‘ವ್ಯಾಖ್ಯಾನ ನಿಪುಣ’ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ

ಮಹಾಕವಿ ಮುದ್ದಣನ ರಾಮಾಶ್ವಮೇಧ ಹಳೆಗನ್ನಡದ ಅತ್ಯಂತ ಶ್ರೇಷ್ಟ ಗದ್ಯಕಾವ್ಯ ಹೇಳಿ ಪ್ರಸಿದ್ಧ ಆಯಿದು.ಸಂಸ್ಕೃತ ಭೂಯಿಷ್ಟವಾಗಿ “ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ” ಆಗದ್ದೆ, ಕಸ್ತೂರಿ ಹಾಂಗಿಪ್ಪ ಕನ್ನಡಲ್ಲಿಯೇ ಕಥಾ ನಿರೂಪಣೆ ಇರೆಕ್ಕು ಹೇಳಿ ತೀರ್ಮಾನಿಸಿದರೂ,”ಕರ್ಮಣಿ ಸರದೊಳ್ ಚೆಂಬವಳಮಂ ಕೋದಂತೆ” ಅಲ್ಲಲ್ಲಿ ಸಂಸ್ಕೃತ ಪದಂಗಳ ಪೋಣಿಸಿ ಬರವದು ಮುದ್ದಣನ ಉದ್ದೇಶ. ಆ ಕಾರಣಕ್ಕಾಗಿಯೇ,ಹಲವಾರು ಸಂಸ್ಕೃತ ಪದಂಗೊಕ್ಕೆ ಸಮಾನವಾಗಿಪ್ಪ ಕನ್ನಡ ಅಥವಾ ತದ್ಭವ ಪದಂಗಳ ತಾನೇ ಸೃಷ್ಟಿಸಿ,ಅದ್ಭುತ ಕಾವ್ಯ ರಚಿಸಿದ ಪ್ರತಿಭಾಶಾಲಿ ಮುದ್ದಣ.ರಾಮಾಶ್ವಮೇಧದ ‘ನವಮಾಶ್ವಾಸ’ಲ್ಲಿ  ದಮನ ಹೇಳ್ತ ಖೂಳ ರಕ್ಕಸ ಭೃಗು ಪತ್ನಿಯ ಜಡೆಯ ಸೆಳಕ್ಕೊಂಡು ಕೊಂಡೋಪ ಸನ್ನಿವೇಶಲ್ಲಿ ಒಂದು ಸಾಲು ಹೀಂಗಿದ್ದು – “ಕೂಳಂ ಪತ್ತೆ ಸಾರ್ದು ಕೊಡನ ಮರಿಯ ಪೆಡೆಯಂ ತುಡುಕುವೆಗ್ಗನಂತಿರೆ ಸತಿಯ ನಿಡುಜಡೆಯಂ ಪಿಡಿದೀಳ್ದುಯ್ಯುತುಮಿರ್ದಂ”. ರಾಮಾಶ್ವಮೇಧದ ಪ್ರಕಟಣಾಕಾರರು ಇದರಲ್ಲಿಪ್ಪ ‘ಕೊಡನ ಮರಿ’ ಯ ‘ಜೇನ್ನೊಣದ ಮರಿ’ ಹೇಳಿ ಅರ್ಥೈಸಿ ‘ಪೆಡೆಯಂ’ ಇಪ್ಪದರ ‘ಪಡೆಯಂ’ ಹೇಳಿ ತಿದ್ದಿತ್ತಿದ್ದವಡ.ಆ ರೀತಿಲಿ ಪೂರ್ತಿ ಸಾಲಿನ ಅರ್ಥವ – “ಖೂಳ(ಕ್ರೂರ)ನು ಸಮೀಪಕ್ಕೆ ಬಂದು ಜೇನುನೊಣಗಳ ಹಿಂಡಿ(ಪಡೆ)ಗೆ ಬಲಾತ್ಕಾರದಿಂದ ಕೈದುಡುಕುವ ಮೂಢನಂತೆ ಸತಿಯ ನೀಳವಾದ ಜಡೆಯನ್ನು ಹಿಡಿದು ಎಳೆದೊಯ್ಯುತ್ತಿದ್ದನು.”- ಹೇಳಿ ಬರದ್ದವಡ.ಆದರೆ, ಕೊಡನ ಮರಿ ಎಂಬುದಕ್ಕೆ ಉತ್ಕೃಷ್ಟವಾದ ಬೇರೆ ಅರ್ಥವ ಹುಡುಕಿ ಸ್ವಾರಸ್ಯವಾಗಿಪ್ಪ ಹಾಂಗೆ ವ್ಯಾಖ್ಯಾನಿಸಿದ್ದು ಪ್ರೊ.ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು. ಅವರ ಪ್ರಕಾರ ಕೊಡನ ಮರಿ ಹೇಳಿರೆ ಘಟಸರ್ಪಕ್ಕಿಪ್ಪ ಕನ್ನಡದ ಸಮಾನ ಶಬ್ಧ, ಇದೊಂದು ‘ಮುದ್ದಣ ಸೃಷ್ಟಿ’ ಹೇಳಿ ವ್ಯಾಖ್ಯಾನಿಸಿ ಮೇಲಾಣ ಸಾಲಿನ ಅರ್ಥ ಸ್ವಾರಸ್ಯವ ಹೆಚ್ಚಿಸಿದ್ದು ತೆಕ್ಕುಂಜದವರ ಹಿರಿಮೆ. ಘಟಸರ್ಪನ ಹೆಡೆಗೆ ಕೈಹಾಕಿದ ಮೂ ಢನಂತೆ ಖೂಳನು ಆ ಸತಿಯ ಜೆಡೆಯನ್ನು ಹಿಡಿದೆಳೆದನು ಎಂಬರ್ಥವು ಮನೋಹರವಾಗಿ ಕಾಣುತ್ತದೆ ಹೇಳಿ ವಿವರಿಸಿದವು. (ಮರಿ – ಹೇಳಿರೆ ತುಳುವಿಲಿ ಸರ್ಪ ಹೇಳ್ತ ಅರ್ಥ). ಮದ್ದಣ ಪ್ರಯೋಗಿಸಿದ ಎಷ್ಟೊ ಪದಂಗೊಕ್ಕೆ ಕೋಶ(ಡಿಕ್ಷ್ನರಿ)ವ ಉಪಯೋಗಿಸಿದರೂ ಅರ್ಥ ಮಾಡಿಗೊಂಬದು ಕಷ್ಟ ಆಗಿಪ್ಪಗ, ಅದೆಷ್ಟೋ ಅರ್ಥ ಪಲ್ಲಟ ಆಗಿತ್ತಿದ್ದ ಪದಂಗಳ ಸರಿಯಾಗಿ ಅರ್ಥೈಸಿ ಮುದ್ದಣನ ಕಾವ್ಯದ ರಸಾಸ್ವಾದವ ಹೆಚ್ಚಿಸಿದ್ದು ತೆಕ್ಕುಂಜದವು.

ಪ್ರೊ.ತೆಕ್ಕುಂಜ ಗೋಪಾಲಕೃಷ್ಣ ಭಟ್ಟ

ಪ್ರೊ.ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು

ಮಲ್ಲಿನಾಥ ಹೇಳ್ತವ ಮಹಾಕವಿ ಕಾಳಿದಾಸನ ಕಾವ್ಯಂಗಳ ವ್ಯಾಖ್ಯಾನಿಸಿ ಅದರಲ್ಲಿಪ್ಪ ಸ್ವಾರಸ್ಯವ ಹೇಂಗೆ ಸಾರಸ್ವತ ಜಗತ್ತಿಂಗೆ ತೋರ್ಸಿದನೋ, ಅದೇ ರೀತಿಲಿ ಮುದ್ದಣನ ಕಾವ್ಯ ಕೌಶಲವ ಜಗತ್ತಿಂಗೆ ಸ್ವಾರಸ್ಯಕರವಾಗಿ ಉಣುಸಿದ್ದು ತೆಕ್ಕುಂಜದವು. ಹಾಂಗಾಗಿಯೇ ಅವರಮುದ್ದಣಂಗೆ ಸಿಕ್ಕಿದ ಮಲ್ಲಿನಾಥಹೇಳಿ ಕೊಂಡಾಡ್ತವು.’ಪದ್ಯಂ ವದ್ಯಂ ಗದ್ಯಂ ಹೃದ್ಯಂಹೇಳ್ತ ನಿಯಮವ ಮನೋರಮೆ ಹಾಕಿದ್ದರೂ,ಅಲ್ಲಲ್ಲಿ ಪ್ರಾಸಬದ್ಧವಾದ ಪದ್ಯಂಗಳನ್ನೂ ಗದ್ಯದ ಒಟ್ಟೊಟ್ಟಿಂಗೆ ಹಾಕಿ ರಾಮಾಶ್ವಮೇಧವಪದ್ಯಗಂಧಿಯಾಗಿಸಿದ್ದ ಹೇಳಿ ತೆಕ್ಕುಂಜದವರ ಅಭಿಪ್ರಾಯ ಆಗಿತ್ತು. ಗದ್ಯದ ನಡುಕೆ ಹುಗ್ಗಿದ ಕೆಲವು ಕಂದ ಪದ್ಯಂಗಳ ಎತ್ತಿ ತೋರ್ಸಿದ್ದವು. ಚತುರ್ಥಾಶ್ವಾಸಲ್ಲಿ ರಾಮ ಸೀತೆಯ ದುಃಖವ ಕಂಡು ಮರುಗಿ ವಿಚಾರ್ಸುವ ಸಂದರ್ಭದ ಸಾಲುಅತ್ತೆವಿರೇಂ ಬಯ್ದರೆ?ಎನ್ನೊತ್ತಿನ ಸಹಜಾತರಂತುಟಣಕಿಸೆ ನಿನಗಾದತ್ತೆ ವಿಷಾದಂ? ದೂಸರಿದೆತ್ತಣಿನಾಯ್ತರಸಿ ನಿನಗೆ ಸರಸಿರುಹಾಕ್ಷೀಗಮನಿಸಿ,ಇದೊಂದು ಶುದ್ಧ ಕಂದ ಪದ್ಯ.! ಇಷ್ಟೊಂದು ಕೂಲಂಕುಷವಾಗಿ ವ್ಯಾಖ್ಯಾನ ಮಾಡಿದ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ನಿಜವಾಗಿಯೂ ಅಭಿನವ ಮಲ್ಲಿನಾಥನೇ ಸೈ.

ಕರಾವಳಿ ಕರ್ನಾಟಕಲ್ಲಿ ಪ್ರೊ. ತೆಕ್ಕುಂಜದವರ ಹೆಸರು ಪಂಡಿತವರೇಣ್ಯರಾಗಿತ್ತಿದ್ದ ಮುಳಿಯ ತಿಮ್ಮಪ್ಪಯ್ಯ, ಕುಕ್ಕಿಲ ಕೃಷ್ನ ಭಟ್ಟ, ಸೇಡಿಯಾಪು ಕೃಷ್ನ ಭಟ್ಟರ ಸಾಲಿಲಿ ಬತ್ತು.ಮುಳಿಯ ತಿಮ್ಮಪ್ಪಯರ ನೆರಳಿಲಿ ಕಲ್ತು,ಸೇಡಿಯಾಪು ಕೃಷ್ಣ ಭಟ್ಟರು ತೋರ್ಸಿ ಕೊಟ್ಟ ದಾರಿಲಿ ಸಾಗಿ ಕನ್ನಡವ ಬೆಳೆಶುವಲ್ಲಿ ತೆಕ್ಕುಂಜದವರ ಪಾಲೂ ದೊಡ್ದದು.ತಮ್ಮದೇ ಆದ ತಲಸ್ಪರ್ಶಿ ವಿಶ್ಲೇಷಣ ವಿಧಾನಂಗೊ,ನಿಷ್ಪಕ್ಷಪಾತವಾದ ಖಚಿತ ಅಭಿಪ್ರಾಯಂಗೊ ತೆಕ್ಕುಂಜದವರ ವೈಶಿಷ್ಟ್ಯ. ಕೊಡೆಯಾಲಲ್ಲಿ ಸಂತ ಅಲೋಶಿಯಸ್ ಕೊಲೇಜಿಲಿ ಕನ್ನಡ ಪ್ರಾಧ್ಯಾಪಕರಾಗಿ ಎಷ್ಟೋ ಮಕ್ಕೊಗೆ ಕನ್ನಡಾಭಿಮಾನವನ್ನೂ, ಕನ್ನಡ ಪ್ರೀತಿಯನ್ನೂ ಮೂಡ್ಸಿಗುರುವರೇಣ್ಯರಾದ ತೆಕ್ಕುಂಜ ಗೋಪಾಲಕೃಷ್ನ ಭಟ್ಟರದ್ದು ಸಾರ್ಥಕ ಬಾಳ್ವೆ.

ಕುಟುಂಬ,ಬಾಲ್ಯ,ಶಿಕ್ಷಣ :

ತೆಕ್ಕುಂಜ ಹೇಳಿರೆ ಈಗಾಣ ಬಂಟ್ವಾಳ ತಾಲೂಕಿನ ಅಮ್ಮೆಂಬಳ  ಕುರ್ನಾಡು ಗ್ರಾಮದ ಗುರಿಕಾರ ಮನೆತನದ ಹೆಸರು. ಮನೆತನದ ಪ್ರಾಚೀನ ಚರಿತ್ರೆ ಅಧಿಕೃತವಾಗಿ ಎಲ್ಲಿಯೂ ಇಲ್ಲೆ.ಆದರೆ ಪ್ರಚಲಿತಲ್ಲಿಪ್ಪ ಮಾಹಿತಿಯ ಪ್ರಕಾರ ಕುರ್ನಾಡಿನ ಪಾಳೆಯಗಾರ ಗೋಕರ್ಣಂದ ವಿಶ್ವಾಮಿತ್ರ ಗೋತ್ರದ ಹವೀಕರಾದ ಇವರ ಪೂರ್ವಜರ ಕರೆಸಿ, ತಕ್ಕುದಾದ ಮನ್ನಣೆ ಕೊಟ್ಟು ನೆಲೆನಿಂಬ ಹಾಂಗೆ ಮಾಡಿದನಡ.ಇವು ಕುರ್ನಾಡು ಗ್ರಾಮದ ಗ್ರಾಮಣಿ ಆಗಿಯೂ,ಪಟೇಲರಾಗಿಯೂ ಇತ್ತಿದ್ದವಡ.ಇವರ ಪೈಕಿ ಆಸುಪಾಸಿಲಿ ಪ್ರಭಾವಶಾಲಿಯಾಗಿಯೂ,16 ಗ್ರಾಮಂಗಳ ಪಟೇಲರುಗಳ ಮುಂದಾಳಾಗಿಯೂ ಇತ್ತಿದ್ದ ಸುಬ್ಬಾ ಭಟ್ಟ ಹೇಳ್ತವು ಕಾಲಲ್ಲಿ ಎಲ್ಲೋರ ಸೇರ್ಸಿಗೊಂಡು ಕರನಿರಾಕಣೆ ಮಾಡಿ ಮಂಗ್ಳೂರ ಕಲೆಕ್ಟ್ರನ ಎದುರು ನಿಂದಿತ್ತಿದ್ದವಡ. ರಾಜದ್ರೋಹದ ಆರೋಪಲ್ಲಿ ಸೆರೆಮನೆವಾಸ ಮಾಡಿ ಸಣ್ಣ ಪ್ರಾಯಲ್ಲಿಯೇ ತೀರಿದ ಮತ್ತೆ ಇವರ ತಮ್ಮ ಕೃಷ್ಣಭಟ್ಟರ ಸಂತತಿ ಮುಂದೆ ಬೆಳದು, ಜನೋಪಕಾರಿಯಾಗಿ ಧರ್ಮಕಾರ್ಯಂಗಳ ಮಾಡಿಗೊಂಡು ಹೆಸರು ಪಡದವು.ಕುರ್ನಾಡು ಗ್ರಾಮ ದೇವರಾದ ಸೋಮನಾಥನ ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಜನ ಮನ್ನಣೆಯನ್ನೂ ಗಳಿಸಿದವು.

ಈ ಕುಟುಂಬದ ಹೆರಿಯರಾದ ಶಂಕರ ಭಟ್ಟ ಹೇಳ್ತವು ಸಂಸ್ಕೃತ ವಿದ್ವಾಂಸರೂ,ಆಯುರ್ವೇದ ಪಂಡಿತರೂ ಆಗಿತ್ತವು. ಅಮ್ಮೆಂಬಳ ಸೋಮನಾಥ ಸಂಸ್ಕೃತ ಪಾಠಶಾಲೆಯ ಸ್ಥಾಪಿಸಿ ಸ್ವತಃ ಸಂಸ್ಕೃತ ಅಧ್ಯಾಪಕರಾಗಿ ಆಸುಪಾಸಿಲಿ ‘ಹೆಡ್ಮಾಷ್ಟ್ರು’ಹೇಳಿಯೇ ಹೆಸರುವಾಸಿಯಾಗಿತ್ತಿದ್ದವು.ಇವರ ದೊಡ್ಡಮಗನಾಗಿ ಫೆಬ್ರುವರಿ 1916 ರಲ್ಲಿ ಗೋಪಾಲಕೃಷ್ಣರ ಜನ್ಮ ಆತು.ಇವಕ್ಕೆ ಮೂರು ಜೆನ ತಮ್ಮಂದ್ರೂ, ಮೂರು ಜೆನ ತಂಗೆಕ್ಕಳೂ ಇತ್ತಿದ್ದವು. ಎಲ್ಲೊರಿಂಗೂ ದೊಡ್ಡಣ್ಣನಾಗಿ,ತಮ್ಮಂದ್ರ ಮಕ್ಕೊಗೆ ದೊಡ್ಡಪ್ಪನಾಗಿ,ತಂಗೆಕ್ಕಳ ಮಕ್ಕೊಗೆ ದೊಡ್ಡಮಾವನಾಗಿ ಕುಟುಂಬಲ್ಲಿ ಗೌರವ ಗಳಿಸಿದವು.

ಬಾಲ್ಯಲ್ಲಿ ಅಪ್ಪನೇ ಇವರ ಆರಂಭದ ಶಿಕ್ಷಕರಾಗಿತ್ತವು. ಸೋಮನಾಥ ಸಂಸ್ಕೃತ ಶಾಲೆಲಿ ಕಲ್ತು, 1932 ರಲ್ಲಿ ಮದ್ರಾಸು ಸರಕಾರದ ಸಂಸ್ಕ್ರತ ಪ್ರವೇಶ ಪರೀಕ್ಷೆಯ ಪಾಸು ಮಾಡಿದವು. ಸಮಯಲ್ಲಿ ಅಮ್ಮೆಂಬಳ ಶಂಕರನಾರಾಯಣ ನಾವಡರು ತೆಕ್ಕುಂಜದವರ ಸಹಪಾಠಿ ಆಗಿತ್ತವು.ಮುಂದೆ ಕೊಡೆಯಾಲಲ್ಲಿ ಕೆನರಾ ಹೈಸ್ಕೂಲಿಲಿ 1935 ರಲ್ಲಿ ಎಸ್ಸಸ್ಸೆಲ್ಸಿ ಪಾಸು ಮಾಡಿದವು.35-37 ರವರೆಗೆ ಸೈಂಟ್ ಎಲೋಶಿಯಸ್ ಕೊಲೇಜಿಲಿ ಇಂಟರ್ ಮೀಡಿಯಟ್ ಕಲ್ತವು. ಸಮಯಲ್ಲಿ ಮುಳಿಯ ತಿಮ್ಮಪ್ಪಯ್ಯರ ಸಂಪರ್ಕವೂ ಒದಗಿ ಅವರ ಪ್ರಭಾವಲ್ಲಿ ಬೆಳದವು.

ವೃತ್ತಿ ಜೀವನ

1937 ನಂತ್ರ ನಾಕು ವರ್ಷ ಅಪ್ಪನೊಟ್ಟಿಂಗೆ ಸೋಮನಾಥ ಶಾಲೆಲಿ ಸಹಶಿಕ್ಷಕರಾಗಿ ಕೆಲಸ ಮಾಡಿದವು.ಇಲ್ಲಿ ಅವು ಇಂಗ್ಲೀಷ್ ಕಲಿಶಿಗೊಂಡಿತ್ತಿದ್ದವು.ಶಾಲಾ ವಾರ್ಷಿಕೋತ್ಸವದ ಸಮಯಲ್ಲಿ ಹಳೆ ವಿದ್ಯಾರ್ಥಿಗಳ ಸೇರ್ಸಿಗೊಂಡು ನಾಟಕಂಗಳ ದಿಗ್ದರ್ಶಿಸಿ ಸಂಯೋಜನೆ ಮಾಡ್ಸಿಗೊಂಡಿತ್ತಿದ್ದರ ತೆಕ್ಕುಂಜದವರ ಕುಟುಂಬದವು ಈಗಳೂ ನೆಂಪು ಮಾಡ್ತವು.ಅದೇ ಕಾಲಲ್ಲಿ ಖಾಸಗಿಯಾಗಿ ಓದಿ ಕನ್ನಡ ವಿದ್ವತ್ ಪದವಿಯನ್ನೂ, ಮದರಾಸು ವಿಶ್ವವಿದ್ಯಾಲಯದ ಬಿ.ಒಎಲ್( ಮತ್ತೆ ಇದು ಎಮ್. ಆಗಿ ಪರಿವರ್ತನೆ ಆತಡ)ಪದವಿಯನ್ನೂ ಗಳಿಸಿದವು.ಅಮ್ಮೆಂಬಳ ಊರಿಲಿ ಇತ್ತಿದ್ದ ಸಮಯಲ್ಲಿ ಶಂಕರನಾರಾಯಣ ನಾವಡರೊಟ್ಟಿಂಗೆ ಸೇರಿಕನ್ನಡ ಸೇವಾಸಂಘ ಸ್ಥಾಪನೆ ಮಾಡಿ ಹಳ್ಳಿ ಜೆನಂಗೊಕ್ಕೆ ಓದುಲೆ ಕನ್ನಡ ಪತ್ರಿಕೆಗಳ ತರಿಸಿಕೊಟ್ಟವು. ಸುಧಾಹೆಸರಿನ ಕೈ ಬರಹದ ಪತ್ರಿಕೆಯ ಮೂಲಕ ಸಾಹಿತ್ಯವ ಪರಿಚಯಿಸುವ ಕೈಂಕರ್ಯ ಮಾಡಿದವು. 1942 ರಲ್ಲಿ ಕೊಡೆಯಾಲದ ಸೈಂಟ್ ಎಲೋಶಿಯಸ್ ಹೈಸ್ಕೂಲಿಲಿ ಉಪಾಧ್ಯಾಯರಾಗಿ ಸೇರಿದವು. ಮುಂದೆ 1946 ರಲ್ಲಿ ಎಲೋಶಿಯಸ್ ಕೊಲೇಜಿಲಿ ಉಪನ್ಯಾಸಕ ಹುದ್ದೆಗೆ ಸೇರಿ 1976 ರಲ್ಲಿ ರಿಟೈರ್ ಅಪ್ಪಲ್ಲಿವರೆಗೂ ಕನ್ನಡ ಬೋಧನೆಯ ಕೆಲಸವ ನಿಷ್ಟೆಲಿ ಮಾಡಿದವು.  

ಕೊಡೆಯಾಲದ ಕರಂಗಲಪಾಡಿಯ ಅವರ ಬಿಡಾರಕ್ಕೆ ಒಂದರಿ ತೆಕ್ಕುಂಜದವರ ತಮ್ಮ ಸಂಸಾರದೊಟ್ಟಿಂಗೆ ಬಂದ ಸರ್ತಿಲಿ, ಇರುಳಾಣ ಅಡಿಗೆ ಕೆಲಸಲ್ಲಿ ಅಕ್ಕಂಗೆ ಕೈಜೋಡುಸಿ,ಇವರ ಮಾತಾಡ್ಸಿಗೊಂಡು ಬಂದ ತಮ್ಮನ ಹೆಂಡತ್ತಿ

ಅಡಿಗೆ ತಯಾರಾತು,ಉಂಬ ಹೊತ್ತು ಆದರೆ ಉಂಬಲಕ್ಕಡಹೇಳಿದ್ದಕ್ಕೆ

ಆತು. ನಾಳಂಗಿಪ್ಪ ಪೀರಿಯೆಡಿನ ಪಾಠಕ್ಕೆ ನೋಟ್ಸ್ ಮಾಡಿಗೊಂಡರೆ ಎನ್ನ ಇಂದ್ರಾಣ ಕೆಲಸವೂ ಮುಗುತ್ತು

ಅದೆಂತ ಭಾವ, ನಿಂಗೊ ಇಷ್ಟು ವರ್ಷ ಕೊಲೇಜಿಲಿ ಮಕ್ಕೊಗೆ ಪಾಠ ಮಾಡ್ತಾ ಇದ್ದಿ. ಈಗಳೂ ಪಾಠ ಮಾಡೆಕ್ಕಾರೆ ನೋಟ್ ಮಾಡೆಕ್ಕಾವುತ್ತೋ ?”

ಬೇಕಾವ್ತು.! ನೀನು ಎಂತ ಹೇಳ್ತೆ . ಕುಂಬ್ಳೆ, ನೀರ್ಚಾಲು ಹೊಡೆಂದ ಕೆಲವು ವಿದ್ಯಾರ್ಥಿಗೊ ಬತ್ತವು. ಅವ್ವಿಪ್ಪ ಕ್ಲಾಸಿಲಿ ತಯಾರಿ ಇಲ್ಲದ್ದೆ ಹೋದರೆ ಅವು ಕೇಳುವ ಪ್ರಶ್ನೆಗೆ ಸಮಂಜಸ ಉತ್ತರ ಕೊಡುದು ಸುಲಭ ಇಲ್ಲೆ.

ಇದು ತೆಕ್ಕುಂಜದವರ ನಿಷ್ಠೆ.!

ನಿವೃತ್ತರಾದ ಮತ್ತೆ ಮಂಗಳಗಂಗೋತ್ರಿಲಿ ಯುಜಿಸಿ ನಿಯೋಜಿತ ಸಂಶೋಧಕ ಪ್ರಾಧ್ಯಾಪಕರಾಗಿ ಸುಮಾರು ಸಮಯ ಸೇವೆ ಸಲ್ಲಿಸಿದವು.

ತೆಕ್ಕುಂಜದವರ ಮಡದಿ ರತ್ನಮ್ಮ. ಇವುದೆ ಕನ್ನಡ ಪ್ರೇಮಿ.ಓದಿದ ಸಾಹಿತ್ಯ,ಕೇಳಿದ ಭಾಷಣ, ಕಂಡ ಆಟಕೂಟಂಗಳ ಬಗ್ಗೆ ತೆಕ್ಕುಂಜದವರೊಟ್ಟಿಂಗೆ ವಿಮರ್ಶೆ ಮಾಡಿಗೊಂಡಿತ್ತಿದ್ದವು.ಮನೆಗೆ ಬಂದುಗೊಂಡಿತ್ತಿದ್ದ ಸಾಹಿತಿ ಮಿತ್ರರ ಆದರಿಸಿ ಸತ್ಕಾರ ಮಾಡಿಗೊಂಡಿತ್ತಿದ್ದ ಸಾದ್ವಿಮಣಿ.ಇವರ ಆದರ್ಶ ಸಂಸಾರವ ಕಂಡು ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರುಆಧುನಿಕ ಮುದ್ದಣಮನೋರಮೆಯರು ಹೇಳಿ ದೆನುಗೇಳಿದ್ದವು.

ಸಾಹಿತ್ಯ ಸೇವೆ.

ತೆಕ್ಕುಂಜದವರ ಶುರುವಾಣ ಕವನ ಮುರಲಿ1934 ರಲ್ಲಿ ಕಾರ್ಕಳದ ಮಾಸಪತ್ರಿಕೆಕಲಾಚಂದ್ರಲ್ಲಿ ಪ್ರಕಟ ಆಗಿತ್ತು.ಗೋಪಬಾಲಹೆಸರಿಲಿ ಬರದ ಇವರ ಲೇಖನಂಗೊ ಕೊಡೆಯಾಲದ ರಾಷ್ಟ್ರಬಂಧು ಪತ್ರಿಕೆಯ ಸಾಹಿತ್ಯ ಸಂಚಿಕೆಲಿ ಪ್ರಕಟ ಆಯ್ಕೊಂಡಿದ್ದತ್ತು.ಇವು ಬರದಮಗಳ ಮದುವೆಕಥೆಗೆ ಅಖಿಲ ಕರ್ನಾಟಕ ಕಥಾಸ್ಪರ್ಧೆಲಿ ಮೊದಲ ಬಹುಮಾನ ಸಿಕ್ಕಿದ್ದಡ. ‘ತ್ರಿವೇಣಿಮಾಸ ಪತ್ರಿಕೆಲಿ ಆರು ಕವನಂಗಳೂ,ಒಂದು ಕತೆಯೂ,”ಕೈಗಡಿಯಾರ ಹೆಸರಿನ ಹಾಸ್ಯ ಬರಹವೂ ಪ್ರಕಟ ಆಗಿತ್ತಡ.ಆಮೇಲೆಯೂ ಹಲವು ಕಥೆ,ಕವನಂಗಳ ಬೇರೆ ಬೇರೆ ನಿಯತಕಾಲಿಕೆಗೊಕ್ಕೆ ಬರದು ಪ್ರಕಟ ಆಗಿದ್ದರೂ,ಯೇವುದೂ ಸಂಗ್ರಹ ರೂಪಲ್ಲಿ ಬಿಡುಗಡೆ ಆಯಿದಿಲ್ಲೆ.ಅವರ ಆಸಕ್ತಿ ಭಾಷೆ,ವ್ಯಾಕರಣ ಇತ್ಯಾದಿ ಗಂಭೀರ ವಿಷಯಲ್ಲಿ ಬೆಳದ ಕಾರಣವೋ ಏನೋ,ತೆಕ್ಕುಂಜದವು ಕವಿಯಾಗಿ ಅಥವಾ ಕತೆಗಾರನಾಗಿ ಗುರುತಿಸಿಗೊಂಡಿದವಿಲ್ಲೆ.

ವೀರವಿಲಸಿತ ತೆಕ್ಕುಂಜದವರ ಖಂಡಕಾವ್ಯ.ಪಿರಿಯಕ್ಕರ ಛಂದಸ್ಸಿಲಿ 36 ಪದ್ಯಂಗ ಇಪ್ಪ ಕಾವ್ಯದ ವಸ್ತು ರಾಮಾಯಣದ ಉತ್ತರಕಾಂಡಲ್ಲಿ ಬಪ್ಪ ಕಥೆ.ಮಧುರಂಜಿನಿ ಶೃಂಗಾರ ಮುಕ್ತಕಂಗಳ ಸಂಕಲನ.ಕನ್ನಡ ಸಮಾಸಗಳು ಕೃತಿಲಿ ಪ್ರೌಢ ವ್ಯಾಕರಣ ವಿಚಾರಂಗಳ ವಿಶ್ಲೇಷಣೆಯ ಕಾಂಬಲಕ್ಕು. ಸಂಸ್ಕೃತದ ವಿಕ್ರಮಾರ್ಕ ಚರಿತೆಯ ಆಧಾರಲ್ಲಿ ಬರದ ವಿಕ್ರಮ ಸಿಂಹಾಸನ ಕಥಾಮಾಲಿಕೆ ನವಭಾರತದ ವಾರದ ಪುರವಣಿಲಿ ಧಾರವಾಹಿಯಾಗಿ ಬಂದುಗೊಂಡಿತ್ತು.ಕನ್ನಡದ ಕವಿರತ್ನಗಳುಶೀರ್ಷಿಕೆಲಿ ಪಂಪ,ರನ್ನ,ಬಸವಣ್ಣ,ಲಕ್ಷ್ಮೀಶ,ಕುಮಾರವ್ಯಾಸ,ಮುದ್ದಣ ಆದಿ ಕವಿಗಳ ಪರಿಚಯಾತ್ಮಕ ಲೇಖನಂಗಳನ್ನೂ ಬರದ್ದವು.ಗಿರಿಜಾಕಲ್ಯಾಣ ವಿಶ್ಲೇಷಣೆ,’ಯಶೊಧರ ಚರಿತೆಗೆ ಬರದ ವಿಸ್ತಾರವಾದ ಟಿಪ್ಪಣಿಅನುವಾದ,ಹವೀಕರ ಆಡುನುಡಿಯ ವೈಶಿಷ್ಟ್ಯಗಳು, ದಕ್ಷಿಣಕನ್ನಡದ ಸಂಶೋಧನೆ ಮತ್ತು ವಿಮರ್ಶೆ,ಇಪ್ಪನೆಯ ಶತಮಾನದ ಕನ್ನಡ ಪದ್ಯ ಸಾಹಿತ್ಯ,ಅಹಲ್ಯೆಯ ಒಂದು ಚಿತ್ರ, ಯಕ್ಷಗಾನ ಪರ ಕೆಲವು ದಂತಕಥೆಗಳು,ತುಳುವಿನ ವರ್ಣಮಾಲೆ,ಕನ್ನಡ ಕಾವ್ಯಗಳಲ್ಲಿ ಗಣೇಶ,ಮುದ್ದಣನ ಭರತವಾಕ್ಯ,ಕೆಲವು ಷಡ್ಪದಿಗಳುಇತ್ಯಾದಿ ಪ್ರಬುದ್ಧವಾದ ಲೇಖನಂಗೊ ಹಲವಾರು ಪತ್ರಿಕೆಗಳಲ್ಲಿ ಪ್ರಕಟ ಕಂಡಿದು.ಸಾಹಿತ್ಯ ಸಮ್ಮೇಳನ,ಗೋಷ್ಟಿಗಳಲ್ಲಿ ಮಾಡಿದ ವಿಚಾರಾತ್ಮಕ ಭಾಷಣಂಗೊ, ಭಾಷಾವಿಜ್ಞಾನ,ವ್ಯಾಕರಣ,ಛಂದಸ್ಸುಗಳ ಬಗ್ಗೆ ಬರದ ವಿಶ್ಲೇಷಣಾತ್ಮಕ ಬರಹಂಗೊ,ಅಧ್ಯಯನಂಗೊ ತೆಕ್ಕುಂಜದವರ ತಲಸ್ಪರ್ಷಿಯಾದ ಚಿಂತನ ಮಂಥನಕ್ಕೆ ಕೈಹಿಡುದ ಕನ್ನಾಟಿ.

1976 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನವು ಹಳೆಗನ್ನಡ ಕಾವ್ಯಂಗೊಕ್ಕೆ ಹೊಸಗನ್ನಡ ಅನುವಾದ ರೂಪಲ್ಲಿ ಪ್ರಕಟಿಸುವ ಕಾರ್ಯ ಶುರು ಮಾಡಿಪ್ಪಗ, ಜನ್ನ ಕವಿಯ ಯಶೋಧರ ಚರಿತೆ ಕಾವ್ಯವ ತೆಕ್ಕುಂಜದವು ಹೊಸಕನ್ನಡಕ್ಕೆ ಅನುವಾದಿಸಿ,ಅದಕ್ಕೊಂದು ಚೆಂದದ ಪ್ರಸ್ತಾವನೆಯನ್ನೂ ಬರದು,ತಮಗೆ ವಹಿಸಿಕೊಟ್ಟ ಜೆವಬ್ಧಾರಿಯ ಸಮರ್ಪಕವಾಗಿ ಪೂರೈಸಿದವು.ಇವರ ಗುರುಗಳೂ,ತೀರ್ಥರೂಪರೂ ಆಗಿತ್ತಿದ್ದ ತೆಕ್ಕುಂಜ ಶಂಕರ ಭಟ್ಟರ ಸ್ಮರಣಾರ್ಥಗುರುದಕ್ಷಿಣೆಹೊತ್ತಗೆಯ ಸಂಪಾದಿಸಿ,ಗುರುಗಳಾಗಿತ್ತಿದ್ದ ಮುಳಿಯ ತಿಮ್ಮಪ್ಪಯ್ಯರ ಸ್ಮರಣಾರ್ಥಶ್ರದ್ಧಾಂಜಲಿಸಂಚಿಕೆಯನ್ನೂ ಪ್ರಕಟಿಸಿ, ಮುಳಿಯದವರಜೀವನಸಾಧನೆ ಪರಿಚಯ ಪುಸ್ತಕವನ್ನೂ ಬರದು,ಗುರುಸಮಾನರಾಗಿತ್ತಿದ್ದ ಸೇಡಿಯಾಪು ಅವರ ಅಭಿನಂದನಾ ಗ್ರಂಥಒಸಗೆ ಪ್ರಕಟಣೆಲಿ ಕೈಜೋಡುಸಿಗುರುಭಕ್ತಿಮೆರೆದವು.

ವ್ಯಾಖ್ಯಾನಕಾರನಾಗಿ

ಮುದ್ದಣನ ರಾಮಾಶ್ವಮೇಧ ಕೃತಿಗೆ ಬರದ ಸಾರ ಸಮೇತ ಟಿಪ್ಪಣಿ ತೆಕ್ಕುಂಜದವರ ವಿದ್ವತ್ತಿಂಗೆ ಕಿರೀಟಪ್ರಾಯವಾಗಿಪ್ಪದು.ಮುದ್ದಣ ಪ್ರಯೋಗಿಸಿದ ದೇಶಿ ಶಬ್ಧಂಗೊಕ್ಕೆ ಅಪಪಾಠಂದಲಾಗಿ ಮೂಡಿದ ಗೊಂದಲಕ್ಕೆ,ಸೂಕ್ತ ಅರ್ಥವ ತೋರ್ಸಿ ಪರಿಹಾರ ಕೊಟ್ಟ ಕೀರ್ತಿ ತೆಕ್ಕುಂಜದವರದ್ದು.ಸುಬಾಹುವಿನ ಮಗ ದಮನಂಗೂ,ಭರತನ ಮಗ ಪುಷ್ಕಲಂಗೂ ಯುದ್ಧಭೂಮಿಲಿ ಅಪ್ಪ ಸಂವಾದದ ಒಂದು ಸ್ವಾರಸ್ಯ ಹೀಂಗಿದ್ದುನೀ ಪಡೆಯನಲ್ತೊಡೆಯಂ ಮುರಿವಯ್, ಭಟನಲ್ತು ಭಟ್ಟಂ,ಕೊಂಡುದು ಬಿಲ್ಲಲ್ತು ಪುಲ್ಲುಂ,ಬಂದುದು ಕಾಳಗದ ಮನೆಗಲ್ತು ಮಾಳೆಯದ ಮನೆಗೆ‘.ಕಾವ್ಯಾಲಯದ ಪ್ರತಿಲಿ ಇದರ ಅರ್ಥೈಸುವಾಗಪಡೆಯೆನಲ್ ತೊಡೆಯಂ ಮುರಿವಯ್ಹೇಳಿ ಅಶುದ್ಧ ಪಾಠವ ತೆಕ್ಕೊಂಡಿದವಡ. “ಪಡೆಯನಲ್ತು ಒಡೆಯಂ ಮುರಿವಯ್ಹೇಳಿ ವಿಂಗಡಿಸಿ ಅರ್ಥೈಸೆಕ್ಕು ಹೇಳಿ ಸೂಚಿಸಿದ್ದು ತೆಕ್ಕುಂಜದವು. “ಒಡೆಯನ್ನು ಮುರಿಯುವವನು ಭಟನಲ್ಲ, ಭಟ್ಟನೆಂದೂ,ಹಿಡಿದುಕೊಂದದ್ದು ಬಿಲ್ಲಲ್ಲ ಹುಲ್ಲೆಂದೂ,ಬಂದುದು ಕಾಳಗದ ಮೊನೆಗಲ್ಲ, ಮಹಾಲಯದ ಮನೆಗೆಂದೂಹೇಳುವಲ್ಲಿ ಸಂವಾದ ಸ್ವಾರಸ್ಯಕರವಾಗಿರ್ತು.ಹೀಂಗೆ ಮುದ್ದಣನ ಹೊಸ ಶಬ್ಧಂಗೊಕ್ಕೆ ವಿನೂತನ ಅರ್ಥವ ಶೋಧಿಸಿ ವ್ಯಾಖ್ಯಾನಿಸಿ ತೆಕ್ಕುಂಜದವು ತಮ್ಮ ಸಂಶೋಧನಾ ಶಕ್ತಿಯ ಮೆರೆದ್ದವು. ಕೇಶಿರಾಜನ ಶಬ್ಧಮಣಿ ದರ್ಪಣಕ್ಕೆ ವಿಸ್ತಾರವಾದ ಭಾಷ್ಯ ಬರದು ಹಳೆಗನ್ನಡ ಭಾಷೆವ್ಯಾಕರಣಕ್ಕೆ ಹೊಸದರ್ಪಣ ಹಿಡುದ್ದವು. ವ್ಯಾಖ್ಯಾನ ಬರವಲೆ ತೆಕ್ಕುಂಜದವು ಸೇಡಿಯಾಪು ಕೃಷ್ಣ ಭಟ್ಟರ ಮಾರ್ಗದರ್ಶನ ತೆಕೊಂಡಿತ್ತಿದ್ದವಡ.ಕೆಲವು ಸಂದರ್ಭಂಗಳಲ್ಲಿ ಮೂಡಿದ ಸಂಶಯಂಗೊಕ್ಕೆ ಸೇಡಿಯಾಪು ಅವರತ್ತರೆ ವಿಚಾರ ವಿನಿಮಯ ನಡೆಸಿ ಪರಿಹಾರ ತೆಕ್ಕೊಂಡೂ ಇತ್ತಿದ್ದವಡ. ಅಧ್ಯಾಪನ ವೃತ್ತಿಂದ ನಿವೃತ್ತರಾದ ಮತ್ತೆ,ಮಂಗಳ ಗಂಗೋತ್ರಿಲಿ ಯುಜಿಸಿ ಸಂಶೋಧಕರಾಗಿದ್ದುಗೊಂಡು ಕೃತಿ ರಚನೆಯ ಮುಖ್ಯ ಕಾರ್ಯವನ್ನಾಗಿ ಬರದು ಕೊನೆಯುಸಿರಿಪ್ಪಲ್ಲಿವರೆಗೂ ಮುಂದುವರಿಸಿತ್ತಿದ್ದವು. ಸ್ವಪ್ನವಾಸವದತ್ತ ನಾಟಕದ ಬಗ್ಗೆ ಬರದ ವ್ಯಾಖ್ಯಾನದ ಕುರಿತಾಗಿ ಸೇಡಿಯಾಪು ಕೃಷ್ಣ ಭಟ್ರು ಹೇಳಿದ ಮಾತು ತೆಕ್ಕುಂಜದವರ ವ್ಯಾಖ್ಯಾನ ಪ್ರತಿಭೆಗೆ ಸಂದ ಗೌರವ.ತೆಕ್ಕುಂಜದವರ ಪ್ರತಿಭೆಯ ಶಿಖರವು ಅವರ ವ್ಯಾಖ್ಯಾನ ನೈಪುಣ್ಯ;ಅವರದು ವ್ಯಾಖ್ಯಾಯಕ ಪ್ರವೃತ್ತಿ.ಶ್ರೀ ರಾಮಾಶ್ವಮೇಧ ವ್ಯಾಖ್ಯಾನ,ಶಬ್ಧಮಣಿದರ್ಪಣ ವ್ಯಾಖ್ಯಾನ ಹೇಗೋ ಹಾಗೆ, ಸ್ವಪ್ನವ್ಯಾಖ್ಯಾನ ಚಿರಕಾಲ ಬಾಳುವ ಕೃತಿ ಎಂಬುದರಲ್ಲಿ ಸಂದೇಹವಿಲ್ಲ

ಯಕ್ಷಗಾನ ಅರ್ಥಧಾರಿಯಾಗಿ

ತೆಕ್ಕುಂಜದವಕ್ಕೆ ತಾಳಮದ್ದಳೆ ಕೂಟಂಗಳಲ್ಲಿ ಅರ್ಥ ಹೇಳುವ ಹವ್ಯಾಸ ಇದ್ದತ್ತು.ಕೃಷ್ಣಸಂಧಾನದ ಕೃಷ್ಣ,ಕೌರವ,ಅಂಗದಸಂಧಾನದ ಅಂದದ,ಪ್ರಹಸ್ತ,ಭೀಷ್ಮಾರ್ಜುನದ ಭೀಷ್ಮ,ಕೃಷ್ಣ ಇತ್ಯಾದಿ ಇವು ಮೆಚ್ಚಿದ ಪಾತ್ರಂಗೊ ಆಗಿತ್ತು.ತೆಕ್ಕುಂಜ ಮನೆಲಿ ಸುತ್ತುಮುತ್ತಲಿನ ಅರ್ಥಧಾರಿಗಳ ಆಹ್ವಾನಿಸಿ ನಡಶಿದ ತಾಳಮದ್ದಳೆ ಕೂಟಂಗೊಕ್ಕೆ ಲೆಕ್ಕ ಇಲ್ಲೆ.  ಇವರ ಅರ್ಥಗಾರಿಕೆ ಬಗ್ಗೆ ಶ್ರೀ ನಂದಳಿಕೆ ರಾಮಚಂದ್ರ ರಾಯರು ಹೀಂಗೆ ಹೇಳಿದ್ದವುತೆಕ್ಕುಂಜದವರ ಅರ್ಥಗಾರಿಕೆ ವಿಚಾರ ಪ್ರಚೋದಕವಾದ ಗಂಭೀರಗತಿಯಲ್ಲಿ ಸಾಗುವಂತಹುದಾಗಿತ್ತು.ಶಾಸ್ತ್ರಾಧಾರಗಳಿಂದ ಉಪನಿಷತ್ ವಚನಗಳಿಂದ ಕೂಡಿದ ತತ್ವ ಪ್ರತಿಪಾದನೆಯ ಧಾಟಿ ಅವರದು.ತರ್ಕದ ಮಿಂಚು ಮಿನುಗುತ್ತಿದ್ದರೂ ಮೂಲಪದ್ಯದ ಚೌಕಟ್ಟಿನೊಳಗೆ ವಿಹರಿಸುವ ರಸಾನುಭವವನ್ನುಂಟು ಮಾಡುವ ಅರ್ಥಗಾರಿಕೆಗೆ ಅವರು ಹೆಸರಾಗಿದ್ದರು“.

ಬೆಂಗಳೂರು ವಿಶ್ವವಿದ್ಯಾಲಯದೋರು ಪ್ರಕಟಿಸಿದಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಆರನೆ ಸಂಪುಟಲ್ಲಿ (ಇಸವಿ ೧೮೫೦೧೯೨೦ ರವರೆಗೆ) ಕಾಲದ ಯಕ್ಷಗಾನ ಕೃತಿಗಳು ಹೆಸರಿನ ದೀರ್ಘ ಲೇಖನವ ಬರದ್ದವಡ.ಇದು ೧೯ನೇ ಶತಮಾನದ ಯಕ್ಷಗಾನ ಸಾಹಿತ್ಯ ಚರಿತ್ರೆಯ ಬಗ್ಗೆ ತೆಕ್ಕುಂಜದವರ ಕೊಡುಗೆ.

ರಾಮಭಕ್ತಗೋಪಾಲಕೃಷ್ಣ

ಪರಮ ರಾಮಭಕ್ತರಾಗಿತ್ತಿದ್ದ ತೆಕ್ಕುಂಜದವು ನಿತ್ಯವೂ ರಾಮಾಯಣದ ಪಾರಾಯಣ ಮಾಡಿಗೊಂಡಿತ್ತಿದ್ದವು. ಅನಾರೋಗ್ಯ ನಿಮಿತ್ತ ಆಸ್ಪತ್ರೆಲಿ ಚಿಕಿತ್ಸೆಲಿಪ್ಪಗಳೂ ರಾಮನಾಮ ಜೆಪವ ಬಿಟ್ಟಿದವಿಲ್ಲೆ. ಅದೇ ಸಮಯಲ್ಲಿ ನಾಡಿನ ಹೆರಿ ವಿದ್ವಾಂಸರಾಗಿತ್ತಿದ್ದ ಪ್ರೊ.ಎಮ್. ಮರಿಯಪ್ಪ ಭಟ್ಟರು ನಿಧನರಾದ ಸಂದರ್ಭಲ್ಲಿಮಂಗಳೂರು ಆಕಾಶವಾಣಿಲಿ ಪ್ರಸಾರ ಆದ ಸಂತಾಪ ಸೂಚಕ ಸಂದೇಶ ತೆಕ್ಕುಂಜದವರ ಅಕೇರಿಯಾಣ ಸಾರ್ವಜನಿಕ ಭಾಷಣ ಆಗಿತ್ತು.  ಚಿಕಿತ್ಸೆ ಫಲಕಾರಿಯಾಗದ್ದೆ ಅವು 1980 ಮಾರ್ಚು 25 ರಾಮನವಮಿಯ ಶುಭದಿನವೇ ರಾಮಪಾದ ಸೇರಿದವು. ತೆಕ್ಕುಂಜದವು ಅವರ ತೀರ್ಥರೂಪರ ಗೌರವಾರ್ಥವಾಗಿ ವಾರ್ಷಿಕ ತಿಥಿಯ ಸಂದರ್ಭಲ್ಲಿ ಬಿಡುಗಡೆ ಮಾಡಿದ ಸ್ಮರಣ ಸಂಚಿಕೆಗುರುದಕ್ಷಿಣೆಲಿ, ತಮ್ಮ ದಾಮೋದರ ಭಟ್ಟರು ಶ್ರದ್ಧಾಂಜಲಿ ರೂಪಲ್ಲಿ ಬರದ ಪದ್ಯವನ್ನೆ ಈಗ ತೆಕ್ಕುಂಜದವರ ಪುಣ್ಯತಿಥಿಯ ಸಂದರ್ಭಲ್ಲಿ ನೆಂಪು ಮಾಡುದು ಸಂದರ್ಭೋಚಿತ ಹೇಳಿ ಎನ್ನ ಅನಿಸಿಕೆ.

ಶ್ರದ್ಧಾಂಜಲಿಯಿದು ವಾರ್ಷಿಕ

ಶ್ರಾದ್ಧದ ದಿನದೊಳ್ ಸಮಂತು ಸವಿನೆನಹಿಂಗಾ ||

ಶುದ್ದಾತ್ಮಂ ಸಲೆ ಶಾಂತಿಯೊ

ಳಿದ್ದಾವಗಮೆಮ್ಮ ಹರಸಲೆಂದಾಶಿಸುತುಂ ||

~~~~<>~~~~

ಮಾಹಿತಿ ಆಧಾರ ಃ ೧. ಶ್ರೀ ನಂದಳಿಕೆ ಬಾಲಚಂದ್ರ ರಾವ್ ಬರದ ” ನಿಷ್ಟುರ ವಿದ್ವಾಂಸ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ”

                            ೨. ತೆಕ್ಕುಂಜ ಶಂಕರ ಭಟ್ಟ ಸ್ಮಾರಕ ಗ್ರಂಥ ” ಗುರುದಕ್ಷಿಣೆ”

ತೆಕ್ಕುಂಜ ಕುಮಾರ ಮಾವ°

   

You may also like...

7 Responses

 1. ಇಂದಿರತ್ತೆ says:

  ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಆಧುನಿಕರಿಂಗೆ ಮುದ್ದಣನ ಕಾವ್ಯವ ಅರ್ಥಮಾಡಿಗೊಂಬಲೆ ಸಹಕಾರಿಯಾದ ಧೀಮಂತವ್ಯಕ್ತಿ ಹೇಳುವ ಮೆಚ್ಚುಗೆಯ, ಅಭಿಮಾನದ ಮಾತುಗಳ ಬಾಲ್ಯಲ್ಲಿ ಅಪ್ಪನ [ದೇರಾಜೆ ಸೀತಾರಾಮಯ್ಯ] ಬಾಯಿಂದ ಕೇಳಿದವಳು ಆನು. ತೆಕ್ಕುಂಜದವರ ಬಗ್ಗೆ ಅಂಬಗ ಒಬ್ಬ ಆದರಣೀಯ, ಮಹಾನ್ ವ್ಯಕ್ತಿ ಹೇಳ್ತ ಚಿತ್ರಣವ ಕಲ್ಪಿಸಿಗೊಂಡಿತ್ತಿದ್ದೆ. ಆದರೆ ಅವರ ಬಗ್ಗೆ ವಿವರವಾಗಿ ತಿಳ್ಕೊಳ್ಲೆಕ್ಕು ಹೇಳುವ ಬುದ್ಧಿ ಬಾಲ್ಯಕ್ಕೆ ಇತ್ತಿಲ್ಲೆ. ಈಗ ಅವರ ಬಗ್ಗೆ ವಿವರವಾಗಿ ತಿಳಿಸಿಕೊಟ್ಟದಕ್ಕೆ ಧನ್ಯವಾದ ಮಾವ.
  ಶ್ರೀರಾಮಚಂದ್ರನಲ್ಲೇ ಸೇರಿಹೋದ ಆ ಹಿರಿಯ ಜೀವ ಎಲ್ಲೋರಿಂಗೂ ಸದ್ಬುದ್ಧಿಯ ಅನುಗ್ರಹಿಸಲಿ ಹೇಳಿ ಕೇಳಿಗೊಳ್ತಾ ಆ ಪುಣ್ಯಾತ್ಮರ ಸನ್ನಿಧಿಗೆ ಶ್ರದ್ಧಾಪೂರ್ವಕ ನಮನಂಗೊ.

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ತೆಕ್ಕುಂಜದವರ ಬಗ್ಗೆ ನಾವಡರು ಹೇಳಿದ್ದರ ಕೇಳಿದ್ದೆ ಆನು.
  ಲೇಖನ ಲಾಯ್ಕ ಆಯಿದು.

 3. ಚೆನ್ನೈ ಭಾವ° says:

  [ತೆಕ್ಕುಂಜದವರ ಪ್ರತಿಭೆಯ ಶಿಖರವು ಅವರ ವ್ಯಾಖ್ಯಾನ ನೈಪುಣ್ಯ;] – ತೆಕ್ಕುಂಜ ಕುಮಾರ ಮಾವನ ಶುದ್ದಿಲಿ ಇದು ಪ್ರತಿಬಿಂಬಿತವಾಯ್ದು. ಆ ಮಹಾಚೇತನಕ್ಕೆ ನಮೋ ನಮಃ. ಶುದ್ದಿ ಲಾಯಕ ಆಯ್ದು ಹೇಳಿ ‘ಚೆನ್ನೈವಾಣಿ’

 4. ರಘುಮುಳಿಯ says:

  ತೆಕ್ಕು೦ಜಜ್ಜನ ಮನೆಗೆ ಪ್ರತಿವಾರ ಹೇಳ್ತ ಹಾ೦ಗೆ ಹೋಯಿಕ್ಕೊ೦ಡಿತ್ತಿದ್ದೆ ಬಾಲ್ಯಲ್ಲಿ.ಆವಗ ಅವರ ಪಾ೦ಡಿತ್ಯದ ಪರಿಚಯ ಅರ್ಥ ಅಪ್ಪ ಪ್ರಾಯ ಅಲ್ಲ.ಆದರೆ ಅವರ ಪ್ರೀತಿಯ ಮಾತುಗೊ,ನೆಗೆಮೋರೆ ಎಲ್ಲಾ ಮರವಲೆಡಿಯದ್ದು.
  ಮುದ್ದಣನ ” ರಾಮಾಶ್ವಮೇಧ”ದ ಸಾರವ ಓದೊಗ ಅವರ ವಿದ್ವತ್ತು ಗೊ೦ತಾತು.
  ಬೈಲಿಲಿ ಪರಿಚಯ ಮಾಡಿಕೊಟ್ಟದಕ್ಕೆ ಟೀಕೆ ಮಾವ೦ಗೆ ಧನ್ಯವಾದ.

 5. ಶರ್ಮಪ್ಪಚ್ಚಿ says:

  ಎರಡು ವರ್ಷ ಅವರ ಶಿಷ್ಯನಾಗಿ ಮಂಗಳೂರಿನ ಎಲೋಶಿಯಸ್ ಕಾಲೇಜಿಲ್ಲಿ ಕಲ್ತಿದೆ. ಅದು ಒಂದು ಸೌಭಾಗ್ಯವೇ ಸರಿ.
  ಪಾಠ ಮಾಡುವದರೊಟ್ಟಿಂಗೆ ಜೀವನದ ಮೌಲ್ಯವನ್ನೂ ತಿಳಿಶಿಕೊಟ್ಟ ಮಹಾನುಭಾವರು.
  ಶಿಸ್ತಿಂಗೆ ತುಂಬಾ ಪ್ರಾಮುಖ್ಯತೆ ಅವರ ಕ್ಲಾಸಿಲ್ಲಿ. ಭಾಷೆಯ ಶುದ್ಧತೆ ಬಗ್ಗೆ ಕೂಡಾ ಅಷ್ಟೇ ಪ್ರಾಮುಖ್ಯತೆ.
  ಮಕ್ಕಳೊಟ್ಟಿಂಗೆ ಮಕ್ಕಳ ಹಾಂಗೆ ಬೆರಕ್ಕೊಂಡು ಕೊಶಿಪಟ್ಟುಗೊಂಡಿತ್ತಿದ್ದವು.
  ಕನ್ನಡ ಪಾಠ ಹೇಳಿರೆ ಬಂಕ್ ಮಾಡುವ ಕ್ಲಾಸ್ ಹೇಳ್ತ ಮಕ್ಕೊ ಕೂಡಾ ತಪ್ಪುಸದ್ದ ಕನ್ನಡ ಕ್ಲಾಸ್ ಇದ್ದರೆ ಅದು ಅವರದ್ದು ಮಾತ್ರ.
  ದಿವ್ಯ ಚೇತನಕ್ಕೆ ನಮೋ ನಮಃ.
  ಅವರ ಬಗ್ಗೆ ಒಳ್ಳೆ ಪರಿಚಯ ಲೇಖನ ಕೊಟ್ಟ ಕುಮಾರಣ್ಣಂಗೆ ಧನ್ಯವಾದಂಗೊ

 6. ಎನ್ನ ಅಪ್ಪ ತೆಕ್ಕುಂಜೆ ಮಾವನ ವಿಷಯ ಹೇಳ್ತಿದ್ದಿದ್ದವು(ಅಪ್ಪ ನೀರ್ಚಾಲಿಲಿ ೧೯೩೦-೩೪ರಲ್ಲಿ ಸಂಸ್ಕ್ರತ ವಿದ್ವಾನ್ ಓದಿಕೊಂಡು ಇದ್ದಿದ್ದವು).ಕಯ್ಯಾರ ಕಿಂಙಣ್ಣ ರೈ,ಶೇಣಿ ಗೋಪಾಲಕೃಷ್ಣ ಭಟ್ಟರು ಎಲ್ಲಾ ಅಪ್ಪನ ಒಟ್ಟಿಗೆ ಓದಿದವು.ಆನು ನೋಡಿದ ಜ್ಞಾಪಕ ಇಲ್ಲೆ.

 7. ನಮಸ್ತೆ ತೆಕ್ಕುಂಜೆ ಕುಮಾರ ಮಾವ

  ನಿಂಗ ಇಲ್ಲಿ ಕೊಟ್ಟ ಮಾಹಿತಿ ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರ ಅಗಾಧ ಜ್ಞಾನ ಪ್ರತಿಭೆಯ ಅನಾವರಣ ಮಾಡಿದ್ದು ,ತುಂಬಾ ಉಪಯುಕ್ತ ಮಾಹಿತಿ ಇದ್ದು
  ಮುಂದಣ ಡಿಸೆಂಬರ್ ತಿಂಗಳಿಲಿ ನಾದವ ವಿಶ್ವ ನುಡಿಸಿರಿ ಸಮ್ಮೇಳನ ಪ್ರಯುಕ್ತ ಪ್ರಕಟಿಸುವ ಕರಾವಳಿ ಕರ್ನಾಟಕ ಸಂಪುಟ ವ ಕನ್ನಡ ಸಾಹಿತ್ಯ ಸಂಶೋಧನಾ ಕೃತಿಗಳು ಮತ್ತು ತುಳು ಸಾಹಿತ್ಯ ಸಂಶೋಧನಾ ಕೃತಿಗಳ ಬಗ್ಗೆ ಲೇಖನ ಸಂಪಾದಿಸಿ ಕೊಡುಲೇ ಕೇಳಿದ್ದವು

  ಆ ಲೇಖನಲ್ಲಿ ಸೇರ್ಸುಲೆ ಇವರ ಗಿರಿಜಾಕಲ್ಯಾಣ‘ದ ವಿಶ್ಲೇಷಣೆ,’ಯಶೊಧರ ಚರಿತೆ‘ಗೆ ಬರದ ವಿಸ್ತಾರವಾದ ಟಿಪ್ಪಣಿ-ಅನುವಾದ,ಹವೀಕರ ಆಡುನುಡಿಯ ವೈಶಿಷ್ಟ್ಯಗಳು, ದಕ್ಷಿಣಕನ್ನಡದ ಸಂಶೋಧನೆ ಮತ್ತು ವಿಮರ್ಶೆ,ಇಪ್ಪನೆಯ ಶತಮಾನದ ಕನ್ನಡ ಪದ್ಯ ಸಾಹಿತ್ಯ,ಅಹಲ್ಯೆಯ ಒಂದು ಚಿತ್ರ, ಯಕ್ಷಗಾನ ಪರ ಕೆಲವು ದಂತಕಥೆಗಳು,ತುಳುವಿನ ವರ್ಣಮಾಲೆ,ಕನ್ನಡ ಕಾವ್ಯಗಳಲ್ಲಿ ಗಣೇಶ,ಮುದ್ದಣನ ಭರತವಾಕ್ಯ,.ಶ್ರೀ ರಾಮಾಶ್ವಮೇಧ ವ್ಯಾಖ್ಯಾನ,ಮೊದಲಾದ ಸಂಶೋಧನಾತ್ಮಕ ಕೃತಿ /ಲೇಖನಗಳ ಬಗ್ಗೆ ಎನಗೆ ಹೆಚ್ಚಿನ ಮಾಹಿತಿ ಬೇಕಿತ್ತು
  ನಿಂಗ ಈ ಕೃತಿಗಳ ಪ್ರತಿ ಇದ್ದರೆ ಎನಗೆ ಕಳುಸಿ ಕೊಟ್ರೆ ತುಂಬಾ ಉಪಕಾರ ಆವುತ್ತು .ಅಥವಾ ಆ ಕೃತಿ /ಲೇಖನ ಎಲ್ಲಿ ಯಾವಾಗ ಪ್ರಕಟ ಆಯಿದು ,ಅದರಲ್ಲಿ ಎಂತ ಇದ್ದು ಲೇಖಕರ ಮಾಹಿತಿ ಒತ್ತಿಂಗೆ ಎನಗೆ ಬರದು ಕಳುಸಿದರೂ ಅಕ್ಕು ಎನಗೆ ಈ ತಿಂಗಳ 25 ರ ಒಳ ಲೇಖನ ಕಳುಸುಲೇ ಹೇಳಿದ್ದವು ಆದ್ದರಿಂದ ಸಾಧ್ಯವಾದಷ್ಟು ಬೇಗನೆ ಕಳುಸಿಕೊದಕ್ಕಾಗಿ ವಿನಂತಿ ,ಧನ್ಯವಾದಂಗ
  ಎನ್ನ ಇ ಮೇಲ್ :samagramahithi@gmail.com ಅಥವಾ samagramahithi2012@gmail.com

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *