Oppanna.com

ಸೌರ ತಿಂಗಳಿನ ಚಾಂದ್ರಮಾನ ದಿನ – ಪಿತೃಗೊ ಬಪ್ಪ ಸುದಿನ!

ಬರದೋರು :   ಒಪ್ಪಣ್ಣ    on   04/02/2011    42 ಒಪ್ಪಂಗೊ

ಇಡೀ ಬೈಲಿಂಗೇ ಚಳಿ ಇದ್ದರೂ, ಅಂಬೆರ್ಪಿಂಗೆ ಚಳಿ ಇದ್ದೋ? ಇಲ್ಲೆ!
ಹಾಂಗೇ ಆಯಿದಿದಾ ಈಗ – ಈ ಚಳಿಲಿಯೂ ಬೈಲಿಲಿ ಆರಿಂಗೂ ಪುರುಸೊತ್ತಿತ್ತಿಲ್ಲೆ!
ಸುಮಾರು ಜೆಂಬ್ರಂಗೊ – ಉಪ್ನಯನಂಗೊ, ಒರಿಶಾವಧಿ ಪೂಜೆಗೊ, ಎಡಕ್ಕೆಡಕ್ಕಿಲಿ ಮದುವೆಗೊ, ಬದ್ಧಂಗೊ – ಎಲ್ಲವುದೇ ಗವುಜಿಗಳೇ.
ಮನೆಲಿ ಮಕ್ಕೊಗೆ ಪರೀಕ್ಷೆ ಇದ್ದರಂತೂ ಕೇಳುದೇ ಬೇಡ, ಮನೆಯೋರಿಂಗೆಲ್ಲ ಅಂಬೆರ್ಪೇ ಮತ್ತೆ! 😉
ಅಷ್ಟೇ ಅಲ್ಲದ್ದೆ – ನಮ್ಮ ಗುರುಗಳೂ ಮಾಣಿಮಟಲ್ಲಿತ್ತಿದ್ದವು!
ಹೀಂಗಿರ್ತ ಅಂಬೆರ್ಪಿನ ದಿನಕ್ಕೇ ಅಡಕ್ಕೆಕೊಯಿತ್ತ ಬಾಬು ಬಂದು ಅಂಬೆರ್ಪು ಜಾಸ್ತಿಮಾಡಿ ಹಾಕುತ್ಸು ಇಪ್ಪದೇ. – ಜೆಂಬ್ರಂಗೊಕ್ಕೆ ಹೆಚ್ಚಾಗಿ ಹೋಗದ್ದೆ, ಮನೆಲೇ ಕೂರ್ತ ಅಣ್ಣಂದ್ರಿಂಗೂ ಅಂಬೆರ್ಪೇ ಅಂಬೆರ್ಪು!
ಒಟ್ಟಾರೆ ಆರಿಂಗೂ ಪುರುಸೊತ್ತಿಲ್ಲೆ.
~
ಮೊನ್ನೆ ಬೀಸ್ರೋಡುಮಾಣಿಯ ಬದ್ಧ ಕಳಾತು, ಕೂಸಿನ ಮನೆಲಿ.
ಬೈಲಿಂದ ಬೀಸ್ರೋಡಿಂಗೆ ಹೋಗಿ, ಅಲ್ಲಿಂದ ಕೂಸಿನ ಮನಗೆ ಹೋದ್ಸು
ಒಂದು ವೇನಿಲಿ ಜೆನ ಹಿಡಿಯದ್ದೆ ಒಳುದೋರ ಒಂದು ಅಂಬಾಶಿಡ್ರು ಕಾರಿಲಿ ಕರಕ್ಕೊಂಡು ಹೋದ್ಸು.
ಹೆಚ್ಚಿನೋರು, ಕಳೀಯಬಾರದ್ದೋರೆಲ್ಲ ವೇನಿಲೇ ಹೋದ ಕಾರಣ ಕಾರಣ ಕಾರಿಲಿ ಕಾಲಾಡುಸಲೆ ಜಾಗಿ ಇತ್ತು; ಮಾಡಾವು ಕಾರಿನ ನಮುನೆ ಉಪ್ಪಿನಕಾಯಿ ಇತ್ತಿಲ್ಲೆ
ಮಾಷ್ಟ್ರುಮಾವ°, ಆಚಮನೆ ದೊಡ್ಡಣ್ಣ ಎದುರು ಡ್ರೈವರನ ಒಟ್ಟಿಂಗೆ. ಬಾಕಿಒಳುದ ಎಂಗೊ ಕೆಲವು ಜೆನ ಹಿಂದಾಣ ಸೀಟಿಲಿ.
ಅದೆಂತ ಬರೇ ಸಣ್ಣ ಸೀಟಲ್ಲಪ್ಪ, ಹಿಂಡಿಗೋಣಿಯಷ್ಟು ಅಗಲದ ದೊಡಾ ಸೀಟು. ಬೇಕಾರೆ ಎದೂರಾಚಿ ಕೂಪಲಕ್ಕು, ಅಲ್ಲದ್ದರೆ ಹಿಂದಂಗೆ ಎರಾಗಿಯುದೇ ಕೂಪಲಕ್ಕು! ಹೇಂಗೆ ಕೂದರೂ ಆರಾಮವೇ! ಅಂತೂ ಎಲ್ಲೋರುದೇ ಆರಾಮಲ್ಲಿ ಕೂದಂಡು ಹೆರಟಾತು.
~
ಸುಮಾರು ದೂರ ಹೋಯೆಕ್ಕಿದಾ, ಕೆಲವು ಜೆನ ಹಾಂಗೆ ಒರಗಲೆ ಸುರುಮಾಡಿದವು. ನವಗೆ ಒರಕ್ಕು ಬತ್ತೋ ಹಾಂಗೆಲ್ಲ! ಅದೂ ಅಪುರೂಪದ ಪ್ರಯಾಣಲ್ಲಿ, ಅದೂ ನಮ್ಮೋರೇ ಇಪ್ಪಗ!
ಎಲ್ಲೇ ಆದರೂ ಶುದ್ದಿ ಮಾತಾಡದ್ರೆ ಒಪ್ಪಣ್ಣಂಗೆ ಸಮಾದಾನ ಅಕ್ಕೋ –
ಹಾಂಗೆ ಶುದ್ದಿ ಮಾತಾಡ್ಳೆ ಶುರುಮಾಡಿದೆಯೊ°.
ಎದುರಾಣ ಸೀಟಿಂಗೆ ಕೈ ಮಡಗಿ, ಕೈಯ ಮೇಗೆ ಗಲ್ಲ ಮಡಗಿ ಎರಾಗಿ ಕೂದಂಡೆ, ಮೆಲ್ಲಂಗೆ ಮಾತಾಡಿರೆ ಸಾಕಿದಾ – ಎದುರೆ ಕೂದೋರ ಕೆಮಿ ಒಳಾಂಗೇ ಕೇಳುಗು!
~

ನಾವೆಲ್ಲ ಚೊಕ್ಕಾಡಿ, ಕುಳ್ಳಾಜೆ, ಕೋಳಿಯೂರು ಹೇಳಿ ಉಪ್ನಾನ ಹೋಳಿಗೆಗಳ ವಿಶಯ ಮಾತಾಡಿಗೊಂಡು ಇದ್ದದಿನ ಆಚಮನೆ ದೊಡ್ಡಣ್ಣ ಎಲ್ಲಿಯೂ ಕಾಂಬಲೇ ಇಲ್ಲೆ.
ಅದೆಂತ ದೊಡ್ಡಣ್ಣ – ಯೇವ ಜೆಂಬ್ರಲ್ಲಿಯೂ ಕಂಡತ್ತಿಲ್ಲೆ – ಕೇಳಿದೆ.
ಇಷ್ಟೆಲ್ಲ ಪೂಜೆ-ಗವುಜಿಯ ಅಂಬೆರ್ಪಿನ ಅದೇ ದಿನಕ್ಕೆ ಆಚಮನೆ ದೊಡ್ಡಣ್ಣಂಗೆ ದೊಡಾ ತಾಪತ್ರೆ ಅಡಾ! ಯೇವದಕ್ಕೂ ಹೋಯಿದನಿಲ್ಲೆ ಅಡ.
ಆಚ ಜೆಂಬ್ರಕ್ಕೆ ಹೋಗಿಕ್ಕು ಹೇಳಿ ಎಲ್ಲೋರೂ ಗ್ರೇಶಿದ್ದೇ ಗ್ರೇಶಿದ್ದು 😉
– ಆದರೆ ವಿಶಯ ಎಂತ್ಸರ ಹೇಳಿರೆ, ಅದೇ ದಿನಕ್ಕೆ ಸರಿಯಾಗಿ ಅವರ ಮನೆಲಿಯೇ ಅಜ್ಜನ ತಿತಿ! ಅದೆಂತ ಅದೇ ದಿನ ತಿತಿ ಮಡಿಕ್ಕೊಂಡದು – ಹೇಳಿ ಕೇಳಿಯೇಬಿಟ್ಟ° ನಮ್ಮ ನೆಗೆಮಾಣಿ!
ಆದು ದಿನ ನಿಗಂಟುಮಾಡಿ ಮಡಗುದಲ್ಲ, ಅದು ’ಒದಗಿಬಪ್ಪದು’ ಹೇಳಿದ° ದೊಡ್ಡಣ್ಣ!
~
ಯೇವ ದೇವಕಾರ್ಯಕ್ಕಾರೂ ಒಂದು ನಿರ್ದಿಷ್ಟ ದಿನದ ಆಯ್ಕೆ ಮನುಶ್ಶರಿಂಗೆ ಇರ್ತು, ಆದರೆ ಪಿತೃಕಾರ್ಯಕ್ಕೆ ಬೇರೆ ದಿನ ಆಯ್ಕೆ ಮಾಡ್ಳೆ ಅವಕಾಶ ಇಲ್ಲೆನ್ನೆ!
ಸಾವು ಎಷ್ಟು ಅನಿಶ್ಚಿತವೋ – ತದನಂತರ ಬತ್ತ ಎಲ್ಲಾ ಪಿತೃಕಾರ್ಯವೂ ಅದರಷ್ಟೇ ಅನಿಶ್ಚಿತ
ಅದು ಮನೆಒಕ್ಕಲಿನ ದಿನ ಬಕ್ಕು, ಪೆರ್ನಾಳಿನ ದಿನ ಬಕ್ಕು, ಮದ್ದು ಬಿಡ್ತ ದಿನ ಬಕ್ಕು, ಓಟಿನ ದಿನ ಬಕ್ಕು – ಅದೇವದೂ ಲಗಾವಿಲ್ಲೆ!
ಅದೆಂತಕೆ ಹಾಂಗೆ – ಎಂತ್ಸಕ್ಕೆ ಹೇಳಿತ್ತುಕಂಡ್ರೆ, ಪಿತೃಕಾರ್ಯದ ತಿತಿ ಲೆಕ್ಕಾಚಾರ ಒಂದು ವಿಶಿಷ್ಟ ರೀತಿದು.
~
ನಮ್ಮ ಸಂಸ್ಕೃತಿಲಿ ಎರಡು ನಮುನೆ ದಿನ ಲೆಕ್ಕಾಚಾರದ ಪದ್ಧತಿ ಇದ್ದು.
ಒಂದು ಸೂರ್ಯಂಗೆ ಅನುಗುಣವಾಗಿ – ಸೌರಮಾನ, ಇನ್ನೊಂದು ಚಂದ್ರಂಗೆ ಅನುಗುಣವಾಗಿ – ಚಾಂದ್ರಮಾನ.
ಎರಡೂ ನಮ್ಮದೇ ಆದಕಾರಣ ಎರಡನ್ನೂ ಉಪಯೋಗ ಮಾಡ್ತು.
ಎಂತಾರು ಧಾರ್ಮಿಕ ಅಗತ್ಯತೆ ಬಂದಿಪ್ಪಗ ಯೇವದಾರೊಂದರ ತೆಕ್ಕೊಂಡು ಲೆಕ್ಕಾಚಾರ ಹಾಕುತ್ತು ನಾವು
ಆದರೆ ಈ ತಿತಿಲೆಕ್ಕಾಚಾರಕ್ಕೆ ಎರಡುದೇ ಬೇಕಾವುತ್ತು
ಸೌರಮಾನದ ’ಮಾಸ’ವುದೇ ಚಾಂದ್ರಮಾನ ’ತಿಥಿ’ ಯುದೇ!, ಅದುವೇ ಪಿತೃಕಾರ್ಯಕ್ಕಿಪ್ಪ ಸುದಿನ – ಹೇಳಿದ° ದೊಡ್ಡಣ್ಣ
ಒಂದುಕ್ಷಣ ಕಳುದು ಒಂದು ತಿರುಗಾಸು ಕಳುದಮತ್ತೆ ವಿವರವಾಗಿ ಇನ್ನೊಂದರಿ ಹೇಳುಲೆ ಸುರುಮಾಡಿದ°.
~
ಸೌರ ಮಾಸ:
ಆಕಾಶಲ್ಲಿ ಬೂಮಿಯ ಸುತ್ತ ಇರ್ತ ಅವಕಾಶವ ಹನ್ನೆರಡು ರಾಶಿಯಾಗಿ ವಿಭಾಗ ಮಾಡಿದ್ದವು.
ಸೂರ್ಯ ನಿತ್ಯಚಲನೆಲಿ ಹನ್ನೆರಡೂ ರಾಶಿಗೆ ಒಂದರಿ ಹೊಕ್ಕೆರಡುವಗ ಒಂದೊರಿಶ ಆವುತ್ತು.
ಒಂದೊಂದು ರಾಶಿಗೆ ಅಂದಾಜು ಮೂವತ್ತು ದಿನದ ಹಾಂಗೆ.
ಇದಕ್ಕೆ ಸೌರಮಾನ ಮಾಸ ಹೇಳ್ತದು.
(ಇದರ ಬಗ್ಗೆ ವಿವರವಾಗಿ ನಾವೊಂದರಿ ಮಾತಾಡಿದ್ದು, ಶೆಂಕ್ರಾಂತಿಯ ಶುದ್ದಿಲಿ)

ಚಾಂದ್ರ ಮಾನ ತಿಥಿ:
ಭೂಮಿ ಮತ್ತೆ ಸೂರ್ಯನ ನೆರಳಾಟಲ್ಲಿ ಚಂದ್ರನ ದಿನಕ್ಕೊಂದುನಮುನೆ ಕಾಣ್ತದು ಗೊಂತಿದ್ದಲ್ಲದೋ?
ಪೂರ್ತಿ ಕಾಂಬ ಶುಭ್ರ ಹುಣ್ಣಮೆಂದ ತೊಡಗಿ, ದಿನದಿನವೇ ನೆರಳು ಜಾಸ್ತಿ ಆಗಿ, ಕಾಣದ್ದೆ ಆಗಿ, ಕ್ರಮೇಣ ಏನೂ ಕಾಣದ್ದ ಕರಿ ಅಮಾಸೆ ಒರೆಂಗೆ, ಇರುವಾರ ಇದರ ಪೆರಟ್ಟು ರೀತಿಲಿ ಬೆಳದು ಮತ್ತೆ ಶುಭ್ರ ಹುಣ್ಣಮೆ ಒರೆಂಗೆ.
ಇದೊಂದು ಕಾಲಚಕ್ರದ ಅಂಗವೇ! ಅಲ್ಲದೋ?
(ಅಂದೊಂದರಿ ಇದರ ಬಗ್ಗೆಯೇ ಶುದ್ದಿ ಮಾತಾಡಿದ್ದು, ನೋಡಿದ್ದಿರೋ?)billig moncler jakke
~

ಸೂರ್ಯ-ಭೂಮಿ-ಚಂದ್ರ: ಕಾಲ ನಿರ್ಣಯದ ಮುಖ್ಯವಸ್ತುಗೊ

ಎರಡೂ ನಮ್ಮದೇ ಆದ ಕಾರಣ ಜೆನಂಗೊ ಅವಕ್ಕೆ ಬೇಕಾದ್ದರ ಉಪಯೋಗ ಮಾಡಿಗೊಳ್ತವು.
ನಿತ್ಯದ ದಿನ ಲೆಕ್ಕ ಮಾಡುವಗ ಸೌರಮಾನ ಅತವಾ ಚಾಂದ್ರಮಾನ, ಲೆಕ್ಕಮಾಡ್ಳೆ ಒಂದು ಕೈ ಸಾಕು.
ಆದರೆ ತಿತಿ ಲೆಕ್ಕ ಮಾಡುವಗ ಒಂದು ಕೈಲಿ ಸೌರಮಾನ, ಇನ್ನೊಂದು ಕೈಲಿ ಚಾಂದ್ರಮಾನ – ಎರಡೂ ಕೈ ಬೇಕಾವುತ್ತು! – ಹೇಳಿದ ದೊಡ್ಡಣ್ಣ ಕೈಲಿ ಹರಿಕತೆ ಮಾಡ್ತನಮುನೆ ತೋರುಸಿ ಬಡಬಡನೆ ನೆಗೆಮಾಡಿದ°.
ಶುದ್ದಿ ಮಾತಾಡ್ಳೆ ಸುರುಅಪ್ಪ ಮೊದಲೇ ಒರಗಿದ್ದೋರು ಈ ನೆಗೆಶಬ್ದಕ್ಕೆ ಪಕ್ಕನೆ ಎದ್ದು ತೊಡಿಉದ್ದಿಗೊಂಡವು. ಎಚ್ಚರಿಗೆ ಆದ್ದಕ್ಕೆ ಕಾರಣ ಎಂತ್ಸರ ಹೇಳಿ ಗೊಂತಾಗದ್ದೆ ಪುನಾ ಒರಗಲೆ ಜಾರಿದವು. 😉

~
ವ್ಯಕ್ತಿ ತೀರಿಗೊಂಡ ದಿನ ಯೇವ ಸೌರಮಾನ ಮಾಸ ಆಗಿರ್ತೋ,
ಆ ದಿನ ಯೇವ ಚಾಂದ್ರಮಾನ ತಿಥಿ ಇರ್ತೋ ,
ಒರಿಶಂಪ್ರತಿ ಅದೇ ಸನ್ನಿವೇಶ ಬಪ್ಪಗ ಪಿತೃಕಾರ್ಯ ಮಾಡ್ತದು –
ಹಾಂಗೆ, ತಿಥಿ ಲೆಕ್ಕಾಚಾರ ಮಾಡುವಗ ಎರಡನ್ನೂ ನೋಡ್ತು ನಾವು.
ತಿಥಿಯ ಪಿಂಡಪ್ರದಾನ ಕಾರ್ಯವ ಮದ್ಯಾಹ್ನ ಮಾಡ್ತ ಕಾರಣ ಆ ಹೊತ್ತಿಂಗೇ ಆ ತಿಥಿ ಸಿಕ್ಕುತ್ತ ನಮುನೆ ನೋಡ್ತು.
ಒಂದು ಸೌರ ತಿಂಗಳಿಲಿ ಅಪುರೂಪಲ್ಲಿ ಎರಡು ಸರ್ತಿ ಅದೇ ತಿಥಿ ಬಪ್ಪದೂ ಇದ್ದು, ಹಾಂಗಿದ್ದಲ್ಲಿ – ಯೇವದಾರು ಒಂದು ದಿನ ಪಿತೃಕಾರ್ಯ ಮಾಡಿರೆ ಸಾಕು.
ಪಿತೃಗಳ ನೆಂಪುಮಾಡ್ಳೆ ಹೇಳಿ ಇಪ್ಪ ಆ ದಿನಲ್ಲಿ ಕಾಕೆಗಳ ಮೂಲಕ ನೈವೇದ್ಯವ ಕೊಟ್ಟು ಕಳುಸುತ್ತು  – ಹೇಳಿ ದೊಡ್ಡಣ್ಣ ವಿವರುಸಿದ.
(ತಿಥಿಯ ಬಗ್ಗೆಯೇ ನಾವೊಂದರಿ ಶುದ್ದಿ ಮಾತಾಡಿದ್ದು, ಗೊಂತಿದ್ದೋ?)
~

ಮಾಷ್ಟ್ರುಮಾವಂಗೆ ಪೋನು ಬಂತು ಅಷ್ಟಪ್ಪಗ.
ಅಮೇರಿಕಲ್ಲಿಪ್ಪ ಮಗಂದಡ. ದಿನ ಇರುಳಾಗಿ ಮನಗೆತ್ತಿದನಾಡ.
ಅಪ್ಪು, ನಮ್ಮಲ್ಲಿ ನೈರ್ಮಾಲ್ಯ ಪೂಜೆ ಅಪ್ಪಗ ಅವಂಗೆ ದೀಪಾರಾಧನೆ! – ಹೇಳಿತ್ತುಕಂಡ್ರೆ, ನಮ್ಮಲ್ಲಿ ಉದೆಕಾಲಕ್ಕೆ ಅಲ್ಲಿ ಇರುಳು ಸುರು!
ಯೇವದಾರೊಂದು ಸಂಧ್ಯಾಕಾಲಲ್ಲಿ ಮಾಷ್ಟ್ರುಮಾವಂಗೆ ಪೋನು ಬಪ್ಪದು ನೆಡಕ್ಕೊಂಡು ಬಂದ ಸಂಪ್ರದಾಯ. ಪೋನೆಲ್ಲ ಮುಗುದ ಮತ್ತೆ ಮೆಲ್ಲಂಗೆ ಮಾತಿಂಗೆ ಸೇರಿದವು.
~
ದೊಡ್ಡಣ್ಣ ಹೇಳಿದ್ದಕ್ಕೆ ಪೂರಕವಾಗಿ ಮಾಷ್ಟ್ರುಮಾವ° ಒಂದೆರಡು ವಿಷಯ ಹೇಳಿದವು:
ತೆಮುಳುನಾಡಿನ ಅಯ್ಯಂಗಾರಿಗೊ ಇದ್ದವಲ್ಲದೋ – ಅವು ಪಿತೃಕಾರ್ಯಕ್ಕೆ ದಿನ – ತಾರೀಕು – ಎರಡನ್ನೂ ಸೌರಮಾನವನ್ನೇ ತೆಕ್ಕೊಂಬದಡ!
ಹಾಂಗಾಗಿ ಅವರಲ್ಲಿ ತಿತಿ ಸಾಮಾನ್ಯವಾಗಿ ಕೆಲೆಂಡರಿನ ಒಂದೇ ತಾರೀಕಿನ ಅಂದಾಜಿಗೆ ಬತ್ತಾಡ.

ಹಾಂಗೇ ಉತ್ತರಭಾರತಕ್ಕೆ ಹೋದರೆ ಎರಡನ್ನೂ ಚಾಂದ್ರಮಾನವನ್ನೇ ಬಳಸುತ್ತವಡ.
ನಮ್ಮ ಊರಿನ ಕಾಟುಕೊಂಕಣಿಗಳುದೇ ಇದೇ ಕ್ರಮವ ಅನುಸರುಸುತ್ತವು – ಹೇಳಿ ಸಾಕ್ಷಿ ಕೊಟ್ಟು ತೋರುಸಿದವು.
ನೆಹರೂ ಪುಣ್ಯತಿಥಿ ಹೇಳಿ ರೇಡ್ಯಲ್ಲಿ ಹೇಳ್ತವಲ್ಲದೋ -ಅದು ಚಾಂದ್ರಮಾನ ಮಾಸ, ಚಾಂದ್ರಮಾನ ತಿಥಿಗೆ ಮಾಡ್ತದು – ಹೇಳಿದವು.
~
ಆದರೆ ಗಾಂಧೀಜಿ ಪುಣ್ಯತಿಥಿ ಹೇಳಿ ಗೋರ್ಮೆಂಟಿನವು ಆಚರಣೆ ಮಾಡ್ತವಲ್ಲದೋ – ಅದು ಶುದ್ಧ ತಾರೀಕು ಲೆಕ್ಕಲ್ಲಿ ಮಾಡ್ತದು.
ಪಾಶ್ಚಾತ್ಯದೋರು ಹೇಳಿಕೊಟ್ಟ ನಮುನೆದು – ಹೇಳಿದವು.
~
ಆದರೆ ನಮ್ಮಲ್ಲಿ ಮಾಂತ್ರ ಒಂದು ವಿಶಿಷ್ಟ ಪದ್ಧತಿ, ಎರಡನ್ನೂ ಸೇರುಸಿ ಮಾಡ್ತದು.
ಸಂಪ್ರದಾಯ ಎಲ್ಲಿಂದ ಸುರು ಆತು ಅರಡಿಯ, ಆದರೆ ಎರಡನ್ನೂ ಸೇರುಸಿದ ಸುಂದರ ವೆವಸ್ತೆ- ಹೇಳಿದವು.

ಮದಲಿಂಗೆ ನಮ್ಮಲ್ಲಿ ಪೊರನ್ನಾಳು ಹೇಳಿ ಆಚರಣೆ ಮಾಡುಗಡ.
ಮನೆ ಯೆಜಮಾನ ಹುಟ್ಟಿದ್ದಿನ ಒಂದು ಸಣ್ಣ ಆಚರಣೆ.
ಈಗಾಣ ನಮುನೆ ಕೇಂಡ್ಳು ಉರುಗುತ್ತದು ಅಲ್ಲ, ಬದಲಾಗಿ ಗೆಣವತಿ ಹೋಮ, ಗ್ರಾಶಾಂತಿಯೋ ಎಂತಾರು ಮಾಡ್ತದು.
ಅದರ ಲೆಕ್ಕಾಚಾರವೂ ಇದೇ ಕ್ರಮಲ್ಲಿ ಮಾಡುದಡ – ಸೌರಮಾನ ತಿಂಗಳು, ಚಾಂದ್ರಮಾನ ತಿಥಿ ದಿನ.
~
ಇಂದು ಅಜ್ಜನ ತಿಥಿ, ದೊಡ್ಡಜ್ಜಿಯ ತಿಥಿ ಹೇಳಿಗೊಂಡು ಎಲ್ಲೋರುದೇ ಒಡೆ ಸುಟ್ಟವು ತಿಂತವು, ಆದರೆ ಆ ತಿಥಿ ಎಂತಕೆ ಅದೇ ದಿನ ಮಾಡ್ತವು ಹೇಳಿ ಎಷ್ಟು ಜೆನಕ್ಕೆ ಅರಡಿಗು?
ಹೆರಿಯೋರು ಒಟ್ಟಿಂಗೆ ಸಿಕ್ಕಿಪ್ಪಗ ಹೀಂಗೇ ಏನಾರೊಂದು ಶುದ್ದಿ ತೆಗದು ಮಾತಾಡುಸಿರೆ ಒಂದೊಂದೇ ಗೊಂತಾವುತ್ತಿದಾ..
ಇದಾಗಿ ಮತ್ತೆ ರಜ ಬೇರೆ ಮಾತಾಡಿಅಪ್ಪಗ ಸುವರ್ಣಿನಿ ಡಾಗುಟ್ರಕ್ಕನ ಮೂಡಬಿದ್ರೆ ಎತ್ತಿತ್ತು.
ತಲೆಬೇನೆಯ ಗ್ರೇಶಿಗೊಂಡು ಸೀತ ಮುಂದೆ ಹೋದೆಯೊ°.

ಅಂಬೆರ್ಪಿನ ಎಡಕ್ಕಿಲಿಯೂ ಉಪಾಯಲ್ಲಿ ಒಂದು ಶುದ್ದಿ  ಕಲ್ತುಗೊಂಡದಕ್ಕೆ ನೆಮ್ಮದಿ ಆತು!
ಒಂದು ಒಳ್ಳೆ ವಿಶಯ ಗೊಂತಾದ ಕೊಶಿ – ಬದ್ಧದ್ದಿನದ ಮದಿಮ್ಮಾಯನಿಂದಲೂ ಜಾಸ್ತಿ ಕೊಶಿ – ಆಗಿಂಡೇ ಇತ್ತು.
ಬದ್ಧ ಚೆಂದಲ್ಲಿ ಕಳಾತು, ಹೊಟ್ಟೆ ತುಂಬಿಸೊಗೊಂಡು ಪುನಾ ಬೈಲಿಂಗೆ ಬಂದೆಯೊ°.

ಒಂದೊಪ್ಪ: ನಮ್ಮದೇ ಆದ ಈ ಸೌರ-ಚಾಂದ್ರ ತಿಥಿ ಲೆಕ್ಕಾಚಾರ ಸೂರ್ಯಚಂದ್ರರಿಪ್ಪನ್ನಾರ ಇರಳಿ!

ಸೂ: ಚಿತ್ರಕೃಪೆ – ಇಂಟರುನೆಟ್ಟು ಬೈಲಿಂದ

42 thoughts on “ಸೌರ ತಿಂಗಳಿನ ಚಾಂದ್ರಮಾನ ದಿನ – ಪಿತೃಗೊ ಬಪ್ಪ ಸುದಿನ!

  1. ಒಪ್ಪಣ್ಣ, ಜೀವನದ ಶಾಶ್ವತ ಸತ್ಯ ಸಾವು. ನಮ್ಮ ಜೀವಿತ ಕಾಲಲ್ಲಿ ಎಲ್ಲಾ ಕಾರ್ಯಕ್ರಮಂಗಳ ಮಾಡುವಾಗ ದಿನ ನೋಡಿ ಮಾಡ್ತದು ಪ್ರಾಕಿಲೇ ಇಪ್ಪ ವಿಚಾರ. ಆದರೆ ಒಬ್ಬನ ಜೀವನದ ಅಂತ್ಯ ಆದಪ್ಪಗ ಮಾಂತ್ರ ಆ ದಿನ ಯೇವುದಾಗಿತ್ತು ಹೇಳಿ ಮತ್ತೆ ನೋಡ್ತ ಕ್ರಮ ಅಲ್ಲದೋ?
    ಮನುಷ್ಯನ ಜೀವಿತಲ್ಲಿ ಅವ° ಮಾಡಿದ ಪಾಪ ಪುಣ್ಯಕ್ಕನುಸಾರ ಅವ° ಈ ಲೋಕಂದ ಹೋಪ ದಿನ ಆಗಿಪ್ಪದು ಅಲ್ಲದಾ? ಅದು ಒಪ್ಪಣ್ಣ ಹೇಳಿದ ಹಾಂಗೆ ಯಾವಾಗಲೂ ಆದಿಕ್ಕು. ನಮ್ಮ ಯೇವ ತುರ್ತುಗಳೂ ಆಗಿಕ್ಕು.
    ನಮ್ಮ ಉತ್ತರಾಯಣ, ದಕ್ಷಿಣಾಯನ ದೇವಲೋಕದ ಹಗಲು ಇರುಳಡ, ಮೊನ್ನೆ ಸಂಸ್ಥಾನ ಹೇಳಿ ಅಪ್ಪಗ ಗೊಂತಾತದಾ. ನಾವು ವರ್ಶಕ್ಕೊಂದರಿ ಪಿತೃಗೊಕ್ಕೆ ಕೊಡುದು ಅವಕ್ಕೆ ನಿತ್ಯ ಉಂಡ ಹಾಂಗೆ ಅಲ್ಲದೋ?
    ದೇವರ ಪೂಜೆಗೊಕ್ಕೆ ನಾವು ನಮ್ಮ ಅನುಕೂಲ ನೊಡಿಗೊಳ್ತು ಪೂಜೆ ಮಾಡ್ಲೆ, ಆ ದಿನ ದೇವರ ನಮ್ಮಲ್ಲಿಗೆ ಬರುಸುತ್ತು. ನಮ್ಮ ಪಿತೃಗೊ ನಮ್ಮ ಬಿಟ್ಟಿಕ್ಕಿ ಹೋದ ದಿನವೇ ನಮ್ಮ ಕಾಂಬಲೆ ಬಪ್ಪದು. ಆ ದಿನ ನಾವು ಪುರುಸೊತ್ತು ಮಾಡೆಕ್ಕು ಅಲ್ಲದಾ ಒಪ್ಪಣ್ಣ?
    ಒಂದೊಪ್ಪ ಲಾಯ್ಕಾಯಿದು.

  2. ಒಪ್ಪಣ್ಣ ಭಾವೊ..
    ಎನಗೆ ಈಗ ಅರ್ಥ ಆತು ಒಡೆ ಸುಟ್ಟವು ಎ೦ತ್ಸಗೆ ಮಾಡುಸ್ಸು ಹೇಳಿ… 😉
    ಹಾ, ಮತ್ತೆ ಆ ಪಟಲ್ಲಿ ರ೦ಗೋಲಿ ಬರದ್ದು ಲಾಯಕ ಆಯಿದು ಆತ… 😀

    1. { ಈಗ ಅರ್ಥ ಆತು ಒಡೆ ಸುಟ್ಟವು ಎ೦ತ್ಸಗೆ ಮಾಡುಸ್ಸು ಹೇಳಿ }
      ಅಬ್ಬ! ಸಮಾದಾನ ಆತು ಎಂಗೊಗೊಂದರಿ,
      ನಿನಗೆ ಬೇರೆಂತೂ ಅರ್ತ ಆಯಿದಿಲ್ಲೆನ್ನೇ ಹೇಳಿಗೊಂಡು!! 😉

  3. ತಿತಿ ಆಚರಣೆ ಬಗ್ಗೆ ಒಳ್ಳೆ ಶುದ್ಧಿ ಬರದ್ದ ಒಪ್ಪಣ್ಣ.ಮಾಷ್ಟ್ರು ಮಾವನಲ್ಲಿ ವರ್ಷಕ್ಕೆ ಎರಡು ತಿತಿ.ಬೈಲಕೆರೆಲಿಯೂ ಎರಡು ತಿತಿ.ಆದರೆ ಅವು ಪರಸ್ಪರ ಭೇಟಿ ಅಪ್ಪದು ಮಾಂತ್ರ ಒಂದೇ ತಿತಿಗೆ.ಕಾರಣ,ಒಂದು ತಿತಿ ಕನ್ನಿ ತಿಂಗಳಿಲಿ ಅಪ್ಪದು ಇಬ್ರಲ್ಲಿಯೂ ಒಂದೇ ದಿನ.ಹಾಂಗೆ ವಡೆ ಸುಕ್ರುಂಡೆ ಅಷ್ಟು ಲಾಭ-ನಷ್ಟ.ಎರಡೂ ಹೊಡೆನ್ಗೆ..ಬೋಸ ಭಾವ ಅದಕ್ಕೆ ಬುದ್ದಿವಂತಿಗೆ ಮಾಡಿದ.ಅವ ಎರಡು ವರ್ಷಕ್ಕೆ ಒಂದರಿ ಒಂದು ಮನೆಗೆ ಹೋಪದು.ಹೇಂಗೆ ಹೇಳಿ ಅವನತ್ರೆ ಕೇಳೆಕ್ಕಷ್ಟೇ!!!
    ಶುದ್ದಿ ಫಷ್ಟಾಯಿದು.ಧನ್ಯವಾದ…

    1. ಗಣೇಶಮಾವಾ..
      ಎರಡೂ ಮನೆಲಿ ಒಂದೇ ದಿನ ತಿತಿ ಬಪ್ಪ ಶುದ್ದಿ ಹೇಳಿದಿ ನೊಂಗೊ, ಅಪ್ಪದ್ದೇ ಅದು.
      ಅದಕ್ಕೇ ಇದಾ, ಒಪ್ಪಣ್ಣ ಒಂದು ತಿತಿ ಮನೆಗೆ ಹೊತ್ತಪ್ಪಗಳೂ ಹೋಪ ಕ್ರಮ ಮಡಿಕ್ಕೊಂಡದು..!! 😉

  4. ಪೊರನ್ನಾಳು=ಹುಟ್ಟಿದ ದಿನ/ಹುಟ್ಟಿದ ನಕ್ಷತ್ರ.
    ಮಲೆಯಾಳಲ್ಲಿ ನಾಳ್ ಹೇಳಿದರೆ ದಿವಸ/ನಕ್ಷತ್ರ ಎರಡೂ ಅರ್ಥ ಬತ್ತು.ಅವು ಹಾಂಗೆ ಸಲೀಸಾಗಿ ಉಪಯೋಗಿಸುತ್ತವು.
    ನಮ್ಮ ಭಾಷೆಲೂ ಕುಂಬಳೆ ಸೀಮೆಲಿ ಮಲೆಯಾಳದ ಶಬ್ದ ಉಪಯೋಗ ಆವುತ್ತು.[ಉದಾಃಮಿನ್ನಂಪುಳು,]
    ಪೊರನ್ನ ನಾಳ್=ಪೊರ್ನಾಳ್ ಸೌರ ತಿಂಗಳಿಲಿ ಬಪ್ಪ ನಮ್ಮ ಜನ್ಮ ನಕ್ಷತ್ರದ ದಿನ ಆಚರಣೆ.ಮೊದಲು ಆಚರಣೆ ಇತ್ತು=ಈಗ ಕಮ್ಮಿ ಆಯಿದು.ಒಂದು ತಿಂಗಳಿಲಿ ಎರಡು ಸರ್ತಿ ಬಂದರೆ ಎರಡ್ನೆದರಲ್ಲಿ ಮಾಡುವ ವಾಡಿಕೆ ಇತ್ತಡ,ಅದು ದೀರ್ಘಾಯುಷ್ಯ ತಕ್ಕು ಹೇಳುವ ನಂಬಿಕೆ ಹೇಳಿ ಹಿರಿಯರು ಹೇಳುದು ಕೇಳಿದ್ದೆ.
    ತಾರೀಕು ಲೆಕ್ಕಲ್ಲಿ ಜನ್ಮದಿನ ಆಚರಿಸಿ,ಕೇಕು ತುಂಡು ಮಾಡುದು ಪಾಶ್ಚಾತ್ಯರಿಂದ ನಮಗೆ ಬಂದದು.ಅದು ನಮ್ಮ ಸಂಸ್ಕೃತಿ ಅಲ್ಲ.
    [ಇನ್ನೂ ಹೆಚ್ಚು ಬರೆದರೆ ವಿಷಯಾಂತರ ಅಕ್ಕು-ಬೇಡ ಆಗದೊ?]

  5. ಒಪ್ಪಣ್ಣ, ಶುದ್ದಿಯ ಓದಿ ನಿನ್ನೆಯೇ ಒಪ್ಪ ಕೊಟ್ಟಿದೆ ಒಂದಾರಿ.

    ಇಂದು ಈಗ ಇರುವಾರ ಓದುವಗ ಶುದ್ದಿಯ ಎಡೆಲಿ ಸಣ್ಣಕೆ ಡಂಕಿದ ಹಾಂಗೆ ಆತು…

    ‘ಉತ್ತರ ಭಾರತಕ್ಕೆ ಹೋದರೆ ಎರಡಕ್ಕೂ ಚಾಂದ್ರಮಾನವನ್ನೇ ಬಳಸುತ್ತವಡ. ನಮ್ಮ ಊರಿನ “…ಕೊಂಕಣಿ”ಗಳುದೆ ಇದೇ ಕ್ರಮವ ಅನುಸರುಸುತ್ತವು’ ಹೇಳಿ ಬರದ್ದಿರನ್ನೆ?- ಅಲ್ಲಿ ಆ ಸಮುದಾಯವ ಸೂಚುಸಲೆ ಆ ಶಬ್ದ ಉಪಯೋಗಿಸೆಕ್ಕಾತಿಲ್ಲೆಯೋ ಹೇಳಿ ಎನಗೆ ಕಾಣ್ತು. ರೂಢಿಲಿ ಆ ಹೆಸರು ಇಪ್ಪದಾಗಿಕ್ಕು, ಆದರೆ ಆ ಸಮುದಾಯಕ್ಕೆ ‘ರಾಜಾಪುರ ಸಾರಸ್ವತರು’/ ‘ಭಾಲಾವಾಲಿಕಾರರು’ ಹೇಳ್ತ ಅಧಿಕೃತ ಹೆಸರು ಇದ್ದು. ಕೀಳು ಶಬ್ದಲ್ಲಿ ಅವರ ಸಂಬೋಧಿಸಿ ಅವರ ಅವಮಾನ ಮಾಡಿದ್ದು ಹೇಳುವ ಭಾವನೆ ಬಪ್ಪಲೆ ಅವಕಾಶ ಕೊಡದ್ರೆ ಒಳ್ಳೆದು, ಅಲ್ಲದೊ?

    1. ಸರಿಯಾದ ವಿಚಾರವೇ ಸುಭಗಣ್ಣ,
      ಆದರೆ ಆಡುಮಾತಿಲಿ ಅವರ ಹೆಸರು ಹಾಂಗೆ ಬಂದುಬಿಟ್ಟಿದು ಅಷ್ಟೆ.

      ಕಾಟು ಹೇಳಿರೆ ಕಾಡು ಹೇಳ್ತ ಶೆಬ್ದ. ಅವು ತೋಟ-ಗೆದ್ದೆಗಳ ಮಾಡಿಗೊಂಡು, ಪರಿಸರಕ್ಕೆ ಹಚ್ಚು ಹತ್ತರೆ ಇತ್ತಿದ್ದವು, ಅದೇ ಪ್ರಭೇದದ ಪೇಟೆಕೊಂಕಣಿಗಳ ಹಾಂಗೆ ಅಂಗುಡಿ ಮಡಗದ್ದೆ.

      ಹಾಂಗಾಗಿ ಪಾರಿಭಾಷಿಕವಾಗಿ ಅವಕ್ಕೆ ಆ ಹೆಸರು ಬಂದದು.
      ಅವರೊಳ ಮೂರ ಪ್ರಬೇಧಂಗೊ ಇದ್ದಡ. ಮಾಷ್ಟ್ರುಮಾವ ವಿವರವಾಗಿ ಹೇಳ್ತವು ಒಂದೊಂದರಿ..

    2. ಕೊಂಕಣಿ ಹೇಳ್ತದು ಕೀಳುಶಬ್ದ ಅಲ್ಲ. ಕೊಂಕಣ ದೇಶಸ್ಥರು ಹೇಳಿ ಅರ್ಥ. ಅವು ಪೋರ್ಚುಗೀಸರು ಗೋವಕ್ಕೆ ಬಂದಪ್ಪಗ ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಹೊಡೆಂಗೆ ಬಂದದು. ಗೋವಕ್ಕೆ ಕೊಂಕಣ ದೇಶ ಹೇಳಿ ಹೆಸರು. ಅವಕ್ಕೆ ಗೌಡ ಸಾರಸ್ವತರು, ಸಾರಸ್ವತರು ಹೇಳಿಯೂ ಹೆಸರಿದ್ದು.(ಕೊಂಕು+ಕಿಣಿ=ಕೊಂಕಣಿ ಹೇಳ್ತದು ಶುದ್ಡ ಕುಹಕ)

  6. ಉತ್ತಮ ಮಾಹಿತಿ ಒಪ್ಪಣ್ಣ. ನಮ್ಮ ಹಿರಿಯವರತ್ರೆ ಇಪ್ಪ ಅನೇಕ ಉಪಯುಕ್ತ ಮಾಹಿತಿಗಳ,ಅಗತ್ಯ ವಿಚಾರ೦ಗಳ,ಸ೦ಸ್ಕಾರ೦ಗಳ ಒಪ್ಪ೦ಗಳ ಮೂಲಕ ಯುವ ಜನಾ೦ಗಕ್ಕೆ ತಿಳಿಸುವ೦ತಹ ಒಳ್ಳೆ ಕೆಲಸಕ್ಕೆ ತು೦ಬು ಹ್ರುದಯದ ಧನ್ಯವಾದ೦ಗೊ ಒಪ್ಪಣ್ಣ೦ಗೆ.

    1. ಕೇವಳದಣ್ಣಾ..
      ದೂರದ ಮಾಪಳೆದೇಶಲ್ಲಿ ಕೂದುಗೊಂಡು ನಮ್ಮ ಬೈಲಿಂಗೆ ಬಂದು, ನಮ್ಮತ್ವವ ಪ್ರೋತ್ಸಾಹಿಸಿ, ಬೈಲಿನೋರ ಬೆನ್ನುತಟ್ಟುತ್ತ ನಿಂಗಳ ಒಪ್ಪಣ್ಣಂಗೆ ಬಾರೀ ಕೊಶಿ.

      ಬನ್ನಿ, ಬಂದುಗೊಂಡಿರಿ..

  7. ಒಂದು ಉಪಯುಕ್ತ ವಿಷಯವ ಶುದ್ದಿ ರೂಪಲ್ಲಿ ಬೈಲಿಂಗೆ ಹಂಚಿದ ಒಪ್ಪಣ್ಣಂಗೆ ಧನ್ಯವಾದಂಗೊ. ಗಣೇಶಣ್ಣ ಹೇಳಿದಾಂಗೆ ಒಪ್ಪಣ್ಣ ಕೈಯಾಡುಸದ್ದ ಜಾಗೆ ಇಲ್ಲೆ!
    ಶುದ್ದಿಗೆ ಬಂದ ಒಪ್ಪಂಗಳಿಂದಲೂ ತುಂಬ ಮಾಹಿತಿ ಸಿಕ್ಕಿತ್ತು.
    ಎನ್ನ ಅಂದಾಜಿ ಪ್ರಕಾರ ಕೇರಳಲ್ಲಿಯೂ, ಕೇರಳೀಯ ಕ್ರಮದ ರೂಢಿ ಇಪ್ಪ ನಮ್ಮ ಕುಂಬ್ಳೆ ಸೀಮೆಲಿಯು ಮಾಂತ್ರ ‘ಪಿರನ್ನಾಳ್’ ಆಚರಣೆ ಚಾಲ್ತಿಲಿಪ್ಪದು. ಬಡಗಂತಾಗಿಯಾಣ ಕ್ರಮ ಆದರೆ ಬಹುಷಃ ಮನೆ ಎಜಮಾನನ ಷಷ್ಟಿಪೂರ್ತಿಯೋ ಸಹಸ್ರ ಚಂದ್ರ ದರ್ಶನವೋ ಮಾಂತ್ರ ಆಚರುಸುದು, ಅಲ್ಲದೊ?
    ‘ಪಿರನ್ನಾಳ್’ ನ ದಿನ ನಿಶ್ಚಯ ಗಣೇಶಣ್ಣ ಹೇಳಿದ ಹಾಂಗೆ ಸೌರಮಾನ ತಿಂಗಳು-ಜನ್ಮ ನಕ್ಷತ್ರ. (ಗುರುವಾಯೂರಿಲ್ಲಿ ರೋಹಿಣಿ ನಕ್ಷತ್ರ ಕೂಡಿ ಬಂದರೆ ಮಾಂತ್ರ ‘ಜನ್ಮಾಷ್ಟಮಿ’ ಆಚರುಸುದು ಹೇಳಿ ಎಲ್ಲಿಯೋ ಕೇಳಿದ ನೆಂಪು).

  8. ಒಪ್ಪಣ್ಣನ ಲೇಖನ ರಜ ಕನ್ಫ಼್ಯೂಷನ್ ಮಾಡುತ್ತು.ಎನಗೆ ಗೊಂತಿಪ್ಪ ಹಾಂಗೆ ’ಪೊರನ್ನಾಳು’ ಹೇಳಿದರೆ, ನಮ್ಮ ಹಿಂದೂ ಕ್ಯಾಲಂಡರಿನ ಪ್ರಕಾರ ಬಪ್ಪ ಜನ್ಮದಿನ.ಅದಕ್ಕೆ ನಾವು ತಿಥಿ ನೋಡುತ್ತಿಲ್ಲೆ,ನಕ್ಷತ್ರವ ನೋಡುವದು. ಆನು ಇಂದಿಂಗೂ ಜನ್ಮ ದಿನ ಆಚರಿಸುವದು ಸೌರಮಾನ ತಿಂಗಳಿಲ್ಲಿ ಬಪ್ಪ ಎನ್ನ ಜನ್ಮ ನಕ್ಷತ್ರದ ದಿನ.ಜಾತಕದ ಪ್ರಕಾರ-ಕಾರ್ತಿಕಯುಕ್ತ ತುಲಾ ಮಾಸೇ,ಕೃತ್ತಿಕಾ ನಕ್ಷತ್ರೇ-ಹೇಳಿದರೆ ಒಕ್ತೋಬರ್/ನವೆಂಬರ್ ಆಗಿ ಬಪ್ಪ ತುಲಾ ತಿಂಗಳ ಕೃತ್ತಿಕಾ ನಕ್ಷತ್ರದಂದು-(ಸೂರ್ಯೋದಯದ ನಕ್ಷತ್ರ).(ಕಾರ್ತಿಕಯುಕ್ತವ ಬಿಡಕಾವುತ್ತು)
    ತಿಥಿಗೆ ಸೌರತಿಂಗಳಿನ ಚಾಂದ್ರ ತಿಥಿ-ಕರ್ಕಟಕ ಮಾಸದ ಅಷ್ಟಮಿ(ಎನ್ನ ಅಪ್ಪನದ್ದು)-ಹೀಂಗೆ ಲೆಕ್ಕ.ತಿಥಿಗೆ ಇನ್ನೂ ಮುಖ್ಯ-ಅಪರಾಹ್ಣಃ ಪಿತೃಣಾಂ-ಹೇಳಿದರೆ ತಿಥಿ ಅಪರಾಹ್ನ ಕಾಲಕ್ಕೆ-ದಿನದ ದಿವಾ ಪ್ರಮಾಣವ ೫ ಪಾಲು ಮಾಡಿ ಅದರ ೪ ನೇ ಪಾಲು ಸುರು ಅಪ್ಪಗ-ತಿಥಿ ಮಾಡ್ಳೆ ಸುರು ಮಾಡುವದು.
    ಬಯಲಿನವು ಆರಾದರೂ ಇನ್ನೂ ವಿವರ ಸಂಗ್ರಹಿಸಿ ತಿಳಿಸುತ್ತಿರಾ?
    ಉಪಯುಕ್ತ ವಿಚಾರವ ಬಯಲಿಲ್ಲಿ ಪಟ್ಟಾಂಗಕ್ಕೆ ತಂದದಕ್ಕೆ ಒಪ್ಪಣ್ಣಂಗೆ ಧನ್ಯವಾದಂಗೊ.

    1. [ದಿನದ ದಿವಾ ಪ್ರಮಾಣವ ೫ ಪಾಲು ಮಾಡಿ ಅದರ ೪ ನೇ ಪಾಲು ಸುರು ಅಪ್ಪಗ-ತಿಥಿ ಮಾಡ್ಳೆ ಸುರು ಮಾಡುವದು.]-ರೆಜಾ ತಪ್ಪಿತ್ತೋ ಸಂಶಯ.
      ಪಂಚಾಂಗಲ್ಲಿ ೩೦ ಘಳಿಗೆ ದಿನಮಾನ ಇದ್ದರೆ ೧೮ ರ ನಂತರ ೨೪ ಘಳಿಗೆ ವರೆಗೆ ಅಪರಾಹ್ಣ ಹೇಳ್ತವು. ದಿನಮಾನದ ಘಳಿಗೆ ಹೆಚ್ಚು ಕಮ್ಮಿ ಅಪ್ಪಗ ಅದಕ್ಕೆ ಸರಿಯಾಗಿ ಅಪರಾಹ್ಣದ ಸಮಲ್ಲಿಯೂ ವೆತ್ಯಾಸ ಬತ್ತು, . ದಿನದ ೫ ಪಾಲಿಲ್ಲಿ ೩ನೇ ಪಾಲಿಂದ ೪ ನೇ ಪಾಲಿನ ವರೆಗೆ ಹೇಳಿ ತೆಕ್ಕೊಂಡರೆ ಸರಿ ಅಕ್ಕು.
      [ತಿಥಿ-ಕರ್ಕಟಕ ಮಾಸದ ಅಷ್ಟಮಿ]ಇಲ್ಲಿ ಕೃಷ್ಣ ಪಕ್ಷವೋ, ಶುಕ್ಲ ಪಕ್ಷವೋ ಹೇಳಿ ಕೂಡಾ ನೋಡೆಕ್ಕಾವ್ತು.
      “ಶ್ರಾದ್ಧ ತಿಥಿ ನಿರ್ಣಯ” ಹೇಳಿ ಯರ್ಮುಂಜ ಪಂಚಾಂಗ ಪುಸ್ತಕಲ್ಲಿ ವಿವರ ಕೊಟ್ಟದರ ಅನು ತಿಳಿಶಿದ್ದು.

    2. ದಿನದ ದಿವಾ ಪ್ರಮಾಣವ ೫ ಪಾಲು ಮಾಡಿ ಅದರ ೪ ನೇ ಪಾಲು ಸುರು ಅಪ್ಪಗ-ತಿಥಿ ಮಾಡ್ಳೆ ಸುರು ಮಾಡುವದು.]-ಸರಿ ಇದ್ದು. ತಪ್ಪಿದ್ದು ಎನಗೆ. ಲೆಕ್ಕ ಹಾಕುವಾಗ. ೩ರ ಅಕೇರಿ ಹೇಳಿ ಆನು ತೆಕ್ಕೊಂಬಗ ೪ ರ ಸುರು ಹೇಳ್ತದು ಮರದ್ದ್ದು!!!

      1. ಬೈಲಿಲಿ ಒಳ್ಳೆ ಚರ್ಚೆಗೊ ಮುಂದುವರಿಯಲಿ..
        ಎಂಗೊ ಕರೆಲಿ ನಿಂದುಗೊಂಡು ಬಿದ್ದದರ ಹೆರ್ಕಿಗೊಳ್ತೆಯೊ°..

  9. ಒಪ್ಪಣ್ಣಾ.. ಶುದ್ದಿ ಲಾಯಿಕಲಿ ಹೇಳಿದ್ದೆ. ಬಹುಶಃ ಎರಡೂ ಕ್ರಮವ ಅನುಸರಿಸಿ ಮಾಡ್ತ ಕ್ರಿಯೆ, ತಿಥಿ ಮಾತ್ರ ಆಗಿಕ್ಕೋ ಹೇಳಿ ಒಂದು ಸಣ್ಣ ಸಂಶಯ ಎನಗೆ. (ಪೊರ್ನಾಳು ಇಕ್ಕು ಅಲ್ಲದಾ).
    ಪಿತೃ ಋಣ ತೀರುಸಲೆ ಈ ಕ್ರಿಯೆ ಮಾಡ್ಲೇ ಬೇಕಲ್ಲದಾ.
    [ಹಿಂಡಿಗೋಣಿಯಷ್ಟು ಅಗಲದ ದೊಡಾ ಸೀಟು]-ನಿನ್ನ ಈ ಉಪಮೆ ಕೊಶೀ ಆತು:
    [ಎದುರಾಣ ಸೀಟಿಂಗೆ ಕೈ ಮಡಗಿ, ಕೈಯ ಮೇಗೆ ಗಲ್ಲ ಮಡಗಿ ಎರಾಗಿ ಕೂದಂಡೆ, ಮೆಲ್ಲಂಗೆ ಮಾತಾಡಿರೆ ಸಾಕಿದಾ – ಎದುರೆ ಕೂದೋರ ಕೆಮಿ ಒಳಾಂಗೇ ಕೇಳುಗು!]- ಹಿಂದಾಣವಕ್ಕೆ ಒರಗಲೆ ತೊಂದರೆ ಆಗದ್ದ ಹಾಂಗಿಪ್ಪ ಏರ್ಪಾಡು ಮಾಡಿದ್ದೆ ಅಲ್ಲದಾ?
    [ಆಚ ಜೆಂಬ್ರಕ್ಕೆ ಹೋಗಿಕ್ಕು ಹೇಳಿ ಎಲ್ಲೋರೂ ಗ್ರೇಶಿದ್ದೇ ಗ್ರೇಶಿದ್ದು.] -ಎರಡು ಮೂರು ಜೆಂಬಾರಂಗೊಕ್ಕೆ ಹೇಳಿಕೆ ಬಂದರೆ, ಯಾವುದಕ್ಕೂ ಹೋಗಕ್ಕೆ ಹೀಂಗೆ ಸುದಾರ್ಸಲೆ ಆವ್ತಿದ.
    [ಶುದ್ದಿ ಮಾತಾಡ್ಳೆ ಸುರುಅಪ್ಪ ಮೊದಲೇ ಒರಗಿದ್ದೋರು ಈ ನೆಗೆಶಬ್ದಕ್ಕೆ ಪಕ್ಕನೆ ಎದ್ದು ತೊಡಿಉದ್ದಿಗೊಂಡವು. ಎಚ್ಚರಿಗೆ ಆದ್ದಕ್ಕೆ ಕಾರಣ ಎಂತ್ಸರ ಹೇಳಿ ಗೊಂತಾಗದ್ದೆ ಪುನಾ ಒರಗಲೆ ಜಾರಿದವು.] – ಲಾಯಿಕ ಆಯಿದು. ಮನುಷ್ಯ ಗುಣವ ಸಹಜ ಆಗಿ ಬರದ್ದೆ. ಕೊಶೀ ಆತು
    [ನೆಹರೂ ಪುಣ್ಯತಿಥಿ ಹೇಳಿ ರೇಡ್ಯಲ್ಲಿ ಹೇಳ್ತವಲ್ಲದೋ ] – ಗೋರ್ಮೆಂಟಿನವೂ ಹೀಂಗಿಪ್ಪದರ ಲೆಕ್ಕ ಹಾಕ್ತವಾ?
    [ಒಂದು ಒಳ್ಳೆ ವಿಶಯ ಗೊಂತಾದ ಕೊಶಿ]- ಎಂಗೊಗೂ ಕೂಡಾ ಒಳ್ಳೆ ವಿಶಯ ಗೊಂತಾದ ಕೊಶಿಯೇ.
    ಧನ್ಯವಾದಂಗೊ

    ಒಂದು ವಿಶಯ ನೆಂಪಾತು:
    ಒಂದರಿ, ಒಬ್ಬ ಅವನ ಸಂಬಂಧಿಕರ ಹತ್ರೆ ಕೇಳಿದ ” ಈ ತಿಥಿ ಎಲ್ಲಾ ಮಾಡುವದು ವೇಷ್ಟ್ ಅಲ್ಲದಾ ಹೇಳಿ”
    ಅದಕ್ಕೆ ಅವು ಹೇಳಿದವು ” ಈ ಬರ್ತ್ ಡೇ ಎಲ್ಲಾ ಮಾಡುವದು ಕೂಡಾ ವೇಷ್ಟ್ ಅಲ್ಲದಾ ಹೇಳಿ”

    1. ಶ್ರೀಶಣ್ಣೋ..
      ನೀನು ಹೀಂಗೆ ವಿವರವಾದ ಒಪ್ಪ ಬರೆಯದ್ದೆ ಸುಮಾರು ಸಮೆಯ ಆತಿದಾ..
      ಕಾದು ಕಾದು ಒಪ್ಪಣ್ಣನ ಕೊರಳು ಉದ್ದ ಆಗಿ ಹೋಗಿತ್ತು.

      ಒಪ್ಪಲ್ಲಿ ಒಪ್ಪುತ್ತ ಅಂಶಂಗಳ ಎತ್ತಿತೋರುದು ನಿನ್ನ ಒಪ್ಪದ ಒಪ್ಪೇಕಾದ ಗುಣ! 🙂

  10. ತಿಥಿ ಆಚರಣೆಗೆ ದಿನ ನಿಶ್ಚಯ ಹೇಂಗೆ ಮಾಡುವದು ವಿವರಿಸಿ ಹೇಳಿದ್ದು, ಲಾಯಿಕ ಆಯಿದು. ಪುಳ್ಳಿಯಕ್ಕೊ ಸುಟ್ಟವು ವಡೆ ಸುಕ್ರುಂಡೆ ತಿಂಬಗ ಇದರ ನೆಂಪು ಮಡ್ಕೊಂಡರೆ ಒಳ್ಳೆದು. ಮಕರ ಕೄಷ್ಣ ತ್ರಯೋದಶಿ, ಮಿಥುನ ಕೃಷ್ಣ ನವಮಿ, ವೃಶ್ಚಿಕ ಕೃಷ್ಣ ನವಮಿ ಹೀಂಗೆ ಆನು ನೆಂಪು ಮಡುಗುತ್ತ ಕ್ರಮ.

    1. ಅಪ್ಪಚ್ಚೀ..
      ವಡೆ ಸುಕ್ರುಂಡೆ ತಿಂಬಗ ಈಗಾಣೋರಿಂಗೆ ಕೊಲೆಷ್ಟ್ರೋಲುದೇ, ಶುಗರುದೇ ನೆಂಪಪ್ಪದಡ, ಚುಬ್ಬಣ್ಣ ಒಂದೊಂದರಿ ನೆಗೆಮಾಡ್ತ… 🙂

  11. ಉತ್ತಮ ಲೇಖನ. ವಿವರಣೆ ಭಾರಿ ಲಾಯ್ಕ ಆಯಿದು. ನಮ್ಮ ದೇಶದ ಬೇರೆ ಬೇರೆ ದಿಕ್ಕೆ ಯಾವ ಕ್ರಮಲ್ಲಿ ತಿಥಿ ಲೆಕ್ಕ ಹಾಕುತ್ತವು ಹೇಳಿ ಬರದ್ದದು ಒಳ್ಳೆದಾಯಿದು.

    1. ಕೋರಿಕ್ಕಾರಣ್ಣ…
      ಧನ್ಯವಾದಂಗೊ..

      ನಿಂಗೊ ಕಲ್ತು, ನಾಕು ಜೆನಕ್ಕೆ ಕಲಿಶಿ, ನಮ್ಮದರ ಒಳಿಶಿ ಬೆಳೆಶಲೆ ಸೇರಿಗೊಳ್ಳಿ.
      ನಮಸ್ತೇ..

  12. ಒಪ್ಪಣ್ಣಾ… ನಿ೦ಗಳ ವ್ಯಾಪ್ತಿಗೆ ಅಚ್ಚರಿಯೊ೦ದಿಗೆ ನಮನ.. ಸೂರ್ಯನ ಕೆಳ ಇಪ್ಪ ಯಾವ ವಿಷಯದ ಮೇಲೆಯುದೆ ನಿ೦ಗೊ ಶುದ್ದಿ ಬರವಿರೋ ಹೇಳಿ!!! hats off to you!!!
    (ಶುದ್ದಿ ಮಾತಾಡ್ಳೆ ಸುರುಅಪ್ಪ ಮೊದಲೇ ಒರಗಿದ್ದೋರು ಈ ನೆಗೆಶಬ್ದಕ್ಕೆ ಪಕ್ಕನೆ ಎದ್ದು ತೊಡಿಉದ್ದಿಗೊಂಡವು. ಎಚ್ಚರಿಗೆ ಆದ್ದಕ್ಕೆ ಕಾರಣ ಎಂತ್ಸರ ಹೇಳಿ ಗೊಂತಾಗದ್ದೆ ಪುನಾ ಒರಗಲೆ ಜಾರಿದವು) – ವ್ಹಾರೆವ್ಹಾ!!!! ನಿ೦ಗೊ ನಮ್ಮ ನಿತ್ಯಜೀವನದ ಒ೦ದೊ೦ದು ವಿಷಯವನ್ನುದೆ ಎಷ್ಟು ಸೂಕ್ಷ್ಮವಾಗಿ observe ಮಾಡ್ತಿ, ಮತ್ತು ಅದರ ಲೇಖನ೦ಗಳಲ್ಲಿ ಎಷ್ಟು ಲಾಯ್ಕಲ್ಲಿ ಅಳವಡಿಸಿಯೋಳ್ತಿ ಹೇಳುವದಕ್ಕೆ ಇದೊ೦ದೇ ಒ೦ದು ಉದಾಹರಣೆ ಸಾಕು.. ಈ ಲೇಖನಲ್ಲಿ ಆ ಎರಡು ವಾಕ್ಯ ಇಲ್ಲದ್ರುದೆ ಲೇಖನ ಪೂರ್ತಿ ಆವ್ತಿತು, ಆದರೆ ಈ ಎರಡು ವಾಕ್ಯ ಸೇರಿಸಿದ್ದರಿ೦ದಾಗಿ ಇದರ ಸೌ೦ದರ್ಯ ಎಷ್ಟು ಹೆಚ್ಚಾತು!!!? simply superb!!!

    1. { hats off to you!!! }
      ಟೊಪ್ಪಿ ನೆಗ್ಗೆಕ್ಕಾದ್ಸು ಎನಗಲ್ಲ ಅಣ್ಣಾ..
      ಮಾಷ್ಟ್ರುಮಾವನ ಹಾಂಗಿರ್ತ ಮಾಹಿತಿಮೂಲಂಗೊಕ್ಕೆ.
      ಅವೆಲ್ಲ ಒಟ್ಟಿಂಗಿಲ್ಲದ್ದರೆ ನಾವು ಕಂಗಾಲು! 🙂

      ಒಪ್ಪ ಕೊಶಿ ಆತು. 🙂

  13. ತಿತಿ ಏವತ್ತು ಹೇಳಿ ನೋಡ್ಳೆ, ಈಗಾಣ ಮಕ್ಕೊಗೆ ಬೇಕಾದ ಹಾಂಗೆ, ವಿವರವಾಗಿ ತಿಳುಸಿ ಕೊಟ್ಟಿದೆ ಒಪ್ಪಣ್ಣ. ನಿಜ ಹೇಳ್ತರೆ ಈ ವಿಷಯಲ್ಲಿ ಚಾಂದ್ರಮಾನ ಹಾಂಗೂ ಸೌರಮಾನ ಎರಡನ್ನೂ ಲೆಕ್ಕಕೆ ತೆಕ್ಕೋಳುತ್ತವು ಹೇಳ್ತದು ಎನಗುದೆ ಹೊಸ ವಿಷಯ. ಮನೆಯ ಹಿರಿಯರು ಲೆಕ್ಕ ಹಾಕಿ ಹೇಳ್ತವಾನೆ ಹೇಳ್ತ ಒಂದು ತರಾ ಉದಾಸೀನವೇ ಕಲಿಯಲಾಗದ್ದಕ್ಕೆ ಕಾರಣ ಆಯ್ಕು. ಇನ್ನು ಮುಂದೆ ಹಿರಿಯರ ತಿತಿ ಏವಗ ಹೇಳಿ ಸರಿಯಾಗಿ ಲೆಕ್ಕ ಹಾಕಲೆ ಎನಗೆಡಿಗು. ಶುದ್ದಿ ಸುರು ಮಾಡಿದ ಕ್ರಮವೇ ಲಾಯಕಾಯಿದು. ಒಣಕ್ಕು ವಿಷಯವನ್ನೂ ರಸಭರಿತವಾಗಿ ಮಾಡಿ ಹೇಳಿದ ಕಾರಣ ಎಲ್ಲೋರ ತಲಗೆ ಹೋಕು. ವಿಷಯ ತಿಳುಸಲೆ, ಮಾಸ್ಟ್ರಕ್ಕೊ ಮಾಡ್ತ ಕೆಣಿಯನ್ನೇ ಮಾಡಿದ್ದ ಒಪ್ಪಣ್ಣ. ಒಳ್ಳೆದಾಯಿದು.
    ಪೊರುನ್ನಾಳು ಹೇಳಿ ನಾವು ಹೇಳ್ತು, ಹುಟ್ಟಿದ ದಿನ. ಅದು ನಿಜವಾಗಿ ಮಲೆಯಾಳಲ್ಲಿ ” ಪೆರುನ್ನಾಳು” ಆಗಿಕ್ಕೋ ಹೇಳಿ. ಹೇಳಿರೆ ಹೆತ್ತ ದಿನ ಹೇಳಿ ಆಯ್ಕೊ ? ವರ್ಮುಡಿ ಮಾವ ಸರಿಯಾದ ಮಾಹಿತಿ ಕೊಡುಗು ನವಗೆ.

    1. ಬೊಳು೦ಬು ಮಾವಾ.. ನಮ್ಮ ‘ಪೊರುನ್ನಾಳು’ ಮಲಯಾಳ೦ದ ಬ೦ದದೇ.. ಮಲಯಾಳಲ್ಲಿ ‘ಪೆರುನ್ನಾಳು’ ಹೇಳಿಯುದೆ ಇದ್ದು, ‘ಪಿರನ್ನಾಳು’ ಹೇಳಿಯುದೆ ಇದ್ದು. ನಮ್ಮ ‘ಪೊರುನ್ನಾಳು’ ಬ೦ದದು ‘ಪಿರನ್ನಾಳು’ ಶಬ್ದ೦ದ.
      ಪೊರುನ್ನಾಳು –> ಪಿರನ್ನಾಳು (ಮಲಯಾಳ ಮೂಲಶಬ್ದ) –> ಇದು ಮಲಯಾಳಲ್ಲಿ ಬ೦ದದು ‘ಪಿರನ್ನ ನಾಳ್’ (ಪಿರನ್ನ= ಹುಟ್ಟಿದ, ನಾಳ್=ದಿನ) ಹೇಳ್ತ ರೀತಿಲಿ.
      ಪೆರುನ್ನಾಳ್ —> ಇದರ ಅರ್ಥ ‘ಹೆತ್ತ ದಿನ’ ಹೇಳಿ ಅಲ್ಲ.. 🙂 ಶ್ರೇಷ್ಠ ದಿನ ಹೇಳಿ. (ಪೆರು = ಹಿರಿಯ / ಶ್ರೇಷ್ಠ, ನಾಳ್ = ದಿನ). ಮಾಪಳೆಗಳ ‘ವಲಿಯ ಪೆರುನಾಳ್’, ‘ಚೆರಿಯ ಪೆರುನಾಳ್’ ಹೇಳಿ ಇದ್ದಲ್ಲದಾ.. ‘ಪೆರು’ ಹೇಳ್ತ ಮೂಲಶಬ್ದಕ್ಕೆ ‘ಹೆರಿಗೆ’ ಹೇಳ್ತ ಅರ್ಥ ಮಲಯಾಳಲ್ಲಿ ಇದ್ದು, ಆದರೆ ಅದು ಈ ಪೆರು ಅಲ್ಲ. ಕನ್ನಡಲ್ಲಿ ಈಗ ಬಳಕೆಲಿ ಇಲ್ಲದ್ದ ಎರಡು ಅಕ್ಷರ೦ಗೊ ಮಲಯಾಳ ಅಕ್ಷರಮಾಲೆಲಿ ಇದ್ದು. ഴ, ಮತ್ತು ര ಅಲ್ಲದ್ದ ಮತ್ತೊ೦ದು ರ ಕೂಡ ಇದ್ದು. ನಾವು ಪೊರನ್ನಾಳಿಲ್ಲಿ ಉಪಯೋಗಿಸುತ್ತ ರ –>ര ಅಲ್ಲ ಮತ್ತೊ೦ದು ರ. (ಅದರ ಇಲ್ಲಿ ಹೇ೦ಗೆ ಟೈಪ್ ಮಾಡುವದು ಎನಗೆ ಗೊ೦ತಿಲ್ಲೆ, ಬರವಲೆ ಮಾ೦ತ್ರ ಗೊ೦ತಿದ್ದಷ್ಟೆ.. 🙁 ..) ಅದಲ್ಲದ್ದೆ ര ಉಪಯೋಗಿಸಿರೆ ಅದರ ಅರ್ಥ ಹೆರಿಗೆ ಹೇಳಿ ಅಕ್ಕು.

      1. ಚೆಂದಕೆ ವಿವರುಸಿದೆ ಗಣೇಶ. ಹಾಲು, ಮಲೆಯಾಳಲ್ಲಿ ಪಾಲು ಆವುತ್ತು. ಹೆರು, ಪೆರು ಅಕ್ಕು ಹೇಳಿ ಒಂದು ಅಂದಾಜಗೆ ಆನು ಗುಂಡು ಬಿಟ್ಟದು ! ಸರೀ ಆತನ್ನೆ. ಆದರೆ ಅರ್ಥ ವ್ಯತ್ಯಾಸವುದೆ ಇದ್ದು ಹೇಳಿ ಗೊಂತಾತು. ಮತ್ತೆ, ನೀನು ತಿಳುಸಿದ ಹಾಂಗೆ ಒಪ್ಪಣ್ಣನ ಕೆಲವು ಸೂಕ್ಷ್ಮ ವಿವರಣೆಗೊ, ನವಗೆ “ಅಪ್ಪದು” ಹೇಳಿ ಕಾಣ್ತ ಹಾಂಗೆ ಮಾಡ್ತು.

      2. ಕನ್ನಡಲ್ಲಿಯೂ ಅದು ‘ಪೆಱು’ವೇ. ಈಗ ಉಪಯೋಗ ತಪ್ಪಿ ಹೋದ್ದದಷ್ಟೇ. ಱ = റ.
        ಹೆಱಿಗೆ, ಕೆಱೆ, ಮಱೆ, ತೊಱೆ, ನೂಱು, ತುಱಿಕೆ, ಏಱು…
        ಹೀಂಗಿಪ್ಪ ‘ಱ’ ಕೆಅವು ತುಳುವಿಲಿ ‘ದ’ ಆವುತ್ತು.

        ಮಱೆ = ಮದೆ
        ತೊಱೆ = ಸುದೆ
        ನೂಱು = ನೂದು

      3. ಗೋಪಾಲಮಾವನ ಪ್ರಶ್ನೆಯೂ, ಪೆರುವದಣ್ಣನ ಉತ್ತರವುದೇ!!
        ಎರಡುದೇ ಪಷ್ಟಾಯಿದು.
        ಒಳ್ಳೆ ವಿಚಾರ ಸಿಕ್ಕಿದ ಕೊಶಿ ಬೈಲಿಂಗೇ ಆತಿದಾ…

  14. ಒಪ್ಪಣ್ಣನ ಮಾಹಿತಿ ಒಳ್ಳೆದಿದ್ದು. ಇಲ್ಲಿಯೂ ಹಾಂಗೆ , ಅದ ಆ ಮೇಷ ತಿಂಗಳಿನ 4 ನೇ ದಿನ ಅವ ಹುಟ್ಟಿದ್ದು , ಆ ತಿಂಗಳಿನ 8 ನೇ ದಿನ ಆಚೆ ಕರೇಲಿ ಮಾಮೂಲು ಪೂಜೆ ಹೀಂಗೆಲ್ಲಾ ಹೇಳ್ತವು. ಈಗ ಗೊತ್ತಾತು ಅದ್ರ ಲೆಕ್ಕ ಹೇಂಗೆ ಹೇಳಿ 🙂

    1. ನಿಂಗಗೆ ಕುಶಿ ಅಪ್ಪುದು ಕಂಡು ಬೈಲಿಗೇ ಸಂತೋಷ ಆಗ್ತು.
      ಬೈಲಿಗೆ ಬತ್ತಾ ಇರಿ, ತಿತಿ ಇದ್ರೆ ಶುಕ್ರುಂಡೆಯೂ ತನ್ನಿ! ಆತಾ? 🙂
      ಎನಿಗೆ ಅದು ಭಾರಿ ಇಷ್ಟ!

  15. Olle mahithi…

    Hingippa lekhanango thumba upayuktha.

    Hanagare “Sayramana Ugadi” matthe “Chandramana Ugadi” ge yenthra vathyasa?

    Yengavutthu innu munde prathi oorina devasthanalli besageli namma makkoge (Kosugo matthe Maniyango) ondu 1 thingalu samskara, samskrthiya kalishekku. Manthra patada ottinge hingippadu nadeyakku.

    Matthe Tamilunadili daridra Karunanidhi eega Pongal na Tamil New Year heli declare madiddu. Aadare jenago April 14 (Sauramana Ugadi) hosa varsha heli illi aacharane madthavu.

    1. { ಹಾಂಗಾರೆ ಸೌರಮಾನ ಯುಗಾದಿ, ಚಾಂದ್ರಮಾನ ಯುಗಾದಿಗೆ ಎಂತ ವ್ಯತ್ಯಾಸ? }
      ವೆತ್ಯಾಸ ಇದ್ದು ಮಾಣೀ, ಒಂದು ಸೂರ್ಯ ಒರಿಶ ಸುರು ಅಪ್ಪದು, ಇನ್ನೊಂದು ಚಂದ್ರ ಒರಿಶ ಸುರು ಅಪ್ಪದು.
      ಈಗಂಗೆ ಇಷ್ಟೇ ಅರಡಿವದು, ಆರಾರು ಗೊಂತಿದ್ದೋರು ಹೇಳ್ತವೋ ಏನೋ..
      ಆರೂ ಹೇಳದ್ರೆ, ಮಾಷ್ಟ್ರುಮಾವನತ್ರೆ ಕೇಳಿ ಯೇವದಾರು ಒಂದು ಯುಗಾದಿಗಪ್ಪಗ ಹೇಳುವೆ ಆತೋ? 🙂

  16. ಒಪ್ಪಣ್ಣ…. ನಿ೦ಗೊ ಬರದ ಲೇಖನ ಪಶ್ಟಾಯಿದು. ಎ೦ಗಳ ಮನೆಲಿ ಅಜ್ಜನ ತಿಥಿ ಮಾಡುವಾಗ ಅಪ್ಪ ಪ೦ಚಾ೦ಗ ನೋಡಿ ಲೆಕ್ಕ ಹಾಕೆ೦ಡಿರ್ತವು.ಕೇಳಿಯಪ್ಪಗ ದಿನ ತಿಥಿ ಎಲ್ಲ ನೋಡೆಕು ಹೇಳೀ ಹೇಳಿದವು.ಅಪ್ಪನುದೆ ಹೇ೦ಗೆ ವಿವರವಾಗಿ ಹೇಳಿದವು.ತು೦ಬ ಮಾಹಿತಿ ಕೊಟ್ತದಕ್ಕೆ ಒಪ್ಪಣ್ಣ೦ಗೆ ಧನ್ಯವಾದ೦ಗೊ.. 🙂

    1. ಬೆದ್ರಾಡಿ ಚಿಕ್ಕಮ್ಮಾ..
      ಆಗಲಿ, ಮನೆಲಿ ಪಂಚಾಂಗ – ತಿಥಿನೋಡ್ತದರ ಬಗ್ಗೆ ಮಾಹಿತಿ ಕೊಟ್ಟಿದವು ಹೇಳ್ತದರ ಕೇಳಿ ತುಂಬಾ ಕೊಶೀ ಆತು.
      ಹೇಂಗೆ? ಬೈಲಿಂಗೆ ಹೇಳ್ತಿರೋ?

  17. ವೈಜಯಂತೀ ಪಂಚಾಂಗಲ್ಲಿ ಇದರ ವಿವರವಾಗಿ ಪ್ರತಿ ವರ್ಷವೂ ಹಾಕುತ್ತವು.
    ಒಂದೇ ಸೌರ ತಿಂಗಳಿಲಿ ಒಂದು ತಿಥಿ ಎರಡು ಸರ್ತಿ ಬಂದರೆ ಸುರುವಾಣದ್ದರಲ್ಲಿ ಶ್ರಾದ್ಧ ಮಾಡೆಕ್ಕು.ಒಂದು ಸರ್ತಿಯೂ ಬಾರದ್ದೆ ಹೋದರೆ ,ಆ ತಿಂಗಳಿನ ಅಕೇರಿಗೆ-ಸಂಕ್ರಾಂತಿಯ ದಿನ ಮಾಡೆಕ್ಕು.ಬೇರೆ ತಿಂಗಳಿಲಿ ಮಾಡುವ ಹಾಂಗಿಲ್ಲೆ. ಹಾಂಗೆ ನೆಂಪಾತದ-ಸೂತಕ ಬಂದು ತಿಥಿ ಮಾಡಲೆಡಿಯದ್ದರೆ ಶುದ್ಧ ಆದ ದಿನ ಮಾಡಲೇ ಬೇಕು-ತಿಂಗಳು,ತಿಥಿ ನೋಡಲೆ ಇಲ್ಲೆ!ಹಾಂಗೆ ಗ್ರಹಣದ ದಿನ ಮಾಡಲೆಡಿಯದ್ದರೆ ಮರುದಿನ ಮಾಡೆಕ್ಕಾವುತ್ತು.ಅದರನ್ನೂ ಪಂಚಾಂಗಲ್ಲಿ ಹಾಕುತ್ತವು-ಗ್ರಹಣದ ಸಮಯ ನೋಡಿ ಇದರ ನಿರ್ಧಾರ ಆವುತ್ತು.
    ಒಪ್ಪಣ್ಣಂಗೆ ಧನ್ಯವಾದ-ಬೇರೆ ಕಡೆ ಮಾಡುವ ತಿಥಿಯ ದಿನದ ಬಗ್ಗೆ ಎನಗೆ ಮಾಹಿತಿ ಇದರಿಂದ ಸಿಕ್ಕಿತ್ತು.

  18. ಖಗೋಲದ ಸುದ್ದಿ ಕಲುಶುವದು ಹೇ೦ಗೆ ಹೇಳಿ ಒಪ್ಪಣ್ಣನ ಸುದ್ದಿ ಕೇಳಿ ಕಲಿವಲಕ್ಕು. ಲಾಯಕ ಆಯಿದು ಒಪ್ಪಣ್ಣೊ!
    ನೆಹರುವಿನ ತಿಥಿ ಲೆಕ್ಕ ಹಾ೦ಗೆ ಹೇಳಿ ಗೊ೦ತಿತ್ತಿಲ್ಲೆ!
    ತಮಿಳ್ನಾಡಿಲ್ಲಿ ಸೌರಮಾಸ ಆದರುದೆ ತಿ೦ಗಳ ಹೆಸರು ಚೈತ್ರ, ವೈಶಾಖ….ಹೇಳಿಯೇ ಅಡ.
    ಹೇಳಿದ ಹಾ೦ಗೆ ಭೂಮಿ ಸೂರ್ಯರ ನೆರಳಾಟ ಗ್ರಹಣಲ್ಲಿ ಮಾ೦ತ್ರ ಅಲ್ಲದ? ಚ೦ದ್ರನ ಮೋರೆ ಬೆಳಿ ಕಪ್ಪು ಅಪ್ಪಲೆ ಸೂರ್ಯ-ಚ೦ದ್ರರ ದೂರವ್ಯತ್ಯಾಸ ಮಾ೦ತ್ರ ಅಲ್ಲದ ಕಾರಣ?

    1. ಡಾಮಹೇಶಣ್ಣೋ..
      ನಿಂಗಳ ಒಪ್ಪ ಕಂಡು ಕೊಶಿ ಆತು.
      {ಗ್ರಹಣಲ್ಲಿ ಮಾ೦ತ್ರ ಅಲ್ಲದ?}
      ಗ್ರಹಣಲ್ಲಿ ಅಪ್ಪು, ಆದರೆ ಬಿದಿಗೆ, ತದಿಗೆಯುದೇ ಅದೇ ನಮುನೆ ಅಪ್ಪದಲ್ಲದೋ?
      – ಸರೀ ಗೊಂತಿಲ್ಲೆ, ಮಾಷ್ಟ್ರುಮಾವನತ್ರೂ-ಜೋಯಿಶಪ್ಪಚ್ಚಿಯತ್ರೂ ಕೇಳಿ ಒಂದು ಶುದ್ದಿ ಮಾಡುವೊ°..

      ಒಪ್ಪಕ್ಕೆ ಧನ್ಯವಾದಂಗೊ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×