Oppanna.com

ಧ್ವನ್ಯಾರ್ಥ ಇಲ್ಲದ್ದರೂ, ಭಾವಾರ್ಥ ಇಪ್ಪ ‘ಪರಿಭಾಶೆಯ’ ಪದಾರ್ಥಂಗೊ…

ಬರದೋರು :   ಒಪ್ಪಣ್ಣ    on   09/09/2011    70 ಒಪ್ಪಂಗೊ

ಶಂಬಜ್ಜ° ಮಾತಾಡುವಗ ಧಾರಾಳ ಪಳಮ್ಮೆಗಳ ಸೇರುಸುಗು.
ಅವು ಸೇರುಸುಗು ಹೇಳ್ತರಿಂದಲೂ, ಅವು ಮಾತಾಡುವಗ ಸೇರಿ ಹೋವುತ್ತು.
ಆಯಾ ಸಂದರ್ಭಕ್ಕೆ ಹೊಂದುತ್ತ ನಮುನೆ, ವೆಗ್ತಿತ್ವಂಗಳ ಭಾವನೆಯ ಅಭಿವ್ಯಕ್ತಿ ಮಾಡ್ತ ನಮುನೆಯ – ಅನುಭವಪೂರಿತ ಗಾದೆಗಳ ಹೇಳಿರೆ, ಎದುರು ಇಪ್ಪೋನಿಂಗೆ ವಿಶಯ, ವಿಚಾರಂಗೊ ಬೇಗ ತಲಗೆ ಇಳಿತ್ತು.
ಈ ನಮುನೆ ಗಾದೆಗಳಲ್ಲಿ ನೆಗೆಯೂ ಬಕ್ಕು, ವಿಶಯವೂ ಅರ್ತ ಅಕ್ಕು – ಅದೂ ಅಲ್ಲದ್ದೆ, ಹತ್ತು ವಾಕ್ಯದ ವಿವರಣೆ ಕೇವಲ ಒಂದೇ ವಾಕ್ಯದ ಗಾದೆಲಿ ನಿಮುರ್ತಿ ಅಕ್ಕು!
ಹಾಂಗಾಗಿಯೇ, ಎಷ್ಟೋ ಅಜ್ಜಂದ್ರ ಬಾಯಿಲಿ ಇದ್ದತ್ತು – ಶಂಬಜ್ಜನ ಬಾಯಿಲಿಯೂ ಇದ್ದತ್ತು!

ಈಗ ರಂಗಮಾವಂದೇ ಹಾಂಗೇ – ಎಂತಾರು ಮಾತಾಡುವಗ ಅಪುರೂಪಲ್ಲಿ ಪಳಮ್ಮೆಗಳ ಹೇಳ್ತದೂ ಇದ್ದು.
ಹಳೇ ಪಳಮ್ಮೆಗೊ ರಜ ಕಮ್ಮಿಯೇ ಆದರೂ, ಹಳೆ ಪರಿಭಾಶೆಗೊ ಬಂದೇ ಬಕ್ಕು.

ಇದೆಂತರ ಈ ಪರಿಭಾಶೆ?
ಭಾಶೆಲಿ ಬೆರಕ್ಕೆ ಆಗಿ ಇಪ್ಪ ಹಾಸ್ಯವನ್ನೂ ಒಳಗೊಂಡಿಪ್ಪ ಶಬ್ದಂಗೊ..
ಯೇವದಾರು ವಿಶಯ ವರ್ಣನೆ ಮಾಡುವಗ ಎಡೆಲಿ ಬಳಸುತ್ತ ಒಂದೊಂದು ಪದಗುಚ್ಛ.
ಇಡೀ ಭಾವನೆಯ ಒಂದೇ ಶಬ್ದಲ್ಲಿ ಹೇಳ್ಳಕ್ಕಾದ ಶೆಬ್ದಗುಚ್ಛ!
ಇಡೀ ಮಾತಿಂಗೆ ಅರ್ಥ, ರುಚಿ ಕೊಡ್ತ; ಸ್ವತಃ ಅರ್ಥವೇ ಇಲ್ಲದ್ದ ಬೆಂದಿ-ಪದಾರ್ಥ!

ಹೇಂಗಿರ್ತದು ಹೇಳಿ ಅಂದಾಜಿ ಆತೋ?
ಉದಾಹರಣೆಗೆ ಹೇಳ್ತರೆ, ಈ ಸರ್ತಿ ಮಳೆ ಜಾ..ಸ್ತಿ, ಎಲ್ಲೋರಿಂಗೂ ಗೊಂತಿಪ್ಪದೇ.
ನಿತ್ಯವೂ ಮಳೆ, ದಿನ ಹೋದಾಂಗೇ ಅಡಕ್ಕೆಗೆ ಕೊಳೆರೋಗದ ಸಾಧ್ಯತೆ ಜಾಸ್ತಿಯೇ ಆಗಿ ಹೋವುತ್ತು.
ಈ ನಮುನೆ ಮಳೆ ಬಂದರೆ ಮೂರ್ನೇ ಸರ್ತಿ ಮದ್ದು ಬಿಡದ್ದೆ ಕಳೀಯ – ಹೇಳ್ತದು ರಂಗಮಾವನ ಅಭಿಪ್ರಾಯ.
ಆದರೆ, ಮದ್ದು ಬಿಡೇಕಾರೆ ಮಳೆ ಬಿಡ್ಳೇ ಬೇಕಲ್ಲದೋ?! – ಈಗ ನಾಕು ದಿನಂದ ಬಿಡದ್ದೇ ಮಳೆ.
ನಾಕು ದಿನಂದ ಮದಲು ಒಂದು ದಿನ ಒಳ್ಳೆತ ಬೆಳಿಕ್ಕಿರಿ (ಬೆಶಿಲು) ಇದ್ದತ್ತು.
ಚೆ, ಆ ದಿನ ಮದ್ದು ಬಿಟ್ಟಿಕ್ಕಲಾವುತಿತ್ತು
ಹೇಳಿ ಅನುಸಿದ ರಂಗಮಾವಂಗೆ “ಅಯ್ಯನಮಂಡೆ” – ಹೇಳಿ ಆವುತ್ತಾ ಇದ್ದು!!

ಅದಾ ಗಮನುಸಿದಿರೋ – ಅಯ್ಯನಮಂಡೆ ಹೇಳಿರೆ, ಅದಕ್ಕೆ ಸ್ವತಃ ಬೇರೆ ಎಂತೂ ಅರ್ತ ಇರ, ಪಶ್ಚಾತ್ತಾಪ ಸೂಚಕ ತಮಾಶೆ ಶಬ್ದ ಅದು.
ಅದರ ಕೇಳಿದ ಒಪ್ಪಣ್ಣಂಗೆ ರಜ ನೆಗೆ ಬಂದೇ ಬಕ್ಕು; ಆದರೆ ನೆಗೆಮಾಡಿರೆ ರಂಗಮಾವಂಗೆ ಪಿಸುರು ಜೋರೇ ಆಗಿ ಹೋಕಿದಾ! 😉
~

ಅಂದೊಂದರಿ ಬೈಲಿಲಿ ಕೊಂಡಾಟಲ್ಲಿ ದೆನಿಗೆಳುತ್ತ ಕೊಂಞೆಶಬ್ದಂಗಳ ನಾವು ಪಟ್ಟಿ ಮಾಡಿದ್ದು ಬೈಲಿಲಿ. (ಸಂಕೊಲೆ)
ಅದಾದ ಮತ್ತೆ ನಮ್ಮ ಬೈಲಿಲೇ ಕೇಳ್ತ ನಮುನೆಯ ‘ಬೈಗಳುಗಳ’ ಶೆಬ್ದಂಗಳನ್ನೂ ಜೆಮೆ ಮಾಡಿಗೊಂಡು ಹೋಯಿದು (ಸಂಕೊಲೆ).
ಹಾಂಗೇ, ಈಗ ಈ ನಮುನೆ ಮಾತಿನೆಡೆಯ ಪರಿಭಾಶೆಗಳ ಏಕೆ ಸೇರುಸಿಗೊಂಡು ಹೋಪಲಾಗ – ಹೇಳಿ ಕಂಡತ್ತು!
ಹೇಂಗೆ  – ಪಟ್ಟಿ ಮಾಡುವನೋ?
ಒಪ್ಪಣ್ಣ ಒಬ್ಬನೇ ಮಾಡಿರೆ ಪೂರ್ತಿ ಆಗ, ಬೈಲಿನೋರು ಎಲ್ಲೋರುದೇ ಸೇರಿರೆ ಸಮಗಟ್ಟು ಅಕ್ಕಿದಾ!
ಪ್ರತಿ ಶೆಬ್ದ ಆದ ಮತ್ತೆಯೂ ಅದರ ಉಪಯೋಗ ಹೇಂಗೆ – ಹೇಳ್ತ ಉದಾಹರಣೆಯನ್ನೂ ಮಾತಾಡಿಗೊಂಬೊ° – ಅಷ್ಟಪ್ಪಗ ಬಳಕೆ ಮಾಡ್ತೋನಿಂಗೆ ಸುಲಾಬ ಅಕ್ಕಿದಾ! 🙂

~
ಸೂ: ಪಟ್ಟಿಮಾಡುವಗ ‘ಆದಿಕ್ಷಾಂತ’ ಕ್ರಮಲ್ಲೇ ಮಾಡಿರೆ ಜೋಡುಸಲೆ ಕೊಶೀ. ಅಲ್ಲದೋ?

ಅ:
ಅಯ್ಯನ ಮಂಡೆ:
ಪಶ್ಚಾತ್ತಾಪ ಸೂಚಕ ಶೆಬ್ದ!
ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಟ್ಟುಗೊಂಡು ಈ ಮಾತಿನ ಹೇಳುಗು.
ಯೇವದೋ ಒಂದು ಕಾರ್ಯ ಮಾಡೇಕಾತು – ಆದರೆ ಅಂಬಗ ಮಾಡಿದ್ದಿಲ್ಲೆ / ಮಾಡ್ಳಾವುತಿತಿಲ್ಲೆ – ಹೇಳ್ತ ಸಂದರ್ಭವ ವಿವರುಸುವಗ ಈ ಮಾತಿನ ಹೇಳ್ತವು ರಂಗಮಾವ°. ಒಂದು ಉದಾಹರಣೆ ಆಗಳೇ ಮಾತಾಡಿದ್ದು.
ಇನ್ನೊಂದು ಬೇಕಾರೆ,
ಇದಾ, ನಮ್ಮ ನೆಕ್ರಾಜೆಅಪ್ಪಚ್ಚಿಯ ತಮ್ಮ ಇದ್ದವಲ್ಲದೋ – ನೆಕ್ರಾಜೆಯ ಅವರ ಚಿನ್ನದ ಹಾಂಗಿರ್ತ ಜಾಗೆಯ ಮೂರುಕಾಸಿಂಗೆ ಮಾರಿಕ್ಕಿ, ಪೇಟೆಲಿ ಮನೆ ಮಾಡಿದವು – ಹತ್ತೊರಿಶ ಮದಲು. ಈಗಾಣ ರಬ್ಬರಿನ ಕ್ರಯಕ್ಕೆ ಜಾಗೆಯ ಮಡಿಕ್ಕೊಂಬಲಾವುತಿತು – ಹೇಳಿ ಕಾಂಬಗ ಅವಕ್ಕೆ “ಅಯ್ಯನಮಂಡೆ” ಆವುತ್ತು!

ಅಜ್ಜಸುರಿಯ:
ಅರೆ! / ಅಯ್ಯೊ! – ಹೇಳಿದ ಹಾಂಗೇ, ಇನ್ನೊಂದು ಶಬ್ದ.
ಇದು ನಮ್ಮ ಹಳಬ್ಬರ ಬಾಯಿಲಿ ಬಿಟ್ರೆ ಬೇರೆ ಎಲ್ಲಿಯೂ ಕೇಳಿದ ಹಾಂಗೆ ಆವುತ್ತಿಲ್ಲೆ ಇದಾ!
ಇದರ ವ್ಯಾಪ್ತಿ ಅರೆ! – ಹೇಳಿದ್ದರಿಂದಲೂ ಜಾಸ್ತಿ ಇದ್ದು; ಕೇವಲ ಆಶ್ಚರ್ಯಕ್ಕೆ ಮಾಂತ್ರ ಅಲ್ಲ, ಬಚ್ಚಿ ಅಪ್ಪಗಳೂ ಹೇಳುಗು, ಎಂತಾರು ಗಮ್ಮತ್ತಿಂದು ಕಂಡ್ರೂ ಹೇಳುಗು, ಯೇವದಾರು ಗವುಜಿಯ ವಿವರುಸುವಗಳೂ ಉದ್ಗಾರ ತೆಗಗು!

ಒಪ್ಪಣ್ಣನೇ ಹಲವು ಶುದ್ದಿಗಳಲ್ಲಿ ಈ ಶಬ್ದ ಉಪಯೋಗುಸಿದ ನೆಂಪಿದ್ದು. (ನಿಂಗೊಗೆ ನೆಂಪಿದ್ದೋ?)

ಅಜ್ಜಸುರಿಯ! ಅಡಕ್ಕಗೆ ಇನ್ನೂರಕ್ಕೆ ಹತ್ತರೆ ಎತ್ತಿತ್ತದಾ – ಹೇಳಿಗೊಂಡು ಎಡಪ್ಪಾಡಿಬಾವ° ದೊಡ್ಡಬಾವನ ಕೈಲಿ ಪೋನಿಲಿ ಹೇಳಿದನಾಡ..
ಅಜ್ಜಸುರಿಯ, ಈ ಹಾಳು ಮಾರ್ಗಲ್ಲಿ ಬದಿಯಡ್ಕಂದ ಸೂರಂಬೈಲಿಂಗೆ ಎತ್ತಲೆ ಮುಕ್ಕಾಲುಗಂಟೆ ಬೇಕಾವುತ್ತು – ಹೇಳ್ತದು ಬಸ್ಸಿಳುದ ಕೂಡ್ಳೇ ಪಾರೆ ಮಗುಮಾವ° ಹೇಳ್ತ ಮಾತು.

ಅಸ ಬಡಿ:

ಬಂಙ / ಕಷ್ಟ ಬಪ್ಪದಕ್ಕೆ ಪಾರಿಭಾಷಿಕ ಶೆಬ್ದ ಇದು. ಹಾಂಗೆ ಹೇಳಿಗೊಂಡು ಎಂತರನ್ನೂ ಬಡಿಯಲಿಲ್ಲೆ ಇದಾ 🙂
ಆಚಕರೆಲಿ ಪುಟ್ಟತ್ತೆ ಈಗಳೂ ಬಾವಿಂದ ನೀರೆಳದು ಅಸಬಡಿತ್ತವು; ಪುಟ್ಟಬಾವ° ಒಂದು ಪಂಪು ಹಾಕುಸಿದ್ದರೆ ಅತ್ತಗೆ ರಜ ಸುಲಾಬ ಆವುತಿತು. ಅವ° ಮಾಡುಸೆಕ್ಕೇ?!

ಅಲ ಫಲ:

ಕೃಷಿ ಉದುಪ್ಪತ್ತಿಗೆ ಪರಿಭಾಶೆಯ ಪದ. ತೋಟಂದ ಸಿಕ್ಕುತ್ತ ಸಮಗ್ರ ಇಳುವರಿಗೆ ಸೂಚ್ಯವಾಗಿ ಹೀಂಗೆ ಹೇಳುಗು.
ಮಾಟೆಡ್ಕ ಮಾವ°° ಬೆಂಗುಳೂರಿಲಿ ಇಪ್ಪದಾದರೂ ಅವಕ್ಕೆ ಪಾಲು ಆಯಿದಿಲ್ಲೆ. ಹಾಂಗಾಗಿ, ಊರಿನ ಅವರ ತೋಟದ ಅಲಫಲ ಪೂರ ಅವರ ತಮ್ಮನೇ ನೋಡಿಗೊಳ್ತವು.

ಅಂಬೆರ್ಪು

ಕನ್ನಡದ ಗಡಿಬಿಡಿ / ಇಂಗ್ಳೀಶಿನ ಅರ್ಜೆಂಟಿನ ತಿಳುಸುತ್ತ ಪಾರಿಭಾಶಿಕ ಶೆಬ್ದ.
ಒಟ್ಟು ಗಡಿಬಿಡಿಗಡಿಬಿಡಿ ಮಾಡಿಗೊಂಡು ವರ್ತನೆ ಮಾಡಿರೆ ಹಳಬ್ಬರು ಈ ಶಬ್ದವ ಬಳಸಿಯೇ ಬಳಸುಗು.
ಈಗ ಇಂಗ್ಳೀಶಿನ ಪ್ರಭಾವಂದಾಗಿ ಈ ಶಬ್ದ ಅಪುರೂಪ ಆದ್ಸು ಬೇಜಾರದ ಸಂಗತಿ.

ಮೊನ್ನೆ ಚೆನ್ನೈಬಾವ°° ಪೋನು ಮಾಡಿತ್ತಿದ್ದವು. ಏನು-ಒಳ್ಳೆದು ಮಾತಾಡುವ ಮದಲೇ ಮಡಗಿದವು. ಎಂತದೋ ಅಂಬೆರ್ಪಿಲಿ ಇದ್ದಿರೇಕು; ಅಲ್ಲದ್ದರೆ ಹಾಂಗೆಲ್ಲ ಬೇಗ ಮಾತಾಡಿ ಮುಗಿತ್ತ ಜೆನ ಅಲ್ಲ ಅವು!

ಅರ್ಗೆಂಟು:

ಹಠ ಮಾಡ್ತದಕ್ಕೆ ಇನ್ನೊಂದು ಪರ್ಯಾಯ. ಕೆಲವು ಸರ್ತಿ “ಗೆಂಟು” ಹೇಳಿಯೂ ಹೇಳ್ತವು.
ನಮ್ಮ ಬೈಲಿಲೇ ಒಬ್ಬ° ಅರ್ಗೆಂಟು ಮಾಣಿ ಇದ್ದ ಕಾರಣ – ಎಲ್ಲೋರಿಂಗೂ ಬೇಗ ಅಂದಾಜಿ ಅಕ್ಕಿದಾ! 😉
ನೆಗೆಮಾಣಿ ಒಂದರಿ `ಎನಗೆ ಮೇಲಾರ ಬೇಕೂ’ ಹೇಳಿ ಅರ್ಗೆಂಟು ಮಾಡಿದ್ದಕ್ಕೆ ಬಂಡಾಡಿ ಅಜ್ಜಿ ಕೈಕ್ಕೆಯ ಹಾಗಲಕಾಯಿ ಮೇಲಾರ ಮಾಡಿ ಬಳುಸಿದವಡ. 🙂

ಒರೆಂಜು:

ಪದೇ ಪದೇ ಒಂದೇ ವಿಷಯವ ಕೇಳಿಗೊಂಬದು.
ಆರಿಂಗಾರು ಎಂತದೋ ಕಾರ್ಯ ಆಯೇಕಾದರೆ, ಅದರ ನಿಂಗಳ ಹತ್ತರೆ ಪುನಾ ಪುನಾ ಹೇಳಿದವೋ – ಅಂಬಗ ಹಾಂಗೆ ಹೇಳುಲಕ್ಕು.

ಬೋಚಬಾವಂಗೆ ವಾರಕ್ಕೊಂದರಿ ಮೀಯದ್ರೂ ಬೇಜಾರಿಲ್ಲೆ, ವಾರಕ್ಕೊಂದರಿ ಚೋಕುಲೇಟು ತಿನ್ನದ್ದರೆ ಸಮ ಆವುತ್ತಿಲ್ಲೆ.
ಆರಾರು ಪೇಟಗೆ ಹೋಗಿ ಬಂದೋರಿದ್ದರೆ ಮದಾಲು ಹೋಗಿ ’ಚೋಕಿಳೇಟು ಇದ್ದೋ..’ ಹೇಳಿ ಒರೆಂಜುತ್ತ°.

ಬೈಲಿಂಗೊಂದು ಶುದ್ದಿ ಹೇಳಿ – ಹೇಳಿಗೊಂಡು ಒಪ್ಪಣ್ಣ ನಾಕೈದು ಸರ್ತಿ ಹೇಳಿಅಪ್ಪಗ ಬಟ್ಟಮಾವಂಗೆ ಇದೇ ಶಬ್ದ ನೆಂಪಾವುತ್ತೋ ಏನೋ!! 😉

ಆದೌಚ:

ಆದಾಯ-ವೆಚ್ಚ ಒಳಗೊಂಡ ದುಡ್ಡಿನ ಸಮಗ್ರ ನಿರ್ವಹಣೆಯ ಹೇಳ್ತಂತಹಾ ಶಬ್ದ.
(ಚೆನ್ನೈಭಾವಂಗೆ ಇದೊಂದು ಸಂಸ್ಕೃತಶಬ್ದದ ಹಾಂಗೆ ಕೇಳಿದ್ದಕ್ಕೆ ಡಾಮಹೇಶಣ್ಣನ ಕೈಲಿ ಕೇಳಿದವಡ! ;-))
ತರವಾಡುಮನೆ ಶಂಬಜ್ಜ ಅವಕ್ಕೆ ಮೈಕೈಲಿ ಇನ್ನೂ ತ್ರಾಣ ಇದ್ದು – ಹೇಳ್ತ ಕಾಲಕ್ಕೇ ಮನೆಯ ಆದೌಚ ರಂಗಮಾವಂಗೆ ಬಿಟ್ಟುಕೊಟ್ಟಿದವಡ.  ಮಗ° ಸರಿ ಮಾಡ್ತನೋ ನೋಡಿಕ್ಕಿ, ತಪ್ಪಿರೆ ತಿದ್ದುಲಾದರೂ ಮೈಗೆ ತ್ರಾಣ ಬೇಕನ್ನೇ – ಹೇಳ್ತ ಉದ್ದೇಶಂದ ಮದಲೇ ಕೊಟ್ಟಿಕ್ಕಿದ್ದದು.

ಎತ್ತಾ ಬತ್ತಾ:

ಬೇಡಿಕೆ-ಪೂರೈಕೆಗೊ ಅಲ್ಲಿಂದಲ್ಲಿಗೆ ಸರಿಆದರೆ ಈ ಶಬ್ದಲ್ಲಿ ಗುರುತುಸುತ್ತವು.
ಅಗತ್ಯತೆಗೆ ತಕ್ಕ ತಯಾರಿಕೆ ಮಾಡಿರೆ, ಮಾಡಿದ್ದು ಪೂರ್ತ ಮುಗುದಿಕ್ಕಿದರೆ ಹೀಂಗೆ ಹೇಳುಗು ಮದಲಿಂಗೆ.
ಕಳುದೊರಿಶ ಬೆಂಗುಳೂರಿಲಿ ಶುಬತ್ತೆ ಮನೆಲಿ ಒರಿಶಾವಧಿ ಪೂಜೆ ಮಾಡಿದ್ದಾಡ.
ಊಟಕ್ಕೆ – ಹೋಟ್ಳಿನವರ ಅಡಿಗೆ, ಪಾತ್ರಂಗಳಲ್ಲಿ ತಂದು ಬಳುಸಿದ್ದು.
ಅಂದಾಜಿ ಸಾಲದ್ದೆ ಮಾಡಿದ ಪಾಕಂಗೊ ಎಲ್ಲ ಎತ್ತಾಬತ್ತಾ ಆಯಿದಾಡ, ಗೊಂತಿದ್ದೋ! ಚೆ, ಆರಿಂಗೂ ಹಾಂಗಪ್ಪಲಾಗಪ್ಪಾ!

ಎಂಜಲು ಕೈಲಿ ಕಾಕೆ ಓಡುಸುದು:

ಧಾರಾಳತನ ಇಲ್ಲದ್ದ, ಜಿಪುಣತನದ ವೆಗ್ತಿತ್ವಂಗಳ ತಿಳುಶುವಗ ಈ ಮಾತಿಲಿ ಹೇಳುಗು.
ನಿಜವಾಗಿಯೂ ಎಂಜಲು ಕೈಯೂ ಇರ್ತಿಲ್ಲೆ, ಕಾಕೆಯನ್ನೂ ಓಡುಸುತ್ತವಿಲ್ಲೆ. ಆದರೆ, ಅವ ಎಷ್ಟು ಕುರೆ ಹೇಳಿತ್ತುಕಂಡ್ರೆ, ಎಂಜಲು ಕೈಲಿ ಕಾಕೆಯ ಓಡುಸಿರೆ, ಕೈಲಿ ಇಪ್ಪ ಅಶನದ ಅವುಳುಗೊ ರಟ್ಟಿರೆ ನಷ್ಟ ಅಕ್ಕು ಹೇಳಿ ಗ್ರೇಶುಗು – ಹೇಳ್ತ ಪರಿಭಾಶೆ.
ಅಷ್ಟು ಪೈಸೆ ಇದ್ದನ್ನೇ, ರೆಡ್ಡಿಯ ಹತ್ತರೆ; ಆದರೆ ಮಹಾ ಪಿಟ್ಟಾಸು ಅಡ; ಎಂಜಲು ಕೈಲಿ ಅದು ಕಾಕೆಯನ್ನೂ ಓಡುಸಿಗೊಂಡಿತ್ತಿಲ್ಲೇಡ. ಈಗ ಅದು ಜೈಲಿ ಇದ್ದಡ ಅಲ್ಲದೋ!?

ಉಗುರು ಮುರುದು ನೀರಿಂಗೆ ಹಾಕುದು:

ಸೋಮಾರಿತನದ ಪರಮಾವಧಿ ತಿಳಿಶುವಗ ಈ ಮಾತಿನ ಹೇಳುಗು ಅಜ್ಜಂದ್ರು.
ಎಂತದೂ ಕೆಲಸ ಮಾಡ° – ಹೇಳುದರ ಸೂಚಿಸಲೆ ಉಗುರು ಮುರುದು ನೀರಿಂಗೆ ಹಾಕ°- ಹೇಳುಗು. ಅಜ್ಜಂದ್ರ ಪ್ರಕಾರ ಅದು ಅತ್ಯಂತ ಸುಲಾಬದ ಕೆಲಸ. ಅದನ್ನೂ ಮಾಡದ್ದೋನು ಅತ್ಯಂತ ಸೋಮಾರಿ ಹೇಳಿ ಅರ್ತ!

ಪೆಂಗಣ್ಣ ಊರಿಡೀ ಶುದ್ದಿ ತೆಕ್ಕೊಂಡು ಬಕ್ಕು, ಒಂದೊಂದರಿ.
ಆದರೆ, ಒಂದೊಂದರಿ ಮನಸ್ಸು ತಿರುಗಿರೆ ಮನೆಲೇ ಕೂದುಗೊಂಗು. ರೆಡ್ಡಿ ಒಳ ಹೋದ್ಸೂ ಗೊಂತಾಗ, ರಾಮಕಥೆ ಮುಗುದ್ದೂ ಗೊಂತಾಗ. ಮನೆಲೇ ಇದ್ದರೆ ಉಗುರು ಮುರುದು ನೀರಿಂಗೂ ಹಾಕ° ಅವ°, ಅಷ್ಟೂ ಬಡ್ಡ! 😉

ಉಪ್ಪುಂಟಾ ಉಪ್ಪಿನ ಕಲ್ಲುಂಟಾ:
ಮಾತುಕತೆ ಇಲ್ಲದ್ದೆ ಅಪ್ಪ ಪರಿಸ್ಥಿತಿಯ ವಿವರುಸುವಗ ಈ ಮಾತಿನ ಹೇಳ್ತವು.
ಆರಾರು ನಿಂಗಳ ಗುರ್ತದೋನು ಸಿಕ್ಕಿದ° ಹೇಳಿ ಆದರೆ, ಅವ° ನಿಂಗಳ ಕಂಡುದೇ ಮಾತಾಡಿದನಿಲ್ಲೆ ಹೇಳಿ ಆದರೆ, ’ಅವ° ಉಪ್ಪುಂಟಾ ಉಪ್ಪಿನ ಕಲ್ಲುಂಟಾ’ ಹೇಳಿ ಕೇಳಿದ್ದನಿಲ್ಲೆ – ಹೇಳ್ತದು ಕ್ರಮ.
ಮದಲಿಂಗೆ ಸುಖದುಃಖ ಮಾತಾಡುವಗ ಉಪ್ಪಿನ ಬಗ್ಗೆ ವಿಚಾರುಸಿಗೊಂಡು ಇತ್ತಿದ್ದವೋ ಏನೋ – ಹೇಳ್ತದು ಮಾಷ್ಟ್ರುಮಾವನ ಅನುಮಾನ.

ತರವಾಡುಮನೆಲಿ ಪಾತಿಅತ್ತೆದು ಎಷ್ಟು ನೆಗೆಮೋರೆಯೋ, ಸೊಸೆ ವಿದ್ಯಕ್ಕಂದು ಅಷ್ಟೇ ಮವುನ.
ನೆರೆಕರೆಯೋರೇ –  ನಿತ್ಯವೂ ಮೋರೆ ನೋಡ್ತೋರು ಅಲ್ಲಿಗೆ ಹೋದರೆ ಅದು ಉಪ್ಪುಂಟಾ ಉಪ್ಪಿನ ಕಲ್ಲುಂಟಾ – ಹೇಳಿಯೂ ಮಾತಾಡುಸುತ್ತಿಲ್ಲೆ! ಶ್ರೀಅಕ್ಕಂಗೆ ಒಂದೊಂದರಿ ಪಿಸುರೇ ಬಪ್ಪದು ಅದರ ಮೇಲೆ! 😉

ಒಲೆಯ ಕೋಳಿ ಒಕ್ಕುತ್ತು:

ಬಡತನದ ಪರಮಾವಧಿಯ ಹೇಳುಲೆ ಈ ಪರಿಭಾಶೆಯ ಉಪಯೋಗುಸುತ್ತವು.
ನಿಜವಾಗಿ ಒಲೆಯ ಕೋಳಿ ಒಕ್ಕದ್ದರೂ, ಒಲೆಲಿ ಕಿಚ್ಚು ಹೊತ್ತುಸದ್ದೆ, ಕೆಂಡ ಎಲ್ಲ ನಂದಿ, ಬೂದಿ ಆಗಿ, ಕೋಳಿ ಒಕ್ಕುವಷ್ಟೂ ಹಳತ್ತಾಯಿದು – ಹೇಳ್ತದು ಅಲ್ಯಾಣ ತತ್ವಾರ್ಥ.

ಮದಲಿಂಗೆ ತುಂಬ ಬಂಙ. ಬೈಲಿನ ಎಷ್ಟೋ ಮನೆಗಳಲ್ಲಿ ಒಲೆಯ ಕೋಳಿ ಒಕ್ಕಿಂಡು ಇದ್ದತ್ತು. ಮತ್ತೆ ಮಕ್ಕೊ ಎಲ್ಲ ಕಲ್ತು, ಒಳ್ಳೊಳ್ಳೆ ಕೆಲಸಲ್ಲಿ ದೂರ ದೂರ ಹೋಗಿ, ಉಶಾರಿ ಆದವು.


ಕೊಕ್ಕರೆ ಕೋ ಹೇಳ್ತು:

ಪುಷ್ಟಿ ಇಲ್ಲದ್ದೆ ಅಪ್ಪ ಪರಿಸ್ಥಿತಿ.
ಯೇವದಾರು ಒಂದು ಜೀವಿ / ಮರ / ಗೆಡು / ಬಳ್ಳಿ – ದಷ್ಟಪುಷ್ಟವಾಗಿ ಗೆನಾ ಆಯೇಕಾದ್ದು, ಸಪೂರ ಆಗಿ ಬೆಳದರೆ ಈ ಪರಿಭಾಶೆ ಬಳಸುತ್ತವು.
ಪ್ರತಿ ಒರಿಶದ ಹಾಂಗೆ ಮಾಷ್ಟ್ರುಮನೆಅತ್ತೆ ಈ ಸರ್ತಿಯೂ ನೆಟ್ಟಿಬಿತ್ತು ಹಾಕಿದ್ದವು; ಸೆಸಿಗೊ ಹುಟ್ಟಿ ಮೇಗೆಬಂದಪ್ಪಾಗ ಗೊಬ್ಬರವೂ ಹಾಕಿದ್ದವು. ಆದರೆ, ವಿಪರೀತ ಮಳೆಂದಾಗಿ ಸೆಸಿಗೊ ಬರ್ಕತ್ತು ಆಯಿದಿಲ್ಲೆ, ಗೊಬ್ಬರದ ಸತ್ವ ಪೂರ ತೊಳದು ಹೋತೋ ಏನೋ!
ಚೆಕ್ಕರ್ಪೆ ಬಳ್ಳಿಗೊ ಅಂತೂ ಕೊಡೆಕಡ್ಡಿಯ ಹಾಂಗೆ ಸಪೂರ ಆಯಿದು!
“ನೆಟ್ಟಿಕಾಯಿ ಆತೋ ಅತ್ತೆ?” –ಅವರ ಕೈಲಿ ಕೇಳಿರೆ, “ಈ ಒರಿಶ ನೆಟ್ಟಿ ಲಾಯ್ಕಾಯಿದಿಲ್ಲೆ; ಬಳ್ಳಿಗೊ ಕೊಕ್ಕರೆ ಕೋ ಹೇಳ್ತು” ಹೇಳುಗು.
ನಿಜವಾಗಿ ಬಳ್ಳಿಗೊ ಹಾಂಗೆ ಹೇಳ್ತವಿಲ್ಲೆ, ಆದರೆ ಹಾಂಗೆ ಹೇಳ್ತ ಕೋಳಿಯ ಕಾಲಿನ ಹಾಂಗೆ ಸಪೂರ ಇದ್ದು – ಹೇಳ್ತದಕ್ಕೆ ಈ ಪರಿಭಾಷೆ!

ಕುತ್ತ ಕೂರು:
ಎಂತದೂ ಕೆಲಸ ಮಾಡದ್ದೆ ಸೋಮಾರಿತನಲ್ಲಿ ಇಪ್ಪ ಸನ್ನಿವೇಶ.
ವಹಿಸಿದ ಕೆಲಸವ ಮಾಡದ್ದೆ ಖಾಲಿಯಾಗಿ ಅಂತೇ ಕೂದುಗೊಂಡು ಹೊತ್ತು ಕಳೆತ್ತಾ ಇದ್ದಿರೋ – ಹಾಂಗಾರೆ ನಿಂಗೊ ’ಕುತ್ತ ಕೂದುಗೊಂಬದು’ ಹೇಳಿ ಹೇಳುಲಕ್ಕು.
ಕುತ್ತವೇ ಕೂರೇಕು ಹೇಳಿ ಏನಿಲ್ಲೆ; ಮನಿಕ್ಕೊಂಬಲೂ ಅಕ್ಕು, ಲಾಗ ಹಾಕಲೂ ಅಕ್ಕು, ಒರಗಲೂ ಅಕ್ಕು – ಹೇಳುದು ಮಾಂತ್ರ ಕುತ್ತ ಕೂದುಗೊಂಬದು – ಹೇಳಿಗೊಂಡು.
ಇಷ್ಟೆಲ್ಲ ಶುದ್ದಿ ನಮ್ಮೆದುರೇ ನೆಡೆತ್ತರೂ, ಪೆಂಗಣ್ಣ ಇದರ ಯೇವದರನ್ನೂ ಬೈಲಿಂಗೆ ಹೇಳದ್ದೆ ಕುತ್ತ ಕೂದುಗೊಂಡಿದ°.

ಕಾಲು ನೀಡಿ ಕೂರು:
ವಿಶ್ರಾಂತಿ ತೆಕ್ಕೊಂಬದಕ್ಕೆ ಅಜ್ಜಿಯಕ್ಕೊ ಹೀಂಗೆ ಹೇಳ್ತವು.
ಮದಲಿಂಗೆ ಕುರ್ಶಿ ಬೆಂಚುಗೊ ಈಗಾಣಷ್ಟು ಧಾರಾಳ ಇದ್ದತ್ತಿಲ್ಲೆ; ಹಳಬ್ಬರಿಂಗೆ ಕೂಬಲೆ ನೆಲವೇ ಹೆಚ್ಚು ಆರಾಮ.
ಹಾಂಗಾಗಿ, ಬಚ್ಚಲು ತಣಿವಲೆ ನೆಲಕ್ಕಲ್ಲೇ ಕೂದುಗೊಂಗು, ಗೋಡಗೆ ಒರಗಿಂಡು, ಕಾಲು ನೀಡಿಗೊಂಡು.
ಈಗಾಣೋರಿಂಗೆ ಕಾಲು ನೀಡಿರೇ, ಅಭ್ಯಾಸ ಇಲ್ಲದ್ದೆ ಬೇನೆ ಸುರು ಅಕ್ಕೋ ಏನೋ, ಅದು ಬೇರೆ! 😉
ಶಂಬಜ್ಜ ಒರಿಶ ಇಡೀ ಕೆಲಸ ಮಾಡಿರೂ, ಆಟಿಲಿ ಕಾಲುನೀಡಿ ಕೂದುಗೊಂಗು ಮನೆಯೊಳವೇ.

ಕುಮೇರಿ ಕಡಿವದು ( / ಗುಡ್ಡೆ ಗರ್ಪುದು):
ಪ್ರಾಮುಖ್ಯತೆಯೇ ಇಲ್ಲದ್ದ ಕೆಲಸ ಮಾಡುದರ ರೂಪಕ ಈ ಪರಿಭಾಶೆ.
ಕುಮೇರಿ ಹೇಳಿತ್ತುಕಂಡ್ರೆ, ಅಗಳಿನ ನಮುನೆ – ಗಂಡಿಯ ದೊಡ್ಡ ರೂಪ. ಮದಲಿಂಗೆ ಜಾಗೆಯ ರಕ್ಷಣೆಗೆ ಕರೇಲಿ ಇದರ ಮಾಡಿಗೊಂಡು ಇದ್ದಿದ್ದವು. ಈಗ ಅದು ಮುಖ್ಯವೇ ಅಲ್ಲದ್ದ ಕೆಲಸ ಹೇಳ್ತ ಪರಿಭಾಶೆ ಬಯಿಂದು.
ಉದಿಯಪ್ಪಗ ಆರಾರು ನೆಂಟ್ರು ತರವಾಡು ಮನಗೆ ಬಂದು, ಹೊತ್ತಪ್ಪಗಳೇ ಹೆರಡ್ತೆ – ಹೇಳಿರೆ ರಂಗಮಾವ° ನಿಂಬಲೊತ್ತಾಯ ಮಾಡುವಗ ಕೇಳುಗು “ನಿನಗೆಂತ ಕುಮೇರಿ ಕಡಿವಲಿದ್ದೋ ಇನ್ನು ಹೋಗಿ?” ಹೇಳಿಗೊಂಡು.
ಮೂಡ್ಳಾಗಿ ಇದರ ಗುಡ್ಡೆ ಗರ್ಪುದು ಹೇಳಿಯೂ ಹೇಳ್ತವಡ. ಎಲ್ಲಿ – ಹೇಂಗೆ ಹೇಳಿರೂ, ಅರ್ಥ ಒಂದೇ!

ಕೂದಲ್ಲೇ:
ಅನಾರೋಗ್ಯ ಜಾಸ್ತಿ ಆಗಿ ಅತ್ತಿತ್ತೆ ಓಡಾಡ್ಳೆ ಕಷ್ಟ ಆದರೆ ಹೀಂಗೆ ಹೇಳ್ತವು ಮದಲಿಂಗೆ.
ಅನಾರೋಗ್ಯವೇ ಆಯೇಕು ಹೇಳಿ ಇಲ್ಲೆ, ಪ್ರಾಯ ಆಗಿಯೋ ಮಣ್ಣ ಆದರೂ ಹಾಂಗೇ ಹೇಳ್ತವು.
ಹತ್ಯಡ್ಕ ಅಜ್ಜ° ತೆಂಗಿನ ಮರದ ಕೊಬೆಂದ ಆಯ ತಪ್ಪಿ ಬಿದ್ದದು ನಿಂಗೊಗೆ ಹೇಳುದುಕೇಳಿ ಗೊಂತಿದ್ದೋ ಏನೋ – ಹತ್ತೈವತ್ತು ಒರಿಶ ಹಿಂದೆ. ನೆಡುಪ್ರಾಯಂದ ಕೊನೆ ಒರೆಂಗೂ ಅವು ಕೂದಲ್ಲೇ ಆಗಿತ್ತಿದ್ದವು ಮತ್ತೆ; ಸೊಂಟಕ್ಕೆ ಪೆಟ್ಟಾಗಿ ಎದ್ದು ನೆಡವಲೆಡಿಯ – ಹೇಳ್ತ ಹಾಂಗೆ.
(ಇದರಿಂದಲೂ ಚಿಂತಾಜನಕ / ದೈಹಿಕ ದೌರ್ಬಲ್ಯ ಆದರೆ ’ಮನುಗಿದಲ್ಲೇ’ ಹೇಳಿ ಹೇಳ್ತವು. ಇಂಗ್ಳೀಶಿಲಿ ಅದನ್ನೇ Bed-ridden ಹೇಳ್ತವಡ, ಮಾಷ್ಟ್ರುಮಾವ° ಹೇಳಿದವು.)

ಕುಂಬ್ಳಕಾಯಿ:
ಅಪ್ರಾಮುಖ್ಯ ವಸ್ತುವಿನ ದೊಡ್ಡ ಸಂಗತಿ ಮಾಡ್ಳೆ ಹೆರಟ್ರೆ ಈ ಪದಪ್ರಯೋಗ ಮಾಡುಗು ಮದಲಿಂಗೆ.

ಇದೆಂತ, ದೊಡ್ಡ ಕುಂಬ್ಳಕಾಯಿಯೋ - ಕೇಳುವಿ ನಿಂಗೊ!!

ಕುಂಬ್ಳಕಾಯಿ ಕಾಂಬಲೆ ದೊಡ್ಡ ಇರ್ತು, ಆದರೆ ಅಷ್ಟೆಂತ ಪ್ರಾಮುಖ್ಯವಾದ್ಸು ಅಲ್ಲ – ಹಾಂಗಾಗಿ ಈ ಉಪಮೆ ಬಂದದೋ ಏನೋ!
ಕುಂಬ್ಳಕಾಯಿಯ ಉಪಮೆ ಒಬ್ಬ ವೆಗ್ತಿ ಮೇಗೆಯೇ ಆಗಿಕ್ಕು, ಕಾರ್ಯದ ಮೇಗೆ ಆಯಿಕ್ಕು, ವಸ್ತುವಿನ ಮೇಗೆಯೇ ಆಗಿಕ್ಕು – ಒಟ್ಟಿಲಿ, ಅದೊಂದು ಕುಂಬ್ಳಕಾಯಿ – ಹೇಳಿರೆ ಅದು ದೊಡ್ಡ ವಿಷಯವೇ ಅಲ್ಲ- ಹೇಳ್ತ ಅರ್ತ.
ಎಷ್ಟೋ ಶ್ರೀಮಂತಿಕೆ ಇರ್ತ ರೆಡ್ಡಿಯ ಬಲುಗಿ ಜೈಲಿಲಿ ಮಡಗಿದ್ದವಡ ಮನ್ನೆ – ಹೇಳಿದ° ಕೆಪ್ಪಣ್ಣ. ಅಷ್ಟಪ್ಪಗ ಪೆಂಗಣ್ಣ ಹೇಳಿದ°, ರೆಡ್ಡಿ ಎಂತ ದೊಡ್ಡ ಕುಂಬ್ಳಕಾಯಿಯೋ? ಕಾನೂನಿನ ಮುಂದೆ ಎಲ್ಲೋರುದೇ ಒಂದೇ – ಹೇಳಿಗೊಂಡು.

ಗಾಳಿ ಹಾಕುದು:
ಕೆಟ್ಟ ವಿಷಯಕ್ಕೆ ಪ್ರೋತ್ಸಾಹ ಮಾಡುದಕ್ಕೆ ಈ ಪರಿಭಾಶೆ ಬಳಸುತ್ತವು.
ಸಾಮಾನ್ಯವಾಗಿ, ಇಬ್ರ ಒಳದಿಕೆ ಜಗಳ ನೆಡೆತ್ತಾ ಇಪ್ಪಗ, ಮೂರ್ನೇ ವೆಗ್ತಿ ಒಬ್ಬಂಗೆ ಪ್ರೋತ್ಸಾಹ ಕೊಟ್ಟು, ಜಗಳವ ಇನ್ನುದೇ ಹೆಚ್ಚು ಮಾಡ್ತ ಸನ್ನಿವೇಶ ಬಂದರೆ ಈ ಮಾತಿಲಿ ಹೇಳುಲಕ್ಕು.
ಮದಲಿಂಗೆ ಜಾಗೆ, ನೀರಿನ ವಿಶಯಲ್ಲಿ ಸುಮಾರು ನಂಬ್ರಂಗೊ ಇದ್ದತ್ತಲ್ಲದೋ – ನಮ್ಮೋರ ಒಳದಿಕೆ; ಅದು ಬೇಗ ಇತ್ಯರ್ಥ ಆಗದ್ದೆ ಇಪ್ಪಲೆ ನೆರೆಕರೆಯೋರು ಗಾಳಿಹಾಕಿಂಡು ಇದ್ದದೇ ಕಾರಣ – ಹೇಳಿ ಒಂದು ಅಭಿಪ್ರಾಯ.


ಜಾತಕ ಹೇಳು:
ಒಬ್ಬ ವೆಗ್ತಿಯ ಸಮಗ್ರ ಇತಿಹಾಸವ ತಿಳಿಶುದಕ್ಕೆ ಹೀಂಗೆ ಹೇಳ್ತವು.
ಸಾಮಾನ್ಯವಾಗಿ ಜಾತಕ ಹೇಳುದು ಜೋಯಿಶಪ್ಪಚ್ಚಿ ಆದರೂ, ಈ ಪರಿಭಾಶೆಯ ಜಾತಕ ಹೇಳುಲೆ ಎಲ್ಲೋರಿಂಗೂ ಅರಡಿಗು!
ಬಾರೀ ಸತ್ಯಾದಿಗನ ಹಾಂಗೆ ಮರದ ಇಬ್ರಾಯಿ ಮಾತಾಡ್ತಲ್ಲದೋ – ದೊಡ್ಡಬಾವಂಗೆ ಅದರ ಜಾತಕ ಪೂರ ಅರಡಿಗು; ಮದಲಿಂಗೆ ಮರ ಕಳ್ಳಿಯೇ ಇಷ್ಟು ದೊಡ್ಡ ಆದ್ಸು ಹೇಳ್ತದು ಅವಂಗೆ ಅರಡಿಗು. ಪುರುಸೋತಿಲಿ ಮಾತಿಂಗೆ ಸಿಕ್ಕಿರೆ ಅದರ ಜಾತಕ ಪೂರ ಹೇಳುಗು ಅವ°.

~

ಟ್ಟೆ ಟ್ಟೆ ಟ್ಟೆ:

ಉತ್ತರ ಇಲ್ಲದ್ದೆ ಅಪ್ಪ ಪರಿಸ್ಥಿತಿ.
ಆರಾರು ಎಂತಾರು ಕೇಳಿರೆ, ಎದುರು ಮಾತಾಡ್ಳೇ ಉತ್ತರ ಇಲ್ಲದ್ದೆ ಅಪ್ಪ ಸನ್ನಿವೇಶಂಗಳ ವಿವರುಸುಲೆ ಈ ಪರಿಭಾಶೆಯ ಬಳಸುತ್ತವು.
ಬೋಚಬಾವ° ಸಿಕ್ಕಿರೆ ’ನಿನ್ನ ಹೆಸರೆಂತ?’  ಕೇಳಿ – “ಬೋಚ°” ಹೇಳುಗು.
ನಿನಗೆ ಬೇರೆ ಹೆಸರಿಲ್ಲೆಯೋ – ಅದೆಂತಕೆ ಹಾಂಗೆ ಹೇಳುದು ಎಲ್ಲೋರುದೇ – ಕೇಳಿರೆ ಅವ° ಟ್ಟೆಟ್ಟೆಟ್ಟೆ!  (ಅವನ ಹತ್ತರೆ ಉತ್ತರ ಇಲ್ಲೆ!)


ಟುಂ ಟುಂ ಟುಂ:

ಸರಿಯಾದ ಉತ್ತರ ಕೊಡ್ಳೆ ಎಡಿಯದ್ದೆ ಹಾರಿಕೆಯ ಉತ್ತರ ಕೊಡುದಕ್ಕೆ ಹೀಂಗೆ ಹೇಳ್ತವು.
ಉದಾಹರಣೆಗೆ, ನೆಗೆಮಾಣಿ ಇಂಗ್ಳೀಶು ಕಲ್ತುಗೊಂಡಿತ್ತಿದ್ದ°, ಇನ್ನೂ ಕಲ್ತಾಯಿದಿಲ್ಲೆ.
ಆದರೆ ಅದೊಂದು ಒಯಿವಾಟು ಬಿಟ್ಟು ಬೇರೆ ಎಲ್ಲಾ ಕಾರ್ಯವೂ ಮಾಡುಗು.
ಕೈಗೆ ಸಿಕ್ಕಿಯಪ್ಪಗ “ಎಂತಗೆ ಕಲ್ತಾಯಿದಿಲ್ಲೆ?” – ಕೇಳಿರೆ ಮಳೆ ಇತ್ತು, ಮೌಢ್ಯ ಇತ್ತು, ಸ್ಲೇಟು ಇತ್ತಿಲ್ಲೆ – ಹೇಳಿ ಏನಾರು ಟುಂಟುಂಟು ಹೇಳುಗು!

ತ:

ದವಡೆ ಹಲ್ಲು ತುಪ್ಪುಸು:

ಶಿಕ್ಷೆಕೊಡುದಕ್ಕೆ ಪರಿಭಾಶೆಯಾಗಿ ಹೀಂಗೆ ಹೇಳ್ತವು.
ಉಪದ್ರ ಮಾಡಿದ ಆರಿಂಗಾರು ಸಮಾ ಬಡಿಯೇಕು – ಹೇಳ್ತ ಭಾವನೆ ಬಂದರೆ ’ಅವನ ದವಡೆ ಹಲ್ಲು ತುಪ್ಪುಸೇಕು’ ಹೇಳಿ ಪರಂಚುಗು ಅಜ್ಜಂದ್ರು. ನಿಜವಾಗಿ ಅವನ ದವಡೆಯೂ, ಹಲ್ಲೂ- ಎರಡೂ ಗಟ್ಟಿ ಇರ್ತು, ಆದರೆ ಇವ ಬಡುದ್ದರ್ಲಿ ಅದು ತುಂಡಾಗಿ, ತುಪ್ಪುಸಿ ಕೆಳ ಬೀಳುವ ಹಾಂಗೆ ಮಾಡೇಕು – ಹೇಳಿ ಇದರ ಭಾವಾರ್ಥ.

ಗುಜಿರಿ ಅದ್ದುಲ್ಲ° ಯೇವಗಳೂ ಬೈಲಿಂಗೆ ಬಕ್ಕು, ಎಂತಾರು ಗುಜಿರಿ ಇದ್ದರೆ ತೆಕ್ಕೊಂಡೂ ಹೋಪಲೆ.
ಅಂದೊಂದರಿ ಬಂದದು, ತರವಾಡುಮನೆಲಿ ಗುಜಿರಿ ಸಾಮಾನು ತುಂಬುಸಿ, ಹೆರಡ್ಳಪ್ಪಗ ನಾಕು ತೆಂಗಿನಕಾಯಿಯೂ, ರಜ ಅಡಕ್ಕೆಯನ್ನೂ ತುಂಬುಸಿತ್ತಡ ಗೋಣಿ ಒಳದಿಕ್ಕಂಗೆ. ರಂಗಮಾವಂಗೆ ಅದು ಗೊಂತಾಗಿ ಗೋಣಿಬಿಡುಸಿ ನೋಡುಸಿದವು. ಸಿಕ್ಕಿಬಿದ್ದತ್ತು..
ಇನ್ನೊಂದರಿ ಇತ್ಲಾಗಿ ಕಾಲು ಹಾಕಿರೆ ನಿನ್ನ ದೌಡೆಹಲ್ಲು ತುಪ್ಪುಸುವೆ – ಹೇಳಿ ಸಮಾಕೆ ಜೋರು ಮಾಡಿ ಕಳುಗಿದವು. ಅದು ಅಕೇರಿ, ಮತ್ತೆ ಅವರಲ್ಲಿಂದ ಕಳ್ಳತನ ಆಯಿದಿಲ್ಲೇಡ! 🙂

ನೀಟಂಪ ಮನುಗು:
ದೊಡ್ಡ ವಿಶ್ರಾಂತಿ ತೆಕ್ಕೊಂಬದರ ಸೂಚ್ಯ.
ಆಗ ಕಾಲುನೀಡಿ ಕೂಪದು ಹೇಳಿ ಮಾತಾಡಿದ್ದಲ್ಲದೋ – ಇದು ಅದರಿಂದಲೂ ಒಂದು ಹಂತ ಜಾಸ್ತಿ.
ಮನುಗುದು ಅಡ್ಡವೇ ಆಗಲಿ, ನೀಟವೇ ಆಗಲಿ – ಹೇಳುದು ಮಾಂತ್ರ ನೀಟಂಪ ಮನುಗುದು.

ಶಾಂಬಾವಂಗೆ ರಜೆ ಇದ್ದರೆ ತೋಟಕ್ಕೆ ಹೋಕೋ – ಹೋಗ°.
ಹಗಲಿಡೀ ನೀಟಂಪ ಮನಿಕ್ಕೊಂಗು, ಇರುಳು ಬಿದ್ದು ಒರಗ್ಗು! 😉

ಪ:

ಪಿಟ್ಕಾಯಣ:
ಗಂಭೀರ ವಿಚಾರ ಮಾತುಕತೆ ಮಾಡುವಗ ಪ್ರಾಮುಖ್ಯ ಅಲ್ಲದ್ದ ವಿಚಾರವ ತಂದರೆ ಹೀಂಗೆ ಹೇಳುಗು.
ಸಾಮಾನ್ಯವಾಗಿ ರಾಮಾಯಣದ ಒಳ ಪಿಟ್ಕಾಯಣ – ಹೇಳಿ ಪೂರ್ಣಪಾಠವ ಹೇಳ್ತವು, ಬರೇ ಪಿಟ್ಕಾಯಣ ಹೇಳಿರೂ ಸಾಕಕ್ಕು!

ಬೈಲಿಲಿ ನಾವು ಕಂಡಿದನ್ನೇ – ನಾವೆಲ್ಲ ಎಂತಾರು ಮಾತಾಡಿಗೊಂಡಿಪ್ಪಗ ನೆಗೆಮಾಣಿ, ಅರ್ಗೆಂಟುಮಾಣಿ, ಬೋಚಬಾವ – ಆರಾರು ಬಂದು ಒಂದು ಪಿಟ್ಕಾಯಣ ಬಿಡ್ತವು! ನೆಗೆಯೂ ಬತ್ತು, ಪಿಸುರುದೇ ಬತ್ತು ನವಗೆ. ಅಲ್ಲದೋ?! 😉

ಪೋಲಾ-ಬಲ್ಲಾ

ಆಸಕ್ತಿ ಇಲ್ಲದ್ದೆ ಕೆಲಸ ಮಾಡ್ತದರ ಸೂಚ್ಯವಾಗಿ ಹೀಂಗೆ ಹೇಳ್ತವು.
ಕೆಲಸ ಮಾಡಿದ್ದೆ ಹೇಳಿ ಆಯೆಕ್ಕು – ಹೇಳುವ ಅಸಡ್ಡೆಲಿ ಮಾಡಿರೆ ಅಜ್ಜಂದ್ರು ’ಅವ ಅಂತೇ ಪೋಲಬಲ್ಲ ಮಾಡ್ತ’ ಹೇಳುಗು.

ಮದಲಿಂಗೆ ಜೆಂಬ್ರಲ್ಲಿ ಬಳುಸುವೋರು ಶ್ರದ್ಧೆಲಿ ಬಳುಸುಗು, ಈಗ ಬಪೆ ಅಲ್ದೋ ಬಾವ, ಅವಕ್ಕೆ ಸಂಬಳ.
ಅಂತೇ- ಪೋಲ ಬಲ್ಲ ಮಾಡ್ತವು, ನೇರ್ಪಕ್ಕೆ ಬಳುಸುತ್ತವೂ ಇಲ್ಲೆ – ಹೇಳ್ತದು ಗುರಿಕ್ಕಾರ್‍ರ ಬೇಜಾರು!
(ಆಜ್ಞೆಗಳ ಕೊಟ್ಟು ದರ್ಬಾರು ಮಾಡುದಕ್ಕೆ ಪೋಲಯ-ಬಲಯ ಮಾಡುದು ಹೇಳಿಯೂ ಹೇಳ್ತವು. ಈಗ ಹಾಂಗೆ ಮಾಡ್ಳೆ ಆಳುಗಳೇ ಸಿಕ್ಕುತ್ತವಿಲ್ಲೆ!)

ಬಾಯಿಗೆ ಕೋಲು ಹಾಕು:

ಆರನ್ನಾರು ಅನಗತ್ಯವಾಗಿ ಎಳಗುಸುತ್ತರೆ ಈ ಪರಿಭಾಶೆಲಿ ಸೂಚ್ಯವಾಗಿ ಹೇಳ್ತವು.
ನಿಜವಾಗಿ ಬಾಯಿಯ ಒಳಂಗೆ ಕೋಲು ಹಾಕಲಿಲ್ಲೆ, ಆದರೆ ಹೇಳುದು ಹಾಂಗೆ, ಅಷ್ಟೇ. ಆರಾರು ತನ್ನಷ್ಟಕ್ಕೇ ಕೂದುಗೊಂಡು ಇದ್ದರೂ, ಎಳಗುಸುಲೆ ಹೋದರೆ ಹೀಂಗೆ ಹೇಳ್ತವು.
ಸುರುಸುರುವಿಂಗೆ ತರವಾಡುಮನೆ ಕಪ್ಪುನಾಯಿ ದಾಸುವಿನ ಕಂಡಪ್ಪಗ ಅಜ್ಜಕಾನಬಾವ° ಬಾಯಿಗೆ ಕೋಲು ಹಾಕಿಂಡು ಇತ್ತಿದ್ದ°.
ಹಾಂಗಾಗಿ, ಈಗ ಅದಕ್ಕೆ ಅವನ ಕಂಡ್ರೆ ಪಿಸುರು, ಕೊರಪ್ಪಿ ಓಡುಸಿಗೊಂಡೇ ಬತ್ತು..! 😉

ಬೇಳೆ ಚೋಲಿ ಚೊಲ್ಲುದು:

ಅನಗತ್ಯ ಹರಟೆಲಿ ಹೊತ್ತು ಕಳವದಕ್ಕೆ ಸೂಚ್ಯ ಪದ.
ಹಲಸಿನಕಾಯಿಯ ಒಣಗಿದ ಬೇಳೆಲಿ ಚೋಲಿ ಬಂದಿರ್ತು, ಅಲ್ಲದೋ . ಅದರ ಸೊಲಿತ್ತದು ಹೇಳಿರೆ ಅನಗತ್ಯ ಕಾಲಹರಣದ ಕಾರ್ಯ. ಆರಾರು ಆಚೀಚ ಮನಗೋ ಮಣ್ಣ ಹೋಗಿ ಅನಗತ್ಯವಾಗಿ ಹೊತ್ತು ಕಳೆತ್ತರೆ ಈ ಶಬ್ದಲ್ಲಿ ಹೇಳ್ತವು.
ದರ್ಖಾಸು ಗೆಡ್ಡದಮಾವ° ಅವರ ಜೆವ್ವನವ ಅಂತೇ ಕೊಂಕಣಿ ಅಂಗುಡಿಲಿ ಬೇಳೆಚೋಲಿ ಚೊಲ್ಲಿಗೊಂಡು ಕಾಲ ಕಳದವು. ಅವರ ಜಾಗೆಲಿ ರಜ ಅಡಕ್ಕೆಯೋ ಎಂತಾರು ಹಾಕಿದ್ದರೆ ಈಗ ಮೂರೊತ್ತು ಕೂದು ಉಂಬದಕ್ಕೆ ತೊಂದರೆ ಇರ್ತಿತಿಲ್ಲೆ – ಹೇಳಿ ಪಾರೆ ಮಗುಮಾವ° ಬೇಜಾರು ಮಾಡಿಗೊಳ್ತವು.

ಬೇಕೋ ಬೇಡದೋ
ಉದಾಸೀನತೆಲಿ ಎಂತಾರು ಕಾರ್ಯ ಮಾಡ್ತರೆ ಹೀಂಗೆ ಹೇಳ್ತವು.
ಆರಿಂಗಾರು ಏಪುಸಿದ ಕೆಲಸವ ಅವು ಮಾಮೂಲಿನ ಆಸಕ್ತಿ ಇಲ್ಲದ್ದೆ, ಕಡಮ್ಮೆ ಪ್ರಾಮುಖ್ಯತೆಲಿ ಮಾಡಿಗೊಂಡಿದ್ದರೆ ಹೀಂಗೆ ಹೇಳುಗು.

ನೆಕ್ರಾಜೆ ಅಪ್ಪಚ್ಚಿಯಲ್ಲಿಗೆ ಕೆಲಸಕ್ಕೆ ಜೆನ ಇದ್ದವು – ಧಾರುವಾಡದವು. ಆದರೆ, ಅವರ ಕೆಲಸ  ಊರವರ ಕೆಲಸದ ಹಾಂಗೆ ಮನಾರ ಇಲ್ಲೆ; ಬೇಕೋ ಬೇಡದೋ – ಹೇಳಿ ಮಾಡ್ತವು ಹೇಳಿ ನೆಕ್ರಾಜೆ ಅಪ್ಪಚ್ಚಿಗೆ ಪಿಸುರು ಬಪ್ಪದು.

ಬೆಂಬಲ್ಪು

ಯೇವದಾರು ಕಾರ್ಯ ಮಾಡ್ಳೆ ಇಪ್ಪ ಅಧೈರ್ಯ.
ಮಾಷ್ಟ್ರುಮಾವ° ಆದರೆ ಸಮಾಸ ಬಿಡುಸಿ ಹೇಳುಗು; ಬೆನ್ನು – ಬಲ್ಪು (ಎಳೆತ) ಹೇಳಿಗೊಂಡು.

ಎಂತಾರು ಕೆಲಸ ಮಾಡೇಕಾಯಿದು, ಆದರೆ ಅದರ ಮಾಡ್ಳೆ ಹಿಂಜರಿತ ಇದ್ದು ಹೇಳಿ ಆದರೆ ಅಜ್ಜಂದ್ರು ಹೀಂಗೆ ಹೇಳುಗು. ಈಗಂತೂ ಈ ಶಬ್ದ ಕಾಂಬಲೇ ಇಲ್ಲೆ ಹೇಳ್ತದು ಬೇಜಾರದ ಸಂಗತಿ.

ಮಾಷ್ಟ್ರುಮಾವನ ಮನೆಗೆ ಕೆಲಸಕ್ಕೆ ಬತ್ತ ಆಣು – ಸುಕುಮಾರ ಇದ್ದಲ್ಲದೋ; ಅದಕ್ಕೆ ಸಂಬಳ ಸಾಲ ಹೇಳಿ ಮನಸ್ಸಿಲಿ ಇದ್ದು.
ಆದರೆ ಬಾಯಿಬಿಟ್ಟೂ ಕೇಳಲೆ ರಜಾ ಬೆಂಬಲ್ಪು.. 🙂

ಬ್ಬೆ ಬ್ಬೆ ಬ್ಬೆ:

ಮಾಡ್ಳೆ ಹೇಳಿದ ಯೇವದಾರು ಕೆಲಸಕಾರ್ಯ ಗೊಂತಿಲ್ಲದ್ದೆ ಅಪ್ಪಗ ಬತ್ತ ಪ್ರತಿಕ್ರಿಯೆಗೆ ಹೀಂಗೆ ಹೇಳುಗು ಅಜ್ಜಂದ್ರು.
ಪಕ್ಕನೆ ಆರತ್ರಾರು ಎಂತಾರು ಕೇಳಿರೆ / ಎಂತಾರು ಮಾಡ್ಳೆ ಹೇಳಿರೆ, ಅದು ಗೊಂತಿಲ್ಲದ್ದರೆ – ಅವರ ಉತ್ತರದ ಭಾವನೆ ಹೀಂಗಿರ್ತು – ಹೇಳ್ತದು ತಾತ್ಪರ್ಯ.
ಶಿಕ್ಷಕರ ದಿನಾಚರಣೆ ಕಳಾತಲ್ಲದೋ – ಓ ಮೊನ್ನೆ.
ವಿನುವಿನ ಶಾಲೆಲಿ ಆಚರಣೆ ಇದ್ದತ್ತಾಡ. ಕಾರ್ಯಕ್ರಮಕ್ಕೆ ನೋಡ್ಳೆ ಹೋದ ಶಾಂಬಾವನ ಹತ್ತರೆ ’ಸಭೆಯ ಉದ್ದೇಶಿಸಿ ಎರಡು ಮಾತಾಡೇಕು’ ಹೇಳಿದವಡ, ಶಾಲೆಯೋರು. ಪಕ್ಕನೆ ದಿನಿಗೆಳಿದ್ದಕ್ಕೆ ಎಂತರ ಮಾತಾಡುಸ್ಸು ಹೇಳಿ ಅರಡಿಯದ್ದೆ ಒಂದರಿ ಬೆಬ್ಬೆಬ್ಬೆ ಆದನಾಡ!

ಮದ್ದರವದು:

ತಪ್ಪು ಮಾಡಿದ ವೈರಿಗೆ ಬುದ್ಧಿ ಕಲಿಶುದು.
ಆರಾರು ನವಗೆ ಉಪದ್ರ ಮಾಡಿರೆ, ಅವಂಗೆ ತಕ್ಕ ಶಾಸ್ತಿ ಮಾಡ್ತೆ – ಹೇಳಿ ಗ್ರೇಶುವಗ ಈ ಪದಪ್ರಯೋಗ ಮಾಡ್ತವು.
ಮದಲಿಂಗೆ ಆಯುರ್ವೇದ / ನಾಟಿ ಔಷಧಿಯ ಕಾಲಲ್ಲಿ ಹಲವಾರು ಗಿಡಮೂಲಿಕೆಗಳ, ಮರ್ಮಾಣಿ ಮಾತ್ರೆಗಳ ಅರದೇ ಮದ್ದಿನ ಪಾಕ ಮಾಡಿ, ಕಿಟ್ಟಿ ರೋಗ ಗುಣಮಾಡಿಗೊಂಡು ಇದ್ದದು ಅಲ್ಲದೋ- ಹಾಂಗಾಗಿ ಈ ಬಳಕೆ ಬಂದದಾಯಿಕ್ಕು – ಹೇಳಿ ಚೌಕ್ಕಾರು ಮಾವ° ಗ್ರೇಶುಗು.

ಮೋಹನ ಬಂಟ ಅದರ ಜಾಗಗೆ ಬೇಲಿ ಹಾಕಲಿಲ್ಲೆ.  ಬೈಲಿನೋರ ದನ ಯೇವದಾರು ಮೇದೋಂಡು ಅದರ ಜಾಗೆಯ ಒಳಂಗೆ ಹೋದರೆ ಪೋನು ಮಾಡಿ ಅವಕ್ಕೆ ಬೈಗು. ಎಂತಾರು ಮಾಡಿ ಮದ್ದರೇಕು – ಹೇಳಿ ಆಚಕರೆಮಾವ° ಗ್ರೇಶಿಗೊಂಡಿದ್ದವು. ನೋಡೊ°, ಒಂದು ದಿನ ಅದಕ್ಕೂ ಕೂಡಿಬಕ್ಕನ್ನೇ!?

ಮುಕ್ಕಾಲಿಂಗೆ ತಿಕಾಣಿ:

ಬಡತನದ ದರ್ಶನ ಮಾಡ್ತ ಈ ಪದಗುಚ್ಛ, ತನ್ನ ಹತ್ತರೆ ಎಂತದೂ ಧನಸಂಗ್ರಹ ಇಲ್ಲೆ – ಹೇಳ್ತರ ತೋರುಸುತ್ತು.
ಮುಕ್ಕಾಲು – ಹೇಳಿರೆ (ಈಗ ರುಪಾಯಿ / ಪೈಸೆ) ಹೇಳಿದ ಹಾಂಗೆ ಹಣದ ಅಳತೆ. ತನ್ನ ಹತ್ತರೆ ಒಂದು ಪೈಸೆಯೂ ಇಲ್ಲೆ –ಹೇಳುದರ ಮದಲಿಂಗೆ ಹೀಂಗೆ ಹೇಳಿಗೊಂಡು ಇತ್ತಿದ್ದವು.

ಜೋಯಿಷಪ್ಪಚ್ಚಿ ಒಂದೊಂದರಿ ತಮಾಶೆ ಎಳಗ್ಗು. ಇಸ್ಪೇಟು ಕಳಲ್ಲಿ ಕೂದರೆ ಅಂತೂ ಕೇಳುದೇ ಬೇಡ.
ಹಾಂಗೆ, ಇಪ್ಪತ್ತೆಂಟು ಆಡುವಗ ಕೆಲವು ಸರ್ತಿ ಪಿಡಿ ಏನೂ ಒಳ್ಳೆದು ಬಾರದ್ದರೆ “ಚೆ, ಈ ಆಟಲ್ಲಿ ಮುಕ್ಕಾಲಿಂಗೆ ತಿಕಾಣಿ ಇಲ್ಲೆ ಭಾವಾ” ಹೇಳುಗು ನೆಗೆಮಾಡಿಗೊಂಡು.

ಮೂಗಿಲಿ ಮಸಿ:

ತನ್ನ ವಿಮರ್ಶೆ ಮಾಡಿದವರ ಮೇಗೆ ಬಯಂಕರ ಕೋಪ ಬಪ್ಪ ವೆಗ್ತಿತ್ವವ ವಿವರುಸುವಗ ಈ ಶಬ್ದವ ಉಪಯೋಗ ಮಾಡ್ತವು.
ನಿಜವಾಗಿ ಆರ ಮೂಗಿಲಿ ಮಸಿ ಇಲ್ಲದ್ದರೂ, “ಅವಂಗೆ ಅವನ ಮೂಗಿಲಿ ಮಸಿ ಇದ್ದು – ಹೇಳಿ ತೋರುಸಿರೆ ಸಾಕು, ಬಯಂಕರ ಕೋಪ ಬತ್ತು” ಹೇಳುವ ಅರ್ತಲ್ಲಿ ಈ ಮಾತು ಬಂದದಾಯಿಕ್ಕು.
ಮುಳಿಯಬಾವಂಗೆ ಮದಲಿಂಗೆ ವಿಪರೀತ ಕೋಪ ಅಡ; ಮೂಗಿಲಿಮಸಿ ಹೇಳುಲೂ ಗೊಂತಿಲ್ಲೆ ಅಡ – ಮುಳಿಯದಕ್ಕ ಹೇಳಿತ್ತಿದ್ದವು.
ಈಗ ತುಂಬ ಸಮದಾನಿ ಆಯಿದವು ಇದಾ! 😉

ಮನೆಮಟ್ಟಿಂಗೆ:

ಲೌಕಿಕ ವ್ಯವಹಾರಂಗಳಿಂದ ವಿಮುಖರಾಗಿ, ಕೇವಲ ನಿತ್ಯ ನೈಮಿತ್ಯಿಕಕ್ಕೆ ಮಾಂತ್ರ ಸೀಮಿತ ಆಗಿ ಇದ್ದರೆ ಹೀಂಗೆ ಹೇಳ್ತವು. ಸಾಮಾನ್ಯವಾಗಿ ಹೆರಿಯೋರು ತೀರಾ ಪ್ರಾಯ ಆಗಿ ವ್ಯವಹಾರ ಎಲ್ಲವನ್ನೂ ಮಕ್ಕೊಗೆ ಬಿಟ್ಟು ಕೊಟ್ರೆ, ಆ ಸನ್ನಿವೇಶವ ಹೀಂಗೆ ಹೇಳ್ತವು.
ಓಜುಪೇಯಿ ಅಜ್ಜ° ಈಗ ಯೇವ ಒಯಿವಾಟಿಲಿಯೂ ಇಲ್ಲೆ; ಎಲ್ಲವನ್ನೂ ಮತ್ತಾಣೋರಿಂಗೆ ಬಿಟ್ಟು, ಅವು ಮನೆಮಟ್ಟಿಂಗೆ ಇದ್ದವು ಅಷ್ಟೇ.

ಯ:

ಸುತ್ತ ಬಪ್ಪದು:
ಅಲ್ಲಿಂದಲ್ಲಿಗೆ ದೈಹಿಕ ಚಟುವಟಿಗೆ ಇಪ್ಪ ವೆಗ್ತಿಗೊ, ಜಾಸ್ತಿ ಓಡಾಟ ಇಲ್ಲದ್ದೆ ಮನೆಯೊಳವೇ ಇಪ್ಪದರ ಹೀಂಗೆ ಹೇಳ್ತವು.
ಆರುದೇ, ಯೇವದಕ್ಕೂ ಸುತ್ತ ಬತ್ತವಿಲ್ಲೆ, ಆದರೆ ಈ ಶೆಬ್ದ ಹಾಂಗೆ; ಅಷ್ಟೆ. ಪ್ರಾಯ ಆಗಿ, ಮುಪ್ಪು ಅಡರಿ ದೇಹಾಲಸ್ಯ ಬಂದು ಸಾಮಾನ್ಯ ಕಾರ್ಯಕ್ಷೇತ್ರವ ಮನೆಯೊಳ ಮಾಂತ್ರ ಸೀಮಿತ ಮಡಗುತ್ತವಲ್ಲದೋ – ಅವಕ್ಕೆ ಹಾಂಗೆ ಹೇಳುದು.
ಇದುದೇ ಒಂದು ರಜಾ, ಮನೆಮಟ್ಟಿಂಗೆ ಇಪ್ಪ ಸನ್ನಿವೇಶವ ಹೋಲ್ತು.
ಹಾಂಗೆ ನೋಡಿರೆ, “ಮನೆಮಟ್ಟಿಂಗೆ” ಹೇಳಿರೆ ವ್ಯಾವಹಾರಿಕ ವಾನಪ್ರಸ್ಥ; “ಸುತ್ತಬಪ್ಪದು” ಹೇಳಿರೆ ದೈಹಿಕ ವಾನಪ್ರಸ್ಥ.
ಒಂದು ಕಾಲಲ್ಲಿ ಮಹಾ ಕಾರ್ಬಾರು ಮಾಡಿದ ಆಲೆಕ್ಕಾಡಿ ಅಜ್ಜ, ಈಗ ಮನೆಲೇ ಸುತ್ತ ಬತ್ತವು; ಅಷ್ಟೇ.

ಹಲ್ಲು ಕಿಸಿವದು:

ನಮ್ಮ ಮನಸ್ಸಿಂಗೆ ಹಿತ ಇಲ್ಲದ್ದೋರು ಅನಪೇಕ್ಷಿತ ನೆಗೆ ಮಾಡ್ತದಕ್ಕೆ ಹೀಂಗೆ ಹೇಳ್ತವು.
ತೂಷ್ಣಿಲಿ ಇದರ ಕಿಸಿವದು ಹೇಳಿಯೂ ಹೇಳ್ತವು.
ಅಕ್ಕಾದೋರು ನೆಗೆಮಾಡಿರೆ “ಮುಗುಳ್ನಗೆ”, ಆಗದ್ದೋರು ನೆಗೆಮಾಡಿರೆ ಕಿಸಿವದು – ಹೇಳ್ತದು! 😉
ಉದಾಹರಣೆಗೆ,
ರಂಗಮಾವ° ಅಡಕ್ಕೆ ಸೇಂಪುಲು ಚೀಲಲ್ಲಿ ನೇಲುಸಿ ತೆಕ್ಕೊಂಡು ಹೋಪಗ ಅಡಕ್ಕೆ ಸೇಟು ಮೋರೆನೋಡಿ ಕಿಸಿತ್ತಡ.
ಓಯ್, ಇನ್ನೊಂದು ಗುಟ್ಟು: ಕೂಸುಗೊ ಮಾಣಿಯಂಗಳ ನೋಡಿ ಮುಗುಳ್ನಗೆ ಕೊಡ್ತವು; ಮಾಣಿಯಂಗೊ ಕೂಸುಗಳ ಮೋರೆ ನೋಡಿ ಕಿಸಿತ್ತವು! 😉

~

ಪಳಮ್ಮೆ(ಗಾದೆ) ಹೇಳಿರೆ ಸ್ವಾನುಭವಂದಲೇ ಎದ್ದು ಬಂದ ವಾಕ್ಯಂಗೊ. ಆದರೆ ಈ ಪರಿಭಾಶೆಗೊ ಹಾಂಗಲ್ಲ, ಒಂದು ಭಾವನೆಯ ಅಭಿವ್ಯಕ್ತಿ ಮಾಡ್ಳೆ ಬಳಸುತ್ತ ನಮುನೆ ಪದಗುಚ್ಛಂಗೊ.
ಇದಕ್ಕೆ ವಿಶೇಷವಾಗಿ ಶಬ್ದಾರ್ಥಂಗೊ ಇರ. ಇದ್ದರೂ ಅದರ ವಾಕ್ಯಾರ್ಥಕ್ಕೆ ಹೊಂದ. ಆದರೆ, ಆ ಪದಗುಚ್ಛಂಗಳ “ಭಾವಾರ್ಥ”ವ ಮಾಂತ್ರ ತೆಕ್ಕೊಂಡರೆ ಮಾತು ರಂಜಿಸುಗು.
ಹಾಂಗಾಗಿ, ಸ್ವತಃ ಏನೂ ಅರ್ಥ ಇಲ್ಲದ್ದ – ಸ್ವಾರ್ಥ ಇಲ್ಲದ್ದ, ಶಬ್ದಾರ್ಥವೂ ಇಲ್ಲದ್ದ, ಇಂತಹ ಪದಾರ್ಥಂಗಳ ಬಳಸಿಗೊಂಡ್ರೆ ಮಾತು – ಹೇಳ್ತ ಭೋಜನ ನವರಸ ಭರಿತ ಆಗಿ ರುಚಿಕರ ಆವುತ್ತು – ಹೇಳ್ತರಲ್ಲಿ ಸಂಶಯ ಇಲ್ಲೆ.

~

ಈ ಪರಿಭಾಶೆಗೊ ಜೆನಜೀವನಲ್ಲಿ ಸೇರಿಗೊಂಡು ಬಂದದು. ಪ್ರತಿಯೊಂದು ಸಂಸ್ಕೃತಿಗೂ ಒಂದೊಂದು ಈ ನಮುನೆ ಗಾದೆಗೊ, ಪದಗುಚ್ಛಂಗೊ ಇರ್ತು; ಆಯಾ ಜೆನಜೀವನದ ಸಂಪರ್ಕ ಇದ್ದೋರು ಮಾಂತ್ರ ಆಯಾ ಶಬ್ದಂಗಳ ಬಳಸುತ್ತದು ಕಾಂಗು – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
ಹಾಂಗಿಪ್ಪ ಶಬ್ದ ಕೆಲವು ಸೇರುಸಿರೇ ಆ ಮಾತಿಂಗೆ “ಹಳಬ್ಬರ” ಛಾಪು ಬಪ್ಪದು – ಹೇಳ್ತದು ರಂಗಮಾವನ ಭಾವನೆ.

ಏನೇ ಆಗಲಿ, ಮಾತಿನ ಎಡಕ್ಕಿಲಿ ಹೀಂಗಿರ್ತ  ಪರಿಭಾಶೆಯ ಸೇರುಸಿ ಮಾತಾಡ್ಳೆ / ಕೇಳುಲೆ ಗಮ್ಮತ್ತಾವುತ್ತು ಬಾವ..
ಒಪ್ಪಣ್ಣಂಗೂ ಹಾಂಗೇ!
ನಿಂಗೊಗೆ?

ಒಂದೊಪ್ಪ:  ಪರಿಭಾಶೆಗಳ ಬಳಕೆ ಬಿಟ್ಟು ಹೋದರೆ ಮುಂದಕ್ಕೆ ನವಗೇ ಅಯ್ಯನಮಂಡೆ ಅಕ್ಕು. ಅಲ್ಲದೋ?

ವಿ.ಸೂ:

  1. ಈ ಪಟ್ಟಿ ಹುಟ್ಟಿ, ಬೆಳವಲೆ ಮೂಲ ಕಾರಣ ಆದ ಬೈಲಿನ ಮಾಷ್ಟ್ರುಮಾವಂಗೆ ಒಪ್ಪಣ್ಣನ ವಿಶೇಷ ಪ್ರಣಾಮಂಗೊ ಸಲ್ಲುತ್ತು.
  2. ಒಪ್ಪಣ್ಣನ ಪಟ್ಟಿಲೇ ಇನ್ನೂ ಸುಮಾರು ಪರಿಭಾಶೆಗೊ ಇದ್ದು, ಶುದ್ದಿ ಉದ್ದ ಆತು ಹೇಳಿಗೊಂಡು ಇನ್ನೊಂದರಿಂಗೆ ಹೇಮಾರುಸಿ ಮಡಗಿದ್ದು. ಪುರುಸೋತಿಲಿ ಮಾತಾಡುವೊ°, ಆಗದೋ? 😉
  3. ಬಿಟ್ಟು ಹೋದ ಪ್ರಯೋಗವ ನಿಂಗಳೂ ಒಪ್ಪಲ್ಲಿ ನೆಂಪುಮಾಡಿ. ಬೈಲಿಂದ ಒಲಿಪ್ಪೆ ಪಡಕ್ಕೊಳಿ! 🙂

70 thoughts on “ಧ್ವನ್ಯಾರ್ಥ ಇಲ್ಲದ್ದರೂ, ಭಾವಾರ್ಥ ಇಪ್ಪ ‘ಪರಿಭಾಶೆಯ’ ಪದಾರ್ಥಂಗೊ…

  1. ಇಲ್ಲಿ ಎಲ್ಲರು ಭಾರಿ ಲಾಯ್ಕಲ್ಲಿ ಬರದ್ದವು ಇದರ “ನೆಲಕ್ಕಲಿ ಮಡುಗಿರೆ ಎರುಗು ಕಚ್ಯೊ೦ಡು ಹೋಕು,ಮೇಲೆ ಮಡುಗಿರೆ ಕಾಗೆ ಕಚ್ಯೊ೦ಡು ಹೋಕು .” ಹಾ೦ಗಾಗಿ ಹೊಗೆ ಅಟ್ತಲ್ಲಿ ಕಟ್ತಿ ಮಡುಗೆಕ್ಕು.

  2. ನಮ್ಮ ಕೆಲಸಲ್ಲಿ, ಮಾತಿಲ್ಲಿ, ಕೈಕರಣಲ್ಲಿ, ಮೋರೆಯ ಹಾವ ಭಾವಲ್ಲಿ ಪ್ರತಿಯೊಂದರಲ್ಲಿಯೂ, ತಮಾಶೆ, ಹಾಸ್ಯ ಬೇಕಾದಷ್ಟಿದ್ದರೂ, ಹೆಚ್ಚಿನವರ ಗಮನಕ್ಕೆ ಬತ್ತಿಲ್ಲೆ. ನಮ್ಮ ಒಪ್ಪಣ್ಣ ಸೂಕ್ಷ್ಮಗ್ರಾಹಿ! ಅವನ ತಮಾಶೆ, ಹಾಸ್ಯ ಎಲ್ಲವೂ ನಾವು ಮಾತಾಡುವ ರೀತಿ, ಭಾಷೆ, ಆಚಾರವಿಚಾರಂಗಳಲ್ಲಿ ಇಪ್ಪದೆ. ಆದ ಕಾರಣವೇ ಅವನ ಬರಹಂಗೊ ನವಗೆ ಮೆಚ್ಚಿಗೆಯಾವುತ್ತು. ಅದಲ್ಲಿಪ್ಪ ಹಾಸ್ಯ ಕೊಂಕಿಲ್ಲದ್ದ, ನಿಷ್ಕಲ್ಮಶ ತಮಾಶೆ. ಇದು ಆರೋಗ್ಯಕ್ಕೆ ಹಿತವಾದ ಹಾಸ್ಯ.

    ನಾವು ಮಾತಾಡುವಾಗ ಎಷ್ಟೋ ಅಗತ್ಯ(ತೆ?- ಬೇಡ) ಇಲ್ಲದ್ದ, ಅರ್ಥ ಇಲ್ಲದ್ದ ಶಬ್ದಂಗಳ, ವಾಕ್ಯಂಗಳ ಉಪಯೋಗುಸುತ್ತು. ಕೆಲವು ಶಬ್ದಂಗೊ ಸಂದರ್ಭಕ್ಕೆ ಸರಿಯಾಗಿ ಬೇರೆಯೇ ಅರ್ಥ ಕೊಡುತ್ತು. ಒಪ್ಪಣ್ಣನ ಸಂಗ್ರಹವೇ ಸಾಕಷ್ಟಿದ್ದು. ಅದಕ್ಕೆ ಸೇರುಸಲೆ, ಮೇಗೆ ಕಾಂಬ ಹಾಂಗೆ, ಬೈಲಿನವು ದೊಡ್ಡ ಪಟ್ಟಿಯೇ ಕೊಟ್ಟಿದವು.

    ಹೀಂಗೇ ಇಪ್ಪ ಹಾಸ್ಯದ ಒಂದೆರಡು ವೀಡ್ಯೊಂಗಳ ನೋಡಿಃ

    http://www.youtube.com/watch?v=1WchuF_EgOg&feature=colike

    http://www.youtube.com/watch?v=5XL_745CmrI&f

    ನಿನ್ನೆ ಬಚ್ಚಿ ಬಂದು ಮನಿಗಿದವಂಗೆ ‘ಬಡುದು ಹಾಕಿದಾಂಗೆ ಒರಕ್ಕು’

  3. ಹೋ,ಒಪ್ಪಣ್ಣಾ.
    ಆನು ಕಡೇ೦ದ ಕೊಡೀ ವರೆಗೆ ಕೊಡೀ೦ದ ಕಡೇವರೆಗೆ ಓದಿದಲ್ಲಿಯೇ ಬಾಕಿ.ಸ೦ಗ್ರಹಯೋಗ್ಯ ಲೇಖನವೂ,ಒಪ್ಪ೦ಗಳೂ. ಸ೦ಗತಿ ಗೊ೦ತಿಲ್ಲದ್ದರೆ ‘ಉಸ್ಕು ದಮ್ಮಿಲ್ಲದ್ದೆ’ ಕೂರೆಕ್ಕಷ್ಟೆ. ಹು..

  4. ಓ ದೇವರೆ…!! ಆನು ಇಂದು ನೋಡಿದ್ದಷ್ಟೆ… ಬಾರೀ ಲಾಯಿಕ ಇದ್ದು…ಒಪ್ಪ..ಕೊಡದ್ದೆ ಹೇಂಗಿಪ್ಪದಪ್ಪಾ…!! ಆದರೆ ರೆಜಾ ಜಾಗ್ರಂತೆ..!! ಎನ್ನ ಹಲ್ಲು ರೆಜಾ ಮುಂದೆ……!!ಮತ್ತೆ ಒಂದು ನೆನಪ್ಪಾತು…ಈ ’ಮಿಂದ’ ಹೇಳುವ ಶಬ್ದ..”ಅಟ್ಟುಂಬಳ’ ಹೇಳುದು ಈಗ ಆರಾದರೂ ಹೇಳ್ತವೋ…!!….ಬಾವಂದ್ರಿಂಗೆ ಗೊಂತಿರ..!! ಮಾವನೋ.. ಅಪ್ಪಚ್ಚಿಯೋ’ಮಣ್ಣೊ’ ಹೇಳುಗು…

    1. ನಮಸ್ತೇ ಮೂರ್ತಿ ಅಣ್ಣ,

      ಪ್ರೀತಿಯ ಸ್ವಾಗತ ನಿಂಗೊಗೆ ಬೈಲಿಂಗೆ!! ಬೈಲಿಲಿ ನಿಂಗಳ ಕಂಡು ಕೊಶೀ ಆತು. 🙂

      ಬೈಲಿನೋರಿಂಗೆ ನಿಂಗಳ, ನಿಂಗಳ ಕಾರ್ಯಕ್ಷೇತ್ರದ ಪರಿಚಯ ಇದ್ದು. 🙂 🙂
      ನಿಂಗಳ ಒಪ್ಪದ ಒಪ್ಪ ನೋಡಿ ಸಂತೋಷ ಆತು..

      ಬತ್ತಾ ಇರಿ ಬೈಲಿಂಗೆ!! ನಿಂಗಳ ಅನುಭವವೂ ಬತ್ತಾ ಇರಲಿ…

      1. ಓ!! ಶ್ರೀಅಕ್ಕ…!! ನೀನಿದ್ದೆ ಅಪ್ಪೋ ಇಲ್ಲಿ…!! ನಿನಗೆ ನೆನಪ್ಪಿದ್ದೋ ’ಮಿಂದ’ ಹೇಳುವ ಶಬ್ಧ…’ ಈಗ ನೀನು ಪಂಜ ಸೀಮೆ ಆದರೂ, ಮೊದಲು…ಇತ್ಲಾಗಿ ಅಲ್ಲದೋ..!! ಆನು ಸಣ್ಣಾಗಿಪ್ಪಾಗ ಎನ್ನ ಅಜ್ಜನ ಮನೆಲಿ …ಈ ’ಮಿಂದ’ ಹೇಳುವ ಶಬ್ಧ ಉಪಯೋಗಲ್ಲಿ ಇತ್ತು….’ ರೆಜ’ (ಸ್ವಲ್ಪ) ಹೇಳುವ ಅರ್ಥ…ಆನು ಸಣ್ಣಾಗಿಪ್ಪಾಗ…ಬೆಳ್ಳಾರೆಲಿ..ಎನ್ನ ಒಬ್ಬ ಮಾವ ಡೋಂಗಿ ಮಾಡುಗು…’ಹೌದೋ…ಮೂರ್ತಿ!! ನಿನ್ನ ಪಡ್ಲಾಗಿಯವು…’ಮಿಂದನೀರು’ ಕುಡಿವವು ಅಲ್ವೋ…!!ಹೇಳಿ….ಆನು ಮೂಡ್ಲಾಗಿಯಾಣವ ಆದರೂ…ಎನ್ನ ಅಜ್ಜನ ಮನೆ ಪಡ್ಲಾಗಿಯಾದ ಕಾರಣ ಎನಗೆ ಕೋಪ ಬಂದು ಕೊಂಡಿತ್ತು…..ಈಗ ಮಾವ ಇದ್ದಿದ್ದರೆ ಡೋಂಗಿ ಮಾಡ್ಲೆ ಅವುತಿತ್ತಿಲ್ಲೆ…ಅರುದೇ ’ಮಿಂದ’ ನೀರು ತಾ…ಹೇಳ್ತವಿಲ್ಲೆ..ಅಲ್ಲದೋ…!!

    2. ‘ಅಟ್ಟು೦ಬಳ’ವೂ ಮಾಯ, ‘ಹೊಗೆಯಟ್ಟ’ವೂ ಮಾಯ ಅಲ್ಲದೋ ಮೂರ್ತಿ ಮಾವಾ°?
      ‘ ಮಿ೦ದ’ ದ ಒಟ್ಟಿ೦ಗೆ ಇಪ್ಪ ‘ದಣಿಯ’ ಶಬ್ದದ ಬಳಕೆಯೂ ಕಮ್ಮಿ ಆದ್ದದೋ ಅಲ್ಲ ಆನು’ಕೆಬಿರ°’ಆದ್ದದೋ,ಉಮ್ಮಪ್ಪ.!!

  5. ಆಧುನಿಕ ತಂತ್ರಜ್ನಾನವ ಉಪಯೋಗಿಸಿ ಹವ್ಯಕರ ರೀತಿ ರಿವಾಜುಗಳ ನೆನಪಿಸಿ ಕೊಡುವ ಒಪ್ಪಣ್ಣನ ಸುದ್ದಿಗಳ ಓದುವಾಗ ಹಳೆ ಮರಲ್ಲಿ ಹೊಸ ಚಿಗುರು ಬಂದ ಹಾಂಗೆ ಕಾಣ್ತು. .

    * ಹತ್ತರ ಒಟ್ಟಿ೦ಗೆ ಹನ್ನೊಂದು
    * ಕೈ ಕುಂಟು ಮಾಡುದು
    * ಹಸಿ ಮಡಲ ಸೂಟೆ ಕಟ್ಟಿ ಹುಡುಕುದು
    * ಕುಳಿoಪನ ಹಾಂಗೆ ಓಡುದು ( ತುಂಬಾ ಚಟುವಟಿಕೆಲಿ ಇಪ್ಪ ಹರವ / ನಡವ ಮಕ್ಕೊಗೆ ಹೇಳುದು )
    * ತಲೆ ಬುಡ ಗೊಂತಾವುತಿಲ್ಲೆ
    * ಬೇಳಗೆ ಮಣ್ಣು ಉದ್ದಿದಷ್ಟು ಗೆನ ಅಪ್ಪದು
    * ಕಾನೂನು ಕಾಯಿದೆ ಬಿಕ್ಕುದು (ಮಕ್ಕೋ ಸುಮ್ಮನೆ ಹೆರಿಯೋರತ್ತರೆ ವಾದ ಮಾಡಿಗೊಂದ್ದಿದ್ದರೆ ಹಿರೆಯೋರು ಅವರ ಅಸಮಾಧಾನವ ತ್ಹೊರುಸುವಗ ಈ ರೀತಿ ಹೇಳುಗು )
    * ಮರ ಬಿಟ್ಟ ಮಂಗನ ಹಾಂಗೆ ಅಪ್ಪದು ( ಮಾಣಿ ಹೊಸ್ಟೇಲಿಂಗೆ ಸೇರಿ ಒಂದು ವಾರ ಮರ ಬಿಟ್ಟ ಮಂಗನ ಹಾಂಗೆ ಇತ್ತಿದ್ದ )
    * ತಲೆ ಕಡುದ ಹಾಂಗೆ ಅಪ್ಪದು
    * ಕೊಲೆ ಕೊಂಡಾಟ ಮಾಡಿದ ಹಾಂಗೆ
    * ಮೋರೆಲಿ ಚೋಲಿ ಇಲ್ಲದ್ದ ಜಾತಿ

  6. ಒಪ್ಪಣ್ಣಾ ಹೇಳಿದರೆ ಬೈಲಿನ ಕಣ್ಣು. ಅವ ಬರದ್ದದೆಲ್ಲವೂ ಒಳ್ಲೇ ಮಹತ್ವಪೂರ್ಣವಾಗಿಯೇ ಇರುತ್ತು.ತುಂಬಾ ಗುಢಾರ್ಥಂಗಳನ್ನೂ ,ಅಮೂಲ್ಯ ಮಾಹಿತಿಗಳನ್ನು ಹೊಂದಿರುತ್ತು. ಅದರ ಓದುವುದೇ ಒಂದು ಖುಷಿಯ ಕೆಲಸ. ಹವ್ಯಕ ಭಾಷೆಯ ಉಳಿಸಿ ಬೆಳೆಶುತ್ತಾ ಇಪ್ಪ ಒಪ್ಪಣ್ಣಂಗೆ ಧನ್ಯವಾದಂಗೊ.

  7. ನೀರು ಕುಡುಶುದು, ಬೆಣ್ಣೆ ಹಾಕುದು, ಬಿತ್ತು ಹಾಕುದು, ಹಿಡುಶುದು, ಬೋಳುಸುದು ಹೀಂಗಿರ್ತ ಹಲವಾರು ಪರಿಭಾಶೆಗಳ ಬಳಕೆ ನಾವು ಧಾರಾಳವಾಗಿ ಮಾಡ್ತಾ ಇರ್ತು.
    ‘ಕೆಮಿ ಹೂಗು ಅರಳಿತ್ತು’
    ‘ಕಣ್ಣಿಲ್ಲಿ ಶುಕ್ರ ಮೂಡಿದ್ದೋ?’
    ‘ಎಮ್ಮೆ ಕಣ್ಣು ಒಕ್ಕಿದ್ದನೋ?’
    ‘ಒಂದೋ ಆರು ಮೊಳ, ಅಲ್ಲದ್ರೆ ಮೂರು ಮೊಳ’
    ‘ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ’

    …… ಒಕ್ಕಿದಷ್ಟೂ ಹುಡ್ಕಿದಷ್ಟೂ ಹೀಂಗಿದ್ದ ಅಮೂಲ್ಯ ಪದನಿಧಿಗೊ ಸಿಕ್ಕುತ್ತಾ ಇಕ್ಕು..

  8. ಮನ್ನೆ ತೆಂಕ್ಲಾಗಿಯಾಣ ಒಬ್ಬ ಭಾವಯ್ಯನ ಕಾಂಬಲೆ ಹೋಗಿತ್ತಿದ್ದೆ. ಯಜಮಾಂತಿ ಮನೆಲಿ ಇದ್ದರೂ ಆಸಾಮಿ ಸ್ವತಃ ಅಡುಗೆ ಡ್ಯೂಟಿ ವಹಿಸಿಯೊಂಡಿದವು! ‘ಸಂಗತಿ ಎಂತ?’ ಕೇಳಿದೆ. ‘ಅದು ಚೆಂಬು ಕವುಂಚಿ ಹಾಕಿದ್ದು’ ಹೇಳಿ ಹುಳಿಹುಳಿ ನೆಗೆ ಮಾಡಿದವು. ಅಷ್ಟಪ್ಪಗ ಅಂದಾಜಿ ಆತು ಎನಗೆ.

    ಹ್ಞಾ.. ಕವುಂಚಿ ಹಾಕುದು ಹೇಳಿಯಪ್ಪಗ ನೆಂಪಾತಿದಾ, ಒಂದು ಮನೆಯ ಎಲ್ಲಾ ಜಂಬ್ರಂಗೊಕ್ಕೂ ಬಂದು ಸುರುವಿಂದ ಅಕೇರಿವರೆಗೆ ಸುದರ್ಸುತ್ತ ನೆರೆಕರೆಯವರ ‘ ಆ ಮನೆಲಿ ಕವುಂಚಿ ಮಡುಗಿದ ಪಾತ್ರ ಮೊಗಚ್ಚೆಕ್ಕಾರೆ ಅವ° ಬಂದಾಯೆಕ್ಕು’ ಹೇಳ್ತ ಕ್ರಮ ಇದ್ದು ಅಲ್ಲದೋ?

  9. ನಾವು ಮಾತಾಡುವಗ ತನ್ನಿಂತಾನೇ ಬತ್ತ ಕೆಲವು ವಿಶೇಷ ಹವ್ಯಕ ಶಬ್ದಂಗಳ ಉದಾಹರಣೆ ಸಹಿತ ವಿವರುಸಿ ಕೊಟ್ಟದು ಲಾಯಕಾಯಿದು. ಬರವಲಪ್ಪಗ ಈ ಶಬ್ದಂಗೊ ಒಂದೂ ನೆಂಪು ಆವ್ತಿಲ್ಲೆ. ಬಹುಶ ಅಟ್ಟಲ್ಲಿ ಮಡಗಿದ ಹಳೇ ಸಾಮಾನುಗಳ ಹಾಂಗೇ ಉಪಯೋಗಿಸದ್ದೇ ಇಪ್ಪ ಕಾರಣ ಆಯ್ಕೋ ಹೇಳಿ. ಒಪ್ಪಂಗಳ ಒಟ್ಟಿಂಗೆ ಅಪರೂಪದ ಶಬ್ದಂಗಳನ್ನುದೆ ತುಂಬಾ ಜೆನ ನೆಂಪು ಮಾಡೆಂಡವು. ಕೈ ತೊರುಸುತ್ತು (ಎರಡು ಪೆಟ್ಟು ಮಡಗಲೆ), ಕುಂಡೆ ಚೋಲಿ ಎಳೆತ್ತೆ (ಮಕ್ಕಳ ಬೈವಗ), ಅರೆಪಿಸ್ಕಟೆ (ಸರಿಯಾಗಿ ಎಂತೂ ಮಾಡದ್ದವ).. ಒಪ್ಪಣ್ಣ ಒಳ್ಳೆ ಸಂಗ್ರಹ ಯೋಗ್ಯ ವಿಷಯದ ಬಗ್ಗೆ ಚೆಂದಕೆ ಬರದ್ದ.ಹಳತ್ತರ ಎಲ್ಲ ಮತ್ತೆ ನೆಂಪು ಮಾಡಿದ್ದ°. ಮಹೇಶ° ಹೇಳಿದ “ವಿಪಶ್ಚಿದಪಶ್ಚಿಮ‘” ಶಬ್ದ, ಒಪ್ಪಣ್ಣಂಗೆ ಒಳ್ಳೆ ಒಪ್ಪುತ್ತು.

  10. ಬಾರೀ ಲಾಯ್ಕಾಯ್ದು ಬರದ್ದು..ಎನಗೆ ನೆನಪ್ಪಾದ್ದು ಕೆಲವು-
    “ಕೆಮಿಗೆ ಗಾಳಿ ಹೊಕ್ಕಿದ್ದು”
    “ಕಟ್ಟೆ ಪೂಜೆ” ಮಾಡ್ಯೊ೦ಡು ಹೋಪದು(ಅಲ್ಲಿ ಅಲ್ಲಿ ನಿಲ್ಸ್ಯೊ೦ಡು ಹೋಪದು)
    “ಮೋರೆಯ ನಾಯಿ ನಕ್ಕಿದ್ದಾ “(ಹೇಳಿ ಬೊಟ್ಟು ಹಾಕದ್ದರೆ ಕೆಳ್ತವಲ್ದಾ)
    “ಅರೆಬ್ಬಾಯಿ” ಕೊಡುದು( ಮಕ್ಕೊ ಜೋರು ಕೂಗುದಕ್ಕೆ ಹೇಳುದು)
    “ಅಡ್ಡ ಬಾಯಿ “ಹಾಕುದು(ಆರಾರು ಮಾತಾಡ್ಯೊ೦ಡಿಪ್ಪಗ ಮಧ್ಯ ಮಾತಾಡುದು)
    “ಡ೦ಗೂರ ಸಾರುದು”
    “ಪುಚ್ಚೆ ಬೀಲ”ದಾ೦ಗಿಪ್ಪ ಜೆಡೆ( ಸಪೂರ ಜೆಡೆ ಹೇಳಿ ಹೇಳುದಕ್ಕೆ ಹೇಳ್ತದು)

  11. ಒಪ್ಪಣ್ಣೋ..,
    ಒಳ್ಳೆ ಸಂಗ್ರಹ ಯೋಗ್ಯ ಶುದ್ದಿ. ನಾವು ನಿತ್ಯ ಉಪಯೋಗ ಮಾಡಿದರೂ ಗಮನಿಸದ್ದೆ ಇಪ್ಪ ವಿಷಯದ ಬಗ್ಗೆ ಬರದ್ದದು ತುಂಬಾ ಲಾಯ್ಕಾತು. ಎನಗೆ ನೆಂಪಾದ ಕೆಲವು..

    ♦ಪೆಂಗಣ್ಣ ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ ಹೇಳಿ ಒಪ್ಪಣ್ಣ ಹೇಳಿದ್ದೆ ತಟ್ಟು,.. ಸೀದಾ ಅಶೋಕೆಗೆ ಹೋಗಿ ಶುದ್ದಿ ತಂದು ಬೆಶಿ ಬೆಶಿ ಹಾಕಿದ್ದದೆ!!
    ♦ಅಭಾವನ ಹತ್ತರೆ ದೊಂಡಗೆ ನೀರೆರದು ಹೇಳಿದ ಒಪ್ಪಣ್ಣ ಶುದ್ದಿ ಬರೇ, ಶುದ್ದಿ ಬರೇ ಹೇಳಿ! ಅವ° ಗುಮಾನ ಮಾಡಿದ್ದಾ° ಇಲ್ಲೆ, ಬೈಲಿಲಿ ಒಪ್ಪಣ್ಣ ಬರದಪ್ಪಗ ಗುರುಗಳ ಶುದ್ದಿಯ ರಾಶಿಯನ್ನೇ ತಂದ°.
    ♦ಬೋಚ ಭಾವನ ಹತ್ತರೆ ಮೊನ್ನೆ ಒಂದರಿ ಅಂಬೇರ್ಪಿಂಗೆ ಬೊಂಡ ತೆಗದು ಕೊಡು ಹೇಳಿದೇ, ಅವ° ಆನೆ ಮೇಲೆ ಅಂಬಾರಿಯ ಹಾಂಗೆ ಬಂದ° ತಿಂಡಿ ಮಾಡಿದ್ದೆ ಭಾವ ಬಾ ಹೇಳಿದ್ದರೆ ಮೀಂಚುಳ್ಳಿಯ ಹಾಂಗೆ ಬರ್ತಿತಾ.!!
    ಇನ್ನೊಂದು ಶಬ್ಧ ನಿಧಾನಕ್ಕೆ ಕೆಲಸ ಮಾಡುದಕ್ಕೆ.. ಕೆಲಸ ಅಪ್ಪಗ ಮಂಗು ಪುಚ್ಚೆ ಮದಿಮ್ಮಾಳು ಅಕ್ಕುಹೇಳಿ..
    ♦ಕಾನಾವಣ್ಣ ಉಂಬಗ ಕೋಳಿ ಹೆರ್ಕಿದ ಹಾಂಗೆ ಉಂಬದು..
    ♦ಸಪೂರದ ಮಾಣಿಯಂಗಳ ಚಳ್ಳುಬೀರ° ಹೇಳುಗು.. ಕೂಸುಗಳ ಕೋಲುತಿರಿಯ ಹಾಂಗೆ ಹೇಳಿ ಹೇಳುಗು..
    ♦ಅಣ್ಣನೂ ತಮ್ಮನೂ ಜಗಳ ಮಾಡಿ ಹಟಕ್ಕೆ ನಿಂದರೆ ಹೇಳುಗು.. ಒಬ್ಬ° ರಚ್ಚೆಂದ ಬಿಡ°, ಇನ್ನೊಬ್ಬ° ಗೂಂಜಿಂದ ಬಿಡ ಹೇಳಿ..
    ♦ಮಕ್ಕೋ ಮನೆಲಿ ಇದ್ದರೆ ಮನೆ ಗೊಬ್ಬರಗೋವಿಂದ ಅಕ್ಕು.. (ಎಲ್ಲಾ ಹರಡಿಗೊಂಡು ಇಕ್ಕು ಹೇಳಿ, ಹಟ್ಟಿಯ ಹಾಂಗೆ ಹೇಳ್ತ ಭಾವನೆ! )
    ♦ಸೇನವನ ಒಟ್ಟಿಂಗೆ ಉಗ್ರಾಣಿ ಹೋಪ ಕ್ರಮ ಇದ್ದಡ್ಡ ಅಲ್ಲದಾ ಹಾಂಗೆ ರಜ್ಜವೂ ಬಿಡದ್ದೆ ತಾಂಟಿಗೊಂಡು ಬಂದರೆ ಅಮ್ಮ ಪರಂಚುಗು ಎಲ್ಲಿಗೆ ಉಗ್ರಾಣಿಯ ಹಾಂಗೆ ಒಟ್ಟಿಂಗೆ ಬಪ್ಪದು ಹೇಳಿ!!
    ♦ಕರಟ ಕೋಲು ಹಿಡಿಶುದು ಆರನ್ನಾರು ಸೋಲುಸುದಕ್ಕೆ ಉಪಯೋಗ ಮಾಡುದು.. ಅವನ ಕರಟ ಕೋಲು ಹಿಡಿಶಿಯೇ ಹಿಡಿಶುತ್ತೆ ಹೇಳಿ..
    ♦ಆರಾರು ಬಡಪ್ಪತ್ತಿಲಿ ಇದ್ದರೆ ಹೇಳುಗಡ ಎಲ್ಲೋರೂ ಕಾಯಿ ಕೆರವಾಗ, ಎಂಗೋ ಕರಟ ಕೆರವದು ಹೇಳಿ..
    ♦ರೂಪತ್ತೆ ಅದರ ಮನೆಲಿ ಇಲ್ಲದ್ದ ಹೊಸತ್ತು ಏನಾರು ಇನ್ನೊಬ್ಬನ ಮನೆಲಿ ಕಂಡರೆ ಬರೀ ಕೇಡುಮುಟ್ಟೆಯ ಹಾಂಗೆ ಮಾಡುದು.
    ♦ ನಮ್ಮ ಆಳುಗಳ ಈಗ ಸಾಂಕೆಕ್ಕಾದರೆ ನಾವು ಟಂಕಸಾಲೆ ಕಟ್ಟೆಕ್ಕು ಅಲ್ಲದೋ?
    ♦ ಮಕ್ಕೊ ಹಶು ಅಪ್ಪಗ ಹೇಳುದು ಹೊಟ್ಟೆಲಿ ಬದನೆ ಪುರುಂಚಿತ್ತು ಹೇಳಿ!!

    ಒಪ್ಪಣ್ಣ, ನಮ್ಮ ಬೈಲಿನ ಹೆರಿಯೋರ ಹತ್ತರೆ ಇನ್ನುದೇ ಇಕ್ಕು.. ಇನ್ನೊಂದು ಶುದ್ದಿಗಪ್ಪಗ ಇನ್ನುದೇ ಸಿಕ್ಕುಗು..
    ಆಡು ಭಾಷೆಲಿ ಬಂದ ಶಬ್ಧಂಗಳ ನೆಂಪು ಮಾಡುವಾಗ ಸುಮಾರು ಕೊಶಿ ಆತು. ಪರಿಭಾಷೆಗಳ ಗುಚ್ಛ ಮಾಡಿದ್ದದು ಚೆಂದ ಆಯಿದು.

    ಒಂದೊಪ್ಪ ಲಾಯ್ಕಾಯಿದು.

    1. ಶ್ರೀ ಅಕ್ಕಾ, ನಿಂಗಳ ಸಂಗ್ರಹವೂ ಭರ್ಜರಿ ಆಯಿದು. ಅಭಿನಂದನೆಗೊ..
      ಒಪ್ಪಣ್ಣನ ಈ ಶುದ್ದಿ ಎನಗೆ ಎಷ್ಟು ಕೊಶಿಕೊಟ್ಟತ್ತು ಹೇಳಿರೆ ಪುನಾ ಇದರ ಮುದದಿಂದ ಓದಿದೆ. ಹವ್ಯಕ ಭಾಷೆಲಿ ಪೊದುಂಕುಳೂ ಇಲ್ಲೆ ಹೇಳುವವಕ್ಕೆ ಮೋರೆಗೆ ಬಡುದಾಂಗೆ ಅಕ್ಕು ಇದರ ಓದಿಯಪ್ಪಗ.

      ಅದೆಲ್ಲ ಅಪೂ, ನಮ್ಮ ಈ ನೆಗೆಮಾಣಿ ಇದ್ದ ಅನ್ನೆ- ಮಹಾ ಅಥರ್ವಣಿ- ಅವ° ಎಂತಗೆ ಅಂಬಗಂಬಗ ಬಂಡಾಡಿ ಅಜ್ಜಿಯ ಮನೆಗೆ ಹರುದುಬೀಳುದು? ಅಲ್ಲಿ ಎಂತ ಇವನ ಹೊಕ್ಕುಳು ಹುಗುದಾಕಿದ್ದೋ? ಹುಟ್ಟಿದಮತ್ತೆ ಹುಳಿಉಂಡೆ ಮೂಸಿರ, ಆದರೂ ಎಷ್ಟು ಚರ್ಬಿ ಅವಂಗೆ! ಅಜ್ಜಿ ಅವನ ಹೀಂಗೆ ಹೊತ್ತೊಂಬದೇ ಅವ° ನೆಲಮೆಟ್ಟದ್ದೆ ಇಪ್ಪಲೆ ಕಾರಣ! ಬಾಕಿದ್ದೋರು ಮುಗುದ ಕೈ ರಜ ಓರೆ ಆದರೆ ಸಾಕು ಧಗಧಗನೆ ಹಾರುತ್ತ! ಅಜ್ಜಿಯ ಞಙಣೆ ಮಙಣೆ ಮಾಡಿ ಮಂಕಾಡುಸಿ ಸೊಂಟಿಂಗೆ ಬೆಲ್ಲ ಉದ್ದಿದಹಾಂಗೆ ಎರಡು ಅಡಕ್ಕೆಯೋ ಮಣ್ಣೊ ಕೊಟ್ಟು ಅವು ಮಾಡಿಮಡುಗಿದ್ದರ ಹರಹರ ಮಾಡಿಕ್ಕಿ ಬತ್ತ! ಅವ° ಹೀಂಗೆ ಬೋಳುಸಿರೆ ಅಜ್ಜಿಯ ಕಥೆ ಗೋ…ವಿಂದ!!
      ಉದಿಯಪ್ಪಗ ಎದ್ದಕೂಡ್ಲೆ ‘ಬಸವ ಎದ್ದ; ಬಾಲ ಬೀಸಿದ ಹೇಳ್ತಾಂಗೆ’ ಹೆರಟು ಬೈಲಿಡೀ ರೋಂದು ಹೊಡೆತ್ತ. ಇವಂಗೆ ಇಂಗ್ಲೀಶು ಕಲಿವದು ಹೇಳಿರೆ ‘ಪುಕುಪುಕು’ ಹೇಳ್ತಡ. ಮಾಷ್ಟ್ರುಮಾವನ ಕಾಂಬಗ ಚಳಿ ಕೂರ್ತಡ, ತೆಗಲೆಲಿ ಅವಲಕ್ಕಿ ಕುಟ್ಟಿದಾಂಗೆ ಆವ್ತಡ.. ಕಲಿವಲೆ ಹೀಂಗೆ ಕಂಡುಕಟ್ಟಿರೆ ಅಕ್ಕೊ? ನಮ್ಮ ಒಪ್ಪಣ್ಣನ ಹೆರಕ್ಕಾಲು ಎಡೆಲಿ ನುಗ್ಗುಸೆಕ್ಕು ಅವನ!

  12. ಒಪ್ಪಣ್ಣ ನಮ್ಮ ಹವ್ಯಕ ಭಾಶೆಲಿ ಹೀ೦ಗಿಪ್ಪ ಶಬ್ಧ೦ಗಳ ಉಪಯೋಗಿಸುದು ಕಮ್ಮಿ ಆಯಿದು.. ಇದರ ಓದುವಗ ನೆನಪಾವುತ್ತು.. ತು೦ಬ ಒಳ್ಳೇ ಕೆಲಸ ಮಾಡಿದ್ದೆ ಒಪ್ಪಣ್ಣ, ತು೦ಬ ಶಬ್ಧ ಸಿಕ್ಕಿತ್ತು.. ಮಾತಾಡುವಗ ಸ೦ಧರ್ಭಕ್ಕೆ ಸರಿ ಆಗಿ ಇನ್ನಾದರೂ ಉಪಯೋಗಿಸಿಕೊ೦ಡು ಮು೦ದಾನವಕ್ಕ ನಮ್ಮ ಭಾಶೆಯ ಚ೦ದವ ಉಳಿಸುವ.. ಹಾ೦ಗೆ ಇನ್ನೊ೦ದು ಸೂಚನೆ ಎ೦ತ ಕೇಳಿರೆ,

    ನಾವು ಸಣ್ಣ ಮಕ್ಕಳತ್ರೆ ಬಾಲ ಭಾಶೆಲಿ ಮಾತಾಡುತ್ತಲ್ಲದಾ? ಅದರ ಬರೆಯಕಾತು. ಹಾಲು ಹೇಳುವಲ್ಲಿ ಜಾಯಿ ಹೇಳುತ್ತು, ನೀರು- ಜೀಜಿ, ಕೂರು= ಕೂಚು, ನಿಲ್ಲು= ತಾನೆ, ಹೂಗು=ಪೂಪಿ, ಇತ್ಯಾದಿ ಗ ..ಇದರ ಸ೦ಗ್ರಹಿಸಿ ಬರದರೆ ಎಲ್ಲೋರಿಗೂ ನೆನಪಾಕ್ಕು ಅಲ್ಲದಾ..

  13. ಲೇಖನ & ಒಪ್ಪಂಗಳ ಓದಿ ಅಪ್ಪಗ ತುಂಬಾ ನುಡಿಗಟ್ಟುಗಳ ಪರಿಚಯ ಆತು.
    ಒಪ್ಪಣ್ಣ ನ ಲೇಖನ ಸಂಗ್ರಹ ಯೋಗ್ಯ..ಇದಾ ಎನಗೆ ನೆಂಪಾದ ಒಂದು ನುಡಗಟ್ಟು…
    (೧).ತೊಟ್ಟು ಮುರುದು ಮೇಣ ನಕ್ಕುವವು ಬಡತನ ಸೂಚಿಸುವ ಶಬ್ದ.
    (೨) ಅವು ಒಣಕ್ಕೆಂದ ನಾರು ತೆಗವ ಜಾತಿ….(ಅವು ತುಂಬಾ ಪಿಟ್ಟಾಸೆಯವು../ಕುರಗೋ……)
    (೩) ಬೆಣ್ಣೆಲಿ ಕಲ್ಲು ಹುಡುಕುದು….ಇನ್ನೊಬ್ಬರ ತಪ್ಪಿನ ಅತಿ ಸೂಕ್ಶ್ಮ ಲ್ಲಿ ಕಂಡು ಹಿಡಿವದು…
    (೪) ಅವಂಗೆ ಹುಳಿಅಡರಿದ್ದು …..ಅಹಂಕಾರ ಸೂಚಕ…
    (೫)ಪಿಥ್ಹ ನೆತ್ತಿಗೇರಿದ್ದು… ದೊಡ್ಡ.ಕೋಪವ ಸೂಚಿಸುವ ಶಬ್ದ

  14. ಉಪ್ಪುಂಟೋ ಉಪ್ಪಿನ ಕಲ್ಲುಂಟೋ,ಏವಂಚ ಕಳಿಯ,ಪುಕುಳಿಗೆ ತೊಳುದು ಹಲ್ಲು ರಟ್ಸುದು,ನಕ್ಕಿ ನಕ್ಕಿ ಎಲುಗು ಮುರಿವದು…………………

  15. ಬಂದ ಉತ್ಪತ್ತಿ ನಿತ್ಯ ಖರ್ಚಿಗೇ ಮುಗುದು ಮತ್ತೆ ಬಂಡವಾಳಕ್ಕೆ ಬೇಕಾರೆ ಪುನಾ ಸಾಲ ಮಾಡೆಕಾಗಿ ಬಪ್ಪ ಸ್ಥಿತಿಗೆ “ಅಡಿ ಮೊದಲು ತಪ್ಪುವದು” ಹೇಳ್ತವೊ? ಊರಿಲ್ಲೆಲ್ಲ ಹಾಂಗಪ್ಪಗ `ಅವರ ಮನೆಲ್ಲಿ ಇನ್ನುದೆ ಹಳೆ ಅಡಕ್ಕೆ ಇದ್ದಡ’ ಹೇಳಿರೆ `ಗಟ್ಟಿ ಕುಳವಾರು‘ ಹೇಳಿ ಅರ್ಥ ಅಪ್ಪೊ?

    ಸುಭಗಭಾವನ ಒಪ್ಪ ನೋಡಿಯಪ್ಪಗ ನಮ್ಮ `ಟ್ಯೂಬ್ಲೈಟ್ ಒಂದರಿ ಜಿಗ್‘ ಹೇಳಿತ್ತು

    ಸಂಸ್ಕೃತಲ್ಲಿಯೂ ಹೀಂಗಿಪ್ಪ ನುಡಿಗಟ್ಟುಗೊ ಇದ್ದು ಹೇಳಿ ಹೇಳ್ತವು. ಸಂಸ್ಕೃತ ನಿತ್ಯವ್ಯವಹಾರಲ್ಲಿತ್ತು ಹೇಳುವದಕ್ಕೆ ಹಾಂಗಿಪ್ಪ ಶಬ್ದಂಗೊ ಸಾಕ್ಷಿ.
    ಉದಾಹರಣೆಗೆ-
    `ದೇವಾನಾಂ ಪ್ರಿಯಃ‘ ಹೇಳಿ ನಮ್ಮ ಬೋಸಭಾವನ ಹಾಂಗಿಪ್ಪವಕ್ಕೆ ಹೇಳುವದಡ.
    `ಪಂಡಿತಪುತ್ರಃ‘ ಹೇಳಿ ಬೋದಾಳಂಗೆ ಹೇಳ್ತವಡ.
    “ತಯೋರ್ಮಧ್ಯೇ `ಕೇಶಾಕೇಶಿ‘ ಪ್ರವೃತ್ತಮ್” (ಅವರಿಬ್ಬರ ನಡುವೆ `ಜಟಾಪಟಿ‘ ಆತು). ಅದಪ್ಪು, ಈ `ಜಟಾ‘ಪಟಿ ಶಬ್ದ ಜುಟ್ಟಿನ (ಜಟಾ)ಮೇಲೆ ಪಟ್ಟು ಹೇಳುವ ಅರ್ಥಂದಲೇ ಬಂದದೊ ಏನೊ?

    ನಮ್ಮ ಒಪ್ಪಣ್ಣ `ವಿಪಶ್ಚಿದಪಶ್ಚಿಮ‘ನೇ ಸರಿ! ವಿಪಶ್ಚಿದಪಶ್ಚಿಮ=ಅಸ್ತಮಿಸದ್ದ ಪಾಂಡಿತ್ಯ ಉಳ್ಳವ°.

    1. ಡಾಮಹೇಶ!

      [ನಮ್ಮ ಒಪ್ಪಣ್ಣ `ವಿಪಶ್ಚಿದಪಶ್ಚಿಮ‘ನೇ ಸರಿ! ವಿಪಶ್ಚಿದಪಶ್ಚಿಮ=ಅಸ್ತಮಿಸದ್ದ ಪಾಂಡಿತ್ಯ ಉಳ್ಳವ°.]

      ತುಂಬಾ ತುಂಬಾ ಲಾಯ್ಕಾಯಿದು ಈ ಶಬ್ಧ! ಒಪ್ಪಣ್ಣನ ಬಗ್ಗೆ ಸರಿಯಾಗಿಯೇ ಹೇಳಿದೆ.

      ತುಂಬಾ ಕೊಶೀ ಆತು. ಈ ಪಾಂಡಿತ್ಯ ಅವನಲ್ಲಿ ಯಾವಾಗಲೂ ತುಂಬಿಯೇ, ಹೀಂಗೇ ಹರಿತ್ತಾ ಇರಲಿ..

      ಈ ಹರಿವಿಲಿ ಬೊಗಸೆ ನೀರು ನಾವೆಲ್ಲ ಕುಡಿವ° ಅಲ್ಲದಾ?

      ಅಕ್ಷಯಶುದ್ದಿನಿಧಿಯಾಗಲಿ ಒಪ್ಪಣ್ಣ. ಅವನಿಂದ ಬೈಲು ಸಂಪದ್ಭರಿತವಾಗಲಿ..

      ಧನ್ಯವಾದಃ

    2. ಮಹೇಶಣ್ಣಾ, ನಮ್ಮ ಬೋಸಭಾವಂಗೆ ಸಂಸ್ಕೃತ ಬಿರುದು ಕೊಟ್ಟದು ನೋಡಿ ಕೊಶೀ ಆತು. ‘ಎನ್ನ ಆರೂ ಮೂಸುತ್ತವಿಲ್ಲೆ ‘ ಹೇಳಿ ಅವಂಗೆ ಇಷ್ಟನ್ನಾರ ಬೇಜಾರು ಆಗಿಂಡು ಇದ್ದಿಕ್ಕು. ಹಾಂಗೆ ಅವನ ಎಲ್ಲೋರು ಪುಸ್ಕಟೆ ಮಾಡ್ಲೆ ಅವಂಗೆಂತ ಪೆಟ್ಟುಕಮ್ಮಿಯೋ? ಅಲ್ಲ; ಸುತ್ತು ಕಮ್ಮಿಯೋ? ಅವ° ಜೆನ ರಜ ‘ಸಜ್ಜನ’ ಅಷ್ಟೆ! 😉

      1. ಅದಾ…!! 🙂
        ನವಗೆ ಸಂಸ್ಕೃತ ಬಿರುದು ಸಿಕ್ಕಿತದಾ… 😀
        ಹಾ೦ಗಾರೆ ನಮ್ಮ ಪ್ರಸ್ತಾಪ ಪುರಾಣ೦ಗಳಲ್ಲಿಯೂ ಇದ್ದು ಹೇಳಿ ಆತೋ ಅ೦ಬಗ..?? 😉
        ಏ?

  16. ಒಪ್ಪಣ್ಣ ಬಾರಿಲಾಯಕೆ ಆಯಿದು ನಮ್ಮ ಭಾಷೆಲಿ ನಿತ್ಯಕ್ಕು ಉಪಯೊಗಮಾಡುವ ಪರಿಭಾಷೆಯ ವಿವರಣೆ..
    ಕೆಲವೆಲ್ಲಾ ಎನ ಕೇಳಿ-ಬಳಕೆ ಮಾಡಿ ಗೊ೦ತ್ತಿದ್ದು…
    ಮತ್ತೆ ಕೆಲವು ಇದೇ ಮೊದಲಿ೦ಗೆ ಕೇಳಿ ತಿಳುದ್ದು.. 🙂

    ಆದರೆ, ಬೇಜಾರ ವಿಶಯ ಎ೦ತದೂ ಕೇಟ್ರೆ ಇ೦ದ್ರಾಣ ಪೇಟೆ ಭಾಷೆಲಿ ಇದರ ಬಳಕೆ ಕಮ್ಮಿಯಾವುತ್ತ ಲಕ್ಷಣ ಕಾಣ್ತಾ ಇದ್ದು..
    ಇದರ ಬದಲಾಗಿ ಇ೦ಗ್ಲೀಶು ಪದಬಳಕೆ ಹೆಚ್ಚುತ್ತಾ ಇದ್ದು.. 🙁

    ಎನಗೆ ತಿಳುದ ಒ೦ದೆರಡು ಪರಿಭಾಷೆಯ ಪದ೦ಗೊ:

    ೧. ಒರಿಕ್ಕ ಇಲ್ಲೆ – ತಾಳ್ಮೆ ಕಮ್ಮಿ
    ೨. ಬೆಗುಡು ಕೋಲ – ಅಜ್ಜ೦ದ್ರು ಪುಳ್ಳಿಯಕ್ಕೊ ಹಾಕುತ್ತ ಬಟ್ಟೆ ಶೈಲಿಯ ಬಗ್ಗೆ ಹೇಳುದು.
    ೩. ಗುಮಾನ ಇಲ್ಲೆ – ಹೇಳಿದ್ದು ಒ೦ದೂ ಕೆಮಿಗೆ ತೊಕ್ಕೊಳದ್ದೆ ಇಪ್ಪದು..
    ೪. ಎಷ್ಟು ಹೇಳಿರು ಅಡರ್ತ್ತಿಲ್ಲಿ – ತಲೆಗೆ ಹೋಗದ್ದೆ ಇಪ್ಪದು.
    ೫. ಎನ್ನ ಕೆಮಿಯೇ ಅಲ್ಲ ಹೇಳಿ ಕೂಯಿದಾ – ಹೇಳಿದ ಮಾತು ಒ೦ದೂ ಹೇಳದ್ದೆ ಇಪ್ಪದು..
    ೬. ಪೊರಿಯೆರ್ಪ್ಪು – ಅಂಬೆರ್ಪು.
    ೭. ನಾಲ್ಕು ಪೊಳಿ – ಲೂಟಿ ಮಕ್ಕೊಗೆ ಪೆಟ್ಟು ಕೊಡ್ತದು..
    ೮. ಉಳ್ಳಾಲ ಕೋಟೆ ತೋರುಸುದು – ಕೆಮಿತಿರ್ಪ್ಪುದು.. 😉

    1. ಯೇ ಚುಬ್ಬಣ್ಣ,
      ಸಣ್ಣಕೆ ಅಪುರೂಪದ ಸಂಗ್ರಹ ಮಾಡಿದ್ಸು ಪಷ್ಟಾಯಿದು!
      ನೆಗೆಮಾಣಿ ಕೆಲವು ಸರ್ತಿ ಅರ್ಗೆಂಟು ಮಾಡುವಗ “ಉಳ್ಳಾಲ ಕೋಟೆ” ತೋರುಸೇಕಾವುತ್ತೋ? 🙂

  17. ಶುದ್ದಿ ಲಾಯಿಕ ಆಯಿದು. ಒಳ್ಳೆ ಸಂಗ್ರಹ.
    ಮಾತಾಡುವಾಗ ಹೀಂಗಿಪ್ಪ ಪರಿಭಾಷೆಯ ಉಪಯೋಗಿಸಿರೆ, ಮಾತಿನ ಅರ್ಥಕ್ಕೊಂದು ತೂಕ ಹೆಚ್ಚು ಬತ್ತು. ಇಲ್ಲದ್ದರೆ ಅದು ಗ್ರಾಂಥಿಕ ಭಾಷೆ ಆವ್ತು.
    ಲೇಖನಕ್ಕೆ ಪೂರಕವಾಗಿ, ಹಲವಾರು ಒಪ್ಪಂಗಳಲ್ಲಿಯೂ ಹೀಂಗಿಪ್ಪ ಕೆಲವು ಶಬ್ದಂಗಳ ಪರಿಚಯ ಆತು.
    ಅದೌಚ ಹೇಳ್ತಕ್ಕೆ ಎಂಗಳತ್ಲಾಗಿ ಆದಾಯ್ಚೆ ಹೇಳ್ತವು, ಹಾಂಗೇ ಎತ್ತಾ-ಬತ್ತಾ ಹೇಳ್ತಕ್ಕೆ ಎತ್ತಪ್ಪತ್ತ ಹೇಳಿಯೂ ಕೇಳಿದ್ದೆ. ಊರಿಂದ ಊರಿಂಗೆ ರೆಜ ವೆತ್ಯಾಸ ಇಕ್ಕು ಅಲ್ಲದಾ?
    ಕೆಲವು ಕೇಳಿದ ಶಬ್ದಂಗೊ:
    ಪೊನ್ನಂಬ್ರ
    ಮಣ್ಣಾಂಗಟ್ಟಿ
    ಓಂಙುವದು
    ಸದಾ ಕುಟ್ಟಿಬದನೆ
    ಅನ್ವಾರಾಪತ್ತು
    ಉಭ ಶುಭ

    1. ಅಪ್ಪಚ್ಚೀ,
      ಅದಾ, ಪೊನ್ನಂಬ್ರ ಬಿಟ್ಟು ಹೋತನ್ನೇ! ಶುದ್ದಿ ಹೇಳುವಗ ’ಅದೆಂತ ದೊಡ್ಡ ಪೊನ್ನಂಬ್ರ’ವೋ ಹೇದು ಬಿಟ್ಟದಲ್ಲ ಆತಾ, ನೆಂಪಾಗದ್ಸು.
      ಸದಾ ಕುಟ್ಟಿ ಬದನೆಯ ನೆಂಪಪ್ಪಗ ನೀರ್ಕಜೆ ಚಿಕ್ಕಮ್ಮನ ನೆಂಪಾವುತ್ತನ್ನೇಪಾ!

      { ಎತ್ತಾ-ಬತ್ತಾ ಹೇಳ್ತಕ್ಕೆ ಎತ್ತಪ್ಪತ್ತ ಹೇಳಿಯೂ } – ಕಾಂಬಗ ಎರಡುದೇ ಒಂದೇ ಮೂಲಲ್ಲಿ ಬಂದ ಶಬ್ದದ ಹಾಂಗೆ ಕಾಣ್ತು. ಅಲ್ಲದಾ?

      ಒಳ್ಳೆ ಸಂಗ್ರಹಕ್ಕೆ ಒಪ್ಪಂಗೊ. ಹರೇರಾಮ

  18. ಒಪ್ಪಣ್ಣ ಹೀಂಗಿರ್ತ ಶುದ್ದಿ ಹೇಳಿರೆ ಎನ್ನ ಕೆಮಿ ಕುತ್ತ ಆವುತ್ತು. ತುಂಬ ಸ್ವಾರಸ್ಯಪೂರ್ಣ ವಿಷಯ.

    ಈ ನಮೂನೆಯ ವಿಶಿಷ್ಟ ಪರಿಭಾಷೆಗಳೇ ನಮ್ಮ ಹವ್ಯಕ ಭಾಷೆಯ ಹೆಚ್ಚುಗಾರಿಕೆ ಹೇಳ್ಳಕ್ಕು. ಒಪ್ಪ ಕೊಟ್ಟೋರೂ ಹಲವು ಜೆನ ಮತ್ತಷ್ಟು ಶಬ್ದಂಗಳ ಸೇರುಸಿ ಶುದ್ದಿಗೆ ತೂಕ ಕೊಟ್ಟಿದವು. ಆದರೆ ಕೆಲವರು ಗಾದೆಮಾತುಗಳನ್ನೂ ಇಲ್ಲಿ ಪಟ್ಟಿಮಾಡಿದವು. ಗಾದೆಗೂ ಪರಿಭಾಷೆಗೂ ವೆತ್ಯಾಸ ಇದ್ದು. ಸೂಕ್ಷ್ಮಲ್ಲಿ ನೋಡಿರೆ ಗೊಂತಕ್ಕಷ್ಟೆ.

    ಒಂದಷ್ಟು ಪರಿಭಾಷೆ ಶಬ್ದಂಗೊಎನಗೆ ನೆಂಪಿಂಗೆ ಬಂತು.ಅದರಲ್ಲಿಯೂ ತುಂಬ ಸ್ವಾರಸ್ಯವಾಗಿ ಕಂಡದರ ಮದಾಲು ಹೇಳ್ತೆ ! 😉

    ಬೆಟ್ಟುಕಜೆ ಶಿವರಾಮ ಭಟ್ರು ಹೇಳಿ ಎಂಗಳ ನೆಂಟ್ರು. ಪಂಜ ಹೊಡೆಯಾಣ ನಮ್ಮ ಭಾಷೆಯ ರುಚಿ ಗೊಂತಾಯೆಕ್ಕಾರೆ ಅವರತ್ರೆ ಮಾತಾಡೆಕ್ಕು- ಅಷ್ಟು ರಸವತ್ತಾಗಿ ಮಾತಾಡುಗು ಅವು.
    ಒಂದಾರಿ ಏವದೋ ಜೆಂಬ್ರಕ್ಕೆ ಎಂಗಳಲ್ಲಿಗೆ ಬಂದವು. ಬಂದದು ಬಸ್ಸಿಲ್ಲಿ. “ಬಸ್ಸಿಲ್ಲಿ ಸೀಟು ಸಿಕ್ಕಿತ್ತೋ ಅಪ್ಪಚ್ಚಿ?” ಕೇಳಿದೆ. “ಓ ಮಾರಾಯನೇ, ಉಪ್ಪಿನಕಾಯಿ ಹಾಕಿದಾಂಗೆ ಜೆನ. ಸಾಸಮೆಕಾಳು ಹಾಕಿರೆ ಕೆಳ ಬೀಳ. ಮತ್ತೆ ಸೀಟು ಸಿಕ್ಕುದೊ? ಗುತ್ತಿಗಾರಿಂದ ಇಲ್ಲಿವರೆಗೂ ‘ಭವಂತಸ್ಸರ್ವಜ್ಞ‘ ಮಾಡಿಂಡು ಬಂದದು” ಹೇಳಿದವು.
    ಉಪ್ಪಿನಕಾಯಿ, ಸಾಸಮೆಕಾಳು ಪರಿಭಾಷೆ ಎನಗೆ ಗೊಂತಿತ್ತು. ಮದುವೆ ಮನೆಲಿ ದಿಬ್ಬಣಿಗರ ಎದುರುಗೊಂಡು ಸಭಾವಂದನೆಗೆ ಹೇಳುವ ‘ಭವಂತಃ ಸರ್ವಜ್ಞಾಃ’ ಮಂತ್ರಕ್ಕೂ ಬಸ್ಸಿಲ್ಲಿ ಸೀಟು ಸಿಕ್ಕದ್ದಕ್ಕೂ ಎಂತ ಸಂಬಂಧ? ಫಕ್ಕನೆ ಎಂತರ ಹೇಳಿ ಎನ್ನ ತಲಗೆ ಹೋತಿಲ್ಲೆ. ಅವರತ್ರೇ ಕೇಳಿದೆ. ಹ್ಹೊ ಹ್ಹೊ ಹ್ಹೋ ಹೇಳಿ ದೊಡ್ಡಕೆ ನೆಗೆಮಾಡಿಕ್ಕಿ ಹೇಳಿದವು ‘ಬಟ್ಟಮಾವ ಸುಮಾರು ಕಾಲು ಗಂಟೆ ಹೊತ್ತು ಆ ಮಂತ್ರ ಹೇಳಿ ಮುಗಿವನ್ನಾರ ಮನೆ ಎಜಮಾನ ನೀರಗಿಂಡಿ ಕೈಲಿಡ್ಕಂಡು ಕುತ್ತ ನಿಂದೊಂಡಿರ್ತ ಅಪ್ಪೊ? ಹಾಂಗೆ, ಬಸ್ಸಿಲ್ಲಿ ಇಷ್ಟೊತ್ತು ನಿಂದಂಡು ಬಂದದರ ಆ ರೀತಿ ಹೇಳಿದ್ದು’ ಹೇಳಿ

    ‘ಶ್ಶೆಲಾ ಇವ್ವೇ!’ ತೋರಿತ್ತು ಎನಗೆ!

    1. ಸುಭಗಣ್ಣ ಕೆಮಿಕುತ್ತ ಆಗಿ ಬರದ ಒಪ್ಪಕ್ಕೆ ಕರ್ಣಕುತ್ತ ಲಾಗ ಹಾಕಿರೂ ಉತ್ತರ ಕೊಡ್ಳೆ ಆಯಿದಿಲ್ಲೆ. ಪುರುಸೊತ್ತೇ ಇಲ್ಲೇದು.

      ಭವಂತಃ ಸರ್ವಜ್ಞಾಃ ಸಕಲ ಭುವನೇ ರೂಢ ಯಶಸಾಃ – ಪೌರೋಹಿತ್ಯ ಮನೆತನದ ಶಿವರಾಮಪ್ಪಚಿಗೆ ನೆಂಪಾದ್ಸು ಸಾಕಪ್ಪಾ!

      ಅವರ ಕಾಂಬಗ ಇಷ್ಟೆಲ್ಲ ಕುಶಾಲು ಇದ್ದು ಹೇಳಿ ಅರಡಿಯ ಅಪ್ಪೋ – ಬಾಯಿಗೆ ಕೋಲು ಹಾಕಿರೆ ಮಾಂತ್ರ ಹೆರಬಕ್ಕಷ್ಟೇ! 🙂

  19. ಹಿಂದಿಲಿ ಇನ್ತಾದ್ದರ ಮುಹಾವರೇ-ಹೇಳಿ ಭಾರೀ ಸಂಗ್ರಹ ಮಾಡಿ ಮಾನ್ಯತೆ ಕೊಟ್ಟಿದವು.ನಾವೂ ಇಂತ ನುಡಿಗಟ್ಟುಗಳ ಒಳಿಶೆಕ್ಕು.
    ೧,ಈಡುಮೂಡು ಇಲ್ಲದ ಕೆಲಸ[ಯಾವ ಕ್ರಮವೂ ಇಲ್ಲದ್ದೆ ಮಾಡುವ ಕೆಲಸ]
    ೨.ತೇಕುಮುಳುಕ್ಕ[ನೀರಿಲಿ ಬಿದ್ದು ತೇಲುದು ಮತ್ತೆ ಮುಳುಗುತ್ತದು=ಬಿಡಿಸಲೆ ಎಡಿಯದ್ದಹಾಂಗಿಪ್ಪ ಸಮಸ್ಯೆಲಿ/ಕಷ್ಟಲ್ಲಿ ಬೀಳುದು]
    ೩.ಕಾಕೆ ಕಚ್ಚಿಂಡು ಹೋದ ಹಾಂಗೆ[ಯಾವದಾರೂ ಕೆಲಸ/ವೈವಾಹಿಕ ಸಂಬಂಧ ಬಹು ಸುಲಭಲ್ಲಿ ಆದರೆ ಹೇಳುದು]
    ೪.ಹಾಂಗೆ ಡಾಕ್ಟರನ ಕೆಲಸ ಕಲಿವದು ಹೇಳಿರೆ ಎಂತ-‘ಬಾಳೆಹಣ್ಣು ಸುಲಿವ‘ ಹಾಂಗೊ?-ಮಧ್ಯಮ ವರ್ಗದವು ಮೆಡಿಕಲ್ ಕಲಿವಲೆ ಹಿಂಜರಿವ ಆರ್ಥಿಕ ಪರಿಸ್ಥಿತಿ ಇಪ್ಪಾಗ ಕೇಳಿದ ಮಾತು.
    ೫.ಆತೊ ನಿನ್ನ ಹಿಯರಿಂಗು?[ಕಾನೂನಿಂದ ಬಂದ ಪರಿಭಾಷೆ=ಆರಾದರೂ ತುಂಬಾ ವಾದ ಮಾಡಿರೆ/ಚರ್ಚೆ ಮಾಡಿರೆ ದೊಡ್ಡವು ಹೀಂಗೆ ಕೇಳುಗು]
    ೬.ಅದ ಎತ್ತಿತ್ತು ಕಾಕೆಯ ಹಾಂಗೆ[ತಿಂಡಿ ಸಾಮಾನಿನ ಮಾಡಿದ ಕೂಡಲೇ ಆರಾದರೂ ಬಂದರೆ ಮಾಡುವ ಲೇವಡಿ]
    ೭.ಅಡಕ್ಕೆ ಸೊಲಿದ ಕೂಡಲೇ ಬ್ಯಾರಿ ಬಂತು,ಎನ್ನ ಒಂದು ಕತೆಲಿ,ಅದಕ್ಕೆ’ ಮೂಗಿಲಿ ನೆಳವು ಕೂಯಿದೊ‘ ಏನೊ?[ಆರಿಂಗಾರೂ ಸುದ್ದಿ ಹೇಳದ್ದರೂ ಅವು ಅಂದಾಜಿ ಮಾಡಿ ಬಂದವು ಹೇಳಿರೆ ಹೇಳುವ ಮಾತು.
    ಹೀಂಗೆ ಅನೇಕ ಇದ್ದು.

    1. ಗೋಪಾಲಣ್ಣಾ,
      ಪರಿಭಾಶೆಗಳ ಸೋದಾಹರಣೆಲಿ ವಿವರುಸಿ ಕೊಟ್ಟಿದಿ, ಭಾರೀ ಚೆಂದ ಆಯಿದು.

      ಮೂಗಿಲಿ ನೆಳವು ಕೂದ ಸಂಗತಿ ಲಾಯಿಕಾಯಿದು. ಅಂದು ಕತೆಲಿ ಓದಿಯೂ ನೆಂಪಿದ್ದು. 🙂

  20. ಇಷ್ಟು ಶಬ್ದಂಗಳ ಸಂಗ್ರಹ ಮಾಡಿ ಹೇಳಿದ ಮಾಷ್ಟ್ರು ಮಾವ, ಎಲ್ಲವನ್ನು ವಿವರವಾಗಿ ಬರದ ಒಪ್ಪಣ್ಣ ನಿಂಗೊಗೆ ಇಬ್ರಿಂಗು ಮೊದಲು ಧನ್ಯವಾದಂಗೊ.
    ಒಪ್ಪಂಗಳಲ್ಲಿ ಇನ್ನು ಶಬ್ದಂಗಳ ನೆಂಪು ಮಾಡುವ ಎಲ್ಲರಿಂಗುದೆ…..
    ಅಲ್ಲಿ “ಕೂದಲ್ಲೇ” ಬಗ್ಗೆ ಬರವಗ ಬರದ್ದು ಹತ್ಯಡ್ಕ ಅಜ್ಜ ಹೇಳಿಪ್ಪದು ಅರ್ತ್ಯಡ್ಕ ಅಜ್ಜನ ಒಪ್ಪಣ್ಣಾ?
    ಎಂಗಳ ‘ಹರಿಯೊಲ್ಮೆ’ ಅಜ್ಜ ಮಾತಿನ ನಡುವೆ ತುಂಬಾ ಗಾದೆ ಮಾತುಗಳ ಉಪಯೋಗಿಸಿಯೊಂಡಿತ್ತಿದ್ದವು. ಅಂಬಗ ಎಂಗೊಗೆ ಅದು ಬೇಗ ಅರ್ಥ ಆಗಿಯೊಂಡಿತ್ತು.
    ಈ ನಮುನೆಯ ಪರಿಭಾಷೆಗಳ ಪದ ಪ್ರಯೋಗದೆ ಮಾತಿನ ಅರ್ಥ ಹೆಚ್ಸುತ್ತಲ್ಲದ?
    ಬೇಂಗುದು” ಹೇಳಿ ಹೇಳ್ತವಲ್ಲದಾ? ಅದು ನಮ್ಮ ಕಷ್ಟಂಗಳ ತುಂಬಾ ಸರ್ತಿ ಹೇಳಿಯೊಂಬದಕ್ಕೆ ಇಪ್ಪ ಪರಿಭಾಷೆಯಾ ಹೇಳಿ ಅಲ್ಲದಾ?

    1. ಸುಮನಕ್ಕಾ,
      ಚೆಂದದ ಒಪ್ಪ ಕೊಟ್ಟದಕ್ಕೆ ವಂದನೆಗೊ.
      ಶುದ್ದಿ ಹೇಳುವಗ ತಲೆಲಿ ಹರಿಯೊಲ್ಮೆ ಅಜ್ಜ ಕೆಲವು ಸರ್ತಿ ನೆಂಪಾಗಿ ಹೋದವು ಇದಾ!

      { ಹತ್ಯಡ್ಕ ಅಜ್ಜ ಹೇಳಿಪ್ಪದು ಅರ್ತ್ಯಡ್ಕ ಅಜ್ಜನ ಒಪ್ಪಣ್ಣಾ? }
      ಅದಾ, ನಿಂಗೊ ಹೀಂಗೆಲ್ಲ ಕೇಳಿರೆ ಒಪ್ಪಣ್ಣ ಎಂತ್ಸರ ಹೇಳುತ್ಸು? 🙁
      ನಿಂಗೊ ಹೇಳಿದೋರು – ಹರಿಯೊಲ್ಮೆ ಅಜ್ಜನ ತಮ್ಮ; ಆನು ಹೇಳಿದ್ದು ಹರಿಯಪ್ಪಜ್ಜನ ಮಗ°! 😉

      ಬೇರೆ ಯೇವದರು ಶಬ್ದಂಗೊ ನೆಂಪಾವುತ್ತೋ?

    1. ಸೀಯೆ ಒಂದೇ ಸರ್ತಿ ಪಾಸುಮಾಡಿಕ್ಕಿ ನಿಂಗೊ ಪಷ್ಟುಕ್ಲಾಸು ಬಂದದು ಹೇಳಿರೆ ಆರಾರು ನಂಬುಗೋ?
      ರೇಂಕು – ರೇಂಕು ಬಯಿಂದು ಹೇಳೇಕು. ಆತೋ? 😉

      1. ಎನಗೆ ರೇಂಕು ಬಯಿಂದಿಲ್ಲೆ.. ಆದರೆ ಈ ಲೇಖನಕ್ಕೆ ಖಂಡಿತಾ ರೇಂಕು ಇದ್ದು..

  21. ಟಮ್ಕಿ ರಾಯಸ – ಡಂಗುರ ಸಾರುವದು.
    ಮಾತಿಲಿ ಟಮ್ಕಿ ಪಾಯಸವೂ ಆವುತ್ತು. 🙂

    1. ಬೊಳುಂಬುಬಾವನೂ ಏನೂ ಕಮ್ಮಿ ಇಲ್ಲೇಪೋ!
      ಬೈಲಿನ ಬಗ್ಗೆ ನಿಂಗೊಗೆ ಅರಡಿವೋರ ಹತ್ತರೆ ಟಮ್ಕಿ ರಾಯಸ ಕೊಡುವಿರೋ? 🙂

  22. ಲೇಖನ ತುಂಬಾ ಲಾಯ್ಕಾಯಿದು.. 🙂
    ಇದರ ಓದಿಯಪ್ಪಗ ಕೆಲವು ಶಬ್ದಂಗೊ ನೆಂಪಾತು..

    ಕಣ್ಣು ಮುಟ್ಟುದು,
    ಪಟ್ಟಾಂಗ ಹೊಡವದು,
    ಹೊಟ್ಟೆಲಿ ಹುಳು ಸತ್ತತ್ತು(ತುಂಬ ಹಶುವಪ್ಪಗ ಹೇಳುದು)..

    ಇದೆಲ್ಲ ಪರಿಭಾಶೆಯ ಪದಂಗಳ ಅಡಿಲಿ ಬತ್ತಾ ಹೇಳಿ ಸರಿ ಗೊಂತಿಲ್ಲೆ…

    1. ವಿದ್ಯಕ್ಕಾ..
      ಕೆಲವು ಸಂಗ್ರಹಂಗೊ ಕೊಶೀ ಆತು.
      ಕಣ್ಣುಮುಟ್ಟುದು ಬರವಲೆ ಬಿಟ್ಟೇ ಹೋದ್ದಿದಾ, ನೆಂಪುಮಾಡಿಕೊಟ್ಟದಕ್ಕೆ ಧನ್ಯವಾದಂಗೊ.

  23. ಸಂಗ್ರಹ ಒಪ್ಪ ಆಯಿದು..ಇತ್ತೀಚೆಗೆ ಕನ್ನಡ ಶಬ್ದಂಗಳೇ ಎಳ್ಪ.. ನಮ್ಮ ಭಾಷೆಲಿ ..ಈಗಾಣ ಮಕ್ಕೋಗೆ..ಸಂಗ್ರಹಯೋಗ್ಯ..
    ಮುಂದಿನ ತಲೆಮಾರಿಂಗೆ ಹೀಂಗೂ ಇದ್ದತ್ತು ಹೇಳಿ ತಿಳ್ಕೊಂಬಲೆ

    1. ” ಹೊಂಡ ತೋಡಿದ್ದ” ಹೇಳಿರೆ ದೊದ್ದ ಸಾಲ ಮಾಡಿದ್ದಕ್ಕೆ ಉಪಯೋಗಿಸುತ್ತವು..
    2. “ಬುದ್ದಿಮುಟ್ಟು”
    3. “ಪುಚ್ಚೆ ತಲೆಲಿ ಮಡಗಿದಾಂಗೆ”
    4. {ಮೂಗಿಲಿ ಮಸಿ:} “ಮೂಗಿಲಿ ನೆಳವು ಕೂಬದು”..
    4. “ಟಾಂ ಟಾಂ ಮಾಡುದು”
    5. “ಬೇಳೆ ಹೊರಿವದು”
    6. ” ಒಂದು ಭತ್ತದೊಳ ಒಂದು ಅಕ್ಕಿ”
    7. ” ಎಂಕು ಪಣಂಬೂರಿಂಗೆ ಹೋದಾಂಗೆ”

    1. ಉಂಡೆಮನೆಕುಮಾರಣ್ಣಾ…
      ಬೈಲಿಲಿ ರಜ ಸಮಯ ಕಾಂಬಲೇ ಇಲ್ಲದ್ದೆ ಅಪ್ಪಗ ನಿಂಗಳ ಕಂಪ್ಲೀಟರುದೇ ಪುಚ್ಚೆತಲೆಲಿ ಮಡಗಿದ್ದೋ – ಗ್ರೇಶಿದೆ ಒಂದರಿ 😉
      ಇರಳಿ, ಆನದರ ಟಾಂಟಾಂ ಮಾಡ್ಳೆ ಹೋವುತ್ತಿಲ್ಲೆ.
      ಏನೇ ಆಗಲಿ, ಒಳ್ಳೆ ಒಪ್ಪ ಬರದ್ದಿ.
      ಬಂದೊಂಡಿರಿ. ಹರೇರಾಮ

  24. ಎಷ್ಟು ಲಾಯಕಲ್ಲಿ ಬರೆತ್ತೀರಿ ಒಪ್ಪಣ್ಣ ನಿಂಗೊ. ಬಾರೀ ಲಾಯಕ ಆಯಿದು

  25. ಅಹಾ.. ಒಪ್ಪಣ್ಣನ ಶುದ್ದಿಯುದೆ ಹಲವರ ಒಪ್ಪವುದೆ ಭಾರೀ ಲಾಯ್ಕಾಯಿದು..

  26. ಎನಗೆಂತ “ಏಕುಪೋಕು’’ ಗೊಂತಾಯಿದಿಲ್ಲೆ… ಅಂಬೇರ್ಪಿಲಿ ಓದಿದ ಕಾರಣ ….. 🙁

  27. ಕೆಸವಿನ ಕಾಲಿಂಗೆ ಎಮ್ಮೆ ಕಟ್ಟೀ ಬಪ್ಪದು…
    ಹೇಳಿರೆ ವಾಪಸು ಹೋಪಲೆ ಅಂಬೆರ್ಪು ಮಾಡುವವಕ್ಕೆ ಹೀಂಗೆ ಹೇಳ್ತವು “ಎಂತ? ಕೆಸವಿನ ಕಾಲಿಂಗೆ ಎಮ್ಮೆ ಕಟ್ಟಿ ಬೈಂದೆಯಾ?”

    ಪುಡ್ಚೋ
    ಅವ ಅಲ್ಲಿಂದ ಕಣ್ಣಿಂಗೆ ಕಾಣದ್ದಾಂಗೆ ‘ ಪುಡ್ಚೋ’ ಮಾರಾಯಾ… 🙂

      1. (ಪಡ್ಚ…) ಇದು ಇನ್ನೊಂದು (ಕತೆ ಮುಗುತ್ತು ಹೇಳಿ)….
        ಇದಕ್ಕೆ ಇನ್ನೊಂದು ಇದ್ದಲ್ಲದೋ… “ಕತೆ ಕೈಲಾಸ” 🙂

        ಪುಡ್ಚೋ ಬೇರೆ…( ಓಡಿ ಹೋಪದು)

        ಪೋಕು ಮುಟ್ಟುದು‘ ಎಲ್ಲಿಯಾದರೂ ಅಗತ್ಯಕ್ಕೆ ಬೇಕೂಳಿ ಆದರೆ….. ಹೇಳಿ.

        1. ’ಪೋಕು ಮುಟ್ಟುದು….’ ಹೇಳಿದ್ದು ಕೇಳಿ…. ನೆನಪ್ಪಾತು….ಈ ಗಾದೆ ಹೇಂಗೆ ಬಂತು ಹೇಳಿ ಗೊಂತಿದ್ದೋ… ಅಮೈ ನಾರಾಯಣ ಭಟ್ರು ಇಪ್ಪಗ ಹೇಳುಗು… ಭಾರೀ ಮೊದಲಿಂಗೆ…ಒಬ್ಬ ಗುರಿಕ್ಕಾರ್ರ ಮನೆಲಿ ಒಂದು ದೊಡ್ಡ ಜೆಂಬ್ರ ಇತ್ತಡ..ದೊಡ್ಡ ಸಮಾರಾಧನೆ…ಬಾಳೆ ಎಲ್ಲಾ ಹಾಕಿ ಅನ್ಶುದ್ದಿ ಮಾಡಿ ಬಳುಸುಲೆ ಸುರು ಮಾಡಿದ್ದವು…ತಾಳ್ಳು ಬಳಿಸಿ ಆಯಿದಷ್ಟೆ…ಅಶನ ತೋಡಿಕೊಂಡಿಪ್ಪಗ…ಒಂದು ನಾಯಿ ಎಡೆಲಿ ಬಂದು…ಅಶನದ ರಾಶಿಗೆ ಬಾಯಿ ಹಾಕಿತ್ತಡ…’ಎಂತ ಮಾಡುದು…!!ಎಂತ ಮಾಡುದು…!!’ ಹೇಳಿ ಎಲ್ಲಾ ಗಡಿಬಿಡಿ… ಜೆನ ಎಲ್ಲಾ ಉಂಬಲೆ ಕೂದಾಯ್ದು…!! ಒಟ್ಟಾರೆ ಮರ್ಯಾದೆ ಹೋಪಾಂಗೆ ಆತನ್ನೆ…ಮಾಡಿದ್ದೆಲ್ಲ ದಂಡ…ಎಂತ ಮಾಡುದು…!! ಮೆಲ್ಲ ಬಟ್ಟಮಾವನ ಒಳ ದಿನಿಗೇಳಿ ಕೇಳಿದವಡ…ಬಟ್ಟಮಾವಂಗುದೇ…ಇದು ಹೊಸತ್ತೇ ಸಂಗತಿ…ಪಂಚಾಂಗ ಮಗಚಿದವು…ಉತ್ತರ ಸಿಕ್ಕಿದ್ದಿಲ್ಲೆ….ಮತ್ತೆ ಕೇಳಿದವಡ… ’ಅದು ಯಾವ ನಾಯಿ….’ಹೇಳಿ….’ಅದು ನಮ್ಮ ಮನೆ ನಾಯಿ-’ಪೋಕು…’ ಬೇರೆ ಯಾವದೂ ಅಲ್ಲ ಹೇಳಿ ಆರೋ ಹೇಳಿದವು…’ ಓ!! ಅಂಬಗ ಏನೂ ತೊಂದರೆ ಇಲ್ಲೆ….’ಪೋಕು ಮುಟ್ಟಿದರೆ ಅಕ್ಕು…’ ಬೇರೆನಾಯಿ ಆದರೆ…ಬಙ ಇತ್ತು…ಎಂತಮಾಡ್ಲೂ ಎಡಿಯ’ ಹೇಳಿ …’ಆ ಭಟ್ಟಮಾವ ಹೇಳಿದವಡ್ದ …ಹೇಳಿ ಈ ಭಟ್ಟಮಾವ ಹೇಳಿದವು….’ಹೇಳಿ ಹೇಳೆಕ್ಕು ಹೇಳಿ ಎನಗೆ..ಕಂಡದಷ್ಟೆ….ಬೇಜಾರು ಮಾಡೆಡಿ…….

          1. ಹೋ… ಅದಾ… ದೇರಾಜೆ ಮೂರ್ತಿ ಅಣ್ಣ ಬೈಲಿಂಗೆ ಎತ್ತಿದ್ದು…. 🙂
            ಇನ್ನು ಪೋಕು ಮುಟ್ಟಿರೆ ಶುದ್ದಿಯೂ ಹೇಳುಗೋ ಹೇಳಿ…
            ಮೊನ್ನೆ ಎಂತಾತು ಗೊಂತಿದ್ದೋ…. ಪಕ್ಕನೆ ಒಪ್ಪಣ್ಣನ ಫೋನು…”ಎಂತ ಶ್ಯಾಮಣ್ಣ ಪುತ್ತೂರಿಲಿ ಇದ್ದಿರೋ?” ಹೇಳಿ. ಆರೆ ಆನು ಇಲ್ಲಿ ಕೊಡೆಯಾಲಲ್ಲಿಯೇ ಇದ್ದೆ… ಒಪ್ಪಣ್ಣ ಎಂತ ಹೀಂಗೆ ಕೇಳುದು ಹೇಳಿ ನೋಡಿರೆ… “ನಿಂಗಳ ಹಾಂಗೆ ಇಲ್ಲಿ ಒಂದು ಜೆನ ಕಂಡತ್ತು” ಹೇಳಿದ.
            ಆದಕ್ಕೆ ಆನು ಹೇಳಿದೆ” ನಮ್ಮ ಹಾಂಗೆ ಇಪ್ಪ ಏಳು ಜೆನಂಗ ಇರ್ತವಡ ಲೋಕಲ್ಲಿ. ಅದಲ್ಲಿ ಒಂದು ಜೆನ ಕಂಡದಾಗಿಕ್ಕು. ಅಥವ ಮೂರ್ತಿ ದೇರಾಜೆ ಕಂಡದಾಗಿಕ್ಕು… ಅವು ವಿಟ್ಲಲ್ಲಿಯೇ ಇಪ್ಪದಿದಾ… ಪುತ್ತೂರಿಂಗೆ ಬಂದಿಕ್ಕು… ಆನು ರೆಜಾ ಅವರ ಹಾಂಗೆ ಕಾಂಬಲೆ”
            ಈಗ ಅದಾ ಬೈಲಿಲಿ ಮೂರ್ತಿ ದೇರಾಜೆ ಪ್ರತ್ಯಕ್ಷ… 🙂

          2. ದೇರಾಜೆ ಮೂರ್ತಿಮಾವಂಗೆ ಸ್ವಾಗತಮ್.
            ಭಾರೀ ಚೆಂದದ ಒಪ್ಪ ಕೊಟ್ಟಿದಿ. ಕೊಶೀ ಆತು.
            ಬೈಲಿಲಿ ಈ ನಮುನೆ ಸುಮಾರು ಶುದ್ದಿಗೊ ಇದ್ದು, ಓದಿಗೊಳ್ಳಿ – ನಿಂಗಳೂ ಸುರುಮಾಡಿ ಶುದ್ದಿ ಹೇಳುಲೆ..

            ಹಾ ಶಾಮಣ್ಣಾ!
            ಹೋತು ಲಗಾಡಿ!! 😉

            ಆರಿಂಗೂ ಅರಡಿವದು ಬೇಡ ಹೇಳಿಗೊಂಡು ಮೊನ್ನೆ ನಿಂಗಳ ಹತ್ತರೆ ಅಷ್ಟು ಚೆಂದಕೆ ಮಾತಾಡಿದ್ದು.
            ಈಗ ಇಡೀ ಬೈಲಿಂಗೇ ಹೇಳಿದಿರೋ!
            ಸುಬಗಣ್ಣಂಗೋ ಮಣ್ಣೊ ಇನ್ನು ಗೊಂತಾದರೆ ’ಪಗೆಲನ’ ಹಾಂಗೆ ನೆಂಪುಮಡಿಕ್ಕೊಂಗು! ;-(

  28. ಲೇಖನ ಭಾರಿ ಲಾಯಿಕ ಆಯಿದು …. ಈ ಲೇಖನಕ್ಕೆ ಎನ್ನದೊಂದು ಒಪ್ಪ … 🙂

  29. ಭಾರೀ ಲಾಯಿಕಾಯಿದು ಕೆಲವು ಎನ್ನ ನೆ೦ಪಿಂಗೆ ಬತ್ತದ್ದು …

    ಅಕ್ರದ ಕಡ್ಡಿ ಎತ್ತಿ ಮಡುಗ …
    ಯಾವ ಕೆಲಸವನ್ನು ಮಾಡ ಹೇಳಿ ಅರ್ಥ

    ಅಗಳು ಹಾರಿದ್ದು ..
    ಹೇಳಿದ್ದು ಕೇಳದ್ದೆ ಬೇರೆ ಜಾತಿಯವರೊಟ್ಟಿ೦ಗೆ ಓಡಿ ಹೋದ್ದು …

    ಗುಡ್ಡಗೆ ಮಣ್ಣು ಹೊತ್ತಂಗಾತು
    ಎಂತದೂ ಪ್ರಯೋಜನ ಆಯಿದಿಲ್ಲೇ ಹೇಳುಲೇ ಇಪ್ಪ ವಾಕ್ಯ .

    ಅಮೃತಬಳ್ಳಿ … ಪಲ್ಲಿ ಚೊಪ್ಪು…
    ಅವ ಇನ್ನುದೆ “ಅಮೃತ ಬಳ್ಳಿ … ಪಲ್ಲಿ ಚೊಪ್ಪು ಹೇಳ್ಯೊಂಡಿದ್ದ” ಹೇಳಿರೆ ಇನ್ನು ಎಂಥರ ಹೇಳಿ ಕಡೆ ನಿರ್ಧಾರಕ್ಕೆ ಬೈನ್ದಯಿಲ್ಲೇ ಹೇಳಿ

    1. ವೇಣೂರಣ್ಣಾ,
      ಒಳ್ಳೆ ಪರಿಭಾಶೆಗೊ.

      ಅಮೃತಬಳ್ಳಿ – ಪಲ್ಲಿಚೊಪ್ಪು ಭಾರೀ ನೆಗೆ ತರುಸಿತ್ತು ನವಗೆ.

  30. ಒಪ್ಪಣ್ಣನ ‘ರಾಮಾಯಣ’ಕ್ಕೆ ಚೆನೈ ಭಾವ ‘ಪಿಟಿಕ್ಕಾಯನ’ – ಒಳ್ಳೆ ಸಂಗ್ರಹ, ಬೈಲಿಂಗೆ.
    ಧನ್ಯವಾದ.

    1. ೧.’ಕಾಡ ಸೊಪ್ಪು – ತೋಡ ನೀರು’
      ೨. ‘ಉಪ್ಪುಂಟೋ – ಮೆಣಸುಂಟೋ..
      ೩. ಕಡ್ದ ಕೈಗೆ ಉಪ್ಪು ಹಾಕ.
      ೪. ಅಗ್ಗಿತ್ತಾಯ..
      ೫. ಅಂಬಟೆಕಾಯಿ..

      (ಮನೆಗೆ ಬಂದ ಮೇಲೆ ನೆಂಪು ಮಾಡ್ಸಿದ್ದು…)

      1. ತೆಕ್ಕುಂಜೆಮಾವಾ..
        ಅಗ್ಗಿತ್ತಾಯ – ಹೇಳ್ತದು ನವಗೆ ಹೊಸತ್ತು. ಅದೆಂತರ? ಉದಾಹರಣೆಲಿ ವಿವರುಸುವಿರೋ?

  31. ವ್ವಾ..ಭಾರೀ ಲಾಯಕಾಯಿದು..
    ಹೀಂಗೆ ಬೇಕಿದಾ..ನೆಂಪು ಹೇಳಿರೆ..
    ಭಾಷೆಯ ಸತ್ವ ಹೀಂಗಿಪ್ಪ ಬಳಕೆಗಳಲ್ಲಿಯೇ ಇಪ್ಪದು.
    ಖೊಶಿಯಾತು ಒಪ್ಪಣ್ಣಾ..
    ಚೆನ್ನೈ ಭಾವಂದೇ “ಏನೂಬಿಟ್ಟಿಲ್ಲೆ”..ಹೇಳಿ ಬರದ್ದರ ಓದಿರೇ ಗೊಂತಾವುತ್ತು..ಜೈ..

    1. ವೆಂಕಟಣ್ಣಾ,
      {ಭಾಷೆಯ ಸತ್ವ ಹೀಂಗಿಪ್ಪ ಬಳಕೆಗಳಲ್ಲಿಯೇ ಇಪ್ಪದು.}
      ತುಂಬಾ ಒಳ್ಳೆ ಮಾತು.
      ಹತ್ತು ಭಾಶೆಗಳಲ್ಲಿ ನಮ್ಮದು ಪ್ರತ್ಯೇಕವಾಗಿ ನಿಲ್ಲೇಕಾರೆ ಹೀಂಗಿರ್ತ ’ಏಕಮೇವಾದ್ವಿತೀಯ’ ಬಳಕೆಗಳೇ ಕಾರಣ..
      ನಮಸ್ತೇ..

  32. ತೋಟಕ್ಕೆ ಮದ್ದು ಬಿಡ್ಳೆ ಮಳೆಯೂ ಬಿಡ್ತಿಲ್ಲೆ, ಮಳೆ ಬಿಟ್ಟಿಪ್ಪಗ ಸುಂದರನೂ ಬತ್ತಿಲ್ಲೆ, ಹೇಳಿ ಸು’ಭಾವ ‘ಕೆಟ್ಟತ್ತನ್ನೇ ಮುಕುಟಾ..’ ಹೇದು ಯೇಚನೆಲಿ ಕೂದೊಂಡು, ಈ ವಾರಿ ‘ತೊಟ್ಟು ಮುರುದು ಮೇಣ ನಕ್ಕೊತ್ಸೋ’ದು ಜಾನ್ಸಿಯೊಂಡಿಪ್ಪಗ ‘ಪಡಪ್ಪೋಸಿ’ ಅಲ್ಲದ ಈ ಪರಿಭಾಷೆ ಶುದ್ದಿ., ‘ಬರೆ ಹಾರದ್ದೆಯೂ’, ‘ಗೊಂಕ್ರು ಕೆಪ್ಪೆ’ ಹಾಂಗೆ ‘ಲಪಕ್ಕ ತಪಕ್ಕ’ ಲಾಗ ಹಾಕೆದ್ದೆಯೂ, ಕೆಲವರಿಂಗೆ ಎಂತರಿದು ‘ಕೊರಪ್ಪುತ್ಸು’ ಹೇದು ಕಂಡ್ರೂ, ‘ಟ್ಯೂಬ್ ಲೈಟ್’ ಅಲ್ಲದ್ದ ಈ ಶುದ್ದಿ ‘ಮನಾರ’ ಆಯ್ದು ಹೇದು ಆನಿಲ್ಲಿ ‘ಚೆರಪ್ಪಿ’ರೆ ಆರಿಂಗಾರು ಮೋರೆಲಿ ‘ಸಾಸಮೆಕಾಳು ಹೊಟ್ಟುಗೊ’ ಅಲ್ಲಾ, ‘ಹಲ್ಲು ಕಿಸಿವಲೆ‘ ಎಡಿಗೊ ಏನೋ ಅಲ್ಲದೋ!. ಒಂದು ಚೂರು ಹೊತ್ತು ಇತರ ‘ಬಿಂಗುರ್ಟಿ‘ ‘ಕಿಟ್ಟಾಂಗೆಣಿ‘ ಮರದು ಒಂದು ಕರೇಲಿ ‘ಕುದುಕ್ಕನಾಂಗೆ’ ಕೂದು ‘ಗುರುಟಿ’ರೆ, ‘ಹಲಾಯುದ’ ಸಂಗತಿ ‘ಪೆರಟಿರೆ’ ಹೇಮರ್ಸಿ ಮಡುಗಲೆ ಅಲ್ಪ ಸಿಕ್ಕುಗು ಹೇದೊಂಡು ಇತ್ಲಾಗಿಂದ ‘ಒಗ್ಗರಣೆ’.

    1. ಚೆನ್ನೈಭಾವಾ..
      ಒಪ್ಪ ಪಷ್ಟ್ಲಾಸಾಯಿದು.
      ಶುದ್ದಿ ಓದಿ ಬರೇ ಅರ್ದ ಗಂಟೆಲಿ ಇಷ್ಟು ಚೆಂದದ ಒಪ್ಪ ಕೊಟ್ಟದು ನೋಡಿ ಪರಮಾಶ್ಚರ್ಯ ಆತು ನವಗೆ.
      ಎಷ್ಟು ಪರಿಭಾಶೆಗೊ ಎಡಕ್ಕಿಲಿ! 😉

      ಕೆಟ್ಟತ್ತನ್ನೇ ಮುಕುಟಾ – ಹೇಳ್ತದು ಎಲ್ಲದರಿಂದಲೂ ರೈಸಿತ್ತು ಭಾವಾ! 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×