ಸಾಂದ್ರೀ ಭವನ್ಮಂದ್ರ ತಂತ್ರೀಸ್ವರೇ…

ಪಿತೃಪಕ್ಷದ ಅಮವಾಸೆ ಮುಗುದ ಮರದಿನಂದ ಸುರುಆವುತ್ತದೇ – ಶರನ್ನವರಾತ್ರಿಯ ಶುಕ್ಲಪಕ್ಷ.
ಒಂಬತ್ತು ದಿನ ವಿಧವಿವಿಧ ರೂಪಲ್ಲಿ ದುರ್ಗೆಯ ಪೂಜೆ ಮಾಡಿ, ಜಗಲೋಕದ ‘ಮಹಾ ಅಮ್ಮನ’ ಸೇವೆ ಮಾಡ್ತದು ಈ ನವರಾತ್ರಿಯ ವಿಶೇಷ.
ಇದರ ಬಗ್ಗೆ ಆಚೊರಿಶ ಒಂದಾರಿ ಮಾತಾಡಿದ್ದು, ನೆಂಪಿದ್ದಲ್ಲದೋ?
ನವನವೋನ್ಮೇಷ ಶಾಲಿನೀ.. ನವರಾತ್ರಿಯ ಚಾಮಿ ನೀ – ಹೇಳಿಗೊಂಡು, ದೇವಿಯ ಅಗಾಧ ಶೆಗ್ತಿಯ ಆರಾಧನೆ ಮಾಡ್ತ ವಿವಿಧ ರೀತಿಗೊ, ಊರ ಕ್ರಮಂಗೊ, ಕೊರಗ್ಗನ ವೇಷಂದ ಹಿಡುದು, ಮಯಿಸೂರು, ವಿಜಯನಗರ ಒರೆಂಗೆ – ಇದೆಲ್ಲವನ್ನೂ ಸ್ಥೂಲವಾಗಿ ನಾವು ಅದಾಗಲೇ ವಿಚಾರ ಮಾಡಿದ್ದು.
~
ಈ ಒರಿಶದ ನವರಾತ್ರಿ ಮೊನ್ನೆ ಸುರು ಆಗಿ, ಇಂದಿಂಗೆ ನಾಕು ದಿನ ಆತು.
ನವರಾತ್ರಿಯ ಒಟ್ಟಿಂಗೇ ಊರೂರುಗಳ ದೇವಿದೇವಸ್ಥಾನದ ಗವುಜಿ ಸುರು ಆಯಿದು.
ಬೈಲಕರೆ ದೇವಸ್ಥಾನಲ್ಲಿ ಅಂತೂ – ಬಾಲ್ದಿಮೈಕ್ಕ ಕಟ್ಟಿ, ಕೇಸೆಟ್ಟು ಹಾಕಿ ಗವುಜಿ ಸುರುಮಾಡಿದ್ದವು.
ಮೂರೂ ಹೊತ್ತು ಮಹಾಪೂಜೆ ಇಪ್ಪದೂ ಅಲ್ಲದ್ದೆ, ವಿಶೇಷ ಹೂಗಿನಪೂಜೆ, ರಂಗಪೂಜೆ ಆಗಿಂಡು, ಇರುಳು ಭಜನೆ…
ನವ ವಿಧದ ರೂಪದ ದುರ್ಗೆಯ ನವ ವಿಧಲ್ಲಿ ಆರಾಧನೆ ಮಾಡಿಗೊಂಡು, ಲೋಕೋದ್ಧಾರ ಆಗಲಿ ಹೇಳಿ ಕೇಳಿಗೊಂಬದು ನವರಾತ್ರಿಯ ಸಾಮಾನ್ಯ ದೃಶ್ಯ.
ಸೌಮ್ಯ ಗೌರೀಂದ ತೊಡಗಿ ಉಗ್ರರೂಪದ ಕಾಳಿಮಾತೆಯ ಒರೆಂಗೆ – ಎಲ್ಲರನ್ನೂ ಆರಾಧನೆ ಮಾಡ್ತು ಒಂಬತ್ತು ದಿನಲ್ಲಿ.
ಒಂಬತ್ತೇ ದಿನಕ್ಕೆ ನವರಾತ್ರಿ ಮುಗಿತ್ತು. ಆದರೆ “ದಶ”ರಾ ಮುಗಿತ್ತೋ?! ಇಲ್ಲೆ,
ಅದು ಹತ್ತನೇ ದಿನವೂ ಇದ್ದಕಾರಣ ಅದಕ್ಕೆ ಹಾಂಗೆ ಹೆಸರು. ಅಂಬಗ, ಹತ್ತನೇ ದಿನದ ಆಚರಣೆ ಆರ ಬಗ್ಗೆ?!
ಅದರ ಬಗ್ಗೆಯೇ ಇಂದು ಮಾತಾಡುವೊ°, ಆಗದೋ?
~
ವಿದ್ಯಾಧಿದೇವತೆಯ ವಿದ್ಯಾದಶಮಿ:
ಆದಿಶೆಗ್ತಿಯ ಒಂದೊಂದು ರೂಪಕ್ಕೂ ಒಂದೊಂದು ವಿಧವಾದ ವೈಶಿಷ್ಟ್ಯತೆ ಇರ್ತು.
ಉದಾಹರಣೆಗೆ, ಲಕ್ಷ್ಮಿ ಹೇಳಿತ್ತುಕಂಡ್ರೆ ಪೈಶೆ, ಕಾಳಿ ಹೇಳಿತ್ತುಕಂಡ್ರೆ ಉಗ್ರತ್ವ, ಗೌರೀ ಹೇಳಿತ್ತುಕಂಡ್ರೆ ಸೌಮ್ಯ – ಹೀಂಗೆಯೇ, ಸರಸ್ವತಿ ಹೇಳಿತ್ತುಕಂಡ್ರೆ ವಿದ್ಯೆ.
ಯೇವದೇ ದೇವರದ್ದು ಎಷ್ಟೇ ನಮುನೆ ಪೂಜೆಗೊ ಇರಳಿ, ವಿದ್ಯಾವಂತ ಕುಟುಂಬಂಗೊ ಸರಸ್ವತಿಯ ಪೂಜೆ ನಿಷ್ಟೆಲಿ ಮಾಡಿಯೇ ಮಾಡುಗು.
ಸರಸ್ವತಿಯ ಅನುಗ್ರಹ ಇಪ್ಪೋರಿಂಗೆ ಮಾಂತ್ರ ಓದಲೆಡಿಗಾದ “ಪುಸ್ತಕವನ್ನೇ” ದೇವರ ಸ್ಥಾನಲ್ಲಿ ಮಡಗುತ್ತದು ಸರಸ್ವತಿ ಪೂಜೆಯ ವೈಶಿಷ್ಠ್ಯ.

ನಮ್ಮ ಸಂಸ್ಕಾರಲ್ಲಿ, ಬಾಲ್ಯಂದಲೇ ಪುಸ್ತಕಕ್ಕೆ ವಿಶೇಷ ಸ್ಥಾನಮಾನ.
ಪುಸ್ತಕವ ನೆಲಕ್ಕಲಿ ಮಡಗಲಾಗ, ಪುಸ್ತಕಕ್ಕೆ ಮೆಟ್ಳಾಗ, ಪಕ್ಕನೆ ಮೆಟ್ಟಿ ಹೋದರೆ ನಮಸ್ಕಾರ ಮಾಡಿಗೊಳೆಕ್ಕು – ಇದೆಲ್ಲ ಭಾವನೆಗಳೂ, ಪುಸ್ತಕವೇ ಸಾಕ್ಷಾತ್ ಸರಸ್ವತಿ ದೇವರು ಹೇಳ್ತ ಭಾವನೆಂದಾಗಿ ಬಂದದಾಗಿತ್ತು.
ಪುಸ್ತಕ ಹೇಳಿರೆ, ಈಗಾಣ ಕಾಗತದ ಪುಸ್ತಕ ಮಾಂತ್ರ ಅಲ್ಲ, ತಾಮ್ರ ಪತ್ರಂಗೊ, ಓಲೆಗರಿಯ ಗ್ರಂಥಂಗೊ – ಎಲ್ಲವುದೇ ಸರಸ್ವತಿಯ ಒಂದೊಂದು ರೂಪಂಗೊ. ಅಲ್ಲದೋ?

ಕೆಲವು ಮನೆಗಳಲ್ಲಿ ‘ದೇವರು’ ಹೇಳಿ ಪೂಜೆಮಾಡ್ತಲ್ಲಿ ಹೀಂಗ್ರುತ್ತ ಗ್ರಂಥವನ್ನೇ ಮಡಗುತ್ತ ಮರಿಯಾದಿ ಇದ್ದಾಡ, ನೆರಿಯದೊಡ್ಡಪ್ಪ° ಹೇಳಿತ್ತಿದ್ದವು.
ಅವರ ಮೂಲಮನೆಲಿ ಶಂಕರನಾರಾಯಣ ದೇವರು ಹೇಳಿಗೊಂಡು ಒಂದು ಓಲೆಗರಿ ಗ್ರಂಥಕ್ಕೆ ರುದ್ರಾಕ್ಷಿ ಮಾಲೆ ಸುಂದಿಗೊಂಡು ಇದ್ದಾಡ! – ಎಷ್ಟೋ ತಲೆಮಾರಿಂದ ಅದೇ ಪುಸ್ತಕಕ್ಕೇ ಪೂಜೆ ಸಲ್ಲುತ್ತಾ ಇಪ್ಪದು.
ಈಗಳೂ, ಎಲ್ಲಾ ಮನೆಗಳಲ್ಲೂ – ಪುಸ್ತಕಪೂಜೆ ಹೇಳಿ ಮಾಡ್ತರೆ, ದೇವರ ಸ್ಥಾನಲ್ಲಿ ಮನೆಲಿರ್ತ ಶ್ರೇಷ್ಠ ಗ್ರಂಥಂಗಳನ್ನೋ, ಪೂಜೆ-ಮಂತ್ರದ ಪುಸ್ತಿಕೆಗಳನ್ನೋ – ಅಂತೂ ದೇವರು ಹೇಳಿಗೊಂಡು ಪುಸ್ತಕವನ್ನೇ ಮಡಿಕ್ಕೊಂಬದಾಡ.

ಪುಸ್ತಕಪೂಜೆ:
ಪ್ರತಿ ನವರಾತ್ರಿಗೆ ಪುಸ್ತಕಪೂಜೆ ಇದ್ದು. ಅಪ್ಪೋಲ್ಲದೋ?
ಅದು ಹೇಂಗೆ ಮಾಡ್ತದು – ಹೇಳಿಗೊಂಡು ಮೊನ್ನೆ ನೆಕ್ರಾಜೆಲಿ ಬಟ್ಟಮಾವ° ಸಿಕ್ಕಿಪ್ಪಗ ಅವರ ಕೈಲಿ ಒಂದರಿ ಕೇಳಿದೆ, ವಿವರವಾಗಿ ಹೇಳಿತ್ತಿದ್ದವು.
ನವರಾತ್ರಿ ಎಡೆಲಿ ಮೂಲಾನಕ್ಷತ್ರ ಬತ್ತಲ್ಲದೋ – ಆ ದಿನ ಪುಸ್ತಕಪೂಜೆ ಆರಂಭ.
ನಿತ್ಯ ದೇವರಪೂಜೆ ಮಾಡ್ತಲ್ಲೇ ಒಂದು ಮರದ ಮಣೆಲಿ, ನಿತ್ಯ ಜೀವನಕ್ಕೆ ಮೌಲ್ಯಂಗಳ ತುಂಬುತ್ತ ಕೆಲವು ಆಯ್ದ ಒಳ್ಳೊಳ್ಳೆ ಪುಸ್ತಕಂಗಳ ಅಟ್ಟಿ ಮಡಗುದು.
ಆ ಪುಸ್ತಕದ ಮೇಗಂಗೇ ಧ್ಯಾನಾವಾಹನಾದಿ ಷೋಡಷೋಪಚಾರ ಪೂಜೆಗಳ ಮಾಡ್ತದು.
ನಿತ್ಯಪೂಜೆಗೆ ಮಾಡಿದ ನೈವೇದ್ಯವನ್ನೇ ಈ ಸರಸ್ವತಿಗೂ ಕಲ್ಪುಸಿಗೊಂಬದು.
ಮೂಲೇದಾವಾಹಯೇದ್ದೇವೀ ಶ್ರವಣೇನ ವಿಸರ್ಜಯೇತ್ – ಹೇಳಿ ಅಂದೇ ಜೋಯಿಷಪ್ಪಚ್ಚಿ ಹೇಳಿತ್ತಿದ್ದವಿದಾ, ಅದನ್ನೇ ಬಟ್ಟಮಾವಂದೇ ಹೇಳಿದವು.
ಮೂಲಾನಕ್ಷತ್ರಂದ, ಶ್ರವಣಾ ನಕ್ಷತ್ರದ ಒರೆಂಗೆ – ಮೂರು ಇರುಳು ಸಿಕ್ಕುತ್ತು. ವಾಣೀ ತ್ರಿರಾತ್ರಾರ್ಥಯೇತ್ – ಹೇಳಿತ್ತುಕಂಡ್ರೆ, ಸರಸ್ವತಿಗೆ ಮೂರಿರುಳು ಶ್ರದ್ಧಾ ಭಕ್ತಿಲಿ ಪೂಜೆ ಮಾಡಿಗೊಂಬದು.
ಹಾಂಗೆ, ಮೂರು ದಿನ ಇರುಳಾಣ ಪೂಜೆಯ ಮುಗುಶಿ, ನಾಲ್ಕನೇ ದಿನ ಹಗಲು ಯೆಜಮಾನನ ಅಧ್ವರ್ಯಲ್ಲಿ ಸಣ್ಣದೊಂದು ವಿಸರ್ಜನಾ ಪೂಜೆ.

ನೆಗೆಮಾಣಿಗೆ ಅಂತೂ – ಒಳುದ ಮೂರು ದಿನಂದಲೊ ಈ ದಿನವೇ ಹೆಚ್ಚು ಆಸಕ್ತಿದಾಯಕ, ಈ ದಿನ ಚೀಪೆಅವಲಕ್ಕಿ ಮಾಡ್ಳಿದ್ದು!
ಅಪ್ಪು, ಏಲಕ್ಕಿ ಹೊಡಿ ಹಾಕಿ, ಬೆಲ್ಲ ಕೆರಸಿದ ಚೀಪೆ ಅವಲಕ್ಕಿಯ ಸರಸ್ವತಿಗೆ ನೈವೇದ್ಯ ಮಾಡ್ತದು.
ಅದಾದ ಮತ್ತೆ ಮಂಗಳಾರತಿ, ಪ್ರಾರ್ಥನೆ.
ಮೂಲಾ ನಕ್ಷತ್ರ ಸಿಕ್ಕುತ್ತ ಇರುಳು ಪುಸ್ತಕದ ಅಟ್ಟಿಗೆ ಆವಾಹನೆ ಮಾಡಿದ ಸರಸ್ವತಿಯ, ಶ್ರವಣಾ ನಕ್ಷತ್ರಲ್ಲಿ ವಿಸರ್ಜನೆ ಮಾಡಿ ಕಳುಸಿ ಕೊಡುದು.
ಇನ್ನು ಬರೆಡ ಹೇಳ್ತ ಲೆಕ್ಕಲ್ಲಿ ಕಳುಸಿ ಕೊಡುದಲ್ಲ – ಬದಲಾಗಿ, ಬಪ್ಪೊರಿಶ ಪುನಾ ಪೂಜೆಗೆ ಬಾ, ನಿತ್ಯವೂ ಎಂಗಳ ನಾಲಗೆಲಿ ಇರು – ಹೇಳ್ತ ಅಪೇಕ್ಷೆ ಇದ್ದುಗೊಂಡು.

ವಿಸರ್ಜನೆ ಆದ ಮತ್ತೆ, ಆ ಅಟ್ಟಿಂದ ಒಂದೊಂದು ಪುಸ್ತಕಂಗಳ ಪ್ರಸಾದದ ಒಟ್ಟಿಂಗೆ ಕೊಡ್ತದು.
ಮನೆ ಎಜಮಾನ ಕೈಗೆ ಕೊಟ್ಟ ಪುಸ್ತಕವ ಪೂರ್ತಿ ಓದಿದ ಮತ್ತೆಯೇ, ಚೀಪೆ ಪ್ರಸಾದ ತಿಂಬಲೆ ಸಿಕ್ಕುಗಟ್ಟೆ! 🙂
ಆ ಲೆಕ್ಕಲ್ಲಿ ಆದರೂ, ಈ ಸರ್ತಿ ನೆಗೆಮಾಣಿ ಡಿಕಿಶ್ನರಿ ಓದುಗೋ – ನೋಡೆಕ್ಕಟ್ಟೆ! 😉
~

ವಿದ್ಯಾ-ಬುದ್ಧಿ ಅನುಗ್ರಹಿಸುತ್ತ ಮೂಲ ದೇವಿಯಾದ ಸರಸ್ವತಿಯ ಬಗೆಗೆ ಅದೆಷ್ಟು ಕಥೆಗೊ ಇದ್ದೋ, ಸಾಕ್ಷಾತ್ ಸರಸ್ವತಿಗೂ ಅರಡಿಯ!
ಅದರ್ಲಿ ಒಂದು ನಮ್ಮ ಕಾಳಿದಾಸಂದು, ಸರ್ವೇಸಾಮಾನ್ಯವಾದ್ಸು.
ಮಾಷ್ಟ್ರುಮಾವ° ಇದರ ಕತೆ ಹೇಳುಲೆ ಸುರುಮಾಡಿರೆ, ಇತಿಹಾಸ, ಸಾಹಿತ್ಯ, ವಿಜ್ಞಾನ, ಸಂಸ್ಕಾರ – ಎಲ್ಲವುದೇ ತುಂಬಿಗೊಂಡು ಬಕ್ಕು.
ಮೊನ್ನೆ ನೆಕ್ರಾಜೆಲಿ ಮಾಷ್ಟ್ರುಮಾವನೂ ಮಾತಾಡ್ಳೆ ಸಿಕ್ಕಿದವು. ಒಪ್ಪಣ್ಣ ಅದರ ಶುದ್ದಿಹೇಳುವಗ ಬೇರೆಂತದೂ ಸೇರುಸೇಕು ಹೇಳಿ ಇಲ್ಲೆ!

ಕಾಳಿದಾಸ :
ಒಂದಾನೊಂದು ಕಾಲಲ್ಲಿ ಒಬ್ಬ ರಾಜ ಇದ್ದಿದ್ದನಾಡ.
ಅವನ ಮಗಳು ವಿದ್ಯಾಧರೆಯ ತುಂಬ ಬುದ್ಧಿವಂತಂಗೆ ಕೊಡೇಕು – ಹೇಳ್ತ ಕಾರಣಲ್ಲಿ ಮಂತ್ರಿಯ ಮಗನ ಜಾತಕಪಟವನ್ನುದೇ ತಿರಸ್ಕರಿಸಿದನಾಡ!
ಇದಕ್ಕೆ ಬುದ್ಧಿಕಲಿಶೇಕು ಹೇಳಿಗೊಂಡು ಮಂತ್ರಿಗೆ, ಬೋಚಬಾವನ ಪೈಕಿ ಒಂದು ಜೆನ ಏಡಿನ ಮೇಶಿಗೊಂಡಿದ್ದದು ಕಂಡತ್ತಾಡ;
– ಈ ಹೆಬಗನನ್ನೇ ಮದುವೆ ಮಾಡುಸೇಕು ಹೇಳಿ ಮಂತ್ರಿ ಹೊಣದನಾಡ.
ಮಂತ್ರಿ ಹೇಳಿದರೆ ರಾಜ ನಂಬುದೇ ಅಲ್ಲದೋ? – ಹಾಂಗೆ ಮಾಣಿ ನೋಡ್ತ ಶಾಸ್ತ್ರ ಮಾಡಿದವು,
’ಮೌನಂ ಪಂಡಿತ ಲಕ್ಷಣಂ’ ಹೇಳ್ತಾಂಗೆ, ಗಂಭಿರವಾಗಿ ಕೂದುಗೊಂಡಿದ್ದ ಈ ಹೆಬಗನ ‘ವಿದ್ವಾಂಸ’ ಹೇಳಿ ಎಲ್ಲೋರುದೇ ನಂಬಿದವು.
ವಿದ್ಯಾಧರೆಗೆ ಮದುವೆ ಆದ ಮತ್ತೆಯೇ ’ಬೋಚಬಾವ°’ ಹೇಳಿ ಗೊಂತಾದ್ದು.
ಮತ್ತೆಂತರ ಮಾಡ್ತದು? – ದೇವರತ್ರೆ ಕೇಳುದು ಬಿಟ್ರೆ.

ಹಾಂಗೆ, ಈ ಹೆಡ್ಡನನ್ನೂ ಕೂರುಸೆಂಡು ಕಾಳೀದೇವಸ್ಥಾನಲ್ಲಿ ಅಹರ್ನಿಶಿ ಪ್ರಾರ್ಥನೆ ಮಾಡಿತ್ತು ವಿದ್ಯಾಧರೆ.
ಅದು ಒರಕ್ಕಿಲಿ ಇಪ್ಪಗ ಕಾಳಿ ಪ್ರತ್ಯಕ್ಷ ಆಗಿ, ಕಾಳಿದಾಸನ ನಾಲಗೆಲಿ “ಅಸ್ತಿ ಕಶ್ಚಿತ್ ವಾಕ್ ವಿಶೇಷಃ” (ಅಸ್ತಿಕಶ್ಚಿದ್ವಾಗ್ವಿಶೇಷಃ) ಹೇಳಿ ಬರದತ್ತಾಡ.
(ಅರ್ಥ: ಯೇವದೋ ಒಂದು ವಿಶೇಷವಾದ ಮಾತು ಇದ್ದು!)
ಈ ಮಾತಿಲಿ ಇಪ್ಪ ನಿಗೂಢತೆ ಈ ಹೆಬಗಂಗೆ ಎಲ್ಲಿಂದ ಅರ್ತ ಆವುತ್ತು – ಹೇಳಿ ಗ್ರೇಶಿದಿರೋ,
ಇಲ್ಲೆ! ಅದುವೇ ಅವನ ಜೀವನವ ಬದಲುಸಿ ಬಿಡ್ತು.

ಮದುವೆಂದ ಮದಲು ಬರೇ ಹೆಡ್ಡ ಆಗಿದ್ದ ಕುರುಬ, ಅದರಿಂದ ಮತ್ತೆ ಮಹಾಪಂಡಿತ ಕಾಳಿದಾಸ° ಅಪ್ಪಲೆ ಇದುವೇ ಕಾರಣ ಆವುತ್ತು.
ಬೆಗುಡು ಮಾತುಗೊ ಬಂದುಗೊಂಡಿದ್ದ ಬಾಯಿಲಿ, ಈಗ ನಿರರ್ಗಳವಾಗಿ ಸಂಸ್ಕೃತ ಶ್ಲೋಕಂಗೊ ಬಪ್ಪಲೆ ಸುರು ಆತಾಡ. ಅದರ ಕೇಳಿ ಹೆಂಡತ್ತಿಗೆ ಎಚ್ಚರಿಗೆ ಆತು;
ಎಚ್ಚರಿಗೆ ಆದರೆಂತ, ಕಾಳಿಯ ಕೈಲಿ ಬರೆಶಿಗೊಂಡವಂಗೆ ಪೂರ್ವಾಶ್ರಮದ ಎಂತ ನೆಂಪೂ ಇರ್ತಿಲ್ಲೆ.
ಎಲ್ಲ ಬಿಡಿ, ಕಾಳಿಯ ಪ್ರಾರ್ಥನೆಗೆ ಕಾರಣ ಆದ ಸ್ವತಃ ಹೆಂಡತ್ತಿಯನ್ನೇ ಗುರ್ತ ಹಿಡಿತ್ತನಿಲ್ಲೇಡ. ಪಾಪ.
ಕಾಳಿದಾಸನ ಪಾಂಡಿತ್ಯ ಅಂಬಗಳೇ ಸರಸ್ವತೀ ರೂಪಲ್ಲಿ ಹೆರಬೀಳುಲೆ ಸುರು ಆವುತ್ತಾಡ.
ನಮ್ಮ ಬೈಲಿನ ಬೋಚಬಾವಂಗೆ ಯೇವತ್ತು ಯೇವ ಕಾಳಿ ಸಿಕ್ಕುತ್ತೋ – ಉಮ್ಮ! 😉

ಹಾಂಗೆ, ಅವನ ಬಾಯಿಂದ ಮೊದಲು ಬಂದ ಕೃತಿಯೇ “ಶ್ಯಾಮಲ ದಂಡಕಮ್” ಹೇಳ್ತ ಸುಂದರ ಕಾವ್ಯ.

ದೇವಿ ಸರಸ್ವತಿಯ ಅನುಗ್ರಹ ಇದ್ದರೆ ಇಲ್ಲಿ ಬರದ್ದರ ಓದಲೆಡಿಗು! 🙂


ಶ್ಯಾಮಲ ದಂಡಕಮ್:

ಸಂಸ್ಕೃತಲ್ಲಿ ಅನೇಕ ನಮುನೆ ಕಾವ್ಯಪ್ರಾಕಾರಂಗಳಲ್ಲಿ ದಂಡಕವೂ ಒಂದು ಅಡ.
ಗದ್ಯರೂಪಲ್ಲಿ ಬರಕ್ಕೊಂಡಿದ್ದರೂ, ನಿಗದಿತ ತಾಳ-ಲಯಲ್ಲಿ ಹೋವುತ್ತ ಹಾಂಗೆ ಇರ್ತಾಡ.
ಪಕ್ಕಪಕ್ಕ ಚೆಂದದ ತಾಳಲ್ಲಿ ಓದಿಗೊಂಡು ಹೋದರೆ, ಅದೇ ತಾಳಲ್ಲಿ ತಲೆ ಆಡುಸಿ ಹೋವುತ್ತಾಡ ಕೇಳ್ತೋನಿಂಗೆ!
ಹಲವಾರು ದಂಡಕಂಗೊ ಪ್ರಚಲಿತಲ್ಲಿ ಇದ್ದರೂ, ಅತ್ಯಂತ ಪ್ರಸಿದ್ಧಿಗೆ ಬಂದದು ಕಾಳಿದಾಸನ ಪ್ರಪ್ರಥಮ ಕೃತಿ – ಇದೇ ಶ್ಯಾಮಲದಂಡಕಮ್!

ಬುದ್ಧಿ ತೋರುಸಿದ ಆ ಮಹಾಶೆಗ್ತಿ ಸರಸ್ವತಿಯ ವರ್ಣನೆ ಮಾಡ್ತ ಗೆರೆಗಳನ್ನೇ ಒಳಗೊಂಡ ಸಮಗ್ರ ಕಾವ್ಯ ಅಡ ಇದು.
ಐದು ದಂಡಕಂಗಳ ಒಳಗೊಂಡ ಈ ಪದ್ಯ, ಐದೈದು ಮಾತ್ರೆಯ ಗುಂಪುಗೊ ಆಗಿ ಹಾಡ್ಳೆ ಭಾರೀ ಕೊಶಿ ಆವುತ್ತು ಹೇಳಿದವು ಮಾಷ್ಟ್ರುಮಾವ°.
ಉಪಮಾಲೋಲ ಆಗಿದ್ದ ಕಾಳಿದಾಸ ಪ್ರತಿ ಗೆರೆಗಳಲ್ಲಿಯೂ ಉಪಮೆ, ರೂಪಕಾಲಂಕಾರಂಗಳ ಹಾಕಿ ’ಅದರ ಹಾಂಗಿಪ್ಪ ಮೋರೆ, ಇದರ ಹಾಂಗಿಪ್ಪ ಕಣ್ಣು, ಮತ್ತೊಂದರ ಹಾಂಗಿಪ್ಪ ಮಂದಸ್ಮಿತ, ಇನ್ನೊಂದರ ಹಾಂಗಿಪ್ಪ ತಲೆಕಸವುಗೊ – ಹೀಂಗೆ ಪ್ರತಿಯೊಂದರನ್ನೂ ವರ್ಣಿಸಿಗೊಂಡು ಹೋಯಿದನಾಡ.
ಸರಿಯಾಗಿ ಓದಿ ಅರ್ತ ಮಾಡಿಗೊಂಡರೆ ಕಾಳಿದಾಸನ ಚಾಕಚಕ್ಯತೆ, ಸಾಹಿತ್ಯಿಕ ಶೆಗ್ತಿಯ ಸಾಮರ್ಥ್ಯ ಎಂತರ ಹೇಳ್ತದು ಅಂದಾಜಿ ಆವುತ್ತು – ಹೇಳಿದವು.
ಶ್ಯಾಮಲದಂಡಕಲ್ಲಿ ಬಪ್ಪ ಒಂದೆರಡು ಉದಾಹರಣೆಗಳ ಒಟ್ಟಿಂಗೆ ಮಾಷ್ಟ್ರುಮಾವ° ವಿವರುಸಿದವು.
ಸರಸ್ವತಿಯ ಬಗ್ಗೆಯೇ ಆಗಿಪ್ಪ ಕಾರಣ ಇಂದು ಮಾತಾಡುದು ಪ್ರಸ್ತುತ ಹೇಳಿ ಕಾಣ್ತು.

ಶೇಖರೀಭೂತಶೀತಾಂಶುರೇಖಾಮಯೂಖಾವಲೀಬದ್ಧ ಸುಸ್ನಿಗ್ಧ ನೀಲಾಲಕ ಶ್ರೇಣಿ ಶೃಂಗಾರಿತೇ | ಲೋಕ ಸಂಭಾವಿತೇ |

– ಚಂದ್ರನ ಬೆಣಚ್ಚಿನ ಕಿರಣಂಗಳ ಸಾಲುಸಾಲು ಒಟ್ಟಿಂಗೇ ಬಿದ್ದು ಹೊಳೆತ್ತಾ ಇಪ್ಪ ಕಪ್ಪು ತಲೆಕಸವಿಂದ ಅಲಂಕೃತಗೊಂಡ ಲೋಕಮಾತೆ – ಹೇಳಿಗೊಂಡು ಇದರ ಅರ್ತ ಅಡ. ಬರೇ ತಲೆಕಸವಿನ ವರ್ಣನೆ ಮಾಡುವಗ – ದೇವಲೋಕಂದ ಚಂದ್ರಲೋಕ, ಪೂರಾ ಒಂದರಿ ಸುತ್ತಿಕ್ಕಿ ಬತ್ತು ಇದರ ಓದುವವರ ಮನಸ್ಸು!

ಅದೇ ರೀತಿ, ಇನ್ನೊಂದು ವಾಕ್ಯ:

ಪ್ರೋಲ್ಲಸದ್ಬಾಲಿಕಾ ಮೌಕ್ತಿಕಶ್ರೇಣಿಕಾ ಚಂದ್ರಿಕಾ ಮಂಡಲೋದ್ಭಾಸಿ, ಲಾವಣ್ಯ ಗಂಡಸ್ಥಲನ್ಯಸ್ಥ, ಕಸ್ತೂರಿಕಾಪತ್ರ ರೇಖಾ ಸಮದ್ಭೂತ ಸೌರಭ್ಯ ಸಂಭ್ರಾಂತ ಭೃಂಗಾಂಗನಾ ಗೀತ, ಸಾಂದ್ರೀ ಭವನ್ಮಂದ್ರ ತಂತ್ರೀಸ್ವರೇ | ಸುಸ್ವರೇ |  ಭಾಸ್ವರೇ |

ಅಬ್ಬೆ ಸರಸ್ವತಿಯ ಅಗಾಧ ಸೌಂದರ್ಯ ಹೇಳಿತ್ತುಕಂಡ್ರೆ, ಭಕ್ತನ ಕಣ್ಣು-ಕೆಮಿ-ಮೂಗು ಮೂರಕ್ಕೂ ಆಹ್ಲಾದಕರವಾಗಿ ಇದ್ದು.
ಚೆಂದವಾದ ಕೆಮಿಯ ಓಲೆಗೊ ಚಂದ್ರಮಂಡಲದ ಹಾಂಗೆ ಪ್ರಕಾಶಮಾನವಾಗಿ ಕಂಡುಗೊಂಡು ಇಪ್ಪದು ನಯನಾನಂದಕರವೂ,
ಕೆಪ್ಪಟೆಲಿ ಉದ್ದಿದ ಕಸ್ತೂರಿಯ ಪರಿಮ್ಮಳ ಮೂಗಿಂಗೆ ಸುವಾಸನೆ ಕೊಡುವ ಆಹ್ಲಾದಕಾರಿಯೂ,
ಕಸ್ತೂರಿ ಪರಿಮ್ಮಳಕ್ಕೆ ಬಂದ ಹೆಣ್ಣು ದುಂಬಿಗಳ ಝೇಂಕಾರದ ಒಟ್ಟಿಂಗೇ ವೀಣೆಯ ತಂತಿಗಳಿಂದ ಬಪ್ಪ ಮಂದ್ರ ಸ್ವರಾವಳಿಗೊ ಕರ್ಣಾನಂದಕರವೂ ಆಗಿದ್ದು.

ಮಾಷ್ಟ್ರುಮಾವ° ವಿವರುಸಿಗೊಂಡು ಹೋದ ಹಾಂಗೇ, ಕಾಳಿದಾಸನ ಪದಲಾಲಿತ್ಯ, ಉಪಮೆ – ಎಲ್ಲವನ್ನೂ ಗ್ರೇಶಿ ತುಂಬಾ ಕೊಶಿ ಆತು.
ಒಂದೊಂದನ್ನೂ ಕೇಳಿಗೊಂಡು ಹೋದರೆ – ಚೆ, ಪರಿಸರದ ಸೂಕ್ಷ್ಮಂಗಳ ಎಷ್ಟು ಚೆಂದಕೆ ಸ್ವತಃ ತಿಳ್ಕೊಂಡು, ಅದರ ಓದುತ್ತೋನಿಂಗೆ ವಿವರುಸುತ್ತ°! ಹೇಳಿ ಕಾಣ್ತು.
ಇಂದು ಪುರುಸೊತ್ತಿಲ್ಲೆ, ಇನ್ನೊಂದರಿ ಪುರುಸೋತಿಲಿ ಪ್ರತಿಗೆರೆಯನ್ನೂ ಕೇಳೇಕು – ಗ್ರೇಶಿಗೊಂಡೆ.

ಇಷ್ಟೇ ಅಲ್ಲದ್ದೆ, ಆ ಮಹಾಪುರುಷನ ಬಗ್ಗೆ ಇನ್ನೊಂದು ವಿಶೇಷ ಶುದ್ದಿ ಹೇಳಿದವು.
ಅಸ್ತಿಕಶ್ಚಿದ್ ವಾಗ್ ವಿಶೇಷ:
ಅಂದು ಕಾಳಿ ಬರದ ಮಾತು “ಅಸ್ತಿ-ಕಶ್ಚಿತ್-ವಾಕ್ ವಿಶೇಷಃ”ಲ್ಲಿ ಇಪ್ಪ ಮೂರು ಶಬ್ದಂಗಳಿಂದ ಸುರು ಅಪ್ಪ ಮೂರು ಮಹಾಕಾವ್ಯಂಗಳ ಬರದ್ದನಾಡ.
ಅದರ ಬಗ್ಗೆ ಚೆಂದಲ್ಲಿ ಒಂದೆರಡು ವಾಕ್ಯಲ್ಲಿ ವಿವರುಸಿದವು.

ಸುರುವಾಣದ್ದು ಕುಮಾರ ಸಂಭವ.
ಪಾರ್ವತಿ ತಪಸ್ಸು ಮಾಡಿ ಶಿವನ ಮದುವೆ ಆಗಿ ಸುಬ್ರಮಣ್ಯ ಹುಟ್ಟುತ್ತ ಕತೆ ಅಡ.
ಸುಬ್ರಮಣ್ಯ ಹುಟ್ಟಿ ತಾರಕಾಸುರನ ಕೊಲ್ಲುತ್ತ ಕತೆ ಅಡ ಇದು. ಆ ಮಹಾಕಾವ್ಯ ಸುರು ಅಪ್ಪದು ಈ ಶ್ಲೋಕಲ್ಲಿ ಆಡ:

ಅಸ್ತ್ಯುತ್ತರಸಸ್ಯಾಮ್ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ  |
ಪೂರ್ವಾಪರೌ ವಾರಿನಿಧೀವಗಾಹ್ಯಾ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ||

ಭಾರತದ ಉತ್ತರಕ್ಕೆ ಪೂರ್ವ-ಪಶ್ಚಿಮವಾಗಿ ಹಿಮಾಲಯ ಹೇಳಿಗೊಂಡು ಒಂದು ವಿಶೇಷ ಪರ್ವತ ಸಾಲು ಇದ್ದು.
ಪೂರ್ವಸಮುದ್ರಂದ ಪಶ್ಚಿಮ ಸಮುದ್ರ ಒರೆಂಗೆ ಇದು ಭೂಮಿಯ ಅಳತೆಗೋಲಿನ ಹಾಂಗೆ ಇದ್ದು – ಹೇಳಿಗೊಂಡು.
ದೇವಿ ಬರದ ಸುರೂವಾಣ ಶಬ್ದ ಈ ಶ್ಲೋಕದ ಸುರುವಿಂಗೆ ಬತ್ತು.

ಮತ್ತಾಣದ್ದು ಮೇಘದೂತ. ಯಕ್ಷ ಒಬ್ಬ ಯಕ್ಷಿಗೆ ಮೋಡದ ಮೂಲಕ ಸಂದೇಶ ಕಳುಸುತ್ತ ಕತೆ ಅಡ ಇದು.
ಅದರ ಸುರುವಾಣ ಶ್ಲೋಕ ಹೀಂಗಿದ್ದು:

ಕಶ್ಚಿತ್ ಕಾಂತಾ ವಿರಹ ಗುರುಣಾ ಸ್ವಾಧಿಕಾರಾತ್ ಪ್ರಮತ್ತಃ |
ಶಾಪೇಣಾಸ್ತಂಗಮಿತ ಮಹಿಮಾ ವರ್ಷ ಭೋಗ್ಯೇಣ ಭರ್ತುಃ ||

ಒಂದೊರಿಶ ಕಾಲ ತನ್ನ ಮಹಿಮೆಯ ಕಳಕ್ಕೊಂಡ ಒಬ್ಬ ಯಕ್ಷ, ತನ್ನ ಕಾಂತೆಯ ಕಳಕ್ಕೊಂಡ ವಿರಹ ವೇದನೆ ಇಪ್ಪ ಕತೆ ಹೇಳ್ತ ಅರ್ತಲ್ಲಿ ಸುರು ಅಪ್ಪದಾಡ ಈ ಶ್ಲೋಕ.
ದೇವಿ ಬರದ ಎರಡ್ಣೇ ಅಕ್ಷರಂದ ಈ ಎರಡ್ಣೇ ಮಹಾಕಾವ್ಯ ಅಪ್ಪದಾಡ.

ಮೂರ್ನೇದೇ ರಘುವಂಶ. ರಘುವಿನ ವಂಶದ ಕಥೆ. ಅದರ ಸುರುವಾಣ ಶ್ಲೋಕ:

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

ಮಾತು-ಅರ್ಥ ಎರಡೂ ಒಟ್ಟಿಂಗೇ ಇರ್ತು. ಅದೇ ಉಪಮೆಲಿ ಒಟ್ಟಿಂಗೆ ಇಪ್ಪ ಶಿವನೂ ಪಾರ್ವತಿಯೂ ಈ ಜಗತ್ತಿನ ಅಪ್ಪ-ಅಮ್ಮ.
ಅವಕ್ಕೆ ವಂದನೆ ಮಾಡ್ತದೇ ಈ ಆದಿ ಶ್ಲೋಕ, ದೇವಿ ಬರದ ಮೂರ್ನೇ ಶೆಬ್ದ.

ಇದು ಮೂರು ದೊಡ್ಡ ಕಾವ್ಯ. ಖಂಡಕಾವ್ಯ, ನಾಟಕ – ಹೀಂಗಿರ್ತ ಇತರ ಸಾಹಿತ್ಯಪ್ರಾಕಾರಂಗಳಲ್ಲಿಯೂ ಕಾಳಿದಾಸನ ಹಿರಿಮೆ ಇದ್ದು – ಹೇಳಿದವು.
ಅಭಿಜ್ಞಾನ ಶಾಕುಂತಲದ ಬಗ್ಗೆ ನಾವು ಅಂದೊಂದರಿ ಮಾತಾಡಿದ್ದು, ನೆಂಪಿದ್ದೋ?
~

ಅಂತೂ, ಕಾಳಿದಾಸ ಇಷ್ಟೆಲ್ಲ ಪಾಂಡಿತ್ಯಂದ ಕಾವ್ಯ, ನಾಟಕಂಗಳ ಬರವಲೆ ಕಾರಣ ಎಂತ್ಸು?
ಅದುವೇ ಸರಸ್ವತಿಯ ಅನುಗ್ರಹ!
ಎಂತೂ ಅರಡಿಯದ್ದ ಒಬ್ಬ ಬೋಚ°, ಮಹಾಪಾಂಡಿತ್ಯ ಇಪ್ಪ ಮಹಾಕವಿ ಅಪ್ಪಲೆ ಎಡಿತ್ತು, ಸರಸ್ವತಿಯ ಅನುಗ್ರಹ ಇದ್ದರೆ.
ಬೈಲ ಬಂಧುಗೊಕ್ಕೆ ಆ ಮಹಾಮಾತೆಯ ಅನುಗ್ರಹ ಆಗಿ ಸರಸ್ವತೀ ಸೇವೆ ಮಾಡ್ಳೆ ಕಾರಣ ಆಗಲಿ. ಪಾಂಡಿತ್ಯ ವೃದ್ಧಿ ಆಗಿ, ಬೌದ್ಧಿಕ ಜೀವನ ಸುಖಕರ ಆಗಲಿ.
ಹೇಳ್ತದು ಆಶಯ.

ಹೇಳಿದಾಂಗೆ, ನವರಾತ್ರಿಯ ಸಮೆಯಲ್ಲಿ ಕಾಳಿದಾಸನ ಶಾಮಲದಂಡಕ ನಿತ್ಯಪಾರಾಯಣ ಮಾಡೇಕು – ಹೇಳ್ತವು ಚಾಂಗುಳಿಅಕ್ಕ°.
ಹಾಂಗಾಗಿ, ಒಪ್ಪಣ್ಣಂಗೆ ಈ ಶುದ್ದಿ ನೆಂಪಾತು. ಶುದ್ದಿಲಿ ಸುಮಾರು ಹತ್ತರಾಣ ವಿಶಯಂಗಳೂ ನೆಂಪಾತು.
ಎಲ್ಲ ಒಟ್ಟಾಗಿ ಈ ವಾರಕ್ಕೆ ಮಾತಾಡುವೊ° ಹೇದು ಹೆರಟದು!

ಸಣ್ಣಮಕ್ಕೊ ಶಾಮಲದಂಡಕ ಓದುದರಿಂದ ಉಚ್ಛಾರ ಸ್ಪಷ್ಟ ಆವುತ್ತು – ಹೇಳ್ತದೂ ಒಂದು ಕಾರಣ ಆದರೆ, ಕಾಳಿದಾಸನೇ ಸ್ವತಃ ದೈನ್ಯ ಭಾವಲ್ಲಿ ಪ್ರಾರ್ಥನೆ ಮಾಡಿದ ಶ್ಲೋಕ ಹೇಳ್ತದು ಇನ್ನೊಂದು ಕಾರಣ.
ಏನೇ ಆಗಲಿ,
ಈ ನವರಾತ್ರಿಲಿ ಎಡಿಗಾದಷ್ಟಾದರೂ ದೇವೀ ಶ್ಲೋಕಂಗಳ ನೆಂಪುಮಾಡಿಗೊಂಡು, ಜಗತ್ತಿನ ಆ ಮಹಾ ಅಮ್ಮನ ಅನುಗ್ರಹ ನವಗೆಲ್ಲೋರಿಂಗೂ ಸಿಕ್ಕುತ್ತ ಹಾಂಗೆ ಒದಗಿ ಬರಲಿ.
ಸರಸ್ವತಿಯ ಒಲುಮೆ ಇದ್ದರೆ ದೇವಿಯ ಇತರ ರೂಪಂಗೊ ತನ್ನಿಂತಾನಾಗಿಯೇ ಬತ್ತಾಡ, ಮಾಷ್ಟ್ರುಮಾವ° ಹೇಳಿದವು.

ಒಂದೊಪ್ಪ: ಸರಸ್ವತಿಯ ವೀಣೆಂದ ಬಪ್ಪ ಸಾಂದ್ರವಾದ ಸ್ವರಂಗೊ ನಮ್ಮ ಜೀವನಲ್ಲಿ ಸಾಂದ್ರವಾದ ಆನಂದವ ತುಂಬಿ ಬೆಳಗಲಿ.

ಸೂ:
ಡಾ.ರಾಜ್ಕುಮಾರ್ ಹಾಡಿದ ಶಾಮಲದಂಡಕದ ತುಣುಕು ಇಲ್ಲಿ ಕೇಳುಲಕ್ಕು:

ಶಾಮಲ ದಂಡಕಮ್ | Oppanna: ಒಪ್ಪಣ್ಣನ ಬೈಲಿನ ಒಪ್ಪಂಗೊ |

ಒಪ್ಪಣ್ಣ

   

You may also like...

27 Responses

 1. ವಿಷ್ಣು ನಂದನ says:

  ಸಮಯೋಚಿತ ಲೇಖನ…

  ವಿದ್ಯೆ ನಮ್ಮೆಲ್ಲರ ಇಂದು ಇಲ್ಲಿ ತಂದು ನಿಲ್ಸಿದ್ದು… ಸರಸ್ವತಿಯ ಎಷ್ಟು ಆರಾಧನೆ ಮಡಿದರೂ ಸಾಲ. ಬ್ರಾಹ್ಮಣರಾದ ನವಗೆ ವಿದ್ಯೆ ಮಾತ್ರ ಸಂಪತ್ತು. ಸರಸ್ವತಿಯ ಅನುಗ್ರಹ ಎಲ್ಲರಿಂಗೂ ಇರಲಿ.

  • ನಂದಣ್ಣಾ..
   ನಮ್ಮ ಹೆರಿಯೋರು ವಿಶೇಷ ಸ್ಥಾನಮಾನ ಪಡಕ್ಕೊಂಡಿದ್ದದು ಸರಸ್ವತಿ ಅನುಗ್ರಹಂದಲೇ.
   ನಾವುದೇ ಕೆಲವು ಜೆನ ದೊಡ್ಡದೊಡ್ಡ ಸ್ಥಾನಮಾನ ಪಡಕ್ಕೊಳ್ತು, ಅದುದೇ ಸರಸ್ವತಿ ಅನುಗ್ರಹಂದಲೇ.

   ನಮ್ಮ ಮುಂದಾಣೋರಿಂಗೆ ಬೇಕಾಗಿ, ನಾವು ಸರಸ್ವತಿ ಆರಾಧನೆ ಮುಂದುವರುಶೇಕು – ಹೇಳ್ತದು ಹಾರೈಕೆ, ಅಲ್ದೋ?

 2. ಬೋಸ ಬಾವ says:

  ಹೋ..!!
  ಈ ಕಾಳಿದಾಸನ ಪಾತ್ರಲ್ಲಿ ರಾಜಕುಮಾರನ ಸಿನುಮೇ ನೋಡಿದ್ದೆ ಆನು..!! 😀
  ಕಾಳಿದಾಸ ಮೊದಲು ಎನ್ನ ಹಾ೦ಗೆ ಬರೇ ಬೋಚ ಅಡಾ..! ಅಪ್ಪೋ?? 😉
  ಮತ್ತೆ ದೇವಿಯ ಅನುಗ್ರಹ೦ದ ಬುದ್ದಿವ೦ತ ಆದ್ದು ಹೇಳಿಯೋ?? 🙂

  ಹಾ..!
  ಅ೦ಬಗ ಆನು ಇನ್ನು ಪದ್ಯ ಬರವಲೇ ಸುರು ಮಾಡ್ತೆ ಏ?? 😛
  ದೇವಿಯ ಕೃಪೆ ಹೇ೦ಗು ಇದ್ದು.. 🙂
  ಆಗದೋ?? 😉

  • {ಕಾಳಿದಾಸ ಮೊದಲು ಎನ್ನ ಹಾ೦ಗೆ ಬರೇ ಬೋಚ ಅಡಾ.. }
   ಅಪ್ಪಪ್ಪು, ವಿಶಯ ಅಪ್ಪು.

   ಮತ್ತೆಯೇ ಎನ್ನ ಹಾಂಗೆ ಗಟ್ಟಿಗ° ಆದ್ಸು! 😉 😉 😛

 3. ಭಾಗ್ಯಲಕ್ಶ್ಮಿ says:

  ಸನ್ಧರ್ಭೊಚಿತ ಸುದ್ದಿ. ಮರದು ಹೋಗಿದ್ದ ಕಾಳಿದಾಸನ ಕಥೆ ಮತ್ತೆ ನೆನಪಿನ್ಗೆ ಬಂತು. ನವರಾತ್ರಿ ಸುರು ಆಯೆಕ್ಕರೆ ಮೊದಲೇ ದಿನ ಎನಿಸಿಗೊಂದಿತ್ತದು ನೆಂಪಾತು . ಎಂತಕೆ ?….. ದೇವರ ಕೋಣೆಲಿ ಪುಸ್ತಕ ಮಡುಗುಲೆ.ಮತ್ತೆ ಒದುವಕೆಲಸ ಇಲ್ಲೆ ಹೇಳಿ ಸಂಭ್ರಮ .
  ಬೋಸ ಭಾವನ್ದೆ ಕಾಳಿದಾಸ ಆದರೆ ಬೈಲಿಲಿ ಬೋಸ ಭಾವನ ಖಾಲಿ ಆದ ಜಾಗೆ ತುಮ್ಬುದಾರಪ್ಪ?

  • ಭಾಗ್ಯಕ್ಕ,
   ನವರಾತ್ರಿಯ ಪುಸ್ತಕಪೂಜೆ ಮಾಡಿ, ಭಗವದ್ಗೀತೆ ಇತ್ಯಾದಿ ಪುಸ್ತಕಂಗೊ ಓದಿರೆ ಮನೆ-ಮನ ಸಮೃದ್ಧವಾಗಿರ್ತು ಹೇಳ್ತದು ನಮ್ಮ ಹೆರಿಯೋರ ನಂಬಿಕೆ.
   ಅಲ್ಲದೋ?

   ಬೋಸಬಾವ ’ಕಾಲಿ’ದಾಸ ಅಕ್ಕಷ್ಟೆ, ತಲೆಬೆಶಿ ಇಲ್ಲೆ! 😉

 4. Pramod m says:

  ಹರೇ ರಾಮ. ಉತ್ತಮ ಬರಹ ಬೈಲಿನ ಎಲ್ಲಾ ಬ೦ಧುಗೊಕ್ಕುದೆ ನವರಾತ್ರಿಯ ಶುಭಾಶಯ೦ಗೊ………..

 5. Sumana Bhat Sankahithlu says:

  “ಎಲ್ಲೋರಿಂಗೂ ನವರಾತ್ರಿಯ ಹಾರ್ದಿಕ ಶುಭಾಶಂಗೊ.”
  ತುಂಬಾ ಲಾಯಿಕ ಮಾಹಿತಿ ಇಪ್ಪ ಶುದ್ಧಿ ಬರದ್ದು ಲಾಯಿಕ ಆಯಿದು.
  ಮಾಷ್ಟು ಮಾವ, ಭಟ್ಟ ಮಾವ ಎಲ್ಲರತ್ರಂದ ಸುದ್ದಿ ಸಂಗ್ರಹಿಸಿ ಬರದ್ದು ಲಾಯಿಕಾಯಿದು.
  ಹಾಡಿನ ತುಣುಕು ಹಾಕಿದ್ದುದೆ ಲಾಯಿಕಿದ್ದು.
  ಇನ್ನು ಹೊಸ ಶುದ್ಧಿ ಓದುಲೆ ಕಾಯ್ತೆ.
  ~ಸುಮನಕ್ಕ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *