Oppanna.com

ಮತ್ತೊಂದರಿ ಬದ್ಕಿ ಬಾ, ಸತ್ಯಸಾಯಿ ಬಾ..ಬಾ..!!

ಬರದೋರು :   ಒಪ್ಪಣ್ಣ    on   29/04/2011    23 ಒಪ್ಪಂಗೊ

ಅದಾ, ಜೆಂಬ್ರಂಗೊ ಮತ್ತೆ ಸುರು ಆತು.
ಮೌಢ್ಯಲ್ಲಿ ರಜ ಪುರುಸೊತ್ತು ಸಿಕ್ಕಿದರೂ, ಒಯಿಶಾಕದ ಕೆಲಸ ಕಾರ್ಯಂಗೊ ನೆಡವಗ ಮೌಢ್ಯ ಕಳುದ್ದು ಗೊಂತೇ ಆಯಿದಿಲ್ಲೆ ಬೈಲಿನೋರಿಂಗೆ!

ಮೌಢ್ಯಂದ ಮೂರು ದಿನ ಮದಲೇ ಮೂರ್ತಂಗೊ ಮುಗುದಿರ್ತು; ಮವುಢ್ಯ ಮುಗುದು ಮೂರು ದಿನಕ್ಕೆ ಮೂರ್ತಂಗೊ ಸುರು ಆವುತ್ತು – ಇದು ನಮ್ಮ ಊರಿನ ನಡಾವಳಿ.
ಮೊನ್ನೆಯೇ ಮೌಢ್ಯ ಮುಗುತ್ತಿದಾ, ಹಾಂಗಾಗಿ ಈ ವಾರಂದ ಮತ್ತೆ ಪುನಾ ಮೂರ್ತಂಗೊ, ಪುನಾ ಜೆಂಬ್ರಂಗೊ.
ಒಳ್ಳೆ ದಿನ ಅಂತೂ ತಾರಾಮಾರಾ ಜೆಂಬ್ರಂಗೊ; ಅದರ್ಲಿಯೂ ಆ ಮೂರ್ತ ರಜೆ ದಿನಕ್ಕೆ ಒದಗಿ ಬಂದರೆ ಮತ್ತೆ ಪುರುಸೊತ್ತಿಲ್ಲದ್ದೆ ಜೆಂಬ್ರಂಗೊ.
ಹೋಗಿಯೇ ಕಳೀಯೆಕಾದ ಹಲಾವಾರು ಜೆಂಬ್ರಂಗೊ. ಪೂಜೆಗೊ, ಉಪ್ನಾನಂಗೊ, ಬದ್ಧಂಗೊ, ಮದುವೆಗೊ.
ಒಂದೊಂದಿಕ್ಕೆ ಒಂದೊಂದು ಬಗೆ ಚೀಪೆಗೊ.
ಯೇವತ್ತಿನಂತೇ ಹೋಳಿಗೆ ಇದ್ದರೂ, ಅದರೊಟ್ಟಿಂಗೆ ಹಸರು, ಕಡ್ಳೆ, ಸಾಗು – ಸೀವುಗೊ, ಬಾಳೆಹಣ್ಣು ಪ್ರಥಮ, ಕೇಸರಿಬಾತು, ಕ್ಷೀರ, ಕಾಯಿಹೋಳಿಗೆ – ನಾನಾ ನಮುನೆ! ಒಂದೋ ಎರಡೋ, ಹೋ – ಒಂದೊಂದು ಜೆಂಬ್ರಲ್ಲಿ ಒಂದೊಂದು!
ಕೆಲವು ದಿಕೆ ಈಗಾಣ ಪೇಟೆತಿಂಡಿಗಳೂ ಚಲಾವಣೆ ಸುರು ಆಯಿದಡ, ವಿದ್ವಾನಣ್ಣ ಮೊನ್ನೆ ಹೇಳಿತ್ತಿದ್ದವು.
ಸೆಕೆ ಆದ ಕಾರಣ ಅಯಿಸ್ಕ್ರೀಮುದೇ ನೆಡೆತ್ತು ಊರಿಲಿ, ಒಪ್ಪಕುಂಞಿ ಹಟಕಟ್ಟಿ ತಿಂದು ಮರದಿನ ಆಕ್ಷಿಮಾಡ್ತಷ್ಟು.
~
ಮೊನ್ನೆ ಆಯಿತ್ಯವಾರ ಬೌಷ್ಷ ಸದ್ಯೋಭವಿಷ್ಯಲ್ಲಿ ಅತ್ಯಂತ ಹೆಚ್ಚು ಜೆಂಬ್ರಂಗೊ ಇದ್ದ ಬಗೆ!
ಉಪ್ನಾನಂಗೊ ಅಂತೂ ಧಾರಾಳವೇ!
ನೆರಿಯಲ್ಲಿ ಕೆಳಾಣಮನೆ ಪುಳ್ಳಿಗೆ, ಕೋಡಂದೂರಿಲಿ ಹೊಸಮೊಗ್ರುಪುಳ್ಳಿಗೆ, ಚೊಕ್ಕಾಡಿಲಿ ಗುತ್ತಿಗಾರುಮಾವನ ಪುಳ್ಳಿಗೆ, ಸವಣೂರಿಲಿ ಎಡಪ್ಪತ್ಯ ಪುಳ್ಳಿಗೆ, ಸಿದ್ಧಮೂಲೆಲಿ ಅಲ್ಯಾಣ ಪುಳ್ಳಿಗೆ, – ಹೋ! ಪಟ್ಟಿ ಬರವಲೆ ಸುರುಮಾಡಿರೆ ಶುದ್ದಿಯೇ ಅಕ್ಕದು ಮತ್ತೆ!
ಅದೂ ಅಲ್ಲದ್ದೆ, ಬೆದುರಡಿಲಿ, ಪೋಳ್ಯಲ್ಲಿ, ಪಂಜಲ್ಲಿ, ಕೊಡೆಯಾಲಲ್ಲಿ ಒಂದೊಂದು ಮದುವೆ ಸಮ್ಮಂದೀ ಕಾರ್ಯಕ್ರಮಂಗೊ!
ಯೇವದರ ಹಿಡಿವದು, ಯೇವದರ ಬಿಡುದು!?
ಈ ಜೆಂಬ್ರದ ಪಟ್ಟಿ ಹೇಳಿಗೊಂಡು ಹೋದ ಹಾಂಗೇ, ಆರಿಂಗೆ ಕೊಶಿ ಅದರೂ – ಬೋಚಬಾವಂಗೆ ಬೇಜಾರವೇ ಅಕ್ಕಷ್ಟೆ.
ಎಂತಕೆ? ಒಂದು ದಿಕ್ಕಾಣ ಪಾಚ ಉಂಡ್ರೆ, ಹತ್ತು ದಿಕ್ಕಾಣದ್ದು ಸಿಕ್ಕುತ್ತಿಲ್ಲೆನ್ನೇ – ಹೇಳಿಗೊಂಡು! 🙁
~
ಇಪ್ಪದರ್ಲಿ ಹೆಚ್ಚಿನ ಜೆಂಬ್ರಂಗೊಕ್ಕೆ ಹೋಪ ನಮುನೆಲಿ ಒಂದು ವೆವಸ್ತೆ ಮಾಡಿಗೊಂಡತ್ತು ಒಪ್ಪಣ್ಣಂದೇ.
ಒಪ್ಪಣ್ಣಂಗೆ ಬೈಕ್ಕು ಇಲ್ಲೆ; ಅರಡಿಯಲೂ ಅರಡಿಯ! ಆದರೆ ವಾಹನ ಇಪ್ಪೋರು ಧಾರಾಳ ಇದ್ದವು ಬೈಲಿಲಿ.
ಹಾಂಗಾಗಿ, ಒಂದು ಬೈಕ್ಕಿಂದ ಇನ್ನೊಂದು ವಾಹನಕ್ಕೆ ಪಗರಿಂಡು ಹೋವುತ್ತ ಲೆಕ್ಕಲ್ಲಿ ಮದಲೇ ಮಾತಾಡಿ ವೆವಸ್ತೆ ಮಾಡಿತ್ತು ನಾವು! 😉
~
ದೊಡ್ಡಜ್ಜನ ಮನೆಲಿ ಸಣ್ಣ ಪುಳ್ಳಿಗೆ ಉಪ್ನಾನ!
ಅದಕ್ಕೆ ಮೊನ್ನೆಯೇ ದೊಡ್ಡಬಾವನ ಹತ್ತರೆ ಮಾತಾಡಿ ಬೈಕ್ಕಿನ ಹಿಂದಾಣ ಸೀಟಿನ ನಿಜ ಮಾಡಿ ಮಡಗಿತ್ತಿದ್ದೆ.
ಅದರ್ಲೇ ಹೋದ್ದುದೇ!
~

ಶ್ರೀ ಸತ್ಯ ಸಾಯಿ ಬಾಬಾ, ಆಂಧ್ರ ದೇಶದ ಹಿಂದೂ ಸನ್ಯಾಸಿ

ಜೆಂಬ್ರದ್ದಿನ ಉದೆಕಾಲಕ್ಕೇ ಎದ್ದು ಎರಡು ಮೂರು ಜೆಂಬ್ರಕ್ಕೆ ಹೊಕ್ಕು ಹೆರಟದು. ಮತ್ತೆ ನೀರ್ಚಾಲಿಲಿ ಸಿದ್ದನಕೆರೆ ಅಪ್ಪಚ್ಚಿಯ ಅಂಗುಡಿ ಕರೆಲಿ ಕಾದು ನಿಂದೊಂಡೆ, ದೊಡ್ಡಬಾವನ ಹೊಸಬೈಕ್ಕಿನ.
ರಜ ಹೊತ್ತಿಲೇ ಬದಿಯೆಡ್ಕ ಹೊಡೆಂದ ಬಂದ, ದೊಡ್ಡ ಹೋರುನು ಶೆಬ್ದ ಮಾಡಿಗೊಂಡು.
ಹಿಂದಾಣ ಸೀಟಿನ ಉದ್ದಿ, ಕೂದಂಡೆ, ಹೊಸಾ ಬೈಕ್ಕಾದರೂ ಧೂಳು ಇರ್ತಿದಾ! 😉
ಮುನ್ನಾಣ ದಿನ ಒರಕ್ಕಿಲ್ಲೆ – ಬೆಂದಿಗೆ ಕೊರವಲೆ ಹೋದ್ದದರ ಲೆಕ್ಕಲ್ಲಿ, ಹಾಂಗಾಗಿ – ಮಾಲ್ತದು ಬೇಡ ಹೇಳಿಗೊಂಡು ದೊಡ್ಡಬಾವನ ಗಟ್ಟಿ ಹಿಡ್ಕೊಂಡು ಕೂದತ್ತು!
ಬೈಕ್ಕು ಹೆರಟತ್ತು, ತೆಂಕ್ಲಾಗಿ.

ಇಲ್ಲಿಂದ ಹೆರಟು, ಅಲ್ಲಿಗೆತ್ತುವನ್ನಾರವೂ ಶುದ್ದಿ ಮಾತಾಡಿಗೊಂಡೇ ಹೋದ್ದು.
‘ಅಂಬಗ ಪೇಪರು ತಿದ್ದಾಣ ಎಲ್ಲ ಮುಗಾತೋ?’ ಕೇಳಿದೆ ಎಡಕ್ಕಿಲಿ.
‘ಹ್ಮ್, ಈಗ ಶಾಲೆಗೊಕ್ಕೆ ಪಾಟಪುಸ್ತಕ ಬರೆತ್ತ ಗವುಜಿ, ನಾಳೆ ಕೊಲ್ಲಂ ಹೊಡೆಂಗೆ ಹೋಪಲಿದ್ದು’ – ಹೇದ° ದೊಡ್ಡಬಾವ°.
ಪೇಪರು ತಿದ್ದುವಗ ಲೆಕ್ಕ ತಪ್ಪಿದ ಸಂಗತಿ ಬೈಲಿಂಗೇ ಗೊಂತುಮಾಡುಸಿದ ಶುದ್ದಿ ಬಪ್ಪಗ ಕರಿಮುಟ್ಟಾಳೆ ಎಡೆಂದ ಒಂದರಿ ನೆಗೆ ಹೆರಟತ್ತು!
ಉಪ್ಪಿನಕಾಯಿಹೊಡಿಯ ಕುದ್ರೆಪ್ಪಾಡಿ, ಕೇಸರಿಬಾವುಟದ ಮಧೂರು, ಪಚ್ಚೆ ಬಾವುಟದ ಚೆರುಕ್ಕಳ, ಕೆಂಪುಬಾವುಟದ ಪೊಯಿನಾಚಿ, ಖಾರ ಹೊಗೆಸೊಪ್ಪಿನ ಕುಣಿಯ – ಎಲ್ಲ ಊರನ್ನೂ ದಾಂಟಿ ದೊಡ್ಡಜ್ಜನ ಮನೆಗೆ ಎತ್ತಿಯೇ ಎತ್ತಿತ್ತು.
~
ಮೂರ್ತ ರಜ ಬೇಗವೇ ಇದ್ದತ್ತು. ನೆಗೆಮಾಣಿ ಹೇಳುಗು – ಮೂರ್ತ ಸಿಕ್ಕದ್ದರೂ ಸಂಗತಿ ಅಲ್ಲ, ತೀರ್ತ ಸಿಕ್ಕಿರಾತು ಹೇಳಿಗೊಂಡು! 😉
ಎತ್ತಿದ ಕೂಡ್ಳೆ ಸುಬಗಣ್ಣನ ಕಂಡತ್ತು, ಅಗಲ ಕಂಬಿಯ ಶಾಲು ಸರಿಮಾಡಿಗೊಂಡೇ ಕೊಶೀಲಿ ಮಾತಾಡುಸಿದವು, ಚೆಂದಕೆ.
ಅಪ್ಪು, ಮನೆದೇವರು ಕೊಶಿಲಿದ್ದರೆ ಅವುದೇ ಕೊಶಿಲಿರ್ತವು! 😉
ಅದಿರಳಿ!
ಆ ದಿನ, ಯೇವದೇ ಜೆಂಬ್ರ ಇರಳಿ, ಆರೇ ಮಾತಾಡುಸಲಿ, ಎಲ್ಲಿಯೇ ಮಾತಾಡ್ಳಿ – ಮಾತಾಡ್ಸು ಒಂದೇ ಶುದ್ದಿ; ‘ಹೋ, ಇಂದೆಷ್ಟು ಜೆಂಬ್ರಂಗೊ’ – ಹೇಳಿಗೊಂಡು!
ಹೊಸಬೆಟ್ಟಿಂದ ಹೊಸದುರ್ಗದ ಒರೆಂಗೆ ಅದೇ ಶುದ್ದಿ!
ಪಂಜಚಿಕ್ಕಯ್ಯನೂ ಅದನ್ನೇ ಹೇಳಿದವು – ಒಸಗೆ ಸಾಲಿಲಿ ನಿಂದಿಪ್ಪಗ.
ಅಪ್ಪು, ಪಂಜಚಿಕ್ಕಯ್ಯನೂ ಬಾರದ್ದೆಕಳೀಯ ಹೇಳಿಗೊಂಡು ಬಂದಿತ್ತಿದ್ದವು ಅಲ್ಲಿಗೆ; ಅವರ ಊರಿನ ಎರಡು-ಮೂರುಜೆಂಬ್ರವ ಬಿಟ್ಟು!

ಮದ್ಯಾನ್ನದ ಗಡದ್ದಿನ ಊಟ ಆಗಿ ಮಣ್ಣಚಿಟ್ಟೆಬುಡಲ್ಲಿ ಕೂದಂಡು ಮಾತಾಡಿಗೊಂಡೇ ಇದ್ದಿದ್ದೆಯೊ°.
ಸುಬಗಣ್ಣ, ವಾಟೆಅಣ್ಣ, ದೊಡ್ಡಬಾವ, ಪರಕ್ಕಜೆಬಟ್ಟಮಾವ°, ಪೊಸವಣಿಕೆ ಅಣ್ಣ, ಸಾರಡಿ ಅಪ್ಪಚ್ಚಿ, ಡೆಂಟಿಷ್ಟು ಮಾವ, ಬೆಟ್ಟುಕಜೆ ತಮ್ಮಣ್ಣ, ಗುಂಪೆಅಣ್ಣ – ಎಲ್ಲೋರುದೇ ಮಾತಾಡ್ಳೆ ಸಿಕ್ಕಿದವು.
~
ಅಪುರೂಪಲ್ಲಿ ಕೆಲವು ಜೆನ ಕಂಡದರ್ಲಿ ಮಾತಾಡಿದಷ್ಟೂ ಶುದ್ದಿ ಮುಗುದ್ದಿಲ್ಲೆ ಇದಾ!
ಹೊತ್ತು ಹೋದ್ದೇ ಗೊಂತಾಯಿದಿಲ್ಲೆ!
ಆದರೆ ಎಂತ ಮಾಡ್ತದು, ಇರುಳಿಂಗೆ ಬೈಲಕರೆಯ ಒಂದು ಮನೆಲಿ ಸತ್ಯನಾರಾಯಣ ಪೂಜೆ, ಹೋಗದ್ದೆ ನಿವುರ್ತಿ ಇಲ್ಲೆ.
ದೊಡ್ಡಬಾವನ ಹತ್ತರೆ ಮೆಲ್ಲಂಗೇ ಕೇಳಿದೆ – ಹೇಂಗೆ? ಹೆರಡುವನೋ?? ಹೇಳಿಗೊಂಡು.
ಹ್ಮ್, ಸರಿ – ಹೇಳಿ ಕಳಂದ ಎದ್ದು, ದೊಡ್ಡಜ್ಜನ ಹತ್ತರೆ ಹೇಳುಲೇ ಹೇಳಿಗೊಂಡು ಒಳ ಹೋದ°.
~
ಅದೇ ಮಿಷ್ಟಿಂಗು (mistake) ಆದ್ದದು!
ಬೈಲಿಂಗೆ ದೊಡ್ಡಭಾವ ಆದರೂ, ಅಜ್ಜನ ಮನಗೆ ಪುಳ್ಳಿಯೇ ಅಲ್ಲದೋ?
ಮೂಡುಜೆಗಿಲಿಯ ಹೊಸ್ತಿಲಕರೆಲಿ ದೊಡ್ಡಬಾವನ ಕೈಲಿ “ಅಜ್ಜನ ಮನಗೆ ಬಂದು ಇಂದೇ ಹೆರಡುದೋ” – ಅಜ್ಜ ಎರಾಡು ಹೇಳ್ತದು ಒಪ್ಪಣ್ಣಂಗೆ ಕೇಳಿತ್ತು.
ಇನ್ನು ಜಾಸ್ತಿ ಹೊತ್ತು ನಿಂದರೆ ಒಪ್ಪಣ್ಣಂಗೂ ಬೆಶಿನೀರು ಬಕ್ಕು ಹೇಳಿಗೊಂಡು, ಬೆಶಿಚಾಯ ಕುಡುದು – ಜಾಲಕೊಡಿಲಿ ಚಿಕ್ಕು ಕೊಯಿಕ್ಕೊಂಡು ಇದ್ದಿದ್ದ ರಘುಭಾವನ ಹತ್ತರೆ ಹೇಳಿಕ್ಕಿ ಸೀತ ಹೆರಟೆ. ದೊಡ್ಡಬಾವನ ಹತ್ರೆ ಕೈಸನ್ನೆಲೇ ’ಬೈಲಿಲಿ ಕಾಂಬ’ ಹೇಳಿದೆ, ನೆಗೆಮಾಡಿಂಡು. 😉

ಜಾಲಕರೆಂದ ಚೆರ್ಪುಹಾಕಿ ಹೆರಡುವಗಳೇ ಇದಾ, ಸುಬಗಣ್ಣ ಕೆಂಪುಕಂಬಿಯ ರುದ್ರಾಕ್ಷಿಶಾಲಿನ ಒಗದ್ದು ಕಂಡದು ನವಗೆ!
ಎಲ್ಲೋರ ಮನೆಲಿಯೂ ದೇವರಿದ್ದವು – ಹೇಳಿ ಅನುಸಿತ್ತು ಒಂದರಿ! 😉 ಪಾಪ!!
ಅದಿರಳಿ.
~
ಜಾಲಕರೆಂದ ಹೆರಟು ಹಟ್ಟಿಬುಡಕ್ಕೆ ಎತ್ತುವಗ ಬೂದಿಬಣ್ಣದ ಸ್ಕೂಟರಿನ ಷ್ಟಾರ್ಟುಮಾಡಿಗೊಂಡಿತ್ತವು ಪಂಜಚಿಕ್ಕಯ್ಯ.!
‘ಬತ್ಯೇನಾ? ಚೆರ್ಕಳ ತನ್ಕ ಬಪ್ಲಕ್ಕು’ – ಹೇದವು ಪಂಜಭಾಶೆಲಿ.
ಅಷ್ಟಾದರೆ ಅಷ್ಟು, ಇನ್ನಾಣ ಊಟ ಇರುಳಿಂಗೆ, ಆ ಹೊತ್ತಿಂಗೆ ಎತ್ತಿರೆ ಸಾಕಪ್ಪ – ಹೇಳಿ ಅನುಸಿ, ’ಹ್ಮ್, ಹೋಪ° ಚಿಕ್ಕಯ್ಯ’ – ಹೇಳಿ ಹಿಂದಾಣ ಸೀಟಿಂಗೆ ಹತ್ತಿದೆ.

ಪಂಜಚಿಕ್ಕಯ್ಯನ ನಿಂಗೊಗೆ ಅರಡಿಗಲ್ಲದೋ?
ತರವಾಡುಮನೆ ಶಂಭಜ್ಜ – ಕಾಂಬುಅಜ್ಜಿಯ ಅಳಿಯ ಇವು! ರಂಗಮಾವನ ತಂಗೆ – ಮಾಲಚಿಕ್ಕಮ್ಮನ ಕೊಟ್ಟದು ಅವಕ್ಕೆ.
~
ಸ್ಕೂಟರು ಹೆರಟತ್ತು. ಮಾತು ಹೆರಟಿದೇ ಇಲ್ಲೆ.
ಆಗ ಬಪ್ಪಗ ದೊಡ್ಡಬಾವನ ಹತ್ತರೆ ದೊಡ್ಡಕೆ ಕುಶಾಲಿನ ಬೊಬ್ಬೆ-ಗವುಜಿ. ಆದರೆ ಈಗ ಹಾಂಗಲ್ಲ.
ಚಿಕ್ಕಯ್ಯ ಸೂತಕಲ್ಲಿ ಕೂದ ನಮುನೆ ಇತ್ತವು.
ಆನೇ ಮಾತಾಡುಸಿದೆ; ಎಷ್ಟು ಮಾತಾಡುಸಿದ್ದೋ ಅಷ್ಟಕ್ಕೆ ಉತ್ತರ ಕೊಟ್ಟು ಸುಮ್ಮನೆ ಸ್ಕೂಟ್ರುಬಿಟ್ಟುಗೊಂಡಿತ್ತಿದ್ದವು.
~
ಎಂತ, ಸ್ಕೂಟ್ರುಬಿಡುವಗ ಶುದ್ದಿ ಮಾತಾಡ್ಳೆ ಕಷ್ಟ ಆವುತ್ತೋ -ಕೇಳಿದೆ.
ಅಲ್ಲ ಒಪ್ಪಣ್ಣ, ಮನಸ್ಸಿಂಗೆ ಹಿತ ಇಲ್ಲೆ, ಬೇಗ ಮನೆಗೆ ತಲ್ಪೆಕ್ಕು. ಭಜನೆ ಮಾಡೆಕ್ಕು – ಹೇಳಿದವು.
ಚೆಲ, ಗವುಜಿ ಜೆಂಬ್ರಂದ ಹೆರಡುವಗ ಎಂತಾತಪ್ಪ ಇವಕ್ಕೆ!! ಎಂತಾತು ಚಿಕ್ಕಯ್ಯ? – ಕೇಳಿದೆ.
ನಿನಿಗೆ ಗೊತ್ತಾಯಿದಿಲ್ಯ? ಸ್ವಾಮಿ ಹೋದ್ವಡ! – ಹೇಳಿದವು ಬೇಜಾರಲ್ಲಿ.
ಯೇವ? ಕೇಳಿದೆ.
ಸ್ಕೂಟರಿನ ಬಿಟ್ಟುಗೊಂಡೇ, ಒಂದರಿ ಹಿಂದೆ ತಿರುಗಿ ಹೇಳಿದವು, ’ಸಾಯಿಬಾಬ ಹೋದ್ವು ಅಲ್ದಾ? ಗೊತ್ತಾಯಿದಿಲ್ಯ ನಿನಿಗೆ’!
~
ಪಂಜಚಿಕ್ಕಯ್ಯ ತುಂಬ ದೊಡ್ಡ ಆಸ್ತಿಕರು.
ನಮ್ಮ ಗುರುಗಳ ಎಲ್ಲಾ ಕಾರ್ಯಕ್ರಮಲ್ಲಿಯೂ ಸಕ್ರಿಯವಾಗಿ ತೊಡಗಿಸೆಂಡಿದವು. ಅಷ್ಟೇ ಅಲ್ಲದ್ದೆ, ಒರಿಶಾವಧಿ ಪೂಜೆ-ಪುನಸ್ಕಾರಂಗೊ, ಬೂತ-ತಂಬಲಂಗೊ ಇದೆಲ್ಲ ಶ್ರದ್ಧಾಭಗ್ತಿಲಿ ನೆಡೆತ್ತು.
ಇಷ್ಟೇ ಅಲ್ಲದ್ದೆ, ಪಂಜಚಿಕ್ಕಯ್ಯನ ಮನೆಲಿ ಸಾಯಿಬಾಬನ ಪಟ ಇರ್ತ ಸಂಗತಿ ಒಪ್ಪಣ್ಣಂಗೆ ಅರಡಿಗು.
ಅಂದಿಂದಲೇ ಅಲ್ಲಿ ನಿತ್ಯವೂ ಸಾಯಿಭಜನೆ ಆಗಿಂಡು ಇತ್ತು, ಇರುಳಾಣ ನಿತ್ಯಪೂಜೆಂದ ಮದಲು.
ಒಂದೊಂದರಿ ಪುಟಬರ್ತಿಗೆ ಹೋಪದೂ ಇತ್ತು.
ವಾಹನ ಮಾಡಿಂಡು ಹೋಪಗ, ಅನುಕೂಲ ಇಲ್ಲದ್ದ ನೆರೆಕರೆಯೋರನ್ನೂ ಚೆಂದಕೆ ಕರಕ್ಕೊಂಡು ಹೋಪದಿದ್ದು!
ಒಂದೇ ಮಾತಿಲಿ ಹೇಳ್ತರೆ – ಸಾಯಿಬಾಬಾ ಹೇಳಿತ್ತುಕಂಡ್ರೆ ಸಾಕ್ಷಾತ್ ದೇವರು ಹೇಳ್ತರ ಅವರ ಮನಸ್ಸು ಗಟ್ಟಿಗೆ ನಂಬಿತ್ತು.

ಅಂದೊಂದರಿ ಮಾಷ್ಟ್ರುಮಾವ° ಹೇಳಿದ ಪ್ರಕಾರ, ಪಂಜ ಹೊಡೇಣ ಕೆಲವು ಮನೆಗಳಲ್ಲಿಯೂ, ವಿಟ್ಳ ವ್ಯಾಪ್ತಿಯ ಕೆಲವು ಮನೆಗಳಲ್ಲಿಯೂ ಸಾಯಿಬಾಬನ ಪ್ರಭಾವ ರಜ ಒಳ್ಳೆತ ಇದ್ದಡ!
ಅದು ಅಪ್ಪನ್ನೇ ಹೇಳಿ ಅನುಸುತ್ತು ಒಂದೊಂದರಿ ಒಪ್ಪಣ್ಣಂಗೆ. ಚೊಕ್ಕಾಡಿ, ಅಳಿಕೆಗಳಲ್ಲಿ ಅವರ ಹೆಸರಿನ ಶಾಲೆಗಳೇ ಇದ್ದನ್ನೇ, ಗುರ್ತಕ್ಕೆ.
ಇದೆರಡೇ ಅಲ್ಲ, ಇನ್ನೂ ನೂರಾರು ವಿದ್ಯಾಸಂಸ್ಥೆ ಸಾಯಿಬಾಬ ಹುಟ್ಟುಹಾಕಿದ್ದವಡ.
~
ಮೊನ್ನೆಂದಲೇ ಉಶಾರಿಲ್ಲದ್ದೆ ಮನುಗಿದಲ್ಲೇ ಆಗಿದ್ದಿದ್ದವು, ಸಾಯಿಬಾಬಾ. ಅಂಬಗಳೇ ಟೀವಿಲಿ, ಪೇಪರಿಲಿ, ರೇಡ್ಯಲ್ಲಿ ಅವರ ಬಗ್ಗೆ ಜೋರು ಬಂದುಗೊಂಡಿತ್ತು. ಈಗ ಪಂಜಚಿಕ್ಕಯ್ಯ ಹೀಂಗೆ ಹೇಳುವಗ ಕೆಲವೆಲ್ಲ ನೆಂಪಾತು –
ಆರೋಗ್ಯ, ಆಹಾರ, ವಿದ್ಯೆ, ಆಶಿರ್ವಾದ – ಇವೆಲ್ಲವನ್ನೂ ಯಥೇಷ್ಟವಾಗಿ ಕೊಟ್ಟುಗೊಂಡು ಬಯಿಂದವಡ, ಶಿಷ್ಯವರ್ಗಕ್ಕೆ.
ತೆಲುಗುದೇಶದ ಆಂಧ್ರಪ್ರದೇಶಲ್ಲಿ “ಸತ್ಯ”ನಾರಾಯಣ ರಾಜು – ಆಗಿ ಹುಟ್ಟಿದ ಈ ವೆಗ್ತಿ, ಸಣ್ಣ ಇಪ್ಪಗಳೇ ದೈವೀಕ ಅಂಶ ಹೊಂದಿಗೊಂಡಿತ್ತಿದ್ದವಡ.
ಮುಂದೆ ಅವ್ವೇ “ಸತ್ಯ” ಸಾಯಿ ಬಾಬಾ ಆಗಿ ಪ್ರಸಿದ್ಧಿಗೆ ಬಂದವಡ.

ಆರೋಗ್ಯ:
ಬಡಪ್ಪತ್ತಿಲಿ ಇದ್ದೋರಿಂಗೆ ಆರೋಗ್ಯ ದೂರ – ಹೇಳ್ತ ಕಾಲಲ್ಲಿ ಒಂದು ತಲೆಮಾರು ಹಿಂದಂಗೆ ಇತ್ತು. ಸರಿಯಾದ ಮದ್ದುಗೊ ಸಿಕ್ಕದ್ದೆ ಸುಮಾರು ಜೆನ ಬಡವರು ನರಳಿಗೊಂಡು ಇದ್ದಿದ್ದವಡ.
ಆ ಸಂದರ್ಭಲ್ಲಿಯೇ, ದೇವರ ಹಾಂಗೆ ಈ ಬಾಬ ಒಳ್ಳೆ ಗುಣಮಟ್ಟದ ಆಶ್ಪತ್ರೆ ಕಟ್ಟುಸಿ, ಸಾವಿರಾರು, ಲಕ್ಷಾಂತರ ಜೆನಂಗೊಕ್ಕೆ ಒಳ್ಳೆ ಆರೋಗ್ಯ ಸಿಕ್ಕುತ್ತ ನಮುನೆ ಮಾಡಿದವಡ.

ಅಪ್ಪು, ಉಂಬಲೆ ಇಲ್ಲದ್ದ ಕೋಚಣ್ಣ ಟಯಿಲರುದೇ ಲಕ್ಷಾಂತರ ರುಪಾಯಿಯ ಬೈಪಾಸು ಓಪ್ರೇಶನು ಮಾಡುಸಿಗೊಂಡು ಬಂದು, ಈಗ ನೆಮ್ಮದಿಲಿ ಇಲ್ಲೆಯೋ?
ದೇವರೇ ಹುಟ್ಟಿ ಬಂದದೋ – ಅಪ್ಪೋ ಅಲ್ಲದೋ, ಉಮ್ಮಪ್ಪ!
ಆದರೆ ಈ ನಮುನೆ ಸಾವಿರಾರು ಜೆನರ ಬದುಕ್ಕಿಸಿ, ಒಳಿಶಿ, ಬೆಳೆಶಿ ಆರೋಗ್ಯಪಡುಸುತ್ತ ಕಾರ್ಯ ಮಾಡಿ ದೇವರೇ ಆಗಿಬಿಟ್ಟವು.

ಆಹಾರ:
ಆಹಾರವೇ ಬ್ರಹ್ಮ ಹೇಳ್ತ ಬ್ರಹ್ಮತತ್ವದ ಬಗ್ಗೆ ನಾವು ಕಳುದ ವಾರ ಮಾತಾಡಿದ್ದು.ಅಪ್ಪು, ಅದಿಲ್ಲದ್ದರೆ ಜೀವನ ಇದ್ದೋ?
ಅನಾರೋಗ್ಯದೋರಿಂಗೆ ಆರೋಗ್ಯ ಕೊಡುದು ಒಂದು ಕಾರ್ಯ. ಅದರಿಂದಲೂ ಮುಖ್ಯವಾಗಿ – ಅಶನ, ನೀರು, ನೆರಳು ಇಲ್ಲದ್ದೋರಿಂಗೆ ಒದಗುಸಿ ಕೊಡ್ತದು.
ಅಪ್ಪು, ಕಡಪ್ಪಕಲ್ಲು ಇಲ್ಲೆಯೋ – ಆ ಊರಿಲಿ ಇಡೀ ಕಡಪ್ಪ ಕಲ್ಲಿನ ನಮುನೆ ಒಣಕ್ಕೊಣಕ್ಕಡ, ನೀರಿಲ್ಲೆ.
ಕುಡಿವಲೇ ಇಲ್ಲೆ, ಇನ್ನು ಕೃಷಿಗೆಲ್ಲಿಂದ? ಸರಿಯಾದ ನೀರು ಇಲ್ಲದ್ದೆ ಅನಾರೋಗ್ಯ ಸುರು ಆಗಿತ್ತಡ ಆ ಊರಿಲಿ.
ಹಾಂಗಾಗಿ ಅಲ್ಲಿಗೆ ಕುಡಿವ ನೀರಿನ ವೆವಸ್ತೆಯ ಧರ್ಮಾರ್ಥ ಮಾಡಿ ಕೊಟ್ಟವಡ.
ಅದೆಂತ ಗೋರ್ಮೆಂಟು ವೆವಸ್ತೆಯ ಹಾಂಗಿರ್ತದಲ್ಲ, ಒಳ್ಳೆ – ಶುದ್ಧ ನೀರು ಎಲ್ಲೋರ ಮನೆಬಾಗಿಲಿಂಗೆ ಎತ್ತುತ್ತ ನಮುನೆಲಿ.
ಇದೇ ನಮುನೆಯ ಕಾರ್ಯಂಗೊ ಮತ್ತೆ ತೆಮುಳುನಾಡಿಲಿಯೂ ಮಾಡಿದ್ದವಡ.
ಆಸರಿಲಿ ಇದ್ದೋನಿಂಗೆ ಒಂದು ಚಮ್ಚ ನೀರು ಕೊಡ್ತದು ಬ್ರಹ್ಮನೇ ಸಿಕ್ಕಿದ ನಮುನೆ ಅಲ್ಲದೋ?

ವಿದ್ಯೆ:
ಆರೋಗ್ಯ ಆತು, ಆಹಾರವೂ ಸಿಕ್ಕಿತ್ತು.
ವೆಗ್ತಿತ್ವ ಬೆಳವಲೆ ಬೇಕಾದ್ಸೆಂತರ? ವಿದ್ಯೆಯೇ ಅಲ್ಲದೋ? ಹ್ಮ್!
ಶ್ರೇಷ್ಠ ದಾನಂಗಳಲ್ಲಿ ಒಂದಾದ ವಿದ್ಯಾದಾನವನ್ನೂ ಇವು ಸುರು ಮಾಡಿದವಡ.
ಆಧುನಿಕ ವಿದ್ಯಾಭ್ಯಾಸ ಮಾಂತ್ರ ಅಲ್ಲದ್ದೆ, ನಮ್ಮ ಸನಾತನ ವೇದಂಗೊ, ಉಪನಿಷತ್ತುಗೊ, ಸಂಸ್ಕೃತ – ಸಾಹಿತ್ಯಂಗೊ, ಎಲ್ಲವನ್ನುದೇ ಹೇಳಿಕೊಡ್ತ ಶಾಲೆಗಳ ಸುರುಮಾಡಿದವಡ.
ಇದರಿಂದಾಗಿ ಲಕ್ಷಾಂತರ ಜೆನಂಗೊ ವಿದ್ಯಾವಂತರಾಗಿ, ಮುಂದಾಣ ಸಮಾಜದ ದಾರಿ ದೀಪ ಅಪ್ಪಲೆ ಕಾರಣೀಭೂತರಾದವಡ.
ವಿದ್ಯೆಯ ಪ್ರೋತ್ಸಾಹ ಕೇವಲ ಶಾಲೆ ಮಾಂತ್ರ ಮಾಡಿ ಅಲ್ಲ, ಬದಲಾಗಿ ಒಳ್ಳೊಳ್ಳೆ ಶಿಕ್ಷಕರಿಂಗೆ ಪ್ರಶಸ್ತಿ, ಗೌರವಂಗಳನ್ನೂ ಕೊಟ್ಟುಗೊಂಡು ಇತ್ತಾಡ.

ಆಶೀರ್ವಾದ:
ದೈಹಿಕ ಶರೀರಕ್ಕೆ ಕೊಶಿ ಅಪ್ಪಲೆ ಬೇಕಾದ್ಸು ಸಿಕ್ಕಿರೆ ಇನ್ನೆಂತರ ಬೇಕು? ಇನ್ನು ಆಧ್ಯಾತ್ಮಿಕ ಮನಸ್ಸಿಂಗೆ ಆಹಾರ ಸಿಕ್ಕೇಕು. ಅದೆಂತರ?
ಅದುವೇ ಗುರು – ಆಶೀರ್ವಾದ.
ಅಪ್ಪು, ಅಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗುಸಿಗೊಂಡ ವೆಗ್ತಿಗೊ ಸಮಾಜಕ್ಕೆ ದಾರಿ ತೋರುಸೇಕು.
ಹಾಂಗಾಗಿ, ನಿತ್ಯವೂ ಸಮಾಜ ಹಿತಲ್ಲಿ ಚಿಂತನೆ ಮಾಡ್ತ ಈ ಸಾಯಿಬಾಬಾ, ಸಮಾಜಕ್ಕೆ ಬೇಕಾದ ಹಾಂಗೆ ಆಧ್ಯಾತ್ಮಿಕ ಮಾರ್ಗದರ್ಶನ ಕೊಟ್ಟುಗೊಂಡಿತ್ತಿದ್ದವಡ.
ಇದರಿಂದಾಗಿ ಸಹಸ್ರ ಸಹಸ್ರ ಸಂಖೆಯ ದೇಶ ವಿದೇಶದೋರು ಹಿಂದೂ ಧರ್ಮ ಗುರುಗೊ ಹೇಂಗಿರ್ತವು ಹೇಳ್ತರ ಬಗ್ಗೆ ತಿಳಿವ ಹಾಂಗಾತು.
ಅಪ್ಪಲೆ ಪೊರ್ಬುಗಳೂ ಲೋಕ ಇಡೀ ಈ ಕಾರ್ಯಂಗಳ ಮಾಡಿದ್ದರೂ, ಈ ಸತ್ಯ ಸಾಯಿ ಬಾಬಾ ಶುದ್ಧ ಸನಾತನ ಹಿಂದೂ ಧರ್ಮವ ಹರಡಿದ್ದಲ್ಲದೋ? ಅದುವೇ ಕೊಶಿ!
ಈ ಮೇಗಾಣ ಎಲ್ಲಾ ಕಾರ್ಯಂಗಳಿಂದಾಗಿ ಹಿಂದೂ ಧರ್ಮ ತುಂಬ ಗಟ್ಟಿ ಅಪ್ಪಲೆ ಕಾರಣ ಆತು ಹೇಳ್ತದು ಮನಸ್ಸಿಂಗೆ ಅತ್ಯಂತ ಕೊಶಿಯ ವಿಚಾರ!
~
ಇಷ್ಟರ ಯೋಚನೆಮಾಡಿಗೊಂಡು ಬಪ್ಪಗ ಚಟ್ಟಂಚಾಲು ಕಳಾತು.
ಪಂಜಚಿಕ್ಕಯ್ಯ ಎಂತದೂ ಮಾತಾಡಿದ್ದವಿಲ್ಲೆ. ಜೋರು ಗಾಳಿಯೂ ಬಡ್ಕೊಂಡಿತ್ತು, ಮೆಲ್ಲಂಗೆ ಮಾತಾಡಿರೆ ಕೇಳಲೂ ಕೇಳ ಇದಾ!
~
ಅಪ್ಪು, ನಮ್ಮ ಊರಿಂಗೂ ಒಂದು ಸಾಯಿ ಬಾಬಾ ನ ಅಗತ್ಯ ಇದ್ದಲ್ಲದೋ?
ದಿನ ಉದಿ ಆದರೆ ಕೆಂಪು ಕೊಡಿ ಹೊಡ್ಕೊಂಡು ಕೊಂಕು ಮಾತಾಡ್ತ ಅರೆವಾಶಿ, ಅಲ್ಲದ್ದರೆ ಪಚ್ಚೆ ಕೊಡಿ ಹಿಡ್ಕೊಂಡು ಪೆದಂಬು ಮಾತಾಡ್ತ ಇನ್ನರೆವಾಶಿಯ ಎಡಕ್ಕಿಲಿ ನಮ್ಮ ಸನಾತನತೆ ಒಳಿಶುತ್ತದು ಹೇಂಗೆ?
ಆ ದೃಷ್ಟಿಲಿ ನೋಡಿರೆ, ಪುರ್ಬುಗಳ ಎಡಕ್ಕಿಲಿ ಪುಟಬರ್ತಿ ಒಂದು ಆಶಾಕಿರಣವೇ ಅಲ್ಲದೋ?
~
ಪುಟ್ಟ ಹೇಳಿರೆ ಪುಂಚ ಹೇಳಿ ಅರ್ತ ಆಡ. ಪರ್ತಿ – ಹೇಳಿರೆ ಸಾಲು.
ಪುಂಚಂಗಳ ಸಾಲೇ ಇದ್ದ ಊರಿಂಗೆ ಪುಟ್ಟಪರ್ತಿ ಹೇಳಿ ಹೆಸರಾತು. ನಮ್ಮ ಆಡುಮಾತಿಲಿ ಪುಟಬರ್ತಿ ಹೇಳಿ ಆಗಿತ್ತಷ್ಟೆ.
ಈಗಳೂ ಹಾಂಗೇ, ನಮ್ಮೊಳದಿಕ್ಕೆ ಯೇವ ಪುಂಚಲ್ಲಿ ಯೇವ ಹಾವಿರ್ತು ಹೇಳಿಕ್ಕಲೆಡಿಯ. ಯೇವ ಗಳಿಗೆಗೆ ಎದ್ದು ಕೊಡಪ್ಪುಲೆ ಬಕ್ಕು ಹೇಳಿಯೂ ಗ್ರೇಶಿಕ್ಕಲೆಡಿಯ.
ಹೀಂಗಿರ್ತ ಪುಟ್ಟಪರ್ತಿಗೊ ದೇಶ ಇಡೀಕ ಆದರೆ ರಜ ನೆಮ್ಮದಿಲಿ ಇಕ್ಕು.
ಅಲ್ಲದೋ?
~
ಸಾಯಿಬಾಬಾ ದೇವರಾದ್ದದು ಜೆನ್ಮದಾರಭ್ಯವೋ?
ಅವು ಕೊಟ್ಟ ಭಸ್ಮ ಪ್ರಸಾದವೆಯೋ?
ಅವರ ಸ್ಪರ್ಶ ಆಶೀರ್ವಾದವೋ?
ಆಗಿಪ್ಪಲೂ ಸಾಕು, ಅಲ್ಲದ್ದೆ ಇಪ್ಪಲೂ ಸಾಕು.
ಆದರೆ ಈ ಮೇಗಾಣ ನಾಕು ದಾನಂಗಳಿಂದಾಗಿ ನಿಜವಾದ ದೈವತ್ವ ಬಂದುಬಿಟ್ಟತ್ತು. ಅಲ್ಲದೋ?
ಅದು ದೇವರಲ್ಲ, ಲೊಟ್ಟೆ – ಹೇಳಿ ಅಂತೇ ಹೊತ್ತೋಪಲೆ ಬೈತ್ತವಲ್ಲದೋ – ಅವು ಯೇವದಾರೊಂದು ಕಾರ್ಯ ಮಾಡಲಿ, ಅವಕ್ಕೂ ದೈವತ್ವ ಬಂದು ಬಿಡುಗು.
ಅದಕ್ಕೇ ನಮ್ಮ ಪಂಜ ಚಿಕ್ಕಯ್ಯನ ಹಾಂಗೆ ಸುಮಾರು ಕುಟುಂಬಂಗೊ ನಿತ್ಯ ಸಾಯಿಭಜನೆ ಮಾಡಿ, ಭಗವತತ್ವವ ಆರಾಧನೆ ಮಾಡ್ತದು.
ಒಳ್ಳೆಯ ಅಂಶ ಎಲ್ಲಿದ್ದರೂ ಒಳ್ಳೆದೇ ಅಲ್ಲದೋ?

ಒಂದೊಪ್ಪ: ದೇವರು ನೇರವಾಗಿ ಕಾಂಬಲೆ ಸಿಕ್ಕದ್ದರೂ, ಮಹಾತ್ಮರ ಕಾರ್ಯದ ಮೂಲಕ ಕಾಂಬಲೆ ಸಿಕ್ಕುತ್ತವು, ಎಲ್ಲಾ ಯುಗಂಗಳಲ್ಲಿಯೂ.
ಅಲ್ಲದೋ?

ಸೂ:

23 thoughts on “ಮತ್ತೊಂದರಿ ಬದ್ಕಿ ಬಾ, ಸತ್ಯಸಾಯಿ ಬಾ..ಬಾ..!!

  1. ಒಪ್ಪಣ್ಣಾ, ನಮ್ಮ ಸನಾತನ ಸಂಸ್ಕೃತಿಯ ಇಡೀ ಜಗತ್ತಿಂಗೆ ತೋರ್ಸಿ ಕೊಟ್ಟ ಮಹಾನ್ ಚೇತನ ಮರೆ ಆದ್ದದು ಒಂದು ದೊಡ್ಡ ನಷ್ಟವೇ! ಒಂದು ಕಾಲಲ್ಲಿ ನಾಸ್ತಿಕತೆ ಜನಂಗಳ ಎಲ್ಲ ಆವರಿಸಿಗೊಂಡಿಪ್ಪ ಕಾಲಲ್ಲಿ ಜನಂಗಳಲ್ಲಿ ಆಸ್ತಿಕತೆಯ ಬಗ್ಗೆ ಪ್ರಚಾರ ಮಾಡಿ ನಮ್ಮ ಸಂಸ್ಕೃತಿಯ ನಾಶ ಆಗದ್ದ ಹಾಂಗೆ ತಡವಲೆ ಮುಂದುವರುದ ಸಾಯಿಬಾಬ, ಜನಂಗಳ ತನ್ನ ಕಡೆಂಗೆ ಆಕರ್ಷಣೆ ಮಾಡ್ಲೆ ಬೇಕಾಗಿ ಪವಾಡ ಪುರುಷ ಆದವು. ಹಿಂದೆ ಯೇಸುದೇ ಪವಾಡಂಗಳ ಮಾಡಿಯೇ ಜನಂಗಳ ಸೇರ್ಸಿದ್ದದು ಅಲ್ಲದಾ? ಜನಂಗ ಸೇರಿದ ಮೇಲೆ ಪವಾಡ ಮಾಡೆಕ್ಕಾಯಿದಿಲ್ಲೆ ಯೇಸುಗೆ!! ಸಾಯಿಬಾಬಾ ಅವರ ತತ್ವಂಗ, ಅವರ ಜನಂಗಳ ಅಧ್ಯಾತ್ಮಕ್ಕೆ ತೆಕ್ಕೊಂಡು ಹೋದ ರೀತಿ, ಜನಂಗಳ ಸಂಘಟನೆ ಮಾಡಿ ಒಂದು ಶಿಸ್ತಿನ ವಾತಾವರಣ ಮಾಡಿದ ರೀತಿ ಎಲ್ಲವೂ ಅನುಕರಣೀಯ ಅಲ್ಲದಾ? ನೀನು ಹೇಳಿದ ಹಾಂಗೆ ಆರೋಗ್ಯ, ಆಹಾರ, ವಿದ್ಯೆ, ಆಶೀರ್ವಾದ, ಇದೆಲ್ಲದರಲ್ಲಿಯೂ ಜನಂಗೊಕ್ಕೆ ಉತ್ಕೃಷ್ಟದ್ದೇ ಸಿಕ್ಕಿದ್ದು ಹೇಳುದರಲ್ಲಿ ಸಂಶಯ ಇಲ್ಲೆ. ಬೇರೆ ಎಲ್ಲಿಯೂ ಬೇಡ, ನಮ್ಮ ಊರಿಲಿಯೇ ಅವರಿಂದಾಗಿ ನಡೆತ್ತಾ ಇಪ್ಪ ಸಂಸ್ಥೆಗಳಲ್ಲಿ ನಾವು ಕಾಣುತ್ತು ಅಲ್ಲದಾ? ಜನಸೇವೆ ಮಾಡುತ್ತದರಲ್ಲಿ ಅವರ ಶಿಷ್ಯರು ಎಲ್ಲಿಯೂ ಹಿಂದೆ ಇಲ್ಲೆ. ಎಲ್ಲಿ ಅಗತ್ಯ ಇದ್ದೋ ಅಲ್ಲಿ ಎಲ್ಲೊರೂ ಸೇರಿ ಜನಸೇವೆ ಮಾಡ್ತವು. ಇದು ಬಾಬಾ ತೋರ್ಸಿ ಕೊಟ್ಟ ದಾರಿಂದಾಗಿಯೇ ಅಲ್ಲದಾ?

    ನಮ್ಮ ದೇಶಲ್ಲಿ ಸುಮಾರು ಹೀಂಗಿಪ್ಪ ಗುರುಗೋ ನವಗೆಲ್ಲ ದಾರಿ ತೋರ್ಸಿ ಕೊಟ್ಟಿಕ್ಕಿ, ನಮ್ಮ ದಾರಿ ಸುಲಾಬ ಮಾಡಿದ್ದವು. ನಾವು ಅವು ತೋರ್ಸಿದ ಒಳ್ಳೆ ಸಂದೇಶಂಗಳ, ಸಂಘಟನೆಯ ಮೂಲತತ್ವವ, ಅದರ ಮೂಲಕ ಬಪ್ಪ ಶಿಸ್ತಿನ, ಇದೆಲ್ಲದರಿಂದ ಸಿಕ್ಕುವ ಜೀವನ ತತ್ವವ ನಮ್ಮ ಜೀವನಲ್ಲಿ ಅಳವಡಿಸಿಗೊಂಡು ನಮ್ಮತನವ ಒಳಿಶಿ, ಬೆಳೆಶಿದರೆ ನಮ್ಮ ಜೀವನ ಸಾರ್ಥಕ ಅಕ್ಕು.

    ನೀನು ಹೇಳಿದ ಹಾಂಗೆ ಸಾಯಿಬಾಬಾನ ಜನಂಗೊಕ್ಕೆ ಬೇಕಾಗಿ ಮಾಡಿದ ಕೆಲಸಂಗಳಿಂದ ಅವು ದೈವತ್ವ ಪಡದವು. ನಮ್ಮ ಕೆಲಸ ದೇವರು ಮೆಚ್ಚುವ ಕೆಲಸ ಆದರೆ ಅದುವೇ ನಿಜವಾದ ದೇವರ ಸೇವೆಯುದೇ ಅಲ್ಲದಾ?
    ಒಂದೊಪ್ಪ ಲಾಯ್ಕಾಯಿದು.

  2. ಒಪ್ಪಣ್ಣಾ!
    [ಖಾರ ಹೊಗೆಸೊಪ್ಪಿನ ಕುಣಿಯ]
    ಇಲ್ಲಿಗೆ ಹತ್ತರೆ ಇಪ್ಪ ಪೆರಿಯದ ನವೋದಯ ಶಾಲೆಲಿ ಆನು ಏಳು ವರ್ಷ ಕಲ್ತದು.
    ಓ.. ಸುಭಗಣ್ಣನೇ ಅಲ್ಲದೋ ಅದು! ಎನಗೆ ಅಂದಾಜಿ ಆಯಿದು, ಆದರೂ ಎರಡು ಕುಳು ಕೊಟ್ಟದು! 🙂
    [ಒಳ್ಳೆಯ ಅಂಶ ಎಲ್ಲಿದ್ದರೂ ಒಳ್ಳೆದೇ] ಖಂಡಿತ.
    [ದೇವರು ನೇರವಾಗಿ ಕಾಂಬಲೆ ಸಿಕ್ಕದ್ದರೂ, ಮಹಾತ್ಮರ ಕಾರ್ಯದ ಮೂಲಕ ಕಾಂಬಲೆ ಸಿಕ್ಕುತ್ತವು]
    ಕಾಟಂಕೋಟಿಗಳ ಮಾತಾಡುವಗಳುದೇ ಒಳ್ಳೊಳ್ಳೇ ಮಾತು ಹೇಳಿದ್ದೆ.

  3. ನಿಜಕ್ಕು ಸಾಯಿಬಾಬಾ ಮಾಡಿದ ಕೆಲಸ ಮೆಚ್ಚೆಕ್ಕಾದ್ದೇ,,,,,,,,, ಒೞೇ ಲೇಖನ ಒಪ್ಪಣ್ಣೋ……..ಖುಶಿ ಆತು ಓದಿ

  4. ಶುದ್ದಿಯ ಪೀಠಿಕೆ, ಶುದ್ದಿ, ಅಂತ್ಯ, ಒಪ್ಪ ಎಲ್ಲವೂ ಲಾಯಿಕ ಆಯಿದು.
    ಶೂನ್ಯಂದ ಸೃಷ್ಟಿ ಮಾಡುವದು ಮಾತ್ರ ಪವಾಡ ಅಲ್ಲ.
    ಜೆನಂಗೊಕ್ಕೆ ಬೇಕಾದ ಮೂಲ ಭೂತ ಸೌಕರ್ಯಂಗಳ (ನೀರು, ಆಹಾರ, ಆರೋಗ್ಯ) ಅಷ್ಟೊಂದು ದೊಡ್ಡ ಪ್ರಮಾಣಲ್ಲಿ ದರ್ಮಾರ್ಥವಾಗಿ ಒದಗಿಸಿ ಕೊಟ್ಟ ಬಾಬಾ, ಮಾಡಿದ್ದು ಪವಾಡವೇ.
    ಅಧ್ಯಾತ್ಮ ವಿಚಾರಂಗಳ ಮೂಲಕವೂ ಜೆನಂಗಳ ಮನಸ್ಸಿನ ಗೆದ್ದವನೇ. ಎಲ್ಲರೂ ರುದ್ರ ಕಲಿಯಿರಿ ಹೇಳ್ತ ಅದೇಶವ ಕೊಟ್ಟು ಅಲ್ಲಿ ಒಂದು ಜಾಗೃತಿಯ ಮೂಡಿಸಿದವರಲ್ಲಿ ಬಾಬಾ ಕೂಡಾ ಒಬ್ಬ.
    ಅವ ಮಾಡಿದ ಆಂದೋಲನಲ್ಲಿ ನಿಸ್ವಾರ್ಥ ಸೇವೆ ಇತ್ತಿದ್ದಲ್ಲದ್ದೆ, ಬೇರೆ ಮತದವರ ಹಾಂಗೆ ಒಲಿಸಿ ಮತಾಂತರದ ಉದ್ದೇಶ ಇತ್ತಿದ್ದಿಲ್ಲೆ. ಈ ಒಳ್ಳೆ ಕಾರ್ಯಂಗಳಿಂದಾಗಿಯೇ ಹಿಂದುಗೊ ಬೇರೆ ಮತಕ್ಕೆ ಹೋಗದ್ದೆ ಆದ ಘಟನೆಗೊ ಎಷ್ಟೋ ಇಕ್ಕು.
    ಹೀಂಗಿಪ್ಪ ಆಧ್ಯಾತ್ಮ ಗುರುಗೊ ಬಂದಷ್ಟು ಹಿಂದೂ ಸಂಸ್ಕೃತಿ ಒಳಿಗು. ಈ ದಾರಿಲಿ ಮುಂದೆ ಹೋವ್ತಾ ಇಪ್ಪ ಮಾತಾ ಅಮೃತಾನಂದಮಯಿ, ರವಿಶಂಕರ್ ಗುರೂಜಿ, ಬಾಬಾ ರಾಂದೇವ್ ಎಲ್ಲರೂ ನೆಂಪಿಂಗೆ ಬಂದವು.

  5. ”ಒಳ್ಳೆ ಅಂಶ ಎಲ್ಲಿದ್ದರೂ ಒಳ್ಳೇದೆ ಅಲ್ಲದಾ?” ತುಂಬಾ ಒಳ್ಳೆ ಮಾತು ಒಪ್ಪಣ್ಣ.ಒಳ್ಳೆ ಅಂಶ ವೈರಿಗಳಲ್ಲಿದ್ದರೂ ಸ್ವೀಕರಿಸುವ ಮನೋಭಾವ ಬೇಕು.

    ಸಾಯಿಬಾಬನ ಮೇಲೆ ಎಷ್ಟು ಅಪಪ್ರಚಾರ ಆದರೂ ಅವರ ಜನ ಹಿತ ಕಾರ್ಯನ್ದಾಗಿ ಅವು ದೀನ ಬಂಧು ಆದವು .ಅವರ ಜನ ಹಿತ ಕಾರ್ಯನ್ಗೋ ಹೀಂಗೆ ಮುಂದುವರಿಯಲಿ ಹೇಳಿ ಹಾರೈಸಿದೋರ ಒಟ್ಟ೦ಗೆ ಎನ್ನದು ಒಂದು ಧನಿ ಸೇರುಸುತ್ತೆ.

  6. ನಿರಾಕರಣವಾದಿಗಳ ಹೊ೦ಚು ಸ೦ಚುಗಳ ಕಿರು೦ಚಿ ಇದ್ದರೂ ಪರ೦ಚದ್ದೇ ಸಾಕಾರವಾಗಿ ಸ೦ಚರಿಸಿದ ದೈವಾ೦ಶವ ವರ್ಣಿಸುವ – ಇ೦ಚಿ೦ಚಾಗಿ ಘಟನಾ ಸರಣಿಗಳ ಪೋಣಿಸಿ ಸಾರವ ಪುರು೦ಚುವ `ಶಬ್ದ ವಿರಿ೦ಚಿ’ ಒಪ್ಪಣ್ಣನ ಶುದ್ದಿ – ಮನಸ್ಸಿನ ಅ೦ಚು ಅ೦ಚಿ೦ಗೂ ತಲಪಿ ಮಿ೦ಚುವ೦ತಾದ್ದು !!

    1. ಮಿಂಚಿನ ಹಾಂಗಿರ್ತ ಮಿಂಚಂಚೆ ಕಂಡು ಮಂಚ್ ತಿಂದಷ್ಟು ಕೊಶಿ ಆತು.

    2. “ಶಬ್ದ ವಿರಿ೦ಚಿ”- ಒಪ್ಪಣ್ಣನ ಹೆಸರು ಹೇಳಿ ದೆನಿಗೇಳಿದ್ದೊ?
      ಮಹೇಶನ ಶಬ್ದ೦ಗಳ ಕೋಲ್ಮಿ೦ಚು ಎನ್ನ ಮನಸ್ಸಿಲಿಯೂ ಗುಡುಗಿನ ಶಬ್ದ ಹೆರಡುಸಿತ್ತದಾ.ಮೈ ಜು೦ ಆತು.

      “ಎ೦ಚು ಹತ್ತಿಯೆ ಮನೆಯ ಮಾಡಿನ
      ಹ೦ಚಿನ೦ಚಿಲಿ ಕೆಲಸ ಮಾಡೊಗ
      ಪ೦ಚು ನುಡಿಗಳ ಬ೦ಚು ಕಳುಸಿದ° ಲ೦ಚವಿಲ್ಲದೆಯೇ
      ಕ೦ಚು ಪಾತ್ರದಿ ಮಡುಗಿದಾ ಲಾ
      ವ೦ಚ ಹಾಕಿದ ನೀರು ಕುಡುದೂ
      ಮ೦ಚ ಹತ್ತಿರು ಒರಕ ಸ೦ಚದು ಗೆಲ್ಲ ಕಿ೦ಚಿತ್ತೂ”

      1. ಒಪ್ಪಕ್ಕೆ ಒಪ್ಪ ಕೊಡೆಕಾದಷ್ಟು ಒಪ್ಪ ಇದ್ದು ನಿ೦ಗಳ ಒಪ್ಪ ರಘು ಭಾವಾ.. ಒಪ್ಪ೦ಗೊ..

  7. ಶುದ್ಧಿಯ ಕೊಂಡು ಹೋದ ರೀತಿ ಮನಸ್ಸಿಂಗೆ ಮುಟ್ಟುತ್ತು..ಪಂಜ ಚಿಕ್ಕಯ್ಯನ ಮೌನದ ಬಗ್ಗೆ ಒಪ್ಪಣ್ಣ ವಿವರ್ಸಿದ ರೀತಿ ಲಾಯಿಕ ಆಯಿದು..ಸತ್ಯ ಸಾಯಿಬಾಬಾ ಭೌತಿಕ ಶರೀರವ ತ್ಯಜಿಸಿದರೂ ಜಗತ್ತಿನಾದ್ಯಂತ ಲಕ್ಷಾಂತರ ಜನಂಗಳ ಮನಸ್ಸಿಲಿ ಲೋಕಹಿತಕ್ಕೆ ಬೇಕಾಗಿ ಮಾಡಿದ ಕಾರ್ಯಂಗ ಮರೆಯ.ನಮ್ಮ ದೇಶಲ್ಲಿ ಇಂಥಾ ಆಧ್ಯಾತ್ಮಿಕ ವ್ಯಕ್ತಿಗ ಧರ್ಮದ ಅವನತಿ ಅಪ್ಪಗ ಧರ್ಮವ ಉದ್ಧರುಸಲೆ ಅವತಾರ ಎತ್ತುತ್ತಾ ಇರ್ತವು.ಒಳ್ಳೆ ಶುದ್ಧಿಗೆ ಧನ್ಯವಾದ…

  8. ಸಮಯೋಚಿತ, ಉತ್ತಮ ಶುದ್ದಿಗೆ ಒಪ್ಪಣ್ಣ೦ಗೆ ಮನಃಪೂರ್ವಕ ಒಪ್ಪ೦ಗೊ..
    ಸಾಯಿ ಬಾಬ ಮಾಡಿದ ಸಮಾಜ ಸೇವೆಗೊ ಲೋಕಕ್ಕೇ ಮಾದರಿ.
    ನಿಜವಾಗಿ ನೋಡಿರೆ ಈ ಪ್ರಪ೦ಚದ ಸಕಲ ಚರಾಚರ೦ಗಳಲ್ಲಿಯುದೆ ದೈವತ್ವ ಇದ್ದು, ಇದರ ಕಾ೦ಬಲೆ ಎಷ್ಟು ಎಡಿತ್ತು ಹೇಳುವದು ಬೇರೆ ವಿಷಯ. ದೇವರ ಹುಡ್ಕಿರೆ ದೇವರು ಸಿಕ್ಕುಗು, ದೆವ್ವವ ಹುಡ್ಕಿರೆ ದೆವ್ವವೇ ಸಿಕ್ಕುಗಷ್ಟೆ. ಒಬ್ಬನ ಮೇಲ೦ದಮೇಲೆ ನೋಡಿ, ಪವಾಡ೦ಗಳ ನೋಡಿ ದೇವರು ಹೇಳಿ ಆರಾಧಿಸುವದಕ್ಕಿ೦ತಲೂ ಆ೦ತರ್ಯವ ನೋಡಿ ಅಲ್ಲಿಪ್ಪ ದೇವರ ಗುರುತಿಸೆಕಾದ್ದದು ಮುಖ್ಯ.
    ಸಾಯಿಬಾಬನಲ್ಲಿ ಮಾ೦ತ್ರ ಅಲ್ಲ, ಈಗ ಹುಟ್ಟಿದ ಸಣ್ಣಬಾಬೆ೦ದ ಹಿಡುದು ನೇಣಿ೦ಗೆ ಏರ್ತಾ ಇಪ್ಪ ಕೊಲೆಗಡುಕನಲ್ಲಿ ಕೂಡ ದೈವತ್ವ ಇದ್ದು. ಅದರ ನಿಜವಾಗಿಯೂ ಗುರುತಿಸಲೆ ಎಡಿಗಾತು, ಸ್ವೀಕರಿಸಲೆ ಎಡಿಗಾವ್ತು ಹೇಳಿ ಆದರೆ ಅದು ದೈವ ಸಾಕ್ಷಾತ್ಕಾರಕ್ಕೆ ಸಮ, ಅ೦ಥವರ ಯೋಗಿಗೊ ಹೇಳ್ಳಕ್ಕು ಹೇಳಿ ಎನ್ನ ಅಭಿಪ್ರಾಯ.

  9. ಸಾಯಿ ಬಾಬನೇ ದೇವರು ಹೇಳಿ ಒಪ್ಪುಲಾಗದ್ದ್ರೂ ಅವ ಮಾಡಿದ ಸಮಾಜಮುಖೀ ಸೇವೆಗಳಿಂದಾಗಿ ಒಬ್ಬ ಮಹಾನ್ ಪುರುಷ ಅಂತೂ ಅಪ್ಪು. ಸತ್ಯ ಸಾಯಿ ಟ್ರಸ್ಟ್ ಇನ್ನು ಮುಂದೆಯೂ ಸಮಜಸೇವಾಕಾರ್ಯಂಗಳ ಮುಂದುವರೆಸಲಿ ಹೇಳಿ ಹಾರೈಕೆ.

  10. ನಿಜ, ಪ್ರತಿ ಊರಿಲ್ಲಿಯುದೆ ಪುಟಪರ್ತಿ ಒಂದಿದ್ದರೆ, ದೇಶ ಎಷ್ಟು ಒಳ್ಳೆದಕ್ಕಲ್ಲದೊ ? ವಿದ್ಯೆ, ಆರೋಗ್ಯ, ಊಟ, ನೆಮ್ಮದಿ ಇದಕ್ಕಿಂತ ಶ್ರೀ ಸಾಮಾನ್ಯಂಗೆ ಇನ್ನೆಂತ ಬೇಕು ? ಸಾಯಿ ಬಾಬ ಮಹಾತ್ಮ ಅಪ್ಪಲೆ, ಅವನ ಅಭಿಮಾನಿ ಬಳಗ ಬೆಳವಲೆ, ಅವನ ಉದಾರ ಮನಸ್ಸೇ ಕಾರಣ ಹೇಳ್ತರಲ್ಲಿ ಏವ ಸಂಶಯವೂ ಬೇಡ. ಇನ್ನು ಮುಂದೆ ಅವು ಬೆಳೆಸಿದ ಟ್ರಸ್ಟು, ಈಗಾಣ ಹಾಂಗೆ ಲೋಕೋಪಯೋಗಿಯಾಗಿ ನೆಡೆಯಲಿ. ಅಲ್ಲಿ ಏವದೇ ರಾಜಕೀಯ ಬಾರದ್ದಿರಲಿ.

    ಒಪ್ಪಣ್ಣ, ಏವ್ಗತ್ರಾಣ ಹಾಂಗೆ ಲೇಖನದ ಪೂರ್ವ ಪೀಠಿಕೆ ಲಾಯಕಾಯಿದು. ದೊಡ್ಡಬಾವನೊಟ್ಟಿಂಗೆ ಬೈಕಿನ ಹಿಂದೆ ಕೂದೊಂಡು ಹೋವ್ತ ಗೌಜಿ, ಗಮ್ಮತ್ತೇ ಬೇರೆ. ಎನಗುದೆ ನಿನ್ನದೇ ಅನುಭವ ಆಗಿತ್ತು ಒಪ್ಪಣ್ಣ. ಮನ್ನೆ ಯೇನಂಕೋಡ್ಳಿಂದ ಹೆರಡುವಗ ಮೂರುಸಂದಿ ಆಗಿತ್ತಲ್ಲದೊ ? ಕತ್ಲೆಗೆ ಕುಂಬಳೆಗೆ ಹೇಂಗೆ ಹೋವ್ತಪ್ಪಾ ಹೇಳಿ ತಲೆಬೆಶಿ ಮಾಡೆಂಡಿಪ್ಪಗ ದೊಡ್ಡಭಾವನ ಹೊಸ ಬೈಕಿಲ್ಲಿ ಜಾಗೆ ಇದ್ದು ಹೇಳಿ ಆತು. (ಹೊಸ ಬೈಕಾದರು ಸೀಟಿಲ್ಲಿ ಧೂಳು ಇಪ್ಪದೂ ನಿಜ.) ಏನಂಗೋಡ್ಳು ಗುಡ್ಡೆ ಹತ್ತುವಾಗಳೆ ಮಾತಾಡ್ಳೆ ಸುರು. ಅವನ ಒಟ್ಟಿಂಗೆ ಕೂದೊಂಡು ಹೋದ್ದರಲ್ಲಿ, ದಾರಿ ತಳದ್ದದೇ ಗೊಂತಾಯಿದಿಲ್ಲೆ. ಪಳ್ಳತ್ತಡ್ಕದ ತಿರುಗಾಸುಗಳಲ್ಲಿಯುದೆ, ಮಾತಿನ ಹಾಂಗೇ ಬೈಕಿನ ಸ್ಪೀಡು ಕಡಮ್ಮೆ ಆಯಿದಿಲ್ಲೆ. ಎಂತೆಲ್ಲ ರಂಗು ರಂಗಿನ ವಿಷಯಂಗೊ. ಸೂರಂಬೈಲಿಂಗೆ ಎತ್ತಿ ಅಪ್ಪಗಳೇ ಗೊಂತಾದ್ದದು, ಎನಗೆ ಇಳಿಯಲಾತು ಹೇಳಿ. ಒಪ್ಪಣ್ಣನ ಅನುಭವವೇ ಎನ್ನದುದೆ.
    ಸ್ಟೀಲಿನ ಬಾಲ್ದಿ ಮಡಗಿ ಎಲೆ ವಸ್ಗ್ತ್ರ ತೊಳಕ್ಕೊಂಡಿದ್ದಿದ್ದವ ಆರು ಹೇಳಿ ಗೊಂತಾತದ.

    1. (ಸ್ಟೀಲಿನ ಬಾಲ್ದಿ ಮಡಗಿ ಎಲೆ ವಸ್ಗ್ತ್ರ ತೊಳಕ್ಕೊಂಡಿದ್ದಿದ್ದವ ಆರು ಹೇಳಿ ಗೊಂತಾತದ.)
      ಆನು ಫಸ್ಟಿಂಗೇ ಸುಭಗ ಭಾವನ ಹತ್ತರೆ ಕೇಳಿರೆ ಗೊಂತಕ್ಕು ಹೇಳಿತ್ತಿದ್ದೆ….

  11. ಸಾಯಿ ಬಾಬ ಹಲವು ಸೇವಾಕಾರ್ಯಂಗಳ ಮಾಡಿದ್ದಲ್ಲದ್ದೆ ಸುಮಾರು ಜೆನಂಗೊಕ್ಕೆ ಇಂಥಾ ಕೆಲಸ ಮಾಡ್ಲೆ ಪ್ರೇರಣೆ ಕೊಟ್ಟಿದವು. ಪುಟ್ಟಪರ್ತಿಲಿ ಮುಸ್ಲಿಮರ ಸಂಖ್ಯೆ ಹೆಚ್ಚಪ್ಪಗ ಅವಕ್ಕೆ ಪ್ರಾರ್ಥನೆಗೆ ಅನುಕೂಲಕ್ಕಾಗಿ ಮಸೀದಿ ಕಟ್ಟಿಸಿಕೊಟ್ಟಿದವಡ. ಈ ಮಹಾತ್ಮಂಗೆ ಶ್ರದ್ದಾಂಜಲಿ….

  12. ನಿಜ.ಸತ್ಯ ಸಾಯಿ ಬಾಬಾ ಹಲವಾರು ಜೆನಕ್ಕೆ ಉಪಕಾರ ಮಾಡಿದ ಮಹಾಪುರುಷ.ಅವು ದೇವರೊ,ಅಲ್ಲವೊ ಹೇಳಿ ಚರ್ಚೆ ಮಾಡುದು ತುಂಬಾ ವರ್ಷಂದ ನಡೆತ್ತಾ ಇತ್ತು..ಅವು ದೇವರಲ್ಲದ್ದಿಪ್ಪಲೂ ಸಾಕು.[ದೇವರು ಹೇಂಗಿದ್ದ ಹೇಳಿ ನಿಜವಾಗಿ ಆರಿಂಗೆ ಗೊಂತಿದ್ದು?]
    ಆದರೆ ಶ್ರೀ ಕೃಷ್ಣ ಗೀತೆಲಿ ಹೇಳಿದ್ದ-ಯಾವುದರಲ್ಲಿ ವಿಭೂತಿ[ವಿಶಿಷ್ಟ ಶಕ್ತಿ] ಇದ್ದೊ,ಊರ್ಜಿತವಾದ ಶ್ರೀಮಂತಿಕೆ[ಸಮೃದ್ಧಿ-ಎಲ್ಲಾ ವಿಷಯಲ್ಲೂ] ಎದ್ದು ಕಾಣುತ್ತೊ ಅದು ಎನ್ನ ತೇಜೋಂಶಸಮುದ್ಭವ ಹೇಳಿ ತಿಳುಕ್ಕೊ ಹೇಳಿ.[ಯದ್ಯದ್ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ…..}
    ಹಾಂಗಾಗಿ ಬಾಬಾಂಗೆ ಯಾವುದೊ ಒಂದು ದೈವಿಕ ಅನುಗ್ರಹ ಇತ್ತು ಹೇಳುದು ಸ್ಪಷ್ಟ.ದೇವರು-ಹೇಳಿ ಹೇಳೆಕ್ಕಾದ ಅಗತ್ಯ ಇಲ್ಲೆ.
    ಅವರ ಟ್ರಸ್ಟ್ ಸರಿಯಾಗಿ ನಡೆಕ್ಕು ,ಲೆಕ್ಕ ಪಾರದರ್ಶಕವಾಗಿ ಆಯೆಕ್ಕು,ಸೇವಾಕಾರ್ಯಂಗೊ ಅವಿರತವಾಗಿ ನಡೆಕ್ಕು-ಹೇಳಿ ಎಲ್ಲರ ಆಗ್ರಹ.
    ತುಂಬಾ ಉತ್ತಮ ಲೇಖನ.

  13. ಸಮಾಜಕ್ಕೆ ಮಾಗ೯ದಶ೯ನ ಮಾದಿದ ಮಹಾತ್ಮ೦ಗೆ ಇದು ಒ೦ದು ನೆ೦ಪಿನ ಮಾತು.

  14. “ತಕ್ಕ ಸಮಯಕ್ಕೆ ತಕ್ಕ ಶುದ್ದಿ.” ಉತ್ತಮ ನಿರೂಪಣೆ. ಅಪಾರ ಜೆನಂಗೋ ಇವರ ಉಪಕಾರಂದ ಪ್ರತ್ಯಕ್ಷ ಪರೋಕ್ಷಲ್ಲಿ ಫಲಾನುಭವಿ ಆಯ್ದವು ಹೇಳ್ವಲ್ಲಿ ಎರಡು ಮಾತಿಲ್ಲೆ ಹೇಳಿಗೊಂಡು ನಮ್ಮಲ್ಲಿಂದ ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×