ಭಾದ್ರಪದ ಬಹುಳ ಪಿತೃಪಕ್ಷ – ಹೆರಿಯೋರ ನೆಂಪುಮಾಡುವೊ°, ಕಡೇಪಕ್ಷ!

ಮಳೆ ಅಂತೂ ನಿಂಬ ಅಂದಾಜಿಲ್ಲೆ, ಬಂಡಾಡಿ ಅಜ್ಜಿಯ ಪರಂಚಾಣದ ಹಾಂಗೆ!
ಮಳೆ ಹೇಳಿಗೊಂಡು ನಾವು ಜೆಂಬ್ರಂಗೊಕ್ಕೆ ಹೋಗದ್ದೆ ಕೂಬಲಾವುತ್ತೋ? ಹೇಳಿಕೆ ಹೇಳಿದವರ ಮನಸ್ಸಿಂಗೆ ಬೇಜಾರು ಮಾಡುತ್ಸು ಎಂತಕೆ ಅಲ್ದಾ ಭಾವ? 😉
ಮದುವೆ ಮಾಂತ್ರ ಜೆಂಬ್ರ ಅಲ್ಲ, ಸಣ್ಣ ತಿತಿಕೈನ್ನೀರೂ ಜೆಂಬ್ರವೇ ಬೋಚಬಾವಂಗೆ. ನಾಕು ಜೆನ ಸೇರಿ, ಮಧ್ಯಾನಕ್ಕೊಂದು ಊಟ ಇದ್ದೊಂಡು, ಕಾಪಿಯೋ ಚಾಯವೋ ಸಿಕ್ಕಿರೆ ಆತನ್ನೇ!
ಅದಿರಳಿ, ಈಗ ಬೋಚಬಾವನ ನೆಂಪಾದ್ಸೆಂತಕೆ ಹೇಳಿತ್ತು ಕಂಡ್ರೆ ಓ ಮೊನ್ನೆ ಮಾಷ್ಟ್ರುಮಾವನ ಮನೆಲಿ ತಿತಿಕೈನ್ನೀರು ಇದ್ದತ್ತು.

ಪಿತೃಕಾರ್ಯಲ್ಲಿ ಒಂದಾದ ತಿಥಿಯ ಬಗ್ಗೆ ಬೈಲಿಲಿಯೂ ಒಂದೆರಡು ಸರ್ತಿ ಮಾತಾಡಿದ್ದು.
ತಿತಿಲಿ ಬತ್ತ ಸಣ್ಣದೊಂದು ಕತೆಯ ಶುದ್ದಿಯನ್ನೂ ನಾವೊಂದರಿ ಮಾತಾಡಿದ್ದು.
ಅದರೊಟ್ಟಿಂಗೇ ತಿತಿಯ ಮಹತ್ವವನ್ನೂ ಹೇಳಿದ್ದು.
ಅದಾಗಿ ತಿತಿಗೆ ದಿನ ನೋಡುದು ಹೇಂಗೆ ಹೇಳ್ತದರ ಬಗ್ಗೆ ಮಾತಾಡಿಗೊಂಡಿದು. ನೆಂಪಿದ್ದನ್ನೇ?

ಮೊನ್ನೆ ಮಾಷ್ಟ್ರುಮಾವನಲ್ಲಿಗೆ ಹೋಗಿ ಬಂದ ಮತ್ತೆ ಈ ವಾರ ಮತ್ತೊಂದರಿ ಪಿತೃಕಾರ್ಯದ ಬಗ್ಗೆಯೇ ಮಾತಾಡುವನೋ ಹೇಳಿ ಕಂಡತ್ತು.
~
ಹಾಂಗೆ, ಮೊನ್ನೆ ಮಾಷ್ಟ್ರುಮಾವನ ಮನೆಲಿ ತಿತಿಕೈನ್ನೀರು ಇದ್ದತ್ತು.
ಗೋಕರ್ಣಂದ ಬಂದು ನಾಕು ದಿನ ಆಗಿತ್ತಟ್ಟೇ ಬೈಲಕರೆ ಗಣೇಶಮಾವಂಗೆ.
ರಾಮಕತೆಯ ಶುದ್ದಿ ಹೇಳಿದಷ್ಟೂ ಮುಗುದ್ದಿಲ್ಲೆ, ಹೇಳಿಹೇಳಿ ಬಚ್ಚಿದ್ದಿಲ್ಲೆ! ಕೇಳ್ತೋರಿಂಗೂ ಕೇಳಿಕೇಳಿ ಬಚ್ಚಿದ್ದಿಲ್ಲೆ!
ಪಳ್ಳತ್ತಡ್ಕ ಜಯಣ್ಣ, ಕಂಡಿಗೆ ರಘುಅಣ್ಣ, ಪಾರೆ ಮಗುಮಾವ, ಆಚಮನೆ ದೊಡ್ಡಣ್ಣ, ಬೈಲಕರೆ ಜೋಯಿಷಪ್ಪಚ್ಚಿ – ಎಲ್ಲೋರುದೇ ಕೇಳುವ ಕಳಲ್ಲಿ ಇದ್ದಿದ್ದೆಯೊ°.

ಅದು ಭಾಷಣ ಅಲ್ಲ ಇದಾ, ಒಬ್ಬ ಮಾತಾಡುದು – ಹಲವರು ಕೇಳುದು ಹೇಳುಲೆ.
ಹಾಂಗಿರ್ತಲ್ಲಿ ಸಾಮಾನ್ಯವಾಗಿ ನೆಡೆತ್ತದು ಒಂದು ‘ಪಂಚಾತಿಗೆ’ (/ಹರಟೆ).
ಮೋರೆಪುಟಲ್ಲಿ ಇರ್ತ ಬೋಚಬಾವಂಗೆ ನಿಜವಾಗಿಯೂ ‘ಹರಟೆ’ ಅಕ್ಕು, ಆದರೆ ಇದು ಆ ನಮುನೆ ಹರಟೆ ಅಲ್ಲ, ಚಿಂತನೆಗಳ ವಿಮರ್ಶೆಮಾಡ್ತ ಸತ್ವಯುತ ಹರಟೆ.

ಒಬ್ಬ° ಒಂದು ಶುದ್ದಿ ಹೇಳ್ತ°, ಅದಕ್ಕೆ ಮತ್ತೊಬ್ಬ° ಅವಂಗೆ ಗೊಂತಿಪ್ಪದರ ಹೇಳ್ತ° – ಹೀಂಗೇ ಮುಂದುವರುಕ್ಕೊಂಡು ಹೋವುತ್ತಾ ಇರ್ತು. ವಿಮರ್ಶೆ ಅಪ್ಪದು ಒಂದೇ ವಿಶಯ ಆಗಿರ, ಒಬ್ಬನಿಂದ ಒಬ್ಬಂಗೆ ವಿಶಯ ಹಾರಿಗೊಂಡು ಹೋಕು; ಆದರೆ ಎಲ್ಲವುದೇ ಸತ್ವಾರ್ಥ ಇಪ್ಪದೇ ಆಗಿರ್ತು.
ಹಳಬ್ಬರ ಬೈಲಿಲಿಯೂ ಹಾಂಗೇ; ಹೊಸಬ್ಬರ ಮೊಬೈಲಿಲಿಯೂ ಹಾಂಗೇಯೋ? 😉

ರಾಮಕತೆಂದ ಸುರು ಆದ ವಿಶಯ, ಅಶೋಕೆಗೆ ಎತ್ತಿ, ಸುತ್ತಿಸುತ್ತಿಅಲ್ಲಿಂದ ಗೋಕರ್ಣಕ್ಕೆ ಎತ್ತಿತ್ತು.
ಹೇಂಗೂ ಅಂದು ತಿತಿ ಅಲ್ಲದೋ – ಗೋಕರ್ಣಕ್ಕೆ ಎತ್ತುವಗ ಅಲ್ಯಾಣ ಪಿಂಡಪ್ರದಾನದ ಬಗ್ಗೆಯೂ ಬಂತು ಶುದ್ದಿ!
ಜೋಯಿಷಪ್ಪಚ್ಚಿ ಪಕ್ಕನೆ ಹೇಳಿದವು
– ಈಗ ಹೇಂಗೂ ಪಿತೃಪಕ್ಷ ಅಲ್ಲದೋ – ಅಲ್ಲಿ ಕಾಲು ಹಾಕಲೆ ಜಾಗೆ ಇರ ಹೇಳಿಗೊಂಡು.
ಕಾಲುಹಾಕಲೆ ಜಾಗೆ ಇರ – ಹೇಳಿತ್ತುಕಂಡ್ರೆ ಒಂದು ಪರಿಭಾಶೆ; ಚೆನ್ನೈಬಾವ ಆಗಳೇ ಪಟ್ಟಿಗೆ ಸೇರುಸಿ ಆತಾಯಿಕ್ಕು! ಅದಿರಳಿ.

ರಜರಜ ಗೊಂತಿದ್ದರೂ, ಪೂರ್ಣ ವಿವರ ಗೊಂತಿತ್ತಿಲ್ಲೆ ಒಪ್ಪಣ್ಣಂಗೆ; ಪಿತೃಪಕ್ಷದ ಬಗ್ಗೆ ರಜ ತಿಳಿಯೇಕಾತು – ಹೇಳಿದೆ ಜೋಯಿಶಪ್ಪಚ್ಚಿಯ ಹತ್ರೆ.
~

ಮಾಷ್ಟ್ರುಮಾವಂಗೆ ಅಂಬೆರ್ಪು ಅರಡಿಯ.
ಶ್ರದ್ಧೇಲಿ, ನಿಧಾನಕ್ಕೆ ಬಟ್ಟಮಾವ ಮಾಡುಸುವಾಗ, ಮಾಷ್ಟ್ರುಮಾವ ಅಷ್ಟೇ ಶ್ರದ್ಧೆಲಿ ಮಾಡುಗು.
ಮಾಷ್ಟ್ರುಮಾವನಲ್ಲಿ ತಿತಿ ಹೇಳಿತ್ತುಕಂಡ್ರೆ ನೆಗೆಮಾಣಿ ಅಮರುತ್ತ ಬಪ್ಪಲೆ, ಊಟ ತಡವಾವುತ್ತು ಹೇಳಿಗೊಂಡು! 😉
ಬೋಚಬಾವ° ಆದರೂ ಎಡೆ ಹೊತ್ತಿಲಿ ನಾಕು ಚಾಯ ಕುಡುದು ಕೂದುಗೊಂಗು ಒಂದು ಪಾಡ ಬಾಳೆಹಣ್ಣಿನೊಟ್ಟಿಂಗೆ!

ಮದಲಿಂಗೆ ಕಂಡಿಗೆ ದೊಡ್ಡಪ್ಪ ಎಲ್ಲ ಬಪ್ಪ ಕಾಲಲ್ಲಿ ಇಸ್ಪೇಟು ರೈಸಿಗೊಂಡಿತ್ತು; ಈಗ ಹೊಸಬ್ಬರಿಂಗೆ ಆಸಕ್ತಿಯೂ ಕಮ್ಮಿ, ಹಳಬ್ಬರಿಂಗೆ ಜೆತೆಯೂ ಕಮ್ಮಿ!
(ಇಸ್ಪೇಟಿನ ಬಗ್ಗೆ ಒಂದು ಶುದ್ದಿ ಮಾತಾಡಿದ್ದು; ಇಲ್ಲಿದ್ದು)
ಊಟ ತಡವಾದಷ್ಟೂ ಪಂಚಾತಿಗೆ ಹೊಡವಲೆ ಒಳ್ಳೆದಾತಿದಾ.

~
ಅಪ್ಪಚ್ಚಿ ಹೇಳುಲೆ ಸುರುಮಾಡಿದವು.
ರೇಡ್ಯಲ್ಲಿ ಬತ್ತ ‘ಆಕಾಶವಾಣಿಯಿಂದ ಕೇಳುತ್ತಿದ್ದೀರಿ’ ವಾರ್ತೆಯ ನಮುನೆಗೆ ಗಂಭೀರ ಸೊರಲ್ಲಿ!

ಸನಾತನತೆಲಿ ವಂಶಕ್ಕೇ ಬೆಲೆ!
ಅಭಿವಾದನೆಂದ ಹಿಡುದು, ಉಪ್ನಾನ ಒರೆಂಗೆ ಎಲ್ಲದರ್ಲಿಯೂ ವಂಶದ ಹೆಸರು ಬಂದೇ ಬತ್ತು.
ಶ್ರೇಷ್ಠ ವಂಶವೊಂದರ ಕಟ್ಟಿ, ಇಷ್ಟನ್ನಾರ ಬೆಳೆಶಿ, ನಮ್ಮ ಒರೆಂಗೆ ಎತ್ತುಸಿದ ಆ ಮಹಾನುಭಾವರ ಪಿತೃಗೊ ಹೇಳ್ತವು.

ದೇವರ ಇರುವಿಕೆಯ ತೋರುಸಿದ್ದೇ ಪಿತೃಗೊ ಅಲ್ಲದೋ?
ಹಾಂಗಾಗಿ, ದೇವಕಾರ್ಯದಷ್ಟೇ ಪ್ರಾಮುಖ್ಯ ಪಿತೃಕಾರ್ಯ.

ಭಾದ್ರಪದ ಬಹುಳ:
ಬಟ್ಟಮಾವಂಗೆ ಮಂತ್ರಪುಸ್ತಕ ಹೇಂಗೆ ಬಾಯಿಪಾಟವೋ, ಜೋಯಿಷಪ್ಪಚ್ಚಿಗೆ ಪಂಚಾಂಗಪುಸ್ತಕ ಬಾಯಿಪಾಟ ಇದ್ದು.

ಶ್ರಾವಣ ಮಾಸ ಪೂರ್ತ ಕಳುದ ಮತ್ತೆ ಭಾದ್ರಪದ ಶುದ್ಧ ಸುರು. (ಶುದ್ಧ ಹೇಳಿರೆ ಶುಕ್ಲಪಕ್ಷ, ಬಹುಳ ಹೇಳಿರೆ ಕೃಷ್ಣಪಕ್ಷ).
ಶೂನ್ಯಂದ ಪೂರ್ಣಕ್ಕೆ ಚಂದ್ರನ ಬೆಳವಣಿಗೆಯ ಹದ್ನೈದು ದಿನ ಈ ಶುದ್ಧ.
ಅದಾದ ಮತ್ತೆ ಚಕ್ರಲ್ಲಿ ಮತ್ತಾಣ ಹದ್ನೈದು ದಿನವೇ ಕೃಷ್ಣ ಪಕ್ಷ / ಬಹುಳ.
ಈ ಹದ್ನೈದು ದಿನ ಇಡೀ ಪಿತೃಕಾರ್ಯಕ್ಕೇ ಸೀಮಿತ ಆದ ಕಾರಣ ಇದರ “ಪಿತೃ ಪಕ್ಷ” ಹೇಳಿಯೇ ಹೇಳ್ತವು ಸಾಮಾನ್ಯವಾಗಿ.
ಆ ಹದ್ನೈದು ದಿನದ ಕಾಲಲ್ಲಿ ಪಿತೃಗೊಕ್ಕೆ ಪಿಂಡಪ್ರದಾನ ಮಾಡಿರೆ ಅದು ಬಹಳ ವಿಶೇಷ ಆತು – ಹೇಳಿ ನಮ್ಮ ನಂಬಿಕೆ.
ಉತ್ತರದ ಕಾಶಿ, ದಕ್ಷಿಣ ಕಾಶಿ ಗೋಕರ್ಣ, ಉಪ್ರಂಗಡಿ ಹೀಂಗಿರ್ತ- ಮೋಕ್ಷಕ್ಷೇತ್ರಂಗಳಲ್ಲಿ ಬಂದುಸೇರಿ ಪಿತೃಸ್ಮರಣೆ ಮಾಡ್ತವು  ಜೆನಂಗೊ.
ಅಪ್ಪಚ್ಚಿಯೂ ಮದಲಿಂಗೆ ಗೋಕರ್ಣಲ್ಲಿ ಕ್ಷೇತ್ರಪಿಂಡ ಹಾಕಿಕ್ಕಿ ಬಯಿಂದವಾಡ.
– ಹಾಂಗಾಗಿ ಆಗ ಗೋಕರ್ಣದ ಶುದ್ದಿ ಬಪ್ಪಗ ಅವಕ್ಕೆ ಪಿತೃಪಕ್ಷ ನೆಂಪಾದ್ಸು.
ಮದಲಿಂಗೆ ತಿಳುದೋರು, ಭಕ್ತಿಶ್ರದ್ಧೆಲಿ ಮಾಡುಸುವೋರು ಇದ್ದಿದ್ದವು ಗೋಕರ್ಣಲ್ಲಿ – ಹೇಳಿ ಜೋಯಿಷಪ್ಪಚ್ಚಿ ಅಭಿಪ್ರಾಯ ಮಾಡಿಗೊಂಡವು. ನೋಡೊ – ಈಗ ಗುರುಗೊ ಶುದ್ಧ ಮಾಡ್ತಾ ಇದ್ದವನ್ನೇ, ಮತ್ತೆ ಹೇಂಗಾವುತ್ತು ಹೇಳಿ ನೋಡುವೊ – ಹೇಳಿ ಸಮಾದಾನಪಟ್ಟುಗೊಂಡವು ಪಾರೆ ಮಗುಮಾವ°.
ಅದಿರಳಿ.

ಕ್ಷೇತ್ರಲ್ಲಿ ಮಾಂತ್ರ ಅಲ್ಲ, ಮದಲಿಂಗೆ ನಮ್ಮೋರ ಮನೆಗಳಲ್ಲಿಯೂ ಈ ಪಿತೃಪಕ್ಷ  ಮಹಾಲಯ ಆಚರಣೆ ಮಾಡಿಗೊಂಡಿತ್ತಿದ್ದವು. ಪಡುವಂತಾಗಿ ಅದರ “ಅಷ್ಟಗೆ” ಹೇಳುಗು, ಮೂಡ್ಳಾಗಿ “ಮಾಲಯ (/ ಮಹಾಲಯ)” ಹೇಳುಗು – ಹೇಳಿದವು.
– ಜೋಯಿಷಪ್ಪಚ್ಚಿಗೆ ಎರಡೂ ಹೊಡೆ ಧಾರಾಳ ಸಂಪರ್ಕ ಇದ್ದಿದಾ.

ಅಷ್ಟಗೆ ಬಗ್ಗೆಯುದೇ ಒಪ್ಪಣ್ಣಂಗೆ ಕೇಳಿ ಗೊಂತಿದ್ದು, ಉಂಡು ಗೊಂತಿದ್ದು.  ಆದರೆ ಅದೆಂತರ? – ಹೇಳ್ತ ಬಗ್ಗೆ ಸಂಪೂರ್ಣ ವಿವರ ಅರಡಿಯೇಕಾಗಿದ್ದತ್ತು.
ಆಚಮನೆ ದೊಡ್ಡಣ್ಣಂಗೆ ಸ್ವತಃ ವೇದ-ಪ್ರಯೋಗ ಅಧ್ಯಯನ ಆಯಿದು ಇದಾ.
ಹಾಂಗಾಗಿ ಅಷ್ಟಗೆ ಬಗ್ಗೆ ವಿವರಣೆ ಕೊಡ್ಳಪ್ಪಗ ಆಚಮನೆ ದೊಡ್ಡಣ್ಣನೇ ಸುರುಮಾಡಿದ°.
~

ಅಷ್ಟಗೆ / ಮಹಾಲಯ:

ದೊಡ್ಡಣ್ಣ ಸಮದಾನಲ್ಲಿ ವಿವರುಸಿಗೊಂಡು ಹೋದ ವಿಶಯವ  – ನೆಂಪುಮಾಡಿ ನಿಂಗೊಗೆ ಹೇಳ್ತೆ.
ರಜ ವಿಶಯ ಬಿಟ್ಟು ಹೋದಿಕ್ಕು. ನಿಂಗೊಗೆ ನೆಂಪಾದರೆ ಹೇಳಿಕ್ಕಿ. ಆತೋ!
~

ಒರಿಶಾವಧಿ ಮಾಡ್ತ ಪಿತೃಕಾರ್ಯ – ತಿಥಿಲಿ ಮೂರು ತಲೆಮಾರಿಂಗೆ ಪಿಂಡಪ್ರದಾನ ಮಾಡ್ತು. ಅಲ್ಲದೋ.
ಉದಾಹರಣೆಗೆ: ಅಜ್ಜನ ತಿತಿ ಆದರೆ, ಅಜ್ಜ° – ಮುದಿಅಜ್ಜ°(ಅಜ್ಜನ ಅಪ್ಪ) – ತೊಂಡಜ್ಜ° (ಅಜ್ಜನ ಅಜ್ಜ) – ಹೀಂಗೆ ಮೂರು ತಲೆಮಾರಿಂಗೆ ಬಳುಸಿ,  ಬ್ರಾಹ್ಮಣಾರ್ಥ ಊಟಕೊಟ್ಟು ಸಂತೋಷಪಡುಸಿ, ಕಾಕೆಯ ಮೂಲಕ ಪಿತೃಗೊಕ್ಕೆ ಕೊಟ್ಟು ಕಳುಸುದು. ಅಲ್ಲದೋ?
ಅಜ್ಜಿಯ ತಿಥಿ ಆದರೆ – ಅಜ್ಜಿ, ಮುದಿಅಜ್ಜಿ(ಅಜ್ಜನ ಅಮ್ಮ), ತೊಂಡಜ್ಜಿ (ಅಜ್ಜನ ಅಜ್ಜಿ) ಹೇಳಿತ್ತುಕಂಡ್ರೆ, ಅಜ್ಜಿ, ಅಜ್ಜಿಯ ಅತ್ಯೋರು, ಅಜ್ಜಿಯ ಅತ್ಯೋರ ಅತ್ಯೋರು – ಹೀಂಗೆ ಅಜ್ಜನ ತಲೆಮಾರಿನ ಒಟ್ಟಿಂಗೆ ಸಂಸಾರ ಮಾಡಿ ತಲೆಮಾರುಬೆಳಗುಲೆ ಕಾರಣ ಆದ ಮೂರು ತಲೆಮಾರು.
ತಿತಿಲಿ ಕೇವಲ ಮೂರೇ ತಲೆಮಾರು; ಒಂದೊಂದು ತಲೆಮಾರಿಂಗೂ ಒಂದೊಂದು ಪಿಂಡಂಗೊ.
ಆದರೆ ಅಷ್ಟಗೆಲಿ ಹಾಂಗಲ್ಲ.
~

ಪಿತೃಗೊಕ್ಕೆ ಸಮರ್ಪಿಸುವ ಪಿಂಡ..

ಈ ಜೀವನದ ನಿಜವಾದ ಋಣ ಆರ ಮೇಗೆ ಎಲ್ಲ ಇದ್ದು?
ಅಪ್ಪನ ಹುಟ್ಟಿಂಗೆ ಕಾರಣ ಆದ ಅವರ ಹೆರಿಯೋರ ತಲೆಮಾರುಗೊ!
ಅಬ್ಬೆಯ ಹುಟ್ಟಿಂಗೆ ಕಾರಣ ಆದ ಅವರ ಹೆರಿಯೋರ ತಲೆಮಾರುಗೊ!
– ಇದು ಹುಟ್ಟಿಂಗೆ ಆತು. ಇನ್ನು ನೆಮ್ಮದಿಲಿ ಬೆಳವಲೆ?
ಪಶುಪಾಲನೆಯ ಮೂಲಕ ಸಿಕ್ಕಿದ ಜೀವನಾಂಶಂದಾಗಿ ಪೌಷ್ಟಿಕತೆ ಬತ್ತು, ಊರಿನ ರಾಜ್ಯಾಡಳಿತ– ಕಾನೂನು ಮೂಲಕ ಜೀವನಕ್ಕೆ ಸುಭದ್ರತೆ ಬತ್ತು!
ಹಾಂಗಾಗಿ, ನಮ್ಮ ಋಣ ಅವರ ಮೇಗೆಯೂ ಇರ್ತು.
ಋಣ ತೀರುಸಲೆ ಪಿಂಡಪ್ರದಾನ ಮಾಡುದು – ಹೇಳಿ ಇಪ್ಪಾಗ; ಬರೇ ಅಬ್ಬೆಪ್ಪಂಗೆ ಬಿಡುದರ ಒಟ್ಟಿಂಗೇ, ಜೀವನ ಕಟ್ಳೆ ಸಹಕಾರಿ ಆದ ಹಲವಾರು ಜೀವಂಗೊಕ್ಕುದೇ ಗೌರವಲ್ಲಿ ಕೊಡ್ತ ಕ್ರಮ ಇದ್ದು.

ಇದೆಲ್ಲವುದೇ ಅಷ್ಟಗೆಲಿ ಬತ್ತು – ಹೇಳಿ ಆಚಮನೆ ದೊಡ್ಡಣ್ಣ ವಿವರಣೆ ಕೊಟ್ಟ°.

~
ದೊಡ್ಡಣ್ಣನ ವಿವರಣೆ ಯೇವತ್ತೂ ಹಾಂಗೇ – ಅದರ ಕೇಳ್ತೋನಿಂಗೆ ಒರಕ್ಕು ತೂಗಲಿಲ್ಲೆ.
ಸರಿಯಾದ ಊರ ಬಳಕೆಯ ಉಪಮೆಯೊಟ್ಟಿಂಗೆ, ನೆಗೆನೆಗೆಮೋರೆಲಿ ವಿವರುಸುವಗ, ಜೋಯಿಷಪ್ಪಚ್ಚಿಯ ನಮುನೆ ವಿದ್ವಾಂಸರಿಂದ ಹಿಡುದು, ಬೋಚಬಾವನ ಹಾಂಗಿರ್ತ ಘನವಿಧ್ವಂಸಕರ ಒರೆಂಗೆ, ಎಲ್ಲೊರಿಂಗೂ ಮನನ ಅಕ್ಕು.
~
ಅಷ್ಟಗೆಲಿ ಒಟ್ಟು ನೂರ ಎಂಟು ಪಿಂಡ ಅಡ!
ಒಂದು ಪಿಂಡ ಹೇಳಿತ್ತುಕಂಡ್ರೆ, ಒಂದು ಮೃಷ್ಟಾನ್ನ ಭೋಜನಕ್ಕೆ ಸಮ ಆದರೆ, ಅಷ್ಟಗೆ ಹೇಳಿತ್ತುಕಂಡ್ರೆ, ನೂರಾರು ಜೆನರ ಒಳಗೊಂಡ ಒಂದು ಸಮಾರಾಧನೆಯೇ ಸಮ!
ಆರಿಂಗೆಲ್ಲ ಈ ಸಮಾರಾಧನೆ – ಹೇಳ್ತರ ಬಗ್ಗೆ ವಿವರವಾಗಿ ತಿಳುಶಿಕೊಟ್ಟ° ದೊಡ್ಡಣ್ಣ.
ಪಿಂಡಲ್ಲಿಯೂ ಗಾತ್ರ ಲೆಕ್ಕ ಇದ್ದಾಡ.
ಪಿಂಡಾಧಿಕಾರವ, ಅಷ್ಟಗೆ ಮಾಡ್ತ ಎಜಮಾನನ ಸಮ್ಮಂದಲ್ಲಿ ಲೆಕ್ಕ ಹಾಕಿಂಡು ಹೋವುತ್ಸು.
ಪಿಂಡ ಲೆಕ್ಕ ಹಾಕುದರ ಒಟ್ಟಿಂಗೇ, ಪಿಂಡದ ಗಾತ್ರವನ್ನುದೇ ಹೇಳಿಗೊಂಡು ಹೋದ°.

ಹತ್ತರಾಣ ಹನ್ನೆರಡು ತಲೆಗೆ ದೊಡ್ಡ ಗಾತ್ರದ ಪಿಂಡ ಅಡ; ದೊಡ್ಡಣ್ಣನ ಪ್ರಕಾರ ಕಂಚುಹುಳಿ ಗಾತ್ರದ್ದು.
ಆರಿಂಗೆಲ್ಲ?
ಎಜಮಾನನ ಅಪ್ಪ, ಅಜ್ಜ, ಪಿಜ್ಜ,
ಎಜಮಾನನ ಅಮ್ಮ, ಮನೆಅಜ್ಜಿ, ಮನೆಪಿಜ್ಜಿ,
– ಹೀಂಗೆ ಮನೆಲಿ ಮೂರು ತಲೆಮಾರಿಂಗೆ ಆರು ಪಿಂಡ.
ಇದೇ ರೀತಿ ಅಜ್ಜನ ಮನೆಲಿ ಮೂರು ತಲೆಮಾರಿಂಗೆ ಆರು ಪಿಂಡ.
ಒಟ್ಟು ಹನ್ನೆರಡು ಪಿಂಡ, ಕಂಚುಹುಳಿ ಗಾತ್ರದ್ದು – ಹೇಳಿ ಕೈಲಿ ಇಷ್ಟು ದೊಡ್ಡ ಮಾಡಿ ತೋರುಸಿದ°.
ಇದು ಹನ್ನೆರಡು ತಲೆಗೊ, ಮೂರು ತಲೆಮಾರು – ನಮ್ಮ ರಕ್ತಮಾಂಸದ ಮೇಗೆ ನೇರ ಋಣ ಇಪ್ಪೋರು.
ಚೌಕ ಮಂಡ್ಳದ ಮಧ್ಯಲ್ಲಿಪ್ಪ ದೊಡ್ಡದೊಡ್ಡ ಕಳಲ್ಲಿ ಈ ಹನ್ನೆರಡು ಪಿಂಡ ಹಾಕುತ್ಸಡ.
~

ಇನ್ನು ಇಪ್ಪದು ಅದರಿಂದ ಹಿಂದಾಣದ್ದಲ್ಲದೋ – ಹಾಂಗಾಗಿ, ಮತ್ತಾಣದ್ದು ಅದರಿಂದ ಸಣ್ಣ, ಹಣ್ಣಡಕ್ಕೆ ಗಾತ್ರದ್ದಾಡ.
ಆರಿಂಗೆಲ್ಲ?
ಮನೆಲಿ – ಪಿಜ್ಜನ ಅಪ್ಪ ಮುದಿ ಅಜ್ಜ°, ಮುದಿಅಜ್ಜನ ಅಪ್ಪ ತೊಂಡಜ್ಜ°, ತೊಂಡಜ್ಜ ಅಪ್ಪ ತೊಂಡುಮುದಿಅಜ್ಜ° – ಅಜ್ಜಂದ್ರಿಂಗೂ, ಅವರ ಧರ್ಮಪತ್ನಿ ಆಗಿದ್ದ ಅಜ್ಜ್ಯಕ್ಕೊಗೂ; ಮುದಿಅಜ್ಜಿ, ತೊಂಡಜ್ಜಿ, ತೊಂಡುಮುದಿಅಜ್ಜಿ!!
ಮೂರುಮೂರು ಆರು.
ಅದೇ ನಮುನೆ ಅಜ್ಜನಮನೆಲಿಯೂ – ಮೂರು ತಲೆಮಾರುಗೊ; ಆರು ಪಿಂಡ.
ಒಟ್ಟು ಹನ್ನೆರಡು ಪಿಂಡ, ಹಣ್ಣಡಕ್ಕೆ ಗಾತ್ರದ್ದು.

ಮನೆಲಿಯೂ, ಅಜ್ಜನಮನೆಲಿಯೂ ಆಗಿ –
ಒಂದು ಎರಡು ಮೂರು – ತಲೆಮಾರು ಹಿಂದೆ ಒರೆಂಗೆ ಕಂಚುಹುಳಿ ಗಾತ್ರದ್ದೂ,
ನಾಕು, ಅಯಿದು, ಆರು ತಲೆಮಾರು ಹಿಂದಾಣದ್ದಕ್ಕೆ ಹಣ್ಣಡಕ್ಕೆ ಗಾತ್ರದ್ದೂ –
ಹನ್ನೆರಡನ್ನೆರಡು – ಇಪ್ಪತ್ನಾಕು ಪಿಂಡ ಹತ್ತರಾಣದ್ದು!
ಇವಿಷ್ಟು ನಮ್ಮ ಜೀವನದ ಮೇಗೆ ನೇರ ಸಂಬಂಧ ಇಪ್ಪದು.

ಚೌಕ ಮಂಡ್ಳದ ಮಧ್ಯಲ್ಲಿ ಇಪ್ಪ ದೊಡ್ಡದೊಡ್ಡ ಪಿಂಡದ ಸುತ್ತವೂ – ಈ ಹಣ್ಣಡಕ್ಕೆ ಗಾತ್ರದ ಹನ್ನೆರಡು ಪಿಂಡವ ಮಡಗುದಡ, ಕ್ರಮವಾಗಿ.

~
ಇನ್ನು?
ವಂಶವೃಕ್ಷದ ಬೇರೆಬೇರೆ ಗೆಲ್ಲುಗಳಲ್ಲಿ ಬತ್ತಂತಹಾ ವೆಗ್ತಿತ್ವಂಗೊಕ್ಕೆ.
ಅವುದೇ ನಮ್ಮ ಪಿಂಡದ ಅಧಿಕಾರಸ್ತರೇ. ಆದರೆ ನೇರವಾಗಿ ಅಲ್ಲ, ಹಾಂಗಾಗಿ ಅವಕ್ಕೆ “ಸೊಲುದ ಅಡಕ್ಕೆ”ಯಷ್ಟಕೆ.
ಪ್ರತಿ ತಲೆಮಾರಿಲಿಯೂ ಅಜ್ಜಂದ್ರ ಸಹೋದರ- ಸಹೋದರಿಯಕ್ಕೊ ಇರ್ತವಲ್ಲದೋ, ಅವಕ್ಕೆ.
ಎಜಮಾನನ ಅಕ್ಕತಂಗೆಕ್ಕೊ/ ಅಣ್ಣ/ತಮ್ಮಂದ್ರು ಆರಾರು ತೀರಿ ಹೋಗಿದ್ದರೆ – ಅವಕ್ಕೆ,
ಎಜಮಾನನ ಸೋದರತ್ತೆ / ಅಪ್ಪಚ್ಚಿ / ದೊಡ್ಡಪ್ಪಂದ್ರು ಆರಾರು ತೀರಿ ಹೋಗಿದ್ದರೆ  – ಅವಕ್ಕೆ,
ಎಜಮಾನನ ಅಜ್ಜನ ಮನೆಲಿ ಸೋದರಮಾವಂದ್ರು / ಚಿಕ್ಕಮ್ಮ / ದೊಡ್ಡಮ್ಮಂದ್ರು ಆರಾರು ಹೋಗಿದ್ದರೆ – ಅವಕ್ಕೆ,
ಎಜಮಾನನ ಅಜ್ಜನ ಅಣ್ಣತಮ್ಮಂದ್ರು, ಅಕ್ಕ ತಂಗೆಕ್ಕೊ ಆರಾರು – ಅವಕ್ಕೆ,
ಎಜಮಾನನ ಅಜ್ಜನಮನೆ ಅಜ್ಜನ ಸಹೋದರ ಸಹೋದರಿಯಕ್ಕೊ ಆರಾರು ಇದ್ದಿದ್ದರೆ – ಅವಕ್ಕೆ
– ಹೀಂಗೆ ವಂಶವೃಕ್ಷದ ಹತ್ತರಾಣ ಎಲ್ಲ ಗೆಲ್ಲುಗಳಲ್ಲಿಯೂ ಇಪ್ಪ ಹೆರಿ ತಲೆಗೊಕ್ಕೆ ಪಿಂಡ ಪ್ರದಾನ ಮಾಡ್ತದು.
ಇದರಿಂದಾಗಿ ಕೊಡಿ-ಕಡೆ ಇಲ್ಲದ್ದೆ ಆದ ಎಷ್ಟೋ ಗೆಲ್ಲುಗಳಲ್ಲಿ ಕೂದ ಹೆರಿಯೋರಿಂಗೆ ಆಹಾರ ಸಿಕ್ಕುತ್ತು – ಹೇಳ್ತದು ನಮ್ಮ ಹೆರಿಯೋರ ನಂಬಿಕೆ.

ಚೌಕ ಮಂಡ್ಳದ ಹೆರಾಣ ಸುತ್ತಿಲಿ ಇಷ್ಟು ಪಿಂಡಂಗಳ ಜೋಡುಸಿ ಮಡಗುದಾಡ.
~

ಇಷ್ಟೇಯೋ? ಅಲ್ಲ.
ಅದಾಗಲೇ ನಾವು ಮಾತಾಡಿದ ಹಾಂಗೆ ಜೀವನ ಕಟ್ಳೆ ಪ್ರತ್ಯಕ್ಷ ಪರೋಕ್ಷ ಆದ ಕೆಲವು ವಿಶೇಷ ವೆಗ್ತಿತ್ವಂಗೊಕ್ಕೆ ಅಡ.

–       ಅಬ್ಬೆ ಹಾಲುಕುಡುದ ಕೂಡ್ಳೇ ಸುರುಮಾಡ್ತದು ನಾವು ದನದ ಹಾಲು ಕುಡಿವಲೆ. ಗೋವು ಸಾವನ್ನಾರ ಹಾಲು ಕೊಡ್ತು, ನಾವು ಸಾವನ್ನಾರ ಹಾಲು ಕುಡಿತ್ತು. ಜೀವ ಇಪ್ಪನ್ನಾರ ಯೇವ ಗೋವಿನ ಒಟ್ಟಿಂಗೆ ಈ ಅವಿನಾಭಾವ ಸಮ್ಮಂದ ಮಡಗಿರ್ತೋ – ಆ “ಗೋವಿಂಗೆ”

–       ಬ್ರಹ್ಮಚರ್ಯಲ್ಲಿ ಅಧ್ಯಯನ ಮಾಡುವಗ ವಿದ್ಯಾಭ್ಯಾಸವ ಧಾರೆ ಎರದು, ಮರಿಯಾದಿಲಿ ಬದ್ಕುತ್ತ ನಮುನೆ ಮಾಡಿದ  “ಗುರುಗೊಕ್ಕೆ, ಗುರುಪತ್ನಿಗೆ”

–       ಕೃಷಿವಸ್ತು, ರಕ್ಷಣೆ, ಆರೋಗ್ಯ, ಸ್ವಚ್ಛತೆಗಳ ನೋಡಿಗೊಂಡು, ಜೀವನಕ್ಕೆ ಒಂದು ನಿರ್ದಿಷ್ಟ ಶಿಸ್ತು ಇಪ್ಪಲೆ ಕಾರಣ ಆದ ರಾಜ್ಯಾಡಳಿತದ ಸೂತ್ರಧಾರ “ಅಮಾತ್ಯಂಗೆ” (ಮಂತ್ರಿಗೆ)

–       ರಾಜ್ಯದ ಸಮಸ್ತ ಜೆವಾಬ್ದಾರಿಯನ್ನೂ ತೆಕ್ಕೊಂಡು, ಆಡಳಿತ ಚೆಂದಕೆ ನೆಡಕ್ಕೊಂಡು ಹೋಪಲೆ ಕಾರಣೀಭೂತರಾದ “ರಾಜಂಗೆ”..

ಇವಕ್ಕೆಲ್ಲೋರಿಂಗೂ ಅಷ್ಟಗೆಯ ದಿನ ಕೃತಜ್ಞತಾಪೂರ್ವಕ ಪಿಂಡ ಪ್ರದಾನ ಇದ್ದು – ಹೇಳಿದ ದೊಡ್ಡಣ್ಣ.

ಎರಡೂ ಕೈಯ ಹತ್ತೂ ಬೆರಳಿನ ಬಿಡುಸಿ ಮಡುಸಿ ಲೆಕ್ಕ ಹಾಕಿ ತೋರುಸೆಂಡು ಹೋಪಗ ನೂರಎಂಟು ಬಂದದೂ ಅಂದಾಜಿ ಆಯಿದಿಲ್ಲೆ ನವಗೆ! ಎಲ್ಲೋರುದೇ ಕೇಳಿಯೇ ಕೂದವು ಇದರ.
~

ಒಳ ತಿತಿಯೂ ನೆಡೆತ್ತಾ ಇದ್ದು. ಹೆರಿಯೋರಿಂಗೆ ಪಿಂಡಪ್ರದಾನವೂ.
ಮರ್ತ್ಯಲೋಕಂದ, ಪಿತೃಲೋಕಕ್ಕೆ ಹೋದ ಮೇಗೆ, ಇಲ್ಯಾಣ ಒಂದೊರಿಶ ಅಲ್ಯಾಣ ಒಂದು ದಿನ ಆಡ.
ಹಾಂಗೆ, ಅವರ ದಿನಾಗುಳೂ ಶ್ರದ್ಧೆಲಿ ಊಟ ಕೊಡ್ತದೇ – ಶ್ರಾದ್ಧ.

ಇದನ್ನೇ ದೊಡ್ಡ ಪ್ರಮಾಣಲ್ಲಿ  ಮಾಡಿ, ಎಲ್ಲಾ ಪಿತೃ ಆತ್ಮಂಗೊಕ್ಕೆ ಸಮಾರಾಧನೆ ಮಾಡ್ತದೇ – ಅಷ್ಟಗೆ; ಹೇಳ್ತದು ದೊಡ್ಡಣ್ಣನ ಒಂದು ವಾಕ್ಯದ ಉದಾಹರಣೆ.
~

ಅಷ್ಟಗೆಗೆ ದಿನ ನೋಡ್ತದು ಹೇಂಗೆ –  ಕೇಳಿದೆ; ಜೋಯಿಶಪ್ಪಚ್ಚಿ ಉತ್ತರ ಹೇಳುಲೆ ಸುರುಮಾಡಿದವು.
ಪಿತೃಪಕ್ಷದ ಈ ಹದ್ನೈದು ದಿನಲ್ಲಿ; ಎಜಮಾನನ ಹೆರಿಯೋರ ಪೈಕಿ ಸುರುವಾಣ ಮೂರು ತಲೆಲಿ ಆರದ್ದಾರು ಒಬ್ಬನ ತಿತಿ ಬಪ್ಪ ಹಾಂಗೆ ನೋಡಿ, ಅಷ್ಟಗೆ ಮಾಡ್ಳಕ್ಕಾಡ. ಯೇವ ದಿನವೂ ಎಡೆ ಆಗದ್ರೆ ಮಹಾಲಯಾ ಅಮಾವಾಸ್ಯೆಯ ದಿನ ಅಷ್ಟಗೆ ಮಾಡ್ಳಕ್ಕು – ಹೇಳಿದವು ಜೋಯಿಶಪ್ಪಚ್ಚಿ. ಇಡೀ ಪಕ್ಷವೇ ಪಿತೃಕಾರ್ಯಕ್ಕೆ ವಿಶೇಷ, ಇನ್ನು ದಿನ ನೋಡ್ಳೆ ಎಂತ ಇದ್ದು – ಹೇಳಿ ಅವರ ಅಭಿಪ್ರಾಯ.
~

ಒಪ್ಪಣ್ಣ ಸಣ್ಣ ಇಪ್ಪಾಗ ಚೂರಿಬೈಲಿಲಿ ಅಷ್ಟಗೆ ಆದ್ಸು ನೆಂಪಿದ್ದು. ಅದಲ್ಲದ್ದೆ ಬೇರೆ ಕಂಡ ನೆಂಪೇ ಇಲ್ಲೆ.
ಈಗೀಗ ನಮ್ಮೂರಿಲಿ ಇದರ ಕಾಂಬಲೇ ಸಿಕ್ಕುತ್ತಿಲ್ಲೆ! ಈಗ ಎಲ್ಲಿ ಆವುತ್ತು? – ಕೇಳಿದೆ.
ಜೋಯಿಷಪ್ಪಚ್ಚಿ, ದೊಡ್ಡಣ್ಣ – ಇಬ್ರೂ ಸೇರಿ ಕೆಲವು ಮನೆಗಳ ಪಟ್ಟಿಮಾಡಿದವು.
ಅವಕ್ಕಿಬ್ರಿಂಗೂ ಗೊಂತಿಪ್ಪ ಮನೆಗೊ ಆಗಿ, ನಮ್ಮ ಬೈಲಿಲಿ ಹೆಚ್ಚಿರೆ ಹತ್ತು ಮನೆ ಹೇಳಿದವು.
ಪೆರಾಬೆಯ ಹಾಂಗೆ ಒಂದೊಂದು ಮನೆಲಿ ಇದ್ದಾಡ, ಅಷ್ಟೇ.
ಪಂಜ ಸೀಮೆಯ ಗೌರವಾನ್ವಿತ ಮನೆತನಲ್ಲಿ ಒಂದಾದ ಮಡಪ್ಪಾಡಿ ಬಟ್ರಲ್ಲಿ ಆವುತ್ತು, ಇಂದಿಂಗೂ – ಹೇಳಿದ ದೊಡ್ಡಣ್ಣ.
ಮೊಗ್ರ ಗುರಿಕ್ಕಾರ್ರ ಮನೆಲಿಯೂ ಆವುತ್ತು – ಹೇಳಿಗೊಂಡು ಜೋಯಿಶಪ್ಪಚ್ಚಿ ಹೇಳಿದವು.

ನಮ್ಮ ನೆರೆಯ ಹತ್ಯಡ್ಕಲ್ಲಿಯೂ ಮದಲಿಂಗೆ ಒರಿಶಂಪ್ರತಿ ಆಗಿಂಡಿತ್ತಾಡ, ಹರಿಯಪ್ಪಜ್ಜನ ಕಾಲಲ್ಲಿ; ಈಗ ಕಾಲಕ್ರಮೇಣ ನಿಂದು ಹೋಯಿದು.

ಇಷ್ಟೆಲ್ಲ ಮಾತುಕತೆ ಅಪ್ಪಗ ಒಳ ಎಲ್ಲ ಆಗಿ ಊಟಕ್ಕಾದ್ದರ ಬೋಚಬಾವನೇ ಬಂದು ಹೇಳಿದ°.  🙂
ಊಟದೊಟ್ಟಿಂಗೆ ಪಿತೃಪಕ್ಷದ ಮಹತ್ವವೂ ಗೊಂತಾದ ತೃಪ್ತಿಲಿ ನಾವು ಅಲ್ಲಿಂದ ಹೆರಟತ್ತು.
~

ನಮ್ಮದೇ ಸಂಸ್ಕಾರಲ್ಲಿ ಬಂದಿದ್ದ ಈ ಅಷ್ಟಗೆ, ಪಿತೃಕಾರ್ಯಂಗ ಈಗಾಣ ಜೆನಜೀವನಲ್ಲಿ ಅಪುರೂಪ ಆಗಿಂಡು ಬಯಿಂದು.
ಅಷ್ಟಗೆ ಹೇಳಿತ್ತು ಕಂಡ್ರೆ ಎಂತರ ಹೇಳಿ ಶಾಂಬಾವಂಗೇ ಅರಡಿಗೋ ಅರಡಿಯದೋ, ಉಮ್ಮಪ್ಪ.
ವಿನುವಿಂಗಂತೂ ಹಾಂಗಿಪ್ಪ ಶಬ್ದಂಗೊ ಕೆಮಿಗೆ ಬೀಳದ್ದಾಂಗೆ ಮಾಡಿದ್ದು ವಿದ್ಯಕ್ಕ!

ಅವನ ಹಾಂಗಿರ್ತ ಮಕ್ಕೊಗೆ ಹೀಂಗೊಂದು ಆಚರಣೆ ಇದ್ದು ಹೇಳಿಯೇ ಗೊಂತಿರ.
ಅದು ಪೂರ್ತಿ ಮರತ್ತು ಹೋಪ ಮೊದಲು ಈ ಪಿತೃಪಕ್ಷಲ್ಲಿ ಒಂದರಿ ನೆಂಪುಮಾಡಿಗೊಂಬೊ°.
ಅಷ್ಟಗೆ ಮಾಡ್ಳೆಡಿಯದ್ರೂ, ಕೊನೇಪಕ್ಷ ಪಿತೃಗಳನ್ನೂ, ಹೀಂಗಿರ್ತ ಪಿತೃಕಾರ್ಯಂಗಳನ್ನೂ ನೆಂಪುಮಾಡುವೊ, ಅಲ್ಲದಾ?

ಒಂದೊಪ್ಪ: ಹಿಂದಾಣ ಏಳು ತಲೆಮಾರಿನ ನೆಂಪುಮಡಗಿ ಮಾಡೇಕಾದ ಈ ಕಾರ್ಯವ – ಮುಂದೆ ಏಳು ತಲೆಮಾರಿಂಗೂ ಮರೆಯದ್ದ ಹಾಂಗೆ ನೆಂಪುಮಾಡುದು ವಂಶವೃಕ್ಷದ ಈಗಾಣ ಗೆಲ್ಲುಗಳ ಕರ್ತವ್ಯ ಅಲ್ಲದೋ?

ಸೂ: ಪಟ ಇಂಟರುನೆಟ್ಟಿಂದ.

ಒಪ್ಪಣ್ಣ

   

You may also like...

20 Responses

 1. ಅಪ್ಪಪ್ಪು … ಪರಿಭಾಷೆ ಪಟ್ಟಿ ಅಲ್ಲ ಶಬ್ದಕೋಶವೇ ಆಯೇಕ್ಕು ಹೇಳ್ತಲ್ಲಿವರೇಗೆ ಆಚೀಚೆಗಂದ ಪಟ್ಟಿ ಬತ್ತಾ ಇದ್ದು. ಎಲ್ಲಾ ವಿಪಶ್ಚಿದಪಶ್ಚಿಮನ ಮಹಿಮೆ.
  [ಬೋಚಬಾವ° ಆದರೂ ಎಡೆ ಹೊತ್ತಿಲಿ ….] – ಓಯಿ.., ಬಂದ ಹಾಂಗೆ ಸಜ್ಜಿಗೆ ಅವಲಕ್ಕಿ ಆ ಕೋರಿಗೆಲಿ ಇದ್ದದು ಕಾಲಿ ಮಾಡಿದ್ದು ಮರದ್ದೋ!
  ಬಲಿ ಬಾಳೆ ಹೆರ ಮಡುಗಿಯಪ್ಪಗ ನೆಗೆ ಮಾಣಿ ಆಚಿಕೆ ಬೈಪ್ಪಣೆಲಿ ಕೈಲಿ ಸುಟ್ಟವು ಹಿಡ್ಕೊಂಡು ನಿಂದುಗೊಂಡು ಕಾಕೆಯ ಬಳ್ಳಿ ಬಿಡಿಸಿ ಬಿಟ್ಟದಾರು ಕೇಳಿದ್ದನಡ ಅಪ್ಪೋ?!

  [ದೇವಕಾರ್ಯದಷ್ಟೇ ಪ್ರಾಮುಖ್ಯ ಪಿತೃಕಾರ್ಯ…] – ಮನ ಮುಟ್ಟುವ ಮಾತು. ಅಷ್ಟಗೆ / ಮಹಾಲಯ ವಿವರಣೆ ನಿರೂಪಣೆ ಮನದಟ್ಟು ಅಪ್ಪ ಹಾಂಗೆ ಒಳ್ಳೆ ಪ್ರಯತ್ನ. ಪಿಂಡ ಹಾಕಿದ ಪ್ರಕಾರ ಪಿತೃ ತರ್ಪಣವೂ ಶ್ರಾದ್ಧದ ಅಂಗವಾಗಿ [ಮದಲಿಂಗೆ ಮರುದಿನ ಹೇಳಿ ಲೆಕ್ಕ (ಶ್ರಾದ್ಧಾಂಗಭೂತಂ ಪರೇದ್ಯುಃ ತಿಲತರ್ಪಣಂ)] ಅಲ್ಲೇ ನಡೆತ್ತು. ಪಟಲ್ಲಿ ಹಾಕಿದ ಪಿಂಡ ಪಾತ್ರೆ ಹರಿವಾಣ ಬಾಳೆಲೆ ಎಲ್ಲವೂ ಚಂದ. ಶ್ರದ್ಧೆಂದ ಮಾಡುವದು ಶ್ರಾದ್ಧ. ಏನೂ ಎಡಿಗಾಗದ್ದವ ಶ್ರದ್ಧೆಂದ ಹಿರಿಯರ ನೆನಪಿಸ್ಯೊಂಡು ಕಣ್ಣೀರು ಹಾಕಿ ಕೂಗಿದರೂ ಸಾಕಡ. ಕೂದಲ್ಯಂಗೇ ನವಗೆ ಓದಿಗೊಂಡು ಶ್ರದ್ಧೆಂದ ಹಿರಿಯರ ನೆಂಪು ಮಾಡ್ಳೆ ಎಡಿಗಪ್ಪಾಂಗೆ ಈ ಪಿತೃಪಕ್ಷಲ್ಲೇ ಮಾಡಿಕೊಟ್ಟ ಒಪ್ಪಣ್ಣನ ಕಾರ್ಯ ಉತ್ತಮ ಹೇಳಿ ಹೇಳ್ವದು ‘ಚೆನ್ನೈವಾಣಿ’.

  • ಶ್ರದ್ಧೆಯ ಶ್ರಾದ್ಧದ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದಿ.

   ಪಿತೃತರ್ಪಣ {ಮದಲಿಂಗೆ ಮರುದಿನ ಹೇಳಿ ಲೆಕ್ಕ} ಓಹೋ! ಇದು ಗೊಂತಿತ್ತಿಲ್ಲೆ.
   ವಾರದ ಮದುವೆ ಒಂದೇ ದಿನಕ್ಕೆ ಎತ್ತಿದ ಹಾಂಗೆ ಇದುದೇ ಸಣ್ಣ ಆದ್ಸೋ ಅಂಬಗ, ಉಮ್ಮಪ್ಪ!

   ಚೆನ್ನೈವಾಣಿ ಕಂಡು ಕೊಶೀ ಆತು.

 2. ಬೊಳುಂಬು ಮಾವ° says:

  ಅಷ್ಟಗೆಯ ಬಗೆಲಿ ಸ್ಪಷ್ಟವಾಗಿ ಕೊಟ್ಟ ವಿವರ ತುಂಬಾ ಇಷ್ಟ ಆತು. ಪಿತೃಪಕ್ಷಲ್ಲಿ ಬಂದ ಸಕಾಲಿಕ ಲೇಖನ ಒಳ್ಳೆ ಮಾಹಿತಿ ಕೊಟ್ಟತ್ತು. ಪಿತೃಗಳನ್ನೂ, ಹೀಂಗಿರ್ತ ಪಿತೃಕಾರ್ಯಂಗಳನ್ನೂ ನೆಂಪುಮಾಡೆಕಾದ್ದು ಎಲ್ಲೋರ ಕರ್ತವ್ಯ ಕೂಡ.

  • ಮಾವಾ,
   { ಅಷ್ಟಗೆಯ ಬಗೆಲಿ ಸ್ಪಷ್ಟವಾಗಿ ಕೊಟ್ಟ ವಿವರ ತುಂಬಾ ಇಷ್ಟ }
   ತ್ರಾಸ ಇಲ್ಲದ್ದೆ ಪ್ರಾಸ ಹಾಕಿದ್ದು ಕೊಶಿ ಆತು. ಹರೇರಾಮ

 3. ಶರ್ಮಪ್ಪಚ್ಚಿ says:

  ಅಷ್ಟಗೆ ಎಂತಕೆ ಮಾಡುವದು, ಹೇಂಗೆ ಮಾಡುವದು, ಆರಿಂಗೆಲ್ಲಾ ಪಿಂಡ ಪ್ರದಾನ ಮಾಡ್ಲಿದ್ದು ಹೇಳಿ ಸವಿವರವಾದ ಸಕಾಲಿಕ ಲೇಖನ.
  ಗೋವಿಂಗೆ, ಗುರುವಿಂಗೆ, ಗುರು ಪತ್ನಿಗೆ, ಅಮಾತ್ಯಂಗೆ, ರಾಜಂಗೆ ಎಲ್ಲರಿಂಗೂ ಪಿಂಡ ಹಾಕಲೆ ಇದ್ದು ಹೇಳಿ ಗೊಂತಾದ್ದು ಈಗಳೇ.
  ನಮ್ಮ ಈ ಪೀಳಿಗೆಗೆ ಕಾರಣಕರ್ತರಾದ ಹಿಂದಿನ ತಲೆಮಾರಿನವಕ್ಕೆ ಶ್ರದ್ಧೆಲಿ ನಮನ ಸಲ್ಲುಸುತ್ತ ಈ ಕಾರ್ಯಕ್ರಮ ನಮ್ಮ ಸಂಸ್ಕೃತಿಲಿ ಮಾತ್ರ ಕಾಂಬಲೆ ಸಿಕ್ಕುಗಷ್ಟೆ.
  ಒಪ್ಪಣ್ಣಂಗೆ ಧನ್ಯವಾದಂಗೊ

  • ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

   ಎಂಗಳ ಪುರೋಹಿತರು,ದಿ.ಕೋಣಮ್ಮೆ ಕೇಶವ ಭಟ್ಟರು ವಿವರಿಸಿದ ಈ ವಿಷಯ ಮತ್ತೆ ನೆಂಪಾತು.
   ನಮ್ಮ ಸಂಸ್ಕೃತಿ ತುಂಬಾ ಉತ್ತಮ ಮಟ್ಟದ್ದು ಹೇಳುದು ತಿಳಿವದು ಈ ಆಚರಣೆ ಅರ್ಥ ಆದರೆ ಮಾತ್ರ.

   • ಶರ್ಮಪ್ಪಚ್ಚೀ,
    ಪೀಳಿಗೆಂದ ಪೀಳಿಗೆಗೆ ಕೃತಜ್ಞತೆ ಮುಂದುವರುದು ಬಪ್ಪ ಸಂಸ್ಕಾರ ಈ ಸನಾತನಲ್ಲಿ ಮಾಂತ್ರ ಸಿಕ್ಕುಗಷ್ಟೇಯೋ – ಹೇಳಿಗೊಂಡು, ಅಲ್ಲದೋ? 🙂

    ಗೋಪಾಲಣ್ಣಾ,
    ಕೋಣಮ್ಮೆ ಭಟ್ಟಜ್ಜ ಬೇರೆಂತಾರು ಹೇಳಿದ್ದವೋ? ಹಾಂಗಿದ್ದರೆ ಬೈಲಿಲಿ ನೆಂಪುಮಾಡಿಗೊಳ್ಳಿ. ಆತೋ? 🙂

 4. ತೆಕ್ಕುಂಜ ಕುಮಾರ ಮಾವ° says:

  ಪಿತೃಗಳ ನೆಂಪು ಮಡಿಕ್ಕೊಂಬದು ಗ್ರಹಸ್ಥನ ಆದ್ಯ ಕರ್ತವ್ಯ. ದೇವಕಾರ್ಯ ಮಾಡುವಾಗ ಸಣ್ಣ ಪುಟ್ಟ ತಪ್ಪು ಆದರೆ ಅದಕ್ಕೆ ಕ್ಷಮೆ ಇದ್ದಡ, ಪಿತೃ ಕಾರ್ಯಲ್ಲಿ ಯೇವುದೇ ತಪ್ಪಿಂಗೆ ಕ್ಷಮೆ ಇಲ್ಲೆಡ – ಅಂದರೆ ಅಷ್ಟು ಶ್ರದ್ದೆಲಿ ಮಾಡೆಕ್ಕಪದು, ಹಾಂಗಾಗಿ ಇದು” ಶ್ರಾದ್ಧ”.
  ಯೇವಗಳೋ ನೋಡಿದ ” ಅಷ್ಟಗೆ’ಯ ವಿಷಯ ವಿವರವಾಗಿ ಬೈಲಿಲಿ ತಿಳಿಶಿದ್ದಕ್ಕೆ ಒಪ್ಪಣ್ಣಂಗೆ ಧನ್ಯವಾದ.

  • ಪಿತೃಕಾರ್ಯಲ್ಲಿ ತಪ್ಪಿಂಗೆ ಕ್ಷಮೆ ಇಲ್ಲೆ – ಆಯಿಕ್ಕು.
   ಎಂತ್ಸಕೇ – ಶ್ರಾದ್ಧವ ಶ್ರದ್ಧೆಲೇ ಮಾಡ್ತದು, ಮಾಡೆಕ್ಕಪ್ಪದು. ಹಾಂಗಾಗಿ. ಅಲ್ಲದೋ?

   ಹೆರಿಯೋರ ಮೇಗೆ ಭಯಭಕ್ತಿ ಇದ್ದರೆ ಆ ಗೌರವ ಬಂದೇ ಬಕ್ಕು, ಎಂತ ಹೇಳ್ತಿ?

 5. ಪಿತೃಕಾರ್ಯದ ಬಗ್ಗೆ ಸವಿವರವಾಗಿ ವಿವರಿಸಿದ್ದು ಒಪ್ಪ ಆಯಿದು 🙂 ಪಿತೃಕಾರ್ಯ ಮಾಡುವ ಮೊದಲು ಈ ವಿಚಾರಂಗಳ ಮೊದಲು ಅಗತ್ಯವಾಗಿ ತಿಳ್ಕೊಳ್ಳೆಕ್ಕು.

 6. dr pradeep says:

  ಎನ್ನ ಅಪ್ಪನ ಅಜ್ಜನ ಮನೆ (ಮುಳಿಯಾಲ) ಲಿ ಮೊನ್ನೆ ಅಷ್ಟಗೆ ಇತ್ತು. ಈಗ ಅದು ಎಹ್ತರ ಹೆಲಿ ಅರ್ಥ ಅತು

  • ಡಾಗುಟ್ರೇ,
   ಹೋ! ಅಪ್ಪನ್ನೇ? ಮುಳಿಯಾಲಲ್ಲಿ ಅಷ್ಟಗೆ ಅಪ್ಪದು ನೆಂಪಾತು.
   ಹೇಳಿದಾಂಗೆ, ಮುಳಿಯಾಲಲ್ಲಿ ರಾಚಪ್ಪಚ್ಚಿ ಸಿಕ್ಕಿದವೋ? ನವಗೆ ಕಾಂಬಲೆ ಸಿಕ್ಕದ್ದೆ ಕಾಲಾನುಕಾಲ ಆಗಿ ಹೋತನ್ನೇಪ್ಪಾ! 😉

 7. ಇದು ಒಳ್ಲೆ ಕಾರ್ಯ

 8. ನಮ್ಮ ಸಂಸ್ಕೃತಿಲಿ ಹೀಂಗಿಪ್ಪ ಹಲವಾರು ಒಳ್ಳೆಯ ವಿಚಾರಂಗೊ ಇದ್ದು. ಅದರ ವಿದೇಶೀಯರು ನಕಲು ಮಾಡಿ ತೆಕ್ಕೊಂಡು ಹೋಗಿ ‘ಇದು ಎಂಗಳದ್ದು…’ ಹೇಳುವಾಗ ಬೇಜಾರಾವುತ್ತು. ಇನ್ನು ನವಂಬರ್ ತಿಂಗಳ ೨ನೇ ತಾರೀಕು ಪೊರ್ಬುಗಳ ‘ಆಲ್ ಸೋಲ್ಸ್ ಡೇ’ ಇದಾ. ಅದರ ಸುದ್ದಿ ಪೇಪರ್ಲಿ ಬಪ್ಪಗ ಇದು ಯಾವಾಗಳೂ ಎನಗೆ ನೆಂಪಕ್ಕು. ಮನೆಗೆ ಕೆಲಸಕ್ಕೆ ಬಂದೊಂಡಿತ್ತಿದ್ದ ಬಾಯಮ್ಮ ‘ನಿಕ್ಲೆನ ಅಷ್ಟಗೆದ ಲೆಕ್ಕನೇ ಎಂಕ್ಲೆನವು…’ ಹೇಳುವಾಗ ಪ್ರತಿ ಸರ್ತಿಯೂ ಕೋಪ ಬಕ್ಕು. ನಮ್ಮ ಸಂಸ್ಕೃತಿಯ ಅವರ ಸಂಸ್ಕೃತಿಯೊಟ್ಟಿಂಗೆ ಹೋಲಿಕೆ ಮಾಡ್ತದು ಎನಗೆ ಏನೂ ಸರಿ ಕಾಣ್ತಿಲ್ಲೆ. ಬೇಳ ಇಂಗ್ರೋಜಿಲಿ ಪ್ರತಿ ವರ್ಷವೂ ನವರಾತ್ರಿಗೆ ‘ಆಯುಧ ಪೂಜೆ’ ಮಾಡಿದ ಹಾಂಗೆ. ಆಯುಧ ಪೂಜೆ ಬೇಕಾದರೆ ಮಾಡಲಿ. ನವರಾತ್ರಿಲೇ ಎಂತಕ್ಕೆ ಮಾಡೆಕ್ಕು ಅವು?

  • ಹಳೆಮನೆಅಣ್ಣಾ,
   ಎಷ್ಟೊಳ್ಳೆ ಒಪ್ಪ!

   ನಮ್ಮ ಸಂಸ್ಕಾರಲ್ಲಿ ಇಪ್ಪದರ ನಮುನೆಯೇ ಒಂದು ಸುರುಮಾಡಿ ಲೋಕಕ್ಕೆ ಪ್ರಕಟ ಮಾಡ್ತದು. ಮುಂದೊಂದು ದಿನ ಹಿಂದುಗಳಲ್ಲಿ’ಯೂ’ ಅದೇ ನಮುನೆ ಇದ್ದು – ಹೇಳ್ತದರ ಜಗಜ್ಜಾಹೀರು ಮಾಡುದು.
   ಅಲ್ಲದೋ?

   ಹೇಳಿದಾಂಗೆ, ಇಂಗ್ರೋಜಿಲಿ ಈ ಒರಿಶವೂ ಆಯುಧಪೂಜೆ ಮಾಡಿದ್ದವೋಂಬಗ?

 9. Sumana Bhat Sankahithlu says:

  ಅಷ್ಟಗೆ ಹೇಳಿರೆ ಎಂತರ ಹೇಳಿ ಹಿರಿಯರತ್ರೆ ಕೇಳೆಕ್ಕು ಗ್ರೇಶಿತ್ತಿದ್ದೆ, ಒಪ್ಪಣ್ಣ ಆ ಶುದ್ದಿ ಬರದ್ದದು ಲಾಯಿಕಾತು, ಈಗ ಗೊಂತಾತು ಅಷ್ಟಗೆ ಹೇಳಿರೆ ಎಂತರ ಹೇಳಿ. ಧನ್ಯವಾದಂಗೊ ಒಪ್ಪಣ್ಣ.
  ~ಸುಮನಕ್ಕ.

  • ಸುಮನಕ್ಕಾ..
   ದೂರದ ಊರಿಲಿ ಕೂದಂಡು ನಮ್ಮ ಸಂಸ್ಕಾರಂಗಳ ಮೇಗೆ ಒಲವು ತೋರುಸುತ್ತ ನಿಂಗಳ ಒಪ್ಪಣ್ಣಂಗೆ ತುಂಬಾ ಕೊಶೀ!
   ಅಷ್ಟಗೆ ಹೇಳಿರೆ ಅಷ್ಟೆಯೋ – ಹೇಳಿ ಆತೋ? ಇಲ್ಲೆನ್ನೆ? 😉

 10. Sumana Bhat Sankahithlu says:

  ಇಲ್ಲೆಪ್ಪ, ಎಷ್ಟೆಲ್ಲ ಕ್ರಮಂಗೊ ಇದ್ದು ಅ ದಿನ ಮಾಡ್ಲೆ ಹೇಳಿ ಆಶ್ಚರ್ಯ ಅತು.
  ನಮ್ಮ ಕ್ರಮಂಗಳ ಮೇಲೆ ಪ್ರೀತಿ ಅದು ಎಲ್ಲಿದ್ದರೂ ಮನಸಿಲಿರ್ತು ಒಪ್ಪಣ್ಣ… ಎನ್ನ ಬಗ್ಗೆ ಬರದ್ದರ ಓದಿ ತುಂಬ ಖುಶಿ ಅತು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *