ಶಾರದಮ್ಮ ಕಲಿಶಿದ್ದರ ಒಪ್ಪುಸುವ ಚೆಂದ..

ಬೈಲಿನ ಎಲ್ಲೋರಿಂಗೂ ಗೊಂತಾಯಿದು – ನಾಳ್ತು ಆಯಿತ್ಯವಾರ ಪುತ್ತೂರಿಲಿ ಅಷ್ಟಾವಧಾನ ಇದ್ದು – ಹೇದು.
ಆ ಕಾರ್ಯಕ್ರಮವ ಆಯೋಜನೆ ಮಾಡ್ತದು ಬೈಲೇ ಆದ ಕಾರಣ ಬೈಲಿನೋರೇ ಆಧಾರ ಸ್ತಂಭಂಗೊ.
ನಿತ್ಯವೂ ಬೈಲಿಲಿ ಕಾಣ್ತ ಅಣ್ಣ-ತಮ್ಮ-ಭಾವ-ಅಕ್ಕ-ಅಪ್ಪಚ್ಚಿ-ಮಾವಂದ್ರು ಅಲ್ಲಿ ಒಂದಾಗಿ ಕೆಲಸ ಮಾಡಿರೆ ಬಂದ ಎಲ್ಲೋರಿಂಗೂ ಕೊಶಿ ಅಕ್ಕು. ಒಂದೊಂದು ಕೆಲಸವನ್ನೂ ನಾವು ನಾವೇ ಹಂಚಿಗೊಂಡು ಮಾಡಿರೆ ಕಾರ್ಯಕ್ರಮವೂ ರೈಸುತ್ತದು ನಿಸ್ಸಂದೇಹ.
~
ಮಾಷ್ಟ್ರುಮಾವನ ಸಣ್ಣ ಮಗ ° ಬೈಲಕರೆ ಶಾಲೆಗೆ ಹೋಪ ಕಾಲ.
ಮಾಷ್ಟ್ರುಮಾವ ಇದ್ದಿದ್ದ ದೊಡ್ಡ ಶಾಲೆ ಅಲ್ಲ, ಇನ್ನೊಂದು –
ಕಾಂಬಲೆ ದೊಡ್ಡ ಇಪ್ಪ ರೇವತಿ ಟೀಚರು ಇದ್ದ ಸಣ್ಣ ಶಾಲೆ. ರೇವತಿ ಟೀಚರು ಮಾಂತ್ರ ಅಲ್ಲ, ಮತ್ತೂ ಹಲವು ಮಾಷ್ಟ್ರಕ್ಕೊ, ಟೀಚರಕ್ಕೊ, ಇದ್ದಿದ್ದವು. ಮಕ್ಕಳೂ!

ಒಂದೊಂದು ಕ್ಲಾಸಿಲಿಯೂ ಧಾರಾಳ ಜೆನ ತುಂಬಿಂಡು, ಇಡೀ ಶಾಲೆಲಿ ಸುಮಾರು ಆರುನೂರು ಜೆನ ತುಂಬಿದ ಶಾಲೆ ಅದು. ಅಷ್ಟೂ ಜೆನಕ್ಕೆ ಕೇಳ್ತ ನಮುನೆ ಸ್ವರದ ಹೆಡ್ಮಾಷ್ಟ್ರು.
ಸಿಗ್ರೇಟು ಮುಗಿವನ್ನಾರ ಬೊಬ್ಬೆ ಇಲ್ಲೆ, ಬೊಬ್ಬೆ ಮುಗಿವನ್ನಾರ ಸಿಗ್ರೇಟು ಎಳವಲಿಲ್ಲೆ.
ಹೆಡ್ಮಾಷ್ಟ್ರು ಕುರ್ಚಿಂದ ಕೂದಲ್ಲೇ – “ಏಳು ಏ ಯಿಂದ ಒಬ್ಬ ಬಾರೋ°. . ” – ಹೇಳಿರೆ ಒಂದ್ನೆ, ಎರಡ್ಣೆ, ಮೂರ್ನೆ – ಆಗಿ ಏಳ್ನೇ ಕ್ಲಾಸು ಒರೆಂಗೆ ಎಲ್ಲ ಮಕ್ಕೊಗೂ ಕೇಳಿ, ಏಳ್ನೆಯ ಎ-ಬಿ ಕ್ಲಾಸಿಂಗೂ ಕೇಳಿ – ಹತ್ತರಾಣ ಅಂಗುಡಿಗೂ ಕೇಳುಗು.
ಅಂಗುಡಿಗೆ ಕೇಳಿರೆಂತ ಗುಣ? ಏಳು-ಎ ಕ್ಲಾಸಿನ ಹುಡುಗ° ವಿಟಲನ ಗೂಡಂಗಡಿಗೇ ಹೋಯೆಕ್ಕಪ್ಪದಲ್ಲದೋ?
ಸೀದಾ ಹೋಗಿ ಒಂದು ಸಿಗ್ರೇಟು ಪೆಟ್ಟಿಗೆಯೂ, ಒಂದು ಕಿಚ್ಚಿನ ಪೆಟ್ಟಿಗೆಯೂ ತರೆಕ್ಕಪ್ಪದು. ಮಕ್ಕೊ ಅಲ್ಲಿಗೆತ್ತುವ ಮದಲೇ ಸಾಮಾನು ತಯಾರು ಇಕ್ಕು.

ಹೆಡ್ಮಾಷ್ಟ್ರ ಸ್ವರದಷ್ಟೇ ದೊಡ್ಡ ಸ್ವರದ ಬೈಕ್ಕು.
ಹೊಡ್ರೊ° ಹೊಡ್ರೊ° ಹೇಳಿಗೊಂಡು ಬಂದರೆ ಗೇಟಿನ ಬುಡಕ್ಕೆತ್ತುವಗಳೇ ಹೆದರಿ ಮಕ್ಕಗೆ ಸೈಲೆನ್ಸರು ಬೀಳುಗು.
ಬೊಬ್ಬೆ ಹೊಡೆತ್ತರೆ ಏನಿದ್ದರೂ ಮದಲೇ ಹೊಡಕ್ಕೊಳೆಕ್ಕು – ಮತ್ತೆ ಹೊಡದರೆ ಕೆದೂರು ಡಾಗುಟ್ರಲ್ಲಿಗೇ ಹೋಯೆಕ್ಕಷ್ಟೆ.
ನೆಗೆಚಿತ್ರ ಶಾಮಣ್ಣನ ಶಾಲೆಲಿ ದಾಸಪ್ಪ ಮಾಷ್ಟ್ರ° ಇಲ್ಲೆಯೋ – ಸಾಮಾನ್ಯ ಅದೇ ನಮುನೆ!
ಬೀಸುಗು – ಪೀಟ್ರೋಲಿಲಿ, ಮಗ್ಗಿ ಹೇಳದ್ದೋರಿಂಗೆ.
ಉಂಡು ಒರಕ್ಕು ತೂಗುತ್ತ ಮಾಣಿಯ ಏಳುಸಿ ಹತ್ತೊಂಭತ್ಮೂರಿಲಿ ಎಷ್ಟೋ? – ಹೇದರೆ ಎಲ್ಲಿಗೆ ಹೇಳುದು ಬೇಕೆ?
ಠಕ ಠಕ ಬೀಳುಗು, ಕೈ ಗೆಂಟಿಂಗೇ. ಶುದ್ದಿ ಹೇಳುವಗಳೇ ನವಗೆ ಕೈ ಅಕ್ಕಿಕಟ್ಟುತ್ತು.
ಹೆಡ್ಮಾಷ್ಟ್ರಿಂಗೆ ಕೆಲಸದ ಬೆಶಿ ಏವಾಗಳೂ ಇಕ್ಕು. ಸಿಗ್ರೇಟು ಕೊಡಿಯಾಣ ಕೆಂಪು ಕಿಚ್ಚಿನ ಹಾಂಗೆ. ಅಷ್ಟು ಬೆಶಿ ಇದ್ದರೂ ಅವು ಪಾಟ ಮಾಡಿಗೊಂಡಿತ್ತಿದ್ದವು.
ಏಳ್ನೇ ಕ್ಲಾಸಿನ ಸಮಾಜವೂ, ಆರ್ನೇ ಕ್ಲಾಸಿನ ಇಂಗ್ಳೀಶುದೇ – ಹೆಡ್ಮಾಷ್ಟ್ರದ್ದೇ.
ಪಾರೆ ಅಜ್ಜಿಯ ಕೋಲ ಎಷ್ಟು ನಿಘಂಟೋ, ಅಷ್ಟೇ ನಿಘಂಟು ಹೆಡ್ಮಾಷ್ಟ್ರ ಈ ಎರಡು ಪಾಟಂಗೊ.
~

ಈಗ ಆ ಮಾಷ್ಟ್ರಂಗೆ ರಿಠೇರ್ಡು ಆಗಿ – ದೊಡ್ಡ ಬೈಕ್ಕು ಹಂದುಸಲೆಡಿಯದ್ದೆ – ಮಾಷ್ಟ್ರುಮಾವನ ಮಗಳ ಹತ್ತರೆ ಇಲ್ಲೆಯೋ – ಕಪ್ಪು ಸ್ಕೂಟಿ – ಆ ನಮುನೆದು ಬಿಟ್ಟುಗೊಂಡು ಹೋಪದಾಡ.
ಹೆಡ್ಮಾಷ್ಟ್ರು ಚೆಂದಕೆ ಇರಳಿ.
ಒಪ್ಪಣ್ಣಂಗೆ ಅವರ ಬಗ್ಗೆ ಅಪಾರ ಗೌರವ ಇದ್ದೇ ಇದ್ದು; ಅವರ ಪೀಟ್ರೋಲಿನ ಮೇಗೆಯೂ! 😉
ಅದಿರಳಿ.
~

ಮಾಷ್ಟ್ರುಮಾವನ ಸಣ್ಣ ಮಗ ಶಾಲಗೆ ಹೋವುತ್ತ ಸಮೆಯದ ಹಲವಾರು ಸಂಗತಿಗಳಲ್ಲಿ ಕೆಲವು ಭಾರೀ ಗಮ್ಮತ್ತಿಂದು.
ಅದಪ್ಪೂ – ಆ ಕಾಲದ ಪೀಕ್ಲಾಟಂಗೊ, ಬಿಂಗುರುಟಿಗೊ ಒಪ್ಪಣ್ಣಂಗೆ ಹೇಂಗೆ ಗೊಂತು ಹೇದು ನಿಂಗೊಗೆ ಆಶ್ಚರ್ಯ ಆವುತ್ತೊ?
ಹು, ನವಗೆಂತ – ಇಡೀ ಬೈಲಿಂಗೇ ಅರಡಿಗು. ಈ ಶುದ್ದಿ ಕೇಳಿದ ಮತ್ತೆ ನಿಂಗೊಗೂ ಅರಡಿಗು.
ಈಗ ಅಷ್ಟಾವಧಾನ ಸಮೆಯಲ್ಲಿ ಅಂಬಗಾಣ ಎರಡು ವಿಷಯಂಗೊ ಜೋರು ನೆಂಪಾವುತ್ತು.
~

ಆರ್ನೇ ಕ್ಲಾಸಿನ ಇಂಗ್ಳೀಶು ಪಾಟ:
ಬೈಲಕರೆಲಿ ಆರ್ನೇ ಕ್ಲಾಸಿಂಗೆ ಹೋದೋರೆಲ್ಲರೂ ಹೆಡ್ಮಾಷ್ಟ್ರ ಇಂಗ್ಳೀಶು ಪಾಠ ಹೇಳುಸಿಗೊಂಡೋರೇ.
ಕಾಕಿ ಬಂಣದ ಬೈಂಡು ಹಾಕಿದ ಪುಸ್ತಕದ ಎಡೆಲಿ ಅದೇ ಬಂಣದ ನಾಗರಬೆತ್ತ ಹಿಡ್ಕೊಂಡು ಕ್ಲಾಸಿಂಗೆ ಬಪ್ಪದು ಆರ್ನೇ ಕ್ಲಾಸಿನ ಮಕ್ಕಳ ಮರೆಯದ್ದ ಚಿತ್ರ – ಆ ಶಾಲಗೆ ಹೋದ ಎಲ್ಲೋರುದೇ ಒಪ್ಪಣ್ಣಂಗೆ ಹೇಳುಗು. ಒರಿಶದ ಸುರೂವಿಂಗೆ ಏಬಿಸೀಡಿ ನೆಂಪು ಮಾಡ್ಸುತ್ತಲ್ಲಿಂದ ಸುರು ಆದ್ಸು – ಮುಂದೆ ಪಾಟಾ ಒಂದು – ಪಾಟಾ ಎರಡು.. ಹೀಂಗೇ ಸಾಗಿ, ಮಧ್ಯಾವಧಿ ಮುಗುಶಿ, ದಶಂಬ್ರದ ಚಳಿಗಾಲ ಒರೆಂಗೂ ಪಾಟ ಮುಂದುವರಿಗು. ಆರ್ನೆ ಮುಗಿಯಲಪ್ಪಗ ಮಕ್ಕಳ ಪುಸ್ತಕವೂ, ಬೆನ್ನೂ ಎರಡೂ ಹೊಡಿ ಆಗಿಕ್ಕು.
ಹೆಡ್ಮಾಷ್ಟ್ರ ನಾಗರ ಬೆತ್ತವೂ, ಕಾಕಿ ಬೈಂಡಿನ ಪುಸ್ತಕವೂ – ಮನಾರ ಇಕ್ಕು, ಬಪ್ಪೊರಿಶಕ್ಕೆ!

ಹೆಡ್ಮಾಷ್ಟ್ರು ಪಾಟ ಓದುವಾಗ ಮಕ್ಕೊ ಪುಸ್ತಕದ ಮೋರೆ ನೋಡಿಗೊಳೆಕ್ಕು. ಹೆಡ್ಮಾಶ್ಟ್ರು ಪಾಟ ವಿವರ್ಸುವಾಗ ಮಕ್ಕೊ ಮಾಷ್ಟ್ರ ಮೋರೆ ನೋಡೇಕು. ಇದೆರಡ್ರ ತಾಳ ತಪ್ಪಿರೆ ಬೆನ್ನಿಂಗೇ ತಾಳ ಬೀಳುಗಡ. ನಲುವತ್ತು ನಿಮಿಷದ ಪಿರಿಡಿಲಿ ಅರ್ದಗಂಟೆ ಹೀಂಗೆ, ಮತ್ತೆ ಹತ್ತು ನಿಮಿಷ “ಓದುಸುದು”. ಮೂರುಮೂರು ಗೆರೆ ಮಕ್ಕೊ ರಾಗಲ್ಲಿ ಓದೇಕು. ರಾಗ ತಪ್ಪಿರೆ ತಾಳ ಬೀಳುಗು.
ಒಂದು ಪಾಟ ಮುಗುದ ಮರದಿನ ನೋಟು ಪುಸ್ತಕಲ್ಲಿ ಪ್ರಶ್ನೋತ್ತರ ಬರೆಸ್ಸು. ಮೇಗೆ ದೊಡ್ಡಕೆ ಪಾಟದ ಹೆಡ್ಡಿಂಗು, ಅದರ ಕೆಳ ಕ್ರಮಸಂಕೆ – ಅದರ ಒತ್ತಕೆ ಪ್ರಶ್ನೆ, ಒಂದು ಗೆರೆಬಿಟ್ಟು ಉತ್ತರ ಬರವಲೆ; ಇಂಗ್ಳೀಶಿಲಿ.
ಆ ಉತ್ತರವ ಕಲಿಯೆಕಾದ್ಸು; ಮೂರು ದಿನ ಬಿಟ್ಟು ಒಪ್ಪುಸೇಕಾದ್ಸು. ಹೆಚ್ಚು ಬಾಯಿಪಾಟ ಮಾಡ್ತೋನು ಉಶಾರಿ! ಡಂಕದ್ದೆ ಹೇಳಿದರೆ ಬಚ್ಚಾವು; ಅಲ್ಲದ್ದರೆ – ಡಂಕಿದ್ದಕ್ಕೆ ಒಂದು ಸರ್ತಿ ಹಾಂಗೆ – ಪೊಳಿ ಬೀಳುಗು! ಎಲ್ಲೋರುದೇ ಎಲ್ಲ ಉತ್ತರವನ್ನೂ ಹೇಳೇಕಾದ್ಸಿಲ್ಲೆ, ಆದರೆ ಎಲ್ಲಿಂದಲೋ – ರಾಶಿಂದ ಆರನ್ನಾರು ಕೇಳಿದರೆ, ಅವ° ಉತ್ತರ ಕೊಡೆಕ್ಕು. ಆರತ್ರೆ ಕೇಳ್ತವು ಹೇದು ಮದಲೇ ಅರಡಿವಲೆ ಮಕ್ಕೊ ಎಂತ, ಪಾರೆ ಅಜ್ಜಿಯೋ? ಪ್ರಶ್ನೆಯ ಅರ್ತ ಎಂತದೋ, ಉತ್ತರದ ಅರ್ತ ಎಂತದೋ – ಹೇದು ಆಲೊಚನೆ ಮಾಡದ್ದೆ ಮಕ್ಕೊ ಮನಾರಕ್ಕೆ ಕಲ್ತು ಒಪ್ಪುಸುಗು.
~

ಉತ್ತರವ ಬಾಯಿಪಾಟ ಕಲಿಸ್ಸು ಹೆಡ್ಮಾಷ್ಟ್ರು ಕೊಟ್ಟ ಇಂಗ್ಳೀಶು ನೋಟ್ಸು ನೋಡಿಯೋ?
ಅಲ್ಲ! ಮತ್ತೇವದರ?
ಇಂಗ್ಳೀಶು ಉತ್ತರಂಗೊ ಓದುವಗ ಹೇಂಗೆ ಕೇಳ್ತೋ – ಹಾಂಗೇ ಕನ್ನಡಲ್ಲಿ ಬರಕ್ಕೊಂಬದು ಮಕ್ಕೊ. ಆ ಕನ್ನಡಲ್ಲಿ ಬರದ್ಸರ ಬಾಯಿಪಾಟ ಮಾಡುಸ್ಸು.
ಹೇಂಗೂ ಬಾಯಿಪಾಟ ಹೇಳುವಾಗ ಉಚ್ಛಾರ ಸರಿ ಇದ್ದರೆ ಆತಿಲ್ಯೋ – ಬಟ್ಟಮಾವ ರುದ್ರ ಹೇಳಿದ ನಮುನೆ.
ಮಾಷ್ಟ್ರುಮಾವನ ಮಗನ ಕ್ಲಾಸಿಲಿ ಇದ್ದಿದ್ದ ಅಮಾರ್ನಾತ° ಪ್ರಶ್ಣೋತ್ತರ ಕಲ್ತುಗೊಂಡಿದ್ದದರ ಈಗಳೂ ಒಂದೊಂದರಿ ನೆಂಪು ಮಾಡ್ಳಿದ್ದು ಅವ°.
ಒಂದು ಪಾಟಲ್ಲಿ: ಶುಭ ಹೇಳ್ತ ಕೂಸಿನ ಬಗ್ಗೆಯೇ ಅದರ ಅಪ್ಪಮ್ಮಂಗೆ ಚಿಂತೆ ಇತ್ತು – ಏನೋ ಒಂದು ಕತೆಯ ಸನ್ನಿವೇಶ.
ಉತ್ತರವೂ ಹಾಂಗೇ ಇದ್ದತ್ತು, (Subha Lay like a silent weight upon her parents – ಆಡ).
ಅಮಾರ್ನಾತ ಅದರ ಕನ್ನಡಕ್ಕೆ ಮಾಡುವಾಗ ಒಂದು “ಲೇ” ಜಾಸ್ತಿ ಆಗಿ –
ಕಲಿವದು ಹೇಂಗಾರೂ ಮೂರು ಮೂರೇ ಶಬ್ದ ಆದ ಕಾರಣ –
ಅಮಾರ್ನಾತ ಕಲ್ತದು:
ಸೂಬಾ ಲೇಲೇ ಲೈಕ್ಯೇ, ಸೂಬಾ ಲೇಲೇ ಲೈಕ್ಯೇ, ಸೂಬಾ ಲೇಲೇ ಲೈಕ್ಯೇ, ಸೂಬಾ ಲೇಲೇ ಲೈಕ್ಯೇ..
ಸೈಲೆಂಟ್ ವೈಟ್, ಸೈಲೆಂಟ್ ವೈಟ್, ಸೈಲೆಂಟ್ ವೈಟ್, ಸೈಲೆಂಟ್ ವೈಟ್..
ಅಪಾನರ್ ಪೇರೆಂಟ್, ಅಪಾನರ್ ಪೇರೆಂಟ್, ಅಪಾನರ್ ಪೇರೆಂಟ್, ಅಪಾನರ್ ಪೇರೆಂಟ್. .
– ಹೀಂಗೆ ಕೇಳಿಗೊಂಡಿತ್ತಾಡ.
~

ಪ್ರಶ್ನೆಗೆ ಉತ್ತರ ಅರಡಿಗಾದರೆ ಸಮ. ಹೇಂಗಾರೂ ನೂಕಿ ಪಾಸು ಮಾಡ್ಳಕ್ಕಿದಾ. ಅಲ್ಲದ್ದರೆ ಅದೇ ಮುಸುಡು ಬಪ್ಪೊರಿಶ ಕಾಣೆಡದೋ?
“ಬಪ್ಪೊರಿಶ ಇದನ್ನೇ ಕಲಿಸ್ಸು ಬೇಡ” ಹೇದು ಮಕ್ಕಳೂ ವ್ಯಾಕರಣ, ಸಾಹಿತ್ಯ ಅರಡಿಯದ್ದರೂ – ಪಾಟಂಗೊ ಇಡಿ ಇಡಿ ಬಾಯ್ಪಾಟ ಕಲಿಗು.
ಪ್ರಶ್ನೆ ಕೇಳಿಯಪ್ಪಗಳೇ – ಅದರೊಟ್ಟಿಂಗೇ ಉತ್ತರವೂ ಹಾಂಗೇ ಹರುದು ಬಕ್ಕು ಮಕ್ಕೊಗೆ! – ಬಾಯಿಪಾಟ ಬಲಲ್ಲಿ; ಪಳ್ಳಿಶಾಲೆಲಿ ಮಕ್ಕೊಗೆ ಶಾಸ್ತ್ರ ಅರಡಿತ್ತ ಹಾಂಗೆ.
ಹೆಡ್ಮಾಷ್ಟ್ರು ಕಲಿಶಿದ್ದು, ಮಕ್ಕೊ ಒಪ್ಪುಸುವ ಚೆಂದವೇ ಅದೊಂದು.!
~

ಏಳ್ನೇ ಕ್ಲಾಸಿನ ಸಮಾಜ ಪಾಟ:
ಆರ್ನೆ ಕ್ಲಾಸಿಲಿ ಪೆಟ್ಟುತಿಂದು ಹದ ಆದೋರು ಮಾಂತ್ರ ಏಳ್ನೇ ಕ್ಲಾಸಿನ ಸಮಾಜ ಕೇಳೆಕ್ಕಾದ್ದು. ಅಲ್ಲದ್ದರೆ ಪುನಾ ಆರ್ನೇ ಕ್ಲಾಸಿಲೇ ಕೂದರೆ ಆತು.
ಏಳ್ನೆಗೆ ಬಂದೋರಿಂಗೆ ಒಂದೊಂದರಿ ಸಿಗ್ರೇಟು ತಪ್ಪಲೆ ಹೋಪಲಿದ್ದು. ಅಲ್ಲದ್ದರೆ ಗಂಟೆ ಬಡಿವಲಿದ್ದು. ಅದೂ ಅಲ್ಲದ್ದರೆ ಶಾಲೆಜಾಲಿಂದ ಪಿಕ್ಕಾಸು ತಂದು ಮಡುಗಲಿದ್ದು – ಹೀಂಗೆಂತಾರು ಬಿಟ್ಟಿಚಾಕ್ರಿಗೊ ಇರ್ತು. ಅದರೆಡಕ್ಕಿಲಿ ಪುರುಸೊತ್ತಾದರೆ ಪಾಟ ಕೇಳುಲಿದ್ದು.

ಏಳ್ನೆಯ ಕ್ಲಾಸು ಹೇದರೆ ಮಕ್ಕೊಗಪ್ಪಗ ಮಹಾ ರಗಳೆಯ ಕೋಣೆ.
ಒಂದು ದೊಡಾ ಚಾವಡಿ ಮಧ್ಯಲ್ಲಿ ಅರ್ದಗೋಡೆ ಕಟ್ಟಿ – ಎರಡು ಭಾಗ ಮಾಡಿದ್ದು. ಗೋಡೆ ಅರ್ಧವೇ ಕಟ್ಟಿದ ಕಾರಣ ಎತ್ತರದೋರು ಇಣ್ಕಿರೆ ಈಚ ಹೊಡೆಂದ ಆಚ ಹೊಡೆ ಕಾಂಗು!
ಕ್ಲಾಸಿಲಿ ಟೀಚರು ಬಾರದ್ದೆ ಕೀಟ್ಳೆ ಮಾಡಿರೆ ಬೆನ್ನಿಂಗೆ ಚೋಕಿನ ತುಂಡು ಬೀಳುಗು – ಆಚ ಕೋಣೆಂದ!
ಬೆತ್ತ, ಚೋಕು ಮಾಂತ್ರ ಬಪ್ಪದಲ್ಲದ್ದೆ, ಅಲ್ಲಿಂದ ಶಬ್ದವೂ ಬತ್ತು!
ಅದುವೇ ಈ ಶುದ್ದಿ.
~
ಮಾಷ್ಟ್ರುಮಾವನ ಮಗ° ಇದ್ದಿದ್ದ ಕ್ಲಾಸಿಲಿ ರೇವತಿ ಟೀಚರ ಹಿಂದಿ ಪಾಟ ಆಗಿಂಡಿತ್ತಾಡ. ರೇವತಿ ಟೀಚರು ಕಾಂಬಲೆ ದೊಡ್ಡ ಇದ್ದರೂ ಸ್ವರ ಸಣ್ಣವೇ ಇದಾ; ಹಾಂಗಾಗಿ, ಅದರ ಪಾಟ ಅದಕ್ಕೂ, ಎದೂರಾಣ ಸಾಲಿಲಿ ಕೂದ ನಾಲ್ಕು ಒಪ್ಪಣ್ಣಂದ್ರಿಂಗೂ ಮಾಂತ್ರ ಕೇಳಿಗೊಂಡಿತ್ತು. ಬಾಕಿದ್ದೋರುದೇ “ಸರೀ ಕೇಳ್ತೋರ ಹಾಂಗೇ” ಕೂದು ಕಣ್ಣೊಡಕ್ಕೊಂಡಿದ್ದಿದ್ದವು.
ಡೀರಮೇಶಂಗೆ ಮಾಂತ್ರ ಕಣ್ಣು ರೇವತಿ ಟೀಚರ ಪುಸ್ತಕದ ಮೇಗೆ ಇದ್ದರೂ, ಕೆಮಿ ಆಚ ಕ್ಲಾಸಿನ ಮೇಗೆ ಇದ್ದತ್ತು.

ಅಲ್ಲಿ?
ಅಲ್ಲಿ ಹೆಡ್ಮಾಷ್ಟ್ರ ಸಮಾಜ ಪಾಟ.
ಏಳ್ನೆಗೆ ಬಂದ ಮತ್ತೆ ಹೆಡ್ಮಾಷ್ಟ್ರು ಬಡಿಯವು; ಬಡಿಯಲಿಲ್ಲೆ ಹೇಳಿಯೇ ಅವು ಇಂಗ್ಳೀಶು ಬಿಡುದು – ಸಮಾಜ ಹಿಡಿವದು.
ಸಮಾಜ ಪುಸ್ತಕವ ಅವು ಮೇಜಿನ ಮೇಗೆ ಮಡುಸಿ ಮಡಗಿ, ಇಂದ್ರಾಣ ಪಾಟ ಎಂತದೋ – ಅದರ “ಕತೆ ಹೇಳಿದ ಹಾಂಗೆ” ಹೇಳಿಗೊಂಡು ಹೋಪದಾಡ.
ಮಕ್ಕೊ ಆ ಕತೆ ಕೇಳೇಕು. ಅಷ್ಟೇ.

ಹೆಡ್ಮಾಷ್ಟ್ರು ಕತೆ ಹೇಳುದು ಹೇದರೆ ಅಂತೇ ಬಾಂಕು ಉರುಗಿದಾಂಗೆ ಹೇಳುದಲ್ಲ,
ಎಡೆಡೆಲಿ ಒಂದು ಗೆರೆ ಹೇಳಿಕ್ಕಿ, ಪುನಾ ಕೇಳುಗು – ಅದು ತಲಗೆ ಹೊಕ್ಕತ್ತೋ ಹೇದು ನೋಡ್ಳೆ.
ಉದಾಹರಣೆಗೆ, “1947ರಲ್ಲಿ ಭಾರತಕ್ಕೆ ಸ್ವಾತಂತ್ರ ಸಿಕ್ಕಿತು.” ಹೇಳಿದ ಕೂಡ್ಳೇ, “1947ರಲ್ಲಿ ಭಾರತಕ್ಕೇ…?” ಹೇದು ನಿಲ್ಲುಸುದು.
ಮಕ್ಕೊ ಎಲ್ಲೋರುದೇ “ಸ್ವಾತಂತ್ರ ಸಿಕ್ಕಿತೂ…”
ಹೇದು ಅರದ್ದೆಕ್ಕು.
~

ಹಾಂಗೇ, ಆಚ ಕ್ಲಾಸಿಲಿ ಕತೆ ಹೇಳಿಗೊಂಡಿತ್ತವಾಡ.
“ಮಧ್ಯ ಯುಗದಲ್ಲಿ ಅರಬ್ಬರು ವ್ಯಾಪಾರ ಮಾಡ್ತಾ ಇದ್ರು.”
“ವ್ಯಾಪಾರಕ್ಕೆ ಸಮುದ್ರ ಮಾರ್ಗದಲ್ಲಿಯೂ ಹೋಗುತ್ತಿದ್ರು”.
“ಒಂದು ಸಲ ಅರಬರಿಗೂ – ಸಿಂಧೂ ರಾಜನಿಗೂ ಯುದ್ಧ ಆಯ್ತು”.
“ಎಲ್ಲೀ – ಸಮುದ್ರದಲ್ಲಿ”.

“ಸಿಂಧೂ ರಾಜ ಅರಬ್ಬರ ಹಡಗನ್ನು ಮುಳುಗಿಸಿ ಯುದ್ಧ ಗೆದ್ದ.”
“ಅರಬ್ಬರ ಹಡಗು – ಮುಳುಗಿ ಹೋಯ್ತು.”
ಇಷ್ಟು ಹೇಳಿ ಅಪ್ಪದ್ದೇ – “ಅರಬರ ಹಡಗೂ. .???” ಹೇಳಿದವು ಹೆಡ್ಮಾಷ್ಟ್ರು.

ಡೀರಮೇಶಂಗೆ ಈ ಕ್ಲಾಸಿಲಿ ರೇವತಿ ಟೀಚರು ಇಪ್ಪದೂ ನೆಂಪಿಲ್ಲದ್ದೆ, “ಮುಳುಗಿ ಹೋಯ್ತೂ” ಹೇಳಿತ್ತತ್ತೆ!
ಮೌನ ಕ್ಲಾಸಿಲಿ, ಎಲ್ಲೋರುದೇ ಅವರವರಷ್ಟಕ್ಕೇ ಕಣ್ಣೊಡಕ್ಕೊಂಡು ಪಾಟ ಕೇಳಿಗೊಂಡು – ನೋಡಿಗೊಂಡಿಪ್ಪಾಗ – ಒಂದು ಆಣು ಪಕ್ಕನೆ “ಮುಳುಗಿ ಹೋಯ್ತು” – ಹೇದರೆ ಎಲ್ಲೋರಿಂಗೂ ಗಾಬೆರಿ!
ಒಂದು ದಿಕ್ಕೆ ಇದ್ದುಗೊಂಡು, ಇನ್ನೊಂದು ಹೊಡೆಲಿ ಗಮನ ಇಪ್ಪ ಲಕ್ಷಣ ಈ ಸನ್ನಿವೇಶ.
~

ಪುತ್ತೂರು ಅಷ್ಟಾವಧಾನದ ಮಾಹಿತಿ ಪತ್ರ

ಪುತ್ತೂರು ಅಷ್ಟಾವಧಾನದ ಮಾಹಿತಿ ಪತ್ರ

ಮಾಷ್ಟ್ರುಮಾವನ ಮಗನ ಕ್ಲಾಸಿಲಿ ಮಾಂತ್ರ ಆದ ಕತೆ ಅಲ್ಲ, ಎಲ್ಲ ಕ್ಲಾಸಿಲಿಯೂ ಹೀಂಗಿರ್ತ ಘಟನೆಗೊ, ಗಮ್ಮತ್ತುಗೊ ನೆಡದೇ ನೆಡೆತ್ತು.
ಬಾಯಿಪಾಟ ಮಾಡ್ತದು, ಒಂದೊಂದೇ ಶಬ್ದ, ಅಕ್ಷರಂಗಳ ಕಲ್ತುಗೊಂಡು, ನೆಂಪು ಮಡಿಕ್ಕೊಂಡು ಮುಂದೆ ಹೋಪದು, ಅದರ ಹಾಂಗೇ ಒಪ್ಪುಸುದು, ಬಾಯಿಪಾಟ ಕಲಿವದು, ಎಡೆಡೆಲಿ ಡಂಕುದು, ತಪ್ಪಿದ ಗೆರೆಗಳ ಪುನಾ ಹೇಳುದು, ಗಮನ ಎಲ್ಲೆಲ್ಲಿಗೋ ಇಪ್ಪದು, ಒಂದು ಕೇಳಿರೆ ಇನ್ನೊಂದರ ಹೇಳುದು!
ಇದೆಲ್ಲವೂ ಒಪ್ಪಣ್ಣಂಗೆ ನೆಂಪಪ್ಪದು ಯೇವಾಗ ಗೊಂತಿದ್ದೋ?
“ಅಷ್ಟಾವಧಾನ” ಕಾರ್ಯಕ್ರಮ ನೋಡುವಾಗ!!
~
ಅಪ್ಪು, ಅಷ್ಟಾವಧಾನಲ್ಲಿಯೂ ಹೀಂಗಿರ್ತ ಸುತ್ತುಗೊ, ಗಮ್ಮತ್ತುಗೊ ಇರ್ತು.
ಅವಧಾನಿಗಳ ಗಮನವ ಎಳವಲೆ ಎಲ್ಲೋರುದೇ ಪ್ರಯತ್ನಮಾಡ್ತವು.
ಎಲ್ಲೋರುದೇ ಕೀಟ್ಳೆ ಕೊಡ್ತವು. ಎಲ್ಲೋರ ಹತ್ತರಂದಲೂ ಅವಧಾನಿಗೊ ಬಾಯಿಪಾಟ ಮಾಡ್ತವು. ಮತ್ತೆ ಅದರ ಕಂಠಸ್ಥ ಒಪ್ಪುಸುತ್ತವು.

ಅದರ್ಲಿಯೂ, ಆಶುಕವಿತ್ವ ಹೇದು ಒಂದು ಸುತ್ತು ಇದ್ದಲ್ಲದೋ – ಪೃಚ್ಛಕರು ಕೇಳಿದ ಒಂದು ಸನ್ನಿವೇಶಕ್ಕೆ ಸರಿಯಾದ ಕವಿತೆ ಬರದು ರಪಕ್ಕನೆ ಹೇಳೇಕು; ಪುರ್ಸೋತಿಲ್ಲೆ.
ಶಬ್ದ ಶಬ್ದ, ಗೆರೆ ಗೆರೆಯನ್ನೇ ರಚನೆ ಮಾಡಿಗೊಂಡು ಹೋಪದು ಅವಧಾನಿಗೊ.
ಮುಂದಾಣ ಗೆರೆ ಆಲೋಚನೆ ಮಾಡ್ಳೆ ಕೆಲವು ಕ್ಷಣಗಳ ಪುರುಸೊತ್ತು ಬೇಕಲ್ಲದೋ – ಆ ಹೊತ್ತಿಂಗೆ ಅಂಬಗ ರಚನೆ ಆದ ಬೆಶಿಬೆಶಿ ಹಿಂದಾಣ ಗೆರೆಯ – ಹೇಳುಗು.
ಪುನಾ ಪುನಾ ಹೇಳುಗು; ಮುಂದಾಣ ದಾರಿ ಸ್ಪಷ್ಟ ಅಪ್ಪಷ್ಟು ಹೊತ್ತುದೇ.

ಕೆದಿಲಾಯ ಮಾವ ಕಾವ್ಯವಾಚನ ಮಾಡಿಯಪ್ಪಗಳೂ ಹಾಂಗೆಯೇ. ಆ ಕಾವ್ಯ ಆರು ಬರದ್ಸು, ಸಂದರ್ಭ ಎಂತ್ಸರ, ಅವು ಓದಿದ ರಾಗ, ಆ ಕಾವ್ಯದ ಅದರ ಛಂದಸ್ಸು, ಎಲ್ಲವೂ ತಾಳೆ ಅಪ್ಪ ಹಾಂಗೆ ಚೆಂದಕೆ ಉತ್ತರ ಹೇಳುಗಲ್ಲದೋ – ಆ ಉತ್ತರವೂ ಅದೇ ನಮುನೆ ಇಕ್ಕು. ಒಂದೊಂದೇ ಶಬ್ದ ಜೋಡುಸಿಗೊಂಡು ಮುಂದೆ ಹೋಪಗ, ಅಮಾರ್ನಾತ ಕಲ್ತದೇ ನೆಂಪಕ್ಕು ಒಪ್ಪಣ್ಣಂಗೆ.

ದೇವಿ ಶಾರದೆ ಮೊದಲೇ ಕಲುಶಿ ಮಡಗಿದ್ದರ ಅವಧಾನಿಗೊ ಕಂಠಸ್ಥ ಮಾಡ್ತ ಚೆಂದ ಅದು.
~
ಅಪ್ರಸ್ತುತ ಪ್ರಸಂಗ ಮಾಡ್ತ ಕೊರ್ಗಿ ಮಾವ° ಗಮನ ಎಳವಲೆ ಪ್ರಶ್ನೆ ಕೇಳುವಾಗ ಡೀರಮೇಶ ಆಚ ಕ್ಲಾಸಿಂಗೆ ಉತ್ತರ ಕೊಟ್ಟದೇ ನೆಂಪಕ್ಕು.

~

ಮನಸ್ಸಿನ ಅತ್ಯುತ್ಕೃಷ್ಟ ಏಕಾಗ್ರತೆ, ಚಿಂತನಾ ಶೆಗ್ತಿಯ ಸಾಕಾರ ಅವಧಾನ ಕಾರ್ಯಕ್ರಮ. ಈ ವಾರ ನಮ್ಮ ಊರಿಲೇ, ಪುತ್ತೂರಿಲೇ ನೆಡೆತ್ತಾ ಇಪ್ಪದು ನಮ್ಮ ಸೌಭಾಗ್ಯ. ಎಲ್ಲೋರುದೇ ಬಂದು ಸೇರುವೊ. ಕೆಕ್ಕಾರು ಅಣ್ಣ, ಕೆದಿಲಾಯ ಮಾವ, ಕೊರ್ಗಿ ಮಾವ – ಎಲ್ಲೋರುದೇ ಅವಧಾನಿಗಳ ವ್ಯವಧಾನ ಭಂಗ ಮಾಡ್ತದರ ಕಾಂಬೊ. ಕೊಶಿ ಪಡುವೊ.
ಬತ್ತಿರಲ್ಲದೋ?
~

ಒಂದೊಪ್ಪ: ನಾವೆಲ್ಲರೂ ಹೃದಯ ಒಪ್ಪುಸುವೊ°, ಅವಧಾನಿಗೊ ಸಾಹಿತ್ಯ ಒಪ್ಪುಸಲಿ.
ಸೂ:
ಬೆಂಗ್ಳೂರು ಶತಾವಧಾನದ ಕೊನೆಲಿ ಕೆದಿಲಾಯ ಮಾವ ಕಾವ್ಯವಾಚನ. ಅದಾದ ಮತ್ತೆ ಅವಧಾನಿಗಳ ಉತ್ತರ, ಶಾರದೆ ಕಲಿಶಿದ್ದರ ಕಂಠಸ್ಥ ಮಾಡ್ತ ಚೆಂದ:
Shatavadhana-Kavyavachana.mp3

ಒಪ್ಪಣ್ಣ

   

You may also like...

11 Responses

  1. ಶುದ್ದಿ ಪಷ್ಟ್ಸಾಯಿದು.
    ಶಾಲೆಲಿ ಹೀಂಗಿಪ್ಪ ಅನುಭವಂಗೊ ಸುಮಾರು ಆಯಿದು.
    ಅದರೆಲ್ಲ ನೆಂಪು ಮಡುಗಿ, ಹೀಂಗೆ ಹೋಲುಸಿ ಬರದ್ದು ನೋಡಿ ಖುಷಿ ಆತು ಒಪ್ಪಣ್ಣ. 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *