ರಾಮನಂಥಾ ಗುರುಗೊಕ್ಕೆ ಹನುಮನಂಥಾ ಶಿಷ್ಯರಪ್ಪೊ°..

July 26, 2013 ರ 12:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾಷ್ಟ್ರುಮಾವನಲ್ಲಿಗೆ ಹೋವುತ್ತ ಮಾರ್ಗ – ಅಮ್ಮುಪೂಜಾರಿ ಚಡವಿನ ಹತ್ತರೆ ಮಳೆಗೆ ಬೆಟ್ಟೊರತ್ತೆ ಬಂದು ಜಾರ್ತು. ಪುರಂದರನ ರಿಕ್ಷಕ್ಕೆ ಬಪ್ಪಲೆಡಿತ್ತಿಲ್ಲೆ ಹೇದು ಆಚಮನೆ ದೊಡ್ಡಣ್ಣಂದೆ, ಸುಕುಮಾರಂದೇ ಚರಳುಕಲ್ಲು ಹಾಕಿಂಡಿತ್ತವು. ದಡಬಡ ಶಬ್ದ ಉದಿಯಾಂದ ಕೇಳ್ತನ್ನೇ – ಹೇದು ನೋಡ್ಳೆ ಹೋದೋನಿಂಗೆ ಗೊಂತಾದ್ಸು, ಸಂಗತಿ ಹೀಂಗೆ ಹೇದು.

ರಜ್ಜ ಹೊತ್ತು ಕಲ್ಲು ಹೊರ್ಲೆ ಸೇರಿಕ್ಕಿ, ಮೆಲ್ಲಂಗೆ ಮಾಷ್ಟ್ರುಮಾವನ ಮನೆಗೆ ಹೆರಟೆ.
ಕಳುದವಾರ ಮಾತಾಡುವಾಗ, ಆಂಜನೇಯ ಬೇರೆ ಅಲ್ಲ, ರಾಮ ಬೇರೆ ಅಲ್ಲ – ಹೇಳಿದವಲ್ಲದೋ ಶ್ರೀಅಕ್ಕ; ತಲೆಲಿ ಅದೇ ಓಡಿಗೊಂಡಿತ್ತು. ಗಂಭೀರಲ್ಲಿ ಆಲೋಚನೆ ಮಾಡಿರೆ ಅದು ಅಪ್ಪಾದ ವಿಷಯವೇ.
ಮೊನ್ನೆ ಮಾಷ್ಟ್ರುಮಾವನ ಮನೆಗೆ ಹೋಗಿಪ್ಪಾಗಳೂ ಇದೇ ವಿಷಯ ಮಾತಾಡಿದೆ. ಮಾಷ್ಟ್ರುಮಾವ ಹನುಮಂತನ ಹಿರಿಮೆಯ ಬಗ್ಗೆಯೇ ವಿವರ್ಸಿಗೊಂಡು ಹೋದವು.
~

ಮಾಣಿಮಠಲ್ಲಿ ರಾಮಕಥೆ ಕೇಳುಲೆ ಉತ್ಸುಕ ಆಗಿಪ್ಪ ಹನುಮಂತ
ಮಾಣಿಮಠಲ್ಲಿ ರಾಮಕಥೆ ಕೇಳುಲೆ ಉತ್ಸುಕ ಆಗಿಪ್ಪ ಹನುಮಂತ

ಅರಸುವ ಅರಸು – ಅಪ್ರತಿಮ ಗುರುಭಕ್ತಿ:
ಅರಸು ಹೇದರೆ ರಾಜ ಹೇಳಿಯೂ ಆವುತ್ತು; ಹುಡ್ಕು ಹೇಳಿಯೂ ಆವುತ್ತು.
ಇಡೀ ರಾಮಾಯಣ ಇಪ್ಪದು ರಾಮನ ಅರಸುವಿಕೆಯ ಮೇಗೆ. ರಾಮನ ರಾಣಿ ಸೀತಾಮಾತೆಯ ಹುಡ್ಕುತ್ತರಲ್ಲೇ ಇಡೀ ಇಪ್ಪ ಕತೆ!
ಕೈಕೆಯ ಕೈಕ್ಕೆ ಮಾತಿಂದಾಗಿ ರಾಮ ಹದ್ನಾಕು ಒರಿಶ ವನವಾಸ ಮಾಡೇಕಾಗಿ ಬಪ್ಪದು; ಆ ಸಮೆಯಲ್ಲೇ, ಸೀತಾಮಾತೆಯ ಅಪಹರಣ ಅಪ್ಪದು. ಕಳ್ಳ ರಾವಣ ಸನ್ಯಾಸಿಯ ವೇಷ ಹಾಕಿಂಡು ಬಂದು ಎಳಕ್ಕೊಂಡು ಓಡುದು.
ಓಡುದು ಎಲ್ಲಿಗೆ? ದಕ್ಷಿಣದ ಲಂಕೆಗೆ. ಸೀತೆಯ ಹಿಡ್ಕೊಂಡು ದಕ್ಷಿಣದ ಹೊಡೆಂಗೆ ಹೋಯಿದ ಹೇದು ಗೊಂತಪ್ಪದ್ದೇ – ರಾಮಂದೇ ಲಕ್ಷ್ಮಣಂದೇ ಹುಡ್ಕಿಂಡು ಹೆರಡ್ತವು. ರಾಮನ ಅಯನ – ಪ್ರಯಾಣವೇ, ಅದಕ್ಕೆ ಹೊಂದಿಗೊಂಡಿಪ್ಪ ಕತೆಯೇ ರಾಮಾಯಣ ಆಗಿ ರೂಪು ಆದ್ದು ಹೇಳ್ತದರ ಮಾಷ್ಟ್ರುಮಾವ ಸುಮಾರು ಸರ್ತಿ ಹೇಳಿ ವಿವರ್ಸಿದ ಕಾರಣ ಒಪ್ಪಣ್ಣಂಗೆ ಮರದ್ದಿಲ್ಲೆ! :-)
~
ಹಾಂಗೆ ಹುಡ್ಕಿಂಡು ಹೋಪಗ ಎಡೆ ದಾರಿಲಿ ಜಟಾಯು ಸಿಕ್ಕುತ್ತು. ರಾವಣನ ಕತ್ತಿ ಪೆಟ್ಟಿಲಿ ಸಾವಲೆ ಬಿದ್ದರೂ, ರಾಮ ಬಪ್ಪನ್ನಾರ ಆಯುಸ್ಸು ಕೊಡ್ತವು ದೇವಲೋಕಂದ. ಹಾಂಗೆ, ರಾಮ-ಲಕ್ಷ್ಮಣ ಅಲ್ಲಿಗೆತ್ತುವನ್ನಾರವೂ ಬೇನೆ ತಿಂದುಗೊಂಡು ಇರ್ತು. ರಾಮನೋರು ಸಿಕ್ಕಿದ ತಕ್ಷಣ ವಿಷಯ ಹೇಳಿಕ್ಕಿ ತೀರಿಗೊಳ್ತು. ಇಂತಾಲ್ಲಿ ಸೀತೆ ಇಕ್ಕು ಹೇದು ಗೊಂತಾತು ರಾಮಂಗೆ. ಆದರೆ, ಅಪ್ಪೋ ಅಲ್ಲದೋ ಒಂದರಿ ನೋಡೆಡದೋ? ನೋಡುಸ್ಸು ಹೇಂಗೆ?
ಹಾಂಗೆ, ಋಷ್ಯಮುಖಕ್ಕೆ ಎತ್ತುತ್ತವು. ಅಲ್ಲೇ ಇದಾ, ಹನುಮಂತ ° ಸಿಕ್ಕುದು.
~
ಹನುಮಂತ ಹೇದರೆ ದೊಡಾ ರಾಜನೂ ಅಲ್ಲ, ಶ್ರೀಮಂತನೂ ಅಲ್ಲ. ವಾನರ ರಾಜ್ಯದ ಸಾಮಾನ್ಯ ಪ್ರಜೆ; ಅಷ್ಟೇ!
ಅಂಜನಾದೇವಿಯ ಮಗ ಆದ ಕಾರಣ ಆಂಜನೇಯ° ಹೇಳಿಯೂ, ವಾಯುದೇವರ ಮಗ° ಮಾರುತಿ ಹೇಳಿಯೂ ಉಪನಾಮ ಇದ್ದು. ಹೀಂಗೇ ಇಪ್ಪ ಇನ್ನೂ ಹತ್ತು ಹಲವು ಹೆಸರುಗೊ ಇದ್ದು. ಹೆಗಲಿಲಿ ಒಂದು ಗದೆ ಇದ್ದು – ಕೈಲಿ ರಜ ತ್ರಾಣ ಇದ್ದು ಹೇಳುದು ಬಿಟ್ರೆ ಬೇರೆಂತದೂ ವಿಶೇಷ ಇಲ್ಲೆ! ಹಾಂಗಾರೆ ರಾಮಾಯಣ ಓದಿದೋರಿಂಗೆ ಹನುಮಂತನ ಬಗೆಗೆ ಅಷ್ಟು ಭಯಭಕ್ತಿ ಬಪ್ಪಲೆ ಕಾರಣ ಎಂತ್ಸರ?
ರಾಮಾಯಣಲ್ಲಿ ರಾಮ ಹೇಂಗೆ ರಾಜಂಗೆ ಉದಾಹರಣೆಯೋ – ಹನುಮಂತ° ಸೇವಕಂಗೆ ಉದಾಹರಣೆ ಆಡ; ಗುರುಗೊ ಅಂದೊಂದರಿ ರಾಮಕಥೆಲಿ ಹೇಳಿದ್ದದರ ನೆಂಪುಮಾಡಿದವು ಮಾಷ್ಟ್ರುಮಾವ°.
ಸಾಕ್ಷಾತ್ ರಾಮನ ಕಂಡ ಕೂಡ್ಳೇ ದಾಸಾನುದಾಸನ ಹಾಂಗೆ ಆಯಿದನಾಡ ಈ ಹನುಮ!!
~
ಅಖಂಡ ಬ್ರಹ್ಮಚರ್ಯ – ಅಸಾಧಾರಣ ಸಾಮರ್ಥ್ಯ.
ರಾಮನ ಕಂಡ ಕೂಡ್ಳೇ ಹನುಮಂತಂಗೆ ತನ್ನ ದೇವರೇ ಎದುರು ಬಂದ ಹಾಂಗೆ ಕಾಣ್ತು. ಮುಂದೆ, ರಾಮಾಯಣದ ಉದ್ದಕ್ಕೂ ರಾಮ-ಹನುಮ ಜೋಡಿ ಹಾಂಗೇ ಮುಂದುವರಿತ್ತು.
ಒಬ್ಬಂಟಿ. ಸಂಸಾರ ಇಲ್ಲೆ; ಆದರೆ ಎಲ್ಲೋರಿಂಗೂ ಬೇಕಾದೋನು. ಅಗಾಧ ಸಾಮರ್ಥ್ಯ ಇದ್ದು. ಆದರೆ ತನ್ನ ಸಾಮರ್ಥ್ಯ ಎಷ್ಟು ಹೇದು ಇನ್ನೊಬ್ಬ ಹೇಳಿ ಆಯೇಕು; ಇದಾ – ನಿನಗೆ ಇಲ್ಲಿಂದ ಲಂಕೆಗೆ ಹಾರ್ಲೆ ಎಡಿಗು – ಹೇಳಿ ಇನ್ನೊಬ್ಬ ಹೇಳಿ ಆಯೇಕು, ಸ್ವಂತಕ್ಕೆ ಅರಡಿಯ. (ಇದು ಆರದ್ದೋ ಶಾಪ ಆಡ ಹನುಮಂತಂಗೆ, ಆರದ್ದೋ – ಮಾಷ್ಟ್ರುಮಾವ ಹೇಳಿದವು, ಒಪ್ಪಣ್ಣಂಗೆ ಮರದ್ದತ್ತೆ!)
ಸೀತೆ ಲಂಕೆಲಿ ಇಪ್ಪದಪ್ಪೋ ನೋಡ್ಳೆ ಹನುಮಂತನ ಒಂದರಿ ಕಳುಸುತ್ತವಾಡ. ತನಗೆ ಹಾರ್ಲೆಡಿಯ, ಹಾರ್ಲೆಡಿಯ ಹೇದು ಗ್ರೇಶಿಂಡಿದ್ದ ಹನುಮಂತಂಗೆ ’ನಿನಗೆ ಎಡಿಗು, ನೋಡು ಒಂದರಿ’ ಹೇಳಿದ್ದಕ್ಕೆ ತೆಗದ್ದು ಮೂಡಂತಾಗಿ ಹಾರಿದನಾಡ. ಹಾಂಗೆ ಹಾರಿದೋನು ಲಂಕೆ ಬಿಡಿ, ಅದರ ದಾಂಟಿ ಅದರಿಂದ ಅತ್ಲಾಗಿಪ್ಪ ಮಲಯ ಪರ್ವತಕ್ಕೆ ಹೋಗಿ ಎತ್ತಿದನಾಡ!
ಅಲ್ಲಿ ಪುನಾ ದಾರಿಕೇಳೇಕಾಗಿ ಬಂತು. ಅಲ್ಲಿ ಆರೋ ಋಷಿಗೊ ತಪಸ್ಸುಮಾಡಿಗೊಂಡಿತ್ತಿದ್ದವಾಡ. ಲಂಕೆಗೆ ಹೋಯೆಕ್ಕಾತು, ಎಲ್ಲಿ? ಕೇಳಿದನಾಡ ಈ ಹನುಮಂತ. “ಎನ್ನ ನೇಚಿ ಹಿಡುದರೆ ಆನು ಎಲ್ಲಿ ಹೇದು ತೋರ್ಸುವೆ” ಹೇಳಿದನಾಡ ಆ ಋಷಿ. ಹನುಮಂತ ಆ ಋಷಿಯ ನೇ..ಗ್ಗಿ ಹಿಡುದ್ದರ್ಲಿ – “ಇದಾ, ಲಂಕೆ ಓ ಅಲ್ಲಿ ಅದಾ, ನೀನು ಹೋಗಿ ಜಯಿಸಿಗೊಂಡು ಬಪ್ಪೆ” ಹೇಳಿದನಾಡ. ಹೇಂಗೆ? ಆ ಋಷಿ ಕೂದಲ್ಲೇ ಕೂದು ಬೇರು ಬಂದಿತ್ತಾಡ, ಭೂಮಿಯಷ್ಟೇ ಬಾಧಿ ಆಗಿತ್ತಿದ್ದನಾಡ. ಅವನ ನೆಗ್ಗಲೆ ಸಾಧಾರಣ ಆರಿಂದಲೂ ಎಡಿಯ ಆಡ.
~
ಓಪಾಸು ಪಡುವಂತಾಗಿ ರಜ ಹಾರಿ ಲಂಕೆಗೆ ಎತ್ತಿದ್ಸಡ. ಅಶೋಕಾವನಲ್ಲಿ ಸೀತೆ ಶೋಕಲ್ಲಿ ಮುಳುಗಿಪ್ಪದರ ಕಂಡು, ಪಿಸುರಿಲಿ ಆ ಚೆಂದದ ಅಶೋಕವನೆಯ ಹಾಳು ಮಾಡಿದ್ದು. ಅದಕ್ಕೆ ಲಂಕೆಯ ಸೈನಿಕರು “ಇದಾರೋ ಮಂಗ° ಬಂದು ಉಪದ್ರ ಕೊಡ್ತು” ಹೇದು ಈ ಮಂಗನ ಸೆರೆ ಹಿಡುದ್ದು. ಅದರ ಬೀಲಕ್ಕೆ ಒಸ್ತ್ರ ಸುತ್ತಿ, ಎಣ್ಣೆ ಎರದು ಕಿಚ್ಚುಕೊಟ್ಟು ಓಪಾಸು ಬಂದಲ್ಲಿಗೇ ಕಳುಸುಲೆ ಅಪ್ಪಣೆ ಮಾಡಿದ್ದು. ಹಾಂಗೆ ಬೀಲಕ್ಕೆ ಒಸ್ತ್ರ ಸುತ್ತಲೆ ಹೆರಟದು. ಅಷ್ಟಪ್ಪಗ ಬೀಲ ಬೆಳದ್ದು, ಒಸ್ತ್ರ ಇದ್ದಷ್ಟೂ ಸಾಕಾಯಿದಿಲ್ಲೆ ಸುತ್ತಲೆ – ಎಣ್ಣೆ ಇದ್ದಷ್ಟೂ ಸಾಕಾಯಿದಿಲ್ಲೆ ಎರವಲೆ!! ವಾಯಿಲೂ ಸಾಕಾಯಿದಿಲ್ಲೆ, ಸೀರೆಯೂ ಸಾಕಾಯಿದಿಲ್ಲೆ; ಸತ್ಯಣ್ಣನ ವಾಯಿಲು ಸೀರೆಯೂ ಸಾಕಾವುತಿತಿಲ್ಲೆ!!
ಅಂತೂ – ಅರೆಬರೆ ಸುತ್ತಿ ಕಿಚ್ಚುಕೊಟ್ಟವು. ಹಾಂಗೆ ಕಿಚ್ಚಿನ ಹಿಡ್ಕೊಂಡೇ ಲಂಕೆಯ ಪೇಟೆ ಇಡೀಕ ಹಾರಿದ್ದು, ಅಲ್ಯಾಣ ಸಾಮ್ರಾಜ್ಯದ ಕಟ್ಟೋಣಂಗೊ, ವ್ಯವಸ್ಥೆಗಳ ಎಲ್ಲವನ್ನೂ ಹೊತ್ತುಸಿದ್ದು!! ಇದು ಹನುಮಂತನ ಸಾಮರ್ಥ್ಯ.
ಇದೆಲ್ಲ ಎಂತಕೆ ಬೇಕಾಗಿ? ತನ್ನ ರಾಮನ ಹೆಂಡತ್ತಿಯ ಅಪಹರಣ ಮಾಡಿದ್ದಕ್ಕೆ ಬೇಕಾಗಿ.
ಅಂತೊ – ಸೀತೆ ಅಲ್ಲಿದ್ದು – ಹೇಳ್ತದರ ರಾಮಂಗೆ ಬಂದು ಹೇಳುವ ಬಹುದೊಡ್ಡ ಜೆಬಾದಾರಿಕೆಯ ಕಾರ್ಯವ ನೆಡೆಶಿಕೊಡ್ತ.
~
ಭುಜ ಭಲ- ಗುರುಬಲ:
ಮುಂದೆ ವಾನರ ಸೇನೆ ಕಟ್ಟಿಗೊಂಡು ಬಂದು ಯುದ್ಧ ಮಾಡುವಾಗ, ಶ್ರೀರಾಮಂಗೆ ರಥ ಯೇವದು?
ಸ್ವತಃ ಹನುಮಂತನ ಭುಜವೇ!
ರಾಮನಂತಾ ಶ್ರೀದೇವರನ್ನೇ ತನ್ನ ಹೆಗಲ ಮೇಗೆ ಹೊತ್ತುಗೊಂಬ ಭಾಗ್ಯಶಾಲಿ ಬೇರೆ ಆರು ಇರ್ತವು ಬೇಕೆ?
ಹಾಂಗೆ ಹೊತ್ತುಗೊಂಬದು ಸುಲಬದ ಕೆಲಸವೋ? ಭೂಮಿಯಷ್ಟೇ ಬಾದಿಯ ಗದೆ ಹೊತ್ತು ಗೊಂತಿದ್ದಾದ ಹನುಮಂಗೆ, ಆದರೆ ಶ್ರೀರಾಮಚಂದ್ರ ಎಷ್ಟು ಬಾದಿ? ಉಮ್ಮ, ಇಡೀ ವಿಶ್ವದಷ್ಟು ಬಾದಿ ಇಕ್ಕೋ ಏನೋ? ಆ ಬಾದಿಯ ಹೊತ್ತುಗೊಂಬಲೆ ಶ್ರೀರಾಮಭಕ್ತಿಯೇ, ಗುರುಬಲವೇ ಕಾರಣ ಆದ್ದದೇ ವಿನಃ, ಶೆಗ್ತಿ ಮಾಂತ್ರ ಆಗಿರದೋದು!
ಅಂತೂ ಹನುಮಂತನ ಗುರುಸೇವೆಲಿ, ಶ್ರೀರಾಮಂಗೆ ಸೀತೆ ಪುನಾ ಸಿಕ್ಕುತ್ತು. ವಿಭೀಷಣಂಗೆ ಲಂಕೆ ಸಿಕ್ಕುತ್ತು.
ಶ್ರೀರಾಮನ ಭುಜಲ್ಲಿ ಕೂರ್ಸಲೆ ಸಿಕ್ಕಿದ್ದು ಹನುಮಂತಂಗೆ; ಶ್ರೀರಾಮನ ಆಶೀರ್ವಾದ ಅಪ್ಪುಗೆ ಸಿಕ್ಕಿದ್ದೂ ಹನುಮಂತಂಗೆ. ಇದೆಲ್ಲ ಅಂತೆ ಅಂತೆ ಸಿಕ್ಕಿದ್ದಿಲ್ಲೆ, ಅಪರಿಮಿತ ಗುರುಭಕ್ತಿಂದಾಗಿಯೇ ಸಿಕ್ಕಿದ್ದದು.
ಶ್ರೀರಾಮ ಹೇದರೆ ತನ್ನ ಆರಾಧ್ಯ ದೈವ, ಸಾಕ್ಷಾತ್ ದೇವರು ಹೇದು ಹನುಮಂತ° ಗ್ರೇಶಿದ ಕಾರಣ ಅಷ್ಟೆಲ್ಲ ಸೇವೆ ಮಾಡ್ಳೆ ಎಡಿಗಾತು.
~
ರಾಮಾಯಣ- ಮಹಾಭಾರತ:
‘ಸಪ್ತೈತೇ ಚಿರಜೀವಿನಃ ‘ಹೇಳ್ತ ಶ್ಲೋಕಲ್ಲಿ ಹನುಮಂತನನ್ನೂ ನೆಂಪು ಮಾಡಿಗೊಳ್ತು. ಹನುಮಂತಂಗೆ ಸಾವಿಲ್ಲೆ ಅಡ.
ಅದಪ್ಪುದೇ – ನಿತ್ಯವೂ ನಮ್ಮ ತೋಟಲ್ಲಿ ಕಾಣ್ತು ಹೇದು ರಂಗಮಾವ° ಹೇಳ್ಳಿದ್ದು ಒಂದೊಂದರಿ; ಅದೇನೇ ಇರಳಿ,
ಶ್ರೀರಾಮನ ಅವತಾರ ಸಂಪೂರ್ಣ ಆದರೂ ಹನುಮಂತ° ಇನ್ನೂ ಇದ್ದ°. ಅದರಿಂದ ಎಷ್ಟೋ ಮತ್ತೆ ನೆಡದ ಮಹಾಭಾರತಲ್ಲಿಯೂ ಹನುಮಂತನ ಶುದ್ದಿಗೊ ಬತ್ತು. ರಾಮಾಯಣ-  ಮಹಾಭಾರತ ಎರಡ್ರಲ್ಲಿಯೂ ಬಪ್ಪ ಕೆಲವೇ ಕೆಲವು ವೆಗ್ತಿತ್ವಂಗಳಲ್ಲಿ ಹನುಮಂತನೂ ಒಬ್ಬ. ತನ್ನ ಅಪ್ಪ° ವಾಯುವಿನಿಂದಾಗಿ ಹುಟ್ಟಿದ ಭೀಮಂಗೆ ಸಮ್ಮಂದಲ್ಲಿ ಅಣ್ಣನೂ ಅಪ್ಪು ಇದಾ.
ಒಂದರಿ ಹನುಮಂತ° ದಾರಿಲಿ ಕೂದುಗೊಂಡಿತ್ತಿದ್ದನಾಡ; ಮಾಷ್ಟ್ರುಮಾವ° ಕತೆ ಹೇಳಿದವು.
ಬೀಲವ ದಾರಿಗೆ ಅಡ್ಡ ಮಡಗಿ ರಾಮಜೆಪ ಮಾಡಿಗೊಂಡಿಪ್ಪಗಳೇ ಅಲ್ಲಿಗೆ ಭೀಮ ಬಪ್ಪದಿದಾ. ಭೀಮಂಗೋ – ಏರು ಜವ್ವನ; ಇದಾರು ಮಂಗ°, ಆನು ಭೀಮ ಬಪ್ಪಗಳೂ ದಾರಿ ಬಿಡದ್ದು; “ಏಳು” ಹೇಳಿದನಾಡ.
ಎನಗೆ ಪ್ರಾಯ ಆತು , ಏಳ್ಳೆಡಿತ್ತಿಲ್ಲೆ, ನೀನು ದಾಂಟಿಗೊಂಡು ಹೋಗಪ್ಪಾ – ಹೇಳಿತ್ತಡ ಮಂಗ°.
ದಾಂಟಿಗೊಂಡು ಹೋಪದೋ, ಚೆ, ಅಷ್ಟೂ ಪುಸ್ಕ ಅಪ್ಪಲೆ ಭೀಮ ಅಲ್ಲದೋ ಇವ°; ದಾಂಟಿಗೊಂಡು ಹೋವುತ್ತಿಲ್ಲೆ, ನಿನ್ನನ್ನೇ ನೆಗ್ಗಿ ಅತ್ಲಾಗಿ ಹಾಕುವೆ ಬೇಕಾರೆ ಹೇದು ಹೆದರ್ಸಿದನಾಡ.
ಆತಂಬಗ, ಎನ್ನ ಬೀಲ ಅಲ್ಲದೋ ನಿನಗೆ ದಾಂಟ್ಲೆ ಅಡ್ಡ ಅಪ್ಪದು, ಅದರ ನೆಗ್ಗಿ ಕರೆಂಗೆ ಹಾಕಿಬಿಡು ಅಂಬಗ – ಹೇಳಿತ್ತಡ ಅಜ್ಜಮಂಗ°.
ಸಮ, ಕೈಲಿ ಹಿಡೂ..ದು ನೇಚಲೆ ನೋಡಿದ ಭೀಮ! ಏಯ್… ಒಬೇಸ್ಸ.. ಹ್ಮ್.. ಉಹುಂ!! ಹಂದುತ್ತೇ ಇಲ್ಲೆ.
ಗದೆ ಹಾಕಿ ಮೀಂಟಿದ°; ಉಹುಂ, ಬೀಲ ಬಿಡಿ, ಬೀಲದ ರೋಮವೂ ಹಂದುತ್ತಿಲ್ಲೆ.
ಭೀಮನ ಅಹಂಭಾವ ಪೂರ್ತಿ ಕರಗಿ ನೀರಾವುತ್ತಾಡ. ಮಂಗ° ಹನುಮಂತ° ಹೇಳಿಯೂ, ತನ್ನ ಅಣ್ಣ ಹೇಳಿಯೂ ಭೀಮಂಗೆ ಗೊಂತಾವುತ್ತಾಡ.
ಶರಸೇತು ಬಂಧನ ಹೇದು ಇನ್ನೊಂದು ಯಕ್ಷಗಾನ ಪ್ರಸಂಗವೇ ಇದ್ದಾಡ; ಅರ್ಜುನ ಕಟ್ಟಿದ ಸಂಕವ ಹನುಮಂತ° ಮುರಿಸ್ಸು.
~
ಅಂತೂ, ಅವನ ಸಾಮರ್ಥ್ಯಕ್ಕೆ ಸಾಟಿ ಇಲ್ಲೆ ಹೇಳ್ತದು ಒಟ್ಟು ಮತ.
ಇಂದಿಂಗೂ ದೈಹಿಕ ವ್ಯಾಯಾಮ ಶಾಲೆಗಳಲ್ಲಿ ಹನುಮಂತನ ಆರಾಧನೆಯ ಕಾಣ್ತಾಡ.. ಮನೋಜವಂ ಮಾರುತ ತುಲ್ಯವೇಗಂ- ಹೇದು ಯೋಗದ ಗುರುಗೊ ಪ್ರಾರ್ಥನೆ ಮಾಡಿಯೇ ಪಾಠ ಸುರುಮಾಡ್ಸಡ, ಬೆಟ್ಟುಕಜೆ ಮಾಣಿ ಹೇಳುಗು.
ಇಂಡೋನೇಷಿಯಾದ ಹಾಂಗಿರ್ತ ಉಪ ಭಾರತ ದೇಶಂಗಳಲ್ಲಿಯೂ ಹನುಮ ಆರಾಧನೆ ಕಾಣ್ತಡ. ಅಲ್ಯಾಣ ಪೋಲೀಸು ಬೆಳ್ಟಿಲಿಯೂ ಹನುಮಂತನ ಚಿಹ್ನೆ ಇದ್ದಾಡ. ಈ ಮಲೇಷಿಯಾ- ಇಂಡೋನೇಷಿಯಾ ಹೇದರೆ ಈಗ ಬೇರೆ ದೇಶ ಆದ್ಸಷ್ಟೇ, ಮದಲಿಂಗೆ ಅದೆಲ್ಲ ಅಖಂಡ ಭಾರತದ ಒಂದು ಭಾಗ ಅಲ್ಲದೋ – ಕೇಳುಗು ಮಾಷ್ಟ್ರುಮಾವ°.
ಲಂಕೆಗೆ ಹೇದು ಹಾರಿದೋನು ಅಲ್ಲಿಗೆ ಎತ್ತಿದ್ದದು ಅಲ್ಲದೋ!? ಅದು ಹನುಮಂತನ ವ್ಯಾಪ್ತಿ.
~
ಪಾಂಡಿತ್ಯ – ಅನುಷ್ಠಾನ:
ಇಷ್ಟೆಲ್ಲ ಆದರೂ, ಬರೇ ಮಂಗ° ಹೇಳುವ ಹಾಂಗಿಲ್ಲೆ. ಎಂತಕೆ?
ವೈಯಾಕರಣ ಪಂಡಿತನಡ ಅವ! ಸಂಸ್ಕೃತ ವ್ಯಾಕರಣದ ವಿದ್ವಾಂಸನಡ ಈ ಹನುಮಂತ°. ಚಿಲ್ಲರೆ ಏನಲ್ಲ!
ಅಗ್ರೇ ವಾಚಯತಿ ಪ್ರಭಂಜನ ಸುತಂ – ಹೇದು ಸುಭಗಣ್ಣನ ಚೂರ್ಣಿಕೆ ಇಲ್ಲೆಯೋ – ಅದರ್ಲಿಯೂ ಬತ್ತು, ರಾಮನ ಆಸ್ಥಾನಲ್ಲಿ ಹನುಮಂತ ಓದಿಗೊಂಡಿರ್ತ – ಹೇದು!
ಇಂಥಾ ಮೇಧಾವಿ, ಸನ್ಯಾಸಿ ಹನುಮಂಗೆ ಒಂದೇ ಒಂದು ಅನುಷ್ಠಾನ ಇದ್ದದು – ಅದುವೇ ರಾಮಸ್ಮರಣೆ.
ಯತ್ರ ಯತ್ರ ರಘುನಾಥ ಕೀರ್ತನಂ – ಎಲ್ಲೆಲ್ಲಿ ರಾಮನ ಕೀರ್ತನೆ ಆವುತ್ತೊ
ತತ್ರ ತತ್ರ ಕೃತ ಮಸ್ತಕಾಂಜಲಿ – ಅಲ್ಲಲ್ಲಿ ಬಂದು ಕೈಮುಗುದು ಕೇಳ್ತ – ಹೇಳಿ ನಮ್ಮ ಗುರುಗೊ ರಾಮಕಥೆಯ ಮದಲು ನೆಂಪುಮಾಡಿಗೊಂಗು. ಅಪ್ಪು, ಅದುವೇ ಹನುಮನ ಅನುಷ್ಠಾನ.

ದೈಹಿಕ ಸಾಮರ್ಥ್ಯ ಇದ್ದೋನಿಂಗೆ ಓದುಸ್ಸರಲ್ಲಿ ಆಸಕ್ತಿ ಕಡಮ್ಮೆ, ಓದುಸ್ಸರಲ್ಲಿ ಉಶಾರಿದ್ದರೆ ಆಟೋಟಕ್ಕೆ ಹೋಪದು ಕಡಮ್ಮೆ – ಹೇದು ಮಾಷ್ಟ್ರುಮಾವ° ಒಂದೊಂದರಿ ಹೇಳುಲಿದ್ದು.
ಅದು ನಮ್ಮ ಬೈಲಕರೆ ಶಾಲೆಲಿ ಆತು.
ಆದರೆ ಈ ಹನುಮಂತ° ಎರಡ್ರಲ್ಲಿಯೂ- ದೈಹಿಕ ಸಾಮರ್ಥ್ಯ, ಪಾಂಡಿತ್ಯ – ಎರಡ್ರಲ್ಲಿಯೂ ಸೈ!!
ಇಂತಾ ಹನುಮನ ಆರಾಧನೆ ಹಲವು ದಿಕ್ಕೆ ಹಲವು ರೀತಿಲಿ ನೆಡೆತ್ತು.
ಒಡಿಯೂರಿನ ಹಾಂಗಿಪ್ಪಲ್ಲಿ ಹನುಮಂತಂದೇ ಸೇವೆ. ಗಣೇಶಮಾವನ ಊರಿಲಿ “ಹನುಮಂತ ಬೂತ” ಹೇಳಿ ಒಂದಿದ್ದಾಡ, ಕೊಳಚ್ಚಿಪ್ಪು ಬಾವ° ಹೇಳಿತ್ತಿದ್ದ, ಆಂಜನೇಯ ಸಿದ್ಧಿ- ಹೇಳಿ ಮಾಡ್ತವಾಡ ಕೆಲವು ಜೆನ, ದೊಡ್ಡಮಾವ° ಒಂದರಿ ಹೇಳಿತ್ತಿದ್ದವು.
ಅಂತೂ ಇಂತೂ ನಮ್ಮ ಜೆನಜೀವನಲ್ಲಿ ಹನುಮಂತನ ಸಮ್ಮಂದ ಹಾಸುಹೊಕ್ಕಾಗಿದ್ದು.
~
ರಾಮಾಯಣ ನವಗೆ ಆದರ್ಶ.
ರಾಮಾಯಣದ ರಾಮನೂ ನಮ್ಮೊಳ ಬೇಕು; ರಾಮಾಯಣದ ಹನುಮಂತನೂ ನಮ್ಮೊಳ ಬೇಕು.
ನಿತ್ಯ ಜೀವನಲ್ಲಿ ನಾವು ರಾಮನಾಗಿ ಎಷ್ಟೋ ಜೆನಕ್ಕೆ ಆದರ್ಶರಾಗಿರೆಕ್ಕು; ಅದೇ ನಮುನೆ ನಮ್ಮಂದ ಹೆರಿಯೋರಿಂಗೆ ಪ್ರೀತಿಯ, ನಂಬಿಕಸ್ತ ಸೇವಕನಾಗಿಯೂ ಇರೆಕ್ಕು. ಹಾಂಗಾರೇ ನಮ್ಮ ಕುಟುಂಬ – ಸಂಸಾರ ಒಳಿಗಷ್ಟೆ.
~
ಅಪೂರ್ವ ವೆಗ್ತಿತ್ವ ಹನುಮಂತನ ಬಹುವಿಧ ಆರಾಧನೆಯ ಈ ಚಾತುರ್ಮಾಸ್ಯಲ್ಲಿ ಕಾಂಬೊ.
ಎಲ್ಲೋರುದೇ ಬಂದು ಸೇರುವೊ. ಹನುಮಂತನ ಶಕ್ತಿ, ಪ್ರೀತಿ, ವಿನಯ, ಸಚ್ಚಾರಿತ್ರ್ಯ ನಮ್ಮೊಳ ತುಂಬಲಿ.
ಶ್ರೀಗುರುಗೊ ರಾಮ ಆಗಿದ್ದುಗೊಂಡು, ನಾವು ಹನುಮನ ರೀತಿಲಿ ಸೇವೆ ಮಾಡುವೊ.
~
ಒಂದೊಪ್ಪ: ರಾಮನ ಆದರ್ಶಲ್ಲಿ ನಾವಿದ್ದರೇ, ಹನುಮನ ಹಾಂಗಿಪ್ಪ ಸೇವಕರು ಸಿಕ್ಕುಗಷ್ಟೆ.
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ. ಅದ್ಭುತ ಮನೋಹರ ವಿವರಣೆ. ಸಂಸ್ಥಾನದ ರಾಮಕತೆ ನೋಡಿದಷ್ಟೇ ಮನೋಜ್ಞವಾಗಿದ್ದು ಭಾವ. ನಮೋ ನಮಃ

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಸೇವೆಯ ಭಾವನೆಗೆ ಇನ್ನೊಂದು ಹೆಸರು ಹನುಮ.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಹನುಮನ ಹಿರಿಮೆಯ ನೆಂಪು ಮಾಡ್ಯೊಂಡು ಒಪ್ಪ ಶುದ್ದಿ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಹನುಮ೦ತನ ಸೇವಾಜೀವನವ ನೆ೦ಪು ಮಾಡಿದ ಶುದ್ದಿ ಕೊಶಿ ಕೊಟ್ಟತ್ತು.
  ಮ೦ಗ೦ಗಳ ಹನುಮ೦ತ ಹೇಳಿ ಕೈ ಮುಗಿವ ನಾವು, ನಮ್ಮೊಳ ರಾಮನ ಆದರ್ಶವ ಬೆಳೆಶೆಕ್ಕು ಹೇಳ್ತದು ಸತ್ಯ.
  ಸಮಯೋಚಿತ ಶುದ್ದಿ.

  [Reply]

  VA:F [1.9.22_1171]
  Rating: 0 (from 0 votes)
 5. ಸುಮನ ಭಟ್ ಸಂಕಹಿತ್ಲು.

  ಹರೇ ರಾಮ, ಜೈ ಹನುಮಾನ್, ಜೈ ಹನುಮಂತ…
  ತುಂಬಾ ಒಪ್ಪ ಶುಧ್ಧಿ ಓದಿ ಖುಶಿ ಆತು.

  [Reply]

  VA:F [1.9.22_1171]
  Rating: 0 (from 0 votes)
 6. ರಾಮಚ೦ದ್ರ ಭಟ್, ಬಿ.ಸಿ.ರೋಡ್

  ಹರೇರಾಮ,
  ರಾಮಕಥೆಯ(ಹನುಮನ ಕಥೆ) ಈ ಸ೦ದರ್ಭಲ್ಲಿ ಸ೦ದರ್ಭೋಚಿತವಾದ ಮಾಹಿತಿಗ ಇನ್ನೂ ಬಯಲಿ೦ಗೆ ಬರಲಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಜಯಶ್ರೀ ನೀರಮೂಲೆಶೀಲಾಲಕ್ಷ್ಮೀ ಕಾಸರಗೋಡುಶಾಂತತ್ತೆಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಕಳಾಯಿ ಗೀತತ್ತೆಕಜೆವಸಂತ°ಮುಳಿಯ ಭಾವಮಾಷ್ಟ್ರುಮಾವ°ಬೋಸ ಬಾವಡಾಮಹೇಶಣ್ಣದೊಡ್ಡಭಾವಡಾಗುಟ್ರಕ್ಕ°ಎರುಂಬು ಅಪ್ಪಚ್ಚಿರಾಜಣ್ಣಕೆದೂರು ಡಾಕ್ಟ್ರುಬಾವ°ಅನು ಉಡುಪುಮೂಲೆಡೈಮಂಡು ಭಾವಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕಮಾಲಕ್ಕ°ಬೊಳುಂಬು ಮಾವ°ವೇಣೂರಣ್ಣಗೋಪಾಲಣ್ಣಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ