ವಿಶ್ವಗುರುವಿನ ಯೋಗಗುರು – ಸುಂದರ ಮನಸಿನ ರಾಜ ಗುರು!

ಬೆಟ್ಟುಕಜೆ ಮಾಣಿ ಬೆಂಗುಳೂರಿಲಿ ಯೋಗಾಭ್ಯಾಸದ ಮಾಷ್ಟ್ರು ಆಗಿ ಎಷ್ಟೋ ಜೆನರ ಆರೋಗ್ಯದಾತನಾಗಿ ಇಪ್ಪದು ಬೈಲಿಂಗೇ ಅರಡಿಗು. ಕೊಡೆಯಾಲಲ್ಲಿ ಕಲ್ತು, ಉಶಾರಿ ಆಗಿ – ಯೋಗದ ಆಳ-ಅಂತರಾಳ ತಿಳುದು, ಈಗ ಅದರ ಮೂಲಕ ರೋಗಿಗಳ ರೋಗವ ಗುಣಮಾಡ್ತ ಮಹತ್ಕಾರ್ಯ ಅದು.
ಕೊಡೆಯಾಲಲ್ಲಿ ಕಲ್ತದೆಲ್ಲಿ? ವಿಶ್ವವಿದ್ಯಾಲಯಲ್ಲಿ.
ಈಗ ಕೆಲಸ ಮಾಡ್ತದೆಲ್ಲಿ? ವಿಶ್ವಮಟ್ಟದ ಆಸ್ಪತ್ರೆಲಿ!
ಅಲ್ಲಿಗೆ ಬತ್ತೋರು ಆರೆಲ್ಲ? ವಿಶ್ವದ ಹಲವು ಭಾಗಂದ!
ಹೇದರೆ, ಯೋಗದ ಒಲವು ಈಗ ವಿಶ್ವಮಟ್ಟಲ್ಲಿ ಇದ್ದು – ಹೇದು ಗೊಂತಾವುತ್ತು. ಅಲ್ದೋ?

~

ಹೀಂಗೆ ವಿಶ್ವಮಟ್ಟಕ್ಕೆ ಯೋಗದ ಬಗ್ಗೆ ವಿಶಯಂಗೊ ಎತ್ತುಲೆ ಅದೆಷ್ಟೋ ಜೆನ ಅಜ್ಜಂದ್ರು ಕೆಲಸ ಮಾಡಿದ್ದವು. ಪಶ್ಚಿಮದ ಬೆಳಿಯಂಗೊಕ್ಕೆ, ಪೂರ್ವದ ಕೆಂಪಣ್ಣಂಗೊಕ್ಕೆ, ದಕ್ಷಿಣದ ಕರಿಯಂಗೊಕ್ಕೆ – ಎಲ್ಲೋರಿಂಗೂ ಯೋಗಾಸನದ ಬಗ್ಗೆ ತಿಳಿವಳಿಕೆ ಕೊಟ್ಟು ಅದರ ಮಹತ್ತ್ವವ ಸಾರುವ ಕೆಲಸ ಮಾಡಿದ ಹಲವು ಜೆನಂಗಳಲ್ಲಿ ಅಯ್ಯಂಗಾರಿಅಜ್ಜಂದೇ ಒಬ್ಬರು.

ಇಂದು ಬೆಟ್ಟುಕಜೆ ಮಾಣಿ ಕೊಡೆಯಾಲಲ್ಲಿ ಸಿಕ್ಕಿಪ್ಪಗ ಹೇಳಿದ – ಆ ಅಯ್ಯಂಗಾರಿ ಅಜ್ಜ ನಿನ್ನೆ ಉದೆಕಾಲಕ್ಕೆ ತೀರಿಗೊಂಡವಾಡ – ಹೇದು.
ಆ ಅಜ್ಜ ಬೆಟ್ಟುಕಜೆ ಮಾಣಿಗೆ ನೆಂಟ್ರೆಂತೂ ಅಲ್ಲ, ಆದರೂ ಅವು ತೀರಿ ಹೋದ್ಸಕ್ಕೆ ಅಪಾರ ಬೇನೆ ಬೇಜಾರ ಬೆಟ್ಟುಕಜೆಮಾಣಿಗೆ ಇದ್ದತ್ತು. ಕಾರಣ – ಆ ಅಜ್ಜ ಯೋಗದ ಪ್ರಸಾರಕ್ಕೆ ಮಾಡಿದ ಮಹತ್ಕಾರ್ಯ.

~

ಒಪ್ಪಣ್ಣ ಸಣ್ಣ ಇಪ್ಪಾಗಳೇ “ಅಯ್ಯಂಗಾರ್ ಯೋಗ” ಹೇಳ್ತ ಎರಡು ಪುಸ್ತಕ ತಂದುಮಡಗಿತ್ತಿದ್ದ ಅಣ್ಣ.
ಅರುಶಿನ ನಮುನೆ ಬಣ್ಣದ ಬೈಂಡು, ಅದರ್ಲಿ – ಜೆನಿವಾರವ ಮಾಲೆ ಮಾಡಿ ಕೊರಳಿಂಗೆ ಹಾಕಿಂಡು, ಲಂಗೋಟಿಯ ವಸ್ತ್ರಲ್ಲಿ ಪದ್ಮಾಸನ ಹಾಕಿ ಕೈಮುಗುದ ಅಜ್ಜ. ಯೋಗ ಮುದ್ರೆಯ ಗಂಭೀರ ಮೋರೆಯ ತೇಜಸ್ಸು.
ಉದ್ದ ತಲೆಕಸವು, ಅದಕ್ಕೆ ಅನುರೂಪವಾದ ಉದ್ದದ ಕಣ್ಣ ಹುಬ್ಬು, ಅಷ್ಟೇ ಉದ್ದದ ಕೆಂಪು ನಾಮ!
ಅಂತೆ ಅಲ್ಲ, ಉದ್ದದ ಬೆಟ್ಟುಕಜೆಮಾಣಿಗೆ ಅವರ ಇಷ್ಟ ಆದ್ಸು! 😉

ಇರಳಿ; ಆ ಪುಸ್ತಕದ ಒಳ ಎಂತರ ಇದ್ದತ್ತು ಹೇದು ನವಗರಡಿಯ; ಅದು ಇಂಗ್ಳೀಶಿಲಿ ಇದ್ದದು ಇದಾ!

ಇಂದು ಬೆಟ್ಟುಕಜೆ ಮಾಣಿ ಹೇಳುವಾಗಳೇ ಒಪ್ಪಣ್ಣಂಗೆ ಅನುಸಿದ್ದು, ಆ ಪುಸ್ತಕ ಓದೇಕಾತು – ಹೇದು. ಬೆಟ್ಟುಕಜೆಮಾಣಿ ಮಾತಾಡುವಗ ಎಂತೆಲ್ಲ ಹೇಳಿದ ಹಾಂಗಾರೆ?
ಮಾತಾಡುವೊ.
~

ಈ ಯೋಗದ ಅಯ್ಯಂಗಾರ್ರ ಹೆಸರು ಸುಂದರರಾಜ – ಹೇದು ಅಡ.
ಶಂಭಜ್ಜನ ಕಾಲದ – ಮಧ್ಯಮವರ್ಗದ ಕುಟುಂಬ, ಸರ್ಕಾರಿ ಶಾಲೆಯ ಮಾಷ್ಟ್ರ ಕೆಲಸಲ್ಲಿದ್ದ ಕೃಷ್ಣಮಾಚಾರ್ಯರ ತುಂಬುಸಂಸಾರಲ್ಲಿ ಹನ್ನೊಂದನೇ ಮಗ ಆಗಿ ಹುಟ್ಟಿದ ಮಾಣಿ ಈ ಸುಂದರರಾಜ ಅಯ್ಯಂಗಾರ್ರು..
ಕೋಲಾರದ ಹತ್ತರೆ ಬೆಳ್ಳೂರು ಹೇಳ್ತ ಊರು ಇದ್ದಾಡ, ಅಲ್ಯಾಣ ಜೆನ ಈ ಬೆಳ್ಳೂರು ಕೃಷ್ಣಮಾಚಾರ್ಯರ ಮಗ ಸುಂದರರಾಜ ಅಯ್ಯಂಗಾರ್ರು.

ಇಂಗ್ಳೀಶಿಲಿ ಸುಲಾಬ ಅಪ್ಪಲೆ ಬೇಕಾಗಿ ಮೂರು ಹೆಸರಿನ ಸುರುವಾಣ ಅಕ್ಷರ ತೆಗದು “ಬಿ.ಕೆ.ಎಸ್ ಅಯ್ಯಂಗಾರ್” ಹೇದು ಬರಕ್ಕೊಂಡವಡ; ನಮ್ಮ ಸುಳ್ಯದ ಬೇಲೆನ್ಸು ಭಾವ “ಕೆ.ಎಸ್ ಭಟ್ರು” ಹೇಳಿದ ಹಾಂಗೆ.

~

ಈ ಸುಂದರರಾಜಂಗೆ ಬಾಲ್ಯಲ್ಲೇ ಅಸೌಖ್ಯ ಬಂತಡ.
ಜ್ವರವೋ, ಮಲೇರಿಯವೋ – ಏನಾರೊಂದು ದೇಹಾಲಸ್ಯ.
ಮಧ್ಯಮವರ್ಗದ ಕುಟುಂಬ, ತುಂಬು ಸಂಸಾರ ಆದ ಕಾರಣ – ಮದ್ದು ಮಾಡ್ತಷ್ಟು ಪೈಶೆಯೂ ಇದ್ದತ್ತಿಲ್ಲೆ, ಅವಕಾಶವೂ ಇದ್ದತ್ತಿಲ್ಲೆ. ಹಾಂಗಾಗಿ – ಇನ್ನೆಂತ ಮಾಡುದು?

~

ಸುಂದರರಾಜನ ಸೋದರಮಾವನ ಹೆಸರೂ ಕೃಷ್ಣಮಾಚಾರ್ಯರು.
ಅವು ಮೈಸೂರು ಒಡೆಯರ ಅರಮನೆಲಿ ಯೋಗತರಗತಿ ಮಾಡಿಗೊಂಡಿತ್ತವಾಡ.
ಈ ಸುಂದರ ರಾಜನ ಅನಾರೋಗ್ಯಕ್ಕೆ ಅಲ್ಲಿ ಎಂತಾರು ಪರಿಹಾರ ಸಿಕ್ಕುಗೋ – ಹೇದು ಕಳುಸಿಕೊಟ್ಟವಾಡ ಅವರ.
ಅದೃಷ್ಟವಶಾತ್, ಮಾವನ ಅಧ್ಯಾಪನಲ್ಲಿಯೋ, ಸ್ವಂತ ಇಚ್ಛಾಶಕ್ತಿಲಿಯೋ ಅಲ್ಲ ದೈವ ಬಲಲ್ಲಿಯೋ – ಪತಂಜಲಿ ಯೋಗ ಒಲುದತ್ತು; ಪತಂಜಲಿ ಬಂದಲ್ಲಿ ರೋಗ ಇನ್ನೆಲ್ಲಿ!? ಅನಾರೋಗ್ಯ ದೂರ ಆತು!

ಮಾವನ ಕೈಲಿ ಅಧ್ಯಯನ ಆಗಿ, ಮತ್ತೆ ಅಧ್ಯಾಪನ ಮಾಡ್ಳೆ ಸುರುಮಾಡಿದವು.
ಸೋದರ ಮಾವನ ಇಚ್ಛಾಪ್ರಕಾರ ಪುಣೆಗೆ ಹೋದವು ಈ ಸುಂದರರಾಜ. ಅಲ್ಲಿಂದ ಅವರ ಜೀವನ ದೆಸೆಯೇ ಬದಲಿತ್ತು.
ಇವರ ಅಧ್ಯಾಪನಲ್ಲಿ ಯಶಸ್ಸು ಪಡಕ್ಕೊಂಡವು ಬಾಯಿಂದ ಬಾಯಿಗೆ ಸುಮಾರು ಪಸರುಸಿ ತುಂಬ ಜೆನರ ಮುಟ್ಟುವ ಹಾಂಗಾತು. ಹಲವಾರು ಶಿಷ್ಯಂದ್ರು ಸಿಕ್ಕಿದವು.
ಅದರ್ಲಿ ಕೆಲವು ಜೆನ ಅತಿ ದೊಡ್ಡ ಜೆನಂಗಳೂ ಇತ್ತಿದ್ದವು ಹೇಳ್ತದು ಬಹು ವಿಶೇಷ.

ಯೋಗಸಾಧಕನ ಚೆಂದದ ಆರೋಗ್ಯದ ನೆಗೆ

ಯೋಗಸಾಧಕನ ಚೆಂದದ ಆರೋಗ್ಯದ ನೆಗೆ

ಸಚಿನ್ನ, ಅನಿಲ್ ಕುಂಬ್ಳೆ, ರಾಹುಲ ದ್ರಾವಿಡನಿಂದ ತೊಡಗಿ ಜೋಷಿಯ ವರೆಗೆ ಹಲವು ಜೆನಂಗಳ ಗುಣಮಾಡುವ ಅವಕಾಶ ಒದಗಿ ಬಂತಾಡ. ಇದಿಷ್ಟೇ ಅಲ್ಲದ್ದೆ, ದೇಶ ವಿದೇಶದ ಹಲವು ಜೆನಂಗಳನ್ನೂ ಶಿಷ್ಯರಾಗಿ ಪಡಕ್ಕೊಂಡವಾಡ.
ಹಲವು ದೇಶಂಗೊಕ್ಕೆ ತಿರುಗಾಟ ಮಾಡಿ ಯೋಗದ ಗರಿಮೆಯ ತಿಳುಶಿಕೊಟ್ಟವಾಡ.
ಅಷ್ಟನ್ನಾರ ಹೆಸರೇ ಕೇಳಿ ಗೊಂತಿಲ್ಲದ್ದೋರುದೇ ಯೋಗಾಸನ, ಅದರ ಉಪಕಾರವ ಕಂಡು ಮನಸೋತವಡ.

 

~

ಕೇವಲ ಯೋಗಾಸನ ಕಲಿಶುವ ಒಬ್ಬ ಮಾಷ್ಟ್ರ ಆಗಿ ಒಳಿಯದ್ದೆ, ಅದರ ನಿತ್ಯಾನುಷ್ಠಾನ ಮಾಡಿ, ಜೀವನಲ್ಲಿ ಅನುಸರಿಸೆಂಡು ಒಂಭತ್ತು ದಶಕಗಳ ದೀರ್ಘಾಯುಷ್ಯವನ್ನೂ ಸಂಪಾಲುಸಿಕೊಂಡಿತ್ತಿದ್ದವು. ಮಿತಾಹಾರ, ಹಿತಾಹಾರ – ಶುದ್ಧ ಶಾಕಾಹಾರ ಮಾಂತ್ರ ತೆಕ್ಕೊಂಡು, ಸಾತ್ವಿಕ ಜೀವನ ಮಾಡ್ಸು ಹೇಂಗೇದು ಇನ್ನೊಬ್ಬಂಗೂ ಆದರ್ಶ ಆಗಿತ್ತಿದ್ದವಾಡ.
ಸ್ವತಃ ಯೋಗಿಯ ನಮುನೆಲಿ ಇದ್ದ ಕಾರಣ ಇವರ ಎಲ್ಲೋರುದೇ “ಯೋಗಾಚಾರ್ಯ”ರು ಹೇಳಿಗೊಂಡು ಇತ್ತಿದ್ದವಾಡ.
~

ಬದ್ಕುವಾಗ ಅವರಿಂದ ಉಪಕಾರ ಪಡದವು ಎಷ್ಟೋ ಜೆನ ಇದ್ದವು.
ಅವರ ಜೀವನಾನಂತರವೂ ಅವರ ಉಪಕಾರವ ಸ್ಮರಣೆ ಮಾಡಿಗೊಂಬ, ಉಪಕಾರ ಪಡಕ್ಕೊಂಬ ಹಲವೂ ಜೆನ ಇದ್ದವು. ಇನ್ನೂ ಇದ್ದವು. ಅವರ ಅಪ್ಪಮ್ಮನ, ಮುದ್ದಿನ ಹೆಂಡತ್ತಿಯ ಸ್ಮರಣೆಲಿ ಕಟ್ಟಿದ ಶಾಲೆ, ಕೋಲೇಜು, ಆಸ್ಪತ್ರೆಗೊ ನಿತ್ಯವೂ ವಿದ್ಯೆ-ಆರೋಗ್ಯ ದಾನ ಮಾಡಿಗೊಂಡು ಇರ್ತು. ಇವರಿಂದಾಗಿ ಎಷ್ಟೋ ಮಕ್ಕೊ ವಿದ್ಯಾವಂತರಾವುತ್ತವು, ಎಷ್ಟೋ ಜೆನ ಆರೋಗ್ಯವಂತರಾವುತ್ತವು. ಇದು ತಲೆಮಾರಿಂಗೇ ಸಿಕ್ಕಿದ ಉಪಕಾರ.

ನಾವು ಎಲ್ಲೇ ಬದ್ಕಲಿ, ಎಲ್ಲೇ ಜೀವನ ಮಾಡಲಿ – ಆದರೆ ಸಾವ ಮೊದಲು ನಮ್ಮ ಹುಟ್ಟೂರಿಂಗೆ ಎಂತಾರು ಕಾಣಿಕೆ ಕೊಡೇಕು – ಹೇಳ್ಸರ ಇವು ತೋರ್ಸಿಕೊಟ್ಟವು.

~

ಭಾರತ ಮದಲಿಂದಲೂ ವಿಶ್ವಗುರು.
ಈ ಭಾರತೀಯನೂ ವಿಶ್ವಗುರು ಆದವು.
ಯೋಗಾಸನವ ಕಲುಶಿದ ಯೋಗಗುರು ಆದವು.
ನಿತ್ಯಾನುಷ್ಠಾನಂದಾಗಿ ಯೋಗಿ ಆದವು.
ಪ್ರಾಚಾರ್ಯರಾಗಿ ಯೋಗಾಚಾರ್ಯರಾದವು.
ಸುಂದರ, ಮನಸ್ಸಿನ ರಾಜ ಆದವು.

~
ಯೋಗವ ವಿಶ್ವಕ್ಕೆ ಪರಿಚಯಿಸಿದ ಹಿರಿಯ ಯೋಗಾಚಾರ್ಯರಿಂಗೆ,
ಅವರ ದೀರ್ಘಾಯುಷ್ಯಕ್ಕೆ ಕಾರಣವಾದ ಪತಂಜಲಿಗೆ,
ಅವಕ್ಕೆ ಒಲುದ ಯೋಗಕ್ಕೆ,
ಅಮೂಲ್ಯ ಮುತ್ತಿನ ದೇಶಕ್ಕೆ – ಲೋಕಕ್ಕೆ ಕೊಟ್ಟ ಮೈಸೂರು ಸಂಸ್ಥಾನಕ್ಕೆ ನಮೋನಮಃ.

~

ಒಂದೊಪ್ಪ: ಯೋಗಾಸನ ಮಾಡಿರೆ ದೀರ್ಘಾಯುಷ್ಯ, ಆನಂದ, ನೆಮ್ಮದಿ ಸಿಕ್ಕುತ್ತು – ಹೇಳುದರ ಬದ್ಕಿ ತೋರ್ಸಿದವು ಯೋಗಾಚಾರ್ಯರು.

ಒಪ್ಪಣ್ಣ

   

You may also like...

6 Responses

 1. GOPALANNA says:

  ಅಯ್ಯಂಗಾರ್ ಯೋಗವ ಪಸರಿಸಿದ ರೀತಿ ಅದ್ಭುತ.ಒಳ್ಳೆ ಸಕಾಲಿಕ ಲೇಖನ. ಒಪ್ಪಣ್ಣ ಬರೆದ್ದು ಲಾಯಕ ಆಯಿದು.

 2. Soumya says:

  ಅವರ ಒಳ್ಳೆ ಮನಸ್ಸಿನ ಬಗ್ಗೆ ಓದಿದ ಒಂದು ಇನ್ನೊಂದು ಲೇಖನ….
  http://www.newindianexpress.com/states/karnataka/A-Guardian-for-Many-Zoo-Inmates/2014/08/21/article2390371.ಏಕೆ

 3. ಮೊನ್ನೆ ಈ ಶುದ್ದಿ ಕೇಳಿಯಪ್ಪದ್ದೆ ಮನಸ್ಸಿಂಗೆ ದುಃಖ ಆತು. .
  ಸಾಮಾನ್ಯವಾಗಿ ಆರಾರು ತೀರಿಹೋದಪ್ಪಗ ‘ತುಂಬಲಾರದ ನಷ್ಟ’ ಹೇಳಿ ಭಾಷಣ ಮಾಡುದು ಕ್ರಮ! ಆದರೆ ಈ ಶ್ರೇಷ್ಠ ಯೋಗಾಚಾರ್ಯರ ವಿಷಯಲ್ಲಿ ಇದು ಅಕ್ಷರಶಃ ಸತ್ಯ. ಯೋಗ ಕಲಿವವಕ್ಕೆ ಇವರ ಪುಸ್ತಕಂಗೊ ತುಂಬಾ ಮುಖ್ಯ ಪಠ್ಯ. ಸಮಾಜಕ್ಕೆ, ದೇಶಕ್ಕೆ ಇವರ ಕೊಡುಗೆ ಅಪಾರ. ಅವರ ಆನು ಕೆಲವು ವರ್ಷ ಹಿಂದೆ ಒಂದರಿ ಕಾಂಬ ಅವಕಾಶ ಸಿಕ್ಕಿತ್ತಿದ್ದು, ಪುಣೆಯ ಅವರ ಸಂಸ್ಥೆಲಿ. ಅವ್ವು ಇಷ್ಟು ಪ್ರಾಯ ಅಪ್ಪಗ ಮಾಡುವಷ್ಟು ಲಾಯ್ಕಕ್ಕೆ ಎನಗೆ ಈಗಳೇ ಮಾಡ್ಲೆಡಿತ್ತಿಲ್ಲೆನ್ನೇ ಹೇಳಿ ಆಶ್ಚರ್ಯ ಆಗಿತ್ತಿದ್ದು! ಅದಕ್ಕೆ ಕಾರಣ ಅವರ ಶ್ರದ್ಧೆ ಮತ್ತೆ ಅಭ್ಯಾಸ. ಶ್ರದ್ಧೆಂದ ಅಭ್ಯಾಸ ಮಾಡಿರೆ ಯಾವುದೂ ಕಷ್ಟ ಅಲ್ಲ. ಎಂತನ್ನೂ ಸಾಧಿಸುಲಕ್ಕು ಹೇಳುದರ ಮಾಡಿ ತೋರ್ಸಿದವು.
  ಯೋಗಗುರುಗಳ ಬಗ್ಗೆ ಲಾಯ್ಕ ಶುದ್ದಿ ಒಪ್ಪಣ್ಣ.

 4. ಬೊಳುಂಬು ಗೋಪಾಲ says:

  ಯೋಗಾಚಾರ್ಯಂಗೆ ನುಡಿನಮನ ಸಲ್ಲುಸಿದ ಒಪ್ಪಣ್ಣಂಗೆ ಧನ್ಯವಾದಂಗೊ. ಸಕಾಲಿಕ ಶುದ್ದಿ. ಅಯ್ಯಂಗಾರರ ಸಾಧನೆ ನೋಡಿ ಹೆಮ್ಮೆ ಅನಿಸಿತ್ತು. ಅವರ ಚೆಂದದ ಆರೋಗ್ಯದ ನೆಗೆ ನೋಡಿ ಕೊಶಿಯಾತು.

 5. ಕೇಶವ ಬರೆಕರೆ says:

  ನಿಜವಾಗಿಯೂ ಈ ಯೋಗದ ಅಜ್ಜಂಗೆ “ಭಾರತ ರತ್ನ” ಬಿರುದು ಸಲ್ಲೆಕ್ಕಾತು. ನಮ್ಮ ದೇಶದ ಯೋಗವ ಪ್ರಪಂಚಕ್ಕೆಲ್ಲ ಹೇಳಿಕೊಟ್ಟು ಮನುಷ್ಯರ ಆರೋಗ್ಯ ಕಾಪಾಡುಲೆ ದಾರಿ ತೋರ್ಸಿದ ಅಯ್ಯಂಗಾರಜ್ಜ ನಿಜಕ್ಕು ನಮಗೆ ಹೆಮ್ಮೆ.

 6. ಪರಿಚಯವೇ ಇಲ್ಲದ್ರೂ ಶುದ್ದಿ ಕೇಳಿಯಪ್ಪಗ ಬೇಜಾರಾತು. 🙁
  ಆ ಅಜ್ಜನ ಕೆಲಾವು ಇಂಟರ್ವ್ಯೂ ನೋಡಿದ್ದೆ ಆನು ಟೀವಿಲಿ, ಯೋಗದ ಬಗ್ಗೆ ತುಂಬ ಚೆಂದಕೆ ವಿವರಿಸಿಯೊಂಡಿತ್ತಿದ್ದವು. ಡೆಲ್ಲಿಲಿ ರಾಮದೇವ್ ಬಾಬಾ ನಡೆಸಿದ ಯೋಗದ ಅಂತರ್ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರಾಗಿ ಇವು ಮಾತಾಡಿದ್ದರ ಕೇಳಿದೋರು ಎಂದಿಂಗೂ ಮರೆಯವು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *