Oppanna.com

‘ಬಿದ್ದಗರಿ’ಯ ಕುಂಞಿಹಿತ್ಲು ರಾಮಚಂದ್ರ

ಬರದೋರು :   ತೆಕ್ಕುಂಜ ಕುಮಾರ ಮಾವ°    on   22/12/2012    4 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರು ಯರ್ಮುಂಜ ರಾಮಚಂದ್ರರ ‘ವಿದಾಯ’ ಕವನ ಸಂಕಲನದ ಹಿನ್ನುಡಿಲಿ(16-3-1956) ಒಂದು ಮಾತು ಹೇಳಿದ್ದವು. ಕರ್ನಾಟಕ ಕಾವ್ಯಲೋಕ ಇತ್ತೀಚೆಗೆ ಇಬ್ಬರು ಪ್ರವರ್ಧನಮಾನರಾಗಿದ್ದ ತರುಣ ಕವಿಗಳನ್ನು ಕಳೆದುಕೊಂಡಿತು….. ಇಂಥ ತರುಣರ ಸಾವು ಬಂಧುಮಿತ್ರರೆಲ್ಲರ ಅಪಾರಶೋಕಕ್ಕೆ ಕಾರಣವಾಗುವುದು ಸಹಜ. ಆದರೆ ಈ ಕವಿಗಳ ಸಾವಿನಿಂದ ಕನ್ನಡ ಸಾಹಿತ್ಯಲೋಕಕ್ಕೂ ನಿಜವಾದ ನಷ್ಟವಾಗಿರುವುದರಿಂದ ಈ ಇಬ್ಬರನ್ನು ಕುರಿತು ಯೋಚಿಸುವಾಗ ವೈಯಕ್ತಿಕ ದುಃಖಕ್ಕೆ ಸಾರ್ವತ್ರಿಕದ ವೈಶಾಲ್ಯ ಬರುತ್ತದೆ. ಕಾವ್ಯ ಪ್ರೇಮಿಗಳೆಲ್ಲರಿಗೂ ಈ ದುಃಖ ತಟ್ಟುತ್ತದೆ.

ಅಡಿಗರು ಇಲ್ಲಿ ಪ್ರಸ್ತಾಪ ಮಾಡ್ತಾ ಇಪ್ಪ ಇಬ್ರು ಕವಿಗಳ ಹೆಸರೂ ರಾಮಚಂದ್ರ! – ಒಬ್ಬ ಯರ್ಮುಂಜದವು (ಇವರ ಬಗ್ಗೆ ಕಳುದ ಸರ್ತಿ ಬರದ್ದು), ಇನ್ನೊಬ್ಬ ಕಲ್ಮಡ್ಕದ ಕುಂಞಿಹಿತ್ಲು ರಾಮಚಂದ್ರ. ಇಬ್ರೂ ಕಂಡ  ಅಂತ್ಯ ಒಂದೇ ನಮುನೆದು. ಜೀವಸತ್ವವ ರಜ್ಜ ರಜ್ಜವೇ ಹಿಂಡಿ ಹೀರ್ತ ಭಯಂಕರ ರೋಗಕ್ಕೆ ಬಲಿಯಾಗಿ ಅಕಾಲಲ್ಲಿ ಕಣ್ಮುಚ್ಚಿದವು. ವಯಸ್ಸಿಗೂ ಸಾಧನೆಗೂ ಅನೇಕ ಸಲ ಸಂಬಂಧ ಇರುವುದಿಲ್ಲ ಹೇಳ್ತ ಡಾ. ರಾಮಚಂದ್ರ ದೇವರ ಮಾತುಗೊ ಈ ಸಂದರ್ಭಲ್ಲಿ ಸಾರ್ವಕಾಲಿಕ ಸತ್ಯವಾಗಿ ಕಾಣುತ್ತು. ಘಟ್ಟಿ ಜೀವನಾನುಭವ ಇಪ್ಪ ಹೆರಿ ಸಾಹಿತಿಗಳ ಬರವಣಿಗೆಂದ ತರುಣ ಪ್ರಾಯದ ಕವಿಗೊ ಬರವ ಸಾಹಿತ್ಯ ಕೆಲವು ಸರ್ತಿ ಹೇಂಗೆ ಹೆಚ್ಚು ಲಾಯಿಕಿರ್ತು ಹೇಳ್ತ ಚೋದ್ಯಕ್ಕೆ ಡಾ. ರಾಮಚಂದ್ರ ದೇವರ ಸಮಾಧಾನವನ್ನೆ ಉತ್ತರವಾಗಿ ತೆಕ್ಕೊಂಬಲಕ್ಕು. ಅನುಭವ ಶ್ರೀಮಂತಿಕೆಯ ಜೊತೆಗೆ ಕಹಿ, ಆತಂಕ, ದುಗುಡಗಳಿಲ್ಲದೆ ದೂರ ನಿಂತು ಅನುಭವವನ್ನು ನೋಡುವ ಶಕ್ತಿಯೂ ಸೃಜನಶೀಲತೆಗೆ ಅಗತ್ಯ. ವಯಸ್ಸಾಗುತ್ತಾ ಈ ಶಕ್ತಿ ಕಳೆದು ಹೋದರೆ ಸೃಜನಶೀಲತೆಯೂ ಮಸುಕಾಗುತ್ತದೆ. ಇರಲಿ, ಕನ್ನಡ ಸಾಹಿತ್ಯ ಕ್ಷೇತ್ರಲ್ಲಿ ಸಣ್ಣ ಪ್ರಾಯಲ್ಲಿ ದೊಡ್ಡ ಸಾಧನೆ ಮಾಡಿ ಹೆಸರು ಮಾಡಿದ ಕವಿಗಳ ಪೈಕಿ ನಮ್ಮ ಜಿಲ್ಲೆಯವೇ ಆದ ಮುದ್ದಣ, ಯರ್ಮುಂಜರ ಹಾಂಗೆ ಕಾವ್ಯಲೋಕಲ್ಲಿ ದೊಡ್ಡ ಹೆಜ್ಜೆ ಮಡಿಗಿ ತನ್ನದೇ ಛಾಪಿನ ಬಿಟ್ಟು ಹೋದ ಕವಿ ಕುಂಞಿಹಿತ್ಲು ರಾಮಚಂದ್ರ.

ಬಾಲ್ಯ ಜೀವನ

K Ramachandraಸುಳ್ಯ ತಾಲೂಕಿನ ಕಲ್ಮಡ್ಕದ ಕುಂಞಿಹಿತ್ಲು ಮನೆಯ ಗೋವಿಂದ-ಪರಮೇಶ್ವರಿ ದಂಪತಿಗಳ ಮೂರು ಜೆನ ಮಾಣ್ಯಂಗೊ, ನಾಕು ಜೆನ ಕೂಸುಗಳ ಪೈಕಿ ರಾಮಚಂದ್ರರು ಐದನೆಯವು. ಹುಟ್ಟಿದ ದಿನ ಆಗೋಸ್ತು 12,1929. ಕಲ್ಮಡ್ಕದ ಪಂಚಾಯತು ಬೋರ್ಡು ಶಾಲೆಲಿ ಪ್ರಾಥಮಿಕ ವಿದ್ಯಭ್ಯಾಸ. ಬೆದುರ ಓಟೆಗೆ ಒಂದು ಮರದ ಚಕ್ರವ ಸಿಕ್ಕಿಸಿ ಮಾಡಿದ ಕೈಗಾಡಿಯ ಹಿಡ್ಕೊಂಡು ಮಾರ್ಗದ ಇಳಿಜಾರಿಲಿ ಓಡಿಸಿಗೊಂಡು ಶಾಲೆಗೆ ಹೋಗಿ ಬಂದುಗೊಂಡು ಇದ್ದದರ ಅವರ ಒಡನಾಡಿ ಆಗಿತ್ತಿದ್ದ ಶ್ರೀ ಟಿ.ಜಿ.ಮುಡೂರು ನೆಂಪು ಮಾಡಿಗೊಂಡಿದವು. ಮುಂದಾಣ ವಿದ್ಯಾಭ್ಯಾಸಕ್ಕೆ ಪುತ್ತೂರಿನ ಬೋರ್ಡು ಹೈಸ್ಕೂಲಿಂಗೆ ಸೇರಿದವು. ಅಲ್ಲಿ ಆ ಕಾಲದ ಯುವ ಸಾಹಿತ್ಯಿಕ ಪ್ರತಿಭೆಗಳ ಸಂಪರ್ಕ ಸಿಕ್ಕಿದ್ದು ಮಾಂತ್ರ ಅಲ್ಲ, ಶಾಲೆಯ ಸಾಹಿತ್ತಿಕ ಮತ್ತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿತ್ತಿದ್ದವು. ಬ್ರಾಹ್ಮಣರ ವಿದ್ಯಾರ್ಥಿನಿಲಯಲ್ಲಿ ಇತ್ತಿದ್ದ ರಾಮಚಂದ್ರ ಅಲ್ಯಾಣ ಚರ್ಚಾಕೂಟ, ಭಾಷಣ ಕಾರ್ಯಕ್ರಮಂಗಳಲ್ಲಿ ಸದಾ ಭಾಗವಹಿಸಿಗೊಂಡಿತ್ತಿದ್ದವು ಹೇಳಿ ಅವರೊಟ್ಟಿಂಗೆ ಕಲ್ತ ಡಾ.ಎಮ್.ಬಿ.ಮರಕಿಣಿ ಆ ಕಾಲದ ಒಡನಾಟವ ಮೆಲುಕು ಹಾಕುತ್ತವು. ಹತ್ತನೆ ಕ್ಲಾಸಿನ ಪರೀಕ್ಷೆ ಪಾಸು ಮಾಡಿ ಮುಂದೆ ಮೈಸೂರಿನ ಫಿಲೋಮಿನ ಕೊಲೇಜು ಮತ್ತೆ ಮಹಾರಾಜ ಕೊಲೇಜಿಲಿ ತಮ್ಮ ವ್ಯಾಸಂಗವ ಮುಂದುವರಿಸಿದವು. ಅಷ್ಟೆ ಅಲ್ಲ, ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರ ಆಗಿತ್ತಿದ್ದ ಕಲ್ಮಡ್ಕಕ್ಕೆ ಬಂದು ನೆಲೆನಿಂದ ಕೆರೆಕೋಡಿ ಗಣಪತಿ ಭಟ್, ವಾರಣಾಸಿ ಸೀತಾರಾಮಯ್ಯ, ಪಾದೆಕಲ್ಲು ಶಂಕರನಾರಾಯಣ ಭಟ್ ಮುಂತಾದವರಂದಾಗಿ ಸಾಹಿತ್ಯಿಕ ಚಟುವಟಿಕೆಯೂ ಶುರುವಾತು. ಇವರೆಲ್ಲೊರ ಮುತುವರ್ಜಿಂದಾಗಿ ಯುವಪೀಳಿಗೆಯೋರಲ್ಲಿ ಓದು ಬರವಣಿಗೆಯ ಅಭ್ಯಾಸವೂ ಹುಟ್ಟಿಗೊಂಡತ್ತು. ಮೈಸೂರಿಲಿ ಕಲ್ತುಗೊಂಡಿತ್ತಿದ್ದ ರಾಮಚಂದ್ರ ರಜೆಲಿ ಊರಿಗೆ ಬಂದ ಸಮಯಲ್ಲಿ ಈ ಎಲ್ಲ ಚಟುವಟಿಕೆಲಿ ಸೇರಿಗೊಂಡವು. ಆ ಸಮಯಲ್ಲಿಯೇ ರಾಮಚಂದ್ರರ ಒಡಲಿನೊಳಾಣ ಕವಿ ಗರಿ ಬಿಚ್ಚಿ ನಲಿವಲೆ ಶುರುವಾಗಿತ್ತು.

ಮೈಸೂರಿನ ನಂಟು

ಫಿಲೋಮಿನ ಕೊಲೆಜಿಲಿ ಇಂಟರ್ ಮೀಡಿಯಟ್ ಕಲಿತ್ತ ಸಮಯಲ್ಲಿ ರಾಮಚಂದ್ರರ ಸಾಹಿತ್ಯ ಕೃಷಿ ಗೋಪಾಲಕೃಷ್ನ ಅಡಿಗರ ಪ್ರಭಾವಲ್ಲಿ ಬೆಳೆದು ಹಲವಾರು ಕತೆ, ಕವನ, ಪ್ರಬಂಧಂಗಳ ಬರದು ರಾಕಚಂದ್ರ, ಕು.ರಾಚ, ರಾಮಚಂದ್ರ ಕೆ., ರಾಮಚಂದ್ರ ಭಟ್ಟ ಇತ್ಯಾದಿ ಅಂಕಿತ ನಾಮಲ್ಲಿ ಪ್ರಕಟ ಆಗಿ ಪ್ರತಿಭಾವಂತ ತರುಣ ಕವಿಯಾಗಿ ಗುರುತಿಸಲ್ಪಟ್ಟವು. ಇದೇ ಸಮಯಲ್ಲಿ ಅನಾರೋಗ್ಯ ಕಾಡಿ ವಿದ್ಯಾಭ್ಯಾಸವ ಅಲ್ಲಿಗೆ ನಿಲ್ಲುಸೆಕ್ಕಾಗಿ ಬಂತು. ಕ್ಷಯ ರೋಗದ ಚಿಹ್ನೆ ಗೊಂತಾಗಿ, ಸುದೀರ್ಘ ಸಮಯದ ಆರೈಕೆ ತೆಕ್ಕೊಂಡು ಗುಣ ಸಿಕ್ಕಿಯಪ್ಪದ್ದೆ ಮತ್ತೆ ಮೈಸೂರಿಂಗೆ ಬಂದು ವಿದ್ಯಾಭ್ಯಾಸ ಮುಂದುವರಿಸಿದವು. ಆ ಸಮಯಲ್ಲಿ, ಪ್ರಸ್ತುತ ಖ್ಯಾತ ಸಾಹಿತಿ ಡಾ. ಎಚ್.ಎಮ್.ಮರುಳಸಿದ್ದಯ್ಯನವರ ಸಂಪರ್ಕ ಬಂದು, ಗೆಳೆತನ  ಶುರುವಾಗಿ ಮುಂದೆ ಅವು ಅನ್ಯೋನ್ಯರಾದವು. ಸಮಾನ ವ್ಯಸನಿಗಳಾದ ಇಬ್ರಿಂಗೂ ಇತ್ತಿದ್ದ ಕನ್ನಡ ಸಾಹಿತ್ಯದ ಮೇಲಾಣ ಪ್ರೀತಿ ಬೌದ್ಧಿಕವಾಗಿ ಅವರ ಮತ್ತೂ ಹತ್ತರೆ ಮಾಡಿತ್ತು.ಇಬ್ರ ನಡುಕೆ ಆಯ್ಕೊಂಡಿತ್ತಿದ್ದ ಪತ್ರವೆವಹಾರವ ಗಮನಿಸಿರೆ ಈ ಅಂಶ ಮನದಟ್ಟಾವುತ್ತು. (ಬಿದ್ದದ್ದು ಗರಿಯಲ್ಲ; ಹಕ್ಕಿಯೇ! ಹೆಸರಿನ ರಾಮಚಂದ್ರರ ಬದುಕು-ಬರಹ ಪುಸ್ತಕಲ್ಲಿಪ್ಪ ಮರುಳಸಿದ್ದಯ್ಯರ ಲೇಖನ ‘ರಾಮಚಂದ್ರನ ಚಿತ್ರ’ಲ್ಲಿ ಕೆಲವು ಪತ್ರಂಗಳ ಹಾಕಿದ್ದವು) ಮೈಸೂರಿಲಿ ಬೇರೆ ಬೇರೆ ಕೊಲೇಜುಗಳಲ್ಲಿ ಕಲ್ತುಗೊಂಡಿತ್ತಿದ್ದ ತರುಣ ಸಾಹಿತಿಗೊ ಸೇರಿಗೊಂಡು ನಡಶಿಗೊಂಡಿತ್ತಿದ್ದ ಕೂಟಂಗಳಲ್ಲಿ ಹತ್ತು ಹಲವು ಸಾಹಿತ್ತಿಕ ಕಾರ್ಯಕ್ರಮ, ಚರ್ಚೆಗಳಲ್ಲಿ ರಾಮಚಂದ್ರರೂ ಸೇರಿಗೊಂಡಿತ್ತಿದ್ದವು. ಮೈಸೂರಿಲಿ ವೈದ್ಯಶಿಕ್ಷಣ ಕಲ್ತುಗೊಂಡಿತ್ತಿದ್ದ ರಾಮಚಂದ್ರರ ಶಾಲಾ ಸಹಪಾಠಿ ಮರಕಿಣಿ, ಮರುಳಸಿದ್ದಯ್ಯ ಅಲ್ಲದ್ದೆ ಮತ್ತೂ ಕೆಲವು ಜೆನ ಸೇರಿ ‘ಕನ್ನಡ ಕುಲ’ ಹೇಳ್ತ ಪ್ರಕಾಶನ ಸಂಸ್ಠೆಯ ಹುಟ್ಟು ಹಾಕಿದವು. ಇದರ ಮೊದಲ ಪ್ರಕಟಣೆಯಾಗಿ ರಾಮಚಂದ್ರರ ಕವನ ಸಂಕಲನ ‘ಬಿದ್ದಗರಿ’ಯ ಗೋಪಾಲ ಕೃಷ್ಣ ಅಡಿಗರ ಹಿನ್ನುಡಿಯೊಟ್ಟಿಂಗೆ 1953ರ ಯುಗಾದಿ ದಿನ ಬಿಡುಗಡೆ ಮಾಡಿದವು.

ಇಷ್ಟೆಲ್ಲ ಅಪ್ಪಗ, ರಾಮಚಂದ್ರರ ಅನಾರೋಗ್ಯ ಬಹುಶಃ ಮತ್ತೆ ಮರುಕಳಿಸಿ, ತುಂಬ ನಿತ್ರಾಣಿಯಾದವು. ಅವರ ದೋಸ್ತಿಗೊ ಹೊತ್ತೋಪಗಾಣ ಹೊತ್ತಿಲಿ ಕಾಲ್ನಡಿಗೆ ಹೆರಟರೆ ಇವು ರೂಮಿಲಿಯೇ ಇರ್ತಿದ್ದವು. ಶುರುವಾಣ ಸರ್ತಿಲಿ ಅನಾರೋಗ್ಯ ಕಾಡಿಪ್ಪಗ ಅದು ಕ್ಷಯ ಹೇಳಿ ಗೊಂತಾಗಿ ಒಂದು ಪಕ್ಕೆಲುಬಿನ ಕತ್ತರಿಸಿ ತೆಗೆಶಿದ್ದದು, ಅದಾಗಿ ರೋಗ ಗುಣ ಆತು ಹೇಳಿ ಡಾಕ್ಟ್ರಕ್ಕೊ ಭರವಸೆ ಹೇಳಿದ್ದು ಇತ್ಯಾದಿ ಸಂಗತಿಯ ರಾಮಚಂದ್ರರು ಮರುಳಸಿದ್ದಯ್ಯರತ್ರೆ ಹೇಳಿಗೊಂಡಿದವಡ. ಮಹಾರಾಜ ಕೊಲೇಜಿಲಿ ಇಂಗ್ಲೀಷಿಲಿ  ಬಿ.ಎ.(ಆನರ್ಸ್) ಕಲಿವ ಉದ್ದೇಶಂದ ಸೇರಿ ಅಲ್ಲಿಯೇ ಹೋಸ್ಟೆಲಿಲಿ ಇತ್ತಿದ್ದವು. ಎರಡ್ನೆ ವರ್ಷಕ್ಕಪ್ಪಗ ಇವಕ್ಕೆ ರಜ್ಜ ದೂರ ನಡವದೂ, ಮಾಳಿಗೆ ಹತ್ತುದೂ ಕಷ್ಟ ಆಯಿಕೊಂಡಿತ್ತಿದ್ದಡ. ಕ್ಷಯ ಮತ್ತೆ ಅವರ ದೇಹವ ಆವರಿಸಿ ಹಿಂಡಿ ಹಿಪ್ಪೆ ಮಾಡ್ಲೆ ಶುರು ಮಾಡಿಯಾಗಿತ್ತು. ಕೆಲವು ಸರ್ತಿ ಕ್ಲಾಸುಗೊಕ್ಕೆ ಹೋಪಲೂ ಎಡಿಯದ್ದಷ್ಟು ನಿತ್ರಾಣ. ಹೇಂಗೋ ಪರೀಕ್ಷೆ ಬರದು ರಜೆಲಿ ಊರಿಂಗೆ ಹೋದವು. ಹಾಂಗೆ ಹೋದವು 19-2-1955ರಲ್ಲಿ ತನ್ನ ಮೈಯ ಇಹಲೋಕಲ್ಲಿ ಬಿಟ್ಟು ಪರಊರಿಂಗೆ ಹೋಗಿಯೇ ಹೋದವು.

ಬಿದ್ದದ್ದು ಗರಿಯಲ್ಲ, ಹಕ್ಕಿಯೇ!  

‘ಬಿದ್ದಗರಿ’ ರಾಮಚಂದ್ರರ ಏಕೈಕ ಕವನ ಸಂಕಲನ. ಅದು ಪ್ರಕಟ ಆಗಿ ಎರಡೇ ವರ್ಷಲ್ಲಿ ಅವು ತೀರಿಹೋದವು .ಆದರೆ ಅವರ ಗೆಳೆಯರಾದ ಡಾ.ಮರುಳಸಿದ್ದಯ್ಯ, ಡಾ.ಮರಕಿಣಿ ಮತ್ತೆ ರಾಮಚಂದ್ರರ ರೂಂ ಮೇಟ್ ಆಗಿತ್ತಿದ್ದ ಅವರ ಇನ್ನೊಬ್ಬ ಗೆಳೆಯ ಪ್ರೊ.ಆ.ಸೂ.ವೆಂಕಟರಾಮಯ್ಯ(ಸೂ.ವೆಂ.ಆರಗ) ಮುಂತಾದವರ ಆಸಕ್ತಿಂದಲಾಗಿ ಈ ಕವನ ಸಂಕಲನ ಮರುಪ್ರಕಟ ಆತು. ಯರ್ಮುಂಜದವರ ‘ಪಾಂಚಜನ್ಯ ’ಹಸ್ತಪತ್ರಿಕೆಲಿ ಪ್ರಕಟ ಆಗಿತ್ತಿದ್ದ ಕವನ ‘ಚಿಗುರು’, ಪುತ್ತೂರಿನ ಜನಪ್ರಿಯ ಸಾಹಿತ್ಯದ ‘ಮುಂಗಾರು ಮುಗಿಲು’ ಕತಾಸಂಕಲನಲ್ಲಿತ್ತಿದ್ದ ಕತೆ ‘ಕೊನೆಯ ಮಾತು’ಗಳ ಸೇರ್ಸಿ, ಶ್ರೀ ಟಿ.ಜಿ.ಮುಡೂರು, ಡಾ.ಮರಕಿಣಿ, ಡಾ.ಮರುಳಸಿದ್ದಯ್ಯ, ಪ್ರೊ.ಆರಗ ಮತ್ತೆ ಡಾ.ರಾಮಚಂದ್ರ ದೇವರ ಬರಹಂಗಳನ್ನೂ ಹಾಕಿ ಬಿದ್ದದ್ದು ಗರಿಯಲ್ಲ, ಹಕ್ಕಿಯೇ!” ಹೆಸರಿಲಿ ಈ ಸಂಕಲನವ ಪುನರ್ಮುದ್ರಿಸಿದ್ದವು.

‘ಬಿದ್ದಗರಿ’ಗೆ ಬೆನ್ನುತಟ್ಟಿದ ಕವಿ ಅಡಿಗರು ಹೇಳ್ತವು – ಗೆಳೆಯ ರಾಮಚಂದ್ರರ ಈ ಪುಟ್ಟ ಕವನ ಸಂಕಲನ ‘ಬಿದ್ದಗರಿ’ಅವರ ಕಾವ್ಯಲೋಕ ಪ್ರವೇಶಕ್ಕೆ ದೊರೆತ ರಹದಾರಿ ಎನ್ನಬಹುದು. ಈ ಕವಿ ಇಲ್ಲಿ ನಿನ್ನೆಯ ದಾರಿಯಲ್ಲಿ ನಡೆದುಬಂದು ನಾಳೆಯ ಕಡೆಗೆ ಮುಖತಿರುಗಿಸಿ ನಿಂತದ್ದು ಕಂಡುಬರುತ್ತದೆ……ಎಷ್ಟೋ ಕವನಗಳಲ್ಲಿ ಇಲ್ಲಿ ಹಿರಿಯ ಕವಿಗಳ ಮಾರ್ದನಿ ಕೆಲವು ಕಡೆ ಸ್ಪಷ್ಟವಾಗಿ, ಕೆಲವು ಕಡೆ ಅಸ್ಪುಟವಾಗಿ ಕೇಳಿಬರುತ್ತದೆ. ರಾಮಚಂದ್ರರ ಪ್ರಾರಂಭದ ಕವನಂಗಳಲ್ಲಿ ನವೊದಯದ ಛಾಯೆ ಇದ್ದರೂ ಬೇಂದ್ರೆ, ಕುವೆಂಪು, ಅಡಿಗರ ಪ್ರಭಾವ ಎದ್ದು ಕಾಣುತ್ತು ಹೇಳಿ ಡಾ.ರಾಮಚಂದ್ರ ದೇವರು ಅಭಿಪ್ರಾಯ ಪಟ್ಟಿದವು. ‘ಶಿವನಸಮುದ್ರ’ ಮತ್ತೆ ‘ವಾಲ್ಮೀಕಿ’ ಕವನಂಗೊ ಬೇಂದ್ರೆ ರಚಿಸಿಗೊಂಡಿತ್ತಿದ್ದ ‘ಅಷ್ಟ ಷಡ್ಪದಿ’ಯ ಬಂಧಲ್ಲಿ ಇದ್ದರೆ, ‘ಈ ಮಲೆನಾಡು’ ಕವನ ಕಡೆಂಗೋಡ್ಲು ಶಂಕರ ಭಟ್ಟರ ‘ಹೊನ್ನಿಯ ಮದುವೆ’ಯ ರೀತಿಲಿ ಶರ ಷಡ್ಪದಿಲಿ ಇಪ್ಪದು.

ನೋಡದೊ ಕಾಡಿನ

ದಟ್ಟನೆ ಹಸುರಿನ

ಮಂಟಪ ಕಣ್ಣನು ಕರೆಯುತಿದೆ!

ಮಲೆಹೂಗಳು, ತನಿ

ಹಣ್ಗಳು, ಮನಸಿನ

ಕೋಟೆಗೆ ಲಗ್ಗೆಯನೇರುತಿವೆ

ಹೆರಿ ಕವಿಗಳ ಪ್ರಭಾವಂದ ಸ್ವಂತ ಧ್ವನಿ ಹಿಂದೆ ಬಿದ್ದರೂ, ‘ಬಿದ್ದ ಗರಿಯ ಕಂಡು’ ಹೇಳ್ತ ಕವನಲ್ಲಿ ರಾಮಚಂದ್ರರು ತನ್ನ ಸ್ವಂತಿಕೆಯ ತೋರ್ಸುವಲ್ಲಿ ಯಶಸ್ಸು ಕಂಡಿದವು ಹೇಳುದು ಡಾ.ದೇವರ ಅಭಿಪ್ರಾಯ. ಮತ್ತೂ ವಿಮರ್ಶಿಸಿ ‘ಸುಪ್ತ ಶಕ್ತಿ’ ಕವನ ರಾಮಚಂದ್ರರ ಸಫಲ ಕವನ ಹೇಳಿ ಮೆಚ್ಚಿದ್ದವು. ಈ ಕವನ ಕವಿ ನವ್ಯದ ಹಾದಿಲಿ ಹೋವುತ್ತಾ ಇಪ್ಪ ಸೂಚನೆಯ ಕೊಡುತ್ತು.

ನಾನು ನೀನು ಎಲ್ಲ ಎಲ್ಲ ಬಾನಿನಲ್ಲೆ ನಡೆದು ಬರುವ

ಗರುಡನಿಟ್ಟ ಮೊಟ್ಟೆಯು;

ಬುವಿಯ ಗಿರಿಕಿರೀಟದಲ್ಲಿ ಕೋಡುಗಲ್ಲ ಗೂಡಿನಲ್ಲಿ

ನಮ್ಮ ಭ್ರೂಣನಿದ್ರೆಯು;

ನಮ್ಮ ಸಾಕುತಾಯಿ ಮಾಯೆ ಕಾವು ಕೂರೆ ಗರುಡನೊಂದು

ನಿಯಮಿಸಿಟ್ಟ ದಾದಿಯು,

ನಾವು ಬೆಳೆಯೆ ಮುಗಿಲರಾಣಿ ಅಮರಪುತ್ರರುಣ್ಣುವಂಥ

ತುತ್ತ ತರುವ ನೇಮವು.

‘ಸುಪ್ತಶಕ್ತಿ’ಯ ಈ ಸಾಲುಗಳ ಬಗ್ಗೆ ಅಡಿಗರು ಹೇಳುದು – ಇಂಥಾ ಸಾಲುಗಳನ್ನು ಬರೆದು ಯಾವ ಕವಿಯೂ ಹೆಮ್ಮೆಪಟ್ಟುಕೊಳ್ಳಬಹುದು.  ರಾಮಚಂದ್ರರು ಬರದ್ದು ಕೆಲವೇ ಕೆಲವು ಕವನ, ಕತೆಗೊ ಆದರೂ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವು ಕೊಟ್ಟ ಕೊಡುಗೆ ಅಮೂಲ್ಯವಾದ್ದು. ದೀರ್ಘಾಯುಸ್ಸಿಂದ ವಂಚಿತರಾಗಿ ಸಾರಸ್ವತ ಲೋಕಕ್ಕೆ ಮತ್ತೆಷ್ಟೋ ಮಹತ್ತರ ಕೊಡುಗೆ ಸಿಕ್ಕುದು ತಪ್ಪಿ ಹೋದ್ದು ನಮ್ಮ ದೌರ್ಭಾಗ್ಯ. ಬಹುಶಃ ಇದನ್ನೇ ನೆನೆಸಿಗೊಂಡು ಪ್ರೊ.ಆರಗರಿಂಗೆ ಅನಿಸಿದ್ದು – ಬಿದ್ದದ್ದು ಗರಿಯಲ್ಲ ಹಕ್ಕಿಯೇ !

~~~*~~~

4 thoughts on “‘ಬಿದ್ದಗರಿ’ಯ ಕುಂಞಿಹಿತ್ಲು ರಾಮಚಂದ್ರ

  1. ಓದಿ ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದ.

  2. ಬಿದ್ದದು ಬರೀ ಗರಿ ಮಾಂತ್ರ ಅಲ್ಲ, ಹಕ್ಕಿಯೇ. ಅಪ್ಪು, ಅವು ಬದುಕಿದ್ದಿದ್ದರೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಯ ಕೊಡ್ತಿತವು. ಕವಿಪರಿಚಯ ಮಾಡಿದ ಟಿಕೆ ಮಾವಂಗೆ ಧನ್ಯವಾದಂಗೊ.

  3. ಲಾಯಿಕಾಯಿದು ಮಾವ ಬರದ್ದು… ಈ ಲೇಖನ ಮಾಲೆಂದ ಎಂಗೊಗೆ ಸುಮಾರು ವಿಶಯಂಗೊ ಗೊತ್ತಾವುತ್ತ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×