

    ನಮಗೆ ಇಪ್ಪದರ ಮರೆತ್ತು ಬಾಕಿದ್ದವರ ಬಗ್ಗೆ ಮತ್ಸರ ಪಡುದು ತಪ್ಪು-ನಾವು ನಮಗೆ ಎಲ್ಲವನ್ನೂ[ ಅಥವಾ ಇಪ್ಪಷ್ಟನ್ನಾದರೂ]ಕೊಟ್ಟ ದೇವರಿಂಗೆ ಮಾಡುವ ಅಪಚಾರ ಅಲ್ಲದೊ?

  12. ಮಹೇಶ೦ಗೆ ಶುಭಾಶಯ೦ಗೊ.. 🙂
    ಶಾಲೆ ಪರೀಕ್ಷೆಲಿ ಪಷ್ಟು ಬ೦ದವು ಜೀವನಲ್ಲಿಯೂ ಪಷ್ಟು ಬರೆಕು ಹೇಳಿ ಎ೦ತು ಇಲ್ಲೆನ್ನೆ. ಹಾ೦ಗೆಯೇ ಪಷ್ಟು ಬಾರದ್ದ ಮಕ್ಕೊ ಮು೦ದೆ ಜೀವನದ ಪರೀಕ್ಷೆಲಿ ಗೆಲ್ಲ ಹೇಳಿಯೂದೆ ಇಲ್ಲೆನ್ನೆ! ಮತ್ತೆ ಎ೦ತಕೆಪ್ಪಾ ಇಷ್ಟೆಲ್ಲ ಸರ್ಕಸ್ಸು..!!
    ಒಪ್ಪ೦ಗೊ ಒಪ್ಪಣ್ಣಾ..

  13. ಚಿತ್ರ ವಿಚಿತ್ರ ವ್ಯಕ್ತಿತ್ವಂಗೊ ! ವಿಚಿತ್ರ ಆದರೂ ಸತ್ಯಂಗೊ.!! ಸತ್ಯವ ವಿಚಿತ್ರ ಆಗದ್ದೆ ಚಿತ್ರಿಸಿದ್ದೇ ಸ್ವಾರಸ್ಯ. ಒಂದೊಪ್ಪದ ಮದಲಾಣ ಗೆರೆ ಅಂತೂ ಸತ್ಯ ಸತ್ಯ, ಇಂಟರ್ ನೆಟ್ಟಿಂದ ಬಲುಗಿ ಹಾಕಿದ ಪಟವೂ ಲಾಯ್ಕ ಆಯ್ದು ಹೇದು ಹೇಳುತ್ತಿಲ್ಲಿಂದ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×