ವ್ಹಾ… ಪೂರಂ…!!!

ತ್ರಿಶ್ಶೂರು ಪೂರಲ್ಲಿ ಸರ್ತ ನೆಡದ್ಸು ಎಂಗೊ ಮಾಂತ್ರ…!

ಕೇರಳದ ಮೇಪು ಹರಗಿ ಮಡಗಿರೆ ನೆಡೂಕೆ, ಕಡಲಕರೇಲಿ ಕಾಂಗು ತ್ರಿಶ್ಶೂರು.

ತ್ರಿಶೂರಿನ ವಡಕ್ಕನಾಥನ್

ತ್ರಿಶೂರಿನ ವಡಕ್ಕನಾಥನ್

ನೆಮ್ಮರ, ಕುಮಾರನೆಲ್ಲೂರು, ಗುರುವಾಯೂರು, ತ್ರಿಶ್ಶೂರು ಎಲ್ಲ ಹತ್ತರೆ ಹತ್ತರೆ ಇಪ್ಪ ದೊಡ್ಡ ದೊಡ್ಡ ದೇವಸ್ಥಾನಂಗೊ.
ನೆತ್ತಿಪಟ್ಟಂ, ಕುಡಮಾಟ್ಟಂ, ಚೆಂಡೆ ಮೇಳ, ವೆಡಿಕ್ಕೆಟ್ಟ್.. ತ್ರಿಶ್ಶೂರು ಪೂರಂ ವಿಶೇಷಂಗೊ.
‘ಪೂರಂ, ಪೊಡಿಪೂರಂ..!’ ಹೇಳುಗು ಮಲಯಾಳಿಗೊ.

ಆನೆಗಳ ಮೋರಗೆ ಮಡಗಿದ ನೆತ್ತಿ ಎಳೆಗೆ ನೆತ್ತಿಪಟ್ಟಂ ಹೇಳುದು. ಆನೆಗಳ ಮೆರವಣಿಗೆಲಿ ದೇವರಿಂಗೆ ಕೊಡೆ ಹಿಡುದು, ಚಾಮರ ಬೀಸುವ ಚೆಂದಕ್ಕೆ ಕುಡಮಾಟ್ಟಂ ಹೇಳ್ಸು, ಮಾರಾರುಗೊ ಪಾಂಡಿ ಮೇಳವೋ, ಪಂಚವಾದ್ಯವೋ, ಇನ್ಯಾವದೋ… ಬಗೆಬಗೆಲಿ ಚೆಂಡೆ ಹೆಟ್ಟುಸ್ಸು ಚೆಂಡೆಮೇಳ!
ನೆಡು ಇರುಳು ಬೆಡಿ ಹೊಟ್ಟುಸುಸ್ಸಕ್ಕೆ ವೆಡಿಕ್ಕೆಟ್ಟ್ ಹೇಳ್ತವು! ಬೆಡಿ ಹೊಟ್ಟಿಕ್ಕಿ ಒಂದು ಹತ್ತು ನಿಮಿಷ ಮೇಗಂದ ಬೆಡಿಲಿ ತುಂಬುಸಿದ ಹೊಡಿ ಬೀಳುಗು, ಹಾಂಗಾಗಿಯೋ ಎಂತ್ಸೋ… ಪೊಡಿಪೂರಂ ಹೇಳ್ಸು.
‘ಉಮ್ಮಪ್ಪ!’ ಎನ ಗೊಂತಿಲ್ಲೆ!
ಪೂರಂ ಹೇದರೆ ನಮ್ಮ ಪೂರ್ವಾಭದ್ರ ನಕ್ಷತ್ರ.
ಚರಿತ್ರೆ ಓದಿದವಕ್ಕೆ ಕೇಳಿ ಗೊಂತಿಕ್ಕು, ರಾಜಾ ರಾಮ ವರ್ಮ, ಅವನ ಶಕ್ತನ್ ತಂಬುರಾನ್ ಹೇಳುಗಡ ಅಂದ್ರಾಣ ಜೆನಂಗೊ.
ಅವ° ಈ ತ್ರಿಶ್ಶೂರು ಪೂರಂ ಹೇಳ್ತ ಕಲ್ಪನೆಯ ಹೆರಮಡಗಿ ಇನ್ನೂರೋ ಮುನ್ನೋರೋ ವರ್ಷ ಆತಾಯಿಕ್ಕು.
ಹೇಳ್ಸು ಕೇಳಿದ ಪ್ರಕಾರ ೧೭೯೮ರಲ್ಲಿ. ಮೇಷ ತಿಂಗಳ ಪೂರ್ವಾಭಾದ್ರೆ ನಕ್ಷತ್ರಕ್ಕೇ ತ್ರಿಶ್ಶೂರು ಪೂರಂ ಮಾಡುವೊ ಹೇಳಿ ನಿಘೆಂಟು ಮಾಡಿದ್ಸು ಅವ°.
ಹತ್ತು ದೇವಸ್ಥಾನಂಗಳ ಒಟ್ಟು ಸೇರುಸಿ ಅವರ ಎರಡು ಪಂಗಡ ಮಾಡಿದ್ಸೂ ಅವನೇ.
ಪಡುಹೊಡೆಯಾಣ ಕುಞಿಮಂಗಲಂ, ಲಾಲೂರು, ಅಯ್ಯಂತೊಲೆ, ನೆತ್ತಿಲಕ್ಕಾವು, ತಿರುವಂಬಾಡಿ ಇಷ್ಟು ದೇವಸ್ಥಾನ ಇಪ್ಪ ವಿಭಾಗಕ್ಕೆ ತಿರುವಂಬಾಡಿ ಹೇಳಿ ಹೆಸರು.
ಮೂಡ ಹೊಡೆಯಾಣ ಪಾರಮೇಕ್ಕಾವು, ಕರಮುಕ್ಕು, ಚೆಂಬುಕಾವು, ಚೂರಕೊಟ್ಟುಕಾವು, ಪನಮುಕ್ಕಂಪಿಳ್ಳಿ ಸೇರಿದ ವಿಭಾಗಕ್ಕೆ ಪಾರಮೇಕ್ಕಾವು ಹೇಳುದು. ಈ ದೇವಸ್ಥಾನಂಗೊ ಈಗ ದೇವಸ್ವಂ(ದತ್ತಿ) ಬೋರ್ಡಿನ ಅಡೀಲಿ ಇದ್ದರೂ ಜನಂಗಳ ಪ್ರತಿಷ್ಟೆಗೆ ಏನೂ ಕಮ್ಮಿ ಇಲ್ಲೆ. ಅವರಿಂದ ನಾವು ಕಮ್ಮಿ ಅಪ್ಪಲಾಗ ಹೇಳ್ತ ಹಠ ಇದ್ದ ಕಾರಣ, ವರ್ಷಂದ ವರ್ಷಕ್ಕೆ ಪೂರಂ ರೈಸುತ್ತು. ಆನೆಗಳ ಮೇಲೆ ಕೂದಂಡು ಮೆರವಣಿಗೆ ಹೆರಡುಸ್ಸು ತಿರುವಂಬಾಡಿ ಭಗವತಿಯೂ, ಪಾರಮೇಕ್ಕಾವು ಭಗವತಿಯೂ.

ಕುಡುಮಟ್ಟಮ್ - ಅಲಂಕರುಸಿ ಮಡಗಿದ್ಸು..

ಕುಡುಮಟ್ಟಮ್ - ಅಲಂಕರುಸಿ ಮಡಗಿದ್ಸು..

ವಡಕ್ಕುನಾಥ, ಹೇದರೆ ಶಿವನ ಕಾಂಬಲೆ ಬಂದು, ಅಲ್ಲಿ ಅವ್ವು ಎದುರೆದುರು ಆವ್ತವು. ಆ ಚೆಂದ ನೋಡೇಕು ಒಂದೋ ಪ್ರತ್ಯಕ್ಷ, ಅಲ್ಲದ್ರೆ ಟಿವಿಲಿ! ಮಲಯಾಳದ ಎಲ್ಲ ಚಾನಲ್‌ಗೊ ನೇರಪ್ರಸಾರ ಮಾಡ್ತವು. ಬಿಟ್ಟಿಕ್ಕೆಡಿ, ಬಪ್ಪ ವರ್ಷ ಮೇ ೧೨ಕ್ಕೆ.
ಹೇಳಿದಾಂಗೆ, ತ್ರಿಶ್ಶೂರು ಪೂರಲ್ಲಿ ವಡಕ್ಕುನಾಥಂಗೆ ನೋಡ್ಸು ಬಿಟ್ಟರೆ ಬೇರೆಂತ ಕೆಲಸವೂ ಇಲ್ಲೆ, ಹತ್ತರಾಣ ಈ ಹತ್ತು ದೇವಸ್ಥಾನದ ಜೆನಂಗೊಕ್ಕೆ, ಬಂದವಕ್ಕೆ, ದೇವರಿಂಗೆ ಜಾಗೆ ಕೊಡೇಕು ಅಷ್ಟೆ!

ಆನೆಗೊಕ್ಕೆ ಹೇಂಗೂ ಸರ್ತ ನೆಡವಲೆ ಎಡಿತ್ತಿಲ್ಲೆ, ಅದರ ಮೇಲೆ ಕೂದೊಂಡು ಕೊಡೆ ಹಿಡಿತ್ತವಕ್ಕೆ, ಚಾಮರ ಬೀಸುತ್ತವಕ್ಕೆ, ತಟ್ಟೆ ಹಿಡ್ಕೊಂಬವಕ್ಕೆ ಹೇಂಗೂ ನೆಡವಲೆಡಿಯನ್ನೆ ! ಎದುರು ಪೂರಾ ಚೆಂಡಗೊ, ತಾಳಂಗೊ, ಕೊಂಬು ವಾದ್ಯಂಗೊ. ಅವು ಸರ್ತ ನೆಡದರೆ ಶಬ್ದ ಬಾರ, ಅಲ್ದೋ… ಜಾತ್ರಗೆ ಬಂದ ಮಕ್ಕೊಗೆ ಸಂತೆ ನೋಡೆಕ್ಕು, ಬುಗ್ಗೆ ಊದೆಕ್ಕು, ನೂರೆಂಟು ಕೆಲಸ, ಹೆಮ್ಮಕ್ಕೊಗೆ ಇವರ ಮೇಪು ಮಾಡುವ ಕೆಲಸ, ಬಾಕಿ ಉಳುದ್ಸು ಎಂಗಳ ಹಾಂಗಿಪ್ಪ ಜವ್ವನಿಗರು!
ಆ ಸುಡು ಬೆಶಿಲಿಂಗೆ ಒಂದು ಮನುಷ್ಯ ಚರಂಡಿಲಿ ಬಿದ್ದಿದು, ಎರಡೂ ಕೈ ನೀರಿಲ್ಲಿ ಬಡುದು ಈಜುತ್ತು! ಇನ್ನೊಂದು ಜನ ಒಂದು ಕೋಟೆಯ ಕರೇಲಿ ಮನುಗಿದ್ದು, ಮೇಲೆ ಇನ್ನೊಂದು ಕೂದಂಡಿದ್ದು.
ಚೆರ್ಪು ತೆಗೆ ಮಾರಾಯಾ ಹೇಳಿ ಕೆಳ ಇಪ್ಪದು ಪರಂಚುತ್ತು, ಮೇಗಾಣದ್ದು ಎನ್ನ ಕಾಲಿಲ್ಲಿ ಮೆಟ್ಟು ಎಲ್ಲಿದ್ದು ಹೇಳಿ ಪರಡುತ್ತು!
ಚೆಂಡೆ ಮೇಳ ಅಪ್ಪಗ ಅದರ ಸುತ್ತಲೂ ಜೆನಂಗೊ, ಎರಡೂ ಕೈ ನೆಗ್ಗಿ ತಾಳ ಹಾಕುತ್ತವು, ಏನಾರು… ಅವರದ್ದೇ ಮಹಾಪೂರ !!
ಅವಕ್ಕೂ ಸರ್ತ ನೆಡವಲೆಡಿಯ!! ಅಂತೂ ತೊಂಭತ್ತು ಏರ್ಸದ್ದೆ ಇದ್ದವು, ಪೂರ ಪೂರ್ತಿ ಸರ್ತ ನೆಡದವು ಎಂಗೊ ಮಾಂತ್ರ!!
ಊರ ಜಾತ್ರೆಗೊಕ್ಕೆಲ್ಲ ಹೋಪಲೆ ಸೌಕರ್ಯ ಇದ್ದರೆ ಹೋವ್ಸೇ, ಕಂಪೆನಿ ಕೇಳಿರೆ ಒಂದೋ ಸೀತಾಂಗೋಳಿ ಮಹೇಶಣ್ಣ, ಅಲ್ಲದ್ರೆ ಟಿಕೆಪಿ ಬತ್ತಿಲ್ಲೆ ಹೇಳವು, ಪುಣ್ಯಂದ!
ಆನೂ ಟಿಕೆಪಿಯೂ ಒಟ್ಟಿಂಗೆ ಉದ್ಯೋಗ ಮಾಡ್ತವು ಆದ ಕಾರಣ, ಪುರುಸೊತ್ತು ಒಂದೇ ಹಾಂಗೆ ಇರ್ತು.
ಈಗ ಹೇಂಗೂ ಮಕ್ಕೊಗೆ ರಜೆ, ಹಾಂಗಾಗಿ ಎಂಗೊಗೂ ರೆಜಾ ಪುರುಸೊತ್ತು, ರಜೆ.
ರಜೆಲಿ ಎಲ್ಯಾರೂ ಹೋಯೆಕ್ಕು ಹೇಳಿ ಪುಳ್ಳರು ಬುದ್ಧಿ ಇಪ್ಪವಕ್ಕೆ ತೋರದ್ದೆ ಇರ, ಹಾಂಗೋ ಎಂತ್ಸೋ…
ತ್ರಿಶ್ಶೂರಿಂಗೆ ಪೂರಂ ನೋಡ್ಳೆ ಹೋಯೆಕ್ಕು ಹೇಳುದು ಎಂಗಳ ಬಹುಕಾಲದ ಕನಸು. ಕೆಲೆಂಡ್ರು ನೋಡಿ ಈ ಸರ್ತಿ ಎಪ್ರಿಲು ೨೪ಕ್ಕೆ, ಹೋಪದೇ ಅಲ್ದೋ ಕೇಳಿತ್ತಿದ್ದ ಟಿಕೆಪಿ.
ಹಾಂಗೆ ಬೈಲಿಂಗೆಲ್ಲ ಸಮೋಸಲ್ಲಿ ಹೇಳಿಕೆ ಕಳುಸಿ ಒಂದು ತಿಂಗಳು ಕಳುದ್ದು.
ಪುತ್ತೂರು ಜಾತ್ರೆ ನೋಡೆಕ್ಕು ಹೇಳಿ ಇತ್ತಿದ್ದು, ಅಷ್ಟಪ್ಪಗ ಟಿಕೆಪಿಗೆ ತಿರುವನಂತಪುರಲ್ಲಿ ಕೋರ್ಸು, ಎನಗೆ ಎಸ್.ಎಸ್.ಎಲ್.ಸಿ ಮಕ್ಕಳ ಪೇಪರಿಂಗೆ ಮಾರ್ಕು ಹಾಕಲೆ ಬರೆಕ್ಕು ಹೇಳಿ ಸರ್ಕಾರಂದ ಆದೇಶವೂ ಬಂತು. ಅದು ಕಲ್ಲಿಕೋಟೆಲಿ, ಅಲ್ಯಾಣ ಗೋರ್ಮೆಂಟು ಗೆಣವತಿ ಶಾಲೆಲಿ ಕೂದಂಡು ಸೆಖೆಗೆ ಬಂಙ ಬಂದ್ಸರ ಒಪ್ಪಣ್ಣನ ಉರಿಸೆಖೆಯ ಬರವಣಿಗೆಲಿ ಓದಿಪ್ಪಿ, ಅಲ್ದೊ?
ಹಾಂಗಾಗಿ ಪುತ್ತೂರು ಜಾತ್ರಗೆ ಹೋಪಲೆ ಎಡಿಗಾಯಿದಿಲ್ಲೆ. ಇನ್ನು ಮಧೂರು ಜಾತ್ರಗೆ ಆದರೂ ಹೋಪಲಕ್ಕನ್ನೆ ಹೇಳಿ ಬಂದಪ್ಪಗ ಹೊಯ್ದತ್ತಯ್ಯಾ…
ಮಳೆ, ಎಲ್ಲಿಗೆ ಹೋವ್ಸು, ಸುಮ್ಮನೆ ಮನಿಕ್ಕೊಂಬಲಕ್ಕು ತೋರಿತ್ತು.
ಹಾಂಗೆ ಮನಿಗಿಯಪ್ಪಗಳೇ ಎನಗೆ ಕನ್‌ಫ್ಯೂಸ್ ಬಂದದು. ವಿಘ್ನ ವಿನಾಯಕನ ಜಾತ್ರಗೆ ಪ್ರತೀ ವರ್ಷ ಏನಾರೂ ವಿಘ್ನಂಗೊ. ಕಳೆದ ವರ್ಷ ಕಾಸ್ರೋಡಿಲ್ಲಿ ಹಿಂದೂ ಮುಸ್ಲಿಂ ಕತ್ತಿಕುತ್ತು, ಹಿಂದಾಣ ವರ್ಷ ಎಂತ್ಸಕೋ ಹರತಾಳ, ಮಲಾಯಾಳಿಗೊಕ್ಕೆ ವಿಷು ಹೇದರೆ ಹೊಸ ವರ್ಷ, ಹಾಂಗೆ ಅಂಬಗ ಹರತಾಳ, ಬಂದು ಮಾಡದ್ರೆ ಎಂತ್ಸೋ ದೋಷ ಕಾಣ್ತು ತೋರ್ತು.
ಹಾಂಗಾಗಿ ವಿಷು, ಮಧೂರು ಜಾತ್ರೆ ನೋಡಿಯೊಂಡು ಏನಾರು ಒಂದು ಇಕ್ಕು ಅವರದ್ದು. ಉಪದ್ರ…
೨೪ಕ್ಕೆ ಎನಗೆ ವೇಲ್ಯುಯೇಷನ್ ಮುಗಿಸ್ಸು, ಆನು ತ್ರಿಶ್ಶೂರಿಲಿ ಸಿಕ್ಕುಸ್ಸು, ನಿಂಗೊ ಮೊದಲೇ ಹೋಗಿಯೊಳ್ಳಿ ಹೇಳಿದೆ.

ಸರ್ತ ನಿಂದ ಚೆಂಙಾಯಿಗೊ..

ಸರ್ತ ನಿಂದ ಚೆಂಙಾಯಿಗೊ..

ಹಾಂಗಾಗಿ ಅವು ಟಿಕೆಪಿ, ಅವನ ಭಾವಂದ್ರು ಬರೆಪ್ಪಾಡಿಯ ಜೋಯ್ಸ ಶಿವ, ಮರಗೋಡಿನ ಆಯುರ್ವೇದ ಡಾಕ್ಟ್ರು ಶ್ಯಾಮ, ಅವನ ಅಣ್ಣ ರವಿ, ಎನ್ನ ಅಕ್ಕನ ಅತ್ತಿಗೆ ಮಗ ಸುಳ್ಯ ಕೈಂತಜೆಯ ಒಕೀಲ° ಪ್ರಸಾದ ಉದೆಕಾಲಕ್ಕೆ ಎದ್ದು ಬೈಕ್ಕು ಕೊಂಡೋಗಿ ಕಾಸ್ರೋಡು ರೈಲ್ವೇ ಸ್ಟೇಷನಿಲಿ ಮಡಗಿ ಐದು ಗಂಟೆಗೆ ಬಪ್ಪ ಪರಶುರಾಮಲ್ಲಿ ಹತ್ತಿದ್ಸಡ.
ಅವು ಮಧ್ಯಾಹ್ನಕ್ಕೇ ತ್ರಿಶ್ಶೂರಿಂಗೆ ಎತ್ತಿದ್ದವು, ದಾರಿ ಇಡೀ ತಲೆಂಗಳ ಅತ್ತೆ ಎರದು ಕೊಟ್ಟ ಉದ್ದಿನ ಕೊಟ್ಟಿಗೆ ತಿಂದವಡ, ಮನೇಂದ ಹೊತ್ತೊಂಡು ಬಂದ ಐದು ಲೀಟ್ರು ನೀರು, ಮಜ್ಜಿಗೆ ಪೂರ್ತಿ ಮುಗುಶಿದ್ದವಡ.
ಆನು ಮಧ್ಯಾಂತಿರುಗಿ ಕಲ್ಲಿಕೋಟೆಂದ ಹೆರಟು ಕೊಯಂಬತ್ತೂರು ಬಂಡಿಗೆ ಹತ್ತಿ ಶೋರ್ನೂರಿಲ್ಲಿ ಇಳುದು ಇನ್ನೊಂದು ಬಂಡಿಗೆ ಹತ್ತಿ ತ್ರಿಶ್ಶೂರಿಂಗೆ ಎತ್ತುವಗ ಬೆಶಿಲಿಂಗೆ ತಿರುಗಿ ಅವಕ್ಕೆ ಒಳ್ಳೆತ ಬಚ್ಚಿದ ಹಾಂಗೆ ಕಂಡತ್ತು!

ಆನೆಗಳ ಕಟ್ಟಿಯೊಂಡಿದ್ದಲ್ಲಿಂಗೆ ‘ಆನಚ್ಚಮಯಂ’ ಹೇದು ಹೆಸರು, ಅದರ ನೋಡಿದೆಯೊ.
ಅಲ್ಲಿಂದ ವಸ್ತು ಪ್ರದರ್ಶನ ಸ್ಟಾಲ್ ನೋಡ್ಳೆ ಹೋದ್ಸು, ಹತ್ತು ರುಪಾಯಿ ಟಿಕೇಟು ತೆಗದು ಅದರ ಒಳ ಗಂಟೆಗಟ್ಳೆ ತಿರುಗಿದೆಯೊ.
ಇನ್ನು ಹೆರ ಹೋದರೆ ತೆಂಕ್ಲಾಗಿ ವೆಜಿಟೇರಿಯನ್ ಹೋಟ್ಳು ಸಿಕ್ಕಲೆ ಬಂಙ ತೋರಿತ್ತು. ಹಾಂಗಾಗಿ ಅಲ್ಲೇ ಒಳ ಇದ್ದ ಹೋಟ್ಳಿನ ಒಳಾಂಗೆ ವರೇಗೆ ಹೋಗಿ ನೋಡಿ ಬೇರೆಂತ್ಸೂ ಇಲ್ಲೆ ಹೇಳಿ ಧೈರ್ಯ ಮಾಡಿಯೊಂದು ಪರೋಟ, ಚಪಾತಿ, ಮಸಾಲೆ ದೋಸೆ ತಿಂದು, ಕುಪ್ಪಿ ಪೂರ್ತಿ ನೀರು ತುಂಬುಸಿ ಹೆರ ಬಂದಪ್ಪಗ ಗಂಟೆ ಹತ್ತು ಕಳುದ್ದು. ಹೆರ ಮೈದಾನಲ್ಲಿ ಕಾಲು ಹಾಕಲೆ ಜಾಗೆ ಇಲ್ಲೆ, ಕರೇಲಿ ಒಂದು ಕೂಸು ಬಳ್ಳಿ ಕಟ್ಟಿ ದೊಂಬರಾಟ ಮಾಡಿಯೊಂಡು ಇತ್ತು.
ಅದರ ನೋಡಿಕ್ಕಿ ‘ಚೆರುಪೂರಂ’ ನೋಡ್ಳೆ ಹೋದೆಯೊ. ‘ಇದು ಸಣ್ಣ ಅಡ’ ಹೇಳಿದೆ, ಮಲಯಾಳ ಗೊಂತಾಗದ್ದವರತ್ರೆ. ‘ನಿಂಗೊ ನೋಡಿಕ್ಕಿ, ಎಂಗೊ ಹಗಲಿಡೀ ದೊಡ್ಡದು ನೋಡಿದ್ದೆಯೊ°’ ಹೇಳಿ ಇಬ್ರು ಮಾರ್ಗದ ಕರೇಲಿ ಫೂಟುಪಾತು ಇದ್ದನ್ನೆ, ಅಲ್ಲೇ ಕೂದು, ಬಾಕಿಪ್ಪವಕ್ಕೆ ಜಾಗೆ ಮಡಗಿದವು.
ತ್ರಿಶ್ಶೂರು ಹೇದರೆ ಒಂದು ಪ್ಲಾನ್ಡ್ ಸಿಟಿ ಹೇಳುಗು ಮನೇಲಿ ಅಪ್ಪ, ಅದು ಅಪ್ಪು ಹೇಳಿ ಕಂಡತ್ತು ಎನಗೆ.
ವಡಕ್ಕುನಾಥನ ದೇವಸ್ಥಾನಕ್ಕೆ ಒಂದೇ ಹಾಂಗೆ ಕಾಂಬ ನಾಲ್ಕು ಪ್ರವೇಶ ದ್ವಾರ.  ದೇವಸ್ಥಾನ ಚೌಕಾಕಾರಲ್ಲಿಪ್ಪದು, ಅದರ ಎದುರು ಮಾರುಗಟ್ಳೆ ದೂರಲ್ಲಿಪ್ಪದು ವೃತ್ತಾಕಾರಲ್ಲಿ ಮತ್ತೊಂದು ಕೋಟೆ, ನೆಡುಸ್ಸರೆ ದೊಡ್ಡ ದೊಡ್ಡ ದೇವದಾರು ಮರಂಗೊ, ಎಲ್ಲಿ ಕೂದರೂ ಬೆಡಿ ಸರೀ ಕಾಣ.
ಆ ವೃತ್ತಾಕಾರದ ಕೋಟೆಂದ ಹೆರ ಪೂರ್ತಿ ಹೆದ್ದಾರಿ, ಒಂದೇ ಒಂದು ವಾಹನವನ್ನೂ ಜಾತ್ರೆ ಅಡ್ಕಕ್ಕೆ ಬಿಡ್ತವಿಲ್ಲೆ, ಹಾಂಗಾಗಿ ಆ ಮಾರ್ಗ ಪೂರ್ತಿ ಜೆನ, ಜೆನ.
ಎಡಕ್ಕಿಲ್ಲಿ ದೂರದೂರಕೆ ಕಡ್ಳೆಗಾಡಿಗೊ ಇಷ್ಟೆ! ಜಾತ್ರೆ ಇಲ್ಲದ್ದ ದಿನ ನೆಡಕ್ಕೊಂಡು ಹೋದರೆ ಒಂದು ಸುತ್ತ ಬಂದಪ್ಪಗ ಎರಡು ಮೈಲು ಆದರೂ ಆಗಿ ಹೋಕೋ ಹೇಳಿ ಒಂದು ಅಂದಾಜು.
ಎದುರು ದೊಡ್ಡದೀಪ ಮಡಗಿದ್ಸು ಪ್ರಧಾನ ದ್ವಾರ ಹೇದವು ಆರೋ, ಅಲ್ಲಿ ಇನ್ನು ಚೆರುಪೂರಂ.
ಮೂರು ಆನೆಗೊ ಇತ್ತಿದ್ದವು, ನೆಡೂಕೆ ದೇವರ ಹೊತ್ತ ಆನೆ, ಅದರ ಮೇಲಂದ ಮಾಂತ್ರ ಜನಿವಾರ ಇಪ್ಪ ಬ್ರಾಹ್ಮರು.

ಅನೆಗೊ - ಸಲಾಗಿ ನಿಂದದು

ಅನೆಗೊ - ಸಲಾಗಿ ನಿಂದದು

ಈ ಊರಿಲ್ಲಿ ಹಾಂಗಾರೆ ದೇವರ ತಲೆಲಿ ಹೊರ್ತ ಕ್ರಮ ಇರ, ಗುರುವಾಯೂರಿಂದ ಹೆಚ್ಚು ದೂರ ಇಲ್ಲೆ, ಆನೆಗೊಕ್ಕೂ ತತ್ವಾರ ಇರ ಹೇಳಿ ಮಾತಾಡಿಗೊಂಡೆಯ°.
ದೇವರ ಆನೆಯ ಎದುರು ಕೈದೀಪ ಹಿಡುಕ್ಕೊಂಡ ನಂಬೀಶನ ಕಂಡತ್ತು. ಅವನ ಒಟ್ಟಿಂಗೆ ತಂತ್ರಿಯನ್ನೂ ಕಂಡ ಹಾಂಗಾತು, ಚೆಂಡೆಗೊ ರೈಸಿದವು, ಒಟ್ಟಿಂಗೆ ಜನಂಗಳ ತಾಳವೂ ಕುಣಿತವೂ ರೈಸಿತ್ತು.
ಇದು ಮುಗುದಪ್ಪದ್ದೆ ದೇವರ ಎದುರು ಏಳು ಆನೆಗೊ ಬಂದವು, ಯಥಾಪ್ರಕಾರ ಕುಡಮಾಟ್ಟಂ, ಚೆಂಡೆಮೇಳ ನೆಡದತ್ತು.
ಮಧ್ಯಾಹ್ನ ನೋಡ್ಳೆ ಸಿಕ್ಕದ್ದಕ್ಕೆ ಈಗ ಇಷ್ಟಾರೂ ಸಿಕ್ಕಿತ್ತನ್ನೆ ಹೇಳಿ ಗ್ರೇಶಿಯೊಂಡೆ. ಅದಾ, ಅವರ ಹಿಂದಂದ ಒಂಭತ್ತು, ಪುನಾ ಒಂಭತ್ತು, ಇನ್ನು ಆರು… ಆನೆಗಳ ಸಾಲು ಬಪ್ಪಲೆ ಸುರು ಆತು. ಹೆಚ್ಚುಕಮ್ಮಿ ಮಧ್ಯಾಹ್ನದಷ್ಟೇ ರೈಸಿತ್ತು ಹೇಳಿದ° ಟಿಕೆಪಿ.

ಇನ್ನು ರೆಜ್ಜ ಕೂಪೊ, ಮೂರು ಗಂಟೆಗೆ ಬೆಡಿ, ಅಲ್ಲಿಯೊರೆಗೆ ಹೊತ್ತು ಹೋಯೆಕ್ಕನ್ನೆ ಹೇಳಿ ಬಾಕಿ ಇಪ್ಪವು ಮಡಗಿದ ಜಾಗೆಲಿ ಕೂದೊಂಡೆಯೊ°. ಐದೂ ಜನರ ಅಲ್ಲಿ ಮಾರ್ಗದ ಕರೇಲಿ ಕೂರುಸಿಕ್ಕಿ ಇನ್ನೂ ಒಳ್ಳೆ ಜಾಗೆ ಸಿಕ್ಕುತ್ತೋ ನೋಡ್ಳೆ ಹೆರಟೆ ಆನು. ರೆಜ್ಜ ಹಂದಿಯಪ್ಪಗ ದೂರದ ಬೆಟ್ಟ ನುಣ್ಣಂಗೆ ಹೇಳಿ ತೋರಿತ್ತು. ವಾಪಾಸು ಬಂದೆ. ಅಡಿಯಂಗೆ ತುಂಡು ಪೇಪರು ಹಾಕಿ ಇವ್ವು ಚೆಂದಕೆ ಮನುಗಿದ್ದವಯ್ಯ°! ಅಷ್ಟೆ…ಕುಡಮಾಟ್ಟಂ ಮುಗುಶಿಕ್ಕಿ ವಾಪಾಸು ಹೋಗಿಯೊಂಡಿದ್ದ ಆನೆ ಮೋರೆ ತಿರುಗುಸಿತ್ತು, ಸುತ್ತಲೂ ಇತ್ತಿದ್ದ ಜೆನಂಗೊ ಪೂರ ಬಲಿಪ್ಪಿದವು. ಮನುಗಿದವರ ಮೆಟ್ಟಿಯೊಂಡು ಓಡಿದವು, ಪುಣ್ಯಕ್ಕೆ ಆರಿಂಗೂ ಎಂತ್ಸೂ ಆಯಿದಿಲ್ಲೆ!! ಎನ್ನ ಮೆಟ್ಟು ಎರಡು ತುಂಡು ಅಷ್ಟೆ! ಕಾಲ್ತುಳಿತಲ್ಲಿ ಜೆನಂಗೊ ಸಾವದು ಹೇಂಗೆ ಹೇಳಿ ಅಂದಾಜಿ ಆತು. ಏವದೋ ಮನುಷ್ಯನ ಕ್ಯಾಮೆರಾ ಬಿದ್ದತ್ತು, ಕಾಣ್ತಿಲ್ಲೆ ಹೇಳಿ ಹುಡ್ಕಿಯೊಂಡಿತ್ತು, ಪಾಪ…
ಗಂಟೆ ಒಂದು ಆಯಿದಷ್ಟೆ, ಆಕಾಶಲ್ಲಿ ನಕ್ಷತ್ರಂಗಳ ಕಾಣ್ತಿಲ್ಲೆ, ‘ನಿಘೆಂಟು ಮಳೆ ಬಕ್ಕು, ನಾವು ಬೇರೆಲ್ಯಾರು ಕರೇಲಿ ಕೂಪೊ°’ ಹೇಳಿದ ಜೋಯ್ಸ. ಹಾಂಗೆ ರೆಜಾ ದೂರದ ಇನ್ನೊಂದು ಮಾರ್ಗ ಹಿಡುದು, ಒಂದು ಬಾಗಿಲು ಹಾಕಿಂಡಿದ್ದ ಅಂಗಡಿ ಬಾಗಿಲಿಲ್ಲಿ ಮನುಗಿದೆಯೊ°, ರೆಜ್ಜ ಕಣ್ಣು ಅಡ್ಡ ಆತು. ಎರಡೂವರೆ ಅಪ್ಪಗ ಎದ್ದು ನೋಡ್ತೆಯೊ°, ಮಾರ್ಗ ಇಡೀ ಮಳೆ ಬಂದು ಚೆಂಡಿ ಆಯಿದು. ಜೆನಂಗೊ ಬತ್ತಾ ಇದ್ದವು, ಆಟಿ ತಿಂಗಳ ಮಳೆಯ ಹಾಂಗೆ. ಆಗ ಇತ್ತಿದ್ದವಲ್ಲ, ಬೇರೆಯೇ ಜೆನಂಗೊ, ಕಾಲು ಹಾಕಲೆ ಜಾಗೆ ಇಲ್ಲೆ, ಎದ್ದು ಬೆಡಿ ಕಾಂಬ ಹಾಂಗಿಪ್ಪ ಒಂದು ಜಾಗೆಲಿ ಹೋಗಿ ಕೂದೆಯೊ. ಮಳೆ ಬಂದ ಕಾರಣ ಬೆಡಿ ಕಟ್ಟುವಗ ತಡವಾತು. ಕಾದು, ಕೂದು, ನಿಂದು ಹೊತ್ತು ಕಳದೆಯೊ°. ಬೆಡಿ ಹೊಟ್ಟುವಗ ನಾಕೂವರೆ ಗಂಟೆ ಆದ್ಸು ಗೊಂತಾಯಿದು, ಮುಗಿವಗ ಕೆಮಿಲಿ ಕೈ ಮಡಗಿ ಸುಮಾರು ಹೊತ್ತು ಆಗಿದ್ದತ್ತು! ಅಷ್ಟೂ ಹೊತ್ತು ಬೆಡಿ, ಕಂಬೆಡಿ… ಅದ್ಭುತ!!

ಕೋರ್ಟು ಆದೇಶ ಕೊಟ್ಟ ಕಾರಣ, ಡೆಸಿಬೆಲ್ ಕಡಮ್ಮೆ ಮಾಡಿದ್ದವು ಹೇಳಿದವನ ಎದುರು ಕಾಂಬಲೆ ಸಿಕ್ಕಿರೆ ಎರಡ್ಡು ಕೊಡೇಕು ತೋರಿತ್ತು! ಹೋಗಲಿ, ಹಾಂಗಾರೆ ಮೊದಲು ಎಷ್ಟಿದ್ದಿಕ್ಕು ಬೆಡಿ?! ತಿರುವಂಬಾಡಿಯವರ ಬೆಡಿ ಮುಗುಶಿಕ್ಕಿ ಪಾರಮೇಕ್ಕಾವಿನವು ಸುರು ಮಾಡುವಗ ಹೆರಟೆಯೊ. ಎರಡ್ನೇದು ಮೊದಲಾಣದ್ದರ ಜೆರಾಕ್ಸ್! ರೈಲ್ವೇ ಸ್ಟೇಷನಿಂಗೆ ಹೋಗಿ ಆರು ಗಂಟೆಯ ರೈಲಿಲ್ಲಿ ಸೀಟು ಹಿಡುದು ಕೂದು ರೈಲು ಹೆರಡುವನ್ನಾರವೂ ಬೆಡಿ ಹೊಟ್ಟುದು ಕೇಳಿಯೊಂ…ಡಿತ್ತು!

ಶುದ್ದಿಲಿಪ್ಪ  ಪಟಂಗೊ:

ದೊಡ್ಡಭಾವ

   

You may also like...

8 Responses

 1. ದೊಡ್ಡಬಾವ,
  ಶುದ್ದಿ ಪಷ್ಟ್ಳಾಸಾಯಿದು!
  ಬಪ್ಪೊರಿಶ ಎಡಿಗಾರೆ ಬೈಲಿಂದ ಎಲ್ಲೊರುದೇ ಹೋಪೊ°, ಆಗದೋ?

  ಸರೀ ಹೇಳಿದ್ದಿ ನಿಂಗೊ.
  ಊರಿಡೀ ಬಾಂಕು ಕೊಟ್ರೆ ಡೆಸಿಬೆಲ್ಲು ಏರ್ತಿಲ್ಲೆ ಆಯಿಕ್ಕು ಇವಕ್ಕೆ! ಅವರದ್ದಕ್ಕು, ನಮ್ಮದಾಗದೋ?!

  • ಒಪ್ಪಣ್ಣ ಭಾವ ನೀನು ಸರಿ ಹೇಳಿದ್ದೆ… ಹಿಂದೂ ಕಾರ್ಯಂಗಳಲ್ಲಿ ಹಾಕಿರೆ ಮಾತ್ರ ಏರುದು.. ಬಾಂಕು ಕೊಟ್ರೆ ಎಂತದು ಅವುತ್ತಿಲ್ಲೆ..

 2. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಲೇಖನಲ್ಲಿ ಸುಮಾರು ವಿಶಯಂಗಳ ತಿಳಿಸಿದ್ದೆ. Informative . ಓದುವಾಗ ಒಂದರಿ ಹೋಯೆಕ್ಕು ಹೇಳಿ ಆವ್ತು. ಬೆಡಿಯ ಡೆಸಿಬಲ್ ಹೇಳುವಾಗ, ಕೆಮಿಗೆ ಹತ್ತಿ ಮಡ್ಕೊಂಡು ಹೋಪದೇ ಒಳ್ಳೆದಾಯಿಕ್ಕು ಹೇಳಿ ತೋರ್ತು.

 3. ಶ್ರೀದೇವಿ ವಿಶ್ವನಾಥ್ says:

  ದೊಡ್ಡ ಭಾವ° ಪೂರಂನ ಬಗ್ಗೆ ಬರದ್ದದು ಲಾಯಕ ಆಯಿದು.. ಕುಡುಮಟ್ಟಮ್ ನ ಪಟ ಲಾಯಕ ಬಯಿಂದು.. ದೀಪದ ಎಣ್ಣೇಲಿ ದೇವರ ಬಿಂಬ ಲಾಯ್ಕಲ್ಲಿ ಪ್ರತಿಫಲನ ಆವುತ್ತು… ತ್ರಿಶೂರಿನ್ಗೆ ಮದಲು ತಿರು ಶಿವ ಪೇರೂರು ಹೇಳಿ ಹೆಸರಿತ್ತು.., ಆಚಾರ್ಯ ಅತ್ರೇಯರ ಆದೇಶದ ಹಾಂಗೆ ಆಚಾರ್ಯ ಶಿವಗುರು ಮತ್ತೆ ಮಾತಾ ಆರ್ಯಾಂಬಾ ದಂಪತಿಗ ವಡಕ್ಕುನಾಥನ ಸೇವೆಯ ನಲುವತ್ತೆಂಟು ದಿನಗಳ ಕಾಲ ಮಾಡಿ ಶಿವನ ಅನುಗ್ರಹಲ್ಲಿ ನಮ್ಮ ಸಮಾಜದ,ಸಂಸ್ಕೃತಿಯ ಉದ್ಧಾರಕ ಆಚಾರ್ಯ ಶಂಕರರ ಪುತ್ರನಾಗಿ ಪಡಕ್ಕೊಂಡವು.. ಹೇಳಿ ಇಪ್ಪ ವಿಷಯವ ‘ಧರೆಗಿಳಿದ ದಿವ್ಯತೇಜ ಶ್ರೀ ಶಂಕರಾಚಾರ್ಯ’ ಹೇಳ್ತ ಪುಸ್ತಕಲ್ಲಿ ಓದಿದ್ದೆ.. ಇನ್ನು ಹೆಚ್ಚಿನ ವಿವರಂಗ ಮಾಷ್ಟ್ರು ಮಾವನೆ ಹೇಳೆಕ್ಕಷ್ಟೇ…

 4. ಪೂರಂ ನ ಪೂರ್ಣ ವಿವರಕ್ಕೆ ದನ್ಯವಾದಂಗ.. ಓದಿ ಒಂದರಿ ಅಲ್ಲಿಗೆ ಹೋಯೆಕ್ಕು ಹೇಳಿ ಆವುತ್ತಾ ಇದ್ದು. ಬಪ್ಪೊರಿಷ ಒಟ್ಟಿಂಗೆ ಹೋಪ..
  ಅಖೇರಿ ದಿನ ಮಾರ್ಕ್ ಸರಿ ಹಾಕಿದ್ದೀರನ್ನೆ…?

 5. ಗಣೇಶ ಮಾವ says:

  ದೊಡ್ಡ ಭಾವ,ತ್ರಿಶೂರ್ ಪೂರಂ ಬಗ್ಗೆ ಎನಗೆ ಏನೂ ಗೊಂತಿತ್ತಿಲ್ಲೆ…ನಿಂಗಳ ಲೇಖನ ನೋಡಿ ಇನ್ನು ಮುಂದಾಣ ಪೂರಂ ಗೆ ಹೋಯೆಕ್ಕು ಹೇಳಿ ಕೊದಿ ಆಯಿದು.ಆನು ಕೈರಳೀ ಚಾನೆಲ್ ಲಿ ಒಂದರಿ ಇದರ ನೋಡಿದ್ದೆ..ಮತ್ತೆ ನಿಂಗಳ ಹತ್ರೆ ಸಂಪೂರ್ಣ ಮಾಹಿತಿ ಸಿಕ್ಕಿತ್ತು..ಧನ್ಯವಾದ ದೊಡ್ಡ ಭಾವ…

 6. shyamaraj.d.k says:

  lekhana odiyappaga pooram nodi bandastu kushi atu.Innana varsha hopale beku.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *