ಪರ್ವ-ಸಾರ್ಥ-ಆವರಣ; ಭರತಪರ್ವದ ಸಾರ್ಥಕತೆಯ ಅನಾವರಣ..!

June 25, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 65 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾಷ್ಟ್ರುಮಾವನ ಮನೆಲಿ ಓ ಮೊನ್ನೆ ಒಂದು ಜೆಂಬ್ರ ಕಳಾತು!
ನಿಂಗೊಗೆಲ್ಲ ಗೊಂತಿಕ್ಕು, ಅಮೇರಿಕಲ್ಲಿಪ್ಪ ಅವರ ಮಗ° ಅಂಬೆರ್ಪಿಲಿ ಬಂದು, ಮತ್ತೂ ಅಂಬೆರ್ಪಿಲಿ ಮದುವೆ ಆಗಿ, ಅದರಿಂದಲೂ ಅಂಬೆರ್ಪಿಲಿ ಒಪಾಸು ಹೆರಟಾಯಿದು..
ಎಂಗೊ ಎಲ್ಲ ಎಂತ ಆವುತ್ತಾ ಇದ್ದು ಹೇಳಿ ನೋಡುವಗ ಮದುವೆ ಕಳುದು ಬಾಳೆಲಿ ನಾಕು ನಾಕು ಹೋಳಿಗೆ ಬಿದ್ದಿತ್ತಿದ್ದು!! ತಿನ್ನದ್ದೆ ಪೋಕಿಲ್ಲೆ, ಇನ್ನೊಂದು ಬೀಳುಗು.
ಕಟ್ಟಿಕೊಡಿ; ತೆಕ್ಕೊಂಡೋವುತ್ತೆ – ಹೇಳಿದ° ಅಜ್ಜಕಾನಬಾವ° – ಅವಂಗೆ ಆರರಿಂದ ಹೆಚ್ಚಿಗೆ ಒಂದೇ ಸರ್ತಿ ತಿಂಬಲೆಡಿಗಾಯಿದಿಲ್ಲೆಡ.. ಪ್ರುಠ್‌ಸಲಾಡು ಇತ್ತಡ, ಹಾಂಗೆ. ಎಲ್ಲ ಬಿರುದ ಮತ್ತೆ ಹೇಳಿದ°. :-(
ಅದಿರಳಿ, ಎಂತದೋ ಹೇಳುಲೆ ಹೆರಟು ಎಲ್ಲೆಲ್ಲಿಗೋ ಎತ್ತುತ್ತು!
~

ಮದುವೆ ಕಳಾತು, ಮತ್ತೆ ಒಂದು ವಾರಲ್ಲಿ ಮಾಣಿ ಹೆರಟ°.
ಮಾಷ್ಟುಮಾವನ ಸೊಸಗೆ ಅಷ್ಟು ಬೇಗ ಟಿಕೇಟು ಸಿಕ್ಕೆಕ್ಕೆ – ರಜಾ ಮೊದಲೇ ಮಾಡೆಕ್ಕಡ ಅಲ್ಲದೋ.. ಹಾಂಗೆ ಮಾಣಿ ಒಬ್ಬನೇ ಹೋದ್ದದು, ಪಾಪ!
ಹೋಪ ದಿನ ಹೆರಡಾಣ. ಬೀಳ್ಕೊಡುಗೆಗೆ ಬೈಲಿನ ಕೆಲವು ಜೆನ ಹೋಗಿತ್ತಿದ್ದೆಯೊ° – ಅಜ್ಜಕಾನಬಾವ°, ಗಣೇಶಮಾವ°, ಬೆಂಗುಳೂರಿಂದ ಬಂದಿದ್ದ ಪೆರ್ಲದಣ್ಣ – ಎಲ್ಲ..
ಈ ಸರ್ತಿ ತುಂಬುಸಿಕೊಡ್ಳೆ ಜೆನ ವಿಶೇಷವಾಗಿ ಇತ್ತಿದ್ದವಿದಾ – ಹಾಂಗಾಗಿ ಮಾಣಿ ಆರಾಮಲ್ಲಿ ರಜ ಕರೆಲಿ ಕೂದುಗೊಂಡು ಒಂದಟ್ಟಿ ಪುಸ್ತಕಂಗಳ ನೋಡಿಗೊಂಡು ಇತ್ತಿದ್ದ°.
ಎಂಗೊ ನೋಡುವಗ ಬೇರೆಬೇರೆ ಪುಸ್ತಕಂಗಳ ಒಂದೊಂದು ಅಟ್ಟಿ ಮಡಿಕ್ಕೊಂಡು ಯೇವ ಪುಸ್ತಕ ತೆಕ್ಕೊಂಡೋಪದು – ಬೇಡ ಹೇಳ್ತದರ ಮಾಷ್ಟ್ರುಮಾವನತ್ರೆ ಮಾತಾಡಿಗೊಂಡು ಇತ್ತಿದ್ದ°!

ಮಾಷ್ಟ್ರುಮಾವನ  ಮನೆಲಿ ಮದಲಿಂಗೇ ಹಾಂಗೆ-
ಒಂದು ಕಪಾಟು ಪುಸ್ತಕಕ್ಕೇ ಹೇಳಿಯೇ ಇದ್ದು, ಹೆಮ್ಮಕ್ಕಳ ಒಸ್ತ್ರದ ಕವಾಟು ಅಲ್ಲದ್ದೆ.
ಪುಸ್ತಕದ ಕವಾಟಿಂಗೆ ಬೀಗ ಹಾಕಲಿಲ್ಲೆ – ಎಂಗೊ ಆರು ಬೇಕಾರುದೇ ಹೋಗಿ, ಬಾಗಿಲು ತೆಗದು ನೋಡ್ಳಕ್ಕು.
ಎಂತಾರು ಸಂಶಯ ಕೇಳುಲೆ ಹೋದರೆ ಗೊಂತಿದ್ದರೆ ಹೇಳುಗು, ಅಲ್ಲದ್ದರೆ – ಇದಾ, ಇಂತಾ ಪುಸ್ತಕಲ್ಲಿ ಇದ್ದು; ನೋಡು – ಹೇಳುಗು ಮಾಷ್ಟ್ರುಮಾವ°.
ಅಲ್ಲಿ ಪುಸ್ತಕಂಗಳೂ ಹಾಂಗೇ, ಕಾದಂಬರಿ, ಸಣ್ಣ ಕತೆ, ಚಂದಮಾಮ, ಭಾರತ-ಭಾರತಿಯ ಪಿಟ್ಟೆ ಪುಸ್ತಕಂಗೊ, ಭಾರತದ ಕತೆ – ದೊಡ್ಡ ದೊಡ್ಡ ಪುಸ್ತಕಂಗೊ, ಮಂತ್ರ,  ಜ್ಯೋತಿಷ್ಯದ ಪುಸ್ತಕಂಗೊ, ತಾಳೆಗರಿಗೊ – ಓದುತ್ತವಂಗೆ ಎಲ್ಲವೂ ಇರ್ತು!
ಅದೆಲ್ಲ ಮಾಷ್ಟ್ರುಮಾವಂಗೇ ಅಕ್ಕಷ್ಟೆ. ನವಗೆ ಬೇರೆ ಒಯಿವಾಟಿಪ್ಪಗ ಅದರ ನೋಡ್ಳೇ ಪುರುಸೊತ್ತಾಗ. 😉 😐

ಆಚಕವಾಟಿನ ಹಾಂಗೆಲ್ಲ ಮುಟ್ಟಿರಾಗ ಇದಾ – ರಜ ಮುಟ್ಟಿ ಹೋದರೆ ಇಡೀ ಒಸ್ತ್ರವ ಪುನಾ ಒಂದರಿ ಒಗದು ಮಡುಗ್ಗೋ ಏನೋ; ಉಮ್ಮಪ್ಪ..
ನೋಡ್ಳೆ ಹೋಯಿದಿಲ್ಲೆ, ಸುಮ್ಮನೆ ಆರು ಬೈಗಳು ತಿಂಬದು ಮತ್ತೆ! 😉
~

ಹ್ಮ್, ನಾವು ಪುಸ್ತಕದ ಬಗ್ಗೆ ಮಾತಾಡಿಗೊಂಡು ಇತ್ತು. ಆ ಕವಾಟಿಂದ ಮೂರು ಪುಸ್ತಕ ತೆಗದು ತುಂಬುಸಿಗೊಂಡು ಇತ್ತಿದ್ದ° ಮಾಣಿ.

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (S.L.Bhyrappa)

ಮೂರಕ್ಕೂ ಕಾಕಿ ಬೈಂಡು ಹಾಕಿ, ಕೋಪಿಲಿ ಹೆಸರು ಬರೆತ್ತ ಹಾಂಗೆ ಹೆಸರು ಬರದು ಮಡಗಿದ್ದು, ಮಾಷ್ಟ್ರಮನೆ ಅತ್ತೆ!
ದೊಡ್ಡಕ್ಷರಲ್ಲಿ ಪುಸ್ತಕದ ಹೆಸರೂ, ರಜಾ ಸಣ್ಣ ಅಕ್ಷರಲ್ಲಿ ಅದರ ಬರದವರ ಹೆಸರೂ, ಅದರಿಂದಲೂ ಸಣ್ಣಕೆ ಮಾಷ್ಟ್ರುಮಾವನ ಹೆಸರೂ ಬರಕ್ಕೊಂಡಿತ್ತು – ಯೇವತ್ತಿನ ಹಾಂಗೇ!
ಚಾಯ ಬಪ್ಪಲೆ ರಜಾ ಪುರುಸೊತ್ತು ಇತ್ತು! ಅಟ್ಟಿ ಹತ್ತರೇ ಇದ್ದ ಕಾರಣ ಮೆಲ್ಲಂಗೆ ಇತ್ಲಾಗಿ ಜಾರುಸಿ ಒಂದೊಂದೇ ತೆಗದು ನೋಡಿದೆಯೊ°.
ಮೂರುದೇ ಹೆರಂದ ಕಾಂಬಲೆ ಒಂದೇ ನಮುನೆ, ಹಣ್ಣಡಕ್ಕೆಯಷ್ಟು ದಪ್ಪದ ಪುಸ್ತಕಂಗೊ!!
ಹಾ°…..! ಇದರ ಓದಲಿದ್ದೋ ಮಾಣೀ..!!’ – ಹೇಳಿ ಎಂಗೊಗೆ ಕೇಳಿ ಹೋತು ಪಕ್ಕನೆ! “ಹ್ಮ್, ಇದ್ದಿದ್ದು!” – ಹೇಳಿ ಓರೆತೊಡಿಲಿ ನೆಗೆಮಾಡಿದ° ಮಾಣಿ!

ಪುಸ್ತಕ ಒಂದೊಂದೇ ಬಿಡುಸಿ ನೋಡಿದೆ. ಮೂರನ್ನೂ ಬರದ್ದದು ಒಬ್ಬನೇ! ಎಸ್.ಎಲ್.ಭೈರಪ್ಪ – ಹೇಳಿ ಕಂಡತ್ತು!
ಆರಿದು, ಯೇವ ಜೆನ?, ಎಂತಕೆ ಇಷ್ಟಿಷ್ಟು ದೊಡ್ಡದು ಪುಸ್ತಕಂಗೊ ಬರೆತ್ತ° – ಹೇಳಿ ಎಲ್ಲ ಕೇಳಿದೆ…
ಮಾಷ್ಟ್ರುಮಾವ°- ವಿವರುಸುಲೆ ಸುರು ಮಾಡಿದವು, ಒಟ್ಟೊಟ್ಟಿಂಗೆ ಮಾಷ್ಟ್ರುಮಾವನ ಮಗನೂ – ಸಾಮಾನು ಪೇಕು ಮಾಡ್ತದರ ಒಟ್ಟಿಂಗೇ ಸೇರಿಗೊಂಡ°…

~
ಸಣ್ಣ ಇಪ್ಪಗಳೇ ಭಾರೀ ಕಷ್ಟಲ್ಲಿ ಬೆಳದು ಬಂದು, ಮುಂದೆ ಅದೇ ಕಷ್ಟಲ್ಲಿ ಓದಿ, ಬೆಳದು, ದೊಡ್ಡ ಕ್ಲಾಸುಗಳ ಮುಗುಶಿ, ಬರವಣಿಗೆ ಸುರು ಮಾಡಿದ್ದು ಈ ಎಸ್ಸೆಲ್ ಬೈರಪ್ಪ° ಅಡ.
ಆ ಕಾಲಲ್ಲಿ ಬಂದ ಪ್ಲೇಗು ಪೀಡೆಗೆ ಊರಿಂಗೆ ಊರೇ ರೋಗಕ್ಕೆ  ಸಿಕ್ಕಿಪ್ಪಗ ಈ ಜನ ಬದುಕ್ಕಿ ಒಳುದ್ದಡ..
ಇದೇ ಪ್ಲೇಗು ಮಾರಿಗೆ – ಪ್ರೀತಿಯ ತಮ್ಮಂದೇ, ತಂಗೆದೇ ಎರಡೇ ಗಂಟೆಯ ಅವಧಿಲಿ ತೀರಿ ಹೋದವಡ. ಕುಟುಂಬದ ಪ್ರೀತಿಯನ್ನೇ ಕಳಕ್ಕೊಂಡ ಈ ಜೆನ ಮುಂದೆ ಮನೆ-ಮಟ ಎಲ್ಲವನ್ನೂ ಕಳಕ್ಕೊಂಡು ಬಂಙ ಬಂದವಡ.
ಮುಂದೆ ಎಂತೆಂತದೋ ಕೆಲಸ ಮಾಡಿಗೊಂಡು ದೊಡ್ಡ ಕ್ಲಾಸುಗಳ ಮಯಿಸೂರಿಲಿ ಓದಿಗೊಂಡು ಹೋದ್ದಡ.
ತರ್ಕಶಾಸ್ತ್ರಲ್ಲಿ ಎಮ್ಮೆ ಮಾಡಿ, ಮುಂದೆ ಅದೇ ವಿಚಾರಲ್ಲಿ ಪಚ್ಚಡಿ (Ph.D) ಕಡದ್ದಡ!
ನಮ್ಮ ಸಂಸ್ಕೃತಿ, ತರ್ಕಶಾಸ್ತ್ರ, ಪುರಾಣ, ಇತಿಹಾಸಂಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಜ್ಞಾನ ಸಂಪತ್ತು ಗಳುಸಿಗೊಂಡಿದವಡ.
ಈ ವಿಶಯಂಗೊ ಅವರ ಆತ್ಮಕತೆ ಭಿತ್ತಿ ಹೇಳ್ತ ಪುಸ್ತಕಲ್ಲಿ ಬರದ್ದವಡ- ಇನ್ನೂ ಎಂತೆಂತದೋ ಹೇಳಿದ° ಮಾಷ್ಟ್ರುಮಾವನ ಮಗ°.

ಹಲಸಿನ ಸೋಂಟೆಯೊಟ್ಟಿಂಗೆ ಒಂದೊಂದು ಗ್ಲಾಸು ಕಾಪಿ ಬಂತು, ಒಳಂದ!

~
ಸುಮಾರು ನಲುವತ್ತು ಒರಿಶ ಮೊದಲೇ ನಮ್ಮ ಮಾಷ್ಟ್ರುಮಾವ° ಭೈರಪ್ಪನ ಕಾದಂಬರಿ ಓದಲೆ ಸುರು ಮಾಡಿದ್ದವಡ.
ವಂಶವೃಕ್ಷ, ಗೃಹಭಂಗ – ಹೇಳ್ತ ಎರಡು ಅವರ ಅತಿ ಪ್ರಸಿದ್ಧ ಕಾದಂಬರಿಗೊ ಅಡ.
ವಂಶವೃಕ್ಷಲ್ಲಿ ಬತ್ತ ನಂಜನಗೂಡಿನ ಶ್ರೋತ್ರಿಗೊ ಹೇಳ್ತ ವೆಗ್ತಿ ನಮ್ಮ ಗುರ್ತದ ಜೆನವೇಯೋ – ಹೇಳಿ ಅನುಸಿ ಹೋವುತ್ತಡ.
ಅವರ ಮನೆ ಎಲ್ಲಿ ಹೇಳ್ತದರ ವಿವರುಸುವಗ ಅಲ್ಲಿಗೇ ಹುಡ್ಕಿಯೊಂಡು ಹೋಪೊ° – ಹೇಳಿ ಕಾಣ್ತಡ. ಗೃಹಭಂಗಲ್ಲಿ ಬಡತನದ ಮನೆ ನಡೆಶುವ ಕಷ್ಟಂಗೊ, ಮನೆ ಒಡವ ಸನ್ನಿವೇಶಂಗೊ ಓದಿರೆ ಎಂತವಂಗೂ ಜೀವನಲ್ಲಿ ಉದ್ಧಾರ ಆಯೆಕ್ಕು – ಹೇಳಿ ಕಾಣ್ತಡ.
ಅಷ್ಟೊಂದು ಆಪ್ತ ವರ್ಣನೆಗೊ ಅಡ! ಮಾಷ್ಟ್ರುಮಾವ° ಆಪ್ತವಾಗಿ ಹೇಳಿದವು!
~
ಈಗ ಎಂತಕಪ್ಪಾ, ಇಷ್ಟು ದೊಡ್ಡ ಪುಸ್ತಕಂಗಳ ಹಿಡ್ಕೊಂಡು ಹೆರಟದು – ಇದರ ಇಡೀ ಓದುಲಿದ್ದೋ – ಪುನಾ ಕೇಳಿದ ಅಜ್ಜಕಾನಬಾವ° ನೆಗೆಮಾಡಿಗೊಂಡು.
ಹ್ಮ್, ಈ ಮೂರು ಪುಸ್ತಕವ ಮದಲೇ ಧಾರಾಳ ಓದಿದ್ದೆ; ಈಗ ಪುನಾ ಒಂದರಿ ಓದೆಕ್ಕು – ಹೇಳಿದ° ಮಾಣಿ.
ಹಾಂಗುದೇ ಒಂದು ಕೊದಿ ಹಿಡುದು ಓದಲೆ ಎಂತ ಇದ್ದಪ್ಪಾ ಅದರ್ಲಿ, ಹೇಳಿ ಹೋತು ನವಗೆ, ಪಕ್ಕನೆ!
ಅಷ್ಟಪ್ಪಗ ಮಾಷ್ಟ್ರುಮಾವ° ಆ ಮೂರು ಪುಸ್ತಕದ ಬಗ್ಗೆ ರಜ್ಜ ಹೇಳಿದವು:
~

ಪರ್ವ:
ಹದಿನೆಂಟು ಪರ್ವದ ಮಹಾಭಾರತದ ಕತೆಯ ಓದಿ, ಏಳೆಂಟೊರಿಶ ಸಂಪೂರ್ಣ ಅಧ್ಯಯನ ಮಾಡಿ, ಅದರ ಬಗೆಗೆ ಹಿಡಿತ ಸಾಧಿಸಿ ಬರದ ಕಾದಂಬರಿ ಅಡ ಇದು.
ಮಹಾಭಾರತವೇ ಕತೆ ಆದ ಕಾರಣ ಪರ್ವ ಹೇಳಿಯೇ ಹೆಸರು ಮಡಗಿದವಡ.
ಮಹಾಭಾರತಲ್ಲಿ ಬತ್ತ ಎಲ್ಲಾ ವೆಗ್ತಿ, ವೆಗ್ತಿತ್ವಕ್ಕೆ ಮನುಷ್ಯರ ರೂಪ ಕೊಟ್ಟು, ಅಸಾಧ್ಯ ಹೇಳಿ ಅನುಸುವ ಎಲ್ಲ ಸನ್ನಿವೇಶಂಗಳ “ನೆಡದ್ದು ಆದಿಕ್ಕೊ ಅಂಬಗ” ಹೇಳಿ ಅನುಸುವಷ್ಟಕೆ ಬರದ್ದವಡ.

ಭಾರತದ ಛಪ್ಪನ್ನೈವತ್ತಾರು ದೇಶಂಗೊ! - ಬೈರಪ್ಪಜ್ಜಂಗೆ ಇದನ್ನೇ ಕಂಡದು!
ಭಾರತದ ಛಪ್ಪನ್ನೈವತ್ತಾರು ದೇಶಂಗೊ! - ಬೈರಪ್ಪಜ್ಜಂಗೆ ಇದನ್ನೇ ಕಂಡದು!

ಯುದ್ಧದ ಸನ್ನಿವೇಶದ ಪೂರ್ವಭಾವಿಯಾಗಿ ಆರಂಭ ಅಪ್ಪ ಈ ಕಾದಂಬರಿಲಿ ಒಬ್ಬೊಬ್ಬನೇ ಅವರವರ ದೃಷ್ಟಿಲಿ ಅಂಬಗಾಣ ಸಮಾಜ ಹೇಂಗೆ ಹೇಳ್ತದರ ವಿವರುಸಿಗೊಂಡು ಹೋಪದಡ..
ಶಲ್ಯ, ಕುಂತಿ, ಭೀಮ, ಅರ್ಜುನ, ದ್ರೌಪದಿ – ಎಲ್ಲೊರುದೇ ಆ ಸಂದರ್ಭಲ್ಲಿ ಯೋಚಿಸಿಗೊಂಡು ಹೋಪದಡ.
ಪರಮಾಯುಷ್ಯದ ಭೀಷ್ಮಂಗೆ ನೂರಿಪ್ಪತ್ತು ಒರಿಷ (ಮನುಶ್ಶರಿಂಗೆ ಅಸಾಧ್ಯದ ಎಂಟುನೂರು ಅಲ್ಲ!). ಅವನ ಪುಳ್ಯಕ್ಕೊಗೆ ಅವ ನೀತಿ ಕತೆ ಹೇಳುದು- ಹೇಳಿದವು ಮಾಷ್ಟ್ರುಮಾವ°!
ಹಿಮಾಲಯದ ಪ್ರದೇಶಲ್ಲಿಪ್ಪ ಜೀವನವ ವರ್ಣನೆ ಮಾಡ್ಳೆ ಸ್ವತಃ ಆ ಪ್ರದೇಶಕ್ಕೆ ಹೋಗಿ, ಉದೆಕಾಲ ನಾಕು ಗಂಟಗೆ ತಣ್ಣೀರಿಲಿ ಮಿಂದು, ಹಸಿ ಬಟಾಟೆ ತಿಂದು, ಅನುಬವಿಸಿ ಬಯಿಂದನಡ ಈ ಅಜ್ಜಯ್ಯ! ಬೇರೆ ಆರು ಬರಗು ಹಾಂಗೆಲ್ಲ – ಕೇಳಿದ° ಮಾಣಿ.
ಎಂಗೊಗೆ ಕೂದಲ್ಲೇ ಒಂದರಿ ಚಳಿ ಆತು! ಬೆಶಿಗೆ ಎರಡು ಸೋಂಟೆ ಬಾಯಿಗೆ ಹಾಕಿಗೊಂಡೆಯೊ°!
ಬೆಂಗುಳೂರಿನ ಏಸಿಯ ತಣ್ಣಂಗೆಲಿ ಕೂದಂಡು ಹೋತಗೆಡ್ಡ ಬಿಟ್ಟೊಂಡು ’ಸಮಾಜದಲ್ಲಿ ಅಸಮಾನತೆ’ ಹೇಳಿ ಬರೆತ್ತವಡ ಕೆಲವು ಜೆನ, ಅವರೆದುರು ಈ ಜೆನ ಎಷ್ಟು ದೊಡ್ಡ ಕಾಣ್ತು, ಅಲ್ಲದೊ?

ಈ ಪುಸ್ತಕದ ಒಂದೊಂದು ಪೇರಾಗ್ರಾಪು ಓದುವಗಳೂ ಶೇಣಿಅಜ್ಜನ ಅರ್ತ ಕೇಳಿದ ಅನುಭವ ಆವುತ್ತಡ!
ಅಷ್ಟೊಂದು ಪಕ್ವ ಬರವಣಿಗೆ, ಜ್ಞಾನ! ಅಧ್ಯಯನಂದಲೇ ಜ್ಞಾನ ಬಪ್ಪದಡ – ಹೇಳಿದವು ಮಾಷ್ಟ್ರುಮಾವ°!
ಕುಂತಿ, ಪಾಂಡು, ಮಾದ್ರಿ – ಇವರ ಸಂಬಂಧದ ಸೂಕ್ಷ್ಮತೆಗೊ, ಪರ ವಿರೋಧ ಅಭಿಪ್ರಾಯ ಬೇಧದ ವರ್ಣನೆಗೊ, ಅರ್ಜುನನ ಕಲಾ ಕೌಶಲಂಗೊ, ಧುರ್ಯೋದನನ ಚಂಚಲತೆಗೊ  – ಎಲ್ಲವನ್ನೊ ಎಳೆ ಎಳೆ ಆಗಿ ವಿವರುಸಿಗೊಂಡು ಹೋಯಿದವಡ!
ಅಂಬಗಾಣ ಜೀವನ ಪದ್ಧತಿ, ಆಹಾರ ಪದ್ಧತಿ, ಸಂಸ್ಕೃತಿ – ಎಲ್ಲವನ್ನುದೇ ಸ್ಪಷ್ಟವಾಗಿ ನಮ್ಮ ಕಣ್ಣೆದುರು ಕಟ್ಟಿಗೊಂಡು ಹೋವುತ್ತವಡ ಭೈರಪ್ಪಜ್ಜ…

ಸುಮಾರು ಎರಡು-ಮೂರನೇ ಶತಮಾನದ ಭಾರತದ ಜೀವನಪದ್ಧತಿಯ ಆಳವಾಗಿ ಅಧ್ಯಯನ ಮಾಡಿ, ಭಾರತದ ಕತೆಯ ಅದೇ ಜೀವನಕ್ಕೆ ಹೊಂದುಸಿಗೊಂಡು, ತನ್ಮೂಲಕವಾಗಿ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡದಾದ ಕಾಣಿಕೆ ಕೊಟ್ಟಿದವಡ ಭೈರಪ್ಪಜ್ಜ.
ಇಂಗ್ಳೀಶಿಲಿ ಗ್ರೀಕುಸಂಸ್ಕೃತಿಯ ಮಹಾ ಪುರಾಣಂಗಳ ತೋರುಸುತ್ತ ಕತೆಗೊ, ಸಿನೆಮಂಗೊ ಬಯಿಂದಡ. ಕನ್ನಡಲ್ಲಿ ಈ ಕಾದಂಬರಿ ಓದಿರೆ ಬೇರೆ ಸಿನೆಮ ನೋಡೆಕ್ಕೂಳಿ ಇಲ್ಲೆಡ- ಮಾಣಿ  ಹೇಳಿದ°.
ಒಟ್ಟಾಗಿ ಹೇಳುದಾದರೆ, ಎರಡು-ಮೂರನೇ ಶತಮಾನದ ಜೀವನಪದ್ಧತಿಯ ಸಮಗ್ರ ಚಿತ್ರಣವ ಈ ಪರ್ವ ಕಾದಂಬರಿ ಪರ್ವಪರ್ವವಾಗಿ ವಿವರುಸಿ ಕೊಡ್ತಡ…

ಕಾಪಿ ಮುಗುತ್ತು, ಸೋಂಟೆ ಇನ್ನೂ ಇದ್ದು…

ಸಾರ್ಥ:
ಪರ್ವದ ಕತೆ ಮಾತಾಡಿ ಅಪ್ಪಗಳೇ, ಆ ಅಟ್ಟಿಲಿ ಇದ್ದ ಮತ್ತಾಣ ಪುಸ್ತಕ ’ಸಾರ್ಥ’ ದ ಶುದ್ದಿ ತೆಗದ° ಮಾಣಿ.
ಇದು ಏಳು-ಎಂಟನೇ ಶತಮಾನದ ಕತೆ ಅಡ.

ಅಂಬಗ ಭಾರತಲ್ಲಿ ಇದ್ದಿದ್ದ ವ್ಯಾಪಾರ, ವ್ಯವಹಾರ, ಬೌದ್ಧ ಧರ್ಮದ ಪ್ರಸಾರ, ವೈದಿಕ ಧರ್ಮದ ಪುನರುತ್ಥಾನ, ಶಂಕರಾಚಾರ್ಯರ ಯಾತ್ರೆ – ಇದೆಲ್ಲವೂ ನಿಂಗೊಗೆ ಶಾಲೆಯ ಪಾಟಪುಸ್ತಕಲ್ಲಿ ಸಿಕ್ಕುತ್ತಿಲ್ಲೆ, ಆದರೆ ಈ ಸಾರ್ಥ ಲ್ಲಿ ಸಿಕ್ಕುತ್ತು – ಹೇಳಿದವು ಮಾಷ್ಟ್ರುಮಾವ°.
ಒಂದು ಊರಿಂದ ಚಿನ್ನ, ಆಭರಣ, ಮುತ್ತು, ರತ್ನ, ಸಾಂಬಾರ ಪದಾರ್ಥ, ಉಪ್ಪು-ಮೆಣಸು ಎಲ್ಲ ವ್ಯಾಪಾರದ ಉದ್ದೇಶಲ್ಲಿ ತೆಕ್ಕೊಂಡು ಎಷ್ಟೋ ದೂರದ ಇನ್ನೊಂದು ಊರಿಂಗೆ ಹೋಪ ದೊಡಾ ಜಾತ್ರೆಗೆ ಸಾರ್ಥ (ಸ-ಅರ್ಥ) ಹೇಳಿ ಹೆಸರಡ.
ಉದಾಹರಣೆಗೆ, ದಕ್ಷಿಣದ ಒಂದು ರಾಜ್ಯಂದ ದೊಡ್ಡದೊಡ್ಡ ವೈಶ್ಯರು ಅವರವರ ಗಾಡಿ ತೆಕ್ಕೊಂಡು ಈ ಸಾರ್ಥಕ್ಕೆ ಸೇರಿರೆ, ಉತ್ತರಕ್ಕೆ ಎತ್ತಿ, ಅಲ್ಲಿಂದ ಕೆಲವು ಸಿಂಧೂ ದೇಶಕ್ಕೋ- ಅಲ್ಲ ಹಿಮಾಲಯದ ದೇಶಂಗೊಕ್ಕೊ – ಮಣ್ಣ ಹೋತಿಕ್ಕುಗು.
ಕೇವಲ ವ್ಯಾಪಾರಿಗೊ ಮಾಂತ್ರ ಅಲ್ಲದ್ದೆ, ಅವರೊಟ್ಟಿಂಗೆ ಕಾಶೀ, ವಾರಣಾಸಿಗೆ ಹೋವುತ್ತ ತೀರ್ಥಯಾತ್ರಿಗೊ, ಜ್ಞಾನಾರ್ಜನೆಗೆ ಹೋವುತ್ತ ವಿದ್ಯಾರ್ಥಿಗೊ – ಎಲ್ಲೊರೂ ಸೇರಿಗೊಂಡು ಇತ್ತಿದ್ದವು.
ಹೇಂಗೂ ಗಾಡಿಗಳ ರಕ್ಷಣೆಗೆ ಸೈನಿಕರುದೇ ಇತ್ತಿದ್ದವನ್ನೇ! ಹಾಂಗಾಗಿ, ಊರೂರಿನ ಸಂಪರ್ಕಕ್ಕೆ ಈ ಸಾರ್ಥದ ಸಮಯ ನೋಡಿ ಹೆರಟೋಂಡಿತ್ತಿದ್ದವು – ಈಗ ಕೃಷ್ಣಬಸ್ಸಿನ ಹೊತ್ತು ನೋಡಿ ಹೆರಟ ಹಾಂಗೆ!

ಹಾಂಗೇ ಹೆರಟ ಒಬ್ಬ ವೆಗ್ತಿ ಎಲ್ಲೆಲ್ಲೋ ಹೋಗಿ, ಆರಾರನ್ನೋ ಕಂಡು, ಶಂಕರಾಚಾರ್ಯ, ನಾಲಂದ ವಿದ್ಯಾಲಯ, ಮಾಟ, ಮಂತ್ರ, ನಾಟಕ, ಸಂಗೀತ, ಅಭಿನಯ ಎಲ್ಲವನ್ನುದೇ ಅನುಭವಿಸುತ್ತನಡ.
ಅವ° ಅನುಭವಿಸಿದ ಹಾಂಗೇ ಅವಂಗೆ ಅಂಬಗಾಣ ಜೀವನದ ಕೌತುಕ ಕಂಡೋಂಡು ಹೋವುತ್ತು. ಅವಂಗೆ ಕೌತುಕ ಕಂಡ ಹಾಂಗೆ ನವಗೆ ಆಶ್ಚರ್ಯ ಆವುತ್ತಾ ಹೋವುತ್ತು – ಹೇಳಿದವು ಮಾಷ್ಟ್ರುಮಾವ°!

ಆ ಸುಂದರ ಶಾಂತಿಪ್ರಿಯ ಸಮೆಯಲ್ಲಿ, ಸಿಂಧೂದೇಶಲ್ಲಿ ಯವನರ ದಾಳಿಯ ಆರಂಭ, ಮಾಪಳೆಗಳ ವಿನಾಶಕಾರಿ ಸಂಸ್ಕೃತಿಯ ಚಿಗುರು, ಚೆಂದದ ಒಂದು ಮನೆಯ ಒಡವಲೆ ಸುರುಮಾಡಿದ ಆಘಾತ – ಎಲ್ಲವೂ ಸಿಕ್ಕಿಯೋಂಡು ಹೋವುತ್ತಡ ಈ ಕಾದಂಬರಿಲಿ.
ಒಟ್ಟಾಗಿ, ಏಳು, ಎಂಟನೇ ಶತಮಾನಲ್ಲಿದ್ದ ಭಾರತದ ಸಮೃದ್ಧಿಯ, ಸಂಪತ್ತಿನ ಸಾರ್ಥತೆಯ ತೋರುಸುತ್ತಡ, ಈ ಸಾರ್ಥ ಕಾದಂಬರಿ…
~

ಸೋಂಟೆ ಒಂದರಿಯಾಣದ್ದು ಮುಗಾತು ಹೇಳಿದ ಅಜ್ಜಕಾನ ಬಾವ!
ಎರಡ್ಣೇ ಸರ್ತಿಯಾಣ ಹಲಸಿನ ಸೋಂಟೆ ಶರಣಾಗತಿ ಆಗಿ ಎಂಗಳ ಎದುರು ತಟ್ಟೆಲಿ ನೀಟಂಪ ಬಿದ್ದತ್ತು…
~
ಮಹಾಭಾರತದ ಅದ್ಭುತ ಜೀವನಶೈಲಿ, ಸಾಂಸ್ಕೃತಿಕ ಚೌಕಟ್ಟು, ಶಂಕರಾಚಾರ್ಯರ ಕಾಲದ ಸಾಧನೆಯ ಪಾರಮಾರ್ಥಿಕ ಜೀವನ, ವ್ಯವಹಾರದ ಆರ್ಥಿಕ ಜೀವನ, ಅತ್ಯದ್ಭುತ ಧಾರ್ಮಿಕ ಚಿಂತನೆಯ ನೆಲೆಗಟ್ಟುಗೊ ಎಲ್ಲವೂ ಈ ಎರಡು ಕಾದಂಬರಿಲಿ ಬಂದಾಯಿದು.
ಒಂದೊಂದು ಕಾದಂಬರಿಗೂ ಏಳೆಂಟೊರಿಶ ಅಧ್ಯಯನ ಮಾಡಿತ್ತಿದ್ದವಡ ಬೈರಪ್ಪಜ್ಜ°.
ಅದಾದ ಮತ್ತೆ ಈಗಾಣ ಕಾಲದ ಶುದ್ದಿಗ ಇರ್ತ ಕೆಲವು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಸಂಗೀತದ ಬಗ್ಗೆ ಕಲಾತ್ಮಕ ಕಾದಂಬರಿಗೊ – ಇತ್ಯಾದಿ ಎಲ್ಲ ಬರದವಡ.
ಮತ್ತೆ ತುಂಬ ಸಮಯ ಆದ ಮತ್ತೆ ಮೊನ್ನೆಮೊನ್ನೆ ಒಂದು ಕಾದಂಬರಿ ಬಂತಡ, ಮತ್ತೊಂದರಿ ಭಾರತದ ಇತಿಹಾಸಕ್ಕೆ ಸಂಬಂದ ಪಟ್ಟ ಹಾಂಗೆ!
ಅದುವೇ ಆವರಣ.
~

ಆವರಣ:
ಹದಿನೈದು – ಹದಿನಾರನೇ ಶತಮಾನಲ್ಲಿ ಭಾರತಲ್ಲಿ ಮೊಗಲರು ಉತ್ತುಂಗಲ್ಲಿ ಇತ್ತಿದ್ದವು.
ಇಡಿಯ ಉತ್ತರ ಭಾರತಲ್ಲಿ ಅವರ ಆಳ್ವಿಕೆ. ಅವರದ್ದೇ ನಿಯಮಂಗೊ, ಅವರದ್ದೇ ಕಾನೂನುಗೊ, ಅವರದ್ದೇ ಜೆನಂಗೊ.

ಆವರಣ - ಬೈರಪ್ಪಜ್ಜನ ಕ್ರಾಂತಿಕಾರಿ ಕಾದಂಬರಿ
ಆವರಣ - ಬೈರಪ್ಪಜ್ಜನ ಕ್ರಾಂತಿಕಾರಿ ಕಾದಂಬರಿ

ಮಾಡಿದ್ದೇ ಆಟ, ಕೊಟ್ಟದೇ ಕಾಟ! ಈಗಾಣ ಕಾಸ್ರೋಡಿನ ಕೆಲವು ಸಂತಾನಂಗಳ ಕಂಡ್ರೆ ಅಂದಾಜಿ ಮಾಡ್ಳಕ್ಕು!

ಅಷ್ಟ್ರಒರೆಂಗೆ ನಮ್ಮ ಭಾರತಲ್ಲಿ ಇದ್ದಿದ್ದ – ತತ್ವ, ಧರ್ಮ, ನ್ಯಾಯ -ನೀತಿ -ನಿಯಮ, ಕನಿಕರ ಎಲ್ಲವೂ ನೀರಿಲಿ ಮಾಡಿದ ಹೋಮದಾಂಗೆ ಆಗಿತ್ತು.
ಭವ್ಯ ಪರಂಪರೆಯ ದೇವಸ್ಥಾನಂಗೊ, ಶ್ರದ್ಧಾಕೇಂದ್ರಂಗೊ, ವಿದ್ಯಾಲಯಂಗೊ ಎಲ್ಲವೂ ಇದ್ದ ಭಾರತ ಬಳುಸಿ ಮಡಗಿದ ಬಾಳೆಯ ಹಾಂಗಿತ್ತು.
ಬಂದು ಉಂಬದೊಂದೇ ಬಾಕಿ! ಆ ಕೆಲಸವ ಮೊಘಲರು ಮಾಡಿದವು.

ಮೊಘಲ ಜಾತಿಯ ಬಾಬರು ಹೇಳ್ತದು ಬಂತು – ಸುರೂವಿಂಗೆ ಪಿರೆಂಗಿ ತೆಕ್ಕೊಂಡು. ಅಷ್ಟ್ರೊರೆಂಗೆ ನಮ್ಮಲ್ಲಿ ಇದ್ದದು ಕೋಲುಕೊದಂಟಿ ಮಾಂತ್ರ. ಪಿರೆಂಗಿಲಿ ಇಡೀ ದೊಡ್ಡದೊಡ್ಡ ಸೈನ್ಯವೇ ದಿಕ್ಕಾಪಾಲಾಗಿ ಬಿದ್ದತ್ತು!
ಪ್ರತಿರೋಧವೇ ಇಲ್ಲದ್ದೆ ಭಾರತ ಅವಕ್ಕೆ ಶರಣಾತು. ಅಲ್ಲಿಂದ ಅದರ ಪಿಂಡಂಗಳದ್ದೇ ಕಾರ್ಬಾರು – ಮೊನ್ನೆ ಮೊನ್ನೆ ಬ್ರಿಟೀಶರ ಒರೆಂಗುದೇ..

ಮೊಘಲರ ಸಮಗ್ರ ಆಡಳಿತ ಚಕ್ರವ ನೋಡಿತ್ತುಕಂಡ್ರೆ ಬಹುದೊಡ್ಡ ಬೇಜಾರದ ಸಂಗತಿ ಕಾಣ್ತು! ಒಂದರಿ ಬಂದು ಊರ್ಲೆ ತಕ್ಕ ಜಾಗೆಸಿಕ್ಕಿದ ಕೂಡ್ಳೇ ಸಾಮ್ರಾಜ್ಯ ವಿಸ್ತಾರದ ಬಗ್ಗೆ ಚಿಂತನೆ ಮಾಡಿದವು.
ಅದಾದ ಮತ್ತೆ ಅವರ ಧರ್ಮವಿಸ್ತಾರ ಮಾಡಿದವು. ಅವರ ಧರ್ಮ ಒಳ್ಳೆದು ಹೇಳಿ ಮಾಂತ್ರ ಹೇಳಿರೆ ಸಂಗತಿ ಇಲ್ಲೆ, ಬಾಕಿದ್ದದು ಏನಕ್ಕೂ ಆಗದ್ದು – ಹೇಳ್ತದರ ಪ್ರಚಾರ ಮಾಡಿಗೊಂಡು ಬಂದವು.
ಒಂದೋ ಅಲ್ಲಾಹು, ಅಲ್ಲದ್ರೆ ಮರಣ – ಎರಡೇ ಅವಕಾಶಂಗೊ. ಈ ಕಾರ್ಯಲ್ಲಿ ಸುಂದರ ಸಮಾಜವ ಹಾಳಾಳು ಮಾಡಿ ಹರುದು ತಿಂದದು.
ಧರ್ಮದ ಹೆಸರಿಲಿ ದೇವಸ್ಥಾನವ ಹೊಡಿಮಾಡಿದವು. ಅಲ್ಲಿಪ್ಪ ಚಿನ್ನವ ತೆಕ್ಕೊಂಡೋಗಿ ಹೆಂಡತ್ತಿ ತಲಗೆ ಹಾಕಿದವು, ಅಲ್ಲಿಪ್ಪ ಶಿವಲಿಂಗಕ್ಕೆ ಪಿರೆಂಗಿ ಮಡಗಿದವು, ಏನೆಲ್ಲಾ ಅನಾಚಾರ ಮಾಡಿಹಾಕಿದವು!

ಎಷ್ಟೋ ನಿಷ್ಟೆಯ ಬಟ್ಟಕ್ಕಳ ಕಡುದು ಕೊಂದವು, ವೇದಪುಸ್ತಕಂಗಳ ಹೊತ್ತುಸಿ ಮಣ್ಣು ಮಾಡಿದವು. ಧರ್ಮನಿಷ್ಟರ ಕೊಂದವು, ಒಳುದವ ಧರ್ಮಾಂತರ ಮಾಡಿದವು – ಮಾಷ್ಟ್ರುಮಾವ° ಇನ್ನೂ ಹೇಳಿಗೊಂಡೇ ಹೋದವು..

ರೋಮಕುತ್ತ ಅಪ್ಪಲೆ ಸುರು ಆತು.
ಒಂದು ನಿಮಿಶ ಕಳುದಮತ್ತೆ ಮಾಣಿ ಹೇಳಿದ – ಅದೇ ಈ ಆವರಣದ ಕತೆ! ಹೇಳಿಗೊಂಡು.
ಇತಿಹಾಸ ಇಷ್ಟು ಕ್ರೂರ – ಹೇಳ್ತದು ನವಗೆ ಗೊಂತಿದ್ದು, ಆದರೆ ಅದರ ಆರುದೇ ಬರದು ಪುಸ್ತಕ ಮಾಡ್ತ ಧೈರ್ಯ ಮಾಡಿದ್ದವಿಲ್ಲೆ!
ಈ ಭೈರಪ್ಪಜ್ಜ ಮಾಡಿದವಡ!

ಅದೂ, ಒಂದು ಹೊಸಕಾಲದ ಕತೆಯ ಒಳ ಒಂದು ಹಳೆಕಾಲದ ಕತೆ ಬಪ್ಪದಡ. ಎರಡುದೇ ಮಾಪ್ಳೆಗೊಕ್ಕೆ ಸಂಬಂಧಪಟ್ಟ ಹಾಂಗೆಯೇ ಅಡ. ಕತೆಯ ನಾಯಕಿ ಒಂದು ಬಟ್ಟೆತ್ತಿ ಅಡ, ಅದೊಂದು ಮಾಪುಳೆಯ ಮದುವೆ ಆಗಿರ್ತು!
ಆ ಮಾಪ್ಳೆಗೆ ನಿಜವಾದ ಮಾಪುಳ್ಚಿ ಒಂದು ಸಿಕ್ಕಿ ಅಪ್ಪಗ ಇದಕ್ಕೆ ತಲಾಕು ಕೊಟ್ಟಿರ್ತು. ಅಷ್ಟರಒರೆಂಗೆ ಇಸ್ಲಾಮಿನ ನಂಬಿ, ನೆಚ್ಚಿ ನೆಡಕ್ಕೊಂಡಿದ್ದ ಹೆಮ್ಮಕ್ಕೊ ಅದರಿಂದ ನಂತರ ಅಧ್ಯಯನ ಮಾಡ್ಳೆ ಸುರು ಮಾಡುದಡ!
ಯೇವದೋ ಒಂದು ಮೊಘಲು ರಾಜನ ಕಾಲಲ್ಲಿ ಒಂದು ಹಿಂದು ರಾಜಕುಮಾರನ ಅಪಹರುಸಿ, ಅಮಾನುಷವಾಗಿ ಬಳಸಿಗೊಂಡು, ಅದರ ಸಂತಾನವ ನಿರ್ಣಾಮ ಮಾಡಿ – ರೌದ್ರಾವತಾರ ತೋರುಸುತ್ತ ಕತೆ ಅಡ ಅದು – ಮಾಷ್ಟ್ರುಮಾವ° ಹೇಳಿದವು.

ಇಡೀ ಕಾದಂಬರಿ ಓದಿರೆ ಚರಿತ್ರೆ ಇನ್ನೂ ಸ್ಪಷ್ಟವಾಗಿ ಅರ್ತ ಆವುತ್ತಡ!
ಇದರ ಬಗ್ಗೆ ಬೆಂಗುಳೂರಿಲಿ ದೊಡಾ ಚರ್ಚೆ ಎಲ್ಲ ಆಯಿದಡ – ಪೆರ್ಲದಣ್ಣ ಹೇಳಿದ°.!

ಒಟ್ಟಾರೆಯಾಗಿ ಭವ್ಯಭಾರತದ ರಾಜಕೀಯ ಉನ್ನತಿ, ಸಾಂಸ್ಕೃತಿಕ ಅವಸಾನ – ಎರಡನ್ನೂ ಅನಾವರಣ ಮಾಡಿ ತೋರುಸುತ್ತ ಕಾದಂಬರಿ ಅಡ ಇದು!
~

ಭಾರತದ ನಾಗರೀಕತೆ ಶುರು ಆದಲ್ಲಿಂದ ಪೌರಾಣಿಕ ಜೀವನದ ಒರೆಗಾಣ ಪರ್ವ,
ಆ ಕಾಲಘಟ್ಟಂದ ಸಾಮಾನ್ಯ ಜನಜೀವನದ ಒರೆಗಾಣ ಸಾರ್ಥ,
ನೆಮ್ಮದಿಯ ಸಾಮಾನ್ಯ ಜೆನಜೀವನಂದ ನೈತಿಕ ಆಘಾತ ಆದ ಮೊಘಲ ದರ್ಬಾರಿನ ವರೆಗಾಣ ಆವರಣ!
ಪರ್ವ, ಸಾರ್ಥ, ಆವರಣ – ಈ ಮೂರು ಕಾದಂಬರಿ ಓದಿರೆ ಭಾರತದ ಸಾರ್ಥಕತೆಯ ಅರ್ತ ಮಾಡಿಗೊಂಬಲಕ್ಕು – ಹೇಳಿದವು ಮಾಷ್ಟ್ರುಮಾವ°.
ಮಾಷ್ಟ್ರುಮಾವ° ಇತಿಹಾಸ ಕಲ್ತಕಾರಣ ಈ ಎಲ್ಲ ಪುಸ್ತಕಂಗಳ ಬಗ್ಗೆ ತುಂಬ ಆಸಕ್ತಿಲಿ ಹೇಳಿಕೊಟ್ಟವು.
~

ಕಣ್ಣಿಂಗೆ ಕಂಡೇ ಗೊಂತಿಲ್ಲದ್ದ ಒಂದು ಹಳೆಕಾಲದ ವಾತಾವರಣವ ಓದುತ್ತವಂಗೆ ಚಿತ್ರಿಸಿ ಕೊಟ್ಟು, ಅಲ್ಲಿ ಹಲವಾರು ಚಿಂತನೆಗಳ ಹುಟ್ಟುಸಿ, ಅದರನ್ನೇ ಓದುಸಿಗೊಂಡು ಹೋಪ ಹಾಂಗೆ ಬರೆತ್ತದು ಸಾದಾರ್ಣದ ಕೆಲಸ ಅಲ್ಲಡ!
ಆ ಕೆಲಸ ಕನ್ನಡದ ಮಟ್ಟಿಂಗೆ ಅದ್ಭುತ ಸೃಷ್ಟಿ ಅಡ… ಮಾಣಿ ಹೇಳಿದ°… ಹಾಂಗೆ ಆ ಮೂರು ಪುಸ್ತಕವನ್ನುದೇ ಮತ್ತೊಂದರಿ ಓದಲೆ ಈಗ ತುಂಬುಸಿಗೊಂಡದಡ.
ಹೇಂಗೂ ಒಂದು ತಿಂಗಳು ಪುರುಸೊತ್ತಿದಾ, ಒಂದರಿ ಓದಿಕ್ಕುವ ಹೇಳಿಗೋಂಡು. ಒಪ್ಪಣ್ಣ ಓದಲೆ ಸುರು ಮಾಡಿರೆ ಪುನಾ ಬೈರಪ್ಪ ಬರದಷ್ಟೇ ಒರಿಶ ಬೇಕೋ ಏನೋ – ಕಂಡತ್ತು!
~
ಈ ಅಜ್ಜ° ಬೇಕಾಬಿಟ್ಟಿ ಬರದು ಹಾಕುತ್ತವಿಲ್ಲೆಡ.
ಕಾದಂಬರಿ ಬರೇಕಾರೆ, ಅದರ ಹಿಂದೆ ಮುಂದೆ ಸರಿಯಾಗಿ ನೋಡಿ, ಅದರ ಸತ್ಯಾಸತ್ಯತೆಯ ಅಳದು, ಸರಿಯಾಗಿ ಸಮಾದಾನ ಆದ ಮತ್ತೆಯೇ ಬರವಲೆ ಸುರು ಮಾಡುದಡ. ಹಾಂಗಾಗಿ ಒಂದು ಕಾದಂಬರಿಗೆ ಏಳೆಂಟು ಒರಿಶ ಹಿಡಿವದೂ ಇದ್ದಡ.
ಒಂದೊಂದು ಕಾದಂಬರಿ ಬಪ್ಪಗಳೂ ಸಾವಿರಾರು ಜೆನ ಅದರ ಕಾದೊಂಡು ಇರ್ತವಡ. ಬಿಡುಗಡೆಯ ದಿನವೇ ತೆಗೇಕು ಹೇಳ್ತ ಉತ್ಸಾಹಲ್ಲಿರ್ತವಡ.
ಕೆಲವೆಲ್ಲ ಪುಸ್ತಕ ಮೂವತ್ತು, ನಲುವತ್ತು ಒರಿಶ ಮೊದಲು ಬರದ್ದಾಗಿದ್ದರೂ, ಈಗಳೂ ಬೆಶಿ ದೋಸೆಯ ನಮುನೆ ಮಾರಾಟ ಆವುತ್ತಡ!
ಅದದಾ ಬೈರಪ್ಪಜ್ಜನ ಪವರು – ಹೇಳಿದವು ಗಣೇಶಮಾವ°! – ಅವಂಗೆ ಬೆಂಗುಳೂರಿನ ಪುಸ್ತಕದಂಗುಡಿಗಳ ಪರಿಚಯ ಇದ್ದಿದಾ!!

ಇಷ್ಟೆಲ್ಲ ಬರದರೂ ಆ ಜೆನಕ್ಕೆ ಸಿಕ್ಕುಲಕ್ಕಾದ ಪ್ರಶಸ್ತಿಗೊ ಸಿಕ್ಕಿದ್ದಿಲ್ಲೆಡ. ಜ್ಞಾನಪೀಟ, ಅಕಾಡೆಮಿ – ಹೀಂಗಿರ್ತ ಎಷ್ಟೋ ಪುರಸ್ಕಾರಂಗೊ ಇವರ ಹತ್ತರಂಗೂ ಬಯಿಂದಿಲ್ಲೆಡ!
ಲಕ್ಕಿಡಿಪ್ಪು ಪುಸ್ತಕದಷ್ಟು ತೆಳುವಿನ ನಾಟಕ ಬರದೋರಿಂಗೆ ಸಿಕ್ಕಿದ್ದಡ, ಇಂತಾ ಮಹಾಕೃತಿಗಳ ಬರದೋರಿಂಗೆ ಎಂತದೂ ಸಿಕ್ಕಿದ್ದಿಲ್ಲೆ – ಹೇಳಿದ° ಪೆರ್ಲದಣ್ಣ.
ಈ ಜೆನಕ್ಕೆ ಜ್ಞಾನಪೀಟ ಸಿಕ್ಕೇಕು ಹೇಳಿ ಬೆಂಗುಳೂರಿಲಿಪ್ಪ ಬುದ್ಧಿವಂತರು ಎಲ್ಲೊರುದೇ ಹೇಳ್ತವಡ, ಆದರೆ ಬುದ್ಧಿಜೀವಿಗೊ ಬಿಡ್ತವಿಲ್ಲೆಡ!
ಪೆರ್ಲದಣ್ಣಂಗೆ ಅದು ಒಳ್ಳೆತ ಕೋಪ ಇದ್ದು!
~

ಕಳುದೊರಿಶ ಈ ಜೆನಕ್ಕೆ ನಮ್ಮ ಕೋಣೆತ್ತೋಟ ದೊಡ್ಡಪ್ಪನವರ ಉಸ್ತುವಾರಿಲಿ ಕೊಡ್ತ ಧರ್ಮಶ್ರೀ ಪ್ರಶಸ್ತಿ ಸಿಕ್ಕಿದ್ದಡ.
ನಮ್ಮ ಗುರುಗಳೇ ಆ ಪ್ರಶಸ್ತಿ ಕೊಟ್ಟು ಮಂತ್ರಾಕ್ಷತೆ ಕೊಟ್ಟದಡ.,
– ಗಣೇಶಮಾವ° ಹೇಳಿದವು. ಆ ದಿನ ಮಾಷ್ಟ್ರುಮಾವ°, ನೆಕ್ರಾಜೆ ಅಪ್ಪಚ್ಚಿಯ ಒಟ್ಟಿಂಗೆ ಹೋಯಿದವಡ, ಗಣೇಶಮಾವಂದೇ.
~
ಅದೆಲ್ಲ ಇರಳಿ, ಈ ಸರ್ತಿ ಒಂದು ಹೊಸ ಶುದ್ದಿ ಇದ್ದಡ! ಈ ಭೈರಪ್ಪಜ್ಜನ ಇನ್ನೊಂದು ಕಾದಂಬರಿ ಬತ್ತಾ ಇದ್ದಡ.
ಅದರ ಹೆಸರೇ ಕವಲು – ಹೇಳಿಗೊಂಡು!

ಈಗಾಣ ಅಂಬೆರ್ಪಿನ ಜೀವನಲ್ಲಿ ಕೌಟುಂಬಿಕ ಕಲಹ ಇತ್ಯಾದಿಗೊ ಜೋರು!
ಹಾಂಗಾಗಿ ಈ ಮಾರಾಮಾರಿ, ಕೋರ್ಟು, ಡಯಿವೋರ್ಸು ಅದು ಇದು ಎಲ್ಲ ಸುರು ಆಯಿದಿದಾ. ಅದನ್ನೇ ಕತೆ ಆಗಿ ಮಡಿಕ್ಕೊಂಡು ಒಂದು ಕಾದಂಬರಿ ಬರದ್ದಡ.
ಯೇವದೇ ವಿಶಯ ಆಗಿರಲಿ, ಅದರ ಮನಸ್ಸು ಮುಟ್ಟುತ್ತ ಹಾಂಗೆ ಬರೆತ್ತದು ಭೈರಪ್ಪಜ್ಜನ ತಾಕತ್ತು!
ಇಷ್ಟ್ರ ವರೆಗುದೇ ಅದೇ ನಮುನೆ ಆಯಿದು, ಇನ್ನುದೇ ಹಾಂಗೇ ಅಕ್ಕಿದಾ.. ಇದನ್ನುದೇ ಸುರೂವಾಣ ದಿನವೇ ತೆಗದು ಓದೆಕು – ಹೇಳಿಗೊಂಡ° – ಮಾಣಿ.
ಮದುವೆ ಆದ ಹೊಸತ್ತರಲ್ಲಿದೇ ಇಂತಾ ಕತೆ ಓದೆಕು ಹೇಳಿ ಅನುಸಿತ್ತದಾ ಈ ಮಾಣಿಗೆ! ಅಂಬಗ ಬೈರಪ್ಪನ ಪವರು ಎಂತಾ ಷ್ಟ್ರೋಂಗು!! ಹೇಳಿ ಅನುಸಿ ಹೋತು ಒಂದರಿ!!
~
ಇಷ್ಟೆಲ್ಲ ಮಾತಾಡುವಗ ಅಜ್ಜಕಾನಬಾವ° ಸೋಂಟೆಯ ಬಿಟ್ಟು ಒಂದು ಕಾದಂಬರಿ ಹಿಡ್ಕೊಂಡ°, ಅವಂಗೇ ಗೊಂತಿಲ್ಲದ್ದೆ!!

ಒಂದೊಪ್ಪ: ಪ್ರಾಚೀನ ಭಾರತದ ಸಾರ್ಥಕತೆಯ ತೋರುಸಿದ ಭೈರಪ್ಪಜ್ಜಂಗೇ ಗೌರವ ಕೊಡದ್ದರೆ ಆಧುನಿಕ ಭಾರತಕ್ಕೆ ಸಾರ್ಥಕತೆ ಇದ್ದೋ?

ಸೂ:  ಬೈರಪ್ಪಜ್ಜನ ಕಾದಂಬರಿ “ಕವಲು” ಬಿಡುಗಡೆಯ ಶುದ್ದಿ ವಿಜಯಕರ್ನಾಟಕಲ್ಲಿ ಬಂದ ಶುದ್ದಿ ಇಲ್ಲಿದ್ದು: (ಪುಟ 1) & ( ಪುಟ 10 )

ಪರ್ವ-ಸಾರ್ಥ-ಆವರಣ; ಭರತಪರ್ವದ ಸಾರ್ಥಕತೆಯ ಅನಾವರಣ..! , 4.8 out of 10 based on 18 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 65 ಒಪ್ಪಂಗೊ

  1. Please nanage aavarana pustakada copy iddare kalisi

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಅನಿತಾ ನರೇಶ್, ಮಂಚಿವೇಣೂರಣ್ಣಪುತ್ತೂರಿನ ಪುಟ್ಟಕ್ಕಅಡ್ಕತ್ತಿಮಾರುಮಾವ°ಶುದ್ದಿಕ್ಕಾರ°ಅನು ಉಡುಪುಮೂಲೆಡಾಮಹೇಶಣ್ಣಶ್ಯಾಮಣ್ಣವಸಂತರಾಜ್ ಹಳೆಮನೆಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಅನುಶ್ರೀ ಬಂಡಾಡಿಶರ್ಮಪ್ಪಚ್ಚಿಸಂಪಾದಕ°ಅಜ್ಜಕಾನ ಭಾವಬೋಸ ಬಾವವಾಣಿ ಚಿಕ್ಕಮ್ಮಡಾಗುಟ್ರಕ್ಕ°ಪುಟ್ಟಬಾವ°ಯೇನಂಕೂಡ್ಳು ಅಣ್ಣಶಾಂತತ್ತೆವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ