ಸುಮಂಗಲೆಯಕ್ಕನ ದನ – ಎ.ಡಿ.ಸಿ.ಪಿ. 4845368

ವಿಷುವಿಶೇಷ ಸ್ಪರ್ಧಾವಿಜೇತೆ, ಸಾಮಾಜಿಕ ಕಳಕಳಿಯ, ಉತ್ತಮ ಬರಹಗಾರ್ತಿ, ಸಂಸ್ಕಾರ-ತಂತ್ರಜ್ಞಾನ ಎರಡರಲ್ಲೂ ಆಸಕ್ತರಾದ ಶೀಲಾಲಕ್ಷ್ಮೀ ಕಾಸರಗೋಡು – ಇವಕ್ಕೆ ಬೈಲಿಂಗೆ ಸ್ವಾಗತಮ್. ಇವರ ಶುದ್ದಿಗೊಕ್ಕೆ ಒಪ್ಪ ಕೊಟ್ಟು ಎಲ್ಲೋರುದೇ ಪ್ರೋತ್ಸಾಹಿಸುವ. ಅವರಿಂದ ಇನ್ನೂ ಹಲವು ಬರವಣಿಗೆಗೊ ಬತ್ತಾ ಇರಲಿ – ಹೇಳುದು ಬೈಲ ಪರವಾಗಿ ಕೋರಿಕೆ.
~
ಗುರಿಕ್ಕಾರ°

ಎ.ಡಿ.ಸಿ.ಪಿ. 4845368

ನೆಗೆಮೋರೆಯ ಶೀಲತ್ತೆ

ಎನ್ನದೂ ಸುಮಂಗಲೆಯಕ್ಕಂದೂ ಚೆಂಙಯಿಪಾಡು ಸುರುವಾಗಿ ಸುಮಾರು ಆರು ತಿಂಗಳಾತು. ಎನ್ನ ಗೆಂಡ ಈ ಊರಿಂಗೆ ವರ್ಗ ಆಗಿ ಬಂದ ಲಾಗಾಯ್ತು ಎಂಗಳ ಗುರ್ತ ಆದ್ದು. ಎನಗೆ ಜವ್ವನಂದಲೇ ಉದಿಯಪ್ಪಗ ೬ ಘಂಟೆಗೆ ವಾಕಿಂಗು ಹೋಪ ಅಭ್ಯಾಸ ಇದ್ದು. ಇಲ್ಲಿಯೂ ಅದರ ಬಿಟ್ಟಿದಿಲ್ಲೆ. ಎಂಗಳ ಈಗಾಣ ಬಿಡಾರ ಇಪ್ಪ ಜಾಗೆ ಒಳ್ಳೆತ ತಗ್ಗಿಲ್ಲಿ ಇಪ್ಪದು. ಹಾಂಗಾಗಿ ಮಾರ್ಗಕ್ಕೆ ಬರೇಕಾರೆ ಒಂದು ದೊಡ್ಡ ಚಡವು ಹತ್ತೇಕು. ಎನ್ನ ಹಾಂಗಿಪ್ಪ ತೋರದ ಹೆಂಗುಸಿನ ಚರ್ಬಿ ಕರಗಲೆ ಅದು ಒಳ್ಳೆದು ಹೇಳುವೋಂ. ಅಲ್ಲಿಂದ ಮುಂದೆ ಒಂದು ಹತ್ತ‌ಐವತ್ತು ಮಾರು ನೆಡೆದರೆ ದೊಡ್ಡ ಮಾರ್ಗ. ಹಾಂಗೆ ಚಡವು ಹತ್ತಿಯಪ್ಪದ್ದೆ ಬಲದ ಹೊಡೆಲಿ ಕಾಂಬದೇ ಸುಮಂಗಲೆಯಕ್ಕನ ಮನೆ ‘ಸುರಾಗ’. ಆನು ಯೇವಾಗಳೂ ಉದಿಯಪ್ಪಗ ಹೋಪ ಹೊತ್ತಿಂಗೆ ಸುರಾಗದ ಗೇಟು ಇಡೀ ತೆಕ್ಕೊಂಡಿರ್ತು. ಅಲ್ಲಿ ಒಂದು ಹೆಮ್ಮಕ್ಕೊ ನಿಂದುಗೊಂಡಿರ್ತು. ಅದರ ಕಾಲಿನ ಬುಡಲ್ಲೇ ಒಂದು ಪ್ಲೇಸ್ಟಿಕ್ಕಿನ ಟಬ್ಬು. ಅದರೊಳಾಂಗೆ ಬಾಯಿ ಹಾಕಿ ಎಂತದೋ ತಿಂದುಗೊಂಡಿಪ್ಪ ಅರೆಕಪ್ಪು ಬಣ್ಣದ ಒಂದು ಊರದನ. ಈ ದೃಶ್ಯ ಯಾವಾಗಲೂ ಎನಗೆ ಕಾಂಗು. ಅವರ ಮನೆಗೆ ಬಪ್ಪ ಕೆಲಸದ್ದೇ ಎಂಗಳಲ್ಲಿಗೂ ಬಪ್ಪ ಕಾರಣ ಎಂಗೊಗೆ ಗುರ್ತ ಅಪ್ಪಲೆ ಹೆಚ್ಚು ದಿನ ಬೇಕಾಯಿದಿಲ್ಲೆ.

ಅಂದು ಎಂಗಳೊಳಾಣ ಮಾತುಕತೆಲಿ ಗೊಂತಾದ್ದು ಎಂತಾ ಹೇಳಿರೆ ಆ ಚೆಂದದ ಹೆಮ್ಮಕ್ಕೊ ಸುಮಂಗಲೆ, ಸುಮಾರು ಅರುವತ್ತು ಅರವತ್ತೆರಡರ ವೈಧವ್ಯ, ಅವಕ್ಕೆ ಮಕ್ಕೊ ಎರಡು ಜೆನ ಮಾಣಿಯಂಗೊ. ಇಬ್ರೂ ಕಲ್ತು ಒಳ್ಳೆ ಕೆಲಸಲ್ಲಿದ್ದವು. ಒಬ್ಬ ಅಮೇರಿಕಲ್ಲಿ, ಇನ್ನೊಬ್ಬ ಬೆಂಗ್ಳೂರಿಲ್ಲಿ. ಈ ದೊಡ್ಡಾ ಹಿತ್ಲು ಮನೆಲಿ ಇವೊಬ್ಬನೇ ಇಪ್ಪದು. ಮಕ್ಕೋ, ‘ಒಬ್ಬನೇ ಇರೇಡ ಅಬ್ಬೇ, ಅದರೆಲ್ಲ ಮಾರಿಕ್ಕಿ ಎಂಗಳೊಟ್ಟಿಂಗೆ ಬಾ’ ಹೇಳ್ತವಾಡ. ಅಂದ್ರೆ ಇವಕ್ಕೆ ಒಂದು ಹೆದರಿಕೆ ಇದ್ದು. ಎಂತರಾ ಹೇಳಿರೆ ಇವು ರಜ್ಜ ಹಳೇ ಕ್ರಮದವು. ಪೂಜೆ, ಪುನಸ್ಕಾರ, ಹಬ್ಬ, ಹರಿದಿನ ಹೇಳಿ ಎಲ್ಲ ಒಳ್ಳೇತ ನಂಬಿಕೆ ಇಪ್ಪ ಜೆನ. ಸೊಸೆಯಕ್ಕೊ ಇಬ್ರೂ ರಾಶಿ ಕಲ್ತಿದವು, ಒಳ್ಳೆ ಕೆಲಸಲ್ಲಿಯೂ ಇದ್ದವು. ಇವು ಇಲ್ಲಿಂದ ಎಲ್ಲ ಬಿಟ್ಟು ಅಲ್ಲಿಗೆ ಹೋಗಿಯಪ್ಪಗ ಅಲ್ಲಿ ಸರಿಹೋಗದ್ರೆ ಮುಂದೆ ಎಂತ ಗೆತಿ? ಸುಮ್ಮನೇ ನಿಷ್ಟೂರಕ್ಕೆ ಕಾರಣ ಎಂತಕೆ? ದೂರ ದೂರಲ್ಲೇ ಒಳ್ಳೇದ್ರಲ್ಲಿ ಇದ್ರೆ ಆತಾನೆ…? ವರ್ಷಲ್ಲಿ ಒಂದೆರಡುವಾರಿ ಅಮೆರಿಕಕ್ಕೋ ಬೆಂಗ್ಳೂರಿಂಗೋ ಹೋಗಿ ಬತ್ತವಾಡ. ಇವರ ಹತ್ರೆ ಸ್ಕೈಪು, ಮೊಬೈಲು, ವಾಟ್ಸಾಪ್ಪು, ಎಲ್ಲ ಇದ್ದಾಡ. ನೆರೆಕರೆಯವು ಎಲ್ಲ ಒಳ್ಳೆ ಪ್ರೀತಿಲಿ ಇದ್ದವಾಡ. ಮತ್ತೆಂತಕೆ ಹೆದರಿಕೆ? ಮಕ್ಕೊ ಅಲ್ಲಿ ಇದ್ರೂ ದಿನಾಗ್ಳೂ ಮಾತ್ನಾಡಿಯೊಂಡೇ ಇರ್ತವಾಡ. ಇಲ್ಲಿ ಕವುಂಚಿ ಮಡುಗಿದ ಅಳಗೆಯ ಮೊಗಚ್ಚಿ ಮಡುಗುವಾಗ ಅದರ ಅಜನೆ ಅವಕ್ಕೆ ಕೇಳುಗು ಹೇಳ್ತಾಂಗೆ ಇದ್ದವಾಡ. ಈಗ ಮತ್ತೆ ಸುಮಂಗಲೆಕ್ಕಂಗೂ ಆರೋಗ್ಯ ಎಲ್ಲ ಸರೀ ಇದ್ದಾಡ. ಅಷ್ಟೂಎಡಿಯದ್ದೆ ಅಪ್ಪಗ ಇದರೆಲ್ಲ ಮಾರುವ ಆಲೋಚನೆ ಮಾಡುವೋಂ ಹೇಳಿಯೊಂಡು ಇಲ್ಲೇ ಇಪ್ಪದಾಡ.

ಈಗ ಕೆಲವು ವರ್ಷಂದ ಈ ದನಕ್ಕೂ ಸುಮಂಗಲೆಯಕ್ಕಂಗೂ ಚೆಂಙಯಿಪಾಡು ಆದ್ದದಾಡ. ಅದು ಬಪ್ಪಲೆ ಸರುಮಾಡಿದ ಮತ್ತೆ ಇವು ಅಶನಕ್ಕೆ ಅಕ್ಕಿ ಹಾಕುವಾಗ ಒಂದು ಮುಷ್ಟಿ ಹೆಚ್ಚೇ ಹಾಕುವದಾಡ. ಅದು ಯೇವಾಗಳೂ ಒಂದೇ ಹೊತ್ತಿಂಗೆ ಬಪ್ಪದ್ರ ಆನೂ ಗೋಷ್ಟಿ ಮಾಡಿತ್ತಿದ್ದೆ. ಈಗೀಗ ಅದು ಅಶನ ತಿಂದು ಮುಗುಶುವವರೆಗೂ ಎಂಗಳ ಪಟ್ಟಾಂಗ ಮುಂದುವರಿಗು. (ಎನ್ನ ಗೆಂಡ ಮನೆ ಕೆಲಸಲ್ಲಿ ಎನಗೆ ತುಂಬ ಸಾಕಾರ ಕೊಡ್ತ ಕಾರಣ ಹಾಂಗೆ ಪಂಚಾತಿಗೆ ಮಾಡ್ಲಾವುತ್ತು). ಆ ದನ ಎಂತ ಮಾಡುಗು ಹೇಳಿರೆ ಅಶನ ಎಲ್ಲ ಮುಗಿಶಿಕ್ಕಿ ಒಂದಾರಿ ಎನ್ನ ಹತ್ರೆ ಬಕ್ಕು. ಎನ್ನ ಕೈಲಿಪ್ಪ ಮೊಬೈಲಿನ ಒಂದಾರಿ ಮೂಸಿ ನೋಡುಗು. ಮತ್ತೆ ಸುಮಂಗಲೆಯಕ್ಕನ ಕೈಯ ಒಂದಾರಿ ನಕ್ಕಿಕ್ಕಿ ಸೀತ ದೊಡ್ಡ ಮಾರ್ಗಕ್ಕೆ ಹೋಕು. ಮಾರ್ಗದ ಆಚೊಡೆಲಿ ಎಲ್ಲ್ಯೋ ಅದರ ಮನೆ ಆದಿಕ್ಕೇನೋ? ಕೆಲವು ಸರ್ತಿ ಅದಕ್ಕೆ ತಿಂದಾದ ಮೇಲೆಯೂ ಎಂಗಳ ಪಟ್ಟಾಂಗ ಮುಂದುವರಿತ್ತ ಕ್ರಮ ಇದ್ದು. ಅಂಬಗ ಈ ದನ ಎಂತ ಮಾಡುಗು ಹೇಳಿದ್ರೆ ಅರೆಕಣ್ಣು ಮುಚ್ಚಿ ಬಾಯಾಡ್ಸಿಯೋಂಡೆ ಅಲ್ಲೇ ನಿಲ್ಲುಗು. ಆನು, ‘ಇನ್ನು ಹೋವುತ್ತೆ ಸುಮಂಗಲೆಯಕ್ಕ’ ಹೇಳಿಕ್ಕಿ ಹೆರಟನೋ ಅದೂದೆ ಅದರ ದಾರಿಗೆ ಹೋಕು. ಆನು ಜಾನ್ಸಲಿದ್ದು, ಎಂಗೊ ಮಾತಾಡಿದೆಲ್ಲ ಅದಕ್ಕೂ ಗೊಂತಾವುತ್ತಾಯಿಕ್ಕು ಹೇಳಿ.

ಒಂದ್ಸರ್‍ತಿ ಸುಮಂಗಲೆಯಕ್ಕ ಆ ದನಕ್ಕೆ ಮೈಸೂರುಪಾಕು ತುಂಬಾ ಇಷ್ಟ ಹೇಳಿಯಪ್ಪಗ ಎನಗೆ ನೆಗೆ ಬಂದು ತಡೆಯ. ಅಷ್ಟು ಹಿರಿಯರ ಎದುರು ನೆಗೆ ಮಾಡ್ಲೆ ಎಡಿಗೋ? ಪಾಪ…, ಒಂಟಿ ಜೀವ…, ಹಾಂಗಾಗಿ ಈ ಮೂಕ ಪ್ರಾಣಿಯ ತುಂಬಾ ಹಚ್ಚಿಗೊಂಡಿದವು ಹೇಳಿ ಜಾನ್ಸಿದೆ. ಅವು ಮೈಸುರುಪಾಕು ಮಾಡಿದ ದಿನ ಎನಗೂ ನಾಕು ತುಂಡು ಕೊಡುಗು. ಅಳಿಯನೊಟ್ಟಿಂಗೆ ಗಿಳಿಯಂಗೂ ಹೇಳ್ತಹಾಂಗೆ ದನಕ್ಕೆ ಮೈಸೂರ್‍ಪಾಕು ಮಾಡಿದ ಹೆಳೇಲಿ ಎನಗೂ ಸಿಕ್ಕಲೆ ಸುರುವಾತು. ಹಿಂಗೇ ಎಂಗಳೊಳಾಣ ಅನ್ಯೋನ್ಯತೆ ಸುಮಾರು ಆರು ತಿಂಗಳು ಮುಂದುವರ್‍ದತ್ತು. ಇದರೆಡೆಲಿ ಸುಮಂಗಲೆಯಕ್ಕ ಹದಿನೈದು ದಿನಕ್ಕೆ ಬೆಂಗ್ಳೂರಿಂಗೆ ಹೋಗಿಯೊಂಡು ಬಂದವು. ಅವು ಇಲ್ಲದ್ದಿಪ್ಪಗ ಮನೆ ಕಾವಲಿಂಗೆ ನಿಂದ ಕೆಲಸದ ಹೆಣ್ಣೇ ದನಕ್ಕೆ ಅಶನ ಕೊಟ್ಟೊಂಡಿತ್ತಿದ್ದು. ಒಂದು ದಿನ ದನದ ಎಡದ ಕೆಮಿಲಿ ಒಂದು ಝಾಲರು ನೇತೊಂಡು ಕಂಡತ್ತು. ಅರಿಶಿನ ಬಣ್ಣದ ಪ್ಲೇಸ್ಟಿಕ್ಕಿನ ತುಂಡಿನ ಮೇಗೆ ಕಪ್ಪು ಪೈಂಟಿಲ್ಲಿ ಎ.ಡಿ.ಸಿ.ಪಿ. 4845368 ಹೇಳಿ ಬರದಿತ್ತಿದ್ದು. ಓ…,ವಿಮೆ ಮಾಡ್ಸಿದ್ದವು ಹೇಳಿ ಮಾತ್ನಾಡಿಗೊಂಡೆಯೊಂ.
ಅಪ್ಪು.., ಮತ್ತೆ ಮಾಡ್ಸದ್ದೆ ಕಳಿಗೋ? ದನದ್ದೂ ಮನುಷ್ಯಂದೂ ಹಲ್ಲಿನ ರಚನೆ ಒಂದೇ ಹಾಂಗಿಪ್ಪದಾಡ. ಸಸ್ಯಾಹಾರ ಅಗಿವಲೆ ಹೇಂಗೆ ಬೇಕೋ ಹಾಂಗೆ. ದನ ಇನ್ನೂ ಅದರಲ್ಲೇ ಇದ್ದು. ಮನುಷ್ಯ ಮಾಂತ್ರ ಮದಾಲು ಮೊಟ್ಟೆ ತಿಂಬಲೆ ಸುರು ಮಾಡಿದಂವ ಮತ್ತೆ ಮೀನಿಂಗೆ ಬಾಯಿ ಹಾಕಿದ. ಅದಾದಿಕ್ಕಿ ಕೋಳಿ, ಕುರಿ, ಆಡು, ಹಂದಿ…, ಇದಿಷ್ಟೂ ಸಾಲ ಹೇಳಿ ದನದ ಮಾಂಸ ತಿನ್ನದ್ರೆ ಒರಕ್ಕೇ ಬಾರ ಹೇಳ್ತ ಸ್ಥಿತಿಗೆ ಬಂದು ನಿಂದಿದ. ಹಟ್ಟಿಲಿ ಇಪ್ಪದ್ರನ್ನೇ ಹಾರ್‍ಸಿಗೊಂಡು ಹೋಪವಕ್ಕೆ ಮಾರ್ಗಲ್ಲಿ ಹೋಪದು ಯೇವ ಲೆಕ್ಕ? ಅಂತೂ ಸುಮಂಗಲೆಯಕ್ಕನ ದನಕ್ಕೂ ಕೆಮಿಗೆ ಝಾಲರು ಬಂತು.

ಮೊನ್ನೆ ಸುಮಂಗಲೆಯಕ್ಕ ಭಾರೀ ಸಂಭ್ರಮಲ್ಲಿ ಹೇಳಿತ್ತಿದ್ದಿವು, ಅವರ ಬೆಂಗ್ಳೂರು ಸೊಸೆ ಬಸರಿ ಆಯಿದಾಡ. ಮೂರು ತಿಂಗಳವರೆಂಗೆ ಒಳ್ಳೇತ ರೆಶ್ಟಿಲ್ಲಿರೇಕು ಹೇಳಿ ಡಾಕ್ಟ್ರೆತ್ತಿ ಹೇಳಿದ್ದಾಡ. ಹಾಂಗೆ ಆ ಸೊಸೆ ಕೆಲಸಕ್ಕೆ ರಜೆ ಹಾಕಿ ಇಲ್ಲಿ ಎರಡ್ಮೂರು ತಿಂಗಳು ನಿಂಬಲೆ ಬತ್ತಾಡ. ಬಪ್ಪ ಆದಿತ್ಯವಾರ ಬಪ್ಪದಾಡ. ಸೊಸೆ ಇಪ್ಪಾಗ ಆನು ಗೆಂಡ, ಮಗಳೊಟ್ಟಿಂಗೆ ಅವರಲ್ಲಿಗೆ ಒಂದು ಊಟಕ್ಕೆ ಹೋಯೇಕು ಹೇಳಿ ಸುಮಂಗಲೆಯಕ್ಕ ಎನಗೆ ಕಡ್ಡಾಯದ ಹೇಳಿಕೆಯೂ ಕೊಟ್ಟಿದವು.

ಆ ದಿನ ಆನು ವಾಕಿಂಗಿಂಗೆ ಹೆರಡುವಾಗಲೇ ತಡವಾತು. ಮುನ್ನಾಣ ದಿನ ಇರುಳು ಮಗಳ ಶಾಲೆಲಿ ನಾಟಕ, ಡೇನ್ಸು ಎಲ್ಲ ಇತ್ತಿದ್ದು. ಮಗಳಿಂಗೂ ನಾಟಕಲ್ಲಿ ಪಾರ್ಟು ಇತ್ತಿದ್ದು. ಹಾಂಗೆ ಮನೆಗೆ ಎತ್ತುವಾಗಳೇ ನೆಡು ಇರುಳು ಕಳುದ್ದು. ಹಾಂಗಾಗಿ ಉದಿಯಪ್ಪಗ ಏಳುವಾಗ ದೊಡ್ಡಾ ಬೆಣಚ್ಚಾಗಿ ಹೋತು. ಪುಣ್ಯಕ್ಕೆ ಅಂದು ಆದಿತ್ಯವಾರ ಆದಕಾರಣ ಗಡಿಬಿಡಿ ಇಲ್ಲೆನ್ನೆ ಹೇಳಿ ಜಾನ್ಸಿ ವಾಕಿಂಗಿಂಗೆ ಹೆರಟೆ. ಚಡವಿನ ಹತ್ರೆ ಎತ್ತಿಯಪ್ಪಗ ನೋಡ್ತೆ…, ಆ ದನ ಬೀಲ ಕುತ್ತ ಹಿಡ್ಕೊಂಡು ಓಡಿಯೋಂಡು ಬತ್ತು! ಹೇ೦…? ಇದೆಂತ ಕತೆ…? ಎನ್ನ ಕಂಡದೇ ಸೈ.., ಬೆರ್ಚಪ್ಪನ ಹಾಂಗೆ ನಿಂದತ್ತು. ಕೆಮಿ ಇನ್ನೂ ಕುತ್ತವೇ ಇದ್ದು. ಮೂಗಿನ ಒಟ್ಟೆ ಅರಳಿ ದುಸು ಬುಸು ಹೇಳಿ ಗಾಳಿ ಹೆರಡ್ಸಿತ್ತು. ಇಷ್ಟು ಸಮಯಲ್ಲಿ ಒಂದ್ಸರ್ತಿಯೂ ಈ ದನ ಈಚ ಹೊಡೆಂಗೆ ಬಂದದೇ ಇಲ್ಲೆ. ಸುಮಂಗಲೆಯಕ್ಕ ಕೊಟ್ಟದರ ತಿಂದಿಕ್ಕಿ ಸೀತ ಆಚ ಹೊಡೆಂಗೇ ಹೋಕಷ್ಟೆ. ಅದರ ಮನೆ ಇಪ್ಪದು ಆಚ ಹೊಡೆಯಲ್ದೋ? ಇಂದೆಂತ ಹೀಂಗೆ…? ಅದೂ ಈ ಉಗ್ರ ರೂಪಲ್ಲಿ…? ಮರುಳು ನಾಯಿಯೋ ಮಣ್ಣೋ ಕಚ್ಚಿದ್ದೋ? ಹಾವೋ ಮತ್ತೊ ಕಂಡು ಹೆದರಿತ್ತೋ? ಅಂದ್ರೆ ಎನ್ನ ನೋಡಿಯಪ್ಪಗ ಶಾಂತ ಆತನ್ನೇ? ಹಾಂಗೆ ಎಂತೂ ಆಗಿರ ಹೇಳಿ ಜಾನ್ಸಿದೆ. ಹಾಂಗೆ ಬಂದದು ಎನ್ನ ದಾರಿಗೆ ಅಡ್ಡ ನಿಂದತ್ತನ್ನೆ..? ಸುಮಂಗಲೆಯಕ್ಕನ ಮನೆ ಹೊಡೆಂಗೆ ನೋಡಿ ‘ಅಂಬಾ…’ ಹೇಳಿ ಅಟ್ಟಹಾಸ ಹಾಕಿ ಕೂಗಿತ್ತು. ಮತ್ತೆ ಎನ್ನ ನೋಡಿತ್ತು. ಎಲ…ಇದೆಂತ ಕತೆ? ಇದು ಎಂತರ ಹೇಳುವದು ಹೇಳಿ ಎನಗೆ ಗೊಂತಾಯೆಕನ್ನೆ? ರಜಾ ಹೊತ್ತು ಕಳುದಿಕ್ಕಿ ಪುನಃ ಸುರಾಗದ ಹೊಡೆಂಗೆ ನೆಡವಲೆ ಸುರುಮಾಡಿತ್ತು. ತಿರುಗಿ ತಿರುಗಿ ಆನು ಬತ್ತನೋ ಹೇಳಿಯೂ ನೋಡಿಗೊಂಡತ್ತು. ಅದರ ಹಿಂದೆಯೇ ಆನುದೆ ಹೋದೆ. ಎನಗೆ ಹೇಂಗಾರೂ ಅಲ್ಲೇನ್ನೆ ಹೋಯೇಕಾದ್ದದು? ಹೋ… ಸುರಾಗದ ಗೇಟಿನ ಬೀಗ ತೆಗದ್ದಿಲ್ಲೆ…, ಅದಕ್ಕೇ ಇದು ಕೋಪ್ಸಿದ್ದದು…! ಯಾವಾಗಲೂ ದನ ಬಪ್ಪ ಹೊತ್ತಿಂಗೆ ಗೇಟಿನ ಬೀಗ ತೆಗದು (ಅವು ಒಬ್ಬನೇ ಇಪ್ಪ ಕಾರಣ ಇರುಳು ಗೇಟಿಂಗೆ ಬೀಗ ಹಾಕಿಯೇ ಮನುಗುವದು) ಸುಮಂಗಲಕ್ಕ ಕಾದು ನಿಂದುಗೊಂಡಿಕ್ಕು. ಇಂದು ಅವು ಅಲ್ಲಿ ನಿಂದಿದವಿಲ್ಲೆ ಹೇಳಿ ಎನ್ನ ಹತ್ರೆ ಚಾಡಿ ಹೇಳಿದ್ದದಾ ಇದು!? ಯಬ್ಬಾ….ಇದರ ಬುದ್ಧಿಯೇ? ಗೇಟಿನ ಬುಡಕ್ಕೆ ಎತ್ತಿಯಪ್ಪಗ ನೋಡ್ತೆ….

ಎದೆ ಝಿಮ್ಖ್ ಹೇಳಿತ್ತು, ಸುಮಂಗಲೆಯಕ್ಕ ವೆರಾಂಡದ ಮೆಟ್ಲಿನ ಮೇಗೆ ಕವುಂಚಿ ಬಿದ್ದುಗೊಂಡಿದ್ದವು…,ಅರ್ಧ ಶರೀರ ಮೆಟ್ಲಿಂದ ಮೇಲೆಯೂ ಅರ್ಧ ಕೆಳಾಚಿಯೂ…,ದನದ ಟಬ್ಬು ಮೆಟ್ಲಿಂದ ಆಚ ಹೊಡೆಲಿ ಓರೆಯಾಗಿ ಬಿದ್ದುಗೊಂಡು…,ತಣ್ಣನೆ ಹೆಜ್ಜೆ ಎಲ್ಲಾ ಚೆಲ್ಲಿ ಅದರ ಸುತ್ತು ಕಾಕೆಗಳ ಸಂತೆ…,ಕಾ…ಕಾ…ಕಾ…ಕೆಮಿಯೇ ಹೊಟ್ಟಿ ಹೋಪ ಹಾಂಗೆ…., ಅಯ್ಯೋ…ದೇವರೇ ಇದೆಂತ ಆಗಿ ಹೋತು…? ದನದ ಹೊಡೆಂಗೆ ಒಂದಾರಿ ನೋಡಿದೆ….ಗೇಟಿನ ಸರಳಿನ ಒಳ ಬಾಯಿ ಮಡುಗಿ ಅಂತೆ ನಿಂದಿದು…,ಕಣ್ಣಿಂದ ಸಣ್ಣಕೆ ನೀರಿನ ಒರತ್ತೆ…,ಎನಗೂ ತಡಕೊಂಬಲೆ ಎಡಿಗಾಯಿದಿಲ್ಲೆ. ಬಾಯಿಗೆ ಸೆರಗು ಒತ್ತಿಹಿಡಿದು ಅಲ್ಲೇ ದಸಕ್ಕನೆ ಕೂದೆ. ದನವೂ ಮೊಳಪ್ಪೂರಿ ಎನಗೆ ಅಂಟಿಗೊಂಡೇ ಮನುಗಿತ್ತು. ನಿನ್ನೆ ಸುಮಂಗಲೆಯಕ್ಕ ಹೇಳಿದ್ದು ಅಂಬಗ ನೆನಪಿಂಗೆ ಬಂತು, ‘ಹಾಗಲಕಾಯಿ ಮೆಣಸ್ಕಾಯಿ ಲಾಯಕಾಯಿದು ಹೇಳಿ ಸರೀ ಉಂಡೆ..,ಹಾಂಗಾಗಿಯೋ ಎಂತೋ ಎದೆಲಿ ಸಣ್ಣಕೆ ಕುತ್ತಿದ ಹಾಂಗಾವುತ್ತು, ಮಗ ಹೇಳಿದ್ದ ಗ್ಯಾಸಿಂದ ಆದಿಕ್ಕು ಹೇಳಿ…ಹಾಂಗೆ ಜೀರೆಕ್ಕಿ ಕಷಾಯ ಮಡುಗೇಕು ಈಗ..’ ಹೇಳಿ. ಛೆ…

ಎಂತಾ ಹೆಡ್ಡುತನ ಆಗಿ ಹೋತು..? ಎಂಗೊ ಇಬ್ರು ಲೋಕದ ಪಂಚಾಯ್ತಿಗೆ ಎಲ್ಲಾ ಮಾಡಿಯರೂ ಸುಮಂಗಲೆಯಕ್ಕನ ಮಕ್ಕಳದ್ದಾಗಲೀ ಸೊಸೆಯಕ್ಕಳದ್ದಾಗಲಿ ಫೋನು ನಂಬ್ರ ಎನ್ನ ಹತ್ರೆ ಇಲ್ಲೆ! ಥಟ್ಟನೆ ಎನಗೊಂದು ಆಲೋಚನೆ ತಲೆಗೋತು, ಇವಕ್ಕೆ ಎದೆ ಬೇನೆ ತಡವಲೆಡಿಯದ್ದೆ ಬರೀ ಬೋದ ತಪ್ಪಿದ್ದು ಮಾತ್ರ ಆದಿಕ್ಕೋ..?ಹಾಂಗೆ ಹೇಳಿ ಆದ್ರೆ ಈಗಾಣ ಒಂದೊಂದು ಗಳಿಗೆಯೂದೆ ಸುಮಂಗಲೆಯಕ್ಕನ ಜೀವಕ್ಕೆ ಅತ್ಯಮೂಲ್ಯ…ಎಷ್ಟು ಬೇಗ ಎಡಿತ್ತೋ ಅಷ್ಟು ಬೇಗ ಇವರ ಆಸ್ಪತ್ರೆಗೆ ಎತ್ಸೇಕು….ಛೆ,

ಸುಮಂಗಲೆಯಕ್ಕನ ಸ್ಕೈಪು, ವಾಟ್ಸಾಪ್ಪು ಇತ್ಯಾದಿಗೊ ಯಾವುದೂ ಪ್ರಯೋಜನಕ್ಕೆ ಬಾರದ್ದೆ ಹೋತನ್ನೇ…? ಈ ದನ ಇಲ್ಲದಿರ್‍ತಿದ್ರೆ…??
ಅದರ ತುಂಬಿದ ಕಣ್ಣಿಲ್ಲಿಪ್ಪ ಯೇಚನೆಯ ನೋಡಿ ಕರಳು ಹಿಂಡಿದ ಹಾಂಗಾತು…,ಮನಸ್ಸು, ‘ದೇವರೇ.., ಇದಕ್ಕೆ ಬೇಕಾಗಿಯಾದ್ರೂ ಸುಮಂಗಲೆಯಕ್ಕನ ಉಳ್ಸಿ ಕೊಡೂ…’ ಹೇಳಿ ಪ್ರಾರ್ಥನೆ ಮಾಡಿಗೊಂಡಿಪ್ಪಾಗಳೇ ಎಂಗಳ ಎದುರಂದಾಗಿ ಮೂರ್‍ನಾಲ್ಕು ಜವ್ವನಿಗರು ಹೋಪದು ಕಂಡತ್ತು.
ಅವರ ದಿನುಗೋಳಿ ಸಕಾಯ ಬೇಡಿದೆ. ಮನೆಗೆ ಫೋನು ಮಾಡಿ ಒಂದೇ ಉಸಿರಿಲ್ಲಿ ಇವರ ಹತ್ರೆ ಚುಟುಕಾಗಿ ವಿಷಯ ಹೇಳಿ ಬೇಗ ಕಾರು ತೆಕ್ಕೊಂಡು ಬಪ್ಪಲೆ ಹೇಳಿದೆ.

~

ಶೀಲಾಲಕ್ಷ್ಮೀ, ಕಾಸರಗೋಡು.

ಶೀಲಾಲಕ್ಷ್ಮೀ ಕಾಸರಗೋಡು

   

You may also like...

28 Responses

 1. sheelalakshmi says:

  ಹೂಂ. ಬರೆತ್ತೆ ವಿಜಯಕ್ಕಾ. ನಿಂಗಳದ್ದು ಬರಲಿ. ಓದಿ ಖುಷಿ ಪಡ್ತ್ಯೋ.

 2. ಗೋಪಾಲ ಬೊಳುಂಬು says:

  ಸೊಗಸಾದ ಕತೆ. ಒಳ್ಳೆ ಓದುಸೆಂಡು ಹೋತು. ಕತೆಯ ಶೀರ್ಷಿಕೆ ನೋಡುವಗಳೇ ಒಳ್ಳೆ ಪತ್ತೇದಾರಿ ಹೆಸರಿನ ಹಾಂಗೆ ಕಂಡತ್ತು, ಗೋವಿನ ಪ್ರೀತಿ, ಕಡೇಣ ತಿರ್ಗಾಸು ಕಂಡು ಮನ ತುಂಬಿ ಬಂತು ಶೀಲಕ್ಕ. ಎಲ್ಲೋರ ಬೇಡಿಕೆ ಹಾಂಗೆ ಇದರ ಎರಡನೆ ಭಾಗ ಬರಳಿ. ಶ್ಯಾಮಣ್ಣನ ಪೆನ್ಸಿಲಿನ ಹಾಂಗೆ ಮುಂದುವರಿಯಲಿ. ಹೀಂಗಿಪ್ಪ ಕತೆ ಶುದ್ದಿಗೊ ಬೈಲಿಲ್ಲಿ ತುಂಬಿ ಹರಿಯಲಿ.

  • sheelalakshmi says:

   ಗೋಪಾಲ ಅಣ್ಣ, ಧನ್ಯವಾದಂಗೊ. ಹಾಂಗೆ ನಿಂಗಳ ಪ್ರೋತ್ಸಾಹವೂ ತುಂಬಿ ಹರಿಯಲಿ. ಪ್ರೋತ್ಸಾಹ ಹೇಳಿದ್ರೆ ಬರಿ ಹೊಗಳಿಕೆಯೇ ಆಯೇಕು ಹೇಳಿ ಇಲ್ಲೇ. ಕೊರತ್ತೆಗಳನ್ನು ಧಾರಾಳ ತೋರ್ಸಿ ಕೊಡ್ಳಕ್ಕು. ತಿದ್ದಿಗೊಂಬಲೆ ಅವಕಾಶ ಸಿಕ್ಕಿದ ಹಾಂಗಾತು.

 3. ರಘು ಮುಳಿಯ says:

  ಎಲ್ಲೋರೂ ನಮ್ಮ ಅಬ್ಬೆ ಭಾಷೆಲಿ ಬರದ ಬೈಲಿನ ಬಂಧುಗಳ ಶುದ್ದಿಗಳ ಓದಿದರೆ ಕೊಶಿ. ಓದಿ ,ನಮ್ಮ ಭಾಷೆಲಿಯೇ ಒಪ್ಪ ಕೊಟ್ಟರೆ ಇನ್ನೂ ಕೊಶಿ.ಆಡುಮಾತು ಅಕ್ಷರರೂಪಕ್ಕೆ ಏರಿದರೆ ಬೆಳವಣಿಗೆ ಖಂಡಿತಾ ಸಾಧ್ಯ , ಅಲ್ಲದೋ ?

 4. ಶರ್ಮಪ್ಪಚ್ಚಿ says:

  ಮೂಕ ಪ್ರಾಣಿಯ ಶರೀರಲ್ಲಿ ಮುಕ್ಕೋಟಿ ದೇವರಿದ್ದ ಹೇಳುವದು ಸುಮ್ಮನೆ ಅಲ್ಲ. ದೇವರ ಹಾಂಗೆ ಬಂದು ತನ್ನೊಡತಿಯ ಪ್ರಾಣ ರಕ್ಷಣೆ ಮಾಡಿ ಋಣ ತೀರಿಸಿತ್ತು.
  ಒಳ್ಳೆ ನಿರೂಪಣೆ. ಈ ಹೃದಯಸ್ಪರ್ಷಿ ಕತೆ ಸುಖಾಂತ್ಯವಾಗಿಯೇ ಮುಗಿತ್ತು ಹೆಳಿಯೇ ತಿ್ಳ್ಕೊಂಬೊ°

 5. sheelalakshmi says:

  ಧನ್ಯವಾದಂಗೊ ಶರ್ಮಪ್ಪಚ್ಚಿ. ಇಷ್ಟೆಲ್ಲಾ ಓದುಗರ ಹಾರೈಕೆ ಇಪ್ಪಾಗ ಆನು ವ್ಯತಿರಿಕ್ತವಾಗಿ ಕಥೆಯ ಮುಗುಶಿರೆ ಸರಿ ಅಕ್ಕೋ ಅಪ್ಪಚ್ಚಿ? ಅದು ಬರೆ ಸುಖಾಂತ್ಯ ಅಲ್ಲ. ಇನ್ನಷ್ಟು ರೋಚಕತೆ ಇದ್ದು. ರಜ್ಜ ಕಾಯುವಿರಲ್ದ?

 6. parvathimbhat says:

  ಈ ಕಥೆಯ ಆನು ಮೊನ್ನೆಯೇ ಓದಿದ್ದೆ ಶೀಲ .ಇಲ್ಲಿ ಇಂಟರನೆಟ್ ಸರಿ ಇಲ್ಲದ್ದ ಕಾರಣ ಒಪ್ಪ ಕೊಡಲೇ edigaatille .ಕಥೆ ತುಂಬಾ ತುಂಬಾ ಲಾಯಿಕಯಿದು.

 7. Shreedhara Ballullaya, Pune says:

  Dear Sheela,
  Beautiful writing. I remember my early days at Kasaragod, Muliyar.

 8. sheelalakshmi says:

  ಧನ್ಯವಾದಂಗೊ. ಶ್ರೀಧರ ಬಳ್ಳುಳ್ಳಾಯರೇ, ನಿಂಗೊ ಹವ್ಯಕ ಭಾಷೆಯ ಅರ್ಥೈಸಿಗೊಂಡದರ ಬಗ್ಗೆ ಬಹಳ ಸಂತಸ ಇದ್ದು. ಹಾಂಗೇ ಈ ಕಥೆಯ ನಿಮಿತ್ತವಾಗಿ ಸುಮಾರು ನಲುವತ್ತು ವರ್ಷಗಳ ನಂತರ ಹೈಸ್ಕೂಲು ಸಹಪಾಠೀಯೊಬ್ಬರು ಸಂಪರ್ಕಕ್ಕೆ ಬಪ್ಪ ಹಾಂಗಾದ್ದದು ಇನ್ನೂ ಹೆಚ್ಚಿನ ಸಂತಸ.

 9. Shreedhara Ballullaya, Pune says:

  Now I can manage Tulu, Kannada (+Havyaka), Malayalam, Hindi, English and Marathi.
  Often I go through your short stories. Most of them are funny, light, some times touching.
  Best wishes!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *