‘ಕವಿಶಿಷ್ಯ’ ಪಂಜೆ ಮಂಗೇಶರಾಯರು

ಕನ್ನಡ ಭಾಷೆಯ ಸಾಹಿತ್ಯಿಕ ಬೆಳವಣಿಗೆಲಿ ಅನೇಕಾನೇಕ ಹಿರಿಯರು ಪಾತ್ರ ವಹಿಸಿದ್ದವು.
ಅದರ್ಲಿಯೂ ನಮ್ಮ ಅವಿಭಜಿತ ದಕ್ಷಿಣಕನ್ನಡ – ಹೇಳಿರೆ, ಈಗಾಣ ಕಾಸ್ರೋಡು-ಕೊಡೆಯಾಲ-ಉಡುಪಿ ಜಿಲ್ಲೆಯ ಕೆಲವು ಜೆನ ಬಹುಮುಖ್ಯ ಆಧಾರಂಗೊ ಆಗಿತ್ತವು.
ಆಧುನಿಕ ಸಾರಸ್ವತ ಜಗತ್ತು ಇವರ ಹೊಸಕನ್ನಡದ “ಗುರುಗೊ” ಹೇಳಿಯೇ ಗುರುತಿಸುತ್ತು.
ಇಂತಹಾ ’ಹೊಸಕನ್ನಡ ಗುರುಪರಂಪರೆಯ’ ವಿಶೇಷ ವೆಗ್ತಿಗಳ ನಮ್ಮ ಬೈಲಿಂಗೆ ಪರಿಚಯಿಸುವ ಕಾರ್ಯವ ಸಾಹಿತ್ಯಾಸಕ್ತರಾದ ತೆಕ್ಕುಂಜೆ ಕುಮಾರಮಾವ° ಸಂತೋಷಲ್ಲಿ ಮಾಡ್ತಾ ಇದ್ದವು.
ನಮ್ಮೆಲ್ಲರ ನಾಡಭಾಶೆ ಕನ್ನಡದ ಶಾಸ್ತ್ರೀಯ ಬೆಳವಣಿಗೆಗೆ ಕಾರಣರಾದ ನಮ್ಮ ನಾಡಿನ ಗುರುಗಳ ಬಗ್ಗೆ ತಿಳ್ಕೊಂಬ°.
ಹೊಸಕನ್ನಡದ ಗುರುಪರಂಪರೆಯ ಬಗ್ಗೆ ತೆಕ್ಕುಂಜೆಮಾವ ಹೇಳುವ ಈ ಶುದ್ದಿಗಳ ನಾವೆಲ್ಲರೂ ಕೇಳುವೊ°..

‘ಕವಿಶಿಷ್ಯ’ – ಪಂಜೆ ಮಂಗೇಶರಾಯ:

“ಕವಿಶಿಷ್ಯ” ಕಾವ್ಯನಾಮಂದ ಖ್ಯಾತರಾಗಿತ್ತಿದ್ದ, ಕನ್ನಡದ ಅಧ್ಯಾಪಕರಾಗಿ, ಶಾಲಾ ಇನ್ಸ್ಪೆಕ್ಟರಾಗಿ, ಟ್ರೈನಿಂಗ್ ಶಾಲೆಯ ಅಧ್ಯಾಪಕರಾಗಿ, ಪರೀಕ್ಷಾಧಿಕಾರಿಗಳಾಗಿ, ದುಡಿದ ಪ್ರಾತಃಸ್ಮರಣೀಯ ಸಾಹಿತಿ ಪಂಜೆ ಮಂಗೇಶ ರಾಯರು.
ಇವು ಶಿಶು ಸಾಹಿತ್ಯದಲ್ಲಿ ಅಪಾರ ಮುತುವರ್ಜಿಯ ಸೇವೆ ಸಲ್ಲಿಸಿದ್ದವು.

ಮಂಗೇಶರಾಯರ ಪೂರ್ವಜಂಗೊ ಮದಲು ಪಂಜಲ್ಲಿ ಇತ್ತಿದ್ದವು.
ರಾಯರ ಮುತ್ತಜ್ಜ ದಾಸಪ್ಪಯ್ಯ ಹೇಳ್ತವು ಅಕಾಲವಾಗಿ ತೀರಿಹೋದ ಮತ್ತೆ ಅವರ ಪತ್ನಿ ಬಂಟ್ವಾಳಕ್ಕೆ ಬಂದು ನೆಲೆ ನಿಂದವು.
ಮಾಂತ್ರ ” ಪಂಜೆ” ಹೇಳ್ತ ಉಪನಾಮ ಇವರ ಕುಟುಂಬದವರಿಂಗೆ ಖಾಯಂ ಆತು. ದಾಸಪ್ಪಯ್ಯವರ ಒಬ್ಬನೇ ಮಗ ವಿಟ್ಠಲರ ಮೂರು ಮಕ್ಕಳ ಪೈಕಿ ಒಬ್ಬ ರಾಮಪ್ಪಯ್ಯ.
ಅವರ ಏಳು ಜೆನ ಮಕ್ಕಳ ಪೈಕಿ ಎರಡನೆಯವು ಮಂಗೇಶರಾಯರು.

ಜನ್ಮ, ವಿದ್ಯಾಭ್ಯಾಸ, ಉದ್ಯೊಗ:

ಮಂಗೇಶರಾಯರು   1874 ಫೆಬ್ರುವರಿ 22 ರಂದು ಬಂಟವಾಳಲ್ಲಿ ಜನ್ಮತಾಳಿದವು.
ಇವರ ಅಬ್ಬೆಯ ಹೆಸರು ಶಾಂತಾದುರ್ಗಾ, ಅಪ್ಪ ರಾಮಪ್ಪಯ್ಯ.
ಪ್ರಾಥಮಿಕ ವಿದ್ಯಾಭಾಸವ ಬಂಟ್ವಾಳಲ್ಲಿಯೇ ಮುಗುಸಿದವು. ಮುಂದೆ ಕೊಡೆಯಾಲಕ್ಕೆ ಹೋಗಿ ಅಲ್ಲಿ ಸಣ್ಣ ಮಕ್ಕೊಗೆ ಪಾಠ ಹೇಳಿಕೊಟ್ಟುಗೊಂಡು ವಿದ್ಯಾಭ್ಯಾಸವ ಮುಂದುವರಿಸಿದವು.
1890 ರಲ್ಲಿ ಅವರ ಅಪ್ಪ ತೀರಿಹೋಪ ಸಮಯಲ್ಲಿ ಮಂಗೇಶರಾಯರಿಂಗೆ ಹದಿನಾರು ವರ್ಷದ ಪ್ರಾಯ.

ಪಂಜೆ ಮಂಗೇಶ ರಾಯರು

ಸಂಸಾರದ ಜೆವಾಬ್ದಾರಿ ಇವರ ಹೆಗಲಿಂಗೆ ಬಂತು. ತಾನು ಕಲ್ತುಗೊಂಡು ತಮ್ಮಂದರನ್ನೂ ಕಲುಶಿದವು. 1894 ರಲ್ಲಿ ಬೆನಗಲ್ ರಾಮರಾಯರ  ತಂಗೆ ಭವಾನಿಬಾಯಿಯೊಟ್ಟಿಂಗೆ ಇವರ ವಿವಾಹ ಆತು.
ಕಾಲೇಜಿನ ಪ್ರಥಮ ವರ್ಷದ ಎಫ್.ಏ.(ಆರ್ಟ್ಸ್)ಪಾಸು ಮಾಡಿ, ಕನ್ನಡ ವಿಶಿಷ್ಟ ಪರೀಕ್ಷೆಯನ್ನೂ ಪಾಸು ಮಾಡಿದವು.
1896 ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿಲಿ ಜೂನಿಯರ್ ಕನ್ನಡ ಪಂಡಿತ ಹುದ್ದೆ ಪಡೆದವು.
ಇದೇ ಹುದ್ದೆಗೆ ‘ಕವಿ ಮುದ್ದಣ’ನೂ ಅರ್ಜಿ ಹಾಕಿತ್ತಿದವಡ. ಆದರೆ ರಾಯರಿಂಗೆ ಇಂಗ್ಳೀಷಿನ ಜ್ಞಾನ ಇತ್ತಿದ್ದ ಕಾರಣಂದ ಈ ಹುದ್ದೆ ಇವಕ್ಕೇ ಸಿಕ್ಕಿತ್ತು. (ಮುದ್ದಣ ಮುಂದೆ ಉಡುಪಿಯ ಸರಕಾರಿ ಕಾಲೇಜು  ಸೇರಿದವು.)
ಮುಂದೆ ಬಿ.ಎ. ಪರೀಕ್ಷೆ ಪಾಸು ಮಾಡಿ, ಮದ್ರಾಸಿಂಗೆ ಹೋಗಿ ಅಲ್ಲಿ ಎಲ್.ಟಿ.ಪದವಿಯ ಪಡದು ವಾಪಾಸು ಮಂಗ್ಳೂರಿಂಗೆ ಬಂದು, ಉಪಾಧ್ಯಾಯರಾಗಿ ಮುಂದುವರಿದವು. (ಇಲ್ಲಿ ಗೋವಿಂದ ಪೈ ಇವರ ಶಿಷ್ಯರಾಗಿತ್ತಿದ್ದವು.)
ಈ ಹುದ್ದೆಲಿ ಹೆಚ್ಚು ಸಮಯಿತ್ತಿದ್ದವಿಲ್ಲೆ. ಮಂಗಳೂರಿನ ವಿದ್ಯಾ ಇಲಾಖೆಲಿ ಸಬ್ ಅಸಿಸ್ಟಂಟ್ ಶಾಲಾ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಗೊಂಡವು. ಮುಂದೆ ಅವು ಉಪಾದ್ಯಾಯರ ತರಬೇತಿ ಶಾಲೆ ಪ್ರಧಾನರಾದವು.

ಹಲವು ವರ್ಷ ದಕ್ಷಿಣ ಕನ್ನಡದ ಸಂಪರ್ಕಲ್ಲಿ ಇತ್ತಿದ್ದ ಪಂಜೆ, 1921 ರಲ್ಲಿ ಕೊಡಗಿನ ಶಾಲಾ ಇನ್ಸ್ಪೆಕ್ತರಾಗಿ ಮಡಿಕೇರಿಗೆ ಬಂದವು.
ಎರಡು ವರ್ಷದ ನಂತರ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಮುಂದುವರಿದವು. ಬೆಳಿಯರ ಗೌರವಿಸಿಗೊಂಡಿದ್ದ ಕೊಡಗಿನ ಜೆನ, ಸ್ಥಳೀಯ ಒಬ್ಬ ಉನ್ನತ ಹುದ್ದೆಲಿ ಇಪ್ಪದರ ಇಷ್ಟ ಪಟ್ಟಿದವಿಲ್ಲೆ, ಆ ಗೌರವ ಭಾವನೆಲಿ ಪಂಜೆಯವರ ಕಂಡಿದವಿಲ್ಲೆ.
ಕೊಡಗಿನ ಜೆನ ರಾಯರ ಔದಾರ್ಯಲ್ಲಿ ಕಾಣದ್ದರೂ,ಕೊಡಗಿನ ಪರಿಸರ,ಪ್ರಕೃತಿಯ ಸೊಬಗು, ಜೆನರ ಸಾಹಸವ ಮನಗಂಡು, ಹೃದಯ ಬಿಚ್ಚಿ ಹಾಡಿ ಹೊಗಳಿದವು.
ಹುತ್ತರಿ ಹಾಡು” ಹೆಸರಿನ ಈ ಪದ್ಯ ಮುಂದೆ ಕೊಡಗಿನ ‘ನಾಡಗೀತೆ‘ ಯಾಗಿ ಪ್ರಸಿದ್ದಿ ಆತು.

ಕೊಡಗಿನ, ಕೊಡವರ ಸೌಂದರ್ಯ- ಸಾಹಸವ ವರ್ಣಿಸುವ ಈ ಗೀತೆ ಒಂದು ಶ್ರೇಷ್ಟ ಗೀತೆಯಾಗಿ, ಒಂದು ಉತ್ಸವ ಗೀತೆಯ ಹಾಂಗೆ, ಗಮಕಕ್ಕೆ, ವಾಚನಕ್ಕೆ ಹೇಳಿ ಮಾಡಿಸಿದ ಹಾಂಗಿದ್ದು..

ಪಂಜೆಯವರ ಸಾಹಿತ್ಯ ಕೃಷಿ:

ಕನ್ನಡ ಸಾಹಿತ್ಯಕ್ಕೆಪಂಜೆಯವರ ಕೊಡುಗೆ ಅನನ್ಯ. ಮನೆಮಾತು ಕೊಂಕಣಿ, ಊರ ಜನ ಬಳಕೆಲಿತ್ತಿದ್ದ ನುಡಿ ತುಳು, ಶಾಲೆಲಿ ಕಲ್ತದು ಕನ್ನಡ, ಉನ್ನತ ವ್ಯಾಸಂಗ ಇಂಗ್ಲಿಷಿಲಿ.
ಹೀಂಗೆ ಹಲವಾರು ಭಾಷೆಗಳ ಪ್ರಭಾವ-ಪರಿಣಿತಿಗೊ ಅವರ ಸಾಹಿತ್ಯ ಸೃಷ್ಟಿಲಿ ಪರಿಣಾಮವ ಬೀರಿದ್ದು.

 • ಪ್ರಾರಂಭಲ್ಲಿ “ಹರಟೆಮಲ್ಲ“,”ರಾ.ಮ.ಪಂ.” ಗುಪ್ತನಾಮಲ್ಲಿ  ಹಲವು ಲಘು ಹಾಸ್ಯ ಭರಿತ ಹರಟೆ, ವ್ಯಂಗ್ಯ ಲೆಖನ, ಕತೆಗಳ ಬರದವು.
  ಇವು ಬೆನೆಗಲ್ ರಾಮರಾಯರ ‘ಸುವಾಸಿನಿ‘ ಮಾಸ ಪತ್ರಿಕೆಲಿಯೂ,  ‘ಸತ್ಯದೀಪಿಕೆ’ ವಾರಪತ್ರಿಕೆಲಿಯೂ  ಪ್ರಕಟ ಆಗಿಗೊಂಡಿತ್ತು.
  ಪ್ರಚಲಿತ ಸಾಮಾಜಿಕ, ರಾಜಕೀಯ ವಿಷಯಂಗೊ ಇವರ ಅಣಕದ ವಸ್ತುಗೊ.
 • ನನ್ನ ಚಿಕ್ಕ ತಾಯಿ, ನನ್ನ ಚಿಕ್ಕ ತಂದೆ, ನನ್ನ ಹೆಂಡತಿ, ಭರತ ಶ್ರಮಣ, ಇತ್ಯಾದಿ ಹಾಸ್ಯ,ವಿಡಂಬನೆಗಳ ಎಷ್ಟು ನೈಪುಣ್ಯಂದ ರಚಿಸಿದವೋ; ಅಷ್ಟೇ ಪ್ರಬುದ್ಧತೆಲಿ ವೀರಮತಿ, ಪೃಥುಲಾ, ಶೈಲಿನಿ – ಇತ್ಯಾದಿ ಐತಿಹಾಸಿಕ ಕತೆಗಳನ್ನೂ ಬರೆದವು.
 • ತುಳುನಾಡಿನ ಜಾನಪದ ಕತೆ ’ಕೋಟಿ ಚನ್ನಯ’ ಕತೆಯನ್ನೂ ಬರದ್ದವು.
 • ತೆಂಕಣ ಗಾಳಿಯಾಟ’ ಪದ್ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಲ ಕರಾವಳಿಯ ಮುಂಗಾರು ಮಳೆಯೊಟ್ಟಿಂಗೆ ಬಪ್ಪ ಬಿರುಗಾಳಿಯ ಬಿರುಸಿನ ವರ್ಣನೆ – ಕವನದ ಶಬ್ದಜಾಲ, ಅದರ ಗತಿ, ಧ್ವನಿ, ಎಲ್ಲ ಒಟ್ಟಾಗಿ ಸಾಕ್ಷಾತ್ಕರಿಸಿ ಪ್ರತಿಧ್ವನಿಸುವ ಹಾಂಗಿದ್ದು.
 • ಅಣ್ಣನ ವಿಲಾಪ’ ಹೊಸಗನ್ನಡದ ಪ್ರಥಮ ಶೋಕಗೀತೆ.
  ಮಂಗೇಶರಾಯರ ಎರಡನೆ ಜೀವದ ಹಾಂಗಿತ್ತಿದ್ದ ತಮ್ಮನ ಅನಿರೀಕ್ಷಿತ ಸಾವಿಂದ ಆದ ದುಃಖವ ತುಂಬ ಸಮಯ ಆರತ್ರೂ ತೋರ್ಸದ್ದೆ ಮನಸ್ಸಿನೊಳ ಮಡಿಕ್ಕೊಂಡು,
 • ಮುಂದೆ ’ಎಲ್ಲಿ ಹೋದನು ಅಮ್ಮ’ ಹೇಳಿಗೊಂಡು  ಶಬ್ದರೂಪ ಕೊಟ್ಟವು.

ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ ?
ನಿಲ್ಲದವನನು ತರುವೆ ಹುಡುಕಿ ನಾನಮ್ಮ!
ಅಲ್ಲಿಲ್ಲ,ಇಲ್ಲಿಲ್ಲ,ಎಲ್ಲಿಹನು ತಮ್ಮಾ ?
ತಲ್ಲಣಿಸುತಿದೆ ಮನವು; ಹೇಳು ಸೀತಮ್ಮ!

ಹಸೆಯ ಮಗುವನು ಮೊನ್ನೆ ಬಂದವರು ನೋಡಿ,
ಮಸುಕು ಬಿಳಿ ಕಣ್ಣುಗಳ ಕದಗಳನು ಹೂಡಿ,
ಹಸಿ ತುಳಸಿದಳ ನೀರ ಒಣ ಬಾಯೊಳೂಡಿ,
ಬಿಸಿಲುಕನ್ನಡಿಯನ್ನು ಮಾಡಿನಲಿ ಮಾಡಿ

ಸುದ್ದ ನೀರನು ಮೀಸಿ,ಅರಸಿನವ ಪೂಸಿ,
ಗದ್ದೆ ಗೋರುವ ಹಲಗೆಯಲ್ಲಿ ಎಲೆ ಹಾಸಿ,
ಮುದ್ದುಪುಟ್ಟನನುಡಿಗೆಯಿಂದ ಸಿಂಗರಿಸಿ,
ಸದ್ದಿಲ್ಲದೆಲ್ಲಿಗೋಯ್ದರು ಹೆಗಲೊಳಿರಿಸಿ?

ಹೆರಿಯಣ್ಣನ ಈ ಮೌನ ವಿಲಾಪ ಎಂತೋರ ಹೃದಯವನ್ನೂ ತಟ್ಟುಗು !

 • ಡೊಂಬರ ಚೆನ್ನ, ಕಡೆಕಂಜ, ರಂಗಸೆಟ್ಟಿ ಇವರ ಪ್ರಸಿದ್ಧ ಕವನಂಗೊ.
 • ಹೊಲೆಯನ ಹಾಡು ದಲಿತರ ಬಗೆಗೆ ಕನ್ನಡಲ್ಲಿ ಬಂದ ಶುರುವಾಣ ಪದ್ಯ.
 • 1900 ರಲ್ಲಿ ಪಂಜೆ ಬರೆದ ‘ ನನ್ನ ಚಿಕ್ಕ ತಾಯಿ’ ಕತೆ ಕನ್ನಡದ ಶುರುವಾಣ ಸಣ್ಣಕತೆ ಹೇಳಿ ಗುರುತಿಸಲ್ಪಟ್ಟಿದು.
 • ಕೊಡವರು ಅವರ ಎಷ್ಟೇ ಉದಾಸಿನಂದ ಕಂಡರೂ,ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ,ಕೊಡವರ ಕೆಚ್ಚೆದೆಯ ಶೌರ್ಯಕ್ಕೆ ಮನಸೋತು ಬರದ ’ಹುತ್ತರಿ ಹಾಡು’ ಪದ್ಯ, “ಗುಣಕೆ ಮತ್ಸರವುಂಟೇ?” ಹೇಳ್ತ ಅವರ ಧೋರಣೆಯ ಎತ್ತಿ ತೋರ್ಸುತ್ತು.
  “ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ…” ಹೇಳಿ ಶುರುವಾಗಿ,
  “ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?” ಹೇಳಿ ಮುಂದುವರುದು,
  “ಅವರೇ ಸೋಲ್ ಸಾವರಿಯರು! …ಅವರೇ ಕೊಡಗಿನ ಹಿರಿಯರು!” ಹೇಳಿ ವರ್ಣಿಸಿ,
  ’ಕವಿಶಿಷ್ಯ’ರು ತಮ್ಮ ದೊಡ್ಡತನವ ಮೆರೆದ್ದವು!

ಶಿಶು ಸಾಹಿತ್ಯ:

ರಾಯರು ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅತ್ಯಂತ ದೊಡ್ಡ ಪ್ರಮಾಣದ್ದು. ಮಕ್ಕೊಗೆ ಬೇಕಾಗಿ ಗದ್ಯ-ಪದ್ಯ ಇಪ್ಪ ಪಾಠ ಪುಸ್ತಕಂಗಳ ಬರದ್ದವು.
ಮಕ್ಕಳ ಮನಸ್ಸಿಂಗೆ ಹಿತ ಅಪ್ಪಂತಹ ಕತೆಗಳ ಬರದವು. ಆರ್ಗಣೆ ಮುದ್ದೆ, ಹೇನು ಸತ್ತು ಕಾಗೆ ಬಡವಾಯಿತು, ಕೊಕ್ಕೋ ಕೋಳಿ, ಇಲಿಗಳ ಥಕಥೈ, ಅಗೋಳಿ ಮಂಜಣ್ಣ, ಸಿಡಿಯಾಕೆ ಒಣಗಲಿಲ್ಲ – ಇತ್ಯಾದಿ.
ಹಲವು ಪದ್ಯಂಗಳನ್ನೂ ಬರದ್ದವು.
‘ನಾಗರ ಹಾವಿನ ಕುರಿತಾಗಿ ಬರದ
“ನಾಗರ ಹಾವೆ!
ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೆ! ”
– ಈ ಹಾವಿನ ಹಾಡು ಅತ್ಯಂತ ಪ್ರಸಿದ್ಧ.

ಪಂಜೆ ಬರೆದ ಮಕ್ಕಳ ಸಾಹಿತ್ಯಲ್ಲಿ, 22 ಶಿಶುಸಾಹಿತ್ಯವರ್ಗದ ಕಥೆಗೊ, 18 ಶಿಶುಗೀತೆಗೊ, 12 ಬಾಲಸಾಹಿತ್ಯ ಕಥೆಗೊ, 11 ಬಾಲಗೀತೆಗಳ ಒಳಗೊಂಡಿದು.
ಹೆಚ್ಚಿನ ಎಲ್ಲವನ್ನೂ ಅವು ’ಕವಿಶಿಷ್ಯ’ಹೇಳ್ತ ಹೆಸರಿಲಿ ಬರದ್ದವು.
ತಾವೊಬ್ಬ ಸಮರ್ಥ ಕವಿ ಹೇಳಿ  ಹೆಸರುವಾಸಿಯಾದರೂ, ಬರೆ ಕವಿಯ ಶಿಷ್ಯನಷ್ಟೇ  ಹೇಳುವ  ವಿನಯ ಅವರಲ್ಲಿತ್ತು.
ಇಷ್ಟೆ ಅಲ್ಲ, ಹಲವು ಕಿರು ಕಾದಂಬರಿ, ಪತ್ತೆದಾರಿ ಕಾದಂಬರಿ (ಚಂಡಿಕಾ ರಹಸ್ಯ ಸಮಾಜ), ಐತಿಹಾಸಿಕ ಕತೆ, ಸಂಶೋಧನೆ – ವೈಚಾರಿಕ ಲೇಖನಂಗೊ ಪಂಜೆ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗೊ.

ಕನ್ನಡದ ಆಚಾರ್ಯ ಪುರುಷರು:

ಇಪ್ಪತ್ತನೆ ಶತಮಾನದ ಆದಿಭಾಗಲ್ಲಿ,ಸಂಚಾರ-ಸಂಪರ್ಕ ಸಾಧನಂಗೊ ತುಂಬ ಕೆಳಮಟ್ಟಲ್ಲಿತ್ತಿದ್ದ ಕಾಲಘಟ್ಟಲ್ಲಿ, ಪಂಜೆ ಹೆಸರು ದಕ್ಷಿಣ ಕನ್ನಡದವಕ್ಕೆ ಮಾಂತ್ರ ಪರಿಚಿತವಾಗಿತ್ತು.
ಆದರೂ, ಉತ್ತರ ಕರ್ನಾಟಕಲ್ಲಿ ನಾಡಹಬ್ಬದ ಸಮಯಲ್ಲಿ ಹೊರನಾಡಿನ ಸಾಹಿತಿಗಳ ಕರೆಯಿಸಿಗೊಂಬಲೆ ಶುರುವಾತು.
ಅದೇ ಸಮಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭ ಆತು. ನೆರೆಕರೆ ಜಿಲ್ಲೆಯ ಸಾಹಿತಿಗಳ ಪರಸ್ಪರ ಪರಿಚಯ ಬೆಳವಲೆ ಶುರುವಾದ ನಂತ್ರ, ಪಂಜೆ ಕನ್ನಡ ಆಚಾರ್ಯ ಪುರುಷರಲ್ಲಿ ಅಗ್ರಮಾನ್ಯರಾದವು.
ನಲ್ವತ್ತರ ದಶಕದ ಎಲ್ಲ ಕವಿ, ಸಾಹಿತಿಗೊ ಇವರ ಸಂಪರ್ಕ ಮಡಿಗಿಗೊಂಡಿದವು.ಸರಸ ಮಾತುಗಾರಿಕೆ,ವಿನೊದ ಅವರ ಒಂದು ಗುಣ.
ಒಳ್ಳೆ ಗಾಯಕನೂ, ಭಾಷಣಕಾರನೂ ಆಗಿತ್ತಿದ್ದ ಪಂಜೆಯವರ ಬಗ್ಗೆ ಕುವೆಂಪು ಹಾಡಿ ಹೊಗಳಿ ಬರದ ಒಂದು ಚೌದಶ ಪದಿ ಅವರ ವೆಗ್ತಿತ್ವವ ಪರಿಚಯಿಸುತ್ತು.

ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ
ನಡೆಯ ಮಡಿಯಲಿ,ನುಡಿಯ ಸವಿಯಲ್ಲಿ,ನಿಮ್ಮ ಬಗೆ
ಹಸುಳೆ ನಗೆ; ಕೆಳೆಯೊಲುಮೆ ಹಗೆತನಕೆ ಹಗೆ
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ
ಸಂಗಮಿಸಿದಂತೆ. ರಂಜಿಸಿದೆ ಜೀವನಸೂರ್ಯ

ನಿಮ್ಮದೆಮ್ಮಯ ನುಡಿಯ ಗುಡಿಗೆ ಮಂಗಳ ಕಾಂತಿ
ಪರಿಮಳಂಗಳನಿತ್ತು, ನಿಮ್ಮ ಬಾಳಿನ ಶಾಂತಿ
ಮತ್ತೆ ರಸಕಾರ್ಯಗಳಿಗುಪಮೆ; ವೀಣಾತೂರ್ಯ !
ಕಚ್ಚಿದರೆ ಕಬ್ಬಾಗಿ,ಹಿಂಡಿದರೆ ಜೇನಾಗಿ

ನಿಮ್ಮುತ್ತಮಿಕೆಯನೆ ಮೆರೆದಿರಯ್ಯ ; ಚಪ್ಪಾಳೆ
ಮೂಗು ದಾರನಿಕ್ಕಿ ನಡೆಯಿಸಿದರದು ಬಾಳೆ
ಹಿರಿಯ ಸಿರಿಚೇತನಕೆ ಕೀರ್ತಿಲೋಭಕೆ ಬಾಗಿ
ಬಾಳ್ಬಂಡಿ ನೊಗಕೆ ಹೆಗಲಿತ್ತವರು ನೀವಲ್ಲ
ತೇರ್ಮಿಣಿಯ ಸೆಳೆದಿರಲ್ಲದೆ ಮತ್ತೆ ಮಣಿದಿಲ್ಲ.

1934 ರಲ್ಲಿ ರಾಯಚೂರಿಲಿ ನಡದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಪದವಿ ಪಂಜೆ ಮಂಗೇಶ ರಾಯರಿಂಗೆ ಒಲಿದು ಬಂತು.
ಪಂಜೆ ಮಂಗೇಶರಾಯರು 1937 ಅಕ್ಟೋಬರ 24 ರಂದು ತಮ್ಮ 63 ರ ಪ್ರಾಯಲ್ಲಿ ನಿಧನರಾದವು.

~*~*~

ಆಧಾರ ಗ್ರಂಥ:

 1. “ಪಂಜೆ ಮಂಗೇಶ ರಾವ್” ಲೇಖಕ: ವಿ. ಸೀತಾರಾಮಯ್ಯ
 2. “ಪಂಜೆ ಮಂಗೇಶರಾಯರು”  ಲೇಖಕ : ಡಾ. ಕೆ. ಶಿವರಾಮ ಕಾರಂತ

(ಫಟ – ಅಂತರ್ಜಾಲಂದ)

ತೆಕ್ಕುಂಜ ಕುಮಾರ ಮಾವ°

   

You may also like...

10 Responses

 1. ನಾಗರ ಹಾವೇ ಪದ್ಯ ಬರದ ಪಂಜೆ ಮಂಗೇಶರಾಯರ ಪರಿಚಯವ ಚೆಂದಕೆ ಮಾಡಿದವು ಕುಮಾರಣ್ಣ. ಅವರ ಬಗ್ಗೆ ಇಷ್ಟು ಮಾಹಿತಿ ಎನ್ನ ಹತ್ರೆ ಇತ್ತಿಲ್ಲೆ. ಕೆಲವು ಹೊಸ ವಿಚಾರ ಗೊಂತಾತು. ಅವು ಬರದ “ಎಲ್ಲಿ ಹೋದನು ಅಮ್ಮ” ಪದ್ಯವ ಓದಿ ಅಪ್ಪಗ ತುಂಬಾ ಬೇಜಾರು ಅನಿಸಿತ್ತು. ಕುವೆಂಪುವೇ ಅವರ ಬಗ್ಗೆ ಹಾಡಿ ಹೊಗಳಿದ್ದದು ನಿಜವಾಗಿಯೂ ಹೆಮ್ಮೆಯ ವಿಷಯ. ಸರೀ ಗುರ್ತ ಮಾಡಿಕೊಟ್ಟ ಕುಮಾರಣ್ಣಂಗೆ ಧನ್ಯವಾದ.

 2. jayashree.neeramoole says:

  ‘ಕವಿಶಿಷ್ಯ’ ಪಂಜೆ ಮಂಗೇಶರಾಯರ ಬಗ್ಗೆ ಕುಮಾರ ಮಾವ ಬರದ ಲೇಖನ ಓದಿ ತುಂಬಾ ಖುಷಿ ಆತು… ಧನ್ಯವಾದ…

  ‘ಎಲ್ಲಿ ಹೋದನು ಅಮ್ಮ’ ತುಂಬಾ ಲಾಯಕ ಇದ್ದು… ಭಾವ ಉಕ್ಕಿ ಬತ್ತು… ಆ ಪದ್ಯದ ಶೈಲಿಯೂ ಇಷ್ಟ ಆತು… ಅದರ ಛಂದಸ್ಸಿನ ಬಗ್ಗೆ ಹೇಳುವಿರ ಮಾವ?

  ಚೌದಶ ಪದಿ ಯೂ ಲಾಯಕ ಇದ್ದು. ೧೪ ಸಾಲುಗಳ ಪದ್ಯಕ್ಕೆ ‘ಚೌದಶ ಪದಿ’ ಹೇಳಿ ಹೇಳುದಯಿಕ್ಕು ಹೇಳಿ ಅಷ್ಟೇ ಗೊಂತಾತು… ತಿಳುಕ್ಕೊಂಬಲೆ ತುಂಬಾ ಇದ್ದು…

  • ತೆಕ್ಕುಂಜ ಕುಮಾರ ಮಾವ° says:

   {‘ಎಲ್ಲಿ ಹೋದನು ಅಮ್ಮ’ ತುಂಬಾ ಲಾಯಕ ಇದ್ದು… ಭಾವ ಉಕ್ಕಿ ಬತ್ತು… ಆ ಪದ್ಯದ ಶೈಲಿಯೂ ಇಷ್ಟ ಆತು… ಅದರ ಛಂದಸ್ಸಿನ ಬಗ್ಗೆ ಹೇಳುವಿರ ಮಾವ?}
   ಇದರ ಛಂದಸ್ಸಿನ ಬಗ್ಗೆ ಪೂರ್ಣ ವಿವರ ಎನಗೆ ಗೊಂತಿಲ್ಲೆ. ಸೇಡಿಯಾಪು ಕೃಷ್ನ ಭಟ್ಟರು ವಿಶ್ಲೇಸಿದ ಪ್ರಕಾರ ಇದು “ದ್ರುತಮಧ್ಯಾವರ್ತ ಗತಿ’ಯ ಸ್ವರೂಪದ್ದು.(ಮೂರು ಮಾತ್ರೆಯ ಮತ್ತೆ ನಾಕು ಮಾತ್ರೆಯ ಗಣಗಳ ಸಂಯೋಗದ ಪುನಃ ಪುನಪರಿವರ್ತನೆ ಅಪ್ಪಂತಹಾ ಛಂದೋಗತಿ. ವಿಷದವಾದ ವಿವರ “ಸೇಡಿಯಾಪು ಛಂದಸ್ಸಂಪುಟ” ಪುಸ್ತಕಲ್ಲಿ ಸಿಕ್ಕುತ್ತು.ಪೂರ್ಣ ಅರ್ಥ ಎನಗೆ ಗೊಂತಾಯಿದಿಲ್ಲೆ.) -ಪಂಜೆಯವು ಪ್ರಯೋಗ ಮಾಡಿದ ಒಂದು ಛಂದೊಗತಿ.
   “ಚೌದಶ ಪದಿ” – ಇದರ ಮಂಜೇಶ್ವರ ಗೋವಿಂದ ಪೈಗಳು ಮದಾಲು ಶುರು ಮಾಡಿದ್ದು ಹೇಳ್ತವು. ಇಂಗ್ಲೀಷಿನ ಸ’ಸೋನೆಟ್’ ನಮುನೆಯ ಪದ್ಯದ ಸ್ವರೂಪಲ್ಲಿ ದ್ವಿತೀಯಾಕ್ಷರ ಪ್ರಾಸ ಬಿಟ್ಟು ಅವು ಬರವಲೆ ಶುರು ಮಾಡಿಡ್ಡು ಹೇಳ್ತವು. ಕನ್ನಡಲ್ಲಿ ಇದರ “ಸುನೀತ” ಹೇಳಿಯೂ ಹೇಳ್ತವು.

 3. ಚೆನ್ನೈ ಭಾವ says:

  ಸಾಹಿತಿಗಳ ಪರಿಚಯಿಸುವದು ಕುಮಾರ ಮಾವನ ಶೈಲಿ ಯಾವಾಗಲೂ ವಿಶಿಷ್ಟವಾಗಿ ಮೂಡಿ ಬತ್ತಾ ಇರ್ತು. ಪಂಜೆ ಮಂಗೇಶರಾಯರ ಪರಿಚಯವೂ ಲಾಯಕ ಆಯ್ದು ., ಇಷ್ಟರವರೇಗೆ ಹೆಸರು ಮತ್ತು ಓ ಇವ್ವು ನಮ್ಮೂರಿನವು ಹೇಳಿ ಅಷ್ಟೇ ಹೆಮ್ಮೆಪಟ್ಟುಗೊಂಡಿದ್ದವಕ್ಕೆ ಅವರ ಇನ್ನಷ್ಟು ಮಾಹಿತಿ ಒದಗಿಸಿಕೊಟ್ಟಿದಿ ಅಂತ ಒಪ್ಪ ಹೇಳುತ್ತು – ‘ಚೆನ್ನೈವಾಣಿ’

 4. ರಘು ಮುಳಿಯ says:

  ತೆಕ್ಕು೦ಜ ಮಾವ೦ಗೆ ಧನ್ಯವಾದ.
  “ಅಣ್ಣನ ವಿಲಾಪ” ಓದಿ ಕಣ್ನು ತು೦ಬಿತ್ತು.ಸಣ್ಣಾದಿಪ್ಪಗ ಓದಿದ ಮಕ್ಕಳ ಕಥೆಗಳ ಪುಸ್ತಕದ ಪ್ರತಿ ಈಗ ಎಲ್ಲಿಯೂ ಸಿಕ್ಕುತ್ತಿಲ್ಲೆನ್ನೇ.

  • ತೆಕ್ಕುಂಜ ಕುಮಾರ ಮಾವ° says:

   ಉಡುಪಿಲಿ “ಗೋವಿಂದ ಪೈ ಸಂಶೋಧನ”ಕೇಂದ್ರಲ್ಲಿ ಪಂಜೆಯವರ ಸಮಗ್ರ ಸಂಪುಟ ಇದ್ದಡ, ಮಾರಟದ ಪ್ರತಿ ಇಲ್ಲೆ ಹೇಳಿ ಆನು ವಿಚಾರ್ಸಿಯಪ್ಪಗ ಹೇಳಿತ್ತಿದ್ದವು.

   • ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಓರಿಯಂಟ್ ಲಾಂಗ್ ಮನ್ ನವು ಪಂಜೆ ಮಂಗೇಶರಾವ್ ಕೃತಿಗಳ ಪ್ರಕಾಶಕರು.ಬೆಂಗಳೂರಿಲಿ ಅವರ ಶಾಖೆ ಇದ್ದು.ಪ್ರತಿಗೊ ಲಭ್ಯ ಇದ್ದೊ ಗೊಂತಿಲ್ಲೆ.

 5. k.raghurama bhat says:

  ಕುಮಾರಣ್ಣಾ,
  ನಿಂಗೊ ಬರದ ಕವಿ ಶಿಷ್ಯ ಪಂಜೆ ಮಂಗೇಶರಾಯರ ಲೇಖನ ಲಾಯಕಾಯ್ದು.ಹೊಸಗನ್ನಡಕ್ಕೆ ನಮ್ಮಜಿಲ್ಲೆ ಕೊಟ್ಟ ಕೊಡುಗೆಲಿ ಅವರ ಹೆಸರಿನ ಮರವಲೇ ಸಾಧ್ಯಯಿಲ್ಲೆ ಅಂತಹಾ ವೆಗ್ತಿ ಅವು. ಸಂಕ್ಷಿಪ್ತವಾದರೂ ”ಚಿಕ್ಕ-ಚೊಕ್ಕ ಲೇಖನ”ವಾಗಿ
  ಮೂಡಿ ಬೈಂದು. ತುಂಬಾ ಸಂತೋಷಾತು. ಒಳ್ಳೆ ಕೆಲಸ ಮಾಡ್ತಾ ಇದ್ದಿ.ನಿರಂತರ ಇಂತಹಾ ಕೆಲಸ ನೆಡೆಯಲಿ. ನಿಂಗೊಗೆ
  ತೆಕ್ಕುಂಜೆ ದಿ.ಗೋಪಾಲಮಾವ ಸಂಬಂಧವೊ?ನಿಂಗಳ ಬಗ್ಗೆ ಬರೆಯಿ. ಲೇಖನಕ್ಕೆ ಧನ್ಯವಾದ.ನಮಸ್ತೇ….

  • ತೆಕ್ಕುಂಜ ಕುಮಾರ ಮಾವ° says:

   ರಘುರಾಮಣ್ಣಂಗೆ ಸ್ವಾಗತ.ನಿಂಗೊ ಶುದ್ದಿ ಓದಿ ಒಪ್ಪ ಕೊಟ್ಟದು ಕೊಶಿ ಆತು. ಬೈಲಿಂಗೆ ಬತ್ತಾ ಇರಿ.
   ತೆಕ್ಕುಂಜ ದಿ.ಗೋಪಾಲಕೃಷ್ಣ ಭಟ್ರು ಎನ್ನ ದೊಡ್ಡಪ್ಪ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *