ಆಯುರ್ವೇದ ಆರೋಗ್ಯಕ್ಕೆ ಅಪಾಯ ತಕ್ಕೋ…?

February 10, 2011 ರ 12:17 pmಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದ್ರಾಣ ಪ್ರಜಾವಾಣಿ ನೋಡಿದಿರಾ…? ನಾಗೇಶ ಹೆಗಡೆ ವಿಜ್ಞಾನ ವಿಶೇಷ ಹೇಳ್ತ ಅಂಕಣಲ್ಲಿ ಒಂದು ಹೊಸ ಪ್ರಶ್ನೆ ಮಡಗಿದ್ದವು. ಅವರ ಬರಹಂಗೊ ಓದಿಗೊಂಡು ಹೋದ ಹಾಂಗೆ, ವಿಷಯ ಅಪ್ಪನ್ನೆ ಹೇಳಿ ತೋರಿ ಹೋವ್ತು. ಈ ಬರವಣಿಗೆಲಿಯೂ ಅದೇ ಅಭಿಪ್ರಾಯ ಬಪ್ಪ ಸಾಧ್ಯತೆ ಇಪ್ಪ ಕಾರಣ ಬೈಲಿನ ಡಾಕ್ಟ್ರಕ್ಕಳ ಎದುರು ಇದೇ ವಿಷಯ ಮಡಗುತ್ತಾ ಇದ್ದೆ.

ವಿಜ್ಞಾನ ವಿಷಯಂಗಳ ಸಾಮಾನ್ಯ ಜೆನಂಗೊಕ್ಕೂ ಅರ್ಥ ಅಪ್ಪ ಹಾಂಗೆ ಬರೆಸ್ಸರಲ್ಲಿ ನಾಗೇಶ ಹೆಗಡೆ ಒಳ್ಳೆ ಹೆಸರಿದ್ದು. ಹಾಂಗಾಗಿ ಈ ಬರವಣಿಗೆಯ ಕೊಂಡಿ ಇಲ್ಲಿ ಮಡಗುತ್ತಾ ಇದ್ದೆ.

http://prajavani.net/Content/Feb102011/nagesh20110209226435.asp

ಆರೋಗ್ಯಕ್ಕೆ ಅಪಾಯ ತರಬಲ್ಲ ಆಯುರ್ವೇದ
ಬರಹ : ನಾಗೇಶ ಹೆಗಡೆ
ಕೃಪೆ : ಪ್ರಜಾವಾಣಿ

ಬೆಂಗಳೂರಿನ ಆಕಾಶ ನಡುಗುತ್ತಿದೆ. ದಟ್ಟ ಹೊಗೆ ಕಾರುತ್ತ, ಗಡಚಿಕ್ಕುವ ಸದ್ದು ಮಾಡುತ್ತ ‘ಏರೊ ಶೋ’ದಲ್ಲಿ ಜೆಟ್ ವಿಮಾನಗಳು ಗಗನದಲ್ಲಿ ರಂಗೋಲಿ ಬರೆಯುತ್ತಿವೆ. ಇದೇ ವೇಳೆಗೆ ‘ಅಂತರಿಕ್ಷ’ವೂ ನಡುಗುತ್ತಿದೆ. 2ಜಿ ಹಗರಣಕ್ಕೆ ಹೋಲಿಸಿದರೆ ಅದರ ದೊಡ್ಡಣ್ಣನೆನಿಸುವ 4ಜಿ ರೋಹಿತದ ಹಗರಣದಲ್ಲಿ ಇಸ್ರೊ ಬಾಹ್ಯಾಕಾಶ ಸಂಸ್ಥೆ ಸಿಲುಕಿದೆ.ಈ ನಡುವೆ ನೆಲಮಟ್ಟದಲ್ಲಿ ಬೇರೊಂದು ಬಗೆಯ ಕಂಪನಗಳು ಜನಸಾಮಾನ್ಯನ ಆತಂಕವನ್ನು ಹೆಚ್ಚಿಸಿವೆ. ನಮ್ಮ ಮೊಬೈಲ್ ಟವರ್‌ಗಳು ಸಾಕಷ್ಟು ಅಪಾಯಕಾರಿ ಕಿರಣಗಳನ್ನು ಹೊಮ್ಮುತ್ತಿವೆ ಎಂದೂ, ಅವುಗಳ ವಿಕಿರಣ ಸಾಮರ್ಥ್ಯವನ್ನು ಶೇಕಡಾ 90ಕ್ಕೆ ಇಳಿಸಬೇಕೆಂದೂ ಸರ್ಕಾರಿ ಸಮಿತಿ ಹೇಳಿದೆ. ಅಂಥ ಟವರ್‌ಗಳನ್ನು ಬೀಳಿಸುವಂತೆ ದಿಲ್ಲಿಯಲ್ಲಿ ಜನಾಗ್ರಹ ಆರಂಭವಾಗಿದೆ.

ಹಾಗಿದ್ದರೆ ನೆಲಕ್ಕಿಂತ ಕೆಳಗಿನ, ಬೇರುಮೂಲದ ಕ್ಷೇಮ ಸಮಾಚಾರ ಹೇಗೆ? ಅಲ್ಲೂ ಸಣ್ಣದೊಂದು ಕಂಪನ ಆರಂಭವಾಗಿದೆ.ಬೇರು, ಬೊಗಟೆ, ಗೆಡ್ಡೆ ಗೆಣಸು ಮತ್ತಿತರ ಸಸ್ಯಭಾಗಗಳಿಂದ ಸಿದ್ಧವಾಗುವ ಆಯುರ್ವೇದ ಔಷಧಗಳ ಬಳಕೆಯನ್ನು ನಿಷೇಧಿಸಬೇಕೆಂದು ಐರೋಪ್ಯ ಸಂಘ ತೀರ್ಮಾನಿಸಿದೆ. ಮೇ 1ರ ನಂತರ ಐರೋಪ್ಯ ದೇಶಗಳಿಗೆ ಆಯುರ್ವೇದ ಔಷಧಗಳು ಪ್ರವೇಶಿಸುವಂತಿಲ್ಲ. ಅದಕ್ಕೇ ಇನ್ನುಳಿದ ಎರಡು ತಿಂಗಳಲ್ಲಿ ಆದಷ್ಟೂ ಹೆಚ್ಚು ಮೂಲಿಕೆ ಪುಡಿ, ಮಾತ್ರೆ, ಲೇಹ್ಯ, ಕಷಾಯಗಳನ್ನು ತರಿಸಿಟ್ಟುಕೊಳ್ಳಿರೆಂದು ಆಯುರ್ವೇದ ಔಷಧಗಳನ್ನು ಇಲ್ಲಿಂದ ರಫ್ತು ಮಾಡುವ ಕಂಪೆನಿಗಳು ಅಲ್ಲಿನ ಬಳಕೆದಾರರಿಗೆ ಅಂತರ್ಜಾಲದಲ್ಲಿ ಪರೋಕ್ಷ ಜಾಹೀರಾತು ನೀಡತೊಡಗಿವೆ.

ಔಷಧದ ಹೆಸರಿನಲ್ಲಿ ಸಸ್ಯ, ಬೇರು, ಗೆಡ್ಡೆ, ಚಕ್ಕೆಗಳನ್ನು ಭಾರತ, ಚೀನಾ, ಥಾಯ್ಲೆಂಡ್ ಮತ್ತಿತರ ಏಷ್ಯದ ದೇಶಗಳಿಂದ ಕಂಪೆನಿಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಯುರೋಪಿಯನ್ನರಿಗೆ ಮಾರುತ್ತಿವೆ. ಈಚಿನ ವರ್ಷಗಳಲ್ಲಿ ಇಂಥ ಮಾರಾಟದ ಪ್ರಮಾಣ ಅತಿಯಾಗಿದೆ. ಅಲ್ಲಷ್ಟೇ ಅಲ್ಲ, ಅಮೆರಿಕ, ಕೆನಡಾಗಳಲ್ಲೂ ಏಷ್ಯನ್ ದೇಶಗಳ ಪುರಾತನ ಆರೋಗ್ಯ ರಕ್ಷಣಾ ತಂತ್ರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಲಂಗು ಲಗಾಮು ಇಲ್ಲದೆ ಮನೆಮನಗಳಿಗೆ ಇವು ಲಗ್ಗೆ ಹಾಕುತ್ತಿರುವುದು ಅತಿಯಾಯಿತೆಂಬ ಆಕ್ಷೇಪಣೆಗಳೂ ಅಲ್ಲಿ ಕಂಡು ಕೇಳಿಬರುತ್ತಿದ್ದವು.

ಕಾರಣವಿಷ್ಟೆ: ಇಂಥ ಬೇರು ಬೊಗಟೆ ಕಷಾಯಗಳಲ್ಲಿ ಕಲಬೆರಕೆ, ನಕಲಿಗಳಂತೂ ಇದ್ದೇ ಇರುತ್ತವೆ. ಅವುಗಳ ತಪಾಸಣೆ ನಡೆಸುವ ಕೆಲಸ ಸುಲಭವಲ್ಲ. ಇನ್ನು, ನಿಜಕ್ಕೂ ಔಷಧೀಯ ಅಂಶಗಳಿರುವ ಸಸ್ಯಸಾಮಗ್ರಿಗಳ ಮೇಲೆ ಕೂಡ ಐರೋಪ್ಯ ವೈದ್ಯ ಸಂಶೋಧಕರು ಆಕ್ಷೇಪಣೆ ಎತ್ತುತ್ತಲೇ ಇದ್ದಾರೆ.

ಏಕೆಂದರೆ ಅನೇಕ ಸಸ್ಯಗಳಲ್ಲಿ ಔಷಧೀಯ ಗುಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಂಜಿನ ಅಂಶಗಳಿರುತ್ತವೆ. ಅತ್ಯಂತ ಕಾಳಜಿಯಿಂದ ನಂಜಿನ ಅಂಶವನ್ನೆಲ್ಲ ತೆಗೆದು ಸಂಸ್ಕರಿಸಿದರೆ ಮಾತ್ರ ಅನೇಕ ಸಸ್ಯ ಸಾಮಗ್ರಿಗಳು ಔಷಧವಾಗುತ್ತವೆ. ರಫ್ತು ಮಾಡುವವರಲ್ಲಿನ ತೀವ್ರ ಪೈಪೋಟಿಯಿಂದಾಗಿ ಸಂಸ್ಕರಣೆ ಮಾಡದೆಯೇ ಪ್ರಶ್ನಾರ್ಹ ಗುಣಮಟ್ಟದ ಅನೇಕ ದ್ರವ್ಯಗಳು ಅಲ್ಲಿಗೆ ರಫ್ತಾಗುತ್ತಿದ್ದವು. ಈ ಮಧ್ಯೆ ನಾನಾ ಬಗೆಯ ಗಿಡಮೂಲಿಕೆಗಳನ್ನು ಚಿತ್ರಸಮೇತ ರಂಜನೀಯವಾಗಿ ವರ್ಣಿಸಿ ಅಂತರ್ಜಾಲದಲ್ಲಿ ಪ್ರಚಾರ ನೀಡಿದ್ದ ಪರಿಣಾಮವಾಗಿ ಯೋಗ, ಪ್ರಾಣಾಯಾಮಗಳಂತೆ ಇವುಗಳಿಗೂ ಬೇಡಿಕೆ ಹೆಚ್ಚತೊಡಗಿತ್ತು. ಆದರೆ ಸಸ್ಯಮೂಲದ ಯಾವ ಔಷಧವನ್ನು ಹೇಗೆ ಬಳಸಬೇಕೆಂಬ ಬಗ್ಗೆ ನುರಿತ ವೈದ್ಯರ ಶಿಫಾರಸು ಸಿಗುತ್ತಿರಲಿಲ್ಲ.

ಚ್ಯವನ್‌ಪ್ರಾಶದಿಂದ ಹಿಡಿದು ‘ಲಿವ್-52’ವರೆಗೆ ವೈದ್ಯರ ಶಿಫಾರಸಾಗಲೀ, ಪರೀಕ್ಷೆಯ ನಿಗದಿತ ಮಾನದಂಡವಾಗಲೀ ಇರಲಿಲ್ಲ. ಅನೇಕ ಸಂದರ್ಭಗಳಲ್ಲಿ ಕೆಲವು ಔಷಧಗಳ ಅತಿ ಬಳಕೆಯಿಂದ ವಿಪರೀತ ದುಷ್ಪರಿಣಾಮ ಉಂಟಾದ ವರದಿಗಳೂ ಆಗಾಗ ಬರತೊಡಗಿದ್ದವು.

ಉದಾಹರಣೆಗೆ ಅಮೃತಬಳ್ಳಿಯನ್ನೇ ಹೋಲುವ, ಆದರೆ ಪಾರಿವಾಳಗಳಂತೆ ಕಾಣುವ ಸುಂದರ ಹೂ ಬಿಡುವ ಅರಿಸ್ಟೊಲೋಕಿಯಾ (ಅಹಿಗಂಧಾ, ಈಶರ್ಮೂಲ್) ಸಸ್ಯದ ಭಾಗಗಳನ್ನು ಔಷಧಿ ರೂಪದಲ್ಲಿ ದೀರ್ಘಕಾಲ ಸೇವಿಸಿದ್ದ ಪರಿಣಾಮವಾಗಿ ಮೂತ್ರಪಿಂಡಗಳು ವಿಫಲವಾಗಿ ರೋಗಿಗಳು ಸಾವಪ್ಪಿದ ಅಪರೂಪದ ಉದಾಹರಣೆಯೂ ದೊಡ್ಡ ಚರ್ಚೆಗೆ ಕಾರಣವಾಗುತ್ತಿತ್ತು; ಅದನ್ನು ಅವೈಜ್ಞಾನಿಕವಾಗಿ ಸಂಸ್ಕರಿಸಿ ಬಾಟಲಿಯಲ್ಲಿ ತುಂಬಿ ಮಾರಿದ್ದೇ ಕಾರಣವೇ ಅಥವಾ ಶುದ್ಧ ಔಷಧೀಯ ಭಾಗವನ್ನೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ದು ಕಾರಣವೇ, ಯಾರೂ ಯಾವ ತೀರ್ಮಾನಕ್ಕೂ ಬರಲಾಗದಂಥ ಪರಿಸ್ಥಿತಿ ಆಗಾಗ ಉದ್ಭವವಾಗುತ್ತಿತ್ತು.

ಇದಕ್ಕಿಂತ ದೊಡ್ಡ ಸಮಸ್ಯೆ ಏನೆಂದರೆ ಆಯುರ್ವೇದ ಔಷಧಗಳಲ್ಲಿ ಸೀಸ, ಪಾದರಸ ಮತ್ತು ಆರ್ಸೆನಿಕ್ ಈ ಮೂರೂ ಧಾತುಗಳನ್ನು ದೊಡ್ಡ ಪ್ರಮಾಣದಲ್ಲಿ ಭಸ್ಮದ ರೂಪದಲ್ಲಿ ಪುರಾತನ ಕಾಲದಿಂದಲೂ ಬಳಸುತ್ತಾರೆ. ಭಸ್ಮರೂಪದಲ್ಲಿ ಬಳಸುವುದರಿಂದ ದೇಹಕ್ಕೆ ಅನುಕೂಲವೆಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಆದರೆ ಆಧುನಿಕ ವಿಜ್ಞಾನದ ಪ್ರಕಾರ, ಇವೆಲ್ಲವೂ ದೇಹಕ್ಕೆ ನೇರವಾಗಿ ವಿಷವನ್ನು ಸೇರಿಸುತ್ತವೆ- ಭಸ್ಮವಾಗಿರಲಿ, ದ್ರವರೂಪದಲ್ಲಿರಲಿ ಅವು ಕರುಳಿಗೆ ಸೇರಿ ರಕ್ತಗತವಾದರೆ ವಿಷವಾಗಿ ಪರಿಣಮಿಸುತ್ತವೆ. ರೋಮನ್ ಸಾಮ್ರಾಜ್ಯವೇ ಸೀಸ ಲೋಹದ ಅತಿ ಬಳಕೆಯಿಂದಾಗಿ ನಶಿಸಿ ಹೋಯಿತೆಂದು ಹೇಳಲಾಗುತ್ತದೆ. ನೆಪೋಲಿಯನ್ ಸಾವಿಗೆ ಆರ್ಸೆನಿಕ್ ವಿಷವೇ ಕಾರಣವೆಂದು ಹೇಳಲಾಗುತ್ತಿದೆ.

ಪಾದರಸವನ್ನು ಅತ್ಯಲ್ಪ ಪ್ರಮಾಣದಲ್ಲಿ ನಾಲ್ಕಾರು ವರ್ಷಗಳ ಕಾಲ (ಗೊತ್ತಿಲ್ಲದೆ) ಸೇವಿಸಿದ್ದರಿಂದ ಜಪಾನಿನ ಮಿನಾಮಾಟಾ ಪಟ್ಟಣದ ಸಾವಿರಾರು ಜನರು ನರಕಸದೃಶ ಜೀವನ ನಡೆಸಿ, ಸಾವಪ್ಪಿದ್ದು ಅಳಿಸಲಾಗದ ದಾಖಲೆಯಾಗಿದೆ. ಪೆಟ್ರೋಲ್ ಹೊಗೆಯಲ್ಲಿ ಸೀಸದ ಅಂಶ ಇರುವುದು ಅಪಾಯಕಾರಿ ಎಂಬುದು ಸಂಶಯಾತೀತವಾಗಿ ಗೊತ್ತಾಗಿದ್ದರಿಂದಲೇ ಪ್ರಪಂಚದ ಎಲ್ಲ ಕಡೆ ಸೀಸವಿಲ್ಲದ ಪೆಟ್ರೋಲ್ ಬಳಕೆಗೆ ಬಂದಿದೆ.

ಇಂಥ ಅಪಾಯಕಾರಿ ಧಾತುಗಳನ್ನೇ ಪುರಾತನ ಪಂಡಿತರು ಔಷಧವೆಂದು ರೋಗಿಗಳಿಗೆ ನುಂಗಿಸಿದ್ದನ್ನು ‘ಪಾರಂಪರಿಕ ಜ್ಞಾನ’ವೆಂದು ಬಿಂಬಿಸುವುದು ಸರಿಯೆ? ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಮನುಷ್ಯರಕ್ತದಲ್ಲಿ ವಾರಕ್ಕೆ ಹೆಚ್ಚೆಂದರೆ 25 ಮೈಕ್ರೊಗ್ರಾಮ್ ಸೇರಬಹುದು. ಶ್ರೀಲಂಕಾ ಮೂಲದ ವೈದ್ಯ ಸಂಶೋಧಕ ಇಂದಿಕಾ ಗವರಮ್ಮನ್ ಮತ್ತಿತರರು 2008ರಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ಆಯುರ್ವೇದ ಮಾತ್ರೆಗಳನ್ನು ದಿನಕ್ಕೆ 3ರಂತೆ ಸೇವಿಸುತ್ತಿದ್ದ, ಸಾವಿನಂಚಿಗೆ ಬಂದಿದ್ದ ಒಬ್ಬ ರೋಗಿಯ ರಕ್ತದಲ್ಲಿ 200 ಪಟ್ಟು ಹೆಚ್ಚು ಸೀಸವಿಷ ಇದ್ದುದು ಪತ್ತೆಯಾಗಿದೆ.

ರೋಗಿಯ ಚಿಂತಾಜನಕ ಸ್ಥಿತಿಗೆ ಆಯುರ್ವೇದ ಔಷಧವೇ ಕಾರಣವೆಂದು ಹೇಳಿ, ಆ ರೋಗಿ ಬಳಸುತ್ತಿದ್ದ ಮಾತ್ರೆಗಳ ಚಿತ್ರಗಳನ್ನೂ ಪ್ರಕಟಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸೀಸವಿಷವಿದ್ದರೂ ಆ ವ್ಯಕ್ತಿ ಬದುಕಿರುವುದೇ ವೈದ್ಯಕೀಯ ವಿಸ್ಮಯವೆಂದು ಹೇಳಿ, ಆತನ ಸಾವನ್ನು ತಪ್ಪಿಸಲು ನಡೆಸಿದ ವೈದ್ಯಕೀಯ ಸಾಹಸಗಳನ್ನು ವಿವರಿಸಲಾಗಿದೆ.

ಭಾರಲೋಹದ ಭಸ್ಮವನ್ನು ಹಿರಿಯರು ಸೇವಿಸಿದರೆ ಅಪಾಯ ಕೆಲಮಟ್ಟಿಗೆ ಕಡಿಮೆ ಇರುತ್ತದೆ. ಏಕೆಂದರೆ ಕರುಳಿನಲ್ಲಿ ಅದನ್ನು ಹೀರಿಕೊಳ್ಳುವ ಸಾಮರ್ಥ್ಯ ಅಷ್ಟಾಗಿರುವುದಿಲ್ಲ. ಆದರೆ ಮಕ್ಕಳ ಕರುಳಿನಲ್ಲಿ ಅದು ಬಲು ಶೀಘ್ರ ರಕ್ತಗತ ಆಗುವುದರಿಂದ ಅದು ಇನ್ನೂ ತೀವ್ರವಾಗಿ ರಕ್ತಹೀನತೆ, ಕರುಳಿನ ಊತ ಮತ್ತು ಮಾನಸಿಕ ಅಸ್ವಸ್ಥತೆ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ವೈದ್ಯತಜ್ಞರು ಹೇಳುತ್ತಾರೆ.

ಕೆನಡಾ, ಯುಎಸ್‌ಎ, ಇಂಗ್ಲೆಂಡ್, ಅಷ್ಟೇಕೆ, ಭಾರತದಲ್ಲೂ ಆಯುರ್ವೇದ ಔಷಧಗಳ ಮೇಲೆ ನಡೆಸಿದ ಅದೆಷ್ಟೊ ಅಧ್ಯಯನಗಳಲ್ಲಿ ವಿಷಯುಕ್ತ ಭಾರಲೋಹಗಳು ಇರುವುದು ಗೊತ್ತಾಗಿದೆ. ಲ್ಯಾಬ್‌ಗಳಲ್ಲಿ ಅವುಗಳ ಪರೀಕ್ಷೆ ಮಾಡಬೇಕೆಂದೇನೂ ಇಲ್ಲ. ಕೆಲವು ಔಷಧಗಳ ಬಾಟಲಿ ಅಥವಾ ಮಾತ್ರೆ ಪಟ್ಟಿಯ ಮೇಲೆಯೇ ಅವು ಎಷ್ಟು ಪ್ರಮಾಣದಲ್ಲಿವೆ ಎಂಬುದನ್ನು ಬರೆದಿರುತ್ತಾರೆ.

ಅವು ಔಷಧಗಳೇ ಆಗಬೇಕೆಂದೂ ಇಲ್ಲ. ಶಕ್ತಿವರ್ಧಕ, ವೀರ್ಯವರ್ಧಕ ಅರಿಷ್ಟಗಳು, ರಸಪೇಯಗಳು, ಲೇಹ್ಯಗಳು ‘ಆಯುರ್ವೇದ ಸೂತ್ರದ ಪ್ರಕಾರ ತಯಾರಿಸಲ್ಪಟ್ಟಿದ್ದು’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತವೆ. ಆಕರ್ಷಕ ಡಬ್ಬಿಗಳಲ್ಲಿ ಸುಂದರ ಲೇಬಲ್ ಹಚ್ಚಿಸಿಕೊಂಡು ಇಂಥ ರಸಗಳು ಅನೇಕ ಸಂದರ್ಭಗಳಲ್ಲಿ ಮನೆಯ ಪಕ್ಕದ ಶೆಡ್‌ಗಳಲ್ಲೂ ತಯಾರಾಗಿರುವ ಸಂದರ್ಭವಿರುತ್ತದೆ. ಅಲ್ಲಿ ಸಂಸ್ಕರಣೆಯ ಮಾತು ಹಾಗಿರಲಿ, ಮೈಕ್ರೊಗ್ರಾಮ್ ಪ್ರಮಾಣದಲ್ಲಿ ಸೀಸ, ಪಾದರಸವೇ ಮುಂತಾದ ಧಾತುಗಳನ್ನು ಅಳೆದು ಸುರಿಯಬಲ್ಲ ಸಲಕರಣೆಯೂ ಇರಲಾರದು.

ಐರೋಪ್ಯ ಸಂಘದವರು ಆಯುರ್ವೇದ ಔಷಧಗಳಿಗೆ ನಿಷೇಧ ಹಾಕಲು ಬಹುರಾಷ್ಟ್ರೀಯ ಔಷಧಗಳ ಒತ್ತಾಯವೇ ಕಾರಣ ಎಂದು ಅನೇಕ ಆಯುರ್ವೇದ ಕಂಪೆನಿಗಳ ವಕ್ತಾರರು ಆರೋಪಿಸಿದ್ದಾರೆ. ಅದು ನಿಜವೇ ಇದ್ದೀತೆಂದು ಹೇಳುವವರೂ ಆಯುರ್ವೇದದ ಅನಿಯಂತ್ರಿತ ಹಾವಳಿಯ ಬಗೆಗೆ ಎಚ್ಚರಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಷ್ಟೇ ಅಲ್ಲ, ಭಾರತದಲ್ಲೂ ಇಂಥ ಪಾರಂಪರಿಕ ಔಷಧಗಳಲ್ಲಿರುವ ಅನಿಷ್ಟಗಳ ನಿವಾರಣೆಗೆ, ಗುಣಮಟ್ಟದ ವರ್ಧನೆಗೆ ಹಾಗೂ ಶಿಸ್ತುಬದ್ಧ ಮಾನದಂಡಕ್ಕೆ ಒತ್ತಾಯಿಸುತ್ತಾರೆ.

‘ಕ್ಯಾನ್ಸರ್ ಕಾಯಿಲೆಯೆ? ಖಂಡಿತ ಅಲೊಪಥಿ ಡಾಕ್ಟರ್ ಬಳಿ ಹೋಗಬೇಡಿ. ಎಕ್ಸ್‌ವೈಝಡ್ ಪಂಡಿತರು ಗಿಡಮೂಲಿಕೆಯಲ್ಲೇ ಹಂಡ್ರೆಡ್ ಪರ್ಸೆಂಟ್ ವಾಸಿ ಮಾಡುತ್ತಾರೆ’ ಎಂದು ರೋಗಿಗಳ ದಿಕ್ಕು ತಪ್ಪಿಸಿ, ಕಾಯಿಲೆ ಮಾರಕವಾಗುವಂತೆ ಮಾಡುವ ಅಂಧ ಭಕ್ತರೂ ನಮ್ಮಲ್ಲಿದ್ದಾರೆ.

ಭಾರತೀಯ ಆಯುರ್ವೇದ ಪಂಡಿತರ ಮೇಲೆ ಅನೇಕ ಆರೋಪಗಳಿವೆ. ಔಷಧಗಳಲ್ಲಿ ಸ್ಟೆರಾಯಿಡ್ ಸೇರಿಸುವುದು,  ಶೀಘ್ರ ಶಮನಕ್ಕೆ ಅಲೊಪಥಿಕ್ ಔಷಧಗಳನ್ನು ಸೇರಿಸುವುದು, ತಮ್ಮ ಸಾಧನೆಗಳಿಗೆ ಉತ್ಪ್ರೇಕ್ಷಿತ ಪ್ರಚಾರ ಮಾಡುವುದು, ಏಡ್ಸ್‌ನಂಥ ಈಚಿನ ರೋಗಗಳಿಗೂ ಔಷಧವಿದೆಯೆನ್ನುವುದು, ಪುರಾತನ ವಿಧಾನಗಳಲ್ಲಿ ಹೇಳಲಾದ ಗಿಡಮೂಲಿಕೆಗಳು ಲಭ್ಯವೇ ಇಲ್ಲದಿದ್ದರೂ ಬೇರೇನನ್ನೊ ಸೇರಿಸಿ ರಸೌಷಧ ತಯಾರಿಸುವುದು, ಚಿನ್ನ-ಬೆಳ್ಳಿಯಂಥ ಲೋಹಗಳನ್ನು ಸೇರಿಸಿದ್ದೆಂದು ಲೈಂಗಿಕಮಾತ್ರೆಗಳನ್ನು ಮಾರುವುದು,  ಎಲ್ಲ ನಡೆಯುತ್ತವೆ. ಪಾರಂಪರಿಕ ಜ್ಞಾನದ ಬಗ್ಗೆ ನಮ್ಮಲ್ಲಿರುವ ಆದರ, ನಂಬುಗೆಯನ್ನೇ ದುರ್ಬಳಕೆ ಮಾಡಿಕೊಳ್ಳುವ ಇಂಥ ಹುನ್ನಾರಗಳಿಗೆ ನಿಯಂತ್ರಣ ಹಾಕುವುದು ಸುಲಭವಲ್ಲ.

‘ಆಯುರ್ವೇದ ಎಂದರೆ ಕೇವಲ ಔಷಧ ಪದ್ಧತಿಯಲ್ಲ, ಅದೊಂದು ಜೀವನ ವಿಧಾನ’ ಎಂಬುದನ್ನು ಎಲ್ಲರೂ ಹೇಳುತ್ತಾರೆ. ರೋಗ ಬಾರದಂತೆ ತಡೆಯುವ ಸೂತ್ರಗಳೆಲ್ಲ ಅದರಲ್ಲಿ ಸಮೃದ್ಧವಾಗಿ, ಸಮರ್ಥವಾಗಿ ಅಡಕವಾಗಿವೆ. ನಿಸರ್ಗಕ್ಕೆ ಹತ್ತಿರವಾಗಿ, ಸಹ್ಯವಾಗಿ ಬದುಕು ನಡೆಸುತ್ತಿದ್ದರೆ ಅವೆಲ್ಲ ಸರಿ.

ಆದರೆ ನಾವಿಂದು ನಾನಾ ಬಗೆಯ ಕೃತಕ ಕೆಮಿಕಲ್, ಕೃತಕ ವಿಕಿರಣ, ಕೃತಕ ಸಾಮಗ್ರಿಗಳ ನಡುವೆ ಬದುಕುತ್ತಿದ್ದೇವೆ.ಅವುಗಳ ಮಧ್ಯೆ ಪುರಾತನ ವೈದ್ಯ ಪರಂಪರೆಯೂ ತನ್ನತನವನ್ನು ಕಳೆದುಕೊಂಡಿದೆ. ಆದ್ದರಿಂದಲೇ ‘ಕಾಯಿಲೆ ಇಲ್ಲದಿದ್ದಾಗ ಆಯುರ್ವೇದ ಔಷಧ ಪದ್ಧತಿ ಅನುಸರಿಸಿ; ಕಾಯಿಲೆ ಬಂದಾಗ ಅಲೊಪಥಿಯನ್ನು ನಂಬಿ’ ಎನ್ನುತ್ತಾರೆ, ವೈದ್ಯಕೀಯ ಪದವಿ ಪಡೆದಿದ್ದರೂ ಬೆಂಗಳೂರಿನಲ್ಲಿ ತ್ಯಾಜ್ಯಸಂಸ್ಕರಣಾ ಉದ್ಯಮಿಯಾಗಿರುವ ಡಾ. ವಾಮನ ಆಚಾರ್ಯ.

ಈ ಮಧ್ಯೆ ಜನಸಾಮಾನ್ಯರ ಸಂದಿಗ್ಧ ಎಂಥವರಿಗೂ ಅರ್ಥವಾಗುವಂಥದ್ದು. ಒಂದೆಡೆ ನಮ್ಮ ದೇಹವನ್ನು ಯಂತ್ರದಂತೆ ಪರಿಗಣಿಸಿ, ಒಂದಿಷ್ಟು ಮಾತ್ರೆ, ಇಂಜಕ್ಷನ್ ತುಂಬಿ ತಳ್ಳುವ ಅಲೊಪಥಿ. ಇನ್ನೊಂದೆಡೆ, ಹಣಮಾಡುವ ದಂಧೆಯಾಗಿ ಬದಲಾದ ಆಯುರ್ವೇದ ಚಿಕಿತ್ಸಾ ಪದ್ಧತಿ. ಈ ನಡುವೆ ನೀರು, ಹಣ್ಣು, ಹಾಲು, ಜೇನು ಎಲ್ಲವನ್ನೂ ಕಲುಷಿತಗೊಳಿಸಿ ಎಲ್ಲವನ್ನೂ ಭರಾಟೆಯಿಂದ ಮಾರುವ ಉದ್ಯಮಿಗಳು. ಇವೆಲ್ಲವುಗಳಿಂದ ಬಚಾವಾಗಿ ‘ಬದುಕಿದೆಯಾ ಇಂದು ಬಡಜೀವವೇ’ ಎಂದು ಹಾಯಾಗಿ ದಿಂಬಿಗೆ ತಲೆಕೊಡುವ ವಿಧಾನವನ್ನು ಎಲ್ಲಿಂದ ಕಲಿಯೋಣ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ದೊಡ್ಡ ಭಾವಾ.. ಚಿ೦ತನಾರ್ಹ ಲೇಖನ.
  ಆಯುರ್ವೇದ / ಅಲೋಪಥಿ / ಹೋಮಿಯೋಪಥಿ / ಪ್ರಕೃತಿ ಚಿಕಿತ್ಸೆ / ಯೋಗ ಚಿಕಿತ್ಸೆ / ಆಕ್ಯುಪ೦ಕ್ಚರ್ / ಅಥವಾ ಇತರ ಯಾವುದೇ ಚಿಕಿತ್ಸಾ ಪಧ್ಧತಿಗಳಲ್ಲಿ ಯಾವುದರ ಆಯ್ಕೆ ಮಾಡೆಕು ಹೇಳುವದು ರೋಗಿಯ ಸ್ವಾತ೦ತ್ರ್ಯಕ್ಕೆ ಬಿಟ್ಟ ವಿಷಯ. ಇ೦ದ್ರಾಣ ಕಾಲಲ್ಲಿ ಎಲ್ಲಾ ಕ್ಷೇತ್ರ೦ಗಳಲ್ಲಿಯುದೆ ಅಸಲಿ ಮತ್ತು ನಕಲಿ ಧಾರಾಳ ಇದ್ದು. ಇ೦ಥದ್ದರ ತಡವಲೆ ಅಲ್ಲದೊ ISI ಮುದ್ರೆಗೊ ಎಲ್ಲ ಇಪ್ಪದು.. ಚಿನ್ನ ತೆಗೆತ್ತ ವಿಷಯದ ಹಾ೦ಗೆ ಇ೦ಥ ಸ೦ಗತಿಗಳಲ್ಲಿ ವಿಶ್ವಾಸಕ್ಕೆ ದೊಡ್ಡ ಬೆಲೆ ಇದ್ದು. ಎಷ್ಟೋ ವರ್ಷ೦ಗಳಿ೦ದ ಮಾರುಕಟ್ಟೆಲಿ ಇಪ್ಪ ಒಳ್ಳೆ ಹೆಸರು ತೆಕ್ಕೊ೦ಡ ಕ೦ಪೆನಿಗೊ ನಕಲಿ ಸಾಮಾನು ಮಾರವಾಯ್ಕು ಹೇಳ್ತ ವಿಶ್ವಾಸ..
  ಇನ್ನು ಅಸಲಿ ಆದರುದೆ ಅದರ್ಲಿ ಇಪ್ಪ ಮೂಲವಸ್ತುಗೊ ನಮ್ಮ ಶರೀರಕ್ಕೆ ದುಷ್ಪರಿಣಾಮ ಉ೦ಟು ಮಾಡುಗು ಹೇಳ್ತ ವಿಷಯ. ಅದಕ್ಕೆ ಎ೦ತ ಮಾಡುವದು? ನವಗೆ ಲಭ್ಯವಾಗಿಪ್ಪ ಚಿಕಿತ್ಸಾ ರೀತಿಗಳಲ್ಲಿ ಕಮ್ಮಿ ದುಷ್ಪ್ರರಿಣಾಮ ಇಪ್ಪ ರೀತಿಯ ಆಯ್ಕೆ ಮಾಡೆಕಷ್ಟೆ. ಈ ಒ೦ದು ಲೇಖನ೦ದಾಗಿ ಆಯುರ್ವೇದಕ್ಕಿ೦ತ ಅಲೋಪಥಿ ಒಳ್ಳೇದು ಹೇಳಿ ಕಣ್ಣೂಮುಚ್ಚಿ ನ೦ಬಿಕ್ಕಲೆಡಿಗೊ? ಅದೂ ಎಡಿಯ. ಒಟ್ಟಾರೆ ಮೇಗ೦ದ ಎ೦ತ ಮಾಡುವೆ ಹೇದು ತಲೆ ಬೆಶಿ ಆತನ್ನೆಪ್ಪಾ..!!!

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಯಾವುದೆ ಮದ್ದು ಆಹಾರದ ಹಾಂಗೆ ತೆಕ್ಕೊಂಡರೆ ತೊಂದರೆಯೇ. ಬದಲು ಮದ್ದಿನ ಹಾಂಗೆ ಸೇವಿಸೆಕ್ಕು. ಣಾಗೆಶ ಹೆಗ್ಡೆ ಬರದ್ದಲ್ಲಿ ಒಂದು ವಿಶಯ ಸ್ಪಷ್ಟ ಇದ್ದು…ಮದ್ದಿನ ಡಾಕ್ಟ್ರಕ್ಕಳ ಪ್ರಿಸ್ಕಿಪ್ಷನ್ ಇಲ್ಲದ್ದೆ ತೆಕ್ಕೊಂಡರೆ ಅನಾಹುತ ಖಂಡಿತ. ಇದು ಎಲ್ಲ ಪದ್ದತಿಗೊಕ್ಕೆ ಅನ್ವಯ . ಯಾವಾಗಳೂ self medication ಮಾಡುಲೇ ಆಗ.
  ಅಸಲಿ ಮತ್ತೆ ನಕಲಿ ಎಲ್ಲದರಲ್ಲು ಕಾಣುತ್ತು ನಾವು. ನಮ್ಮ ಜಾಗ್ರತೆ ನಾವು ಮಡೆಕ್ಕನ್ನೆ….

  [Reply]

  VN:F [1.9.22_1171]
  Rating: +1 (from 1 vote)
 3. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ನಮಸ್ಕಾರ.
  ನಮ್ಮಲ್ಲಿ ಸದ್ಯಕ್ಕೆ ಈಗ ಹಲವಾರು ಔಷಧೀಯ ಪದ್ಧತಿಗ ಇದ್ದವು. ಅದರ್ಲಿ ನಾವು ಹೆಚ್ಚಾಗಿ ಬಳಸುವ ಆಧುನಿಕ ವೈದ್ಯ ಪದ್ಧತಿ(ಮೊದಲು ಇದ್ದ ಅಲೋಪತಿ ಹೆಸರು ಈಗ ಇಲ್ಲೆ ), ಆಯುರ್ವೇದ, ಹೋಮಿಯೋಪತಿ, ಯುನಾನಿ, ಹಳ್ಳಿಮದ್ದುಗ ಇತ್ಯಾದಿ.
  ಇನ್ನು ಬೇರೆ ಬೇರೆ ದೇಶ೦ಗಳಲ್ಲಿ ಅವರದ್ದೇ ಆದ ನಾಡ ಮದ್ದುಗ ಇರ್ತವು. ಉದಾ: ಚೈನೀಸ್ ಮೆಡಿಸಿನ್.
  ಇದರ್ಲಿ ಆಧುನಿಕ ವೈದ್ಯ ಪದ್ಧತಿಲಿ ಯಾವುದೇ ಮದ್ದು ಕೊಡುವಗ ಅದರ ಪ್ರಯೋಗಶಾಲೆಲಿ ತಯಾರು ಮಾಡಿ ಅದರ ರಾಸಾಯನಿಕ ಕ್ರಮ೦ಗಳ ಪರೀಕ್ಷೆ ಮಾಡಿ ನ೦ತರ ಪ್ರಾಣಿಗಳ ಮೇಲೆ ಪರೀಕ್ಷೆ ಮಾಡಿ ಗುಣದೋಶ೦ಗಳ ತಿಳುದು ನ೦ತರವೇ ಮನುಷ್ಯರಿ೦ಗೆ ಉಪಯೋಗುಸುಲೆ ಬಿಡುದು. ಬಿಡುಗಡೆಯಾದ ಮೇಲೂ ಅದು ಮನುಷ್ಯರ ಮೇಲೆ ಯಾವ ಪರಿಣಾಮ ಬೀರ್ತು ಹೇಳ್ತದರ clinical trials ಮೂಲಕ ಪುನಃ ತಿಳಿವದು ಕ್ರಮ.
  ಆಧುನಿಕ ಪದ್ಧತಿಯ ಮದ್ದುಗಳಲ್ಲಿ side effect ಇದ್ದು ಹೇಳುವ ವಿಶಯ: ಯಾವದೇ ಮದ್ದಿಲಿ ಅಡ್ಡ ಪರಿಣಾಮ ಇದ್ದರೂ ಅದರ ಪರಿಮಾಣ ತು೦ಬಾ ಕಮ್ಮಿ ಇರ್ತು. ಅದಲ್ಲದ್ದೆ ಅಡ್ಡ ಪರಿಣಾಮ೦ದ ಎಶ್ಟೋ ಹೆಚ್ಚು ಪಟ್ಟು ಒಳ್ಳೆ ಪರಿಣಾಮ ಇರ್ತು! ಆ ಒಳ್ಳೆ ಪರಿಣಾಮಕ್ಕೆ ಬೇಕಾಗಿಯೇ ಅಲ್ದ ನಾವು ಮದ್ದು ತಿ೦ಬದು?ಅನಗತ್ಯ ಆರಾರು ಆರೋಗ್ಯ ಇಪ್ಪವಕ್ಕೆ ಮದ್ದು ಕೊಡ್ತವ? ಅಥವಾ ಅನಾರೋಗ್ಯ ಇಪ್ಪವು ಮದ್ದು ತಿನ್ನದ್ದೆ ಬೇರೆ೦ತ ಮಾಡೆಕ್ಕು? ಹಾ೦ಗೆಯೇ ನರಳೆಕ್ಕ? ಆಧುನಿಕ ಪದ್ಧತಿಯ ಮದ್ದುಗಳಲ್ಲಿ ಎಶ್ಟೇ ಅಡ್ಡಪರಿಣಾಮ೦ಗ ಇದ್ದರೂ ಅದರಿ೦ದ ಅಪ್ಪ ತೊ೦ದರೆಗ ಮದ್ದು ಮಾಡದ್ದೆ ರೋಗಿಯ ಹಾ೦ಗೇ ಬಿಟ್ಟರೆ ಅವ೦ಗೆ ಅಪ್ಪ ತೊ೦ದರೆಗಳಿ೦ದ ಸಾವಿರವೋ, ಲಕ್ಷವೋ ಪಾಲು ಕಮ್ಮಿ ಇಕ್ಕು. ಇದರ risk Vs benefit ratio ಹೇಳ್ತವು. ಅದಲ್ಲದ್ದೆ ಈ ಮದ್ದುಗಳ ಅಡ್ಡ ಪರಿಣಾಮ೦ಗ ಕೂಡಾ ಸ೦ಶೋಧನೆ ಮಾಡಿ ಆಗಿರ್ತು. ಹಾ೦ಗಾಗಿ ಮದ್ದು ಕೊಡುವವು ಕೂಡಾ ಪ್ರತಿಯೊ೦ದು ರೋಗಿಯ ಸರಿಯಾಗಿ ಪರೀಕ್ಷೆ ಮಾಡಿ ಅವ೦ಗೆ ಆ ಮದ್ದು ಅಕ್ಕ ಹೇಳಿ ನಿಘ೦ಟು ಮಾಡಿ ಮತ್ತೆಯೇ ಕೊಡುದು.
  ಇದಲ್ಲದ್ದೆ ಮನುಷ್ಯ ಸಹಜವಾದ ವ್ಯ್ತತ್ಯಾಸ೦ದಾಗಿ ಮದ್ದುಗಳ action ವ್ಯತ್ಯಾಸ ಅಕ್ಕು.
  ಬೇರೆ ಕ್ರಮ೦ಗಳ(ಆಯುರ್ವೇದ,ಹೋಮಿಯೋಪತಿ ಇತ್ಯಾದಿ) ಮದ್ದುಗಳ ಬಗ್ಗೆ ಅದರ ಕಲ್ತವೇ ಹೇಳೆಕ್ಕಶ್ಟೆ.

  ಮದ್ದುಗಳಲ್ಲಿ ಕಲಬೆರಕೆ ಇಪ್ಪದು ಅದರ ಮಾಡುವ ಕ೦ಪೆನಿಗಳ ಹಿಕ್ಮತ್ತು. ಉದಾ ಬರದಶ್ಟು ಡೋಸ್ ನ ಮದ್ದಿಲಿ ಅದಕ್ಕಿ೦ತ ಕಮ್ಮಿ ಅ೦ಶ ಇದ್ದರೆ , ಅಥವಾ ಬೇರೆಯೇ ಮದ್ದು ಇದ್ದರೆ ರೋಗಿಗೇ ತೊ೦ದರೆ.

  ಬೇರೆ ಕ್ರಮ೦ಗಳ(ಆಯುರ್ವೇದ,ಹೋಮಿಯೋಪತಿ ಇತ್ಯಾದಿ) ಮದ್ದುಗಳ ಬಗ್ಗೆ ಅದರ ಕಲ್ತವೇ ಹೇಳೆಕ್ಕಶ್ಟೆ.
  ಅವು ಹೇಳುವ ಪ್ರಕಾರ ಅದರ್ಲಿ side effect ಇಲ್ಲೆ. ಆರಿ೦ಗೆ ಗೊ೦ತು? ಇಪ್ಪಲೂ ಸಾಕು. ಆದರೆ ಹೆಚ್ಚಿನ ಆಯುರ್ವೇದ ಮದ್ದುಗ(ಮೊದಲಾಣ) ಸಸ್ಯ ಅಥವಾ ಸಸ್ಯಜನ್ಯ ವಸ್ತುಗಳಿ೦ದಲೇ ತಯಾರು ಮಾಡಿಪ್ಪ ಕಾರಣ ಅವು ಹೆಚ್ಚಿನವು ನಮ್ಮ ಆಹಾರ ವಸ್ತುಗಳೇ ಆಗಿರ್ತು.
  ಆದರೆ ಸಸ್ಯ೦ಗಳಲ್ಲೂ ವಿಷದ ಅ೦ಶ೦ಗ ಇದ್ದು. ಅದೇ ಸೆಸಿಲಿ ಮದ್ದಿನ ಅ೦ಶವೂ ಇರ್ತು. ಹಾ೦ಗಾಗಿ ವಿಶದ ಅ೦ಶವೂ ಇಪ್ಪ ಬೇರು ಸೊಪ್ಪುಗಳ ಮದ್ದಿನ ರೀತಿಲಿ ತಿ೦ದರೆ ತೊ೦ದರೆ ಬಪ್ಪಲೂ ಸಾಕು.

  ಮತ್ತೆ ಮೇಲೆ ಬರದ ಹಾ೦ಗೆ ಸೀಸ, ಪಾದರಸ, ಮತ್ತೆ ಆರ್ಸೆನಿಕ್ ಗಳಲ್ಲಿ ಯಾವದೇ ಮದ್ದಿನ ಅ೦ಶ೦ಗ ಇಲ್ಲೆ. ಈ ಮೂರೂ ಲೋಹ೦ಗ ಮನುಷ್ಯ ಶರೀರಕ್ಕೆ ಬೇಡದ್ದ ವಸ್ತು. ಒ೦ದರಿ ದೇಹದ ಒಳ ಸೇರಿರೆ ಇದರ ಹೆರ ಇಡುಕ್ಕುವಾ೦ಗಿತ್ತ ವ್ಯವಸ್ತೆಯೂ ನಮ್ಮ ದೇಹಲ್ಲಿ ಇಲ್ಲೆ.
  ಆರ್ಸೆನಿಕ್ ನ ಸುಮಾರು ಎರಡೂವರೆ ಸಾವಿರ ವರ್ಷ ಮೊದಲೇ ಮನುಷ್ಯನ ಕೊಲ್ಲುವ ವಿಷವಸ್ತುವಾಗಿ ಉಪಯೋಗಿಸಿಗೊ೦ಡಿತ್ತವು. ಇದಕ್ಕೆ ಬಣ್ಣ, ವಾಸನೆ, ರುಚಿ ಇಲ್ಲೆ. ಯಾವದೇ ಆಹಾರದೊಟ್ಟಿ೦ಗೆ ಬೆರುಸಿ ಕೊಟ್ಟರೆ ತಿ೦ಬವ೦ಗೆ ಗೊ೦ತಾಗ! ತಿ೦ದವನ ರೋಗ ಲಕ್ಷಣ೦ಗಳೂ ಕೊಲೆರಾ ರೋಗವೂ ಒ೦ದೇ ರೀತಿ ಇಪ್ಪ ಕಾರಣ ವಿಶಪ್ರಾಶನದ ಸ೦ಶಯವೂ ಬಾರ!
  ಇದರ ಮೊದಲಿ೦ಗೆ ಕಾಮೋತ್ತೇಜಕ ಆಗಿಯೂ ತೆಕ್ಕೋಡಿತ್ತವು(aphrodisiac). ಈಗ ಎಲ್ಲಾ ರೀತಿಯ ಐಸಿ ಚಿಪ್ಪುಗ, ಸೆಮಿಕ೦ಡಕ್ಟರುಗಳಲ್ಲಿ ಆರ್ಸೆನಿಕ್ ಉಪಯೋಗ ಮಾಡ್ತವಡ, ಪಾದರಸದ ಒಟ್ಟಿ೦ಗೆ.
  ಪಾದರಸವೂ ಕೂಡಾ ನಿಧಾನವಾಗಿ ಶರೀರದ ಅ೦ಗ೦ಗಳಲ್ಲಿ ಶೇಖರಣೆಗೊ೦ಡು ಉಪದ್ರ ಕೊಡುವ ವಸ್ತು.
  ಸೀಸ ಎಲ್ಲಾ ರೀತಿಯ ಪೈ೦ಟುಗಳಲ್ಲಿ, ಮಕ್ಕಳ ಆಟದ ಸಾಮಾನುಗಳಲ್ಲಿ ಇರ್ತು. ಮೊದಲು ಭಾರತಲ್ಲಿ ಪೆಟ್ರೋಲಿ೦ಗೂ ಬೆರುಸಿಗೊ೦ಡಿತ್ತವು.
  ಏನೇ ಇದ್ದರೂ ಯಾವ ವಿಧಾನ ಒಳ್ಳೆದು ಕೆಟ್ಟದು ಹೇಳುದಕ್ಕಿ೦ತ ಗಣೇಶಮಾವ ಹೇಳಿದಾ೦ಗೆ ಕಮ್ಮಿ ತೊ೦ದರೆ ಕೊಟ್ಟು ಹೆಚ್ಚು ಉಪಕಾರ ಮಾಡುವ ಮದ್ದು ತೆಕ್ಕೊ೦ಬದು ಒಳ್ಳೆದು. ಅದರ್ಲಿ ಆಧುನಿಕ ಪದ್ಧತಿಯ ಮದ್ದುಗಳ ದುಶ್ಪರಿಣಾಮ೦ಗಳ ಹೆಚ್ಚಿನದ್ದರ ಸ೦ಶೋಧನೆ ಮಾಡಿ, clinical trial ಗಳ ಮೂಲಕ ಅಧ್ಯನ ಮಾಡಿ ಪ್ರಯೋಗ ಮಾಡುವ ಕಾರಣ ಅದರ ಒಳ್ಳೆದು, ಕೆಟ್ಟದು ಎರಡೂ ಮೊದಲೇ ಗೊ೦ತಾಗಿರ್ತು.
  ಅಥವಾ ಇದಕ್ಕೆಲ್ಲಾ ಕಾರಣ ಕಲಬೆರಕೆಯಾ? ಅದೂ ಗೊ೦ತಿಲ್ಲೆ. ಪೈಸೆಗಾಗಿ ಮದ್ದು ತಯಾರು ಮಾಡುವವು ಏನುದೇ ಮಾಡುಗು.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಲಾಯ್ಕಕ್ಕೆ ವಿವರ್ಸಿದ್ದಿ ಡಾಕ್ಟ್ರೇ, ವೈದ್ಯಪದ್ಧತಿ ಯಾವುದೇ ಆಗಿರಲಿ..ರೋಗಿಯ ಸಮಸ್ಯೆ ಗುಣ ಆಯಕಾದ್ದು ಮುಖ್ಯ. ಎಂಗಳ professor ಎಂಗೊಗೆ ವೈದ್ಯಕೀಯ ವಿದ್ಯಾಭ್ಯಾಸದ ಸುರುವಾಣ ದಿನ ಒಂದು ಮಾತು ಹೇಳಿದ್ದವು…”ಅಲೋಪಥಿ, ಹೋಮಿಯೋಪಥಿ ಅಥವಾ ನ್ಯಾಚುರೋಪಥಿ ..ನಮ್ಮದು ಯಾವುದೇ ಪಥಿ ಆಗಿರಲಿ…ಆದರೆ ಎಲ್ಲಕ್ಕಿಂತ ಮುಖ್ಯ ಇರೆಕಾದ್ದು ಸಿಂಪಥಿ”.

  ಇನ್ನು side effect ನ ಬಗ್ಗೆ ಹೇಳ್ತರೆ…ಎಲ್ಲ ಪದ್ಧತಿಯ ಹೆಚ್ಚಿನ ಎಲ್ಲ ಚಿಕಿತ್ಸೆ/ಮದ್ದಿಲ್ಲಿಯೂ [ಪ್ರಮಾಣ ಹೆಚ್ಚೋ ಕಮ್ಮಿಯೋ] ಅಡ್ಡ ಪರಿಣಾಮ ಇದ್ದೇ ಇದ್ದು. ಅದರ ತಿಳ್ಕೊಂಡು ಚಿಕಿತ್ಸೆ ಕೊಡೆಕಾದ್ದರ ಬಗ್ಗೆ [ಯಾವುದೇ ಪದ್ಧತಿಯ] ವೈದ್ಯರ ನಿರ್ಲಕ್ಷ್ಯ ಸಲ್ಲ. ಅಷ್ಟೇ ಅಲ್ಲದ್ದೆ, ಎನಗೆ ಅನ್ನಿಸುವ ಪ್ರಕಾರ…ಎಲ್ಲ ಪದ್ಧತಿಯ ವೈದ್ಯರಿಂಗೂ ಬೇರೆ ವೈದ್ಯಪದ್ಧತಿಗಳ ಬಗ್ಗೆ ಗೌರವ ಮತ್ತೆ [ರಜ್ಜ] ಜ್ಞಾನ ಇರೆಕಾದ್ದು ಅಗತ್ಯ. ಜ್ಞಾನ ಹೇಳಿರೆ ಎಲ್ಲವನ್ನೂ ತಿಳ್ಕೊಳ್ಳೆಕ್ಕು ಹೇಳಿ ಅಲ್ಲ, ಆದರೆ ಬೇರೆ ಪದ್ಧತಿಯ ಬಗ್ಗೆ ರಜ್ಜ ಆದರೂ ಮಾಹಿತಿ ಇರೆಕ್ಕು. ಎಂತ ಹೇಳ್ತಿ? ಒಬ್ಬನ ಇನ್ನೊಬ್ಬ ಹೀಗಳೆವದರ್ಲೇ ನಾವು ಸಮಯ ಕಳೆತ್ತು ಕೆಲವು ಸರ್ತಿ.
  ಇಲ್ಲಿ ಆನು ಆರನ್ನೂ ಗುರಿಯಾಗಿಸಿಗೊಂಡು ಬರೆತ್ತಾ ಇಪ್ಪದಲ್ಲ, ಇದು ಅನುಭವಕ್ಕೆ ಬಂದ ಕೆಲವು ಅಂಶಂಗೊ. ಇಲ್ಲಿ ಅಭಿಪ್ರಾಯವ ಹೇಳುಲೆ ಒಂದು ಅವಕಾಶ, ಹಾಂಗಾಗಿ ಬರದ್ದೆ…ವಿಮರ್ಶೆ ಆಗಲಿ.

  [Reply]

  VA:F [1.9.22_1171]
  Rating: 0 (from 0 votes)
 4. ಸುವರ್ಣಿನೀ ಕೊಣಲೆ
  Suvarnini Konale

  ಎಲ್ಲಾ ವೈದ್ಯಕೀಯ ಪದ್ಧತಿಗಳೂ ಮುಖ್ಯವೇ..ಯಾವುದೇ ಪದ್ಧತಿಯ ದೂಷಿಸುದು ತಪ್ಪು, ಅದರ ಸಫಲತೆ ಅಥವಾ ಅಸಫಲತೆಗೊಕ್ಕೆ ಕಾರಣ ಅದರ ಅಭ್ಯಾಸ ಮಾಡ್ತ ಜನಂಗಳದ್ದು ಹೇಳಿ ಎನ್ನ ಅಭಿಪ್ರಾಯ. ಆಯುರ್ವೇದ ಆದಿಕ್ಕು ಅಥವಾ ಅಲೋಪಥಿಯೇ ಆದಿಕ್ಕು, ಮೋಸ ಮಾಡುದು ಮನುಷ್ಯ ದುರಾಸೆಂದಾಗಿ. ವೈದ್ಯರಾಗಿ ಜನರಿಂಗೆ ಉಪಕಾರ ಮಾಡೆಕಾದ್ದು ಧರ್ಮ. ಅದಕ್ಕೆ ತಪ್ಪಿ ನಡವದು ಅಧರ್ಮ.
  ಇನ್ನು ಆಯುರ್ವೇದದ ಔಷಧಿಗೊ ಅಪಾಯಕಾರಿ ಹೇಳಿ ಯಾವ ಆಧಾರಲ್ಲಿ ಹೇಳಿದ್ದು? ಯಾವುದನ್ನೇ ಆದರೂ ’ತಪ್ಪು’ ಅಥವಾ ’ಸರಿ’ ಹೇಳಿ ತೀರ್ಮಾನ ಮಾಡುಲೆ ಒಂದು ಆಧಾರ ಬೇಕು, ಆ ಆಧಾರ ಯಾವುದೋ ನಾಲ್ಕು ಅಮೆರಿಕಾ/ಬ್ರಿಟನ್ನಿನ ಸಂಶೋಧನಾ ಸಂಸ್ಥೆಗಳೇ ಎಂತಗೆ ಆಗಿರೆಕ್ಕು? ಒಂದು ವಸ್ತು/ಮದ್ದಿನ () ನಿರ್ಧಾರ ಮಾಡುಲೆ ಒಂದು ಸಂಸ್ಥೆ ಇರೆಕಾದ್ದು ಅಗತ್ಯ, ಆನು ಒಪ್ಪುತ್ತೆ. ಆದರೆ ಲೀಟರ್ ಅಳತೆ ಮಾಡುವ ಪಾತ್ರೆಲಿ ಗ್ರಾಂ ಲೆಕ್ಕ ಮಾಡ್ಲೆ ಎಡಿಗಾ? ಯಾವುದನ್ನೇ ಆದರೂ ಅದರದ್ದೇ ಮಾನದಂಡಲ್ಲಿ ಅಳತೆ ಮಾಡೆಕ್ಕು. ಅದೇ ರೀತಿ ಭಾರತೀಯ ವೈದ್ಯ ಪದ್ಧತಿಗಳ ಕೆಲವು ಅಂಶಂಗಳ ಆಧುನಿಕ ವಿಜ್ಞಾನದ ವಿಧಾನಂಗಳ ಕಣ್ಣಿನ ಮೂಲಕ ನೋಡುವಗ ತಪ್ಪಾಗಿ ಕಾಂಬದು ಸಹಜವೇ! ಸತ್ಯಾಸತ್ಯತೆಗಳ ಕೇವಲ ಪೈಸೆಯ ಲಾಭ-ನಷ್ಟದ ದೃಷ್ಟಿಂದ ನೋಡುದರ ಬಿಟ್ಟರೆ ಮಾಂತ್ರ ಒಳಿತು ಮಾಡುಲೆ ಸಾಧ್ಯ.
  ‘ಕಾಯಿಲೆ ಇಲ್ಲದಿದ್ದಾಗ ಆಯುರ್ವೇದ ಔಷಧ ಪದ್ಧತಿ ಅನುಸರಿಸಿ; ಕಾಯಿಲೆ ಬಂದಾಗ ಅಲೊಪಥಿಯನ್ನು ನಂಬಿ’ — ಈ ಮಾತಿನ ಪ್ರಕಾರ ಒಬ್ಬ ವ್ಯಕ್ತಿ ಪ್ರಾಕೃತಿಕವಾಗಿ ಸಹಜವಾಗಿ ಬದುಕಿರೆ, ಅವಂಗೆ ಅನಾರೋಗ್ಯ ಎಂದಿಂಗೂ ಉಂಟಾಗ! ಆದರೆ ಇನ್ನೊಂದು ಮಾತು ಎಂತ ಹೇಳಿರೆ , ಅನಾರೋಗ್ಯ ಉಂಟಾದಪ್ಪಗ ತಕ್ಷಣ ಆಯುರ್ವೇದ ಚಿಕಿತ್ಸೆ ತೆಕ್ಕೊಂಡರೆ ಹೆಚ್ಚು ಉತ್ತಪ ಫಲಿತಾಂಶ ಇದ್ದು. ಭಾರತೀಯ ವೈದ್ಯಪದ್ಧತಿಗಳ ಬಗ್ಗೆ ತಪ್ಪು ಕಲ್ಪನೆ ಬಪ್ಪಲೆ ಇನ್ನೊಂದು ಕಾರಣ ಎಂತರ ಹೇಳಿರೆ, ಅನಾರೋಗ್ಯ ಉಂಟಾಗಿ, ಅದು ಉಲ್ಬಣಗೊಂಡು, ಬೇರೆ ಬೇರೆ ಆಸ್ಪತ್ರೆಲಿ ಚಿಕಿತ್ಸೆ ತೆಕ್ಕೊಂಡು, ಅಕೇರಿಗೆ ಸಮಸ್ಯೆ ಇನ್ನೂ ಹೆಚ್ಚಾವ್ತಾ ಇದ್ದು ಹೇಳಿ ಆದಮೇಲೆ ಜೆನಂಗೊಕ್ಕೆ ಆಯುರ್ವೇದ ಅಥವಾ ಹೋಮಿಯೋಪಥಿ ಅಥವಾ ಪ್ರಕೃತಿ ಚಿಕ್ತ್ಸೆ ನೆಂಪಪ್ಪದು. ಆ ಹೊತ್ತಿಂಗೆ ದೇಹಲ್ಲಿ ರಜ್ಜವೂ ಶಕ್ತಿ ಇರ್ತಿಲ್ಲೆ, ರೋಗ ತುಂಬಾ ತೀವ್ರ ಆಗಿರ್ತು. ಅದಲ್ಲದ್ದೆ ಅದರೊಟ್ಟಿಂಗೆ ಒಂದಷ್ಟು ಮದ್ದುಗೊ ! ಯಾವುದರ ಹೇಳಿ ಸರಿ ಮಾಡೆಕು ಆಯುರ್ವೇದ ವೈದ್ಯರು? ಅಷ್ಟಲ್ಲದ್ದೆ ..ಒಂದೆರಡು ವಾರಲ್ಲಿ ಗುಣ ಆಯಕ್ಕು ! ರೋಗ ಶುರು ಆಗಿ ಹತ್ತು ವರ್ಷ ಆತು ! ಅಂಬಗ ಇಲ್ಲದ್ದ ಜಾಗೃತೆ ಆಯುರ್ವೇದ ಆಸ್ಪತ್ರೆಗೆ ಬಂದಪ್ಪಗ ಹೆಚ್ಚಾವ್ತು ! ಅಲೋಪಥಿಯ ನಂಬಿದರೆ ತಪ್ಪಲ್ಲ, ಆದರೆ ಕಣ್ಣುಮುಚ್ಚಿ ನಂಬುದು ತಪ್ಪು. ಅದೇ ರೀತಿ ಆಯುರ್ವೇದದ ಬಗ್ಗೆ ಅಪನಂಬಿಕೆಯೂ ಅಲ್ಲ. ಆಯುರ್ವೇದ ಹೇಳಿದ ಕೂಡ್ಲೆ ಸಂಶಯಂದ ನೋಡುದು ಕೂಡ ತಪ್ಪು. ಅಲೋಪಥಿಲಿ ವೈದ್ಯ ಕೊಟ್ಟ ಯಾವ ಮಾತ್ರೆಯನ್ನೂ ಹೆಸರು ಕೂಡ ನೋಡದ್ದೆ ನುಂಗುವ ನಾವು, ಆಯುರ್ವೇದ ಮದ್ದಿನ ಬಗ್ಗೆ ತುಂಬಾ ವಿಚಾರ ವಿಮರ್ಶೆ ಮಾಡಿ ಮತ್ತೆ ತೆಕ್ಕೊಂಬ ಅಭ್ಯಾಸ ಬೆಳಸಿಗೊಂಡಿದು.
  ಆಯುರ್ವೇದ ಇತ್ಯಾದಿ (ಕೆಲವು)ವೈದ್ಯರು ತಪ್ಪು ದಾರಿ ಹಿಡಿವಲೆ ಇನ್ನೂ ಒಂದು ಕಾರಣ ಎಂತರ ಹೇಳಿರೆ, ಸಣ್ಣ ಸಮಸ್ಯೆಗೆ ರೋಗಿ ಬಂದಪ್ಪಗ ’ಇದಕ್ಕೆ ಮದ್ದು ಬೇಡ, ನಿಂಗೊ ಕೊತ್ತಂಬರಿಯೋ ಅಲ್ಲ ಜೀರಿಗೆಯೋ ಅಲ್ಲ ಜಾಯಿಕಾಯಿಯನ್ನೋ ಕಷಾಯ ಮಾಡಿ ಕುಡೀರಿ’ ಹೇಳಿರೆ ಜೆನಂಗೊ ನೆಗೆ ಮಾಡ್ತವು, ಅಲ್ಲದ್ದೆ ಆ ವೈದ್ಯಂಗೆ ಬೆಲೆ ಕೊಡ್ತವಿಲ್ಲೆ. ನಾಲ್ಕಾರು ಮಾತ್ರೆಗೊ, ಇತ್ಯಾದಿ ಕೊಟ್ಟು ಒಂದೈನೂರು ರೂಪಾಯಿ ಬಿಲ್ಲು ಮಾಡಿಯಪ್ಪಗ ಮಾಂತ್ರ ಉತ್ತಮ ವೈದ್ಯ ಹೇಳಿ ತುಂಬಾ ಜೆನರ ಅಭಿಪ್ರಾಯ. ಆದರೆ ಜೀರಿಗೆ ಕಷಾಯಲ್ಲಿ ಗುಣ ಅಪ್ಪದರ ಒಂದು ತಿಂಗಳ ಮಾತ್ರೆಲಿ ಗುಣ ಮಾಡೆಕ್ಕಾದ ಪರಿಸ್ಥಿತಿಯ ಜೆನಂಗೊ ಉಂಟುಮಾಡ್ತವು. ಉಗುರಿಲ್ಲಿ ತುಂಡಪ್ಪದಕ್ಕೆ ಖಡ್ಗ ಉಪಯೋಗ್ಸಿದ ಹಾಂಗೆ.
  ಮದ್ದು ಮಾರುವ ಸಂಸ್ಥೆಗಳದ್ದೂ ಲಾಬಿ ಇದ್ದೇ ಇದ್ದು.
  ಹೀಂಗೆ ..ಆಲೋಚನೆ ಮಾಡ್ತಾ ಹೋವ್ತರೆ ಎಲ್ಲಾ ಸ್ಥರಂಗಳಲ್ಲಿಯೂ ತಪ್ಪುಗೊ ನಡೆತ್ತಾ ಇದ್ದು. ಕಳ್ಳ ವೈದ್ಯರ ಹತ್ತರೆ ಮೋಸಹೋಗದ್ದಷ್ಟು ಜಾಗೃತೆಲಿ ಜೆನಂಗೊ ಇರೆಕ್ಕು. ಜೆನಂಗೊಕ್ಕೆ ಮೋಸಮಾಡದ್ದೆ ವೈದ್ಯ ಧರ್ಮದ ಪಾಲನೆ ಮಾಡುವಷ್ಟು ಬುದ್ಧಿ ವೈದ್ಯರಿಂಗೂ ಇರೆಕ್ಕು.
  ಎಲ್ಲ ವೈದ್ಯ ಪದ್ಧತಿಗಳ ಬಗ್ಗೆಯೂ ಗೌರವ ಇದ್ದುಗೊಂಡು, ಸಹಬಾಳ್ವೆ ಮುಖ್ಯ ಹೇಳ್ತ ಅಂಶವ ಮತ್ತೊಂದರಿ ಹೇಳುಲೆ ಇಚ್ಛೆಪಡ್ತೆ.

  [Reply]

  ಗಣೇಶ ಪೆರ್ವ

  ಗಣೇಶ Reply:

  ಒಳ್ಳೆ ಅಭಿಪ್ರಾಯ.. ಇದರ್ಲಿ ಹೇಳಿದ ಹಲವು ವಿಷಯ೦ಗೊಕ್ಕೆ ಎನ್ನ ಸಹಮತ ಇದ್ದು

  [Reply]

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಬೊಳುಂಬು ಮಾವ Reply:

  ನಾಗೇಶ ಹೆಗ್ಡೆಯ ವೈಚಾರಿಕ ಲೇಖನಕ್ಕೆ ಕೊಟ್ಟ ಸುವರ್ಣಿನಿಯ ಉತ್ತರಕ್ಕೆ ಎನ್ನ ಬೆಂಬಲ ಪೂರ್ತಿ ಇದ್ದು. ಪ್ರತಿಯೊಂದು ವಿಷಯವನ್ನು ಲಾಯಕಿಲ್ಲಿ ವಿಮರ್ಶಿಸಿ ಬರದ್ದು ಅದು. ಹೆಚ್ಚಿನಂಶವೂ, ಐರೋಪ್ಯ ದೇಶಂಗಳಲ್ಲಿ ಆಯುರ್ವೇದ ಔಷಧಂಗಳ ಅಲ್ಲ್ಯಾಣವು ಉಪಯೋಗಿಸಲೆ ಸುರು ಮಾಡಿದ್ದರಿಂದ, ಅಲ್ಯಾಣ ಇಂಗ್ಲೀಶು ಕಂಪೆನಿಗವಕೆ ಲಾಭ ಕಡಮ್ಮೆ ಅಪ್ಪಲೆ ಸುರು ಆತಾಯ್ಕು. ಅದಕ್ಕೆ ಬೇಕಾಗಿ ಹೀಂಗಿರುತ್ತ ಪಬ್ಲಿಸಿಟಿ ಕೊಟ್ಟು, ಆಯುರ್ವೇದ ಮದ್ದುಗವಕ್ಕೆ ನಿಶೇಧ ಹೇರ್ಲೆ ಹೆರಟದಾಯ್ಕು, ಎಂತ ಹೇಳ್ತಿ ?

  [Reply]

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಒಪ್ಪಿದೆ ಅಕ್ಕೋ.. ಲಾಯಕ ಬರದ್ದೆ.

  [Reply]

  VA:F [1.9.22_1171]
  Rating: 0 (from 0 votes)
 5. ಸುವರ್ಣಿನೀ ಕೊಣಲೆ
  Suvarnini Konale

  ಈ ಮೇಲಾಣ ಲೇಖನಲ್ಲಿ ಹೇಳಿದ ಹಾಂಗೆ ಸುಮಾರು ಜೆನ ಬೇರೆ ಬೇರೆ ಹೆಸರಿಲ್ಲಿ ಆಯುರ್ವೇದ(?) ಮದ್ದುಗಳ ತಯಾರು ಮಾಡೀ ಜೆನರ ಮೋಸ ಅಮಾಡುದು ತುಂಬಾ ಸಾಮಾನ್ಯ ಆಯ್ದು, ಆದರೆ ಈ ಕಾರಣಂದಾಗಿ ಆಯುರ್ವೇದವೇ ತಪ್ಪು ಹೇಳಿ ಹೇಳ್ತದು “ದೊಡ್ಡ ತಪ್ಪು”

  [Reply]

  VA:F [1.9.22_1171]
  Rating: 0 (from 0 votes)
 6. ಮಂಗ್ಳೂರ ಮಾಣಿ

  ಮತ್ತೊಂದು ವಿಷಯ ಎನಗೆ ಕಾಣ್ತು,
  ಎಲ್ಲಾ ಮದ್ದುಗೊ ಎಲ್ಲೋರಿಂಗೂ ಆವುತ್ತಿಲ್ಲೆ ಹೇಂಗೋ, ಹಾಂಗೇ ಕಾಲ ದೇಶಕ್ಕೆ ತಕ್ಕ ಹಾಂಗೆ ಬದಲಾವುತ್ತಾ ಹೋವುತ್ತು. ಇಲ್ಲಿಯಾಣೋರಿನ್ಗೆ ಹಿಡಿತ್ತದು ಅಲ್ಲಿ ಇಪ್ಪವಕ್ಕೆ ಹಿಡುದ್ದಿಲ್ಲೆಯೋ ಏನೋ???

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಇದೂ ಆದಿಪ್ಪ ಸಾಧ್ಯತೆಗೊ ಇದ್ದು. ದೇವರು ಸೃಷ್ಠಿ ಮಾಡುವಗ ಒಂದೊಂದು ಕಾಲ, ದೇಶ..ಅದಕ್ಕೆ ತಕ್ಕ ಹಾಂಗೆ ಆಚಾರ ವಿಚಾರ, ಆಹಾರ ವಿಹಾರಂಗಳನ್ನೂ ನಡಕ್ಕೊಂಡು ಬಪ್ಪ ಹಾಂಗೆ ಮಾಡಿದ್ದ, ಹಾಂಗಾಗಿ ಇಲ್ಲಿ ಬೆಳವ ಮದ್ದಿನ ಗಿಡಂಗೊ ಬೇರೆಯಾವುದೋ ಊರಿನ ಜೆನಂಗಳ ದೇಹ ಪ್ರಕೃತಿಗೆ ಒಗ್ಗದ್ದೆ ಇಪ್ಪ ಸಾಧ್ಯತೆ ಇಕ್ಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ/ಜ್ಞಾನ ಎನಗೆ ಇಲ್ಲೆ :(

  [Reply]

  VA:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  Gopalakrishna BHAT S.K.

  ಆಯುರ್ವೇದ ಸಾರಾ ಸಗಟಾಗಿ ತಿರಸ್ಕರಿಸಲಾಗ.ಸರಿಯಾಗಿ ಗೊಂತಿಪ್ಪವರಿಂದ ಮದ್ದು ಮಾಡಿಸೆಕ್ಕು. ಅವು ಸ್ಟೆರಾಯ್ಡ್,ಮಣ್ಣು ಮಸಿ ಎಲ್ಲಾ ಸೇರಿಸಿ ಕೊಡುಲಾಗ.ಇದಕ್ಕೆ ಸರಿಯಾದ ನಿಯಂತ್ರಕ ಕಾನೂನು ಜಾರಿ ಮಾಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 8. ಡಾಮಹೇಶಣ್ಣ
  ಮಹೇಶ

  ಪಾದರಸವ ಮದ್ದು ಆಗಿ ಉಪಯೋಗಿಸುವ ಮೊದಲು ಅದಕ್ಕೆ ಶೋಧನ, ತಾಡನ, ಪೀಡನ….ಹೇಳಿ ಸುಮಾರು ಹದಿನೆಂಟು ಸಂಸ್ಕಾರಂಗ ಇದ್ದು ಹೇಳಿ ರಸಶಾಸ್ತ್ರಲ್ಲಿ ಹೇಳ್ತಡ. ಅದೆಲ್ಲ ಆದರಲ್ಲಿಪ್ಪ ವಿಷವ ತೆಗವಲೆ ಹೇಳಿ ಕೇಳಿದ ನೆಂಪು. ಸರಿಯಾಗಿ ಶುದ್ಧೀಕರಿಸದ್ದರೆ ಎಂತ ತೊಂದರೆ ಹೇಳುವದನ್ನುದೆ ಅದರಲ್ಲಿ ಹೇಳಿದ್ದು ಕಾಣ್ತು.

  [Reply]

  VA:F [1.9.22_1171]
  Rating: +1 (from 1 vote)
 9. ಮುಳಿಯ ಭಾವ
  ರಘುಮುಳಿಯ

  ಯೂರೋಪಿಲಿ ಮಾರಾಟ ಅಪ್ಪ ಪ್ರತಿ ಉತ್ಪನ್ನದ ಗುಣಮಟ್ಟವ ಕಾಪಾಡುಲೆ ಈ ಪ್ರಯತ್ನ ಆಗಿಕ್ಕು.ಎನ್ನ ಉದ್ಯೋಗ ವಹಿವಾಟಿಲಿಯೂ ಯೂರೋಪಿ೦ಗೆ ಭಾರತ೦ದ ಯ೦ತ್ರೋತ್ಪನ್ನ೦ಗಳ ಕಳುಸೊಗ ಈ ರೀತಿಯ ನಿಯಮ೦ಗಳ ಪಾಲಿಸೊದು ಸಾಮಾನ್ಯ ಆಯಿದು.ಅಲ್ಲಿ ಗಿಡಮೂಲಿಕೆ ಮದ್ದುಗಳ ವಹಿವಾಟು ಮಾಡೆಕಾರೆ ಅಲ್ಲಿ ಪರವಾನಗಿ (ಲೈಸೆನ್ಸ್) ಇರೇಕು ಹೇಳುವ ಒ೦ದು ಮುಖ್ಯ ವಿಷಯವ ಬಿಟ್ಟು ಬರದ್ದ ಈ ಪತ್ರಕರ್ತ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಜಯಗೌರಿ ಅಕ್ಕ°ಮಾಲಕ್ಕ°ಯೇನಂಕೂಡ್ಳು ಅಣ್ಣನೀರ್ಕಜೆ ಮಹೇಶಡಾಮಹೇಶಣ್ಣಅನಿತಾ ನರೇಶ್, ಮಂಚಿಬಂಡಾಡಿ ಅಜ್ಜಿಕೆದೂರು ಡಾಕ್ಟ್ರುಬಾವ°ಬಟ್ಟಮಾವ°ಪುತ್ತೂರಿನ ಪುಟ್ಟಕ್ಕಡಾಗುಟ್ರಕ್ಕ°ಅಕ್ಷರ°ಅಜ್ಜಕಾನ ಭಾವಚೂರಿಬೈಲು ದೀಪಕ್ಕಸರ್ಪಮಲೆ ಮಾವ°ಚುಬ್ಬಣ್ಣಗಣೇಶ ಮಾವ°ಎರುಂಬು ಅಪ್ಪಚ್ಚಿಗೋಪಾಲಣ್ಣಶರ್ಮಪ್ಪಚ್ಚಿಕಳಾಯಿ ಗೀತತ್ತೆಪುಣಚ ಡಾಕ್ಟ್ರುಅಕ್ಷರದಣ್ಣಕಾವಿನಮೂಲೆ ಮಾಣಿಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ