ಸಂಗೀತ – ಸಾಹಿತ್ಯ ಕಲಾ ವಿಹೀನಃ . . !?

May 2, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಪುತ್ತೂರಿಂಗೆ ಹೋಗಿತ್ತಿದ್ದೆ.
ಅದರ್ಲಿ ಎಂತ ವಿಶೇಷ – ಕೇಳುವಿ ನಿಂಗೊ; ಆದರೆ ವಿಶೇಷ ಇದ್ದ ಕಾರಣವೇ ಹೋದ್ಸು.
ಅದರ್ಲಿಯೂ, ವಿಶು ವಿಶೇಷ ಇದ್ದ ಕಾರಣ ಹೋದ್ಸು ಇದಾ.
ಬೇಸಗೆ ಮುಗುಕ್ಕೊಂಡು ಬಂತು, ಇನ್ನೆಂತರ ವಿಷು – ಕೇಳುವಿ ನಿಂಗೊ; ಆದರೆ ವಿಷುವಿನ ಲೆಕ್ಕಲ್ಲಿ ಬೈಲಿಲಿ ಏರ್ಪಾಡು ಆದ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ – ಮೊನ್ನೆ ಪುತ್ತೂರಿಲಿ ಇದ್ದತ್ತು. ಅದಾಗಿ, ಒಂದು ಅಪರೂಪದ ಕಾರ್ಯಕ್ರಮವೂ ಇದ್ದತ್ತು. ಅದೆಂತರ? ಎಲ್ಲ ವಿವರವಾಗಿ ಮಾತಾಡುವೊ.

~

ಬದಿಯೆಡ್ಕದ ಮಾರ್ಗಲ್ಲಿ ಪೂರ ಹೊಂಡ; ಎಲ್ಲೋರಿಂಗೂ ಗೊಂತಿಪ್ಪದೇ. ಬಸ್ಸುಗೊ ಗುರುವಾಯೂರಪ್ಪನ ನೆಂಪು ಮಾಡಿಗೊಂಡು ಎತ್ತಿನ ಗಾಡಿಯಷ್ಟು ಜೋರು ಹೋವುತ್ತು. ನಾವು ಎತ್ತುದು ತಡವಪ್ಪದು ಬೇಡ – ಹೇದು ಉದೆಗಾಲಕ್ಕೆ ಹೆರಟತ್ತು. ಮಜ್ಜಾನಕ್ಕೆ ಪುತ್ತೂರಿಂಗೆ ಎತ್ತುವಗಳೇ ಒಳ್ಳೆತ ಹಶು ಏರಿದ್ದು ನವಗೆ. ಪುತ್ತೂರಿಲಿ ಉಂಬಲೆ ನವಗೆ ಗುರ್ತ ಇಲ್ಲೆಯೋ? ಗಣೇಶಭಾವನಲ್ಲಿ ಸಮಾ ಉಂಡತ್ತು., ಬಳುಸಿದಷ್ಟೂ!!
ಕಳುದೊರಿಶ ಅಷ್ಟಾವಧಾನ ಆದ ಜಾಗೆಲಿಯೇ ಈ ಒರಿಶವೂ ಕಾರ್ಯಕ್ರಮ ಇದಾ. ಊಟ ಆಗಿ ಬಂದು ಕಾರ್ಯಕ್ರಮ ಆವುತ್ತ ಹೋಲಿಲಿ ಬಂದು ಕೂದೆ.

~
ಲಾವಂಚ ಹಾಕಿದ ಬೆಶಿನೀರು ತಂದು ಕೊಟ್ಟವು ನೇರಳೆಭಾವ – ಸೆಖೆ ಜೋರಿದ್ದ ಕಾರಣ ಎರಡೂವರೆ ಗ್ಲಾಸು ನೀರುಕುಡುದೆ; ಹಿಂದಾಣ ಸಾಲಿಲಿ – ಕಿಟುಕಿ ಕರೇಲಿ ಗಾಳಿನೆರಳು ಬತ್ತಲ್ಲಿ ಕೂದುಗೊಂಡೆ. ರಜ್ಜ ಹೊತ್ತಿಲಿ ಕಾರ್ಯಕ್ರಮ ಸುರು ಆತು; ಸುಭಗಣ್ಣ ಬಂದು ಮೀಸೆ ಎಡೆಲಿ ನೆಗೆಮಾಡಿಗೊಂಡು – “. . . ಅರವಿಂದಾಸನ ಸುಂದರೀಂ ಉಪಾಸೇ” – ಹೇದು ಉಪಾಯಲ್ಲಿ ಮನೆದೇವರ ಸ್ಮರಣೆ ಮಾಡಿಗೊಂಡವು. ಹೆರಿಯೋರ ವೇದಿಕೆಗೆ ಬಪ್ಪಲೂ ಮಾಡಿದವು.

ನಮ್ಮ ಬೈಲ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ ವೇದಿಕೆಯ ಆಸನಂಗೊಕ್ಕೆ ಯೋಗ್ಯ ಜೆನಂಗಳ ಕರಕ್ಕೊಂಡು ಬಂದು ಕೂರ್ಸಿದವು. ಹೆರಿಯೋರು, ಬರಹಗಾರರು, ದೊಡ್ಡಕೋಲೇಜಿನ ದೊಡ್ಡ ಮಾಷ್ಟ್ರು ನಮ್ಮೆಲ್ಲರ “ಅರ್ತಿಕಜೆ ಅಜ್ಜ” ಕಾರ್ಯಕ್ರಮದ ಅಧ್ಯಕ್ಷರಾಗಿ ಕೂದವು. ಕನ್ನಡ ಪಠ್ಯಲ್ಲಿ ವಿಶೇಷ ಪರಿಣತಿ ಹೊಂದಿದ, ನಿವೃತ್ತ ಪ್ರಾಚಾರ್ಯರೂ, ಸಂಕಹಿತ್ಲು ಪುಳ್ಳಿಯ “ಒಪ್ಪಕುಂಞಿಅಜ್ಜನೂ”, ನಮ್ಮೆಲ್ಲರ “ಮಾಡಾವು ಮಾವ” ದಿಕ್ಸೂಚಿ ಭಾಷಣಕಾರರಾಗಿ ಬಂದವು. ಯುವ ಸಾಹಿತಿ, ಉತ್ಸಾಹೀ ಬರಹಗಾರ, ಕಣಿಪುರ ಹೇಳ್ತ ಯಕ್ಷಪತ್ರಿಕೆಯ ಸಂಪಾದಕರಾದ ಚೆಂಬಳ್ತಿಮಾರು ಅಣ್ಣ ಮುಖ್ಯ ಅತಿಥಿಯಾಗಿ ವೇದಿಕೆಗೆ ಬಂದವು. ಪೆರ್ನಾಜೆ ಮಧುಅಕ್ಕನ ಎಜಮಾನ ಮಳಿಭಾವನೂ ವೇದಿಕೆಗೆ ಬಂದವು; ಚಿನ್ನದಂಗುಡಿಯ ಮುಳಿಯಣ್ಣಂದೇ ವಿಶೇಷ ಆಹ್ವಾನಿತರಾಗಿ ವೇದಿಕೆಗೆ ಬಂದವು. ಮೂರು ಜೆನ ಹೆರಿಯ ಸಾಧಕರು, ಮೂರು ಜೆನ ಯುವ ಸಾಧಕರು – ಹಳೆಬೇರು, ಹೊಸ ಚಿಗುರು – ಇದಕ್ಕೊಂದು ಸಾಕ್ಷಿ ಆಗಿ ಬಂತು ನಮ್ಮ ಕಾರ್ಯಕ್ರಮಾರಂಭಲ್ಲೇ.

~

ಮುಳಿಯಭಾವ ಸ್ವಾಗತಮಾಡಿಗೊಂಡು ಹೋದ ಹಾಂಗೇ ಪ್ರಕಾಶಣ್ಣ ಶಾಲು ಹಾಕಿದವು. ಅಷ್ಟಪ್ಪಗ ಕೂದೋರಿಂಗೆ ಮುಳಿಯಭಾವ ಆರ ಹೇಳ್ತಾ ಇಪ್ಪದು ಹೇದು ಗೊಂತಕ್ಕನ್ನೇ! ಒಟ್ಟಿಂಗೇ ಗಣೇಶಮಾವ ಬಂದು ಪುಷ್ಪ ಗುಚ್ಛವನ್ನೂ ಕೊಟ್ಟು ಕೈಮುಗುದವು. ಮತ್ತೆ, ಒಂದೊಂದೇ ಕಾರ್ಯಂಗೊ ಆಗಿಬಂತು. ಶರ್ಮಪ್ಪಚ್ಚಿ ಪ್ರಾಸ್ತಾವಿಕವಾಗಿ ಬೈಲ ಅಸ್ತಿತ್ವದ ಬಗ್ಗೆ ಸಭೆಗೆ ತಿಳುಶಿಕೊಟ್ಟವು, ಡೈಮಂಡು ಭಾವ ಹೆಸರು ಓದಿ ಹೇಳಿದ ಹಾಂಗೇ – ಒಬ್ಬೊಬ್ಬರೇ ಬಂದು ವಿಷು ಸ್ಪರ್ಧೆಯ ಪ್ರಶಸ್ತಿಯ ಮಳಿ ಭಾವನ ಕೈಂದ ತೆಕ್ಕೊಂಡವು.

ಅದಾದ ಮತ್ತೆ ಚೆಂಬಳ್ತಿಮಾರು ಅಣ್ಣ ಮಾತಾಡುವಾಗ – ಭಾಷೆಯ ಏಕೆ ಒಳಿಶೇಕು, ಅದರ ಹಿಂದೆ ಸಂಸ್ಕೃತಿ ಹೇಂಗೆ ಒಳುದು ನಿಂದಿದು – ಹೇಳ್ತರ ಸಭೆಗೆ ಅರ್ಥ ಅಪ್ಪ ಹಾಂಗೆ ತಿಳುಶಿಕೊಟ್ಟವು. ಅದಾದ ಮತ್ತೆ ಮಾಡಾವುಮಾವ ಎಂದಿನಂತೆ ವಿದ್ವತ್ಪೂರ್ಣವಾಗಿ ಮಾತಾಡಿಗೊಂಡು, ನಮಮ್ ಆಚರಣೆಗಳ ಮಹತ್ವಂಗಳನ್ನೂ ತಿಳುಶಿಕೊಟ್ಟವು. ಮಳಿಭಾವ ಮಾತಾಡುವಾಗ ಎಷ್ಟು ಆಪ್ತವಾಗಿ ಮಾತಾಡಿದವು ಹೇದರೆ, ಅದು ಭಾಷಣ ಹೇಳ್ತ ಭಾವನೆಯೇ ಬಾರ – ಆತ್ಮೀಯ ಒಬ್ಬ ಹೆಗಲಿಂಗೆ ಕೈ ಹಾಕಿಂಡು ಹೇಳ್ತ ಕಿವಿಮಾತಿನ ಹಾಂಗೆ, ಚೆಂದ ಆಗಿತ್ತು. ಅದಾದ ಮತ್ತೆ ಅರ್ತಿಕಜೆ ಅಜ್ಜ – ನೂರುಗಟ್ಳೆಲಿ ಸ್ಪರ್ಧೆಗೆ ಸೇರಿದ ಬೈಲ ನೆಂಟ್ರುಗೊಕ್ಕೆ ಅಭಿನಂದಿಸಿ, ಒಳ್ಳೆದಾಗಲಿ ಹೇದು ಆಶೀರ್ವಾದ ಮಾಡಿದವು.
ಇದಾ, ಇಷ್ಟೇ ಅಲ್ಲ ಆತಾ – ವಿವರವಾದ ವರದಿ ಓ ಇಲ್ಲಿದ್ದು. ಓದಿ, ಒಪ್ಪಕೊಡಿ.

~

ವಿಷು ಸ್ಪರ್ಧೆಯ ಬಹುಮಾನ ವಿತರಣೆ ಆದ ಮತ್ತೆ ಇನ್ನೆಂತರ? ಕಾಪಿತಿಂಡಿಯೋ?
ಅದಿದ್ದು; ಆದರೆ ಅದರಿಂದಲೂ ಮದಲು ಇನ್ನೊಂದಿದ್ದು. ಅದುವೇ ಕಾವ್ಯ-ಗಾನ-ಯಾನ!
ಅದೆಂತರ ಹಾಂಗೇದರೆ? ಮುಳಿಯಭಾವ ಮೊನ್ನೆಯೇ ಹೇಳಿತ್ತಿದ್ದವು ’ಇದಾ ಒಪ್ಪಣ್ಣ – ಅದೊಂದು ಅಪುರೂಪದ ಕಾರ್ಯಕ್ರಮ; ಬಾರದ್ದೆ ಇರೆಡ’ ಹೇದು.
ಅಪೂರ್ವ ಕಾರ್ಯಕ್ರಮ ಎಂತದೇ ಆದರೂ ಒಪ್ಪಣ್ಣ ನೋಡುಗಿದಾ; ಹಾಂಗೆ ಇದನ್ನೂ ನೋಡೇಕಾತು.

ಅಭಾವ, ಚುಬ್ಬಣ್ಣನವು ಕುರ್ಚಿಗಳ ತೆಗದು ಜೆಂಬುಗಾನೆ ಹಾಸಲೆ ಎದ್ದವು. ನಾವು ಕೂದ ಕಿಟುಕಿ ಕರೆಂಗೆ ಬೆಶಿಲು ಬಡಿವಲೆ ಸುರು ಆತು; ಓ ಆ ಫೇನಿನ ಬುಡಲ್ಲಿ ಮಾಷ್ಟ್ರುಮಾವ ಕೂದುಗೊಂಡಿಪ್ಪದು ಕಂಡು – ಮಾತಾಡ್ಸಿದ ಹಾಂಗೂ ಆತು, ಫೇನಿನ ಗಾಳಿ ತಿಂದ ಹಾಂಗೂ ಆತು – ಹೇದು ಕಿಟುಕಿ ಬುಡಂದ ಎದ್ದು ಮಾಷ್ಟ್ರುಮಾವನ ಹತ್ತರೆ ಹೋಗಿ ಏನೂ – ಕೇಟೆ. ’ಹ್ಮ್, ಕ್ಮ್’ – ಹೇಳಿದವು. ಬಾಯಿಲಿ ಎಲೆ ಇದ್ದರೆ ಅವು ಮಾತಾಡ್ತವಿಲ್ಲೆ ಹೇದು ನಿಂಗೊಗೆ ಆನು ಅಂದೇ ಹೇಳಿದ್ದೆ ಅಲ್ಲದೋ?

ಸಾರ ಇಲ್ಲೆ, ಅವಕ್ಕೆ ಏನು ಕೇಳಿದ್ದು ಗೊಂತಾಯಿದನ್ನೇ; ನವಗೆ ಗಾಳಿ ಬಪ್ಪದು ಬಯಿಂದನ್ನೇ! 😉

~
ಕಾರ್ಯಕ್ರಮ ಸುರು ಆತು. ಮುಳಿಯಭಾವ ಯಕ್ಷಗಾನಾರಂಭಲ್ಲಿ ಪೀಠಿಕೆ ಬಡಿತ್ತ ಹಾಂಗೆ ಒಂದು ಸಣ್ಣ ಪೀಠಿಕೆ ಮಾತಾಡಿದವು. ಆರಾರು ಕಲಾವಿದರು ಎಂತೆಂತ ಮಾಡ್ತವು, ಎಲ್ಲೆಲ್ಲಿಂದ ಬಂದವು – ಹೇದು. ದೀಪಿಅಕ್ಕನ ಒಪ್ಪಣ್ಣಂಗೆ, ಬೈಲಿಂಗೆ ಧಾರಾಳ ಗೊಂತಿದ್ದು, ಆದರೆ ಒಳುದೋರ ಗುರ್ತ ಆಗೆಡದೋ? ಗುರ್ತ ಆತು. ಉಪಾಧ್ಯಾಯರು, ಕೆದಿಲಾಯರು, ದೇರಾಜೆಯವು, ಕಾಂಚೋಡಿನೋರು – ಎಲ್ಲೋರನ್ನೂ ಮುಖಪರಿಚಯ ಆತು. ರಜ ಹೊತ್ತಿಲಿ ಕಾರ್ಯಕ್ರಮ ಸುರು ಆತು.

~

ಕಾವ್ಯ-ಗಾನ-ಯಾನ:

ಮಾಷ್ಟ್ರುಮಾವನತ್ರೆ ಅಲ್ಲೇ ಬಗ್ಗಿ ಕೇಟೆ; ಈ ಕಾರ್ಯಕ್ರಮಕ್ಕೆ ಕಾವ್ಯ – ಗಾನ-ಯಾನ ಹೇದು ಹೆಸರು ಮಡಗಲೆ ಕಾರಣ ಎಂತಾಯಿಕ್ಕು ಮಾವ – ಹೇದು. ಎರಗಿ ಕೂದೋರು ಬಗ್ಗಿ ಕೂದುಗೊಂಡವು. ಬಾಯಿಲಿ ಎಲೆ ಇದ್ದ ಕಾರಣ ತೊಡಿನೆಗ್ಗಿ ಎಂತದೋ ಹೇಳೇಕು ಹೇದು ಗ್ರೇಶುಲಪ್ಪಗ – ಕೊರ್ಗಿ ಉಪಾಧ್ಯಾಯರು ಮಾತಾಡ್ಳೆ ಸುರು ಮಾಡಿದವು; ಹಾಂಗಾಗಿ ಮಾಷ್ಟ್ರುಮಾವ ಕೇಳುಲೆ ಸುರುಮಾಡಿದವು.

ದೇರಾಜೆ ಅಣ್ಣ ತಬಲೆ ಸರಿಮಾಡಿಗೊಂಡವು; ಲೀಲಾಶುಕ ಮಾಣಿ ಹಾರ್ಮಣಿ ಆಡ್ಸಿ ಶಬ್ದ ಮಾಡಿದವು; ಕಾಂಚೋಡು ಅಣ್ಣ-ಕೆದಿಲಾಯ ಮಾವ, ದೀಪಿ ಅಕ್ಕ – ಮೂರು ಜೆನ ಮೈಕ್ಕ ಹಿಡ್ಕೊಂಡು ಪದ್ಯ ಹೇಳುಲೆ ತಯಾರಾಗಿ ನಿಂದವು; ಕೊರ್ಗಿ ಮಾವ ಮಾತಾಡ್ಳೆ ಆರಂಭ ಮಾಡಿದವು. ಕಾರ್ಯಕ್ರಮ ಎಂತರ, ಅದರ ಸ್ವರೂಪ ಎಂತರ- ಹೇದು ಎಲ್ಲವನ್ನೂ ಹೇಳಿ, ಕ್ರಮೇಣ ಒಂದೊಂದೇ ಪದ್ಯ ಹಾಡ್ಳೆ-ಹಾಡುಸುಲೆ ಸುರುಮಾಡಿದವು.

ಕೆದಿಲಾಯ-ಕಾಂಚೋಡು-ದೀಪಿಅಕ್ಕ ಮೂರು ಜೆನ ಆಗಿಂಡು ತುಂಬಾ ವಿಶೇಷದ ಹಾಡುಗಳ ಹಾಡಿದವು. ರನ್ನ, ಜನ್ನ, ರಾಘವಾಂಕ, ಕುಮಾರವ್ಯಾಸ – ಹೇಳ್ತ ಹಳೆಕಾಲದ ಪದ್ಯಂಗೊ ಅಲ್ಲದ್ದೆ ಮುದ್ದಣ, ಅಡಿಗ, ಡುಂಡಿರಾಜ- ಇತ್ಯಾದಿ ಇತ್ತಿತ್ತಲಾಗಿಯಾಣ ಪದ್ಯಂಗಳೂ ಸೇರಿ ಹಲವು ಪದ್ಯಂಗೊ ಹಾಡಿದವು.

ಕೆದಿಲಾಯ ಮಾವನ ಕಳುದೊರಿಶ ಅಷ್ಟಾವಧಾನಲ್ಲೇ ಬೈಲಿನೋರಿಂಗೆ ಕಂಡು ಗುರ್ತ ಆಯಿದು. ಕಾಂಚೋಡಿಯಣ್ಣ ನಮ್ಮದೇ ಬೈಲಿನ ಓ ಆಚ ಹೊಡೆಯಾಣೋರು – ಚೆಂದಕೆ ಹಾಡ್ತ ಅಪ್ರತಿಮ ಪ್ರತಿಭೆ. ದೀಪಿಅಕ್ಕ ಅಂತೂ ಹೇಳೆಕ್ಕೂಳಿಯೇ ಇಲ್ಲೆ; ಗುರುಗಳ ಕೈಂದಲೇ “ಭೇಷ್” ಹೇಳುಸಿಗೊಂಡ ಅಪುರೂಪದ ಸ್ವರಸಾಧಕಿ. ಎಳೆಪ್ರಾಯಲ್ಲೇ ತುಂಬಾ ಎತ್ತರಕ್ಕೆ ಹೋದ ನಮ್ಮ ಬೈಲಿನ ಆಸ್ತಿ.

ಇವು ಹಾಡಿದ ಯೇವದೇ ಪದ್ಯ ಇರಳಿ, ಅದಕ್ಕೆ ಸರಿಯಾಗಿ ತಬಲೆಯೂ, ಹಾರ್ಮಣಿಯೂ ಹಿಮ್ಮೇಳ ಆಗಿಂಡು ಇದ್ದತ್ತು. ದೇರಾಜೆ ಅಣ್ಣ ಬೇಕುಬೇಕಾದಲ್ಲಿ ಜತಿ, ಲಯ, ತಾಳ ಎಲ್ಲ ಕೊಟ್ಟವು, ಕುಂಞಿ ಉಪಾಧ್ಯಾಯರು ಹಾರ್ಮಣಿ ಆಡುಸಿ ರಾಗ ಪ್ರಸ್ತಾರ ಹಾಕಿದವು.

ಒಂದರಿಯಾಣ ಪದ್ಯದ ಬೆನ್ನಾರೇ–ಹತ್ತು-ಹಲವು ವಿಷಯಂಗಳ ಸೇರ್ಸಿ ಚೆಂದಲ್ಲಿ ಕೊರ್ಗಿಮಾವ ವ್ಯಾಖ್ಯಾನ ಹೇಳಿಗೊಂಡಿತ್ತವು. ಒಂದು ಪದ್ಯ ಹಾಡ್ತರೆ – ಅದರ ಮೊದಲು ಒಂದು ಗೆರೆಯ ಪೀಠಿಕೆ, ಪದ್ಯ ಆವುತ್ತಾ ಇಪ್ಪಗ ಒಂದೆರಡು ಶಬ್ದದ ಸೂಚನೆಗೊ, ಪದ್ಯ ಮುಗುದ ಕೂಡ್ಳೇ ಅದಕ್ಕೆ ಒತ್ತಿಗೊಂಡ ಹಲವು ವಸ್ತು-ವಿಷಯಂಗಳ ಇಂಪಾಗಿ ವಿವರಣೆ.

ಮೂರುಗಂಟೆಂದಲೂ ಹೆಚ್ಚು ಹೊತ್ತು ಕೂದಲ್ಲಿಂದ ಹಂದುಲೇ ಮನಸ್ಸು ಬಯಿಂದಿಲ್ಲೆ. ಒಪ್ಪಣ್ಣಂಗೆ ಮಾಂತ್ರ ಅಲ್ಲ, ಮಾಷ್ಟ್ರುಮಾವಂಗೂ ಹಾಂಗೇ ಆಯಿದೋ ತೋರ್ತು; ಬಾಯಿಲಿ ಎಲೆ ಹಾಂಗೇ ಇದ್ದತ್ತು. ತುಪ್ಪಲೂ ನೆಂಪಾಯಿದಿಲ್ಲೆ. ಕಾರ್ಯಕ್ರಮ ಪೂರ್ತ ಮುಗುದ ಮತ್ತೆ ಎಲ್ಲರಿಂಗೂ ಬೈಲಿನ ಲೆಕ್ಕಲ್ಲಿ ಆಭಾರಮನ್ನಣೆ ಮಾಡಿದವು. ಬೈಲಿನ ಎಲ್ಲೋರುದೇ ಸೇರಿ ಚೆಂದಕ್ಕೆ ಪಟವನ್ನೂ ತೆಗದವು ಯೇನಂಕೂಡ್ಳಣ್ಣ.

~

ಇದೆಲ್ಲ ಆದ ಮತ್ತೆ ಮಾಷ್ಟ್ರುಮಾವ ಎಲೆ ತುಪ್ಪಿ ಬಂದವು. ಪುನಾ ಎಲೆ ತಿಂಬಲೆ ಸುರುಮಾಡಿಗೊಂಡಿತ್ತಿದ್ದವು. ಸೀತ ಹೋಗಿ ಪುನಾ ಮಾತಾಡ್ಸಿದೆ. ಆ—ಗ ಕೇಳಿದ ಪ್ರಶ್ನೆಗೆ ಉತ್ತರ ಹೇಳುಲೆ ಸುರುಮಾಡಿದವು –

ಕಾವ್ಯ ಹೇಳ್ತ ಸಾಗರ; ಗಾನ ಹೇಳ್ತ ದೋಣಿ; ಯಾನ ಹೇದರೆ ಪ್ರಯಾಣ.
ತಂಪಾದ, ನೊಂಪಾದ, ಸೊಂಪಾದ ಸಮುದ್ರಲ್ಲಿ – ಹೊತ್ತೋಪಗ ದೋಣಿಲಿ ತಲ್ಲೀನತೆಲಿ ಪ್ರಯಾಣ ಮಾಡಿದ ಹಾಂಗೆ – ಹತ್ತು ಹಲವು ಅತ್ಯುತ್ತಮ ಪದ್ಯಂಗಳ ಗಾಯನದ ದೋಣಿಲಿ ಕೂದು ಕೇಳಿ ಆನಂದಿಸಿ ಪ್ರಯಾಣ ಮಾಡ್ತ ವಿಶೇಷ ಸಂದರ್ಭ ಇದು – ಹಾಂಗಾಗಿ ಇದಕ್ಕೆ ಕಾವ್ಯ-ಗಾನ-ಯಾನ ಹೇಳುಸ್ಸು– ಹೇಯಿದವು.

ಈಗಾಣ ಆಧುನಿಕ ಪದ್ಯಂಗೊ, ಸಿನೆಮ ಪದ್ಯಂಗೊ ಅಲ್ಲ – ನಮ್ಮ ಹಿಂದಾಣೋರು, ಹಳಬ್ಬರು ಮಾಡಿಮಡಗಿದ ಕನ್ನಡದ ಸೊತ್ತುಗೊ – ವಿಶೇಷ ಸಾಹಿತ್ಯ ರಚನೆಗಳ ಹಾಡಿದ್ದದು. ಇದೆಲ್ಲ ಹೀಂಗೆ ಸಿಕ್ಕೇಕಾರೆ – ಇನ್ನೊಂದು ಕಾವ್ಯ-ಗಾನ-ಯಾನವೇ ಆಯೆಕ್ಕಟ್ಟೆ – ಹೇದವು.

~

ಅದಪ್ಪುದೇ.
ಉದಾಹರಣೆಗೆ, ಅಡಿಗಜ್ಜ ಬರದ “ಯಾವ ಮೋಹನ ಮುರಳಿ ಕರೆಯಿತೊ” – ಹೇಳ್ತ ಪದ್ಯ.
ಅದರ ಬರದವು ಬರದ್ದವು, ಹಾಡವು ಹಾಡಿದ್ದವು. ಮೊದಲೂ ಹಾಡಿದ್ದವು; ಈಗಳೂ ಹಾಡಿದ್ದವು. ಆದರೆ ಆ ಹಾಡಾಣದ ಒಟ್ಟಿಂಗೆ ಎಷ್ಟು ಸಂಗತಿಗಳ ಹೇಳಿದ್ದವಪ್ಪೋ! ನಿಂಗೊ ಕೇಳಿದ್ದಿರಾ?

ಆ ಪದ್ಯ ಎಂತಕೆ ಹುಟ್ಟಿತ್ತು, ಅದರ ಹಿಂದೆ ಇಪ್ಪ ಕತೆ ಎಂತರ, ಅಡಿಗರು ರೇಡ್ಯಲ್ಲಿ ಕೊಳಲು ಕಛೇರಿ ಕೇಳಿದ್ದು, ಅಷ್ಟಪ್ಪಗ ಕರೆಂಟು ಹೋದ್ಸು, ಅಷ್ಟಪ್ಪಗ ಕವನದ ಗೆರೆ ಹುಟ್ಟಿದ್ದು, ಅದು ಪದ್ಯ ಆಗಿ ಬಂದದು, ಅದರ ಮೋಹನ ರಾಗಲ್ಲಿ ಹಾಡ್ಳಾವುತ್ತು, ವೃಂದಾವನೀ ಸಾರಂಗಲ್ಲಿ ಹಾಡ್ಳಾವುತ್ತು, ಇದರ ಹಿಂದೆ ಇಪ್ಪಲೂ ಸಾಧ್ಯತೆ ಇಪ್ಪ ಗೌತಮ ಬುದ್ಧನ ಕತೆ – ಹೀಂಗಿಪಪ್ – ಬೇರೆಲ್ಲಿಯೂ ಕಾಂಬಲೆ ಸಿಕ್ಕದ್ದ ನಮುನೆಯ ಹಲವಾರು ಶುದ್ದಿಗೊ – ಇದಿಷ್ಟೂ ಬರೇ ಒಂದೇ ಪದ್ಯಕ್ಕೆ.

ಯಾವ ಮೋಹನ ಮುರಳಿ ಕರೆಯಿತು:

ಹೀಂಗಿರ್ಸ ಇಪ್ಪತ್ತೈದಕ್ಕೂ ಹೆಚ್ಚಿನ ಪದ್ಯಂಗೊ ಆ ವೇದಿಕೆಲಿ ಹರುದು ಬಯಿಂದು – ಹೇದರೆ, ಕಾರ್ಯಕ್ರಮ ಎಷ್ಟು ಇಂಪು ಕೊಟ್ಟಿಕ್ಕು – ಹೇದು. ಅಂತೇ ಅಲ್ಲ, ಮಾಷ್ಟ್ರುಮಾವ ಮೂರುಗಂಟೆ ಎಲೆತುಪ್ಪದ್ದೇ ಸಂಗೀತ ಕೇಳಿಗೊಂಡು ಕೂದ್ಸು.
~
ಕಾರ್ಯಕ್ರಮ ಮುಗಿವಲಪ್ಪಗ ಷ್ಟೇಟು ಬಸ್ಸಿನ ಸಮಯ ಆತು. ಹಾಂಗೆ, ಬೈಲಿನೋರ ಕಂಡಿಕ್ಕಿ, ಟಾಟ ಮಾಡಿಕ್ಕಿ ಹೆರಡುವೊ ಹೇದು ಗ್ರೇಶಿದೆ. ಹಾಂಗೆ, ಹೆರಡ್ಳಪ್ಪಗ ಮಾಷ್ಟ್ರುಮಾವ ಒಂದು ಶ್ಲೋಕ ಹೇಳಿದವು – ಸಂಗೀತ ಸಾಹಿತ್ಯ ಕಲಾ ವಿಹೀನಃ – ಸಂಗೀತ, ಸಾಹಿತ್ಯ ಇತ್ಯಾದಿ ಕಲೆಗಳಲ್ಲಿ (ಆಸಕ್ತಿ) ಇಲ್ಲದ್ದೋನು; ಸಾಕ್ಷಾತ್ ಪಶುಃ ಪುಚ್ಛ ವಿಶಾಣ ಹೀನಃ – ಕೊಂಬುದೇ ಬೀಲವುದೇ ಇಲ್ಲದ್ದ ಪ್ರಾಣಿಗೊಕ್ಕೆ ಸಮಾನ – ಹೇದು.

ಹೇದರೆ, ಮನುಷ್ಯ ಆದ ಎಲ್ಲೊರಿಂಗೂ ಸಂಗೀತ ಸಾಹಿತ್ಯವ ಆನಂದುಸುತ್ತ ಅಭಿರುಚಿ ಬೇಕು ಹೇದು ಅದರ ಅರ್ಥ.
~
ಈಗ ಹೇಳಿ, ನಿಂಗೊಗೆ ಕಾವ್ಯ-ಗಾನದ ಯಾನಲ್ಲಿ ಹೋಪಲೆ ಆಶೆ ಇದ್ದೋ?
ಹಾಂಗಾರೆ, ಬೈಲಿನ ಲೆಕ್ಕಲ್ಲಿ ಇನ್ನಾಣ ಕಾರ್ಯಕ್ರಮ ಅಪ್ಪಗ ತಪ್ಪುಸೆಡಿ. ಗೊಂತಾತಿಲ್ಯೋ?
~
ಒಂದೊಪ್ಪ: ಆಸಕ್ತಿಯೂ, ಅಭಿರುಚಿಯೂ ಇದ್ದರೆ ಮಾಂತ್ರ ಯಾನ ಆಸಕ್ತಿಕರ ಆಗಿಕ್ಕು. ಅಲ್ಲದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಕಾರ್ಯಕ್ರಮ ಲಾಯ್ಕ ಆದರೂ ಸಭೆ ಸೇರಿದ್ದು ಸಾಲ ಹೇಳಿ ಅನಿಸಿತ್ತು. ಆದರೆ ಅಭಿರುಚಿ ಇದ್ದವು ಬಯಿಂದವು;ಅದೇ ದಿನ ನಟರಾಜ ವೇದಿಕೆಲಿ ದಿವಾಣ ಭೀಮ ಭಟ್ಟರ ಸ್ಮರಣೆಲಿ ಯಕ್ಷಗಾನ ಇತ್ತಿದ್ದು.ಹಾಂಗಾಗಿಯೂ ಜೈನ ಭವನಕ್ಕೆ ಜನ ಬಂದದು ಕಡಿಮೆ ಆದ್ದದು ಹೇಳಿ ಕಾಣುತ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಅನಿತಾ ನರೇಶ್, ಮಂಚಿ
  Anitha Naresh Manchi

  ಕಾರ್ಯಕ್ರಮಲ್ಲಿ ಆನು ಕಂಡ ಒಂದು ಸಂಗತಿ ಹೇಳಿರೆ ಕಾವ್ಯ ಗಾನ ಯಾನ ಆಯ್ಕೊಂಡಿಪ್ಪಗ ಎಲ್ಲರೂ ಮಂತ್ರಮುಗ್ಧರಾಗಿ ಕೂದ್ದು.. ಇದರೊಟ್ಟಿಂಗೆ ಜೆನ ಕಮ್ಮಿ ಆತನ್ನೆ ಹೇಳುವ ಬೇಜಾರು ಇದ್ದರೂ ಸ್ಟೇಜಿಲಿದ್ದವು ಅದರ ಗುಮಾನ ಮಾಡದ್ದೇ ಒಬ್ಬನೇ ಒಬ್ಬ ಕೇಳುವವ ಇಲ್ಲದ್ರೂ ಎಂಗ ಇದೇ ಸ್ಪಿರಿಟ್ಟಿಲಿ ಕಾರ್ಯಕ್ರಮ ನಡೆಶುತ್ತೆಯ ಹೇಳುವ ಉಮೇದು ತೋರ್ಸಿದ್ದು ಬಾರೀ ಕೊಶಿ ಆತು. ನೆನಪ್ಪಿಲಿ ಒಳಿವ ಕಾರ್ಯಕ್ರಮ

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ್ ಬೊಳುಂಬು

  ಒಪ್ಪಣ್ಣನ ವರದಿ ಒಪ್ಪ ಇತ್ತು. ಕಾರ್ಯಕ್ರಮವೇ ಚೆಂದ, ವರದಿ ಇನ್ನುದೆ ಚೆಂದ. ಎಡೆಲಿ ಮಳೆ ಸೊರುದ್ದದು ಮಾಂತ್ರ ವರದಿಲಿ ಬಯಿಂದಿಲ್ಲೆ. ಮಳೆ ಬಗ್ಗೆ ಪದ್ಯ ಹಾಡುವಗಳೇ ಮಳೆ ಬಂದದು ಅಂದ್ರಾಣ ವಿಶೇಷ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಸಂಪಾದಕ°ನೆಗೆಗಾರ°ಗೋಪಾಲಣ್ಣಚೂರಿಬೈಲು ದೀಪಕ್ಕಕೊಳಚ್ಚಿಪ್ಪು ಬಾವಚುಬ್ಬಣ್ಣಅನುಶ್ರೀ ಬಂಡಾಡಿಪಟಿಕಲ್ಲಪ್ಪಚ್ಚಿಮಾಲಕ್ಕ°ಕಳಾಯಿ ಗೀತತ್ತೆಶಾ...ರೀಶರ್ಮಪ್ಪಚ್ಚಿಅಕ್ಷರದಣ್ಣಪುತ್ತೂರಿನ ಪುಟ್ಟಕ್ಕವೆಂಕಟ್ ಕೋಟೂರುಡೈಮಂಡು ಭಾವಬಟ್ಟಮಾವ°ವೇಣೂರಣ್ಣಅನು ಉಡುಪುಮೂಲೆವಿನಯ ಶಂಕರ, ಚೆಕ್ಕೆಮನೆಚೆನ್ನಬೆಟ್ಟಣ್ಣದೀಪಿಕಾಅನಿತಾ ನರೇಶ್, ಮಂಚಿವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ