Oppanna.com

ದೇಶಕಾವಲೆ ಹೋದ ಹನುಮಂತ ದೇಶಕ್ಕಾಗಿ ಆರುದಿನ ಕಾದ ಕತೆ!!

ಬರದೋರು :   ಒಪ್ಪಣ್ಣ    on   12/02/2016    7 ಒಪ್ಪಂಗೊ

ಇಷ್ಟ್ರಲ್ಲೇ ಎಲ್ಲೋರಿಂಗೂ ಗೊಂತಿರ್ತು – ಒಪ್ಪಣ್ಣ ಯೇವ ಶುದ್ದಿ ಹೇಳುಲೆ ಹೆರಟದು ಹೇದು. ದೇಶಕಾವ ಯೋಧ ಹಿಮಾಲಯದ ಮಂಜಿಲಿ ಆರು ದಿನ ನಮ್ಮ ಕಾದ ಕತೆ.
ದೇಶಕ್ಕೆ ದೇಶವೇ – ಸೈನಿಕನ ಆಯುಷ್ಯಕ್ಕೆ ಪ್ರಾರ್ಥನೆ ಮಾಡಿದ ಕತೆ. ಕೊನೆಗೂ – ನಮ್ಮಂದ ಆ ಮಹಾನ್ ಹೆರಿಜೀವವ ಒಳಿಶಲೆ ಎಡಿಗಾಗದ್ದ ಕತೆ!
ಎಂತಾತು?
~

ಭಾರತ ದೇಶದ ಉತ್ತರ ಕೊಡಿಲಿ ಇರ್ಸು ಕಾಶ್ಮೀರ. ಈ ಕಾಶ್ಮೀರ ಹೇದರೆ – ಹಲವೂ ಗಲಾಟೆಗೊ, ಅಂದ್ರಾಣ ರಾಜಕೀಯ ತಪ್ಪು ಹೆಜ್ಜೆಗೊ – ಎಲ್ಲವುದೇ ನೆಂಪಾವುತ್ತು ನವಗೆ.
ಅಲ್ಯಾಣ ಹಲವೂ ತಲೆಬೇನೆಗಳಲ್ಲಿ ’ಸಿಯಾಚಿನ್’ ಹೇಳ್ತ ಊರುದೇ ಒಂದು.
ಸರಿಯಾಗಿ ಉತ್ತರ ಕಾಶ್ಮೀರಲ್ಲಿ ಇದ್ದರೂ, ಒಂದು ಹೊಡೆಲಿ ಪಾತಕಿಸ್ತಾನ, ಇನ್ನೊಂದು ಹೊಡೆಲಿ ಚೀನಾ – ಕೊಳ್ಳಿಗಳ ಹತ್ತರೆಯೇ ಜೀವನ ಮಾಡ್ತ ಮಹಾನ್ ಅಪಾಯಕಾರೀ ಜಾಗೆ ಅದು!
ಸಮುದ್ರ ಮಟ್ಟಂದ ಐದಾರು ಕಿಲೋಮೀಟ್ರು ಎತ್ತರದ ಜಾಗೆ. ಮನುಷ್ಯರಿಂಗೆ ಬೇಕಾದಷ್ಟು ಗಾಳಿ ನೀರು ಸಿಕ್ಕುತ್ತದೇ ದೊಡ್ಡ ಸಂಗತಿ!
ಸೂರ್ಯನ ಬೆಣಚ್ಚು ಪಾಪ ಆಗಿ ನೀರು ಸದಾ ಮಂಜುಗಡ್ಡೆ ಆಗಿಯೇ ಇರ್ಸು. ಉಷ್ಣತೆ ಸದಾ ಮೈನಸ್ ಲೇ ಇಪ್ಪದು. ಎಲ್ಲಿ ನೋಡಿರೂ ಕಲ್ಲಿನ ಬಂಡೆ; ಅದರ ಮೇಗೆ ಬೆಳಿ ಮಂಜುಗಡ್ಡೆ.
ಇದಿಷ್ಟೇ ಅಲ್ಯಾಣ ಪ್ರಕೃತಿ ಸೌಂದರ್ಯ.
ಇನ್ನು ಪ್ರಕೃತಿ ವಿಕೋಪ ಹೇದರೆ – ಬೇರೆಯೇ ಕತೆ.
ಕುಡಿವಲೆ ನೀರಿಲ್ಲೆ, ತಿಂಬಲೆ ಅಶನ ಇಲ್ಲೆ, ಉಸಿರಾಡ್ಳೆ ಗಾಳಿ ಇಲ್ಲೆ.
ಅದೊಂದು ನರಕವೇ – ಹೇದು ಅಲ್ಯಾಣ ಜಾಗೆಯ ಮೊದಲು ಕಂಡೋರು ಹೇಳುಗು.
~
ಆದರೆ, ಅದೆಲ್ಲವೂ ನಮ್ಮ ಭಾರತ ಮಾತೆಯ ಮೈ. ಎಲ್ಲ ಜಾಗೆಯನ್ನೂ ನಮ್ಮ ಧೀರಮಕ್ಕಳಾದ ಸೈನಿಕರು ಅಷ್ಟೇ ಪ್ರೀತಿಲಿ ಕಾಯ್ತವು.
ಯೇವ ರೀತಿ ಸಮುದ್ರಕರೆ ಕೊಡೆಯಾಲವ ಕಾಯ್ತವೋ – ಅದೇ ರೀತಿ ಗುಡ್ಡೆಕೊಡಿ ಸಿಯಾಚಿನ್ ನನ್ನೂ ಕಾಯ್ತವು.
ಅವು ನಿಷ್ಟೆ ಬಿಟ್ರೆ ನಾವು ಜೀವ ಬಿಡೆಕ್ಕಷ್ಟೆ.
ಈ ಸಿಯಾಚಿನ್ ಲಿ ಕಾವದು ಹೇದರೆ ಅದು ಸೈನಿಕರಿಂಗೇ ಒಂದು ಸವಾಲು ಅಡ.
~

ಒಳುದ ದಿಕ್ಕೆ ರಕ್ಷಣೆಗಾಗಿ ಬೆಡಿ ಹಿಡ್ಕೊಂಡು ನಿಬದು ಹೇದರೆ – ಶತ್ರುವಿನ ಆಕ್ರಮಣ ಮಾಂತ್ರ ನಿರೀಕ್ಷೆ;
ಆದರೆ, ಸಿಯಾಚಿನ್ ಲಿ ಪ್ರಕೃತಿಯೂ ಆಕ್ರಮಣ ಮಾಡುಗು. ಅದನ್ನೂ ಎದುರುಸುಲೆ ಸದಾ ಸಿದ್ಧ ಇರೆಕ್ಕಿದಾ!
~

ಮೊನ್ನೆ, ಮೂರ್ನೇ ತಾರೀಕಿಂಗೆ, ನಾವೆಲ್ಲ ಬೆಶ್ಚಂಗೆ ಶಿವಶಿವಾ ಹೇದು ಚಳಿಗೆ ಕಂಬುಳಿ ಹೊದ್ದು ಮನುಗಿಂಡು ಇಪ್ಪಾಗ – ಸಿಯಾಚಿನ್ ಲಿ ಹಿಮಪ್ರವಾಹ ಬಂತಾಡ.
ದೊಡಾ ಗುಡ್ಡೆಯ ಕೊಡಿಲಿ ಒಂದು ಹನಿ ಹಿಮ ಜಾರಿದ್ದು ಅದರ ಕೆಳ ಇಪ್ಪ ನಾಲ್ಕುಹನಿಯ ಒಟ್ಟಿಂಗೆ ಜಾರ್ಸಿಗೊಂಡು, ಅದರಿಂದ ಕೆಳ ಇಪ್ಪ ಸಣ್ಣ ಉಂಡೆಯ ಜಾರ್ಸಿ, ಅದು ಕೆಳ ಇಪ್ಪ ದೊಡ್ಡ ದೊಡ್ಡ ಉಂಡೆಗಳ ಜಾರ್ಸಿ – ಕ್ರಮೇಣ ಇನ್ನೂ ಕೆಳ ಎತ್ತುವಗ ದೊಡಾ ನದಿಯ ಹಾಂಗೆ ಇಡೀ ಮೇಲ್ಮೈ ಯ ಹಿಮ ಜಾರಿಗೊಂಡು ಬಪ್ಪದು.
ಹಾಂಗೆ ಬಂದ ಹಿಮ ಪ್ರವಾಹ – ಕೆಳಾಣ ಹೊಡೆಂಗೆ ಎತ್ತುವಾಗ ಹತ್ತಿಪ್ಪತ್ತು ಅಡಿ ಎತ್ತರ ಆಗಿದ್ದತ್ತು.
ಅಷ್ಟು ಎತ್ತರದ ಪ್ರವಾಹ ಸೀತ ಬಂದು ಬಿದ್ದದು – ನಮ್ಮ ಭಾರತೀಯ ಸೈನಿಕರ ವಸತಿಯ ಮೇಗೆ.

ಆತನ್ನೆ!
ಹತ್ತು ಸೈನಿಕರು – ಮೆಡ್ರಾಸು ರೆಜಿಮೆಂಟು ಹೇಳ್ತ ಗುಂಪಿನೋರು – ಕೇರಳ, ಕರ್ನಾಟಕ, ಆಂಧ್ರ, ತೆಮುಳು ನಾಡಿನ – ಒಟ್ಟು ಹತ್ತು ಯೋಧರು ಆ ಗುಂಪಿಲಿ ಇತ್ತಿದ್ದವು.
ನೋಡಿಗೊಂಡು ಇದ್ದ ಹಾಂಗೇ – ಸೀದಾ ಬಂದು ಬಿದ್ದ ದೊಡ್ಡಾ ಹಿಮ ಪ್ರವಾಹ ಅವರ ಎಲ್ಲ ಟೆಂಟುಗಳ, ಆಯುಧಂಗಳ, ಡೇರೆಗಳ, ಅಷ್ಟೆಂತಕೆ- ಭವಿಷ್ಯತ್ತನ್ನೇ ಪೂಜಿಗೊಂಡು ಹೋತಾಡ.
ಅಯ್ಯೋ ದೇವರೇ!

ದೇಶ ಕಾವ ಯೋಧರು ಮಂಜುಗಡ್ಡೆಯ ರಾಶಿಯ ಅಡಿಲಿ.
ಎಲ್ಲೋರು ಗ್ರೇಶಿದ ಹಾಂಗೇ – ಅವರ ಆಶೆ ಎಲ್ಲೋರುದೇ ಬಿಟ್ಟಿತ್ತಿದ್ದವು.
ಹತ್ತು ಯೋಧರು ತೀರಿಗೊಂಡಿದವು; ವಾತಾವರಣ ಸರಿ ಇಲ್ಲೆ; ಸರಿ ಆದ ಕೂಡ್ಳೇ ಅವರ ಹುಡ್ಕಲೆ ಹೋವುತ್ತೆಯೊ° – ಹೇದು ಸುದ್ದಿ ಬಂತಾಡ ಸೈನ್ಯದ ಹೊಡೆಂದ.
ಅದೇ ರೀತಿ, ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ ಐದಲ್ಲ – ಆರನೇ ದಿನ ಅಪ್ಪಲೆ ಅವರ ಅವಶೇಷ ತಪ್ಪಲೆ ಹೇದು ಹೋದವಾಡ.

ನೋಡಿರೆ – ಪವಾಡ!
~
ಮೂರ್ನೇ ತಾರೀಕಿಂದ ಒಂಭತ್ತನೇ ತಾರೀಕಿನ ವರೆಗೆ – ಆರು ದಿನ,
ಭೂಮಿಲಿ ಇಪ್ಪತ್ತೈದು ಅಡಿ ಎತ್ತರದ ಮಂಜುಗಡ್ಡೆಯ ಅಡಿಲಿ,
ಮೈನಸ್ ನಲುವತ್ತು ಡಿಗ್ರಿ ಉಷ್ಣತೆಲಿ
ಒಂದು ಸಾಮಾನ್ಯ ಮನುಷ್ಯ ಬದ್ಕಿ ಒಳಿವಲೆ ಸಾಧ್ಯ ಇದ್ದೋ?
ಇದ್ದು ಹೇದು ನವಗೆ ಆರಿಂಗಾರು ಅನುಸುತ್ತೋ?
ಪಾಪದವ° ಆದರೆ ಅಷ್ಟು ಮಂಜುಗಡ್ಡೆ ಮೈಮೇಲೆ ಬಿದ್ದಪ್ಪಗಳೇ ಕೊಟ್ಟೆ ಕಟ್ಟುಗು.
ಆದರೆ, ಒಂದು ಸೈನಿಕ° – ಇನ್ನೂ ಜೀವಂತ ಇತ್ತಾಡ.

ಅಷ್ಟೊಂದು ಗಟ್ಟಿಜೀವ ಇರೆಕ್ಕಾರೆ – ಅದು ಹನುಮಂತನ ಅಪರಾವತಾರವೇ ಆಯೆಕ್ಕಷ್ಟೆ.
ಅಪ್ಪು; ಅದರ ಹೆಸರೂ – ಹನುಮಂತಪ್ಪ ಹೇದು.
~
ಆರು ದಿನ ಕಳುದು ಮಂಜುಗಡ್ಡೆ ಒಕ್ಕುವಗ ಕಂಡ ಜೀವಂತ ದೇಹವ ಕೂಡ್ಳೇ ಕಾಶ್ಮೀರಕ್ಕೆ ಸಾಗುಸಿದವಡ; ಅಲ್ಲಿಂದ ದೆಹಲಿಗೆ ತಂದು – ಹೆಸರಾಂತ ವೈದ್ಯರ ಹತ್ರೆ ತೋರ್ಸಿದವಾಡ.
ಇಡೀ ದೇಶಲ್ಲಿ ಇದೊಂದು ಸಂಚಲನ.
ಶೆಲಾ, ಮನುಷ್ಯನ ದೇಹ ಹಾಂಗಿಪ್ಪ ಒಂದು ಪರಿಸ್ಥಿತಿಲಿ ಬದ್ಕುತ್ತಾ?
ಮಂಜುಗಡ್ಡೆಯ ಅಡಿಲಿ, ಸರಿಯಾದ ಸೂರ್ಯನ ಬೆಣಚ್ಚಿಲ್ಲದ್ದಲ್ಲಿ, ಸರಿಯಾದ ಗಾಳಿ ಆಡದ್ದಲ್ಲಿ, ಉಷ್ಣತೆ ನಮ್ಮ ದೇಹಕ್ಕೆ ಹಿಡಿಯದ್ದ ಹಾಂಗಿಪ್ಪಲ್ಲಿ – ಒಟ್ಟು, ಮನುಷ್ಯನ ಜೀವ ಒಳಿಯಲೆ ಸಾಧ್ಯವೇ ಇಲ್ಲದ್ದಲ್ಲಿ – ಜೀವ ಒಳಿತ್ತೋ?!

ಇದೊಂದು ಪವಾಡ – ಹೇದು ಊರಿಡೀ ಮಾತಾಡಿಗೊಂಡವು.

ಆದರೆ, ಎಂತ ಮಾಡುದು – ಆರು ದಿನಲ್ಲಿ ಅಪ್ಪಲಾಗದ್ದು ಆಗಿ ಹೋಗಿತ್ತು.
ಮೂತ್ರಪಿಂಡ, ಜಠರ – ಇತ್ಯಾದಿಗೊ ಅದಾಗಲೇ ಕೈಕೊಟ್ಟಿತ್ತಾಡ. ಹಾಂಗಾಗಿ ವೈದ್ಯರು ಎಷ್ಟೂ ಪ್ರಯತ್ನ ಮಾಡಿರೂ ಒಳಿಶಲೆ ಎಡಿಗಾಯಿದಿಲ್ಲೆ.
~

ಏನೇ ಇರಲಿ – ಅಷ್ಟು ಗಟ್ಟಿ ಜೀವ ಅಷ್ಟು ಸಮಯ ಇದ್ದದೇ ದೊಡ್ಡ ಸಂಗತಿ.
ಎಲುಬು ಕೊರವ ಚಳಿಲಿ ಅವರವರ ರಕ್ಷಣೆ ಹೇಂಗೆ ಮಾಡೆಕ್ಕು ಹೇಳುದರ ರಕ್ತಗತ ಮಾಡಿಗೊಂಡು ನಿತ್ಯ ಅಭ್ಯಾಸಲ್ಲಿಪ್ಪ ಜನ ಆಗಿದ್ದ ಕಾರಣ ಆ ಆಘಾತವ ಸಹಿಸಿ ನಮ್ಮ ಕಾದು ಕೂದತ್ತು ಅಂಥಾ ಹಿಮಚಾದರಲ್ಲಿ!
ಒಂದು ವೇಳೆ ಆ ಜೀವ ಒಳುದಿದ್ದರೆ – ಇಡೀ ಲೋಕಕ್ಕೆ, ವೈದ್ಯಲೋಕಕ್ಕೆ ಒಂದು ಪಾಠ ಆವುತಿತು.
ಆರು ದಿನ ಹೇಂಗೆ ಕಳುದು ಹೋತು; ಅಷ್ಟಪ್ಪಗ ಆರೆಲ್ಲ ಬಗ್ಗೆ ಚಿಂತೆ ಬಂತು; ಆರಾರ ನೆಂಪಾತು; ಹೇಂಗೆ ಕಳುದತ್ತು; ಹೊತ್ತು ಹೋಪಲೆ ಎಂತೆಲ್ಲ ಮಾಡಿತ್ತು – ಇದೆಲ್ಲದರ ಗ್ರೇಶುವಾಗ ಮೈ ನವಗೇ ಚಳಿ ಕೂರ್ತು.
ಅಲ್ದೋ?
~

ದೇಶವನ್ನೇ ಕಾವಲೆ ಗಡಿಗೆ ಹೋದ ಯೋಧ° ಆಪತ್ತಿಲಿ ಇಪ್ಪಗ – ದೇಶದವು ಬಪ್ಪಲೆ ಬೇಕಾಗಿ ಮತ್ತೂ ಆರು ದಿನ ಕಾಯೆಕ್ಕಾತು – ಹೇಳ್ತದು ಮಾಂತ್ರ ಬೇಜಾರದ ಸಂಗತಿ.
~

ಒಂದೊಪ್ಪ: ಹನುಮಂತಪ್ಪನ ಕೈಲಿ ದೇಶವ ಕಾಯಿಸಿದ್ದರಿಂದಲೂ, ಹನುಮಂತಪ್ಪ ಆರು ದಿನ ಕಾದ ಕತೆ ಹೆಚ್ಚು ವೀರ ರಸ!

7 thoughts on “ದೇಶಕಾವಲೆ ಹೋದ ಹನುಮಂತ ದೇಶಕ್ಕಾಗಿ ಆರುದಿನ ಕಾದ ಕತೆ!!

  1. ಹರೇ ರಾಮ. ಮಹಾನ್ ಯೋಧಂಗೆ ಮುಕ್ತಿ ದೊರಕಲಿ.

  2. ಮೊನ್ನೆ ಸಾವು -ಬದುಕಿನ ಮಧ್ಯೆ ಹೋರಾಡುತ್ತಂ ಹೇಳಿ ಗೊಂತಪ್ಪದ್ದೆ ಶುದ್ದಿ ಓದುವಾಗಲೇ ಕಣ್ಣೀರು ಬಂದೊಂಡಿತ್ತಿದ್ದು, ಇಂದಂತೂ ಕೂಗಿಯೇ ಹೋತು. ನಮ್ಮ ದೇಶ ರಕ್ಷಣೆ ಮಾಡ್ತ ಸೈನಿಕರಿಲ್ಲದ್ರೆ ನಾವಿದ್ದೊ? ಮೊನ್ನೆಂದಲೇ ಎಂಗೊ ಕೆಲವು ಜೆನ ಹನುಮಂತಪ್ಪಂಗೆ ಆ …..ಹನುಮಾನ್ ಚಾಲೀಸ್ ಹೆಚ್ಚಿಗೆ ಓದುತ್ತಾ ಇದ್ದಿದ್ದಿಯೊಂ .ಆದರೆಂತ……!! ಸರಿ ಆ ಪುಣ್ಯಾತ್ಮಂಗೆ ಸಾಯುಜ್ಯ ಸಿಕ್ಕಿ ;ಅವನ ಸಹಧರ್ಮಿಣಿಗೆ ಸಹಿಸುವ ಶಕ್ತಿಯೂ ಮಗುವಿಂಗೆ ಯೋಗ್ಯ ಭವಿಷ್ಯವು ದೊರೆಯಲಿ .

  3. sakaalika, ವೀರ ಯೋಧಂಗೆ ಸ್ವರ್ಗ ಪ್ರಾಪ್ತಿ aagali. ಹರೇ ರಾಮ

  4. ಹಿಮದೊಳವೆ ಮುಳುಗಿ ಜೀವವ ಕೈಲಿ ಬಿಗಿ ಹಿಡುದು
    ಯಮನ ದಿಕ್ಕೆಡುಸಿ ನೀ ಶೌರ್ಯ ಮೆರದೆ
    ನಮನ ಚಿರಜೀವಿ ಹನುಮನೆ ನೀನೆ ಯುಗಪುರುಷ
    ತಮವ ಕಳೆ ಬಾ ದಾರಿದೀಪನಾಗು ||
    ಶೃದ್ಧಾಂಜಲಿ ..

  5. ऐ मेरे वतन के लोगों, तुम खूब लगा लो नारा
    ये शुभ दिन है हम सबका, लहरा लो तिरंगा प्यारा
    पर मत भूलो सीमा पर, वीरों ने है प्राण गवाये
    कुछ याद उन्हें भी कर लो, कुछ याद उन्हें भी कर लो
    जो लौट के घर न आये, जो लौट के घर न आये ||

  6. ಶುದ್ದಿಗೆ ಎನ್ನ ಒಪ್ಪಂಗೊ
    ದೇಶಕ್ಕಾಗಿ ಜೀವ ತೆತ್ತ ಆ ಮಹಾನ್ ಚೇತನಕ್ಕೆ ಒಪ್ಪಂಗೊ
    ಪಾಂಚಭೌತಿಕ ದೇಹ ಬಿಟ್ಟರೂ ಚಿರಂಜೀವಿ ಆಗಿಪ್ಪ ಕಲಿಯುಗದ ಹನುಮಂತಂಗೆ ಒಪ್ಪಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×