Oppanna.com

ರೂಪತ್ತೆಯ ಡಾಗುಟ್ರು ವ್ಯಾಯಾಮ ಮಾಡ್ಳೆ ಹೇಳಿದ್ದವಡ!

ಬರದೋರು :   ಒಪ್ಪಣ್ಣ    on   20/06/2014    8 ಒಪ್ಪಂಗೊ

ಡೈಮಂಡು ಭಾವನ ಮದುವೆ ಕಳುದವಾರ ಕಳಾತಲ್ಲದೋ –
ಎಲ್ಲೋರುದೇ ಕೂದು ಮಾತಾಡಿಗೋಂಡಿಪ್ಪಗ ಕಾನಾವು ಡಾಗುಟ್ರು ಹೇಯಿದ ಶುದ್ದಿ ನಿಂಗೊಗೆ ಕಳುದ ವಾರ ಹೇಳಿದ್ದೆ.
ಎಲ್ಲೋರುದೇ ಏನೊಳ್ಳೆದು ಮಾತಾಡಿಗೊಂಡಿಪ್ಪಗಳೇ ರೂಪತ್ತೆ ಬಂತದಾ!
ಶೇಡ್ಯಮ್ಮೆ ವಿದ್ಯಕ್ಕನೂ, ಶ್ರೀಅಕ್ಕನೂ ಮಾತಾಡಿಂಡಿದ್ದಲ್ಲಿ ಒಂದು ಕುರುಷಿ ಕಾಲಿತ್ತಲ್ಲದೋ – ಅಲ್ಲಿ ಕೂದುಗೊಂಡತ್ತು.

ಶ್ರೀಅಕ್ಕೋ, ಹೇಂಗಿದ್ದೇ? ಪಟ್ಟೆ ಸೀರೆ ಹೊಸತ್ತಾ? ಕಾರು ತೆಕ್ಕೊಂಡೇ ಬಂದದಾ, ಅಲ್ಲ ಮನೆಯೋರು ತಂದುಮಾಡಿಕ್ಕಿ ಹೋದ್ದೋ? ಎನಗೆ ರಜಾ ಸೊಂಟಬೇನೆ, ಓ ಇಲ್ಲಿ ಕೂರ್ತೆ ಆತಾ, ಬೈಲಿನೋರ ಹತ್ತರೆ ಕೂದರೆ ತೊಂದರೆ ಇಲ್ಲೆನ್ನೇ – ಹುಳಿಹುಳಿ ಮೋರೆ ಮಾಡಿಂಡು ಹೇಳಿತ್ತು. ಬಂದು ಕೂಪ ಮದಲೇ ಅಷ್ಟು ದೊಡ್ಡಸ್ತಿಕೆ ಅರುದರುದು ಬಿದ್ದತ್ತು. ಇರಳಿ.
ಶ್ಯೇ, ಇಲ್ಯೆಪ್ಪಾ, ಧಾರಾಳ ಕೂಪಲಕ್ಕೂ… – ರೂಪತ್ತೆಯ ಹತ್ತರೆ ಹೇಂಗೆ ಮಾತಾಡೇಕು ಹೇದು ಶ್ರೀಅಕ್ಕಂಗೆ ಹೇಳಿಕೊಡೆಕ್ಕೋ! ಹ್ಹು!!
~

ಟೀಕೆಮಾವಂಗೆ ಮಜ್ಜಾನದ ಊಟಕ್ಕೆ ಮಜ್ಜಿಗೆ ಇಲ್ಲದ್ದರೆ ಆತೇ ಇಲ್ಲೆ.
ಅದೇ ನಮುನೆ ಬೈಲಿಂಗೊಂದು ರೂಪತ್ತೆ ಇಲ್ಲದ್ದರೆ ಆತೇ ಇಲ್ಲೆ!
ಅಪ್ಪು, ನಮ್ಮ ರೂಪತ್ತೆಯ ಸಂಗತಿಗೊ – ನಿಂಗೊಗೆ ಗೊಂತಿಕ್ಕು ಅಲ್ಲದೋ?

ರೂಪತ್ತೆಯ ಮನೆಲಿ ಎಲಿಉಪದ್ರ ಕಂಡಾಬಟ್ಟೆ ಆಗಿ, ಮತ್ತೆ ಎಲಿಗೂಡು ಮಡಗೇಕಾಗಿ ಬಂದಿತ್ತು ಒಂದು ಕಾಲಲ್ಲಿ.

ಆ ಶುದ್ದಿ ನಿಂಗೊಗೆ ಮರದಿದ್ದರೆ, ಇದಾ – ಇಲ್ಲಿದ್ದು (https://oppanna.com/?p=293).
ಅದಾಗಿ, ರೂಪತ್ತೆ ಕಾರು ಕಲ್ತದು ನಿಂಗೊಗೆ ಗೊಂತಿದ್ದಲ್ದೋ? – ಇಲ್ಲದ್ದರೆ ಇದಾ, ಆ ಶುದ್ದಿಕೇಳಿ (https://oppanna.com/?p=1316).

ಅಂತೂ ಕಾರು ಕಲ್ತಿದು.  ಒಬ್ಬನೇ ಬೇಕಾದಲ್ಲಿಗೆ – ಕುಂಕುಮಾರ್ಚನೆಗೆ, ವಲಯ ಸಭೆಗೆ, ಬೇಂಕಿನ ಮೀಟಿಂಗಿಂಗೆ, ಸಂಗೀತ ಕಛೇರಿಗೆ – ಕೊಂಡೋಪಲೆ ಅರಡಿಗಾಗಿಂಡಿದ್ದತ್ತು.
ಒಬ್ಬನೇ ಕಾರು ಕೊಂಡೋಗಿ, ಒಪಾಸು ಮನೆಗೆ ಎತ್ತಿದ ಕೂಡ್ಳೇ – ಗೆಂಡ ತೊಳದು ಮಡಗಿರೆ ಆತು.
ಒಬ್ಬಂಗೆ ಕಾರು ಬಿಡ್ತ ಕೆಲಸ, ಇನ್ನೊಬ್ಬಂಗೆ ತೊಳದು ಮನಾರ ಮಾಡ್ತ ಕೆಲಸ – ಅಷ್ಟಪ್ಪಗ ಇಬ್ರಿಂಗೂ ಬಚ್ಚುಲಿಲ್ಲೆನ್ನೇ ಹೇದು ಅಭಾವ° ಸಮರ್ಥನೆ ಮಾಡುಗು! 🙂

ಅದಾಗಿ, ಆ ಕಾರಿಲಿ ಜಾಗೆ ಇಲ್ಲದ್ದದು-  ಆ ಶುದ್ದಿ ಗೊಂತಿದ್ದನ್ನೇ? (https://oppanna.com/?p=3452)
ದೊಡ್ಡಕಾರೇ ಆದರೂ, ಒಬ್ಬನೇ ಹೋವುತ್ತರೂ, ಇನ್ನೊಬ್ಬನ ಕೂರ್ಸಿಗೊಂಬಷ್ಟು ಜಾಗೆ ಅದರ ಕಾರಿಲಿಲ್ಲದ್ದದು.
ಅದರ ಕಾರಿಲಿ ಇಲ್ಲದ್ದದೋ, ಅಲ್ಲ ಹೃದಯಲ್ಲಿ ಇಲ್ಲದ್ದದೋ – ಹೇದು ಬೈಲಕರೆ ಗಣೇಶಮಾವಂಗೆ ಸಂಶಯ ಬಂದದುದೇ ನಿಂಗೊಗೆ ಅರಡಿಗು. ಅಲ್ಲದೋ?
ಇದೆಲ್ಲ ಆಗಿ, ಆ ರೂಪತ್ತೆ ಅದರ ಮಗಳ ಬೆಂಗ್ಳೂರಿಂಗೆ ಮದುವೆ ಮಾಡಿಕೊಟ್ಟದು; ಒಂದರಿ ಒಂದು ವಾರ ಮಗಳ ಮನೆಗೆ ಹೋದ್ಸು – ನಿಂಗೊಗೆ ಗೊಂತಿಕ್ಕು.

ಹಾಂಗೆ ಹೋಗಿ, ಒಂದು ವಾರ ಬಿಟ್ಟು ಒಪಾಸು ಊರಿಂಗೆ ಬಂದಪ್ಪದ್ದೇ, ಅದರ ಮುದ್ದಿನ ನಾಯಿಗೆ ತುಂಬಾ ಅಸಕ್ಕಾಗಿತ್ತಾಡ.
ನಾಯಿಯ ಅಸಕ್ಕು ನೋಡಿದ ರೂಪತ್ತೆಗೆ ತುಂಬಾ – ಮಗಳ ಮನೆಗೆ ಹೋದ ಕುಷಿಂದಲೂ ಹೆಚ್ಚಿನ – ಬೇಜಾರಾಯಿದಾಡ. ಎಷ್ಟು? ಇದಾ.. ಇಷ್ಟು!! (https://oppanna.com/?p=12275)

ಅದೇನೇ ಇರಳಿ,  ರೂಪತ್ತೆಯ ಹಳೆಶುದ್ದಿಗೊ ಎಷ್ಟೂ ಇದ್ದು;  ಅದರ ಮಾತಾಡಿಗೋಂಡು ಕೂದರೆ ವಿಷಯ ಮುಂದೆ ಹೋಗ!
~

ಇದೆಲ್ಲ ವಿಷಯ ಈಗ ಎಂತಗೆ ನೆಂಪಾತು ಹೇದರೆ – ಈ ರೂಪತ್ತೆ ಮೊನ್ನೆ ಶ್ರೀಅಕ್ಕನವರ ಹತ್ತರೆ ಹೇಳಿದ ವಿಷಯಂಗೊ ಒಪ್ಪಣ್ಣನ ಕೆಮಿಗೂ ಬಿದ್ದತ್ತು. ಹೆಮ್ಮಕ್ಕಳ ಮಾತುಕತೆಯ ಕೇಳೇಕು ಹೇದು ಕೇಳಿದ್ದಲ್ಲ, ಆದರೆ ಪಾಪ ಅದರ ಕಷ್ಟಸುಖವ ಎಲ್ಲೋರಿಂಗೂ ಕೇಳೇಕನ್ನೇ ಹೇಳಿಯೇ ಹೇಳುವಗ ಕೇಳದ್ದೆ ಇರ್ತೋ?
ಸಂಗತಿ ಕೇಳಿ ಬೇಜಾರಾತು, ಬೈಲಿಂಗೂ ಹೇಳಿಕ್ಕುವೊ – ಹೇದು ಅನುಸಿತ್ತು. ಕೇಳಿ ನಿಂಗೊಗೂ ಬೇಜಾರಾವುತ್ತರೆ ಆಗಲಿ, ಪಾಪ.
ಪಾಪ ರೂಪತ್ತೆ!!

~

ಸಂಗತಿ ಎಂತರ? ರೂಪತ್ತೆಗೆ ರಜಾ ಸೊಂಟಬೇನೆಡ. 🙁
~

ಇನ್ನೊಬ್ಬನ ಬೇನೆಯ ನಾವು ನೆಗೆಮಾಡ್ಳಾಗ, ಅಲ್ಲದ್ದರೆ ಮತ್ತೆ ಭಾಗ್ಯತ್ತೆ ಒಪ್ಪಣ್ಣನ ಕೆಮಿ ಹಿಂಡುಗು!
ಹಾಂಗಾಗಿ ಆ ಸಂಗತಿ ಬೇಗ ಹೇಳಿಬಿಡ್ತೆ:
ಸೊಂಟಬೇನೆಂದಾಗಿಜಾಸ್ತಿ ಎಂತ ಕೆಲಸ ಮಾಡ್ಳೂ ಎಡಿತ್ತಿಲ್ಲೇಡ.
ಎಲ್ಲವೂ ಇನ್ನೊಬ್ಬನೇ ಮಾಡಿ ಆಯೇಕಷ್ಟೇಡ.
ಅಂತೇ ಕೂದುಗೊಂಬದಾಡ ಮನೆಲಿ.
ಉದಿಯಪ್ಪಗ ಎದ್ದಲ್ಲಿಂದ ಇರುಳು ಒರಗುವನ್ನಾರವೂ ಸೊಂಟಲ್ಲಿ ಬೆಳ್ಟು ಬೇಕಾವುತ್ತಡ.
ಇಡೀ ಮನೆಯ ಉಸ್ತುವಾರಿ ಒಬ್ಬನೇ ನೋಡಿಗೊಂಡು ಬಂದು, ಒಂದರಿಯೇ ಹೀಂಗೆ ದೇವರು ಎಂತಗೆ ಸೊಂಟಬೇನೆ ಕೊಟ್ಟ – ಹೇದು ಒಂದೊಂದರಿ ದೇವರ ಮೇಗೆ ಕೋಪವೇ ಬಪ್ಪದಿದ್ದಡ ರೂಪತ್ತೆಗೆ!

~

ಕಳುದ ಶೆನಿವಾರ ಮತ್ತೆ ಉಮೇಶ ಡ್ರೈವರನ ಬರುಸಿ ಪುತ್ತೂರಿಂಗೆ ಕಾರಿಲಿ ಹೋತಡ. ತನಗೇ ಬಿಟ್ಟುಗೊಂಬಲೆಡಿಯ ಹೇಳ್ತ ಅಪನಂಬಿಕೆ ಬಂದಕಾರಣ. ಎಲುಗು ದೋಷ ಎಲ್ಲ ನೋಡೇಕಾರೆ ಪಂಜಲ್ಲಿದ್ದವೋ? ಇಲ್ಲೆ! ಬೆಳ್ಳಾರೆಲಿದ್ದವೋ? ಇಲ್ಲೆ! ಪುತ್ತೂರಿಲೇ ಆಯೇಕಟ್ಟೆ.

ಡಾಗುಟ್ರಲ್ಲಿ ಪರೀಕ್ಷೆ ಆತು. ವ್ಯಾಯಾಮ ಕಮ್ಮಿ ಆಗಿ ದೇಹತೂಕ ಹೆಚ್ಚಾತು. ಹಾಂಗಾಗಿ ದೇಹದ ಭಾರ ಹೊರ್ತ ಬಲ ಸಾಲದ್ದೆ ಸೊಂಟಲ್ಲಿ ಬೇನೆ ಎದ್ದದು – ಹೇದು ಪುತ್ತೂರಿನ ಅಜಿತಡಾಗುಟ್ರ° ಬರದು ಕೊಟ್ಟವಡ.
ಆತದು!
ಅಂಬಗ ಇನ್ನೆಂತರ ಮಾಡೇಕಾದ್ಸು? ದೇಹಾಲಸ್ಯ ಇಳಿಯೇಕು.
ಇಳಿಯೇಕಾರೆ ಎಂತಾಯೇಕು? ವ್ಯಾಯಾಮ ಆಯೇಕು!
ಹಾಂಗೆ ಇನ್ನು ವ್ಯಾಯಾಮ ಸುರುಮಾಡೇಕು – ಹೇದೂ ಬರದು ಕೊಟ್ಟವಡ ಡಾಗುಟ್ರು.
~

ದೇಹ ವ್ಯಾಯಾಮಲ್ಲಿ ಕೈಕುತ್ತ ಮಾಡುದು, ಕಾಲುಕುತ್ತ ಮಾಡುದು ಅಲ್ಲದ್ದೇ, ನೆಡವದೂ ಸೇರಿತ್ತು. ಹಾಂಗೆ ನಿಂಗೊ ನೆಡೇಕು – ಹೇದು ಮಾತು ಹೇಳಿಬಿಟ್ಟಿದವಡ ಡಾಗುಟ್ರು. ಹಾಂಗೆ, ಪುತ್ತೂರಿಂದ ಬಪ್ಪಗಳೇ – ಚೆರ್ಪಿನಂಗುಡಿಗೆ ಹೋಗಿ – ಜೆಂಬ್ರಕ್ಕೆ ಹಾಕುತ್ತ ಚೆರ್ಪು ಗುಡ್ಡೆನೆಡದು ಹಾಳಪ್ಪದು ಬೇಡ ಹೇದು – ವಾಕಿಂಗು ನೆಡವಲೆ ಹೇದು ಒಂದು ಜೊತೆ ಗೆನಾ ಜೋಡು ತಂತಡ. ಹಾಂಗೆ ತಪ್ಪಲೆ ಹೋಗಿಪ್ಪಗ ಇನ್ನೊಂದು ಜೊತೆ ಚೆಂದದ ಚೆರ್ಪು ಕಂಡತ್ತಡ – ಅದನ್ನೇ ಆ ಮದುವೆಗೆ ಹಾಕಿಂಡು ಬಂದದಡ. ಓ ಅಲ್ಲಿ, ಮೆಟ್ಳ ಕರೆಲಿ ಇದ್ದಾಡ. ಇರಳಿ.

ಹಾಂಗೆ, ಈಗ ದಿನಾಗುಳೂ ಉದಿಯಪ್ಪಗ ಮನೆಂದ ಗೇಟಿನ ಒರೆಂಗೆ ನೆಡವದಡ, ನಾಯಿಯ ಕಟ್ಟಿಂಡು. ನಾಯಿಗೆ ತೂಕ ಜಾಸ್ತಿ ಆಯಿದಿಲ್ಲೆ, ಆದರೆ, ನಾಯಿ ಒಟ್ಟಿಂಗಿದ್ದರೆ ಅಸಕ್ಕಪ್ಪಲಿಲ್ಲೆ ಇದಾ! ನಾಯಿಗೆ ಅಸಕ್ಕಾದರೆ ಆರು ಕೇಳ್ತ! ಹ್ಹು!

ಉದಿಯಪ್ಪಗ ಮೂರು ಸರ್ತಿ ಮೇಲೆಕೆಳ ನೆಡದು ಆದ ಮತ್ತೆ ಮನೆಗೆತ್ತಿದ್ದೇ!-  ಒಂದು ಗಳಾಸು ಶರ್ಬತ್ತು ತಯಾರು ಮಾಡಿ ಮಡಗಿರ್ತವು ರೂಪತ್ತಯ ’ಮನೆಯೋರು’. ಹಾಂಗೆ ದಿನಾಗುಳೂ ಕುಡಿಯೇಕು ಹೇದು ರೂಪತ್ತೆಗೆ ಡಾಗುಟ್ರು ಹೇಳಿತ್ತಿದ್ದವು. ಡಾಗುಟ್ರು ಹೇಳಿದ್ದರ ಹಾಂಗೇ ರೂಪತ್ತೆ ಅದರ ಮನೆಯೋರಿಂಗೂ ಹೇಳಿದ್ದತ್ತು. ಹಾಂಗಾಗಿ, ಮನೆಯೋರು ಅವ್ವಾಗಿ ಮಾಡುದು ಹೇದು ಟೀಕೆಮಾವ° ತಿಳ್ಕೊಳೇಕು ಹೇದು ಏನಿಲ್ಲೆ! ಜೇನವೂ, ನಿಂಬೆಸರೂ ಕರಡುಸಿದ ಒಂದು ನಮುನೆ ಶರ್ಬತ್ತು ಅದು. ಬೊಜ್ಜು ಕರಗಲೆ ಒಳ್ಳೆದಾಡ.

ಅದಾಗಿ ಉದಿಯಪ್ಪಗಾಣ ಕಾಪಿತಿಂಡಿ.
ಮೊದಲು ಬೇಕಾಬಿಟ್ಟಿ ಪಾಕಂಗಳ ಮಾಡಿಂಡಿತ್ತಿದ್ದವು ರೂಪತ್ತೆ ಎಜಮಾನ್ರು. ಈಗ ಹಾಂಗೆ ಮಾಡ್ಳೆ ಅವಕಾಶ ಇಲ್ಲೆ. ಎಣ್ಣೆಪಸೆದು, ಜೆಡ್ಡಿನಂಶ ಇಪ್ಪದು ಇತ್ಯಾದಿಗಳ ತಿಂಬಲಾಗ ಹೇದು ಅಜಿತ ಡಾಗುಟ್ರು ಹೇಯಿದ್ದರ ರೂಪತ್ತೆ ಅದರ ಎಜಮಾನ್ರ ಹತ್ತರೆ ಹೇಳಿದ್ದನ್ನೇ – ಹಾಂಗಾಗಿ ಈಗ ತುಂಬಾ ಹದಹಾಳಿತದ ತಿಂಡಿಗೊ. ಹೆಚ್ಚಿನಂಶವೂ ಚಪಾತಿಯೇ. ಅದು ತಪ್ಪಿರೆ ರಾಗಿಮುದ್ದೆ, ಅದು ತಪ್ಪಿರೆ ಗೋಧಿ ಗಂಜಿ- ಹೀಂಗೆಂತದೋ. ರೂಪತ್ತೆಯ ಮಗಳ ಅಪ್ಪಂಗೆ ಕೊಯಿಶಕ್ಕಿ ಹೆಜ್ಜೆಯೋ, ತಣ್ಣನೆಯೋ ಇರ್ತನ್ನೇ – ಹಾಂಗಾಗಿ ಹೀಂಗಿರ್ಸ ತಿಂಡಿತೀರ್ಥಂಗೊ ಮಾಡಿ ಹಾಕಲೂ ಅವಕ್ಕೆಂತ ಬೇಜಾರಿಲ್ಲೆ!

ಎಡೆ ಹೊತ್ತಿಲಿ ಮದಲು ತಿಂದುಗೊಂಡಿದ್ದ ಹಾಂಗಿರ್ತ ಲೇಸು, ಬೂಸು, ಬಟಾಟೆ, ಚಿಪ್ಸು – ಎಂತೂ ಇಲ್ಲೆ. ಅದೆಲ್ಲ ತೆಕ್ಕೊಂಬಲಾಗ ಹೇಳಿದ ಮತ್ತೆ ಸರಿಯಾಗಿ ನೆಡೆತ್ತಾ ಇದ್ದು. ಆ ದಿನ ಒಂದೇ ಒಂದು ಪೆಕೆಟು ಕರ್ಕುರೆ ತಯಿಂದಿಲ್ಲೆ ರೂಪತ್ತೆ, ಪುತ್ತೂರಿಂದಲೇ ಬತ್ತರುದೇ. ಪಾಪ, ರೂಪತ್ತೆನಾಯಿ ಎಂತ ಅನ್ಯಾಯ ಮಾಡಿದ್ದು – ಅದು ಕಾದೇ ಬಾಕಿ! ಅಷ್ಟನ್ನಾರ ತಂದದು ಬಾಕಿ ಇದ್ದದೆಲ್ಲದರನ್ನೂ ಮತ್ತೆ ನಾಯಿಗೆ ಕೊಟ್ಟು ಬೇಜಾರ ಕಳದತ್ತಡ ರೂಪತ್ತೆ. ಇರಳಿ.

~

ಮಜ್ಜಾನಕ್ಕೂ ಹಾಂಗೇ, ಕೇರೆಟ್ಟೋ, ಚೆಕ್ಕಾರ್ಪೆಯೋ ತುಂಡುಸಿ ಮಾಡಿದ ಸಲಾಡು ಇರ್ಲೇ ಬೇಕು. ಪಸೆ ಇಲ್ಲದ್ದ ಆಹಾರಂಗೊ. ಹಾಲು-ಮಸರು ಇಲ್ಲೆ, ಬರೇ ಮಜ್ಜಿಗೆ ಮಾಂತ್ರ. ಹಾಂಗಾಗಿ ಮಜ್ಜಿಗೆ ಮಾಡ್ಳೇಬೇಕಾದ ಅನಿವಾರ್ಯತೆ ಎಜಮಾನ್ರಿಂಗೆ ಬಯಿಂದು. ಉಪ್ಪಿನಕಾಯಿ ಇಲ್ಲೆ, ಬರೇ ಚಟ್ಣಿಹೊಡಿ. ಕೊದಿಲು ಇಲ್ಲೆ, ಬರೇ ಹಸರ ಸಾರು, ಅದೂ – ಒಗ್ಗರಣೆ ಇಲ್ಲದ್ದದು. ಒಗ್ಗರಣೆಲಿ ಎಣ್ಣೆಪಸೆ ಇದ್ದಲ್ಲದೋ – ಹಾಂಗಾಗಿ. ಸುರೂ ಒಂದೆರಡು ದಿನ ಎಜಮಾನ್ರಿಂಗೆ ತಟಪಟ ಆದರೂ, ಈಗ ಸರೀ ಅಭ್ಯಾಸ ಆಯಿದಡ. ಶ್ರೀಅಕ್ಕ° ಹೂಂಕುಟ್ಟಿಂಗೊಂಡೇ ಇತ್ತಿದ್ದವು. ಶೇಡ್ಯಮ್ಮೆ ವಿದ್ಯಕ್ಕಂಗೆ ಕೆಲವು ಉಪಮೆಯೋ, ರೂಪಕವೋ ಕೇಳಿ ನೆಗೆ ತಡೆಯದ್ದೆ ಓ ಅಲ್ಲಿ ಕರೆಲಿ ಹಾಲುಮಜಲು ಅಕ್ಕನ ಹತ್ತರೆ ಐದು ನಿಮಿಷ ಮಾತಾಡಿಕ್ಕಿ ಬಂದವು.

~

ಮದಲು ಉಂಡಿಕ್ಕಿ ಒರಗಲೆ ಇದ್ದತ್ತಲ್ಲದೊ – ಈಗ ಮಧ್ಯಾಹ್ನದ ಒರಕ್ಕೂ ಇಲ್ಲೇಡ. ಒರಗಲಾಗ ಹೇದರೆ, ಬೇರೆಂತ ಮಾಡುದು? ಧಾರವಾಹಿ ನೋಡ್ಳೆ ಟೀವಿ ಹಾಳಾಯಿದು, ಮಗಳತ್ರೆ ಮಾತಾಡ್ಳೆ ಪೋನು ಹಾಳಾಯಿದು!!
ಹಾಂಗೆ ಹೊತ್ತುಕಳವಲೆ ಬೇರೆಂತಾರು ದಾರಿ ನೋಡೇಕಷ್ಟೆ. ಪುಸ್ತಕ ಹಿಡ್ಕೊಂಡು ಓದಲಕ್ಕನ್ನೇ – ಹೇದವು ಶ್ರೀಅಕ್ಕ°. ಪುಸ್ತಕ ಹೇಳುವಗಳೇ ಆವಳಿಗೆ ಬಂತು ರೂಪತ್ತೆಗೆ, ಓದುದು ಹೇಳುವಗ ಇನ್ನೂ ಜೋರು ಆವಳಿಗೆ ಬಂತು. ಈಗ ನಿಂಗೊಗೂ ಬಂತೋ? ಬರಳಿ.
ಹಾಂಗೆ, ಪುಸ್ತಕ ಹಿಡಿಯಲೂ ಉದಾಸ್ನ ಆಗಿ ಈಗ ಈಗ ಬೇರೆ ಉಪಾಯ ಇಲ್ಲದ್ದೆ ತೋಟಕ್ಕೆ ಹೋಪದಾಡ!!

~

ಹೊತ್ತೋಪಗಾಣ ಚಾಯ ಇಲ್ಲದ್ದೆ ಈಗೀಗ ಅಭ್ಯಾಸವೇ ಆಗಿ ಹೋತಡ. ರೂಪತ್ತೆಗೆ ಅಭ್ಯಾಸ ಆಯಿದು, ಆದರೆ ಅದರ ನಾಯಿಗೆ ಆಯಿದೋ? ಇಲ್ಲೆ. ರಸ್ಕು ತಿಂಬಲೇ ಬೇಕು. ಹಾಂಗಾಗಿ ಎಜಮಾನ್ರು ಚಾಯಕುಡಿವಗ ಎರಡು ತುಂಡು ರಸ್ಕು ರೂಪತ್ತೆ ನಾಯಿಗೆ ಹಾಕೆಕ್ಕು ಹೇಳಿಯೇ ಕಾನೂನು ಬಯಿಂದಡ. ಡಾಗುಟ್ರು ಹೇಳದ್ರೂ ಕೆಲವೆಲ್ಲ ರೂಪತ್ತೆಯೇ ಕಾನೂನು ಮಾಡ್ತು ಮನೆಮಟ್ಟಿಂಗೆ.

~

ಇರುಳಾಣ ಊಟ ತುಂಬ ಗೌಜಿದಲ್ಲ. ಚಪ್ಪಾತಿ.
ಶರ್ಮಪ್ಪಚ್ಚಿ ಮನೆಲಿ ಮಾಡ್ತ ಹಾಂಗೆ, ಇಡಿ ಚಪಾತಿ ತಂದು ಹೊಡಿ ಮಾಡಿ ಚಪಾತಿ.
ಬೇಶುವಗ ತುಪ್ಪ ಹಾಕಲಿಲ್ಲೆ, ಪಸೆ ಇದಾ!
ಎಜಮಾನ್ರಿಂಗೆ ಒಣಕ್ಕಟೆ ಮೆಚ್ಚದ್ದಕ್ಕೆ ರಜಾ ತುಪ್ಪ ಹಾಕಿಗೊಳ್ತವು ತಿಂಬಲಪ್ಪಗ, ಆದರೆ ರೂಪತ್ತೆ ಹಾಂಗೆ ಮಾಡ. ಡಾಗುಟ್ರು ತಿಂಬಲಾಗ ಹೇಳಿದ ಮತ್ತೆ ಒಂದರಿಯೂ ತುಪ್ಪ ತಿಂದಿದಿಲ್ಲೆ. ನಿನ್ನೆ ಹೊತ್ತೋಪಗ ತಿಂದ ಪೋಡಿಲಿ ತುಪ್ಪ ಇಲ್ಲೆ, ಎಣ್ಣೆ ಇದಾ ಇದ್ದದು! ಅದು ಬೇರೆ.

~

ಇದಿಷ್ಟು ಅನ್ನಾಹಾರದ ವಿತ್ಯಾಸ ಆದರೆ, ಒಳುದ್ದದು ವ್ಯಾಯಾಮ. ಉದಿಯಪ್ಪಗಾಣ ವಾಕಿಂಗು ಹೇಳಿದೆ ಅಲ್ಲದೋ? ಅದಾಗಿ, ಎಡೆ-ಎಡೆಯ ಹೊತ್ತುಗಳಲ್ಲಿ ಈಗ ತೋಟಕ್ಕೆ ಹೋಪದಾಡ. ಬಗ್ಗಿ ಬಗ್ಗಿ ತೆಂಙಿನಕಾಯಿ ಹೆರ್ಕುಸ್ಸು, ಅಡಕ್ಕೆ ರಾಶಿ ಕೂಡುತ್ತು, ಹುಲ್ಲು ಪೊರ್ಪುಸ್ಸು – ಹೀಂಗಿರ್ತ ಹಲವು ಕಾರ್ಯಂಗಳ ಮಾಡಿ ಅಪ್ಪಗ ರಜಾ ಉಲ್ಲಾಸ ಆವುತ್ತಡ.
ಹಗಲಿಡೀ ಕೆಲಸ ಮಾಡಿ ಅಪ್ಪಗ ಇರುಳು ಮನುಗಿದ ಕೂಡ್ಳೇ ಠಮ್ಮನೆ ಒರಕ್ಕು ಬತ್ತಾಡ.
ಮನೆ ಉಡುಗುದು, ಉದ್ದುದು, ಒಸ್ತ್ರ ಒಗವದು, ಪಾತ್ರ ತೊಳವದು – ಹೀಂಗಿರ್ತ ಕೆಲಸಂಗಳನ್ನೂ ಈಗ ರಜರಜ ಮಾಡ್ತ ಕಾರಣ ಎಜಮಾನ್ರಿಂಗೆ ಅಡಿಗೆಲೇ ಹೆಚ್ಚು ಹೊತ್ತು ಕಳವಲೆ ಸಿಕ್ಕುತ್ತಾಡ.

ಕೆಲಸ ಮಾಡುದು ಸಕಾಗದ್ದೆ ತೂಕ ಬೆಳದ್ದದೋ – ಹೇದು ರೂಪತ್ತೆಗೆ ಸಂಶಯ ಅಡ.
ಆದರೆ, ಸೌಕರ್ಯ ಆಗಿಹೋದರೆ ನವಗೆ ಕೆಲಸ ಮಾಡ್ಳೆ ಮನಸ್ಸಾದರೂ ಬತ್ತೋ – ಶ್ರೀಯಕ್ಕೋ – ಹೇದು ಗತ್ತಿನ ನೆಗೆ ಒಂದು ಉದುರುಸಿತ್ತು ರೂಪತ್ತೆ.
ಕತೆ ಇನ್ನೂ ಉದ್ದಕೆ ಹೋಗಿಂಡು ಇದ್ದತ್ತು. ಒಸಗ್ಗೆ ಆತು, ಬೈಲಿನ ಎಲ್ಲೋರುದೇ ಬನ್ನಿ – ಹೇದು ಹೇಳಿದ ಕಾರಣ ಎಂಗೊ ಎದ್ದೆಯೊ°. ಬೈಲಿನೋರು ಸೇರಿ ಒಸಗೆ ಕೊಡ್ಳೆ ಹೆರಟೆಯೊ°.
ರೂಪತ್ತೆಗೆ ಸೊಂಟಬೇನೆ ಇದ್ದಕಾರಣ ಕವರು ಕೊಡ್ಳೆ ಮಂಟಪಕ್ಕೆ ಹತ್ತೆಕ್ಕೋ ಬೇಡದೋ ಹೇದು ಆಲೋಚನೆ ಮಾಡಿ ಕೂದುಗೊಂಡತ್ತು.

~

ಇದರ ಪಂಚಾತಿಗೆಯ ದೂರಲ್ಲಿ ಕೂದು ಕೇಳಿಗೋಂಡಿದ್ದ ಒಪ್ಪಣ್ಣಂಗೆ ಎಂತೆಲ್ಲ ಅನುಸಿಗೊಂಡಿತ್ತು.
ಈ ರೂಪತ್ತೆ, ಇಷ್ಟನ್ನಾರ ಯೇವ ಮನೆಕೆಲಸವೂ ಮಾಡ.
ಮನೆ ಉದ್ದುದು, ಉಡುಗುದು – ಒಂದೋ ಕೆಲಸಕ್ಕೆ ಬತ್ತ ವಾರಿಜ, ಅದು ಬಾರದ್ದ ದಿನ ಎಜಮಾನ್ರು.
ಒಸ್ತ್ರ ಒಗವಲೆ ಮಿಷನು, ಅದಲ್ಲದ್ದರೆ ವಾರಿಜ, ಅದೂ ಅಲ್ಲದ್ದರೆ ಎಜಮಾನ್ರು.
ಪಾತ್ರ ತೊಳವಲೆ ಕೆಲಸದ್ದು. ಅದಿಲ್ಲದ್ದರೆ – ಎಜಮಾನ್ರು.
ಮಸರ ಕಡವಲೆ ಒಂದು ಮಿಷನು. ಅದಿಲ್ಲದ್ದರೆ – ಮತ್ತಾರು – ಎಜಮಾನ್ರು.
ಕಡವಲೆ ಗ್ರೈಂಡರು. ಕರೆಂಟಿಲ್ಲದ್ದರೆ ಮಾಂತ್ರ ಕಡವಕಲ್ಲಿಲಿ – ಎಜಮಾನ್ರು.
ನೀರೆಳವಲೆ ಪಂಪಿದ್ದನ್ನೇ. ಲೈನಿಲ್ಲದ್ದರೆ ಮಾಂತ್ರ ಎಜಮಾನ್ರು ಕೊಡಪ್ಪಾನಲ್ಲಿ ಎಳೇಕಪ್ಪದು.
ತೋಟಕ್ಕೆ ಹೇಂಗೂ ಇಳಿಯಲಿಲ್ಲೆ. ಕೆಲಸಕ್ಕೆ ಬತ್ತ ಶಿವರಾಮನೇ ಎಲ್ಲ ಕೆಲಸ ನೋಡಿಗೊಳ್ತು.
ಈಗ ಮೈಲಿ ತೂಕ ಜಾಸ್ತಿ ಆತು, ವ್ಯಾಯಾಮ ಕಡಮ್ಮೆ ಆತು ಹೇದು ವ್ಯಾಯಾಮ ಮಾಡ್ಳೆ ಹೆರಟತ್ತು!

ಆದರೆ, ಇದೇ ಬೈಲಿನ ಆಚಕೊಡಿಲಿಪ್ಪ ಪಾತಿಅತ್ತೆಯ ನೋಡಿ ನಿಂಗೊ.
ಅವರ ಮನೆಲಿಯೂ ಸೌಕರ್ಯಂಗೊ ಇದ್ದು. ಮಿಕ್ಸಿ,ಗ್ರೈಂಡರು, ಒಸ್ತ್ರ ಒಗೆತ್ತ ಮಿಷನು, ಆಚದು ಈಚದು – ಎಲ್ಲವೂ ಇದ್ದು. ಆದರೂ, ಪಾತಿಅತ್ತೆ ಒಂದಷ್ಟು ಕೆಲಸವ ಮಾಡಿಯೇ ಮಾಡುಗು.
ದಿನಕ್ಕೆ ಎರಡು ಸರ್ತಿ ಆದರೂ ತೋಟಕ್ಕೆ ಹೋಗಿಯೇ ಹೋಕು.
ಐವತ್ತೈವತ್ತು ಅಡಕ್ಕೆ ಆದರೂ ತೋಟಂದ ಹೆರ್ಕದ್ದೆ ಇರವು.
ಹಟ್ಟಿಬುಡಲ್ಲಿ ಹತ್ತು ಹೆಜ್ಜೆ ಆದರೂ ಹಾಕದ್ದೆ ಇರವು. ವಾರಕ್ಕೆ ಎರಡು ಸರ್ತಿ ಆದರೂ ಗುಡ್ಡೆಂದ ಬಜವು ತಾರದ್ದೆ ಇರವು.
ಇದೆಲ್ಲದಕ್ಕೂ ಆಳುಗೊ-ಕೆಲಸದೋರು, ಕಂತ್ರಾಟಿನೋರು ಇದ್ದರೂ, ಪಾತಿಅತ್ತೆ ಕೆಲಸ ಮಾಡದ್ದೆ ಜಡ ಆಗಿ ಕೂಯಿದವಿಲ್ಲೆ. ಆದರೆ ರೂಪತ್ತೆ – ಎಲ್ಲವನ್ನೂ ಜಾಣಸೋಮಾರಿತನ ತೋರ್ಸಿ ಕೆಲಸ ಹಾರ್ಸಿತ್ತು. ಯೇವ ಕೆಲಸವನ್ನೂ ಮಾಡದ್ದ ಕಾರಣ ತಿಂದ ಆಹಾರ ಮೈಲೇ ಬಾಕಿ.

~

ಸೌಕರ್ಯ ಎಷ್ಟೇ ಇದ್ದರೂ, ವ್ಯಾಯಾಮ ಕಮ್ಮಿ ಮಾಡಿಗೊಂಬಲಾಗ.
ದೇಹ ವ್ಯಾಯಾಮ ಕಮ್ಮಿ ಆದರೆ, ಮತ್ತೆ ವ್ಯಾಯಾಮ ಮಾಡ್ಳೆ ಹೇಳಿಯೇ ಹಲವು ಸೌಕರ್ಯಂಗಳ ಮಾಡಿಗೊಳೆಕ್ಕಕ್ಕು – ಹೇದು ರೂಪತ್ತೆ ಸಂಗತಿಲಿ ಗೊಂತಕ್ಕು. ಅಲ್ಲದೋ?

~

ಒಂದೊಪ್ಪ: ಪಾತಿಅತ್ತೆಗೆ ಬಾಲ್ಯಲ್ಲೇ ಮನೆಗಾಗಿ ದುಡುದು ವ್ಯಾಯಾಮ ಮಾಡ್ಳೆ ಹೆರಿಯೋರು ಹೇಳಿಕೊಟ್ಟಿದವು. ಅಲ್ಲದೋ?

8 thoughts on “ರೂಪತ್ತೆಯ ಡಾಗುಟ್ರು ವ್ಯಾಯಾಮ ಮಾಡ್ಳೆ ಹೇಳಿದ್ದವಡ!

  1. ಈಗಾನ ಪರಿಸ್ಥಿತಿ ಹೇಂಗಿದ್ದು ಹೇಳಿದರೆ ರೂಪತ್ತೆ , ಸ್ವರೂಪ ಮಾವ ಅಪ್ಪಲೇ ಕುಶಿ. ಸೊಂಟ ಬೇನೆ , ಬಿ ಪಿ , ಶುಗರ್ ಹೇಳಿ ಶುರು ಅಪ್ಪಾಗ ಬೇಕಾದ ವ್ಯಾಯಾಮ , ಯೋಗ ! ನವಿರಾಗಿ ಪರಿಸ್ಥಿತಿಯ ಬಿಚ್ಚಿದ್ದಕ್ಕೆ ಅಭಿನಂದನೆಗೊ .

  2. ಹರೇರಾಮ,
    ಇಂದಿನ ಕಾಲದ ಒಂದು ಮುಖ್ಯ ಸಮಸ್ಯೆಯ ನೈಜ ಚಿತ್ರಣ, ಹಾಸ್ಯಮಿಶ್ರಿತ ರೀತಿಲಿ ತಿಳುಶಿದ್ದಿ ಒಪ್ಪಣ್ಣ.
    ಇದು ಓದಿ ನೆಗೆ ಮಾಡಿಕ್ಕಿ ಬಿಡುವ ವಿಷಯ ಅಲ್ಲ, ವಿಚಾರ ಮಾಡೆಕಾದ ವಿಷಯ.
    ಹೀಂಗಿದ್ದ ಸಮಸ್ಯೆಗೆ ಆಧುನಿಕ ಸೌಕರ್ಯ ಅಲ್ಲ, ಆಧುನಿಕತೆಯ ಹೆಸರಿಲ್ಲಿ ನಾವು ಜೀವನವ ತಪ್ಪು ದೃಷ್ಟಿಕೋನಲ್ಲಿ ನೋಡುದು ಕಾರಣ ಹೇಳಿ ಎನಗೆ ಕಾಂಬದು.
    ಯಾವುದೇ ಸಮಸ್ಯೆ ಬಂದಪ್ಪಗ ತಲೆಬೆಶಿ ಮಾಡಿ ಕಷ್ಟಪಡುವ ಬದಲು, ಸಮಸ್ಯೆಯೇ ಬಾರದ್ದ ಹಾಂಗೆ ತಡವದು ಬುದ್ಧಿವಂತಿಕೆ 🙂

  3. ಚೆ.ಚೆ.ರೂಪತ್ತೆಯ ಭೇಟಿ ಅಪ್ಪ ಒಂದು ಸಂದರ್ಭ ತಪ್ಪಿ ಹೋತಾನೆ ಒಪ್ಪಣ್ಣ. ಡೈಮಂಡು ಭಾವಯ್ಯನ ಮದುವೆಗೆ ಎನಗೆ ಬಪ್ಪಲಾತಿಲ್ಲೆ. ಇರಳೀ.
    ರೂಪತ್ತೆಯ ಗೆಂಡನ ಗ್ರೇಶಿ ಬೇಜಾರಾತು. ಅವು ಅಂಬಗ ಸಪೂರಕಾಗಿ ಒಳ್ಳೆ ಆರೋಗ್ಯಲ್ಲಿ ಇಕ್ಕೊ ಹೇಳಿ.
    ರೂಪತ್ತೆ ಶ್ರೀಅಕ್ಕನ ಹೆಚ್ಚು ಮಾತಾಡ್ಳೆ ಬಿಟ್ಟಿರ. ಅಂತೂ ಈ ವಾರ ರೂಪತ್ತೆಯ ಕತೆ ಕೇಳಿ ಹಳತ್ತೆಲ್ಲವೂ ಒಂದರಿ ನೆಂಪಾತು.
    ಒಪ್ಪಣ್ಣನ ಒಪ್ಪ ಶುದ್ದಿಗೆ ಒಂದೊಪ್ಪ.

  4. ರೂಪತ್ತೆಯ ಗಾಳಿಗೆ ಹಿಡಿಯದ್ರೆ ಒಪ್ಪಣ್ಣಂಗೆ ಒರಕ್ಕು ಬತ್ತಿಲ್ಲೆ…

  5. ಹರೇ ರಾಮ, ರೂಪತ್ತೆಯ ದಿನಚರಿಯ ರೂಪಂಗೊ, ಅಭ್ಯಾಸದ ರೂಪಂಗೊ, ಚಿತ್ರಣ ಮೂಡಿ, ಶರೀರ ಬೊಜ್ಜಿಂಗೆ ಉಪಾಯ ಕಾಣುತ್ತು. ಪರೋಕ್ಷವಾಗಿ ನಾಟುವ ಹಾಂಗಿದ್ದು. ಒಳ್ಳೆ ಶುದ್ದಿ

  6. ಒಪ್ಪಣ್ಣ, ರೂಪತ್ತೆಯ ಬಗ್ಗೆ ಶುದ್ದಿ ಬರೆಯದ್ದೆ ಸುಮಾರು ಸಮಯ ಆತಿದಾ, ಹಾಂಗೆ ಒಪ್ಪಣ್ಣಂಗೆ ರೂಪತ್ತೆಯ ಬೈಲಿಂಗೆ ಗುರ್ತ ಹೇಳೆಕ್ಕಾದ ಹಾಂಗೆ ಆಯಿದು, ಹಳೆ ಶುದ್ದಿಗಳ ಒಂದರಿ ಹೇಳಿಗೊಂಡು!! 😉 😉
    ಕುಶಾಲಿಂಗೇ ಆದರೂ ಗಂಭೀರ ಶುದ್ದಿಯನ್ನೇ ಹೇಳಿದ್ದೆ ಒಪ್ಪಣ್ಣ! ನಮ್ಮ ಈಗಾಣ ಜನಂಗಳ ಕೆಲಸವ ರೂಪತ್ತೆಯ ರೂಪಲ್ಲಿ ವಿವರ್ಸಿ, ವ್ಯಾಯಾಮದ ಅಗತ್ಯವ ತೋರ್ಸಿಕೊಟ್ಟಿದೆ. ಲಾಯ್ಕಾಯಿದು ಶುದ್ದಿ.

    ಒಪ್ಪಣ್ಣ, ನಮ್ಮ ಹೆರಿಯೋರು ಕೆಲಸಲ್ಲಿಯೇ ದಿನ ಕಳದು ಆರೋಗ್ಯಲ್ಲಿ ಇತ್ತಿದ್ದವು. ಈಗಾಣ ಕಾಲಲ್ಲಿ ಬೇಕಾದ ಅನುಕೂಲಂಗ ಇದ್ದರೂ ಸಮಯ ಆರ ಹತ್ರೆಯೂ ಇಲ್ಲೆ. ಅನುಕೂಲ ಹೆಚ್ಚಾದಷ್ಟು ಸಮಯವೂ, ತಾಳ್ಮೆಯೂ ಕಡಮ್ಮೆಯೇ ಆವುತ್ತಾ ಇಪ್ಪದು ಭಾರೀ ಬೇಜಾರಾದ ಸಂಗತಿ. ಸಮಯಾನುಕೂಲ ಮಾಡಿ ಎಲ್ಲರೂ ಆರೋಗ್ಯ ಕಾಪಾಡಿಗೊಳ್ಳಲಿ..

  7. ಯಲಾ ! ಯಲಾ ! ಭಾಗ್ಯತ್ತೆ ಒಪ್ಪಣ್ಣನ ಕೆಮಿ ಹಿಂಡುವಷ್ಟು ಜೋರಿದ್ದೋ? ಎನಗೂ ಊರಿಂಗೆ ಹೋದಿಪ್ಪಗ ಭಾಗ್ಯತ್ತೆಯ ಕಾಣೆಕ್ಕು . ”ನಿಂಗೊ ಯಾವ ತಂತ್ರದ (ಟೆಕ್ನಿಕ್) ಜ್ಞಾನ ಒಪ್ಪಣ್ಣನ ಕೆಮಿ ಹಿಂಡುಲೆ ಉಪಯೋಗಿಸುದು ? ರಾಮನದ್ದೋ? ಕೃಷ್ಣನದ್ದೋ ?”ಹೇಳಿ ಕೇಳೆಕ್ಕು 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×