ಬಿಂಗಿ ಪುಟ್ಟಂಗೆ ಶಾಲೆ ಮುಗುತ್ತು, ಮುಂದೆಂತರ ?

July 16, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 38 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹ್ಮ್, ಈ ಬಿಂಗಿ ಪುಟ್ಟನ ಶುದ್ದಿ ನಾವು ಮಾತಾಡಿದ್ದಿಲ್ಲೆ, ಅಲ್ಲದೋ?
ಓ ಮೊನ್ನೆ ಒಂದರಿ ಹೇಳುದೋ ಗ್ರೇಶಿದೆ, ಅಂಬಗ ಅವ° ಪರೀಕ್ಷೆಯ ಅಂಬೆರ್ಪಿಲಿ ಇತ್ತಿದ್ದ°.
ಪರೀಕ್ಷೆ ಇದ್ದರೆ ಯಮನೂ ಕಾದು ಕೂರ್ತ°ನಡ, ಮತ್ತೆ ಅಂಬಗ ಬೇಡ ಹೇಳಿ ಕಂಡತ್ತು! :-)
ಈಗ ಪರೀಕ್ಷೆ ಎಲ್ಲ ಮುಗುದು ಒಂದು ಸಂಕ್ರಮಣ ಹಂತಕ್ಕೆ ಎತ್ತಿದ°, ಹಾಂಗೆ ಅವನ ಶುದ್ದಿ ಒಂದರಿ ಹೇಳಿಕ್ಕುವೊ° – ಹೇಳಿಗೊಂಡು ಈಗ ಸುರುಮಾಡಿದ್ದು.
~
ಈ ಪುಟ್ಟ°  ಮೊದಲಾಣ ಹಾಂಗೆ ಈಗ ಬರೇ ಸಣ್ಣ ಏನಲ್ಲ. ಈಗ ರಾಮಜ್ಜನ ಕೋಲೇಜು.
ಮೊದಲಾದರೆ ಸಮ, ಸಣ್ಣ ಶಾಲಗೆ ಹೋಯ್ಕೊಂಡಿದ್ದದು. ಮಹಾ ಲೂಟಿ. ಹಾಂಗೆ ಕೆಲವು ಜೆನ ಲೂಟಿಪುಟ್ಟ° / ಬಿಂಗಿಪುಟ್ಟ° ಹೇಳಿಯೂ ಹೇಳುಗು.
ದಿನಲ್ಲಿ ಕಡಮ್ಮೆಲಿ ಹತ್ತು ಜೆನರ ಕೈಲಿ ಬೈಗಳು ತಿನ್ನದ್ದರೆ ಆ ಮಾಣಿಗೆ ಸಮಾದಾನ ಆಗದೋ ಏನೋ!
ರಜ್ಜ ಪಾಪದವರ ಕೈಲಿ ಬರೇ ಬೈಗಳು ತಿಂದಿದ್ದರೆ, ರಜ್ಜ ದೊಡ್ಡವರ (ಪ್ರಾಯಲ್ಲಿ / ಪೈಸೆಲಿ) ಕೈಂದ ಪೆಟ್ಟೇ ತಿಂಗು.
ಕೆಲವುಸರ್ತಿ ಆರಾರು ಎಂತಾರು ತಪ್ಪು ಮಾಡಿಕ್ಕಿ ಇವನ ತಲೆಗೆ ಹಾಕಿಬಿಡುದೂ ಇಕ್ಕು ತಪ್ಪು ಮಾಡಿರೂ ಮಾಡದ್ದರೂ ಬೈಗಳು ಇವಂಗೇ ಇಪ್ಪದದು.
ಆ ನಮುನೆ ಇತ್ತು ಅವನ ಬದ್ಕಾಣ.
ಯೇವದಾರು ಜೆಂಬ್ರಲ್ಲಿ ಈ ಪುಟ್ಟ ಇದ್ದರೆ, ಕೈ ತೊರುಸುತ್ತ ದೊಡ್ಡವಕ್ಕೆ ಕೊಶೀ ಅಕ್ಕು, ಮುಟ್ಟಿದ್ದಕ್ಕೆ ಕಿಟ್ಟಿದ್ದಕ್ಕೆ ಬಡಿವಲಕ್ಕಿದಾ..
~

ಬಡಿವಲಕ್ಕಿದಾ..
ಎಂತಕೆ ಹೇಳಿರೆ, ಎಷ್ಟು ಬಡುದರೂ ಅವ° ಮಾತಾಡದ್ದೆ ತಿಂಗು! ಬಡ್ಡುಚರ್ಮ, ಪೆಟ್ಟು ತಿಂದುತಿಂದು!!
ಒಪಾಸು ಮಾತಾಡ°, ಅಷ್ಟೇ ಅಲ್ಲ, ಅವನ ಪರವಾಗಿ ಕೇಳುವೋರು ಆರುದೇ ಇಲ್ಲೆ.

ಸಣ್ಣ ಗುಡಿಚ್ಚೆಲು ಮನೆ. ಅವಂದೇ ಅವನ ಅಮ್ಮಂದೇ ಇಪ್ಪದು.
ಅಮ್ಮಂಗೆ ಅಷ್ಟು ಸೌಖ್ಯ ಇಲ್ಲೆ, ಮದಲಿಂಗೇ. ಇವನ ಹೆತ್ತ ಬಾಳಂತನಲ್ಲಿ ಎಂತದೋ ಆರೋಗ್ಯ ವಿತ್ಯಾಸ ಬಂದು ಮನುಗಿದಲ್ಲೇಡ.
ಈಗಲ್ಲ – ಹತ್ತಿಪ್ಪತ್ತೈದು ಒರಿಶ ಮದಲಾಣ ಕತೆ! ಅಂಬಗ ಮದ್ದುದೇ ಅಷ್ಟೆ ಇದ್ದದಿದಾ..
ಇವ ದೊಡ್ಡ ಮಗ°, ಹ್ಮ್ – ಒಬ್ಬನೇ ಮಗ°!

ಇವನ ಹೆರಿಯೋರು ತುಂಬುಸಂಸಾರಲ್ಲಿ ಬೆಳದಿದ್ದರೂ ಪಿತ್ರಾರ್ಜಿತ ಪಾಲಾತು.
ಇವನ ಅಪ್ಪ° ಪಾಪ ಆದ ಕಾರಣ ಸಾಲ ಮಾಂತ್ರ ಇವರ ತಲಗೆ ಬಂದದೋ ತೋರುತ್ತು.
ಊರಿಲಿ ದೊಡ್ಡೋರು – ಹೇಳಿ ಆರಿದ್ದವು, ಅವರೆಲ್ಲರ ಕೈಲಿ ಸಾಲ ಇತ್ತು – ಅಜ್ಜ° ಮಾಡಿದ್ದು. ಕೆಲವು ಸಾಲಕ್ಕೆ ವಾರೀಸು ಈ ಮಾಣಿಯ ಅಪ್ಪ!
ಪಾಲಪ್ಪನ್ನಾರ ನೆಮ್ಮದಿಯ ಜೀವನ ಇದ್ದರೂ, ಪಾಲಾದ ಮತ್ತೆ ಹಾಂಗಿತ್ತಿಲ್ಲೆ.
ಸಾಲಕ್ಕೆ ದಕ್ಕಿತ ಮೂಲ ಸಿಕ್ಕದ್ದೆ, ಒಟ್ಟಾರೆ ಊರಿಡೀಕ ತಲೆ ಎತ್ತುಲೆಡಿಯದ್ದ ಪರಿಸ್ಥಿತಿ ಬಂದಿತ್ತು ಇವನ ಅಪ್ಪಂಗೆ.
ನಿನ್ನೆ ಒರೆಂಗೆ ಊರಿಲಿ ಕಂಡೋಂಡಿದ್ದ ಜೆನರ ಇಂದು ಮೋರೆಕೊಟ್ಟು ಮಾತಾಡುಸಲೂ ಎಡಿಯದ್ದ ಪರಿಸ್ಥಿತ ಬಂತು!

ಎಂತ ಮಾಡುದು, ತೀರುಸೆಕ್ಕನ್ನೆ – ಅದಕ್ಕೆ ಅಡಿಗ್ಗೆ ಹೋಪಲೆ ಸುರು ಮಾಡಿದವು.
ಅಡಿಗೆ ಕಿಟ್ಟಣ್ಣ ಹೇಳಿರೆ ಮತ್ತಾರೂ ಅಲ್ಲ, ಈ ಪುಟ್ಟನ ಅಪ್ಪನೇ!
ಇಷ್ಟೆಲ್ಲ ಅಪ್ಪಗ ಈ ಮಾಣಿ ಹುಟ್ಟಿದ್ದನೋ – ಇಲ್ಲೆಯೋ.
ಅಂತೂ ಒಂದು ಶುಬಗಳಿಗೆಲಿ ಹುಟ್ಟಿದ°..
~
ಕೆಲವು ಸಮೆಯ ಆತು.
ಈ ಪುಟ್ಟ° ಶಾಲಗೆ ಸೇರ್ತ ಸಮೆಯ ಆತು.
ಕಿಟ್ಟಣ್ಣ ಅಡಿಗೆಗೆ ಹೋದವು ಹೋದವು, ಒರಕ್ಕು ತೂಗಿ ಕೆಲಸ ಮಾಡ್ಳೆ ಕಷ್ಟಪ್ಪದಕ್ಕೆ ಬೀಡಿಯುದೇ ಬಲುಗಿದವು (ಎಳದವು) ಎಡಿಗಾದಷ್ಟು.
ಆರೋಗ್ಯ ತುಂಬಾ ಹಾಳಾತು. ತುಂಡು ಜವ್ವನಿಗನ ಹಾಂಗೆ ತೋಟಲ್ಲಿದ್ದಿದ್ದ ಕಿಟ್ಟಣ್ಣ ಕೆಲವೇ ಒರಿಶಲ್ಲಿ ಕಂಗಾಲಾಗಿಕ್ಕಿದವು.
ಮನೆಗೆ ಬಂದಮತ್ತೂ ಸ್ವಸ್ಥ ಮನಿಕ್ಕೊಳ್ತೆ ಹೇಳಿರಾಗ, ಮನೆಕೆಲಸ ಮಾಡೇಕು.
ಸಣ್ಣಸಣ್ಣದರ ಪುಟ್ಟ° ಮಾಡುಗು, ದೊಡ್ಡದರ ಆರು ಮಾಡೇಕು? ಅಮ್ಮ ಮನುಗಿದಲ್ಲೇ ಅಲ್ಲದೋ?
ಪಕ್ಕನೆ ಕಿಟ್ಟಣ್ಣನ ನೋಡಿಕ್ಕಲೇ ಎಡಿಯದ್ದಷ್ಟು ಬಚ್ಚಿದವು.
ಸೆಮ್ಮ ಜೋರಾಗಿ, ಉಸಿರಾಟದ ಎಂತದೋ ತೊಂದರೆಂದಾಗಿ ಆರೋಗ್ಯ ಹಿಂದೆ ಬಂದು ಬಂದು – ಒಂದು ದಿನ ತೀರಿಗೊಂಡವು.
ಅಪ್ಪ° ತೀರುವಗ ಪುಟ್ಟ ಶಾಲೆಲಿತ್ತಿದ್ದ°, ಯೇವದೋ ಸಣ್ಣ ಕ್ಳಾಸಿಲಿ – ಒಂದನೆಯೋ ಮತ್ತೊ°, ಬೌಶ್ಷ!
ಅಬ್ಬೆ ಮನುಗದಲ್ಲೇ ಇದಾ.!
~
ಅಪ್ಪ ಇಲ್ಲದ್ದೆ ಆದ್ದರ ಬೆಶಿ ಸಣ್ಣ ಮಾಣಿಗೆ ಅಂಬಗಳೇ ಗೊಂತಕ್ಕೋ?, ಚೆ – ಇಲ್ಲೆಪ್ಪ!!
ಅಲ್ಲಿಂದ ಮತ್ತೆ ಆ ಮಾಣಿ – ಕೆಮಿಗೆ ಗಾಳಿ ನುಗ್ಗಿದ ಕಂಜಿಯ ಹಾಂಗೆ – ರಜ ಆರಾಮಲ್ಲಿ ಬೆಳದ°.

ಬೈವಲೆ ಅಪ್ಪ° ಒಟ್ಟಿಂಗೆ ಇಲ್ಲೆ ಇದಾ!
ಎಲ್ಲಿ ಹೋದರೂ ಲೂಟಿ!  ಲೂಟಿ ಹೇಳಿರೆ ಲೂಟಿ ಅಲ್ಲ, ಒಟ್ಟು ಕುತೂಹಲ – ಹೊಸ ವಿಶಯಂಗಳ ಬಗ್ಗೆ.
ಸಾಮಾನ್ಯ ಹೆರ ಕಾಣ್ತ ಎಲ್ಲ ವಿಶಯವೂ ಹೊಸತ್ತೇ ಅವಂಗೆ. ಮನಲಿ ಅಂತೂ ಕಂಡೇ ಗೊಂತಿಲ್ಲೆ ಇದಾ..
ವಿಶಯ ತಿಳ್ಕೊಂಬ ಕುತೂಹಲ ಬಿಂಗಿಮಕ್ಕೊಗೆ ಹೆಚ್ಚೋ – ಹೇಳಿ ಅನುಸಿಹೋಪದು ಒಂದೊಂದರಿ.
ಹ್ಮ್, ಎಂತ ಕಂಡ್ರೂ ಕೈ ಹಾಕುಗು, ಎಲ್ಲೋರ ಕೈಲಿ ಬೈಗಳು ತಿಂಗು. ಬೇಡ ಹೇಳಿರೆ ಕೇಳ°, ಬೇಕೋ – ಕೇಳಿರೆ ತೆಕ್ಕೊಳ°. ಹೆದರಿಕೆ!
ಎದುರಾಣವಂಗೆ ಅದು ಲೂಟಿ – ಹೇಳಿ ಕಾಂಗು.
~
ಎಷ್ಟು ಬೇಕಾರೂ ಬೈವಲಕ್ಕವಂಗೆ.
ಆರೇ ಬಯ್ಯಲಿ, ’ಓ!, ಪುಟ್ಟ° ಮತ್ತೊಂದರಿ ಎಂತದೋ ಬಿಂಗಿ ಮಾಡಿದ್ದ°’ ಹೇಳಿ ಒಳುದವು ತಳೀಯದ್ದೆ ಕೂರುಗು.
ಮತ್ತೆ ಮತ್ತೆ ಕೆಲವು ಜೆನ ಮಾತಾಡುಸುದೇ ಏರುಸೊರಲ್ಲಿ ಆಗಿ ಹೋತು!
ಅಂತೇ, ಅದೊಂದು ಅವರ ಕೊಶಿ! ಪೌರುಶ ತೋರುಸಲೆ ಎಡಿಗಪ್ಪ ಜಾಗೆ!
~

ಇದೆಲ್ಲ ಅವನ ಅಮ್ಮಂಗೆ ಮನುಗಿದಲ್ಲಿಂಗೇ ಗೊಂತಾಗೆಂಡು ಇತ್ತಾತ!

ಪುಟ್ಟನ ಪುಟ್ಟ ಮನೆ, ಪಾಲಾದ ಸಮೆಯಲ್ಲಿ ಅಪ್ಪ° ಕಟ್ಟುಸಿದ್ದಡ; ಹೊಸಮನೆ ಕಟ್ಟುಸುಲೆ ಇನ್ನೂ ಕಾಲ ಬಯಿಂದಿಲ್ಲೆ!

ಆರೋ ಹೇಳಿಯೋ ಮಣ್ಣ ಗೊಂತಕ್ಕು. ಗೊಂತಾದರೆ ಎಂತ ಮಾಡುದು, ಹೊದಕ್ಕೆ ಎಡೆಲಿ ಬೇಜಾರುಮಾಡುದು ಬಿಟ್ಟು.
ಅವಕ್ಕೆ ಹೋಗಿ ಎರಡ್ಡು ಬೈವ° ಹೇಳಿರೆ ಹಂದುಲೆಡಿತ್ತಿಲ್ಲೆ. ಮತ್ತೆ, ನಾಳೆ ಅವರ ಮನಗೇ ಹೋಯೆಕ್ಕಷ್ಟೆ, ಮಗಂಗೆ ಏನಾರೊಂದು ದಾರಿಗೆ.
ಇದು ಆ ಬೈತ್ತವಕ್ಕೂ ಗೊಂತಿದ್ದೋ ಕಾಣ್ತು!

ದೊಡ್ಡವಕ್ಕೆ ಜೋರು ಪಿಸುರು ಬತ್ತಾ ಇದ್ದಿಪ್ಪಗ ಈ ಮಾಣಿ ಎದುರು ಸಿಕ್ಕಿರೆ ಅಂತೂ ಗೋವಿಂದ..
ಏಳುನೆ, ಎಂಟುನೆಗೆತ್ತುವಗ ಈ ವಿಶಯ ಅರ್ತ ಆತು. ಆದರೆ ಅವಕ್ಕೆ ಪಿಸುರು ಯೇವಗ ಬತ್ತು ಹೇಳಿ ಹೇಂಗೆ ಗೊಂತಪ್ಪದೂ..
ಅದಕ್ಕೇ, ಮತ್ತೆಮತ್ತೆ ಜೆಂಬ್ರಂಗಳಲ್ಲಿ ಎದುರು ಕಂಡೋಂಡಿದ್ದದೇ ಇಲ್ಲೆ!
ಉಂಬಲಪ್ಪಗ ಬಕ್ಕು, ಉಂಗು – ಹೋಕು.
ಒಂದು ವೇಳೆ ಬಂದದು ರಜ ಬೇಗ ಆದರೆ ಚೆಪ್ಪರಂದ ಹೆರ ನಿಂಗು. ಆಳುಗಳತ್ರೆ ಮಾತಾಡಿಗೊಂಡೋ – ಮಣ್ಣ.
ಬೈಗಳು ಸಿಕ್ಕಿರೆ – ಎಲೆತುಪ್ಪುಲೆ ಬಂದ ಮಾವಂದ್ರದ್ದು ಮಾಂತ್ರ ಇದಾ..
ಅಲ್ಲದ್ದರೆ ಅಡಿಗೆಕೊಟ್ಟಗೆಗೆ ಹೋಕು,ಎಲ್ಲ ಅಪ್ಪನ ಗುರ್ತದವೇ ಅಲ್ಲದೋ – ಇಪ್ಪದು..
~

ರಜ್ಜ ದೊಡ್ಡ ಅಪ್ಪಗ ಕಡವಲೆ ಹೋಪಲೆ ಸುರು ಮಾಡಿದ°, ಸಣ್ಣ ಸಣ್ಣ ಕೈಗೊ ದೊಡ್ಡ ಕಡವಕಲ್ಲಿನ ತಿರುಗುಸುದು ನೋಡಿರೆ ಎಂತವಂಗೂ ಉಂಬಲೆ ಮೆಚ್ಚ!
ಮೆಚ್ಚ ಹೇಳಿಗೊಂಡ್ರೆ ಇವನ ಹೊಟ್ಟೆತುಂಬೆಕ್ಕನ್ನೆ. ಮನೆಲಿಪ್ಪ ಒಂದು ಕಂಡಿಲಿ ಉಂಬದೋ – ಸಾಲ ತೀರುಸುದೋ?
ಹಾಂಗೆ, ಅಲ್ಲಿಂದ ಬಂದ ಪೈಸೆಲಿ ಅಮ್ಮಂಗೆ ಮದ್ದು, ಮನೆಗೆ ಸಾಮಾನು, ಶಾಲಗೆ ಪುಸ್ತಕ, ಅಂಗಿಚಡ್ಡಿ – ಎಲ್ಲವನ್ನೂ ಹೊಂದುಸಿಗೊಂಡ°,  ಅಮ್ಮ ಹೇಳಿಕೊಟ್ಟಾಂಗೆ.

ಬೈಗಳು, ಪೆಟ್ಟುಗೊ ಅವನ ಜೀವನದ ಸಾಮಾನ್ಯ ಅಂಶ ಆದರೂ – ’ಕೆಟ್ಟಗಳಿಗೆಗೊ’ ಹೇಳಿ ಅನುಸಿಗೊಂಡು ಇತ್ತಿದ್ದು.
ಸುಮಾರು ಕೆಟ್ಟಗಳಿಗೆಗಳ ಸಾಧ್ಯತೆಯ ತಪ್ಪುಸುಲೆ ಅವನೂ ಪ್ರಯತ್ನ ಮಾಡಿದ್ದ°, ಕೆಲವು ಸರ್ತಿ ಎಡಿಗಾಯಿದು, ಕೆಲವು ಸರ್ತಿ ಅನುಬವಿಸಲೇ ಬೇಕಾಯಿದು.
ಒಂದೆರಡು ವಿಶೇಷದ್ದು,
ಒಂದರಿ ಗುರುಗೊ ಬಂದಿತ್ತಿದ್ದವು ಊರಿಂಗೆ. ತೆಂಗಿನಕಾಯಿ ಹಿಡ್ಕೊಂಡು ಫಲಸಮರ್ಪಣೆಗೆ ನಿಲ್ಲೇಕಾತು!
ಈ ಮಾಣಿ ಸಣ್ಣ ಇದಾ, ಮನೆಂದ ಎರಡು ದೊಡ್ಡ – ಇಪ್ಪದರ್ಲಿ ಲಾಯಿಕದ ತೆಂಗಿನಕಾಯಿ ಹುಡ್ಕಿ, ಸೊಲುದು – ಅಂಬಗಳೇ ಸೊಲಿವಲರಡಿಗು – ಸೊಲುದು ತಂದಿತ್ತಿದ್ದ°.
ಸಾಲಿಲಿ ಏವದೋ ದೊಡ್ಡ ಮನಶ್ಶ° ಇತ್ತಿದ್ದ°, ’ಯೇ ಲೂಟಿಮಾಣಿ, ನೀನೆಂತಕೆ ಇಲ್ಲಿ ನಿಂದದು, ಲೂಟಿ! ಕೊಡು ಆ ಕಾಯಿಯ ಇತ್ತೆ!’ – ಹೇಳಿಗೊಂಡು ತೆಕ್ಕೊಂಡ°.
ಆ ಲೂಟಿಮಾಣಿ ಗುರುಗಳ ಎದುರುದೇ ನಿಂದು ಲೂಟಿಮಾಡುದು ಬೇಡ, ಊರಿನ ಮರಿಯಾದಿ ಕಳವದು ಬೇಡ – ಹೇಳಿಗೊಂಡು ಬುದ್ದಿವಂತಿಕೆ ತೋರುಸಿದ°,
ನೆಗೆನೆಗೆಮೋರೆಲಿ ನಾಲ್ಕು ಕಾಯಿ – ಎರಡು ಸಣ್ಣದು, ಅವ ತಂದದು; ಎರಡು ದೊಡ್ಡದು – ಮಾಣಿ ತಂದದು – ನಾಲ್ಕು ಕಾಯಿಯ ಮಡಗಿ ಹೊಡಾಡಿದ°.
ಈ ಮಾಣಿ ಗುರುಗೊಕ್ಕೆ ದೂರಂದಲೇ ಹೊಡಾಡಿದ° – ಗುರುಗಳೂ ಅಲ್ಲಿಂದಲೇ ಆಶೀರ್ವಾದ ಮಾಡಿದವು, ಖಂಡಿತವಾಗಿಯೂ..!

ಇನ್ನೊಂದು ಸರ್ತಿ ನೆರೆಕರೆಯ – ಮದುವೆಯೋ ಎಂತೋ – ಮದುವೆ ದೂರದ ಹೋಲಿಲಿ, ಪುಟ್ಟನ ಬಪ್ಪಲೆ ಹೇಳಿದವು, ಜೆಂಬ್ರಕ್ಕೆ ಅಲ್ಲ; ಮನೆಪ್ಪಾರಕ್ಕೆ!
ಕೂದೇ ಕೂದ°, ಬತ್ತಿಲ್ಲೆ ಹೇಳಿರಾವುತ್ತೋ – ಹಯಿಸ್ಕೂಲಿಲಿಯೋ ಮತ್ತೊ° ಇದ್ದಿಕ್ಕು – ಆ ಪ್ರಾಯಲ್ಲೇ ಒಳ್ಳೆತ ಕೆಲಸ ಮಾಡುಗು.
ಮನೆಪ್ಪಾರ ಹೇಳಿರೆ ಮನೆಯ ಸೊತ್ತುಗಳ ಜೆವಾಬ್ದಾರಿ ಮಾಂತ್ರ ಅಲ್ಲದ್ದೆ ಮನೆಲಿ ಆಯೇಕಾದ ಎಲ್ಲ ಕೆಲಸಂಗಳನ್ನೂ ಮಾಡೆಡದೋ!
ದನಗಳ ಚಾಕಿರಿ, ಅದು, ಇದು – ಎಲ್ಲ! ಎಲ್ಲವನ್ನುದೇ ಮಾಡಿದ್ದ, ಚೆಂದಲ್ಲಿ. ಕೆಲಸ ಮಾಡುದು ಹೇಳಿರೆ ಪುಟ್ಟಂಗೆ ಮದಲಿಂದಲೂ ಹಾಂಗೇ – ಕೊಶಿಯೇ.
ಅಂತೂ ಜೆಂಬ್ರ ಮುಗುಶಿ ಕೊಶೀಲಿ ಮನೆಯೋರು ಬಪ್ಪಗ ಎಲ್ಲ ಕೆಲಸ ಆಗಿತ್ತು, ಮನೆಯೋರಿಂಗೆ ಕೊಶೀ ಆಗಿತ್ತು.
ಎರಡು ದಿನ ಕಳುದು ಗೊಂತಾತು, ಆರದ್ದೋ – ಬಂದ ಒಂದು ನೆಂಟ್ರುಹೆಮ್ಮಕ್ಕಳದ್ದು ಅವಲಕ್ಕಿಸರ ಕಾಣೆ ಆಯಿದು – ಇವ° ಮನೆಪ್ಪಾರ ಮಾಡಿದ ಮನೆಲೇ ಕಾಣೆ ಆದ್ದದು – ಹೇಳಿ.

ಎಷ್ಟೇ ಕಷ್ಟ ಇದ್ದರೂ ಕದಿವಲಾಗ – ಹೇಳಿ ಅಮ್ಮ ಅಂದಿಂದಲೇ ಹೇಳುಗು. ಇವ ಕೇಳುಗುದೇ.
ಅಮ್ಮ ಹೇಳಿದ್ದರ ಇವ° ಕೇಳುಗು, ಆದರೆ ಇವ° ಹೇಳಿದ್ದರ ಆ ಮನೆಯೋರು ಕೇಳ್ತವಾ? ನಂಬಿದ್ದವೇ ಇಲ್ಲೆ!
ಈ ಮಾಣಿಯೇ ಅದರ ತೆಗದ್ದು ಹೇಳಿ ಮಾಡಿ ಹಾಕಿದವು. ಲೂಟಿ, ಬಿಂಗಿ ಎಲ್ಲ ಆದರೆ ತೊಂದರಿಲ್ಲೆ ಭಾವ! ಕಳ್ಳ ಹೇಳಿ ಆದರೆ ಮತ್ತೆ ಜೆನಂಗಳ ನಂಬಿಕೆ ಪ್ರಶ್ನೆ!!
ಈ ವಿಶಯಕ್ಕೆ ಎಡಿಗಾದಷ್ಟು ಪ್ರಚಾರ ಕೊಟ್ಟವು, ಕಳ್ಳುಲೆ ಸುರು ಮಾಡಿದ್ದ° – ಹೇಳಿಗೊಂಡು.
ಮುಂದೆಮುಂದೆ ಅವ ಎಲ್ಲಿಗಾರು ಬಂದರೆ ಇವನೆದುರೇ ಸೊತ್ತುಗಳ ಜಾಗ್ರತೆ ಮಾಡ್ಳೆ ಸುರು ಮಾಡಿದವು, ಇವಂಗೆ ಗೊಂತಪ್ಪ ಹಾಂಗೇ! ಪಾಪ!!
ಸುಮಾರು ಸಮೆಯ ಅಪ್ಪಗ ಒಂದು ಶುದ್ದಿ ಗೊಂತಾತು – ಆ ಸರ ಸಿಕ್ಕಿತ್ತಡ, ಆ ಹೆಮ್ಮಕ್ಕಳ ವೇನಿಟಿಬೇಗಿನ ಒಳದಿಕೆ ಎಲ್ಲಿಯೋ ಇತ್ತಡ – ಹೇಳಿ! ಅದಕ್ಕೆ ಎಂತದೂ ಪ್ರಚಾರ ಇಲ್ಲೆ ಇದಾ, ಅದು ಹಾಂಗಾಗಿ ಪಕ್ಕನೆ ಆರಿಂಗೂ ಗೊಂತಾಯಿದಿಲ್ಲೆ!
ಅವಂಗೆ ಅದು ಗೊಂತಾಗಿ ಮೊದಲಾಣ ಬೇಜಾರು ರಜಾ ಕಮ್ಮಿ ಆಗಿತ್ತು, ಆದರೆ ಅವನ ಅಮ್ಮ ಮೊದಲೂ ಬೇಜಾರಲ್ಲೇ ಇತ್ತಿದ್ದು, ಮತ್ತೆಯೂ ಬೇಜಾರಲ್ಲೇ ಇತ್ತಿದ್ದು.
ಇದೆಲ್ಲ ಅವ° ಶಾಲಗೆ ಹೋಪಗಾಣ ಶುದ್ದಿ.
~

ಅಂಬಗಾಣ ಆ ಘಟನೆಗೊ, ಬೈಗಳುಗೊ ಆ ಪುಟ್ಟು ಮನಸ್ಸಿಲಿ ನೆಂಪಿಲಿತ್ತೋ – ಮರಕ್ಕೊಂಡಿದ್ದಿದ್ದನೋ – ಒಪ್ಪಣ್ಣಂಗರಡಿಯ.
ಇದೆಲ್ಲ ಆ ಮಾಣಿಗೆ ಮರೆಯಲಿ, ಮುಂದಂಗೆ ಇದೇವದೂ ನೆಂಪೊಳಿವದು ಬೇಡ – ಹೇಳಿ ಆರಾರು ಉರುಕ್ಕು ಕಟ್ಟಿರಾವುತಿತೋ..
ನೆಂಪುಮಾಡ್ಳಾಗದ್ದ ಹಳೇ ಹಳೇ ನೆಂಪುಗೊ ಅವನ ತಲೆಲಿ ತುಂಬಿಕ್ಕು.
ಬಾಲ್ಯದ ಮಧುರ ನೆಂಪುಗೊ ಒಳೆಯೇಕಾದ ಜಾಗೆಲಿ ಹೀಂಗಿರ್ತ ಆಪಾದನೆ, ಬೇಜಾರು, ಬೈಗಳು – ಇಂತದೇ ತುಂಬಿ ಹೋಯಿದು!
ನೆಂಟ್ರು, ನೆರೆಕರೆ – ಆರುದೇ ಒಟ್ಟಿಂಗಿಲ್ಲದ್ರೂ ಬದುಕ್ಕಿದ° ಹೇಂಗಾರು.
ಬದುಕ್ಕಿ ತೋರುಸಿದ°. ಅಲ್ಲಲ್ಲ, ಅವನ ಅಮ್ಮ ಬದುಕ್ಕಿಸಿ ತೋರುಸಿತ್ತು.
~

ಏನೇ ಬಂಙ ಇದ್ದರೂ ಶಾಲೆ ಒಂದು ಬಗೆ ತಪ್ಪುಸಿದ್ದನಿಲ್ಲೆ ಕಲ್ತ°, ಕಲ್ತ°, ನಿರಂತರವಾಗಿ ಕಲ್ತಿಕ್ಕಿದ°.
ಹತ್ತನೇ ಕ್ಲಾಸಿಂಗೆ ಬಪ್ಪಗ ’ಆನುದೇ ಕಲಿಯೇಕು’ ಹೇಳಿ ಅನುಸಿ ಹೋತೋ – ಕಾಣ್ತು.
ಉತ್ಸಾಹಕ್ಕೆ ಸರಿಯಾಗಿ ಕೆಲವು ಜೆನ ಸಕಾಯ ಮಾಡಿದವುದೇ.

ಆರತ್ರೋ ಮಾತಾಡಿ, ಎಂತೆಂತದೋ ಮಾಡಿ ರಾಮಜ್ಜನ ಕೋಲೇಜಿಲಿ ಸೀಟು ಮಾಡಿ ಕಲ್ತಿಕ್ಕಿದ°.
ಅಲ್ಲಿ ಕೆಲವೆಲ್ಲ ಪ್ರೈಸು ಸಿಕ್ಕಿದ್ದರನ್ನುದೇ ಸೇರುಸಿಗೊಂಡು, ಎಡೆಡೆಲಿ ಅಡಿಗ್ಗುದೇ ಹೋಯ್ಕೊಂಡು, ಪುರುಸೊತ್ತಾದರೆ ಎಡೆಲಿ ಓದಿಗೊಂಡು, ಮನೆ, ಸಣ್ಣತೋಟ, ಅಮ್ಮನ ಚಾಕಿರಿ – ಎಲ್ಲವನ್ನುದೇ ನೋಡಿಗೊಂಡು – ಅಬ್ಬ, ಸಮೆಯ ಹೇಂಗೆ ಹೊಂದುಸಿಗೊಂಡ° ಹೇಳಿ ಆಶ್ಚರ್ಯ ಅಪ್ಪದು ಒಪ್ಪಣ್ಣಂಗೆ.
ನವಗೆ ಈ ಹಳ್ಳಿಮನೆ ಕೆಲಸಂಗಳ ಎಡಕ್ಕಿಲಿ ವಾರಕ್ಕೊಂದು ಶುದ್ದಿ ಹೇಳುಲೇ ಪುರುಸೊತ್ತಾವುತ್ತಿಲ್ಲೆ. ಅವ ಇಷ್ಟೆಲ್ಲದರ ಹೇಂಗೆ ಮಾಡಿಗೊಂಡಿತ್ತಿದ್ದ ಅಪ್ಪಾ..!

ಅದಿರಳಿ, ರಾಮಜ್ಜನ ಕೋಲೇಜಿಲಿ ಒಂದಲ್ಲ, ಎರಡಲ್ಲ – ಐದೊರಿಶ ಕಲ್ತ°.
ಪ್ಲಸ್ಟುವಿಂದ – ಪೀಯೂಸಿ ಹೇಳ್ತದು ಅವು- ಸುರುಆಗಿ, ಡಿಗ್ರಿ ಅಕೇರಿಯಾಣ ಒರಿಶ ಒರೆಗುದೇ.
ಊರಿನ ಬೈತ್ತ ಮಾವಂದ್ರು ಹತ್ತನೆಲಿಪ್ಪಗ ಬೈದ್ದದು ಅಕೇರಿ, ಮತ್ತೆ ಕಾಂಬಲೇ ಸಿಕ್ಕಿದ್ದನಿಲ್ಲೆ.

ಹೀಂಗೊಬ್ಬ ಜೆನ ಇದ್ದ° – ಹೇಳುದೇ ಮರದಿತ್ತೋ ಏನೋ!
ಅಪುರೂಪಕ್ಕೆ ಒಂದೊಂದರಿ ಊರಿಂಗೆ ಬಂದರೂ – ಒಂದೋ ಎಲ್ಯಾರು ಜೆಂಬ್ರಲ್ಲಿಕ್ಕು, ಅಲ್ಲದ್ದರೆ ಮನೆಲೇ ಸ್ವಸ್ಥ ಕೂದೊಂಡು ಓದಿಗೊಂಡಿಕ್ಕು.
ಹೆರ ಹೋಗಿ ಅಂತೇ ಆರಾರ ಬಾಯಿಗೆ ಸಿಕ್ಕುತ್ತ ಪಂಚಾತಿಗೆ ಇಲ್ಲೆ ಇದಾ! :-)
~

ಊರವಕ್ಕೆ ಮರದರೂ ಆ ಮಾಣಿಗೆ ಮರದ್ದಿಲ್ಲೆ ಕಾಣ್ತು.
ಹಟಗಟ್ಟಿ ಓದಿದ°. ಬೇರೆ ನೆಂಪುಗಳ ಮರವಲೆ ಗಮನಮಡೂಗಿ ಓದುದೊಂದೇ ಪಿರಿ, ಅಲ್ಲದೋ?
ಓದಿಯೇ ಓದಿದ°. ಕೋಲೇಜಿಲಿಯುದೇ ಹಾಂಗೆ, ಬೇರೆ ಬಿಂಗಿಮಕ್ಕಳ ಹಾಂಗೆ ಹಾರಿದ್ದನಿಲ್ಲೆ.
ಒಂದೋ ಓದುಗು, ಅಲ್ಲದ್ರೆ ಅಲ್ಲಿಪ್ಪ ಪೆಲ್ತಡ್ಕ ಮಾಷ್ಟ್ರತ್ರೋ – ಎಕ್ಕಡ್ಕ ಮಾಷ್ಟ್ರತ್ರೋ – ಮಣ್ಣ ಎಂತಾರು ಪಾಟದಬಗ್ಗೆ ಮಾತಾಡಿಗೊಂಡು, ಅವರ ಪುಸ್ತಕಲ್ಲಿ ಹೇಂಗಿದ್ದು – ಹೇಳಿ ಚರ್ಚೆ ಮಾಡಿಗೊಂಡು ಸಮೆಯವಿನಿಯೋಗ ಮಾಡುಗು.
ಹೀಂಗೆ ಓದಿದ್ದಕ್ಕೆ ದಕ್ಕಿತ ಪಲಿತಾಂಶವೂ ಬಂತು, ಒಳ್ಳೊಳ್ಳೆ ಮಾರ್ಕು ಬಂತಡ..!
~

ಅವನ ಮಾರ್ಕಿನ ಬಗ್ಗೆ ಅವ° ಆಗಿ ಎಂತದೂ ಹೇಳಿದ್ದನಿಲ್ಲೆ, ಒಪ್ಪಣ್ಣ ತಿಳುದ° – ಗೊಂತಾತು!
ಹೇಂಗೆ ತಿಳುದ್ದು ಹೇಳಿ ಕೇಳಿಕ್ಕೆಡಿ, ನಮ್ಮ ಪಂಜೆ ಕುಂಞಜ್ಜಿಯೂ ಅದೇ ಒರಿಶದ ಕ್ಲಾಸು, ಆದರೆ ಕಲಿತ್ತದು ಬೇರೆಬೇರೆಡ.
ಇತ್ತೀಚೆಗೆ ಕೆಲವು ಪರೀಕ್ಷೆಲಿ ಅಂತೂ ತುಂಬಾ ಒಳ್ಳೆ ಮಾರ್ಕು ಬತ್ತಾ ಇದ್ದಡ.
ರೇಂಕೋ ಮಿನಿ ಬಂದುಬಿಡ್ತೋ ಹೇಳಿ ಸಂಶಯ ಇದ್ದಡ ಮಾಷ್ಟ್ರಂಗೊಕ್ಕೆ.
~ ~ ~

ಈಗ ಬಂದದು, ದೊಡಾ ಸಂಶಯ.
ಮುಂದೆಂತರ?

ಮನೆಲೇ ಇಪ್ಪದೋ – ಹೆರ ಹೋಪದೋ? ಹ್ಮ್?
ತೋಟ, ಮನೆ, ಊರು – ಹೇಳಿಗೊಂಡು ಮನೆಲೇ ಕೂದೊಂಡು ಬದುಕ್ಕುದೋ?
ಹಾಂಗೆ ಬದುಕ್ಕಿರೆ ಇನ್ನು ಐವತ್ತೊರಿಶ ಆದರೂ ಈಗಾಣ ಬದುಕ್ಕಾಣಲ್ಲಿ ಉದ್ದಾರಪ್ಪಲೆಡಿಯ.
ಹಾಂಗಿದ್ದು ಪೈಸೆಯ ಅಗತ್ಯತೆ. ಒಂದೋ ಅಪ್ಪನಾಂಗೆ ಅಡಿಗ್ಗೆ ಹೋಯೆಕು, ಅಡಿಗ್ಗೆ ಹೋವುತ್ತರೆ ಇಷ್ಟೊಳ್ಳೆ ಮಾರ್ಕು ತೆಗದ್ದು ಸುಮ್ಮನೆ!

ಅಂಬಗ ಎಲ್ಯಾರು ಮಾಷ್ಟ್ರತ್ತಿಗೆಗೆ ಹೋಪದೋ?
ಹೋದರೆ ಮನೆಲೇ ಇಪ್ಪಲಕ್ಕು, ಆದರೆ ಹತ್ತರೆ ಇವಂಗೆ ಅಪ್ಪಾಂಗಿಪ್ಪ ಶಾಲೆಗೊ ಯೇವದೂ ಇಲ್ಲೆ! ಇದ್ದದರ್ಲಿ ಜೆನ ಇದ್ದವು.
ಹಾಂಗೆ ಶಾಲೆ ಬೇಕಾರೆ ಕೊಡೆಯಾಲಕ್ಕೆ ಹೋಯೆಕ್ಕು. ಮನೆಂದ ನಿತ್ಯ ಅಲ್ಲಿಗೆ ಹೋಗಿಬಂದು ಪೂರೈಶ!

ಅಂಬಗ ಅಮ್ಮನ ಕಷ್ಟ ನೋಡಿ ಮದುವೆ ಅಪ್ಪದೋ?
ಅದಂತೂ ಎಡಿಯಲೇ ಎಡಿಯ, ಕೈಲಿ ಮುಕ್ಕಾಲಿಲ್ಲೆ ಭಾವ! ಮದುವೆ ಅಪ್ಪದೆಲ್ಲಿಂದ.
ಈ ನಮುನೆ ಮಾಣಿಯ ನೋಡಿರೆ ನಮ್ಮೋರಲ್ಲಿ ಆರುದೇ ಕೂಸುಕೊಡುದು ಸಂಶಯ – ಹೇಳಿ ಅವನೇ ಹೇಳಿಗೊಳ್ತ°.
ಮದುವೆ ಆದರೆ ಸಾಕೋ, ಸಾಂಕೆಡದೋ! 😉 ಮನೆಲಿ ಕಷ್ಟ ಇಪ್ಪದಪ್ಪು, ಆದರೆ ಈಗಳೇ ಮದುವೆ ಆದರಾಗ!

ಅಂಬಗ, ಪರಿಕರ್ಮವೋ – ಬಟ್ಟತ್ತಿಗೆಗೋ ಮಣ್ಣ ಹೋಪದೋ?
ಅದಾಗ, ಅಷ್ಟು ನಾಜೂಕುದೇ ಇಲ್ಲೆ, ಅಷ್ಟು ಆಸಕ್ತಿಯುದೇ ಇಲ್ಲೆ.
ಹಾಂಗಾಗಿ ಆ ಒಯಿವಾಟಿಲಿ ಮೇಲೆಬಕ್ಕೂಳಿ ಧೈರ್ಯ ಇಲ್ಲೆ!
~
..ಮೊನ್ನೆ ಬದಿಯೆಡ್ಕ ಬಷ್ಟೇಂಡಿಲಿ ಸಿಕ್ಕಿಪ್ಪಗ ಕೇಳಿದೆ, ಇನ್ನೆಂತರ ಮಾಡುದು – ಹೇಳಿ.
ಅಷ್ಟಪ್ಪಗ ಈ ಶುದ್ದಿಗೊ ಎಲ್ಲ ಬಂತು..
~

ಅಂಬಗ ನಿನ್ನ ಆಸಕ್ತಿ ಇಪ್ಪದು ಯೇವದು – ಕೇಳಿತ್ತು ನಾವು. ಒಪ್ಪಣ್ಣನತ್ರೆ ಎಲ್ಲ ಹೇಳುಗಿದಾ – ಇದನ್ನೂ ಹೇಳಿದ°.
ಈಗ ಕಲ್ತಿದಲ್ಲದೋ – ಅದರ ಮುಂದುವರಿಕೆ ಭಾಗ ಇದ್ದಡ, ಸೀಯೇ ಹೇಳಿ ಹೆಸರಡ, ಬೆಂಗುಳೂರಿಲಿ ಆರದ್ದೋ ಕೆಳ ಕಲಿವಲಾವುತ್ತಡ, ಸೀಯೆ ಮಾಡಿರೆ ಒಳ್ಳೆ ಮುಂದಕ್ಕೆ ಬೆಳವಣಿಗೆ ಅವಕಾಶ ಇದ್ದಡ, ಹಾಂಗೆಲ್ಲ ಹೇಳಿದ°.

ಅದಕ್ಕೆ ಮನಸ್ಸೂ, ಪೈಶವೂ ಬೇಕಡ – ಮನಸ್ಸಿದ್ದು, ಆದರೆ ಎರಡ್ಣೇದು ಎಲ್ಲಿಂದ ಹೊಂದುಸುದು..
ಅವನ ಲೆಗುಚ್ಚರ ಒಬ್ಬ° ಹೇಳಿದ್ದನಡ, ನೀನು ಸೀಯೆ ಮಾಡ್ತರೆ ಮಾಡು, ಕರ್ಚಿನ ಬಗೆ ಆನು ನೋಡ್ತೀ – ಹೇಳಿ.
ಈಗಳೂ ಅಷ್ಟುಪುಣ್ಯವಂತರು ಇದ್ದವೋ ಅಂಬಗ! ನವಗರಡಿಯ.

ಅವಂಗೆ ಆಸಕ್ತಿ ಇದ್ದರೂ ಮನೆ ವಿಚಾರವನ್ನುದೇ ನೋಡೆಕ್ಕಲ್ಲದೋ – ಹಾಂಗೆ ಎಂತ ಮಾಡ್ತದು ಹೇಳಿ ದೊಡಾ ಕನುಪ್ಯೂಸು..
ಅವಂಗೆ ಹೇಳುವೋರು – ಹೇಳಿ ಜೆನ ಇಪ್ಪದು ಕಮ್ಮಿ ಇದಾ..
ಒಂದೊ ಮನೆಪರಿಸ್ತಿತಿ ಅರಡಿಯದ್ದ ಶಾಲೆಯ ಮಾಷ್ಟ್ರಕ್ಕೊ, ಅಲ್ಲದ್ರೆ ನಮ್ಮಾಂಗಿರ್ತ ಏನೂ ಅರಡಿಯದ್ದ ಚೆಂಙಾಯಿಗೊ..
~
ಊರಿಲೇ ನಿಂದರೆ ಎಂತ ಇದ್ದು?
ಎಂತಾರು ಮಾಡಿ ನಾಕು ಮುಕ್ಕಾಲು ಕೈಲಿ ಆಗೆಡದೋ? ಅಶನ ಎಲ್ಲಿ ಬಗದ್ದದೋ ಅಲ್ಲೇ ಸಿಕ್ಕುಗಷ್ಟೆ. ಒಂದುವೇಳೆ ಊರಿನ ಒಂದು ಕಂಡಿ ತೋಟವೂ, ಅನಾರೋಗ್ಯ ಅಮ್ಮನೂ ಇಪ್ಪ ಭಾವನೆಗ ಮನೆಲೇ ನಿಂದರೂ, ಮುಂದಕ್ಕೆ ಹೆರಡೆಕ್ಕಾಗಿ ಬತ್ತೇ ಬತ್ತು – ಸಾಲ ಕೊಡ್ಳೆ ಜಾಗೆ ಮಾರೆಕ್ಕಕ್ಕಿದಾ!
ಮಾರ್ತರೆ ತೆಕ್ಕೊಂಬಲೆ ಮಾಪುಳೆಗೊ ಇದ್ದವು, ಬೇಕಾಷ್ಟು.
ಅದಿರಳಿ,
ಬೆಂಗುಳೂರಲಿ ಕೆಲಸಮಾಡಿಗೊಂಡು ಕಲಿವಲಾವುತ್ತಡ, ಹಾಂಗೆ ಮಾಡಿರೆ ಕಲ್ತ ಹಾಂಗೂ ಆವುತ್ತು, ಕೆಲಸ – ಸಂಪಾದನೆ ಆದಹಾಂಗೂ ಆವುತ್ತು. ಹಾಂಗೆ ಮಾಡಿರೆ ಬೆಂಗುಳೂರಿನ ರಜರಜ ಕರ್ಚಿಂಗೂ, ಅಮ್ಮನ ಮದ್ದಿಂಗೂ ಸಾಕಕ್ಕು. ಎರಡು ವಾರಕ್ಕೊಂದರಿ ರೈಲಿಲಿ ಊರಿಂಗೆ ಹೋಗಿಬಪ್ಪದು – ಹಾಂಗೆ ಹೀಂಗೆ – ಎಲ್ಲ ಹೇಳಿದ°.
ಹೇಳುದು ಕೇಳಿರೆ ಊರು ಹೆರಡುದು ನಿಘಂಟಾದ ಹಾಂಗಿತ್ತು.
~
ಆಗಲಿ, ಅಬ್ಬಗೆ ನೆಮ್ಮದಿ ಹೇಳಿಕ್ಕಿ, ಅಂತೂ ಊರಿನ ಕೆಟ್ಟ ನೆಂಪುಗಳ ಹೊತ್ತೊಂಡು, ಸದ್ಯಲ್ಲೇ ಬೆಂಗುಳೂರಿಂಗೆ ಹೆರಡ್ತ°.

ಹಾಂಗೆ, ಊರವರ ಕೈಲಿ ಪೂರ್ತ ಬೈಗಳು ತಿಂದ ಮಾಣಿ ಈಗ ದೊಡ್ಡದರ ಕಲಿವಲೆ ಬೆಂಗುಳೂರಿಂಗೆ ಹೋವುತ್ತ°.
ಸಾಲವ ಎಲ್ಲ ತೀರುಸುವ, ಅಬ್ಬೆಗೆ ಒಳ್ಳೆ ಮದ್ದು ಮಾಡುವ, ನೆಮ್ಮದಿಲಿ ಬದುಕ್ಕುವ ಭವಿಷ್ಯದ ನಿರೀಕ್ಷೆಲಿ…
ಪುಟ್ಟಂಗೆ ಬೆಂಗುಳೂರು ಹೊಸಪರಿಸರ ಒಳ್ಳೆದಾಗಲಿ. ಉಶಾರಿಮಾಣಿ ಆಗಿ ಬೆಳೆಯಲಿ –  ಅಲ್ಲಿ ಬಿಂಗಿಮಾಣಿ ಹೇಳಿ ಬೈವೋರು ಆರೂ ಇಲ್ಲೆನ್ನೆ!
~
ನಮ್ಮದೇ ಊರಿನ ಒಬ್ಬ ಪುಟ್ಟ° ಬೆಂಗುಳೂರಿಂಗೆ ಹೆರಡ್ತ ಸನ್ನಿವೇಶ ಇದು.
ಅದರ ಹಿಂದಾಣ ಕತೆ ರಜಾ ಹೇಳಿದೆ ಅಷ್ಟೆ.
ಪರೋಕ್ಷವಾಗಿ ನೋಡಿರೆ, ಬೆಂಗುಳೂರಿಂಗೆ ಹೋಗೆಡ ಮಾಣಿ – ಹೇಳಿರೂ ಕೇಳ, ಹಳೇ ಘಟನೆಗಳಿಂದಾಗಿ ಅಷ್ಟು ನಿಗಂಟಾಗಿತ್ತು ಅವನ ಮನಸ್ಸು.
ಹೀಂಗಿದ್ದ ಪುಟ್ಟಂದ್ರು ನಮ್ಮ ಸುತ್ತ ಎಷ್ಟೋ ಜನ ಇಕ್ಕು. ಅಲ್ಲದೋ? ಏ°?

ಪುಟ್ಟು ಮಾಣಿಯಂಗೊ ಲೂಟಿ ಮಾಡಿರೆ ಕಾರಣ ತಿಳಿಯದ್ದೆ ಬೈದಿಕ್ಕೆಡಿ. ಅವರ ಹಿಂದೆ ಹೀಂಗಿಪ್ಪ ಬೇನೆಯ ಕತೆಗೊ ಇಪ್ಪಲೂ ಸಾಕು. ಅಲ್ದಾ ಭಾವ?

ಒಂದೊಪ್ಪ: ನಮ್ಮೋರು ನಮ್ಮ ಪರಿಸರಂದ ದೂರಹೋಪಲೆ ಕಾರಣ ನಮ್ಮ ಪರಿಸರವೇ! ಅಲ್ಲದೋ?

ಬಿಂಗಿ ಪುಟ್ಟಂಗೆ ಶಾಲೆ ಮುಗುತ್ತು, ಮುಂದೆಂತರ ?, 4.7 out of 10 based on 13 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 38 ಒಪ್ಪಂಗೊ

 1. ಡಾಮಹೇಶಣ್ಣ
  ಮಹೇಶ, ಕೂಳಕ್ಕೋಡ್ಲು

  ಜೀವನದ ದ್ವಂದ್ವಂಗಳ ಮನಮುಟ್ಟುವ ಹಾಂಗೆ ನಿರೂಪಿಸಿದ್ದೆ ಒಪ್ಪಣ್ಣ !!

  “ಒಂದೊ ಮನೆಪರಿಸ್ತಿತಿ ಅರಡಿಯದ್ದ ಶಾಲೆಯ ಮಾಷ್ಟ್ರಕ್ಕೊ, ಅಲ್ಲದ್ರೆ ನಮ್ಮಾಂಗಿರ್ತ ಏನೂ ಅರಡಿಯದ್ದ ಚೆಂಙಾಯಿಗೊ..”

  ನಿಜವಾಗಿಯೂ ಪರಿಸ್ಥಿತಿಯ ಸರಿಯಾಗಿ ಅರ್ಥ ಮಾಡ್ಯೊಂಡು ಸಲಹೆ ನೀಡುವವು ವಿರಳ!!
  ಹಾಂಗಿಪ್ಪವು ಸಿಕ್ಕುವದು ಸೌಭಾಗ್ಯವೇ ಸರಿ.

  “ನಮ್ಮೋರು ನಮ್ಮ ಪರಿಸರಂದ ದೂರಹೋಪಲೆ ಕಾರಣ ನಮ್ಮ ಪರಿಸರವೇ! ಅಲ್ಲದೋ?”

  ಅಪ್ಪು, ಆದರೆ ಕೆಲವು ಸರ್ತಿ ಧನಾತ್ಮಕವಾಗಿ :)
  ಮತ್ತೆ ಕೆಲವು ಸರ್ತಿ ಋಣಾತ್ಮಕವಾಗಿ :(

  ಒಪ್ಪಣ್ಣ

  ಒಪ್ಪಣ್ಣ Reply:

  ಭಾರೀ ಲಾಯಿಕಲ್ಲಿ ಬರದ್ದೆ ಕೂಳಕ್ಕೂಡ್ಳಣ್ಣ!
  {ಮತ್ತೆ ಕೆಲವು ಸರ್ತಿ ಋಣಾತ್ಮಕವಾಗಿ }
  ಹೀಂಗಾಗದ್ದ ಹಾಂಗೆ ಆಯೆಕ್ಕು ಹೇಳಿ ಬೈಲಿನೋರ ಆಶಯ,
  ಅಲ್ಲದೋ? ಏ°?

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಒಪ್ಪಣ್ಣ ಬರದ ಶುದ್ದಿ ಯೇವತ್ತಿಂದ ಭಿನ್ನ ಆಗಿ ಲಾಯಕ ಆಯಿದು.. ಆರೋ ಮಾಡಿದ್ದು ಆರೋ ಅನುಭವಿಸುದು ಹೇಳಿ ಇಲ್ಲೆಯಾ? ಹಾಂಗೆ ಅಜ್ಜನ ಸಾಲ ಅಪ್ಪನ ತಲೆಗೆ ಮುಂದೆ ಇವಂಗೆ… ಅದರ ಎಡೆಲಿ ಊರ ದೊಡ್ಡ ಮನುಷ್ಯರಿಂದ ಅನಾವಶ್ಯಕ ಇಲ್ಲದ್ದ ಆರೋಪಂಗಳ ಎದುರಿಸಿಗೊಂಡು ಹಿಂಸೆ ಅನುಭವಿಸಿದರೂ, ಅಬ್ಬೆಯ ಮಾತಿಂಗೆ ಬೆಲೆ ಕೊಟ್ಟು ಹಾಂಗೆ ನೆಡದು ಈಗ ಒಂದು ಹಂತಕ್ಕೆ ಎತ್ತಿದಾನ್ನೇ!!! ಒಳ್ಳೇದಾತು… ಸಣ್ಣಾದಿಪ್ಪಗಾಂದ ಅವ° ಕಷ್ಟ, ಇನ್ನೊಬ್ಬನ ತಾತ್ಸಾರ ಅನುಭವಿಸಿದ ಕಾರಣ ಅವನಲ್ಲಿ ಮುಂದೆ ಬರೆಕ್ಕು ಹೇಳ್ತ ಹಠ ಬೆಳದತ್ತು ಅಲ್ಲದಾ? ಎಷ್ಟೇ ಕಷ್ಟ ಆದರೂ ಕೆಟ್ಟ ದಾರಿ ನೋಡದ್ದೆ ಮೈ ಮುರುದು ದುಡುದು ಮೇಲೆ ಬಪ್ಪಗ ಅವನ ಅಬ್ಬೆ ಪಟ್ಟ ಕಷ್ಟಂಗಳ ಮರದಿಕ್ಕು… ಮಾಷ್ಟ್ರು ಮಾವನ ಹಾಂಗಿಪ್ಪವು ಇದ್ದರೆ ಮಕ್ಕೊಗೆ ಹೀಂಗಾಗ ಇದಾ.. ಅವಕ್ಕೆ ಮಕ್ಕಳ ಮನಸ್ಸು ಗೊಂತಿದ್ದು.., ಬೇರೆ ಬೇರೆ ಮಕ್ಕಳ ಒಡನಾಟಲ್ಲಿ ಇದ್ದು ಎಲ್ಲಾ ನಮೂನೆ ಮಕ್ಕಳ ಮನಸ್ಸು ಗೊಂತಿರ್ತು.. ನವಗೆ ಮಕ್ಕ ಬಿಂಗಿ ಮಾಡುದು ಕಂಡಪ್ಪಗ ಕೋಪ ಬತ್ತು.. ಈ ಮಕ್ಕಳ ಅಪ್ಪ, ಅಮ್ಮ ಎಂತ ಹೇಳಿ ಕೊಟ್ಟಿದವಿಲ್ಲೆಯಾ ಹೇಳಿ ಅನುಸುತ್ತು.. ಆ ಮಕ್ಕಳ ಮನಸ್ಸಿಲಿ ಎಂತ ಇರ್ತು ಹೇಳಿ ನವಗೆ ಹೇಳುಲೆ ಎಡಿಯ ಅಲ್ಲದಾ?ನಮ್ಮ ಬಿಂಗಿ ಮಾಣಿಯ ಆರುದೆ ಪ್ರೀತಿ ಮಾಡುವೋರು ಇತ್ತಿದ್ದವಿಲ್ಲೆನ್ನೇ… ಅವಂಗೆ ಪ್ರೀತಿಯ ಸ್ಪರ್ಶ ಗೊಂತೆ ಇದ್ದಿರ… ಬಡಿವದೆ ಪ್ರೀತಿ ಹೇಳಿ ಅನಿಸಿ, ಅವ° ಅದಕ್ಕೆ ಒಗ್ಗಿ ಹೊಯಿದಾ° ಇಲ್ಲೆ ಪುಣ್ಯಕ್ಕೆ!!

  ಬಿಂಗಿ ಮಾಣಿ ಬೆಂಗ್ಲೂರಿಂಗೆ ಹೋಗಿ ಚೆಂದಲ್ಲಿ ಕಲಿವದರ ಒಟ್ಟಿನ್ಗೆ ದುಡುದು, ಪೈಸೆ ಸಂಪಾದನೆ ಮಾಡಿ, ಅವನ ಸಾಲ ಕಳುದು, ಅಮ್ಮಂಗೆ ಮದ್ದು ಮಾಡಿ ತಕ್ಕ ಮಟ್ಟಿ ನ್ಗೆ ಗುಣ ಮಾಡಿ ಅಪ್ಪಗ ಬಹುಷಃ ಅವಂಗೆ ಸಣ್ಣ ಇಪ್ಪಗ ಬಡುದ ಮಾವಂದ್ರಲ್ಲಿ ಆರಾರು ಒಬ್ಬ° ಆದರೂ ಮಗಳ ಜಾತಕ ಪಟ ಹಿಡ್ಕೊಂಡು ಬಕ್ಕೋ ಸಂಶಯ..!!!!!
  ಒಪ್ಪಣ್ಣ .., ಒಂದೊಪ್ಪ ಲಾಯಕ ಆಯಿದು…

  VA:F [1.9.22_1171]
  Rating: 0 (from 0 votes)
 3. ವೇಣೂರಣ್ಣ
  subrahmanya bhat

  ಒಳ್ಳೆದಾಯಿದು ಬರದ್ದು. ಭಾವನಾತ್ಮಕ ಸತ್ಯ .

  VA:F [1.9.22_1171]
  Rating: 0 (from 0 votes)
 4. ಹಳೆಮನೆ ಅಣ್ಣ

  ಪಾಪದ ಮಕ್ಕೊ ಹೇಳಿರೆ ಎದುರುತ್ತರ ಕೊಡದ್ದವು, ಬೋಸಂಗೊ ಹೇಳ್ತ ಅರ್ಥ ನಮ್ಮ ಭಾಷೆಲಿ ಇದ್ದು. ಆದರೆ ಈ ಪಾಪದ ಮಾಣಿ (ಕೆಲಾವು ಜೆನಕ್ಕೆ ಬಿಂಗಿ ಮಾಣಿ) ಕಲಿವದರಲ್ಲೂ ತಾನು ಉಶಾರಿ ಹೇಳಿ ತೋರುಸಿ ಕೊಟ್ಟಿದ°. ಅವಂಗೆ ನಮ್ಮ ಬೈಲಿನ ಲೆಕ್ಕಲ್ಲಿ ಒಂದು ಅಭಿನಂದನೆ. ಮುಂದೆಯೂ ಲಾಯ್ಕ ಕಲಿಯಲಿ.

  VA:F [1.9.22_1171]
  Rating: 0 (from 0 votes)
 5. ಅಜ್ಜಕಾನ ಭಾವ

  ಬಿಂಗಿ ಇಲ್ಲದ್ದವು ಆರಿದ್ದವೂ ಬಾವ.. ಎಲ್ಲ ಪರಿಸರದ ಜನರ ಬಾಯಿಲಿ ಇಪ್ಪದು ಒಳ್ಲೆದು ಹೇಳಿರೆ ಕೆಲವಕ್ಕೆ ಗೆಂಟು ಆವುತ್ತು. ಇದಕ್ಕೆ ಏನೂ ಮಾಡುಲೆಡಿಯಾ. ಎಂತಾರೂ ಆಗಲಿ ಮಾಣಿಗೆ ಒಳ್ಳೆದಾಗಲಿ.

  VN:F [1.9.22_1171]
  Rating: 0 (from 0 votes)

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiಅನಿತಾ ನರೇಶ್, ಮಂಚಿಸಂಪಾದಕ°ವಿನಯ ಶಂಕರ, ಚೆಕ್ಕೆಮನೆಒಪ್ಪಕ್ಕದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುಶ್ರೀಅಕ್ಕ°ಕೇಜಿಮಾವ°ಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕಸುಭಗವೆಂಕಟ್ ಕೋಟೂರುಶುದ್ದಿಕ್ಕಾರ°ಕೊಳಚ್ಚಿಪ್ಪು ಬಾವಅಜ್ಜಕಾನ ಭಾವಬೊಳುಂಬು ಮಾವ°ಪುಟ್ಟಬಾವ°ಅಡ್ಕತ್ತಿಮಾರುಮಾವ°ಗಣೇಶ ಮಾವ°ಪುಣಚ ಡಾಕ್ಟ್ರುಜಯಶ್ರೀ ನೀರಮೂಲೆವೇಣೂರಣ್ಣಅಕ್ಷರ°ತೆಕ್ಕುಂಜ ಕುಮಾರ ಮಾವ°ಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ