Oppanna.com

ರೂಪತ್ತೆಯ ಕಾರಿಲಿ ಜಾಗೆಯೇ ಇಲ್ಲೆಡ..!!

ಬರದೋರು :   ಒಪ್ಪಣ್ಣ    on   30/07/2010    70 ಒಪ್ಪಂಗೊ

ಮೊನ್ನೆ ಒಂದಿನ ಮಾಡಾವಿಂಗೆ ಹೋಗಿತ್ತಿದ್ದು ನಾವು, ಅಪುರೂಪಲ್ಲಿ!

ಓ!  ಮಾಡಾವಿಲಿ ಎಲ್ಲಿ ಹೇಳಿ ನಿಂಗೊಗೆ ಅರಡಿಯದೋ ಏನೋ, – ಪಂಜೆಂದ ಒಂದು ಕೊಟ್ಟ ಮನೆ ಇದ್ದು ಮಾಡಾವಿಲಿ, ಬೈಲಕರೆ ಗಣೇಶಮಾವಂಗೆ ಹತ್ತರೆ ನೆಂಟ್ರು – ಅಲ್ಲಿ ಪುಳ್ಳಿಕೂಸಿನ ಬಾರ್ಸ ಇತ್ತಿದಾ, ನವಗೂ ಹೇಳಿಕೆ ಬಂದಿತ್ತಿದ್ದು.
ಹಾಂಗೆ ಬೈಲಕರೆಗಣೇಶಮಾವನ ಒಟ್ಟಿಂಗೆ ಹೋದ್ದದು…
ಉದೆಕಾಲಕ್ಕೆ ಬೈಲಿಂದ ಹೆರಟದು, ಮುನ್ನಾದಿನ ಮಾತಾಡಿಗೊಂಡ ಹಾಂಗೆ.
ಅಜ್ಜಕಾನಬಾವನೋ, ದೊಡ್ಡಬಾವನೋ ಮಣ್ಣ ಆಗಿದ್ದರೆ ಬೈಕ್ಕು ಅರಡಿಗು, ನವಗೆ ಬೈಕ್ಕು ಅರಡಿಯ ಇದಾ – ಹಾಂಗಾಗಿ ಉದಿಯಪ್ಪಗಾಣ ಕೃಷ್ಣಬಸ್ಸೇ ಗೆತಿ.

~

ಪುತ್ತೂರಿಂಗೆ ಉದಿಯಪ್ಪಗ ಎಂಟೂವರೆ ಅಂದಾಜಿಗೆ ಎತ್ತಿದ್ದು.
ಅಲ್ಲಿಂದ ಮತ್ತೆ ಕರ್ನಾಟಕ ಸ್ಟೇಟುಬಸ್ಸೇ ಆಯೆಕ್ಕಟ್ಟೆ ಇದಾ, ಅದುದೇ ಹಾಂಗೆ, ಹುಣ್ಣಮಗೊಂದು ಅಮಾಸೆಗೊಂದು ಇಪ್ಪದು!
ಹಾಂಗೆ ಬಷ್ಟೇಂಡಿಲಿ ಕಾದೊಂಡಿತ್ತಿದ್ದೆಯೊ. ಪಕ್ಕನೆ ಬಸ್ಸೂ ಬಂತಿಲ್ಲೆ..
ಒಂದು ಪೇಪರು ತೆಗದು ಓದಿ ಆತು – ಎಲ್ಲಾ ಪುಟವುದೇ..
ಗಣೇಶಮಾವ ಇನ್ನೊಂದು ತೆಗದವು, ಅದನ್ನುದೇ ಓದಿ ಆತು. ಎರಡೂ ಪೇಪರಿನ ಎಲ್ಲಾಪುಟವನ್ನೂ ಇಬ್ರಿಂಗೂ ಓದಿ ಆತು, ಉಹೂಂ! ಬಸ್ಸೇ ಬಾರ!!
ಡ್ರೈವರಂಗೆ ಮರದತ್ತೋ ಅಂಬಗ – ಹೇಳಿ ಒಂದು ಕನುಪ್ಯೂಸು ಬಂತು ಒಂದರಿ.!

ಎಷ್ಟು ಹೊತ್ತಾದರೂ ಬಸ್ಸು ಇಲ್ಲದ್ರೆ ಮತ್ತೆಂತರ ಮಾಡುಸ್ಸು, ಬೇಗ ಹೆರಟ್ರೂ ತಡವಾಗಿ ಮನೆಗೆ ಎತ್ತಿರೆ ಉಂಡದೂ ಉಂಡ ಹಾಂಗೆ ಆವುತ್ತಿಲ್ಲೆಡ ಗಣೇಶಮಾವಂಗೆ! 😉
ಕಾರಿಲಿ ಹೋಪೊ° – ಹೇಳಿದವು ಗಣೇಶಮಾವ. ಅಕ್ಕಂಬಗ – ಹೇಳಿ ತಲೆಆಡುಸಿದೆ – ನವಗೆ ಬಸ್ಸಾದರೆಂತ – ಕಾರಾದರೆಂತ?
ಮದ್ಯಾನಕ್ಕೆ ಉಂಬಲಪ್ಪಗ ಎತ್ತಿರಾತು, ಅವಕ್ಕೆ ಪಾತ್ರತೊಳವಲೆ ತಡವಾಗದ್ರೆ ಆತಿದಾ!
~

ಪುತ್ತೂರು ಪೇಟೆ ಪರಿಚಯ ಇದ್ದವಂಗೆ ಅರಡಿಗು – ಅಲ್ಲೇ ಬಷ್ಟೇಂಡಿನ ಬಲತ್ತಿಂಗೆ ಮೇಗಂತಾಗಿ ಹೋದರೆ ಮಾಡಾವು ಕಾರುಗೊ ಇರ್ತು.
ಕಾರಂತಜ್ಜನ ಹೆಸರಿನ ಶಾಲೆಯ ಒತ್ತಕ್ಕೆ ಕೊಡೆಯಾಲಕ್ಕೆ ಹೋವುತ್ತ ಬಸ್ಸುಗೊ ನಿಂದುಗೊಂಡಿರ್ತಿದಾ, ಆ ಬಸ್ಸುಗಳ ಬೆನ್ನಿಂಗೆ – ಅನಿತಾಮಿಲ್ಲಿನ ಎದುರೆ ಸಾಲಾಗಿ ಈ ಮಾಡಾವು ಕಾರುಗೊ.
ಮೊನ್ನೇಣ ಪೂರ್ಣಿಮೆಯ ಚಂದ್ರನ ಹಾಂಗೆ ಬೆಳಿಬೆಳಿ ಬಣ್ಣದ್ದು. ಅಂಬಾಸಿಡರು ಮೋಡೆಲು.
ಡೀಸಿಲು ಹಾಕಿ ಓಡುಸುತ್ತದು. ಪೆಟ್ರೋಲು ಪುರೇಸೆಕ್ಕೆ ಈಗಾಣ ರೇಟಿಲಿ!

ಬೆಳ್ಳಾರೆ ಕಾರುಗೊ, ಪುತ್ತೂರಿಲಿ ಸಾಲಾಗಿ ನಿಂದದು!!
ಬೆಳ್ಳಾರೆ ಕಾರುಗೊ, ಪುತ್ತೂರಿಲಿ ಸಾಲಾಗಿ ನಿಂದದು!!

ಅಡಕ್ಕಗೆ ಏರದ್ದೆ ಪೆಟ್ರೋಲಿಂಗೆ ಮಾಂತ್ರ ಏರಿರೆ ಕಷ್ಟವೇ ಇದಾ! ಅಲ್ಲದೋ?

ಸುಮಾರು ಜೆನರ ಕಾರುಗೊ ಇತ್ತು, ಸಾಲಾಗಿ ಮಡಿಕ್ಕೊಂಡು.
ಗಣೇಶಮಾವ ಆ ಸಾಲಿನ ತೋರುಸಿಗೊಂಡು ಹೇಳಿದವು – ನೋಡು ಒಪ್ಪಣ್ಣ, ಅದು ಕ್ಯೂ ಅದಾ – ಪಷ್ಟು ಬಂದವ° ಪಷ್ಟು ಹೆರಡ್ಳೆ ಅಡ- ಹೇಳಿಗೊಂಡು!
ಮಾಡಾವು ಆಗಿ ಬೆಳ್ಳಾರೆಗೆ – ಆಚಕರೆಮಾಣಿಯ ತಂಗೆಯ ಊರಿಂಗೆ – ಹೋವುತ್ತ ಕಾರಣ ಬೆಲ್ಲಾರೆಬೆಲ್ಲಾರೆ ಹೇಳಿ ಬೊಬ್ಬೆ ಹೊಡಕ್ಕೊಂಡಿರ್ತವು ತುಳು ಡ್ರೈವರಂಗೊ.
ಜೆನ ದಿನಿಗೆಳುವಗ ಎಲ್ಲೊರೂ ಒಟ್ಟಾಗಿರ್ತವು – ಎಲ್ಲೊರೂ ಸೇರಿ ಸಾಲಿನ ಸುರೂವಿನ ಕಾರಿಂಗೆ ಜೆನ ತುಂಬುಸಿ ಕಳುಸುದು.
ಅವಂದು ಹೆರಟ ಕೂಡ್ಳೆ ಅದರಿಂದ ಮತ್ತಾಣ ಕಾರಿಂಗೆ ಜೆನ ತುಂಬುಸುತ್ತ ಕಾರ್ಯ. ದಿನ ಉದಿಯಾದರೆ ಆ ಸಾಲು ಸುರು ಆವುತ್ತು. ಮೂರು ಸಂಧ್ಯೆಯಒರೆಂಗೆ ಇರ್ತು!
ಇದೇ ನಮುನೆ ಒಂದು ಕ್ಯೂ ಬೆಳ್ಳಾರೆಲಿದೇ ಇದ್ದಡ್ಡ..!
ಎರಡು ದಿಕ್ಕೆದೇ ಕ್ಯೂ ನೋಡಿಗೊಂಬಲೆ ಪ್ರತ್ಯೇಕ ಜೆನ ಇಲ್ಲೆಡ, ಅದರಷ್ಟಕೇ ಅಪ್ಪದು. ಎಲ್ಲೊರುದೇ ಕ್ಯೂಪಾಲಕರೇ.

ಹ್ಮ್, ಅದಿರಳಿ.
ಕ್ಯೂವಿಲಿ ಜೆನ ಹಿಡಿಯದ್ರೆ ಇನ್ನಾಣ ಕಾರು ತುಂಬುಸಿಗೊಂಡು ಬತ್ತು.
ಒಂದು ವೇಳೆ ಜೆನವೇ ಆಗದ್ರೆ ಅದರ ಹೊತ್ತು ಅಪ್ಪಗ ಹೆರಡುಗು, ದಾರಿಲಿ ಜೆನ ಸಿಕ್ಕಿರೆ ಹಿಡಿತ್ತಷ್ಟೂ ಹಾಕುಗು.
ಹಿಡಿತ್ತಷ್ಟೂ ಜೆನವೂ ಬಕ್ಕು! ಎಲ್ಲೊರುದೇ ಬಕ್ಕು – ಎಂತಕೆ ಹೇಳಿರೆ ಜೆನಂಗೊಕ್ಕೆ ಪುತ್ತೂರಿಂಗೆ ಹೋಪದು ಹೇಂಗೆ ಹೇಳ್ತದು ಮುಖ್ಯವೇ ಅಲ್ಲ, ಪುತ್ತೂರಿಂಗೆ ಹೋಯೆಕ್ಕಾದ್ದು ಮುಖ್ಯ!
ಬಸ್ಸಿಲಿ ಆದರೂ ಸರಿ, ಕಾರಿಲಿ ಆದರೂ ಸರಿ, ಅಕೇರಿಗೆ ಆರದ್ದಾರು ವಾಹನಲ್ಲಿ ಆದರೂ ಸರಿ.
~

ಕಾರಿನವು ತುಂಬುಸಿದಷ್ಟೂ ಜೆನಂಗಳೂ ತುಂಬುಗು!
ಹ್ಮ್, ಅಪ್ಪು, ತುಂಬುಸುದೇ.
ಪೇಟೆಮಟ್ಟಿಂಗೆ ನೋಡಿತ್ತುಕಂಡ್ರೆ, ಸಾಮಾನ್ಯವಾಗಿ ಒಂದು ಅಂಬಾಸಿಡರು ಕಾರಿಲಿ – ಮೂರು ಜೆನ ಹಿಂದಾಣ ಸೀಟಿಲಿ, ಇಬ್ರು (- ಡ್ರೈವರೂ ಸೇರಿ) ಮುಂದಾಣ ಸೀಟಿಲಿ – ಒಟ್ಟು ಐದು ಜೆನ ಹಿಡಿತ್ತದಲ್ಲದೋ!
ಇವು ಐದು ಜೆನವ ಮುಂದಾಣ ಸೀಟಿಲೇ – ಡ್ರೈವರನ ಬಿಟ್ಟು – ಐದು ಜೆನ ತುಂಬುಸುತ್ತವು!!!
ಹಿಂದಾಣ ಸೀಟಿಲಿ? ಕನಿಷ್ಟ ಎಂಟು!!

~

ಅರ್ನಾಡಿಭಾವ° ಕೆರಿಶಿಲಿ ಹೋಳಿಗೆ ಮಡಗಿದ ಹಾಂಗೆ ಅಟ್ಟಿ ಒಯಿಶುತ್ತವು, ಕ್ರಮಲ್ಲಿ!
ಡ್ರೈವರಂಗೊಕ್ಕುದೇ ಅಷ್ಟು ಸರುವೀಸು ಇರ್ತು. ಅವಕ್ಕೆ ಮಾಂತ್ರ ಅಲ್ಲ – ಹೋಪವಕ್ಕೂ ಕೂದು ಅಭ್ಯಾಸ ಇರ್ತು!
ಒಂದುವೇಳೆ ಅರಡಿಯದ್ದವ° ಹೋದರೆ ಡ್ರೈವರುಗಳೇ ಹೇಂಗೆ ಕೂರೆಕ್ಕು ಹೇಳಿಕೊಡ್ತವು.

ಒಂತೆ ದುಂಬು – ಒಂತೆ ಪಿರವು – ಹೇಳಿಗೊಂಡು, ಅವಕ್ಕೆ ಒಟ್ಟು ಆಯೆಕ್ಕಷ್ಟು ಜೆನ ಆಗದ್ದೇ ವಿನಾ ಸಮಾದಾನ ಆಗ.
ಅಂತೂ ಅಂಬಗ ಸಾದಾರ್ಣ ಜೆನ ತುಂಬಿದ್ದ ಒಂದು ಕಾರು ತೋರುಸಿ ಎಂಗಳತ್ರೆ ಹತ್ತಲೆ ಹೇಳಿದವು.
ಎದುರಾಣ ಸೀಟಿಲಿ ಸಾಮಾನ್ಯವಾಗಿ ಹೆಮ್ಮಕ್ಕೊ ಕೂಪದು. ಗೆಂಡುಮಕ್ಕೊ ಜಾಸ್ತಿ ಇದ್ದರೆ ಡ್ರೈವರನ ಹತ್ತರಾಣ ಜಾಗೆಲಿ ಒಬ್ಬ ಕೂರ್ತವು. ಗೇರಿನ ಕುಟ್ಟಿಯ ಆಚೀಚೊಡೆಲಿ ಕಾಲು ಹಾಯ್ಕೊಂಡು ಕೂರೆಕು. ಅಲ್ಲಿ ಕೂದವಂಗೆ ಒರಗಿಕ್ಕಲೆ ಗೊಂತಿಲ್ಲೆ. ಪ್ರತೀ ಸರ್ತಿ ಗೇರು ಕುಟ್ಟಿಯ ಆಡುಸುವಗ ಈ ಜೆನ ಕಾಲಿನ ಒಂದರಿ ಹಂದುಸೆಕ್ಕು, ಪಾಪ!

ಅಲ್ಲಿಂದ ಅತ್ಲಾಗಿ ಕೂದ ಹೆಮ್ಮಕ್ಕೊ ಒಬ್ಬ ಸೀಟಿನ ಹಿಂದೆ, ಇನ್ನೊಬ್ಬ ಸೀಟಿನ ಎದೂರು – ಹೀಂಗೇ ಕೂಪಲೆ. ಇನ್ನು ಹಿಡಿಯಲೇ ಹಿಡಿಯ ಹೇಳಿ ಆದ ಮತ್ತೆ ನಿಲ್ಲುಸುದು. ಅಲ್ಲಿ ಕೂದ ಹೆಮ್ಮಕ್ಕಳ ಸೀರೆಯ ಇಸ್ತ್ರಿಪೂರ ಹಾಳಕ್ಕು, ಪಾಪ!
ಆ ಬಗ್ಗೆ ಆರುದೇ ಬೇಜಾರು ಮಾಡ್ತದು ಕಾಣ್ತಿಲ್ಲೆ ಮಾಂತ್ರ, ಅದಿರಳಿ!!
ಕಾರಿನ ಹಿಂದಾಣ ಸೀಟಿಲಿ ಕೂರ್ತದು ಅದು ಇನ್ನೊಂದು ಗಮ್ಮತ್ತು!!
ಅಲ್ಲಿ ಕೂಪದುದೇ ಹಾಂಗೆ, ಅಗಾಲ ಸೀಟಿನ ಅಂಬಾಸಿಡರಿಲಿ ಒಬ್ಬ ಸೀಟಿನ ಕೊಡೀಲಿ ಕೂಪಲೆ, ಒಬ್ಬ ಸೀಟಿನ ಹಿಂದೆ ಕೂಪಲೆ – ಒಬ್ಬನ ಬಿಟ್ಟು ಒಬ್ಬ- ಇಸ್ಪೇಟು ಕಳಲ್ಲಿ ಪಾರ್ಟಿ ಮಾಡಿದ ಹಾಂಗೆ!!
ಹಿಂದಾಣ ಸೀಟಿಲಿ ಎದೂರಾಚಿ ಕೂರ್ತವಂಗೆ ಕೂದ್ದದು ಕೂದ ಹಾಂಗೆ ಆಗ, ಪಾಪ!

ತರವಾಡುಮನೆ ಗೋಣಂಗೊ ಬೈಪ್ಪಾಣೆಲಿ ಮೋರೆ ಮಡಗುತ್ತ ಹಾಂಗೆ – ಎದುರಾಣ ಸೀಟಿನ ಎರಗುತ್ತಕಟ್ಟಗೆ ತಲೆ ಮಡಗಿ ಕೂರೆಕ್ಕು. ಅವನ ಗಲ್ಲಲ್ಲೇ ಆದರುಸೆಕ್ಕಷ್ಟೇ, ಎಂತಕೇ ಹೇಳಿತ್ತುಕಂಡ್ರೆ ಬೇರೆ ಹಿಡ್ಕೊಂಬಲೆ ಎಡಿತ್ತಿಲ್ಲೆ..!
ಅವನಿಂದ ಅತ್ಲಾಗಿತ್ಲಾಗಿ ಹಿಂದಂಗೆ ಎರಾಗಿ ಕೂದವ ಪುಣ್ಯವಂತ ಹೇಳಿ ಗ್ರೇಶಿಕ್ಕೆಡಿ, ಅವನ ಕಾಲಮೇಲೆ ಒಂದು ಜೆನ ಬಪ್ಪಲಿದ್ದು.

ಕಾಲಮೇಲೆ ಕೂದ ಜೆನವುದೇ ಪೂರ್ತಿ ಪುಣ್ಯವಂತ ಹೇಳಿ ನಿಜಮಾಡ್ಳೆ ಎಡಿಯ – ಅವನ ಮೇಲೆ ಇನ್ನೊಬ್ಬ ಬಪ್ಪಲೂ ಸಾಕು! ಪಾಪ!
ಇನ್ನು ಎದುರಂಗೆ ಜಾಗೆ ಇಲ್ಲೆ – ಹೇಳುವನ್ನಾರವೂ ಒಬ್ಬನ ಕಾಲಮೇಲೆ ಇನ್ನೊಬ್ಬ ಕೂರ್ತ ಒಯಿವಾಟು ಇದ್ದೇ ಇದ್ದು.
ಪ್ರಾಯ ಆಗಿ ಗೆಂಟು ಬೇನೆ ಬಂದಿದ್ದರೆ ಈ ಕಾಲಮೇಲೆ ಕೂದಿಪ್ಪಗ ಕಷ್ಟ ಅಪ್ಪದಿದ್ದು. ಅದಲ್ಲದ್ದೆಯೂ ಕೆಲವು ಜೆನಕ್ಕೆ ಎಡೆದಾರಿಗೆತ್ತುವಗ ಎರುಗುಹರದ ಹಾಂಗೆ ಕೊಚ್ಚೆಕಟ್ಟುದುದೇ ಇದ್ದು. ಪಾಪ!
ಊರೊಳದಿಕೆ ಮದುವೆ ಆಗಿ ಸಮ್ಮಾನಕ್ಕೆ ಹೋಪದಾದರೆ ಕಾರಿಲಿ ಹೋಪಗ ಕಾಲಮೇಲೆ ಕೂಪಗ ಕೂಸಿಂಗೆ ನಾಚಿಗೆ ಅಪ್ಪದು ಸರ್ವೇ ಸಾಮಾನ್ಯವೂ ಅಪ್ಪು! ಪಾಪ! 😉
ಸೀಟಿನ ಮುಂದೆ ಕೂದವಂಗೆ ಇನ್ನೊಂದು ತಲೆಬೆಶಿ ಎಂತರ ಹೇಳಿರೆ, ಮಾಪುಳ್ಚಿಗೊ ಬಂದರೆ ಅವರ – ಪಿಳ್ಳೆಗೊ, ಕುರುಳೆಗೊ ಇರ್ತವಿದಾ ಸುಮಾರು! – ಆ ಪಿಂಡಂಗೊ ಎಲ್ಲ ಸೀಟಿನ ಮುಂದೆ ಕೂದವರ ಕಾಲಮೇಲೆ! ಪಾಪ!

ಈ ಮಾಪುಳ್ಚಿಗೊ ಬಂದರೆ ಇನ್ನೊಂದು ತಾಪತ್ರೆಯ ಇದ್ದು.
ಅವರ ಕೈಲಿ ಒಂದಾದರೂ ಕರಿ ತೊಟ್ಟೆ ಇಲ್ಲದ್ದೆ ಇಲ್ಲೆ – ಕೊಳಕ್ಕು ನಾರಟೆ ಮೀನು ಇಪ್ಪಂತಾದ್ದು. ಹತ್ತರೆ ಆರು ಕೂಯಿದವು ಎಂತ ಹೇಳಿ ನೋಡುಲಿಲ್ಲೆ. ಕೈಲಿಪ್ಪದರ ಹತ್ತರಾಣೋರ ಮೈಗೆ ತಾಗುಸಿಗೊಂಡೇ ಕೂರುಗು. ಅಜ್ಜಕಾನಬಾವಂಗೆ ಒಂದರಿ ಹೀಂಗೆ ಆಗಿ ಮತ್ತೆ ಅವ ನಾಕು ಸರ್ತಿ ಮಿಂದಿದನಡ!

ಇನ್ನು ಮಾಪ್ಳೆಗಳದ್ದು ಬೇರೆಯೇ ಕತೆ. ಘಮ್ಮನೆ ನಾರ್ತ ಸೆಂಟು ಹಾಕಿಗೊಂಡು ಬತ್ತವು. ಮಿಂದು ಎಷ್ಟು ದಿನ ಆಗಿರ್ತೋ ಏನೊ ಉಮ್ಮಪ್ಪ! ಹತ್ತರೆ ಕೂದವಂಗೆ ನಾಕು ದಿನಕ್ಕೆ ತಲೆಬೇನೆ ಕಮ್ಮಿ ಆಗ.
~

ಎಂಟೂ ಐದೂ ಕೂಡಲಾಗಿ ಹದಿಮೂರು ಜೆನ ಆಗದ್ದೆ ಕಾರು ಷ್ಟಾರ್ಟು ಆಗ ಇದಾ!
ಎಂಗಳೂ ಕೂದೆಯೊ. ಗಣೇಶಮಾವಂಗೆ ಹಿಂದಾಣ ಸೀಟಿಲಿ ಎರಾಗಿ ಕೂಪಲೆ ಸಿಕ್ಕಿತ್ತು. ಒಪ್ಪಣ್ಣಂಗೆ ಗಣೇಶಮಾವನ ಕಾಲಿಲೇ ಕೂಪಲೆ.
ಮೊದಲು ಸಣ್ಣ ಇಪ್ಪಗ ಎಷ್ಟು ಸರ್ತಿ ಕೂಯಿದನೋ – ಏನೋ!
ಈಗ ಈ ಲೆಕ್ಕಲ್ಲಿ ಮತ್ತೊಂದರಿ ಅವಕಾಶ ಆತು. ನಿತ್ಯಕ್ಕೆ ಕೂದರೆ ಗಣೇಶಮಾವ ಬಡಿಗೆ ತೆಗಗೋ ಏನೋ – ಕಾರಿಲಿ ಬೇರೆ ಪೋಕಿಲ್ಲೆ ಇದಾ, ಆ ಅವಕಾಶಕ್ಕೆ ಕಾರಣ ಈ ಡ್ರೈವರನೇ ಅಲ್ಲದೋ? – ಹೇಳಿ ನೆಗೆನೆಗೆ ಅನುಸಿ ಗಟ್ಟಿಲಿ ಕೂದೆ ಗಣೇಶಮಾವನ ಮೊಟ್ಟೆಲಿ!

ಕೆಲವು ಸರ್ತಿ ಜೆನ ಎಲ್ಲ ಸರೀ ಕೂರುಸಿ ಹೆರಟಪ್ಪಗ ಡ್ರೈವರನ ಗುರ್ತದೋರು ಸಿಕ್ಕಿ ಬಪ್ಪದೂ ಇದ್ದು.
ಅಷ್ಟಪ್ಪಗ ಡ್ರೈವರನ ಹತ್ತರೆಯೇ ಕೂರುಸಿಗೊಂಬದು, ಷ್ಟಯರಿಂಗಿನ ಸರೀ ಎದುರೆ! ಅದುವೇ ಕಾರು ಬಿಡ್ತದೋ – ಹೇಳಿ ಕಾಂಬ ಹಾಂಗೆ. ಆ ಜೆನ ಕೂದ್ದರ್ಲಿ ಮತ್ತೆ ಡ್ರೈವರಂಗೇ ಜಾಗೆ ಇಲ್ಲೆ!

ಅಂತೂ ಆಡ್ರೈವರ ಅರ್ದ ಸೀಟಿಲಿ, ಅರ್ದ ಅರ್ದಲ್ಲಿ ಕೂದೊಂಡು ಕಾರು ಬಿಡುದು, ಅದುವೇ ಒಂದು ಗವುಜಿ!
ಕಾಲುನೀಡಿ ಕೂದಂಡು ಎಕ್ಸುಲೇಟ್ರು, ಕ್ಲಚ್ಚು ತೊಳಿವಗ ನವಗೆ ಅದರ ನೋಡ್ಳೇ ಒಂದು ಗವುಜಿ!!
ಕೆಲವು ತಿರ್ಗಾಸುಗಳಲ್ಲಿ ಅಂಬೆರ್ಪು ಅಂಬೆರ್ಪಿಲಿ ಕಾಲಿಲಿ ಪರಡುದರ ಕಂಡ್ರೆ ರೂಪತ್ತೆ ಆರಾಮಲ್ಲಿ ಕಾರುಬಿಡುದರ ಅನುಸಿ ಹೋವುತ್ತು. ಪಾಪ!!
ಹೆರಟು ಅರ್ದ ಮೈಲು ಬಪ್ಪಗ ಯೇವದಾರು ಅಂಗುಡಿ ಎದುರೆ ನಿಂಬಲಿರ್ತು. ಆರದ್ದಾರು ಎಂತಾರು ಸಾಮಾನೋ – ಗೋಣಿಯ ಕಟ್ಟವೋ – ಎಂತಾರು ಡಿಕ್ಕಿಲಿ ತುಂಬುಸಲೆ. ಜೆನಂಗೊ ಪುತ್ತೂರಿಂಗೆ ಬಪ್ಪದುದೇ ಹೀಂಗೇ ಎಂತಾರು ಸಾಮಾನಿಂಗೇ ಅಲ್ಲದೋ?!

ಪೇಟಗೆ ಬಂದಕೂಡ್ಳೇ ಅಂಗುಡಿಗೆ ಹೋಗಿ ಅವರ ಪಟ್ಟಿಕೊಟ್ಟು ಸಾಮಾನುಗಳ ಕಟ್ಟಕಟ್ಟಿ ಮಡಗುತ್ತವು, ಈ ಕಾರು ಬಂದಕೂಡ್ಳೇ ಸಾಮಾನುಗಳ ತುಂಬುಸಿಗೊಂಬದು.
ಪುತ್ತೂರಿಂದ ಬೆಳ್ಳಾರಗೆ ಹೊತ್ತೋಪಗಾಣ ಪೇಪರುಗಳ – ಈ ಕಾರವಲ್ಲ್ ಇದ್ದಲ್ಲದೋ – ಆ ನಮುನೆದರ ಸಾಗುಸುತ್ತದು ಇದೇ ಯೇವದಾರು ಕಾರುಗಳಲ್ಲಿ. ಡ್ರೈವರನ ಕೈಗೆ ಪೇಪರುಕಟ್ಟ ಕೊಟ್ಟು, ಮೇಗೆ ಹತ್ತು ರುಪಾಯಿ ಕೊಟ್ಟು, ಒಂದು ಪೇಪರು ಓದಲೆ ಪ್ರೀ ಕೊಟ್ಟುಬಿಡುದು. ಬೆಳ್ಳಾರಗೆ ಐಸ್ಕೀಮು ಪುತ್ತೂರಿಂದ ಹೋವುತ್ತಿದಾ, ಹೋಪದು ಇದೇ ನಮುನೆ ಯೇವದಾರು ಕಾರಿಲಿ. ಡಿಕ್ಕಿಲಿ ತುಂಬುಸಿರೆ ಒಳ ಕೂದವಂಗೆ ಎಂತದೂ ಸಿಕ್ಕುತ್ತಿಲ್ಲೆ, ಇದು ಪೇಪರಲ್ಲ – ಅಯಿಸ್ಕೀಮು!

ಅಂತೂ, ದರ್ಬೆ ದಾಂಟುವಗ ಕಾರಿನ ಒಳದಿಕೆ, ಡಿಕ್ಕಿಲಿ ಎಲ್ಲವೂ ಹನ್ನೊಂದು ತಿಂಗಳಿನಷ್ಟು ತುಂಬುಗು!!
ಇನ್ನು ಜಾಗೆಯೇ ಇಲ್ಲೆ ಹೇಳಿ ಕಾರೇ ಹೇಳಿದ ಮತ್ತೆ ಕೊಶೀಲಿ ಪುತ್ತೂರು ಬಿಡುದು. ಮತ್ತುದೇ ಆರಾರು ಜೆನ ಹತ್ತುಲೆ ಕೈ ಹಿಡಿಗು, ಡ್ರೈವರ ಬೇಜಾರಲ್ಲಿ ಇಲ್ಲೆ – ಹೇಳಿ ಕೈಲಿ ಮಾಡಿ ತೋರುಸುಗು!  🙂
ಪೇಟೆಯ ಗವುಜಿ ಕಳುದ ಮತ್ತೆ ಕಾರಿನ ಒಳದಿಕೆ ಒಂದು ಲೋಕ ಸೃಷ್ಟಿ ಆವುತ್ತು.

ಒಬ್ಬಂಗೊಬ್ಬ ಪರಿಚಯ ಇಲ್ಲದ್ದ ಮೋರೆಗೊ ಇದ್ದರೂ ಹೊತ್ತುಹೋಪಲೆ ಬೇಕಾಗಿ ಮಾತಾಡುಸಲೆ ಸುರು ಮಾಡ್ತವು!
ಕೇವಲ ಒಂದು ಹತ್ತಿಪ್ಪತ್ತು ಮೈಲು ಹೋಪಷ್ಟರಲ್ಲಿ ಒಳ್ಳೆತ ಗುರ್ತ ಆಗಿರ್ತು.
ಒಬ್ಬನ ಕಾಲಮೇಲೆ ಕೂಪ ಪ್ರಸಂಗ ಬಂತು ಹೇಳಿರೆ ಒಬ್ಬ ಹೊಸ ಆತ್ಮೀಯ ಸಿಕ್ಕಿದ ಹೇಳಿಯೇ ಲೆಕ್ಕ.
ನಮ್ಮ ಕೈಲಿ ಪೇಪರು ಕಂಡ್ರೆ, ಅದರ ನಾವು ಓದದ್ರೆ ಸರಿ – ಮೆಲ್ಲಂಗೆ ಎಳಕ್ಕೊಂಗು. ಆ ಎಳವ ರೀತಿಲಿಯೇ ಪೇಟೆಲಿ ಹೇಳ್ತ ಎಕ್ಸು ಕ್ಯೂಸುಮಿ ಎಲ್ಲ ಬಕ್ಕು! ಎಲ್ಲ ಓದಿ ಆದಮತ್ತೆ ತೆಕ್ಕೊಂಬಗ ಇದ್ದ ಹಾಂಗೇ ಮಡುಸಿ ಕೊಡುಗು. ಆ ರಶ್ಶಿಲಿ ಪೇಪರು ಬಿಡುಸಿ ಓದುದುದೇ ಒಂದು ಕಲೆ.

ಪೇಪರು ತೆಕ್ಕೊಂಬಗ ’ದೂರಾ?’ – ಎತ್ಲಾಗಿ ಹೇಳಿ ಕೇಳಿಯೇ ಕೇಳುಗು. ಮಾಡಾವು ಜೋಯಿಸರಲ್ಲಿಗೆ ಹೇಳಿದೆ.
ಎಂತೋ ಪ್ರಶ್ನೆಗೆಯೋ – ಜಾತಕಪಟ ಹೊಂದುಸುಲೋ ಮಣ್ಣ ಹೋಪದು ಹೇಳಿ ಗ್ರೇಶಿತ್ತೋ ಏನೋ, ಓ ಓ!! ಹೇಳಿತ್ತು ಆ ಜೆನ.
ಮಾಡಾವಿಂದ ಎರಡು ಮೈಲು ಮುಂದೆ ಅಂಕತ್ತಡ್ಕದ್ದಡ ಅದು, ಮೋನಪ್ಪ ಹೇಳಿ ಹೆಸರಡ, ಕೊಡೆಯಾಲಲ್ಲಿ ಎಂತದೋ ಕೆಲಸಲ್ಲಿಪ್ಪದಡ, ಆಯಿತ್ಯವಾರ ಉದಿಯಪ್ಪಗ ಊರಿಂಗೆ ಬಪ್ಪದಡ, ಮನೆಲಿ ಅಪ್ಪಮ್ಮ ಮಾಂತ್ರ ಅಡ, ತಂಗೆಯ ಮದುವೆ ಆತಡ, ಬದಿಯಡ್ಕ ಹೊಡೆಂಗೆ ಕೊಟ್ಟದಡ – ಎಂತೆಂತದೋ ಮಾತಾಡಿತ್ತು!

ಎಂಗೊ ಮಾಂತ್ರ ಅಲ್ಲ, ಕಾರಿನೊಳದಿಕೆ ಒಬ್ಬಿಬ್ಬನ ಬಿಟ್ಟು ಮತ್ತೆಲ್ಲೊರುದೇ ಪರಸ್ಪರ ಮಾತಾಡಿಗೊಂಡಿತ್ತಿದ್ದವು.
ವಿಶಯವಾರು ನೋಡಿರೆ ಕರ್ನಾಟಕದ ಗಣಿ, ಮೆರವಣಿಗೆ, ಕರೆಂಟು, ಮಳೆ – ಪೋನು, ಎಕ್ಸಿಡೆಂಟು, ಯೇವದೋ ಜೆನ ಆಸ್ಪತ್ರೆಲಿ ಇಪ್ಪದು – ಎಲ್ಲವೂ ಬಂತು. ಆರಾರು ಯೇವದರ ಮಾತಾಡಿದ್ದು ಹೇಳ್ತದು ಒಪ್ಪಣ್ಣಂಗೆ ನೆಂಪಿಲ್ಲೆ, ಅದಿರಳಿ.
ರಜ ಮಾತಾಡಿ ಅಪ್ಪಗ ಕುಂಬ್ರ ಎತ್ತಿತ್ತು. ಶೆಗ್ತಿ ಅಂಗುಡಿಯ ಎದುರು ಎತ್ತುವಗ ’ಜಪ್ಯರುಂಡೂ..’ ಹೇಳಿ ಒಂದು ಸೊರ ಕೇಳಿತ್ತು – ಹಾಂಗೆ ಕಾರು ಒಂದರಿ ನಿಂದತ್ತು. ಎಡತ್ತಿನ ಬಾಗಿಲು ಲಟಕ್ಕನೆ ತೆಗಕ್ಕೊಂಡತ್ತು, ಬೆಳಿಒಸ್ತ್ರದ ಒಂದು ಜೆನರ ಕಾಲಮೇಲೆ ಕೂದಂಡಿದ್ದ ಪೇಂಟಿನ ಜೆನ ಇಳುದತ್ತು. ಡ್ರೈವರನ ಹತ್ತರೆ ಬಂದು ಆಯೆಕ್ಕಾದ ಪೈಸೆ ಕೊಟ್ಟಿಕ್ಕಿ ಹೋತು. ಈ ಜೆನ ಒಪಾಸು ಕೂದು ಬಾಗಿಲು ಹಾಯ್ಕೊಂಡತ್ತು, ಕಾಲು ಕೊಚ್ಚೆಕಟ್ಟಿದ್ದರ ಸರಿ ಮಾಡ್ಳೆ ಕೂದಲ್ಲೇ ಒಂದರಿ ಕಾಲು ಮುಂದೆ ಹಿಂದೆ ಮಾಡಿತ್ತು.

ಅಷ್ಟಪ್ಪಗ ಗಣೇಶಮಾವನ ಕಾಲಮೇಲೆ ಕೂದ್ದದು ನೆಂಪಾತು – ಅವಕ್ಕುದೇ ಬೇನೆ ಆವುತ್ತೋ ಏನೋ – ಇಲ್ಲೆಪ್ಪ, ಆಗ – ಒಪ್ಪಣ್ಣ ಅಷ್ಟೆಲ್ಲ ಬಾದಿ ಇಲ್ಲೆ! 😉
ಕುಂಬ್ರಂದ ರಜಾ ಮುಂದೆ ಬಪ್ಪಗ ಇಬ್ರು ಕೈ ಹಿಡುದವು, ಗೆಂಡೆಂಡತ್ತಿ.
ರಶ್ಶಿದ್ದು ಹೇಳಿ ಗೊಂತಿದ್ದರೂ ಡ್ರೈವರ ನಿಲ್ಲುಸಿತ್ತು. ರಶ್ಶಿದ್ದು ಹೇಳಿ ಗೊಂತಿದ್ದರೂ ಅವು ಹತ್ತಿದವು.
ಕಾರಿಲಿ ಕೂದೋರು ಬಾಗಿಲು ತೆಗದು ಒಬ್ಬಂಗಿಪ್ಪ ಜಾಗೆ ಮಾಡಿ ಸ್ವಾಗತ ಮಾಡಿದವು. ಇಪ್ಪ ಜಾಗೆಲೇ ಹೊಂದುಸಿಗೊಂಡು, ಗೆಂಡ ಸೀಟಿಲಿ ಕೂದಂಡು, ಹೆಂಡತ್ತಿ ಗೆಂಡನ ಕಾಲಮೇಗೆ ಕೂದಂಡು, ಬಾಗಿಲು ಹಾಯ್ಕೊಂಡವು. ಕಾರು ಮುಂದೆ ಹೋಗಿಯೇ ಹೋತು.

ಆ ಜೆನಕ್ಕೆ ಗುರ್ತದ ಕೆಲವು ಜೆನ ಇತ್ತಿದ್ದವು ಕಾರಿಲಿ.
ಇಷ್ಟರ ಒರೆಂಗೆ ಆಗಿಯೊಂಡಿದ್ದ ಮಾತುಕತೆಗೆ ಹೊಸ ವೆಗ್ತಿತ್ವ ಸೇರಿತ್ತು. ಆ ಗೆಂಡುಮಕ್ಕೊ ಅದಕ್ಕೆ ಗೊಂತಿಪ್ಪ ಕೆಲವು ಸಂಗತಿಗಳ ಎಲ್ಲ ಹೇಳುಲೆ ಸುರು ಮಾಡಿತ್ತು, ಮಾತಾಡಿ ಮಾತಾಡಿ ಕಾರು ಮುಂದೆ ಹೋಗಿಯೊಂಡೇ ಇತ್ತು.
ತಿಂಗಳಾಡಿಯ ದೊಡಾ ತಿರುಗಾಸು ಎತ್ತಿತ್ತು. ಚೌಕ್ಕಾರು ಮಾವನ ಪೈಕಿ ಆರೋ ಇಲ್ಲಿ ಜಾಗೆ ತೆಗದು ಕೂಯಿದವಡ್ಡ – ಬಡೆಕ್ಕಿಲ ಅಪ್ಪಚ್ಚಿ ಓ ಮೊನ್ನೆ ಸಿಕ್ಕಿಪ್ಪಗ ಹೇಳಿತ್ತಿದ್ದವು.
ಬಸ್ಸಿಲಿ ಬಪ್ಪದಾದರೆ ಇಲ್ಲಿಗೆತ್ತುವಗ ಒಂದರಿ ಒರಕ್ಕುಬಿಟ್ಟು ನೋಡ್ಳಿದ್ದು. ಇಂದು ಕಾರಿಲಿ ಬಪ್ಪದಿದಾ – ಒರಕ್ಕು ಹಿಡುದ್ದೇ ಇಲ್ಲೆ. ಹಿಡಿವಲೆ ಆರುದೇ ಬಿಟ್ಟಿದವಿಲ್ಲೆ!!

ಜೆನಂಗೊ ಹತ್ತಿಳುದು ಆಯ್ಕೊಂಡೇ ಇತ್ತು.
ಬೆಳ್ಳಾರೆಗೆ ಹೋವುತ್ತ ಕೆಲವು ಜೆನಂಗಳ ಮುಖ್ಯವಾಹಿನಿಲಿ ಯೇವದೋ ಒಂದು ಚರ್ಚೆ ಆಯ್ಕೊಂಡೇ ಇತ್ತು. ಎಡೆದಾರಿಲಿ ಹತ್ತಿದ ಜೆನಂಗೊ ಆ ಮಾತುಕತೆಗೆ ಪರಿಕರ್ಮಿಗಳ ಹಾಂಗೆ – ರಜರಜ ಹೊತ್ತು ಸೊರ ಸೇರುಸಿಗೊಂಡು ಇತ್ತಿದ್ದವು.

ಕಟ್ಟತ್ತಾರು – ಹೇಳ್ತ ಒಂದು ಸಣ್ಣ ಊರು ಎತ್ತಿತ್ತು.
ಕೆಲವು ಒರಿಶ ಮೊದಲು ಇಲ್ಲಿ ನಮ್ಮ ಕೇಕುಣ್ಣಾಯರ ಕುಟುಂಬ ಇತ್ತು, ಈಗ ಅವು ಇಲ್ಲಿಂದ ಎದ್ದು ಸುಬ್ರಮಣ್ಯಕ್ಕೆ ಹೋಯಿದವು – ಹೇಳಿದವು ಗಣೇಶಮಾವ. ಗಣೇಶಮಾವಂಗೆ ಸುಬ್ರಮಣ್ಯದೇವಸ್ತಾನವೂ ಅರಡಿಗಿದಾ!

ಈಗ ನೋಡಿರೆ ಅದು ಕಾಸ್ರೋಡಿನ; ಅತವಾ ಪಾಕಿಸ್ತಾನದ ಒಂದು ತುಂಡೋ – ಹೇಳಿ ಕಾಂಬ ಹಾಂಗೆ ಆಯಿದು. ಕೆಲವೆಲ್ಲ ಪಚ್ಚೆಪಚ್ಚೆ ಬಾವುಟಂಗೊ, ವಿಕಾರ ಕನ್ನಡಲ್ಲಿ ಎಂತೆಂತದೋ ಬರಕ್ಕೊಂಡು, ಅವರ ಶಾಲೆಯ ಎದುರೆ ಒಂದು ಧ್ವಜಸ್ತಂಬ – ಕರೆಲಿ ಒಂದು ಲೋಡು ಜಲ್ಲಿ – ಎಲ್ಲವುದೇ ಇತ್ತು. ಎಲ್ಲಾ ಕೆಲಸ ಆದರೂ ಒಂದು ಲೋಡು ಜಲ್ಲಿ ತಯಾರು ಮಡಿಕ್ಕೊಳ್ತವು – ಹೇಳಿ ಗುಣಾಜೆಮಾಣಿ ಹೇಳಿದ್ದು ಮತ್ತೊಂದರಿ ನೆಂಪಾತು!
ಅದಿರಳಿ,
~
ಕೆಯ್ಯೂರು ದೇವಸ್ತಾನದ ದ್ವಾರ ಎತ್ತಿತ್ತು.
ಅರ್ತ್ಯಡ್ಕ ಪುಟ್ಟ ಮಯಿಸೂರಿಂಗೆ ಇಂಜಿನಿಯರು ಕಲಿವಲೆ ಹೋವುತ್ತನಡ, ಬಂದನೋ ಏನೋ – ಅಲ್ಲೇ ಎಲ್ಯಾರು ಕಾಣ್ತನೋ – ಹೇಳಿ ನೋಡಿದೆ, ಊಹೂಂ, ಎಲ್ಲಿಯೂ ಇಲ್ಲೆ.
ಪಳ್ಳತ್ತಡ್ಕಂದ ಕೊಟ್ಟ ಮನೆ ಕಜೆಮೂಲೆಗೆ ಹೋಪದು ಇಲ್ಲಿಯೇ ಇದಾ – ಹೇಳಿ ಗಣೇಶಮಾವ ದಾರಿ ತೋರುಸಿದವು.
ಅಲ್ಲಿ ಒಂದು ಜೆನ ಇಳಿವಗ ಡ್ರೈವರಂಗೆ ಆಶ್ಚರ್ಯ – ಓ ನಿಂಗಳೂ ಇದರ್ಲಿ ಇತ್ತಿದ್ದಿರೋ – ಹೇಳಿಗೊಂಡು.
ಹ್ಮ್, ಗುರ್ತದ ಜೆನವೇ ಹತ್ತಿರೂ ಡ್ರೈವರಂಗೆ ಆ ರಶ್ಶಿಲಿ ಗೊಂತಾಯಿದಿಲ್ಲೆ, ಇಳಿವಲಪ್ಪಗ ಗೊಂತಾದ್ದು!
ಕೆಯ್ಯೂರು ಶಾಲೆ ನೋಡಿಗೊಂಡು ಹೋದೆಯೊ – ತುಂಬ ದೊಡ್ಡ ಇತಿಹಾಸ ಇದ್ದಡ ಈ ಶಾಲಗೆ.

ಅದರ ಎದುರು ಎತ್ತುವಗ ಕಾರು ಸಾದರ್ಣ ಕಾಲಿ ಆಗಿತ್ತು, ಇನ್ನು ಎದುರಾಣ ಸೀಟಿಲಿ ಎರಡು ಮೂರು ಜೆನ ಹೆಮ್ಮಕ್ಕಳುದೇ, ಹಿಂದಾಣ ಸೀಟಿಲಿ ನಾಕೈದು ಜೆನವುದೇ ಇದ್ದದು.
ಶಾಲೆಯ ಎದುರಾಣ ಸರ್ತ ದಾರಿ ಕಳುದು ಒಂದು ಚಡವು ಇಳಿವಗ ಅರ್ದಲ್ಲಿ ನವಗೆ ಇಳಿವಲಾತಿದಾ.
ಮಾಡಾವು ಜೋಯಿಶರ ಮನಗೆ ಹೋಪ ದಾರಿ ಅಲ್ಲೇ ಇಪ್ಪದು. ಇಳಿವಲಪ್ಪ ಜಾಗೆ ನೋಡಿ ಎಂಗಳೂ ’ಜಪ್ಯರ ಉಂಡು’ ಹೇಳಿದೆಯೊ – ಕಾರು ನಿಲ್ಲುಸಿತ್ತು. ಇಬ್ರಿಂಗೆ ಅಪ್ಪ ಪೈಸೆ ಗಣೇಶಮಾವ ಕೊಟ್ಟುಬಿಟ್ಟವು.
ಕಾರು ಬೆಳ್ಳಾರೆಮಾರ್ಗಲ್ಲಿ ಹೋತು, ಎಂಗೊ ಮಾಡಾವು ಜೋಯಿಶರಮನೆಯ ಮಣ್ಣಿನಮಾರ್ಗಲ್ಲಿ ಹೋದೆಯೊ, ನೆಡಕ್ಕೊಂಡು.
~
ಗಣೇಶಮಾವಂಗೆ ಕಾಲುಕೊಚ್ಚೆಕಟ್ಟಿದ್ದಡ, ಸರಿಮಾಡಿಗೊಂಡು ಹೋಪಲೆ ರಜ ನೆಡವಲಿಪ್ಪದು ಒಳ್ಳೆದಾತು ಹೇಳಿಗೊಂಡವು.
ಕಾರು ಇಳಿವಗ ಎಂಗೊಗೆ ಬೇಡದ್ರೂ ಆ ಊರಿನ ಸುಮಾರು ಶುದ್ದಿಗೊ ಗೊಂತಾಗಿತ್ತು, ಕಾರಿಲಿ ಮಾತಾಡಿಗೊಂಡು ಇದ್ದದು!

ಹೀಂಗೇ ನೆಡಕ್ಕೊಂಡು ಹೋಪಗ ಮಾತಾಡಿಗೊಂಡೆಯೊ:
ಈ ನಮುನೆ ವಾತಾವರಣ ಹೀಂಗಿತ್ತ ಜೆನಂಗಳ ಎಡಕ್ಕಿಲಿ ಮಾಂತ್ರ ಸಿಕ್ಕುಗಷ್ಟೇ. ಆರಾಮಲ್ಲಿ ಬೆಳದೋರಿಂಗೆ ಈ ಅನುಭವಂಗೊ ಎಲ್ಲ ಎಲ್ಲಿ ಸಿಕ್ಕುಗು?!

ಕಳುದ ಸರ್ತಿ ಗಣೇಶಮಾವ ಇದೇ ಮಾಡಾವು ಜೋಯಿಶರಲ್ಲಿಗೆ ಬಂದಿಕ್ಕಿ, ಮದ್ಯಾಂತಿರುಗಿ ಹೆರಟವಡ. ಮಾರ್ಗದ ಕರೆಲಿ ಬಂದು ನಿಂದಿತ್ತಿದ್ದವು, ಪಕ್ಕನೆ ರೂಪತ್ತೆಯ ಕಾರು ಬಂತಡ! ಅದಕ್ಕೆ ಈಗ ಕಾರು ಸರೀ ಬಿಡ್ಳೆ ಅರಡಿತ್ತು, ಮೊದಲಾಣ ಹಾಂಗೆ ಅಲ್ಲ!!
ಗಣೇಶಮಾವಂಗೆ ರೂಪತ್ತೆಯ ಗುರ್ತ ಸಿಕ್ಕಿತ್ತು. ಇವಕ್ಕೆ ಗುರ್ತ ಸಿಕ್ಕಿದ್ದು ರೂಪತ್ತೆಗೂ ಗೊಂತಾತು! ಚೆ!!
ಇನ್ನು ನಿಲ್ಲುಸದ್ದೆ ಆವುತ್ತೋ – ಬಾರಿ ಕಷ್ಟಲ್ಲಿ ಹತ್ತುಮಾರು ಮುಂದೆ ಹೋಗಿ ನಿಲ್ಲುಸಿತ್ತಡ.
ಓ, ಎಂತಬಾವ – ದೂರ – ಹೇಳಿ ಕೇಳಿತ್ತಡ. ಹೀಂಗೀಂಗೆ – ಜೋಯಿಶರಲ್ಲಿಗೆ ಬಂದೋನು, ಇನ್ನು ಪುತ್ತೂರಿಂಗೆ ಹೋಪದು – ಹೇಳಿದವಡ.

ರೂಪತ್ತೆ ಕಾರು, ಜಾಗೆಯೇ ಇಲ್ಲದ್ದದು!!
ರೂಪತ್ತೆ ಕಾರು, ಜಾಗೆಯೇ ಇಲ್ಲದ್ದದು!!

ರೂಪತ್ತೆಯೂ ಪುತ್ತೂರಿಂಗೇ ಹೋಪದಡ, ಆದರೆ ಕಾರಿಲಿ ಜಾಗೆ ಇಲ್ಲೆನ್ನೆ – ಹೇಳಿತ್ತಡ!!
ರೂಪತ್ತೆದು ಹದಾ ಕಾರು, ತುಂಬ ದೊಡ್ಡದೇನಲ್ಲ. ಎಂತ- ಐಟೆನ್ನೋ – ಎಂತದೋ ಮೋಡೆಲ್ಲು!
ಆ ಕಾರಿಲಿ ಆದಿನ ಅವರ ಗೆಂಡ ಇತ್ತಿದ್ದವು, ಹಿಂದಾಣ ಸೀಟಿಲಿ ಎರಡು ಮೂರು ಬೇಗುದೇ ಹೂದಾನಿಯುದೇ ಮಡಿಕ್ಕೊಂಡಿತ್ತಡ, ಅಷ್ಟೇ.
ಆದರೆ ಹೊಸಬ್ಬ ಒಬ್ಬ ಕೂರ್ತರೆ ರೂಪತ್ತೆಕಾರಿಲಿ ಜಾಗೆಯೇ ಇಲ್ಲೆ!!
ಈ ಸಂಗತಿ ಮಾತಾಡಿಗೊಂಡು ನೆಡವಗ ಮಾಡಾವು ಜೋಯಿಶರ ಮನೆಮೇಲ್ಕಟೆ ಎತ್ತಿತ್ತು.
ಚೂಂತಾರು ಬಟ್ಟಮಾವ ಜೋರು ಜೋರು ಮಂತ್ರ ಹೇಳುದು ಕೇಳಿಗೊಂಡಿತ್ತು.
ಒಪ್ಪಣ್ಣಂಗೆ ರೂಪತ್ತೆಯ ಕಾರಿನ ಬಗ್ಗೆಯೇ ಅನುಸಿಗೊಂಡು ಇತ್ತು.

ರೂಪತ್ತೆಯ ಹಾಂಗೆ ಅಂತೇ ಕಾಲಿ ಕಾರು ಓಡುಸಿರೂ ಇನ್ನೊಬ್ಬಂಗಪ್ಪಗ ಜಾಗೆ ಇಲ್ಲೆ ಹೇಳ್ತವು ನಮ್ಮ ನೆಡುಕೆ ಇದ್ದವೋ –ಹೇಳಿ ಆಗಿ ಹೋತು.
ಆ ಮಟ್ಟಿಂಗೆ ನಮ್ಮ ಪಾಲೆಪ್ಪಾಡಿ ಅಜ್ಜನ ನೋಡಿ ನಿಂಗೊ, ಎಲ್ಲಿಗಾರು ಜೀಪು ತೆಕ್ಕೊಂಡು ಹೋದರೆ ಹಿಡಿತ್ತಷ್ಟು ಜೆನರ ಕರಕ್ಕೊಂಡು ಬಕ್ಕು! ಆರನ್ನೂ ಬಪ್ಪದು ಬೇಡ ಹೇಳವು. ನೆರೆಕರೆಲಿ ಆರಿಂಗಾರು ಹೋಪಲಿದ್ದಾಳಿ ಅವ್ವೇ ಸ್ವತಃ ಕೇಳುಗು. ಒಪಾಸು ಬಪ್ಪಗಳೂ ಹಾಂಗೆಯೇ. ಗುರ್ತದವರ ಕಂಡ್ರೆ ಕೂಡ್ಳೆ ಹತ್ತುಸಿಗೊಂಗು.

ಅವರ ಜೀಪಿಲಿ ಹೇಂಗೆ ಜಾಗೆ ಅಪ್ಪದು?
ಪುತ್ತೂರುಬೆಳ್ಳಾರೆ ಕಾರಿಲಿ ಎಷ್ಟು ಜೆನ ಬೇಕಾರೂ ಹಿಡಿತ್ತು, ಅಲ್ಲಿ ಹೇಂಗೆ ಜಾಗೆ ಅಪ್ಪದು?
ಅವ್ವು ಪೈಸೆಗೇ ಮಾಡುದಾದಿಕ್ಕು. ಆದರೆ ಹೋಯೆಕ್ಕಾದವನ ಎತ್ತುಸುವ ಒಳ್ಳೆ ಮನಸ್ಸು ಇದ್ದಲ್ಲದಾ?
ಗುರ್ತ ಇಲ್ಲದ್ದರೂ ಆತ್ಮೀಯವಾಗಿ ಮಾತಾಡುಸುವ ಗುಣವೂ ಇದ್ದು.

ಒಂದೊಪ್ಪ: ಜಾಗೆ ಇರೆಕಪ್ಪದು ಹೃದಯಲ್ಲಿ. ಕಾರಿಲಿಯೂ ಅಲ್ಲ, ಮನೆಲಿಯೂ ಅಲ್ಲ, ಎಂತ ಹೇಳ್ತಿ?

70 thoughts on “ರೂಪತ್ತೆಯ ಕಾರಿಲಿ ಜಾಗೆಯೇ ಇಲ್ಲೆಡ..!!

  1. engala sambandadavu obba ittiddavu aa kaalakke tumba srimantaru Ambasodor caru andinge doddadu avakke navu mudantagiyu avu paduvantagiyu hovuttare duurandale kantittu kushala maataadiye kalusugu.appi tappi navu avvu ebru onde hodenge hoovuttre avakke kanle kaana ati miri sikkibiddare enage oo elli shankara bhavanalli ondu chuuru kelasa eddu hagagi ningo munduvarsi heli helugu.Hangaagi Roopatte carilli jaage elladdadu vishesha alla.

  2. ರೂಪತ್ತೆಯ ಕಾರಿಲ್ಲಿ ಮಾಂತ್ರ ಅಲ್ಲ, ಈಗೀಗ ಕೆಲಾವು ಜನಂಗಳ ಕಾರಿಲ್ಲಿ ಜಾಗೆಯೇ ಇರ್ತಿಲ್ಲೆ. ಹೋಪದು ಅದೇ ದಾರಿಲಿಯೇ ಆದರೂ, “ಎನಗೆ ಓ ಅಲ್ಲಿ ರಜ್ಜ ಹೊತ್ತು ಬೇರೆ ಕೆಲಸ ಇದ್ದು… ಹಾಂಗಾಗಿ ನಿಂಗೊಗೆ ತಡವಕ್ಕಾ ಹೇಳಿ…” ಹೇಳಿಯೊಂಡು ಮೆಲ್ಲಂಗೆ ಜಾರುಲೆ ನೋಡ್ತವು.
    ನಮ್ಮ ಬೈಲಿಲ್ಲಿ ಕಾರು ಇಪ್ಪ ಮನೆಯವಕ್ಕೆ ಮಾಂತ್ರ ಹೇಳಿಕೆ ಹೇಳ್ತ ಒಂದು ಕೆಟ್ಟ ಸಂಪ್ರದಾಯ ಸುರು ಆವುತ್ತಾ ಇದ್ದು. ಕಾರು ಇಪ್ಪ ಮನೆಯ ಹತ್ರೆ ಒಂದು ಬೈಕ್ ಮಾಂತ್ರ ಇಪ್ಪ ಮನೆ ಇದ್ದರೆ ಅದರ ಬಿಟ್ಟು ಹೇಳಿಕೆ ಹೇಳ್ತವು. ಅದರ ಅರ್ಥ ಅವಕ್ಕೂ ಇವಕ್ಕೂ ಸರಿ ಇಲ್ಲೆ ಹೇಳಿ ಅಲ್ಲ, ಜೆಂಬಾರದ ಮನೆಯವಂಗೆ ಗತ್ತು ಹೆಚ್ಚಾಯಿದು ಹೇಳಿ ಅರ್ಥ. ಕಾರು ಇಪ್ಪ ಮನೆಯವರ ಮಾಂತ್ರ ಬರ್ಸಿದರೆ ಹಾಲ್ ಎದುರು ತುಂಬ ವಾಹನ ಕಾಂಬಲೆ ಸಿಕ್ಕುಗಿದಾ… ಹಾಂಗೆ.

    1. ಹರೀಶಣ್ಣಾ.. ಮನೆ ಸಣ್ಣ ಆದಷ್ಟು ಮನಸ್ಸು ದೊಡ್ಡ ,ಮನೆ ದೊಡ್ಡ ಆದಷ್ಟು ಮನಸ್ಸು ಸಣ್ಣ ಹೇಳಿ ಆತು.. ( ಮನೆ ಯ ಕಾರು ಹೇಳಿ ಓದಿಗೊಂಬ)
      ಕಾರಿಲಿ ಹೋದರೂ ನಡದು ಹೋದರೂ ಎತ್ತೊದು ಅಲ್ಲಿಗೆ ಅಲ್ಲದಾ?? ಜೆನಂಗೊಕ್ಕೆ ಈ ಸತ್ಯ ಗೊಂತಿದ್ದರೆ ಎಲ್ಲ ಸರಿ ಅಕ್ಕು.

      1. ನಿಂಗೊ ಹೇಳಿದ್ದು ನೂರಕ್ಕೆ ನೂರು ಸತ್ಯ. ಜಂಬಾರಂಗೊಕ್ಕೆ ಕಾರಿಲ್ಲಿ ಬಪ್ಪವು ಊಟಕ್ಕಪ್ಪಗ ಎತ್ತುವವೇ ಹೆಚ್ಚು. ನೆಡಕ್ಕೊಂಡು, ಬಸ್ಸಿಲಿ ಬಪ್ಪವು ಚೂರು ಮೊದಲೇ ಬತ್ತವು, ಸುದರಿಕೆಯೂ ಮಾಡ್ತವು. ಕಾರಿಲ್ಲಿ ಬಂದವಕ್ಕೆ ಹೊಟ್ಟೆ ಬಂದಿರ್ತು ಇದಾ… ಹಾಂಗಾಗಿ ಬಡುಸುತ್ತ ಕೆಲಸಕ್ಕೆ ಆರಾದರೂ ಇದ್ದರೆ ಅವು ಮೆಲ್ಲಂಗೆ ಜಾರುತ್ತವು.

  3. ಮಾಡಾವುಗೆ ಕಾರಿಲಿ ಹೋಪ ಅನುಭವವೇ ಬೇರೆ ಅಲ್ಲದೋ … 😛
    ಕಾರ್ ಲಿ ಜಾಗೆ ಇದ್ದರೂ ಬಿಟ್ಟಿಕ್ಕಿ ಹೋಪದು ಬೇಜಾರಾದ ವಿಷಯವೇ ..
    ಆದರೆ ಕಷ್ಟ ಎಂತರ ಹೇಳಿರೆ…2 ಸರ್ತಿ ಕರಕ್ಕೊಂಡು ಹೋದರೆ ಅದೇ ಜನಂಗೋ ಮತ್ತಾಣ ಸರ್ತಿ ಕಾರ್ ಲಿ ಫುಲ್ ಲೋಡ್ ಬಾಳೆಕಾಯಿಯೋ ,ಅಡಕ್ಕೆಯೋ,ಹಿಂಡಿಯೋ ಆಗಿ ಕಾರ್ ನ ಲೋಡ್ capacity ಫುಲ್ ಆಗಿದ್ದು ಬಿಟ್ಟಿಕ್ಕಿ ಹೋದರೆ 2 ಸರ್ತಿ ಕರಕ್ಕೊಂಡು ಹೋಗಿ ಉಪಕಾರ ಮಾಡಿದವು ಗ್ರೆಶುತ್ತವಿಲ್ಲೇ …ಈಗ ಬಿಟ್ಟಿಕ್ಕಿ ಹೊದ್ದು ತಪ್ಪು ಗ್ರೆಶುತ್ತವು… ಜನಂಗಳ ಈ ಆಲೋಚನಾ ಕ್ರಮವೇ ಕಷ್ಟದ್ದು ..

  4. ವಾಹ್! ಶುದ್ದಿ ಭಾರೀ ಲಾಯ್ಕಾಯಿದು. ಲಘು ಬರಹದ ಹಾಂಗೆ. ಊರಿಲಿ ನಮ್ಮ ನಿತ್ಯಾನುಭವವ ಚೆಂದಲ್ಲಿ ವಿವರುಸಿದ್ದಿ.
    ಎಂಗಳ ಬಂಡಾಡಿ ಹೊಡೆಲಿ ಸರ್ವೀಸು ಜೀಪುಗೊ ಇಪ್ಪದಿದಾ. ಅದರಲ್ಲಿದೇ ಇಂಥದೇ ಅನುಭವ. ಕಾರಿಲಿ ಒಳದಿಕೆ ಮಾತ್ರ ಜನ ತುಂಬುಸುದು. ಆದರೆ ಜೀಪಿಲಿ ಹೆರವುದೇ ಜನ! ಹಿಂದಾಣ ಹೊಡೆ ಪೂರ್ತಿ ಮುಚ್ಚುವ ಹಾಂಗೆ ನೇತುಗೊಂಡು ನಿಲ್ತವು. ಅದರ ನೋಡುವಾಗಳೇ ಹೆದರಿಕೆ ಆವುತ್ತು. ಕಾಲಿ ಸಿಗ್ನಲ್ ಲೈಟಿನ ಮೇಲೆ ಕಾಲುಮಡುಗಿ, ಜೀಪಿನ ಮೇಲಾಣ ಹೊಡೆಯ ಹಿಡ್ಕೊಂಡು ನೇಲ್ತವು. ಇನ್ನು ಡ್ರೈವರಿನ ಅರ್ದ ಶರೀರ, ಒಂದೊಂದರಿ ಕಾಲು ಶರೀರ ಮಾತ್ರ ಜೀಪಿನೊಳ ಇಪ್ಪದು.
    ಬೇರೆ ಎಲ್ಲಿಯಾರು ಸಿಕ್ಕುಗಾ ಇಂಥಾ ಎಕ್ಸ್‌ಪರ್ಟ್ ಡ್ರೈವರುಗೊ?!

    ರೂಪತ್ತೆಯಾಂಗಿಪ್ಪವು ದಾರಿಮಧ್ಯಲ್ಲಿ ಕಾರು ಹಾಳಾದರೆ ಹೀಂಗಿಪ್ಪ ಸರ್ವೀಸು ಕಾರಿಲೇ ಹೋಯೆಕ್ಕಾದ ಪರಿಸ್ಥಿತಿ ಬಕ್ಕು ಅಲ್ಲದಾ? ಒಟ್ಟಿಂಗೆ ಸಹಾಯಕ್ಕೆ ಆರೂ ಇರ್ತವಿಲ್ಲೆ, ಪಾಪ!

  5. ರೂಪಕ್ಕೆನ ಕಾರ್ ಸೂದು ಎಂಕ್ಲಾ ಕಾರ್ ಬೋಡು ಪಡ್ದ್ ಮನಸ್ಸಾತ್ಂಡ್. ಅಂಚಾದ್ ಒಂತೆ ಯೆಚ್ಚ ಸಂಬಲ ಕೊರ್ಪಿನಾಡೆ ಪೋಯೆ.
    ಬಾಣಾರೆ, ಎಲ್ಲಂಜಿ ಬರ್ಪೆ.

  6. Oppannana brava shaili thumba, thumba khushi aathu. Kelavondu upamego nijavaagiyu adbhutha !!. Oppannana jeevananubhava, samyagdrishti ananyavaaddu.
    aanu yeega oorinda yeshto doorada saudi arabiallippadu. oppannana barahango odire ondari ooringe bandu hoda haange avuthu.

  7. ಬಾಣಾರೆ… ಈರ್ ರೂಪಕ್ಕೆನ ಮಿತ್ತ್ ಇಂಚ ದೂರು ಪಾಡ್ರ ಬಲ್ಲಿ. ಆನಿ ಎನ್ನ ಮಗಲೆನ್ ಹಾಸುವತ್ರೆಗ್ ಲೆತಂಪೋನಗ ಕಾರ್ ಡ್ ಬರ್ಪಾರಾಂದ್ ಕೇಣ್ತೆರ್. ಆರೆನ ಮನಸ್ಸ್ ಮಲ್ಲೆ….

    1. ಈ ಹುಳ್ಳಾಣ, ಈ ಗಾಳಿ ಪಾಡ್ಯಾರ ಬರ್ಪ ಪಂಡು ಯಾನ್ ಬಾಣಾರೆಟ ಮರ್ದು ಬುಡ್ಯರ ಒತ್ತೊಂಡಿನ.. ಮುಲ್ಪತವು ಯಾವುಜ್ಜಿ ಪಂಡು ಮೂಡಾಯಿ ಪೋತಗೆ..

  8. super ……………
    ye, oppano……. ondoppa anthu suvarnnaksharalli baradu madugekku……………

  9. ಮಾಡಾವು, ಬೆಳ್ಳಾರೆ ಕಾರಿನ ಬಗ್ಗೆ ಬರದ ಈ ಲೇಖನ ಒಳ್ಳೆದಾಯಿದು…
    ಎನಗನ್ಸುತ್ತು ಈ ಪೆಟ್ರೋಲಿಂಗೆ ರೇಟು ಹೆಚ್ಚಪ್ಪಲೆ ರೂಪತ್ತೆಯಂತವೆ ಕಾರಣ ಆವ್ತವು ಕೆಲವು ಸತ್ತಿ…
    ಕಾರು ಖಾಲಿ ಹೋಪಗ ಜನ ಹಾಕ್ಯಾರೆ ಅಷ್ಟಾದರೂ ಉಳಿತಾಯ ಅಕ್ಕನ್ನೆ…

    1. ಅರ್ತ್ಯಡ್ಕ ಮಾಣೀ…
      ನೀನು ರಾಮಜ್ಜನ ಕೋಲೇಜಿಂಗೆ ಹೋಪಗ ಈ ನಮುನೆ ಎಂತಾರು ಆಯಿದೋ?
      ನೆಂಪಾದರೆ ಶುದ್ದಿ ಬರದು ಬೈಲಿಂಗೆ ಕೊಡು, ಆತೋ? ಏ°?

  10. Shuddi Bhari layikayidu………. Odiyappaga Sannadippaga karili hoddu Nempagi Kalu pura Kocche Kattittu.

  11. ತುಂಬಾ ಲಾಯ್ಕಾಯ್ದು ಒಪ್ಪಣ್ಣ. ದೊಡ್ಡವರ ” ಸಣ್ಣತನ”ವ ಭಾರೀ ಸೂಕ್ಷ್ಮವಾಗಿ ಹೇಳಿದ್ದೆ..

  12. ಒಪ್ಪಣ್ಣ, ಶುದ್ದಿ ಲಾಯಕ ಆಯಿದು.. ಎಂಗಳ ಊರಿನ ಕಾರುಗಳ ಮಹಿಮೆಯ ಲೋಕಕ್ಕೆ ಹೇಳಿದೆ..!!!! ಈ ಅನುಭವ ಸಾಮಾನ್ಯ ಎಲ್ಲೋರಿಂಗೆ ಒಂದರಿ ಆದರೂ ಆವುತ್ತು.. ಏನೇ ಆಗಲಿ ಕಾರು ಡ್ರೈವರ್ ಗಳ ತಾಳ್ಮೆಯ ಮೆಚ್ಚೆಕ್ಕಾದ್ದೆ!! ಹೆಂಗಿಪ್ಪವು ಬಂದರೂ ಅವರ ಹೊಂದುಸಿಗೋಳ್ತವು… ಅರ್ನಾಡಿ ಭಾವ° ಹೋಳಿಗೆ ಅಟ್ಟಿ ಒಯಿಶುದು ರಜ್ಜ ಅತ್ಲಾಗಿ ಇತ್ಲಾಗಿ ಅಕ್ಕು ಆದರೆ ಇವು ಜೆನಂಗಳ ಕೂರುಸುದು ರಜ್ಜವೂ ಬದಲ.. ಇಳುದಪ್ಪಗ ಮನುಷ್ಯರಿನ್ಗೆ ಕಾರಿಲೆ ದೇಹದ ಭಾಗ ಯಾವುದಾದರೂ ಒಳುದತ್ತೋ ಹೇಳಿ ಅಕ್ಕು, ಅಷ್ಟು ಮರಗಟ್ಟಿರ್ತು!!! ರೂಪತ್ತೆಯ ಹಾಂಗಿಪ್ಪವು ತುಂಬಾ ಜೆನ ನಮ್ಮ ಸುತ್ತ ಇರ್ತವು.. ಅಷ್ಟು ಬೇಗ ಅಂತೋರು ಬದಲವು.. ಒಂದೊಪ್ಪ ಲಾಯಕ ಆಯಿದು.. ನೀನು ಹೇಳಿದ ಹಾಂಗೆ ಮನಸ್ಸಿದ್ದರೆ ಏವ ಕಾರಿಲೂ ಜಾಗೆ ಅಕ್ಕು.. ಇಲ್ಲದ್ದರೆ ಕಾರಿಲಿ ಅಲ್ಲ ಅವರ ಬಂಗಲೆಯ ಹಾಂಗಿದ್ದ ಮನೆಲೂ ಆರಿಂಗೂ ಜಾಗೆ ಇರ ಅಲ್ಲದಾ?
    ಒಪ್ಪಣ್ಣ, ಮೊನ್ನೆ ಮಾಡಾವಿಂಗೆ ಬಂದಪ್ಪಗ ನಮ್ಮ ಮಾಷ್ಟ್ರು ಮಾವನ ಸಣ್ಣ ಮಗ° ಸಿಕ್ಕಿದ್ದಾ° ಇಲ್ಲೆಯಾ? ಊರಿಂಗೆ ಬಂದಿತ್ತಿದ್ದಡ್ಡ .. !!!!

    1. ಹ,ಎನಗೆ ಸಿಕ್ಕಿದ್ದ…ಬಪ್ಪಗ ಅವ ಕಾನಾವು ಡಾಕ್ಟ್ರ ಮನೇಲಿ ಕ್ಯಾಪ್ಸಿಕಂ ಪುಳಿಯೋಗರೆ ತಿಂದಿಕ್ಕಿ ಎನಗೂ ರಜ್ಜ ಹಿಡ್ಕೊಂಡು ಬಯಿಂದ!!!!

  13. ಇತ್ತೆದ ಟಿವಿ9 ಮಾಂತ ಬರ್ಪುನ ದುಂಬು ಎಂಕ್ ಊರುದ ಸುದ್ದಿಲು ಮಾಂತ ಗೊತ್ತಾವೊಂದಿತ್ತುನೆ ಈ ಕಾರುಡು ಪೋನಾಗನೆ.. ಇತ್ತೆಲಾ ಏರಾಂಡ್ಲ ಪೇಪರು, ವಿಜಯ ಕರ್ನಾಟಕ ಮಾಂತ ಪತ್ತೋಂದು ಓದುದು ಪಣ್ಣೋಂದಿಪ್ಪೇರ್.

  14. ಈ ಕಾರಿಂಗೆ ಎಲ್ಲೋರನ್ನೂ ಒಟ್ಟಿಂಗೆ ಕರಕ್ಕೊಂಡು, ಸುಧಾರಿಸಿಯೊಂಡು ಹೋಪ ಗುಣ ಇದ್ದು, ಹೊಯೇಕಾದ ಜಾಗೆಗೆ ಹೆಂಗಿಪ್ಪ ಕಷ್ಟವ ಸಹಿಸಿಯೊಂಡಾದರೂ ಹೋಕು. ಹಾಂಗಿಪ್ಪ ಗುಣ ನಮ್ಮಲ್ಲಿರೆಕು ಹೇಳಿ ಕಾರು ಹೇಳ್ತು ಹೇಳಿ ಒಪ್ಪಣ್ಣಂಗೆ ಕಂಡು ನವಗೆ ಹೇಳಿದ್ದದು ಲಾಯಕ ಆಯಿದು.

    ಈ ಕಾರಿಲ್ಲಿ ಭಾರತೀಯತೆ ಇದ್ದು ಹೇಳಿ ಒಪ್ಪಣ್ಣ ಹೇಳುವದು, ಅಲ್ಲದೋ?

    ಈ ಬೆಳೀ ಕವಡೆಯ ಹಾಂಗಿಪ್ಪ ರಾಯಭಾರಿ (ambassador) ಕಾರು ಮಂತ್ರಿಗೊಕ್ಕೂ ಬೇಕು, ಜನರಿಂಗು ಬೇಕು. ಭಾರತದ ಪ್ರಕೃತಿಗೆ ಹೇಳಿ ಮಾಡುಸಿದ ಹಾಂಗಿಪ್ಪದು. ಭಾರತದವರಿಂದ ಭಾರತದವಕ್ಕೆ ಬೇಕಾದ ಹಾಂಗೆ ತಯಾರಾದ ಹಾಂಗೆ ಕಾಣ್ತು 🙂 ೫೦ ವರ್ಷಂದ ತನ್ನದೇ ಗಾಂಭೀರ್ಯಂದ ಓಡುವ ಈ ಕಾರುಗೋ ನಮ್ಮ ಊರಿಲ್ಲಿ ಭಾರೀ (!) ಉಪಯೋಗ ಅಪ್ಪದು ಒಂದು ದೊಡ್ಡ ವಿಷಯ ಅಲ್ಲದೋ?

  15. ಒಪ್ಪಣ್ಣೊ ಲಾಯ್ಕಾ ಆಯ್ದು…ಎಂಗಳ ಹೊಡೆಲಿ ಕಾರಿನ ಬದಲು ಜೀಪು ಸರ್ವೀಸು ಇಪ್ಪದು ಅಲ್ಲಿನ ಪರಿಸ್ಥಿತಿಯೂ ಹೀಂಗೆ.
    ಮತ್ತೆ ಐಟೆನ್ನಿಲ್ಲಿ ಜಾಗೆ ಎಲ್ಲಿದ್ದು ಮಾರಾಯ? ಎರಡು ಬೇಗುಗಳ ಮಡಗಿದರೆ ಅದು ತುಂಬಿತ್ತಿಲ್ಲೆಯಾ?
    ಕೊಶಿ ಆತು….ಜಾಗೆ ಇರೆಕಪ್ಪದು ಹೃದಯಲ್ಲಿ. ಕಾರಿಲಿಯೂ ಅಲ್ಲ, ಮನೆಲಿಯೂ ಅಲ್ಲ, ಶಭಾಶ್‌….

    1. ಸೀಟಿಲಿ ಮಡಗಲೆ ಎರಡು ಬೇಗು ಮಾಂತ್ರ ಅಲ್ಲ ಅಣ್ಣೋ – ಒಂದು ಕರಡಿಕುಂಞಿ ಗೊಂಬೆಯೂ ಇದ್ದು.

      ಬೆಳಿಬೆಳಿ – ಉದ್ದ ರೋಮದ್ದು!!
      ಅದರ ಎಂತಕೆ ಬಿಟ್ಟದು..?

  16. ಕಾರಿಲ್ಲಿ ಲಿಫ್ಟ್ ಕೊಟ್ಟರೆ ತುಂಬಾ ಉಪಕಾರಂಗೊ ಇದ್ದು ಹೇಳಿ ಆನು ಕಂಡೊಂಡಿದೆ.
    ಆನು ಆಫೀಸಿಂಗೆ ಹೋಪಗ ಎಂಗಳಲ್ಲಿ ಬೇರೆ ಬೇರೆ ವಿಭಾಗಲ್ಲಿ ಕೆಲಸ ಮಾಡುವ ಕೆಲಾವು ಜೆನಂಗೊ ಬಸ್ಸಿಂಗೆ ನಿಂದೊಂಡು ಇರ್ತ್ತವು. ಮಳೆಗೋ ಬಿಸಿಲಿಂಗೋ ನಿಂದೊಂಡು ಇಪ್ಪ ಅವರ ಕರಕ್ಕೊಂಡು ಹೋದರೆ ಅವಕ್ಕೆ ಎಷ್ಟು ಕೊಶಿ ಆವುತ್ತು ಗೊಂತಿದ್ದಾ.
    ಎಂಗಳ ವಿಭಾಗಲ್ಲಿ ಅವರಿಂದ ಎಂತಾರೂ ಕೆಲಸ ಆಯೆಕ್ಕಾರೆ ಹೇಳಿದ ಕೂಡ್ಲೇ ಬಂದು ಮಾಡಿ ಕೊಟ್ಟಿಕ್ಕಿ ಹೋವ್ತವು. ಮಾತ್ರ ಅಲ್ಲದ್ದೆ ನವಗೆ ಗೊಂತಿಲ್ಲದ್ದ ಸುಮಾರು ವಿಶಯಂಗೊ ಅವರಿಂದ ಸಿಕ್ಕುತ್ತು.
    ಸೆಕೂರಿಟಿ ಮನುಷ್ಯ ಒಂದರಿ ಕೇಳಿತ್ತು, “ಯಾವಗಲೂ ನಿಮ್ಮ ಒಟ್ಟಿಗೆ ಬೇರೆಯವರನ್ನೂ ಕರ್ಕೊಂಡು ಬರ್ತೀರಲ್ಲಾ”
    “ಕಾರಲ್ಲಿ 4 ಜೆನ ಇದ್ದರೆ, ಹಾಳಾದರೆ ನೂಕ್ಲಿಕ್ಕಾದರೂ ಆಗ್ತಾರಲ್ಲ” ಹೇಳಿದೆ ತಮಾಶೆಗೆ.
    ಒಂದರಿ “ಗುರುಪುರ ಕೈಕಂಬಂದ” ಸುರತ್ಕಲ್ಲಿಂಗೆ ಕತ್ತಲಪ್ಪಗ ಸುಮಾರು 10 ಘಂಟೆಗೆ ಒಬ್ಬನೇ ಕಾರಿಲ್ಲಿ ಬಂದೊಂಡು ಇತ್ತಿದ್ದೆ. ಆ ದಾರಿಲಿ 8 ಘಂಟೆ ಕಳುದರೆ ಯಾವುದೇ ವಾಹನ ಸಂಚಾರ ಕಮ್ಮಿ. ಇಲ್ಲೆ ಹೇಳಿಯೇ ಹೇಳ್ಲಕ್ಕು. ಒಂದು ಮನುಷ್ಯ ಕೈ ತೋರಿಸಿತ್ತು. ಎನಗೂ ಒಬ್ಬನೇ ಅಪ್ಪದಕ್ಕೆ ಆತು ಹೇಳಿ ಧೈರ್ಯಲ್ಲಿ ನಿಲ್ಸಿದೆ. ಆ ಮನುಷ್ಯನೂ ಎಲ್ಲಿಂದಲೋ ಅರ್ಜೆಂಟಿಂದ ಬಪ್ಪದಕ್ಕೆ ಬಸ್ ಸಿಕ್ಕದ್ದೆ ನೆಡಕ್ಕೊಂಡು ಹೆರಟದಡ. ಇಳಿವಾಗ ಎನ್ನ ಕಾಲು ಹಿಡಿವದು ಒಂದು ಬಾಕಿ. ತುಂಬಾ ಕೊಶಿ ಆಗಿ “ದೇವೆರ್ ಕಡಪ್ಪುಡಿನ ಲೆಕ್ಕ ಬತ್ತಾರ್” ಹೇಳುವಾಗ ಎನಗೆ ಮುಜುಗರ ಆತು. ಇಲ್ಲದ್ದರೆ ಅದಕ್ಕೆ ಕಮ್ಮಿಲಿ 6 ಕಿ.ಮೀ ನೆಡಕ್ಕೊಂಡು ಬರೆಕಾತು.
    ಹಾಂಗೆ ಹೇಳಿಂಡು ಗುರ್ತ ಇಲ್ಲದ್ದವಕ್ಕೆ ಲಿಫ್ಟ್ ಕೊಟ್ಟರೆ ತೊಂದರೆಗೆ ಸಿಕ್ಕಿ ಹಾಕೊಂಬ ಪರಿಸ್ಥಿತಿ ಕೂಡಾ ಬಕ್ಕು.

    1. { ದೇವೆರ್ ಕಡಪ್ಪುಡಿನ ಲೆಕ್ಕ ಬತ್ತಾರ್” }
      ನಿಂಗೊ ಬೈಲಿಂಗೆ ಬಂದದೂ ಹಾಂಗೆಯೇ ಅಡ – ಅಜ್ಜಕಾನಬಾವ° ಹೇಳಿಗೊಂಡು ಇತ್ತಿದ್ದ°!

      1. ಅಜ್ಜಕಾನ ಭಾವಂಗೆ ಹೇಳು, ಅಷ್ಟು ದೊಡ್ಡ ಮಾತು ಬೇಡ ಹೇಳಿ.
        ಬಯಲಿನ ಒಪ್ಪಣ್ಣಂದಿರ ಒಟ್ಟಿಂಗೆ ಆನೂ ಒಬ್ಬ ಅಷ್ಟೆ.

  17. ಅಪ್ಪೋ ಒಪ್ಪಣ್ಣ!!!

    ಕಾರಿಲ್ಲಿ ರೂಪತ್ತೆಯ “ರೋಸಿ” ಕಾಣ್ತಿಲ್ಲೆ. ಬೇರೆ ಅರದ್ದೋ ಕಾರು ತೋರುಸಿ ಸುಮ್ಮನೆ ಎಂಗಳ ಮಂಗ ಮಾಡ್ತೆಯೋ? 🙂

    1. ಚ್ಯೆ ಚ್ಯೆ!! ಯೆಂತ ಶ್ರೀಶಣ್ಣೋ ಹೀಂಗೆ ಹೇಳ್ತೆ?
      ಅದು ರೂಪತ್ತೆಯ ಕಾರು ತೊಳವಲೆ ಮಡಗಿದ್ದಲ್ಲದೋ – ನಾಯಿ ಎಲ್ಲಿಂದ ಬರೆಕ್ಕು?

      ತೊಳವಲ್ಲಿಗೆ ನಾಯಿಯ ಬಪ್ಪಲೆ ಬಿಡ್ತವಿಲ್ಲೆ. ಅದಕ್ಕೆ ತಣ್ಣೀರು ಆಗ, ಶೀತ ಆವುತ್ತು.
      – ಮತ್ತೆ ಡಾಗುಟ್ರ° ಮಾತ್ರೆ ಕೊಡೆಕ್ಕಾವುತ್ತು.
      ಅಷ್ಟೂ ಅರಡಿಯದ ನಿನಗೆ!!
      ಚೆ ಚೆ.. 😉

      1. ಎನ್ನ ಹತ್ರೆ ಕಾರು ಇಲ್ಲೆ ಅದ. ಹಾಂಗೆ ಅದರ ತೊಳೆತ್ತ ಕ್ರಮ ಅರಡಿಯ.
        ಆದರೂ ಒಂದು ಸಣ್ಣ ಸಂಶಯ.
        ಕಾರಿನ ಬಾಗಿಲು ಎಲ್ಲ ಓಪನ್ ಮಡುಗಿ ತೊಳದರೆ, ಸೀಟಿಂಗೆ ಎಲ್ಲಾ ನೀರು ಆವುತ್ತಿಲ್ಲೆಯೋ.
        ನಾಯಿಯ ವಾಕಿಂಗ್ ಕರಕ್ಕೊಂಡು ಹೋದ್ದೋ ಹೇಳಿ ಜಾನ್ಸಿದೆ.

        1. ಆಗಿಕ್ಕು ಶ್ರೀಶಣ್ಣ..

          ರೂಪತ್ತಗೆ ನಾಯಿಯನ್ನೂ ಕಾರನ್ನೂ – ಎರಡನ್ನೂ ನಿಬಾಯಿಸುದು ಕಷ್ಟ ಆವುತ್ತಡ.
          ಮಾವನ ಕೈಗೆ ಕೊಟ್ಟಿಕ್ಕಲೆ ಮನಸ್ಸು ಕೇಳ್ತಿಲ್ಲೆ ಇದಾ..! 🙁

  18. ಎಂಗಳ ಊರಿಲಿ ಒಂದು ಕಾರು, ಡ್ರೈವರು ಮೋಞಿ ಹೇಳಿ. ಅದರ ಕಾರಿಲಿ ಕಮ್ಮಿ ಹೇಳಿದರೆ ೨೧ ಜನ, ಮುಂದಾಣ ಸೇಟಿಲಿ ೬, ಹಿಂದೆ ೧೫. ಅದರದ್ದು ಟ್ರಿಪ್ ಪೆರುವಾಯಿ- ವಿಟ್ಲ- ಬಿ.ಸಿ.ರೋಡು. ಒಂದರಿ ಪಾಣೆಮಂಗ್ಳೂರು ಸಂಕದ ಹತ್ತರೆ ಪೋಲೀಸು ಹಿಡ್ತು. ಬ್ಯಾರಿದು ಒಂದೇ ಹಠ — ಆನು ಫೈನ್ ಕೊಡ್ತಿಲ್ಲೆ ಕೇಸು ಹಾಕು ಹೇಳಿ. ಅಂತೂ ಪೋಲೀಸು ಬ್ಯಾರಿಯ ಕಾರಿನ ಮೇಲೆ ಕೇಸು ಹಾಕಿತ್ತು- ಓವರ್ ಲೋಡ್ ಹೇಳಿ. ಮರದಿನ ಕೇಸು ಕೋರ್ಟಿಂಗೆ ಹೋತು. ಕೋರ್ಟಿಲಿ ಬ್ಯಾರಿಯ ವಾದ ಪೋಲೀಸು ಎನ್ನ ಮೇಲೆ ಲೊಟ್ಟೆ ಕೇಸು ಹಾಕಿದ್ದು, ಈ ಕಾರಿಲಿ ೨೧ ಜನ ಹಿಡಿವಲೆ ಸಾಧ್ಯವೇ ಇಲ್ಲೆ. ಆನು ಚ್ಯಾಲೆಂಜ್ ಮಾಡ್ತೆ. ಪೋಲೀಸು ಬೇಕಾದರೆ ೨೧ ಜನರ ಕಾರಿಲಿ ತುಂಬುಸಿ ತೋರುಸಲಿ ಹೇಳಿ. ಜಡ್ಜಂಗೆ ಬ್ಯಾರಿ ಹೇಳಿದ್ದು ಸರಿ ಕಂಡತ್ತೋ ಏನೋ. ಪೋಲೀಸಿಂಗೆ ಹೇಳಿತ್ತು ತುಂಬುಸಿ ತೋರುಸು ಹೇಳಿ. ಘಟ್ಟದ ಮೇಗಾಣ ಪೋಲೀಸು, ಎಂತ ಮಾಡಿದರೂ ೨೧ ಜನ ತುಂಬುಸುಲೇ ಆಯಿದಿಲ್ಲೆ. ಕೇಸು ಬಿಟ್ಟತ್ತು. ಪೋಲಿಸಿಂಗೆ ಜಡ್ಜನ ಬೈಗಳು ಸಿಕ್ಕಿತ್ತು- ಲೊಟ್ಟೆ ಕೇಸ್ ಹಾಕಿದ್ದಕ್ಕೆ, ಕೋರ್ಟಿನ ಸಮಯ ಹಾಳು ಮಾಡಿದ್ದಕ್ಕೆ .

    1. ಅವರ ಬುದ್ದಿಯೇ ಹಾಂಗೆ ಜೆಡ್ಡು ಡಾಗುಟ್ರೆ.
      ಪೋಲೀಸರಿಂಗೂ ಬಿಡವು – ಜಡ್ಜಂಗೂ ಬಿಡವು!! ಊದ್ದಕೆ ನಾಮ ಹಾಕುಗು!!

    1. { ಮಾಡಾವಿಂಗೆ ಎತ್ತಿದ್ದು ಗೊಂತೇ ಆಯಿದಿಲ್ಲೆ }
      ಮಾವಾ° ,
      ಅಂದೊಂದರಿ ಹಾಂಗ್ರುತ್ತ ಕಾರಿಲಿ ಒರಗಿ, ನಮ್ಮ ಬೈಲಿನ ಒಬ್ಬ ಮಾಣಿಗೆ ಮಾಡಾವು ಕಳುದ್ದೂ ಗೊಂತಾಯಿದಿಲ್ಲೆ!! 😉

  19. ಪುತ್ತೂರಿ೦ದ ಹೆರಟು ಮಾಡಾವಿನವರೆಗೆ ವಿವರಣೆ (chronological events) ಲಾಯಿಕಾಯಿದು…ಮಿನಿಯ..

  20. ಎಂಗಳ ಪೆರ್ಲನ್ಪಾಡಿಲಿಯೂ ಕಾರಿಲಿ ಉದಿಉದಿಯಪ್ಪಗಳೇ ಹೋಗಿಗೊಂಡಿತ್ತದು ನೆನಪಾವ್ತು…!! ಅಲ್ಲಿ ಬರೀ ಜೀಪುಗಳದ್ದೇ “ಕಾರು”ಬಾರು!!!

    1. ಇದಾ ಪುಟ್ಟಾ!!! ಮಾಡವಿಂಗೆ ಬಪ್ಪ ಹಾಲಿನ ವೇನಿಲಿ ನೀನು ಹಾಲುಮಜಲಿಂದ ಬಪ್ಪಗ ಹಿಡಿವಲೆ ಎಂತ ಸಿಕ್ಕದ್ದೇ ಅಕೆರಿಗೆ ಹಾಲಿನ ಡ್ರಮ್ಮು ಹಿಡ್ಕೊಂಡು ಬಯಿಂದಿಲ್ಲೆಯ ಅಬ್ಬೋ? ಬರೇ ಕಾರಿಲಿ ಮಾತ್ರ ಬಂದದಾ ನೀನು?

  21. ಶುದ್ದಿ ಲಾಯ್ಕಾಯ್ದು…. 🙂
    ಒಂದೊಪ್ಪ ಭಾರೀ ಲಾಯ್ಕಾಯ್ದು… ಅರ್ಥಪೂರ್ಣ… 🙂

    ಹ್ಮ್..ಹೇಳಿದಾಂಗೆ ರೂಪತ್ತೆ ಮೊನ್ನೆ ಬಸ್ಸಿಲಿ ಸಿಕ್ಕಿತ್ತಿದ್ದು…ಅದರ ಕಾರು ಹಾಳಾಗಿತ್ತಡ…..ಹಾಂಗೆ ಬಸ್ಸಿಲಿ ಬಂದದಡ..
    ಎಷ್ಟು ಸೌಕರ್ಯ ಇದ್ದರೂ ಬೇಕಪ್ಪಗ ಸಿಕ್ಕದ್ರೆ ಎಂತ ಪ್ರಯೋಜನ ಹೇಳಿ ಅನುಸಿಹೋತು…. :-(.
    ಮಳೆ ಜೋರಿತ್ತು…ಬಸ್ಸಿಲಿ ಕೂದೊಂಡು ಬಣ್ಣ ಬಣ್ಣದ ಫೈವ್-ಫೋಲ್ಡ್ ಕೊಡೆಯ ಉದ್ದಿಗೊಂಡಿತ್ತು….

    ಒಪ್ಪಣ್ಣಾ… ಎನಗೊಂದು ಸಣ್ಣ ಡೌಟು…ನೀನು ಎಲ್ಲಿಗೆ ಹೋವ್ತರೂ ಕೆಮರ ತೆಕ್ಕೊಂಡು ಹೋವ್ತೆಯ? ಪ್ರತೀ ಶುದ್ದಿಗೂ ಒಂದೊಂದು ಪಟ ತೋರ್ಸುತ್ತೆನ್ನೆ?
    ಆ ಪೇಟೆಲಿ ನಿಂದೊಂಡು ಈ ಕಾರುಗಳ ಪಟ ತೆಗದ್ದಾ?
    ಈ ಡೌಟು ನೆಗೆಗಾರಣ್ಣಂಗೆ ಏಕೆ ಬೈಂದಿಲ್ಲೆ ಹೇಳಿ ಗೊಂತಿಲ್ಲೆ….

    1. ಒಪ್ಪಕ್ಕೋ…..
      { ಎನಗೊಂದು ಸಣ್ಣ ಡೌಟು }
      ಒಪ್ಪಕ್ಕಂದು ಭಾರಿ ಡವುಟು ಬಂದದು, ಅಪುರೂಪಕ್ಕೆ. ನಿನ್ನ ಡೌಟುಗಳಲ್ಲೇ ಒಪ್ಪಣ್ಣಂಗೆ ಬೆಗರುಬಿಚ್ಚುದು ಇದಾ! 🙂

      ಬೈಲಿಲಿ ಇಷ್ಟು ಜೆನ ಕೆಮರ ಮಡಿಕ್ಕೊಂಡವು ಇದ್ದವಲ್ಲದೋ –
      ಒಂದು ನಿನ್ನತ್ರೇ ಇದ್ದು, ದೊಡ್ಡಣ್ಣ ತಂದುಕೊಟ್ಟದು.
      ನೆರೆಕರೆಲೇ ಎರಡುಮೂರು ಕೆಮರ ಇದ್ದು- ಹಳೆಮನೆ, ಯೇನಂಕೂಡ್ಳು, ಪೊಸವಣಿಕೆ – ಇವರತ್ರೆ.
      ಅಷ್ಟಲ್ಲದ್ದೆ ಪುತ್ತೂರಿಂಗೆ ಹೋದರೆ ಬಲ್ನಾಡುಮಾಣಿಯ ಹತ್ರೆ ಇದ್ದು, ವಿಟ್ಳಹೊಡೆಂಗೆ ಹೋದರೆ ಅಡ್ಕತ್ತಿಮಾರುಮಾವನತ್ರೆ ಇದ್ದು, ಪಂಜಕ್ಕೆ ಹೋದರೆ ಕಾಂಚೋಡುಮಾಣಿಯ ಕೆಮರ ಇದ್ದು, ಕೊಡೆಯಾಲಕ್ಕೆ ಹೋದರೆ ಬೊಳುಂಬುಮಾವನತ್ರೆ ಇದ್ದು, ಬೆಂಗುಳೂರಿಂಗೆ ಹೋದರೆ ಪೆರ್ಲದಣ್ಣನತ್ರೆ ಇದ್ದು – ಎಲ್ಲೇ ಹೋಗಲಿ, ಅಲ್ಲಿ ನಮ್ಮ ಬೈಲಿನೋರು ಕೆಮರ ಇಪ್ಪೋರು ಇದ್ದವು.
      ಅವು ಆರಾರು ಯೇವತ್ತಾರು ಎಲ್ಲಿಗಾರು ಹೋದಪ್ಪಗ ಕೆಮರ ತೆಕ್ಕೊಂಡೇ ತೆಕ್ಕೊಂಗು.

      ಮತ್ತೆ, ಒಪ್ಪಣ್ಣ ಒಬ್ಬನೇ ಹೋಗ° ಇದಾ – ಆರೊಟ್ಟಿಂಗಾರು ಸಂಗಾತಕ್ಕೆ ಹೋಕು. ಹಾಂಗಪ್ಪಗ ಆಚವು ಪಟ ತೆಗದರೂ ಸಾಕಾವುತ್ತು, ಬೈಲಿಲಿ ನೇಲುಸಲೆ.
      ಡವುಟು ಬಿರುದತ್ತೋ – ಇನ್ನೂ ಇದ್ದೋ? 😉 🙁

      1. ಇನ್ನು ೧ ದೌಟು ಇದ್ದು…..
        ಇಷ್ಟೆಲ್ಲ ಹೆಸರು ಹೇಳಿದ್ದರ್ಲಿ ಗಣೇಶಮಾವನ ಹೆಸರು ಕಂಡತ್ತಿಲ್ಲೆನ್ನೆ…..
        ನೀನು ಮೊನ್ನೆ ಅವರೊಟ್ಟಿಂಗೆ ಅಲ್ಲದೊ ಹೋದ್ದು??? 😉

        1. ಒಪ್ಪಕ್ಕೋ.. ಅದೆಂತ ಡೌಟು ನಿನಗೆ!! ಒಪ್ಪಣ್ಣ ಹೋದದ್ದು ಗಣೇಶ ಮಾವನೊಟ್ಟಿನ್ಗೆ ಆದಿಕ್ಕು.. ಆ ದಿನ ಗಣೇಶ ಮಾವ° ಕೆಮರ ತೆಕ್ಕೊಂಡಿದವಿಲ್ಲೇ ತೋರ್ತು.. ಆದರೆ ಅವ್ವು ಇಬ್ರು ಹೋದ್ದು ಕೃಷ್ಣ ಬಸ್ಸಿಲಿ ಅಲ್ಲದಾ? ಅದರಲ್ಲಿ ಪುತ್ತೂರಿನ್ಗೆ ಬಪ್ಪ ಕುಂಬ್ಳೆ ಹೊಡೆಣ ನಮ್ಮ ಕೂಚಕ್ಕನ್ಗ ಇರ್ತವು.. ಅವರಲ್ಲಿ ಯೇವುದಾರು ತುಂಬಾ ಗುರ್ತದ ಕೂಚಕ್ಕನ ಹತ್ತರೆ ಕೆಮರ ಕೇಳಿದಾಯಿಕ್ಕು.. ಅಲ್ಲದಾ ಒಪ್ಪಣ್ಣೋ…;-)!!!

          1. ಇದಾ ಕೂಸೇ…ಎಂಗಳ ಮಕ್ಕ ಇಬ್ರೂ ಹಾಂಗಿಪ್ಪವು ಅಲ್ಲ… ಕೂಚಕ್ಕಂಗಳ ಹತ್ರೆ ಕೆಮರ ಕೇಳವು..ಹಾಂಗೆ ಬೇಕಾದರೆ ಅವು ಲೋನು ಮಾಡಿಯಾರು ತೆಗಗು.ಇನ್ನೊಬ್ಬನ ಹತ್ತಾರೆ ಕೇಳವು…

        2. ನೀನು ಸಾರಡಿ ಪುಳ್ಳಿಯನ್ನೂ ಬಿಟ್ಟ ಹಾಂಗೆ ಕಾಣುತ್ತು 🙂 🙂

          1. ಮೊನ್ನೆ ಒಪ್ಪಣ್ಣನ ಕುಂಬ್ಳೆಲಿ ಕಾರಿಲ್ಲಿ ಹೋಪದು ಕಂಡಿದೆ,ಒಳ ಇಪ್ಪವರ ಎಲ್ಲ ಗುರ್ತ ಇತ್ತಿಲ್ಲೆ,ಅಂತೂ ಕಾರಿನ ಒಳ ರೂಪತ್ತೆಯ ಕಾರಿನ ಹಾಂಗೆ ಬರೇ ನಾಲ್ಕೈದು ಜನ ಮಾತ್ರ ಇತ್ತಿದ್ದವಷ್ಟೆ,ಪುತ್ತೂರಿನ ಕಾರಿನ ಹಾಂಗೆ ಲೋಡ್ ಇತ್ತಿಲ್ಲೆ!!

          2. ಯೇ ಪೀಯಸ್ ಮಾವಾ°..
            ಅದು ನಮ್ಮ ಸಾರಡಿ ಅಪ್ಪಚ್ಚಿಯ ಕಾರು ಅಲ್ಲದೋ – ಅವು ಊರಿಂಗೆ ಬಂದಿತ್ತಿದ್ದವು.
            ಕುಂಬ್ಳೆ ಕಡಲು ನೋಡುವೊ° ಹೇಳಿದವು.
            ಹಾಂಗೆ ಹೋದ್ದದು ಅಷ್ಟೇ.

            ನಿಂಗೊ ಎಲ್ಲಿ ನಿಂದುಗೊಂಡು ಇತ್ತಿದ್ದಿ? ಕಂಡಿದಿಲ್ಲೆಯೋ ತೋರುತ್ತು.
            ಮಾಪ್ಳೆ ಅಂಗುಡಿಗಳ ಎದುರು ನಾವು ನೋಡುದೂ ಕಮ್ಮಿ!
            ಇನ್ನೊಂದರಿ ಕಂಡ್ರೆ ಮಾತಾಡುಸಿ ಆತಾ, ಪಕ್ಕನೆ ಗೋಷ್ಟಿ ಆಗದ್ದರೆ ಕಷ್ಟ ಇದಾ..!

  22. oppanno bhari laikaidu.
    ondoppa anthu sooper…noorakke nooru sariyada mathu.
    oppannange roopatteyu bengalooru shubhatteyu herkule sikkiddava enthado
    avara shuddi bareyadre orakku battille.
    oppanno kelavu laatu biduda henge.mukhatha sikkippaga mathaduva.bellare carina
    hanebarave hange.neenu baraddu nijavagiyu appu.carili ganesha mavana kaalili koodugondu bandu avana kaalu kochhe kattittu .ninna bennu bene aidilleya hangare.
    innu ganesha mana kaalili ninna koorusule ille.eega oppanna sanna allanne.hange
    koogeda innu.anthu hengaru ganesha mava ninna bittikki hoga aatha.
    hange bittikki hopale roopatte allanne.

    1. ಚೆ ಚೆ!
      ಒಪ್ಪಣ್ಣ ಎಂತಗೆ ಲಾಟು ಬಿಡುದು, ಎಲ್ಯಾರು ಇದ್ದೋ – ಚೆ ಚೆ!!
      ಒಪ್ಪಣ್ಣ ಒಪ್ಪಣ್ಣ ಅಲ್ಲದೋ..!!
      ಆಗಮ್ಮಾ ಹಾಂಗೆಲ್ಲ ಹೇಳುಲೆ.. 😉

      1. oppanno neenu laatu bidtille heli enagu gontiddu ninagu gontiddu..
        bejara aato henge..koogeda aatho.
        kudivale ondu gaachu jaai kodte baa aatho.
        neenu oppanna allado…

  23. {ಜಾಗೆ ಇರೆಕಪ್ಪದು ಹೃದಯಲ್ಲಿ. ಕಾರಿಲಿಯೂ ಅಲ್ಲ, ಮನೆಲಿಯೂ ಅಲ್ಲ, ಎಂತ ಹೇಳ್ತಿ?} ಸತ್ಯ ಒಪ್ಪಣ್ಣ. ಕಣ್ಣಿಂಗೆ ಕಟ್ಟುವ ಹಾಂಗಿಪ್ಪ ಚಿತ್ರಣ.
    ಹೃದಯಲ್ಲಿ ಜಾಗೆ ಇಪ್ಪವಕ್ಕೆ ಎಲ್ಲೊಡಿಕೂ ಜಾಗೆ ಸಿಕ್ಕುಗು. ಹಾಂಗಿಪ್ಪ ಹೃದಯವಂತಿಕೆ ಬೇಕು ಅಷ್ಟೆ. ಕಾರಿಲ್ಲಿ ಹೋಪವ ತನ್ನ ಅಂತಸ್ತಿನ ಮಾತ್ರ ತಲೆಲಿ ಮಡ್ಕೊಂಡರೆ ರೂಪ ಅತ್ತೆಯ ಕಾರಿನ ಹಾಂಗೇ ಅಕ್ಕು, ಕಂಡ್ರೂ ಕಾಣದ್ದವರ ಹಾಂಗೆ ಸೀದಾ ಹೋಕು. ಆರಿಂಗೂ ಅಲ್ಲಿ ಜಾಗೆ ಇರ. ಇದ್ದರೆ ಅವರ ಮನೆಯ “ರೋಸಿ” ಗೆ ಮಾತ್ರ.
    ಜೆನಂಗಳ ತುಂಬುಸುವ ಕಾರಿನವಕ್ಕೆ ಬಾಡಿಗೆ ಸಿಕ್ಕುವ ದೃಷ್ಟಿ ಇದ್ದರೂ, ಅಲ್ಲಿಯೂ ಜೆನಂಗೊಕ್ಕೆ ಉಪಕಾರ ಇದ್ದೇ ಇದ್ದನ್ನೆ. ಇತ್ತೀಚೆಗೆ ಬಸ್ ಬೇಕಾಷ್ಟು ಇದ್ದ ಕಾರಣ ಅವರ ಆದಾಯವೂ ಕಮ್ಮಿ ಆಯಿದು.
    ಎಂಗೊ ಕುಂಬಳೆ ಹೊಡೆಯವಕ್ಕೆ ಮೊದಲಿಂದಲೂ ಕಾರಿಲ್ಲಿ ಹೋಯೆಕ್ಕಾದ ಪರಿಸ್ಥಿತಿ ಇತ್ತಿದ್ದಿಲ್ಲೆ. ಬಸ್ ಗೊ ಬೇಕಾಷ್ಟು ಇತ್ತಿದ್ದು.
    ಒಂದು ಸರ್ತಿ ಹಾಂಗೆ ಆತು. ಪುತ್ತೂರಿಂಗೆ ಹೋಪಲೆ ಮಂಗಳೂರು ಬಾವಟೆ ಗುಡ್ಡಲ್ಲಿ ಟಾಕ್ಸಿ ಹತ್ತಿದೆಯೊ. “ನಣ ರಡ್ಡು ಜೆನ ಆಂಡ ಪಿದಾಡುನವೇ” ಹೇಳಿ ಆಶ್ವಾಸನೆ ಕೊಟ್ಟತ್ತು. ಎರಡು ಜೆನಂಗಳೂ ಬಂದವು. ಕಾರು ಹೆರಟತ್ತು. ಒಳ್ಳೆ ಡ್ರೈವರ್, ಆಶ್ವಾಸನೆ ಕೊಟ್ಟದರ ಈಡೇರಿಸಿತ್ತು ಹೇಳಿ ಕೊಶಿ ಆತು. ಅಲ್ಲಿಂದ ಹಾಂಗೇ ಜ್ಯೋತಿ ಟಾಕೀಸಿನ ದಾರಿ ಆಗಿ ಕೆಳ ಬಂತು. ತಿರುಗಿ ಹಂಪನಕಟ್ಟೆಗೆ ಹೋತು. ಅಲ್ಲಿ ಆರಾರೂ ಜೆನ ಸಿಕ್ಕುತ್ತವೋ ನೋಡಿತ್ತು. ಪುನಃ ನಾಲ್ಕು ಜೆನ ಹಾಕಿತ್ತು. ಅಲ್ಲಿಂದ ಪುನಃ ಬಾವಟೆ ಗುಡ್ಡಕ್ಕೆ. ಅಲ್ಲಿ ರೆಜ ಹೊತ್ತು ಪುನಃ ಇದೇ ಪ್ರಹಸನ. ಮತ್ತೆ ಹತ್ತಿದವು ಕೇಳುವಾಗಲೂ ಅದು ಹೇಳಿದ್ದು “ನಣ ರಡ್ಡು ಜೆನ ಆಂಡ ಪಿದಾಡುನವೇ”
    ತುಂಬಾ ಕೊಶಿ ಆದ ಕೆಲಾವು ಸಾಲುಗೊ”
    ಒಂದುವೇಳೆ ಅರಡಿಯದ್ದವ° ಹೋದರೆ ಡ್ರೈವರುಗಳೇ ಹೇಂಗೆ ಕೂರೆಕ್ಕು ಹೇಳಿಕೊಡ್ತವು.
    ತರವಾಡುಮನೆ ಗೋಣಂಗೊ ಬೈಪ್ಪಾಣೆಲಿ ಮೋರೆ ಮಡಗುತ್ತ ಹಾಂಗೆ –
    ಡ್ರೈವರ ಬೇಜಾರಲ್ಲಿ ಇಲ್ಲೆ – ಹೇಳಿ ಕೈಲಿ ಮಾಡಿ ತೋರುಸುಗು! 🙂
    ಗುರ್ತದ ಜೆನವೇ ಹತ್ತಿರೂ ಡ್ರೈವರಂಗೆ ಆ ರಶ್ಶಿಲಿ ಗೊಂತಾಯಿದಿಲ್ಲೆ, ಇಳಿವಲಪ್ಪಗ ಗೊಂತಾದ್ದು!

  24. ಸಾಕೋ ಸಾಕಾತು ಭಾವ ಜೋಯಿಸರಲ್ಲಿಗೆ ತಲ್ಪುವಾಗ ಎಂತಾ ಮಳೆ.. ಒಟ್ಟಿಂಗೆ ಎಂತಾ ಜೆನ ಕಾರಿಲಿ.. ಚುಬ್ಬಣ್ಣನ ಮೇಲೆ ಆನು ಎನ್ನ ಮೇಲೆ ಶೆಟ್ರ ಪುಳ್ಳಿ… ಅಬ್ಬಾ… ಪುಣ್ಯಕ್ಕೆ ಎರಡು ಚೆಂಡಿ ಹರ್ಕು ಸಂಗೀಸು ಬೇಗೆಲಿ ಮಡಗಿತ್ತಿದ್ದೆ. ಇಲ್ಲದ್ರೆ ವೇಸ್ಟಿ ಪೂರಾ ಮಣ್ಣಾವುತ್ತಿತ್ತು, ವೇಸ್ಟಿ ಮೇಲಂಗೆ ಚೆಂಡಿ ಹರ್ಕು ಕಟ್ಟಿದ ಕಾರಣ ನಾವು ಬಚಾವು.. ಅದಾ ಬೈಲಕರೆ ಅಜ್ಜ ಬಂದವು.. ನಿಂಗಳ ಮತ್ತೆ ಕಾಣುತ್ತೆ.. ಅವರ ಮಾತಾಡ್ಸಿಕ್ಕಿ..

    1. ಅಯ್ಯೊ ದೇವರೆ.. ಯೆನ್ನ ಕಾಲು ವಶ ಇಲ್ಲದ್ದ ಹಾಂಗೆ ಆಯ್ದು ಭಾವಾ..
      ಕಾರು ಯಾವಗ ಎತ್ತುತು ಹೆಳಿ ಆಯಿದು ಮಾತ್ರ… ನೇರ್ಪಕೆ ಅಡಕ್ಕೆ ತಿಮ್ಬಲು ಎಡಿಗೈದಿಲ್ಲೆ… 🙁

      1. { ಯೆನ್ನ ಕಾಲು ವಶ ಇಲ್ಲದ್ದ ಹಾಂಗೆ ಆಯ್ದು }
        ಹೋಗಿ ಹೋಗಿ ಆ ಅಜ್ಜಕಾನ ಭಾವನ ಕೂರುಸಿಗೊಂಬದೋ..!
        ಇನ್ನೆಂತರ ಮಾಡ್ತದು – ಅದೇ ಮಾರ್ಗಲ್ಲಿ ಮುಂದೆ ಮಜಲುಕೆರೆಗೆ ಹೋಗು, ಎಣ್ಣೆ ಹಾಕಿ ತಿಕ್ಕುತ್ತವು ಶಿವಣ್ಣ!

        ಇನ್ನಾದರೂ ರಜ ನೋಡಿಗೊ ಕಾಲಿಲಿ ಕೂರುಸುವ ಮೊದಲು; ಅಜ್ಜಕಾನಬಾವನೋ – ಒಪ್ಪಣ್ಣನೋ ಹೇಳಿಗೊಂಡು! ಆತೋ? 😉

        1. ಎನಗೆ ಸೀಟು ಸಿಕಿತ್ತು ಹೆಳಿ ಬೇಗ ಹೋಗಿ ಕೂದುಗೊಂಡೆ.. ಅಜ್ಜಕಾನಬಾವ ಓಡಿ ಯೆತ್ತುವಗ ಕಾರು ಭರ್ತಿ ಅತು. ಅಜ್ಜಕಾನ ಬಾವ ಬಂದು, ಬಂದು ಕೂರ್ತ ಎನ್ನ ಕಾಲಮೆಲೆ, ಒಂದು ಸರ್ತಿಗೆ ಮೂರು ಲೋಕ ಕಂಡತ್ತು… ಅಯ್ಯೋ ಯೆನ್ನ ಅವಸ್ಥೆ ಕೇಳೆಡ ಭಾವಾ…

      2. ಅಜ್ಜಕಾನ ಭಾವ ಆದ ಕಾರಣ ಕಾಲು ಮಾತ್ರ ವಶ ಇಲ್ಲದ್ದೆ ಅತು. ಒಪ್ಪಣ್ಣ ಅಗಿದ್ದರೆ ಇಡೀ ಶರೀರವೆ ವಶ ಇಲ್ಲದ್ದ ಹಾ೦ಗೆ ಅವುತಿತು. ಮತ್ತೆ ತಿಕ್ಕುಲೆ ಪುತ್ತೂರು ಮಾವನ ಬಪ್ಪಲೆ ಹೆಳೆಕ್ಕಾವುತ್ತಿತು.

  25. ಪುತ್ತೂರು ಬಾಡಿಗೆ ಕಾರಿನ ಪ್ರಯಾಣದ ವರ್ಣನೆ ಲಾಯಕಾಯಿದು. ಅನುಭವದ ಮಾತುಗೊ ಒಪ್ಪಣ್ಣನದ್ದು. ಕೆಲವು ಉಪಮೆಗೊ ಕೇಳಿ ತುಂಬಾ ನೆಗೆ ಬಂತು. ರೂಪತ್ತೆ ಹಾಂಗ್ರುತ್ತವು ನಿಂಗೊಗೆ ಎಷ್ಟು ಜೆನ ಬೇಕು ಹೇಳಿ. ರೂಪತ್ತೆ ಅವರ ಕಂಡು ಜಾಗೆ ಇಲ್ಲೆ ಹೇಳಿ ಆದರೂ ಹೇಳಿದವು. ಬೇರೆ ಜೆನಂಗೊ ಆದರೆ ಕಂಡರೂ ಕಾಣದ್ದ ಹಾಂಗೆ ಹೋಕತ್ತೆ. ಮತ್ತೆ ಕಾರಿನ ಒಳ ಆರು ಇದ್ದವು ಹೇಳಿ ಮಾರ್ಗಲ್ಲಿ ನಿಂದವಂಗೆ ಹೇಂಗೆ ಗೊಂತಾವುತ್ತು ? ಒಳಾಣವಕ್ಕೆ ಮಾಂತ್ರ ಹೆರ ಕಾಣುತ್ತದು. ಹೆರಾಣವಕ್ಕೆ ಒಳ ಅಲ್ಲಾನೆ ?
    ಒಪ್ಪ ಒಪ್ಪ ಆಯಿದು.

  26. ಅಜ್ಜಕನ ಬಾವಾ, ಈ ಜೀಪಿಲಿ ನೇಲೆಂಡು ಹೋಪದು ಕಷ್ಟ ಅಕ್ಕು, ಮಳೆಗೆ ಅಲ್ಲದೋ.. ರಜಾ ಎಡಕ್ಕಿಲಿ ಜಾಗೆ ಮಾಡಿಕೊಂಡು ಕುದೊಂಡು ಎಲೆ ಅಡಕ್ಕೆ ತಿನ್ದುಗೊಂದು ಹೊಪ ಆಗದ ಬಾವ ?? 😛

    1. ಪೊಸವಣಿಕೆ ಚುಬ್ಬಣ್ಣಾ..
      ನಿಂಗೊಗೆ ಸ್ವಾಗತ!

      ಎಲೆಡಕ್ಕೆ ತಿನ್ನಿ ಬಾವ ಒಳ್ಳೆದೇ – ನಿಂಗಳ ಬಾಯಿ ಕೆಂಪಾದ್ದು ಕಾಣ್ತು.!!
      ಹಾಂಗಾದರೂ ಒಂದ್ರುಪಾಯಿ ಕಿಲಕ್ಕೆ ಜಾಸ್ತಿ ಆವುತ್ತರೆ ಆಗಲಿ..

      1. ಅಕ್ಕಕ್ಕು ಭಾವಾ…
        ಎನಗೆ ಎಲೆಡಕ್ಕೆ ಇಲ್ಲದ್ರೆ ಅವುತ್ತಿಲ್ಲೆ ಭಾವಾ… 😛 ಎಂತಾರೂ ಬಾಯಿಲಿ ಜಗುಕ್ಕೊಂಡು ಬೇಕಾವ್ತು..
        ಅಬ್ಯಾಸಾ.. ಎಂತ ಮಾಡ್ಸು… 😛

  27. ಸರಿ ಸಮೆಯಕ್ಕೆ ಬೈಂದಿದಾ.. ಇಂದು ಆನುದೆ ಪೊಸವಣಿಕೆ ಚುಬ್ಬಣ್ಣನುದೆ ಮಾಡಾವು ಜೋಯಿಸರಲ್ಲಿಗೆ ದುರ್ಗಾಪೂಜೆಗೆ ಹೆರಟಿದೆಯೊ ಈಗ.. ಒಪ್ಪಣ್ಣ ಹೇಳಿದಾಂಗೆ ಹೋಯೆಕ್ಕಷ್ಟೆ ಕಾರಿಲಿ… ಈ ಸರ್ತಿ ಕೂಪಲೆ ಪೊಸವಣಿಕೆ ಚುಬ್ಬಣ್ಣ ಇದ್ದ.. ಗಟ್ಟಿ ಜೀವಾ ಇದಾ ತೊಂದರೆ ಇಲ್ಲೆ…

    1. ಲೊಟ್ಟೆ ಯೆನ್ತಗೆ ಹೆಳುದು ಬಾವ … ಜಾತಕಪಟ ಹೊಂದುಸುಲೆ ಹೇಳೀ ನಗೆಗಾರ ಬಾವ ಹೇಳಿದ 🙂

      1. ಚೆ! ಹಾಂಗೆ ಹೋಪದು ಹೇಳಿರೆ ಮೊದಲೆ ಹೇಳುಲೆ ಎಂತ ಆಯೆಕ್ಕು.. ನೆಗೆ ಬಾವನ ಬಿಟ್ಟು ಹೆರಟದ್ದಕ್ಕೆ ಲೊಟ್ಟೆ ಹೇಳಿದ್ದ.. ನೀನು ನಂಬಿ ಕೆಟ್ಟೇ…

      2. ಯೇ ಲೂಟಿಮಾಣಿ,
        ಈ ಆಟಿಲಿ ಎಲ್ಲಿಗೋ° – ಜಾತಕಪಟ?

        ಅಲ್ಲಪ್ಪ – ಅವ° ಪಾಚ ಉಂಬಲೇ ಹೋದ್ದದು.

  28. ಒಪ್ಪ ಲಾಯಿಕ್ಕಾಯಿದು ಒಪ್ಪಣ್ಣ.. ಒಂದರಿ ಬೆಂಗಳೂರಿಂದ ನಮ್ಮ ಊರಿಂಗೆ ಬಪ್ಪಗ ಒಂದು ಜೀಪು ಸಿಕ್ಕಿದ್ದು ಶಿರಾಡಿ ಘಾಟಿಲಿ.. ಅದರಲ್ಲಿ ತುಂಬಾ ಮಾಪಿಳ್ಳೆಗೊ ಇತ್ತಿದ್ದವು.. ಜೀಪು ಬಿಡ್ತ ಜನ ಈಗಳೋ-ಆಗಳೋ ಕೆಳ ಬೀಳುವ ಹಾಂಗೆ ಕೂದುಗೊಂಡು ಜೀಪು ಬಿಟ್ಟುಗೊಂಡಿತ್ತಿದ್ದು.. ಕಾರಿಲಾದರೂ ಬಾಗಿಲು ಇದ್ದು,ಕೆಳ ಬೀಳ ಹೇಳ್ತ ಧೈರ್ಯ.. ಆದರೆ ಜೀಪು?ಅದೂ ಶಿರಾಡಿ ಘಾಟಿಲಿ… ಆ ಜೀಪಿಲಿ ಇದ್ದೋರ ಧೈರ್ಯವ ಮೆಚ್ಚೆಕ್ಕಾದ್ದೆ!!!
    ರೂಪತ್ತೆ ಗಣೇಶ ಮಾವನ ಕರಕ್ಕೊಂಡು ಹೋಯಿದಿಲ್ಲೆಯಾ!! ಚೆ!! ಅದೇಕೆ?? ಹಾಂಗೆ ಮಾಡ್ಲಾಗ ಇತ್ತು.. ಬಿಂಗ್ರಿ ಕಟ್ಟುವ ನೆಗೆಗಾರ ಅಣ್ಣನಾಂಗಿಪ್ಪೋರ ಬಿಟ್ಟರೂ ಹೇಳ್ಳಕ್ಕು,ಅವ ಬಿಂಗ್ರಿ ಮಾಡ್ತ ಅದಕ್ಕೆ ಬಿಟ್ಟಿಕ್ಕಿ ಹೋದ್ದು ಹೇಳಿ.. 😉 ಆದರೆ ಗಣೇಶ ಮಾವನ ಬಿಟ್ಟಿಕ್ಕಿ ಹೊದ್ದು ಹೇಳಿ ಆದರೆ ರೂಪತ್ತೆಯ ಮನಸ್ಸು ನಿಜವಾಗಿಯೂ ಸಣ್ಣವೇ.. ರೂಪತ್ತೆ ಮಾತ್ರ ಅಲ್ಲ,ಸುಮಾರು ಜನ ಇದ್ದವು ಹಾಂಗಿಪ್ಪೋರು!!!!

    1. ನೆಗೆಗಾರಂಗೆ ಹಾಂಗಿರ್ತ ಬಿಂಗಿ ಎಂತ್ಸೂ ಇಲ್ಲೆಪ್ಪ!
      ನಿಂಗೊ ಅಜ್ಜಕಾನಬಾವನ ಕಂಡ್ರೆ ಎಂತ ಹೇಳುವಿ ಅಂಬಗ..!!!

  29. Superr…

    ಇಡಿ ಓದಿ ಮುಗಿಷ್ಯಪ್ಪಗ ..ಆನು ಕಾರಲಿ ಕೂದು ಹೋಗಿ ಬಂದ ಅನುಭವ ಆತು, ಬಾರಿ ಲಾಯ್ಕ ಆಯಿದು narration..

  30. ಒಪ್ಪಣ್ಣ ಭಾವಾ.. ಲಾಯಿಕ್ಕಾಯಿದು. ಭರಣಿಲಿ ಉಪ್ಪಿನಕಾಯಿ ತುಂಬಿಸಿದ ಹಾಂಗಲ್ಲದೋ ಈ ಸರ್ವಿಸು ಕಾರಿಲಿ ಜೆನ ತುಂಬುಸೊದು.ಸರ್ವೀಸು ಕಾರಿನ ಡ್ರೈವರ ಕೂಪ ಸ್ಟೈಲೇ ಬೇರೆ,ಅದರ ಅರ್ಧ ಜೀವ ಕಾರಿಂದ ಹೇರ ಇರುತ್ತಲ್ಲದಾ.ಅದರ ಎಡೆಲಿ,ಆರಾರು ಗುರ್ತದವು ಸಿಕ್ಕಿರೆ ಪೀಂ ..ಪೀಂ. ಹೇಳಿ ಹೋರ್ನ್ ಹಾಕಿ ಕೈ ನೆಗ್ಗಿ ಸ್ಪೀಡಿಲಿ ಹೋಕದಾ. ನವಗೆಲ್ಲಾ ಹಾಂಗೆ ಹೋತಿಕ್ಕುಲೆ ಎಡಿಯಪ್ಪ.
    ಪ್ರಾಕಿಲಿ ಒಂದರಿ ಪುತ್ತೂರಿಂದ ಮಂಗಳೂರಿಂಗೆ ಹೀಂಗೆ ಹೋಪಗ ಕಾರಿಲಿದ್ದ ಮಾಪ್ಲೆ ಬಚ್ಚಿರೆ ತಿಂದು ಕರೆಲಿದ್ದ ಮನುಷ್ಯನ ಅಂಗಿಗೆ ತುಪ್ಪಿ ಏನೂ ಆಗದ್ದ ಹಾಂಗೆ ಮೋರೆ ತಿರುಗಿಸಿದ್ದು, ಪ್ರೋಕ್ಷಣೆ ಆಗಿ ಪವಿತ್ರ ಆದ ಮನುಷ್ಯ ಆ ಗೌಜಿಲಿ ಮಾಪ್ಳೆಗೆ ಎರಡು ಪೊಡಸಿದ್ದು ನೆಮ್ಪಾವುತ್ತು.
    ಈಗಳೂ ಹೀಂಗೆ ಸರ್ವಿಸು ಕಾರುಗೊ ಇದ್ದೋ ಭಾವಯ್ಯ..??

  31. ಬರದ್ದು ಭಾರಿ ಲಾಯ್ಕಾಯಿದು.
    ಎಂಗೊ ಎಲ್ಲ ಸಣ್ಣಾದಿಪ್ಪಗ ಕಾರುಗಳಲ್ಲಿ ಇನ್ನುದೆ ಜಾಸ್ತಿ ಜನ ಹಾಕಿಯೊಂಡು ಇತ್ತಿದ್ದವು. ಈಗ ರಜ್ಜ ಕಮ್ಮಿ ಆಯಿದೊ ಹೇಳಿ ಕಾಣ್ತು.
    ಹಾಂಗೆ ಸರ್ವಿಸು ಮಾಡ್ಲೆ ನಮ್ಮ ಅಂಬಾಸಿಡರು ಕಾರೆ ಸರಿ. ಇನ್ನು ಮಾರುತಿಯೊ,ಐ-೧೦ ಮಣ್ಣೊ ಆದರೆ ಒಂದೇ ವಾರಲ್ಲಿ ಲಗಾಡಿ ಹೋಕ್ಕು. :).
    ಒಂದು ಕಾಲಲ್ಲಿ ಮಾಡಾವು-ಬೆಳ್ಳಾರೆ ದಾರಿಲಿ 90 ವರೆಗೆ ಕಾರುಗೊ ಇತ್ತಿದ್ದಡ. ಈಗ ಕಮ್ಮಿ ಆಗಿರೆಕು. ಈಗ ಬಸ್ಸಿಂಗುದೆ ಕಾರಿಂಗುದೆ ಒಂದೇ ಕ್ರಯ ಹೇಳಿ ಕಾಣ್ತು.

    1. {ಈಗ ಬಸ್ಸಿಂಗುದೆ ಕಾರಿಂಗುದೆ ಒಂದೇ ಕ್ರಯ ಹೇಳಿ ಕಾಣ್ತು}
      – ಅಂಗುಡಿಂದ ತೆಗವಗ ಬೇರೆಬೇರೆ ಕ್ರಯ ಹೇಳಿ ಕಾಣ್ತು, ಸರೀ ಗೊಂತಿಲ್ಲೆ – ರೂಪತ್ತೆಯತ್ರೆ ಕೇಳೆಕ್ಕಷ್ಟೆ. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×