Oppanna.com

ಆತ್ಮಂಗೆ ಕಂಡ ಪರಮಾತ್ಮನ ಲೋಕಕ್ಕೆ ತೋರುಸಿದ ವಾಲ್ಮೀಕಿ..

ಬರದೋರು :   ಒಪ್ಪಣ್ಣ    on   02/11/2012    17 ಒಪ್ಪಂಗೊ

ಚಂಡ ಮಾರುತವೋ ಮುಂಡ ಮಾರುತವೋ- ಮಳೆ ಮಳೆಯೇ; ಹೇದು ಚೆನ್ನೈಭಾವ ಕರಿಕಂಬುಳಿ ಹೊದ್ದು ಮನಿಕ್ಕೊಂಡಿದವು.
ಸ್ವಾತಿಲಿ ಮಳೆಯೇ ಆಯಿದಿಲ್ಲೆ ಹೇದು ರಂಗಮಾವಂಗೆ ತಲೆಬೆಶಿ ಇನ್ನೊಂದು ಹೊಡೆಲಿ.
ಕಾನಾವು ಪುಟ್ಟಭಾವಂಗೆ ಪುಟ್ಟಕ್ಕ ಸಿಕ್ಕಿದ ಕೊಶಿ ಮತ್ತೊಂದು ಹೊಡೆಲಿ!
ದೊಡಾ ಬೆಳ್ಳ ಬಂದು ಹೂಗಿನ ಸೆಸಿ ಚಟ್ಟಿ ಪೂರಾ ಬೆಳ್ಳಕ್ಕೆ ಹೋತು ಹೇದು ಬೇಜಾರ ಅಮೇರಿಕಲ್ಲಿಪ್ಪ ಮಾಡಾವಕ್ಕಂಗೆ ಆಚ ಹೊಡೆಲಿ.
ಬೈಲಿಲಿ ಹಾಂಗೇ ಅಲ್ಲದೋ – ಒಬ್ಬಂಗೆ ಬೇಜಾರಾದರೆ ಮತ್ತೊಬ್ಬಂಗೆ ಕೊಶಿ, ಇದ್ದೇ ಇರ್ತು. ಬೇರೆ ಬೇರೆ ಕಾರಣಕ್ಕೆ.
ಪ್ರತಿ ವಾರವೂ ಒಂದೊಂದು ವಿಶೇಷ ಇಪ್ಪ ಹಾಂಗೇ, ಕಳುದ ವಾರವೂ ಇದ್ದತ್ತು; ಈ ವಾರವೂ ಇದ್ದು.
~
ಮನ್ನೆ ಅಂಬೆರ್ಪಿಂಗೆ ಒಂದರಿ ಬೇಂಕಿನ ಪ್ರಸಾದಣ್ಣಂಗೆ ಪೋನು ಮಾಡಿತ್ತಿದ್ದೆ.
ಸೋಮವಾರದ್ದಿನ ಪೇಟಗೆ ಬತ್ತಾ ಇದ್ದೆ; ಬೇಂಕಿಲೇ ಇದ್ದರೆ ಸಿಕ್ಕುತ್ತೆ – ಹೇಳುಲೆ ಪೋನು ಮಾಡಿದ್ದಾಗಿತ್ತು.
“ಸೋಮವಾರ ರಜೆ ಅಲ್ಲದೋ ಒಪ್ಪಣ್ಣಾ, ಆನು ಮಡಿಕ್ಕೇರಿಗೆ ಹೋಗಿಂಡಿದ್ದೆ, ಚಳಿ ತಿಂಬಲೆ” ಹೇಳಿದ°.
ಚೆಲ, ಮೊನ್ನೆ ಒರೆಂಗೆ ನವರಾತ್ರಿ ರಜೆ ಗೊಂತಿತ್ತು, ಅದಾದ ಮತ್ತೆ ಬಕ್ರನ ತಿಂತ ಬಕ್ರೀದುದೇ ಗೊಂತಿತ್ತು – ಸೋಮವಾರ ಪುನಾ ಎಂತರ ರಜೆ ಅಪ್ಪಾ..
ಅವನೇ ಹೇಳಿದ, “ವಾಲ್ಮೀಕಿ ಜಯಂತಿ ಇದಾ, ಎಡ್ಯೂರಪ್ಪ ರಜೆ ಕೊಡ್ಳೆ ಸುರುಮಾಡಿದ್ದು” ಹೇದು.
ಕೆಲವೆಲ್ಲ ಈಗಾಣದ್ಸು ಒಪ್ಪಣ್ಣಂಗೆ ಗೊಂತೇ ಆಗಿರ್ತಿಲ್ಲೆ! ವಾಲ್ಮೀಕಿಯ ಜಯಂತಿಯ ಆಚರಣೆಯೇ ಮಾಡ್ತವಪ್ಪೋ.
~
ಮೊನ್ನೆ ಮೊನ್ನೆ ಗುರುಗೊ ರಾಮಕಥೆಲಿ ವಾಲ್ಮೀಕಿಯ ಬಗ್ಗೆ ರಾಮಕಥೆಲಿ ಹೇಳಿದ್ಸು ಒಪ್ಪಣ್ಣಂಗೆ ಇನ್ನೂ ಮರದ್ದಿಲ್ಲೆ.
ರತ್ನಾಕರ ಹೇಳ್ತ ಬೇಡ ತನ್ನ ಜೀವನೋಪಾಯಕ್ಕಾಗಿ ದರೋಡೆ ವೃತ್ತಿಯ ಆಯ್ಕೆ ಮಾಡಿತ್ತಿದ್ದನಾಡ.
ನೆಡುಕಾಡಿಲಿ ಮಸದ ಕತ್ತಿ ಹಿಡ್ಕೊಂಡು ನಿಲ್ಲುಸ್ಸು – ಪಾಪದ ದಾರಿಹೋಪೋರು “ಒಳದಾರಿ ಹತ್ತರೆ ಬಾವಾ” ಹೇಳಿಗೊಂಡು ಆ ಕಾಡದಾರಿಲಿ ಬಂದರೆ ಸಮ, ಈ ರತ್ನಾಕರ° ಅವರ ಅಡ್ಡತಡದು – ಕೈಲಿಪ್ಪದು, ಗೆಂಟಿಲಿಪ್ಪದು ಪೂರ ಕೊಡಿ – ಹೇದು ತೆಕ್ಕೊಂಬದಾಡ.
ಗೊತ್ತು ಗುರಿ ಗುರ್ತ ಇಲ್ಲದ್ದ ಆ ಕಾಡಿಲಿ ದಾರಿಹೋಕರು ಓಡುದಾರೂ ಎಲ್ಲಿಗೆ ಪಾಪ! ಇಪ್ಪದರ ಎಲ್ಲ ಕೊಡ್ತವು.
ಅವರ ಕೈಂದ ಪೂರ ಒಸೂಲಿ ಮಾಡಿಕ್ಕಿ – ಅಂತೇ ಬಿಡ್ತನೋ, ಇಲ್ಲೆ. ಅವರನ್ನೇ ಅಕೇರಿಗೆ ಕೊಂದೊಂಡಿತ್ತಿದ್ದನಾಡ.
ಅವ° ಕೊಂದ ದಾರಿಹೋಕರ ಸಂಖ್ಯೆ ಎಷ್ಟಿತ್ತು? ಎಷ್ಟೋ ಹೇಳಿತ್ತಿದ್ದವು ಗುರುಗೊ, ಒಪ್ಪಣ್ಣಂಗೆ ಈಗ ಮರದ್ದು. ;-(
ಎಲುಗು ರಾಶಿಯೇ ಅಷ್ಟೆತ್ತರ – ತೆಂಗಿನ ಮರದಷ್ಟೆತ್ತರ – ಆಯಿದೋ, ಹಾಂಗೆಂತದೋ ಹೇಳಿತ್ತಿದ್ದವು.
ಹೋಯ್, ರಾಮಕಥೆಯ ವೀಡ್ಯಂಗೊ ಇಲ್ಲಿದ್ದು – ಗೊಂತಿದ್ದನ್ನೇ?
ಅದಿರಳಿ, ಹಾಂಗೆ ಅದು ಮಹಾಕ್ರೂರಿ ರತ್ನಾಕರನ ಕತೆಯ ಪೂರ್ವಾರ್ಧ.
~
ಒಂದು ದಿನ ಎಂತಾತಡ ಹೇದರೆ, ಆ ದಾರಿಯಾಗಿ ಒಬ್ಬ ಋಷಿ ಬಂದನಾಡ.
ಅವ ಅಂತಿಂತ ಋಷಿ ಅಲ್ಲ, ದೇವಋಷಿ ಅಡ!
ಅವ° ದಾರಿತಪ್ಪಿ ಬಂದದಾಗಿರ, ಈ ದಾರಿಪೀಡೆ ರತ್ನಾಕರನ ಸರಿಮಾಡ್ಳೇ ಬಂದದಾಯಿಕ್ಕು.
ಬೇವರ್ಸಿಯ ಸರಿಮಾಡ್ಳೆ ದೇವರ್ಷಿ – ಹೇದು ಬೋಚಬಾವ° ನೆಗೆಮಾಡುಗು; ಅದಿರಳಿ.
ಅಂತೂ ಋಷಿ ಬಂದ°.. “ನಾರಾಯಣ ನಾರಾಯಣ” ಹೇಳಿಗೊಂಡು.
ಕಾಡ ದಾರಿ ಎತ್ತಿತ್ತು, ಕಾಡು ಎತ್ತಿತ್ತು.. ರತ್ನಾಕರಂಗೆ ಮತ್ತೊಂದು ಬೇಟೆ ಸಿಕ್ಕಿತ್ತು.
ಮುಂದೆಂತರ? ಅದುವೇ ರತ್ನಾಕರನ ಕತೆಯ ಉತ್ತರಾರ್ಧ.
ಪೊದೆಲೆಡಕ್ಕಿಂದ ಭಗ್ಗನೆ ಹಾರಿದ ರತ್ನಾಕರ ಒಂದರಿಯೇ ಋಷಿಯ ಎದುರು ನಿಂದ°.
ಶಾಂತವಾಗಿ ಆ ಋಷಿ “ಏನೂ..” ಕೇಳಿದನಾಡ.
ಒಂದು ರಜವೂ ಹೆದರಿಕೆ ಇಲ್ಲದ್ದ ಈ ಋಷಿಯ ಕಂಡು ರತ್ನಾಕರಂಗೆ ಆಶ್ಚರ್ಯವೋ ಆಶ್ಚರ್ಯ. ಆ ಅಶ್ಚರ್ಯಲ್ಲಿ “ಒಳ್ಳೆದು” ಹೇಳುಲೂ ಮರದತ್ತೋದು! 😉
“ಕೊಡು” ಹೇಳಿದನಾಡ ರತ್ನಾಕರ.
ಕೊಡ್ಳೆ ಈ ಋಷಿಯ ಹತ್ರೆ ಎಂತ ಇದ್ದು ಬೇಕೆ, ಜ್ಞಾನ ಒಂದರ ಬಿಟ್ಟು?!
ರತ್ನಾಕರನ ದರ್ಪಕ್ಕೆ ಋಷಿ ಸಮದಾನಲ್ಲಿ ಮಾತಾಡಿದನಾಡ.
ಇಷ್ಟನ್ನಾರ ಆ ದಾರಿಲಿ ಬಂದೋರು ಎಲ್ಲೋರುದೇ ಗಾಬೆರಿ ಬಿದ್ದೋರೇ ಹೊರತು ಇಷ್ಟು ಸಮದಾನಿಗಳ ರತ್ನಾಕರ ಕಂಡಿದನೇ ಇಲ್ಲೆ ಇದಾ – ಸಮದಾನಲ್ಲಿ ಮಾತಾಡ್ಸುವಗ ರಜ ಅಸಡ್ಡೆಲೇ ಉತ್ತರ ಕೊಡ್ಳೆ ಸುರುಮಾಡಿದ ಬೇಡ°.
ಎಂತವನನ್ನೂ ಮಾತಾಡ್ಸಲೆ ಋಷಿಗೊ ಗೊಂತಿಲ್ಲೆಯೋ! ಮಾತುಕತೆ ಮುಂದುವರುದತ್ತು.
ಋಷಿ ಕೇಳಿದನಾಡ, “ಎಂತರ ಕೊಡೆಕಾದ್ಸು..?”, ನಿನ್ನತ್ರೆ ಇಪ್ಪದೆಲ್ಲ ಕೊಡೆಕು ಹೇದನಾಡ.
“ನಿನಗೆಂತಕೆ ಅದು?”, ಎನ್ನ ಸಂಪಾದನೆ.
“ನೀ ಆರಿಂಗೆ ಬೇಕಾಗಿ ಇಷ್ಟೆಲ್ಲ ಸಂಪಾಲುಸುತ್ಸು?!” ಎನ್ನ ಸಂಸಾರಕ್ಕಾಗಿ.
“ಇನ್ನೊಬ್ಬನ ಸೊತ್ತು ನೀ ಎಳಕ್ಕೊಂಡ್ರೆ, ಅವರ ಕೊಂದರೆ ಪಾಪತ್ವ ಬತ್ತಿಲ್ಲೆಯೋ?”, ಬಕ್ಕು, ಬರ್ಲಿ; ಎಂಗೊ ಎಲ್ಲೋರು ಹಂಚಿಗೊಂಬೆಯೊ°.
“ಎಲ್ಲೋರು ಹೇದರೆ ಆರೆಲ್ಲ?”, ಎನ್ನ ಹೆಂಡತ್ತಿ ಮಕ್ಕೊ.
“ನಿನ್ನ ಸಂಪಾದನೆಯ ಹಂಚಿಗೊಳ್ತ ಸಂಸಾರ ನಿನ್ನ ಪಾಪತ್ವವನ್ನೂ ಹಂಚಿಗೊಳ್ತೋ?” ಖಂಡಿತಾ..
“ನೀ ಒಂದರಿ ಹೆಂಡತ್ತಿಯ ಹತ್ತರೇ ಕೇಳಿ ಬತ್ತೆಯೋ?”.. ಏ°, ಇದೆಂತಾ ಪ್ರಶ್ನೆ; ಎನ್ನ ಹೆಂಡತ್ತಿ ಹತ್ತರಂಗೆ ಕಳುಸಿ ನೀ ಓಡ್ಳೆ ಹೆರಡ್ತೆಯೋ?
“ಇಲ್ಲೆ, ನೀ ಒಪಾಸು ಬಪ್ಪನ್ನಾರ ಆನು ಇಲ್ಲೇ ಇರ್ತೆ” ಧೈರ್ಯ ಎಂತರ?, ಬೇಡ ನಿನ್ನ ಕಟ್ಟಿಯೇ ಹಾಕುತ್ತೆ.
“ಸರಿ, ನಿನ್ನಿಷ್ಟ” ಹೇದನಾಡ ಋಷಿ.
ಹಾಂಗೆ ಋಷಿಯ ಮರಕ್ಕೆ ಕಟ್ಟಿ ಹಾಕಿ ಆ ಬೇಡ ಸೀತ ಅವನ ಪ್ರೀತಿಯ ಹೆಂಡತ್ತಿಯ ಹತ್ತರೆ ಓಡಿದನಾಡ.
ಎನ್ನ ಸಂಪಾದನೆಯ ನೀನು ಕುಶೀಲಿ ಹಂಚಿಗೊಳ್ತೆ ಅಲ್ಲದೋ – ಆನು ಆರಾರ ತಲೆ ಒಡದ ಸಂಪಾದನೆ ಅದು. ಆ ಪಾಪವನ್ನೂ ನೀನು ಹಂಚಿಗೊಳ್ತೆ ಅಲ್ಲದೋ?” – ಕೇಟನಾಡ ರತ್ನಾಕರ°.
ಅವ ಗ್ರೇಶಿದ್ದೇ ಒಂದು, ಬಂದ ಉತ್ತರವೇ ಇನ್ನೊಂದು.
“ಸಂಪಾದನೆ ಮಾಡಿ ತಪ್ಪದು ನಿಂಗಳ ಕೆಲಸ; ಅದರ್ಲಿಪ್ಪ ಪಾಪತ್ವ ಎನಗೆ ಲಗಾವು ಇಲ್ಲೆ” ಹೇಳಿ ಕಡ್ಡೀ ತುಂಡಾದ ಹಾಂಗೆ ಹೇಳಿತ್ತಾಡ!!

ವಾಲ್ಮೀಕಿ ಕಂಡ ರಾಮನ – ರಾಮನ ಮಕ್ಕೊಗೇ ಹೇಳುಸ್ಸು! (ಪಟಮೂಲ:ಇಂಟರ್ನೆಟ್ಟು)

ಇಷ್ಟನ್ನಾರ ಬೇರೆಯವರ ತಲೆ ಒಡದೋನಿಂಗೆ ಆ ದಿನ ಅವನ ತಲೆಯೇ ಆರೋ ಒಡದ ಹಾಂಗಾತಡ.
ಆ ಬೇಜಾರಲ್ಲೇ – ಋಷಿಯ ಹತ್ತರೆ ಬಂದು ಕೇಳಿದನಾಡ, “ಎನ್ನ ಸಂಪಾದನೆ ತಿಂದಿದು; ಆದರೆ ಎನ್ನ ಪಾಪ ತಿಂತಿಲ್ಲೇಡ” ಹೇದು.
“ಅಂಬಗ ಇಷ್ಟು ಸಮೆಯ ಪಾಪ ಮಾಡಿದ್ಸರ ನೀನು ಕಳಕ್ಕೊ, ಅಲ್ಲದ್ದರೆ ನರಕಕ್ಕೇ ಹೋವುತ್ತೆ ನೀನು!” ದೊಡ್ಡಕಣ್ಣು ಮಾಡಿ ಹೆದರ್ಸಿದನಾಡ ಋಷಿ.
ಇಷ್ಟು ಸಮೆಯ ಮಾಡಿದ ಪಾಪ? ಮೊದಲ ಸರ್ತಿಂಗೆ ರತ್ನಾಕರಂಗೆ ತಪ್ಪಿನ ಬಗ್ಗೆ ತಿಳಿವಳಿಕೆ ಬಂತು.
ಈ ದಾರಿಲಿ ಬಪ್ಪ ಪಾಪದ ದಾರಿಹೋಕರ ಎಷ್ಟೋ ಜೆನರ ಸಪಾಯಿ ಮಾಡಿದ್ದೆ; ವೈದಿಕರು, ಬ್ರಾಹ್ಮಣರು, ವೈಶ್ಯರು, ಕೂಲಿಕಾರರು – ಎಲ್ಲೋರನ್ನುದೇ; ಆರೊಬ್ಬನನ್ನೂ ಬಿಡದ್ದೆ. ಛೇ, ಕೇವಲ ಸಂಸಾರ ಸಾಗುಸಲೆ ಎಷ್ಟು ಜೆನರ ಕೊಂದೆ!
ಎಂತಾ ತಪ್ಪಾತು – ಹೇದು ಅನುಸಲೆ ಸುರು ಆತಾಡ; ಅಲ್ಲಲ್ಲ – ಅನುಸಲೆ ಸುರು ಅಪ್ಪ ಹಾಂಗೆ ಆ ಋಷಿ ಮಾಡಿದನಾಡ.
ಸರಿ, ಅಂಬಗ ಇನ್ನೆಂತರ ಮಾಡುಸ್ಸು ಪ್ರಾಯಶ್ಚಿತ್ತ? ಹೇದು ಪ್ರಶ್ನೆ ಮಡಗಿದನಾಡ ರತ್ನಾಕರ.
ಪಾಪ ತೊಳವ ಶೆಗ್ತಿ ಇಪ್ಪ, ಕಸ್ತಲೆಂದ ಬೆಣಚ್ಚಿಂಗೆ ಎತ್ತುಸುತ್ತ, ಲೋಕಕ್ಕೇ ಒಳ್ಳೆದರ ಮಾಡ್ತ – ದೇವರನಾಮವ ನೆಂಪು ಮಾಡಿಗೊ;
ಅದುವೇ “ರಾಮನಾಮ”.
ರಾಮನಾಮ ಜೆಪ ಮಾಡು, ಹತ್ತು, ನೂರು, ಸಾವಿರ, ಲಕ್ಷ – ಅಲ್ಲ ಕೋಟಿಗಟ್ಳೆ; ಅಲ್ಲ, ಅಸಂಖ್ಯಾತ – ಲೆಕ್ಖವೇ ಮಡಗೆಡ, ಏಕಧ್ಯಾನಲ್ಲಿ ರಾಮನಾಮ ಜೆಪ ಮಾಡು – ಹೇಳಿದನಾಡ ಆ ಋಷಿ.
ಮಹಾ ಕ್ರೂರಿ, ಆರಿಂಗೂ ಬೇಡದ್ದ ಬೇಡ ರತ್ನಾಕರ ರಾಮಧ್ಯಾನ ಸುರುಮಾಡಿದ ಮಂಗಳ ಕ್ಷಣ ಅದು.
ರತ್ನಾಕರ ಚೆಕ್ಕನಕಟ್ಟಿ ರಾಮಧ್ಯಾನ ಸುರು ಮಾಡಿ ಅಪ್ಪದ್ದೇ, ಆ ಋಷಿ “ನಾರಾಯಣ ನಾರಾಯಣ..” ಹೇಳಿಗೊಂಡು ಮುಂದುವರುದನಾಡ.
ಆ ಋಷಿಯೇ “ನಾರದ ಮುನಿಗೊ” ಆಡ.

ರತ್ನಾಕರ ಕೂದ°.
ಕೂದೇ ಕೂದ°. ರಾಮ ಜೆಪ ಮಾಡಿಯೇ ಮಾಡಿದ°.
ಮಾಡಿ ಮಾಡಿ . . . ರಾಮಧ್ಯಾನಿ ರತ್ನಾಕರನ ಆತ್ಮಂಗೆ ರಾಮನ ಕಂಡತ್ತು!
ಆತ್ಮ ಸಾಕ್ಷಾತ್ಕಾರ ಆತು. ರಾಮ ರಹಸ್ಯಂಗೊ ಗೋಚಾರ ಆತು. ರಾಮಾಯಣವೇ ತಿಳುದತ್ತು.
ಇಷ್ಟೆಲ್ಲ ಅಪ್ಪನ್ನಾರವೂ ಹೆರಾಣ ಲೋಕದ ಸಂಪರ್ಕವೇ ಇಲ್ಲೆ, ಸಂಸಾರ ಬಂಧನವೇ ಇಲ್ಲೆ, ಹಶು ಆಸರು ತೇಗು ಎಕ್ಕುಡು – ಎಂತ್ಸೂ ಇಲ್ಲೆ!
ಕೂದವ° ಹಂದಿದ್ದನಿಲ್ಲೇಡ; ಎಷ್ಟೋ ಕಾಲ. ಎಷ್ಟು ಸಮೆಯ?
ಇವ° ಕೂದ ಜಾಗೆಲಿಯೇ ಒರಳೆಗೂ ಮನೆ ಕಟ್ಟೆಕ್ಕೋ – ಪುಂಚ ಕಟ್ಟಿದವು; ಎತ್ತರಕ್ಕೆ – ಇವನನ್ನೇ ಮುಚ್ಚುವಷ್ಟೂ ಎತ್ತರ.
ಎಯ್ಯೂರು ಭಾವನ ಮನೆಒಳ ಇಪ್ಪಷ್ಟೂ ದೊಡ್ಡ ಪುಂಚವೋ? ಉಮ್ಮಪ್ಪ!

ಕಾಡಿನೊಳ ಕೂದ ರತ್ನಾಕರ ಮಾಯ ಆಗಿ, ಪುಂಚದೊಳ ಋಷಿ ಆಗಿ ಲೋಕಕ್ಕೆ ಗೋಚಾರ ಆದ.
ಪುಂಚಕ್ಕೆ ವಲ್ಮೀಕ ಹೇಳ್ತವಾಡ ಸಂಸ್ಕೃತಲ್ಲಿ. ವಲ್ಮೀಕಲ್ಲಿ ಹುಟ್ಟಿದ ಆ ಋಷಿ ತೇಜಸ್ಸಿಂಗೆ ವಾಲ್ಮೀಕಿ ಹೇದು ಹೆಸರಾತಾಡ.
ಇದುವೇ ಇದಾ- ರಾಮಕಥೆಲಿ ಗುರುಗೊ ಮೈರೋಮ ಕುತ್ತ ಅಪ್ಪ ಹಾಂಗೆ ಹೇಳಿದ ಕತೆ!!
ಎಲ್ಲೋರಿಂಗೂ ಗೊಂತಿಪ್ಪ ಕತೆಯೇ, ಆದರೆ ಪುನಾ ಪುನಾ ಕೇಳಿದ ಹಾಂಗೇ ಅದೆಂತೋ ಕೊಶಿ ಅಪ್ಪದು.

~

ಈ ವಾಲ್ಮೀಕಿ ಮಹರ್ಷಿಗಳ ಶುದ್ದಿ ಬಪ್ಪಗ ಮಾಷ್ಟ್ರುಮಾವ ಒಂದೊಂದರಿ ಎರಡು ಸಂಗತಿ ಹೇಳುಲಿದ್ದು.
ಒಂದನೇದು ಆ ಜೆನರ ಪರಿವರ್ತನೆಯ ಬಗ್ಗೆ.
ಅನಾಗರಿಕ ಸಂಸ್ಕಾರದ ಬೇಡ ಆಗಿದ್ದೋನು ಮುಂದೆ ಮಹಾನ್ ಮಹರ್ಷಿ ಆಗಿ ಬದಲಾದ ಅಲ್ಲದೋ? ಆ ಬದಲಾವಣೆಯ ಬಗ್ಗೆ.
ಬೌಶ್ಷ ನಾರದಂಗೆ ಈ ರತ್ನಾಕರನ ಒಳ ಒಬ್ಬ ಮಹಾನ್ ಚೇತನ ಇದ್ದ ಹೇದು ಅರ್ತ ಆತೋ ಏನೋ.
ರಾಮನಂತಹ ಸೌಮ್ಯ ವೆಗ್ತಿತ್ವವ ವರ್ಣನೆ ಮಾಡ್ಳೆ ಇಂತ ಕ್ರೂರಿ ಬೇಡಂಗೇ ಎಡಿಗು ಹೇದು ತಿಳ್ಕೊಂಡನೋ ಏನೋ.
ಊರಿಂಗುಪದ್ರ ಆಗಿಪ್ಪ ಜೆನರ ಸರಿದಾರಿಗೆ ತಪ್ಪ ಹೇಳಿ ಆಲೋಚನೆ ಮಾಡಿದನೋ ಏನೋ.
ಏನೇ ಆಗಿರಳಿ; ಒಬ್ಬ ಕ್ರೂರಿ ನಾಶ ಆಗಿ ಒಬ್ಬ ಮಹಾನ್ ಮಹರ್ಷಿಯ ಉದಯ ಆತಲ್ಲದೋ – ಆ ಉದಯಕ್ಕೆ ಕಾರಣ ಆರು?
ನಾರದರು.
ಅಯೋಗ್ಯಃ ಪುರುಷೋ ನಾಸ್ತಿ – ಯೋಜಕಃ ತತ್ರ ದುರ್ಲಭಃ || ಹೇದು ಮಾಷ್ಟ್ರುಮಾವ ಉದಾಹರಣೆ ಕೊಡ್ಸು ಇದನ್ನೇ.
ಅಯೋಗ್ಯ, ಉಪಕಾರಕ್ಕಲ್ಲಿದ್ದ ಅಪರದೆಂಡ ಹೇಳ್ತ ಜೆನಂಗೊ ಆರುದೇ ಇಲ್ಲೆ. ಆದರೆ ಎಂತವನಿಂದಲೂ ಉಪಯೋಗ ಪಡಕ್ಕೊಂಬ, ಸರಿದಾರಿಗೆ ತಪ್ಪಲೆ ಎಡಿತ್ತ ಸಾಮರ್ಥ್ಯವಂತ ಯೋಜಕರೇ ಕಡಮ್ಮೆ.
ರತ್ನಾಕರನ ಬಗ್ಗೆ ಬೋಚಬಾವ ಸಿಕ್ಕಿದ್ದರೂ ನಾರದರು ಹಾಂಗೇ ಮಾಡುಸಿ ಇನ್ನೊಂದು ಬೋಚಾಯಣ ಬರೆಶುತಿತವು; ಅದು ನಾರದರ ತಾಕತ್ತು – ಹೇಳ್ತದು ಸುರೂವಾಣ ವಿಶಯ.
~
ಎರಡ್ಣೇ ವಿಶಯ, ವಾಲ್ಮೀಕಿಯ ವಿವರಣಾ ಸಾಮರ್ಥ್ಯದ ಬಗ್ಗೆ.
ತಪಸ್ಸಿಲಿ ಕಂಡ ರಾಮನ, ರಾಮನ ಕತೆಯ ಎಷ್ಟೋ ಕಾಲ ಸ್ಮೃತಿಲೇ ನೆಂಪು ಮಡಗಿದ ವಾಲ್ಮೀಕಿ,
ಮುಂದೊಂದು ಕಾಲಲ್ಲಿ ಕುಶ-ಲವರು ಅವರ ಆಶ್ರಮಕ್ಕೆ ಬಂದು ಬೆಳದು ದೊಡ್ಡ ಆದ ಮತ್ತೆ ಸ್ಮೃತಿಂದ ಪ್ರಕಟ ಮಾಡಿದ ಸಂಗತಿ!
ವಾಲ್ಮೀಕಿ ಅಂದು ಕೊಟ್ಟ ಚಿತ್ರಣವೇ ಇಂದಿಂಗೂ ನವಗೆ “ರಾಮ”ನ ವೆಗ್ತಿತ್ವವ ತಿಳಿಯಲೆ ಸಹಕಾರಿ ಇದಾ!
ಮಹರ್ಷಿಗೊ ಹಾಂಗೆ ವಿವರುಸುಸ್ಸು ಅಲ್ಲದ್ದರೆ ರಘುವಂಶದ ಹಲವು ರಾಜರುಗಳಲ್ಲಿ “ರಾಮ” ಹೇಳಿಯೂ ಒಬ್ಬ ಇತ್ತಿದ್ದ ಹೇಳಿ ಆವುತಿತಷ್ಟೆ.

ವಾಲ್ಮೀಕಿಯ ಆತ್ಮಂಗೆ ಕಂಡ ಆ “ರಾಮಶೆಗ್ತಿ”ಯ ಯಥಾವತ್ತಾಗಿ ಪ್ರಕಟ ಮಾಡಿದ್ದೇ ಅವರ ದೊಡ್ಡ ಶೆಗ್ತಿಗಳಲ್ಲಿ ಒಂದು.
ಒರಿಶ ಕಾಲ ತಪಸ್ಸು ಮಾಡಿ ಪಡಕ್ಕೊಂಡ ಸಾಮರ್ಥ್ಯವೇ ಈ ಶೆಗ್ತಿ.
ನವಗೂ ಎಷ್ಟೋ ವಿಷ್ಯಂಗೊ ಅರ್ಥ ಆವುತ್ತು; ನಾವುದೇ ಹಲವು ಸಂಗತಿಗಳ ಅರಿತ್ತು; ಹಲವಾರು ರಹಸ್ಯಂಗಳ ಕಂಡುಗೊಳ್ತು.
ಬರೇ ಮನಸ್ಸಿಂಗೆ ಕಂಡುಗೊಂಬದು ಮಾಂತ್ರ ಅಲ್ಲ, ಅದರ ಇಪ್ಪ ಹಾಂಗೇ ಪ್ರಕಟ ಪಡುಸಿ, ಬೇರೆಯೋರಿಂಗೆ ತಿಳುಶುತ್ತ ಶೆಗ್ತಿಯೂ ನಮ್ಮೊಳ ಇರೇಕು – ಹೇಳ್ತದು ವಾಲ್ಮೀಕಿಯ ಸಂಗತಿಲಿ ನವಗರಡಿತ್ತು.

~
ಇಂತಾ ಮಹಾನ್ ಚೈತನ್ಯ ವಾಲ್ಮೀಕಿಯ ಬಗ್ಗೆ ಎಂತ್ಸಕೆ ನೆಂಪಾತು ಹೇದರೆ – ಮೊನ್ನೆ ಕಳುದ್ದು ವಾಲ್ಮೀಕಿ ಜಯಂತಿ ಆಡ.
ಆನು ಇಷ್ಟೆಲ್ಲ ಸಂಗತಿ ಹೇಳುವಗ ಗುಣಾಜೆಮಾಣಿ ಪುಸ್ಕ ಮಾಡಿದ – ಎಡ್ಯೂರಪ್ಪ ಇಷ್ಟೆಲ್ಲ ಕತೆ ಅರ್ತು ರಜೆ ಕೊಟ್ಟದಲ್ಲ, ಬೇಡ ಜನಾಂಗದ ಓಟಿಂಗೆ ಬೇಕಾಗಿ – ಹೇದು. ಕುರೆ ರಾಜಕೀಯ ಏನೇ ಇರಳಿ; ವಾಲ್ಮೀಕಿ ಮಾಂತ್ರ ರವಿತುಲ್ಯ ವೆಗ್ತಿತ್ವ.
ಅವನಿಂದಾಗಿಯೇ ರಾಮ, ಅವನಿಂದಾಗಿಯೇ ಜೀವ, ಅವ ಹೇಳಿದ ರಾಮಕಥೆಯೇ ನಮ್ಮ ಸನಾತನ ಧರ್ಮದ ಮಹಾಕಾವ್ಯ!
ಆತ್ಮಂಗೆ ಕಂಡ ಆ ಪರಮಾತ್ಮನ ಲೋಕಕ್ಕೇ ತೋರ್ಸಿ, ಪರಮಾತ್ಮನ ನಾವೆಲ್ಲೋರುದೇ ಅರ್ತುಗೊಂಬಲೆ ಸಹಕಾರಿ ಮಾಡುಸಿದ ಆ ವಾಲ್ಮೀಕಿಗೊಕ್ಕೆ, ಅವರ ಸುತ್ತ ಹಬ್ಬಿಪ್ಪ ಜ್ಞಾನದ ಪುಂಚಕ್ಕೆ ಬೈಲಿನ ನಮಸ್ಕಾರಂಗೊ.

ಒಂದೊಪ್ಪ: ಎಲ್ಲೋರಿಂಗೂ ರಾಮನ ವೆಗ್ತಿತ್ವವೇ ಆದರ್ಶ; ರಾಮನ ವೆಗ್ತಿತ್ವಕ್ಕೆ ವಾಲ್ಮೀಕಿ ವರ್ಣನೆಯೇ ಆಧಾರ!

17 thoughts on “ಆತ್ಮಂಗೆ ಕಂಡ ಪರಮಾತ್ಮನ ಲೋಕಕ್ಕೆ ತೋರುಸಿದ ವಾಲ್ಮೀಕಿ..

  1. “ರಾಮ ನಾಮ”ದ ಶೆಗ್ತಿಯ ಮಹಿಮೆ ಅಪಾರ.

  2. ಪುರುಷೋತ್ತಮನ ಪೂರ್ಣಾವತಾರದ ಸ೦ಪೂರ್ಣ ದರ್ಶನವ ಮಾಡಿ ಮಾನವ ಪೀಳಿಗೆಗೆ ಬದುಕ್ಕುವ ಸರಿಯಾದ ದಾರಿ ಯೇವದು ಹೇಳಿ ಶಾಶ್ವತವಾಗಿ ದಾಖಲೆ ಮಾಡಿದ ಮಹರ್ಷಿ ವಾಲ್ಮೀಕಿಯ ನೆನಪ್ಪು ಮಾಡಿದ್ದು ಸಮಯೋಚಿತ.ಶೈಲಿ ಸಮಯೋಜಿತ.
    ಧನ್ಯವಾದ ಒಪ್ಪಣ್ಣಾ.

  3. ಈಗಾಣ ಕಾಲದ ಬೇಡಾಂಕೆಟ್ಟದ್ದೇ ಮಾಡುವ ಬೇಡನ ಹಾಂಗಿಪ್ಪವು ಈ ಕತೆಯ ತಿರುಳಿನ ಅರ್ತು ಸರಿಯಾದ ದಾರಿಲಿ ನೆಡದರೆ ಲೋಕ ಉದ್ದಾರ ಅಕ್ಕು. ಕತೆಯ ಒಪ್ಪಣ್ಣನ ಶೈಲಿಲಿ ಕೊಟ್ಟ ಒಪ್ಪಣ್ಣಂಗೆ ಧನ್ಯವಾದಂಗೊ.

    1. ಹರೇ ರಾಮ; ಕಥೆ ಎಲ್ಲೊರಿ೦ಗೂ ಗೊ೦ತ್ತಿಪ್ಪದೆ ಆದರೂ ಅದರ ಪುನರಪಿ ಹೇಳಿದ ರೀತಿಲೇ ನೂತನತ್ವ ಇದ್ದದಾ. ಭಾಷಾ ಶೈಲಿ ನಿರೂಪಣೆಯ ತ೦ತ್ರ ತು೦ಬಾ ಹಿಡ್ಸಿತ್ತು. ಈ ಮೆಚ್ಚಿಕೆಲೇ ಧನ್ಯವಾದದೊಟ್ಟಿ೦ಗೆ ಒಪ್ಪ೦ಗ ಹೇಳ್ತೆ. ನಮಸ್ತೇ….

  4. ಸಕಾಲಿಕ ಲೇಖನ ಒಪ್ಪಣ್ಣ.ಈ ಮಹಾನ್ ಚೇತನಕ್ಕೆ ಶಿರಸಾ ನಮನಂಗೊ.

  5. ರಾಮಕಥೆಲಿ ಗುರುಗೊ ಹೇಳಿದ್ಸು ನೆಂಪಾತು.
    ಗೆಂಡನ ಪುಣ್ಯಲ್ಲಿ ಹೆಂಡತಿಗೆ ಸಮಪಾಲು,
    ಗೆಂಡನ ಪಾಪಲ್ಲಿ ಹೆಂಡತಿಗೆ ಪಾಲು ಇಲ್ಲೆ.

    ಹೆಂಡತಿಯ ಪಾಪಲ್ಲಿ ಗೆಂಡಂಗೆ ಸಮಪಾಲು,
    ಹೆಂಡತಿಯ ಪುಣ್ಯಲ್ಲಿ ಗೆಂಡಂಗೆ ಪಾಲು ಇಲ್ಲೆ.
    😉

    1. ಅಯ್ಯೊ,ಇದೆಂತಾ ನ್ಯಾಯ?

  6. ರಜೆಯ ಮಜಾ, ಒಟ್ಟಿಂಗೆ ಅದರ ಮಹತ್ವಂಗಳನ್ನೂ ತಿಳ್ಕೊಂಡರೆ ಸಾರ್ಥಕ ಆತು.
    ಹಬ್ಬ ಹರಿದಿನಂಗಳ ನೆಂಪು ಮಾಡುವದರೊಟ್ಟಿಂಗೆ ಅದರ ಮಹತ್ವವನ್ನೂ ತಿಳಿಶಿಕೊಡ್ತ ಶುದ್ದಿಗೊ ಬೈಲಿಲ್ಲಿ ಒಪ್ಪಣ್ಣ ಮಾಡ್ತಾ ಇಪ್ಪದು ಅಭಿನಂದನೀಯ.
    [ಬರೇ ಮನಸ್ಸಿಂಗೆ ಕಂಡುಗೊಂಬದು ಮಾಂತ್ರ ಅಲ್ಲ, ಅದರ ಇಪ್ಪ ಹಾಂಗೇ ಪ್ರಕಟ ಪಡುಸಿ, ಬೇರೆಯೋರಿಂಗೆ ತಿಳುಶುತ್ತ ಶೆಗ್ತಿಯೂ ನಮ್ಮೊಳ ಇರೇಕು – ಹೇಳ್ತದು ವಾಲ್ಮೀಕಿಯ ಸಂಗತಿಲಿ ನವಗರಡಿತ್ತು.] ಈ ಕೆಲಸ ಒಪ್ಪಣ್ಣನಿಂದ ಆವ್ತಾ ಇದ್ದು.

  7. ಒಪ್ಪಣ್ಣಾ ಸಮಯೊಚಿತ ಲೇಖನ ಆನು ಬರದ ‘ಪುರಾಣ ಪುರುಷ ರತ್ನಗಳು’ ಹೇಳ್ತ ಕಥಲಿ ಮದಾಲಣದ್ದೆ ವಾಲ್ಮೀಕಿ ಕಥೆ ಈ ಪುಸ್ತಕಕ್ಕೆ ೨೦೧೦ ರಲ್ಲಿ ದತ್ತಿ ಪುರಸ್ಕಾರ ಬಯಿ೦ದು ಒಪ್ಪಣ್ಣನ ಬರಹಕ್ಕೊ೦ದು ಒಪ್ಪ

  8. ವರ್ಣನೆಯೇ ಆಧಾರ!
    …….. ಅದಕ್ಕೆ ಈಗ ಕಾರ್ಡುಮಾಡುಸ್ವ ಕೆಣಿ ಅಡ!

  9. “ಎಲ್ಲೋರಿಂಗೂ ಗೊಂತಿಪ್ಪ ಕತೆಯೇ, ಆದರೆ ಪುನಾ ಪುನಾ ಕೇಳಿದ ಹಾಂಗೇ ಅದೆಂತೋ ಕೊಶಿ ಅಪ್ಪದು.”… ತಂಬಾ ಸತ್ಯವಾದ ಮಾತು. ಲೇಖನ ಖುಷಿ ಆತು 🙂

  10. {ಎಲುಗು ರಾಶಿಯೇ ಅಷ್ಟೆತ್ತರ – ತೆಂಗಿನ ಮರದಷ್ಟೆತ್ತರ } – ಅವನ ಕೈಲಿ ಸತ್ತ ಬ್ರಾಹ್ಮರ ಜೆನಿವಾರವೇ ಏಳೂವರೆ ಬಂಡಿ ಆಯಿದಡ ಅಪ್ಪೋ? 🙁

    {ಆನು ಇಷ್ಟೆಲ್ಲ ಸಂಗತಿ ಹೇಳುವಗ ಗುಣಾಜೆಮಾಣಿ ಪುಸ್ಕ ಮಾಡಿದ} – ಗುಣಾಜೆ ಮಾಣಿ ಹೇಳಿದ್ದೂ ಸರಿಯೇ.. ಇರಳಿ ಆ ಕೊಳಕ್ಕು ರಾಜಕೀಯ ನವಗೆ ಬೇಡ. ವಾಲ್ಮೀಕಿ ಜಯಂತಿಯ ಲೆಕ್ಕಲ್ಲಿ ಇಷ್ಟೊಳ್ಳೆ ಶುದ್ದಿ ಹೇಳಿದೆನ್ನೆ…
    ಖುಶೀ ಆತು… 🙂

  11. ಸಾಂದರ್ಭಿಕವಾದ ಲೇಖನ. ಅಭಿನಂದನೆಗ ಒಪ್ಪಣ್ಣ.

  12. ಕ್ಯಾಲೆಂಡರ್ಲಿ ವಾಲ್ಮೀಕಿ ಜಯಂತಿ ಹೇದು ಕಂಡೊಂಡಿತ್ತು ವರ್ಷ ವರ್ಷವೂ.. ಆದರೆ, ಕೆಂಪುಶಾಯಿ ಗುರ್ತ ಇತ್ತಿಲ್ಲೆ ಆ ತಾರೀಕಿಂಗೆ. ಹಾಂಗಾಗಿ ಅದೇಕೊ ಅಷ್ಟೇ ಅಸಡ್ಡೆಯಾಗಿ ಹೋಗ್ಯೊಂಡಿತ್ತು ಈ ವಿಷ್ಯ. ವಾಲ್ಮೀಕಿ ಜಯಂತಿಯ ಬಗ್ಗೆ ಸೊಗಸಾಗಿ ಒಂದು ಪರಿಚಯವ ಬೈಲಿಂಗೆ ಕೊಟ್ಟ ಒಪ್ಪಣ್ಣ ಬಾವಂಗೆ ‘ಹರೇ ರಾಮ’. ಅದರೊಳದಿಕ್ಕೆ ತುರ್ಕಿಯೊಂಡಿದ್ದ ಎರಡು ಸಂಗತಿಗಳನ್ನೂ ಬೆಟ್ಟೆತ್ತಿ ತೋರ್ಸಿದ್ದು ಅಷ್ಟೇ ಸೋಜಿಗವೂ ಆಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×