Oppanna.com

ಶಂಕರನ ಕಿಂಕರನೆ, ಶಂಕರಾಚಾರ್ಯನೇ…

ಬರದೋರು :   ಒಪ್ಪಣ್ಣ    on   20/04/2012    22 ಒಪ್ಪಂಗೊ

ಚುಬ್ಬಣ್ಣನ ಮದುವೆಗೆ ಬಂದಿಕ್ಕಲೆಡಿಯದ್ದೋರು ಮರುವಾರಿ ಸಮ್ಮಾನಕ್ಕೆ ಬಂದರೆ ಸಮ ಅಕ್ಕು ಹೇಳ್ತ ಲೆಕ್ಕಲ್ಲಿ ದೊಡ್ಡಭಾವ° ಬೈಕ್ಕು ಕಾಲೆಡಕ್ಕಿಲಿ ಮಡಿಕ್ಕೊಂಡು ಸೀತ ಬಂದದು ದೊಡ್ಡಜ್ಜನ ಮನಗೆ!
ಪೈಶೆಕೊಡದ್ದೆ ಒಯಿವಾಟು ಆವುತ್ತರೆ ಒಪ್ಪಣ್ಣಂಗೂ ಆಗದ್ದೇನಿಲ್ಲೆ, ಹಾಂಗೆ ದೊಡ್ಡಭಾವನ ಬೈಕ್ಕಿಲಿ ನಾವುದೇ ಹೋವುಸ್ಸು ನಿಘಂಟಾಗಿತ್ತು.
ಬೇಗ ಹೆರಟು ಹೋಪದು ಹೇದು ಮಾತಾಡಿಗೊಂಡಿದ್ದರೂ – ಉದಿಉದೆಕಾಲಕ್ಕೇ ದೊಡ್ಡಳಿಯಂಗೆ ಟಾಟಮಾಡಿ – ಕೊಂಗಾಟಮಾಡಿ ಹೆರಟಪ್ಪಗ ಹೊತ್ತು ಮಜ್ಜಾನಕ್ಕೆ ಹತ್ತರೆ ಆಗಿದ್ದತ್ತು. ಮಾವುಂಗಲ್ಲು ವೃತ್ತ ಕಳುದು ಅಲ್ಲಿಗೆತ್ತುವಗ ಮದುಮಕ್ಕೊ ಕಾರಿಂದ ಇಳುದು ಕಾಲಿಂಗೆ ನೀರೆರದು ಮನೆಮೆಟ್ಟುಕಲ್ಲು ಹತ್ತಿ ಆಗಿದ್ದತ್ತು. ಮಣ್ಚಿಟ್ಟೆಕರೆಲಿ ಸಾಲಿಂಗೆ ಕೂದಿತ್ತವು – ಬಂದೋರು; ಇದ್ದೋರು – ಎಲ್ಲೋರುದೇ.
ಎಂತ ಪುಳ್ಳಿಯೇ – ಹೇದು ದೊಡ್ಡಭಾವನ ಉಪಚಾರ ಮಾಡಿದವು ದೊಡ್ಡಭಾವನ ಅಜ್ಜನಮನೆ ದೊಡ್ಡಜ್ಜ ಕೂದಲ್ಲಿಂದಲೇ!
~
ಮದುವೆ ಮುನ್ನಾಣದಿನಂದಲೇ ಸುದರಿಕೆ ಮಾಡಿದ ಬೆಟ್ಟುಕಜೆಮಾಣಿ ಅಲ್ಲೇ ಕರೇಲಿ ಹಸೆಬಿಡುಸಿ ಮನುಗಿದ್ದ; ಒರಕ್ಕು-ಬಚ್ಚಲು ಬಿರಿತ್ತಷ್ಟೆ ಅವಂಗೆ. ಕೊಟ್ಟೆಮಡಲಿನ ಮಡದು ಮಾಡಿದ ಬೀಸಾಳೆಲಿ ರಜವೇ ಗಾಳಿಹಾಕಿಂಡು, ಉಫ್, ಸೆಕೆ – ಹೇಳಿದ; ಎಂಗಳ ಕಂಡಪ್ಪದ್ದೇ.
ನೀರು ಮಜ್ಜಿಗೆ ಎಷ್ಟು ಕುಡುದರೂ ಸಾಕಪ್ಪಲಿಲ್ಲೇಡ ಈಗ.
“ಶೆಕೆಯ ಬಿಸಿ ತಡಿತ್ತಿಲ್ಲೆ.. ಉಫ್”- ಹೇಳಿದ° ಮತ್ತೊಂದರಿ.
ಅವಂಗೆ ಕುಂಬ್ಳೆಸೀಮೆ ಭಾಶೆ ಸರೀ ಅರಡಿತ್ತರೂ, ಒಪ್ಪಣ್ಣನ ಹತ್ತರೆ ಮಾತಾಡುದು ಅವನ ಮನೆಮಾತು – ಪಂಜಭಾಶೆಯೇ.
ಎಂಗಳ-ನಿಂಗಳ ಹೇದು ಮಾತಾಡುವ ಭಾವಯ್ಯಂದ್ರ ಎಡಕ್ಕಿಲಿಯೂ ಒಪ್ಪಣ್ಣನ ಹತ್ತರೆ ಮಾತಾಡುವಗ ಎನಿಗೆ – ನಿನಿಗೆ ಪಂಜಭಾಶೆಯೇ ಬಕ್ಕು.
ಅದೆಂತಕೆ – ನವಗರಡಿಯ; ಆದರೆ, ಅದುದೇ ಒಂದು ಕೊಶಿಯೇ ಒಪ್ಪಣ್ಣಂಗೆ!
~
ಹೆಸರಿಂಗೆ ಸರೀ ಬೆಟ್ಟದ ಹಾಂಗೇ – ಎತ್ತರ – ಬೆಟ್ಟುಕಜೆ ಮಾಣಿಯ ಕಂಡು ಗೊಂತಿದ್ದೋ ನಿಂಗೊಗೆ?
ಯೇವದಾರು ಜೆಂಬ್ರಕ್ಕೆ ಅವ° ಬಂದಿದ್ದರೆ ಕಾಣದ್ದೆ ಇಪ್ಪಲೆ ಕಾರಣವೇ ಇಲ್ಲೆ.
ಎಂತಗೆ? – ಅವ° ಚೆಕ್ಕನಾಟಿ ಕೂದುಗೊಂಡ್ರೂ ಸಾಕು – ನಮ್ಮ ಎತ್ತರ ಆವುತ್ತ; ನಿಂದುಗೊಂಡ್ರೆ ಕೇಳುದೇ ಬೇಡ – ನಾವು ಕೊರಳು ಎಕ್ಕಳುಸಿ ನೋಡೇಕಟ್ಟೇ; ಮಾತಾಡೇಕಟ್ಟೆ! ಹಾಂಗಾಗಿ – ಅವ ಇಪ್ಪ ಜೆಂಬ್ರಲ್ಲಿ – ಆರ ಕಾಣದ್ದರೂ – ಅವನ ಕಾಂಗು!
ಮನ್ನೆ ಮನಿಕ್ಕೊಂಬಗಳೂ ಹಾಂಗೇ – ಈಚ ಹುಲ್ಲಸೆ ಸಣ್ಣ ಅಪ್ಪದು ಬೇಡ ಹೇದು ಹಂತಿ ಹಸೆಯನ್ನೇ ಬಿಡುಸಿಗೊಂಡಿದ° – ಬೇಕಾದಷ್ಟೇ ಮಡಿಸೆಂಡರೆ ಆತನ್ನೇದು. 😉

~
ಬೆಟ್ಟುಕಜೆಮಾಣಿ ಎಷ್ಟು ಹೇಳಿರೂ ಬೆಶಿಲು ಕೇಳೇಕೇ; ಏರಿಂಡೇ ಹೋತು.
ಹೊಸ ಬಿನ್ನೆರೊಳಾಣ ಮಾತುಕತೆಗಳೂ ಏರಿಂಡಿದ್ದತ್ತು. ಅಟ್ಟುಂಬೊಳಾಂದ ‘ಉಂಬಲಾತು’ – ಹೇಳಿದ್ದು ಕೇಳುವ ಒರೆಂಗೂ;
ಇದರೆಡಕ್ಕಿಲಿ ಬೆಲ್ಲ-ನೀರು, ನೀರುಮಜ್ಜಿಗೆ, ಶುಂಟಿ ಶರ್ಬತ್ತು – ಎಷ್ಟು ಹಂಡೆ ಮುಗುದ್ದೋ ಏನೋ! ದೊಡ್ಡಜ್ಜಂಗೂ ಅರಡಿಯ.

ಉಂಬಲಾತು ಹೇಳಿಅಪ್ಪದ್ದೇ ವಾತಾವರಣ ಒಂದರಿಯೇ ಬದಲಿತ್ತು.
ಎಲ್ಲೋರುದೇ ಎದ್ದು ಒಂದರಿ ಕೈಕ್ಕಾಲುಮೋರೆ ತೊಳಕ್ಕೊಂಡು ಬಂದವು.
ಯೇವ ರೀತಿ ಕುಂಟಾಂಗಿಲಭಾವ ಯೇವಗಳೂ ಕುಂಟಾಂಗಿಲ ತಿಂತನಿಲ್ಲೆಯೋ – ಅದೇ ರೀತಿ ಈ ಬೆಟ್ಟುಕಜೆ ಮಾಣಿ ಯೇವಗಳೂ ಮನಿಕ್ಕೊಂಡೇ ಇಪ್ಪದಲ್ಲ; ಮನುಗಿದ್ದ ಹಸೆಯ ಅಲ್ಲೇ ಬಿಡುಸಿ ಹಂತಿಮಾಡಿ ಕರೇಲಿ ಕೂದುಗೊಂಡ°.
ಉಶಾರಿ ಮಾಣಿ ಅವ° – ಕಳುದೊರಿಶ ಕೊಡೆಯಾಲಲ್ಲಿ ಕಲಿವಗ ಅವಂಗೆ ಬೆಳ್ಳಿ ರೆಂಕೆ ಸಿಕ್ಕಿದ್ದು – ಯೋಗಾಸನ ವಿಶಯಲ್ಲಿ. ಅದರಿಂದ ಮತ್ತೆ ಅವನ ’ಯೋಗದ ಮಾಣಿ’ ಹೇಳಿಯೂ ಹೇಳ್ತವು ಕೆಲವುಜೆನಂಗೊ.
ಕಲಿವಿಕೆ ಮಾಂತ್ರ ಅಲ್ಲ; ಇತರೆ ಹತ್ತಾರು ವಿಶಯಂಗೊ ಅರಡಿಗು; ಮಂತ್ರ, ತಂತ್ರ, ಅಡಿಗೆ, ಪರಿಕರ್ಮ, ಮಾತುಕತೆ, ಭಾಷಣ, ಭೂಷಣ, ಭೋಜನ – ಎಲ್ಲವೂ.
ಇದರೆಡಕ್ಕಿಲಿ ಒಂದರಿ ಉತ್ತರಭಾರತ ಪ್ರವಾಸವನ್ನೂ ಮಾಡಿದ್ದ; ಅಪುರೂಪದ ಕೆಲವು ಜಾಗೆಗಳ ನೋಡ್ತ ’ಯೋಗ’ಲ್ಲಿ.
ಅದೆಲ್ಲ ಆದ ಮತ್ತೆ ನಾವು ಅವನ ಕಾಂಬದು ಇಂದೇ ಸುರು ಇದಾ!
~

ಶಂ-ಕರನಾದ ಆಚಾರ್ಯರ ಪ್ರಭೆ ಎಂದಿಂಗೂ ಅರಳಲಿ

ಹಂತಿಲಿಯೂ ಬೆಟ್ಟುಕಜೆಮಾಣಿಯ ಎದುರೇ ಕೂದುಗೊಂಬಲೆ ಸಿಕ್ಕಿತ್ತು; ಅದುದೇ ಒಂದು ಯೋಗವೇ ಅಲ್ಲದೋ?
ಬಳುಸಲೆ ಸುರು ಅಪ್ಪದ್ದೇ ಮಾಣಿಗೆ ಸೆಕೆ ಇಳುದತ್ತೋ ಏನೋ; ಮೋರೆಲಿ ರಜ ಉಲ್ಲಾಸ ಕಾಂಬಲೆ ಸುರು ಆತು.
ಊಟ ಆರಂಭ ಆತು – ಹಣ್ಣು ಹಂಪಲು, ಮದುವೆಯ ಚೀಪೆಗಳೂ, ಮಯಿಸೂರು ಪಾಕುಗಳೂ – ಎಲ್ಲವೂ ಸಾಲುಸಾಲಿಲಿ ಎತ್ತಿತ್ತು.
ಪೇನಿನ ಅಡಿಲೇ ಕೂದುಗೊಂಡ್ರೂ – ಬಿಡದ್ದ ಸೆಕೆಯ ಬಗ್ಗೆ ಮಾತಾಡಿದ ಯೋಗದ ಮಾಣಿ.

“ನಮ್ಮಲ್ಲಿ ಆದ್ರೂ ತೊಂದ್ರೆ ಇಲ್ಲೆ, ಈ ಉತ್ತರಭಾರತಕ್ಕೆ ಹೋದ್ರೆ ಹೀಂಗಲ್ಲ – ಛಳಿಗಾಲಲ್ಲಿ ಹೆಚ್ಚು ಛಳಿ; ಸೆಕೆ ಸಮಯಲ್ಲಿ ತುಂಬ ಸೆಕೆ. ಛಳಿಯೂ, ಶೆಕೆಯೂ ಎರಡೂ ಹೆಚ್ಚು. ಕೂಪ್ಲೇ ಎಡಿತ್ತಿಲ್ಲೆ” ಹೇಳಿದ°. ಅವನ ಉತ್ತರಭಾರತ ಪ್ರಯಾಣದ ಅನುಭವ ಹೇದು ನವಗೆ ಅರ್ತ ಆತು.
“ಎಂಗ್ಳ ಕ್ಲಾಸಿಂದ ಅವಗ ಹೋಗಿಪ್ಪಗ, ಡಿಲ್ಲಿಲಿ ನಾಕುಡಿಗ್ರಿ ಚಳಿ. ಒಂದು ವಾರ ಈ ಚಳಿಗೆ ಬೆಳಿಗ್ಗೆ ತಣ್ಣೀರು ಸ್ನಾನ ಮಾಡಿದ್ದು. ಸ್ನಾನಕ್ಕೆ ಸ್ವಲ್ಪ ಬಿಸಿನೀರು ಕಂಡದ್ದು ಕೇದಾರಲ್ಲಿ ಮಾತ್ರ” ಹೇಳಿದ°. ಕೇದಾರಲ್ಲಿ ಬೆಶಿನೀರೋ! ಇದೆಂತ ಕತೆ? – ಅವಂಗೆ ಅರಡಿವಷ್ಟು ವಿವರುಸಿದ°.

~

ಹಿಮಾಲಯಲ್ಲಿಪ್ಪ ಕೇದಾರ ಹೇದರೆ ಕೇದಾರನಾಥನ ಕ್ಷೇತ್ರ ಅಡ. ಅಲ್ಲೇ ಕರೇಲಿ ಭೂಮಿಒಳಂದ ಬತ್ತ ಬೆಶಿನೀರ ಬೆಂದ್ರ್ ತೀರ್ಥ ಇದ್ದಾಡ.
ಬಿಸಿ ಹೇಳಿದ್ರೆ ಎಂತಾ ಬಿಸಿ – ಉಫ್- ಮುಟ್ಟಿದ್ರೆ ಪೊಕ್ಕುಳು ಬಕ್ಕು! ಬಿಳಿಒಸ್ತ್ರಲ್ಲಿ ಅಕ್ಕಿಯ ಕಟ್ಟಿ ಹಾಕಿದ್ರೆ ಹತ್ತೇ ಹತ್ತು ನಿಮಿಷಲ್ಲಿ ಅನ್ನ ಆಗಿರ್ತಾಡ!
ಚಳಿಯ ಊರಿಲಿ ಹಾಂಗೊಂದು ಬೆಶಿ ಇರೆಕ್ಕಾರೆ ಇದು ದೈವ ಲೀಲೆಯೇ ಸರಿ; ಅಲ್ಲದೋ?
ಶಿವನಮುಡಿಂದಲೇ ಬೆಶಿನೀರು ಬಪ್ಪದು ಹೇದು ಆ ಊರಿನ ನಂಬಿಕೆ. ಅಲ್ಲೇ ಹತ್ತರೆ ಗಂಗೋತ್ರಿಯೂ ಇದ್ದಲ್ಲದೋ!
ಕೇದಾರಲ್ಲಿ ಪಾಂಡವರು ಶಿವನ ತಪಸ್ಸು ಮಾಡಿ ಒಲುಸಿಗೊಂಡ ನೆಂಪಿಂಗೆ ಅಲ್ಲಿ ಶಿವನ ಪ್ರತಿಷ್ಠೆ ಮಾಡಿದವು ಹೇಳ್ತದು ಪ್ರತೀತಿ.
ಕಾಲಾನುಕ್ರಮಲ್ಲಿ, ಜೆನರ ನಂಬಿಕೆ, ಅಧಾರ್ಮಿಕತೆ ಬಂದಪ್ಪದ್ದೇ – ಈ ದೇವಸ್ಥಾನವ ನೆಡೆಶುವವೇ ಇಲ್ಲದ್ದೇ ಆತು.
ಆ ಸಮೆಯಲ್ಲಿ ಶಂಕರಾಚಾರ್ಯರು ಬಂದು ಪುನರ್ಪ್ರತಿಷ್ಠೆ ಮಾಡಿ, ಬಿಂಬವ ಪುನಶ್ಚೇತನ ಮಾಡಿದವಾಡ.
ಹಾಂಗಾಗಿ, ಅಂಬಗಂದ ಮತ್ತೆ ಪುನಾ ಈ ಶಿವದೇವಸ್ಥಾನ ನೆಡೆತ್ತಾ ಇದ್ದಾಡ – ಯೋಗದಮಾಣಿ ಹೇಳಿಗೊಂಡೇ ಹೋದ.
~
ಶಂಕರಾಚಾರ್ಯರ ಸಮಾಧಿಯೂ ಅಲ್ಲೇ – ಕೇದಾರಲ್ಲೇ ಆದ್ದಡ. ಸಮಾಧಿ ಆದ್ದುದೇ ಹಾಂಗೆ – ಸೀತ ಒಂದು ಗುಡ್ಡೆ ಹತ್ತಿಗೊಂಡು ಹೋದ್ಸಡ.
ಗುಡ್ಡೆ ಹತ್ತಿಗೊಂಡು ಹೋದ್ದು ಕಂಡಿದವು; ಮತ್ತೆ ಎತ್ಲಾಗಿ ಹೋದವು ಹೇಳಿ ಆರಿಂಗೂ ಅರಡಿಯ!
ಅನಂತ ಅದ್ವೈತತೆಲಿ ಲೀನ ಆಗಿಬಿಟ್ಟವು – ಹೇಳಿ ಯೋಗದ ಮಾಣಿ ಹೇಳುಗು.
ಬೆಟ್ಟುಕಜೆಮಾಣಿಗೆ ಸೆಕೆತಡೆಯದ್ದೆ ಶಾಲಿಲಿ ಬೆಗರುದ್ದಿಗೊಂಡು ಮಾತಾಡುದೇ ನಿಲ್ಲುಸಿದ.
ಕೇದಾರದ ಬಗ್ಗೆ ಇದ್ದಿದ್ದ ಆಸಕ್ತಿ ಶಂಕರಾಚಾರ್ಯರ ಬಗ್ಗೆಯೂ ತಿರುಗಿತ್ತು ಒಪ್ಪಣ್ಣಂಗೆ; ಎಲ್ಲಿಯೋ ಶುದ್ದಿ ಕೇಳಿದ್ದು ನೆಂಪಾತು.
~
ಶಂಕರ:
ಇಲ್ಲೇ, ದೊಡ್ಡಜ್ಜನ ಮನೆ ಹೊಡೆಲೇ – ಇನ್ನೂ ತೆಂಕ್ಲಾಗಿ ಹೋದರೆ ಕಾಲಡಿ ಹೇದು ಒಂದು ಜಾಗೆ ಸಿಕ್ಕುತ್ತಾಡ.
ಇಂದುನಿನ್ನೇಣ ಕತೆ ಅಲ್ಲ, ಸಾವಿರ, ಸಾವಿರದ ಮುನ್ನೂರು ಒರಿಶ ಮದಲಿಂಗೆ ಶಿವಗುರು-ಆರ್ಯಾಂಬಾ ದಂಪತಿಗೆ ಮಕ್ಕಳೇ ಆಗಿತ್ತವಿಲ್ಲೆಡ.
ತ್ರಿಶೂರಿನ ವಡಕ್ಕನಾಥ ದೇವರಿಂಗೆ ಪ್ರಾರ್ಥನೆ ಮಾಡಿದ ಮತ್ತೆ ಮಾಣಿ ಹುಟ್ಟುತ್ತನಾಡ. ಶಂಕರನ ಆಶೀರ್ವಾದಲ್ಲೇ ಹುಟ್ಟಿದ ಮಾಣಿಗೆ ಶಂಕರ ಹೇದು ಹೆಸರು ಮಡಗುತ್ತವಡ.
ಶಂಕರ ಸಣ್ಣ ಇಪ್ಪಾಗಳೇ, ಶಿವಗುರು ಶಿವನ ಪಾದ ಸೇರ್ತ.
ಅಮ್ಮನ ಆಸರೆಲಿ ಬೆಳೆದ ಕೊಂಗಾಟದ ಕುಂಞಿ ಶಂಕರಂಗೆ ಕಲಿವಿಕೆಲಿ ತುಂಬ ಆಸಗ್ತಿ.
ಸಣ್ಣ ಇಪ್ಪಾಗಳೇ ಮಹಾ ಉಶಾರಿ; ವೇದ, ವಿದ್ಯೆಗಳ ಸಣ್ಣದರ್ಲೇ ಕಲ್ತುಗೊಳ್ತ°.
ಎಂಟೊರಿಶದ ವಟು ಆಗಿಪ್ಪಾಗ ನಾಲ್ಕೂ ವೇದಂಗಳ ಅರಗುಸೆಂಡಿದ ಹೇದರೆ- ಸಾಮರ್ತಿಗೆ ಎಂತರ ಗ್ರೇಶಿ ನಿಂಗೊ!
~
ಸನ್ಯಾಸ:

ಕಲಿಯುವಿಕೆ ಅಪ್ಪಗಳೇ ಜೀವ-ಆತ್ಮ-ಜೀವನದ ರಹಸ್ಯ ಅರ್ತ ಆತೋ ಏನೋ ಕುಂಞಿ ಮಾಣಿಗೆ. ಉಮ್ಮಪ್ಪ!
ಲೌಕಿಕ ಜೀವನ ಬೇಡ, ಸನ್ಯಾಸ ಜೀವನ ಆಯೇಕು – ಹೇಳ್ತ ಸತ್ಯ ಅರ್ತುಗೊಂಡ ವಟು – ಅಮ್ಮನ ಹತ್ತರೆ ಈ ಬಗ್ಗೆ ಹೇಳುವಗ ಅಮ್ಮಂಗೆ ಹೇಂಗಕ್ಕು.!
ಇದ್ದ ಒಬ್ಬನೇ ಮಗನೂ ಸನ್ಯಾಸಿ ಆದರೆ..?! ಛೆ! ಒಪ್ಪಿದ್ದೇ ಇಲ್ಲೆ.

ಆದರೆ ವಿಧಿಯ ಆಟವೇ ಬೇರೆ!
ಮನೆ ಎದುರಾಣ ಸಾರಡಿತೋಡಿಲಿ ಮಿಂದುಗೊಂಡಿಪ್ಪಾಗ ಒಂದು ಮುದಳೆ ಬಂದು ಶಂಕರನ ಕಾಲಿಂಗೆ ಕಚ್ಚಿಗೊಳ್ತಡ.
ಎಂತ ಮಾಡಿರೂ ಬಿಡುಸಲೆಡಿಯದ್ದ ಕಚ್ಚಾಣ; ಅಮ್ಮನ ಹತ್ತರೆ ಹೇಳ್ತನಡ – ನೀನು ಸನ್ಯಾಸಕ್ಕೆ ಒಪ್ಪಿರೆ ಈ ಮುದಳೆ ಬಿಡ್ತು, ಅಲ್ಲದ್ದರೆ ಇದು ಎನ್ನ ತಿಂತು – ಹೇದು. ಮೊಸಳೆಯ ಬಾಯಿಲಿ ಕಚ್ಚುಸಿಗೊಂಡು ಸಾವದರಿಂದ, ಸನ್ಯಾಸಿ ಆಗಿ ಆದರೂ ಕಣ್ಣೆದುರು ಓಡಾಡಿಂಡು ಇಪ್ಪದು ಒಳ್ಳೆದು ಹೇದು ಕಂಡತ್ತೋ ಏನೋ, ಆತಂಬಗ – ಹೇದು ಒಪ್ಪಿಗೆ ಕೊಟ್ಟತ್ತಡ ಅಮ್ಮ. ಸಂಪ್ರದಾಯಲ್ಲಿ ಇಂದಿಂಗೂ ಸನ್ಯಾಸಕ್ಕೆ ಅಮ್ಮನ ಒಪ್ಪಿಗೆ ಅತ್ಯಗತ್ಯ ಅಡ.
ಅದರಿಂದ ಮದಲೂ, ಮತ್ತೆಯೂ ಆ ಹಳ್ಳಲ್ಲಿ ಮೊಸಳೆ ಕಂಡವ ಇಲ್ಲೆ; ಅಮ್ಮ ಒಪ್ಪಿದ್ದೇ, ಮೊಸಳೆ ಮಾಯ.
~

ಗುರು:

ಸನ್ಯಾಸಿ ಶಂಕರಂಗೆ ಊರೆಂತ, ನೀರೆಂತ!
ಹಾಂಗೇ ಸೀತ ಉತ್ತರದ ಹೊಡೆಂಗೆ ಹೋದೋನಿಂಗೆ ಗೋವಿಂದ ಭಗವತ್ಪಾದರು – ಹೇಳ್ತ ಮಹಾ ಜ್ಞಾನಿ ಸಿಕ್ಕುತ್ತನಾಡ.
ಶಿಷ್ಯತ್ವ ಕೇಳಿದ ಶಂಕರಂಗೆ ಪ್ರಾಥಮಿಕ ಜ್ಞಾನ ಎಷ್ಟಿದ್ದು ಹೇದು ತಿಳಿವಲೆ ಕೆಲವು ಪ್ರಶ್ನೆ ಕೇಳಿದವಡ. ಈಗಾಣ ಕಾಲದ Entrance Test ಗಳ ಹಾಂಗೆ!
ಕುಂಞಿ ಶಂಕರನ ಬಾಯಿಲಿ ಅಗಾಧ ಅದ್ವೈತದ ವೇದಾಂತಂಗೊ ಬಂತಾಡ! ಗುರುಗಳ ಮೀರಿದ ಶಿಷ್ಯ ಇವ° – ಹೇಳ್ತದು ಗುರುಗೋವಿಂದ ಭಗವತ್ಪಾದರಿಂಗೆ ಅಂಬಗಳೇ ಅರಡಿಗಾತಡ.

ಕಾಶಿ:

ಅದಾಗಲೇ ಶಂಕರನ ಜ್ಞಾನನಿಧಿ ಗೊಂತಾದ ಒಂದಷ್ಟು ಜೆನಂಗೊ ಶಿಷ್ಯರಾಗಿ ಬಯಿಂದವು; ಕಲಿವಿಕೆ ಆದಪ್ಪದ್ದೇ, ಕಾಶಿಗೆ ಹೋದವಡ.
ಒಂದರಿ, ನಾಕು ನಾಯಿಗಳ ಕಟ್ಟಿಂಡು ಒಂದು ಬೇಡ – ಮಾರ್ಗಮಧ್ಯಲ್ಲಿ ಹೋಗಿಂಡಿತ್ತಾಡ.
ಶಂಕರನ ಒಟ್ಟಿಂಗಿಪ್ಪೋರು ಅಸ್ಪೃಶ್ಯನ ಕರೆಂಗೆ ಹೋಪಲೆ ಹೇಳಿದವಡ. ಅಷ್ಟಪ್ಪಗ ಆ ಬೇಡ ’ಸಾವೇ ಇಲ್ಲದ್ದ ಆತ್ಮ ಕರೆಂಗೆ ಹೋಯೇಕಾದ್ಸೋ, ಅಲ್ಲ ಈ ಮೂಳೆ ಮಾಂಸಂಗಳಿಂದ ತುಂಬಿದ ದೇಹವೋ’ ಹೇದು ಕೇಳಿತ್ತಡ! ಯಃಕಶ್ಚಿತ್ ಬೇಡ ಕೇಳಿದ ಆ ಮಹಾವೇದಾಂತಂದಾಗಿ, ಆತ್ಮ ಎಲ್ಲರದ್ದೂ ಒಂದೇ – ಹೇಳ್ತ ಪರಮ ಸತ್ಯ ಈ ಮಾಣಿ ಶಂಕರಂಗೆ ಹೊಳದತ್ತಡ. ಇದರನ್ನೇ ಆಳವಾಗಿ ಮನನ ಮಾಡಿಗೊಂಡು ದೇವಾತ್ಮನೂ, ಪರಮಾತ್ಮನೂ ಒಂದೇ – ಹೇಳ್ತ ಅದ್ವೈತ ತತ್ವವ ಪ್ರಚಾರಮಾಡ್ತ “ಶಂಕರಾಚಾರ್ಯ” ಆಗಿ ಬೆಳೆತ್ತ.
ಆ ಬೇಡ ಆರು ಹೇಳ್ತದುದೇ ತಕ್ಷಣ ಗೊಂತಾತು – ನಾಲ್ಕು ವೇದಂಗಳ ಅಧಿಪತಿ ಸಾಕ್ಷಾತ್ ಶಿವ ನಾಲ್ಕು ನಾಯಿಗಳ ಕಟ್ಟಿಂಡ ಬೇಡನ ರೂಪಲ್ಲಿ ಕಂಡದು!
~
ಧರ್ಮಪ್ರಚಾರ:

ಶಂಕರಾಚಾರ್ಯರ ಕಾಲಕ್ಕಪ್ಪಗ ಭಾರತದ ಧಾರ್ಮಿಕ ಚಿತ್ರಣ ಹೇಂಗಿತ್ತು? ಅದಾಗಲೇ ಜೆನಂಗೊಕ್ಕೆ ಸನಾತನ ವೈದಿಕ ಧರ್ಮದ ಬಗೆಗೆ ಮಾಹಿತಿ ಕಮ್ಮಿ ಆಗಿಂಡು ಬಂದಿತ್ತು. ಬೌದ್ಧ ಧರ್ಮದ ಭಿಕ್ಷುಗೊ, ಪ್ರಚಾರಕಂಗೊ ತಾರಕಲ್ಲಿ ಇತ್ತಿದ್ದವು. ಕೆಲವು ರಾಜರೇ ಸ್ವತಃ ಬುದ್ಧರಾದ ಕಾರಣ ಆ ಊರಿನ ಇಡೀ ಜೆನಸಂಖ್ಯೆಯೇ – ಶುದ್ಧ ಸನಾತನಿಯಾದ ಲಕ್ಷಾಂತರ ಕುಟುಂಬಂಗಳ ಬುದ್ಧಮತಕ್ಕೆ ಧರ್ಮಾಂತರ ಆಗಿಂಡಿತ್ತವು.
ಅದಲ್ಲದ್ದೇ, ಅಂಬಗ ನಿಧಾನಕ್ಕೆ ಧರ್ಮವೇ ಅಲ್ಲದ್ದ ಮತ ಇಸ್ಲಾಂ ದೇ ಬೆಳಕ್ಕೊಂಡಿದ್ದತ್ತು.

ಹೀಂಗೇ ಮುಂದುವರುದರೆ ನಮ್ಮ ವೈದಿಕ ಧರ್ಮ ನಿರ್ನಾಮ ಆಗಿ ಹೋಕು ಹೇಳ್ತ ಸಂಗತಿಯ ಶಂಕರಾಚಾರ್ಯರು ಮನಗಂಡವು.
ಅದಕ್ಕಾಗಿ, ನಮ್ಮ ವೇದಂಗೊಕ್ಕೆ ಸರಳ ಸಂಸ್ಕೃತ ಅರ್ಥಂಗಳ ಜೆನಂಗೊಕ್ಕೆ ತಿಳುಶಿಕೊಟ್ಟು, ನಮ್ಮದರ್ಲಿಯೂ ಅಗಾಧ ಸಂಪತ್ತು ಇದ್ದು – ಹೇಳ್ತ ಬಗ್ಗೆ ಪಾಠ ಮಾಡಿದವು. ಅನೇಕ ವಿದ್ವಾಂಸರಿಂಗೆ ಅವರ ಅದ್ವೈತತೆಯ ಬಗೆಗೆ ಪ್ರಚುರಪಡುಸಿದವು; ಒಬ್ಬೊಬ್ಬರೇ, ಒಂದೊಂದು ಊರೇ ಮತ್ತೆ ಸನಾತನತೆಯ ಹೊಡೆಂಗೆ ಬಂತು. ಧರ್ಮಪ್ರಚಾರಕ್ಕಾಗಿ ಭಾರತವ ಸುತ್ತಿ ಸುತ್ತಿ, ಹಲವಾರು ದೇವಸ್ಥಾನಂಗಳ ಜೀರ್ಣೋದ್ಧಾರ ಮಾಡಿ, ಧರ್ಮಪ್ರಚಾರದ ಮೂಲಕ ಭಾರತ ಕಟ್ಟಿಗೊಂಡು ಬೆಳದು ಶಂಕರಾಚಾರ್ಯರು.

ಪಂಚಾಯತನ ಪೂಜೆ:

ವೈದಿಕ ಧರ್ಮಲ್ಲಿ ಕಿಟ್ಟಿದ್ದು ಮುಟ್ಟಿದ್ದು ಪೂರ ದೇವರುಗಳೇ.
ಒಬ್ಬೊಬ್ಬ ಒಂದೊಂದು ದೇವರ ಪೂಜೆ ಮಾಡ್ತ ಗುಂಪು ಕಟ್ಟಿಗೊಂಡರೆ ನಮ್ಮಲ್ಲಿ ಒಗ್ಗಟ್ಟು ಎಲ್ಲಿಂದ ಬರೆಕ್ಕು? – ಅದಕ್ಕೆ ಶಂಕರಾಚಾರ್ಯರು ಹೊಸ ಪೂಜಾಪದ್ಧತಿಯ ಮಾಡುಸಿ ಕೊಟ್ಟವು.

ದೇವರುಗಳಲ್ಲಿ ಆರು ಪ್ರಾಮುಖ್ಯ? ಆರು ಮೇಲೆ? ಹಾಂಗೆ ನೋಡಿರೆ – ವಿಘ್ನ ನಿವಾರಕ ಶ್ರೀ ಗೆಣವತಿ, ಲೋಕ ಮಾತೆ ದುರ್ಗೆ, ಇಡೀ ಲೋಕಕ್ಕೇ ಬೆಣಚ್ಚು ಕೊಡುವ ಸೂರ್ಯ, ಸ್ಥಿತಿಕರ್ತ ವಿಷ್ಣು, ಲಯಕರ್ತ ಶಂಕರ – ಈ ಐದು ಜೆನಂಗಳೂ ಸಮಾನವೇ.
ಒಂದೇ ಶಕ್ತಿ ಪ್ರಕಟ ಆದ ಬೇರೆಬೇರೆ ರೂಪಂಗೊ – ಹೇಳ್ತ ರಹಸ್ಯವ ತಿಳುಶಿಕೊಟ್ಟವು.

ಹಾಂಗಾಗಿ, ಸೂರ್ಯ, ಗೆಣವತಿ, ಅಂಬಿಕೆ, ಶಿವ, ವಿಷ್ಣು – ಈ ಐದು ದೇವರಿಂಗೆ ಒಟ್ಟಾಗಿ ಪೂಜೆ. ಅದುವೇ “ಪಂಚಾಯತನ ಪೂಜೆ”
ನಮ್ಮ ಬಟ್ಟಮಾವಂದ್ರು ಇಂದಿಂಗೂ ಅದೇ ಕ್ರಮಲ್ಲಿ ಪೂಜೆ ಮಾಡಿಗೊಂಡು ಬತ್ತಾ ಇದ್ದವು.

~
ಮಠ:

ಶಂಕರಾಚಾರ್ಯರ ಯೋಚನೆ ಕೇವಲ ಅವರ ಕಾಲಘಟ್ಟಕ್ಕೆ ಮಾಂತ್ರ ಸೀಮಿತ ಆಗಿತ್ತಿಲ್ಲೆ. ನಿರಂತರ ಆಗಿರೇಕು ಹೇಳ್ತದು ಅವರ ಉದ್ದೇಶ ಆಗಿದ್ದತ್ತು.
ಹಾಂಗಾಗಿ, ಕೇವಲ ಅವು ಮಾಂತ್ರ ಧರ್ಮ ಪ್ರಚಾರ ಮಾಡಿರೆ ಸಾಲ – ಅವರಿಂದ ಮುಂದಕ್ಕೂ ಧರ್ಮ ಮುಂದುವರಿಯೇಕು. ಧರ್ಮ ಮುಂದುವರುಸಲೆ ಸನ್ಯಾಸಿಗೊ ಇರೇಕು, ಅವು ಮಠಲ್ಲಿ ಇರೇಕು ಹೇಳ್ತ ಕಲ್ಪನೆ ಬಂತು.
ಅಷ್ಟನ್ನಾರ ಸನ್ಯಾಸಿಗೊ ಹೇದರೆ ಕೇವಲ ಭಿಕ್ಷೆ ಬೇಡಿಗೊಂಡಿದ್ದ ಜೆನಂಗೊ, ಶಂಕರಾಚಾರ್ಯರು ಅವಕ್ಕೊಂದು ಸ್ಥಾವರತೆ ಕೊಟ್ಟು, ಮಠ ಕಟ್ಟಿ ಕೊಟ್ಟು ಅಲ್ಲಿ ಇದ್ದುಗೊಂಡು ಧರ್ಮ ಬೆಳೆಶಲೆ ಹೇಳಿದವು.

ಭಾರತದ ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ – ನಾಲ್ಕೂ ಹೊಡೆಲಿ ನಾಲ್ಕು ಗೋಡೆ ಭದ್ರವಾಗಿರಲಿ ಹೇಳ್ತ ಉದ್ದೇಶಂದ – ನಾಲ್ಕು ಪ್ರಧಾನ ಮಠಂಗಳ ಸ್ಥಾಪನೆ ಮಾಡಿದವು. ಅವು ನಾಲ್ಕು ವೇದಂಗಳ ಆಧರುಸಿ ನಿಲ್ಲೇಕು ಹೇಳ್ತ ಉದ್ದೇಶವೂ ಅದಾಗಿತ್ತು.
ಅದ್ವೈತದ ನಾಲ್ಕು ಆಧಾರ ಸ್ತಂಭ ಆದ ನಾಲ್ಕು ಧ್ಯೇಯವಾಕ್ಯವ ಆ ಮಠಂಗೊಕ್ಕೆ ವರದಾನವಾಗಿ ಕೊಟ್ಟವು. ಯಜುರ್ವೇದೀಯ ಶಾರದಾಪೀಠ ದಕ್ಷಿಣದ ಶೃಂಗೇರಿಲಿಪ್ಪದು ನವಗೆಲ್ಲರಿಂಗೂ ಅರಡಿಗು. ನಮ್ಮ ಹೊಸನಗರದ ಶ್ರೀ ಪರಂಪರೆಯೂ ಇದೇ ಶಂಕರ ತತ್ವದ್ದು.
~

ಶಾಂತಬೌದ್ಧಧರ್ಮವ ಬಹು ಸುಲಭವಾಗಿ ಕತ್ತಿಧರ್ಮ ಇಸ್ಲಾಂ ನುಂಗಿ ಹಾಕುತಿತು. ಹಲವಾರು ದಿಕ್ಕೆ ಹಾಕಿದ್ದುದೇ.
ಆ ಸಂದರ್ಭಲ್ಲಿ ಬಂದು ನಮ್ಮ ಭಗವದ್ಗೀತೆಯ ಶ್ರೀಕೃಷ್ಣನ ಬಗ್ಗೆ, ರಾಮಾಯಣದ ಶ್ರೀರಾಮನ ಬಗ್ಗೆ, ಅರ್ಜುನನ ಪರಾಕ್ರಮದ ಬಗ್ಗೆ ತಿಳುಶಿ, ನಮ್ಮ ಎಚ್ಚರುಸಿದ ಶಂಕರಾಚಾರ್ಯರು – ದೇವರು ಶಂಕರನ ನಿಜವಾದ ಕಿಂಕರ. ಅಲ್ಲದೋ?
ಅಂದು ಆ ಪುಣ್ಯಾತ್ಮ ಮಾಡಿದ ಆ ಮಹಾಪುಣ್ಯಕಾರ್ಯ ನಮ್ಮೆಲ್ಲರನ್ನೂ ಇಂದಿನ ಒರೆಂಗೆ ರಕ್ಷಿಸಿದ್ದು ಹೇಳ್ತದು ನಿಸ್ಸಂದೇಹ.

ಭೌತಿಕವಾಗಿ ಬದ್ಕಿದ್ದದು ಕೇವಲ ಮೂವತ್ತೆರಡು ಒರಿಶ ಆಗಿದ್ದರೂ, ಮಾಡಿದ ಕಾರ್ಯ ಅಪಾರ.
ಅವರ ಅಂಬಗಾಣ ದೂರಾಲೋಚನೆಯ ವೇದಾಂತ, ಭಾಷ್ಯಂಗೊ, ಅವು ರಚನೆ ಮಾಡಿದ ಸಾವಿರಾರು ಶ್ಲೋಕಂಗೊ, ಮಠಂಗೊ, ಪಂಚಾಯತನ ಪೂಜಾಪದ್ಧತಿಗೊ – ಎಲ್ಲವೂ ಇಂದಿಂಗೂ ನೆಡದು ಬತ್ತಾ ಇದ್ದು.

ಇದರಿಂದಾಗಿ ಶಂಕರಾಚಾರ್ಯರು ಇಂದಿಂಗೂ ನಮ್ಮೊಟ್ಟಿಂಗೇ ಇದ್ದವು – ಹೇಳ್ತದು ನವಗೆ ಅರಡಿತ್ತು.
~

ಸಮಾಧಿ:
ಒಳುದ ಸ್ವಾಮಿಗಳ ಹಾಂಗೆ ಶಂಕರಾಚಾರ್ಯರ ವೃಂದಾವನ ಇಲ್ಲೆ!
ಎಂತಕೆ ಹೇದರೆ, ಆಗ ಮಾತಾಡಿದ ಹಾಂಗೆ, ಶಂಕರಾಚಾರ್ಯುರು ನೇರವಾಗಿ ಅವರ ಅದ್ವೈತ ತತ್ವಲ್ಲಿ ಲೀನ ಆಗಿ, ನಮ್ಮೆದುರಂದ ಕಾಣೆ ಆಗಿ ಹೋದವು.
ದಕ್ಷಿಣದ ಕಾಲಡಿಂದ, ಉತ್ತರದ ಕೇದಾರದ ವರೆಂಗೆ ಸಿಕ್ಕುವ ಎಷ್ಟೋ ಪಾಳುಬಿದ್ದ ದೇವಸ್ಥಾನಂಗಳ ಪುನರ್ನವೀಕರುಸಿಗೊಂಡು, ಭಾರತಕ್ಕೆ ಧಾರ್ಮಿಕ ಚೈತನ್ಯವ ತುಂಬಿಂಡು, ಮೂವತ್ತೆರಡು ಒರಿಶದ ಜವ್ವನಿಗ ಅಂತರ್ಧಾನ ಆವುತ್ತ!
ಬರೇ ಮೂವತ್ತೆರಡು; ನಮ್ಮ ಹೆಚ್ಚಿನೋರಿಂಗೆ ಒಂದು ಜೀವನವೇ ಸುರು ಆಗಿರ್ತಿಲ್ಲೆ ಆ ಪ್ರಾಯಲ್ಲಿ! ಹು!!

ಇದರೆಲ್ಲ ಗ್ರೇಶಿಂಡಿಪ್ಪಗಳೇ ಊಟದ ಹಂತಿಗೆ ಮಜ್ಜಿಗೆ ನೀರು ಬಂತು.  ಹೊಟ್ಟೆತುಂಬ ಉಂಡು ಗೋವಿಂದ ಹಾಕಿ ಎದ್ದೂ ಆತು.
~
ಒಯಿಶಾಕ ಮಾಸ, ಶುಕ್ಲಪಕ್ಷ ಪಂಚಮಿಯ ದಿನ ಹುಟ್ಟಿದ ಶಂಕರಾಚಾರ್ಯರ ಆರಾಧನೆಗಾಗಿ ಶಂಕರಜಯಂತಿ ಗವುಜಿಲಿ ಆಚರಣೆ ಮಾಡ್ತವು. ನಮ್ಮ ಶ್ರೀಗುರುಗಳ ಮಾರ್ಗದರ್ಶನಲ್ಲಿಯೂ ಶಂಕರ ಜಯಂತಿ ಕಾರ್ಯ ನೆಡವಲಿದ್ದು. ನಿಂಗೊಗೆ ಗೊಂತಿಕ್ಕಲ್ಲದೋ?
ನಾಳ್ತು ಇಪ್ಪತ್ತೈದರಿಂದ ಇಪ್ಪತ್ತೆಂಟ್ರ ಒರೆಂಗೆ ಭಾನ್ಕುಳಿ ಮಠಲ್ಲಿ ನೆಡವ ಅಭೂತಪೂರ್ವ ಕಾರ್ಯಕ್ರಮದ ಹೇಳಿಕೆ ಬೈಲಿಲಿ ಬಯಿಂದು. ಸಿಕ್ಕಿದ್ದಲ್ಲದೋ?

ಶಂಕರನ ಸೇವೆಯ ಮಾಡಿಂಡೇ, ಶಂಕರನ ಆರಾಧನೆ ಮಾಡಿಂಡೇ, ಶಂಕರನ ಕಿಂಕರ ಆಗಿದ್ದೊಂಡೇ, ಅದ್ವೈತ ಹೇಳ್ತ ಹೊಸ ಚಿಂತನೆಯ ಹುಟ್ಟುಸಿ, ಬೆಳೆಶಿ, ಇಂದಿನ ಒರೆಂಗೂ ಯಶಸ್ವಿಯಾಗಿ ನೆಡೆಶುಲೆ ಕಾರಣೀಭೂತರಾದ ಆ ಶಂಕರಾಚಾರ್ಯ – ಆ ಜ್ಞಾನವೃದ್ಧ ಚೇತನವ ನಾವೆಲ್ಲರೂ ಆರಾಧುಸೇಕು.
ಅಲ್ಲದೋ?

ಒಂದೊಪ್ಪ: ಶಂಕರನ ಕಿಂಕರನಾಗಿ ಈ ಆಚಾರ್ಯರ ಅವತಾರ ಆಗದ್ದೆ ಇರ್ತಿತರೆ, ಈಗ ಭಾರತಲ್ಲಿ ಶಂಕರನ ಪೂಜೆಯೇ ಇರ್ತಿತಿಲ್ಲೆಯೋ ಹೇದು! ಎಂತ ಹೇಳ್ತಿ?!

ಸೂ:
– ಶಂಕರ ಜಯಂತಿ ಹೇಳಿಕೆ ಕಾಗತ ಇಲ್ಲಿದ್ದು: (ಸಂಕೊಲೆ)
– ಪಟ: ಇಂಟರ್ನೆಟ್ಟಿಂದ

22 thoughts on “ಶಂಕರನ ಕಿಂಕರನೆ, ಶಂಕರಾಚಾರ್ಯನೇ…

  1. ಸಕಾಲಿಕ ಲೇಖನ ಒಪ್ಪಣ್ಣಾ. ತುಂಬಾ ಚೆಂದಕೆ ಬರದ್ದೆ.

  2. ಶೃ೦ಗೇರಿಲಿ ಶ೦ಕರಾಚಾರ್ಯರ ಜೀವನಚರಿತ್ರೆಯ ಚಿತ್ರ ಮತ್ತು ಬರಹ ರೂಪಲ್ಲಿ ಪ್ರದರ್ಶಿಸಿದ್ದವು. ಅವಕಾಶ ಇಪ್ಪವು ಹೋಗಿಪ್ಪಗ ನೋಡಿ. ಒಪ್ಪಣ್ನ ಹೇಳಿದ ಎಲ್ಲ ವಿಷಯ೦ಗಳೂ ಅಲ್ಲಿದ್ದು. ಹಾ೦ಗೆಯೇ ಕೊಲ್ಲೂರಿ೦ದ ಮೇಗೆ ಕೊಡಚಾದ್ರಿಲಿ ಶ೦ಕರಾಚಾರ್ಯರ ಸರ್ವಜ್ನ್ಹಪೀಠ ಇದ್ದಿದಾ.. ಅಲ್ಲಿ ಅವು ತಪಸ್ಸು ಮಾಡಿ ಮೂಕಾ೦ಬಿಕೆಯ ಒಲಿಶಿಗೊ೦ಡು ಮತ್ತೆ ಕೆಳ ಕೊಲ್ಲೂರಿ೦ಗೆ ಕರಕ್ಕ೦ಡು ಬ೦ದು ಪ್ರತಿಷ್ಠೆ ಮಾಡಿದ್ದು ಹೇಳಿ ಅಲ್ಲಿ ಪೂಜೆ ಮಾಡ್ತವು ಹೇಳಿದವು.
    ಭಾರೀ ಒಳ್ಳೇ ಶುದ್ದಿ, ಒಪ್ಪ೦ಗೊ ಒಪ್ಪಣ್ಣಾ..

  3. ಶಂಕರಾಚಾರ್ಯರು ಈ ಭೌತಿಕಲ್ಲಿ ಇದ್ದಿದ್ದದೇ ಬರೇ ೩೨ ವರ್ಷ ಮಾತ್ರ,ಅಷ್ಟು ಕಮ್ಮಿ ಸಮಯಲ್ಲಿ ಅವು ಭಾರತವ ಕಾಲ್ನಡಿಗೆಲಿ ಎಷ್ಟು ಸರ್ತಿ,ಹೇಂಗೆ ಸುತ್ತಿದವು ಹೇಳುವದೇ ಊಹನೆಗೆ ಸಿಕ್ಕುತ್ತಿಲ್ಲೆ.ಅವರ ದಂಡಲ್ಲಿ ವೀರಭದ್ರಸ್ವಾಮಿಯ ಆವಾಹನೆ ಇತ್ತಾಡ.ಈ ವೀರಭದ್ರಸ್ವಾಮಿ ಅವರ ಮನೋವೇಗಲ್ಲಿ ಕರಕ್ಕೊಂಡು ಹೋಕಾಡ.ಇದರ ಬಗ್ಗೆ ಆರಿಂಗಾದರೂ ವಿವರ ಗೊಂತಿದ್ದಾ? ಒಪ್ಪಣ್ಣ ಬರದ್ದದು ಭಾರೀ ಲಾಯಿಕ್ಕಾಯಿದು,ನಾವು ಕಳಕ್ಕೊಳ್ತಾ ಇಪ್ಪ ನಮ್ಮ ಮಾತೃಭಾಷೆಯ ಉಳಿಸಲೆ ಒಪ್ಪಣ್ಣನೇ ಸೈ!

  4. ಎಲ್ಲರಿಂಗೂ ಶಂಕರ ಜಯಂತಿಯ ಶುಭಾಶಯಂಗ… ಸಕಾಲಿಕ ಲೇಖನ ಉತ್ತಮವಾಗಿ ಮೂಡಿ ಬಯಿಂದು ಒಪ್ಪಣ್ಣ…

  5. ಪಂಚಾಯತನ ಪೂಜಾ ಕ್ರಮ ಶಂಕರರದ್ದೇ ಹೇಳುವಲ್ಲಿ ಎಲ್ಲಾ ವಿದ್ವಾಂಸರ ಸಹಮತ ಇಲ್ಲೆ. ಬ್ರಹ್ಮಸೂತ್ರಕ್ಕೂ ಪಂಚಾಯತನಕ್ಕೂ ಹೊಂದಿಕೆ ಇಲ್ಲೆ. ಕೆಳಾಣ ಲೆವೆಲಿನವಕ್ಕೆ ಪಂಚಾಯತನ, ಮೇಲೆ ಇರ್ತವಕ್ಕೆ ಬ್ರಹ್ಮಸೂತ್ರ ಹೇಳಿ ಮಾಡಿದ್ದವು ಶಂಕರರು ಹೇಳಿ ಕೆಲವು ಜನ ವಿದ್ವಾಂಸರು ಹೇಳಿದರೆ, ಪಂಚಾಯತನ ಇತ್ಯಾದಿ ಶಂಕರಾಚಾರ್ಯರ ಹೆಸರಿಲಿ ಆಮೇಲೆ ಬಂದ ಶಂಕಾರಾಚಾರ್ಯರು ಮಾಡಿದ್ದು ಹೇಳ್ತವು ಇನ್ನು ಕೆಲವು ವಿದ್ವಾಂಸರು.

  6. ಶಾಂಕರ ಮಹಿಮೆ ಸಾರುವ ಸ್ತೋತ್ರ

    ಅಷ್ಟವರ್ಷೆ ಚತುರ್ವೆದೀ ದ್ವಾದಶೆ ಸರ್ವಶಾಸ್ತ್ರವಿತ್ |
    ಷೊಡಶೆ ಕೃತವಾನ್ ಭಾಷ್ಯಂ ದ್ವಾತ್ರಿಂಷೆ ಮುನಿರಭ್ಯಗಾತ್ ||

    ಒಳ್ಳೆ ಲೇಖನ ಒಪ್ಪಣ್ಣ..

  7. ಏ ಒಪ್ಪಣ್ಣೋ,
    ಏವತ್ತಿನ ಹಾಂಗೇ ಲಾಯಿಕ ಆಯಿದಾತ 🙂
    ಶಂಕರಾಚಾರ್ಯರ ಬಗ್ಗೆ ಹೇಳಿದಷ್ಟೂ ಸಾಲ ಒಪ್ಪಣ್ಣಂಗೆ – ಕೇಳಿದಷ್ಟೂ ಸಾಕಾಗ ನವಗೆ.
    ತುಂಬ ಚೆಂದ ಆಯಿದು. ಶಂಕರಾಚಾರ್ಯರ ಸಮಾಧಿ ವಿಷಯ ಗೊಂತಿತ್ತಿಲ್ಲೆ. ತಿಳುಶಿದ್ದು ಖುಶಿ ಆತು ಅಣ್ಣಾ. 🙂
    ಬೆಟ್ಟುಕಜೆ ಭಾವ° ಹಸೆ ಬಿಡುಸಿ ಒರಗಿದ ಕತೆ ಕೇಳಿ ಎನ್ನ ಅಬ್ಬೆ ನೆಗೆ ಮಾಡಿದ್ದೇ ಮಾಡಿದ್ದು. 😉
    ಉತ್ತರಭಾರತದ ಪ್ರವಾಸ ಕಥನ ಲಾಯಕಾಯಿದು. ಅನಂತ ಭಾವಾ, ಒಂದು ಸರ್ತಿ ವಿವರವಾಗಿ ಪಂಜ ಭಾಶೆಲಿ ಬರೆರಿ ನೋಡೋ°.. ಆಗದಾ?

    1. ಖಂಡಿತ ಪ್ರಯತ್ನ ಮಾಡ್ತೆ..

        1. ಸ್ವಲ್ಪ ಸಮಯ ಬೇಕಕ್ಕು..ಆದರೆ ಹೆಚ್ಚು ಕಾಯಿಸುತ್ತಿಲ್ಲೆ..

    1. ನೆಗೆ ಮಾಡಿ ….ನೆಗೆ ಬಕ್ಕನ್ನೆ..ಸೂಪರ್ ಆಯಿದು ಸುಮ್ಮನೆ ಹೇಳುಲಾಗ..

  8. ಶಂಕರಾಚಾರ್ಯರ ಬಗ್ಗೆ ಬರೆದ ಶುದ್ಧಿ ಲಾಯ್ಕ ಆಯಿದು..ದೊಡ್ಡಜ್ಜನ ಮನೆಯ ಜಂಬರವೆ ಹೀಂಗೆ ಭಾವ ಎನ್ತ ಎಡಿತ್ತಿಲ್ಲೆ ಮುಗುದಪ್ಪಗ..ಸುಬ್ಬಣ್ಣನ ಮದ್ವೆ ಭಾರೀ ಗಮ್ಮತಿದ ಅದೂ ಸೆಖೆಕಾಲಲ್ಲಿ ಆಗಿ ಬೆಗರಿನ ಹೊಳೆ..

  9. ಶ್ರೀ ಶಂಕರಾಚಾರ್ಯರ ಬಗ್ಗೆ ಎಷ್ಟು ತಿಳುದರೂ ಅದು ಕಮ್ಮಿಯೇ. ಅಷ್ಟೊಂದು ಸಣ್ಣ ಪ್ರಾಯಲ್ಲಿ ಅವರ ಸಾಧನೆ ನೋಡಿರೆ ಅವು ಮಾನ್ವ ಸ್ವರೂಪಿ ದೇವರೇ ಸಮ.
    ಒಂದೊಪ್ಪ ತುಂಬಾ ಹಿಡಿಸಿತ್ತು.
    ನಾವಿಂದು ಹಿಂದುಗೊ ಆಗಿ ಒಳಿವಲೆ ಮುಖ್ಯ ಕಾರಣವೇ ಶ್ರೀ ಶಂಕರಾಚಾರ್ಯರು.
    ಶಂಕರ ಪಂಚಮಿಯ ಈ ಶುಭ ಸಂದರ್ಭಲ್ಲಿ ಅವರ ಬಗ್ಗೆ ಮಾಹಿತಿ ಪ್ರಸ್ತುತಪಡಿಸಿದ ಒಪ್ಪಣ್ಣಂಗೆ ಧನ್ಯವಾದಂಗೊ.

  10. ತು೦ಬಾ ವಿಶಯ೦ಗೊ ಇಪ್ಪ ಲೇಖನ.ಲಾಯ್ಕಾಯಿದು

  11. ಶಂಕರ ಜಯಂತಿ ನಿಮಿತ್ತ ಬಂದ ಶುದ್ದಿ ಓದಿ ಹಲವು ಹೊಸ ವಿಷಯಂಗೊ ಗೊಂತಾತು ಒಪ್ಪಣ್ಣ. ಒಪ್ಪ ಶುದ್ದಿಗೆ ಒಂದೊಪ್ಪ.

  12. ಶಂಕರಜಯಂತಿ ಸಂದರ್ಭಲ್ಲಿ ಬಂದ ಒಪ್ಪಣ್ಣನ ಬರಹ ಚೆಂದ ಆಯಿದು. ಪೂಜ್ಯರಾದ ಶಂಕರಾಚಾರ್ಯರ ಗೌರವಿಸೇಕಾದ್ದು ನಮ್ಮೆಲ್ಲರ ಕರ್ತವ್ಯ ಕೂಡ. ಹೊಸ ಮದುಮಕ್ಕಳ ಸಮ್ಮಾನದ ವಿಷಯಲ್ಲಿ ಸುರು ಮಾಡಿ ಮತ್ತೆ ಶಂಕರಾಚಾರ್ಯರ ಕತೆಗೆ ಒಪ್ಪಣ್ಣ ಹೇಂಗೆ ಲಿಂಕು ಕೊಡ್ತಾ ಹೇಳಿ ಗ್ರೇಶಿಂಡು ಇದ್ದಿದ್ದೆ. ಲಿಂಕು ಮಾಡಿದ್ರಲ್ಲಿ ಕೊಂಕು ಮಾತಿಲ್ಲೆ. ಸರಳ ಸುಂದರ ನಿರೂಪಣೆ. ಎನಗೀಗ ಬೆಟ್ಟುಕಜೆಮಾಣಿ ಹತ್ರೆ ಒಂದರಿ ಕೊರಳು ನೆಗ್ಗಿ ಮಾತಾಡೆಕು ಹೇಳಿ ಆವ್ತಾ ಇದ್ದು. ಹಂತಿ ಹಸೆ ಹಾಕಿ ಬೇಕಾದಷ್ಟು ಮಡುಸಿ ಮನುಗಿದ ವಿಷಯ ನಿಜವಾಗಿಯೂ ಹೊಸತ್ತೇ. ಹೀಂಗೇ ಇಪ್ಪ ಎನ್ನ ಸ್ನೇಹಿತ ಒಬ್ಬ ಬೆಂಗಳೂರು ಬಸ್ಸಿಲ್ಲಿ ಹೋವ್ತರೆ ಹಿಂದಾಣ ಸೀಟಿಲ್ಲಿ ಮಧ್ಯಲ್ಲಿ ಕೂರುಗಾಡ ! ಡ್ರೈವರ ವರೇಗೆ ಕಾಲು ನೀಡಿ ಬೇಕಾರೆ ಕೂಬ್ಬಲಕ್ಕಲ್ಲದೊ ? ಹೇಂಗಿದ್ದು ಕೆಣಿ ?
    ದೊಡ್ಡ ಬಾವ ಕಾಲೆಡಕ್ಕಿಲ್ಲಿ ಬೈಕು ಮಡಗಿದ್ದುದೆ ಲಾಯಕಾಯಿದು.

    1. ಅಷ್ಟೆಲ್ಲಾ ಕೊರಳು ನೆಗ್ಗೆಕ್ಕಾಗ ಅಣ್ಣ..ಮಾತಾಡ್ವ..ಎಲ್ಯಾರು ನಾವು ಕಾಂಗಿದ..

  13. ಶಂಕರಾಚಾರ್ಯರು ಪ್ರಾತಃಸ್ಮರಣೀಯರು.ಅವಕ್ಕೆ ನಮಸ್ಕಾರ.ಒಪ್ಪಣ್ಣ ಬರದ್ದು ಚೊಕ್ಕ ಆಯಿದು.

  14. ದೊಡ್ಡಭಾವನೂ ಒಪ್ಪಣ್ಣನೂ ಸೇರಿಗೊಂಡು ಬೈಕ್ಕು ಕಾಲೆಡಕ್ಕಿಲಿ ಮಡಿಕ್ಕೊಂಡು ಹೆರಟದು – ಅದ್ಭುತ ಪ್ರಯೋಗ!
    [ದೊಡ್ಡಭಾವನ ಉಪಚಾರ ಮಾಡಿದವು ] – ದೊಡ್ಡಭಾವನ ಒಟ್ಟಿಂಗೆ ಹೋದವನ ಕಾಲಿಂಗೆ ಅಲ್ಪ ಧೂಳಿ ಅಂಟಿದ್ದತೋ . ಇನ್ನೂ ಕಾಲು ತಿಕ್ಕಿ ತಿಕ್ಕಿ ತೊಳೆತ್ತಾ ಬಾಕಿ ಆದನೋ !
    [ಬೇಕಾದಷ್ಟೇ ಮಡಿಸೆಂಡರೆ]- ಹೊಸ ಗಾದೆ – “ಕಾಲಿದ್ದಷ್ಟು ಹಸೆ ಮಡುಸು”.
    [ಹಸೆಯ ಅಲ್ಲೇ ಬಿಡುಸಿ ಹಂತಿಮಾಡಿ ಕರೇಲಿ ಕೂದುಗೊಂಡ] – ಮನುಗಿದನೋ ಎದ್ದು ಉಂಡನೊ., ಉಂಡನೋ ಬಿದ್ದು ಮನುಗಿದನೋ° …. ಹ್ಮ್ಮ್ಮ್!!
    […. ಯೋಗಾಸನ ವಿಶಯಲ್ಲಿ …] ಎರಡು ಆಸನ ಇಲ್ಲೇ ಪ್ರದರ್ಶನ ಆತಿದಾ !
    [..ಬಳುಸಲೆ ಸುರು ಅಪ್ಪದ್ದೇ.. ] ಅಡಿಗೆ ಕೊಟ್ಟಗೆಂದ ಮೂರು ಮೂರು ಕವಂಗಲ್ಲಿ ಒಟ್ಟಿಂಗೆ ತೆಕ್ಕೊಂಡು ಬಳುಸುವವು ಇತ್ತಿದ್ದವೋ ?!!
    [ ಬೆಗರುದ್ದಿಗೊಂಡು ಮಾತಾಡುದೇ ನಿಲ್ಲುಸಿದ ] ಮಜ್ಜಿಗೆ ಕವಂಗದವು ಬಪ್ಪದು ಕಂಡತ್ತಾಯ್ಕು.

    ಶಂಕರಜಯಂತಿಯ ಆಚರಣೆಯ ಸಂದರ್ಭಲ್ಲಿ ಭಾವಯ್ಯನ ಈ ಶುದ್ಧಿ ಸಕಾಲಿಕ. ಬಹು ಸರಳವಾದ ರೀತಿಲಿ ಆ ಮಹಾ ಚೇತನಾಶಕ್ತಿಯ ಬೈಲಿಂಗೆ ಪರಿಚಯಿಸಿದ್ದು ಭಾರೀ ಲಾಯಕ ಆಯ್ದು, ಶಂಕರನ ಕಿಂಕರನಾಗಿ ಒಪ್ಪಣ್ಣ ಭಾವನ ಈ ಸೇವೆ ಬೈಲಿಂಗೆ ಅತ್ಯಮೂಲ್ಯ ಮತ್ತು ಹೇಮರ್ಸಲೇ ಬೇಕಾದ್ದು ಹೇಳಿ – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×