Oppanna.com

ತಲೆಮಾರಿನ ವೆತ್ಯಾಸಕ್ಕೆ ಅಳಿಯಂದ್ರೇ ಸಾಕ್ಷಿ..!! – ಉತ್ತರಾರ್ಧ

ಬರದೋರು :   ಒಪ್ಪಣ್ಣ    on   07/03/2014    10 ಒಪ್ಪಂಗೊ

ಕಳುದ ವಾರ ಎಂತರ ಮಾತಾಡಿದ್ಸು?
ಹಾಂ, ಬೈಲಕರೆಯ ಒಂದು ಮನೆಲಿ ಒಬ್ಬ ಪೌರೋಹಿತ್ಯದ ಅಜ್ಜ° ಇದ್ದಿದ್ದವು. ಅವಕ್ಕೆ ಒಟ್ಟು ಹನ್ನೆರಡು ಮಕ್ಕೊ.
ಸುರೂವಾಣ ಮಗಳ ಮದುವೆ ಆದ ಅಳಿಯ° ಸಂಗೀತಗಾರ°. ಮಾವಂಗೂ – ಅಳಿಯಂಗೂ ಒಳ್ಳೆ ಚೇರ್ಚೆ.
ಅಜ್ಜನ ಪ್ರಾಯಕ್ಕೆ ಹತ್ತರೆಯೇ ಆದ ಕಾರಣ ಅವರ ಚೆಂಙಾಯಿಗಳ ಗುಂಪಿಲಿ ಈ ಅಳಿಯನೂ ಸೇರಿ ಹೋದವು.  ಆ ಅಜ್ಜನ ಮತ್ತಾಣ ಅಳಿಯಂದ್ರು ಎಷ್ಟೇ ಹತ್ತರೆ ಬಂದರೂ, ಈ ಅಳಿಯನಷ್ಟು ಹತ್ತರೆ ಅಪ್ಪಲೆ ಎಡಿಗಾಯಿದಿಲ್ಲೆ. ಮುಂದೆ?
~

ಮುಂದೆ – ಅಜ್ಜನ ಮತ್ತಾಣ ಮಕ್ಕೊಗೂ ಮದುವೆ ಆತು.
ಹತ್ತು ಅಳಿಯಂದ್ರದ್ದು ಹತ್ತು ನಮುನೆ ಕತೆ ಇದ್ದಲ್ಲದೋ, ಬೈಲಿಂಗೆ ಹೇಳು – ಹೇದು ಕೊದಿ ಬರುಸುತ್ತವು ಬೊಳುಂಬುಮಾವ°. ಆದರೆ, ಒಪ್ಪಣ್ಣನ ಶುದ್ದಿ ಈಗೀಗ ಹಿಟಾಚಿ ಚೈನಿನ ಹಾಂಗೆ ಉದ್ದ ಆವುತ್ತನ್ನೇ – ಹೇದು ದೊಡ್ಡಮಾಣಿ ದೊಡ್ಡಳಿಯ° ಕೋಂಗಿಮಾಡ್ತ°!
ಅದಿರಳಿ; ಹಾಂಗಾಗಿ ಹತ್ತು ಅಳಿಯಂದ್ರ ಕತೆ ನವಗೆ ಈಗ ಬೇಡ. ಕಾಲ ಬಂದಪ್ಪಗ ಮಾತಾಡಿಗೊಂಬೊ°.
ಈಗ, ಆ ಅಜ್ಜನದ್ದೂ, ದೊಡ್ಡಳಿಯಂದೂ – ಮಾಂತ್ರ ಸಾಕು.

ಕೂಸುಗಳ ಮದುವೆ, ಅದಾದ ಮತ್ತೆ ಮಾಣಿಯಂಗಳ ಮದುವೆ.
ಮಗಳಕ್ಕಳ ಪ್ರಾಯಕ್ಕೆ ಅನುಸರ್ಸಿ, ಅನುರೂಪವಾದ ಅಳಿಯಂದ್ರನ್ನೇ ಹುಡ್ಕಿದ್ದವು ಅಜ್ಜ°.
ಆಯಾ ಅಳಿಯಂದ್ರೂ ಅಂಬಗಂಬಗಾಣ ಜೀವನ ಪದ್ಧತಿಯೋರಾಗಿದ್ದಿದ್ದವು.
ಒಬ್ಬ° ಅಳಿಯ° ಕೃಷಿ, ಮತ್ತೊಬ್ಬ° ಅಳಿಯ° ಮಾಷ್ಟ್ರ, ಇನ್ನೊಬ್ಬ° ಗೋರ್ಮೇಂಟು ಇಂಜಿನಿಯರು; ಮಗದೊಬ್ಬ° ಅಳಿಯ ಬೇಂಕೋಪೀಸರ, ಅಕೇರಿಯಾಣೋನು ಕಂಪ್ಲೀಟ್ರು ಇಂಜಿನಿಯರು!! ಕೃಷಿಂದ ತೊಡಗಿ ಕಂಪ್ಲೀಟ್ರು ಒರೆಂಗೆ ಎಲ್ಲವೂ ಆ ಮನೆಲಿ ಇದ್ದತ್ತು.
ಅದಲ್ಲದ್ದೇ, ಅಲ್ಯಾಣ ಮಕ್ಕೊ – ಒಬ್ಬಂಗೆ ಒಯಿವಾಟು, ಇನ್ನೊಬ್ಬಂಗೆ ಗೋರ್ಮೆಂಟು, ಮತ್ತೊಬ್ಬಂಗೆ ಕೃಷಿ. ಮಾಣಿಯಂಗೊಕ್ಕೂ ಒಳ್ಳೊಳ್ಳೆ ಮನೆಂದಲೇ ಕೂಸು ತಂದವು.
ಮನೆಗೆ ಬಂದ ಅಳಿಯಂದ್ರು ಎಲ್ಲೋರ ಅಭಿರುಚಿಯೂ ಒಂದೇ ಆಗಿತ್ತು ಅಥವಾ ಒಬ್ಬಕ್ಕೊಂಬನ ಅಭಿರುಚಿಗೆ ಹೊಂದಿಗೊಂಡವು.
ಮನೆಗೆ ಸೌಭಾಗ್ಯ ತಂದ ಸೊಸೆಕ್ಕಳೂ ಕೂಡಾ ಎಲ್ಲೋರ ಹೊಂದಿಗೊಂಡವು.
~

ಅದೇನೇ ಇರಳಿ, ಅಜ್ಜನ – ಅವರ ದೊಡ್ಡಳಿಯನ ಚೆಂಙಾಯಿಪ್ಪಾಡು ಬದಲಿತ್ತಿಲ್ಲೆ.
ದೊಡ್ಡಳಿಯ° ಬಪ್ಪದು, ಮಾವುಗಳ ಹತ್ತರೆ ಶುದ್ದಿಗಳ ಮಾತಾಡುದು, ಮಾವುಗಳ ಒಟ್ಟಿಂಗೆ ಸಂಗೀತ ಕಛೇರಿಗೊಕ್ಕೆ ಹೋಪದು, ಊರು ಸುತ್ತುದು, ಸುರೂವಾಣ ಹಂತಿಗೇ ಕೂಪದು, ಎಲೆಯಿಂಬದು – ಇದೆಲ್ಲವೂ ಆಗಿಂಡಿತ್ತು.
ಅವಕ್ಕಿಬ್ರಿಂಗೆ ಚೇರ್ಚೆ ಸುರು ಆದರೆ, ಒಳುದ ಅಳಿಯಂದ್ರು, ಮಗಳಕ್ಕೊ, ಮಕ್ಕೊ – ಎಲ್ಲೋರುದೇ ಮತ್ತಾಣ ಪರಿಧಿ!
ದೊಡಾಕೆ ಬೊಬ್ಬೆ ಹೊಡದು ಮಾತಾಡ್ತ ಗೌಜಿ –  ಮದಲಾಣ ಕಾಲದ ಹಳಬ್ಬರು ಹಾಂಗೇ ಅಲ್ಲದೋ –ಇಬ್ರೇ ಇದ್ದರೂ ಇನ್ನೂರು ಜೆನಕ್ಕೆ ಕೇಳುವ ಸ್ವರ ಹಾಕುಗು! – ಒಟ್ಟಿಂಗೆ ಅವರ ಚೆಂಙಾಯಿಗೊ ಎಲ್ಲೋರುದೇ ಸೇರಿಗೊಂಡ್ರೆ, ಈ ಮಾವನೂ ಅಳಿಯನೂ ಬೊಬ್ಬೆ ಹೊಡದು ಮಾತಾಡ್ಳೆ ಸುರುಮಾಡಿರೆ, ಒಳುದ ಜೆನಂಗೊ ಮೌನಲ್ಲಿ, ಪಿಸಿಪಿಸಿಲಿ ಅತ್ತಿತ್ತೆ ಮಾತಾಡಿಗೊಂಗು. ರಜ್ಜ ಗೌಜಿಯೇ ಮಾಡಿ ಮಾತಾಡೆಕ್ಕಾದರೆ ಜಾಲಕರೆಂಗೆಯೊ, ಕಟ್ಟದ ಕರೆಂಗೆಯೋ ಹೋಗಿ ಮಾತಾಡಿ ಬಕ್ಕು.
ದೊಡ್ಡೋರ ಎಡೇಲಿಯೂ ಅವರದ್ದೇ ಲೋಕವ ಸೃಷ್ಟಿಸಿಗೊಂಡವು.

~

ಅಜ್ಜಂಗೆ ಪ್ರಾಯ ಆಗಿ ಸುತ್ತಾಟ ಇಲ್ಲದ್ದೆ ಆದ ಮತ್ತೆಯೂ, ಪೆಶಲು ಜೀಪು ಪೆರಡಾನಂದ ಮಾಡುಸಿ ಕರಕ್ಕೊಂಡು ಹೋಗಿ ಮನೆಲಿ ಎರಡು ದಿನ ಕೂರ್ಸಿ ಬಯಿಂದವು ಅವರ ದೊಡ್ಡಳಿಯ°. ಅಜ್ಜನೇ ಹಾತೊರದು ಹೋದ ಕಾರಣ ಅನಾರೋಗ್ಯದ ಎಡೆಲಿಯೂ ಒಳ್ಳೆ ಗೆಲುವಾಯಿದವಾಡ ಅಜ್ಜ°.

~

ದಿನಂಗ ಹೋಪದು ಒಂದೇ ನಮುನೆ ಆದರೂ ಅದು ನವಗೆ ಕೊಡುದು ಒಂದೇ ನಮುನೆದು ಅಲ್ಲನ್ನೆ!
ಹೊತ್ತು ಹೋದ ಹಾಂಗೆ ದಿನ ಏರ್ತು;  ದಿನ ಹೋದ ಹಾಂಗೆ ಪ್ರಾಯವೂ ಏರುತ್ತು.
ಅಂತೂ – ಪ್ರಾಯ ಎಲ್ಲೋರಿಂಗೂ ಆವುತ್ತು. ದೇಹ ಜೀರ್ಣ ಆಗಿ ಆತ್ಮ ಬೇರೆ ಅಪ್ಪದೇ ಪರಮ ಮೋಕ್ಷ ಸಂಗತಿ.
ಈ ಅಜ್ಜಂಗೂ ಹಾಂಗೇ ಆತು; ಒಂದು ದಿನ ತೀರಿಗೊಂಡವು.  ಎಲ್ಲೋರ ಗೌರವ ಪಡಕ್ಕೊಂಡೇ ಮೋಕ್ಷ ದಾರಿ ಹಿಡುದವು.

~

ಅಜ್ಜ° ತೀರಿಗೊಂಡ ಮತ್ತೆ ಆ ಮನೆಲಿ ಬದಲಾವಣೆಗೊ ಆತು.
ಹೆರಿಯೋರ ಅಗಲಿಕೆಯ ಆಘಾತ ಒಂದರಿಯಂಗೆ ಆದರೂ ಬದಲಾವಣೆ ಮಾಡ್ಲೆಡಿಯದ್ದ ಈ ವೆವಸ್ತೆಗೆ ಎಲ್ಲೋರೂ ವಿಧಿಪೂರ್ವಕ ತೆಯಾರು ಆಗಿಯೇ ಆಯೆಕ್ಕಾವುತ್ತು.
ಒಂದು ತಲೆಮಾರು ಪೀಂಕಿದ ಕೂಡ್ಳೇ ಇನ್ನೊಂದು ತಲೆಮಾರು ತಯಾರಾವುತ್ತು. ಎಲ್ಲ ಮನೆಲಿಯೂ ಹಾಂಗೇ, ಇಲ್ಲಿಯೂ ಹಾಂಗೇ. ಜೆಬಾದಾರಿ ತಲೆ ಬದಲಿತ್ತು!
ತಲೆಮಾರು ಬದಲಿದ ಹಾಂಗೆ ವೆವಸ್ಥೆಗಳೂ ಬದಲಿದವು!
“ಬಟ್ಟಜ್ಜನ” ಮನೆಲಿ ಬಟ್ರು ಇಲ್ಲೆ. ಪೌರೋಹಿತ್ಯಕ್ಕೆ ಆರೂ ಜೆನ ಇಲ್ಲೆ.
ಒಬ್ಬೊಬ್ಬಂಗೆ ಒಂದೊಂದು ವ್ಯಾಪ್ತಿ. ಎಲ್ಲೋರಿಂಗೂ ಅಂಬೆರ್ಪು.

ಆದರೂ, ಅಕ್ಕತಂಗೆಕ್ಕೊ, ಅಣ್ಣ ತಮ್ಮಂದ್ರು ಒರ್ಮೈಶಿಗೊಂಡು, ಭಾರೀ ಚೆಂದಲ್ಲಿ ಇಪ್ಪದೇ ಸಾಕ್ಷಿ. ಪೂಜೆಯೋ, ತಿಥಿಯೋ, ಎಂತಾರು ಇದ್ದರೆ ಎಲ್ಲೋರ ಸಂಸಾರ ಚೆಂದಲ್ಲಿ ಸೇರಿಗೊಂಬ ಒಂದು ಕ್ರಮ. ಇಂದಿಂಗೂ ನೆಡಕ್ಕೊಂಡು ಬತ್ತಾ ಇದ್ದು. ಹಾಂಗೇ ಸೇರಿ ಅಪ್ಪಗ ಇಪ್ಪ ಗಲಗಲವೇ ಬೇರೆ!

ಎಲ್ಲಾ ಅತ್ತೆಕ್ಕೊ, ಅವರ ಮಕ್ಕೊ, ಅಣ್ಣ ತಮ್ಮಂದ್ರು, ಅಕ್ಕ ತಂಗೆಕ್ಕೊ, ಅತ್ತಿಗೆ-ಭಾವಂದ್ರು ಬೊಬ್ಬೆಯೋ ಬೊಬ್ಬೆ.
ಒಂದೊಂದು ಕಾಲಮಾನದ ಜವ್ವನಿಗರದ್ದು ಒಂದೊಂದು ಗುಂಪು.
ಲೂಟಿ ಮಕ್ಕಳ ಗುಂಪು ಮಾಡಿಂಗೆ ಕಲ್ಲಿಡ್ಕುಗು, ಶೇಳೆಕೂಚಕ್ಕಂಗೊ ಮನೆಲಿ ಉದ್ದಜೆಡೆಯ ಆಟ ಆಡುಗು, ಅರ್ಗೆಂಟಿನ ಮಾಣಿಯಂಗೊ ದೊಡ್ಡವರ ಕೈಂದ ಪೊಳಿ ತಿಂಗು, ಅರ್ಗೆಂಟಿನ ಕೂಚಕ್ಕಂಗೊ ಅಮ್ಮಂದ್ರ ಹಿಂದೆ ನೇತುಗೊಂಡಿಕ್ಕು. ಇದೆಲ್ಲವೂ ಆ ಮನೆಲಿ ಚೆಂದಕ್ಕೆ ನೆಡೆತ್ತು. ಅಜ್ಜನ ಮಗಳಕ್ಕೊ ಅವರ ಅಪ್ಪನ ಮನೆಗೆ ಬಂದ ಗೌಜಿ, ಅಲ್ಯಾಣ ತಮ್ಮಂದ್ರ ಹೆಂಡತ್ತಿಯಕ್ಕೊಗೆ ಅತ್ತಿಗೆಕ್ಕೊ ಬಂದು ಸೇರಿದ ಕೊಶಿ, ಅಣ್ಣತಮ್ಮಂದ್ರಿಂಗೆ ಅವರ ಭಾವಂದ್ರ ಹತ್ತರೆ ಪಂಚಾತಿಗೆ ಮಾಡುವ ಕೊಶಿ!
ಇದೆಲ್ಲ ಕೊಶಿಯೇ ಆದರೆ, ಒಂದು ಜೆನ ಮಾಂತ್ರ ಒಂಟಿತನಲ್ಲಿ ಬೆಂದುಗೊಂಡಿಕ್ಕು.
ಆರು? ಅವ್ವೇ – ಆ ದೊಡ್ಡಳಿಯ°!

~

ಎಲ್ಲೋರ ಬೊಬ್ಬೆ ಗವುಜಿಯ ಎಡೆಲಿ ಆ ದೊಡ್ಡಳಿಯಂಗೆ ಅವರ ಮಾವುಗಳು ಹೇಳಿಗೊಂಡಿದ್ದ ಮಾತೇ ನೆಂಪಾವುತ್ತಡ.
“ನಾವು ಬೊಬ್ಬೆ ಹೊಡದೇ ಜೀವನ ಮಾಡುದಲ್ಲದೋ?” – ಹೇದು.
ಈಗ, ಅವರ ಹತ್ತರೆ – ದೊಡ್ಡ ಸ್ವರ ಬಿಡಿ – ಮಾತಾಡ್ಳೇ ಜೆನ ಇಲ್ಲೆ.
ಒಳುದ ಎಲ್ಲೋರಿಂಗೂ ಒಂದು  ಮತ್ತಾಣ ತಲೆಮಾರಿನ “ಚೇರ್ಚೆ” ಹಿಡುಶಿ ಹೋಯಿದು.
ಒಳುದ ಅಳಿಯಂದ್ರು ಅಂದು ಪಿಸಿಪಿಸಿ ಮಾಡಿಯೇ ಮಾತಾಡಿಗೊಂಡಿದ್ದವು – ಈಗ ದೊಡಾ ಬೊಬ್ಬೆ ಹೊಡದು ಮಾತಾಡ್ತವು.
ಅವು ಮಾತಾಡಿಗೊಂಡಿಪ್ಪಗ ಈ ಅಳಿಯ° ಹೋದರೆ, ಗೌರವಲ್ಲಿ ಅವೆಲ್ಲೋರುದೇ ಸುಮ್ಮನೆ ಆವುತ್ತವು!
ಮಾವಂಗೆ ಕೊಡ್ತ ಗವುರವ ದೊಡ್ಡಳಿಯನ ಮೇಲೆ ಇದ್ದದೂ ಕಾರಣವೊ ಅಲ್ಲ ಇದುವರೆಗೆ ಹತ್ತರೆ ಮಾಡದ್ದದೂ ಕಾರಣವೊ ಅರಡಿಯ.
ಅಂತೂ – ಮಾತಾಡುದೆಲ್ಲ ಮದಲೇ ಮಾತಾಡಿ ಮುಗುದ್ದೋ – ಹೇದು ಅನುಸುಲಿದ್ದು ಈ ಅಳಿಯಂಗೆ.

~

ಅಲ್ಲಿ ಸೇರಿದ ಎಲ್ಲಾ ಜೆನಂಗಳೂ ಆ ಹಳೆಕಾಲದ ಕಾಲದ “ಅಪ್ರಬುದ್ಧ”ರು.
ಮಾವಂಗೂ ಈ ದೊಡ್ಡಳಿಯಂಗೂ ಚೇರ್ಚೆ ನೆಡಕ್ಕೊಂಡಿಪ್ಪಾಗ ಈ ಒಳುದೋರು ಏಕೂ ಬೇಡದ್ದೆ ಆಗಿ ಹೋಗಿತ್ತಿದ್ದವು.
ಆದರೆ, ಮುಂದೆ ಆ ಅಜ್ಜನೇ ತೀರಿಗೊಂಡ ಮತ್ತೆ ಆ ಅಳಿಯನೇ ಒಬ್ಬಂಟಿ ಆಗಿ ಹೋದವು.

ಮನೆ ಹಾಂಗೇ ಇದ್ದು. ಜೆನಂಗಳ ನೆಗೆ ಹಾಂಗೇ ಇದ್ದು, ಆದರೆ – ಆ ಅಜ್ಜ° ಇಲ್ಲೆ.
ಅಜ್ಜನ ದೊಡ್ಡಳಿಯಂಗೆ ಸಂಗಾತಕ್ಕೇ ಜೆನ ಇಲ್ಲೆ!
ಅದಕ್ಕೇ ಹೇಳುಸ್ಸು, ಕಾಲ ಬದಲಿದ ಹಾಂಗೇ ಚೇರ್ಚೆಯೂ ಬದಲುಸಲೆ ಎಡಿಯೇಕು – ಹೇದು.
ಅಲ್ಲದೋ?

~

ಒಂದೊಪ್ಪ: ಒಂದಲ್ಲ ಒಂದು ಕಾಲಕ್ಕೆ ಎಲ್ಲೋರುದೇ ಬೇಕು. ಎಲ್ಲೋರನ್ನೂ ಹತ್ತರೆ ಮಾಡಿಗೊಳೇಕು.

10 thoughts on “ತಲೆಮಾರಿನ ವೆತ್ಯಾಸಕ್ಕೆ ಅಳಿಯಂದ್ರೇ ಸಾಕ್ಷಿ..!! – ಉತ್ತರಾರ್ಧ

  1. ಚೆಲ, ಹತ್ತು ಕತಗೊ ಇಕ್ಕೂ ಹೇಳಿ ಗ್ರೇಶಿರೆ ಎರಡರಲ್ಲೇ ನಿಂದತ್ತಾನೆ. ಹೀಂಗೆ ಹೊಸ ತಲೆಮಾರಿಂಗೆ ಹೊಂದಾಣಿಕೆ ಆಗದ್ದ ದೊಡ್ಡಳಿಯನ ಎಲ್ಲೋ ಕಂಡ ಹಾಂಗೆ ಆವ್ತಾನೆ. ಎಲ್ಲಿ ಹೇಳಿ ನೆಂಪಾವ್ತಿಲ್ಲೆ. ನಿಜ ಎಲ್ಲೋರೂ ಹೇಳ್ತ ಹಾಂಗೆ ಹೊಸತ್ತಕ್ಕೆ ಹೊಂದಿ ಕೊಳ್ಳದ್ರೆ ಹೀಂಗೇ ಅಪ್ಪದು. ಈಗಾಣ ಕಂಪ್ಲೀಟರಿನ ,ಮೊಬೈಲಿನ ಟೆಕ್ಕುನಿಕ್ಕಿಂಗೆ ಹೊಂದಲೆಡಿಯದ್ದ ಅಜ್ಜಂದ್ರ ಸ್ಥಿತಿಯುದೆ ಈ ದೊಡ್ಡಳಿಯನ ಸ್ಥಿತಿ ಹಾಂಗೇ ಇಕ್ಕೊ ಹೇಳಿ, ಎಂತ ಹೇಳ್ತಿ ?

    1. ಈ ಬೊಳುಂಬು ಭಾವಂಗೆ ಹತ್ತತ್ತು ಕತೆ ತಯರು ಮಾಡಿ ಕೊಡುದು ಆರಪ್ಪ…. 🙁

    2. ಈ ಬೊಳುಂಬು ಭಾವಂಗೆ ಹತ್ತತ್ತು ಕತೆ ತಯಾರು ಮಾಡಿ ಕೊಡುದು ಆರಪ್ಪ…. 🙁

  2. ಹರೇರಾಮಾ,ಈ ಅಜ್ಜ ತನ್ನ ಪ್ರಾಯದೋನಿಂಗೆ ಮಗಳ ಮದುವೆ ಮಾಡಿಕೊಟ್ಟದು!!! ಮಾವಗಳಿಂಗೂ-ಅಳಿಯಂಗೂ ಒಳ್ಲೇ ಚೇರ್ಚೆ ಆದ್ದು ಸರಿ. ಆದರೆ ಮಗಳಿಂಗೂ-ಅಳಿಯಂಗೂ ಚೇರ್ಚೇ ಆತೋ ಉಮ್ಮಪ್ಪ! ಮದಲಾಣ ಹೆಚ್ಹಿನ ಉದಾಹರಣೆಯೂ ಹೀಂಗೇ ಅಲ್ಲೋ ಒಪ್ಪಣ್ಣಾ? ಅಂತೂ ಮದಲಾಣ ಹೆಮ್ಮಕ್ಕೊ ಅಪ್ಪನಿಂದಲೋ ಗೆಂಡನಿಂದಲೋ ಅಥವಾ ಇನ್ನಿತರ ಮನೆ ಸದಸ್ಯರಿಂದ ತನಗೆ ಅನ್ಯಾಯ ಆದರೂ ಭೂದೇವಿ ಹಾಂಗೆ ಸಹಿಸಿಗೊಂಡು ಬಾಳ್ವೆ ಮಾಡುಗು ಹಾಂಗಾಗಿ ಹೆಚ್ಹಿನವೂ ಒರ್ಮೆಲಿ ಹೋಕು!. ಮೊದಲಾಣ ಜನರೇಶನಿನ ಒಂದು ಉದಾಹರಣೆ ಸಹಿತ ವಿವರಣೆ ‘ಹಳೆಬೇರು’ ಗಳಲ್ಲಿ ಒಂದು ರೋಮ ಬೇರು ನಮ್ಮ ಮುಂದೆ ಮಡುಗಿದ ಒಪ್ಪಣ್ಣಂಗೆ ಒಂದೊಪ್ಪ.

  3. ಒಂದಲ್ಲ ಒಂದು ಕಾಲಕ್ಕೆ ಎಲ್ಲೋರುದೇ ಬೇಕು. ಎಲ್ಲೋರನ್ನೂ ಹತ್ತರೆ ಮಾಡಿಗೊಳೇಕು ಹೇದು ಒಂದೊಪ್ಪ ಹೊತ್ತ ಈ ಶುದ್ದಿ ಉತ್ತಮ ಚಿಂತನೀಯ. ಪ್ರತಿಯೊಬ್ಬನೂ ಆತ್ಮಾವಲೋಕನ ಮಾಡಿಕ್ಕೊಳ್ಳೆಕ್ಕಾದ ವಿಷಯ. ಹರೇ ರಾಮ

  4. ಇಬ್ಲೀಸಿಲಿ ‘ ಜನರೇಶನ್ ಗೇಪ್’ ‘ಹೇಳುತ್ಸು ಇದುವೆಯೋ ಎನ್ಸೋ! ಅಂತೂ ದೊಡ್ದಳಿಯಂಗೆ ಅವನ ಹೆಂಡತಿ ಆದರುದೆ ಮಾತಾಡ್ಲೆ ಸಿಕ್ಕಿತ್ತೋ ಇಲ್ಲೆಯೊ! ಉಮ್ಮಪ್ಪ…ಒಪ್ಪ ಲೇಖನ ಮಿನಿಯಾ, ಒಪ್ಪಣ್ಣಾ.

  5. ಹಳೆಬೇರು – ಹೊಸ ಚಿಗುರುಗಳ ನೆಡುವಾಣ ಕಾ೦ಡ ಆಗಿ ವ್ಯವಹರಿಸುಲೆ ಕಲಿಯೆಕ್ಕು,ಅಲ್ಲದೋ ಒಪ್ಪಣ್ಣಾ.
    ಒಳ್ಳೆ ಸತ್ವ ಇಪ್ಪ ಶುದ್ದಿ.

  6. ಒಂದಲ್ಲ ಒಂದು ಕಾಲಕ್ಕೆ ಎಲ್ಲರೂ ಬೇಕು.ಸರಿಯಾದ ಮಾತು. ದೀರ್ಘಾಯುಷ್ಯ ಇಪ್ಪವು ಸಣ್ಣವರ ಒಟ್ಟಿಂಗೆ ಸಹೃದಯ ಭಾವನೆ ತೋರಿಸದಿದ್ದರೆ ಅವು ಒಬ್ಬಂಟಿ ಆವುತ್ತವು-ಬದುಕಿಪ್ಪಗಲೇ ವಸ್ತುಪ್ರದರ್ಶನದ ವಸ್ತುವಿನ ಹಾಂಗೆ ಆವ್ತವು.ಕಯ್ಕೆ ಆದರೂ ನಿಜ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×