Oppanna.com

ವಿಷುವಿನ ವಾಶಿ ವಿಶೇಷ ವಿಶಯಂಗೊ…

ಬರದೋರು :   ಒಪ್ಪಣ್ಣ    on   13/04/2012    12 ಒಪ್ಪಂಗೊ

ಚಂದ್ರಮಾವಂಗೂ ಸೂರ್ಯಮಾವಂಗೂ ಮದಲಿಂದಲೇ ಬೇರೆಬೇರೆ ಲೆಕ್ಕ!
ಚಂದ್ರಮಾವನ ಲೆಕ್ಕದ ಹೊಸ ಒರಿಶ ಮನ್ನೆ ಬಂತಷ್ಟೇ. ಚಾಂದ್ರಮಾನ ಯುಗಾದಿ ಹೇದು ಅದರ ಆಚರಣೆ ಮಾಡಿಗೊಂಡವು ಬೈಲಿಲಿ.
ಇದೀಗ ಇನ್ನಾಣದ್ದು – ಸೂರ್ಯಮಾವನ ಲೆಕ್ಕದ್ಸು. ಸೌರಮಾನ ಯುಗಾದಿಯನ್ನೇ ‘ವಿಷು’ ಹೇದು ನಮ್ಮ ಊರಿಲಿ ಆಚರಣೆ ಮಾಡಿಗೊಂಬದು ಇದಾ.

ವಿಷುವಿನ ಬಗ್ಗೆ ನಾವು ಈ ಮದಲೇ ಬೈಲಿಲಿ ಮಾತಾಡಿಗೊಂಡಿದು.
ವಿಷುಕಣಿಯ ಬಗೆಗೆಯೇ ಕಳುದೊರಿಶ ಶುದ್ದಿ ಮಾತಾಡಿದ್ದೂ ಇದ್ದು. (https://oppanna.com/?p=9736)
ಆದರೆ, ವಿಷುವಿನ ಬಗೆಗೆ ವಿಷುವಿನ ಸಮೆಯಲ್ಲಿ ಎಷ್ಟು ಮಾತಾಡಿಗೊಂಡ್ರೂ ಅದು ಕಡಮ್ಮೆ ಹೇದು ಏನಲ್ಲ ಇದಾ.
ಕಾಲಚಕ್ರ ತಿರುಗೆಂಡೇ ತಿರುಗೆಂಡೇ – ಮತ್ತೆ ಮತ್ತೆ ಅದೇ ಋತುಗೊ ಬಂದು ನಿಲ್ಲುತ್ತು; ಅದೇ ವಿಷುದೇ ಬಂದು ಕೂಡ್ತು.
ಮರಗೆಡುಗಳ ಅಲಫಲಂಗೊ ಎಲ್ಲವೂ ಆವರ್ತನೆ ಆವುತ್ತು.

ಭೂಮಿಯ ಪರಿಭ್ರಮಣೆಂದಾಗಿ ಸೂರ್ಯಾದಿ ನಕ್ಷತ್ರಂಗೊ ತಿರುಗುತ್ತ ಹಾಂಗೆ ಕಾಣ್ತು – ಹೇಳ್ತದು ಸಾವಿರಾರು ಒರಿಶ ಮದಲೇ ಆರ್ಯಭಟ್ಟಂಗೆ ಗೊಂತಾಯಿದು. ಆದರೂ, ದಿನನಿತ್ಯದ ಸುಲಭಕ್ಕಾಗಿ ಸೂರ್ಯ ತಿರುಗುತ್ತ° – ಹೇಳ್ತದು ನವಗೆ ಅರಡಿಗು.
ಈ ಬಗ್ಗೆ ವಿವರವಾಗಿ ಆಟಿ-ಸೋಣೆ ಹೇದು ಹೊತ್ತುಕಳವಗ ಕಾಲಚಕ್ರದ ಬಗ್ಗೆ ಮಾತಾಡಿದ್ದು (ಸಂಕೊಲೆ: https://oppanna.com/?p=297)
ಹಾಂಗೆ ಸೂರ್ಯ ಬಾನಲ್ಲಿ ತಿರುಗೆಂಡೇ ಮೀನರಾಶಿಂದ ಮೇಷ ರಾಶಿಗೆ ಕಾಲುಮಡಗುತ್ತ ’ಸಂಕ್ರಮಣ’ ಕಾಲ ಈ ಮೇಷ ಶೆಂಕ್ರಾಂತಿ. ಅದನ್ನೇ ನಮ್ಮ ಊರಿಲಿ ’ವಿಷು’ ಹೇಳ್ತದು.
ಒಳುದ ಹನ್ನೊಂದು ಶೆಂಕ್ರಾಂತಿಯ ಹಾಂಗೆ ಇದೊಂದು ಕೇವಲ ಶೆಂಕ್ರಾಂತಿ ಆಗಿರದ್ದೆ, ಹಲವಾರು ವಿಚಾರಂಗಳಲ್ಲಿ ಪರ್ವಕಾಲ ಆಗಿದ್ದೊಂಡಿತ್ತು. ವಿಷುವಿನ ಕುರಿತಾದ ಕೆಲವು ಶುದ್ದಿಗಳ ಇಂದು ಮಾತಾಡುವನೋ?
ಈಗೀಗ ಶಾರದಾ ಕೆಲಂಡ್ರು ಬಂದ ಮತ್ತೆ ಈ ಲೆಕ್ಕಾಚಾರಂಗೊ ಕಾಣೆ ಅಪ್ಪಲೆ ಸುರು ಆದರೂ, ಮದಲಿಂಗೆ ಇದುವೇ ಒರಿಶಾರಂಭ.
~

ಮನ್ನೆ ಪೊಸವಣಿಕೆ ಉಪ್ನಾನ ಕಳಾತಲ್ಲದೋ – ಅದೇ ದಿನ ಕೋಳಿಕ್ಕಜೆ ಉಪ್ನಾನ – ಕೋಳಿಕ್ಕಜೆ ಕುಂಞಕ್ಕನ ಕುಂಞಿಮಗಂಗೆ.
ಯೇವದಕ್ಕೆ ಹೋಪದು ಹೇದು ನವಗರಡಿಯ. ಪೊಸವಣಿಕೆ ಉಪ್ನಾನ ಹೇದರೆ – ಸಾರಡಿಪುಳ್ಳಿಯ ದೊಡ್ಡಪ್ಪನ ಮಗಳಮಗಂಗೆ; ಕೋಳಿಕ್ಕಜೆ ಉಪ್ನಾನ ಹೇದರೆ ಆಚಮನೆ ದೊಡ್ಡಪ್ಪನ ಮಗಳಮಗಂಗೆ!!
ಅಂತೂ ಇಂತೂ ಸುಮಾರು ಆಲೋಚನೆ ಮಾಡಿಗೊಂಡು ಮೂರ್ತಕ್ಕಪ್ಪಗ ಕೋಳಿಕ್ಕಜೆ ಉಪ್ನಾನಕ್ಕೆ ಹೋಗಿ, ಊಟಕ್ಕಪ್ಪಗ ಪೊಸವಣಿಕೆ ಉಪ್ನಾನಕ್ಕೆ ಹೋಪದು ಹೇದು ಅಂದಾಜಿ ಮಾಡಿತ್ತು.
ಹೀಂಗೆ ಆಲೋಚನೆ ಮಾಡ್ಳೆ ಒಂದು ಕಾರಣಕೆಣಿಯೂ ಇದ್ದು – ಕೋಳಿಕ್ಕಜೆ ಉಪ್ನಾನಕ್ಕೆ ಆಚಮನೆಂದಲೇ ವಾಹನ ವೆವಸ್ತೆ ಇದ್ದತ್ತಿದಾ!
~

ಅದೊಂದರಿ ಮೊಳಪ್ಪುಬೇನೆ ಎಳಗಿದ ಮತ್ತೆ ದೊಡ್ಡಪ್ಪ° ತಿರುಗಾಟ ತುಂಬ ಕಮ್ಮಿ ಮಾಡಿದ್ದವು. ಅಗತ್ಯದ್ದಕ್ಕೆ ಮಾಂತ್ರ ಹೋಪದು ಹೇಳ್ತ ಲೆಕ್ಕಲ್ಲಿ. ಹಾಂಗೇ – ಅಜ್ಜನಮನೆ ಅಜ್ಜ° ಆಗಿಂಡು ಕೋಳಿಕ್ಕಜೆ ಉಪ್ನಾನಕ್ಕೆ ಹೋಗದ್ರಕ್ಕೋ – ಅದಕ್ಕೆ ವಾಹನ ವೆವಸ್ತೆಯನ್ನೂ ಮಾಡಿದ್ದ° ನಮ್ಮ ಆಚಮನೆದೊಡ್ಡಣ್ಣ ಎಂಕಪ್ಪನ ಜೀಪಿಂಗೆ ಹೇಳಿ. ಜೀಪೋ ಕೇಳಿರೆ ಜೀಪಲ್ಲ; ಆದರೆ ಜೀಪಿನ ನಮುನೆದು. ಜೀಪಿನಷ್ಟು ಶೆಬ್ದವೂ ಇಲ್ಲೆ; ಅಷ್ಟು ಅದುರ್ತೂ ಇಲ್ಲೆ. ಪುಸೂಲನೆ ಹೋಪದು – ಸಾಬೊನು ಜಾರಿದ ಹಾಂಗೆ. (ರೂಪತ್ತೆಯ ಕಾರು ಬೆಣ್ಣೆಜಾರಿದ ಹಾಂಗೆ ಹೋಪದು – ಅಷ್ಟು ನೈಸಿಂದಲ್ಲ ಇದು!) ಅದಿರಳಿ.

ಈ ಎಂಕಪ್ಪ ಹೇದರೆ ದೂರದ ಜೆನ ಅಲ್ಲ – ನವಗೆಲ್ಲ ಕಂಡುಗೊಂತಿಪ್ಪ ಜೆನವೇ.  ಅಡಕ್ಕೆ ಕೊಯಿತ್ತ ಸುಂದರ ಇಲ್ಲೆಯೋ – ಅದರ ಖಾಸಾ ಅಕ್ಕನ ಖಾಸಾ ಮಗ°! 😉
ಮದಲಿಂಗೆ ಎಂಟು ಜೆನ ಹಿಡಿತ್ತ ಜೀಪು ಇದ್ದತ್ತು, ಈಗ ಈ – ಹನ್ನೊಂದು ಜೆನ ಹಿಡಿತ್ತದು – ಹೊಸನಮುನೆದು ತೆಗದ್ಸು.
ಟವೆರವೋ, ಪಟೋರವೋ – ಎಂತದೋ ಒಂದು ಹೆಸರು; ನವಗೆ ನಾಲಗೆ ತೆರಚ್ಚುತ್ತೂ ಇಲ್ಲೆ.
ಅದಿರಳಿ.
~

ವಿಷು ವಾಶಿಯ ವಿಶೇಷ ವಿಶ್ಶು!

ದೂರದ ಮಡಿಕ್ಕೇರಿಗೋ ಮತ್ತೊ ದಿಬ್ಬಾಣ ಹೋಪದಿದ್ದರೆ ಬೇಗ – ನಾಕಂಟೆಗೇ ಎದ್ದು ಹೆರಡೆಕ್ಕಪ್ಪೋ.; ಆದರೆ ಇದು ಹಾಂಗಲ್ಲ; ಇಲ್ಲೇ ಬೈಲೊಳದಿಕ್ಕೆ; ಅದೂ ಉಪ್ನಾನಕ್ಕೆ.
ಉಪ್ನಾನದ ಮೂರ್ತವೂ ಹದಾಕೆ ಇದ್ದ ಕಾರಣ ಭಾರೀ ಬೇಗ ಹೇದು ಹೆರಟಿದವಿಲ್ಲೆ. ಒಂದರಿಯಾಣದ್ದು ಕರದಾದ ಮತ್ತೆ ವಾಹನ ಬಂದದು –  ಏಳೂವರೆಗೆ. ಡಂಙಾಡಂಙನೆ ಹೆರಟೂ ಆತು.
ಎದುರಾಣ ಸೀಟಿಲಿ – ಡ್ರೈವರು ಎಂಕಪ್ಪನ ಎಡತ್ತಿಂಗೆ – ಆಚಮನೆ ದೊಡ್ಡಪ್ಪ°, ಮಾಷ್ಟ್ರುಮಾವ° ಅವರ ಕರೆಲಿ – ಎಲೆತುಪ್ಪಲೆ ಕಿಟುಕಿಕರೆಲಿ.

ಹಿಂದಾಣ ಉದ್ದದ ಸೀಟುಗಳಲ್ಲಿ ನಾಗಬನದೊಡ್ಡಕ್ಕನ ಸಂಸಾರ, ಕೆದಿಲಪುಟ್ಟಕ್ಕನ ಸಂಸಾರ, ಆಚಮನೆ ಸಂಸಾರ – ಅಲ್ಲದ್ದೇ, ಹಿಂದಾಣ ಅಡ್ಡಸೀಟಿಲಿ ಕೈಲಂಕಜೆ ಅತ್ತಿಗೆಯೂ, ಕುಂಞಿ ಮಗಂದೇ.
ಹಿಂದಾಣ ಇನ್ನೊಂದರ್ಲಿ – ಒಪ್ಪಣ್ಣಂದೇ; ಬಟ್ಯಂದೇ.
ಶ್ಶೆಲ – ಬಟ್ಯ ಬಂತೋ – ಇಲ್ಲೆ! ಅದು ಓ ಅಲ್ಲಿ – ಬೈಲಕರೆ ಒರೆಂಗೆ ಅಟ್ಟೇ; ನೆಡವಲೆ ಉದಾಸ್ನ ಅಪ್ಪದಕ್ಕೆ ಜೀಪಿಲಿ ಜಾಗೆ ಇದ್ದೂದು ಸೇರಿಗೊಂಡದು. ಮಾರ್ಗದ ಕರೆ ಎತ್ತಿಅಪ್ಪದ್ದೇ ಅದು ಇಳುದತ್ತು.
ಮತ್ತೆ ಒಪ್ಪಣ್ಣ ಮಾಂತ್ರವೋ? ನಮ್ಮ ಗಾಯತ್ರಿಗೆ ಹಿಂದಾಣ ಕಾಲಿ ಸೀಟಿಂಗೆ ಕಣ್ಣುಬಿದ್ದು, ಅದರ ಭಾವಂದ್ರ ಕಟ್ಟಿಗೊಂಡು ಬಂದದರ್ಲಿ – ನಾವು ಅಲ್ಲಿಂದ ಎದ್ದು ಡ್ರೈವರಂದಲೇ ಹಿಂದಾಣ ಸೀಟಿಂಗೆ ಹೋಯೆಕ್ಕಾಗಿ ಬಂತು.
~

ಆಚಮನೆ ದೊಡ್ಡಪ್ಪಂಗೆ ಡ್ರೈವರು ಎಂಕಪ್ಪಣ್ಣನ ಮದಲಿಂದಲೇ ಗೊಂತಿದ್ದೋ – ಜೋರು ಮಾತುಕತೆ ಆಗಿಂಡಿತ್ತು.
ಗೇರುಬೀಜದ ಗುಡ್ಡೆಲಿ ಗೇರುಹಾಕುವಗ – ಹಳೇ ವಿಶಯಂಗೊ ಎಲ್ಲವುದೇ ಬಂತು – ಮದಲಿಂಗೆ ಇದ್ದ ಕುಟ್ಟಿಗೇರಿನ ಜೀಪುಗೊ, ಲೆಫ್ಟು ಹೇಂಡ್ರು ಡ್ರೈವಿನ ಗಾಡಿಗೊ – ಮಸಿ ಬಸ್ಸುಗೊ – ಶಂಕರವಿಠಲು ಬಸ್ಸುಗೊ – ಎಲ್ಲವೂ.
ಮಾಷ್ಟ್ರುಮಾವಂದೇ ಸೇರಿದ ಕಾರಣ – ದೊಡ್ಡಪ್ಪನ ಸಾಮಾಜಿಕ ವಿಶ್ಲೇಷಣೆಗೊಕ್ಕೆ ಮಾಷ್ಟ್ರುಮಾವನ ವೈಜ್ಞಾನಿಕ ವಿಶ್ಲೇಷಣೆಗಳೂ ಸೇರಿ, ಗವುಜಿ ಆಗಿಂಡಿದ್ದತ್ತು.
ಎಂಕಪ್ಪ ಬರೇ ಬಡ್ಡ, ಮದಲಿಂದಲೇ ಹಾಂಗೇ; ಅದಕ್ಕೇನೂ ದೊಡ್ಡ ಅರ್ತ ಆಗಿರ. ಆದರೆ ಹಿಂದೆ ಕೂದ ಗಟ್ಟಿಗರು ಕೆಲವು ಜೆನ ಇದ್ದ ಕಾರಣ ಒಳ್ಳೆ ರೈಸಿತ್ತು.
~
ಇದರೊಟ್ಟಿಂಗೇ – ಇನ್ನೊಂದುವಾರಲ್ಲೇ ವಿಷು ಇದ್ದ ಕಾರಣ ವಿಷುವಿನ ಬಗ್ಗೆಯೂ ಸಂಗತಿಗಳೂ ಬಂತು.
ಬರೇ ವಿಷು ಹೇದರೆ ಸೌರಶೆಂಕ್ರಾಂತಿ ಹೇದು ಮಾಂತ್ರ ಅಲ್ಲ; ಕೆಲವು ವಿಶೇಷ ಸಂಗತಿಗಳೂ ಬಂತು.
ವಿಷುವಿಂಗೆ ಹೊಂದಿಗೊಂಡ ವಿಶೇಷ ಸಂಗತಿಗೊ ಕೆಲವು ಒಪ್ಪಣ್ಣಂಗೆ ನೆಂಪಿತ್ತಿಲ್ಲೆ; ನಿಂಗೊಗೆ ಅರಡಿಗೊ?
ಅಲ್ಲಿ ಕೇಳಿದ್ಸರ,ಅದರ್ಲಿ ನೆಂಪೊಳುದ ಕೆಲವರ ಮಾತಾಡಿಗೊಂಬ° ಈ ವಾರಕ್ಕೆ.

~

ಒಯಿಜಯಂತಿ ಪಂಚಾಂಗ ಆರಂಭ ಅಪ್ಪದು ಚಾಂದ್ರ ಯುಗಾದಿಂದ ಆದರೂ, ಒರಿಶಾರಂಭ ಲೆಕ್ಕ ಸೌರಯುಗಾದಿಂದಲೇ.
ಆಕಾಶವೂ ಶುಭ್ರವಾಗಿದ್ದೊಂಡು, ಸೂರ್ಯನ ಚಲನೆಯ ಸ್ಪಷ್ಟವಾಗಿ ಕಾಂಬಲೆಡಿತ್ತು ಹೇಳ್ತ ಉದ್ದೇಶಂದಲೋ ಏನೋ – ಪಂಚಾಂಗ ಗಣನಾರಂಭಕ್ಕೂ ಇದೇ ಬೇಸಗೆ ಸಮೆಯವನ್ನೇ ಮಡಿಕ್ಕೊಂಡಿದವು.
ಆರ್ಯಭಟ್ಟನಿಂದ ಜೋಯಿಶಪ್ಪಚ್ಚಿ ವೆಂಕಟ್ರಮಣ ಭಟ್ರ ಒರೆಂಗೂ ಇದನ್ನೇ ಹೊಸಒರಿಶ ಆಗಿ ತೆಕ್ಕೊಳ್ತವು.
~

ವಿಷು ಶೆಂಕ್ರಾಂತಿ ಹೇದರೆ ಮೇಷರಾಶಿಗೆ ಸೂರ್ಯ ಕಾಲುಮಡಗುತ್ತಾ ಇದ್ದನಷ್ಟೇ.
ಅದರ ಮರದಿನಂದ ಬಪ್ಪ ಹೊಸ ಒರಿಶವ “ಸುವಸ್ತುಗಳ ನೋಡಿಂಡು” ಆರಂಭ ಮಾಡೇಕು ಹೇದು ಹೇಳಿಕೆ.
ಅಲಫಲಂಗೊ, ಹಣ್ಣು ಹಂಪಲುಗೊ, ಕಣ್ಣಾಟಿಕುಂಕುಮಂಗಳ ಮಡಗಿದ ’ಕಣಿ’ ಹೇದರೆ ಅದುವೇ ಅಲ್ಲದೋ?!
ಅದಕ್ಕೆ ಕಣಿನೋಡಿಗೊಂಡು ಒರಿಶಾರಂಭ ಮಾಡುಸ್ಸು.

~

ಶಂಬಜ್ಜನ ಕಾಲಲ್ಲಿ ತರವಾಡುಮನೆಲಿ ವಿಷುಕಣಿ ಮಡಗುವಗ ಸುತ್ತುಮುತ್ತಲಿನ ಮದಲಾಣ ಒಕ್ಕಲುಗೊ ಎಲ್ಲೋರುದೇ ಬಕ್ಕು; ಬಂದೇಬಕ್ಕು. ಇದು ದಬ್ಬಾಳಿಕೆಂದಾಗಿ ಬಪ್ಪದಲ್ಲ; ಪ್ರೀತಿಂದಾಗಿ ಬಪ್ಪದು. ಬಪ್ಪಗ ಬರಿಕೈಲಿ ಬಾರವು – “ಬುಳೆಕಾಣಿಕೆ” ಹಿಡ್ಕೊಂಡು ಬಕ್ಕು. ಆ ಒರಿಶದ ನೆಟ್ಟಿಕಾಯಿ ಆದ್ಸರ ಎಂತಾರು ಗೆನಾದ್ದರ– ಒಂದು ಕೆಂಬುಡೆಯೋ, ಕುಂಬ್ಳವೋ, ಹತ್ತೈವತ್ತು ತೊಂಡೆಯೋ – ಎಂತಾರು – ತಂದು ವಿಷುಕಣಿಯ ಎದುರೆ ಹರಾಗಿ ಮಡಗಿ ನೀಟಂಪ ಅಡ್ಡಬೀಳುಗು.

ತುಂಬಿದ ಕೈಲಿ ಬಂದ ಆಳುಗಳ – ಇತ್ಲಾಗಿಂದ ಶಂಬಜ್ಜಂದೇ ಕಾಲಿಕೈಲಿ ಕಳುಸವು; ಒಂದೊಂದು ಒಸ್ತ್ರವೋ ಎಂತಾರು ಕೊಟ್ಟು ಕೈತುಂಬ ದಾನಮಾಡಿ ಸಂತೋಷ ಮಾಡುಗು; ಎಲ್ಲೋರಿಂಗೂ.
ಪಾತಿಅತ್ತೆ ಮಾಡಿದ ಸೇಮಗೆ ಕಾಯಾಲು ರಸಾಯನವೋ, ಇಡ್ಳಿ ರಸಾಯನವೋ – ಬಳುಸಿದ್ದರ ಸಮಾ ಹೊಡದಿಕ್ಕಿ, ಕೊಶೀಲಿ ಮನಗೆ ಹೋಕು ಒಕ್ಕಲುಗಳ ಸಂಸಾರ.

ದಣಿ-ಕೆಲಸಗಾರರ ಸಮ್ಮಂದ ಕೇವಲ ವ್ಯಾವಹಾರಿಕ ಅಲ್ಲದ್ದೆ, ಆ ಗವುಜಿ ದಿನದ ಆತ್ಮೀಯತೆಯ ಎಷ್ಟು ಅನುಭವಿಸಿರೂ ಸಾಲ.
ಈಗಾಣ ಕಮ್ಮಿನಿಷ್ಟೆಯ ಕೊಡಿ ಬಂದ ಮೇಗೆ ಇದೆಲ್ಲ ಕಾಂಬಲೇ ಇಲ್ಲೆಪ್ಪೋ!
~

ಊರೊಳ ಒಯಿವಾಟುಗೊ ಹಲವಿಪ್ಪಗ ಸಾಲ, ಕಡಕಟ್ಟು, ಪೈಸೆ ವ್ಯವಹಾರ – ಇದೆಲ್ಲವೂ ಇಪ್ಪದೇ.
ಈಗಾಣ ಬೇಲೆನ್ಸು ಮಾಡ್ತೋರು ಮಾರ್ಚಿಂಗೆ ಇಯರೆಂಡು ಹೇಳಿದ ಹಾಂಗೆ – ಅಜ್ಜಂದ್ರಿಂಗೆ ವಿಷುವೇ ಲೆಕ್ಕ ಅಡ.
ಒರಿಶದ ದಿನಂಗಳಲ್ಲಿ ಕೊಂಡೋದ ಸಾಲವಾಪಸಾತಿಗೆ ವಿಷುವೇ ಒಂದು ಮೂರ್ತ.
‘ವಿಷುವಿಂಗೆ ಒಪಾಸು ಕೊಡ್ತೆ’ ಹೇದು ಬಾಯಿಮಾತುಗೊ ನೆಡಕ್ಕೊಂಡಿದ್ದತ್ತಡ. ವಿಷುವಿಂದ ವಿಷುವಿಂಗೆ ಬಡ್ಡಿಲೆಕ್ಕ ಹಿಡ್ಕೊಂಡಿದ್ದದು.
ಪೈಶೆ ಕೊಟ್ಟು ನಾಕು ವಿಷು ಕಳಾತು; ಇನ್ನೂ ಒಪಾಸು ಮಾಡಿದ್ದನಿಲ್ಲೆ-  ಹೇದು ಪರಂಚುಗು ಕೆಲವು ಜೆನ.
ಎಲ್ಲವೂ ವಿಷುವಿಂಗೇ ಲೆಕ್ಕ!!

~

ಪಂಚಾಂಗ ಹೇಳಿದ್ದರ ಜೋಯಿಶಪ್ಪಚ್ಚಿ ನಂಬುಗು; ಜೋಯಿಶಪ್ಪಚ್ಚಿ ಹೇಳಿದ್ದರ ಸಮಾಜವೇ ನಂಬುಗು.
ಪಂಚಾಂಗವೇ ಇಂತಾದಿನ ಒಳ್ಳೆದು –ಹೇಳಿರೆ ಮತ್ತೆ ಎಲ್ಲೋರಿಂಗೂ ಆತಿಲ್ಲೆಯೋ?!
ನಮ್ಮೂರಿನ ಕೃಷಿಗೂ ಅದೇ ಅನ್ವಯ. ಹೊಸ ಒರಿಶದ ಕೃಷಿಕಾರ್ಯಾರಂಭವ ಮಾಡ್ಳೆ ಆ ದಿನವೇ ಸುಮುಹೂರ್ತ.
ವಿಷುವಿನ ದಿನವೇ ಹೂಡ್ಳೆ ಒಳ್ಳೆದಿನ ಹೇದು ಲೆಕ್ಕ.
~

ಮದಲಿಂಗೆ ಗೆದ್ದೆ ಧಾರಾಳ ಇಕ್ಕು.
ಒಂದು ಗೆದ್ದೆಗೆ ಒಂದೊರಿಶಲ್ಲಿ ಹಲವು ಬೆಳೆಗೊ ಇದ್ದು. ಸುರೂವಾಣ ಬೆಳೆಗೆ ಏಣಿಲು, ಮತ್ತಾಣ ಬೆಳೆಗೆ ಸುಗ್ಗಿ, ಅಕೇರಿಯಾಣ ಬೆಳೆಗೆ ಕೊಳಕ್ಕೆ- ಹೇಳುದು ಮದಲಿಂಗೆ. ಈಗ ಅದೆಲ್ಲ ಕಾಂಬಲೇ ಅಪುರೂಪ, ಅದಿರಳಿ.
ಅಂತೂ – ಈ ಬೆಳೆಗಳ ಆರಂಭವುದೇ ವಿಷುವಿಂದಲೇ ಲೆಕ್ಕ.
~
ಮನಗೆ ಬಪ್ಪ ಆಳುಗಳ ಪೈಕಿ ಒಂದು ರಜ ಹತ್ತರಾಣದ್ದು – ಇರ್ತಿದಾ – ಆ ಜೆನರ ಹತ್ತರೆ ವಿಷುವಿನ ದಿನದ ’ಮೂರ್ತದ ಹೂಟೆಗೆ’ ತೆಯಾರು ಮಾಡ್ಳೆ ಹೇಳುಗು. ತರವಾಡುಮನೆಲಿ ಮದಲಿಂಗೆ ಬಟ್ಯಂಗೇ ಆ ಜೆವಾಬ್ದಾರಿ.
ಬಟ್ಯ ವಿಷುಕಣಿ ನೋಡಿಕ್ಕಿ, ಉದಿಯಪ್ಪಗಾಣ ತಿಂಡಿ ಎಲ್ಲ ಆದ ಮತ್ತೆ ಹೂಡ್ಳೆ ಮೂರ್ತ ಮಾಡುಗು.
ಹೇಂಗೆ?
ಹಟ್ಟಿಯ ಹೋರಿಗಳಲ್ಲಿ ಗೆನಾ ಹೋರಿ ಎರಡರ ಹೆರ್ಕಿ, ಕೆಳಾಣಗೆದ್ದೆಗೆ ತಂದು ನೊಗಮಾಡುಗು.
ಬೆಶಿಬೇಸಗೆಯ ಬೆಶಿಲಿಂಗೆ ಒಣಗಿದ ಆ ರಣಗಟ್ಟಿಯ ಮಣ್ಣಿನ ಗೆದ್ದೆಲಿ ಆ ಹೋರಿಗಳ – ಇಡೀ ಗೆದ್ದಗೆ ಒಂದು ಸುತ್ತು ಬಂದರೆ “ಒಂದು ಸಾಲು” ಹೇದು ಲೆಕ್ಕ – ಹೀಂಗಿಪ್ಪ ಐದು ಸಾಲು ತಿರುಗುಸುಗು.
ಅದಾದ ಮತ್ತೆ ಹೋರಿಗಳ ಬಿಡುಸಿ, ಹೂಡಿದ ಗೆದ್ದಗೆ ರಜ ಹಸಿ – ಸೊಪ್ಪು ಎಲ್ಲ ಹಾಕಿರೆ ಮೂರ್ತ ಮಾಡ್ತ ಕ್ರಮ ಮುಗಾತು.
ವಿಷುವಿನ ದಿನ ಹೂಡಿರೆ ಮತ್ತೆ ಆ ಒರಿಶದ ಇಡೀ ಕೃಷಿಗೆ – ಏಣಿಲು, ಸುಗ್ಗಿ, ಕೊಳಕ್ಕೆ – ಇದರ ಯೇವದೇ ಕಾರ್ಯಂಗೊಕ್ಕೆ ಮೂರ್ತ ನೋಡೇಕು ಹೇದು ಇಲ್ಲೆ.

ಇಂದು ಹೂಡಿರೆ ಮತ್ತೆ ಪಗ್ಗುಪದ್ನೆಣ್ಮಕ್ಕೆ ನೇಜಿ ಬಿತ್ತುದಿದಾ; ಅದಿರಳಿ.
ಆ ದಿನ ಹೂಡಿದೋನು ಆ ಒರಿಶದ ಬೇಸಾಯಕ್ಕೆ “ಯೆಜಮಾನ” ಹೇದು ಲೆಕ್ಕ!
ಮತ್ತಾಣ ಎಲ್ಲಾ ಬೇಸಾಯದ ಒಯಿವಾಟುಗಳೂ ಆ ಜೆನರ ಉಸ್ತುವಾರಿಲಿ ನೆಡೆತ್ಸು.
ಒಂದು ದೊಡ್ಡ ಮನೆತನದ ಕೃಷಿಯ ಉಸ್ತುವಾರಿಯ ಒಂದು ಆಳಿಂಗೆ ಕೊಡೆಕಾರೆ – ಎಷ್ಟು ನಂಬಿಕೆಯ ವಿಷಯ ಅಪ್ಪೋ ಇದು!
ಕೆಂಗಣ್ಣಿನ ಕೆಂಪಣ್ಣಂಗೊಕ್ಕೆ ಇದೆಲ್ಲಿ ಅರ್ತ ಅಕ್ಕು! ಒಪ್ಪಣ್ಣ ರಾಜಕೀಯದ ಶುದ್ದಿ ತೆಗದರೆ ಸರ್ಪಮಲೆಮಾವಂಗೆ ಸಮದಾನ ಆಗ!
ಅದಿರಳಿ.
~

ಇದರೆಡಕ್ಕಿಲಿ ಇನ್ನೊಂದು ವಿಷಯ ಇದ್ದು – ನಮ್ಮ ಪುತ್ತೂರಿನ ಮಾಲಿಂಗೇಶ್ವರಂಗೆ ಧ್ವಜಏರುಸಿ ಅಧಿಕೃತವಾಗಿ ಗವುಜಿ ಸುರುಮಾಡ್ತದು ಇದೇ ವಿಷುವಿನ ದಿನ ಅಲ್ದೋ? ವಿಷುವಿನ ದಿನ ಹಲವು ಊರುಗಳಲ್ಲಿ ಜಾತ್ರೆ ಗವುಜಿ ಸುರು ಆವುತ್ತು.
ಜಾತ್ರೆ ಇದ್ದರೂ, ಇಲ್ಲದ್ದರೂ – ತುಳುನಾಡಿನ ಎಲ್ಲ ದೇವಸ್ಥಾನಂಗಳಲ್ಲಿ, ಬೂತಸ್ಥಾನಂಗಳಲ್ಲಿಯೂ ವಿಷುಕಣಿ ಮಡಗುತ್ತ ಮರಿಯಾದಿ ಇದ್ದು.
ಊರವೆಲ್ಲ ಸೇರಿ ಕಣಿನೋಡ್ಳೂ ಇದ್ದು.

ದೊಡ್ಡಪ್ಪ° ಇನ್ನೂ ಹೇಳಿಗೊಂಡೇ ಇತ್ತಿದ್ದವು.
ಈ ಮಾರ್ಗದ ಕಣಿಗಳ ಹಾರ್ಸೆಂಡು ವಾಹನ ಹೋಪಗ ಕೆಲವೆಲ್ಲ ಕೇಳಿದ್ದೂ ಇಲ್ಲೆ, ಕೇಳಿದ್ದದೂ ತಲಗಿಳುದ್ದೂ ಇಲ್ಲೆ, ಅಲ್ಲೇ ಮೇಲೆ ಹಾರಿತ್ತು! 🙁
~

ಒರಿಶಾರಂಭ ಹೇಂಗೆ ಮಾಡೇಕು?
ಮುನ್ನಾದಿನ ಇಡೀ ಕೂದುಗೊಂಡು ಕಂಠಮಟ್ಟ ಕುಡುದು, ಕಾರಿ-ತೂರಿ ಆಚರಣೆ ಮಾಡ್ತ ಜೆನವರಿ ಒಂದಕ್ಕೂ; ಹಸುರು- ಫಲ, ಸುವಸ್ತು, ಮಂಗಳಮಯ ಸನ್ನಿವೇಶಂಗೊ – ಎಲ್ಲವನ್ನೂ ನೋಡಿಂಡು ಆಚರಣೆ ಮಾಡ್ತ ವಿಷುವಿಂಗೂ ಎಂತಾ ವಿತ್ಯಾಸ!

ಕೋಳಿಕ್ಕಜೆ ಮಾಣಿಯ ಉಪ್ನಾನ ಚೆಂದಲ್ಲೇ ಕಳುದತ್ತು. ಈ ರಜೆಲಿ ಮಾಣಿ ಮಂತ್ರ ಕಲಿಯಲೆ ಹೋಪದಡ.
ವಿಷುಕಣಿಯ ದಿನವೇ ಮಂತ್ರಪಾಠ ಸುರು ಅಪ್ಪದಡ.
ಮಾಣಿಗೆ ಒಳ್ಳೆದಾಗಲಿ.

ಒಂದೊಪ್ಪ: ವಿಷುವಿನ ದಿನ ಕಣಿ ನೋಡಿಗೊಂಡ್ರೆ ಒಳುದ ದಿನಂಗಳಲ್ಲಿ ಗಂಡಿಗಳನ್ನೇ ತಪ್ಪುಸಲೆಡಿಗು!

12 thoughts on “ವಿಷುವಿನ ವಾಶಿ ವಿಶೇಷ ವಿಶಯಂಗೊ…

  1. ಯಾವತ್ತಿನಂತೆ ವಿಷುವಿನ ಶುಧ್ಧಿದೆ ತುಂಬಾ ಲಾಯಿಕ ಆಯಿದು.
    ಎಲ್ಲೋರಿಂಗೂ ವಿಷುವಿನ ಹಾರ್ದಿಕ ಶುಭಾಶಯಂಗೋ.
    ~ಸುಮನಕ್ಕ…

  2. ಕೃಷಿ ಕುಟುಂಬಕ್ಕೆ ಅತ್ಯಂತ ವಿಶೇಷವಾದ ವಿಷು ಹಬ್ಬದ ದಿನ ಒಂದು ಕೃಷಿ ಕುಟುಂಬದ ಜೊತೆ ಕಳದೆ… ಸುಖವ ಹಂಚಿಗೊಂಡರೆ ಜಾಸ್ತಿ ಆವುತ್ತು,ದುಃಖವ ಹಂಚಿಗೊಂಡರೆ ಕಮ್ಮಿ ಆವುತ್ತು ಹೇಳಿ ಹಿರಿಯೋರು ಹೇಳುಗು… ಆ ದಿನದ ಸುಖ ದುಃಖವ ಬೈಲಿನೆಲ್ಲರ ಜೊತೆ ಹಂಚಿಗೊಳ್ಳುತ್ತೆ…

    ಉದಯಕಾಲಕ್ಕೆ ಬೇಗ ಎದ್ದು ಆ ಮನೆಯ ಅಮ್ಮ ಅಲಫಲಂಗಳ,ಅಭರಣ೦ಗಳ, ಕನ್ನಾಟಿ- ಕುಂಕುಮ ಮೊದಲಾದ ಮಂಗಳ ದ್ರವ್ಯಂಗಳ ಎಲ್ಲ ಒಪ್ಪಕೆ ದೇವರ ಹತ್ತರೆ ಜೋಡುಸಿ ಮಡುಗಿ, ದೇವರ ದೀಪ ಹೊತ್ತುಸಿ ಮಡುಗಿ ಚೆಂದಕೆ ವಿಷು ಕಣಿ ಮಡಿಗಿತ್ತಿದ್ದವು. ಎಲ್ಲೋರುದೆ ವಿಷು ಕಣಿ ನೋಡಿ, ದೇವರ ಪ್ರಾರ್ಥಿಸಿ, ಕಿರಿಯರು ಹಿರಿಯ ಆಶೀರ್ವಾದ ಬೇಡಿ ಅತ್ಯಂತ ಕ್ರಮಲ್ಲಿ ಇತ್ತಿದ್ದವು. ಮಧ್ಯಾಹ್ನಕ್ಕೆ ಪಾಯಸದೂಟ ಎಲ್ಲ ಸೇರಿ ವಿಷುವಿನ ತೋರಿಕೆಗೆ ಅತ್ಯಂತ ಸಂಭ್ರಮಲ್ಲಿ ಆಚರಿಸಿದವು…

    ಆದರೂ ಅಲ್ಲಿನ ಪರಿಸ್ಥಿತಿ ಮತ್ತು ಸಂಭಾಷಣೆಗಳಿಂದ ಅವರ ಆಂತರ್ಯದ ದುಃಖವ ಅರ್ಥ ಮಾಡಿಗೊಂಡೆ.

    ಅಲ್ಲಿ ನೀರಿಂಗೆ ಒತ್ತಾಯ… ತೋಟ ಒಳಿಶಿಗೊಮ್ಬಲೆ ಹೋರಾಡುತ್ತಾ ಇದ್ದವು… ಸುತ್ತ ಮುತ್ತ ಎಲ್ಲ ರಬ್ಬರ್ ಹಾಕಿದ ಕಾರಣ ಅಷ್ಟುದೆ ನೀರಿಂಗೆ ಒತ್ತಾಯ ಅಪ್ಪಲೇ ಕಾರಣ ಅಡ…

    ಸಾಧಾರಣ ೬೦ ವರ್ಷ ಕಳಿಗು ಆ ಅಮ್ಮಂಗೆ… ವಸ್ತ್ರ ತೊಳದಿಕ್ಕಿ ಚೆಲ್ಲುವ ನೀರನ್ನು ಕೂಡಾ ಒಂದು ಬಿಂದು ಹಾಳು ಆಗದ್ದ ಹಾಂಗೆ ಜಾಲಿನ ಇನ್ನೊಂದು ಕರೆಲಿ ಇಪ್ಪ ಹೂಗಿನ ಸೆಸಿಗೊಕ್ಕೆ ಹಾಕುವ ಆ ಅಮ್ಮನ ಪ್ರಕೃತಿ ಪ್ರೇಮವ ನೋಡಿರೆ ಆರಿಂಗಾರೂ ಕಣ್ಣೀರು ಬಕ್ಕು… ಪೇಟೆಲ್ಲಿಪ್ಪ ಮಕ್ಕೋ ಹೇಳುತ್ತವಡ… “ಅಮ್ಮ ಎಂತಕೆ ಹೀಂಗೆ ಕಷ್ಟ ಬತ್ತೆ… ಪೇಟೆಲ್ಲಿ ಆರಾಮಲ್ಲಿ ಇಪ್ಪಲಕ್ಕನ್ನೇ…”. ಅಮ್ಮನ ಆಂತರ್ಯವ ಅರ್ಥ ಮಾಡಿಗೊಲ್ಲೆಕ್ಕಾರೆ ಅಮ್ಮನೇ ಆಯೆಕ್ಕಷ್ಟೇ… “ಆ ಅಮ್ಮ ಶರೀರಕ್ಕೆ ವಿಶ್ರಾಂತಿ ಬಯಸಿದ್ದರೆ ಎಂತಕೆ ಅಷ್ಟು ಕಷ್ಟಲ್ಲಿ ಹೂಗಿನ ಸೇಸಿಗೊಕ್ಕೆ ನೀರು ಹಾಕುಗು… ಆ ಅಮ್ಮನ ಆಂತರ್ಯ ತುಡಿತ್ತಾ ಇದ್ದು ನಳ ನಳಿಸುವ ಪ್ರಕೃತಿಯ ನೋಡುಲೆ… “. ಆ ಅಮ್ಮಂಗೆ ಪೇಟೆಗೆ ಹೋದರು ಮನಸ್ಸಿಲ್ಲಿ ಊರಿಂದೆ ನೆನಪು…

    ಈ ಜಾಗೆಯ ಮಾರಿ ಬೇರೆ ಒಳ್ಳೆ ನೀರಿಪ್ಪ ಜಾಗೆಯ ಮಾಡುವ ಹೇಳಿರೆ ಎಲ್ಲ ಕಡೆ ರಬ್ಬರ್ ಹಾಕಿ, ರಬ್ಬರ್ ಇಪ್ಪ ಜಾಗೆಗೊಕ್ಕೆ ಕಂಡಾಬಟ್ಟೆ ಕ್ರಯ ಅಡ. ಇನ್ನೆಂತ ಮಾಡುದು… ಗುಂಪಿನಲ್ಲಿ ಗೋವಿಂದ ಹೇಳಿ ನಾವುದೇ ರಬ್ಬರ್ ಹಾಕುವ ಹೇಳಿ ಆಲೋಚನೆ ಮಾಡುತ್ತಾ ಇದ್ದವಡ.

    ರಬ್ಬರ್ ಹಾಕಿರೆ ಸಮಸ್ಯೆ ಎಂತರ ಹೇಳಿರೆ…
    ೧. ಭೂಮಿ ನಿರ್ಜಲೀಕರಣ ಆವುತ್ತು.
    ೨. ರಬ್ಬರ್ ಸೆಸಿ ತಿಂದ ದನ ಸಾಯ್ತ ಕಾರಣ ಗುಡ್ಡೆಗೆ ಬಿಟ್ಟು ದನ ಸಾಂಕುಲೇ ಎಡಿತ್ತಿಲ್ಲೆ.
    ೩. ರಬ್ಬರ್ ಸೆಸಿಗೆ ಅದರದ್ದೇ ಆದ ರಾಸಾಯನಿಕ ಗೊಬ್ಬರ ಹಾಕೆಕ್ಕಾದ ಕಾರಣ ಭೂಮಿಯ ಫಲವತ್ತತೆ ಹಾಳಾವುತ್ತು.
    ೪. ರಬ್ಬರ್ ಬೆಳೆಸಿದ ಜಾಗೆಲ್ಲಿ ಬೇರೆ ಯಾವುದೇ ಸೆಸಿ ಬೆಳೆತ್ತಿಲ್ಲೆ.

    ಎಲ್ಲದಕ್ಕಿಂತ ಮುಖ್ಯವಾಗಿ ಜಾಗೆ ಮಾರಿ ಇನ್ನೊಂದು ಜಾಗೆ ಮಾಡುವ ಅಂದಾಜು ಇದ್ದರೆ ರಬ್ಬರ್ ಹಾಕುದಕ್ಕೆ ಯಾವುದೇ ಅರ್ಥ ಇಲ್ಲೇ. ಎಂತಕೆ ಹೇಳಿರೆ ಎಲ್ಲೋರುದೆ ರಬ್ಬರ್ ಹಾಕುತ್ತಾ ಇಪ್ಪ ಕಾರಣ ಎಲ್ಲ ಜಾಗೆಗಕ್ಕೂ ಒಂದೇ ತರಲ್ಲಿ ಕ್ರಯ ಏರುತ್ತಾ ಹೋವುತ್ತು…

    ಆ ಮನೆಯ ಹಿರಿ ಜೀವಕ್ಕೆ ಆ ಜಾಗೆಯ ಮೇಲೆ ಅದೆಂತದೋ ವ್ಯಕ್ತ ಪಡಿಸಲಾರದ್ದ ಬಾಂಧವ್ಯ. ಬೇರೆ ಯಾವುದೇ ಮನೆಲಿ ಒಂದೆರಡು ದಿನ ನಿಮ್ಬಲೂ ಮನಸ್ಸು ಒಗ್ಗುತ್ತಿಲ್ಲೆ ಅಡ. https://oppanna.com/oppa/jage-mari-paise ಲಿ ಒಪ್ಪಣ್ಣ ವಿವರುಸಿದ್ದ ಅಲ್ಲದ ಹಾಂಗೆ. ಇನ್ನು ಜಾಗೆ ಕೊಟ್ಟರೆ ಆ ಜೀವದ ಪರಿಸ್ಥಿತಿ ಹೇ೦ಗಿಕ್ಕು?

    ಜಾಗೆಯ ಮಡಿಕ್ಕೊಂಡು ಅದನ್ನೇ ಒಳ್ಳೆ ಭೂಮಿಯಾಗಿ ಪರಿವರ್ತಿಸುವುದೊಂದೇ ಸೂಕ್ತ ಮಾರ್ಗ. ತನ್ನ ಸಾನಿಧ್ಯ ಮಾತ್ರಂದಲೇ ಎಲ್ಲ ಸಮಸ್ಯೆಗಳ ಪರಿಹರಿಸುವ ಒಂದು ಶುದ್ದ ಊರ ತಳಿಯ ದನ ಸಾಂಕುವ ಹೇಳಿರೆ ಊರಿಲ್ಲಿ ಎಲ್ಲಿಯೂ ಶುದ್ದ ತಳಿಯ ದನಗಳೇ ಇಲ್ಲೆ ಅಡ. ಇನ್ನು ಇಂಗು ಗುಂಡಿ ಮುಂತಾದವುಗಳ ಮೂಲಕ ಜಲ ಮಟ್ಟವ ಹೆಚ್ಚುಸಿ ಒಳ್ಳೆ ಭೂಮಿಯಾಗಿ ಪರಿವರ್ತಿಸುವ ಮನಸ್ಸು ಬಪ್ಪದು ಎಲ್ಲಿಂದ? “ದನಗಳ ಕಟುಕರ ಕೈಗೆ ಮಾರಾಟ ಮಾಡುದು, ಕಾಡಿನ ಕಡಿವವರ ಕೈಗೆ ಕೊಡುದು ಮನೆ ಹೆಮ್ಮಕ್ಕಳ ಬೇರೆಯವಕ್ಕೆ ಮಾರಾಟ ಮಾಡುದಕ್ಕೆ ಸಮ”. ನಾವು ನಂಬಿದ ಸತ್ಯ ನಮ್ಮ ಕೈ ಬಿಡ ಹೇಳುತ್ತಾ ಇದ್ದವು.

    ಶತ್ರುಗಳ ಕೂಡಾ ನಗುಮುಖಂದಲೇ ಉಪಚರಿಸುವಂತಹ ಸ್ವಭಾವ ಉಳ್ಳ ಆ ಮಾತೆಯ ಉಪಚಾರ ಒಂದರಿ ಸ್ವೀಕರಿಸಿದವಕ್ಕೆ ಅವರ ಜನುಮ ಜನುಮಕ್ಕೆ ಮರೆಯ. ಶತ್ರುಗೊಕ್ಕೆ ಕೂಡ ತನ್ನ ಕೈಲಾದ ಸಹಾಯ ಮಾಡುವ ಸ್ವಭಾವ ಉಳ್ಳ ಆ ಹಿರಿ ಜೀವ. ಬೈಲಿನ ಎಲ್ಲೋರುದೆ ಆ ಎರಡು ಹಿರಿ ಜೀವಂಗೊಕ್ಕೆ ಬೇಕಾಗಿ ಪ್ರಾರ್ಥಿಸುವ… ಎಲ್ಲೋರುದೆ ಅವರವರ ಕೈಲಾದ ಸಹಾಯ ಮಾಡುವ. ಅವಕ್ಕೆ ಇನ್ನಾಣ ವಿಷುವಿನ ನಿಜವಾಗಿಯೂ ಸಂಭ್ರಮಲ್ಲಿ ಆಚರಿಸುಲೇ ಸಹಾಯ ಮಾಡುವ ಪ್ರತಿಯೊಬ್ಬನನ್ನೂ ಅವು ಜನುಮ ಜನುಮಕ್ಕೆ ಮರೆಯವು…

    ಇದು ಆ ಒಂದು ಕೃಷಿ ಕುಟುಂಬದ ಸಮಸ್ಯೆ ಅಲ್ಲ… ಹೆಚ್ಚಿನ ಎಲ್ಲರಿಂಗೂ ಇದೆ ಸಮಸ್ಯೆ… ಚೂರು ವ್ಯತ್ಯಾಸ ಇಕ್ಕು ಅಷ್ಟೇ… ಎಲ್ಲೋರುದೆ ಇದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ ಕ್ರಮ ಕೈಗೊಂಬ…

  3. ಎಂಕಪ್ಪ ಬರೇ ಬಡ್ಡ, ಮದಲಿಂದಲೇ ಹಾಂಗೇ; ಅದಕ್ಕೇನೂ ದೊಡ್ಡ ಅರ್ತ ಆಗಿರ. ಆದರೆ ಹಿಂದೆ ಕೂದ ಗಟ್ಟಿಗರು ಕೆಲವು ಜೆನ ಇದ್ದ ಕಾರಣ ಒಳ್ಳೆ ರೈಸಿತ್ತು. – ಮತ್ತೆ ರೈಸ್ಸದ್ದೆ…?? 😉 😀 😀

  4. The new year celebration is a well defined and an excellent culture in this country( Our life). Any part of the country festivals like, Vishu, Onam, Baisakhi, Bihu etc are all realted to agriculture/ crop pattern of the location. All these festivals are related to either harvesting or starting new crop pattern/season. Our all activities are related to our culture/basic activity(agriculture). Our culture does not encourage drinking (alcohol) or similar activities. Western culture a gift from British rulers tried to change our system by celebrating Jan first with New Year which is totally irrevelant for us. Any how to retain and continue our system let all of us celebrate VISHU as new year with blessings from our elders and well wishers.Vishu is a new year for all in coastal people in South ( Kerala ,Dakshina Kannada (may be because we have influence of Kerala and Madras state/) but Andhra , Maharashtra and Karnataka it is Ugadi, It is New year for Punjabis, North East, and eastern states.

    May god bless us all.

  5. ಹೊಸ ವರ್ಷ ಸ್ವಾಗತ ಮಾಡುವ, ನಮ್ಮಲ್ಲಿ ಆಚರಣೆ ಇಪ್ಪ ಹಬ್ಬ ವಿಷು.
    ಅದರೊಟ್ಟಿಂಗೆ ನೆಡವ ಮೂರ್ತದ ಹೂಟೆ, ಬೇಸಾಯದ ಯೆಜಮಾನತ್ವ, ಒಕ್ಕಲು ಧಣಿಗಳ ಸಂಬಂಧ ಎಲ್ಲಾ ವಿಶಯಂಗಳ ಸೇರಿಸಿ ಲೇಖನ ಹೆಚ್ಚಿನ ಮಾಹಿತಿ ಕೊಟ್ಟತ್ತು.
    ಹೊಸ ವರ್ಷ ಎಲ್ಲರ ಬಾಳಿಲ್ಲಿ ಹರ್ಷ ತರಲಿ

  6. ವಿಷು ಹಬ್ಬ ಹೇಳಿದರೆ ಐಶ್ವರ್ಯ ಸಮೃದ್ಧಿಯ ಸಂದೇಶದ ಮಂಗಳಕರ ವಾತಾವರಣವ ಸೂಚಿಸುವ ಹಬ್ಬ.ಈ ದಿನ ಬೈಲಿನ ಎಲ್ಲೋರಿಂಗೂ ಶ್ರೀ ಗುರು ದೇವತಾನುಗ್ರಹಂದ ಐಶ್ವರ್ಯ ಸಮೃದ್ಧಿ ಅನುಗ್ರಹವಾಗಲಿ.ಹರೇರಾಮ

  7. ವಿಷುವಿನ ಲೇಖನ ಲಾಯ್ಕಾಯ್ದು ಒಪ್ಪಣ್ಣ..
    ಏಲ್ಲೊರಿಂಗೂ ವಿಷುವಿನ ಶುಭಾಶಯ…

  8. ವಿಷುವಿನ ವಿಶೇಷವಾದ ಹರುಷವ ಹೆಚ್ಚುಸುಲೇ ಒಪ್ಪಣ್ಣನ ‘ಒಂದೊಪ್ಪ’ ಒಪ್ಪಕೆ ಸಹಾಯ ಅಕ್ಕು… ಎಲ್ಲೋರಿಂಗೂ ವಿಷುವಿನ ಶುಭ ಹಾರೈಕೆಗೋ…

  9. “ಮುನ್ನಾದಿನ ಇಡೀ ಕೂದುಗೊಂಡು ಕಂಠಮಟ್ಟ ಕುಡುದು, ಕಾರಿ-ತೂರಿ ಆಚರಣೆ ಮಾಡ್ತ ಜೆನವರಿ ಒಂದಕ್ಕೂ; ಹಸುರು- ಫಲ, ಸುವಸ್ತು, ಮಂಗಳಮಯ ಸನ್ನಿವೇಶಂಗೊ – ಎಲ್ಲವನ್ನೂ ನೋಡಿಂಡು ಆಚರಣೆ ಮಾಡ್ತ ವಿಷುವಿಂಗೂ ಎಂತಾ ವಿತ್ಯಾಸ!”-
    ಖಂಡಿತಾ ಅಪ್ಪು ಒಪ್ಪಣ್ಣ. ನಮ್ಮ ಇಂಥಾ ಶ್ರೀಮಂತ ಸಂಸ್ಕೃತಿಯ ಮುಂದೆ ಆ ಪೊಟ್ಟು ಪಾರ್ಟಿಗ ಎಲ್ಲ ಎಂತದೂ ಅಲ್ಲ. ವ್ಯಾವಹಾರಿಕವಾಗಿ ನಾವು ಪಾಶ್ಚಾತ್ಯ ಕೆಲೆಂಡರು ಅನುಸರಿಸೆಕ್ಕಾದರುದೇ, ನಮ್ಮ ಈ ವಿಶೇಷ ಆಚರಣೆಗಳ ಶ್ರದ್ಧೆಲಿ ಮಾಡುವ. ಎಲ್ಲೊರಿಂಗೂ ಹೊಸ ವರ್ಷದ ಶುಭಾಶಯಂಗೊ.
    ಒಂದೊಪ್ಪ ಪಷ್ಟಾಯಿದು..

  10. ಸೂರ್ಯಮಾವನ ಲೆಕ್ಕಲ್ಲಿ ಬಪ್ಪ ಹೊಸ ವರ್ಷವ ಆರಂಭಲ್ಲಿ ಒಪ್ಪಣ್ಣನ ಮಾತುಗೊ ಕೊಶಿ ಕೊಟ್ಟತ್ತು. ವಿಷುಕಣಿಯ ಸಂಭ್ರಮದ ಹೊಸ ವರುಶದ ಎದುರು, ಜನವರಿ ಒಂದರ “ಹ್ಯಾಪ್ಪೀ ನ್ಯೂ ಇಯರ್” ಖಂಡಿತಾ ಇಲ್ಲೆ.

    ಹೊಸವರ್ಷ ಎಲ್ಲೋರಿಂಗುದೆ ಶುಭವನ್ನೇ ತರಲಿ.

  11. ಚಂದ್ರಮಾವನ ಸೂರ್ಯಮಾವನ ಸೀಕ್ರೆಟ್ಟು, ಬೇಲೆನ್ಸು ಮಾಡ್ತವರ ವೈವಾಟು, ವರುಷಾರಂಭದ ಪೊರಪ್ಪಾಟು- ವಿಷುಕಣಿ ನೋಡಿ ಸೇಮಗೆ ರಸಾಯನ ತಿಂದಷ್ಟೇ ಊಚಾಯ್ದು. ಐದು ಸಾಲು ಹೋರಿಗಳ ಸುತ್ತ ಬರ್ಸಿ, ಹಸಿ ಸೊಪ್ಪು ಹಾಕುತ್ಸು, ಏಣಿಲು, ಸುಗ್ಗಿ, ಕೊಳಕ್ಕೆ, ಪಗ್ಗುಪದ್ನೆಣ್ಮ ಪರಿಚಯ ಆದ್ದೂ ಸಂತೋಷ ಆತು. ಈ ವರಿಷದ ವಿಷು ಎಲ್ಲೋರ ಬಾಳಿನ ವಿಶೇಷಕ್ಕೂ ನಾಂದಿಯಾಗಲಿ ಹೇಳಿ ಶುಭ ಹಾರೈಸುತ್ತು – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×