ವಿಶ್ವ ತುಳು ಸಮ್ಮೇಳನೊ – ಬಗೆ ಭಾವದ ಸಮ್ಮಿಲನೊ…

ಮದಲಿಂಗೇ ಹಾಂಗೆ, ನಮ್ಮೋರಿಂಗೆ ತುಳು ಭಾಶೆ ತುಂಬ ಹತ್ತರೆ.
ಕೆಲಸಕ್ಕೆ ಬತ್ತ ಆಳುಗೊ ಹೆಚ್ಚಿನವುದೇ ತುಳುವಿನವು ಆದ ಕಾರಣ, ಅವರತ್ರೆ ’ಪೋಲಯ-ಬಲಯ’ (ಹೋಗ° – ಬಾರ°) ಹೇಳೆಕ್ಕಾರೆ ತುಳುವೇ ಆಯೆಕ್ಕಷ್ಟೇ. ಹಳೆಕಾಲಂದಲೇ ಕೆಲಸಕ್ಕೆ ಬತ್ತರೆ ಕೆಲವು ಜೆನ ನಮ್ಮಂದ ಲಾಯ್ಕ ಹವ್ಯಕ ಮಾತಾಡಿರೂ, ಮನೆ ಯೆಜಮಾನ ಮಾಂತ್ರ ತುಳುವಿಲೇ ಮಾತಾಡುಗಷ್ಟೇ. ದರ್ಪ ಕಾಣೆಕ್ಕಲ್ಲದೋ? ಹಾಂಗೆ!
ಮಕ್ಕೊ ಸಣ್ಣ ಇಪ್ಪಗ, ಅರ್ದಂಬರ್ದ ನಮ್ಮ ಬಾಶೆ ಕಲ್ತೋಂಡಿಪ್ಪ ಆ ಬಾಬೆಗೆ ಗೊಂತಾಗದ್ದ ಹಾಂಗೆ ದೊಡ್ಡವು ಎಂತಾರು ಶುದ್ದಿ ಮಾತಾಡೆಕ್ಕಾರೆ ತುಳುವೇ ಮಾತಾಡುಗು ಅತ್ತಿತ್ತೆ. ’ಆಯೆನ ಅಮ್ಮೆರ್ ಪೇಂಟೆಗ್ ಪೋತೆರ್, ಆಯೆಗ್ ಗೊತ್ತಿಜ್ಜಿ!’ (ಅವನ ಅಪ್ಪ ಪೇಟೆಗೆ ಹೋಯಿದವು, ಅವಂಗೆ ಗೊಂತಿಲ್ಲೆ! -ಹೇಳಿಗೊಂಡು. ಇವಂಗೆ ಗೊಂತಾದರೆ ಕೂಗುಲೆ ಸುರು ಮಾಡ್ತ° ಇದಾ! ಅರ್ಗೆಂಟುಮಾಣಿ)
ಕೊಳಚ್ಚಿಪ್ಪು ಬಾವನ ಹಾಂಗೆ ಕೆಲವು ಜೆನ ಅಂತೂ ನಮ್ಮೋರತ್ರೂ ತುಳು ಮಾತಾಡುದಡ. (-ಮಾಷ್ಟ್ರಮನೆ ಅತ್ತೆ ಪರಂಚುಗು!) ನಮ್ಮೋರ ಕೆಲವು ಆಚರಣೆಗೊ ತುಳುವರ ಪ್ರಭಾವಂದಲೇ, ಅವರ ಸಂಸ್ಕೃತಿಂದಲೇ ಬಂದದು. ಆಟಿಯ ಕಲ್ಪನೆ, ಕೆಡ್ಡಸದ ಗೌಜಿ – ಎಲ್ಲವುದೇ.

ತುಳು – ಹೇಳಿರೆ ಪರಶುರಾಮ ಸೃಷ್ಠಿಲಿ ಇಪ್ಪ ಬಹು ಭಾಶೆಲಿ ಒಂದು. ಒಂದು ಹೊಡೇಂದ ನೋಡಿರೆ ಹವ್ಯಕದ ಅಂಶವೋ, ಒಂದು ನಮೂನೆ ಮಲೆಯಾಳದ ಹಾಂಗೊ, ಒಂದು ನಮೂನೆಲಿ ಕೊಡವ ಭಾಷೆಯ ಹಾಂಗೊ – ಅಂತೂ ಸ್ಥಳೀಯ ಭಾಷೆಗಳ ಮಧ್ಯದ ಕೊಂಡಿಯ ಹಾಂಗೆ ಕಾಂಗು ಅಧ್ಯಯನ ಮಾಡ್ತವಂಗೆ. ತುಳುನಾಡು ಹೇಳಿರೆ ಉಡುಪಿ, ಕೊಡೆಯಾಲ, ಕಾಸ್ರೋಡು – ಮೂರು ಜಿಲ್ಲೆಗಳ ಒಳಗೊಂಡು ಇಪ್ಪಂತಹ ಗಡಿಯೇ ಇಲ್ಲದ್ದ ಒಂದು ವ್ಯಾಪ್ತಿ. ಮೂಲ ಜೆನಂಗಳ ಆಡುಭಾಷೆಯೂ ಅಪ್ಪು – ಜೈನರು, ಶಿವಳ್ಳಿ ಬಟ್ಟಕ್ಕೊ, ಬಂಟಕ್ಕೊ – ಇತ್ಯಾದಿ. ಮತ್ತೆ ಒಂದೊಂದೇ ಜಾತಿ-ಜನಾಂಗದವು ಇದೇ ಭಾಷೆಯ ಅನುಸರುಸುಲೆ ಆರಂಭ ಮಾಡಿದವು. ಈಗ ನಮ್ಮ ಊರಿನ ಬಹುದೊಡ್ಡ ಭಾಗವೇ ’ತುಳುವರು’ ಹೇಳಿ ಗುರುತಿಸಿಗೊಳ್ತವು.
ಮಲೆಯಾಳ ಭಾಷೆಯ ಒತ್ತಕ್ಕೆ ಇಪ್ಪ ಇದು, ಸಾಮ್ಯತೆಯ ತೋರುಸುತ್ತು. ಕೆಲವು ಶಬ್ದಂಗಳಲ್ಲಿ ಮಾಂತ್ರ ಅಲ್ಲದ್ದೆ, ಪ್ರತ್ಯಯಗಂಗಳಲ್ಲಿ ಮತ್ತೆ ವಾಕ್ಯರಚನಾ ಶೈಲಿಲಿದೇ ಒಂದೇ ಹಾಂಗೇ! ತುಳುಭಾಷೆಲಿ ತುಂಬಾ ವೈವಿಧ್ಯತೆ ಇದ್ದು. ಬ್ರಹ್ಮಾವರ ಹೊಡೆಣವು ಮಾತಾಡ್ತ ತುಳುವಿಂಗೆ ಕೊಡೆಯಾಲದ ತುಳು ಒಂಬುತ್ತಿಲ್ಲೆ. ಕೊಡೆಯಾಲದ್ದಕ್ಕೂ ಪುತ್ತೂರು ತುಳುವಿಂಗೂ ಒಳ್ಳೆತ ವೆತ್ಯಾಸ ಇದ್ದು. ಪುತ್ತೂರಿಂದಕ್ಕೂ ಕಾಸ್ರೋಡಿಂದಕ್ಕೂ ವೆತ್ಯಾಸ ಗೊಂತಾವುತ್ತು. ಕಾರ್ಲ(ಕಾರ್ಕಳ)ದ ತುಳುವಿನ ನಮುನೆಯೇ ಬೇರೆ. ಇವಿಷ್ಟಕ್ಕೂ ವಿಶಿಷ್ಟವಾಗಿ ಶಿವಳ್ಳಿ ತುಳು ಇದ್ದು.
ಪುತ್ತೂರು ತುಳುವಿಲಿ ಗ್ರಾಮ್ಯತೆ ರಜ್ಜ ಜಾಸ್ತಿ. ’ದಾಯ್ತ ಮಲ್ಪುನೆ?’ (ಎಂತ ಮಾಡುದು?) ಹೇಳಿ ಪುತ್ತೂರು ಹೊಡೇಣವರ ಶೈಲಿ. ಕೊಡೆಯಾಲದ ಹೊಡೆಲಿ ಅದನ್ನೇ ’ದಾದ ಮಂಪಿನಿ?’ ಹೇಳುಗು. ದಾಯ್ತ ಇಪ್ಪದು ದಾದ ಆವುತ್ತು, ದೊಂಡೆ ಬೇನೆಯವರ ಹಾಂಗೆ. ’ನೆ’ ಕಾರ ಎಲ್ಲ ’ಇ’ಕಾರ ತೆಕ್ಕೊಳ್ತು. ಶಿವಳ್ಳಿ ತುಳುವಿಲಿ ’ಜಾಯ್ತ ಆಂಪುನೆ?’ ಹೇಳುಗು. ದಕಾರಾದಿ ಶಬ್ದಂಗೊ ಎಲ್ಲ ಜಕಾರ ಅಪ್ಪದೇ ಅವರ ವೈಶಿಷ್ಠ್ಯ. (ಕೊಡೆಯಾಲ ಹೊಡೆಲಿ ಜಾಯ್ತ ಇಪ್ಪದರ ಜಾದ ಹೇಳ್ತವು ಹೇಳಿತ್ತಿದ್ದ ನಮ್ಮ ಬೀಸ್ರೋಡುಮಾಣಿ. ಅವಂಗೆ ಅದೆಲ್ಲ ಅರಡಿಗಿದಾ!). ಇನ್ನು ಕಾಸ್ರೋಡು ಹೊಡೆಲಿ, ಶುದ್ದ ಬಟ್ಟಕ್ಕೊ – ಮಂತ್ರ ಹೇಳಿ ಹೇಳಿ ನಾಲಗೆ ಒಳ್ಳೆತ ತೆರಚ್ಚುತ್ತು (ತಿರುಗುತ್ತು). ’ದಾಯ್ತ ಮಾಳ್ಪುನೆ?’ ಕೇಳುಗು ನಮ್ಮ ಹರಿಮಾವ. ’ಮುಕುಲು’ (ಇವು) ಹೇಳಿ ಪುತ್ತೂರು ಹೊಡೆಲಿ ಹೇಳಿರೆ, ’ಮೆಕುಲು’ ಹೇಳಿ ಕೊಡೆಯಾಲಲ್ಲಿ ಹೇಳಿರೆ, ’ಉಂಬಾಕುಳು’ ಹೇಳಿ ಕಾಸರಗೋಡಿನ ತುಳು! ಮಾಷ್ಟ್ರುಮಾವ° ಹಾಂಗೇ ಹೇಳುಗು. ‘ಬಲ’ (ಬಾ) ಹೇಳುದರ ’ಬಲ್ಲ’ ಹೇಳುಗು ನಮ್ಮ ಖಂಡಿಗೆ ದೊಡ್ಡಪ್ಪ°. ಪುತ್ತೂರಿನ ಹೊಡೆಲಿ ಸೊಪ್ಪಿಂಗೆ ’ಸಪ್ಪು’ ಹೇಳುಗು. ಕೊಡೆಯಾಲಕ್ಕೆತ್ತುವಗ ಅದು ’ತಪ್ಪು’ ಆವುತ್ತು. ಕಾರ್ಲದ ಹೊಡೆಲಿ ’ತ’ಕಾರಕ್ಕೆ ’ಹ’ಕಾರ ಹೇಳುಗು – ’ಹಪ್ಪು’ ಹೇಳ್ತದು. ಬ್ರಹ್ಮಾವರ ಹೊಡೇಣವು ’ಅಡ್ಡಿಜ್ಜಿ’ (ಅಡ್ಡಿಲ್ಲ – ಸರಿ) ಹೇಳಿ ಸೇರುಸುತ್ತವಿದಾ, ಧಾರಾಳವಾಗಿ. ಕುಂದಾಪುರದ ಕನ್ನಡದ ಪ್ರಭಾವ. ಮೂಲ ಒಂದೇ ತುಳು ಆದರೂ, ಆಯಾ ಊರಿಂಗೆ ಅನುಸಾರವಾಗಿ, ಆಯಾ ಜೀವನ ಶೈಲಿಗೆ ಹೊಂದಿಕೆಯಾಗಿ ರಜ ರಜ ಪ್ರತ್ಯಯಂಗೊ ಎಲ್ಲ ಬೇರೆ ಬೇರೆ ಸೇರಿದ್ದು. ಅಷ್ಟೇ.
ಇವಿಷ್ಟೂ ಪ್ರಕಾರಂಗೊ ಇದ್ದರೂ, ಒಂದಕ್ಕೊಂದು ವಿರೋಧ ಅಲ್ಲ, ಒಂದಕ್ಕೊಂದು ಪೂರಕ!
ಅಂತೂ ಇಂತೂ ತುಳು ಭಾಷೆ ಹೇಳಿರೆ ವೈಶಿಷ್ಠ್ಯವೋ ವೈಶಿಷ್ಠ್ಯ.

ಲಿಪಿ ಅಂತೂ ನೋಡಿರೇ ಗೊಂತಕ್ಕು. ಮಲೆಯಾಳ ಓದುಲೆಡಿತ್ತವಂಗೆ ತುಳು ಏನೂ ಕಷ್ಟ ಆಗ. ಉರುಟುರುಟು ಕನ್ನಡದ ಎದುರು ತೆಲುಗು ಹೇಂಗೆ ತಚಿಪಿಚಿ ಕಾಣ್ತೋ (ದೊಡ್ಡಣ್ಣ ಕೆಲಾವು ಸರ್ತಿ ನೆಗೆಮಾಡುಗು – ಜಿಲೇಬಿ ಸಾಲು ಕನ್ನಡ ಆದರೆ, ಅದರ ಮೇಲೆ ಒಂದರಿ ಕೂದು ಎದ್ದರೆ ಹೊಡಿ ಹೊಡಿ ಆವುತ್ತಿದಾ, ಅದು ತೆಲುಗು ಹೇಳಿ! 😉 ), ಅದೇ ನಮುನೆ ಉರುಟುರುಟು ಮಲೆಯಾಳ ಲಿಪಿಯ ಎದುರು ತಚಿಪಿಚಿ ತುಳುಲಿಪಿ. ನಮ್ಮ ಅಜ್ಜಂದ್ರು ಮದಲಿಂಗೆ ಓಲೆಗರಿ (ತಾಳೆಮರದ ಮಡ್ಳಿನ ಗರಿ)ಲಿ ಜಾತಕವೋ, ದೇವಿಮಹಾತ್ಮೆಯ ಹಾಂಗಿರ್ತ ಮಂತ್ರವೋ ಮತ್ತೊ ಬರೆತ್ತರೆ ತುಳುಲಿಪಿಯನ್ನೇ ಉಪಯೋಗುಸುಗು. ಕಾಲಕ್ರಮೇಣವಾಗಿ ಈ ಲಿಪಿಗಳ ಉಪಯೋಗ ಕಡಮ್ಮೆ ಆಗಿ ಈಗಂತೂ ಅತ್ಯಂತ ಕಮ್ಮಿ ಪ್ರಮಾಣಕ್ಕೆ ಎತ್ತಿ ನಿಂದಿದು! ಬಹುಪಾಲು ತುಳುವರು ಅನಕ್ಷರಸ್ಥರಾಗಿದ್ದದೇ ಇದಕ್ಕೆ ಕಾರಣವೋ ಏನೋ! ಅಕ್ಷರಸ್ಥ ತುಳುವರು ಕಾರ್ಬಾರಿಗೊ ಆದವು, ಆಡಳ್ತೆ ಪೂರ ಕನ್ನಡಲ್ಲಿ ಆತಿದಾ! ತುಳುಲಿಪಿ ಬರೆತ್ತರೆ ಕೆಲವು ಬಟ್ಟಮಾವಂದ್ರು ಮಾಂತ್ರ!
ಕಷ್ಟ ಕಾಲ!!

ಇಷ್ಟೆಲ್ಲ ಎಂತಕೆ ನೆಂಪಾತು ಒಪ್ಪಣ್ಣಂಗೆ?
ಓ ಮೊನ್ನೆ (ದಶಂಬ್ರ, 2009ರ) 10ರಿಂದ 13ರ ಒರೆಂಗೆ “ವಿಶ್ವ ತುಳು ಸಮ್ಮೇಳನ 2009” ಹೇಳಿ ಒಂದು ದೊಡಾ ತುಳು ಜಾತ್ರೆ ಮಾಡಿದ್ದವು. ಹೆಗುಡೆಯ ಊರು – ದರ್ಮಸ್ಥಳಂದ ಆರು ಮೈಲು ದೂರಲ್ಲಿ ಉಜಿರೆ ಹೇಳಿ ಒಂದು ಜಾಗೆ, ಅದಾ- ನಮ್ಮ ಮೇಳದ ಅಶೋಕಣ್ಣನ ಊರು – ಅಲ್ಲಿ ಈ ಗೌಜಿ ಆದ್ದು. ದರ್ಮಸ್ಥಳದವರ ಕೋಲೇಜು, ಶಾಲೆ, ಹೋಟ್ಳು, ಬೇಂಕು – ಅದು ಇದು ಎಲ್ಲ ಇರ್ತ ದೊಡ್ಡ ಪರಿಸರ (Campus) ಇದ್ದಲ್ದ, ಅದರ್ಲಿ. ಊರಿಂಗೆ ಊರೇ ಅಲ್ಲಿ ಹೋಗಿ ಒಟ್ಟುಸೇರಿದ್ದು. ತುಳು ಬಪ್ಪವು, ಬಾರದ್ದವು, ತುಳು ಅರ್ತ ಅಪ್ಪವು, ಆಗದ್ದವು, ತುಳುವಿನ ಬಗೆಗೆ ತಿಳಿವಲೆ ಆಸಕ್ತಿ ಇಪ್ಪವು – ಎಲ್ಲೊರುದೇ ಒಂದೇ ಚೆಪ್ಪರದ ಅಡಿಲಿ! ಮೊನ್ನೆಂದಲೇ ಹೋಯೆಕ್ಕು ಹೋಯೆಕ್ಕು ಹೇಳಿ ಗ್ರೇಶುದು! ಎಂತ ಮಾಡುದು, ನಮ್ಮ ಈ ನಿತ್ಯ ಕೆಲಸದ ಎಡಕ್ಕಿಲಿ ಅದೆಡಿತ್ತೋ! ದನಗಳ ಚಾಕಿರಿ, ಅಡಕ್ಕೆ ಹೆರ್ಕುದು, ನೀರು ಬಿಡುದು – ಎಲ್ಲ ಅಪ್ಪಗ ಸಮಯವೇ ಸಿಕ್ಕ ಇದಾ! ಅಂತೂ ಎಂಗಳ ಬೈಲಿಂದ ಕೆಲವೆಲ್ಲ ಜೆನ ಅತ್ತಿತ್ತೆ ಮಾತಾಡಿ, ಒಂದು ದಿನ ಹೆರಟೆಯೊ°.

ಅದು ಶೆನಿವಾರ ಇದಾ!

ಸಮ್ಮೇಳನದ ಶ್ಟೇಂಪು

ಮಾಷ್ಟ್ರುಮಾವ°, ಕೊಳಚ್ಚಿಪ್ಪು ಮಾವ°, ಅತ್ತೆ, ಅವು ಇವು ಎಲ್ಲ ಸುಮಾರು ಜೆನರ ಒಟ್ಟಿಂಗೆ ದ್ವಾರಕದಣ್ಣನ ಕಾರಿಲಿ ಕೂದಂಡು ಹೋದ್ದದು. ಮಾಮೂಲಿನಂತೆ ಅಡಕ್ಕೆ ಕ್ರಯ ಇಳುದ ಶುದ್ದಿ, ಮೈಲುತೂತು ಕ್ರಯ ಏರಿದ ಶುದ್ದಿ – ಎಲ್ಲ ಮಾತಾಡಿಗೊಂಡು ಇತ್ತಿದ್ದವು. ಬೈಲಿಂದ ಬೇಗ ಹೆರಟ್ರುದೇ, ಎಲ್ಲ ಸೇರಿ ಸೇರಿ ಪುತ್ತೂರಿಂಗೆ ಹೋಗಿ, ಅಲ್ಲಿಂದ ಉಜಿರೆಗೆ ಎತ್ತುವಗ ನೆಡು ಮದ್ಯಾನ್ನ. ಉಂಬ ಹೊತ್ತು. ರಶ್ಶೋ ರಶ್ಶು. ಕುಂಬ್ಳೆ ಬೆಡಿದಿನ ಜಾತ್ರೆ ಅಡ್ಕಲ್ಲಿ ಇರುಳು ಏಳೂವರೆ ಕಳುದು ಮಿಜುಳುತ್ತವಿಲ್ಲೆಯೋ, ಆ ನಮುನೆ ಜೆನಂಗ. ಎಲ್ಲಿ ನೋಡಿರೂ ತುಳು-ತುಳು-ತುಳು. ತುಳುವಿಂಗೆ ಪ್ರತ್ಯೇಕ ಲಿಪಿ ಇದ್ದರೂ, ಯೇವದಕ್ಕೆ ಅರ್ತ ಆವುತ್ತು ಬೇಕೇ! ಕೆಲವು ಹಳೆಕಾಲದ ಬಟ್ಟಮಾವಂದ್ರಿಂಗೆ ಅರ್ತ ಅಕ್ಕಷ್ಟೆ. – ಹಾಂಗೆ ಕನ್ನಡ ಅಕ್ಷರಲ್ಲಿ ತುಳು ವಾಕ್ಯಂಗಳ ಬೋರ್ಡುಗೊ ನೇಲುಸಿಗೊಂಡು ಇತ್ತು – ’ಸ್ವಾಗತೊ’, ’ಎದುರ್ಕೊನುವೊ(ಎದುರುಗೊಳ್ತೆಯೊ°)’ ಇತ್ಯಾದಿ.

ಮೈಲುಗಟ್ಳೆ ದೂರಂದಲೇ ಬೋರ್ಡುಗೊ ಕಂಡುಗೊಂಡು ಇತ್ತು. ’ವಿಶ್ವ ತುಳು ಸಮ್ಮೇಳನೊ 2009′ ಹೇಳಿ ಬರದ್ದು ಮಾಂತ್ರ ಅಲ್ಲದ್ದೆ, ಬೆಸ್ತ° ಮೀನು ಹಿಡಿತ್ತದೋ, ಯಕ್ಷಗಾನದ ವೇಶ ನಮಸ್ಕಾರ ಮಾಡ್ತದೋ, ಕಡಲಿನ ಕರೆಲಿ ತೆಂಗಿನ ಮರ ಬಗ್ಗಿದ್ದದೋ, ಓಡ ಹೋಪದೋ, ದರ್ಮಸ್ಥಳ ದೇವಸ್ತಾನದ ಎದುರು ಆನೆ ನಿಂದದೋ, ಅಕ್ಕಿಮುಡಿ ಕರೆಲಿ ಬೊಂಡ ಮಡಗಿದ್ದೋ, ಬೂತದ ಗಗ್ಗರ(ಗೆಜ್ಜೆಯ ನಮುನೆದು)ವೋ – ಎಲ್ಲ ಚಿತ್ರಂಗ ಕಂಡುಗೊಂಡು ಇತ್ತು – ಕರಾವಳಿ ಜೀವನಪದ್ಧತಿಯ ತಿಳಿಶುತ್ತ ನಮುನೆದು. ಒಂದೊಂದರ್ಲಿ ಒಂದೊಂದು ಕುತೂಹಲ. ನೋಡಿಗೊಂಡು ಹೋದೆಯೊ°.

ಅರ್ದ ಮೈಲು ಮದಲೇ ಕಾರು ನಿಲ್ಲುಸಲೆ ಹೇಳಿತ್ತು ಒಂದು ಬೆಳಿಪೇಂಟಿನ ಕೂಚಕ್ಕ. ಕಾರಿನ ಬುಡಂದ ನೆಡಕ್ಕೊಂಡು ಜಾತ್ರೆಅಡ್ಕಕ್ಕೆ ಎತ್ತಿದೆಯೊ°. ಎತ್ತಿದ ಕೂಡ್ಳೇ ’ಬೊಂಡ ಕುಡಿವನೋ’ ಹೇಳಿ ಕೇಳಿದವು ಆರೋ! ನವಗೆಂತ – ಹೊಟ್ಟೆಲಿ ಜಾಗೆ ಇದ್ದು ಬಾವ! ಒಂದೊಂದು ಬೊಂಡ ಕುಡುದಿಕ್ಕಿ ಒಂದು ಸುತ್ತು ಬಪ್ಪಲೆ ಹೆರಟದು. ಸುರುವಿಂಗೆ ಸಿಕ್ಕಿದ್ದು ಪುಸ್ತಕ ಪ್ರದರ್ಶನ. ನೂರಾರು ಮಳಿಗೆಗೊ, ಅಂಗುಡಿಗೊ. ಸುಮಾರು ವಿಶೇಷ ಪುಸ್ತಕಂಗೊ ಇತ್ತು. ಕೆಲವು ಜೆನ ಒಂದೆರಡು ಪುಸ್ತಕ ತೆಗದು ಬೇಗಿಂಗೆ ತುಂಬುಸಿದ್ದೂ ಆತು. ನಮ್ಮ ಮಠದ್ದುದೇ ಇತ್ತದಾ! ಕುಶೀ ಆತು ’ಹರೇರಾಮ’ ಹೇಳಿದೆಯೊ° ಗೌಜಿಲಿ. ಉದಿಯಾಂದ ತುಳು ಮಾತಾಡಿ ಮಾತಾಡಿ ಬಾಯಿ ಒಣಗಿದ ಅತ್ತಾಜೆಬಾವಂಗೆ ಒಂದರಿ ಉಸುಲು ಸರ್ತ ಹೋತು! 🙂 ಬೇರೆಲ್ಲ ಅಂಗುಡಿ ನೋಡಿಕ್ಕಿ ಹೆರಬಪ್ಪಗ ಪುಟ್ಟಕ್ಕ ಪ್ರತ್ಯಕ್ಷ. ಎಲಾ ಇದುವೇ! ’ಇಲ್ಲಿಗೆ ಯೇವತ್ತು ಬಂದೆ ಕೂಸೇ?’ ಕೇಳಿದವು ಮಾಷ್ಟ್ರುಮಾವ°. ಎನ್ನ ಚೆಂಙಾಯಿ ಇಲ್ಲಿಯೇ ಕೋಲೇಜಿಲಿ ಪಾಟಮಾಡಿಗೊಂಡು ಇದ್ದು, ಅದರ ಮನೆಗೆ ಮೊನ್ನೆಯೇ ಬಂದಿತ್ತೆ ಹೇಳಿತ್ತು. ಆ ಚೆಂಙಾಯಿಗೆ ಪೇಪರಿನವರ ಒಟ್ಟಿಂಗೆ ಕಂಪ್ಯೂಟ್ರು ಕೊಟ್ಟು ಕೂರುಸಿದ್ದವಡ, ಉಂಬಲುದೇ ಪುರುಸೊತ್ತು ಕೊಡದ್ದೆ. ಹಾಂಗೆ ಅದರ ಉಂಬಲಿಪ್ಪ ಕೂಪನು ಪುಟ್ಟಕ್ಕ° ಹಿಡ್ಕೊಂಡು ’ಒಟ್ಟಿಂಗೆ ಆರೂ ಇಲ್ಲೆನ್ನೆ!’ ಹೇಳಿ ಪುಸ್ತಕ ಪ್ರದರ್ಶನದ ಎದುರು ಬೇಜಾರು ಮಾಡಿಗೊಂಡು ಇತ್ತಡ. ಚೆ, ಇನ್ನೊಬ್ಬಂಗೆ ಬೇಜಾರಾವುತ್ತರೆ ಉಪಕಾರ ಮಾಡದ್ದ ಮನಸ್ಸು ಒಪ್ಪಣ್ಣಂಗೆ ಹೇಂಗೆ ಬಕ್ಕು ನಿಂಗಳೇ ಹೇಳಿ, ’ಎಂಗೊ ಇದ್ದೆಯೊ° ಪುಟ್ಟಕ್ಕೋ..!’ ಹೇಳಿದೆ. ಹೇಂಗೆ, ಮೂರ್ತ ಸರೀ ಆಯಿದಾ ಬಾವ, ಏ°?!!

ಅದರ ಕೂಪನಿನ ನಂಬಿಗೊಂಡು ಹೆರಟೆಯೊ. ಪ್ರತಿನಿಧಿಗೊಕ್ಕೆ ಇಪ್ಪ ಕೂಪನಡ ಅದು. ಅರ್ದ ಮೈಲು ನೆಡಕ್ಕೊಂಡು ಹೋದೆಯೊ°. ಅದೇ ರಶ್ಶಿಲಿ. ಪುಟ್ಟಕ್ಕನ ಒಟ್ಟಿಂಗೆ ಮುಂದೆ ಇತ್ತಿದ್ದು ನಾವು, ಪುಟ್ಟಕ್ಕ ತಪ್ಪಿರೂ ತೊಂದರೆ ಇಲ್ಲೆ, ಅದರ ಕೈಲಿರ್ತ ಪಾಸು ತಪ್ಪುಲಾಗ ಇದಾ! ಕಾಲು ಹಾಕಲೆ ಜಾಗೆ ಇಲ್ಲೆ, ಸಾಸಮೆ ಇಡ್ಕಿರೆ ನೆಲಕ್ಕಂಗೆ (ನೆಲಕ್ಕೆ) ಬೀಳ ಹೇಳಿ ನೆಗೆಮಾಡದವು ಹಿಂದೆ ಆರೋ.. ಹಶುವಿಂಗೆ ನೆಗೆ ಬಪ್ಪದು ಕಮ್ಮಿ! ಎಂತ ಮಾಡುಸ್ಸು!!

ಉಂಬಲಿಪ್ಪ ಚೆಪ್ಪರ ಎರಡು. ಒಂದು ಸಾಮಾನ್ಯಜೆನಂಗೊಕ್ಕೆ ಇರ್ತ ಚೆಪ್ಪರ, ಒಂದು ಪ್ರತಿನಿಧಿ ನಮುನೆ ವೆಗ್ತಿಗೊಕ್ಕೆ. ಸಾಮಾನ್ಯ ಜೆನಂಗಳ ಚೆಪ್ಪರಕ್ಕೆ ಸಾಲಿತ್ತು, ನಿನ್ನೆಯೇ ನಿಂದಿದವೋ ಹೇಳಿ ಕಾಣ್ತ ನಮುನೆಗೆ! ಸಾಲಿನ ತಲೆ ಕಂಡಿದಿಲ್ಲೆ, ಹಶು ಆಗಿಯೋ ಏನೋ! ನಮ್ಮದು ಈಚದು, ಕಡಮ್ಮೆ ಜೆನ ಇದ್ದದು. ಸೀದ ಒಳ ಹೋದೆಯೊ°- ಪುಟ್ಟಕ್ಕಂಗೆ ನಮಸ್ಕಾರ ಮಾಡಿಗೊಂಡು. ಹೋದ ಕೂಡ್ಳೆ ಬಳುಸಿದವು, ಉಂಡೆಯೊ°. ಮುಂಡಿ ತಾಳು, ಸಾರು, ಸಾಂಬಾರು, ಸೀವು (ಪಾಯ್ಸ), ಅರುಶಿನ ಬಣ್ಣದ್ದೊಂದು ಸೀವಿನ ತಿಂಡಿ (ಸ್ವೀಟು). ಎಂಗೊ ಎತ್ತುವಗ ತಡವಾದ್ದಕ್ಕೋ ಏನೋ – ಸಾಂಬಾರಿಂಗೆ ಸಾರು, ಸಾರಿಂಗೆ ನೀರು – ಎಲ್ಲ ಸೇರಿದ ಹಾಂಗೆ ಇತ್ತು. ಅಂತೂ ಊಟ ಗಮ್ಮತ್ತೇ! ದರ್ಮಸ್ಥಳ ಅಲ್ದಾ, ಹಾಂಗೆ!! ಉಂಡಕೂಡ್ಳೇ ಪುಟ್ಟಕ್ಕ ಪೀಂಕಿತ್ತು – ಅದರ ಚೆಂಙಾಯಿಯ ಒಟ್ಟಿಂಗೆ ಕೂಪಲಡ. ಕಂಪ್ಲೀಟ್ರು ಒತ್ತುಲೆ ಅಬ್ಯಾಸ ಆದ ಹಾಂಗುದೇ ಆತು, ಪೇನಿನ ಅಡಿಯುದೇ ಸಿಕ್ಕಿತ್ತು ಹೇಳಿಗೊಂಡು!
ಅನ್ನದಾತೋ ಸುಖೀಭವ! – ಪುಟ್ಟಕ್ಕಂಗೆ ಈ ಆಶೀರ್ವಾದ…!!

ಉಂಡಿಕ್ಕಿ ಒಸ್ತು ಪ್ರದರ್ಶನ. ಒಸ್ತು ಪ್ರದರ್ಶನವ ಕೋಲೇಜಿನ ಒಳದಿಕ್ಕೆ ಮಡಗಿದ್ದವು. ಆ ಕೋಲೇಜಿಂಗೆ ಹೋಪಗ, ಜಾಲಿಲಿ ಕೆಲವು ಕೋಳಿಗಳ ಪ್ರದರ್ಶನ ಇತ್ತು. ಕೋಳಿಕಟ್ಟ ನಮ್ಮ ಊರಿಲೇ ಇದ್ದನ್ನೆ, ಪ್ರತಿ ಮಂಗ್ಳವಾರ ಹೊತ್ತಪ್ಪಗಾಣ ತುಳುವರ ಅವಿಭಾಜ್ಯ ಅಂಗ. ನಮುನೆ ನಮುನೆದು ಕೋಳಿಗೊ. ಬೆಳಿದು, ಕಪ್ಪಿಂದು, ಕೆಂಪಿಂದು, ಮಿಶ್ರದ್ದು (Black & White, Color – ಹೇಳಿ ಆಚಕರೆ ಮಾಣಿಯ ಜೋಕು. ಈ ಸರ್ತಿ ನೆಗೆ ಬಯಿಂದು. ಹೊಟ್ಟೆ ತುಂಬಿತ್ತಿದ್ದಲ್ದಾ, ಹಾಂಗೆ!) – ಇತ್ಯಾದಿ. ಅದರಿಂದಲೇ ಒತ್ತಕ್ಕೆ ’ದನಗಳ ಪ್ರದರ್ಶನ’. ದೇಶೀಯ ದನಂಗಳ ಒಳುಶೆಕ್ಕು ಹೇಳಿ ನಮ್ಮ ಗುರುಗೊ ಚಳುವಳಿ ಸುರು ಮಾಡಿದ ಕಾರಣ ಎಲ್ಲ ದಿಕ್ಕುದೇ ಊರದನಗಳ ಪ್ರದರ್ಶನ ಒಂದು ಕ್ರಮ(Trend) ಆಗಿ ಹೋಯಿದು. ಕುಶಿ ಆತು ನೋಡಿ. ಅಲ್ಲಿಂದ ಮುಂದೆ ಬಂದರೆ ಆಯುರ್ವೇದ ವನ. ಕಾಟು(ಡು)ಮದ್ದು ಹೇಳ್ತಲ್ದ ನಾವು, ಅದೇ ಹೆಸರು ಕಾಟ್-ಮರ್ದ್ ಹೇಳಿ ಬೋರ್ಡು ಹಾಕಿತ್ತಿದ್ದವು. ಉರಗೆಂದ ಹಿಡುದು ದೂಪದ ಮರದ ಒರೆಂಗೆ ಎಲ್ಲವುದೇ ಇತ್ತು ಅಲ್ಲಿ. ಒಳ್ಳೆ ಸಾಂಕಾಣವುದೇ!

ಅಲ್ಲಿಂದ ಒಸ್ತು ಪ್ರದರ್ಶನದ ಸಾಲು ಸುರು. ಊಟಕ್ಕಿದ್ದಷ್ಟು ಇಲ್ಲದ್ರೂ, ಸಾದಾರ್ಣ ಉದ್ದ ಇತ್ತಪ್ಪ. ಅಂತೂ ಒಳ ಎತ್ತಿತ್ತು. ದರ್ಮಸ್ಥಳಲ್ಲಿ ಮಂಜೂಷ ಹೇಳಿ ಇದ್ದಲ್ದ, ಅದರಿಂದ ಕೆಲವೆಲ್ಲ ತಂದು ಇಲ್ಲಿ ಮಡಗಿತ್ತಿದ್ದವು. ವಿಗ್ರಹಂಗೊ, ರಾಣಿ ಅಬ್ಬಕ್ಕನ ಶಾಸನಂಗೊ, ಪಟಂಗ, ಶಂಕಂಗೊ, ಚಿಪ್ಪುಗೊ, ಅದು ಇದು ಎಲ್ಲ. ಅಡೂರಜ್ಜನ ಯಕ್ಷಗಾನ ವಸ್ತು ಪ್ರದರ್ಶನವುದೇ ಇತ್ತು ಇದರೆಡಕ್ಕಿಲಿ. ಬಂಟ್ವಾಳದ ತುಳು ಆಪೀಸಿಂದ ನೊಗ(ನುಗ), ಪಾತ್ರೆ, ತೊಟ್ಳು ಎಲ್ಲ ತಂದಿತ್ತವು. ಉಜಿರೆ ಆಳ್ವಂದು ಸುಮಾರು ಸಂಗ್ರಹಂಗಳೂ, ಬೂತದ ವೇಶಂಗೊ ಕೂದೊಂಡದೂ ಇತ್ತು. ಅಕೇರಿಗೆ – ಶಂಬಜ್ಜನ ಕಾಲಲ್ಲಿ -ತೆಗದ ಪಟಂಗಳ ಪ್ರದರ್ಶನ ಇತ್ತು. ಹಳೇ ಕೊಡೆಯಾಲದ್ದು, ಪುತ್ತೂರಿಂದು -ಎಲ್ಲ. ಎಲ್ಲ ತುಂಬ ಚೆಂದ ಇತ್ತು. ನೋಡಿಕ್ಕಿ ಕುಶೀಲಿ ಹೆರ ಬಂದಾತು.
ಮಾರ್ಗದ ಕರೆಲಿ ನಟ ತಿರುಗಿಯೊಂಡಿದ್ದ ನಮ್ಮ ಬೈಲಿನ ಒಂದು ಗುಂಪು ಸಿಕ್ಕಿತ್ತು. ’ಚೆಲಾ ನಿಂಗಳೇ..!’ ಹೇಳಿ ಎಂಗೊಗೇ ಕೋಂಗಿ ಮಾಡಿದವು. ಪುಟ್ಟಕ್ಕ, ದೀಪಕ್ಕ, ಅವು ಇವು ಎಲ್ಲ ಪುನಾ ಸೇರಿಗೊಂಡವು.
ಅಲ್ಲಿಂದ ಸೀತ ಹೋದ್ದು ’ತುಳು ಗ್ರಾಮ’ಕ್ಕೆ.ಅಲ್ಲಿಗೆ ಹೋವುತ್ತ ದಾರಿಲಿ ನೆಲಕಡ್ಳೆ ತಿಂದದು. ತುಳು ಸಂಸ್ಕೃತಿಲಿ ಅದಿಲ್ಲದ್ರೂ ಸಾರ ಇಲ್ಲೆ ಹೇಳಿಗೊಂಡು ತಿಂದದೇ!
ಮದಲಿಂಗೆ ’ಗ್ರಾಮೊ’ ಹೇಳಿತ್ತು ಕಂಡ್ರೆ ಒಂದು ಊರು ಹೇಳಿ ಲೆಕ್ಕ.
ಅಂದ್ರಾಣ ಬ್ರಿಟಿಷರು, ಈಗಾಣ ನಮುನೆ ಗೋರ್ಮೆಂಟು ಎಲ್ಲ ಬಪ್ಪದಕ್ಕೆ ಎಷ್ಟೋ ಮದಲೇ ನಮ್ಮೂರು ಸಮೃದ್ಧವಾಗಿತ್ತು. ಸುಸಜ್ಜಿತವಾಗಿತ್ತು. ಯೇವದೇ ಒಂದು ಊರಿಲಿ ಎಲ್ಲವುದೇ ಇಕ್ಕು – ದೇವಸ್ತಾನ, ಬೂತಸ್ತಾನ, ನ್ಯಾಯಸ್ಥಾನ, ಸಾಮಾಜಿಕ ಜೀವನ, ಅದು ಇದು – ಎಲ್ಲವುದೇ – ವ್ಯವಸ್ಥಿತವಾಗಿ!
ಈ ತುಳುಗ್ರಾಮಲ್ಲಿ ಪೂಜೆಬಟ್ರಮನೆ, ಜೋಯಿಷರ ಮನೆ, ಶಾಲೆ, ಕೆರೆ, ಪಟ್ಳೇರಿನ (ಪಠೇಲರ) ಮನೆ, ಗುತ್ತಿನ ಮನೆ (ಬಂಟಕ್ಕಳ ಗುರಿಕ್ಕಾರ- ಗುತ್ತು), ಬೂತಕಟ್ಟುವ ನಲಿಕ್ಕೆಯವರ ಮನೆ, ಆಚಾರಿ ಮನೆ, ಕೊಂಕಣಿ(ಕಮ್ತಿ) ಅಂಗಡಿ, ಬ್ಯಾರಿ ಮನೆ, ಪುರ್ಬು ಮನೆ, ಮಡ್ಯೋಳ, ಜೇಡ, ಕುಂಬಾರ, ಬಂಡಾರಿ, ಬೆಸ್ತ, ಅದು ಇದು – ಸಾಮಾನ್ಯ ಎಲ್ಲವನ್ನುದೇ ತೋರುಸಿದ್ದವು ಹೇಳಿ ಅಲ್ಲಿಗೆ ಹೋಪ ಮೊದಲೇ ಗೊಂತಿತ್ತು.

ತುಳುಗ್ರಾಮಕ್ಕೆ ಎತ್ತಿದ ಕೂಡ್ಳೇ ಆಚಕರೆಮಾಣಿದು ಜೋರೇ ಜೋರು – ಗಡಂಗು ಕಾಣ್ತಿಲ್ಲೆ ಗಡಂಗು ಕಾಣ್ತಿಲ್ಲೆ – ಹೇಳಿಗೊಂಡು. ಮೊದಲೇ ತಲೆಸೆಳ್ಕೊಂಡಿದ್ದ ಪುಟ್ಟಕ್ಕ ಗ್ರಾಮದ ಪಟೇಲ್ರು ಇದ್ದವು ಹೇಳಿಯೂ ಯೋಚನೆ ಮಾಡದ್ದೆ ಮುಸುಡು ಬೀಗುಸಿ ಪರಂಚುಲೆ ಸುರು ಮಾಡಿತ್ತು.
ಕರಿ ಕೋಟಿನ ಮುಂಡಾಸು ಪಟ್ಳೇರು -ಮನೆ ಹೆರದಿಕ್ಕೆ ತೂಗುತ್ತ ಕುರ್ಶಿ ಮಡಿಕ್ಕೊಂಡು ಮೀಸೆ ಅಡೀಲಿ ನೆಗೆ ಮಾಡಿಗೊಂಡು ಇತ್ತು. ಅತ್ಲಾಗಿತ್ಲಾಗಿ ಕೆಲವು ಹೊಡಿಮಕ್ಕೊ ಚೆನ್ನೆಮಣೆ ಆಡಿಗೊಂಡು ಇತ್ತಿದ್ದವು. ಅಲ್ಲಿಂದ ಕೆಳ ಸೇನವನ (ಶ್ಯಾನುಭೋಗ – ಲೆಕ್ಕ ಪತ್ರಗಳ ಅಧಿಕಾರಿ) ಮನೆ, ಪಟ್ಳೇರ ಮನೆಯಷ್ಟು ಗೌಜಿ ಇಲ್ಲೆ, ಹದಾಕೆ. ಉಗ್ರಾಣಿ ಸಂಕೊಲೆ(ಮದಲಿಂಗೆ ಉದ್ದ ಅಳೆತ್ತ ಮಾಪನ) ಹಿಡ್ಕೊಂಡು ತೆಯಾರಿಲಿ ಕೂದಿತ್ತು. ಕೆಳದಿಕ್ಕೆ ಬಜನಾಮಂದಿರಲ್ಲಿ ಪುರುಸೊತ್ತಿಲ್ಲದ್ದೆ ಬಜನೆ ಮಾಡಿಗೊಂಡಿತ್ತಿದ್ದವು. ಅದರ ಕರೇಲಿ ಹೋಟ್ಳು, ಬೊಂಡ, ಎಲ್ಲವುದೇ ಇತ್ತು – ಶುದ್ದಲ್ಲಿ ಕಾಪಿ ಕುಡಿವಲೆ. 😉 . (ಗೋಲಿ)ಸೋಡದ ಅಂಗುಡಿದೇ ಇತ್ತಿದಾ, ಒಪ್ಪಣ್ಣಂಗೆ ಹೊಟ್ಟೆಲಿ ಗೇಸು ತಿರುಗಿದ ಹಾಂಗಾದ್ದು ನೆಂಪಾತು – ಕುಡಿವನಾ? ಕೇಳಿದೆ. ’ಈ ದೂಳಿಂಗೆ ಸೋಡ ಬೇರೆ ನಿನಗೆ!’ – ದೀಪಕ್ಕ ಪರಂಚಿತ್ತು. ಡಾಕ್ಟ್ರುಬಾವಂಗೆ ಪರಂಚಿ ಪರಂಚಿ ಅದೇ ಪಾಡು ಆಗಿ ಹೋಯಿದದಕ್ಕೆ. ಅಲ್ಲಮತ್ತೆ! ಅಂತೂ ಸೋಡ ಕೇನ್ಸಲು!!!
ಅದರಿಂದಲೇ ಎಡತ್ತಿಂಗೆ ಬೆತ್ತದ ಕೆಲಸ ಮಾಡ್ತವರ ಗೂಡು ಇತ್ತು. ಕುರುವೆಯೋ, ಕವಂಗ ಕುರುವೆಯೋ ಎಲ್ಲ. ಒಂದು ಕವಂಗ ಕುರುವೆಗೆ ಉಪಾಯಲ್ಲಿ ಕ್ರಯ ಮಾಡಿದ ಒಪ್ಪಣ್ಣ. ಅಡಕ್ಕೆ ಹೆರ್ಕಲೆ ಅದರಿಂದ ಒಳ್ಳೆದು ಬೇರೆ ಇಲ್ಲೆ ಇದಾ!, ಮನೆಲಿಪ್ಪದರದ್ದು ಹಳತ್ತಾಗಿ ಪಿರಿ ಬಿಟ್ಟಿದು – ಹಾಂಗೆ!
ರಜ್ಜ ಅತ್ಲಾಗಿ ನೋಡಿರೆ ಒಂದು ಸಣ್ಣ ಕೆರೆ ಮಾಡಿ ಓಡ(ದೋಣಿ) ನಡೆಶಿಗೊಂಡು ಇತ್ತಿದ್ದವು. ಮುಂದಕ್ಕೆ ಒಂದು ಗೆದ್ದೆ. ಅದಕ್ಕೆ ಜೊಟ್ಟೆ (ಏತ ನೀರಾವರಿ) ಮೊಗಚ್ಚುದು – ಒಂದು ಮಣ್ಣಗುಂಡಿಂದ. ಗೆದ್ದೆಂದ ಹೆಚ್ಚಾದ ನೀರು ಕಣಿಲಿ ಆಗಿ ಪುನಾ ಅದೇ ಗುಂಡಿಗೆ ಹೋಪದು! ಒಂದು ಗೆಂಡು ಆ ಜೊಟ್ಟೆಕುತ್ತಿಯ ಹಿಡಿವಲ್ಲಿ, ಎರಡು ಹೆಣ್ಣುಗೊ ಬಳ್ಳಿಹಿಡ್ಕೊಂಡು ಹಿಂದಂತಾಗಿ ಇಪ್ಪ ಗುಂಡಿಗೆ ಹಾರುದು. ಗಮ್ಮತ್ತಿದ್ದು. ಅಂದ್ರಾಣ ನೆಂಪುಗೊ.
ರಜ್ಜ ಮೇಗೆ ಕಂಬಳದ ಗೋಣಂಗೊ. ಮೈ ಪೂರ ಹೊಳಕ್ಕೊಂಡು ಇತ್ತು – ಆಚಕರೆ ಮಾಣಿಯ ತಲೆಕಸವಿನ ಹಾಂಗೆ!
ಮುಂದೆ ಗುತ್ತಿನ ಮನೆ. ಗುತ್ತಿನ ಬಂಟ ಗತ್ತಿಲಿ ಕೂದುಗೊಂಡಿತ್ತು. ಸೊಸೆಯಕ್ಕೊ ಈಚೊಡೆಲಿ ಚೆನ್ನೆ ಮಣೆ ಆಡಿಗೋಂಡು ಇತ್ತಿದ್ದವು – ಎರಡುದೇ ನೋಡ್ಳೆ ಗಮ್ಮತ್ತಿತ್ತು!! 😉

ಎರಡು ತಲೆಮಾರು ಹಿಂದಾಣ ಸಾಮಾಜಿಕ ಜೀವನವ ನಿಜರೂಪಲ್ಲಿ ಚಿತ್ರಣವ ಕೊಡ್ಳೆ ಆ ನಾಕೆಕ್ರೆ ಜಾಗೆಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮೆಚ್ಚೆಕ್ಕಾದ್ದೇ. ಹೆಗ್ಡೆ ಹೆಂಡತ್ತಿಯ ಮಂಡೆ ಅಡ ಇದು. ಈ ಗ್ರಾಮಲ್ಲಿದೇ ಎಲ್ಲವುದೇ ಇತ್ತು. ರೂಪತ್ತೆ ಪ್ರಿಜ್ಜಿನ ಪೆಟ್ಟಿಗೆಲಿ ಬೆಳಿಬೆಳಿ ಇತ್ತಲ್ದ, ತರ್ಮೋಕ್ಸು – ಅದಕ್ಕೆ ಪೈಂಟು ಕೊಟ್ಟು ದೊಡ್ಡ ಕಲ್ಲಿನ ಕಂಬ ಕಾಂಬ ಹಾಂಗೆ ಮಾಡಿತ್ತಿದ್ದವು, ಗಟ್ಟಿಗರು. ದೇವಸ್ತಾನಲ್ಲಿ ಬಟ್ರಕೈಂದ ಪ್ರಸಾದ ತೆಕ್ಕೊಂಡವು, ಬೂತಸ್ತಾನಕ್ಕೆ ಹತ್ತತ್ತು ರುಪಾಯಿ ಕಾಣಿಕೆ ಹಾಕಿದ್ದವು ಹೇಳಿ ಆದರೆ, ಅದೆಷ್ಟು ಸ್ವಾಭಾವಿಕತೆ ಎದ್ದು ಕಂಡೊಂಡಿದ್ದಿಕ್ಕು ಗ್ರೇಶಿ ನಿಂಗೊ!
ತುಂಬ ಕುಶಿ ಆತು.

ಅಲ್ಲಿಂದ ಮತ್ತೆ ಸಭಾ ಕಾರ್ಯಕ್ರಮಕ್ಕೆ ಬಂದದು. ಕೊಡೆಯಾಲ ಪರಿಸರದ ಎಲ್ಲಾ ಜಾತಿ-ಪಂಗಡಗಳ ಜೀವನ ಶೈಲಿ ಕಾಂಬಂತಹ ಒಂದು ರೂಪಕ ನೋಡಿಗೊಂಡು ಕೂದ್ದದು. ಅದರ್ಲಿ ಬಟ್ರು ಬೂತದ ಬಂಡಾರ ತೆಗದು, ಬೂತ ಕೊಣುದು, ಊರವಕ್ಕೆ ಬೂಳ್ಯ(ಗಂದ ಪ್ರಸಾದ) ಕೊಡುದರಿಂದ ಹಿಡುದು, ಬ್ಯಾರಿ (ಮಾಪಳೆ)ಗಳ ಮದುವೆಯ ಮುನ್ನಾಣ ದಿನದ ಗೌಜಿ (ಒಪ್ಪಾನ)ಯ ಒರೆಂಗೆ ಸರ್ವತ್ರ ಇತ್ತಿದ್ದು. ನೋಡ್ಳೇ ಒಂದು ಚೆಂದ. ಅದಾದ ಮತ್ತೆ ಕುದ್ರೋಳಿ ಗಣೇಶನ ಮೇಜಿಕ್ಕು (ಜಾದೂ!). ಅದರ ಮೇಜಿಕ್ಕಿಲಿದೇ ತುಳು ಸಂಸ್ಕೃತಿ ಅರ್ಕೊಂಡು ಇತ್ತು. ಮುಂಡಾಸು ಸುತ್ತಿ, ಚಕ್ಕನಕಟ್ಟಿ ಕೂದುಗೊಂಡು, ಸಂದಿ-ಪಾಡ್ದನ ಹೇಳಿಗೊಂಡು – ಮೂರು ಗ್ಲಾಸು ಮಡಗಿ ಅದರೊಳ ನೀರುಳ್ಳಿ ಮಾಯ ಮಾಡಿ ತೋರುಸಿತ್ತು. ಬೂತ ಕಟ್ಟಿಗೊಂಡು ಮಾಯ ಆಗಿ ಪುನಾ ಬಂದು ತೋರುಸಿತ್ತು. ಪುಟ್ಟಕ್ಕ ಅಂತೂ ಕುರ್ಶಿಂದ ಎರಡು ಕೋಲು ಎತ್ತರಕ್ಕೆ ಕೂದುಗೊಂಡು ನೋಡಿತ್ತು – ಅಷ್ಟೊಂದು ಕೊತೂಹಲ, ಮಕ್ಕೊಗೆ.
ಇದರೆಡಕ್ಕಿಲಿ, ಅಟ್ಟಿಲ್ದ ಅರಗಣೆ (ಅಡಿಗೆಯ ಸೊಬಗು) ಹೇಳಿ ಒಂದು ಚೆಪ್ಪರ ಹಾಕಿತ್ತಿದ್ದವು. ಶಾಂತಾಣಿ, ಉಂಡ್ಳಕಾಳು ಎಲ್ಲ ಇತ್ತಡ. ಆಚಕರೆಮಾಣಿ ಅರಾಡಿಯದ್ದೆ ಅಲ್ಲಿಗೆ ಹೋದ°. ಬಂದಮತ್ತೆ ಎಂಗಳತ್ರೆ – ಅಲ್ಲಿಗೆ ಹೋಗಿ ಬಂದೆ, ಉಂಡ್ಳಕಾಳು, ಪುಂಡಿಗಸಿ, ಪತ್ರೋಡೆ, ಕೊಟ್ಟಿಗೆ ಎಲ್ಲ ತಿಂದೆ ಹೇಳಿದ°. ’ಓ! ಮಾಣಿ ಹೋದನೋ, ಅಂಬಗ ಇನ್ನು ನಾವು ಹೋಯೆಕ್ಕು ಹೇಳಿ ಇಲ್ಲೆ, ಎಂತದೂ ಒಳುದಿರ ಅಲ್ಲಿ!!’ ಹೇಳಿ ಪುಟ್ಟಕ್ಕ° ಹೇಳಿತ್ತು. ಹಾಂಗೆ ಎಂಗೊ ಆರುದೇ ಹೋಯಿದಿಲ್ಲೆಯೊ°!

ಎಲ್ಲ ಮುಗುದು ಇರುಳು ಎಂಗೊ ಎಲ್ಲರು ಹೋದ ಅದೇ ವೆವಸ್ತೆಲಿ ಊರಿಂಗೆ ಬಂದದು. ಆಚಕರೆ ಮಾಣಿ ಆರದ್ದೋ ಬೈಕ್ಕಿಲಿ ಬಂದ°. ಪುಟ್ಟಕ್ಕ ಅದರ ಚೆಂಙಾಯಿಯಲ್ಲಿಗೆ ಹೋತು. ದೀಪಕ್ಕ ಇನ್ನೊಂದು ಕಾರಿಲಿ ಹೋಗಿದ್ದದು, ಅದರ್ಲೇ ಒಪಾಸು. ಅವಕ್ಕೆಲ್ಲ ಪರಸ್ಪರ ಪೋನು ತಾಗಿಯೊಂಡು ಇತ್ತಿಲ್ಲೆಡ. ಟವರಿಂಗೆ ಲೋಡುಜಾಸ್ತಿ ಆದ್ದು – ಹೇಳಿ ಆಚಕರೆ ಮಾಣಿ ಹೇದ°. ಮೊಬೈಲು ಇಪ್ಪವೆಲ್ಲ ಪರಂಚಿಗೊಂಡು ಇತ್ತಿದ್ದವು. ನವಗೆಂತ ತಲೆಬೆಶಿ ಇಲ್ಲೆ ಇದಾ!
ಪ್ರಾಯ, ಜಾತಿ, ಊರು ಲೆಕ್ಕ ಇಲ್ಲದ್ದೆ ಪೂರ ಬಯಿಂದವು ಅಲ್ಲಿಗೆ. ಒಪ್ಪಣ್ಣನ ನೆರೆಕರೆಯವೇ ಸುಮಾರು ಜೆನ ಇತ್ತಿದ್ದವೂಳಿ!! ಸಬಾ ಕಾರ್ಯಕ್ರಮಲ್ಲಿ ಕೂದಂಡು ಹಿಂದೆ ತಿರುಗಿ ನೋಡಿರೆ -ಶೋ ದೇವರೇ – ಬಂಡಾಡಿ ಅಜ್ಜಿ! ಕೈಲಿ ಒಂದು ಎಲೆಮರಿಗೆ ಹಿಡ್ಕೊಂಡು. ಈ ಅಜ್ಜಿಯ ಉತ್ಸಾಹ ಮೆಚ್ಚೆಕ್ಕಾದ್ದೇ, ಈ ಪ್ರಾಯಲ್ಲಿದೇ! ಪುಳ್ಳಿಯಕ್ಕಳ ಒಟ್ಟಿಂಗೆ ’ಆನುದೇ ಬತ್ತೆ ಅಂಬಗ’ ಹೇಳಿ ಹೆರಟು ಬಂದದಾಯಿಕ್ಕು. ಬೆಂಗ್ಳೂರಿಲಿರ್ತ ಪದ್ಯಾಣ ಬಾವ ಮೂರುದಿನ ಮದಲೇ ಬೆಂಗ್ಳೂರು ಬಸ್ಸಿಂಗೆ ಟಿಕೇಟು ಮಾಡಿ ಕೂಯಿದನಡ. (ಬಸ್ಸಿಲೇ ಕೂಯಿದನೋ ಗೊಂತಿಲ್ಲೆ!!) ಗುಣಾಜೆಮಾಣಿ ಅಂತೂ ’ಅಮ್ಮನೊಟ್ಟಿಂಗೆ ವೇನಿಲಿ ಹೋಪಲಿದ್ದು’ ಹೇಳಿ ಅಜ್ಜಕಾನ ಬಾವಂಗೆ ಮೆಸೇಜು ಕಳುಸಿದ್ದನಡ. ಬೀಸ್ರೋಡು ಮಾಣಿಗೆ ಕುಶಿಯೋ ಕುಶಿ – ಮುಖ್ಯ(ಅ)ತಿಥಿಗೊಕ್ಕೆ ಬಳುಸುಲೆಡ! ಎಷ್ಟು ಬಳುಸಿದನೋ, ಎಷ್ಟು ಬಿಟ್ಟನೋ – ಮೂರು ಕೇಜಿ ಜಾಸ್ತಿ ಆಯಿದನಡ, ಎರಡು ದಿನಲ್ಲಿ!! ಆದೂರಣ್ಣಂಗೆ ಜ್ವರ ಬಂದು ಸೋತ°! ಇಲ್ಲದ್ರೆ ಅವಂದೇ ಪೇಪರಿನ ಕಂಪ್ಯೂಟರು ಹಿಡಿತ್ತಿತ°. ಪಾಲಾರಣ್ಣ ಬಂದಿತ್ತ°. ಒಪ್ಪಣ್ಣಂಗೆ ಸಿಕ್ಕಿ ’ಮೊನ್ನೆ ಎನ್ನ ಬರ್ತುಡೇ(ಹುಟ್ಟುಹಬ್ಬ) ಕಳಾತು, ಬಾ ಐಸ್ಕ್ರೀಮು ತೆಗಶಿಕೊಡ್ತೆ!!’ ಹೇಳಿ ಕರಕ್ಕೊಂಡು ಹೋದ. ಈಗಾಣ ಒಪ್ಪಣ್ಣಂದ್ರಿಂಗೆ ಅವ ಮಾದರಿ ಆಗಲಿ ಹೇಳಿ ಹಾರೈಸಿಗೊಂಡೆ ಮನಸ್ಸಿಲೇ! ಅಂತೂ ಹೇಳ್ತಾ ಹೋದರೆ ಸುಮಾರು ಜೆನ ಅಕ್ಕು, ಬಂದಿತ್ತಿದ್ದವು.

ಅಜ್ಜಕಾನ ಬಾವ ಮಾಂತ್ರ ಕೈ ಕೊಟ್ಟದೇ! ಅಡಕ್ಕೆ ತೆಗವಲೆ ಕುಂಞ ಬತ್ತೆ ಹೇಳಿದ್ದಡ ಆ ದಿನ! ಚೆಂಬರ್ಪು ಅಣ್ಣ ಬೆಂಗ್ಳೂರಿಲೇ ಬಾಕಿ – ರಜೆ ಇಲ್ಲೆಡ ಅವಕ್ಕೆಲ್ಲ, ಪಾಪ! ಯೇನಂಕೂಡ್ಳಣ್ಣನ ಕೆಮರ ಕೊಂದಲಕಾನಲ್ಲಿ ಬಾಕಿ ಅಡ, ಹಾಂಗಾಗಿ ಬಂದರೂ ಗುಣ ಇಲ್ಲೆ ಹೇಳಿ ಹೆರಟಿದನೇ ಇಲ್ಲೆ! ಒಪ್ಪಕ್ಕಂಗೆ ಯೇವತ್ತಿನಂತೆ ಪರೀಕ್ಷೆ, ಅದರ ಬಿಡಿ. ಎಡಪ್ಪಾಡಿ ಬಾವನಲ್ಲಿ ಆಚಾರಿ ಕೆಲಸ, ಬಿಟ್ಟಿಕ್ಕಿ ಬಪ್ಪಲೆ ಗೊಂತಿಲ್ಲೆ ಇದಾ – ದಾರಂದ ಹೋಗಿ ಕುಂದ ಅಕ್ಕದು ಮತ್ತೆ!! ದೊಡ್ಡಬಾವಂದು ಎಂತರ ಹೇಳಿ ಶುದ್ದಿ ಗೊಂತಾಯಿದಿಲ್ಲೆ. ಆಚೊಡೆಂಗೆ ಹೋಗದ್ದೆ ಎರಡು ದಿನ ಕಳಾತು! ಒಳುದಂತೆ ಬೊಳುಂಬುಮಾವ ಬಯಿಂದವೋ ಗೊಂತಿಲ್ಲೆ.

ಕೆಲವು ಜೆನ ಬಂದೂ ಬಾರದ್ದ ಹಾಂಗಾಯಿದು. ಕಂಡಾಬಟ್ಟೆ ಜೆನ ಆಗಿ, ವಾಹನಂಗೊ ಪೂರ ಮಾರ್ಗಲ್ಲೇ ಬಾಕಿ – ಟ್ರಾಪಿಕ್ಕು ಜೇಮು ಅಡ. ಕುಳಮರುವದ ಅಪ್ಪಚ್ಚಿ ಬೆಳ್ತಂಗಡಿಲೇ ಬಾಕಿ ಅಡ. ಮತ್ತೆ ಅವರ ತಮ್ಮನ ಮನೆಲಿ ಇರುಳಿಂಗೆ ಉಂಡಿಕ್ಕಿ ಒರಗಿದವು. ಚಕ್ರಕೋಡಿ ಚಿಕ್ಕಮ್ಮ ಬೀಸ್ರೋಡಿಂದ ಪ್ರೈವೇಟು ಬಸ್ಸಿಲಿ ಬಂದದಿದಾ! ಅರುವತ್ತು ರುಪಾಯಿ ಟಿಕೇಟಡ, ಅಂತೂ ಉಜಿರೆ ಮಾರ್ಗಂದ ಸಬೆಗೆ ನೆಡಕ್ಕೊಂಡು ಬಪ್ಪಗ ಮೇಜಿಕ್ಕು ಪೂರ ಮುಗುದ್ದು!! ಪಾಪ!

ಮತ್ತೆ ಕೆಲವು ಜೆನ ಬಾರದ್ರೂ ಬಂದ ಹಾಂಗೆ ಆಯಿದು. ಮಾಷ್ಟ್ರುಮಾವನ ಮಗ ಅಮೇರಿಕಲ್ಲಿ ಕೂದಂಡು ಇಂದೆಂತ ಶುದ್ದಿ, ನಾಳೆ ಎಂತ ಶುದ್ದಿ ಹೇಳಿ ಇಂಟರ್ನೆಟ್ಟಿಲಿ ನೋಡಿಗೊಂಡು ಇತ್ತಿದ್ದನಡ. ಪೆರ್ಲದಣ್ಣ ಬೆಂಗ್ಳೂರಿಲಿ ಕೂದಂಡು ನೆಡಿರುಳೊರೆಂಗೆ ಟೀವಿಲಿ ನೋಡಿದನಡ, ಯೆಡಿಯೂರಪ್ಪ ಬಾಶಣ ಮಾಡ್ತದರ. ಮುಳಿಯಾಲದಪ್ಪಚ್ಚಿ ಕನ್ನಡಪ್ರಭ ಪೇಪರಿಲಿ ಓದಿಗೊಂಡು ಕೂದವಡ, ಆ ಬೆಶಿಲಿಂಗೆ ಹೋಪದೆಂತದಕ್ಕೆ- ಇದರ್ಲಿ ಬಪ್ಪಗ ಹೇಳಿಗೊಂಡು.

ಎಂಗೊ ಮೊನ್ನೆ ಒಪಾಸು ಬಪ್ಪಗ ಮಾಷ್ಟ್ರುಮಾವ° ಹೇಳಿದವು:
ಭಾಷೆ ಹೇಂಗೆ ಜಾತಿ ಪರಿಧಿಯ ಮೀರ್ತು ಹೇಳುದಕ್ಕೆ ಇದೊಂದು ಒಳ್ಳೆ ಉದಾಹರಣೆ! ತುಳು ಸಮ್ಮೇಳನಕ್ಕೆ ಮಾಪಳೆಂದ ಹಿಡುದು ಬಟ್ರ ಒರೆಂಗೆ ಎಲ್ಲೊರುದೇ ಬಂದು ಸೇರಿದ್ದವು. ಭಾಷೆ ಜೆನಂಗಳ ಒಟ್ಟುಸೇರುದಕ್ಕೂ ಅವಕಾಶ ಮಾಡ್ತು, ಬೇರೆ ಮಾಡ್ಳುದೇ ಅವಕಾಶ ಮಾಡ್ತು. ಎಲ್ಲ ನಮ್ಮ ಮನಸ್ಥಿತಿಯ ಮೇಗೆ ಹೋವುತ್ತು – ಹೇಳಿಗೊಂಡು.
ಆಂಧ್ರಲ್ಲಿ ಅದೆಂತದೋ- ಬೇರೆ ರಾಜ್ಯ ಆಯೆಕ್ಕು ಹೇಳಿ ಒಂದು ಹೆಬಗ ಊಟಬಿಟ್ಟಿದಡ (ಎಡೆಹೊತ್ತಿನ ಉಪವಾಸ?). ಮದಲಿಂಗೆ ಐನ್ನೂರರ ಮೇಗೆ ಇದ್ದ ರಾಜ್ಯಂಗಳ ಒಟ್ಟುಸೇರುಸಿ, ಇರುವಾರ (ಪುನಾ) ಭಾಷೆಂದಾಗಿ ರಾಜ್ಯ ಒಡದು, ಕರ್ನಾಟಕ-ಕೇರಳ – ಇತ್ಯಾದಿ ಹೆಸರು ಮಡಗಿದವಡ. ನೂರಾರು ಭಾಷೆ ಚಾಲ್ತಿಲಿಪ್ಪ ಭಾರತದ ಹಾಂಗಿಪ್ಪ ದೇಶಲ್ಲಿ ಭಾಷಾವಾರು ರಾಜ್ಯಂಗಳ ಮಾಡಿರೆ ಪೂರೈಸುಗಾ ಬಾವ? ಏ°?
ಇಂದು ಕೇರಳ, ಕರ್ನಾಟಕದ ಹಾಂಗೆ, ನಾಳೆ ಕೊಡವರಿಂಗೆ ಒಂದು ರಾಜ್ಯ, ಮತ್ತೆ ತುಳುವರಿಂಗೆ ಒಂದು ರಾಜ್ಯ, ಅದರಿಂದ ಮತ್ತೆ ಹವ್ಯಕರಿಂಗೆ ಒಂದು ರಾಜ್ಯ… ಇದೆಲ್ಲ ಸಾಧ್ಯವಾ? ತಾತ್ವಿಕವಾ? ಕೇಳುದೂ ಸರಿಯಾ?

ಕೇರಳ, ಕರ್ನಾಟಕ ಒಳ ಕೂದಂಡೇ ತುಳುವರು ತಮ್ಮ ವೈಶಿಷ್ಠ್ಯವ ತೋರುಸಿಗೊಂಡು ಇದ್ದವು.
ಬೇರೆಯೇ ರಾಜ್ಯ ಬೇಕು ಹೇಳಿ ಕೇಳುವ ಎಲ್ಲ ಸಾಧ್ಯತೆ ಇದ್ದರೂ ಕೇಳಿದ್ದವಿಲ್ಲೆ. ಇದುವೇ ಅಲ್ದಾ, ವೈವಿಧ್ಯತೆಲಿ ಏಕತೆ? ವಿಧ ವಿಧದ ಭಾವನೆಗೊ, ವೆಗ್ತಿತ್ವಂಗೊ ಎಲ್ಲ ಮೇಳೈಸಿ, ಚೆಂದಲ್ಲಿ ಒಂದು ಸಮ್ಮೇಳನ ನಡೆಶಿದ ತುಳುವರಿಂಗೆ ಒಪ್ಪಣ್ಣನ ಒಪ್ಪಂಗೊ….!!!

ಹೆಗ್ಡೆ ಒಂದರಿಂದಲೇ ಆದ ಸಂಗತಿ ಅಲ್ಲ ಇದು. ತಳಮಟ್ಟದ ಕಾರ್ಯಕರ್ತ ಗೋವಿಂದನಾಯ್ಕನ ಹಾಂಗಿರ್ತ ಎಷ್ಟೋ ತುಳುಜೆನರ ಪರಿಶ್ರಮ ಇದ್ದು ಇದರ ಹಿಂದೆ. ಯೆಡಿಯೂರಪ್ಪನ ಸರ್ಕಾರವುದೇ ಸಕ್ರಿಯವಾಗಿ ಸೇರಿದ್ದು. ಎಲ್ಲೊರಿಂಗುದೇ ಸಮಾದಾನ ತಪ್ಪ ಹಾಂಗಾದ್ದದು ಈ ಸಮ್ಮೇಳನದ ವೈಶಿಷ್ಠ್ಯ.

ತುಳು ಬೆಳವಲೆ, ಒಳಿವಲೆ ನಮ್ಮೋರದ್ದುದೇ ಒಳ್ಳೆತ ಕೊಡುಗೆ ಇದ್ದು. ಇನ್ನುದೇ ಅದರ ಮುಂದುವರುಷುವ°. ನಮ್ಮ ಮಟವುದೇ ತುಳು ಭಾಷೆಯ ಬಗ್ಗೆ ಸಂಶೋಧನೆ ಮತ್ತೆ ಅಭಿವೃದ್ಧಿಗಾಗಿ ಸಾಕಷ್ಟು ಆಸಕ್ತಿ ವಹಿಸಿಯೋಂಡು ಇದ್ದಡ.

ಅಂತೂ ಸಮ್ಮೇಳನ ಗೌಜಿ ಆಯಿದು.
ತುಳು ಎಷ್ಟು ಗೌಜಿ ಆವುತ್ತು ನೋಡೆಕ್ಕಷ್ಟೆ ಇನ್ನು!!

ಒಂದೊಪ್ಪ: ಭಾಷೆ-ಸಂಸ್ಕೃತಿ ಒಂದೇ ಪಾವೆಲಿಯ ಎರಡು ಮೋರೆಗೊ. ತುಳುನಾಡಿನ ಸಂಸ್ಕೃತಿ ಅರಡಿಯೆಕಾರೆ ತುಳು ಗೊಂತಿರೆಕು. ಅಲ್ದಾ?

ಸೂ: ನಮ್ಮದುದೇ ಹವ್ಯಕ ಸಮ್ಮೇಳನ ಒಂದರಿ ಆಯಿದು, ರಾಮಜ್ಜನ ಕೋಲೇಜಿಲಿ – ಹತ್ತೊರಿಷ ಹಿಂದೆ. ಇನ್ನೊಂದು ಯೇವಗ ಆವುತ್ತೋ?!
ಕಾದು ನೋಡೆಕ್ಕಷ್ಟೆ.!!

ಒಪ್ಪಣ್ಣ

   

You may also like...

8 Responses

 1. sathyanarayana says:

  oppana natara yalarigu bhaashe abimana barakku .avaga agtu oppanna

 2. amma says:

  dane oppannere tulu sammelanatha bagge bareyodundu
  aandatta bhari kusi aandu.dane kavanga kuruvegu rate maltudu dettonante battar atta.illadegu bajjeyi pejjiyara bodchindu gretarodo.gammattu tirgutu vanasu malthutu pidadnedo atta annere.
  eeregu bareyara vaa vishayala tikkundu atta annere.bhaari kusi aandu annere barpi vara oppannereta paterko.hare raama

 3. Ravishankar Doddamani says:

  ಒಪ್ಪಣ್ಣ, ಎನಗೂ ಅಪ್ಪಂಗೂ ಒಟ್ಟಿಂಗೆ ಗೌಜಿ ನೋಡ್ಲೆ ಹೋಪಲೆ ಎಡಿಗಾದ್ಸು ಎಂಗಳ ಸೌಭಾಗ್ಯ. ಮಾವಗಳ ಮನೆ ಅಲೇ ಹತ್ತರೆ ಆದ ಕಾರಣ ಚೆಂದಕೆ ನೋಡಲೆ ಎಡಿಗಾತು. ಹಾಂಗಾಗಿ ಎರಡು ದಿನಲ್ಲಿ ಇಡೀ ತಿರುಗಿದೆಯೊ. ಒಪ್ಪಣ್ಣನ ಅಲ್ಲಿ ಕಾಂಬಲೆ ಸಿಕ್ಕಿದ್ದಿಲ್ಲೆನ್ನೆ ಹೇಲಿ ಬೇಜಾರ. ಇರಳಿ, ಇಲ್ಲಿಗೆ ಎತ್ತಿದ ಮತ್ತೆ ಎಲ್ಲೋರೂ ಕೇಳ್ತವು, ಎಂಗಳ ಕಂಡಿದಿರೋ ಹೇಳಿ. ಎಲ್ಲಿಗೆ ಕಾಂಬದು ಬೇಕೆ.. ಅಷ್ಟೂ ಜೆನ ಅಲ್ದೋ?

 4. deepakka says:

  Allige hogaddavakkude sammelanada sariyada chitrana odagusidde,oodi thuma kushi aatu.

 5. ಅನುಶ್ರೀ ಬಂಡಾಡಿ says:

  ಭಾರೀ ಲಾಯ್ಕಾಯಿದು. ಎಂಗೊ ಅಲ್ಲಿಗೆ ಹೋದರುದೇ ಆ ರಶ್ಶಿಲಿ ಎಂತದನ್ನೂ ಸರಿಯಾಗಿ ನೋಡ್ಲಾಗಿತ್ತಿಲ್ಲೆ. ಗುರ್ತದವ್ವು ಆರಾರು ಬಯಿಂದವು ಹೇಳಿಯೂ ಗೊಂತಾಯಿದಿಲ್ಲೆ. ಅಲ್ಲಿಯಾಣ ಸಂಭ್ರಮದ ಕಾಲುವಾಶಿ ನೋಡಿದ್ದೆಯೊ ಅಷ್ಟೆ. ಒಳುದ್ದೆಲ್ಲ ಈ ಶುದ್ದಿ ಓದಿ ಗೊಂತಾತು. ಒಪ್ಪಣ್ಣ ವಿವರ್ಸುದು ಹೇಳ್ರೆ ಕೇಳೆಕೊ ಮತ್ತೆ…. ಕುಶೀ ಆತು. ಸಮ್ಮೇಳನಕ್ಕೆ ಇನ್ನೊಂದು ರೌಂಡ್ ಹೋಗಿ ಬಂದಾಂಗಾತು.

  ಎಂತ ಇಲ್ಲದ್ರೂ ತುಳುಗ್ರಾಮಲ್ಲಿ ಎಲೆ-ಅಡಕ್ಕೆ ಅಂಗುಡಿ ಒಂದು ಕಂಡಿದು ಅಜ್ಜಿಗೆ… 😉

 6. vidya says:

  ಇದೆಂತ ಕಥೆ ಒಪ್ಪಣ್ಣೋ,,,,ನಿನಗೆ ಕಾಂಬಲೆ ಸಿಕ್ಕದ್ದವೆಲ್ಲ ಬೈಂದವಿಲ್ಲೆ ಹೇಳಿ ಲೆಕ್ಕವೊ?ಏನಂಕೂಡ್ಳು ಅಣ್ಣ ಎರಡೆರಡು ದಿನ ಬೈಂದ…ಸುಮಾರು ಪಟ ತೆಗದ್ದ …..ಅಂಬಗ ಒಪ್ಪಣ್ಣಂಗೆ ಆ ಕತೆ ಗೊಂತಿಲ್ಲೆ ಹೇಳಿ ಆತದ….ಪುಟ್ಟಕ್ಕಂದು ಸರ್ವ ಸುದಾರಿಕೆ ಅಡ…ಶೇಡಿಗುಮ್ಮೆ ಭಾವನ ಏಲ್ಲೋರು ಸೇರಿ ಬಿಟ್ಟಿಕ್ಕಿ ಹೋದ್ದಕ್ಕೆ ಮತ್ತೆ ಅವ ಒಬ್ಬನೇ ಬಂದದಡ….ಎನಗೆ ಸಿಕ್ಕಿತ್ತಿದ್ದ……..

 7. ಒಪ್ಪಣ್ಣ ಬಾವ
  ಎನಗೆ ಬಪ್ಪಲಾಗದ್ದಕ್ಕೆ ಪೂರ್ತ ವಿವರ ಕೊಟ್ಟಿದೆ ಅಲ್ಲದಾ.. ಅದಕ್ಕೆ “ಸೊಲ್ಮೆಲು”..

 8. Vasantha Krishna.K says:

  EEblogu thumba ollediddatha…….. Nammavara ella ottugoodusale olle sangathi idu….. Idu heenge munduvariyali heli enna shubha haraike…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *