ತಿಂಗಳು ಮುಗಿತ್ತ ಶೆಂಕ್ರಾಂತಿ, ತಿಂಗಳು ಸುರು ಆವುತ್ತ ತಿಂಗ್ಳೋಡು!

ಚಳಿಗಾಲದ ಛಳಿ, ಧನುರ್ಮಾಸದ ಮುರುಟಾಣ, ಧನುಪೂಜೆಯ ವಿಶೇಷ – ಇದೆಲ್ಲ ನಾವು ಕಳುದ ವಾರ ಮಾತಾಡಿಕ್ಕಿದ್ದು. ಅಲ್ಲದೋ?
ಧನುಪೂಜೆ ಶುದ್ದಿ ಮಾತಾಡಿಗೊಂಡಿದ್ದ ಹಾಂಗೇ, ಧನುಪೂಜೆ ಉತ್ಥಾನವೂ ಆಗಿ ಬಿಟ್ಟತ್ತು! ಬೈಲಿನ ಕೆಲವು ಜೆನ ಅವಕಾಶಲ್ಲಿ ಹೋಯಿಕ್ಕಿದ್ದವುದೇ!

ಎಲ್ಲ ಸರಿ, ಈವಾರಕ್ಕೆಂತರ ಶುದ್ದಿ?
ಬೇರೆಂತಾರು ಊರಶುದ್ದಿ ಮಾತಾಡುವೊ ಹೇಳಿ ಗ್ರೇಶಿಗೊಂಡಿಪ್ಪದ್ದೇ – ಅದಾ, ಬಂದೇ ಬಿಟ್ಟತ್ತು ಶೆಂಕ್ರಾಂತಿ!
ಪರ್ವಕಾಲ ಆಗಿಪ್ಪ ಮಕರಶೆಂಕ್ರಾಂತಿಯ ಬಿಟ್ಟು ಬೇರೇವದೋ ನೇರಂಪೋಕು ಮಾತಾಡಿರೆ ರಂಗಮಾವ° ಪುನಾ ಪರಂಚುಗು!! 🙁
ಅವಕ್ಕೆ ಹಾಂಗೇ – ಏನಾರು ಬಿಂಗಿ ಮಾತಾಡಿ ಹೊತ್ತುಕಳವದು ಕಂಡ್ರೆ ಆಗಲೇ ಆಗ; ಅದಿರಳಿ!
ಶೆಂಕ್ರಾಂತಿ – ಅದರ್ಲಿಯೂ ಮಕರಶೆಂಕ್ರಾಂತಿ, ಅದಕ್ಕೆ ಹೊಂದಿಗೊಂಡ ಊರ ಆಚಾರಂಗೊ, ಮಕರದ ವಿಳಕ್ಕು (ಬೆಣಚ್ಚು) – ಇದೆಲ್ಲದರ ಬಗ್ಗೆ ಬೈಲಿಲಿ ಒಂದರಿ ನೆಂಪು ಮಾಡಿಗೊಂಬ°, ಆಗದೋ?
~
ಆಕಾಶಲ್ಲಿರ್ತ ಸೂರ್ಯ ತಿರುಗಿದ ಹಾಂಗೆ ಕಾಂಬದು ಭೂಮಿ ತಿರುಗುತ್ತದರಿಂದ ಅಡ, ಮಾಷ್ಟ್ರುಮಾವ° ಅಂದೇ ಹೇಳಿದ್ದವು.
ಆದರೆ, ಜ್ಯೋತಿಷ್ಯ ಪ್ರಕಾರ ಭೂಮಿಯ ಪ್ರಕಾರಲ್ಲಿ ಕಂಡು, ಸೂರ್ಯ ಚಲಿಸುತ್ತಾ ಇಪ್ಪದು ಹೇಳಿ ಕೂಡುಸಿಗೊಳ್ತವಡ, ಜೋಯಿಶಪ್ಪಚ್ಚಿ ಹೇಳ್ತವು.
ಆ ಪ್ರಕಾರಲ್ಲಿ, ಸೂರ್ಯ ತಿರುಗಿ ತಿರುಗಿ – ಭೂಗೋಲದ ಸುತ್ತದ ಹನ್ನೆರಡು ರಾಶಿಗೂ ಹೊಕ್ಕು ಹೆರಡ್ತ°.
ಅದರ್ಲಿಯೂ, ಸೂರ್ಯ ಒಂದು ರಾಶಿಂದ ಇನ್ನೊಂದು ರಾಶಿಗೆ ಕಾಲು ಮಡಗುತ್ತ ಕಾಲ – ಆ ಸಂಕ್ರಮಣಕ್ಕೆ – ಸಂಕ್ರಾಂತಿ ಹೇಳ್ತದು.

ಕಾಂಬು ಅಜ್ಜಿ ಅದನ್ನೇ ಶೆಂಕ್ರಾಂತಿ ಹೇಳಿಗೊಂಡಿದ್ದದು ಊರ ಶೈಲಿಲಿ; ಒಪ್ಪಣ್ಣಂಗೂ ಹಾಂಗೇ ಹೇಳಿ ಹೋಪದಿದಾ, ಪಕ್ಕನೆ.. 😉
~
ಒಂದೊರಿಶಲ್ಲಿ ಹನ್ನೆರಡು ರಾಶಿಗೆ ಹೊಕ್ಕೆರಡ್ತ ಸೂರ್ಯ.
ಒಂದು ರಾಶಿಗೆ ಈಚ ಕೊಡಿಯಂದ ಹೊಕ್ಕು ಆಚ ಕೊಡಿಯಂದ ಹೆರಡ್ಳೆ ಮೂವತ್ತು -ಮೂವತ್ತೊಂದು ದಿನ ಬೇಕಾವುತ್ತಡ, ಅದುವೇ ಸೌರ ತಿಂಗಳು.
ಮೇಷ ರಾಶಿಂದ ಪೀಂಕಿ, ವೃಷಭ ರಾಶಿಗೆ ಎತ್ತಿ ಸಂಕ್ರಮಣ ಆವುತ್ತ ದಿನ ವೃಷಭ ಶೆಂಕ್ರಾಂತಿ. ಮತ್ತೆ ಒಂದು ತಿಂಗಳು ವೃಷಭ ತಿಂಗಳು – ಕಾಂಬುಅಜ್ಜಿ ಬೇಸಗೆ ಹೇಳ್ತದು ಅದರನ್ನೇ.
~
ಶೆಂಕ್ರಾಂತಿ ಹೇಳಿತ್ತುಕಂಡ್ರೆ ’ಹೊಸತನ’ ಇರ್ತು ಹೇಳ್ತದು ನಮ್ಮ ಊರಿಲಿ ಒಂದು ನಂಬಿಕೆ.
ಹಾಂಗಾಗಿ ಶೆಂಕ್ರಾಂತಿ ಪೂಜೆಗೊ ಕೆಲವು ದೇವಸ್ಥಾನ, ಬೂತಸ್ಥಾನಂಗಳಲ್ಲಿ ಅನಾದಿಂದಲೂ ನೆಡಕ್ಕೊಂಡು ಬತ್ತಾ ಇದ್ದು.
ಒಂದು ತಿಂಗಳಿಂದ ನೆಡದು ಬಂದ ಧನುಪೂಜೆ ಮುಗುದ ಲೆಕ್ಕಲ್ಲಿ ಒಂದು ಶೆಂಕ್ರಾಂತಿ ಪೂಜೆಯ ಹೆಚ್ಚಿನ ದೇವಸ್ಥಾನಂಗಳಲ್ಲಿ ಮಾಡುಗು.
ರಂಗಮಾವ° ಪಾರೆ ಅಜ್ಜಿಯ ಬೂತಸ್ಥಾನಕ್ಕೆ ಬಂದು, ಒಂದು ಪ್ರಾರ್ಥನೆ ಮಾಡಿ ನೆಣೆಮಡುಗ್ಗು, ನೆಂಪಿಲಿ.
ಒರಿಶಲ್ಲಿ ಕೆಲವು ಶೆಂಕ್ರಾಂತಿಗೊಕ್ಕೆ ವಿಶೇಷ ಹಬ್ಬಂಗಳೇ ಇದ್ದು ನಮ್ಮ ಊರಿಲಿ.
~
ಇಂದು,
ಈ ತಿಂಗಳು – ಶಾರದ ಕೆಲೆಂಡರಿಲಿ ಹದಿನಾಕನೇ ತಾರೀಕು ಅಪ್ಪದಿನ ಸೂರ್ಯ ಧನು ರಾಶಿ ದಾಂಟಿ ಮಕರ ರಾಶಿಗೆ ಶೆಂಕ್ರಾಂತಿ ಆವುತ್ತ.
ಅದುವೇ ಮಕರ ಸಂಕ್ರಮಣ, ಕಾಂಬು ಅಜ್ಜಿಯ ಮಕರ ಶೆಂಕ್ರಾಂತಿ!
ಹನ್ನೆರಡು ಶೆಂಕ್ರಾಂತಿಗೆ ಗವುಜಿ ಇದ್ದರೂ, ಈ ಮಕರ ಶೆಂಕ್ರಾಂತಿಗೆ ವಿಶೇಶ ಸ್ಥಾನ ಇದ್ದೇ ಇದ್ದು.
ಅದೆಂತರ?
~
ಸೂರ್ಯ ಮೂಡಂದ ಪಡುವಂಗೆ ಹೋವುತ್ತನಲ್ಲದೋ – ಅದರೊಟ್ಟಿಂಗೇ ರಜ ರಜವೇ ಆಗಿ ತೆಂಕಂದ ಬಡಗಕ್ಕೂ, ಬಡಗಂದ ತೆಂಕಕ್ಕೂ ಒತ್ತುತ್ತ°.
ಸಂಸ್ಕೃತಲ್ಲಿ ಇದರನ್ನೇ ದಕ್ಷಿಣಾಯಣ, ಉತ್ತರಾಯಣ ಹೇಳುದಡ, ವಿದ್ವಾನಣ್ಣ ಹೇಳಿತ್ತಿದ್ದವು.
ಬಡಗು ಕೊಡೀಂದ ತೆಂಕದ ಕೊಡಿಯಂಗೆ ಹೋವುತ್ತ ಆರು ತಿಂಗಳ ಕಾಲಕ್ಕೆ ದಕ್ಷಿಣಾಯಣ ಹೇಳಿಯೂ, ತಿರುಗಿ ಬಡಗಲಾಗಿ ಬತ್ತ ಮತ್ತಾಣ ಆರು ತಿಂಗಳಿನ ಉತ್ತರಾಯಣ ಹೇಳ್ತದು.
ಆ ಎರಡು ಘಟನೆಗೊ ಆರಂಭ ಆವುತ್ತ ಕ್ಷಣಕ್ಕೆ ಉತ್ತರಾಯಣಾರಂಭ, ದಕ್ಷಿಣಾಯಣಾರಂಭ ಹೇಳಿಯೂ ಹೇಳ್ತವಡ.
ಉತ್ತರಾಯಣದ ಕಾಲಲ್ಲಿ ಸ್ವರ್ಗದ ಬಾಗಿಲು ತೆಗದಿರ್ತು ಹೇಳಿಯೂ, ದಕ್ಷಿಣಾಯನ ಕಾಲಲ್ಲಿ ಮುಚ್ಚಿರ್ತು ಹೇಳಿಯೂ ಶಂಬಜ್ಜ° ನಂಬಿತ್ತಿದ್ದವು.
ಹಾಂಗಾಗಿ ಉತ್ತರಾಯಣಾರಂಭಂದ ಆರು ತಿಂಗಳು ಪುಣ್ಯಕಾಲ, ಮೋಕ್ಷಕಾಲ ಹೇಳಿ ಹೇಳ್ತವಡ.
ಅನಾದಿ ಕಾಲಲ್ಲಿ – ಅಂದೆಕಾಲತ್ತಿಲಿ – ಈ ಮಕರಶೆಂಕ್ರಾಂತಿ ದಿನವೇ ಆ ಉತ್ತರಾಯಣಪುಣ್ಯಕಾಲ ಬಂದುಗೊಂಡು ಇತ್ತಡ.
[ಸೂ: ಕಾಲಕ್ರಮೇಣ ವಿಶ್ವದ ಹಿಗ್ಗುವಿಕೆಂದಾಗಿ ಇಪ್ಪತ್ತಮೂರು ಭಾಗೆ(ಡಿಗ್ರಿ) ವಿತ್ಯಾಸ ಬಂದು, ಈಗ ದಶಂಬ್ರ ಇಪ್ಪತ್ತೆರಡಕ್ಕೇ ಉತ್ತರಕ್ಕೆ ಹೋಪಲೆ ಸುರು ಮಾಡ್ತನಡ ಸೂರ್ಯ. ಎರುಮುಂಜ ಒಯಿಜಯಂತಿ ಪಂಚಾಂಗಲ್ಲಿ ಹಾಂಗೆಯೇ ಇಪ್ಪದಡ, ಮಾಷ್ಟ್ರುಮಾವ° ಹೇಳಿದವು]
ಅಂತೂ ಆಚರಣೆಲಿ ಈಗಳೂ ಮಕರ ಶೆಂಕ್ರಾಂತಿಗೆ ಉತ್ತರಾಯಣ ಆರಂಭ ಹೇಳಿಯೇ ಇದ್ದು.
ಅದು ಲೋಕಾರೂಢಿ.
~
ಈ ಮಕರಶೆಂಕ್ರಾಂತಿ ಹೇಳಿತ್ತುಕಂಡ್ರೆ, ಒಂದರಿಯಾಣ ಚಳಿಗಾಲ ಮುಗಿತ್ತ ಸಂಕ್ರಮಣವುದೇ ಅಪ್ಪು, ಅಲ್ಲದೋ?
ಉದಿಯಪ್ಪಗಾಣ ಒರಕ್ಕು ಹಾಂಗೇ ಇಪ್ಪಗ ಪಕ್ಕನೆ ಏಳುಲೆ ಒಂದು ಕಾರಣ ಬೇಕಲ್ಲದೋ – ಎಳ್ಡ್ರಾಮಿನ ಹಾಂಗಿರ್ತದು! ಈ ಮಕರ ಶೆಂಕ್ರಾಂತಿಯುದೇ ಹಾಂಗೆಯೇ! ;-)ಗಟ್ಟದ ಮೇಗೆ ಎಲ್ಲ ಇದರ ಈಗಳೂ ಉತ್ತರಾಯಣ ಪುಣ್ಯಕಾಲ ಹೇಳಿ ಆಚರಣೆ ಮಾಡ್ತವಡ.

ಗಟ್ಟದ ಮೇಗೆ ಎಳ್ಳು ಬೆಲ್ಲ ಕೊಡ್ತದು

ಕರಿಕಬ್ಬು, ಬೆಳಿಎಳ್ಳು, ಬೆಲ್ಲದ ತುಂಡು, ಹುರಿಕಡ್ಳೆ – ಇದರ ಎಲ್ಲ ಒಂದು ಬಟ್ಳಿಲಿ ಮಡಗಿ ದೇವರಿಂಗೆ ಕೊಡುಗಡ.
ಹಾಲಿನ ಮಣ್ಣಳಗೆಲಿ ತುಂಬುಸಿ ಒಲೆಲಿ ಮಡಗಿ ಸಂಭ್ರಮಲ್ಲಿ ಉಕ್ಕಿ ಬತ್ತ ನಮುನೆ ಮಾಡುಗಡ…
ಎತ್ತುಗಳ ಅಲಂಕಾರ ಮಾಡಿ, ಇಷ್ಟೆತ್ತರದ ಕಿಚ್ಚಿನ ಮೇಗೆ ಹಾರ್ತ ನಮುನೆ ಪೆರ್ಚಿ ಬರುಸುಗಡ, ಎಲ್ಲೋರುದೇ ಕೊಣುದು ಗವುಜಿ ಮಾಡಿ ಚೆಂದ ನೋಡುಗಡ…
ಚೀಪೆ ಪಾಚವೋ, ತೊಗರಿ ಹೋಳಿಗೆ ಒಬ್ಬಟ್ಟೋ – ಎಂತಾರು ಮಾಡಿ ಹಂಚುಗಡ.
– ಗಟ್ಟದ ಕ್ರಮಂಗಳ ನೋಡಿ ಅರಡಿವ ಮುಳಿಯಭಾವ ಹೇಳುಗು ಒಂದೊಂದರಿ.ಮದ್ರಾಶು, ತೆಮುಳುನಾಡಿಲಿ ಅಂತೂ ಪೊಂಗಲು ಹೇಳ್ತ ಚೀಪೆ-ಖಾರಂಗಳ ಮಾಡಿ ಗಮ್ಮತ್ತು ಮಾಡಿ ತಿಂಗಡ. ಅಲ್ಲಿ ಹಬ್ಬವನ್ನೂ ಇದೇ ಹೆಸರಿಲಿ ದಿನಿಗೆಳುಗಡ.
ಚೆನ್ನೈಬಾವಂಗೆ ಸರೀ ಅರಡಿಗು.
~
ಬರೇ ಇಷ್ಟೇ ಅಲ್ಲ, ಇದರೊಟ್ಟಿಂಗೆ ಇನ್ನೊಂದು ಗವುಜಿದೇ ಇದ್ದು.
ಅದೆಂತರ?
– ಅದುವೇ ಅಯ್ಯಪ್ಪನ ಮಕರವಿಳಕ್ಕು.

ಹರಿಹರರ ಮಗ° ಅಯ್ಯಪ್ಪ ಪಂದಳಾಪುರದ ರಾಜನ ಮಗ° ಆಗಿ ಹುಟ್ಟಿದ ಕತೆ ಗೊಂತಿದ್ದಲ್ಲದೋ?

ಶಬರಿಮಲೆಲಿ ನೆಲೆನಿಂದ ಅಯ್ಯಪ್ಪ!

ದೈವಾಂಶ ಸಂಭೂತ ಆಗಿಪ್ಪ ಈ ಮಾಣಿ ಸಣ್ಣ ಇಪ್ಪಗಳೇ ಹುಲಿಹಾಲಿನ ತಪ್ಪದೋ, ಮಹಿಷಿಯ ಕೊಲ್ಲುದೋ ಹೀಂಗಿರ್ತ ಮಹಿಮೆಗೊ ತೋರುಸಿಗೊಂಡು –  ಊರಿಂಗೆ ಉಪಕಾರಿ ಆಗಿತ್ತಿದ್ದನಾಡ.

ನಲುವತ್ತೆಂಟು ದಿನ ಶುದ್ಧ ಬ್ರಹ್ಮಚರ್ಯವ ಆಚರಣೆಮಾಡಿಕ್ಕಿ, ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ಆ ಹದ್ನೆಂಟು ಮೆಟ್ಳು ಹತ್ತಿಗೊಂಡು ಹೋದರೆ ಜೀವನಲ್ಲಿ ಒಳ್ಳೆದಾವುತ್ತು ಹೇಳ್ತದು ಊರ ಆಸ್ತಿಕರ ನಂಬಿಕೆ.

ಇದು ಮದಲಿಂಗೆ ಅಷ್ಟೆಂತ ಇತ್ತಿಲ್ಲೇಡ, ಈಗ ಸದ್ಯ ಜಾಸ್ತಿ ಆದ್ದು ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
ಅವು ಸಣ್ಣ ಇಪ್ಪಗ ಅಯ್ಯಪ್ಪ ವ್ರತಧಾರಿಗೊ ಆರನ್ನೂ ಕಂಡ ನೆಂಪಿಲ್ಲೆಡ, ಈಗ ಅಂತೂ ಊರಿಂಗೊಂದು ಭಜನಾಮಂದಿರಲ್ಲಿ ಒಂದೊಂದು ತಂಡ ಇರ್ತು.

ಉದೆಕಾಲಕ್ಕೇ ಎದ್ದು, ಮಿಂದು, ಭಜನೆ ಮಾಡಿ, ಹತ್ತರಾಣ ದೇವಸ್ಥಾನಲ್ಲಿ ಧನುಪೂಜೆ ಇದ್ದರೆ ಹೋಗಿ, ದರ್ಶನ ತೆಕ್ಕೊಂಡು, ಉಪಾಹಾರ ಮಾಡಿ, ದಿನ ಇಡೀ ಶುದ್ಧಲ್ಲಿ ಕಳದು, ಇರುಳಾಣ ಭಜನೆ ಕಳುದು ಒರಗುದು ಅವರ ಕ್ರಮ.

ಒರಿಶ ಇಡೀ ಕಳ್ಳುಕುಡುದು ಜೀವನ ಹಾಳುಮಾಡಿಗೊಳ್ತ ಜಿನ್ನಪ್ಪುದೇ ಆ ನಲುವತ್ತೆಂಟು ದಿನ ಶುದ್ಧ ಬ್ರಹ್ಮಚರ್ಯಲ್ಲಿ ಗುರುಸ್ವಾಮಿ ಆಗಿರ್ತು. 🙂

ಒಳ್ಳೆದೇ ಬಿಡಿ. ದೇವರ ಭಕ್ತಿಯೋ, ಭಯವೋ ಅಂತೂ ಶ್ರದ್ಧೆಲಿ ಆಚರುಸುತ್ತವನ್ನೆ.

ಇಷ್ಟು ವ್ರತ ಮಾಡಿ ಈ ಶೆಂಕ್ರಾಂತಿಗಪ್ಪಗ ಅಯ್ಯಪ್ಪನ ಕಾಂಬಲೆ ಹೋಕು!
ಮದಲಿಂಗೆ ಅದು ಶಬರಿಮಲೆ ಗುಡಿಯ ಬಾಗಿಲು ತೆಗೆತ್ತ ದಿನವೂ ಆಗಿತ್ತಡ. ಆಯಿಕ್ಕು, ಉಮ್ಮಪ್ಪ!
~ಮಕರ ಶೆಂಕ್ರಾಂತಿಯ ದಿನಕ್ಕೆ ಸರೀಯಾಗಿ ಶಬರಿಮಲೆಯ ಆಚ ಗುಡ್ಡೆಲಿ ಬೆಳೀ ಜೋತಿ(ಜ್ಯೋತಿ) ಕಾಣ್ತಡ.
ಅದು ಅಯ್ಯಪ್ಪನೇ ಅಡ,
ನಲುವತ್ತೆಂಟು ದಿನದ ವ್ರತಲ್ಲಿ ಶುದ್ದ ಕಮ್ಮಿ ಮಾಡಿದ್ದಿದ್ದರೆ ಆ ಜ್ಯೋತಿ ಕಾಣ ಅಡ,
ನಿಷ್ಟೆಲಿದ್ದವಂಗೆ ಮಾಂತ್ರ ಅದು ಕಾಂಗಷ್ಟೆ ಅಡ – ಹಾಂಗೆ ಜಿನ್ನಪ್ಪು ಹೇಳುಗು, ಕುಡುದ್ದು ಬಿರುದಿಪ್ಪಗ! 😉
ಆ ನಮುನೆ ಒಂದು ನಂಬಿಕೆ ಊರಿಲಿ ಇದ್ದಲ್ಲದೋ – ಇರಳಿ, ಒಳ್ಳೆದೇ!ಈಗೀಗ ಟೀವಿಲಿಯುದೇ ತೋರುಸುತ್ತವಡ ನೇರಪ್ರಸಾರಲ್ಲಿ.
ಕಳುದೊರಿಶ ರೂಪತ್ತೆ ಅವರ ಮೂವತ್ತೆರಡಿಂಚಿನ ಹೊಸಾ ಓನಿಡ ಟೀವಿಲಿ ನೋಡಿದ್ದಡ!

~
ಹ್ಮ್, ಅದೆಲ್ಲ ಶೆಂಕ್ರಾಂತಿಯ ಬಗ್ಗೆ.
ಇನ್ನೊಂದು ವಿಷಯ ಎಂತರ ಹೇಳಿತ್ತುಕಂಡ್ರೆ, ತಿಂಗಳೋಡು.
ಅದೆಂತರ?
ಶೆಂಕ್ರಾಂತಿಯ ಮರದಿನ ಬತ್ತದೇ ತಿಂಗಳೋಡು.
ಬಟ್ಯ ಇದನ್ನೇ ಸಿಂಗ್‍ಡೆ ಹೇಳ್ತು, ಅದರ ತುಳುವಿಲಿ.
ತಿಂಗಳಿನ ಆರಂಭ ದಿನ ಹೇಳ್ತದರ ತಿಂಗಳೋಡು ಹೇಳಿ ಆತೋ ಏನೋ – ಹೇಳಿ ಮಾಷ್ಟ್ರುಮಾವ° ಸಂಶಯ ಮಾಡುಗು ಒಂದೊಂದರಿ.
ತಿಂಗಳಿನ ಮೀಟ್ರು ಓಡುತ್ತ ಕಾರಣ ತಿಂಗಳೋಡು – ಆಯಿಕ್ಕು ಹೇಳಿ ಅಜ್ಜಕಾನಬಾವ° ಹೊಟ್ಟುಸುಗು ಕೆಲವು ಸರ್ತಿ! 😉
ಶೆಂಕ್ರಾಂತಿ – ತಿಂಗಳೋಡು ಎರಡೂ ದಿನ ನಮ್ಮೋರಿಂಗೆ ಶ್ರದ್ಧೆಯ ದಿನ.
ಆ ದಿನಂಗಳಲ್ಲಿ ಒಳ್ಳೆದು ಮಾಡಿರೆ ಇಡೀ ತಿಂಗಳು ಒಳ್ಳೆದಾಗಿರ್ತು ಹೇಳ್ತದು ಒಂದು ನಂಬಿಕೆ.
ಅದೇ ನಮುನೆ, ಆ ದಿನ ಕರ್ಚು ಬಂದರೆ ಇಡೀ ತಿಂಗಳು ಲೋಸು ಹೇಳ್ತದುದೇ ನಂಬಿಕೆಯೇ!
ಒಬ್ಬೊಬ್ಬನ ಇಷ್ಟಾಭಿಪ್ರಾಯ! ಅದಿರಳಿ.

~
ಮಕರ ಶೆಂಕ್ರಾಂತಿಯ ಗವುಜಿ ಎಡಕ್ಕಿಲಿ ಮಾತಾಡುವಗ ಇಷ್ಟೆಲ್ಲ ನೆಂಪಾತು.
ಅಂತೂ,
ತಿಂಗಳಿನ ಶೆಂಕ್ರಾಂತಿ ದಿನ ಶ್ರದ್ಧೆಲಿ ಇದ್ದುಗೊಂಡು, ದೈವೀಕ ಆಚರಣೆಗಳಲ್ಲಿ ತೊಡಗುಸಿಗೊಂಡು,
ತಿಂಗಳೋಡು ದಿನ ಬೇಡಂಗಟ್ಟೆ ಕರ್ಚು ಮಾಡದ್ದೆ ರಜ ಒಳಿಶಿ ಮಡಗಿರೆ,
ಮುಂದಾಣೋರಿಂಗೂ ರಜ ಸಿಕ್ಕುಗು – ಹೇಳ್ತ ಯೋಚನೆ ನಮ್ಮ ಹೆರಿಯೋರಿಂಗೆ ಬಂದ ಕಾರಣ ನಾವೆಲ್ಲ ಉಣ್ತು ಇಂದು!
ಅಲ್ಲದೋ?ನಾವುದೇ ಅವರ ಹಾಂಗೇ ಶ್ರದ್ಧೆಲಿ ಆಚರುಸುವೊ. ಒಳ್ಳೆದಿನ ಒಳ್ಳೆಕಾರ್ಯ ಮಾಡ್ತ ಎಲ್ಲೊರಿಂಗೂ ಒಳ್ಳೆದಾಗಲಿ.
ಬೈಲಿನವಕ್ಕೆಲ್ಲ ಶೆಂಕ್ರಾಂತಿಯ ಶುಭಾಶಯಂಗೊ!

ಒಂದೊಪ್ಪ: ಮಕರ ಶೆಂಕ್ರಾಂತಿಗೆ ಮಕರ ಜ್ಯೋತಿ ಕಾಣಲಿ! ಜೀವನದ ಶೆಂಕ್ರಾಂತಿಲಿ ಬಾಳಜ್ಯೋತಿ ಕಾಣಲಿ!

ಸೂ: ಪಟಂಗೊ ಇಂಟರುನೆಟ್ಟಿಂದ ಸಿಕ್ಕಿದ್ದು.

ಒಪ್ಪಣ್ಣ

   

You may also like...

53 Responses

 1. Jayakishore says:

  Have you changed the layout n look & feel? I think old layout was much much much better compared to this!

  Jayakishore Bayadi

  • ಜಯಕಿಶೋರಣ್ಣಂಗೆ ನಮಸ್ಕಾರ ಇದ್ದು!
   ಬೈಲಿನ ಬಗ್ಗೆ ನಿಂಗಳ ಆಸಗ್ತಿ ಕಂಡು ತುಂಬಾ ಕೊಶಿ ಆತು.
   ಒರಿಶಕ್ಕೊಂದಾದರೂ ಹೊಸ ಅಂಗಿ ಹೊಲಿಶದ್ರಾಗ ಹೇಳಿ ಒಪ್ಪಣ್ಣ ಬೊಬ್ಬೆ ಹೊಡದ್ದಕ್ಕೆ ಇದರ ತಂದು ಕೊಟ್ಟದು..
   ಹೊಸತ್ತಕ್ಕೆ ಒಗ್ಗಿಗೊಂಬದು ಸುರುವಿಂಗೆ ರಜ ಕಷ್ಟ ಅನುಸಿದರೂ, ಈಗಾಣ ತಂತ್ರಜ್ಞಾನಂಗಳ ಹೆಚ್ಚಿನ ಮಟ್ಟಿಂಗೆ ಉಪಯೋಗುಸಿದ ಬೈಲು ಇದು.

   ಹೇಳಿದಾಂಗೆ, ಹಳೆ ಅಂಗಿಯ ಇಡ್ಕಿದ್ದಿಲ್ಲೆ ನಾವು. ಅದರ ನೋಡೆಕ್ಕಾರೆ ಈ ಸಂಕೊಲೆಲಿ ನೇಲೆಕ್ಕು:
   http://oppanna.com/?wptheme=oppanna2010

   ಪುನಾ ಹೊಸ ಅಂಗಿಯ ಹಾಕೆಕ್ಕಾರೆ ಈ ಸಂಕೊಲೆ:
   http://oppanna.com/?wptheme=Oppanna2011

   ಹೊಸತ್ತರ ಉಪಯೋಗುಸಲೆ ಸುರುಮಾಡಿ, ಒಂದೆರಡು ದಿನಲ್ಲಿ ನಿಂಗಳದ್ದೇ ಆಗಿ ಬಿಡ್ತು!
   ಹರೇರಾಮ.

   • Jayakishore says:

    Gurikkararinge Namaskara!

    Dhanyavaada. NInga heliddu sariye. Aaadare obbobbange ondondu chenda kaanuththu…enage chenda kandadu ningoge chenda kaanekku heli ille…haaange ningoge chenda kandadu enage chenda kaanekku heli ille….

    Adene irali…koshiyaatu….blog nooru kaala balali heli haaraisutte!

    Jayakishore

 2. ”ಸುಭಗ’' says:

  ಬರಹ ಯೇವತ್ರಾಣಾಂಗೆ ಚೊಕ್ಕ ಆಯಿದು ಒಪ್ಪಣ್ಣಾ..
  ವರ್ಮುಡಿ ಮಾವನೂ ಶರ್ಮಪ್ಪಚ್ಚಿಯೂ ಗೋಪಾಲ ಭಾವನೂ ಶಬ್ದ ವ್ಯುತ್ಪತ್ತಿಯ ಬಗ್ಗೆ ಜಿಜ್ಞಾಸೆ ಮಾಡುವಗ ನಮ್ಮ ಕೆಮಿ ಕುತ್ತ ಆತಿದ!

  “ಯಥಾರ್ಥಕ್ಕೆ ತಿಂಗಳೋಡು ಹೇಳಿ ಅಲ್ಲ, ಅದು ತಿಂಗಳ+ಅಡಿ(ಸುರು)=ತಿಂಗಳಡಿ ಹೇಳಿ ಇದ್ದದು, ಅದರ ಪೀಂಟುಸಿ ಅಪಭ್ರಂಶ ಮಾಡಿ ಈ ರೂಪ ಕೊಟ್ಟದು” ಹೇಳಿ ಎನ್ನ ತಿಂಗಳಾಡಿ ಭಾವ ಪಿರಿಪಿರಿ ಮಾಡಿಯೊಂಡು ಇದ್ದಿದ್ದ.
  “ಅಂಬಗ ಅದು ತಿಂಗಳ+ಆದಿ ಹೇಳಿ ಏಕೆ ಆಗಿರ?” ಕೇಳಿದೆ ಆನು

  ಅಲ್ಲ.., ಎನಗೆ ಈಗ ‘ಕುಂಬಳೋಡು’ ತಾಳು ಎಂತಗೆ ನೆಂಪಾದ್ದು..?? ಉಮ್ಮಪ್ಪ..!! ನಿಂಗೊಗರಡಿಗೊ..?

 3. ”ಸುಭಗ’' says:

  ಅಜ್ಜಕಾನ ಭಾವಾ, ಕಳುದ ವರ್ಷ ಎಷ್ಟು ತಿಂಗಳು ಉರುಡಿರೂ ಏನೂ ಪ್ರೇಜನ ಆಯಿದಿಲ್ಲೆ. ಈ ವರ್ಷ ಹೇಂಗೆ..???

  (ಹೋಯ್.. ಆನು ಹೇಳಿದ್ದು ಕಳುದೊರ್ಷ ಹೊರಡಿಗಿಪ್ಪ ಸಾಮಾನು ತಂದು ಮಡುಗಿದ್ದೇ ಬಂತು, ಮೆಡಿ ಸಿಕ್ಕದ್ದೆ ಉಪ್ಪಿನಕಾಯಿ ಕತೆ ಮೋಸ ಆಯಿದು ಹೇಳಿ. ನಿಂಗೊ ಬೇರೆ ಎಂತಾರು ಜಾನ್ಸಿಕ್ಕೆಡಿ) 😉

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *