Oppanna.com

ದಡಮ್ಮೆ, ಉರುವೆಲು, ಬೇಲಿ, ಮರೆ – ಮರೆವ ಮೊದಲು ನೆಂಪಿಂಗೆ ಬರೆ!

ಬರದೋರು :   ಒಪ್ಪಣ್ಣ    on   08/03/2013    20 ಒಪ್ಪಂಗೊ

ಶಿವಶಿವಾ ಹೇದು ಚಳಿ ಓಡಿಹೋಪದು ಶಿವರಾತ್ರಿಗೇ ಅಡ.
ಸಾರಡಿ ತೋಡಿಲಿ ಹರಿಪ್ಪು ಕಟ್ಟುದು, ಊರಿಲಿ ಛಳಿಬಿಡುದು, ಬೇಸಗೆ ಸುರು ಅಪ್ಪದು – ಎಲ್ಲವೂ ಇದೇ ದಿನಕ್ಕೆ ಇದಾ!
ಒರಿಶದ ಹಾಂಗೇ ಈ ಸರ್ತಿಯೂ ಶಿವರಾತ್ರಿ ಬಂದೇ ಬಂತು.
ಎಡಪ್ಪಾಡಿ ಬಾವಂಗೆ ಗೋಕರ್ಣಕ್ಕೆ ಹೋಗದ್ದೆ ಕಳಿಯ, ಬಾಬುಗೆ ಬೇಲಿ ಹಾರಿ ಬೊಂಡ ಕಳ್ಳದ್ದೆ ಕಳಿಯ, ಶರ್ಮಪ್ಪಚ್ಚಿಗೆ ರುದ್ರ ಹೇಳದ್ದೆ ಕಳಿಯ, ಒಪ್ಪಣ್ಣಂಗೆ ಶುದ್ದಿ ಹೇಳದ್ದೆ ಕಳಿಯ! ಪೋ!!
ಎಂತ ಮಾಡುದು, ವಾರದ ಬಾಬ್ತು ಶುದ್ದಿ ಹೇಳುವಾಗ ಶಿವರಾತ್ರಿ ಬಂದರೆ, ಅದರ ಬಗ್ಗೆಯೇ ಮಾತಾಡಿ ಹೋಪದಿದಾ!
ಶಿವರಾತ್ರಿಯ ಬಗ್ಗೆ ಕಳುದ ಸರ್ತಿಯೇ ಒಂದರಿ ಮಾತಾಡಿದ್ದು ನಾವು. ನೆಂಪಿದ್ದನ್ನೇ? (https://oppanna.com/oppa/maha-shiva-ratri )
ಹೇಂಗೂ ಆ ಬಗ್ಗೆ ಒಂದರಿ ಮಾತಾಡಿದ ಕಾರಣ, ಈ ಸರ್ತಿ ಬೇರೆ ಶುದ್ದಿ ಮಾತಾಡಿರೂ ಆಗದ್ದಿಲ್ಲೆ; ಶಿವರಾತ್ರಿ ದಿನ ಬೇಲಿ ಹಾರಿ ಬೊಂಡ ಕಳ್ಳುಸ್ಸು – ಹೇಳಿದೆ ಅಲ್ಲದೋ, ಅದರ ಬಗ್ಗೆಯೇ ಮಾತಾಡುವೊ°.
ಯೇವದು? ಬೊಂಡ ಕಳ್ಳುಸ್ಸರ ಬಗ್ಗೆಯೋ? ಅಲ್ಲ, ಅದು ನವಗೆ ಬೇಡ. ಅದು ಹಾರ್ತ “ಬೇಲಿ”ಯ ಬಗ್ಗೆ!
~
ಬೇಲಿ ಇಪ್ಪದೇ ಹಾರುಲೆ- ಹೇಳಿ “ಬೇಲಿ ಹಾರಿದೋರು” ಕೆಲವು ಜೆನ ಹೇಳುಗು; ನವಗರಡಿಯ.
ಆದರೆ ಎತಾರ್ತಲ್ಲಿ ಬೇಲಿ ಇಪ್ಪದೆಂತಗೆ?
ಯೇವದೇ ಒಂದು ವಸ್ತುವಿನ/ ಪರಿಸರದ ವ್ಯಾಪ್ತಿಯ ಗುರ್ತಕ್ಕಾಗಿ. ಯೇವದೇ ಒಂದು ಸ್ವಾಧೀನತೆಯ ಸಂಗತಿಯ ರಕ್ಷಣೆಗಾಗಿ ಬೇಲಿ ಇರ್ಸು.
ಬೇಲಿ ಯೇವದಕ್ಕೆ ಬೇಡದ್ದು? ಎಲ್ಲ ಜಾಗೆಲಿಯೂ, ಯೇವತ್ತಿಂಗೂ ಬೇಲಿ ಬೇಕೇ ಬೇಕು.

ನಮ್ಮ ಪರಿಸರಲ್ಲಿ ಹಲವು ಬಗೆಯ ಬೇಲಿಗಳ ನಾವು ಕಂಡಿದು.
ಡೆಂಟಿಷ್ಟುಮಾವ° ಹಲ್ಲಿಂಗೆ ಹಾಕುತ್ತ ಬೇಲಿಂದ ಹಿಡುದು, ಚೀನಾದೇಶದ ಉತ್ತರದ ಹೊಡೆಲಿ ಇರ್ತ “ಮಹಾಗೋಡೆ”ಯ ನಮುನೆ ಹಲವು ನಮುನೆ ಬೇಲಿಗೊ.
ಆದರೆ, ನಮ್ಮ ಊರಿನ ಕೃಷಿ ಜೀವನಲ್ಲಿ ಸರ್ವೇಸಾಮಾನ್ಯವಾಗಿ ಕಂಡು ಬಂದುಗೊಂಡಿದ್ದ ಹಲವು ನಮುನೆ ಬೇಲಿಗೊ ಯೇವದೆಲ್ಲ:
~

ಬೇಕಲದ ಕೋಟೆ - ಕಳಕಳದ ಗೋಡೆ
ಬೇಕಲದ ಕೋಟೆ – ಕಳಕಳದ ಗೋಡೆ

ಬೇಲಿ:
ಜಾಗೆ ಗುರ್ತಕ್ಕೆ ಹಾಕುತ್ತ ಹಲವು ವಿಧದ ಬೇಲಿಲಿ ಸುರೂವಾಣದ್ದು “ಮುಳ್ಳುಬೇಲಿ”.
ಇದಕ್ಕೆಂತೂ ಜಾಸ್ತಿ ಕೆಲಸ ಇಲ್ಲೆ, ಚೂರಿಮುಳ್ಳೋ, ಕಾರೆ ಮುಳ್ಳೋ – ಎಂತಾರು ಮುಳ್ಳಿನ ಗೆಡುಗಳ ಗೆಲ್ಲಿನ ಉದಾಕೆ ಮಡಿಕ್ಕೊಂಡು ಹೋದರೆ ಮುಗಾತು.
ರಜ ಹಂದುಲಾಗದ್ದ ನಮುನೆ ಬೇಕಾರೆ ದೂರದೂರಕ್ಕೆ ಒಂದೊಂದು “ತೂಣ” – ಕೊದಂಟಿ ಬಡುದತ್ತು. ಅಷ್ಟೆ!
ಈಚ ಹೊಡೆಂದ ಆಚ ಹೊಡೆಂಗೆ “ಬಪ್ಪಲಾಗ” ಹೇಳ್ತ ಗುರ್ತಕ್ಕೆ ಇಪ್ಪದು; ಹಾರಿರೆ ಹೋಪಲೆಡಿಯದ್ದೆ ಏನಿಲ್ಲೆ ಇದಾ.

ಇನ್ನು, ರಜಾ ಸಂಸ್ಕಾರ ಇರ್ತ ನಮುನೆದು ಬೆದ್ರಮುಳ್ಳು ಬೇಲಿ.
ಇದಕ್ಕೆ ರಜಾ ಕೆಲಸ ಜಾಸ್ತಿ ಇದ್ದು. ಬೆದ್ರ ಹಿಂಡ್ಳಿಂದ ಮುಳ್ಳು ಎಳದು, ಒಂದೇ ಉದ್ದಕ್ಕೆ ತುಂಡುಮಾಡಿ, ಮನಾರಕ್ಕೆ ಮಡಗಿ ಕಟ್ಟ ಕಟ್ಟುಸ್ಸು ಸುರೂವಾಣ ಕೆಲಸ.
ಆ ಮುಳ್ಳಿನ ಕಟ್ಟವ ಹೊತ್ತು ತಂದು ಬೇಲಿಕಟ್ಟೆಕ್ಕಾದಲ್ಲಿ ಮಡಗುಸ್ಸು ಇನ್ನೊಂದು ಕೆಲಸ.
ಆ ಮುಳ್ಳುಗಳ ಒಂದೊಂದೇ ಆಗಿ – ಅರ್ಧ ಮನುಗುಸಿ ಮಡಗುಸ್ಸು ಮತ್ತೊಂದು ಕೆಲಸ. ಆ ಮುಳ್ಳಿನ ಸಾಲಿನ ಆಚೀಚೊಡೆಂಗೆ ಸಲಕ್ಕೆಲಿ ಕಟ್ಟುಸ್ಸು ಮತ್ತೊಂದು ಕೆಲಸ.
ಮದಲಿಂಗೆ ಬಟ್ಯ° ಬೇಲಿ ಹಾಕುಸ್ಸರಲ್ಲಿ ಉಶಾರಿ. ಈಗ ಇಷ್ಟೆಲ್ಲ ಮನಾರ ಮಾಡ್ಳೆ ಆರಿಂಗರಡಿತ್ತೋ; ಉಮ್ಮಪ್ಪ.
ಈ ಬೇಲಿ ಆಚ ಕಾಟುಮುಳ್ಳಿನ ಬೇಲಿಂದ ಗಟ್ಟಿ. ಆಚೀಚೊಡೆಲಿ ಸಲಕ್ಕೆ ಇಪ್ಪ ಕಾರಣ ಮುಳ್ಳುಗೊ ಉದುರುತ್ತಿಲ್ಲೆ, ಆ ಸಲಕ್ಕೆಗಳ ತೋರತೋರದ ಕಂಬಕ್ಕೆ ಕಟ್ಟುತ್ತ ಕಾರಣ ಇಡೀ ವ್ಯವಸ್ಥೆಯೇ ಸುಭದ್ರ ಆಗಿರ್ತು. ದನ ಬಿಡಿ, ದನದ ಕಂಜಿ ಬಿಡಿ, ಕೋಳಿಕುಂಞಿಯೂ ಬಾರ – ಸುರೂವಾಣ ಒರಿಶ.
ಮತ್ತೆ ಒಂದೊಂದೇ ಮುಳ್ಳುಕಡ್ಡಿಗೊ ರಜ ಕುಂಬಾಗಿ ದಾಸುನಾಯಿಗೆ ಹೋಪಲೆದಕ್ಕಿತ ದಾರಿ ಆವುತ್ತು.

ಕುಂಬಾಗಿ ಹೋಪಲಾಗದ್ದರೆ ಎಂತ ಮಾಡೇಕು? ಕಲ್ಲಿಂದೋ – ಲೋಹದ್ದೋ ಮಣ್ಣ ಮಾಡೇಕು.
ಅದಕ್ಕೇ ಬಂದದು, ತಂತಿಬೇಲಿ.
ಆರಾರು ಅಡಿ ಎತ್ತರದ ಕಲ್ಲಿನ ಕಂಬವ ನೆಟ್ಟು, ಅದಕ್ಕೆ ಒಂದೊಂದಡಿ ದೂರಕ್ಕೆ – ಇಂಗ್ಳೀಶು ಕೋಪಿಯ ನಮುನೆಲಿ- ತಂತಿಮುಳ್ಳಿನ ಕಟ್ಟಿಂಡು ಹೋಪದು.
ಒಂದರಿ ಎಳದ್ದು ಬಿಗುದು, ರಜ ಬಲ್ಲೆ ಸೆಸಿಯೋ –ದಾಸನವೋ ಎಂತಾರು ಹಬ್ಬುಸಿರೆ ಮತ್ತೆ ಹತ್ತೊರಿಶಕ್ಕೆ ಬೇಲಿಹೊಡೆಂಗೆ ತಲೆ ಹಾಕಿ ಮನುಗೇಕು ಹೇಳಿ ಇಲ್ಲೆಪ್ಪೋ!

ಇದರಲ್ಲೇ ರಜ್ಜ ಮಾರ್ಪಾಡು ಮಾಡಿ, ಇತ್ತೀಚೆಗೆ ಬಂದ ಕತೆ – ಕರೆಂಟು ಬೇಲಿ.
ತಂತಿ ಕಂಬಕ್ಕೆ ಪಿಂಗಾಣಿ ಓಟೆ ಕಟ್ಟಿ, ಆ ಓಟೆ ಒಳದಿಕೆ ಸರಿಗೆ ಇಪ್ಪ ಹಾಂಗೆ- ಆ ಸರಿಗೆಗೆ ಕರೆಂಟು ಕೊಡುದು.
ಭಾವಯ್ಯನ ಇಡೀ ಜಾಗೆಗೆ ಕರೆಂಟು ಒಂದು ಸುತ್ತು ಹಾಕಿ ಒಪಾಸು ಬತ್ತು. ಎಡೆಲಿ – ಕಾಟಿಯೋ – ಮಂಗನೋ- ಆನೆಯೋ – ಎಂತಾರು ಬಂದರೆ – ಬಲುಗಿ ಇಡ್ಕುತ್ತು ಇದಾ.
ಹಾಂಗಾಗಿ ತುಂಬಾ ಅಪಾಯದ ರಕ್ಷಣೆಯ ಸಂಗತಿ ಇದು. ಕರೆಂಟಿಪ್ಪಗ ಮಾಂತ್ರ! ಅಲ್ಲದ್ದರೆ ತಂತಿಬೇಲಿಯಷ್ಟೇ ಲೆಕ್ಕ!

ಇದರಿಂದಲೂ ಗಟ್ಟಿ ಬೇಕಾರೆ ಕಲ್ಲಿನ ಕೋಟೆ / ಗೋಡೆ ಆಯೇಕಟ್ಟೆ.

ಗೋಡೆ:
ಉಂಡೆಹುಳಿ ಗಾತ್ರ, ಜೀಗುಜ್ಜೆ ಗಾತ್ರ, ಗುಜ್ಜೆ ಗಾತ್ರ – ಎಲ್ಲಾ ನಮುನೆಯ ಕಾಟುಕಲ್ಲುಗಳ ಒಂದರ ಮೇಗೆ ಒಂದು ಮಡಿಕ್ಕೊಂಡು, ಸಾಲಾಗಿ ಗೋಡೆ ಮಾಡಿಂಡು ಹೋಪದು;
ಮನಾರದ ಗೋಡೆ ಅಲ್ಲ, ಆದರೆ – “ಸ್ವಾಧೀನತೆ” ತೋರ್ಸಲೆ ಸಾಕು. ಈ “ಕಾಟುಕಲ್ಲಿನ ಕೋಟೆ” ಕಂಡು ಗೊಂತಿಕ್ಕನ್ನೇ?
– ಎಡಪ್ಪಾಡಿ ಬಾವನಲ್ಲಿಗೆ ಹೋವುತ್ತ ದಾರಿಲೆ ಒಂದರಿ ನೆಡಕ್ಕೊಂಡು ಹೋದರೆ ಹಲವು ಆ ನಮುನೆ ಕೋಟೆಗೊ ಹಲವು ಕಾಣ್ತು.

ಈಗ ಈ ಕಾಟುಕಲ್ಲಿನ ಕೋಟೆ ಹೋಗಿ ಒಪ್ಪ ಕಲ್ಲಿನ ಕೋಟೆ ಕಟ್ಟುತ್ತವು. ಕಲ್ಪಣೆಯ ಕಲ್ಲಿನ ಮನಾರಕ್ಕೆ ಒಂದರ ಮೇಗೆ ಒಂದು ಮಡಿಕ್ಕೊಂಡು, ಕುಮ್ಮಯವೋ, ಸಿಮೆಂಟೋ – ಎಂತಾರು ಎಡೆಂಗೆ ಅಂಟುಸಿಗೊಂಡು ಕಟ್ಟಿಂಡು ಹೋದರೆ ಯೇವ ಕಾಲಕ್ಕೂ ಅಳಿ ಇಲ್ಲೆ – ಹೇಳ್ತಾಂಗೆ. ಇಂಗ್ಳೀಶು ಕಲಿತ್ತ ನೆಗೆಮಾಣಿ ಇದನ್ನೇ ಕಾಂಪೌಂಡ್ರು – ಹೇಳ್ತದು. 😀

ಇದರಿಂದಲೂ ದೊಡ್ಡದು? ಬೇಕಲಕ್ಕೆ ಹೋದರೆ ಕಾಂಗು. ಅಲ್ಲದೋ?
ಓ.. ಅಷ್ಟೆತ್ತರಕ್ಕೆ ಒರೆಂಗೆ ಕಟ್ಟಿದ ದೊಡಾ-ಕೋಟೆ. ಮದಲಿಂಗೆ ರಾಜಾಡಳಿತಂಗೊ ಇಪ್ಪಗ ಒಂದೊಂದು ಊರಿನ ರಕ್ಷಣೆಯ ಭಾರ ಇಪ್ಪ ಸೈನ್ಯವ ಈ ಕೋಟೆ ಒಳದಿಕೆ ಮಡಿಕ್ಕೊಂಡಿತ್ತವಾಡ.
ಚೀನಾಲ್ಲಿ ಮಹಾಗೋಡೆ ಕಟ್ಟಿದ್ದರ ನಾವು ರಜಾ ಆಗ ಮಾತಾಡಿದ್ದು, ಅಲ್ದೋ?
ನಾಲ್ಕು ಸಾವಿರ ಕಿಲೋಮೀಟ್ರು ದೂರಕೆ ಇಪ್ಪ ಬೇಕಲಕೋಟೆಯ ನಮುನೆ ಗೋಡೆ ಅದು! ಯೋ..ಪಾ! ಸದ್ಯದ್ದಲ್ಲ, ಹಳೇ ಕಾಲದ್ದು.
“ಈಗಾಣದ್ದಾದರೆ ಒಳಿತ್ತಿತಿಲ್ಲೆ; ಚೀನಾದ ಮಾಲುಗಳ ಪೈಕಿ ಇಷ್ಟು ಸಮಯ ಬಾಳತನ ಬಂದದು ವಿಶೇಷವೇ” – ಹೇದು ಒಂದೊಂದರಿ ಟೀಕೆಮಾವ° ಟೀಕೆಮಾಡ್ಳಿದ್ದು ಆ ಗೋಡೆಯ. ಪಾಪ!
~

ಪಡಿ:
ಬೇಲಿ ಹಾಕುತ್ತೇನೆ, ಗೋಡೆ ಕಟ್ಟುತ್ತೇನೆ – ಹೇದು ಇಡೀ ಜಾಗೆಗೆ ಬೇಲಿ ಹಾಕಿರೆ ಬೋಚಬಾವನ ಹಾಂಗಾಗದೋ?
ಆ ಜಾಗೆಗೆ ಹೋಪಲೆ-ಬಪ್ಪಲೆ ಜಾಗೆ ಬೇಡದೋ? ಅದಕ್ಕೇ ಅಲ್ಲದೋ “ಬಾಗಿಲು”ಗೊ ಇಪ್ಪದು.
ಎಲ್ಲ ದಿಕ್ಕುದೇ ತರವಾಡುಮನೆಯ ಬಾಗಿಲಿನ ಹಾಂಗೆ ದಾರಂದ, ಇಷ್ಟು ದಪ್ಪದ ಮರದ ಬಾಗಿಲು – ಇರ್ತಿಲ್ಲೆ, ಆದರೆ, ಈ ಬಾಗಿಲಿಲೇ ಹಲವು ನಮುನೆಗೊ ಇದ್ದು. ಉಪಾಯಲ್ಲಿ ಮಾಡ್ತದಕ್ಕೆ – ಪಡಿ – ಹೇಳಿಯೂ ಹೇಳ್ತವು.
ಪಡಿ ಹೇದರೆಂತ್ಸು?
ಅತ್ಲಾಗಿ ಬಾಗಿಲೂ ಅಲ್ಲ; ಇತ್ಲಾಗಿ ಬೇಲಿಯೂ ಅಲ್ಲ – ಆ ನಮುನೆದು ಪಡಿ. ತರವಾಡುಮನೆ ನೆಟ್ಟಿಗೆದ್ದೆ ಇದ್ದಲ್ಲದೋ – ಅದಕ್ಕೆ ಮೋಹನಬಂಟನ ಗೋಣಂಗೊ ಬಂದು ಬೆಳೆ ಹಾಳುಮಾಡ್ತದು ಬೇಡ ಹೇಳಿಗೊಂಡು ಗೆದ್ದೆಗೆ ನಾಲ್ಕೂ ಸುತ್ತಕೆ ಮುಳ್ಳಬೇಲಿ ಹಾಕುತ್ತವು ರಂಗಮಾವ°. ಆ ಮುಳ್ಳಿನ ಕೋಟೆ ಒಳಂಗೆ ಹೋಗೆಡದೋ – ಅದಕ್ಕೆ, ಮೂಡಹೊಡೆಲಿ ಎರಡಡಿ ಅಗಲಕ್ಕೆ ಬೇಲಿ ಹಾಕಿದ್ದವಿಲ್ಲೆ.
ಬೇಲಿ ಹಾಕದ್ದರೂ – ಬೇಲಿಯ ನಮುನೆಲೇ ಒಂದು ಬೇಲಿಯ ತುಂಡು ಮಾಡಿದ್ದವು – ಅದರ ಒಂದು ಗೂಂಟಕ್ಕೆ ಕಟ್ಟಿ ಮಡಗಿದ್ದವು.
ಒಳ ಹೋಯೇಕಾರೆ ಪುಸ್ತಕದ ಪುಟ ಬಿಡುಸಿದ ಹಾಂಗೆ ಈ ತುಂಡುಬೇಲಿಯ ಬಿಡುಸಿ, ಒಳ ಹೋಗಿ, ಕೆಲಸ ಮುಗುಶಿದ ಮತ್ತೆ ಒಪಾಸು ಪುಸ್ತಕ ಮಡುಸಿದ ಹಾಂಗೆ ಈ ಬೇಲಿತುಂಡಿನ ಮಡುಸಿಕ್ಕಿ ಬಪ್ಪದು.
ಈ ಬೇಲಿತುಂಡಿಂಗೇ “ಪಡಿ” ಹೇಳ್ತದಿದಾ.
ಅಷ್ಟು ಸಣ್ಣದೆಂತಕೆ, ಜೋಗಿಮೂಲೆಮಾವನ ಮನೆಗೆ ಹೋಪ ಮಾರ್ಗಕ್ಕೆ – ದೊಡಾ ಎರಡು ಪಡಿ ಮಡಿಕ್ಕೊಂಡಿರ್ತು. ಹಿಂಡಿಜೀಪು ಬಪ್ಪಗ ಒಂದರ ತೆಗದರೆ ಸಾಕು, ಬೆಳುಲುಲೋರಿ ಬಪ್ಪಗ ಎರಡನ್ನೂ ತೆಗೇಕಕ್ಕು. ಮುಚ್ಚಿಪ್ಪಗ ಬೇಲಿ, ತೆಗದಿಪ್ಪಗ ರಾಜಮಾರ್ಗ
–ಇದು ಬೆದುರ ಮುಳ್ಳಿಲಿ ಮಾಡಿದ್ದಲ್ಲ, ಮಾದೆರಿ ಬಳ್ಳಿಯ ಮೊಡದು ಮಾಡಿದ ಬಗೆ. ಹಾಂಗಾಗಿ ತೆಗವಗ, ಹಾಕುವಗ ಮೈಗೆ ಮುಳ್ಳು ಕಂತಲಿಲ್ಲೆ.
ಹೋ, ಎಂತಾ ಕೆಣಿ ಅಲ್ಲದೋ ಅಜ್ಜಂದ್ರದ್ದು?!
~

ಉರುವೆಲು:
ಪಡಿ ಆದರೆ ಇಡೀ ತುಂಡಿನ ನೇಚಿ ಕರೆಂಗೆ ಮಡಗೆಕ್ಕು, ಒಳ ಹೋದಪ್ಪದ್ದೇ, ಒಪಾಸು ನೇಚಿ ದಾರಿಯ ಮುಚ್ಚಿ ಬಿಡೇಕು.
ಆದರೆ ಅಷ್ಟು ಬಾಧಿಯ ನೇಚಿ ಹಂದುಸಲೆ ತ್ರಾಣ ಬೇಡದೋ? ತರವಾಡುಮನೆ ವಿನುವಿನ ಹಾಂಗಿರ್ತೋರಿಂಗೆ ಒಬ್ಬಂಗೇ ಹಂದುಸಿಕ್ಕಲೆಡಿಗೋ? ಕಷ್ಟ.
ಉರುವೆಲು ಆದರೆ ಸುಲಾಬಲ್ಲಿ ತೆಗದು ಹಾಕಲೆ ಎಡಿಗಪ್ಪೋ.
ಎಂತರ ಉರುವೆಲು ಹೇದರೆ? ಬೇಲಿಯಷ್ಟೆತ್ತರದ ಎರಡು ಕಂಬಕ್ಕೆ ಒಂದೊಂದಡಿ ಎತ್ತರಕ್ಕೆ ಒಂದೊಂದು ಚಡಿಗೊ. ಆ ಚಡಿಲಿ ಸರೀ ನಿಂಬ ಹಾಂಗೆ ನಾಕು ಸಲಕ್ಕೆಯೋ – ಬೆದುರ ಕೋಲೋ – ಎಂತಾರು ಮಡಗುದು.
ಉರುವೆಲು ಆತು.
ದಾರಿ ಬೇಕಪ್ಪಗ ಒಂದೊಂದೇ ಸಲಕ್ಕೆಯ – ಆ ಚಡಿಲೇ ನೂಕುದು. ಉರುವೆಲಿನ ಎಲ್ಲಾ ಸಲಕ್ಕೆಯ ಕರೆಂಗೆ ನೂಕಿರೆ ರಾಜಮಾರ್ಗ. ಎಲ್ಲವನ್ನೂ ಹಾಕಿರೆ ದನಗೊಕ್ಕೆ ಬಪ್ಪಲೇ ಗೊಂತಾಗ!
ತರವಾಡುಮನೆ ಹಟ್ಟಿ ಬಾಗಿಲಿನ ಉರುವೆಲು ತೆಗದರೆ ದನಗೊ ಸೀತ ಗುಡ್ಡಗೆ ಹೋಕು.

ದಡಮ್ಮೆ (/ತಡಮ್ಮೆ):
ಪಡಿ ಆದರೆ ಇಡೀ ನೇಚೇಕು, ಒಂದರಿ ತೆಗೇಕು, ಒಪಾಸು ಹಾಕೇಕು. ಉರುವೇಲು ಆದರೂ ಹಾಂಗೇ – ಒಂದೊಂದೇ ಆದರೂ ಹಾಕಿ ತೆಗದು ಮಾಡೇಕು.
ಆದರೆ ದಡಮ್ಮೆ ಆದರೆ ಹಾಂಗಲ್ಲ ಇದಾ.
ತರವಾಡುಮನೆ ತೋಟಂದ ಸಾರಡಿ ತೋಡಿಂಗೆ ಇಳಿತ್ತಲ್ಲಿ ಪೂರ್ತಕೆ ಬೇಲಿ ಇದ್ದು, ಸಮ. ಆದರೆ ಓ ಅಲ್ಲಿ ತೋಡಿಂಗಿಳಿತ್ತಲ್ಲಿ ಮಾಂತ್ರ ಬೇಲಿಯ ಮುಳ್ಳಿಲ್ಲೆ.
ಉರುವೆಲಿನ ಹಾಂಗೇ, ನಾಲ್ಕು ಕೋಲಿನ ಅಡ್ಡಕ್ಕೆ ಕಟ್ಟಿಬಿಟ್ಟಿದವು ರಂಗಮಾವ°. ಒಂದೊಂದು ಅಡಿ ಎತ್ತರದ ನಾಲ್ಕು ಕೋಲುಗೊ – ನಾಲ್ಕು ಮೆಟ್ಳಿನ ಹಾಂಗಿರ್ತು. ಒಂದೊಂದಾಗಿಯೇ ಹತ್ತಿ, ಆಚೊಡೆಲಿ ಇಳುದರೆ ಆತು.
ಗೇಟು ತೆಗೆತ್ತ ಕಷ್ಟವೂ ಇಲ್ಲೆ, ಪಡಿ ಹಾಕಿ ಮೈ ಹರುಂಕುಸಿಂಬ ಬೇನೆಯೂ ಇಲ್ಲೆ.
~

ಮರೆ:
ಬೇಲಿ – ಪಡಿಯ ಶುದ್ದಿ ಹೇಳಿಂಡಿಪ್ಪಗಾಳೇ, ಇನ್ನೊಂದು ಮರವಲಾಗದ್ದ ಸಂಗತಿ – “ಮರೆ”.
ಹೆಸರೇ ಹೇಳ್ತ ಹಾಂಗೆ, ಆಚೊಡೆಲಿ ಇರ್ತದರ ಕಾಣದ್ದ ನಮುನೆ ಮರೆಮಾಡುದು ಇದರ ಕೆಲಸ.
ಬೇಲಿ –ಗೋಡೆಯಷ್ಟು ಬಿಗಿ ಭದ್ರತೆ ಬೇಕಾಗದ್ದ ಜಾಗೆಲಿ, ಆದರೆ ಸ್ವಾಧೀನತೆಯ ಲಕ್ಷಣ ಕಾಣೇಕಾದಲ್ಲಿ ಈ ಮರೆ ಬೇಕಾವುತ್ತು.
ಉದಾಹರಣೆಗೆ,ಮನೆಯ ಹೆರಾಣ ಜೆಗೆಲಿಯ ಒಳದಿಕಂಗೆ ಕಾಕೆಯೋ, ಕುಪ್ಪುಳೋ, ಮಳೆಗಾಲಲ್ಲಿ ಸೀರಣಿಯೋ – ಮತ್ತೊ° ಬಪ್ಪಲಾಗ ಇದಾ.
ಆದರೆ ಮುಳ್ಳುಬೇಲಿ ಮಡುಗೇಕಾದಷ್ಟು ಬಂದವಸ್ತು ಬೇಕಾಗಿಲ್ಲೆ – ಹಾಂಗಿರ್ತಲ್ಲಿ ಹಾಂಗಾಗಿ ಹೆರಾಣ ಜೆಗಿಲಿಗೇ ಮರೆ ಕಟ್ಟುಗು ಕೆಲವು ಮನೆಗಳಲ್ಲಿ.
ತೆಂಗಿನ ಮಡ್ಳಿನ ಲಾಯಿಕಕ್ಕೆ ಮಡದು – ಮಡ್ಳುತಟ್ಟಿ ಮಡವದು ಗೊಂತಿದ್ದನ್ನೇ? – ಆ ತಟ್ಟಿಯ ಕಟ್ಟಿಂಡು ಹೋವುಸ್ಸು ಉಪಾಯಲ್ಲಿ ಮರೆ ಮಾಡ್ತ ಒಂದು ಕ್ರಮ.
ಮಡ್ಳ ತಟ್ಟಿ ಆದರೆ ತೀರಾ ತಾತ್ಕಾಲಿಕ. ರಜ ಸಮೆಯ ಅಪ್ಪಗ ಬದಲ್ಸೇಕಕ್ಕು; ಅತವಾ – ಕಾಂಬಲೆ ತುಂಬ ನೊಂಪು / ಮನಾರ ಇರ. ಅದಕ್ಕೆಂತ ಮಾಡುಸ್ಸು?

ಅದಕ್ಕೇ ಇಪ್ಪದು – “ಅತ್ತರು”.
ಯಾರು ಅತ್ತರು? – ಹೇದು ಸುಭಗಣ್ಣ ಕೇಳುಗು. ಆದರೆ ಇದು ಕೂಗುತ್ತ ಕತೆ ಅಲ್ಲ.
ಬೆದುರ ಚೋಲಿಯ ಲಾಯಿಕಕ್ಕೆ ತೆಗದು ಹದಮಾಡಿ – ಸುಮಾರು ಆರು ಅಡಿ ಎತ್ತರಕ್ಕೆ – ಹತ್ತು ಹನ್ನೆರಡಡಿ ಉದ್ದಕ್ಕೆ – ಹಸೆಯ ನಮುನೆ ಮೊಡದು ಮಾಡ್ತ ರಚನೆಯೇ ಅತ್ತರು.
ಈ “ಅತ್ತರು” ಬಹುವಿಧಲ್ಲಿ ಉಪಕಾರಿ. ಇದರೆಡಕ್ಕಿಲಿ ಸಣ್ಣಸಣ್ಣ ಒಟ್ಟೆಗೊ ಇಕ್ಕಲ್ಲದೋ – ಅದನ್ನೂ ಮುಚ್ಚೇಕಾರೆ – ಇದಕ್ಕೆ ಸಗಣ ಬಳುಗಿರೆ ಆತು.
ಹಾಂಗೆ ಸಗಣ ಬಳುಗಿದ ಅತ್ತರಿನ ಉದಾಕೆ ಜೆಗಿಲಿ ಕರೆಂಗೆ ಕಟ್ಟಿರೆ ಉಪಾಯಲ್ಲಿ ಮರೆ ಆತು.
ಬತ್ತ ಕೊಯಿವ ಕಾಲಲ್ಲಿ ಇದೇ ಅತ್ತರಿನ ದೊಡ್ಡ ಬಾವಿಯ ಹಾಂಗೆ ಕಟ್ಟಿ – ಕದಿಕ್ಕೆ ಹೇಳುದಿದರ – ಇದರೊಳಂಗೆ ಬತ್ತ ಹಾಕಿ ಮಡಗಲೂ ಆವುತ್ತು. ಗೊಂತಿದ್ದನ್ನೇ?!
ಮುಖ್ಯವಾದ್ಸು ಹೀಂಗಿರ್ಸದದರೂ, ಮರೆಗೊ ಇನ್ನೂ ಹಲವಿದ್ದು, ಅಡ್ಕತ್ತಿಮಾರು ಮಾವಂಗೋ, ಶೇಡ್ಯಮ್ಮೆ ಗೋಪಾಲಣ್ಣಂಗೋ – ಪುರ್ಸೊತ್ತಿದ್ದರೆ ಒಂದೊಂದೇ ಹೇಳುಗು..
~

ಬೇಲಿಯ ಬಗ್ಗೆಯೂ ಮಾತಾಡ್ಳೆಂತ ಇದ್ದಪ್ಪಾ? ಗ್ರೇಶುಗು ದೊಡ್ಡಳಿಯ°.
ಆದರೆ, ಬೈಲಿಲಿ ಅದರ ಬಗ್ಗೆಯೂ ಮಾತಾಡ್ಳೆ ಬೇಕಾಷ್ಟು ವಿಶಯಂಗೊ ಇದ್ದು, ಅಲ್ದೋ?
ಈ ದಡಮ್ಮೆ, ಬೇಲಿ, ಉರುವೆಲು, ಮರೆ- ಹೇಳ್ತ ಹಳೇ ಕಾಲದ ವೆವಸ್ಥೆಗೊ, ಸಲಕರಣೆಗೊ ಎಲ್ಲವೂ ಈಗ ಮರೆ ಆಗಿಂಡಿದ್ದು. ಈಗ ಎಲ್ಲಿಗೆ ಬೇಕಾರೂ ಆವುತ್ತಾಂಗೆ “ಗೇಟು”.
ಎಷ್ಟು ಪೀಟು ಉದ್ದ, ಎಷ್ಟು ಪೀಟು ಅಗಲ – ಹೇದು ಬರದುಕೊಟ್ರೆ ಸಾಕು, ಶಾರದಾಭಾವಯ್ಯ ಗೇಟಿನ ರಚನೆ ಮಾಡಿ ಸಿಕ್ಕುಸಿ ಕೊಟ್ಟಿಕ್ಕಿ ಹೋವುತ್ತವು.
ಹಾಂಗಾಗಿ, ಈ ಕುಂಬಾವುತ್ತ ಮರೆ, ಉರುವೆಲು – ಎಲ್ಲ ಕಟ್ಟಿ ಬಂಙ ಬರೆಕಾದ್ಸು ಇದ್ದೋ? – ಕೇಳುಗು.
ಏನೇ ಇದ್ದರೂ – ಇವೆಲ್ಲ ಮರೆ ಆಗಿ ಹೋಪ ಮೊದಲು, ಮರದು ಹೋಪ ಮದಲು, ಒಂದರಿ ನೆಂಪುಮಾಡಿಗೊಂಬೊ° – ಹೇದು ಈ ಶುದ್ದಿ.

~
ಶಿವರಾತ್ರಿಗೆ ಬಾಬು ಬೇಲಿ ಹಾರಿಂಡು ತೋಟಂದ ತೋಟಕ್ಕೆ ಬೊಂಡಕಳ್ಳುಲೆ ಹೋಪಗ ಹೀಂಗಿರ್ತದರ ಎಲ್ಲವನ್ನೂ ಹಾರ್ಲೆ ಅರಡಿಗು ಅದಕ್ಕೆ.
ಬೈಲಿನ ಎಲ್ಲೋರಿಂಗೂ ಶಿವರಾತ್ರಿಯ ಒಪ್ಪಂಗೊ.
~
ಒಂದೊಪ್ಪ: ಬಂದವಸ್ತಿನ ಬೇಲಿ ಇರಳಿ, ಮರೆ ಇಲ್ಲದ್ದ ಮನಸ್ಸಿರಳಿ.

20 thoughts on “ದಡಮ್ಮೆ, ಉರುವೆಲು, ಬೇಲಿ, ಮರೆ – ಮರೆವ ಮೊದಲು ನೆಂಪಿಂಗೆ ಬರೆ!

  1. ಶುದ್ದಿ ಒಳ್ಳೆದಾಯಿದು .

    ಮನೆಂದ ೫ದೇ ಕಿ.ಮೀ ನಸ್ಟು ದೂರ ಇತ್ಥಿದ್ದ ಶಾಲೆಗೆ ನಡಕ್ಕೊಂಡು ಹೋದ ದಾರಿ ಕಣ್ಣಿ೦ಗೆ ಕಟ್ಟಿದ ಹಾ೦ಗಾತು. ಆ . ದಾರಿಲಿ ಇತ್ತದು ವಿಸ್ತಾರವದ ಭತ್ತದ ಬಯಲು , ೨ ತೋಡುಗೊ,೨ ಗುಡ್ಡಗೊ,ಕೆಲವು ತೋಟನ್ಗೋ . ತೋಡಿನ ೧ ಕಿ.ಮಿ ನ ಅ೦ತರಲ್ಲಿ ೪ ದಿಕ್ಕೆ ದಾ೦ಟೆಕ್ಕು.. ದಾರಿಲಿ ಇತ್ತಿದ್ದ ತಡಮ್ಮೆ, ಉರುವೆಲು , ಅಡಕ್ಕೆ ಮರದ ಪಾಪು , ತೋಡಿ೦ಗೆ ಹಾಕುವ ಅಡಕ್ಕೆ ಮರದ ಸಂಕ ಯಾವದುದೆ ಮರದು ಹೋಯಿದಿಲ್ಲೆ ಹೇಳಿ ನೆ೦ಪಾತು. ಅದರೊಟ್ಟಿ೦ಗೆ ಬೇಲಿಲಿ ಇಪ್ಪ ಬೇಲಿ ದಾಸನ(ಇದರ ಹೂಗು ಜುಮ್ಕಿಯ ಹಾ೦ಗೆ ಕೆಳ೦ಗೆ ನೇತುಗೊಂಡಿರುತ್ತು ). ,ಭತ್ತವ ಖೈ೦ದ (ಪೈರಿಂದ ) ಬಡುದು ಉದುರುಸುಲೆ ಇಪ್ಪ ಪಡಿ ( ಸಲಕ್ಕಗೆ ಮಾದರಿ ಬೆತ್ತವ ನೈದು ಮಾಡುದು ),ಭತ್ತ ವ ಶೇಖರಣೆ ಮಾಡುವ ಕದಿಕ್ಕೆ ,ಪತ್ತಾಯ ,ದಾರಿಲಿ ಬೈಲಿನ ಮಧ್ಯಲ್ಲಿ ಗದ್ದಗೆ ನೀರು ಹಾಕುಲೆ ಇತ್ತಿದ್ದ ಏತವುದೆ ನೆನಾಪ್ಪತು .

  2. tadamme daanti, beli haari, agala negedu, barenda haari maavina medi lapataayisuva prasamga nenappaatu 🙂

  3. ಯಬ್ಬೋ.. ಎಂತೆಲ್ಲಾ ವಿಷಯಂಗ ಸಿಕ್ಕಿತ್ತು.. ಹಲವು ಮಸ್ತಿಷ್ಕದ ಒಳ ಇಲ್ಲದ್ದು/ಮರದ್ದು ಎಲ್ಲಾ ನೆಂಪಾತಿದಾ.. ಧನ್ಯವಾದ ಒಪ್ಪಣ್ಣಂಗೂ, ಒಟ್ಟಿಂಗೆ ಎಲ್ಲಾ ಕಮೆಂಟುಗಕ್ಕೂ..

  4. ಹರೇ ರಾಮ,

    ಬಹುಷಃ ಈ ಪಡಿ, ತಡಮ್ಮೆ, ಉರುವೆಲು, ಬೇಲಿ ಶಬ್ದಂಗೊ “ನೆರೆಕರೆ” ಲಿ ಮಾಂತ್ರ ಕಾಂಬಲೆ ಸಿಕ್ಕುಗಷ್ಟೆಯೊ ಹೇದು ಕಾಣ್ಸು. ಈ ಶಬ್ದಂಗಳೂ ಅದು ಎಂತರ ಹೇಳಿಯೂ ಈಗಾಣವಕ್ಕೆ ಗೊಂತಿರ. ಚಿಂತನೆಗೆ ಹಚ್ಚುವಂತಹ ಬರಹ ಒಪ್ಪಣ್ಣ.

    ಧನ್ಯವಾದಗಳು.

  5. ಮಳೆ ಬಪ್ಪಗ ತಡಮ್ಮೆ- ಸ೦ಕ ಜೊತೆ ಆಗಿ, ದಾ೦ಟೆಕ್ಕಾದರೆ, ಪುಸ್ತಕ ಬೇಗಿನ ಚೆ೦ಡಿ ಆಗದ್ದ ಹಾ೦ಗೆ, ಕೊಡೆ ಓರೆ ಮಾಡಿ,ಹಾರಕ್ಕಾದರೆ,ಸಾಕೋ ಸಾಕು.
    ಕ೦ಬ೦ಗಳ ಮಧ್ಯೆ ಇಪ್ಪ ಜಾಗೆಲಿ ,ಬೇಗು ಸಿಕ್ಕಿ ಕೊ೦ಡಪ್ಪಗ , ಅದರ ಬಲಿಗಿ ಎಳದಪ್ಪಗ ಚ೦ಡಾಪು೦ಡಿ.
    ಇನ್ನೊ೦ದು ಕೈಯಿಲಿ ಹಿಡಿಕ್೦ಡ ಬುತ್ತಿ ಪಾತ್ರದ ಮುಚಳ ಅ೦ಬಗಳೆ ಹಾರಿ, ಕಲ೦ಕು ನೀರಿಲಿ ಬೆಳ್ಕ್ಕೆ ಹೋಪದರೆ ನೋಡುವುದೆ ಒಳಿವ ಕೆಲಸ.

  6. ಒಪ್ಪಣ್ಣನ ಶುದ್ದಿಗೊಕ್ಕೆ ಯೇವ ಬೇಲಿಯ ಬ೦ಧನವೂ ಇಲ್ಲೆ.
    ಇದೆಲ್ಲಾ ನಮುನೆಗಳ ಪಟ ಸ೦ಗ್ರಹ ಮಾಡಿರೆ ಮು೦ದಾಣ ತಲೆಮಾರಿ೦ಗೆ ಅಮೂಲ್ಯ ಮಾಹಿತಿ ಅಕ್ಕು.

  7. ಒಪ್ಪಣ್ಣ,

    ಬೇಲಿಯ ಬಗ್ಗೆ ಓದಿ ಎನ್ನ ಬಾಲ್ಯ ನೆಂಪಾತು.. ಬೆದುರು ಓಟೆ, ಮರದ ಕಂಬಗಳ ತಂದು, ಬೆದುರಿನ ಸಿಗುದು,ಕಂಬ ನಟ್ಟು,ಸಿಗುದ ಬೆದುರಿನ ಕಂಬಕ್ಕೆ ಆಣಿ ಬಡುದು ಮನೆ ಹತ್ತರಕ್ಕೆ ಬೇಲಿ ಮಾಡಿಕೊಂಡಿದ್ದದು ನೆಂಪಾತು. ಆದರೂ ಕೆಲವರು ಬೇಲಿ ನುಗ್ಗಿ ಬಂದು ಪೇರಳೆ ಕೊಯ್ಕೊಂಡಿತ್ತಿದ್ದವು…ಃ(
    ಧನ್ಯವಾದ…

  8. ಬೇಲಿಯ ವೈವಿಧ್ಯಮಯ ಲೋಕಕ್ಕೆ ಕೊಂಡೋದ ಒಪ್ಪಣ್ಣಂಗೆ ಧನ್ಯವಾದಂಗೊ. ಬೇಲಿಯ ಬಗೆಲಿ ಬರವಲೆಂತ ಇದ್ದು ಹೇಳಿ ಇಷ್ಟೆಲ್ಲ ಮರೆತ್ತಾ ಇಪ್ಪ ಶಬ್ದಂಗಳ ಎಲ್ಲೋರಿಂಗೂ ಮತ್ತೊಂದರಿ ನೆಂಪು ಮಾಡಿದ್ದು ಲಾಯಕಾಯಿದು.

  9. ಶಾರದಾ ಭಾವಯ್ಯ ಇನ್ನೊಂದು ಹೊಸ ನಮುನೆ ಬೇಲಿಯನ್ನೂ ಮಾಡಿಕೊಡ್ತವಡ ಒಪ್ಪಣ್ಣೋ..
    ಮಾಂತ್ರ ಅದು ಮನಿಶ್ಶರ ಅಡ್ಡತಳುಪ್ಪಲೆ ಅಲ್ಲಡ- ಕಂಡು ದನಂಗೊ ದಾಂಟಿ ಒಳ ಬಾರದ್ದಾಂಗೆ ಮಾಡ್ಲೆ ಇಪ್ಪ ಇಕ್ಣೀಸು ಅಡ. ಹಾಂಗಾಗಿ ಅದಕ್ಕೆ ‘ಕೌ ಕೇಚರು’ (cow catcher) ಹೇಳ್ತ ಹೆಸರನ್ನೇ ಮಡುಗಿದ್ದವಡ!

    ಸಂಗತಿ ಸಿಂಪುಲು- ಗೇಟು ಇಪ್ಪ ಜಾಗೆಲಿ ಗೇಟಿನ ಕುಂದಂದ ಕುಂದಕ್ಕೆ ಮೂರು ಫೀಟು ಅಗಲಕ್ಕೆ ಗಂಡಿ ತೆಗದತ್ತು. ಆ ಗಂಡಿಯ ಮೇಗೆ ಎರಡೆರಡು ಅಂಗುಲ ಎಡೆ ಮಡುಗಿ ಉದ್ದಾಕೆ ಏಳೆಂಟು ಕಬ್ಬಿಣದ ಪೈಪುಗಳ ಕೂರುಸಿತ್ತು. ಅಷ್ಟೆ, ಕೆಲಸ ಮುಗಾತು! ಪೈಪುಗಳ ನೆಡುಕೆ ಇಪ್ಪ ಎಡೆಗಳಲ್ಲಿ ಕಾಲು ಸಿಕ್ಕಿಯೊಂಗು ಹೇದು ಹೆದರಿ ದನಂಗೊ ಅದರ ದಾಂಟ್ಲೆ ಹೆರಡುತ್ತವೇ ಇಲ್ಲೆಡ!

  10. ‘ಮರವ ಮದಲು ನೆಂಪಿಂಗೆ ಬರೆ’ ಹೇದ ಒಪ್ಪಣ್ಣ.
    ಸಂಗತಿ ಅಪ್ಪು.
    ಹಲವು ಕಾಲ ಆತು ಆನು ಬೈಲಿನ ಬೇಲಿಕರೆಲಿಯೇ ರೋಂದು ಹೊಡಕ್ಕೊಂಡು ಒಳ ಬಗ್ಗಿನೋಡಿ ಎಂತೆಲ್ಲ ಆವ್ತಾ ಇದ್ದು ಹೇದು ತಿಳ್ಕೊಂಡಿಕ್ಕಿ ಆಚಿಗೆ ಹೋಪದು. ಒಳ ಬಯಿಂದೇಯಿಲ್ಲೆ.
    ಅಪರೂಪಕ್ಕಾದರೂ ಒಂದೊಂದಾರಿ ಒಳ ಬಂದು ಏನಾರು ಒಂದೊಪ್ಪವನ್ನಾದರೂ ಬರೆಯದ್ದೆ ಇದ್ದರೆ ಬೈಲಿನೋರಿಂಗೆ ಎನ್ನ ಮರಗು ಹೇದು ಒಪ್ಪಣ್ಣ ಈಗ ನೆಂಪುಮಾಡಿದಾಂಗೆ ಆತಿದಾ!
    ಹು ಹು ಹು.. 😛

  11. ಒಪ್ಪಣ್ಣನೊಟ್ಟಿಂಗೆ ಬಳಗದವಕ್ಕೂ ಶಿವರಾತ್ರಿಯ ಶುಭಾಶಯಂಗೊ, ಬೇಲಿ ಬೇಕಾದ್ದಕ್ಕೆ ಖಂಡಿತವಾಗಿಯೂ ಬೇಕು, ಉದಾ;ನಮ್ಮಹೆಣ್ಣಸಂಸಾರಕ್ಕೇ ಅಪಾಯ ಸ್ತಿತಿ ಮಿನಿಯ, ಹೇಂಗೆ ಬೇಲಿ ಹಾಕಿ ಕಾಮುಕರ ಕೈಂದ ರಕ್ಷಣೆ ಮಾಡುವದು? ಚಿಂತಿಸೆಕ್ಕಾದ ವಿಷಯ

  12. ಅದಾ…, ಒಪ್ಪಣ್ಣನ ಬೇಲಿ ಹಾರಿದ ಅನುಭವ ತುಂಬಾ ಒಪ್ಪ ಇದ್ದು 😉
    ಬೈಲಿನ ಎಲ್ಲರಿಂಗೂ ಶಿವರಾತ್ರಿಯ ಹಾರ್ದಿಕ ಶುಭಾಶಯಂಗೊ 🙂

  13. ಒಪ್ಪಣ್ಣೋ.., ತುಂಬಾ ಲಾಯ್ಕ ಶುದ್ದಿ.
    ನಮ್ಮ ಹೆರಿಯೋರು ಪ್ರಕೃತಿಯ ಒಟ್ಟಿಂಗೇ ಹೊಂದಿಗೊಂಡು ಬೆಳದೋರು. ನಮ್ಮ ಆಸುಪಾಸಿಲಿ ಸಿಕ್ಕುದರನ್ನೇ ಉಪಯೋಗ ಮಾಡಿ ಚೆಂದಕ್ಕೆ, ಸೂಕ್ಷ್ಮಲ್ಲಿ ಬೇಕಾದ ಹಾಂಗೆ ಮಾಡ್ತ ಕ್ರಮ ಅವಕ್ಕೆ ಲಾಯ್ಕ ಅರಡಿಗೊಂಡಿತ್ತು. ಆಯಾ ಜಾಗೆಯ ಹೊಂದಿಗೊಂಡು, ಆಯಾ ಜಾಗೆಗೆ ರಕ್ಷಣೆ ಹೇಂಗೆ ಬೇಕೋ ಹಾಂಗೆ ಮಾಡ್ತ ಅವರ ಜೀವನಶೈಲಿ ನಾವು ಈಗ ಅಂದಾಜು ಮಾಡ್ಲೂ ಎಡಿಯ ಅಪ್ಪೋ!
    ನವಗೆ ಈಗ ಬೇಲಿ ಹಾಕುಲೆ ತಕ್ಕ ನಮ್ಮ ಜಾಗೆಲಿ ಅದಕ್ಕಿಪ್ಪ ಬೆದುರೋ, ಮರವೋ ಇದ್ದರಲ್ಲದಾ? ಎಲ್ಲಾ ಜಾಗೆಗಳೂ ಸಣ್ಣ ಸಣ್ಣ ಆವುತ್ತಾ ಇದ್ದು. ಜಾಗೆ ಇದ್ದಲ್ಲಿ ರಬ್ಬರು ಮರಂಗ ಬೆಳದತ್ತು! ಮತ್ತೆ ಬೇಲಿ ಹಾಕೆಕ್ಕಾದರೋ, ಗೂಂಟ ಹಾಕೆಕ್ಕಾದರೋ ಇನ್ನೊಬ್ಬನ ಹತ್ರೆ ಕೇಳಿಯೇ ಆಯೆಕ್ಕಿದಾ!! ಅಲ್ಲದ್ದರೆ, ಕೋಂಕ್ರೀಟು ಕಲ್ಲಿನ ಬೇಲಿಯೋ, ಕರೆಂಟು ಬೇಲಿಯೋ ಮಾಡೆಕ್ಕಷ್ಟೇ.

    ಒಪ್ಪಣ್ಣ,

    [ಈ ಕುಂಬಾವುತ್ತ ಮರೆ, ಉರುವೆಲು – ಎಲ್ಲ ಕಟ್ಟಿ ಬಂಙ ಬರೆಕಾದ್ಸು ಇದ್ದೋ? ]

    ಈಗ ಎಲ್ಲ ಕೆಲಸವೂ ಹಗುರಲ್ಲಿ ಅಪ್ಪ ಕಾಲ. ನಾವು ಪೈಸೆ ಕೊಟ್ರೆ ನವಗೆ ಬಂದೋಬಸ್ತಿಂದು ಬಹು ಕಾಲ ಬಾಳುವಂಥದ್ದು ವೆವಸ್ತೆಗಳ ಮಾಡ್ಲಕ್ಕು. ಆದರೆ, ಅದು ಹಾಳಾತು, ಮಣ್ಣು ಬಂದು ಮದಲಾಣ ಗಟ್ಟಿ ಒಳಿಯದ್ದರೆ ಮತ್ತೊಂದು ಮಾಡೆಕ್ಕು ಅಪ್ಪೋ, ಅಂಬಗ ಈ ಹಳತ್ತರ ಎಂತ ಮಾಡ್ತು? ನಮ್ಮ ಮದಲಾಣೋರು ಮಾಡಿಗೊಂಡು ಬಂದ ಬಹು ನಾಜೂಕಿಲಿ ಮಾಡಿದ ಈ ರಕ್ಷಣೆಯ ವೆವಸ್ತೆ ಒಂದು ವೇಳೆ ಕುಂಬಾದರೂ ಅದು ಪ್ರಕೃತಿಗೆ ಭಾರ ಆವುತ್ತಿಲ್ಲೆ, ಅಲ್ಲದಾ? ಅದು ಮಣ್ಣಾಗಿ ಮಣ್ಣಿನ ಫಲ ಹೆಚ್ಚುಸುತ್ತು.

    [ಬಂದವಸ್ತಿನ ಬೇಲಿ ಇರಳಿ, ಮರೆ ಇಲ್ಲದ್ದ ಮನಸ್ಸಿರಳಿ.]
    ಒಂದೊಪ್ಪ ಲಾಯ್ಕಾಯಿದು. ನಮ್ಮ ರಕ್ಷಣೆಗೆ ಬೇಲಿ ಬೇಕು. ಆದರೆ ಮನಸ್ಸಿಂಗೆ ಬೇಲಿ ಇಪ್ಪಲಾಗ. ನಮ್ಮ ಹತ್ತರಾಣವ್ವೇ ಹತ್ತರೆ ಬಪ್ಪಲಾಗ ಹೇಳಿ ಮನಸ್ಸಿಂಗೆ ಬೇಲಿ ಹಾಕಿದರೆ ಆ ಬೇಲಿಯ ಮುಳ್ಳು ಇಬ್ರಿಂಗೂ ಬೇನೆ ಮಾಡ್ತು ಅಲ್ಲದಾ?

  14. ಅದಪ್ಪು ಘಟ್ಟದ ಮೇಲೆ ಹಾಸುಕಲ್ಲಿನ ಬೇಲಿ ಮಡ್ತವು..ಕಂಪೌಡ್ ಇದ್ದ ಹಾಂಗೆ ಹೇಳಿ ಹೇಳುವ..

  15. ಶಿವರಾತ್ರಿಯ ಶುಭಾಶಯ ಬೈಲಿನ ಎಲ್ಲೋರಿಂಗು..ಶುದ್ಧಿ ಬೈಲಿನ ಮನ ಮನೆಗಳ ನದುವೆ ಇಪ್ಪ ತಾತ್ಕಾಲಿಕ ಬೇಲಿಯ ತೆಗೆದು ಮನ ಮನೆಗಳ ಬೆಸೆವೆ ಕೊಂಡಿಯಾಗಲಿ..

  16. ಹರೇರಾಮ. ದಡಮ್ಮೆ , ಬೇಲಿ, ಉರುವೆಲು ಅಮ್ಚ, ಪಡಿಪ್ಪರೆ, ಹೀಂಗಿದ್ದ ಶಬ್ಧ ಎಲ್ಲ ಒಳಿಯೆಕ್ಕಾರೆ ನಮ್ಮ ಬೈಲಿಂಗೇ ಬರೆಕಷ್ತೆ ಅಲ್ಲೊ?

  17. ಲಾಯ್ಕ ಆಯಿದು.ಹಳ್ಳಿಲಿ ಇಂತದ್ದೆಲ್ಲಾ ಇದ್ದು.ಗೋಡೆ ದಾಂಟಲೆ ಸಪೂರಕ್ಕೆ ದಾರಿ ಮಾಡಿ ಕೊಟ್ಟರೆ ಅದರ ಅಮ್ಚೆ ಹೇಳುತ್ತವು.ಅದರ ಉಚ್ಚಾರ ಅಮ್ ಚೆ ಹೇಳಿ.ಅಂಚೆ ಅಲ್ಲ.ಇದೊಂದು ನಮ್ಮ ಭಾಷೆಯ ಅಪರೂಪದ ಶಬ್ದ.

  18. ಧನ್ಯವಾದಂಗೋ, ಹಾಂಗೆ ಎಲ್ಲೋರಿಂಗೂ ಶಿವರಾತ್ರಿಯ ಹಾರ್ದಿಕ ಶುಭಾಶಯಂಗೊ ಎಂಗಳದ್ದು.
    ಒಂದೊಪ್ಪ ಮತ್ತೆ ಶುಧ್ಧಿ ಯಾವಾಗಳಿನ ಹಾಂಗೆ ಲಾಯಿಕಾಯಿದು.
    ಓದುತ್ತಾ ಹೋದ ಹಾಂಗೆ ಮನಸ್ಸಿಲ್ಲಿ, ಕಣ್ಣ ಮುಂದೆ ಸಣ್ಣ ಇಪ್ಪಗಾಣ ಸಂಗತಿಗೋ ಎಲ್ಲಾ ಒಂದೊಂದೇ ನೆಂಪಾತು.
    ಹರಿಯೊಲ್ಮೆಂದ ಮಕ್ಕೊ ಎಲ್ಲಾ ಒಟ್ಟಿಂಗೆ ಶಾಲೆಗೆ ಹೋದ್ದು, ತಡಮ್ಮೆ ದಾಂಟ್ಲೆ ಇದ್ದದು, ಬೆೞಿಪ್ಪಾಡಿ ಅತ್ತೆ ಮನೆಗೆ ಹೋಪಗ ಉರುವೆಲು ತೆಗವಲೆ ಇದ್ದದು, ಅಜ್ಜನ ಮನೆ ಮಳಿಂದ ದೊಡ್ಡ ಮಾವನಲ್ಲಿಗೆ ಒಳ ದಾರಿಲಿ ಗುಡ್ಡೆಲಿ ಆಗಿ ಹೋಪಗ ತಡಮ್ಮೆ ದಾಂಟಿದ್ದು, ಹರಿಯೊಲ್ಮೆ ಲಿ ಗುಡ್ಡೆಲಿ ಎಲ್ಲ ಹೋಪಗ ಬೇಲಿಗೊ ಇದ್ದದು, ಇತ್ಯಾದಿ ತುಂಬಾ ಎಲ್ಲಾ ನೆಂಪಾತು.
    ಖುಶಿ ಆತು, ಮನಸ್ಸು ಒಂದರಿ ಬಾಲ್ಯಕ್ಕೆ ಹೋಗಿ ಬಂತು.

  19. [ ಬೇಲಿಯ ಬಗ್ಗೆಯೂ ಮಾತಾಡ್ಳೆಂತ ಇದ್ದಪ್ಪಾ? ]- ಅಂದರೂ ಈ ಶುದ್ದಿಯ ಓದಿದ ಮತ್ತೆ ಇಷ್ಟೆಲ್ಲ ಇದ್ದಲ್ಲದೋ ಹೇಳಿ ನೆಂಪು ಆವ್ತು ಭಾವ.

    ಹೇಳಿದಾಂಗೆ…. ‘ಬರೆಕರೇಲಿ ಹೋಗೆಡ’ ‘ಬರೆ ಹಾರಿ ಹೋಪಲಾವ್ತು’ ಹೇಳಿ ಹೇಳ್ತವನ್ನೆ ಅದೆಂತರ ‘ಬರೆ’ ಹೇದರೆ ಭಾವ.

    ಹೀಂಗೆ ಬೈಲಿಲಿ ಓ ಮನ್ನೆ ನಡಕ್ಕೊಂಡು ಹೋಪಗ ಬಾವಾ.. ಒಂದೆರಡು ಮುಳಿಗುಡ್ಡೆ ಕಂಡತ್ತು. ಅದರ ಸುತ್ತುದೆ ಗಂಡಿತೋಡಿ ಓ ಅಷ್ಟು ಎತ್ತರಕ್ಕೆ ಮಣ್ಣಗೋಡೆ ಕಟ್ಟಿಂಡಿತ್ತು. ಅದಕ್ಕೆಂತ ಹೆಸರಪ್ಪ!

    ಎನ್ನ ಅಬ್ಬೆಯ ಅಜ್ಜನ ಮನೇಲಿ ಈಗಳೂ ಇದ್ದು ಗುಡ್ಡೆಂದ ಕೆಳಂತಾಗಿ ಜಾಲಕರೆ ಕೊಟ್ಟಗೆ ವರೇಂಗೆ ಮಾರ್ಗಕರೇಲಿ ಆ ಕಾಲದ ಮಣ್ಣಗೋಡೆ. ಕೊಟ್ಟಗೆ ಕರೆಂದಲಾಗಿ ಒಳಬಪ್ಪಲೆ ಅಷ್ಟು ದಪ್ಪದ ಮರದ ಬಾಗಿಲು, ಅದಕ್ಕೆ ಅಷ್ಟು ದಪ್ಪದ ಮರದ ಚಿಲಾಕು. ಮತ್ತೆ.. , ಮಾರ್ಗಲ್ಲಿ ಬಂದರೆ ಸೀದ ಒಳಬಂದಿಕ್ಕಲೆ ಎಡಿಯ ಬಾಗಿಲು ತೆಕ್ಕೊಂಡಿದ್ದು ಹೇಳಿ. ಜಾಲಿಲಿ ತಣಿಕ್ಕಲಿಲಿ ದಾಸು ಮತ್ತೆ ಅದರ ಅಣ್ಣ ತಮ್ಮಂದ್ರು ನಾಕು ಇದ್ದವು. ಯಬೋ..

    1. ಭಾವ,
      ಗುಡ್ಡೆ ಕಡುದಪ್ಪಗ ಗೋಡೆಯ ಹಾಂಗೆ ಒಳಿಯುದು, ಮಣ್ಣಿನ ಉಪಯೋಗಿಸಿ ಆವರಣದ ಹಾಂಗೆ ಮಾಡುದಕ್ಕೆ ಬರೆ ಹೇಳುದಡ…
      ಮತ್ತೆ..೫-೬ ಅಡಿ ಗುಂಡಿ ತೋಡಿ ಉದ್ದಾಕೆ ಕಣಿ ಹಾಂಗಿಪ್ಪದಕ್ಕೆ ‘ಅಗಳು’ ಹೇಳುದಡ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×