Oppanna.com

ಸರಿಗಮನದ ಪುರುಸೊತ್ತಿಲ್ಲದ್ದರೂ, ಸರಿಗಮ ಅರಡಿಗು!!

ಬರದೋರು :   ಒಪ್ಪಣ್ಣ    on   17/06/2011    40 ಒಪ್ಪಂಗೊ

ಶಂಕರಮಾವ° ಲಹರಿ ಬಪ್ಪಗ ಸಂಗೀತ ಕೇಳುಗು.
– ಸಂಗೀತ ಕೇಳಿದಷ್ಟೂ ಲಹರಿ ಎಳಗಿ ಎಳಗಿ ಬಕ್ಕು.
ಅವರ ಮನೆಲಿ ಸಂಗೀತದ ಅಲೆ ನಿತ್ಯವೂ ಇಕ್ಕು; ಮನುಶ್ಶರ ಸೊರಲ್ಲಿ ಮಾಂತ್ರ ಅಲ್ಲ; ಹಳೇ ಟೇಪ್ರೆಕಾರ್ಡು, ರೇಡ್ಯ, ಟೀವಿ, ಹೊಸಾ ಕಂಪ್ಲೀಟ್ರು – ಎಲ್ಲದರಲ್ಲಿಯೂ.
ಒಟ್ಟಾರೆಗೆ ಸಂಗೀತದ ಎಳೆ ಎಳೆಯುದೇ ಅವಕ್ಕೆ ಕೊಶಿಯೇ!
ಸಂಗೀತಲ್ಲೇ ಜೀವ, ಸಂಗೀತಲ್ಲೇ ಅಂತಃಸತ್ವ, ಮಾನಸಿಕಶಾಂತಿ ಇಪ್ಪದು ಹೇಳ್ತದರ ಸ್ವತಃ ಕಂಡುಕೊಂಡಿದವು.
ಕನ್ನಾಟಿ ಎಳೆತ್ತ ನಮುನೆ ಕಪಾಟಿನ ಒಳದಿಕೆ ಇರ್ತ ಕೇಸೆಟ್ಟುಗಳೇ ಇದಕ್ಕೆ ಸಾಕ್ಷಿ.

ಮನೆಲಿ ಇದ್ದಷ್ಟೇ ಸಂಗೀತದ ಸೀಡಿಕೇಸೆಟ್ಟುಗೊ ಅವರ ಕೆಂಪು ಕಾರಿನೊಳದಿಕೆಯೂ ಇಕ್ಕು.
ಆ ಕಾರಿನ ಚಕ್ರ ತಿರುಗುತ್ತು ಹೇಳಿ ಆದರೆ ಸಂಗೀತದ ಯೇವದಾರು ಒಂದು ಸೀಡಿಕೇಸೆಟ್ಟುದೇ ತಿರುಗುತ್ತು ಹೇಳ್ತದು ನಿಘಂಟು. 🙂
ಕೆಲವು ಸರ್ತಿ ಒಬ್ಬನೇ ದೂರಕ್ಕೆ ಹೋಯೆಕ್ಕು ಹೇಳಿ ಅಪ್ಪಗ ಮುನ್ನಾಣದಿನವೇ ಒಳ್ಳೆ ಕೇಸೆಟ್ಟಿನ ತೆಗದು ಮಡಗ್ಗು, ಪೇಷ್ಟುಬ್ರೆಶ್ಶಿನಷ್ಟೇ ಜಾಗ್ರತೆಲಿ.
ಬೆಂಗುಳೂರಿಂದ ಊರಿಂಗೆ ಬಪ್ಪಗಳೂ ಹಾಂಗೇ, ಜೇಸುದಾಸನ ವಾತಾಪಿ, ಯಮ್ಮೆಲ್ವಿಯ ಮೋಹನ, ಬಾಲಮುರಳಿಯ ಶ್ರೀರಾಗಂಗಳ ನಡೆಶಿಯೇ ನಡೆಶುಗು.
ಒಂದೈವತ್ತು ಕೇಸೆಟ್ಟುಗೊ ಅಂತೂ ಅವಕ್ಕೆ ಅತಿ ಸ್ಪುಟವಾಗಿ ಕೇಳಿ ಅರಡಿಗು.
ಅಲ್ಲಿಪ್ಪ ಪ್ರತಿ ಭಾವ-ರಾಗ-ತಾಳ- ಲಯ, ಅಲ್ಲಿಪ್ಪ ಮೃದಂಗದ ಪ್ರತಿ ಪೆಟ್ಟುದೇ ನೆಂಪಿಲಿಕ್ಕು. ಆರೋಹಣ, ಅವರೋಹಣಂಗೊ ಮನೆ ಎದುರಾಣ ಕರಿಡಾಮರು ಮಾರ್ಗದ ಏರಿಳಿತಂಗಳಷ್ಟೇ ಸ್ಪಷ್ಟವಾಗಿ ಅರಡಿಗು.
ಎಷ್ಟು ಸರ್ತಿ ಕೇಳಿದ್ದವೋ! ಅವಕ್ಕೂ ಲೆಕ್ಕ ಇರ!!
ಎಷ್ಟು ಸರ್ತಿ ತಲೆಬೆಶಿ ಆಯಿದೋ – ಅಷ್ಟು ಸರ್ತಿ! 🙁
~

ಚೆನ್ನೈಬಾವನ ಸಂಗೀತ ಕೇಸೆಟ್ಟುಗೊ! ಶಂಕರಮಾವನ ಹತ್ರೆಯೂ ಹೀಂಗೇ ಸಂಗ್ರಹ ಇದ್ದು.

ಹೋ – ಶಂಕರಮಾವನ ಗುರ್ತ ಹೇಳಿದ್ದೇ ಇಲ್ಲೆಪ್ಪೋ!
ಇವು ನಮ್ಮ ಊರಿನೋರೇ, ಆದರೆ ಬೆಂಗುಳೂರಿಂಗೆ ಹೋಗಿ ರಜ ಒರಿಶ ಆತು. ಈಗಲೇ ಬೆಂಗುಳೂರಿಲೇ ಇಪ್ಪದು.
ಅಪ್ಪಲೆ ಶುಬತ್ತೆಯ ಊರೇ ಆದರೂ – ಅವರದ್ದು ಆಚ ಕೊಡಿ, ಇವರದ್ದು ಈಚ ಕೊಡಿ ಅಡ – ಪೆರ್ಲದಣ್ಣ ಹೇಳಿತ್ತಿದ್ದ°.
ಬದಿಯಡ್ಕಲ್ಲಿ ಮೇಗಾಣಪೇಟೆ-ಕೆಳಾಣಪೇಟೆ ಹೇಳಿ ಇಲ್ಲೆಯೋ ಹಾಂಗೇ, ದೂರ ರಜಾ ಜಾಸ್ತಿ ಇಕ್ಕು, ಅಷ್ಟೆ!!

ಶುಬತ್ತೆಯ ಹಾಂಗೆ ಅವೆಂತ ಇಷ್ಟಪಟ್ಟು ಅಲ್ಲಿಗೆ ಹೋದ್ದಲ್ಲ , ಕಷ್ಟಪಟ್ಟು ಹೋದ್ದು.
ಅಶನದ ದಾರಿ ಅವರ ಬೆಂಗುಳೂರಿಂಗೆ ಎತ್ತುಸಿತ್ತು, ಅಷ್ಟೆ! ಈಗ ದೊಡಾ ಒಯಿವಾಟುಗಾರ° (businessman) ಅವು.
ನಮ್ಮೋರಿಂಗೆ ತಲೆ ಇರ್ತು, ಹಾಂಗಾಗಿ ಸೊಂತ ಒಯಿವಾಟುಮಾಡಿರೂ ಗೆಲ್ಲುತ್ತವಿದಾ!
– ಹಾಂಗೆ, ಅವರದ್ದೂ ದೊಡಾ ಒಯಿವಾಟು.
ಎಂತರ ಒಯಿವಾಟು ಹೇಳಿ ನಾವು ಕೇಳ್ಳಿಲ್ಲೆ, ನವಗೆಂತಕೆ, ಅಲ್ದೋ?
ಅಂದೊಂದರಿ ಅಜ್ಜಕಾನಬಾವ ಹೇಳಿತ್ತಿದ್ದ – ಈ ಪ್ಲೇಷ್ಟಿಕಿನ ಪಾತ್ರ, ಸೌಟು, ತಟ್ಟೆ, ಚೆಂಬು – ಇತ್ಯಾದಿ ಇಲ್ಲೆಯೋ – ಅದರ ಇಲ್ಯಾಣ ಸಣ್ಣ ಸಣ್ಣ ಒಯಿವಾಟುಗಾರಂಗೊಕ್ಕೆ ಹಂಚುದು.
ಎಲ್ಲಿಂದಲೋ ತರುಸಿ ಇಲ್ಲಿ ಹಂಚುತ್ತ ಏರ್ಪಾಡು. ಅದರ ಎಡಕ್ಕಿಲಿ ಇಪ್ಪ ಪಸೆ ಪೈಸೆ ನೆಮ್ಮದಿಯ ಇವರ ಜೀವನಕ್ಕೆ ಸಾಕಾಯಿದು.
~
ಬೆಂಗುಳೂರಿಂಗೆ ಬಂದ ಆರಂಭಲ್ಲಿ ತುಂಬ ಕಷ್ಟ ಆಯಿದಡ.
ಊಟಕ್ಕೂ ಯೋಚನೆ ಮಾಡೆಕ್ಕಾದ ಅತ್ಯಂತ ಕಷ್ಟದ ದಿನವೂ ಇತ್ತಾಡ. ಎಡಕ್ಕೆಡಕ್ಕಿಲಿ ನೆಮ್ಮದಿಲಿ ಹೋಟ್ಳಿನ ಅಯಿಸ್ಕ್ರೀಮು ತಿಂತ ತುಂಬಾ ಕೊಶಿಯೂ ಇತ್ತು.
ಸೊಂತ ಒಯಿವಾಟು ಹೇಳಿರೆ ಹಾಂಗೇ ಅಲ್ಲದೋ? – ಇಡೀ ತಲೆಬೆಶಿ ಸೊಂತದ್ದು.
“ತಿಂಗಳ ಸಂಬಳ ಆದರೆ ಅಕೇರಿಯಾಣ ವಾರ ಮಾಂತ್ರ ತಲೆಬೆಶಿ, ಸೊಂತ ಒಯಿವಾಟಾದರೆ ನಾಲ್ಕು ವಾರವುದೇ ತಲೆಬೆಶಿ” – ಶಂಕರಮಾವನ ಒಂದು ನೆಗೆಇದ್ದು!
ಅದೇನೇ ಇರಳಿ,
ಈಗ ಅವಕ್ಕೆ ಮೂರುಮಾಳಿಗೆಯ ಮನೆ ಇದ್ದಡ, ಸಕಲ ಅನುಕೂಲವುದೇ ಇಪ್ಪಂತಾದ್ದು.
ಲಕ್ಷ್ಮಿಅತ್ತೆ ಅಷ್ಟು ಚೆಂದಕೆ ಮನೆಯ ಬೆಳೆಶಿಗೊಂಡು, ಒಳಿಶಿಗೊಂಡು ಹೋಪದಲ್ಲದ್ರೆ ಈಗ ಆ ಮೂರು ಮಾಳಿಗೆ ಮನೆ ಏಳ್ತಿತಿಲ್ಲೆ; ಅದು ಬೇರೆ.
~
ಹ್ಮ್, ಶಂಕರ ಮಾವಂಗೆ ಮದುವೆ ಅಪ್ಪಗ ಊರಿಲೇ ಇತ್ತಿದ್ದವು; ತುಂಬ ಕಷ್ಟಲ್ಲಿ ಇತ್ತಿದ್ದವುದೇ.
ಇದ್ದ ಸಣ್ಣ ತೋಟಲ್ಲಿ ಸಾಕಪ್ಪಟ್ಟು ಬಂದುಗೊಂಡಿತ್ತಿಲ್ಲೆ. ಊರಿಲಿದ್ದೊಂಡೇ ಸಣ್ಣಮಟ್ಟಿನ ಹೆರಾಣ ಒಯಿವಾಟು ಸುರು ಆಯಿದಷ್ಟೆ.
ಅದರ್ಲಿಯೂ ಅಷ್ಟೆಂತ ಉದುಪ್ಪತ್ತಿ (ಉತ್ಪತ್ತಿ) ಇತ್ತಿಲ್ಲೆ. – ಮದುವೆ ರಜ್ಜ ತಡವಾದ್ದುದೇ ಹಾಂಗೆಯೇ ಅಡ!
ಲಕ್ಷ್ಮಿಅತ್ತೆಯ ಅಪ್ಪನ ಮನೆಯೋರುದೇ ತುಂಬ ಪಾಪ  ಅಡ; ಹದಾಕೆ ಚೆಂದಲ್ಲಿ ಮದುವೆ ಮಾಡಿ ಕಳುಸಿದವು.
~
ಊರಿಲಿ ಹೆರಿಯೋರುದೇ ತೀರಿಗೊಂಡ ಮತ್ತೆ, ಒಯಿವಾಟಿನ ಬೆಳೆಶುತ್ತ ಬಗ್ಗೆ ಮನಸ್ಸುಮಾಡಿದವು.
ಬೆಳೇಕು ಹೇಳ್ತ ಕಾರಣಂದಾಗಿ ಅನಿವಾರ್ಯವಾಗಿ ಬೆಂಗುಳೂರಿಂಗೆ ಬಂದವು, ಲಕ್ಷ್ಮಿಅತ್ತೆಯ ಒಟ್ಟಿಂಗೆ. ಈಗಾಣ ನಮುನೆ ಪೋನುಗೊ ದಾರಾಳ ಆಗಿ ಸುಲಬ ಆದ ದಿನಂಗೊ ಅಲ್ಲ ಅದು!
ಮುಂದೆ ಬೆಂಗುಳೂರಿಂಗೆ ಬಂದು ಬದುಕ್ಕೆಕ್ಕಾಗಿ ಬಂತಾದರೂ –ಜಾಸ್ತಿ ಅನುಕೂಲ ಇದ್ದೊಂಡಲ್ಲ.
ಸಣ್ಣದೊಂದು ಬಾಡಿಗೆಬಿಡಾರ – ಗಾಳಿಬೆಣಚ್ಚು ಇಲ್ಲದ್ದ ಕತ್ತಲೆಕೋಣೆ. ನೆಂಟ್ರು ಆರುದೇ ಇಲ್ಲದ್ದ, ಬರೇ ಒಯಿವಾಟು ಮಾಂತ್ರಾ ಇದ್ದಿದ್ದ ಒಂದು ಗೂಡು!
ಎಲ್ಲದಕ್ಕೂ ಬಂಙ – ಯಥೇಷ್ಟ ಹೇಳಿ ಯೇವದೂ ಇರ ಅವರ ಹತ್ತರೆ! ತೂಷ್ಣಿಲಿ ಕರ್ಚು ಮಾಡ್ಳೆಡಿಗಷ್ಟೆ.
ಅಂದಿಂಗೆ ಅಂದ್ರಾಣದ್ದು ಮಾಂತ್ರ ನಿಗಂಟು!! ನಾಳೇಣ ಅಶನದ್ದು ನಾಳೆ ದುಡುದು ಆಯೆಕ್ಕಷ್ಟೇ
– ಊರಿಲಿದ್ದರೆ ಅಷ್ಟೂ ಇಲ್ಲೆ ಇದಾ, ಹಾಂಗಾಗಿ ಹೊಂದಿಗೊಂಡು ವೆವಸ್ತೆಲಿ ಹೋಪಲೆ ಲಕ್ಷ್ಮಿಅತ್ತೆಗೆ ಕಷ್ಟ ಏನಾಗಿರ.

ಅವರ ಗೂಡುಬಿಡಾರಲ್ಲೇ ಒಂದು ಸಣ್ಣ ಕೋಣೆ ಅವರ ಆಪೀಸು. ಹೆರಾಣ ಜೆನಂಗೊ ಬಂದು ಭೇಟಿ ಅಪ್ಪಲೆ.
ಕೆಲಸದ ಒಟ್ಟಿಂಗೇ ಮನೆಯುದೇ ನೆಡೇಕಿದಾ..
ಹಗಲಂತೂ ಮಾವಂಗೆ ಆಪೀಸುಕೋಣೆಯ ತಲೆಬೆಶಿ, ಲಕ್ಷ್ಮಿಅತ್ತಗೆ ಅಡಿಗೆಮನೆ ತಲೆಬೆಶಿ!
– ಹೊತ್ತಪ್ಪಗ ರಜ ಪಾರ್ಕು ತಿರುಗ್ಗು ಪುರುಸೊತ್ತು ಆದರೆ.
~
ತಲೆಬೆಶಿ ಮನುಶ್ಶರಿಂಗೆ ಬಾರದ್ದೆ ಕಲ್ಲುಮರಕ್ಕೆ ಬತ್ತೋ? – ಬಟ್ಯ ಅಂಬಗಂಬಗ ಕೇಳುಗು.
ಒಯಿವಾಟು ಸುರುಮಾಡಿದ ಎಲ್ಲೋರಿಂಗೂ ತಲೆಬೆಶಿ ಇದ್ದೇ ಇಕ್ಕು. ಯೇವಗಳೂ ಇರದ್ರೂ ರಜ ಸಮಯ ಇಪ್ಪಲೇ ಬೇಕಿದ!
ಇವಕ್ಕೂ ಇತ್ತು.
ಪೈಸೆಂದ ಪೈಸೆ ತಿರುಗಿ ಪಸೆ ಒಳುದು ಪೈಸೆ ತುಂಬುದೇ ಒಯಿವಾಟಲ್ಲದೋ? – ಹಾಂಗಾಗಿ ಯೇವದಾರು ಒಂದು ವಿತ್ಯಾಸ ಬಂದರೆ?
ಒಯಿವಾಟು ಕೆಣುದತ್ತು ಹೇಳಿಯೇ ಅರ್ತ!
ಮನೆಯ ಕೃಷಿಲಿ ಜೀವನ ನೆಡೆಶುಲೆ ಸಾಲದ್ದೆ ಒಯಿವಾಟು ಸುರುಮಾಡಿದ್ದು ಅಲ್ಲದೋ; ಇನ್ನು ಕೃಷಿಂದ ತೆಗದು ಇಲ್ಲಿಗೆ ಹಾಕುದೆಲ್ಲಿಂದ?
ಬೇರೆಯೋರ ಕೈಂದ ಒಂದರಿಂಗೆ ಕೇಳಿ ಹಾಕುವೊ – ಹೇಳಿರೆ, ಅದೊಂದು ಹಂಗಿನ ಹಾಂಗಾವುತ್ತು!
ಅದಲ್ಲದ್ದೇ- ಇವರ ಕೈಂದಲೇ ಕೆಲವು ಜೆನ ಸಾಮಾನು ತೆಕ್ಕೊಂಡು ಪೈಶೆ ಕೊಡದ್ದೆ ನಾಮ ಹೆಟ್ಟುತ್ತವು, ಅದರನ್ನೂ ನುಂಗೆಳೇಕಾವುತ್ತು.
ಅಂತೂ, ಒಯಿವಾಟಿನ ಸುರುವಾಣ ಸಮೆಯಲ್ಲಿ ಸುಮಾರು ಮೇಗೆಕೆಳ ಆಗಿಯೇ ಬಿಡ್ತು.
ಎಷ್ಟೇ ಕೆಟ್ಟ ದಿನಂಗೊ, ತತ್ವಾರದ ಪರಿಸ್ಥಿತಿಲಿದೇ ಅವು ಒಂದು ಹವ್ಯಾಸ ಬಿಟ್ಟಿದವಿಲ್ಲೆ.
ಅವು ಬಿಟ್ಟಿದವಿಲ್ಲೆ ಹೇಳುದರಿಂದ, ಅವರ ಅದು ಬಿಟ್ಟಿದಿಲ್ಲೆ ಹೇಳುಲಕ್ಕು – ಅದುವೇ ಸಂಗೀತ!
~

ಸಣ್ಣ ಇಪ್ಪಗಳೇ ಅವಕ್ಕೆ ಆಟ- ಸಂಗೀತ ಹೇಳಿರೆ ಬಾರೀ ಇಷ್ಟಅಡ.
ಸಂಗೀತಾರಾಧಕರ ಕುಟುಂಬ ಇವರ ಅಜ್ಜನಮನೆ ಆದ್ದದೇ ಕಾರಣವೋ ಎಂತೋ, ಉಮ್ಮಪ್ಪ.
ಸಣ್ಣ ಇಪ್ಪಗ ಎಷ್ಟು ಆಟನೋಡಿದ್ದವೋ – ದೇವರೇ ಬಲ್ಲ! ಯೇವ ಮೇಳದ ಯೇವ ಪ್ರಸಂಗ ಆದರೂ ಅಕ್ಕು – ಆ ನಮುನೆ.
ಹಾಂಗೆಯೇ, ಸಂಗೀತ ಕಛೇರಿಗೊ, ಕಾರ್ಯಕ್ರಮಂಗೊ – ಎಲ್ಲವನ್ನೂ ನೋಡುಗು.

ದೊಡ್ಡ ಆದ ಮೇಗೆಯೂ ಈ ಆಸಕ್ತಿ ಬಿಟ್ಟು ಹೋಯಿದಿಲ್ಲೆ.
ಸಮಪ್ರಾಯದೋರೆಲ್ಲ ಒಯಿವಾಟಿನ ಲೆಕ್ಕಲ್ಲಿ, ಸಂಸಾರದ ಲೆಕ್ಕಲ್ಲಿ ಅಂಬೆರ್ಪಿಂಗೆ ಬಿದ್ದರೂ, ಇವರ ಆಸಕ್ತಿ ಹಾಂಗೇ ಇದ್ದತ್ತು.
ಬೌಷ್ಷ ಆ ಕಾಲಘಟ್ಟಲ್ಲಿ ಅವಕ್ಕೆ ಸಿಕ್ಕಿಂಡಿದ್ದ ಕಷ್ಟಂಗಳ ಎಡಕ್ಕಿಲಿ – ಒಂದೊಂದು ಸಂತೋಷದ ಅನುಭವ ಈ ಮನೋರಂಜನೆಯ ಮೂಲಕ ಪಡಕ್ಕೊಂಡವೋ ಏನೋ!
“ಸಂಗೀತ ಎಲ್ಲಾ ತಲೆಬೆಶಿಯನ್ನುದೇ ಮರವಲೆ ಸಕಾಯ ಮಾಡ್ತು” ಹೇಳ್ತರ ಅಂಬಗಳೇ ಗಟ್ಟಿಮಾಡಿಗೊಂಡದಿರೇಕು. ಉಮ್ಮಪ್ಪ!

~
ಲಕ್ಷ್ಮಿಅತ್ತೆ ಭಾಗ್ಯಲಕ್ಷ್ಮಿ ಆಗಿ ಬಂದದರ್ಲಿ ಒಯಿವಾಟು ಚಿಗುರಿತ್ತು; ಮದುವೆ ಆದ ಮತ್ತೆ ಶಂಕರಮಾವನ ದೆಸೆಯೇ ಬದಲಿತ್ತು.
ಒಯಿವಾಟಿಂಗೆ ಅವರ ಕೈ ಒಂಬಿತ್ತು; ಒಯಿವಾಟುದೇ ಬೆಳದತ್ತು!
ಅಂಬಗಂಬಗ ಬೆಂಗುಳೂರಿಂಗೆ ಬರೆಕ್ಕಾಗಿ ಬಂತು, ಅದೇ ಒಯಿವಾಟು ಮುಂದೆ ಬೆಂಗುಳೂರಿಂಗೇ ಕರಕ್ಕೊಂಡು ಬಂತು!
ಶಂಕರಮಾವಂಗೆ ಲಕ್ಷ್ಮಿಅತ್ತೆಯ ಕಾಲುಗುಣದ ಮೇಗೆ ನಂಬಿಕೆ ಉಂಟಾತು!
ಲಕ್ಷ್ಮಿಅತ್ತೆ ಯೆಜಮಾಂತಿ ಆಗಿ ಬಪ್ಪದ್ದೇ, “ಲಕ್ಷ್ಮಿ”ಯುದೇ ಒಲುದೊಲುದು ಬಂತು – ಹೇಳಿ ಅವ್ವೇ ಒಂದೊಂದರಿ ನೆಗೆಮಾಡ್ಳಿದ್ದಡ.

ಬೆಂಗುಳೂರಿಲಿ ಒಯಿವಾಟು ಬೆಳದತ್ತು. ರಜ್ಜ ನೆಮ್ಮದಿಯ ದಿನಂಗೊ ಕಾಂಬಲೆ ಸುರು ಆತು.
ಇಂದ್ರಾಣ ಒಳಿಕೆಯ ನಾಳಂಗೆ ಮಡಗಿ, ನಾಳೇಣ ಒಳಿಕೆಲಿ ಭವಿಷ್ಯದ ಬಗ್ಗೆ ಯೋಚನೆ ಮಾಡ್ಳೆ ಅವಕಾಶ ಸಿಕ್ಕಿತ್ತು.
ಮಕ್ಕಳ – ಇಬ್ರು ಮಗಳಕ್ಕೊ ಇದಾ – ವಿದ್ಯಾಭ್ಯಾಸ, ಆರೋಗ್ಯ –ಹಲವಾರು ವಿಚಾರಂಗಳ ಯೋಚನೆ ಮಾಡ್ಳೆ ಅನುಕೂಲ ಆತು.
ಆ ಸಮೆಯಲ್ಲಿ, ಪ್ರತಿ ದಿನಂಗಳಲ್ಲಿಯೂ – ಅವರ ಮನಸ್ಸಿನ ಏರಿತಂಗಳಲ್ಲಿ ಹೊಂದಿಗೊಂಡು ಬಂದದು – ಸಂಗೀತವೇ!
~

ಮೊನ್ನೆ ಚೂರಿಬೈಲಿಲಿ ನಾಂದಿಕಳಾತಲ್ಲದೋ – ಶಂಕರಮಾವ ಬಂದಿತ್ತಿದ್ದವು.
ಊರ ಕಳೀಯಬಾರದ್ದ ಜೆಂಬ್ರಂಗೊಕ್ಕೆ ಅವು ಬಂದೇ ಬಕ್ಕು. ಒಂದರಿ ಊರಿಂಗೆ ಬಂದದರ್ಲಿ ನೆಂಟ್ರಮನೆಗೊಕ್ಕೆಲ್ಲ ಹೋಗಿಂಡು ಬಪ್ಪದಾಡ.
ಹಾಂಗೆ, ನಾಂದಿ ಮುಗುಶಿ ಪುತ್ತೂರಿನ ಹೊಡೆಂಗೆ – ಆರದ್ದೋ ನೆಂಟ್ರಮನೆಗೆ – ಹೆರಟವು; ಹೆರಡ್ಳಪ್ಪಗ ನಾವುದೇ ಕೂದೊಂಡತ್ತು.
ಅಪುರೂಪಲ್ಲಿ ಊರಿಂಗೆ ಬತ್ತ ಕಾರಣ ಎಲ್ಲೋರನ್ನೂ ಸಲಿಗೆಯ ಪರಿಚಯ ಇಲ್ಲೆ; ಆದರೆ ಪ್ರೀತಿ ವಿಶ್ವಾಸ ಇದ್ದು.
ಒಪ್ಪಣ್ಣನನ್ನೂ ಗುರ್ತ ಕೇಳಿ ಮಾತಾಡುಸಿದವು. ಬೈಲಿನ ಶುದ್ದಿ ಎಲ್ಲ ಕೇಳಿದವು, ಅವರ ಶುದ್ದಿಯನ್ನೂ ಹೇಳಿದವು.
ಅವರ ಶುದ್ದಿ ಮಾತಾಡುವಗ – ಅವರ ಒಯಿವಾಟಿಂದಲೂ ಜಾಸ್ತಿ ಸಂಗೀತದ ಬಗ್ಗೆಯೇ ಮಾತಾಡಿಗೊಂಡಿದ್ದದು.
~
ಬೈಲಿಲಿ ಸಂಗೀತ ಅರಡಿವೋರು ಧಾರಾಳ ಇದ್ದವು..
ವಿದ್ವತ್ತಿನ ಕುಡ್ಪಲ್ತಡ್ಕಬಾವನಿಂದ ಹಿಡುದು, ಕೇಸೆಟ್ಟು ಕೇಳ್ತ ಒಪ್ಪಣ್ಣನ ಒರೆಂಗೆ – ಹೇಳುವೋರುದೇ, ಕೇಳುವೋರುದೇ – ಎಲ್ಲೋರುದೇ ಇದ್ದವು.
ಅಂದೊಂದರಿ ಸಂಗೀತದ ಶುದ್ದಿ ಮಾತಾಡುವಗ ಈ ಬಗ್ಗೆ ಮಾತಾಡಿದ್ದು. (ಮುರಳೀರವಳೀ ಹಾ…ಯ್ : ಸಂಕೊಲೆ)

ಒಪ್ಪಣ್ಣಂಗೆ ಕೆಲವೆಲ್ಲ ಕೇಳಿ ಅರಡಿವ ಕಾರಣ ಅವರ ಕೈಲಿ ಮಾತಾಡ್ಳೆ ಸುಲಬ ಆತು.

ಜೆನಂಗೊ ಎಂತಕೆ ಅಷ್ಟು ಸಂಗೀತ ಕೇಳ್ತದು? – ಹೇಳುದಕ್ಕೆ ಅವರತ್ರೆ ನೇರಾನೇರ ಉತ್ತರ ಇದ್ದು.
ಮನುಷ್ಯನ ಮನಸ್ಸೇ ಸಂಗೀತವ ಉಂಟುಮಾಡಿದ್ದೋ, ಅಲ್ಲ ಸಂಗೀತವೇ ಮನುಷ್ಯನ ಮನಸ್ಸಿನ ಉಂಟುಮಾಡಿದ್ದೋ ಹೇಳಿ ಕನುಪ್ಯೂಸು ಬತ್ತಡ ಒಂದೊಂದರಿ.
ಮನುಷ್ಯನ ಭಾವನೆಗಳಲ್ಲಿ ಎಷ್ಟು ಹಂತಂಗೊ / ವಿತ್ಯಾಸಂಗೊ ಇರ್ತೋ – ಸಂಗೀತಲ್ಲಿದೇ ಹಾಂಗೇ ಇದ್ದು..
ಪ್ರತಿಯೊಂದು ಭಾವನೆಯ ಪ್ರತಿಫಲನ ಮಾಡ್ತ ಒಂದು ರಾಗ ಇರ್ತು..
ಅತವಾ, ಆ ರಾಗದ ಹಿಂದೆ ಇಪ್ಪ ಭಾವನೆ ಯೇವದೋ ಒಂದು ನಿರ್ದಿಷ್ಟ ಲಹರಿಯ (Mood) ಪ್ರತಿಫಲನ ಮಾಡ್ತು.
ಎಷ್ಟೋ ಸರ್ತಿ, ನಮ್ಮ ಒಳಾಣ ಭಾವನೆಗೊಕ್ಕೆ ಸಮಗಟ್ಟು ವೇದಿಕೆ ಇಲ್ಲದ್ದರೆ, ಅದಕ್ಕೆ ಹೊಂದಿಗೊಂಡ ರಾಗಂಗೊ ಕೊಡ್ತು.
ಯೇವದೋ ಅಗೋಚರ ಸಂತೋಷ ನಮ್ಮ ಮನಸ್ಸಿಂಗಾದರೆ, ಅದರದ್ದೇ ಲಹರಿಗೆ ಹೊಂದುತ್ತ ನಮುನೆಯ ಒಂದು ರಾಗ ಕೇಳಿರೆ – ಆ ಸಂತೋಷ ಎರಟಿ (ಇಮ್ಮಡಿ / Double) ಆವುತ್ತು.
ಒಂದು ಬೇಜಾರ ಮನಸ್ಸಿಂಗೆ ಸುತ್ತಿಗೊಂಡಿದ್ದರೆ, ಅದೇ ಭಾವದ ಒಂದು ಪದ ಕೇಳಿರೆ ಈ ಬೇಜಾರು ಒಂದರಿಯೇ ಹೆರಬಂದು ಪೂರ್ತಿ ತೊಳದು ಹೋವುತ್ತು, ಮನಸ್ಸು ನಿರುಮ್ಮಳ ಆಗಿಬಿಡ್ತು.
ಕಷ್ಟ ಸುಕವ ನಾವು ಹೇಂಗೆ ಬೇರೆಯೋರ ಕೈಲಿ ಹೇಳಿಗೊಳ್ತೋ – ಸಂಗೀತ ಕೇಳಿರೆ “ನಾವು ನಮ್ಮೊಳವೇ ಹೇಳಿಗೊಂಡ ಹಾಂಗೆ” ಆವುತ್ತು..
“ಜೆನಂಗೊ ಯೇವಗ ಕೈಕೊಟ್ಟು ಮೋಸ ಮಾಡ್ತವೋ ಗೊಂತಾಗ, ಆದರೆ ಸಂಗೀತಕ್ಕೆ ಇದು ಅರಡಿಯ – ಅದು ಮುಗ್ಧ
” – ಹೇಳ್ತವು ಶಂಕರಮಾವ.

~
ಪಿಟೀಲು, ಕೊಳಲು, ಜಲತರಂಗಂಗಳ ಯೇವದೋ ಒಂದು ಶೃತಿಗೆ ಹೊಂದುಸಿ, ಅದೇ ಶೃತಿಲಿಪ್ಪ ಸಂಗೀತ ಸಪ್ತಕಂಗಳ ಒಳ ಏರಿಳಿತ ಕಂಡುಗೊಂಡು ಪರಿಸಮಾಪ್ತಿ ಮಾಡ್ತ ಚಾಕಚಕ್ಯತೆ ಸಂಗೀತಕಾರಂಗೆ ಇರ್ತು.
ಜೀವನಲ್ಲಿದೇ ಮೇಲೆ-ಕೆಳ ಇದ್ದು.
ಒಂದರಿ ಏರಿರೆ ಮತ್ತೆ ಇಳಿಯೇಕು, ಒಂದರಿ ಇಳುದರೆ ಮತ್ತೆ ಏರಿಯೇ ಏರೇಕು. ಅದು ಜಗದ ಅಲಿಖಿತ ನಿಯಮ.
ಸಂಗೀತಲ್ಲಿಯೂ ಏರುತಗ್ಗು ಇದ್ದು; ಒಂದರಿ ಮಂದ್ರಕ್ಕೆ ಎತ್ತುತ್ತು, ಇನ್ನೊಂದರಿ ತಾರಕ್ಕೆ ಎತ್ತುತ್ತು – ಅದು ಸಂಗೀತದ ಅಲಿಖಿತ ನಿಯಮ.
ಜೀವನಲ್ಲಿ ಒಂದೊಂದರಿ ತೀರಾ ಕೆಳಂಗೆತ್ತಿರೆ – ಮುಂದೊಂದು ದಿನ ನೀನು ಏರ್ತೆ – ಹೇಳ್ತ ಧೈರ್ಯವ ಸಂಗೀತ ಕೊಡ್ತು.
ತುಂಬಾ ಕೊಶಿಲಿಪ್ಪಗ ಸಂಗೀತವ ಅನುಭವಿಸಿರೆ – ಕೊಶಿಲಿ ಜಾಸ್ತಿ ಹಾರೆಡ, ಸಪ್ತಕದ ಮಿತಿಯೊಳವೇ ಇರು – ಹೇಳಿದ ಅನುಭವ ಆವುತ್ತಡ.
ಹಾಂಗಾಗಿ, ಮೇಲೆ-ಕೆಳ ಎರಡೂ ಹಂತಲ್ಲಿ ಸಂಗೀತದ ಮೂಲಕ ಮನಸ್ಸು ಗಟ್ಟಿಮಾಡಿಗೊಂಬದು – ಹೇಳ್ತವು ಶಂಕರಮಾವ°.

~
ಸಣ್ಣ ಇಪ್ಪಗ ಬಡತನ, ಮುಂದೆ ಬಂದ ಏರುತಗ್ಗು, ಅಪ್ಪಮ್ಮನ ಅನಾರೋಗ್ಯ, ಸಂಸಾರ ತಾಪತ್ರಯಂಗೊ, ಬೆಂಗುಳೂರಿನ ಕಷ್ಟದ ದಿನಂಗೊ – ಎಲ್ಲ ಬೇಜಾರಂಗಳಲ್ಲಿಯೂ ಮನಸ್ಸಿನ ಶೃತಿ ತಪ್ಪುಸಿದ್ದವಿಲ್ಲೆ.
ಒಯಿವಾಟಿನ ಬೆಳವಣಿಗೆ, ಬೆಂಗ್ಳೂರಿನ ಪೈಸೆಯ ಗಮ್ಮತ್ತು, ಜೀವನದ ಸುಖಸಂತೋಷಂಗೊ, ಸೊಂತ ಮನೆ, ಮಕ್ಕೊ, ಕಾರು, ವಾಹನಂಗೊ – ಇದೆಲ್ಲ ಕೊಶಿಗಳಲ್ಲೂ ಮನಸ್ಸಿನ ಶೃತಿ ಹಾಳುಮಾಡಿದ್ದವಿಲ್ಲೆ.
ಬಾಲ್ಯಂದಲೇ ಮಾವನ ಮನೆಲಿ ಅನುಕೂಲ ಧಾರಾಳ ಇಲ್ಲದ್ದರೂ ಮನೋರಂಜನೆ ತೆಕ್ಕೊಂಡು ಮನಸ್ಸಿಂಗೆ ಒಳ್ಳೆತ ಅನುಕೂಲ ಇದ್ದತ್ತು!

ಹೇಳಿದಾಂಗೆ., ಇವರಲ್ಲಿ ಇವಕ್ಕೆ ಮಾಂತ್ರ ಸಂಗೀತಾಸಗ್ತಿ ಅಲ್ಲ; ಎಲ್ಲೋರಿಂಗೂ ಹರಡಿದ್ದು – ಮಾತಾಡುವಗ ಗೊಂತಾತು.
ಈ ಧಾರೆಯ ಅವರ ಇಬ್ರು ಮಕ್ಕೊಗೂ ಎರದು ಕೊಟ್ಟಿದವಾಡ; ಕ್ಲಾಸಿಂಗೆ ಕಳುಸಿ ಕಲುಶಿದವಡ.
ಈಗ ಮಗಳಕ್ಕಳೂ ಸಂಗೀತ-ಭರತನಾಟ್ಯಂಗಳಲ್ಲಿ ತುಂಬ ಉಶಾರಿ ಆಗಿದ್ದವಡ, ಶಾಲೆಕೋಲೇಜಿನ ಒಟ್ಟೊಟ್ಟಿಂಗೆ ಇದರ್ಲಿಯೂ ಉಶಾರಿ ಆಯಿದವಡ.
ಇನ್ನೂ ಕೊಶಿಯ ಸಂಗತಿ ಹೇಳಿರೆ, ಅವರ ದೊಡ್ಡಮಗಳು ಸಂಗೀತ ಕಲ್ತು ಉಶಾರಿ ಆಗಿ – ಮೈಸೂರು ದಸರಾದ ಹಾಂಗಿರ್ತಲ್ಲಿ ಕಾರ್ಯಕ್ರಮ ಕೊಟ್ಟಿದಾಡ, ಕೊಟ್ಟುಗೊಂಡು ಇದ್ದಾಡ!
ಅವು ಹಾಂಗೆ ಹೆಮ್ಮೆಲಿ ಹೇಳಿ ಅಪ್ಪಗ ಒಪ್ಪಣ್ಣಂಗೂ ಒಂದರಿ ಕೊಶಿ ಆತು!
~
“ನಿಂಗೊ ಕಲ್ತಿದಿರೋ ಮಾವಾ°” ಕೇಳಿದೆ.
“ಇಲ್ಲೆ ಒಪ್ಪಣ್ಣೋ, ಈಗ ಒರೆಂಗೆ ಅವಕಾಶ ಆಯಿದಿಲ್ಲೆ. ಈಗ ಮಠಲ್ಲಿ ರುದ್ರ-ಮಂತ್ರ ಕಲಿತ್ತಾ ಇದ್ದೆ, ಒಂದರಿಯಾಣ ತೆರಕ್ಕು ಕಳುದಕೂಡ್ಳೇ ಸಂಗೀತವುದೇ ಕಲಿಯೇಕು.
ಎನ್ನಂದ ಮದಲೇ ಮನೆಯೋರೆಲ್ಲ ಈಗಳೇ ಕಲ್ತಿರಲಿ – ಹೇಳಿ ಅತ್ತೆಯತ್ರೆ ಕಲಿಯಲೆ ಹೇಳಿದ್ದು”– ಹೇಳಿದವು.
ಇವು ಕಲ್ತಿದವಿಲ್ಲೆ ಹೇಳಿರೆ ನಂಬಿಕ್ಕಲೇ ಎಡಿಯ. ಇವಕ್ಕೆ ಸರಿಯಾಗಿ ಸಂಗೀತದ ಆಳ-ವಿಸ್ತಾರವ ಗಮನುಸಲೆ ಅವಕಾಶ ಇಲ್ಲದ್ದರೂ – ಮೇಗೆಮೇಗಂದ “ಸರಿಗಮ” ಬಕ್ಕು.
ಅತ್ತೆಯ ಕೈಲಿ ಕಲಿವಲೆ ಹೇಳಿದ್ದೆ – ಹೇಳಿದ್ದು ರಜ್ಜ ತಡವಾಗಿ ಷೋಕ್ ಆತು! “ಓ! ಅತ್ತೆ ಕಲಿತ್ತವೋ? ಈ ಪ್ರಾಯಲ್ಲಿ!” ಕೇಳಿದೆ. “ಹ್ಮ್,” ಹೇಳಿದವು.
ಬಪ್ಪವಾರ ಪರೀಕ್ಷೆ ಇದ್ದಾಡ ಲಕ್ಷ್ಮಿಅತ್ತೆಗೆ. ಹಾಂಗಾಗಿ ಈ ಸರ್ತಿ ಊರಿಂಗೆ ಬಯಿಂದವಿಲ್ಲೇಡ.
“ಯಬ್ಬ – ಎಂತವಂಗೂ ನಿಂಗೊ ಮರುಳು ಹಿಡುಶಿಯೇ ಬಿಡುವಿರಪ್ಪ!” – ಹೇಳಿದೆ ನೆಗೆಮಾಡಿಂಡು. 🙂

ಈಗ ಜೆಂಬ್ರದೆಡೆಲಿ ಊರಿನ ವಾತಾವರಣ ಇದಾ. ಜೆಂಬ್ರಲ್ಲಿ ಮನೆಯೋರು ಬಿಟ್ಟು ಬಾಕಿ ಎಲ್ಲೋರುದೇ ನೆಮ್ಮದಿಯೇ. 😉
ನಾಳ್ತು ಚೂರಿಬೈಲಿನ ಮದುವೆ ಕಳುಸಿ ಅವು ಸೋಮವಾರ ಹೆರಡುದಡ. ಎತ್ಲಾಗಿ? – ಮತ್ತೆ ಪುನಾ ಬೆಂಗುಳೂರು.
ಬೆಂಗುಳೂರು ಹೇಳಿತ್ತುಕಂಡ್ರೆ ತಲೆಬೆಶಿಗೊ! ಪುನಾ ಸಂಗೀತ ಬೇಕಾವುತ್ತು, ಅಲ್ದೋ?
ಪೇಟೆ ಎತ್ತಿತ್ತು, ಬೈಲಿಂಗೆ ಬಂದುಗೊಂಡಿರಿ ಮಾವಾ – ಹೇಳಿಕ್ಕಿ ಇಳುದೆ.
ರಜ್ಜ ಕಾದಪ್ಪಗ ಕೃಷ್ಣಬಸ್ಸುದೇ ಬಂತು.
~
ಕಲೆಗೆ ಶೆಗ್ತಿ ಇದ್ದು.
ಕಲೆಯ ಸಂಪರ್ಕ ಇದ್ದೋನು ಸಮಾಜಲ್ಲಿ ಎದ್ದು ಕಾಣ್ತ – ಹೇಳ್ತದು ಮಾಷ್ಟ್ರುಮಾವನ ಅನಿಸಿಕೆ! ಆಯಿಪ್ಪಲೂ ಸಾಕು, ಬೆಳಿಒಸ್ತ್ರಲ್ಲಿ ಆದ ಕಲೆ ಎದ್ದು ಕಾಣ್ತ ಹಾಂಗೆ 😉
ಎಷ್ಟೋ ಸಾಧನೆ ಮಾಡಿದೋರು, ಮಾಡಿಂಡು ಇಪ್ಪೋರು ಅವರ ಖಾಸಗಿ ಬದುಕಿಲಿ ಸಂಗೀತ ಕಲ್ತುಗೊಂಡು / ಅನುಭವಿಸಿಗೊಂಡು ಇರ್ತವು.
ಶಂಕರಮಾವನೂ ಹಾಂಗೆಯೇ, ಜೀವನಲ್ಲಿ ಮೇಗೆ ಬರೇಕಾರೆ ಇದೊಂದು ಆಸಗ್ತಿ ಅವರ ಬಿಟ್ಟಿದಿಲ್ಲೆ.
ಮಾಷ್ಟ್ರುಮಾವ ಕೆಲವುಸರ್ತಿ ಈ ಶ್ಲೋಕ ಹೇಳ್ತ ಕ್ರಮ ಇದ್ದು:
ಸಂಗೀತ ಸಾಹಿತ್ಯ ಕಲಾ ವಿಹೀನಃ
ಸಾಕ್ಷಾತ್ ಪಶುಃ ಪುಚ್ಛ ವಿಶಾಣ ಹೀನಃ |
ತೃಣನ್ನಖಾದನ್ನಪಿ ಜೀವಮಾನೇ
ತದ್ಭಾಗದೇಯಂ ಪರಮಂ ಪಶೂನಾಮ್ ||
(ಸಂಗೀತ, ಸಾಹಿತ್ಯ ಕಲೆಯ ಸಂಪರ್ಕ ಇಲ್ಲದ್ದೋರು ಪಶುವಿಂಗೆ ಸಮಾನ. ಹುಲ್ಲು ಒಂದುಬಗೆ ತಿಂತವಿಲ್ಲೆ, ಅಷ್ಟೇ!)

~
ಬೆಂಗುಳೂರಿಂಗೆ ಹೋದ ಕೂಡ್ಳೆ ಸೊರ್ಗಕ್ಕೇ ಎತ್ತಿದೆ, ಊರು ಪೂರ ಮರದತ್ತು – ಹೇಳಿಗೊಂಡು ತಿರುಗುತ್ತ ಶುಬತ್ತೆಯಂತವರ ಕಂಡ್ರೆ ಬೇಜಾರ ಆವುತ್ತು.
ಆದರೆ, ಬೆಂಗುಳೂರಿಂಗೆ ಹೋಗಿಯೂ ಮಂತ್ರ, ಸಂಗೀತ, ಸಾಹಿತ್ಯ, ಕಲೆ ಇತ್ಯಾದಿಗಳ ನೆಂಪು ಮಡಗಿ, ಮುಂದುವರುಶುತ್ತ ಅಮೋಘ ಕಾರ್ಯ ಮಾಡ್ತ ಶಂಕರಮಾವನಂತೋರು ನಮ್ಮ ಸಮಾಜದ ಆಸ್ತಿ ಅಲ್ಲದೋ?
ಹೊಟ್ಟೆ ಹಶುವಿಂಗೆ ಪೇಟಗೆ ಹೋಯೇಕಾವುತ್ತು, ಆದರೆ ಸಂಸ್ಕಾರ, ಸಂಸ್ಕೃತಿಯ ಒಳಿಶಿ ನೆಡೆಶಿಗೊಂಡು ಬಪ್ಪದು ಹಿರಿಮೆ.

ಎಷ್ಟು ಪುರುಸೊತ್ತಿಲ್ಲದ್ದರೂ, ಕಲಾರಾಧನೆಮಾಡಿಗೊಂಡು ಬಪ್ಪ, ಸಂಗೀತವ ಕಲಿವಲೆ ಪುರುಸೊತ್ತಿಲ್ಲದ್ದರೂ, ಸಂಗೀತದ ಆಳ-ವಿಸ್ತಾರಂಗಳ ಸರಿಯಾಗಿ ಗಮನುಸುವ ಅವಕಾಶ ಇಲ್ಲದ್ದರೂ, ತನ್ನ ಉತ್ಸಾಹದ ಮಿತಿಲಿ ಆಸಗ್ತಿ ಮಡಿಕ್ಕೊಂಡು “ಸರಿಗಮ” ಕೇಳ್ತವಲ್ಲದೋ?
ಅದು ಮೆಚ್ಚೇಕಾದ್ದು.
ಹಳ್ಳಿಲಿದ್ದೊಂಡು ಎಲ್ಲವನ್ನೂ ಬಿಟ್ಟುಗೊಂಡು ಬಪ್ಪಗ, ಪೇಟೆಯ ಅಂಬೆರ್ಪಿಲಿದ್ದೋಂಡು ಸಾಧ್ಯ ಆದಷ್ಟು ಒಳಿಶಿಗೊಂಡು ಬಪ್ಪ ಶಂಕರಮಾವನ ಒಪ್ಪಣ್ಣಂಗೆ ಕೊಶಿ ಆತು.

ಒಂದೊಪ್ಪ: ನಾವು ಕಲೆಯ ಒಳುಶಿಗೊಂಡರೆ; ಕಲೆ ನಮ್ಮ ಒಳುಶುತ್ತು!

ಸೂ:

40 thoughts on “ಸರಿಗಮನದ ಪುರುಸೊತ್ತಿಲ್ಲದ್ದರೂ, ಸರಿಗಮ ಅರಡಿಗು!!

  1. shuddiya hesaru nodiye koshi aathu oppanna.
    rasavattagi baradde.sangeetha kaltare oppannanu haadugu.
    aarogya nemmadi santhosha ellavu sikkuttu.
    kale oliyali.elloru santhoshalli ippo.
    good luck.

  2. ಒಪ್ಪಣ್ಣಾ,
    ” ಕಲೆ ವಿಲಾಸಕ್ಕಾಗಿ ಅಲ್ಲ ಆತ್ಮವಿಕಾಸಕ್ಕಾಗಿ” ಹೇಳುವ ಮಾತು ನೆ೦ಪಾತು.
    {ಸಂಗೀತ, ಸಾಹಿತ್ಯ ಕಲೆಯ ಸಂಪರ್ಕ ಇಲ್ಲದ್ದೋರು ಪಶುವಿಂಗೆ ಸಮಾನ. ಹುಲ್ಲು ಒಂದುಬಗೆ ತಿಂತವಿಲ್ಲೆ, ಅಷ್ಟೇ}
    ಈ ಮಾತು ಎಷ್ಟು ಅರ್ಥಗರ್ಭಿತ ! ಸಣ್ಣ ಮಗುವಿ೦ದ ಹಿಡುದು ಪ್ರಾಯಸ್ಥರ ವರೆಗೆ ಸಕಲರನ್ನೂ ಅಯಸ್ಕಾ೦ತದ ಹಾ೦ಗೆ ಸೆಳೆವ ಶಗುತಿ ಇದ್ದು,ಸ೦ಗೀತಕ್ಕೆ.ಮನಸ್ಸಿನ ಬೇಜಾರು,ಕೋಪ೦ಗಳ ನಿಯ೦ತ್ರಿಸಿ ಸಹಜ ಸ್ಥಿತಿಗೆ ತಪ್ಪ ಗುಣ ಸ೦ಗೀತದ್ದು.
    ಕಲೆ ಬೆಳದರೆ ಸ೦ಸ್ಕೃತಿ ಒಳಿತ್ತು,ಸ೦ಸ್ಕಾರ೦ಗಳ ಮಹತ್ವದ ಅರಿವು ಆವುತ್ತು ಹೇಳೊದರ ಮನಸ್ಸಿಲಿ ಮಡುಗಿಗೊ೦ಡು ಬದುಕ್ಕೆಕ್ಕು,ಅಲ್ಲದೋ?
    ಶುದ್ದಿ ಓದಿ ಸ೦ತೋಷ ಆತು.

  3. ಒಪ್ಪಣ್ಣ,

    ನಿನ್ನ ಒಂದು ಪ್ರೀತಿಯ ವಿಷಯ, ನಿನ್ನ ಅನುಭವದ ಸಾರ, ಯಾವ ಭಾಷೆಯ ಅಗತ್ಯವೂ ಇಲ್ಲದ್ದೆ ಎಲ್ಲೋರ ಹತ್ತರೆ ತಪ್ಪ ಸಂಗೀತದ ಬಗ್ಗೆ ಬರದ ಶುದ್ದಿ ತುಂಬಾ ಲಾಯಕ ಬಯಿಂದು. ಸಂಗೀತ ಹಾಂಗೆ ಅಲ್ಲದೋ? ಹೇಂಗಿಪ್ಪ ಮನಸ್ಸನ್ನೂ ಶ್ರುತಿ ಹಿಡಿಗು. ನೀನು ಹೇಳಿದ ಹಾಂಗೆ ಜೀವನವೂ ಸಂಗೀತವೂ ಒಂದೇ ಹಾಂಗೆ! ನಮ್ಮಲ್ಲಿ ಹೇಂಗೆ ಭಾವನೆಗೋ ಸುಮಾರಿದ್ದೋ ಹಾಂಗೆ ಸಂಗೀತಲ್ಲಿ ರಾಗಂಗಳೂ ಇದ್ದು, ನಮ್ಮ ಭಾವಲಹರಿಯ ಅದಕ್ಕೆ ತಕ್ಕ ಪ್ರತಿ ರಾಗ ನಮ್ಮಮನಸ್ಸಿನ ಮುಟ್ಟುದೂ ಇದ್ದು. ಕಷ್ಟ ಸುಕವ ಸಂಗೀತ ಕೇಳಿರೆ ನಮ್ಮೊಳವೇ ಹೇಳಿದ ಹಾಂಗೆ ಆಯೆಕ್ಕಾದರೆ ಅವಂಗೆ ಸಂಗೀತ ಅಷ್ಟೇ ರಕ್ತಗತ ಆಗಿರೆಕ್ಕು.. ಹಾಡುಲೆ ಹೇಳಿ ಅಲ್ಲ, ಅದರ ಆನಂದಿಸುಲೇ!! ಒಪ್ಪಣ್ಣ, ನಿನ್ನಲ್ಲಿ ಈ ಗುಣ ಕಂಡಿದೆ. ಎಲ್ಲಾ ಭಾವನೆಗಳನ್ನೂ ಸಂಗೀತಾರ್ಪಣ ಮಾಡ್ತೆ ನೀನು!! ಅಷ್ಟು ಸುಲಾಬಲ್ಲಿ ಅದು ಎಲ್ಲೋರಿಂಗೂ ಬಪ್ಪದಲ್ಲ. ಜೀವನವನ್ನೂ ಸಂಗೀತವನ್ನೂ ಅರ್ಥೈಸಿಗೊಂಡವ° ಯಾವ ಕಾಲಕ್ಕೂ, ಯಾವ ಸಮಸ್ಯೆಗೊಕ್ಕೂ, ಸೋತು ಹೋಗ°. ಅದಕ್ಕೆ ಬೇಕಾದ ಎಲ್ಲಾ ಮಾನಸಿಕ ಸ್ಥೈರ್ಯ, ನೆಮ್ಮದಿ – ಸಂಗೀತ ಕೊಡ್ತು ಅಲ್ಲದಾ?
    ಸರಿಗಮನದ (ಹೇಳಿದರೆ ಜೀವನದ ಸರಿಯಾದ ದಾರಿಲಿ ಹೋವುತ್ತಾ ಇಪ್ಪ) ಅಂಬೇರ್ಪಿನ ಎಡಕ್ಕಿಲಿಯೂ ಸಂಗೀತ ಅರಡಿಸಿಗೊಂಡಿದವು ಶಂಕರ ಮಾವ° ಹೇಳಿದ್ದು ಲಾಯ್ಕಾಯಿದು. ಶಂಕರ ಮಾವ°……

    ಕಲ ಕಷ್ಟಂಗಳ ಮೆಟ್ಲಿಲಿ,
    ರೀತಿ,ನೀತಿ ಪರಂಪರೆಂದ ಬಂದದರ ಒಳಿಶಿಗೊಂಡು,
    ಹನ, ಗಂಭೀರ ಒಯಿವಾಟಿಲಿದ್ದರೂ,
    ಧುರ ಮನಸ್ಸಿಲಿ, ಮಾತಿಲಿ, ಮನಸ್ಸಿನ ಶ್ರುತಿ ತಪ್ಪದ್ದೆ,
    ರಿಸರಕ್ಕೆ ಹೊಂದಿಗೊಂಡು,
    ನ ದಾರಿದ್ರ್ಯಂದ ಬಂದ ಸಂದರ್ಭಕ್ಕೆ ಹೊಂದಿಗೊಂಡು,
    ನಿರ್ಭೀತಿಲಿ, ನಿರಾತಂಕಲ್ಲಿ,
    ಮಾಧಾನಕರ, ಸಮರ್ಥ, ಸಾರ್ಥಕ ಜೀವನ ಮಾಡ್ತಾ ಇಪ್ಪದು ಈ ಸಂಗೀತಂದಲೇ ಅಲ್ಲದಾ ಒಪ್ಪಣ್ಣ?

    ಸಂಗೀತದ ಏಳೇ ಏಳು ಸ್ವರಲ್ಲಿ ಹಲವು ರಾಗಂಗ ಇದ್ದು, ಕೆಲವು ಸ್ವರಂಗಳ ಅಸ್ತಿತ್ವ ಇಲ್ಲದ್ದೆ ಕೆಲವು ರಾಗಂಗೋ ಅಷ್ಟೇ ಇಂಪಾಗಿಯೂ ಇದ್ದು. ನಮ್ಮ ಜೀವನಲ್ಲಿಯೂ ಎಲ್ಲೋರಿಂಗೂ, ಎಲ್ಲಾ ಅವಕಾಶ, ಎಲ್ಲಾ ವಿಷಯಂಗ ಬೇಕಾದ ಹಾಂಗೆ ಸಿಕ್ಕದ್ದೇ ಇಕ್ಕು. ಆದರೆ, ಜೀವನದ ಸೀಮಿತ ಅವಧಿಲಿ, ಸೀಮಿತ ವ್ಯಾಪ್ತಿಲಿ ಹಲವು ಜನಂಗಳ ಒಟ್ಟಿಂಗೆ ಸೇರಿ, ನಮ್ಮ ನ್ಯೂನತೆಗಳ ಮೆಟ್ಟಿ ಸಮರ್ಪಕವಾಗಿ ನಡದು ನಮ್ಮ ಜೀವನವ ಚೆಂದಲ್ಲಿ ನಡೆಶೆಕ್ಕು ಇದುದೇ ಸಂಗೀತದ ಪಾಠವೇ ಅಲ್ಲದಾ ಒಪ್ಪಣ್ಣ?
    ಇಂದು ಶಂಕರ ಮಾವನ ಹಾಂಗಿರ್ತ ಎಷ್ಟೋ ಜೆನಂಗ ಸಂಗೀತದ ಶ್ರುತಿಲಿ ಜೀವನ ನಡೆಶುತ್ತಾ ಇಕ್ಕು. ಎಲ್ಲೋರಿಂಗೂ ಸಂಗೀತದ ಮಾಧುರ್ಯದ ಒಟ್ಟಿಂಗೆ ಜೀವನವುದೇ ಶ್ರುತಿ ತಪ್ಪದ್ದೆ ಇರಲಿ.. ಎಲ್ಲೋರಿಂಗೂ ಎಲ್ಲಾ ಕಾಲದ ಭಾವನೆಗೆ ತಕ್ಕ ಹಾಂಗೆ ಸಂಗೀತವ ಒಲಿಶಿಗೊಂಬಲೆ ಅರಡಿಯಲಿ..

    ಎಲ್ಲರ ಜೀವನ ಸಂಗೀತಮಯ ಆಗಲಿ..

    1. ಅಕ್ಕಾ,
      ಎಲ್ಲರ ಜೀವನ ಸಂಗೀತಮಯ ಆಗಲಿ – ಹೇಳ್ತ ಆಶಯಂದ ಸುರುಮಾಡಿ, ಶಂಕರಮಾವನ ಜೀವನದ ಮೇಗೆ ಸರಿಯಾದ ವಿಮರ್ಶೆಮಾಡಿಗೊಂಡು ಶುದ್ದಿಯ ಕೇಳಿದ್ದಿ.
      ಜೀವನದ ಮಾಧುರ್ಯದ ಶೃತಿ ತಪ್ಪದ್ದೇ ಬದ್ಕೇಕಾರೆ ಎಲ್ಲೋರುದೇ ಭಾವ-ರಾಗ-ತಾಳ ಅರ್ತ ಮಾಡಿರೇಕು.
      ಸಪ್ತಸ್ವರಕ್ಕೆ ಹೊಂದಿಗೊಂಡ ಹಾಂಗಿಪ್ಪ ವರ್ಣನೆ ತುಂಬಾ ತುಂಬಾ ಚೆಂದ ಆಯಿದು.
      ಹರೇರಾಮ

    1. ಹರೇರಾಮ ಮಂಗ್ಳೂರುಮಾಣಿ.
      ನೀನು ಸಣ್ಣ ಇಪ್ಪಗಳೇ ಕಲ್ತುಗೊಂಡು ಉಶಾರಿ ಆಯಿದೆ. ಅವು ಇಂದು-ನಾಳೆ ಕಲ್ತುಗೊಳ್ತವು. ನಿಜವಾಗಿಯೂ ಅವು ದೊಡ್ಡ ಆಸ್ತಿಯೇ. 🙂

  4. ಈ ಪ್ರಕೃತಿಯೇ ಒಂದು ಸಂಗೀತ. ಇಲ್ಲಿ ಗಾಳಿಂದಲೂ, ನೀರಿಂದಲೂ, ಹಕ್ಕಿಗಳಿಂದಲೂ, ಪ್ರಾಣಿ ಪಕ್ಷಿಗಳಿಂದಲೂ, ಎಲ್ಲದರಿಂದಲೂ ಸಂಗೀತವೇ. ಕೇಳುವ ಮತ್ತೆ ಆಸ್ವಾದನೆ ಮಾಡುವ ಮನೋಭಾವ ಬೇಕು.
    ಉದಿಯಪ್ಪಗ ದೇವರ ಏಳುಸಲೆ ಸುಪ್ರಭಾತ ಆದರೆ ಇರುಳು ಮನುಗುಸಲೆ ಲಾಲಿ ಹಾಡು. ದೇವಿಯ ಒಲುಸಲೆ ಲಕ್ಷ್ಮೀ ಶೋಭಾನ ಆದರೆ ದೇವರ ಒಲುಸಲೆ ಸಹಸ್ರ ನಾಮ. ಎಲ್ಲವೂ ಸಂಗೀತವೇ.
    ತೊಟ್ಟ್ಲಿಲ್ಲಿ ಮುಗ್ಧ ಮಗುವಿನ ಒರಗುಸಲೂ ಜೋಗುಳ, ಎದ್ದು ಹಠ ಮಾಡುವಾಗ ಸಂತೈಸಲೂ ಸಂಗೀತ.
    ಸಂಗೀತಂದ ದೇವರ ಒಲುಶಿಗೊಂಡವು ಇದ್ದವು, ಮಳೆ ಬರುಸಿದವು ಇದ್ದವು, ದೀಪ ಹೊತ್ತಿಸಿದವು ಇದ್ದವು.
    ಸಂಗೀತಲ್ಲಿ ಭೌತ ಶಾಸ್ತ್ರ ಇದ್ದು, ಗಣಿತ ಇದ್ದು. ಇದೆರಡರ ಸಂಯೋಜನೆ ದೇಹದ ಮತ್ತೆ ಮನಸ್ಸಿನ ರಾಸಾಯನಿಕ ಕ್ರಿಯೆಯ ಮೇಲೆ ಪರಿಣಾಮ ಮಾಡುಸುತ್ತು.
    ಉದಿಯಪ್ಪಗ ಎದ್ದು ಉದಯ ರಾಗಲ್ಲಿ ಸಂಗೀತ ಕೇಳಿರೆ, ದಿನವಿಡೀ ಉಲ್ಲಾಸ ಇಕ್ಕು.
    ತಾಳಲ್ಲಿ ಗಣಿತದ ಲೆಕ್ಕಾಚಾರ, ಏಳು ಸ್ವರಂದ ೭೨ ಸಂಪೂರ್ಣ ಮೇಳ ಕರ್ತ ರಾಗ ಹೇಳುವದು ಗಣಿತದ ಅದ್ಭುತ ಕ್ರಮ ಯೋಜನೆ(permutation), ವಿಕಲ್ಪ (combination).
    ಜನಕ ರಾಗಂದ ಜನ್ಯ ರಾಗ ಇನ್ನೊಂದು ಗಣಿತ. ಎರಡರ ವರ್ಗಲ್ಲಿ ಸ್ವರ ಸಂಯೋಜನೆ ಮಾಡಿ ಒಂದನೇ ಕಾಲ, ಎರಡನೇ ಕಾಲ, ಮೂರನೇ ಕಾಲ ಇದೂ ಗಣಿತವೇ. ಮಂದ್ರ, ಮಧ್ಯಮ, ತಾರ ಸ್ಥಾಯಿ, ಇಲ್ಲಿಯೂ ಗಣಿತದ ಆವರ್ತನ
    ಒಂದೊಂದು ಸ್ವರಕ್ಕೆ ಒಂದೊಂದು frequency. ಎರಡು ಸ್ವರದ frequency ಯ resonance ನ ಭೌತ ಶಾಸ್ತ್ರ
    ಸಂಗೀತ- ಒಂದು ಅದ್ಭುತ ಶಾಸ್ತ್ರ. ಇಲ್ಲಿ ಎಲ್ಲವೂ ಇದ್ದು. ಇದು ದೇಶ , ಕಾಲ, ಭಾಷೆ ಎಲ್ಲವನ್ನೂ ಮೀರಿ ಇದ್ದು.
    “ಎಲ್ಲೆಲ್ಲು ಸಂಗೀತವೇ“ ಹೇಳಿ ಒಬ್ಬ ಹಾಡಿರೆ, “ನಾದಮಯ ಈ ಲೋಕವೆಲ್ಲಾ” ಹೇಳಿ ಇನ್ನೊಬ್ಬ ಹಾಡಿದ.
    ಈ ನಾದ, ನಿನಾದ ಕೇಳ್ತಾ ಇದ್ದರೆ ಮೈ, ಮನ, ದುಃಖ, ಸಂಕಟ ಎಲ್ಲವನ್ನೂ ಮರವಲಾವುತ್ತು.

    1. ನಿಜಕ್ಕೂ ಸಂಗೀತಲ್ಲಿ ಅದರ ಅಲೆಗಳ ಒಟ್ಟಿ೦ಗೆ ಸಾಗುವ, ಅನನ್ಯ ಕಲೆ ಅರಡಿಗಾದವಕ್ಕೆ, ಅದರ ಶಕ್ತಿಯೂ ಅರ್ಥ ಆವ್ತು.

      ಆತ್ಮ-ಸಂಗಾತಕ್ಕೆ, ಜೀವ ನೆಮ್ಮದಿಗೆ ಇದರ ಹಾಂಗೆ ಇನ್ನೊಂದಿಲ್ಲೆ, ಜಗತ್ತಿಲಿ…

      (ಶಂಕರ ಮಾವ ಅನುಭವಲ್ಲಿ ಕಂಡ ಭಾಗ್ಯವಂತರು!)

      ಮತ್ತೆ ಚೆಂದಕೆ ಬರದ್ದ, ಒಪ್ಪಣ್ಣ! 🙂

      ಶರ್ಮರು ಸಂಗೀತದ ಕಂಪನಗಳಲ್ಲಿ ಅಡಗಿದ ‘ಗಣಿತ-ವಿಜ್ಞಾನ’ ಗಳ ಬಗ್ಗೆ ಕೂಡಾ ಬರದ್ದದು ಸಂತೋಷ ಆತು!

      ಅಭಿನಂದನೆಗೊ…. 🙂

  5. ಸಂಗೀತದ ಮಹಿಮೆ ಹಾಂಗೆ ಆರನ್ನೂ ತನ್ನತ್ತ ಎಳಕ್ಕೊಳ್ಳುತ್ತು..ಅದರಿಂದಾಗಿ ಶಾರೀರಿಕ, ಮಾನಸಿಕ ಸ್ವಾಸ್ತ್ಯ ಹೊಂದುಲೆ ಆಉತ್ತು..ಸಂಗೀತ ಹಾಡಿ ಮಳೆ ಬರುಸಿದೋರು ಇದ್ದವಡ….. ಆಟಲ್ಲಿ ಚೆಂಡೆ ಪೆಟ್ಟು ಜೋರಾದರೆ ಗ್ಯಾಸ್ ಲೈಟಿನ ಗ್ಲಾಸ್ ಒಡೆತ್ತದರ ಆನು ಕಂಡಿದೆ.. ಒಪ್ಪಣ್ಣೋ ಬರದ್ದು ಬಾರೀ ಲಾಯಿಕ ಆಯಿದು.. ಒಂದು ಒಪ್ಪ..

  6. ಮೊದಲು ಪ್ರತಿ ಗುರುವಾರ ಹೊಸ ಲೇಖನಕ್ಕೆ ಕಾದ ಹಾಂಗೆ ಇಂದುದೆ ಕಾಯ್ತಾ ಇತ್ತಿದ್ದೆ.
    ತುಂಬಾ ಲಾಯಿಕ ಆಯಿದು ಒಪ್ಪಣ್ಣ.
    ಸಣ್ಣ ಇಪ್ಪಗ ಅಪ್ಪನೊಟ್ಟಿಂಗೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿಯೊಂಡ್ಡಿದ್ದದು ನೆಂಪಾತು. ಈಗ ಇಲ್ಲಿದೆ ಎಂಗೊ ಎಡಿಗಾದರೆ ಹಾಂಗಿಪ್ಪ ಕಾರ್ಯಕ್ರಮಕ್ಕೆ ಹೋವ್ತೆಯೊ. ಮಗಂಗೂ ಪದ್ಯ ಕೇಳುಲೆ ಖುಶಿ ಇದ್ದು.
    ಒಪ್ಪವಾದ ಲೇಖನ ಒಪ್ಪಣ್ಣ.
    ಸುಮನಕ್ಕ….

    1. ಸುಮನಕ್ಕಾ..
      ಎರಡೊರಿಶ ಮದಲು ಪ್ರತಿವಾರ ಶುದ್ದಿ ಬಂದಕೂಡ್ಳೇ ಒಪ್ಪ ಕೊಟ್ಟುಗೊಂಡಿತ್ತಿದ್ದಿ. ಈಗ ಎಲ್ಲಿ ಹೋದಿ? ಇನ್ನು ರಜ್ಜ ಸಮೆಯ ಕಳುದ ಕೂಡ್ಳೇ ಮತ್ತೆ ಅಳಿಯದೇವರು ಒಪ್ಪಕೊಡ್ಳೆ ಸುರುಮಾಡ್ತ, ನೋಡಿ!! 🙂

      ಸ್ವತಃ ಸಂಗೀತ ಕಲ್ತ ನಿಂಗೊ ಅನುಭವಿಸಿ ಹಾಡುವಗ ಇದೇ ಅನುಭವ ಆವುತ್ತಾ?
      ಹೇಳಿದಾಂಗೆ, ಈಗಳೂ ಸಂಗೀತ ಕಾರ್ಯಕ್ರಮಕ್ಕೆ ಹೋಪಲೆ ಒದಗಿಬತ್ತು ಹೇಳ್ತರ ಕೇಳಿ ಕೊಶೀ ಆತು. ಸದ್ಯ ಏವದಾರು ಸಿಕ್ಕಿತ್ತೋ? ಆರದ್ದು? ಹೇಂಗಿತ್ತು?
      ಬೈಲಿಂಗೆ ಎಲ್ಲ ಶುದ್ದಿ ಹೇಳಿ, ಆತಾ?

    1. ಡಾಗುಟ್ರಣ್ಣನ ಸಣ್ಣ ಇಂಜೆಕ್ಷನಿನ ಕಂಡು ಗುಣ ಆತು! 🙂
      ಬೈಲಿಂಗೆ ಬತ್ತಾ ಇರಿ. ಹರೇರಾಮ…

  7. ತು೦ಬಾ ಲಾಯಿಕಾಯಿದು. {.ನಾವು ಕಲೆಯ ಒಳುಶಿಗೊಂಡರೆ; ಕಲೆ ನಮ್ಮ ಒಳುಶುತ್ತು!} ನಿಜವಾಗಿಯು ಅಪ್ಪು..

    1. ವಿನಯತ್ತೇ!
      ಮುಂದಾಣ ತಲೆಮಾರಿಂಗೆ ಕಲೆಯ ಕಲಿಶಿ ಒಳಿಶುತ್ತ ನಿಂಗೊಗೆ ಅಭಿವಂದನೆಗೊ. 🙂
      ಬೈಲಿಂಗೆ ಬತ್ತಾ ಇರಿ..

      ಮಕ್ಕೊಗಪ್ಪ ಎಂತಾರು ಶುದ್ದಿ ಹೇಳ್ತಿರೋ? ಪುರುಸೋತಿಲಿ!!

  8. ಅಂತೂ,ಚೆನ್ನೈ ಭಾವನ ಭವಿಷ್ಯ ಸರಿ ಆಯಿದಿಲ್ಲೆನ್ನೆ 🙂
    ಗ್ರಹಣದ ದಿನ ಚೆನ್ನೈಂದ ಬಂದ ಸಮೋಸಲ್ಲಿ, ಈ ವಾರದ ಒಪ್ಪಣ್ಣನ ಶುದ್ಧಿ ಗ್ರಹಣದ ಬಗ್ಗೆ ಇಕ್ಕು ಹೇಳಿದ್ದತ್ತು.
    ಆದರೆ, ಹಾಂಗಾಯಿದಿಲ್ಲೆ.
    ಒಪ್ಪಣ್ಣ ಹೊಸ ಶುದ್ಧಿ ಹುಡುಕ್ಕಿದ್ದ°.
    ಒಪ್ಪ ಆಯಿದು, ಬರದ್ಸು.
    ಹೊಸ ವಿಚಾರ ಸಿಕ್ಕಿತ್ತು.

    1. ಅದು ಬೇಕು ಹೇಳಿಯೋ ಈ ಒಪ್ಪಣ್ಣ ಈ ವಾರ ಬದಲ್ಸಿದ್ದೋ ಹೇಂಗೆ ದೊಡ್ಡ ಭಾವ.! ಆ ಸಮೋಸ ನಮ್ಮೊಳವೇ ಇರೆಕ್ಕಾತೋ!! ಭೂತವ ನೋಡಿ ವರ್ತಮಾನವ ಅವಲೋಕಿಸಿ ಭವಿಷ್ಯವ ನಾವು ಚಿಂತಿಸಿರೆ, ಭಾವ, ಈ ವಾರ ಅದೇ ಅಲ್ಲದೋ ಶುದ್ಧಿ ಬರೆಕ್ಕಾಗಿದ್ದದು?!!!

      ಬಹುಶಃ ಮಳೆ ಮೋಡಂದಾಗಿ ಒಪ್ಪಣ್ಣಂಗೆ ಗ್ರಹಣ ಕಾಣದ್ದೆ ಸಂಗೀತ ತಲಗೆ ಹೊಕ್ಕಿತ್ತಪ್ಪೋ!. ನೋಡ್ವೋ ಈ ವರ್ಷವೇ ಇನ್ನೊಂದು ಗ್ರಹಣ ಬಪ್ಪಲಿದ್ದನ್ನೆ, ಅಂಬಗ ಇಲ್ಲಿ ನವಗೆ ತೋರ್ಸುಗು ಫಟ ಹಾಕಿ.

      1. ಅಲ್ಲ ಭಾವ ನಿಂಗೊ ಸಮೋಸ ಒಪ್ಪಣ್ಣಂಗೆ ಕೂಡಾ ಕಳುಶಿಕ್ಕಿದ್ದಿ … ಹಾಂಗಾಗಿ ಅವ ಬೇರೆ ವಿಷಯವ ಬರದ ಅದ ………..

        1. ದೊಡ್ಡಬಾವನ ಸಂಶಯಕ್ಕೂ, ಚೆನ್ನೈಭಾವನ ಪರಿಹಾರಕ್ಕೂ, ಈಪ್ರಣ್ಣನ ಸಮಜಾಯಿಷಿಗೂ – ನಮೋನಮಃ!
          ಗ್ರಹಣದ ವಿಶಯ ಬಂದರೆ ರಾಹುವಿನ ಶುದ್ದಿ ಬಕ್ಕು; ರಾಹುವಿಂದು ಬಂದರೆ ರಾಜಕೀಯದ ವಿಶಯ ಬಕ್ಕು, ರಾಜಕೀಯದ ಶುದ್ದಿ ತೆಗದರೆ ಸರ್ಪಮಲೆಮಾವ ಕಣ್ಣುದೊಡ್ಡಮಾಡ್ತವು! 🙁 ಹಾಂಗಾಗಿ ಈಗ ರಜ್ಜ ಸಮೆಯಕ್ಕೆ ಬೇಡ ಹೇದು..

          ಹೇಂಗೆ? ಆಗದೋ? 😉

  9. ಭಾರೀ ಲಾಯ್ಕಾಯ್ದಿ ಬರದ್ದು..
    “ಕಲೆಗೆ ಶೆಗ್ತಿ ಇದ್ದು” ಹೆಳಿ ನಿ೦ಗೊ ಹೇಳಿದ್ದು ನಿಜವಾಗಿಯು ಅಪ್ಪು. ಸ೦ಗೀತಲ್ಲಿ ಎಲ್ಲಾ ರಾಗ೦ಗೊಕ್ಕೆ ಒ೦ದೊ೦ದು ರೋಗ ನಿವಾರಣೆ ಮಾಡುವ ಶಕ್ತಿ ಇದ್ದು ಹೇಳಿ ಹೆಳ್ತವು. ಈಗ music therapy ಹೆಳೀಯೆ ಇದ್ದಡ್ಡ..ಮತ್ತೆ ಸಹಜವಾಗಿ ಮನಸ್ಸಿನ relax ಮಾಡುಲೆ,
    concentration power ಹೆಚುಸುಲೆ,ಟೆನ್ಶನ್ ಕಡಮ್ಮೆ ಮಾಡುಲೆ ಎಲ್ಲ ಸ೦ಗೀತ ತು೦ಬಾ ಸಹಾಯಕಾರಿ ಹೆಳಿ ಆನೆ ಕ೦ಡುಗೊ೦ಡಿದೆ. ಯಾವಾಗಲು ಪರೀಕ್ಷೆ ದಿನ ಉದಿಯಪ್ಪಗ ಹೊರಡ್ತಾಇಪ್ಪಗ ಎನ್ನ ಬಾಯ್ಲಿ ಎಲ್ಯಾರು ಪದ್ಯ ಮಣ್ಣ ಬ೦ದರೆ ಅಮ್ಮ ಎನ್ನ ಬೈವಲಿದ್ದು “ಪುರ್ಸೊತ್ತಿದ್ದರೆ ಓದಿದ್ದರ ನೆನಪ್ಪು ಮಾಡು, ಪದ್ಯ ಎ೦ತರ ಹೆಳುದು ಹೆಳಿ” ಆದರೆ ಅದರ೦ದಲಾ ಎನ ಎ೦ತದೂ ಟೆನ್ಶನ್ ಮಾಡಿಗೊಳದ್ದೆ ಓದಿದ್ದರ ಧೈರ್ಯಲ್ಲಿ ಚೆ೦ದಕ್ಕೆ ಬರವಲೆಡಿವದಿದ..ಃ-)
    ಸ೦ಗೀತಲ್ಲಿಪ್ಪ ಆರೋಹಣ ಅವರೋಹಣದಾ೦ಗೆ ಜೀವನಲ್ಲಿಯೂ ಇರ್ತು ಹೇಳಿ ಬರದ್ದು ಭಾರಿ ಲಾಯ್ಕಾಯ್ದು

    1. ಅಕ್ಕೋ,
      ಸ್ವತಃ ಭರತನಾಟ್ಯದ ಕಲಾವಿದೆ ಆಗಿ ನಿಂಗೊ ಈ ಶುದ್ದಿಗೆ ಒಪ್ಪ ಕೊಟ್ಟದು ಕಂಡು ಕೊಶಿ ಆತು. ಸಂಗೀತದ ಎಳೆ ಎಳೆಗಳೂ, ಪ್ರತಿ ತಾಳಂಗಳೂ – ಸಂಗೀತಗಾರನ ಬಿಟ್ರೆ ನಿಂಗೊಗೇ ಸರಿಯಾಗಿ ಗೊಂತಿಪ್ಪದು. ಅಲ್ಲದೋ?
      ಸಂಗೀತದ ಶೆಗ್ತಿ ಅರ್ತ ಆದರೆ ಪ್ರಪಂಚದ ಯೇವ ಶೆಗ್ತಿಯೂ ’ಸಣ್ಣ’ ಕಾಂಗಡ, ಅಪ್ಪೋ? ಶಂಕರಮಾವ ಒಂದೊಂದರಿ ಹಾಂಗೆ ಹೇಳ್ತವು.

      ಹೇಳಿದಾಂಗೆ, ಪರೀಕ್ಷೆ ಬರವಗ ಮಣಮಣ ಮಾಡಿಕ್ಕೆಡಿ ಇನ್ನು, ಟೀಚರು ಬೈಗು! 😉

  10. ನಾವೆಲ್ಲ ಸಣ್ಣಾಗಿಪ್ಪಗ ತೊಟ್ಟಿಲಿಲಿ ಅಜ್ಜಿಯ ‘ಲಾಲಿಹಾಡು’ ಕೇಳಿಯೇ ಬೆಳದ್ದದು ಅಲ್ಲದ.. ಸಂಗೀತ, ನಾದ,ಲಯ ನಮ್ಮ ಮನಸ್ಸಿನ ತಳಮಳವ ಹದ್ದುಬಸ್ತಿಲಿ ಮಡುಗುಲೆ ಸಹಾಯ ಮಾಡುತ್ತು. ನಿನ್ನೆ ಚೆನ್ನೈ ಭಾವ ಘಂಟೆಯ ನಾದವ ಕೇಳಿಸಿದವು, ಇಂದು ಒಪ್ಪಣ್ಣ ಸಂಗೀತದ ಸರಿಗಮವ ನುಡಿಸಿ ಬೈಲಿನವರ ಮನಸ್ಸಿಂಗೆ ಮುದ ನೀಡಿದ್ದವು.
    ಇಬ್ರಿಂಗೂ ಒಪ್ಪ.

    1. ಕುಮಾರಣ್ಣಂಗೆ ಒಪ್ಪಂಗೊ.
      ಸರಳ ಲಾಲಿಹಾಡಿಂದ ತೊಡಗಿ ಕಷ್ಟಕರ ಹಾಡುಗಳ ಒರೆಂಗೆ – ಮಾನಸಿಕ ಶೆಗ್ತಿ ಬೆಳದ ಹಾಂಗೇ ಸಂಕೀರ್ಣತೆಯೂ ಬೆಳೆತ್ತಲ್ಲದೊ?
      ಒಪ್ಪ ಒಪ್ಪಕ್ಕೆ ಒಪ್ಪಂಗೊ.

      1. {ಅಜ್ಜಿಯ ‘ಲಾಲಿಹಾಡು’ }

        ಲಾಲಿ ಗೊಂತಿದ್ದು,
        ಲಾಡು ಗೊಂತಿದ್ದು.
        ಇದೆಂತರ ಹೀಂಗೆ ಹೇಳಿರೆ? ಎನಗೆಂತೂ ನೆಂಪಿಲ್ಲೆನ್ನೇ?! 😉

        1. ನೀನು ದೊಡ್ಡ ಆದ ಮೇಲೆ ನೆಂಪು ಮಾಡ್ಸುಲಕ್ಕು…

  11. ಜೀವನವ ಸಂಗೀತಕ್ಕೆ ಹೋಲುಸಿ, ಶಂಕರ ಮಾವನ ಮೂಲಕ ಒಪ್ಪಣ್ಣ ಹೇಳಿದ ವಿಚಾರ ಲಾಯಕಾಯಿದು. “ಸಂಸಾರದ ಸರಿಗಮ” ಬಲ್ಲವಂಗೆ ಗೊಂತು. ಕಷ್ಟಲ್ಲಿ ಬೆಳದರುದೆ, ಸಾಧನೆ ಮಾಡಿ ಬೆಳದು ಬೆಳಗೆಂಡಿದ್ದ ಶಂಕರ ಮಾವನ ಹಾಂಗಿರ್ತವು ಅಭಿನಂದನೀಯರು. ಕೈಲಿ ಪೈಸೆ ತಿರುಗೆಂಡಿದ್ದರುದೆ, ನಮ್ಮ ಸಂಸ್ಕೃತಿ, ಕಲೆಗಳ ಬಗೆಲಿ ಪ್ರೀತಿ ಮಡಗೆಂಡು , ಮನೆಯವರನ್ನುದೆ ಅದರಲ್ಲಿ ಸೇರುಸೆಂಡು ಇಪ್ಪ ಶಂಕರಮಾವನ ಕಾಂಬಗ ಕೊಶಿ ಆವ್ತು. ಹೊಟ್ಟೆ ಹಶುವಿಂಗೆ ಪೇಟಗೆ ಹೋಯೇಕಾವುತ್ತು ನಿಜ. ಆದರೆ ಸಂಸ್ಕಾರ, ಸಂಸ್ಕೃತಿಯ ಒಳಿಶಿ ನೆಡೆಶಿಗೊಂಡು ಬಪ್ಪದು ಹಿರಿಮೆ. ಸರಿಯಾಗಿ ಹೇಳಿದ್ದ ಒಪ್ಪಣ್ಣ. ಕಡೆಣ ಒಪ್ಪಲ್ಲಿ, ಧರ್ಮದ ರೀತಿಲೆ, ಕಲೆಯ ತೆಕ್ಕೊಂಡದು ಲಾಯಕಾಯಿದು.

    1. ಒಪ್ಪಣ್ಣನ ಲೇಖನವೂ, ಅದಕ್ಕೆ ಬೊಳುಂಬು ಮಾವನ ಪ್ರತಿಕ್ರಿಯೆಯೂ ಎರಡೂ ತುಂಬಾ ಇಷ್ಟ ಆತು…

      1. ಬೊಳುಂಬುಮಾವಾ,
        ಶುದ್ದಿಗೆ ಪೂರಕವಾದ ಒಪ್ಪಕ್ಕೆ ಅಭಿವಾದನೆಗೊ. ಪೇಟಗೆ ಹೋದರೂ ಹಳ್ಳಿಜೀವನಲ್ಲೇ ಬದುಕ್ಕುತ್ತ ನಿಂಗಳೂ ಸಮಾಜದ ಎಷ್ಟೋ ಜೆನಕ್ಕೆ ಮಾದರಿ. ಅಲ್ಲದೋ? 🙂

        ಜಯಶ್ರೀಅಕ್ಕಂಗೆ ನಮಸ್ಕಾರಂಗೊ.
        ನಿಂಗೊ ಬೈಲಿಂಗೆ ಶುದ್ದಿಹೇಳುಲೆ ಬಪ್ಪದು ಯೇವತ್ತು?

        1. ಒಪ್ಪಣ್ಣ ಬೊಳುಂಬು ಮಾವನ ಮಾದರಿ ಜೀವನವ ಸರಿಯಾಗಿ ಅರ್ಥ ಮಾಡಿಗೊಂಡಿದೆ…

          ಬೈಲಿಂಗೆ ಶುದ್ದಿ ಹೇಳುಲೇ ಬರೆಕ್ಕು ಹೇಳಿ ಇದ್ದು… ಸಮಯದ ಪ್ರತೀಕ್ಷೆಲ್ಲಿ ಇದ್ದೆ…

  12. ಸಂಗೀತಕ್ಕೆ ಸುಮಾರು ರೋಗಂಗಳ ಗುಣಮಾಡುವ ಶಕ್ತಿ ಇದ್ದು ಹೇಳಿ ಕೇಳಿತ್ತಿದ್ದೆ. ಹಾಂಗೇ ಎಷ್ಟೇ ಕಠೋರ ವ್ಯೆಗ್ತಿಗಳ ಮನಸ್ಸು ಕೂಡಾ ಸಂಗೀತ ಕೇಳಿಯಪ್ಪಗ ಕರಗುತ್ತು ಅಲ್ಲದಾ…
    ಲೇಖನ ತುಂಬಾ ಒಪ್ಪ ಆಯಿದು… 🙂

    1. ಮುಣ್ಚಿಕಾನದ ಅಣ್ಣಂಗೆ ಒಪ್ಪಂಗೊ.
      ಕಠಿಣತೆಯ ಕರಗುಸಿ ಮೃದುತ್ವ ಬಪ್ಪಲೆ ಕಾರಣ ಅಪ್ಪ ಸಂಗೀತದ ಸಾರವ ಅನುಭವಿಸಿದವನೇ ಬಲ್ಲ! ಕೊಶೀ ಆತು ನಿಂಗಳ ಒಪ್ಪ ಕಂಡು! 🙂

  13. ಸಣ್ಣ ಶಿಶುಗಳಿಂದ ಹಿಡಿದು ವೃದ್ಧರ ವರೆಗೆ ಸಂಗೀತ ಇಷ್ಟ.[ಔರಂಗಜೇಬನ ಹಾಂಗೆ ಇಪ್ಪ ಕೆಲವರ ಬಿಟ್ಟರೆ].
    ನಮ್ಮ ಮನಸ್ಸಿಲಿ ಲಯಬದ್ಧತೆಯ ಬಗ್ಗೆ ಆಸಕ್ತಿ ಇರುತ್ತು-ಅದರ ಕೇಳುವಾಗ ಹಿತ ಆವುತ್ತು.ಮಳೆ ಬಪ್ಪಾಗ ಸೋರುವ ಮಾಡಿಂಗೆ ಅಡಿಲಿ ಹಿತ್ತಾಳೆ ಪಾತ್ರೆ ಮಡುಗಿದರೂ ಹಿತವಾದ ಶಬ್ದ ಬತ್ತು-ರಾತ್ರಿಯ ನಿಶ್ಶಬ್ದಲ್ಲಿ ಅದು ಎಷ್ಟು ಚೆಂದ ಕೇಳುತ್ತು![ಎನಗೆ ಬಾಲ್ಯದ ನೆನಪಿಲಿ ಅತಿ ಹಿತವಾದ ಒಂದು ನೆನಪು ಅದು]
    ಹಾಂಗಾಗಿ ,ಅಸಂಬದ್ಧ ಕರ್ಕಶ ಶಬ್ದಂಗಳಿಂದ ನವಗೆ ಸಂಗೀತ ಹಿತಾನುಭವ ಕೊಡುದು.ನಿಸರ್ಗಲ್ಲಿ ಎಲ್ಲದಕ್ಕೂ ಒಂದು ಲಯ,ಕಾಲ ಇದ್ದು. ಎಲ್ಲಾ ಬಗೆಯ ನಾದಕ್ಕೂ ಸ್ಥಾನವೂ ಇದ್ದು.ಹಂಸ ಕ್ಷೀರ ನ್ಯಾಯದ ಹಾಂಗೆ ಸಂಗೀತಕಾರರು ಒಟ್ಟು ಗುಲ್ಲಿಲಿ ಇಪ್ಪ ಸಪ್ತಸ್ವರಂಗಳ,ತ್ರಿಸ್ಥಾಯಿಗಳ ಕಂಡು ಹಿಡಿದು ಭಾರೀ ಸಾಧನೆ ಮಾಡಿದ್ದವು.ಇದು ನಿಜವಾಗಿ ಅದ್ಭುತವೇಸರಿ.
    ಲೇಖನ ಲಾಯ್ಕ ಆಯಿದು.

    1. ಗೋಪಾಲಣ್ಣ, ಒಪ್ಪ ಕಂಡು ಕೊಶಿ ಆತು.
      ನಿಸರ್ಗದ ಸ್ವರಂದ ಸಂಗೀತ ಉಂಟಾತು ಹೇಳ್ತರ ತಿಳಿಶಿಕೊಟ್ಟಿದಿ.

      ಹೇಳಿದಾಂಗೆ, ಅವುರಂಗಜೇಬಂದು ಎಂತರ ಕತೆ? ಬೈಲಿಂಗೆ ಹೇಳ್ತಿರೋ ಪುರುಸೋತಿಲಿ?

      1. ಔರಂಗಜೇಬಂಗೆ ಸಂಗೀತ ಕೇಳಿರೆ ಆಗಡ. ಬಹುಶಃ ಚಿತ್ರಕಲೆಯೂ ಆಗ ಹೇಳಿ ಕಾಣ್ತು. ಈಗಾಣ ಸರ್ಕಾರ ಭಾರೀ ಮರ್ಯಾದೆ ಕೊಡ್ತ ಒಂದು ಮತದವಕ್ಕೆ ನಿಜವಾಗಿ ಇದೆರಡು ಸಂಗತಿಗೊ ಆಗ ಹೇಳುವದರ ಕೇಳಿದ್ದೆ. ಆದರೆ ಆ ಜಾತಿಯವು ಸಂಗೀತಲ್ಲಿಯೂ, ಚಿತ್ರಕಲೆಲಿಯೂ ಒಳ್ಳೆ ಹೆಸರು ಮಾಡಿದವ್ವು ಇದ್ದವು. ಉದಾಹರಣೆಗೆ ಎ.ಆರ್. ರೆಹ್ಮಾನ್, ಎಂ. ಎಫ್. ಹುಸೇನ್ (ಅದು ಹೇಂಗೂ ಇರಲಿ), ಬಿಸ್ಮಿಲ್ಲಾ ಖಾನ್ (ಶೆಹನಾಯಿ ವಾದಕ (ಹಾಂಗೆ ನೋಡಿರೆ ಅವಕ್ಕೆ ನಾಯಿಯೂ ಆಗ, ಶೆಹನಾಯಿ ಹೇಂಗಕ್ಕು?)), ಝಾಕಿರ್ ಹುಸೇನ್ (ತಬ್ಲಾ), ಅಮ್ಜದ್ ಅಲಿ ಖಾನ್ (ಸರೋದ್ ವಾದಕ)… ಇನ್ನೂ ಇದ್ದವು. ಹೇಳಿದ ಹಾಂಗೆ ನಮ್ಮ ದಕ್ಷಿಣದ ಮೃದಂಗವನ್ನೇ ರೂಪಾಂತರ ಮಾಡಿ ತಬ್ಲಾ ಮಾಡಿದ್ದು ಏವ ಜನ ಗೊಂತಿದ್ದೋ? ಅಮೀರ್ ಖುಸ್ರು ಅಡ. ಚರಿತ್ರೆ ಹಾಂಗೆ ಹೇಳ್ತು.

        ಎನಗೆ ಸಂಗೀತದ ಬಗ್ಗೆ ದೊಡ್ಡ ತಿಳುವಳಿಕೆ ಇಲ್ಲೆ, ಆದರೆ ಒಳ್ಳೆ ಸಂಗೀತ ಎಲ್ಲಿಯಾದರೂ ಬಂದರೆ ಅದರ ಕೇಳ್ತಾ ಅಸ್ವಾದಿಸುತ್ತ ಅಭ್ಯಾಸ ಇದ್ದು. ನಮ್ಮ ಮನಸ್ಸಿನ ಅರಳಿಸುತ್ತ ಕಲೆ ಸಂಗೀತ ಹೇಳುವದರಲ್ಲಿ ಎರಡು ಮಾತು ಇಲ್ಲೆ.

        1. { ಅವಕ್ಕೆ ನಾಯಿಯೂ ಆಗ, ಶೆಹನಾಯಿ ಹೇಂಗಕ್ಕು? }
          ವಾಹ್! ಹಳೆಮನೆ ಅಣ್ಣನ ಪೆಟ್ಟು ಹೇಳಿರೆ ಹೀಂಗಿದಾ!!
          ನೆಗೆಯೂ ಬಂತು, ಸತ್ಯವೂ ಅಪ್ಪು ಹೇಳಿ ಕೊಶಿಯೂ ಆತು.

          ನೂರಾರು ಔರಂಗಜೇಬಂಗೊ ಇದ್ದವು, ’ಜೇಬು’ತುಂಬುತ್ತರೆ ಯೇವದೂ ಅಕ್ಕು ಅವಕ್ಕೆ! ಅಲ್ಲದೋ? 🙁

  14. “ಆಡು ಮೇಯದ್ದ ಸೊಪ್ಪಿಲ್ಲೆ. ಒಪ್ಪಣ್ಣ ಮುಟ್ಟದ್ದ ವಿಷಯ ಇಲ್ಲೆ” ಹೇಳಿ ಮದಾಲೊಂದು ಒಪ್ಪ.

    [ಶಂಕರಮಾವನ ಅಂತೋರು ನಮ್ಮ ಸಮಾಜದ ಆಸ್ತಿ ಅಲ್ಲದೋ?] – ಸಂಶಯವೇ ಇಲ್ಲೆ ಹೇಳಿ ಮತ್ತೊಂದು ಒಪ್ಪ.
    ‘ನೋವು – ಹಸಿವು’ – ಹೇಳಿರೆ ಎಂತರ ಎಂಬುದರ ಅಂತೋರತ್ರೆ ಕೂದು ಕೇಳಿ ಕಲಿಯೆಕ್ಕು. ಸಂಗೀತಾರಾಧಕರಲ್ಲಿ ಶಾಸ್ತ್ರೀಯ ಸಂಗೀತಗಾರರು, ಸುಗಮ ಸಂಗೀತಗಾರರು ಹೇಳಿ ಎರಡಾಗಿ ಪ್ರ ಪ್ರತ್ಯೇಕ ಚಿಂತುಸೆಕ್ಕು. ಸುಗಮ ಸಂಗೀತಕ್ಕೆ ತಳಹದಿ ಶಾಸ್ತ್ರೀಯ ಸಂಗೀತವೇ. ಆದರೂ, ವೃತ್ತಿಜೀವನಲ್ಲಿ, ಅವರವರ ಕಾರ್ಯಕ್ಷೇತ್ರಲ್ಲಿ ಬಪ್ಪ ಅನುಭವ ಮತ್ತು ಸ್ವಾರಸ್ಯ ಇನ್ನಷ್ಟು ವಿಸ್ಮಯ ಆಗಿರ್ತು.
    ಒಪ್ಪಣ್ಣನ ಈ ಶುದ್ಧಿ ಓದಿಯಪ್ಪಗ ‘ಎಂದರೋ ಮಹಾನುಭಾವುಲು, ಸಂಗೀತ ಜ್ಞಾನಮು …. ‘ ಇತ್ಯಾದಿ ಹತ್ತಾರು ನಾವು ಕೇಳಿದ್ದು ಮನಪಟಲಲ್ಲಿ ಮೆಲುಕು ಹಾಕಿತ್ತು.

    ಸಂಗೀತಂದ ಮನಸ್ಸಿಂಗೆ ಸಿಕ್ಕುವ ಚೇತೋಹಾರಿ, ನೆಮ್ಮದಿ ಕೇಳಿಯೇ ಪಡೆಕ್ಕಷ್ಟೆ ಹೇಳಿ ಒಪ್ಪಣ್ಣ ಭಾವಂಗೆ ಈ ಕೊನೆಯೊಪ್ಪ.

    1. ಚೆನ್ನೈಭಾವಾ..
      ಪ್ರತಿಶುದ್ದಿಯನ್ನೂ ಓದಿ, ಅದರ ಅನುಭವಿಸಿ ಒಪ್ಪ ಕೊಡ್ತಿರಲ್ಲದೋ – ತಾಳ್ಮೆ, ಪ್ರೀತಿಗೆ ನಮೋನಮಃ.
      ಸಂಗೀತದ ಪ್ರತಿ ಏರಿಳಿತ ಅರಡಿತ್ತು ನಿಂಗೊಗೆ – ಹೇಳ್ತದು ಒಪ್ಪ ಓದಿರೆ ಗೊಂತಕ್ಕು! 🙂
      ಸಂಗೀತ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಕೊಟ್ಟ ನಿಂಗಳ ಸಮುದಾಯ ಆಧುನಿಕ ಸಮಾಜಕ್ಕೆ ಮಾದರಿ.

  15. ಯೂ ಟ್ಯೂಬಿಲ್ಲಿ ಕುಮಾರಿ ಕನ್ಯಾಕುಮಾರಿಯವರ ಕಛೇರಿ ಕೇಳಿಗೊ೦ಡು ಒಪ್ಪಣ್ಣನ ಲೇಖನ ಓದಿದೆ, ಒಳ್ಳೇದಾಯಿದು. ತಲೆಬೆಶಿ ವಿಪರೀತ ಅಪ್ಪಗ, ಮನಸ್ಸಿ೦ಗೆ ಬೇಜಾರಪ್ಪಗ, ಒ೦ಟಿತನ ಅತೀವವಾಗಿ ಕಿತ್ತು ತಿ೦ಬಗ ಸ೦ಗೀತ ಕೇಳಿರೆ ಮನಸ್ಸಿ೦ಗೆ ಆವ್ತ ಸಮಾಧಾನ, ಸಿಕ್ಕುತ್ತ ಶಾ೦ತಿ ವಿವರುಸಲೆ ಸುಲಭ ಅಲ್ಲ. ಆನು ತೊ೦ಬ ಬೇಜಾರಪ್ಪಗ ಕೆ. ಎಸ್. ಚಿತ್ರಾ ಹಾಡಿದ ‘ಕೃಷ್ಣಾ ನೀ ಬೇಗನೆ ಬಾರೋ’ ಯೂ ಟ್ಯೂಬಿಲ್ಲಿ ಕೇಳುವದು. ಅಮೋಘವಾಗಿದ್ದು. ಎಷ್ಟು ಸರ್ತಿ ಕೇಳಿರೂ ಬೊಡಿಯ. ಭಾರೀ ಸಮಾಧಾನ ಆವ್ತು.
    ಗುರುವಾರ ಗುರುವಾರ ಕಾದು ಕೂಬದು ಸಾರ್ಥಕ ಮಾಡ್ತ ಒಪ್ಪಣ್ಣ೦ಗೆ ಒಪ್ಪ೦ಗೊ.

    1. ಪೆರುವದಣ್ಣಾ.. ಸುರೂವಾಣ ಒಪ್ಪಕ್ಕೆ ಒಂದೊಪ್ಪ!
      ಮನಸ್ಸಿಂಗೆ ಬೇನೆ-ಬೇಜಾರಪ್ಪಗ ಸಂಗೀತವೇ ಕೊಶಿ ಕೊಡ್ತು ಹೇಳ್ತರ ಸ್ವತಃ ಮನಗಂಡ ನಿಂಗೊ ಕೊಟ್ಟ ಒಪ್ಪ ನಿಜಕ್ಕೂ ತೂಕದ್ದೇ.
      ಊರಿಂದ ದೂರ ಇದ್ದಷ್ಟು ಮನಸ್ಸು ಬಾದಿ ಅಪ್ಪದು ಜಾಸ್ತಿ ಅಲ್ಲದೋ?
      ಬೈಲಿಂಗೆ ಹತ್ತರೆ ಇದ್ದರೆ ಊರಿಂಗೆ ಹತ್ತರೆ ಇದ್ದ ಹಾಂಗೇ… 🙂

    2. {ಒ೦ಟಿತನ ಅತೀವವಾಗಿ ಕಿತ್ತು ತಿ೦ಬಗ}
      ಎಂತಾರು ಮುಂದುವರುಸೇಕೋ – ಕೇಳ್ತವು ಚೆನ್ನೈಭಾವ… 😉
      ಅವರತ್ರೆ ಜಾತಕಪಟಂಗೊ ಸುಮಾರು ಇರ್ತು. ಯೇವದಾರು ಹೇಳೇಕೋ..?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×