Oppanna.com

ರಾಮನವಮಿ ದಿನ ರಾಮನ ನಮಿಸುವ°..!

ಬರದೋರು :   ಒಪ್ಪಣ್ಣ    on   30/03/2012    12 ಒಪ್ಪಂಗೊ

ಕಳುದವಾರ ನಾವು ಜಯದೇವನ ಗೀತೆಗೋವಿಂದದ ಶುದ್ದಿ ಮಾತಾಡಿದ್ದು ಅಲ್ಲದೋ?
ಆ ಸಮೆಯಲ್ಲಿ ಬಂದದೇ ಚಾಂದ್ರಯುಗಾದಿ.
ಒರಿಶ ಒಂದು ಮುಗುದು, ಮತ್ತಾಣ ಒರಿಶ ಬಪ್ಪ ’ಹೊಸಒರಿಶ’ದ  ಕಾಲ.
ವಸಂತಋತುವಿಲಿ – ಚೈತ್ರ ಮಾಸಾರಂಭ ಆತು ಹೇದರೆ ಹೊಸ ಒರಿಶ ಬಂತು ಹೇಳಿ ಅರ್ತ.
ಮರಂಗೊ, ಗೆಡುಬಳ್ಳಿಗೊ ಹಳೆಯ ಎಲೆಗಳ ಸಂಪೂರ್ಣವಾಗಿ ಕಳಕ್ಕೊಂಡು, ಹೊಸ ಎಲೆಲಿ ಈ ಒರಿಶದ ಅನ್ನಾಹಾರ ತಯಾರುಸಲೆ ತೆಯಾರಾಗಿ ನಿಂದಿದು. ಹಳೆ ಎಲೆಗೊ ಅಲ್ಲೇ ಕೆಳ ಬಿದ್ದು, ತಾನಿದ್ದ ಮರಕ್ಕೆ ಗೊಬ್ಬರ ಆಗಿ ಮೋಕ್ಷಪಡಕ್ಕೊಂಬಲೆ ತೆಯಾರಾಗಿ ನಿಂದಿದು. ಪ್ರತಿ ಜೀವಿಯೂ ಹೊಸ ಒರಿಶವ ಸ್ವಾಗತಿಸಲೆ ಸನ್ನದ್ಧವಾಗಿದ್ದು.
ಅದುವೇ ಅಲ್ಲದೋ ಹೊಸಒರಿಶ!

ಯುಗಾದಿಯ ಬೆನ್ನಾರೆಯೇ ನವರಾತ್ರಿ ಹಬ್ಬ!
ಚೈತ್ರಮಾಸ ಒಂದನೇ ತಿಥಿಂದ, ಒಂಭತ್ತನೇ ತಿಥಿ ಒರೆಂಗೆಯೂ ನವರಾತ್ರಿಯೇ.
ಅರೆ! ಇದೇವ ನವರಾತ್ರಿ ಹೇದು ಗ್ರೇಶಿದಿರೋ? ಇದಕ್ಕೆ ಹೆಸರು ’ವಸಂತ ನವರಾತ್ರಿ’ ಹೇದು.
ಶರದೃತುವಿಲಿ ಬಪ್ಪ ನವರಾತ್ರಿ ದುರ್ಗೆದು. ಆ ಬಗ್ಗೆ ಮಾತಾಡುವಗ ಈ ವಸಂತ ನವರಾತ್ರಿಯ ಬಗ್ಗೆಯೂ ತೂಷ್ಣಿಲಿ ಹೇಳಿದ್ದು ತೋರ್ತು; ಅಲ್ಲದೋ?
ಅದಿರಳಿ; ಇದು ನಮ್ಮ ಇತ್ಲಾಗಿಯಾಣ ಊರುಗಳಲ್ಲಿ ವಿಶೇಷ ಗವುಜಿ ಇಲ್ಲದ್ದರೂ, ಉತ್ತರದ ಹೊಡೆಲಿ ಈ ಒಂಭತ್ತು ದಿನವೂ ಗವುಜಿಯೇ ಗವುಜಿ!
~
ಸಣ್ಣ ಇಪ್ಪಗ ನಾವು ಕೇಳಿಬಲ್ಲ ಕತೆ ಒಂದಿದ್ದು.
ಕತೆ ಒಂದಾದರೂ ಉಪಕತೆ ಹಲವಾರು.
ಇದೆಂತರ ಒಪ್ಪಣ್ಣನ ರಾಮಾಯಣ ಹೇದು ಗ್ರೇಶೆಡಿ; ರಾಮಾಯಣವೇ ಆದರೆ ದೊಡ್ಡದಲ್ಲ – ಮೇಗಂದ ಮೇಗೆ, ಸಣ್ಣಕೆ.
ರಾಮಾಯಣದ ಬಹುಮುಖ್ಯ ನಾಕು ಜೆನಂಗಳ ಶುದ್ದಿ ಮಾತಾಡೆಂಡೇ ರಾಮಾಯಣ ಮುಗುಶುವೊ°!

ರಾಮ:
ಅಯೋಧ್ಯಾಧಿಪತಿ ಇಕ್ಷ್ವಾಕು ವಂಶದ ರಾಜ ದಶರಥಂಗೆ ಮಕ್ಕೊ ಆಯಿದವಿಲ್ಲೇದು ಭಾರೀ ಬೇಜಾರಲ್ಲಿರ್ತ°.
ಕುಲಗುರುಗಳಾದ ವಸಿಷ್ಠರ ಹತ್ತರೆ ಹೋಗಿ ಬೇಜಾರ ಹೇಳುವಗ ಪುತ್ರಕಾಮೇಷ್ಠಿಯ ಬಗೆಗೆ ಸೂಚನೆ ಕೊಡ್ತವು. ಕೂಡ್ಳೇ ಅದರ ಮಾಡ್ಳೆ ಏರ್ಪಾಡು ಮಾಡ್ತನಡ ರಾಜ.
ಸಂತಾನ ಪಡವಲೆ ಇಪ್ಪ ತೊಡಕುಗಳ ವೈದಿಕವಾಗಿ ಪರಿಹರುಸಿ, ಯುವರಾಜನ ಪಡಕ್ಕೊಂಬ ಹಂಬಲ!
ಪುತ್ರಕಾಮೇಷ್ಠಿ ನೆಡೆತ್ತು; ಯಜ್ಞದ ಪೂರ್ಣಾಹುತಿ ಅಪ್ಪದ್ದೇ, ತೃಪ್ತಿಲಿ ಹೋಮಕುಂಡಂದ ಯಜ್ಞೇಶ್ವರ ಎದ್ದು ದಶರಥಂಗೆ ಒಂದು ತಪಲೆ ಪಾಯ್ಸ ಕೊಡ್ತನಡ – ಹಸರೋ, ಸಾಗೋ, ಕಡ್ಳೆಯೋ – ನೆಂಪಿಲ್ಲೆ.
ಆ ಪಾಯ್ಸವ ಅವನ ಹೆಂಡತ್ತಿ ಸೇವಿಸೇಕು ಹೇದು.
ಒಂದಲ್ಲ – ಅರಸಿ ಕೌಸಲ್ಯೆ, ಮೌನಿ ಸುಮಿತ್ರೆ, ಕೊಂಗಾಟದ ಸುಂದರಿ ಕೈಕ್ಕೆ- ಮೂರು ಜೆನ ಹೆಂಡತ್ತಿಯಕ್ಕೊ.
ಗುಜಿರಿ ಇಬ್ರಾಯಿಗೆ ನಾಲ್ಕು ಇರ್ತು; ಅದರಿಂದ ಕಮ್ಮಿಯೇ! ಈ ಬೆಸ ಸಂಕೆಯ ಹೆಂಡತ್ತಿಕ್ಕೊಗೆ ಆ ಪಾಯ್ಸವ ಸಮನಾಗಿ ಹಂಚಿ ಕೊಡ್ತು ಹೇಂಗೆ?
ಪಟ್ಟದರಸಿ ಕೌಸಲ್ಯೆಗೆ ಅರ್ಧ ತಪಲೆ; ಕೊಂಗಾಟದ  ಕೈಕ್ಕೆಗೆ ಅರ್ಧ ತಪಲೆ ಕೊಟ್ಟುಬಿಡ್ತ.
ಆದರೆ ಸವತಿಅಕ್ಕೊ ಚೆಂದಲ್ಲಿರ್ತ ಕಾರಣ ಸುಮಿತ್ರೆಗೆ ಅವಿಬ್ರೂ ರಜರಜ ಹಂಚಿ ಕೊಟ್ಟ ಕಾರಣ, ಮೂರೂ ಜೆನಕ್ಕೂ ಪಾಯ್ಸ ಸಿಕ್ಕಿತ್ತು.
ಮುಂದೆ ಅದುವೇ ಯುವರಾಜಂಗಳ ಉದಯಕ್ಕೆ ಕಾರಣ ಆವುತ್ತು.
ಅವರ ಪೈಕಿ ದೊಡ್ಡ ಹೆಂಡತ್ತಿಯ ಮಗ° ಆಗಿ ರಾಮನ ಅವತಾರ ಆವುತ್ತು
~
ಅದು ಒಂದು ಕೆಮಿಲಿ ಕೇಳಿದ ಕತೆ ಆದರೆ, ಇನ್ನೊಂದು ಕೆಮಿಲಿ ಕೇಳಿದ ಕತೆ ಬೇರೆ ಇದ್ದು.
ಈ ಲೋಕಲ್ಲಿ ಅಧರ್ಮವ ನಾಶ ಮಾಡ್ಳೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು ಹತ್ತವತಾರ ಹಿಡ್ಕೊಂಡು ಬತ್ತ° ಹೇಳ್ತದು ನಮ್ಮ ನಂಬಿಕೆ.
ಮೀನಿನ ಆಕಾರದ ಮತ್ಸ್ಯಾವತಾರಂದ ಸುರು ಆಗಿ ಆಮೆ, ಹಂದಿ, ನರಸಿಮ್ಮ, ವಾಮನ, ಪರಶುರಾಮ ಹೀಂಗೇ, ಪ್ರತಿ ಅವತಾರಲ್ಲಿಯೂ ಯೇವದಾರು ಕಂಟಕಕಾರೀ ರಾಕ್ಷಸನ ಕೊಂದು ಧರ್ಮವ ನೆಲೆಮಾಡಿದ ಮಹಾವಿಷ್ಣು.
ಅದರಿಂದ ಮತ್ತೆ ಏಳ್ನೇ ಅವತಾರವೇ ಶ್ರೀರಾಮಂದು.
~

ಬೈಲಕರೆ ಗಣೇಶಮಾವಂಗೆ ಚಂಪೂರಾಮಾಯಣದ ಒಂದು ಶ್ಲೋಕ ಅರಡಿಗು.
ತುಂಬ ವಿಶೇಷದ ಶ್ಲೋಕ ಅದು ಹೀಂಗಿದ್ದು:

ರಾಮನ ಜಾತಕದ ಪಟ (ರಾಮೇಶ್ವರಲ್ಲಿ ಗಣೇಶಮಾವ ತೆಗದ್ಸು)

ರಾಮನ ಜಾತಕ:

ಉಚ್ಛಸ್ಥೇ ಗ್ರಹಪಂಚಕೇ ಸುರಗುರೌ ಸೇಂದೌ ನವಮ್ಯಾಂತಿಥೌ
ಲಗ್ನೇ ಕರ್ಕಟಕೇ ಪುನರ್ವಸು ಯುತೇ ಮೇಷಂಗತೇ ಪೂಷಣೀ |
ನಿರ್ದಗ್ಧುಂ ನಿಖಿಲಾಃಫಲಾಶ ಸಮಿಧೋ ಮೇಧ್ಯಾದಯೋಧ್ಯಾರಣೇಃ
ಆವಿರ್ಭೂತಮಭೂತಪೂರ್ವಮಖಿಲಂ ಯತ್ಕಿಂಚಿದೇಕಂ ಮಹಃ |

(ಉಚ್ಛಸ್ಥೇ = ಉಚ್ಛಸ್ಥಾನಲ್ಲಿ / ಶಕ್ತಿಯುತ ಸ್ಥಾನಲ್ಲಿ, ಗ್ರಹ ಪಂಚಕೇ = ಐದು ಗ್ರಹಂಗೊ, ಸುರಗುರೌ = ಗುರು ಗ್ರಹ, ಸ-ಇಂದೌ = ಚಂದ್ರನ ಒಟ್ಟಿಂಗೆ, ನವಮ್ಯಾಂ = ಒಂಭತ್ತನೇ, ತಿಥೌ= ತಿಥಿಲಿ.
ಲಗ್ನೇ ಕರ್ಕಟಕೇ ಪುನರ್ವಸು ಯುತೇ = ಪುನರ್ವಸು ನಕ್ಷತ್ರದ್ದಿನ, ಕರ್ಕಾಟಕ ಲಗ್ನಲ್ಲಿ, ಮೇಷಂಗತೇ ಪೂಷಣೀ = ಸೂರ್ಯ ಮೇಷರಾಶಿಲಿ ಇಪ್ಪಗ/ಸೌರಮಾನ ಮೇಷ ತಿಂಗಳು
).
ಅವನ ಜಾತಕಲ್ಲಿ – ಐದು ಗ್ರಹಂಗೊ ಉಚ್ಛಸ್ಥಾನಲ್ಲಿದ್ದವಡ; ಗುರು, ಚಂದ್ರ ಎಲ್ಲ ಅವರವರ ಭಾಗ್ಯಸ್ಥಾನಲ್ಲಿ ನಿಂದಿಪ್ಪ ಸಮಯ; ಮೇಷಮಾಸಲ್ಲಿ ಕರ್ಕಾಟಕ ಲಗ್ನಲ್ಲಿ – ಹೇದರೆ ಮಟಮಟ ಮಜ್ಜಾನದ ಹೊತ್ತಿಂಗೆ!
ಜಗತ್ತಿನ ಸಾರ್ವಕಾಲಿಕ ಕಾಲಮಾನಲ್ಲಿ ಅತಿ ಶ್ರೇಷ್ಠವಾದ ಸಮಯ ನೋಡಿ ರಾಮನ ಅವತಾರ ಆತಾಡ.
ವಸಂತಋತುವಿನ, ಶುಕ್ಲಪಕ್ಷದ ನವಮಿಯ ದಿನ, ಪುನರ್ವಸು ನಕ್ಷತ್ರ ನೆಡಕ್ಕೊಂಡಿಪ್ಪ ಮಜ್ಜಾನ –  ರಾಮನ ಉದಯ ಆತಡ.

ಅಸಾಧಾರಣ ಶೆಗ್ತಿ ಹುಟ್ಟುವಗಳೇ ಲೋಕಕ್ಕೆ ಗೊಂತಾವುತ್ತಡ. ಹೋಮಲ್ಲಿ ಪಾಲಾಶ ಸಮಿತ್ತಿನ ಹೇಂಗೆ ಅಗ್ನಿ ಹೊತ್ತುಸಿ ಬಿಡ್ತೋ – ಅದೇ ನಮುನೆ ಅಧರ್ಮದ ನಾಶಕ್ಕಾಗಿ ಶ್ರೀರಾಮ ಹೇಳುವ ಅಗ್ನಿಯ ಆವಿರ್ಭಾವ ಆತು.
ಲಂಕೆಲಿದ್ದ ಅಧರ್ಮಿ ರಾವಣನ ಸಂಹಾರಕ್ಕೆ ದಿನ ನಿಘಂಟುಮಾಡಿಯೇ ಏಳ್ನೇ ಅವತಾರ ವಹಿಸಿಗೊಂಡು ಬಂದದು ಹೇಳ್ತದು ಲೋಕಕ್ಕೇ ಗೊಂತಿದ್ದ ಸತ್ಯ.
~
ಬಾಲ್ಯಾವಸ್ಥೆಲೇ ಬಹು ಚುರ್ಕಿನ ರಾಮಂಗೆ, ಅವನ ತಮ್ಮ –  ಸುಮಿತ್ರೆಚಿಕ್ಕಮ್ಮನ ಮಗ° – ಲಕ್ಷ್ಮಣನ ಚೆಂಙಾಯಿಪ್ಪಾಡು ಜಾಸ್ತಿ. ಎಲ್ಲಿ ಹೋವುತ್ತರೂ ಒಟ್ಟಿಂಗೆ. ಲಕ್ಷ್ಮಣನ ಕಾಸ ತಮ್ಮ ಶತ್ರುಘ್ನಂದಲೂ ರಾಮನೇ ಹತ್ತರೆ.
ಹಾಂಗಾಗಿ – ಭರತ-ಶತ್ರುಘ್ನರು ಚೆಂಙಾಯಿಗೊ ಆದವು!

ಒಂದಿನ ಮಹರ್ಷಿ ವಿಶ್ವಾಮಿತ್ರ ಬಂದು ರಾಮಲಕ್ಷಣರ ವಿದ್ಯಾಭ್ಯಾಸಕ್ಕೆ ಹೇದು ಕರಕ್ಕೊಂಡು ಹೋದನಡ.
ಮನಸ್ಸಿಲ್ಲದ್ದರೂ, ಅಪ್ಪ ಕಳುಸಿಕೊಟ್ಟ°, ಪಾಪ.
ವಿಶ್ವಾಮಿತ್ರನ ಕೈಲಿ ವಿದ್ಯಾಭ್ಯಾಸ ಶಾಸ್ತ್ರೀಯ ಪಾಠಂಗಳ ಕಲ್ತು, ವೇದ ಶಾಸ್ತ್ರ ಪುರಾಣ, ಯುದ್ಧವಿದ್ಯೆ – ದಿವ್ಯಾಯುಧಂಗಳ ಎಲ್ಲವನ್ನೂ ಕಲ್ತುಗೊಳ್ತ.
ಒಂದು ದಿನ ಅವು ಹೋಪಗ ದಾರಿಲಿ ತಾಟಕಿ ಎದುರಾತು. ಅಗಸ್ತ್ಯ ಋಷಿಯ ಶಾಪಂದಾಗಿ ರಾಕ್ಷಸಿಯಾಗಿ ಹೆಸರೇ ಹೇಳ್ತಾಂಗೆ ಅದು ತಾಟಕಿಯಾಗಿ ಲೋಕಕ್ಕೆ ಕಂಟಕ ಆಗಿದ್ದತ್ತು.
ಅದರ ಕೊಲ್ಲು – ಹೇಳಿದ ವಿಶ್ವಾಮಿತ್ರ, ರಾಮ ಒಂದೇ ಪೆಟ್ಟಿಂಗೆ ಕೊಂದು ಹಾಕಿದ°. ತಾಟಕಾರಿ ಆದ°.
ಅಲ್ಲಿಂದ ಸುರುಆವುತ್ತು ರಾಮನ ಲೋಕರಕ್ಷಣೆಯ ಕಾರ್ಯ.
ಇದರೆಡಕ್ಕಿಲಿ, ವಿಶ್ವಾಮಿತ್ರನ ಯಾಗಕ್ಕೆ ಉಪದ್ರ ಕೊಟ್ಟುಗೊಂಡಿದ್ದ ಮಾರೀಚ-ಸುಬಾಹು ರಾಕ್ಷಸರಿಂಗೆ ಬಾಣ ಹೊಡದು ಹಾಕಿದ.
ಸುಬಾಹು ಅಂತೂ – ಸುಬಗಣ್ಣನ ಹೊಗೆಸೊಪ್ಪಿನ ಹಾಂಗೆ ಒಣಗಿ ಸತ್ತೇ ಹೋವುತ್ತ°; ಮಾರೀಚ ಮಾರಿಷಸ್ಸಿಂಗೆ ಹೋಗಿ ಬೀಳ್ತ°!
~

ರಾಮನವಮಿಗೆ ಎಲ್ಲೋರಿಂಗೂ ಒಳಿತಾಗಲಿ ಹೇಳ್ತದೇ ನಮ್ಮ ಗುರುಗಳ ಆಶಯ (http://hareraama.in)

ಸೀತೆ:
ದೂರದ ಮಿಥಿಳಾನಗರದ ಜನಕರಾಜಂಗೆ ಒಂದು ಚೆಂದದ ಮಗಳು – ಭೂಮಿಲಿ ಬಿದ್ದು ಸಿಕ್ಕಿದ್ದಡ, ಸೀತೆ ಹೇದು ಹೆಸರಡ ಅದರದ್ದು.
ಅದರ ಮದುವೆಗೆ ಸ್ವಯಂವರ ಏರ್ಪಾಡು ಮಾಡ್ತನಡ ಜನಕರಾಜ.
ಪಣ ಎಂತರ? ಅವನಲ್ಲಿದ್ದ ಶಿವಧನುಸ್ಸಿನ ಎತ್ತಿ ಹೆದೆಯೇರುಸಿದ ಸಮರ್ಥಂಗೆ ಮಗಳ ಕೊಡುದು.
ಅಬ್ಬಾ.. ಕಾನಾವಣ್ಣನ ಹೋಟ್ಲಿನ ಬಿಲ್ಲು ನೆಗ್ಗುಲೆಡಿಗು, ಆದರೆ ಆ ಶಿವನ ಬಿಲ್ಲಿನ ಆರಿಂಗಾರು ಎಡಿಗೋ –  ಊಹೂಂ!
ಚಿಗುರುಮೀಸೆಯ ರಾಮನ ವಿಶ್ವಾಮಿತ್ರನೇ ಎಳಕ್ಕೊಂಡು ಹೋವುತ್ತ°.
ದಾರಿಲಿ ಒಂದು ಬಂಡೆಕಲ್ಲಿನ ಮುಟ್ಟಿಅಪ್ಪದ್ದೇ, ಚೆಂದದ ’ಅಹಲ್ಯೆ’ ಆಗಿ ಎದ್ದು ಬಂದು ಕೃತಾರ್ಥ ಆವುತ್ತು. ಅದಿರಳಿ.
ಅಂತೂ ವಿಶ್ವಾಮಿತ್ರನ  ಒಟ್ಟಿಂಗೆ  ಮಿಥಿಳೆಗೆ ಎತ್ತಿದ ರಾಮ– ಆ ಯಮಭಾರದ ಶಿವಧನುಸ್ಸಿನ ಹೆದೆಏರುಸಿ ಗುರಿಹಿಡಿವದು ಬಿಡಿ – ಎತ್ತಿ ಒಂದರಿ ಬಳ್ಳಿ ಪಿರಿಕಾಸುಲೆ ಹೆರಡುವಗಳೇ ಬಿಲ್ಲು ಚಟಕ್ಕನೆ ತುಂಡು ತುಂಡು!

ಹೋ, ರಾಮ ಸ್ವಯಂವರಲ್ಲಿ ಗೆದ್ದ! ದಶರಥನ ಸೇರಿ ಎಲ್ಲೋರುದೇ ಬಂದವು. ಧಾರೆ ಎರೆಶೆಂಡು ಕೂಸಿನ ಕರಕ್ಕೊಂಡು ಹೋಪಲೆ.
ಹೊಸ ಭಾವಭಾವಂದ್ರು ದಿಬ್ಬಣ ಉಪಚಾರ ಮಾತಾಡಿಂಡಿಪ್ಪಗಳೇ – ಅದಾ- ಆ ಕೂಸಿನ ತಂಗೆಕ್ಕಳ ಕಂಡತ್ತು –  ಊರ್ಮಿಳೆ, ಮಾಂಡವಿ, ಶೃತಕೀರ್ತಿ!
ದಶರಥಂಗೂ ಮತ್ತೆ ಮೂರುಜೆನ ಮಾಣಿಯಂಗೊ ಇದ್ದವು!
ಎಲ್ಲೋರ ಜಾತಕ ನೋಡುಸಿ ಲಕ್ಷ್ಮಣ, ಭರತ, ಶತ್ರುಘ್ನಾದಿಗೊಕ್ಕೆ ಕಟ್ಟಿಬಿಡ್ತ°. ಚೆ, ಚಾನ್ಸು ಅಪ್ಪೋ!! 😉
ಅದಿರಳಿ.
~
ಸಂಸಾರಸ್ಥರಾಗಿ ಎಲ್ಲೋರುದೇ ಅಯೋಧ್ಯೆಗೆ ಹಿಂತಿರುಗುತ್ತವು. ದಶರಥಂಗೂ ಪ್ರಾಯ ಆತು; ಏನೆಡಿತ್ತಿಲ್ಲೆ.
ಮದಲಾಣ ಕಾರ್ಬಾರು ಈಗ ಕೈಂದ ಹರಿತ್ತಿಲ್ಲೆ. ಮಗಂಗೆ ಪಟ್ಟಕಟ್ಟಿ ಪೆನ್ಶನು ಮಾಡುದೋ ನೋಡಿಗೊಂಡಿತ್ತ°.
ರಾಮಪಟ್ಟಾಭಿಷೇಕದ ವೆವಸ್ತೆ ನೆಡಕ್ಕೊಂಡಿಪ್ಪಗಳೇ – ಕೈಕ್ಕೆಬುದ್ಧಿಯ ಸುಂದರಿ ರಾಗ ಸುರುಮಾಡ್ತು – ಭರತಂಗೆ ಪಟ್ಟ ಆಯೇಕು, ರಾಮ ಕಾಡಿಂಗೆ ಹೋಯೇಕು – ಹೇದು.
ದಶರಥ ಪೂರ್ವಕಾಲಲ್ಲಿ ಮಾತು ಕೊಟ್ಟು ಕೆಟ್ಟಿರ್ತ° ಕೈಕ್ಕೆಗೆ; ಅದು ಈಗ ಅದನ್ನೇ ಹಿಡ್ಕೊಂಡು ಮಾತಾಡ್ತು.
ಆರಿಂಗೆ ಮನಸ್ಸಿಲ್ಲದ್ದರೂ, ಇದ್ದರೂ, ಅಪ್ಪನ ಮಾತು ಒಳಿಶಲೆ ಬೇಕಾಗಿ, ಪಿತೃವಾಕ್ಯ ಪರಿಪಾಲನೆ ಹೇದು ರಾಮ ಕಾಡಿಂಗೆ ಹೋವುತ್ತ°, ಹದ್ನಾಕೊರಿಶ ವನವಾಸ!
ಬೇಕೋ – ಹೆಂಡತ್ತಿಗೆ ಮಾತುಕೊಡ್ತ ಒಯಿವಾಟು – ಕೇಳುಗು ಕೊಳಚ್ಚಿಪ್ಪುಭಾವ°! 😉
ಶ್ರವಣಕುಮಾರನ ಕೊಂದ ತಪ್ಪಿಂಗೆ ಅವನ ಅಪ್ಪಮ್ಮ ಕೊಟ್ಟ ಶಾಪ ಒಂದು ದಶರಥಂಗೆ ಹೀಂಗೆ ಮಾಡಿತ್ತೋ – ಸಾವಕಾಲಲ್ಲಿ ಮಗನ ಬಗೆಗೇ ಚಿಂತೆ! ದಶರಥಂಗೆ ಮುದಿಬ್ರಾಂತೇ ಹಿಡುದು ಹೋಗಿತ್ತು ಅಕೇರಿಗೆ.
~
ಲಕ್ಷ್ಮಣ:

ರಾಮ ಕಾಡಿಂಗೆ ಹೋಪಗ, ಒಟ್ಟಿಂಗೆ ಸೀತೆಯೂ ಬತ್ತು.
ಎಲ್ಲಿ ಹೋದರೂ ಒಟ್ಟಿಂಗೇ  ಬತ್ತೆ – ಹೇದು ಕೈ ಹಿಡುದು ಬಂದ ಹೆಂಡತ್ತಿ ಅಲ್ಲದೋ!
ಅವರ ಒಟ್ಟಿಂಗೇ, ರಾಮನ ತಮ್ಮಂದ್ರಲ್ಲಿ ಪರಮಾಪ್ತ – ಲಕ್ಷಣಂದೇ!
ರಾಮ, ಸೀತೆ, ಲಕ್ಷಣ – ಮೂರೂ ಜೆನ ಅರಮನೆಯ ಸುಪ್ಪತ್ತಿಗೆ ಬಿಟ್ಟು ಕಾಡಿಂಗೆ ಬಂದವು.
ರಾಮನೊಟ್ಟಿಂಗೆ ಸೀತೆ ಬಪ್ಪದು ಸರಿ, ಅದು ಅಂಬಗಾಣ ಸಂಸ್ಕಾರ. ಆದರೆ ಒಡಹುಟ್ಟಿದಮಾತ್ರಕ್ಕೇ ಲಕ್ಷ್ಮಣಂದೇ ಬತ್ತನಲ್ಲದೋ – ಅದು ನಿಜವಾದ ಸಾಹೋದರ್ಯ!
ಅಂತಾ ಅಣ್ಣಂಗೆ ಇಂತಾ ತಮ್ಮನಾಗಿ ಹುಟ್ಟಿದ ಲಕ್ಷ್ಮಣಂದೇ ವಿಶೇಷ ಕಾಣ್ತು ನವಗೆ.

~
ಕಾಡಿಲಿ ಸುಮಾರೆಲ್ಲ ರಾಮಾಯಣ ಆವುತ್ತು. ವಿವರ ಮಾತಾಡ್ಳೆ ಕೂದರೆ ಅದುವೇ ಒಂದು ರಾಮಾಯಣ ಆಗಿ ಹೋಕು.
ಸಂದರ್ಭ ಬಪ್ಪಗ ಮಾತಾಡಿಗೊಂಬ.
ಆದರೆ ಮುಖ್ಯವಾದ್ಸು – ಹನುಮಂತ ಸಿಕ್ಕಿದ್ದು.
ಅಪಹರಣ ಆದ ಸೀತೆಯ ರಾಮ ಹುಡ್ಕಿಂಡು ಹೋಪಗ ದಕ್ಷಿಣಲ್ಲಿ ಸಿಕ್ಕಿದ ’ಮಂಗ’ನೇ ಈ ಹನುಮ.

ಹನುಮ:
ಜಾತಿಗನುಸಾರವಾದ ಮಂಗಬುದ್ಧಿ ಇಲ್ಲದ್ದೆ, ಗಂಭೀರವಾಗಿ, ಸನ್ನಡತೆಯ ಸೇವಕ ಆಗಿ ರಾಮಂಗೆ ಕೊನೆಒರೆಂಗೂ ಒಟ್ಟಿಂಗೆ ಇದ್ದ ವೆಗ್ತಿತ್ವ ಈ ಹನುಮ.
ಮುಂದೆ ಸೀತೆ ಲಂಕೆಲಿ ಇದ್ದು ಹೇಳ್ತದರ ನೋಡಿಕ್ಕಿ ಬಂದು, ಮತ್ತೆ ಸೈನ್ಯ ಸಹಿತ ಯುದ್ಧಮಾಡುವಗ ರಾಮನ ತನ್ನ ಹೆಗಲಮೇಗೆ ಕೂರ್ಸಿಗೊಂಡ ಅದೃಷ್ಟವಂತ°!
ನಂಬಿಕೆಗೇ ಇನ್ನೊಂದು ಹೆಸರು ಹೇಳ್ತ ಹಾಂಗೆ ನಂಬಿಂಡು ಬೆಳದ°
ಸೀತೆಯ ಪಡವಲೆ ಯುದ್ಧ ಮಾಡಿ, ಲಂಕಾಸುರನ ಸೋಲುಸಿ, ಕೊಂದು, ಅಲ್ಲಿ ವಿಭೀಷಣಂಗೆ ಪಟ್ಟಕಟ್ಟುತ್ತವು.
ಪುನಾ ಅಯೋಧ್ಯೆಗೆ ಬಪ್ಪಗ ರಾಮನೊಟ್ಟಿಂಗೇ ಬಂದು ನೆಲೆ ಆವುತ್ತನಲ್ಲದೊ ಹನುಮ –
ಸ್ವಾಮಿಭಕ್ತಿ ಹೇದರೆ ಎಂತರ ಹೇದು ಅವನ ನೋಡಿರೆ ಗೊಂತಕ್ಕಡ!

~
ರಾಮರಾವಣರ ಯುದ್ಧಲ್ಲಿ ರಾವಣನ ಕೊಂದಾದ ಮತ್ತೆ, ಅಲ್ಲಿ ವಿಭೀಷಣಂಗೆ ಪಟ್ಟ ಕಟ್ಟುತ್ತ ಅಲ್ಲದೋ – ಅದೆಲ್ಲ ಆದ ಮತ್ತೆ, ಆ ಚೆಂದದ ಲಂಕೆ ಕಾಂಬಗ ಅಲ್ಲೇ ನಿಂಬದೋದು ಯೋಚನೆ ಬತ್ತು ಲಕ್ಷ್ಮಣಂಗೆ. ಅಷ್ಟಪ್ಪಗ ರಾಮ ಹೇಳುವ ಮಾತು,

ಅಪಿ ಸ್ವರ್ಣಮಯೀ ಲಂಕಾ, ನಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||

(ಅಪಿ – ಆದರೂ, ಸ್ವರ್ಣಮಯೀ ಲಂಕಾ = ಚಿನ್ನಂದ ಕೂಡಿದ ಲಂಕೆ, ನ ಮೇ ರೋಚತೇ = ರುಚಿಸುತ್ತಿಲ್ಲೆ, ಲಕ್ಷ್ಮಣ. ಜನನೀ = ಅಮ್ಮ, ಜನ್ಮಭೂಮಿಃ ಚ = ಹುಟ್ಟಿದ ನೆಲ, ಸ್ವರ್ಗಾತ್ ಅಪಿ = ಸ್ವರ್ಗಂದಲೂ, ಗರೀಯಸಿ = ಹೆಚ್ಚಿಂದು)
ಲಂಕೆಲಿ ಚಿನ್ನವೇ ತುಂಬಿದ್ದರೂ, ಅದು ರುಚಿ ಅಲ್ಲ. ಅಬ್ಬೆಯೂ, ಅಬ್ಬೆಭೂಮಿಯೂ ಸ್ವರ್ಗಂದಲೂ ಮಿಗಿಲಾದ್ಸು.

~
ಮುಂದೆ ರಾಮನ ಕಾರ್ಬಾರಿಲಿ ಅಯೋಧ್ಯೆ ಚೆಂದಕೆ ನೆಡೆತ್ತು.
ಅಂತಾ ಆಡಳಿತ ಮೊದಲೂ ಬಯಿಂದಿಲ್ಲೇಡ, ಮತ್ತೆಯೂ ಬಯಿಂದಿಲ್ಲೇಡ.
ಎಲ್ಲೆಲ್ಲೂ ಸುಭಿಕ್ಷೆ, ಶಾಂತಿ, ಸುಖ, ನೆಮ್ಮದಿ. ಚೆಂದದ ಗುರಿಕ್ಕಾರ್ತಿಕೆ.
ಅದುವೇ “ರಾಮರಾಜ್ಯ” ಹೇದು ಪ್ರಖ್ಯಾತಿ ಆತು.
ಈಗಾಣ ಆಡಳ್ತೆದಾರಂಗಳೂ ರಾಮರಾಜ್ಯ ಕೊಡೇಕಾತು, ಆದರೆ ರಾವಣರಾಜ್ಯ ಆವುತ್ತಾ ಇದ್ದು – ಬೇಜಾರ! 🙁

ಲವ-ಕುಶ ಹೇದು ರಾಮಂಗೆ ಇಬ್ರು ಚುರ್ಕಿನ ಮಕ್ಕೊ ಹುಟ್ಟುವ ಬಗ್ಗೆ ಕತೆ ಇದ್ದಾಡ, ರಾಮಾಯಣದ ಉತ್ತರಕಾಂಡಲ್ಲಿ.  ಅವು ರಾಮನ ಅಶ್ವಮೇಧದ ಅಶ್ವವ ಕಟ್ಟಿ ಹಾಕಿ ಲಡಾಯಿಕಟ್ಟಿ – ಹೋ – ಅದುವೇ ಒಂದು ರಾಮಾಯಣ ಅಪ್ಪದಿದ್ದು ಮತ್ತೆ! 😉
ಅದಿರಳಿ, ಮತ್ತೆ ಎಲ್ಲವೂ ತುಂಬ ಚೆಂದಲ್ಲಿ ಕಳಿತ್ತು.

~

ಅಧರ್ಮ ತುಂಬಿದ ಊರಿಲಿ ಧರ್ಮ, ಶಾಂತಿ ನೆಲೆ ಅಪ್ಪದು ಧೃಡ ಅಪ್ಪದ್ದೇ, ಆ ಮಹಾವಿಷ್ಣು ಒಂದು ಗಳಿಗೆ ಹೆಚ್ಚಿಗೆ ನಿಂದಿದನಿಲ್ಲೆ.
ಅಯೋಧ್ಯಾನಗರವ ಬಳಸಿ ಹರಿವ ಸರಯೂ ನದಿಲಿ ಇಳುದು ಮಹಾನಿರ್ವಾಣ ಹೊಂದುತ್ತ. ಒಟ್ಟಿಂಗೆ ಲಕ್ಷ್ಮಣಾದಿಗಳೂ ಇರ್ತವು.
ನಿಷ್ಠೆಯ ಹನುಮಂತನೂ ನದಿಗೆ ಇಳಿತ್ತ, ಆದರೆ ಅವು ಎಲ್ಲಿಗೆ ಹೋದವು ಹೇಳ್ತದು ಅರಡಿಯದ್ದೆ ಒಪಾಸು ತಿರುಗಿ ಬತ್ತ.
ಹಾಂಗಾಗಿ, ಆ ಮಹಾ ಧರ್ಮಶಕ್ತಿಗೆ ಸೇವೆ ಮಾಡಿದ ಹನುಮ ನಿರ್ವಾಣ ಹೊಂದದ್ದೆ, ಚಿರನೂತನ, ಚಿರಂಜೀವಿ ಆಗಿರ್ತ – ಹೇಳ್ತದು ರಾಮಾಯಣ.

~
ರಾಮನವಮಿಯ ಸುಸಂದರ್ಭಲ್ಲಿ ರಾಮನ ಬಗ್ಗೆ ಮಾತಾಡುದರಿಂದ ಒಳ್ಳೆದು ಬೇರೆ ಯೇವಶುದ್ದಿ ಇದ್ದು. ಅಲ್ಲದೋ?
ಅದಕ್ಕೇ ಬೈಲಿಲಿಯೂ ಈ ವಾರ ಅದೇ ಶುದ್ದಿ.

ಅನೇಕ ಆದರ್ಶಂಗೊ ರಾಮಾಯಣಲ್ಲಿ ಸಿಕ್ಕುತ್ತು.
ನಮ್ಮ ಗುರುಗೊ ಹೇಳ್ತ ರಾಮಕಥೆಯ ಕೇಳಿರೆ ಅಂತೂ – ಮೈ ರೋಮಾಂಚನ ಆವುತ್ತು; ಕತೆಗಳ ಒಳ ಉಪಕತೆಗೊ, ಅದರೊಳ ನೀತಿಕತೆಗೊ – ಎಲ್ಲವೂ ತುಂಬಿದ ಮಹಾಕಾವ್ಯ ನಮ್ಮೆದುರು ಪ್ರಕಟ ಆವುತ್ತು.
ಒಂದೊಂದು ಪಾತ್ರಂಗಳೂ ಅದರದ್ದೇ ಆದ ಆದರ್ಶಂಗಳ ಹೊಂದಿಗೊಂಡಿರ್ತು.
ವೀರಾಧಿವೀರ-ಧರ್ಮ ಸಂಸ್ಥಾಪನಾಚಾರ್ಯ ಶ್ರೀರಾಮನೇ ಮೊದಲುಗೊಂಡು, ಪ್ರೀತಿಯ ಮಡದಿ ಸೀತೆ, ಕಲ್ಲೇರಿಯ-ಮುಳ್ಳೇರಿಯ ಎಲ್ಲಿ ಹೋದರೂ ಒಟ್ಟಿಂಗೇ ಬಪ್ಪ ತಮ್ಮ ಲಕ್ಷ್ಮಣ, ನಿಷ್ಠೆಯ ಸೇವಕ ಹನುಮಂತ°, ಸಂಕ ಹಾಕಿದ ಅಳಿಲು, ಪಾದುಕೆ ಮಡಗಿ ಅಣ್ಣನ ಪರವಾಗಿ ಕಾರ್ಬಾರು ಮಾಡಿದ ಭರತ – ಪ್ರತಿಯೊಬ್ಬನೂ, ಪ್ರತಿಯೊಂದು ಸಂಗತಿಯೂ.
ಅಂತಾ ರಾಮಾಯಣಕ್ಕೆ, ರಾಮಂಗೆ ಈ ರಾಮನವಮಿಲಿ ನಮಿಸುವನೋ?
ರಾಮನ ಆದರ್ಶಂಗಳ ನಾವು ಮೈಗೂಡುಸಲೆ ನೋಡುವೊ°, ಕನಿಷ್ಠಪಕ್ಷ ರಾಮನ ಮೇಗೆ ಭಕ್ತಿಯನ್ನಾರೂ ಹೊಂದುವೊ°.

ಹೊಸನಗರ ಮಠಲ್ಲಿ ’ರಾಮಕಥಾ’ ಆಯೋಜನೆ ಆಯಿದಡ.
ಎಡಪ್ಪಾಡಿಬಾವ° ಹೋವುತ್ತವಡ ನಾಳೆ, ನಾವುದೇ ಹೆರಡ್ಳಿದ್ದು – ನಿಂಗೊ ಬತ್ತಿರೋ?
~

ಒಂದೊಪ್ಪ: ರಾಮರಾಜ್ಯ ಮತ್ತೆ ಬರೆಕಾರೆ, ಹನುಮನಂತಾ ರಾಮಭಕ್ತರು ನಾವಾಯೇಕು – ಅಪ್ಪೋಲ್ಲದೋ?

12 thoughts on “ರಾಮನವಮಿ ದಿನ ರಾಮನ ನಮಿಸುವ°..!

  1. ರಾಮ ನವಮಿ ದಿನ ರಾಮಕಥೆ ಓದಿ ಖುಶಿ ಆತು, ಒಪ್ಪಣ್ಣ೦ಗೆ ಧನ್ಯವಾದ್೦ಗೊ

  2. ಹರೇ ರಾಮ… ಸಮಯೋಚಿತವಾದ ಲೇಖನ ಓದಿ ತುಂಬಾ ಖುಷಿ ಆತು…

    “ನಮ್ಮ ಗುರುಗೊ ಹೇಳ್ತ ರಾಮಕಥೆಯ ಕೇಳಿರೆ ಅಂತೂ – ಮೈ ರೋಮಾಂಚನ ಆವುತ್ತು; ಕತೆಗಳ ಒಳ ಉಪಕತೆಗೊ, ಅದರೊಳ ನೀತಿಕತೆಗೊ – ಎಲ್ಲವೂ ತುಂಬಿದ ಮಹಾಕಾವ್ಯ ನಮ್ಮೆದುರು ಪ್ರಕಟ ಆವುತ್ತು.”
    ನಿಜವಾಗಿಯೂ ಅಪ್ಪು… ಅದೆಷ್ಟು ಲಾಯಕಲ್ಲಿ ಅಬ್ಬೆಯ ಹಾಂಗೆ ಹೇಳಿಕೊಡುತ್ತವು…ರಾಮಾಯಣದ ಆದರ್ಶ ಪಾತ್ರಂಗಳ ಆದರ್ಶವ ನಾವು ಅಳವಡಿಸಿಗೊಲ್ಲೆಕ್ಕು ಹೇಳಿ ಆರು ರಾಮಕಥೆ ಹೇಳಿರೂ ಅನ್ನಿಸುತ್ತು… ಆದರೆ ಗುರುಗಳ ರಾಮಕಥೆ ಕೇಳಿರೆ “ರಾವಣನಂತಹವರ ಕೂಡಾ ನಾವು ದ್ವೇಶಿಸುಲಾಗ… ಅವರ ಆಂತರ್ಯವ ನೋಡಿ ಅವರ ಮೇಲೆ ಪ್ರೀತಿ,ಕರುಣೆ ತೋರುಸೆಕ್ಕು,ಅವರ ಉದ್ದಾರ ಮಾಡೆಕ್ಕು… ” ಹೇಳಿ ಹೇಳಿಕೊಡುತ್ತವು. ಮಂಗಳೂರು ರಾಮಕಥೆಲಿ “ಪಾಪ ಮಾಡುವುದು ಸುಲಭ ಸಾಧ್ಯವಲ್ಲ…”,”ರಾವಣನ ಹಳಿಯುವವರೇ…” ಪದ್ಯಗಳ ಮೂಲಕ ಇದರೆಲ್ಲ ಎಷ್ಟು ಲಾಯಕಲ್ಲಿ ಹೇಳಿಕೊಟ್ಟಿದವು… ಇದೆಲ್ಲ ಸುಖ ಜೀವನದ ಗುಟ್ಟುಗಳ ರಟ್ಟು ಮಾಡುತ್ತು…

    1. ರಾವಣನಂತಹವರ ಮೇಲೆ ಇಂದ್ರಾಣ ದಿನಲ್ಲಿ ಪ್ರೀತಿ,ಕರುಣೆ!!! ಈ ಜಯಕ್ಕ ಎಂತರಪ್ಪ ಹೇಳುದು???
      ರಾವಣನಂತಹವರ ಆಂತರ್ಯವ ನೆನಪುಮಾಡಿ ಅವರ ಮೇಲೆ ಪ್ರೀತಿ,ಕರುಣೆ ತೋರುಸುದು ಹೇಂಗೆ ಹೇಳುದಕ್ಕೆ ಒಂದು ಉದಾಹರಣೆ ಕೊಡುತ್ತೆ…

      ಒಬ್ಬ ನಮ್ಮವ ವಕೀಲ ಇತ್ತಿದ್ದ. ಅವ ಲಂಚ,ಇನ್ನೊಬ್ಬರ ಕಣ್ಣೀರಿನ ಮೂಲಕ ಬೇಕಾದಷ್ಟು ಸಂಪಾದನೆ ಮಾಡಿತ್ತಿದ್ದ. ಹುಗುದು ಹಾಕುವಷ್ಟು ಆಸ್ತಿ ಇತ್ತು. ಆದರೆ ಪಾಪದ ಕೊಡ ತುಂಬಿದರೆ ತಕ್ಷಣ ಅದರ ಫಲ ಕಾಮ್ಬಲೆ ಶುರು ಆವುತ್ತಡ. ಹಾಂಗೆ ಅವನ ಜೀವನಲ್ಲಿಯೂ ಆತು. ಅವನ ಎರಡೂ ಜೆನ ಮಗಂದ್ರು ಆರೋ ಹೊಲೆತ್ತಿಗಳ ಮದುವೆಯಾಗಿ ಅಪ್ಪನ ಆಸ್ತಿಯನ್ನೇ ಅನುಭವಿಸಿಗೊಂಡು ಅಪ್ಪಂಗೆ ತೊಂದರೆ ಮಾಡಿಗೊಂಡು ಇತ್ತಿದ್ದವಡ. ಅವನ ಹೆಂಡತಿಯೂ ಇನ್ನೊಬ್ಬನ ಜೊತೆ ಸೇರಿ ಅವನ ಮೇಲೆ ಜೀವನಾ೦ಶಕ್ಕೆ ಕೇಸು ಹಾಕಿತ್ತಡ. ಅವಂಗೆ ಈಗಾಗಲೇ ಹಲವು ಕಾಯಿಲೆಗ ಇತ್ತಡ. ಇಷ್ಟಾದರೂ ಕರ್ಮ ಫಲಂಗ ಇನ್ನೂ ಇನ್ನೂ ಅವನ ಕೈಲಿ ಪಾಪ ಕೆಲಸವನ್ನೇ ಮಾಡುಸಿಗೊಂಡಿತ್ತು. ಅವ ಹೆಂಡತಿಯನ್ನೇ ಕೊಲ್ಲುಸುವ ಆಲೋಚನೆಲಿ ಇತ್ತಿದ್ದಡ.

      ಅವನ ಅವಸ್ಥೆಯ ನೋಡಿ ಅವನಿಂದಲೇ ಮೊದಲು ಅನ್ಯಾಯಕ್ಕೆ ಒಳಗಾದವ ಒಬ್ಬಂಗೆ ಅವನ ಮೇಲೆ ಪ್ರೀತಿ,ಕರುಣೆ ಬಂತಡ. ಅವನ ಮನಸ್ಸು ತಿರುಗಿಸಿ ಅವನ ಆಸ್ತಿಯೆಲ್ಲ ಒಂದು ಗೋಶಾಲೆಗೆ ಕೊಡುವ ಹಾಂಗೆ ಮಾಡಿದಡ. ಅವನ ಇಂದು ಮಠ ನೋಡಿಗೊಳ್ಳುತ್ತಾ ಇದ್ದಡ. ನಿತ್ಯ ರಾಮ ಸ್ಮರಣೆಲ್ಲಿ ಪಾಪವ ತೊಳಕ್ಕೊಳ್ಳುತ್ತಾ ಇದ್ದಡ. ಅವನಿಂದ ಅನ್ಯಾಯಕ್ಕೊಳಗಾದವ ಅವನ ಮೇಲೆ ಪ್ರೀತಿ,ಕರುಣೆ ತೋರುಸುವ ಬದಲು ದ್ವೇಷ ಭಾವ ಮಡಿಕ್ಕೊಂಡಿದ್ದರೆ ಆರಿಂಗೂ ಯಾವ ಪ್ರಯೋಜನವೂ ಆವುತಿತಿಲ್ಲೇ.

      ಇದು ಸತ್ಯ ಕಥೆಯೇ. ಬಹಿರಂಗವಾಗಿ ನೇರವಾಗಿ ಹೇಳುವ ಹಾಂಗೆ ಇಲ್ಲದ್ದ ಕಾರಣ ಚೂರು ವ್ಯತ್ಯಾಸ ಮಾಡಿದ್ದೆ.

  3. ರಾಮನ ಕಥೆಯ ಎಷ್ಟು ಸರ್ತಿ ಕೇಳಿರೂ ಬೊಡಿಯ. ಹಾಂಗಿಪ್ಪ ವ್ಯಕ್ತಿತ್ವ ಅವನದ್ದು. ರಾಮನ ಕಥೆ ರಾಮನವಮಿಯ ಸಮೆಲಿ ಒಪ್ಪಣ್ಣನ ಬಾಯಿಲಿ ಕೇಳಿ ಕೊಶಿ ಆತು. ಹರೇ ರಾಮ್.

  4. ರಾಮ ಕಥೆ ತುಂಬಾ ಒಪ್ಪೊಪ್ಪ ಆಯಿದು ಒಪ್ಪಣ್ಣೋ….
    ಆದರೆ ಎನಗಿಲ್ಲಿ ಕಾಂಬದು ಒಂದೇ ಪ್ರಶ್ನೆ…
    ರಾಮನೊಟ್ಟಿಂಗೆ ಸೀತೆ ಹೆರಟತ್ತು ಕಾಡಿಂಗೆ, obviously, ಪತಿವ್ರತಾ ಶಿರೋಮಣಿ. ಲಕ್ಷ್ಮಣನೂ ಹೆರಟ, ಅಣ್ಣನ ಮೇಲೆ ಅಗಾಧ ಪ್ರೀತಿ. ಆದರೆ ಊರ್ಮಿಳೆಗೆ ಎಂತಕೆ ವನವಾಸದ ಶಿಕ್ಷೆ? ಅದರ ಒಬ್ಬಳನ್ನೇ ಬಿಟ್ಟಿಕ್ಕಿ ಅನಾಥಳನ್ನಾಗಿ ಮಾಡಿದ್ದು ಯಾವ ನ್ಯಾಯ? ಅನ್ಯಾಯ ಮಾಡಿದ ಲಕ್ಷ್ಮಣ ಹೇಳಿ ಕಾಣ್ತಿಲ್ಲೆಯಾ ನಿಂಗೊಗೆ ಆರಿಂಗೂ….

    (ಒಂದು ಪಿಟಿಶನ್ ಹಾಕ್ಸುವನಾ ಒಪ್ಪಣ್ಣೋ…?)

    1. ಓ ಒಕೀಲ ಬಾವ ಅದೆಲ್ಲ ಅಪ್ಪು ನಿನ್ನ ಚೆನ್ನೈ ಗುರಿಕ್ಕಾರ ಕರುಣಾನಿಧಿ ರಾಮಸೇತು ಇಲ್ಲೆ ಹೇದು ಹೇಳಿತ್ತನ್ನೆ.. ಅದಕ್ಕೆ ಮೊದಾಲು ಒಂದು ಪಿಟಿಶನ್ನು ಹಾಕು ಬಾವ!

      1. ಅದಕ್ಕೆ ಕಂಡಿದಿಲ್ಲೆಡ… ಇರುಳುದೇ ಕಪ್ಪು ಕಣ್ಣಟ್ಕ ಹಾಕುದಲ್ದಾ ಅದು… ಹಾಂಗಾಗಿ. ಅದಕ್ಕೆ ಕಾಣೆಕ್ಕಾರೆ ಅದರ ಅಲ್ಲಿಗೆ ತೆಕ್ಕೊಂಡೋಗಿ ದೂಡಿ ಹಾಕೆಕ್ಕಷ್ಟೆ.

    2. ಅದಕ್ಕೆ ಕಾರಣ ಇದ್ದು… ಇಂದ್ರ ಜಿತುವಿನ ಕೊಲ್ಲೆಕ್ಕಾರೆ ೧೪ ವರ್ಷ ವರಕ್ಕು ಕೆಟ್ಟು ಮತ್ತೆ ೧೪ ವರ್ಷ ಬ್ರಹ್ಮ್ ಚರ್ಯ ಪಾಲಿಸಿದೋನೆ ಆಯೆಕ್ಕಿತ್ತು…. ಅದಕ್ಕೆ ಲಕ್ಷ್ಮಣ ತಯಾರು ಮಾಡಿದ್ದು…

  5. ರಾಮನ ಅವತಾರ…ರಘುಕುಲ ಸೋಮನ ಅವತಾರ….ನಿರುಪಮ ಸಂಯಮ ಜೀವನ ಸಾರ…ಪದ್ಯ ನೆಂಪಾತು,ಇದರ ಓದುವಾಗ.
    ರಾಮ ಮನುಷ್ಯರಲ್ಲಿ ಶ್ರೇಷ್ಠತೆಯ ಸಂಕೇತ. ಉಚ್ಚಸ್ಥೇ ಗ್ರಹ …ಶ್ಲೋಕದ ಪೂರ್ಣ ಅರ್ಥ ಬೇಕಾತು.

  6. ಹರೇ ರಾಮ ॥ ಜೈ ಜೈ ಶ್ರೀರಾಮ ಕಥಾ ।

    ಅತ್ತ್ಯುತ್ತಮ ಶುದ್ದಿಯೋದಿ ಮೈ ಮನ ಪುಳಕ ಆತು. ಉಪಕತೆ ಇಲ್ಲದ್ರೂ ಎಡೆಡೇಲಿ ಉಪಮೆಗೊ ಲಾಯಕ ರಂಜಿಸಿತ್ತು, ಶ್ಲೋಕಂಗಳನ್ನೂ ಮನದಟ್ಟು ಅಪ್ಪ ಹಾಂಗೆ ಶಬ್ದಾರ್ಥಂಗಳನ್ನೂ ನೀಡಿ, ಶ್ರೀರಾಮ ನವಮಿಯ ಶುಭ ಸಮಯಲ್ಲಿ ಬೈಲಿಲಿ ಒಪ್ಪಣ್ಣನ ಸಾರ್ಥಕ ಕಾರ್ಯಕ್ಕೆ ನಮೋ ನಮಃ ಹೇಳಿತ್ತು – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×