ಸಾಬೊನು ಮಾಡ್ಳೆ ಎಣ್ಣೆ ಬೇಕು; ಎಣ್ಣೆ ತೆಗವಲೆ ಸಾಬೊನು ಬೇಕು..!!

ಮಳೆಗಾಲದ ಈ ಜಡಿಕುಟ್ಟಿ ಮಳೆಗೆ ಎಲ್ಲಿಗೂ ಹೆರ ಹೋಯೇಕು ಹೇದು ಆವುತ್ತಿಲ್ಲೆಪ್ಪೋ!
ಮಳೆಯ ಶಬ್ದಕ್ಕೆ ಕೆಮಿಕೊಟ್ಟುಗೊಂಡು ಸ್ವಸ್ಥ ಬಿದ್ದು ಒರಗುವೊ – ಹೇದು ಅನುಸುದು ಒಪ್ಪಣ್ಣಂಗೆ ಮಾಂತ್ರವೋ, ಅಲ್ಲ ಎಲ್ಲೋರಿಂಗೂ ಆವುತ್ತೋ? ಉಮ್ಮಪ್ಪ.

ಒರಿಶ ಇಡೀ ಕಾದ ಭೂಮಿಂದ ಎದ್ದ ನೀರು ಮೋಡ ಆಗಿ ಬಾನಲ್ಲಿ ಎರ್ಕಿ ಮಳೆಆಗಿ ಉದುರುದು. ಮೋಡ ಕಾಲಿ ಅಪ್ಪಗ ಪುನಾ ಬೆಶಿಲಿ ಬಿದ್ದು ಭೂಮಿ ಕಾವದು. ಪುನಾ ಮಳೆ, ಪುನಾ ಬೆಶಿಲಿ – ಇದಲ್ಲದೋ ವತ್ಸರಚಕ್ರ ಹೇದರೆ!
ಜೀವಿಗಳೂ ಹಾಂಗೇ, ಪರ್ಬೊಂದ ಪತ್ತನಾಜೆ ಒರೆಂಗೆ ಬೆಶಿಲಿಪ್ಪಗ ಕತ್ತೆ ಹಾಂಗೆ ದುಡಿಸ್ಸು, ಪತ್ನಾಜೆಂದ ಪರ್ಬೊ ಒರೆಂಗೆ ಮಳೆ ಇಪ್ಪಾಗ ಹೆಬ್ಬಾವಿನ ಹಾಂಗೆ ಬಿದ್ದುಗೊಂಬದು!

~

ಮೊನ್ನೆ ಉದಿಯಪ್ಪಗಂಗೆ ಉದ್ದಿನದೋಸೆ ಮಾಡಿದವು ಮನೆಲಿ. ಮಳೆ ಜೋರಿಪ್ಪ ದಿನವೇ ಆಗಿದ್ದತ್ತು ಅದು. ಮದಲೇ ಮಳೆ, ಅದರ ಮೇಗಂದ ಹುಳಿಉದ್ದಿನ ಜಡ; ಇದರ ಮನುಗಿಯೇ ಕರಗುಸೇಕಷ್ಟೆ ಇನ್ನು – ಹೇದು ಗ್ರೇಶಿಗೊಂಡೆ.
ಗ್ರೇಶಿಗೊಂಡದೋ, ಹೇಳಿಗೊಂಡದೋ ನೆಂಪಿಲ್ಲೆ –  ಹೇಂಗೂ ಇನ್ನು ಮನುಗುದಲ್ಲದೋ – ಎಣ್ಣೆ ಕಿಟ್ಟಿ ಮನುಗು ಹೇದು ಅಬ್ಬೆ ಹೇಳುಸ್ಸು ಕೇಳಿತ್ತು.
ಅಪ್ಪು, ಒಂದೊಂದರಿ ಆ ಕ್ರಮ ಇದ್ದು. ಎಣ್ಣೆ ಕಿಟ್ಟಿ ಮನುಗಿರೆ ಮೈಮಂಡೆಗೆ ಒಳ್ಳೆದು – ಹೇದು ಒಂದು ನಂಬಾಣಿಕೆ. ಹಾಂಗಾಗಿ ಅಪ್ರೂಪಲ್ಲಿ ಒಂದೊಂದಿನ ಎಣ್ಣೆಕಿಟ್ಳಿದ್ದು. ಹಬ್ಬದ ದಿನ ಹೇಂಗೂ ಇದ್ದನ್ನೇ, ಅದಲ್ಲದ್ದೇ ಎಡೆಡೆಲಿ ಒಂದೊಂದರಿ.
ಕಾಸಿದ ಎಣ್ಣೆಯೇ ಆಯೇಕು ಹೇದು ಇಲ್ಲೆ,  ಯೇವ ಎಣ್ಣೆ ಆದರೂ ಆವುತ್ತು, ಮೈಗೆ ಪಸೆ ಆದರೆ ಆತು. ಆದರೆ ಸಾಮಾನ್ಯವಾಗಿ ಮನೆಲಿ ಕಾಸಿದ ಎಣ್ಣೆಯೇ ಇರ್ತು. ಪಸೆಯೇ ಇಲ್ಲದ್ದ ಚಿಮ್ಣೆಣ್ಣೆ ಆತಿಲ್ಲೆ, ಗೊಂತಾತಿಲ್ಯೋ!

~

ಎಣ್ಣೆ ಸಮಾ ಕಿಟ್ಟಿ ಒಂದೊರಕ್ಕು ಒರಗಿರೆ, ಎದ್ದಪ್ಪಗ ಮೈಯ ಪಸೆ ಇರ್ತಿಲ್ಲೆ. ಎಲ್ಲವೂ ನಮ್ಮ ದೇಹದೊಳ ಎಳಕ್ಕೊಂಡಿರ್ತು. ಆಯುರ್ವೇದಲ್ಲಿಯೋ, ಪ್ರಕೃತಿ ಚಿಕಿತ್ಸೆಲಿಯೋ ಮಣ್ಣ ಇದಕ್ಕೆಂತಾರು ಹೆಸರಿಕ್ಕು; ಆದರೆ ಒಪ್ಪಣ್ಣಂಗೆ ಹೆಸರು ಅರಡಿವ ಮದಲೇ ಎಣ್ಣೆಕಿಟ್ಟುದು – ಹೇದೇ ಹೇಳಿಗೊಂಡಿದ್ದದು. ಇದಾಗಿ ಒಂದರಿ ಚೆಂದಕೆ ಮಿಂದರೆ, ಮೈ ಮನಾರ ಆವುತ್ತಿದಾ!

ಮೀವಗಳೂ ಹಾಂಗೇ – ಮದಲಿಂಗೆ ಅಜ್ಜ ಎಣ್ಣೆ ಕಿಟ್ಟಿರೆ ಮೀವಗ ಸಾಬೊನು ಹಾಕವು – ಬರೇ ಬೆಶಿನೀರು ಹಾಕುಗು. ಅಷ್ಟಪ್ಪಗ ಪಸೆ ಹಾಂಗೇ ಒಳಿಗಿದಾ ಮೈಲಿ. ಮಿಂದ ಮತ್ತೆಯೂ ಮೈ ಹೀರುಲೆ ಅವಕಾಶ ಆವುತ್ತ ನಮುನೆಲಿ.

ಆದರೆ ಎಲ್ಲೋರಿಂಗೂ ಅದು ಸಮ ಆಗ. ಕೆಲವು ಜೆನ ಮಿಂದಿಕ್ಕಿ ಬಪ್ಪಗ ಸಮಾ – ಸಾಬೊನು ಹಾಕಿ ಎಣ್ಣೆಪಸೆ ಪೂರ ಮುಗುಶಿ ಬಕ್ಕು. ಮೈಲಿ ಪೂರ ಎಣ್ಣೆಪಸೆ ಹಿಡುದರೆ ಮನಾರ ಅನುಸುತ್ತಿಲ್ಲೆ – ಹೇದು ಅವರ ಭಾವನೆ. ಅದೇನೇ ಇರಳಿ.

ಮೈಗೆ ಹಾಕಿದ ಎಣ್ಣೆ ಮಾಂತ್ರ ಅಲ್ಲ!
ಹಲಸ್ನಾಯಿ ಕೊರದ ಮತ್ತೆ ಕೈಗೆ ಮೇಣ ಹಿಡಿಸ್ಸು. ಮೇಣ ಹೋಯೇಕಾರೆ ಎಣ್ಣೆ ಬೇಕು. ಆ ಎಣ್ಣೆ ಹೋಯೇಕಾರೆ ಸಾಬೊನೇ ಬೇಕು!
ಚೂರಿಬೈಲು ದೀಪಕ್ಕನಲ್ಲಿಂದ ತುಪ್ಪ ತಂದರೆ, ಐನ್ನೂರು ರುಪಾಯಿ ತುಪ್ಪವ ಮುಗುಶಿದ ಮತ್ತೆ – ತುಪ್ಪ ತುಂಬುಸಿದ ಐದ್ರುಪಾಯಿ ಕರಡಿಗೆ ಒಪಾಸು ಕೊಡೆಕ್ಕಾವುತ್ತು. ಈ ವಿಷಯ ಅಂದೊಂದರಿ ನಾವು ಮಾತಾಡಿದ್ದು. ನೆಂಪಿದ್ದಲ್ಲದೋ?
ಹಾಂಗೆ ಕರಡಿಗೆ ಒಪಾಸು ಕೊಡುವಾಗ ತುಪ್ಪದ ಪಸೆ ಹಾಂಗೇ ಕೊಡ್ಳೆ ಎಡಿತ್ತಿಲ್ಲೆ, ಅದರ ಪಸೆ ತೆಗದು ಕೊಡೆಕ್ಕಾವುತ್ತು.
ಅದಕ್ಕೆ ಪುನಾ ಸಾಬೊನೇ ಆಯೇಕು.
ಅಂತೂ, ಎಣ್ಣೆಪಸೆ ಹೋಯೇಕಾರೆ ಸಬೊನು ಹಾಕೇಕು. ಅಪ್ಪೋ.
~

ಸಾಬೊನು ಮಾಡುಸ್ಸು ಹೇಂಗೆ?
ಒಪ್ಪಣ್ಣ ಸಣ್ಣ ಇಪ್ಪಾಗ, ಒಸ್ತ್ರ ಒಗೆತ್ತ ಸಾಬೊನು ತಂದುಗೊಂಡಿದ್ದದು ಕಡಮ್ಮೆ. ಮಾಡಿಗೊಂಡಿದ್ದದೇ ಹೆಚ್ಚು.
ಕೊಪ್ಪರ ಕೊಟ್ಟು ಎಣ್ಣೆ ಮಾಡ್ಳಿದ್ದಲ್ಲದೋ – ಆ ಎಣ್ಣೆ ತಪ್ಪ ದಿನ ಸಾಬೊನಿಂಗೆ ಬೇಕಾದ ಹೊಡಿಗಳನ್ನೂ ಹಿಡ್ಕೊಂಡು ಬಕ್ಕು ಅಪ್ಪ. ಗೆನಾ ಎಣ್ಣೆಯ ಒಟ್ಟಿಂಗೆ ಕಸಂಟಟೆ ಜೆಡ್ಡೆಣ್ಣೆಯೂ ಇರ್ತಲ್ಲದೋ – ಆ ಎಣ್ಣೆಗೆ ಈ ಸಾಬೊನಿನ ಹೊಡಿಗಳನ್ನೋ ಇನ್ನೊಂದೋ ಎಲ್ಲ ಹಾಕಿರೆ ಪಷ್ಟ್ಲಾಸು ಬಾರ್-ಸೋಪು ಆವುತ್ತು. ಒಸ್ತ್ರ ಒಗವಲೆ ಈ ಸಾಬೋನೇ ಉಪಯೋಗ ಮತ್ತೆ ಆರು ತಿಂಗಳು!

ಪೇಟೆಂದ ತಪ್ಪ ಸಾಬೊನುದೇ ಹಾಂಗೇ ಮಾಡುಸ್ಸು – ಅದರ ಮಾಡ್ಳೂ ಎಣ್ಣೆಪಸೆ ಬೇಕಾವುತ್ತು.
ಎಣ್ಣೆಯೋ, ತುಪ್ಪವೋ – ಎಂತಾರು ಇಲ್ಲದ್ದೆ ಸಾಬೊನು ಮಾಡ್ಳೆ ಎಡಿತ್ತೇ ಇಲ್ಲೆ ಇದಾ.

~

ಈಗ ನೋಡಿ ನಿಂಗೊ..
ಎಣ್ಣೆಪಸೆ ತೆಗವಲೆ ಸಾಬೊನು ಹುಡ್ಕುತ್ತು ನಾವು.
ಸಾಬೊನು ಮಾಡೇಕಾರೆ ಎಣ್ಣೆಪಸೆಯೇ ಬೇಕಾವುತ್ತು.

ಯೇವ ಎಣ್ಣೆ ಸಾಬೋನಿಂಗೆ ಮೂಲವಸ್ತು ಆಗಿದ್ದತ್ತೋ, ಅದೇ ಎಣ್ಣೆಯ ತೆಗೆಸ್ಸು ಸಾಬೂನೇ ಆಗಿರ್ತು.
ತಾನು ಬೆಶಿಲಿ ಕೊದುದು ಸಾಬೂನು ಮಾಡಿ ಕೊಟ್ಟ ಎಣ್ಣೆಗೆ – ಅಕೇರಿಗೆ ಸಾಬೂನೇ ವಿರೋಧಿ ಆಗಿರ್ತು. ಸಾಬೊನಿಂಗೆ ತನ್ನ ಎಲ್ಲ ಗುಣಂಗಳನ್ನೂ, ಪರಿಮ್ಮಳವನ್ನೂ – ಎಲ್ಲವನ್ನೂ ಕೊಟ್ಟಿರ್ತು; ಆದರೆ ಕಡೆಗೆ ಸಾಬೊನಿಂಗೇ ಎಣ್ಣೆಯ ಕಂಡ್ರಾಗ!
ಯೇವ ಸಾಬೂನಿಂಗೆ ಎಣ್ಣೆಯ ಕಂಡ್ರೇ ಆಗಿರ್ತಿಲ್ಲೆಯೋ, ಅದೇ ಸಾಬೂನಿನ ಮಾಡ್ಳೆ ಎಣ್ಣೆಯನ್ನೇ ಉಪಯೋಗಿಸಿರ್ತು.

ನಮ್ಮ ಎದುರು ಹೀಂಗಿರ್ಸ ಅನೇಕ ನಿದರ್ಶನಂಗಳ ನಾವು ಕಾಣ್ತು.
ಹೆತ್ತಬ್ಬೆಪ್ಪ ಮಗನ ಕೊಂಡಾಟಲ್ಲಿ ಬೆಳೆಶಿ ದೊಡ್ಡಮಾಡಿರ್ತವು, ಅಕೇರಿಗೆ ಅವ್ವೇ ದೂರಮಾಡಿ ಬಿಟ್ಟಿಕ್ಕಿ ಹೋವುತ್ತವು. ಮಕ್ಕಳ ಅಸ್ತಿತ್ವಕ್ಕೆ ಹೆತ್ತವೇ ಕಾರಣ ಹೇಳುಸ್ಸರ ಅವ್ವು ಆಲೋಚನೆಯೇ ಮಾಡ್ತವಿಲ್ಲೆ’ಪ್ಪೋ!

~

ಮೊನ್ನೆ ಇದರೆಡಕ್ಕಿಲಿ ಕನ್ಯಾನ ಆಶ್ರಮಲ್ಲಿ ನಮ್ಮ ಬೈಲಿನ ಕಾರ್ಯಕ್ರಮ ಇದ್ದದು ಗೊಂತಿದ್ದನ್ನೇ? ಅದಾ, ನಮ್ಮ ಬೈಲಿನ ಲೆಕ್ಕಲ್ಲಿ ಕೆಲವು ಕೊಡುಗೆಗಳ ಕೊಟ್ಟು ಅಲ್ಯಾಣ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿ ಇದ್ದದು!
ಅದೇ ಆಶ್ರಮದ ಇನ್ನೊಂದು ಹೊಡೆಲಿ ಮಕ್ಕಳಿಂದ ವರ್ಜ್ಯವಾದ ಅಬ್ಬೆಪ್ಪಂದ್ರೇ ಹೆಚ್ಚಿಪ್ಪ ವೃದ್ಧಾಶ್ರಮ ಇದ್ದು. ಅದರ ನೋಡಿಂಡು ಬಪ್ಪನೋ ಒಪ್ಪಣ್ಣ – ಹೇದು ಶರ್ಮಪ್ಪಚ್ಚಿ ಕರಕ್ಕೊಂಡು ಹೋದವು.
ಅಲ್ಲಿ ನೋಡಿಗೊಂಡು ಬಪ್ಪಗ – ಈ ಎಣ್ಣೆಪಸೆ –ಸಾಬೂನಿನ ಉದಾಹರಣೆ ಕೊಟ್ಟು ತೋರ್ಸಿದವು ಶರ್ಮಪ್ಪಚ್ಚಿ.

ಮೊನ್ನೆ ಮಳಗೆ ಎಣ್ಣೆಪಸೆ ಕಿಟುವಗ ಪುನಾ ನೆಂಪಾತು. ನಿಂಗೊಗೆ ಶುದ್ದಿ ಹೇಳಿಕ್ಕುವೊ ಹೇದು ಕಂಡತ್ತು.

~

ಒಂದೊಪ್ಪ: ಕೊಳೆ ತೊಳವ ಸಾಬೋನು ಒಂದೊಂದರಿ ಒಳ್ಳೆದನ್ನೂ ಹೊಳೆಗೆ ಹಾಕುಗು. ಜಾಗ್ರತೆ ಇರೆಕ್ಕು.

ಒಪ್ಪಣ್ಣ

   

You may also like...

1 Response

  1. ಶುದ್ದಿ ಓದಿ ಒಂದರಿ ಅರಡಿಯದ್ದೆ ನಿಟ್ಟುಸುರು ಬಿಟ್ಟತ್ತು. ಚಿಂತನೀಯ ಶುದ್ದಿಗೆ ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *