ಶಡಂಪಾಡಿಲಿ ಕೇಳಿದ “ಷಡಾಧಾರ”ದ ಶುದ್ದಿ..!!

ನವರಾತ್ರಿ, ಪುಸ್ತಕ ಪೂಜೆ, ಮನೆತುಂಬುಸುದು, ಹೊಸ್ತು,– ನಾವು ಮಾತಾಡಿಗೊಂಡಿದ್ದ ಹಾಂಗೇ ನವರಾತ್ರಿ ಮುಗಾತು.
ನವರಾತ್ರಿಯೊಟ್ಟಿಂಗೇ ಅಂಬಾಗಿರಿಲಿ ಸುರು ಆದ ಅಂಬಾಕಥೆಯೂ ಮುಗಾತು.
ಊರಿಲಿ ವೇಷಂಗೊ, ಗವುಜಿಗೊ, ಎಲ್ಲವೂ ಮಾರ್ಣೆಮಿಯೊಟ್ಟಿಂಗೆ ಮುಗುದು ಕಳಾತು.
ಇನ್ನೆಂತರ ಶುದ್ದಿ ಹೇದು ಗ್ರೇಶಿಂಡಿಪ್ಪಗಾಳೇ – ನಮ್ಮ ಶಡಂಪಾಡಿ (ಶಡ್ರಂಪಾಡಿ) ದೇವಸ್ಥಾನದ ಜೀರ್ಣೋದ್ಧಾರದ ಶುದ್ದಿ ಬಂತದಾ.
ಅಂತೇ ನೆಂಪಾದ್ಸಲ್ಲ; ಅಲ್ಲಿ ಹೊಸ್ತಿನ ಗವುಜಿಲಿ ಉಂಬಗಳೇ ನೆಂಪಾದ್ಸು.
ಎಂತದು, ಎಲ್ಲಿ, ಏನು-ತಾನು ಹೇಳ್ತ ರಜ ವಿವರ ಮಾತಾಡದ್ದರೆ ನಿಂಗೊಗೆ ಅಂದಾಜಿ ಅಪ್ಪದು ಹೇಂಗೆ; ಅಲ್ಲದೋ?
~

ಇಂತಾ ದಿನ ಹೊಸ್ತು ಹೇದು ನವಗೆ ಹೇಳಿಕೆ ಬೇಕೋ? ಅದೂ ದೇವಸ್ಥಾನಕ್ಕೆ? ಅದೂ – ಬೈಲಿನೊಳದಿಕೆ?
ಬೇಪಲೇ ಬೇಡ; ಸೀತ ಹೋಪದೇ. ಹಾಂಗೆ, ಹೆರಟತ್ತು, ಆ ದಿನ ಉದಿಯಪ್ಪಗಳೇ.
ಬೈಲಕರೆಂದ ರಜ ಬೇಗ ಹೆರಟು ನೆಡಕ್ಕೊಂಡು ಸೀತಂಕೋಲಿಂಗೆ ಎತ್ತುವಗ ಸರ್ವೆ ಭಾವ ಸಿಕ್ಕಿದವು; ದೊಡ್ಡಕಾರು ಹಿಡ್ಕೊಂಡು.
ಕಂಡೂ ಕಾಣದ್ದ ಹಾಂಗೆ ಹೋಪಲೆ ಅವೆಂತ ರೂಪತ್ತೆಯೋ – ನಿಲ್ಲುಸಿ “ಒಪ್ಪಣ್ಣ ಬತ್ತೆಯೋ?” ಕೇಟವು; ಹಿಂದಾಣ ಸೀಟಿಲಿ ಹತ್ತಿಂಡತ್ತು. ಅವು ಮಧೂರಿಂಗೋ, ಮಾಯಿಪ್ಪಾಡಿ ಅರಸುವಿನಲ್ಲಿಗೊ ಎಲ್ಲ ಹೋಗಿಂಡು ಬಪ್ಪೋರು; ದೊಡ್ಡತ್ತೆಯೂ ಇತ್ತವು.
ಕಾರು ಸೂರಂಬೈಲಿಂಗೆ ಎತ್ತಿತ್ತು; ನಾವು ಶಡಂಪಾಡಿಗೆ ಹೋವುಸ್ಸು ಹೇಳಿಅಪ್ಪಗ ಅಲ್ಲೇ ಮಾರ್ಗದರಕರೆಲಿ ಬಿಟ್ಟು ಮುಂದುವರುದವು.
ಸೂರಂಬೈಲಿನ ಶಾಲೆಯತ್ರಾಣ ಮಾರ್ಗಲ್ಲೆ ಹೋಪಗ ಸೋಜಂಗಳ ಮನೆ, ಚೇಟಂಗಳ ಮನೆ ಕಳುದು, ಪಾಡಿ ಅಜ್ಜನ ಗೆದ್ದೆಯೂ ದಾಂಟಿರೆ ಸಿಕ್ಕುತ್ತ ಸಾರಡಿ ಸಂಕಲ್ಲೆ ತೋಡುದಾಂಟಿ ಸಾರಡಿಗೆ ಎತ್ತುವಗ ಸಾರಡಿಅಪ್ಪಚ್ಚಿ ಶಾಲು ಹೆಗಲಿಂಗೆ ಹಾಕಿ ಪೋನಿಲಿ ಮಾತಾಡಿಗೊಂಡಿತ್ತವು. ಶಡಂಪಾಡಿಗೆ ಹೆರಟೋರೇ ಆದರೂ – ಹೆರಡ್ಳಪ್ಪಗ ಆರದ್ದೋ ಪೋನು ಬಂದ ಕಾರಣ ಎರಡು ನಿಮಿಷ ತಡವಾಗಿ ಒಪ್ಪಣ್ಣಂಗೂ ಜೆತೆ ಸಿಕ್ಕಿದವು. ಅವರ ಪೋನು ಮಡಗಿ ಅಪ್ಪದ್ದೇ ಚಿಕ್ಕಮ್ಮ ಮಜ್ಜಿಗೆ ನೀರು ತಂದು ಕೊಟ್ಟವು.
ಒಳ್ಳೆತ ಸೆಖೆಗೆ ತಂಪಿಲಿ ಎರಡು ಗ್ಲಾಸು ಕುಡುದು ಮೆಲ್ಲಂಗೆ ಹೆರಟೆಯೊ.
ನಿತ್ಯವೂ ಕಾಣ್ತ ದಾರಿಯೇ ಆದ ಕಾರಣ ವಿಶೇಷ ವಿವರುಸೇಕಾದ್ಸಿಲ್ಲೆ; ಸಾರಡಿ ತೋಡಕರೆಲಿ ಹೋಗಿ, ಒಂದು ದಿಕ್ಕೆ ಇಳುದು ದಾಂಟಿ ಅಪ್ಪಗ ಶಡಂಪಾಡಿ ದೇವಸ್ಥಾನವೂ ಎತ್ತಿತ್ತು.

~

ಎಂಗೊ ಎತ್ತುವಗಳೇ ನೆಡುಮಜ್ಜಾನ ಆದ ಕಾರಣ ದೇವಸ್ಥಾನದ ಜಾಲಿಂಗೆ ಹತ್ತೇಕಾರೇ ಮರಿಮನೆ ಮಾವ ಕನ್ನಡಲ್ಲಿ ಭಾಷಣ ಮಾಡುಸ್ಸು ಕೇಳ್ತು. ಹೊಸ್ತಿನ ದಿನ ಮಹಾಸಭೆ ಇರ್ತು ಇದಾ – ಹಾಂಗೆ ಕಳುದೊರಿಶದ ಲೆಕ್ಕಪತ್ರ, ಈ ಒರಿಶದ ಯೋಜನೆಗೊ, ಲೆಕ್ಕಾಚಾರದ ಬೇಲೆನ್ಸಿನ – ಎಲ್ಲವನ್ನೂ ಸೇರಿದ ಸಭಿಕರಿಂಗೆ ವಿವರವಾಗಿ ತಿಳುಶೆಂಡು ಇತ್ತಿದ್ದವು.
ಕಳುದೊರಿಶದ ಸಂಗ್ರಹದ ವಿವರ, ಹೇಂಗೆ ಜೆಮೆ ಆದ್ಸು – ಎಲ್ಲವನ್ನೂ ಹೇಳಿದವು; ಸರಿ. ಆದರೆ ಅದರಿಂದ ಮುಂದಾಣ ವಿಶಯ – “ಮುಂದಾಣ ಒರಿಶದ ಯೋಜನೆಗೊ” ಇದ್ದಲ್ಲದೋ – ಅದರ ಹೇಳುವಗ ಒಪ್ಪಣ್ಣಂಗೆ ರಜ ಆಸಕ್ತಿ ಬಂತು.
ಹಳೆಕಾಲದ ದೇವಸ್ಥಾನದ ಗರ್ಭಗುಡಿ-ನಮಸ್ಕಾರ ಮಂಟಪಂಗಳ ಪೂರ ಮುರುದು, ಹೊಸತ್ತಾದ ದೇವಸ್ಥಾನವ ಕಟ್ಟುತ್ತ ಗವುಜಿಲಿ ಕಾರ್ಯ ಭರದಿಂದ ಸಾಗುತ್ತಾ ಇದ್ದು. ಅವುಹೇಳೇಕು ಹೇದು ಇಲ್ಲೆ, ಕಣ್ಣಿಂಗೇ ಕಾಣ್ತು; ಕರ್ಗಲ್ಲು ಕೆಲಸ ಆವುತ್ತಾ ಇಪ್ಪದು ನವಗೆ ಕಾಣ್ತು; ನೆಲಕ್ಕಲ್ಲಿಡೀ ಕಲ್ಲಿನ ಚೂರುಗೊ ಹರಡಿಂಡು ಇದ್ದು- ಕಾಲು ಮಡಗುವಗ ಜಾಗ್ರತೆ ಇರೇಕಿದಾ!

ಅದಿರಳಿ.

~

ಪೂಜೆಗೆ ಹೊತ್ತು ಮೀರ್ತು ಹೇದು ಬೇಗಬೇಗ ವಿವರ್ಸೆಂಡು ಹೋದರೂ – ದೇವಸ್ಥಾನದ ಕಟ್ಟೋಣದ ಪ್ರಾಕಾರ, ರಚನಾ ವಿಧಾನ ಷಡಾಧಾರಂಗಳ ಬಗ್ಗೆ ಬೇಗಬೇಗ ಹೇಳಿಂಡು ಹೋದವು. ಹಾಂಗೆ ಒಂದರಿಯೇ ಹೇಳಿಂಡು ಹೋದರೆ ಒಪ್ಪಣ್ಣಂಗೆ ತಲಗೆ ಹೋಕೋ? ಹೋಗ. ಹಾಂಗೆ ಸಭೆ ಮುಗುದ ಮತ್ತೆ ಒಬ್ಬನೇ ಸಿಕ್ಕಿರೆ ಕೇಳೇಕು ಹೇದು ಗ್ರೇಶಿಂಡಿದ್ದಿದ್ದೆ.

ಓಂಕಾರ ಪಠನ ಮಾಡಿ ಮಹಾಸಭೆ ಬಿರುದತ್ತು. ಪಾಡಿಅಜ್ಜ ಚೆಂದಕೆ ಮಹಾಪೂಜೆ ನೆರವೇರುಸಿದವು. ಇನ್ನೆಂತರ? ಮಹಾಪ್ರಸಾದ!
ಹೊಸ್ತಿನ ದಿನ ಹೊಸ ಅಕ್ಕಿ ಊಟ.
~

ಹೊಸ್ತಿಂಗೆ ಹಸ್ತೋದಕ ಹಂತಿ ಆಯೇಕಿದಾ; ತೆಂಕಗೋಪುರದ ಸಣ್ಣ ಜಾಗೆಲಿ ಸಣ್ಣ ಹಸ್ತೋದಕ ಹಂತಿ ಹಾಕುತ್ತ ಏರ್ಪಾಡು ಆತು.
ದೂರದ-ಕುಂಬ್ಳೆಜ್ಜನ ಸಂಸಾರವ ಹಸ್ತೋದಕ ಹಂತಿಲಿ ಕೂಪಲೆ ಹೇಳಿದವು. ಜವ್ವನಿಗರು ಬಳುಸಲೆ ನಿಂದೆಯೊ.
ಡೀಕೆಶಾಂಬಾವನ ಒಟ್ಟಿಂಗೆ ಅಶನ ಹಿಡಿಸ್ಸು ಹೇದು ನಾವುದೇ ನಿಜ ಮಾಡಿತ್ತು. ಎಲ್ಲ ಅಪ್ಪಗ, ಓ ಅಲ್ಲಿ ತಲೇಲಿ ಒಂದು ಬಾಳೆ ಕಾಲಿ ಇದ್ದು ಒಪ್ಪಣ್ಣ – ನೀನು ಈಗ ಕೂದುಬಿಡು, ಎಂಗೊಗೆ ಬಳುಸು – ಹೇಳಿದವು ಪಾಡಿಅಜ್ಜ.
ಬಳುಸಲೆ ಹೇಂಗೂ ಧಾರಾಳ ಜೆನ ಇದ್ದು.
ಸರಿ; ಆತಂಬಗ – ಹೇದು ಹಸ್ತೋದಕ ಹಂತಿಲೇ ಕೂದಾತು; ಎಡಪ್ಪಾಡಿ ಮಾವನ ಎದುರೆ ಕಾಲಿ ಇದ್ದ ಜಾಗೆಲಿ.

ಶಡಂಪಾಡಿ ದೇವಸ್ಥಾನಲ್ಲಿ ಹೊಸ್ತು ಯೇವತ್ತೂ ಗವುಜಿಯೇ!
“ಮೇಲಾರ ಉಂಬ ಗವುಜಿ” ಹೇದು ಸಾರಡಿ ಅಪ್ಪಚ್ಚಿ ಒಂದೊಂದರಿ ಹೇಳುಲಿದ್ದು.
ಅಲ್ಲಿ ಮೇಲಾರ ಮಾಡುಸ್ಸು ಮೂರೇ ದಿನ ಆಡ; ಜಾತ್ರೆಗೆ, ಸತ್ಯಾರ್ಣ ಪೂಜೆಗೆ, ಹೊಸ್ತಿಂಗೆ. ಹಾಂಗೆ, ಮೊನ್ನೆ ಹೊಸ್ತಿನ ಲೆಕ್ಕಲ್ಲಿದೇ ಮೇಲಾರ ಇದ್ದತ್ತು. ಬಾಳೆಕಾಯಿ –ಮುಂಡಿ; ಎರಡು ಬಗೆ ತಾಳು, ಸಾರು, ಸಾಂಬಾರು, ಮೇಲಾರ, ಮಜ್ಜಿಗೆ.
ಹೊಸ ಅಕ್ಕಿ ಪಾಚ ಹೇಂಗೂ ಇದ್ದನ್ನೇ; ಗೋಪಾಲಕೃಷ್ಣನ ಪ್ರಸಾದ – ಚೀಪೆ ಅವಲಕ್ಕಿ ಎಂತೂ ಇದ್ದನ್ನೇ!
ಅದೆಲ್ಲದರ ಒಟ್ಟಿಂಗೆ ವಿಶೇಷ ಮಾತುಕತೆಗಳೂ ಕೇಳಿಂಡು ಇದ್ದತ್ತು. ಅದುವೇ ಇಂದ್ರಾಣ ದಿನದ ಶುದ್ದಿ.
ಅದೆಂತರ?
~

ಶಡಂಪಾಡಿ ದೇವಸ್ಥಾನದ ಬಗ್ಗೆ ಭಯಭಕ್ತಿ, ಪ್ರೀತಿ, ಇತಿಹಾಸ ಜ್ಞಾನ, ಏರ್ಪಾಡುಗಳ ಮುಂದಾಲೋಚನೆ – ಎಲ್ಲವೂ ಇಪ್ಪ ಮರಿಮನೆ ಮಾವನ ಹಾಂಗಿಪ್ಪ ಊರೋರ ಧೈರ್ಯಲ್ಲಿ ಈಗ ದೇವಸ್ಥಾನದ ಕಾರ್ಯ ಮುಂದುವರಿತ್ತಾ ಇಪ್ಪದಾಡ.
ಸಮಾಜಕ್ಕಾಗಿ ಜೀವನ ಇಡೀ ದುಡುದ ಮಾವಂಗೆ ಈಗ ದೇವಸ್ಥಾನದ ಮೇಗೆ ಮನಸು ಬಂದು, ಊರ ಹತ್ತು ಹೆರಿಯೋರ ಸೇರ್ಸೆಂಡು – ಗೋಪಾಲಕೃಷ್ಣ ದೇವರ ನೆಲೆಯ ಚೆಂದಮಾಡೇಕು ಹೇದು ಅನುಸಿತ್ತಾಡ.
ನೆರೆಕರೆಲಿ ಏಲಂ ಅಪ್ಪ ಜಾಗೆಯ ಊರೋರು ಒಟ್ಟುಸೇರಿ ಹಿಡುದು – ತೀರಾ ಬಡಪ್ಪತ್ತಿಲಿ ಇದ್ದ ದೇವಸ್ಥಾನಕ್ಕೆ ಬರೆಶಿದ್ದವಾಡ.

ಮದಲಿಂಗೆ ಕುಂಜೂರಾಯರು ಪೂಜೆಗೆ ಇದ್ದರೂ – ಮತ್ತೆ ಅವಕ್ಕೆ ಸಂತತಿ ಇಲ್ಲದ್ದೆ ಅವರ ಸೋದರಳಿಯಂಗೆ ಬಂದರೂ – ಎಡಕ್ಕಿಲಿ ಒಂದು ಸಮಯ ಪೂಜೆಯೇ ಇದ್ದತ್ತಿಲ್ಲೇಡ.
ಅಂದು ಹಡ್ಳು ಬಿದ್ದ ದೇವಸ್ಥಾನಲ್ಲಿ ಈಗ ನಿತ್ಯಪೂಜೆ ನೆಡೆತ್ತಾಡ.
ಎಡಕ್ಕಿಲೆ ಒಂದರಿ ಬಂದು “ದೇವರ ಪ್ರಸಾದ ಸ್ವೀಕಾರ ಮಾಡೇಕು” ಹೇದು ಎರಡು ಒಳ್ಳೆಮಾತು ಹೇಳಿಕ್ಕಿ ಹಂತಿಯ ಎಲ್ಲೋರ ಮಾತಾಡ್ಸಿಕ್ಕಿ, ಹೆರ ಹೆರಟ ಮರಿಮನೆ ಮಾವ;
ಅರ್ಧ ಕೆಲಸ ಆದ ಗರ್ಭಗುಡಿಯ ಹತ್ತರೆ ನಿಂದುಗೊಂಡು ಸಾರಡಿ ಅಪ್ಪಚ್ಚಿಯ ಹತ್ತರೆ ದೊಡ್ಡ ಸೊರಲ್ಲಿ ಮಾತಾಡಿಗೊಂಡಿತ್ತವು.

ಪಾಯಸ ಎಳವ ಎಡಕ್ಕಿಲಿ ಕೆಮಿಕೊಟ್ಟೆ – ಗರ್ಭಗುಡಿ ರಚನಾ ವೈಶಿಷ್ಟ್ಯದ ಬಗ್ಗೆ ಎಂತದೋ ಶುದ್ದಿಗೊ ಬಂದುಗೊಂಡಿತ್ತು.
ಎಷ್ಟು ಲೋಡು ಕಲ್ಲು, ಎಷ್ಟು ಗೋಣಿ ಸಿಮೆಂಟು ಹೇದು ಒಯಿವಾಟುಗಳೂ ಬಂದುಗೊಂಡಿತ್ತು.
ದೇಲಂಪಾಡಿ ತಂತ್ರಿಗಳ ಕಂಡ ಶುದ್ದಿಗಳೂ ಬಂದುಗೊಂಡಿತ್ತು; ನೆರೆಕರೆಯೋರ ಸಹಕಾರದ ಮಾತುಗಳೂ ಬಂದುಗೊಂಡಿತ್ತು.
ಇದರೆಡಕ್ಕಿಲಿ – ದೇವಸ್ಥಾನ ರಚನೆಯ ಬಗ್ಗೆಯೂ ಶುದ್ದಿ ಮಾತಾಡಿಗೊಂಡಿಪ್ಪಗ – ಒಪ್ಪಣ್ಣಂಗೆ ಕುತೂಹಲ ಜಾಸ್ತಿ ಆತು.  ಅದರ ಕೇಳಿಂಡೇ ಶಬ್ದಮಾಡದ್ದೆ ಉಂಡದು ಮತ್ತೆ!
ಆರೋ ಬಂದು ಮರಿಮನೆ ಮಾವನ ಎಂತದೋ ಮಾತಾಡ್ಸಿದ ಕಾರಣ ಮಾತಿನ ಓಘ ಅರ್ಧಲ್ಲೆ ನಿಂದತ್ತು ಒಂದರಿಂಗೆ.
ಈಗ ಬತ್ತೆ ಬಾವಾ ಮಾತಾಡಿ ಆಯಿದಿಲ್ಲೆ – ಹೇಳಿಕ್ಕಿ ಅಲ್ಲಿಂದ ಬಪೆ-ಊಟದ ಹತ್ತರೆ ಹೋದವು.
~

ಮರಿಮನೆ ಮಾವ ಮತ್ತೆ ಬಂದದು ಸುಮಾರು ಹೊತ್ತು ಕಳುದು. ಅಷ್ಟಪ್ಪಗ ಎಲ್ಲೋರಿಂಗೂ ಊಟ ಆಗಿತ್ತು.
ಎರಡ್ಣೇ ಹಂತಿಲಿ ಪಾಡಿಅಜ್ಜಂಗೆ ಬಳುಸಲೆ ಡೀಕೆಅಳಿಯ ಇದ್ದ ಕಾರಣ ನವಗೆ ಸುಲಾಬ ಆತು. ಬಪೆಲಿ ಉಂಬವು ಬಪೆಲಿ, ಕೂದು ಉಂಬವು ಕೂದು, ನಿಂದು ಉಂಬವು ನಿಂದು – ಅಂತೂ ಎಲ್ಲೋರಿಂಗೂ ಗೋಪಾಲಕೃಷ್ಣನ ಪ್ರಸಾದ ಸಿಕ್ಕಿತ್ತು. ಅಂಬೆರ್ಪಿನೋರೆಲ್ಲ ಒಂದು ಹೊಡೇಂದ ಹೆರಟವು; ಹೆರಡುವಗ ಎಲ್ಲೋರುದೇ ಒಂದೊಂದು ಕದ್ರು ಹಿಡ್ಕೊಂಡು ಹೋಪಲೆ ಮರದ್ದವಿಲ್ಲೆ – ಅವರವರ ಮನೆಲಿ ಗೋಪಾಲಕೃಷ್ಣನ ಅನುಗ್ರಹ ತುಂಬುಸಲೆ. ಒಂದರಿಯಾಣ ಜೆನ ಬಿರುದಪ್ಪದ್ದೇ ಮರಿಮನೆ ಮಾವಂಗೆ ರಜ ಪುರುಸೊತ್ತಾತು. ಹಾಂಗೆ ಸಾರಡಿಅಪ್ಪಚ್ಚಿಯ ಹತ್ತರೆ ಅರ್ಧಮಾತಾಡಿದ್ದರ ಮುಂದುವರುಸಲೆ ಬಂದವು.

ಅಪ್ಪಚ್ಚಿಯ ಒಟ್ಟಿಂಗೆ ಮಾತಾಡಿಂಡಿದ್ದ ನಾಕೈದು ಜೆನಂಗೊಕ್ಕೆ ಆಗಾಣ ಶುದ್ದಿಗೊ ಗೊಂತಿಲ್ಲದ್ದ ಕಾರಣ ಬುಡಂದ ವಿವರಣೆ ಸುರು ಮಾಡಿದವು. ಸಾರಡಿಅಪ್ಪಚ್ಚಿಯ ಹಿಂದೆಯೇ ನಾವು ನಿಂದುಗೊಂಡ ಕಾರಣ ಮರಿಮನೆ ಮಾವನ ವಿವರಣೆ ಚೆಂದಕೆ ಕೇಳಿತ್ತು.

~

ಜೀರ್ಣೋದ್ಧಾರ ಹೇದರೆ ಜೀರ್ಣ ಆದ್ಸರ ನವೀಕರಣ ಮಾಡುಸ್ಸು.
ಮದಲಿಂಗೆ ಇದ್ದ ಗರ್ಭಗುಡಿ, ಅದರ ಎದುರೆ ಇದ್ದಿದ್ದ ನಮಸ್ಕಾರ ಮಂಟಪಂಗಳ ಗರ್ಪಿ ತೆಗದ್ದರಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭ ಆತಾಡ. ಆ ದಿನ ತಂತ್ರಿಗೊ ಬಂದು ಪ್ರಾರ್ಥನೆ ಮಾಡಿಕ್ಕಿಯೇ ದೇವರ ಏಳುಸಿ ಬಾಲಾಲಯಕ್ಕೆ ತಂದು ಕೂರ್ಸಿದ್ದಡ.
ಗರ್ಭಗುಡಿಯ ಉದ್ದಗಲ ಎತ್ತರ, ಆಯ ವಿವರಂಗಳ ಗುರ್ತಮಾಡಿ ಮಡಿಕ್ಕೊಂಬಲೆ ಮುನಿಯಂಗಳ ಜೋಯಿಶಣ್ಣನೂ ಬಯಿಂದವಾಡ. ಎಲ್ಲ ಪೂರ್ವ ತಯಾರಿ ಆದ ಮತ್ತೆ ಊರ ಆಸ್ತಿಕರೆಲ್ಲೋರುದೇ ಸೇರಿ ಜೀರ್ಣ ದೇವಸ್ಥಾನವ ಕದಲುಸಿದವು.
ಗರ್ಭಗುಡಿಯ ಕೊಬಳು, ಮಾಡು, ಮರಮಟ್ಟು, ಗೋಡೆ, ಪಂಚಾಂಗ – ಎಲ್ಲವನ್ನೂ ತೆಗದವು.
ನಮಸ್ಕಾರ ಮಂಟಪದ್ದೂ ಹಾಂಗೇ.

ಅದಾದ ಮತ್ತೆ ಗರ್ಭಗುಡಿಯ ಗರ್ಪಿದವಾಡ. ಅಡಿಯ ಒರೆಂಗೆ. ಎಷ್ಟು ಅಡಿ? ಒಂದಾಳೆತ್ತರಕ್ಕೆ.
ಫೀಟು ಲೆಕ್ಕಲ್ಲಿ ಆರೂವರೆ ಫೀಟು ಅಡ; ಬೆಟ್ಟುಕಜೆ ಮಾಣಿಯಷ್ಟೆತ್ತರ! 😉
ಗರ್ಭಗುಡಿ ಇದ್ದ ಜಾಗೆಲಿ ಕಲ್ಪಣೆಯ ಹಾಂಗೆ ಒಂದು ದೊಡಾ ಹೊಂಡ ಮಾಂತ್ರ ಇದ್ದದು ಆ ಸಮೆಯಲ್ಲಿ.
ಎಲ್ಲಾ ಕಲ್ಮಶಂಗಳ ಅಲ್ಲಿಂದ ದೂರ ತೆಗದ ಮತ್ತೆ ಹೊಸ ರಚನೆ ಆರಂಭ.

ಆರೂವರೆ ಅಡಿಯಂದ ಭೂಮಟ್ಟ ಒರೆಂಗೆ ಕರ್ಗಲ್ಲು-ಹೊಯಿಗೆಯ ಗಟ್ಟಿ ಪಾಯ!
ಕರ್ಗಲ್ಲಿನೆಡಕ್ಕಿಂಗೆ ಹೊಯಿಗೆ ತುಂಬುಸಿ ನೀರು ಹಿಡಿಸ್ಸು; ಅಷ್ಟಪ್ಪಗ ಸೆರೆಸೆರೆಂಗೆ ಹೊಯಿಗೆ ಹೋಗಿ ಗಿಡ್ಪು ಹಾಕಿದ ಹಾಂಗೆ ನಿಲ್ಲುತ್ತಿದಾ; ಎಷ್ಟೊರಿಶಕ್ಕೂ ಹಂದ! ಹನ್ನೊಂದು ಲೋರಿ ಕಲ್ಲುದೂ, ಹದಿಮೂರು ಲೋರಿ ಹೊಯಿಗೆಯೂ ಅದರೊಳ ಹಿಡುದ್ದಾಡ!
ಭೂಮಿಯ ಮಟ್ಟಕ್ಕೆ ಬಂದಪ್ಪದ್ದೇ, ಅಲ್ಲಿಂದ ಗರ್ಭಗುಡಿಯ ಆಯ ಸುರು.

~

ಗರ್ಭಗುಡಿಯ ಪಂಚಾಂಗಲ್ಲಿ ಹಲವು ಬಗೆಯ ಎಸಳುಗೊ ಇದ್ದಾಡ; ಈ ರಚನೆಗೊ ಎಲ್ಲವೂ ನಮ್ಮ ಮನುಷ್ಯನ ದೈಹಿಕ ರಚನೆಗೆ ತುಂಬಾ ಹತ್ತರೆ ಇದ್ದಾಡ; ಮರಿಮನೆ ಮಾವ ಹೇಳಿದವು.
ಅಡಿಯಂದ ಬಂದ ಕರ್ಗಲ್ಲಿನ ಹಾಸಿಗೆಯ ಮೇಗೆ ಮೇಗೆ ಒಂದೊಂದೇ ಮುಟ್ಟಿಮುಟ್ಟಿ ವಿವರುಸಿದವು.

ಮೇಖಲಾ / ಮೇಘಲಾ – ನೆಲಕ್ಕಂದಲೇ ಮೇಗೆ ಇಪ್ಪ ರಚನೆ. ಇದಕ್ಕೆ ಉಪಪೀಠ ಹೇಳಿಯೂ ಹೆಸರಿದ್ದಾಡ. ಪೀಠಂದಲೂ ಕೆಳಾಣದ್ದು.
ಪಾದುಕೆ- ಮೇಘಲಂದ ಮೇಗೆ ಇಪ್ಪ ಪಂಚಾಂಗ ರಚನೆ. ಗರ್ಭಗುಡಿಯ ಪಾದುಕೆ ಇದುವೇ ಆಡ.ಮನುಷ್ಯನ ಪಾದುಕೆ ಇದ್ದ ಹಾಂಗೆ.
ಜಗತಿ– ಪಾದುಕೆಂದ ಮೇಗೆ ಇಪ್ಪ ಸಣ್ಣ ಒಂದು ಚಡಿಯ ಹಾಂಗಿರ್ತ ರಚನೆ.
ಕುಮುದಾ– ಉರುಟಿಂಗೆ ಉಬ್ಬಿದ ಒಂದು ಎಸಳಿಂಗೆ ಕುಮುದಾ ಹೇಳ್ತವಾಡ. ಹಳೆಕಾಲದ ಕಂಬಂಗಳಲ್ಲಿ ಎಲ್ಲ ಈ ನಮುನೆ ರಚನೆಗೊ ಕಾಂಬಲೆ ಸಿಕ್ಕುತ್ತು.
ದಳ– ಹೆಸರೇ ಹೇಳ್ತ ಹಾಂಗೆ ಇದೊಂದು ಎಸಳು. ಕುಮುದದ ಮೇಗೆ ನಿಂದುಗೊಂಡು, ನೆಲಕ್ಕಂದ ಹತ್ತರತ್ತರೆ ಒಂದು ಕೋಲು ಎತ್ತರಕ್ಕೆ ಇಪ್ಪ ಒಂದು ರಚನೆ.
ಪಡಿ- ದಳದ ಮೇಗೆ ಇಪ್ಪ ಸಮತಟ್ಟಾದ ಒಂದು ರಚನೆ.
ವೇದಿಕೆ– ಪಡಿಂದ ಮೇಗೆ ಇಪ್ಪ ಒಂದು ತಟ್ಟು ಜಾಗೆ. ಈ ವೇದಿಕೆಯ ಮೇಗೆಯೇ ಗೋಡೆ ಬಪ್ಪದು.
ಗೋಡೆ– ಎಲ್ಲೋರಿಂಗೂ ಗೊಂತಿಪ್ಪ ಹಾಂಗೆ, ನಾಲ್ಕೂ ಹೊಡೆಲಿಪ್ಪ ಬಂದವಸ್ತಿನ ರಚನೆ.
ಅಷ್ಟಪಟ್ಟಿ – ಒಂದುಕೋಲು ಹದಿನಾರಂಗುಲ ಎತ್ತರದ ಗೋಡೆ ಆದಪ್ಪದ್ದೇ, ಅದಕ್ಕೆ ಅಷ್ಟಪಟ್ಟಿಯ ಜೋಡುಸೇಂಡು ಕೂಡುಸೆಂಡು ಎತ್ತರುಸುತ್ತವಾಡ. ಅದರ ಏರ್ಸೆಂಡಿದ್ದ ಹಾಂಗೇ, ಗರ್ಭಗುಡಿಯ ಸರೀ ಮೇಗಂಗೆ ಸರಿಯಾಗಿ ಕಲಶಾಕೃತಿ ಬತ್ತಾಡ.
ಮಾಡು, ಮುಚ್ಚಿಗೆ, ಎಲ್ಲವೂ ಈ ಕಲ್ಲಿನ ವಿವಿಧ ರೂಪ-ರಚನೆಗಳಲ್ಲೇ ಬಂದುಮುಗಿತ್ತು!

ವಾಹ್, ಎಷ್ಟು ಚೆಂದ ಅಲ್ಲದೋ?
ನಮಸ್ಕಾರ ಮಂಟಪಕ್ಕೂ ಹೆಚ್ಚುಕಮ್ಮಿ ಇದೇ ನಮುನೆ ಕೆಲಸಂಗೊ.
~

ಇಷ್ಟು ವಿವರಣೆಗೊ, ಹಲವು ಅಂತರ ಅಂತರದ ಅಟ್ಟಿಗೊ ಇಪ್ಪದು ಪಂಚಾಂಗಲ್ಲಿ ಮಾಂತ್ರ.
ಹೇದರೆ, ಮಧ್ಯಲ್ಲಿ ಕಾಲಿ ಜಾಗೆ ಇದ್ದು ಹೇದು ಅರ್ಥ. ಅಪ್ಪು; ಗರ್ಭಗುಡಿಯ ಮಧ್ಯಲ್ಲಿ ತೆಂಗಿನ ಮರದ ಗುಂಡಿಯ ಹಾಂಗೆ ಒಂದು ಹೊಂಡ ಇದ್ದು. ಆ ಹೊಂಡವ ಮುಚ್ಚಿ ಅದರ ಮೇಗೆಯೇ ಮೂರ್ತಿ ನಿಂಬದಿದಾ.
ಅದರ ಮುಚ್ಚಲೆ ಬೇರೆಯೇ ಕ್ರಮ ಇದ್ದು. ಅದೆಂತರ? ಅದುವೇ ಷಡಾಧಾರ!

ಆರು ವಿಧದ ಆಧಾರದ ಮೇಗೆ ಮೂರ್ತಿಯ ನಿಲ್ಲುಸುತ್ತ ಸಂಪ್ರದಾಯವೇ ಷಡಾಧಾರ.
ಅದೇವದೆಲ್ಲ?

ಆಧಾರ ಶಿಲೆ:
ಷಡಾಧಾರ ನಿಂದಿಪ್ಪದು ಆಧಾರ ಶಿಲೆಯ ಮೇಲೆ.
ಹೆರಾಣ ಸುತ್ತಿಲಿ ಮೇಘಲಾ ರಚನೆ ಆಗಿಪ್ಪ ಜಾಗೆಲಿ ಈ ಆಧಾರ ಶಿಲೆ ಇರ್ತು.
ಇಡೀ ದೇವಸ್ಥಾನದ ಕೇಂದ್ರಬಿಂದು – ವಿಗ್ರಹವ ಆಧರುಸಿ ಎತ್ತಿ ಹಿಡ್ಕೊಂಬ ಕಲ್ಲಿನ ಹಾಸು.

ನಿಧಿಕುಂಭ:
ಹೆಸರೇ ಹೇಳ್ತ ಹಾಂಗೆ, ದೇವರ ನಿಧಿ. ಮೂರ್ತಿ ಅಡಿಲಿ ನಿಧಿ ಇರ್ತು – ಹೇದು ಮಾಪ್ಳೆ ರಾಜರು ಮೂರ್ತಿಗಳ ಹೊಡಿಮಾಡಿದ್ಸರ ಇತಿಹಾಸಲ್ಲಿ ಓದಿದ್ದಲ್ಲದೋ – ಅದು ಇದೇ ನಿಧಿಯ ಕಳ್ಳುಲೆ. ಮದಲಿಂಗೆ ರಾಜರ ಕಾಲಲ್ಲಿ ದೊಡ್ಡದೊಡ್ಡ ಕುಂಭಂಗಳಲ್ಲಿ ತುಂಬುಸುತ್ತರೂ, ಈಗೀಗ ಸಣ್ಣದು ಎಡಿಗಾವುತ್ತಷ್ಟೆ. ಕಾಲ ಬದಲಿದ್ದು, ಕ್ರಯ ತಿರುಗಿದ್ದು.
ಅಂತೂ – ದೇವಾಲಯದ ಆಸ್ತಿಕ ಭಕ್ತರೆಲ್ಲೋರುದೇ ಸೇರಿ ಹೊಡಿಹೊಡಿ ಸೇರುಸಿ ಇಡಿ ತುಂಬುಸುವ ನಿಧಿ ಈ ನಿಧಿಕುಂಭ.
ಗ್ರಾಮದ ಎಲ್ಲೋರುದೇ ಒಂದೊಂದು ಎತಾಶೆಗ್ತಿ ತುಂಬುಸಲೆ ಅವಕಾಶ ಇದ್ದಾಡ ನಿಧಿಯ. ಅದೆಲ್ಲವೂ ಗೋಪಾಲಕೃಷ್ಣನ ನಿಧಿಯೇ ಇದಾ!

ಶಿಲಾಪದ್ಮ:
ನಿಧಿಯ ಮೇಗೆ ಗಟ್ಟಿಗೆ ಕಾದುಕೂಪ ಈ ತಾವರೆ ಚಿಹ್ನೆಯ ಕಲ್ಲು – ಶಿಲಾಪದ್ಮ.
ನಿಧಿಯ ಭದ್ರತೆಗೂ ಆತು – ಮೂರ್ತಿಯ ಆಧಾರಕ್ಕೂ ಆತು.

ಶಿಲಾಕೂರ್ಮ:
ಇದುದೇ ಒಂದು ಶಿಲಾ ರಚನೆಯೇ, ಶಿಲಾಪದ್ಮದ ಮೇಗೆ ಮಡಗಲೆ. ಪದ್ಮ ಆದ ಮೇಗೆ ಕೂರ್ಮ.

ಯೋಗನಾಳ:
ಶಿಲಾಕೂರ್ಮದಮೇಗೆ ಉದ್ದಕೆ ಇಪ್ಪ ಶಿಲಾರಚನೆ ಈ ಯೋಗನಾಳ ಆಡ. ಮನುಷ್ಯನ ದೇಹಲ್ಲಿ ಶ್ವಾಸನಾಳ, ಅನ್ನನಾಳ ಇಪ್ಪ ಹಾಂಗೆ ಇದೊಂದುನಾಳದ ಪ್ರತೀಕ –ಹೇಳಿದವು ಮರಿಮನೆ ಮಾವ.
ಜಾಸ್ತಿ ವಿವರ ಒಪ್ಪಣ್ಣಂಗೆ ನೆಂಪಿಲ್ಲೆ; ಆದರೆ ಮರಿಮನೆ ಮಾವಂಗೆ ಅರಡಿಗು – ನಿಂಗೊ ಕೇಳಿರೆ ಹೇಳುಗು.

ನಪುಂಸಕ ಶಿಲೆ:
ಎಲ್ಲಾ ಆಧಾರಂಗಳ ಮುಚ್ಚಿಗೊಂಡು, ಎಲ್ಲವನ್ನೂ ಒಳಗೊಂಡು, ಹೆರಂಗೆ ಎಂತದೂ ಕಾಣದ್ದ ಹಾಂಗೆ ಗಟ್ಟಿಗೆ ಮನಿಕ್ಕೊಂಡಿಪ್ಪದು ಈ ನಪುಂಸಕ ಶಿಲೆ. ಹೆಸರೆಂತಕೆ ಹಾಂಗೆ ಬಂದು ಹೇದು ನವಗರಡಿಯ. ಮರಿಮನೆ ಮಾವನೋ, ಮುನಿಯಂಗಳ ಜೋಯಿಶಣ್ಣನೋ ಮಣ್ಣ ಹೇಳೇಕಟ್ಟೆ.

~

ಈ ನಪುಂಸಕ ಶಿಲೆಯ ಮೇಗೆಯೇ ಪಾಣಿಪೀಠ ಕೂಪದಾಡ. ಪಾಣಿಪೀಠಲ್ಲಿ ಇದಾ –ದೇವರ ವಿಗ್ರಹ ಬಿಂಬ ಇಪ್ಪದು!
ಹಾಂಗಾಗಿ, ಆಧಾರ ಶಿಲೆಂದ ದೇವರ ಶಿರಸ್ಸು ಒರೆಂಗೆ ಒಂದೇ ನೇರಲ್ಲಿ – ನಮ್ಮ ದೇಹರಚನೆಯ ಪ್ರತೀಕದ ಹಾಂಗೆ – ಬತ್ತು ಹೇಳ್ತದು ಮರಿಮನೆ ಮಾವನ ಅಭಿಪ್ರಾಯ.

ಹೇಳಿದಾಂಗೆ, ಶಿಲಾಕೂರ್ಮ ಆದಮತ್ತೆ ಯೋಗನಾಳ ಬಪ್ಪ ಮದಲು ಕೆಲವು ಉಪ ಆಧಾರಂಗೊ ಆಯೇಕಡ.
ರಜತ ಕೂರ್ಮ-ರಜತ ಪದ್ಮ, ಸ್ವರ್ಣಕೂರ್ಮ-ಸ್ವರ್ಣ ಪದ್ಮ – ನವರತ್ನ – ಇವಿಷ್ಟು ಆಯೇಕಡ.
~

ಇನ್ನು ಗರ್ಭಗುಡಿಯ ದ್ವಾರಂದ ಒಂದಡಿಯಷ್ಟು ಕೆಳ ಪುನಾ ಒಂದು ವೆವಸ್ತೆ ಇದ್ದಾಡ.
ಅದಕ್ಕೆ ಗರ್ಭನ್ಯಾಸ ಹೇದು ಹೆಸರಾಡ.
ನಾಲ್ಕು ಸಣ್ಣ ಇಟ್ಟಿಗೆಗೊ, ಒಂದು ಪೂರ್ಣ ಇಟ್ಟಿಗೆ – ಅದರ ಮೇಗೆ ಒಂದು ತಾಮ್ರದ ಪೆಟ್ಟಿಗೆ, ಅದರ್ಲಿ ನವರತ್ನಂಗೊ ಇತ್ಯಾದಿಗೊ ಬತ್ತಾಡ. ಇದೆಲ್ಲವೂ ಗರ್ಭಗುಡಿಯ ದ್ವಾರದ ಅಡಿಯ ಹೊಸ್ತಿಲಿಲಿ ಬತ್ತಾಡ.

~

ಹೊಸ್ತು ಊಟ ಅಪ್ಪಗಳೂ ಹೊಸತ್ತೊಂದು ಸಂಗತಿ ಕೇಳಿದ್ದು ಒಪ್ಪಣ್ಣಂಗೆ ಕೊಶೀ ಆತು. ಬೈಲಿಂಗೆ ಒಂದು ವಾರದ ಶುದ್ದಿಗೂ ಆತು.
ಷಡಂಪಾಡಿ ದೇವಸ್ಥಾನದ ಹಾಂಗಿಪ್ಪ ಸಾವಿರಾರು ಬೈಲ ದೇವಸ್ಥಾನಂಗೊ ಇದ್ದು. ಜೀರ್ಣ ಆವುತ್ತು; ಜೀರ್ಣೋದ್ಧಾರ ಆವುತ್ತು. ಆದರೆ ಇಂತ ಸೂಕ್ಷ್ಮ ವಿಶಯಂಗೊ ನಾವು ಗಮನಕೊಡದ್ದೆ ಕಾಣೆ ಆವುತ್ತು.

ನಾವೆಲ್ಲರೂ ದೇವಸ್ಥಾನಂಗೊಕ್ಕೆ ಹೋವುತ್ತು – ಬತ್ತು; ಕಾಣಿಕೆ ಹಾಕುತ್ತು, ನಮಸ್ಕಾರ ಮಾಡ್ತು, ಪ್ರಸಾದ ತೆಕ್ಕೊಳ್ತು.
ಆದರೆ ಆ ದೇವಸ್ಥಾನದ ಹಿಂದೆ, ಅದರ ರಚನೆಯ ಹಿಂದೆ ಎಷ್ಟು ವಿಷಯಂಗೊ ಇದ್ದು ಹೇಳ್ತದರ ಅರಿತ್ತಿಲ್ಲೆ.
ಅದು ಗೊಂತಾಯೇಕಾರೆ ಹೀಂಗೇನಾರು ಪುಣ್ಯಕಾರ್ಯದೊಟ್ಟಿಂಗೆ ಕೈಜೋಡುಸೇಕು.

ದೇವಸ್ಥಾನದ ಜೀರ್ಣೋದ್ಧಾರಲ್ಲಿ ಕೈಜೋಡುಸುದು ಹೇಳಿರೆ ದೇವರ ಆವಾಸಸ್ಥಾನವ ಪುನರ್ನಿರ್ಮಾಣ ಮಾಡುವಂಥಾದ್ದು.
ಆ ಪುಣ್ಯಕಾರ್ಯಲ್ಲಿ ಎಲ್ಲೋರುದೇ ಸೇರೇಕು. ಸೇರಿ ಕೃತಾರ್ಥರಾಯೇಕು – ಹೇದು ಮರಿಮನೆಮಾವ ಶಡಂಪಾಡಿ ಗೋಪಾಲಕೃಷ್ಣನ ಪರವಾಗಿ ಹೇಳಿದವು.

~

ಒಂದೊಪ್ಪ: ಆಧಾರ ಶಿಲೆ ದೇವಸ್ಥಾನದ ಗಟ್ಟಿಗೆ ಆಧಾರ; ನಿಧಿಕುಂಬ ದೇವಸ್ಥಾನದ ಭವಿಷ್ಯತ್ತಿಂಗೆ ಆಧಾರ.

ಸೂ:
ಪಟಂಗೊ –

 

ಒಪ್ಪಣ್ಣ

   

You may also like...

12 Responses

  1. ಗೋಪಾಲ ಬೊಳುಂಬು says:

    ಗೊಂತಿಲ್ಲದ್ದ ಸುಮಾರು ವಿಷಯಂಗೊ ಗೊಂತಾತು, ಒಪ್ಪಣ್ಣನ ಲೇಖನ ಒಪ್ಪ ಇತ್ತು.

  2. ಅನಿರುದ್ದ says:

    ಒಪ್ಪಣ್ಣ ಭಾವ, ಓದಿ ಸುಮಾರು ವಿಶಯ ಗೊ೦ತಾತು. ಧನ್ಯವಾದ೦ಗ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *