Oppanna.com

ಮುಗುಟು ಅರಳುವ ಮದಲೆ ಮುರುಟಿ ಹೋದ ಪ್ರತಿಭೆ – ಕವಿ ಯರ್ಮುಂಜ ರಾಮಚಂದ್ರ

ಬರದೋರು :   ತೆಕ್ಕುಂಜ ಕುಮಾರ ಮಾವ°    on   01/12/2012    4 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಯರ್ಮುಂಜ – ನಮ್ಮ ಜಿಲ್ಲೆಲಿ ಹೆಸರುವಾಸಿಯಾದ ಮನೆತನ,ಅದರಲ್ಲೂ ದಕ್ಷಿಣಕನ್ನಡ – ಕಾಸರಗೋಡಿನ ಹವ್ಯಕರಿಂಗೆ ಚಿರಪರಿಚಿತ.
ಕಾರಣ ಜ್ಯೋತಿರ್ವಿದ್ಯಾ ಮಾರ್ತಾಂಡ ಹೇಳಿ ಪ್ರಖ್ಯಾತರಾದ ಯರ್ಮುಂಜ ಶಂಕರ ಜೋಯಿಸರು. ಇವರಿಂದ ರಚಿತವಾದ ವೈಜಯಂತಿ ಪಂಚಾಂಗ  ಇಲ್ಲದ್ದ ಹವೀಕ ಮನೆ ಈ ಆಸುಪಾಸಿಲಿ ಎಲ್ಲಿಯೂ ಇರ.
ಪೌರೋಹಿತ್ಯ, ಕೃಷಿಯೇ ಯರ್ಮುಂಜ ಕುಟುಂಬದವರ ಪ್ರಧಾನ ವೃತ್ತಿ. ಇಷ್ಟೇ ಹೇಳಿರೆ ಯರ್ಮುಂಜ ಕುಟುಂಬದವರ ಬಗ್ಗೆ ಪೂರ್ಣ ಮಾಹಿತಿ ಕೊಟ್ಟ ಹಾಂಗೆ ಆವುತ್ತಿಲೆ.ಶಂಕರ ಜೋಯಿಸರ ತಮ್ಮನ ಮಗ ಯರ್ಮುಂಜ ರಾಮಚಂದ್ರ ಸಾಹಿತ್ಯ ಕ್ಷೇತ್ರಲ್ಲಿ ಅದ್ಬುತ ಕೃಷಿ ಮಾಡಿ ಮಿಂಚಿ ಬೆಳಗಿದ್ದವು ಹೇಳ್ತ ವಿಚಾರ ಹಲವರಿಂಗೆ ಗೊಂತಿರ. ಇವು ತಮ್ಮ ತರುಣ ಪ್ರಾಯಲ್ಲಿಯೆ ಸಾಹಿತ್ತಿಕ ಚಟುವಟಿಕೆಲಿ ತೊಡಗಿಸಿಗೊಂಡು ಬಾಳಿದ ಅಕೇರಿ ಎರಡು-ಮೂರು ವರ್ಷ ಮೃತ್ಯು ಕೂಪದಂಚಿಲಿ ಇದ್ದುಗೊಂಡು ಕತೆ ಕಾವ್ಯಂಗಳ ಸೃಷ್ಟಿಸಿದ ಅದ್ಭುತ ಪ್ರತಿಭಾಶಾಲಿ.ಆತನ ಕೊನೆಕೊನೆಯ ಕವನಗಳನ್ನು ಓದಿದಾಗ ಅಲ್ಲಿನ ಪರಿಪಾಕವನ್ನು ಕಂಡಾಗ,ಆತ ಬದುಕಿದ್ದಿದ್ದರೆ ಕನ್ನಡನಾಡಿನ ಪ್ರಮುಖ ಕವಿಗಳಲ್ಲೊಬ್ಬನಾಗಬಹುದಿತ್ತು ಎಂಬ ಅಭಿಪ್ರಾಯ ಖಚಿತಗೊಳ್ಳುತ್ತದೆ. ತನ್ನ ಇಪ್ಪತ್ತೆರಡನೆ ವರ್ಷಲ್ಲಿ ಅಕಾಲ ಮರಣ ಹೊಂದಿದ ಯರ್ಮುಂಜ ರಾಮಚಂದ್ರರ ಕವನ ಸಂಕಲನ ವಿದಾಯಕ್ಕೆ ಹಿನ್ನುಡಿ ಬರದ ಕನ್ನಡದ ಶ್ರೇಷ್ಟ ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರು ಹೇಳಿದ ಮಾತಿದು!.ಈ ಕವಿಯನ್ನು ಮುಖತಃ ನೋಡಲು ಆಗಲಿಲ್ಲವಲ್ಲ ಎಂಬುದು ನನ್ನ ಜೀವಮಾನದಲ್ಲಿನ ಮುಖ್ಯ ಪಶ್ಚಾತ್ತಾಪಗಳಲ್ಲೊಂದು ಹೇಳ್ತ ಅಡಿಗರ ಈ ಮಾತಿಂದ ಯರ್ಮುಂಜ ರಾಮಚಂದ್ರರು ಕವಿಯಾಗಿ ಮೂಡಿಸಿದ ಭರವಸೆ ಎಷ್ಟು ಘಟ್ಟಿಯಾಗಿದ್ದತ್ತು ಹೇಳುದರ ಅರ್ಥೈಸುಲಕ್ಕು. ಮತ್ತೂ ವಿಶ್ಲೇಷಿಸಿ ಅಡಿಗರು ಹೇಳ್ತವು – ಹೊಸಗನ್ನಡದ ಕಾವ್ಯಪರಂಪರೆಗೆ ಯರ್ಮುಂಜ ರಾಮಚಂದ್ರರ ತರುಣ ಜೀವನದ ಸತ್ಯ ಬೆರೆತಿದೆ.ಅದಕ್ಕೆ ಮರಣವಿಲ್ಲ. ದಕ್ಷಿಣಕನ್ನಡದ ಪ್ರಥಮ ನವ್ಯ ಕವಿ ಹೇಳ್ತ ಹೆಸರು ರಾಮಚಂದ್ರರಿಂಗೆ ಮೀಸಲು ಹೇಳಿ ಕೆಲವರು ಅಭಿಪ್ರಾಯ ಪಟ್ಟಿದವು. ಯರ್ಮುಂಜ ರಾಮಚಂದ್ರರ ಪ್ರಕಟಿತ ಕೃತಿಗೊ ಎರಡು ಮಾಂತ್ರ, – ಚಿಕಿತ್ಸೆಯ ಹುಚ್ಚು ಮತ್ತು ಇತರ ಕತೆಗಳು” ಹೇಳ್ತ ಕತಾ ಸಂಕಲನ, ಇನ್ನೊಂದು ವಿದಾಯ” ಹೆಸರಿನ ಕವನ ಸಂಕಲನ. ಆದರೆ ಬರೇ ಇಪ್ಪತ್ತೆರಡು ವರ್ಷ ಬದುಕಿ, ಬಾಳಿದ ಅಕೇರಿಯಾಣ ಐದು ವರ್ಷದ ಅವಧಿಲಿ ರಚಿಸಿದ ಇವರ ಸಾಹಿತ್ತಿಕ ಸೃಷ್ಟಿ ಇದು ಹೇಳಿ ಗಮನಿಸಿದರೆ,ಇಷ್ಟು ಸಣ್ಣ ಪ್ರಾಯಲ್ಲಿ ಮಾಡಿದ ಸಾಧನೆ ಗಣನೀಯವೇ ಸರಿ. ರಾಮಚಂದ್ರರ ಬದುಕು-ಬರಹಗಳ ಬಗ್ಗೆ ಶ್ರೀ ವೇಣುಗೋಪಾಲ ಕಾಸರಗೋಡು,ಇವು ಬರದ ಪುಸ್ತಕಲ್ಲಿ ಹೇಳಿದ ಮಾತುಗೊ ಅವರ ಸಾಧನೆಗೆ ಹಿಡಿದ ಕನ್ನಾಟಿ.- …ಈ ಅಲ್ಪಾವಧಿಯಲ್ಲಿ ಅವರು ಬರೆದದ್ದು ಕಡಿಮೆಯಲ್ಲ.ಕಡಿಮೆ ದರ್ಜೆಯದ್ದೂ ಅಲ್ಲ.ತಮ್ಮ ಬರವಣಿಗೆಯ ಮೊದಲ ಹಂತದಲ್ಲಿ ನವೋದಯದ ಭಾವುಕ ಪ್ರಪಂಚದಲ್ಲಿದ್ದು,ಒಂದೆರಡು ವರ್ಷಗಳಲ್ಲೇ ಪ್ರಗತಿಶೀಲತೆಯ ವಾಸ್ತವ ಲೋಕಕ್ಕಿಳಿದು ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ತಮ್ಮ ಸಾಹಿತ್ಯ ಜೀವನದ ಕೊನೆಗಾಲದಲ್ಲಿ ನವ್ಯತೆಯ ಸಂಕೀರ್ಣ ಮಾರ್ಗವನ್ನು ತನ್ನದಾಗಿಸಿಕೊಂಡ ಯರ್ಮುಂಜ ರಾಮಚಂದ್ರ ಕನ್ನಡ ಸಾಹಿತ್ಯ ಲೋಕದ ಮಿನುಗುತಾರೆ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ.

ಶ್ರೀ ಯರ್ಮುಂಜ ರಾಮಚಂದ್ರ

ಕುಟುಂಬ,ಬಾಲ್ಯ,ವಿದ್ಯಾಭ್ಯಾಸ

ರಾಮಚಂದ್ರರ ಪೂರ್ವಜರುಗೊ ಮುನ್ನೂರು ವರ್ಷಂಗಳ ಹಿಂದೆ ಕುಂದಾಪುರದ ಹೊಸಂಗಡಿ ಹೇಳ್ತಲ್ಲಿಂದ ರಾಜ ಮರ್ಯಾದೆಯೊಟ್ಟಿಂಗೆ ಕುದುರೆ ಏರಿಗೊಂಡು ಬಂದು ಯರ್ಮುಂಜಲ್ಲಿ ನೆಲೆ ನಿಂದವಡ.ಈ ವಂಶದವು ತಂತಮ್ಮ ವಿದ್ವತ್ತಿಂಗೆ ಅನುಗುಣವಾಗಿ ಶಾಸ್ತ್ರಿಗಳಾಗಿಯೂ,ಪುರಾಣಿಕರಾಗಿಯೂ,ಪುರೋಹಿತರಾಗಿಯೂ,ಉಪಾಧ್ಯಾಯರಾಗಿಯೂ ಹೆಸರು ಮಾಡಿದ್ದವು.ಜ್ಯೋತಿಷಿಯಾಗಿ ನಾಡಿಲಿ ಹೆಸರುವಾಸಿಯಾದ ಶ್ರೀ ಶಂಕರ ಜೋಯಿಸರ ತಮ್ಮ ಶ್ರೀ ಜನಾರ್ಧನ ಜೋಯಿಸ ಮತ್ತೆ ಶ್ರೀಮತಿ ದೇವಕಿಯಮ್ಮ ಇವರ ನಾಲ್ಕು ಗೆಂಡು ಮಕ್ಕೊ,ಒಬ್ಬ ಕೂಸಿನ ಪೈಕಿ ರಾಮಚಂದ್ರರು ಮೂರನೆಯವು.1933 ಫೆಬ್ರವರಿ 9ನೆ ತಾರೀಕು ಯರ್ಮುಂಜಲ್ಲಿ ರಾಮಚಂದ್ರರ ಜನ್ಮ ಆತು.ಅವಕ್ಕೆ ಆರು ವರ್ಷ ಅಪ್ಪಗ,ಜನಾರ್ಧನ ಜೋಯಿಸರು ಕಬಕ ಗ್ರಾಮದ ಕೂವೆತ್ತಿಲಕ್ಕೆ ಬಂದು ನೆಲೆ ನಿಂದವು.ಪ್ರಾಥಮಿಕ ವಿದ್ಯಾಭ್ಯಾಸ ಮಿತ್ತೂರು,ಕಬಕ ಶಾಲೆಲಿ ಕಲ್ತವು.ಪಾಠ,ಪಠ್ಯೇತರ ಚಟುವಟಿಕೆಲಿ ಯೇವತ್ತೂ ಮುಂದೆ ಇತ್ತಿದ್ದ ರಾಮಚಂದ್ರರ ಪ್ರತಿಭೆಯ,ಅವರ ಅಧ್ಯಾಪಕರಾಗಿತ್ತಿದ್ದ ಪಂಜಜ್ಜೆ ಶಂಕರ ಭಟ್ರು ಮತ್ತೆ ತಿರುಮಲೇಶ್ವರ ಭಟ್ರುದೆ ಗುರುತಿಸಿ,ವಿದ್ಯಾಭ್ಯಾಸವ ಮುಂದುವರುಸುಲೆ ಪ್ರೋತ್ಸಾಹಿಸಿದವಡ. 1943ರ ಜೂನಿಲಿ ಪುತ್ತೂರಿನ ಬೋರ್ಡ್ ಹೈಸ್ಕೂಲಿಲಿ ಆರನೆ ಕ್ಲಾಸಿಂಗೆ ಸೇರಿದವು.ಅಲ್ಲಿ ರಾಮಚಂದ್ರರ ಓದುವ ಹವ್ಯಾಸ ದೊಡ್ದದಾಗಿ ಬೆಳೆದತ್ತು.ಸರಾಸರಿ ದಿನಕ್ಕೆ ಒಂದು ಪುಸ್ತಕವನ್ನಾದರೂ ಒದುವ ಕ್ರಮ ಇತ್ತಿದ್ದಡ.ಆ ಕಾಲಲ್ಲಿ ಲಭ್ಯ ಇತ್ತಿದ್ದ ಎಲ್ಲ ಕತೆ,ಕಾದಂಬರಿ ಅಲ್ಲದ್ದೆ ಕಾವ್ಯಂಗಳನ್ನೂ ಓದಿಗೊಂಡಿತ್ತಿದ್ದವಡ. ಅವರ ಅತ್ಯಂತ ಆತ್ಮೀಯರಾಗಿತ್ತಿದ್ದ, ‘ಸೌರಭ’ಕಾವ್ಯನಾಮಲ್ಲಿ ಬರದು ಹೆಸರುವಾಸಿಯಾದ ಶ್ರೀ ಸರವು ರಾಮ ಭಟ್ರು ತಮ್ಮ ಚೆಂಞಾಯಿಯ ಬಗ್ಗೆ ಬರದ ಚಿತ್ರಣ ಕಣ್ಣೆದುರು ಕಾಣ್ತ ಹಾಂಗಿದ್ದು ಕಾಕಿ ಅಥವಾ ಅದಕ್ಕೆ ಹತ್ತಿರದ್ದೆಂದು ಹೇಳಬಹುದಾದ ಬಣ್ಣದ ಚಡ್ಡಿ,ತೆಳ್ಳಗಿನ ಬಿಳಿ ಅಂಗಿ-ಕೈ ಇಲ್ಲದ ಬನಿಯನ್ನು ಒಳಗಿಂದ ಕಾಣುವಷ್ಟು ತೆಳ್ಲಗಿನದು-ಆ ಷರ್ಟು,ಅಂಗಿಯ ಕಿಸೆಯಲ್ಲೊಂದು ಪೆನ್ನು,ಕಿಸೆಯ ಬದಿಯಲ್ಲಿ ಧಾರಾಳ ಶಾಯಿಯ ಕಲೆಗಳು,ತಲೆಯ ಮೇಲೊಂದು ಬಿಳಿಯ ಟೊಪ್ಪಿ,ಇದರೊಳಡಗಿದ ಸಣ್ಣ ಜುಟ್ಟು,ಮಡಚಿದ ಕೊಡೆಯ ಕಾಲಿನ ಭಾಗಕ್ಕೆ  ಪುಸ್ತಕಗಳನ್ನು ತುಂಬಿದ ಚೀಲದ ಕೈಯನ್ನು ನುಗ್ಗಿಸಿ ಬೆನ್ನ ಹಿಂದೆ ನೇತಾಡುವಂತೆಯೂ,ಕೊಡೆಯನ್ನು ಕೈಯಿಂದ ಹಿಡಿಯುವ ಭಾಗ ಎದೆಯ ಮೇಲೆ ತೂಗಾಡುವಂತೆಯೂ,ಸಮತೋಲನದಿಂದ ನೇತಾಡಿಸಿ ಕೈಗಳೆರಡೂ ಸ್ವತಂತ್ರವಿರುವಂತೆ ಏರ್ಪಾಡು.ಈ ಕೈಗಳಲ್ಲಿ ಕತೆಯೋ,ಕಾದಂಬರಿಯೋ ಏನಾದರೂ ಪುಸ್ತಕ ಬಿಡುಸಿ ಓದುತ್ತಾ, ಕಾಲಿಗೆ ಕಣ್ಣುಗಳಿವೆಯೋ ಎನ್ನುವ ಹಾಗೆ ಗೌರವರ್ಣದ ಚಿಕ್ಕ ಹುಡುಗನೋರ್ವ ಪುತ್ತೂರು-ಮಂಗಳೂರು ರಸ್ತೆಯಲ್ಲಿ ಸಿಗುವ ಕಬಕ ಎಂಬಲ್ಲಿಂದ ಪುತ್ತೂರು ಕಡೆಗೆ ಮುಂಜಾನೆ ಯಾವಾಗಲೂ ನಡೆದು ಬರುತ್ತಿದ್ದುದನ್ನು,ಸಂಜೆ ಹಾಗೆಯೇ ಹಿಂತಿರುಗಿ ಹೋಗುತ್ತಿದ್ದುದನ್ನೂ ಸುಮಾರು 1943ರಿಂದ 1949ರ ಅವಧಿಯಲ್ಲಿ ನೋಡಬಹುದಾಗಿತ್ತು.ಶಾಲೆಲಿ ರಾಮಚಂದ್ರರ ಸಹಪಾಠಿಗಳಾಗಿದ್ದವು ಹಲವು ಜೆನಂಗೊ-ಶ್ರೀ ಮರಕ್ಕಿಣಿ ಮಹಾಲಿಂಗ ಭಟ್(ಎಂ.ಬಿ.ಮರಕ್ಕಿಣಿ),ಶಂಕರನಾರಾಯಣ ಭಟ್ಟ,ಪಾಣಾಜೆ(ಶಂಪಾ ದೈತೋಟ),ಮುಳಿಯ ಕೃಷ್ಣ ಭಟ್, ಅಡ್ಯನಡ್ಕ ನರಸಿಂಹ ಭಟ್,ಕೊಂದಲಕಾನ ಕೃಷ್ಣ ಭಟ್,ಈಶ್ವರ ಕಜೆ, ಬಿ.ಆರ್.ನಾಗೇಶ(ಬೊ.ರಾ.ನಾಗೇಶ -‘ನಚಿಕೇತ’)ಮುಂತಾದವರೊಟ್ಟಿಂಗೆ ಸಾಹಿತ್ತಿಕ,ರಾಜಕೀಯ,ಸ್ವಾತಂತ್ರ್ಯ ಹೋರಾಟ,ದೇಶಭಕ್ತಿ ಇತ್ಯಾದಿ ವಿಷಯಂಗಳ ಚರ್ಚೆ ನಡಶಿಗೊಂಡಿತ್ತಿದ್ದವು. ಶಾಲೆಲಿ ಚರ್ಚಾ ಸ್ಪರ್ಧೆ,ನಾಟಕಾಭಿನಯ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಲಿ ಭಾಗವಹಿಸುಲೆ ಹೆಚ್ಚಿಗೆ ಆಸಕ್ತಿ ಇತ್ತಿದ್ದದು. ಇದರೊಟ್ಟಿಂಗೆ ಬರವಣಿಗೆಯನ್ನೂ ಶುರುಮಾಡಿ,ಇವರ ಕತೆ ಕವನಂಗೊ ಪತ್ರಿಕೆಗಳಲ್ಲಿ ಪ್ರಕಟ ಆಯಿಕ್ಕೊಂಡಿತ್ತು.ಹೈಸ್ಕೂಲಿಲಿ ಇಪ್ಪಗಳೆ ಇವು ಬರದ ‘ಸ್ನೇಹಿತರು’ಸಣ್ಣಕತೆಗೆ ಶ್ರೀ ಬೆಟಗೇರಿ ಕೃಷ್ಣಶರ್ಮರ ‘ಜಯಂತಿ’ಮಾಸಪತ್ರಿಕೆಯೋರು ಏರ್ಪಾಟು ಮಾಡಿದ ಪ್ರತಿಷ್ಟಿತ ಅಖಿಲ ಕರ್ನಾಟಕ ವ್ಯಾಪ್ತಿಯ ಕತಾ ಸ್ಪರ್ಧೆಲಿ ಮದಲ ಬಹುಮಾನ ಸಿಕ್ಕಿತ್ತು. ಇದರಿಂದಾಗಿ ರಾಮಚಂದ್ರರಿಂಗೆ ಉದಯೋನ್ಮುಖ ಸಾಹಿತಿ ಹೇಳ್ತ ಹೆಸರೂ ಪ್ರಸಿದ್ಧಿಯೂ ಬಂತು.

ಹೈಸ್ಕೂಲು ವಿದ್ಯಾರ್ಥಿಯಾಗಿಪ್ಪ ಸಮಯಲ್ಲಿಯೇ,ಕಬಕದ ಇನ್ನೊಬ್ಬ ‘ಚಡ್ಡಿ ದೋಸ್ತಿ’ ಶ್ರೀ ಪಟಿಕ್ಕಲ್ಲು ರಾಮಶಾಸ್ತ್ರಿ ಹೇಳ್ತವರ ಸಕಾಯಂದ ಕಬಕಲ್ಲಿ ‘ಜನತಾ ವಾಚನಾಲಯ’ವ ಆರಂಭಿಸಿದವು.ಅವು ತರ್ಸಿಗೊಂಡಿತ್ತಿದ್ದ ಪುಸ್ತಕ,ಪತ್ರಿಕೆಗೊ ಇಲ್ಲಿ ಓದುಲೆ ಮಡಗಿಗೊಂಡಿತ್ತವು.ಹತ್ತರೆ ನೆರೆಕರೆಯ ಊರಿಂದ ಬಂದು ಬಸ್ಸಿಂಗೆ ಕಾದು ಕೂಪವು,ಕಬಕ ಪೇಟೆಲಿ ಕೆಲಸ ಇದ್ದುಗೊಂಡು ಬಪ್ಪವು, ವಿಟ್ಲಕ್ಕೋ,ಕೊಡೆಯಾಲಕ್ಕೋ ಹೋಪಲೆ ಇಲ್ಲಿ ಬಂದು ಕಾದು ಕೂಪೋರು, ಇಲ್ಲಿ ಕೂದೊಂಡು ಓದಿಯೇ ಹೋಕ್ಕಡ. ಕಾರಣ ಕಬಕಲ್ಲಿ ಗೋವಿಂದ ರಾಯರ ಹೋಟ್ಲಿನ ಜೆಗಿಲಿನ ಮೂಲೆಯೇ ಈ ಲೈಬ್ರೆರಿ.ರಾಮಚಂದ್ರರ ಸಂಗ್ರಹಲ್ಲಿತ್ತಿದ್ದ ಸುಮಾರು ಐನೂರು ಪುಸ್ತಕಂಗಳ ಲೈಬ್ರೆರಿಲಿ ಮಡಗಿತ್ತಿದ್ದವು..ಓದುವ ಚಟವ ತಾನು ಬೆಳೆಶಿಗೊಂಡದು ಮಾಂತ್ರ ಅಲ್ಲ, ಬಾಕಿ ಊರೋರಿಂಗೂ ಓದುಲೆ ಹೀಂಗೊಂದು ಅನುಕೂಲ ಮಾಡಿ ಕೊಟ್ಟವು.

ಪಾಂಚಜನ್ಯ

ನಲವತ್ತರ ದಶಕದ ಆ ಕಾಲಲ್ಲಿ ಹಸ್ತ ಪತ್ರಿಕೋದ್ಯಮ ದಕ್ಷಿಣ ಕನ್ನಡದ ನವ ವಿದ್ಯಾವಂತರ ಒಂದು ವಿಶಿಷ್ಟ ಹವ್ಯಾಸವೇ ಆಗಿತ್ತಿದ್ದಡ.ಪುತ್ತೂರು ಆಸುಪಾಸಿಲಿಯೆ ಸುಮಾರು ನಾಲ್ಕೈದು ಹಸ್ತಪತ್ರಿಕೆಗೊ ಚಾಲ್ತಿಲಿ ಇತ್ತಿದ್ದು.1949 ರಲ್ಲಿ ,ಬಹುಶಃ ಕಲ್ತುಗೊಂಡಿಪ್ಪ ಸಮಯಲ್ಲಿಯೆ, ರಾಮಚಂದ್ರರು ಪಟಿಕ್ಕಲ್ಲು ರಾಮ ಶಾಸ್ತ್ರಿಗಳೊಟ್ಟಿಂಗೆ ಸೇರಿ “ಪಾಂಚಜನ್ಯ” ಹೇಳ್ತ ಕೈಬರಹದ ಮಾಸಿಕ ಪತ್ರಿಕೆ ಪ್ರಕಟಣೆಯ ಶುರುಮಾಡಿದವು. ಸುಮಾರು ಐದು ವರ್ಷಗಳವರೆಗೆ ಇದರ ಮುಂದುವರಿಸಿದವು.”ಯರ್ಮುಂಜ ರಾಮಚಂದ್ರ ಸಮಗ್ರ ಕತೆ-ಕಾವ್ಯ”ಪುಸ್ತಕಕ್ಕೆ ಮುನ್ನುಡಿ ಬರದ ಡಾ.ರಾಮಚಂದ್ರ ದೇವ,ಪಾಂಚಜನ್ಯದ ಬಗ್ಗೆ ಪ್ರಸ್ತಾಪ ಮಾಡಿಗೊಂಡು ಪತ್ರಿಕೆಯ ಸ್ವರೂಪವ ಚಿತ್ರಿಸಿದ್ದವು.ಇದು,ಗೆರೆಗಳಿಲ್ಲದ ನೂರು ಪುಟಗಳ ಎಕ್ಸರ್ಸೈಜ್ ಪುಸ್ತಕದಲ್ಲಿ ಕೆಂಪು ಬಣ್ಣದ ಪೆನ್ಸಿಲಿನಿಂದ – ಕೆಲವು ಸಲ ನೇರಳೆ ಬಣ್ನದ ಪೆನ್ಸಿಲಿನಿಂದ – ಬಾರ್ಡರ್ ಕಟ್ಟಿ ಬರಹಗಳನ್ನು ಕೈಬರಹದಲ್ಲಿ ಬರೆದು ಪ್ರಕಟಿಸುತ್ತಿದ್ದ ಪತ್ರಿಕೆ.ಪತ್ರಿಕೆಯ ಬಹುಪಾಲು ರಾಮಚಂದ್ರರ ಅಕ್ಷರದಲ್ಲಿ ಇರುತ್ತಿತ್ತು.ಇದರ ಸಂಪಾದಕರು ಯರ್ಮುಂಜ ರಾಮಚಂದ್ರ ಮತ್ತು ಪಿ.ಎಸ್.ರಾಮ.ಇವರ ಪೂರ್ತಿ ಹೆಸರು ಪಟಿಕ್ಕಲ್ಲು ರಾಮಶಾಸ್ತ್ರಿ.ಬೇರೆ ಹಾಳೆಯಲ್ಲಿ ಮುಖಪುಟ ಚಿತ್ರಿಸಿ ಅದನ್ನು ಎಕ್ಸರ್ಸೈಜ್ ಪುಸ್ತಕದ ರಕ್ಷಾಪುಟಕ್ಕೆ ಅಂಟಿಸುತ್ತಿದ್ದರು. ಪಾಂಚಜನ್ಯ ಎಂಬ ಹೆಸರು,ಪ್ರಕಟಣೆಯ ತಿಂಗಳು ಮತ್ತು ವರ್ಷ – ಇವಿಷ್ಟು ಮುಖಪುಟದಲ್ಲಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ ನಮೂದಾಗುತ್ತಿದ್ದ ವಿಷಯ.ಕಪ್ಪು ಶಾಯಿಯನ್ನು ಸುತ್ತ ತುಂಬಿ ಪಾಂಚಜನ್ಯ ಎಂದು ಬಿಳಿ ಅಕ್ಷರದಲ್ಲಿ ಎದ್ದು ಕಾಣುವ ಹಾಗೆ ಮಾಡುತ್ತಿದ್ದರು.

ಪ್ರತಿ ಸಂಚಿಕೆಲಿ ಕತೆ,ಹರಟೆ,ಪ್ರಶ್ನೋತ್ತರ,ಸಂಪಾದಕೀಯ ವಿಭಾಗಂಗೊ ಇತ್ತಿದ್ದು.ಹೊಸ ಪ್ರಕಟಣೆಯ ಕಾದಂಬರಿ-ಪುಸ್ತಕಂಗಳ ಪರಿಚಯ,ಇಂಗ್ಲಿಷ್,ಹಿಂದಿ ಲೇಖನಂಗಳ ಅನುವಾದಂಗೊ ಎಲ್ಲ ಇರ್ತಿತ್ತು.ರಾಮಚಂದ್ರರು ಸಂಪಾದಿಸಿ ತಯಾರು ಮಾಡಿದ ಲೇಖನಂಗಳ ರಾಮಶಾಸ್ತ್ರಿಗೊ ಚೆಂದಕ್ಕೆ ಬರಕ್ಕೊಂಡಿತ್ತಿದ್ದವು. ಹೆಚ್ಚಿನ ಲೇಖನಂಗೊ ರಾಮಚಂದ್ರರ ಹೈಸ್ಕೂಲಿನ ದೋಸ್ತಿಗೊ ಬರದು ಕೊಟ್ಟುಗೊಂಡಿತ್ತಿದ್ದವು.ರಾಮಚಂದ್ರರೇ ಬರಕ್ಕೊಂಡಿತ್ತಿದ್ದ ಸಂಪಾದಕೀಯ,ಚಾಣಾಕ್ಷನ ಬಾಣಗಳು,ವಿಚಿತ್ರ ವಿಭಾಗ,ಗತಕಾಲದ ಟಗರುಗಳು ಹೆಸರಿನ ವಿಡಂಬನೆಗೊ,ಲೆಕ್ಕದ ಬುಕ್ಕು ಇತ್ಯಾದಿ ಸ್ಥಿರ ಶಿರ್ಷಿಕೆಗೊ ಪ್ರತಿಯೊಂದು ಸಂಚಿಕೆಲಿಯೂ ಬಂದುಗೊಂಡಿತ್ತು.ವರ್ಷಕ್ಕೊಂದರಿ ಇನ್ನೂರು ಪುಟದ ವಿಶೇಷಾಂಕವನ್ನೂ ಬಿಡುಗಡೆ ಮಾಡಿಗೊಂಡಿತ್ತಿದ್ದವು. ಇದರಲ್ಲಿ ನಾಡಿನ ಹೆಸರಾಂತ ಸಾಹಿತಿಗಳ ಬರಹಂಗೊ ಇರ್ತಿತ್ತು. ರಾಮಚಂದ್ರ ದೇವ ಹೇಳುವ ಪ್ರಕಾರ  ನಾನು ನೋಡಿದ ಮಾರ್ಚ್ 1951 ಮತ್ತು ಮಾರ್ಚ್ 1952ರ ಎರಡು ಸಂಚಿಕೆಗಳಲ್ಲಿ ವಿ.ಜಿ.ಭಟ್ಟ,ಶಿವರಾಮ ಕಾರಂತ,ಗೋವಿಂದ ಪೈ,ಕಯ್ಯಾರ ಕಿಞ್ಞಣ್ಣ ರೈ,ಆನಂದಕಂದ,ಸೇಡಿಯಾಪು ಕೃಷ್ಣ ಭಟ್ಟ, ಕಡವ ಶಂಭು ಶರ್ಮ,ಗೋಪಾಲಕೃಷ್ಣ ಅಡಿಗ, ಮ.ಗೋಪಾಲಕೃಷ್ನರಾಯರು ಮೊದಲಾದ ಗಣ್ಯರ ಬರಹಗಳಿವೆ. ಆಗ ರಾಮಚಂದ್ರರಿಂಗೆ ಬರೇ 18-19ರ ಸಣ್ಣ ಪ್ರಾಯ ಹೇಳ್ವದು ಗಮನುಸೆಕ್ಕಾದ್ದು.! ಈ ಹಸ್ತ ಪತ್ರಿಕೆಯ ಪ್ರಸಾರ ಕಬಕ ಮತ್ತದರ ಆಸುಪಾಸಿಲಿ ಮಾಂತ್ರ ಇತ್ತಿದ್ದು.ಕೆಲವೇ ಪ್ರತಿಗಳ ಮಾಡಿ ಕೈಂದ ಕೈಗೆ ಪಗರಿಸಿಗೊಂಡಿತ್ತಿದ್ದದು.ಜನತಾ ವಾಚನಾಲಯಲ್ಲಿಯೂ ಓದುಲೆ ಸಿಕ್ಕಿಗೊಂಡಿತ್ತಿದ್ದು.ಕಬಕಲ್ಲಿ ಓದುಗರ ಸಂಖ್ಯೆ ಸಣ್ಣಕ್ಕಿದ್ದರೂ,ಅವಕ್ಕೆ ದೇಶ-ವಿದೇಶದ ಶುದ್ದಿಯ ಕೊಡುದು ರಾಮಚಂದ್ರರ ಧ್ಯೇಯ ಆಗಿತ್ತು.ಹಾಂಗಾಗಿ ಪಾಂಚಜನ್ಯಲ್ಲಿ ಕಬಕ, ಪುತ್ತೂರು ಅಥವಾ ನೆರೆಕರೆ ಊರಿನ ವಿಶಯ ಇತ್ತಿಲೆ, ಎಲ್ಲ ರಾಜ್ಯ ಮಟ್ಟದ, ದೇಶ- ವಿದೇಶದ ಶುದ್ದಿಗಳೇ ಇತ್ತಿದ್ದದು.

ವೃತ್ತಿ ಜೀವನ

1949ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸು ಮಾಡಿಗೊಂಡವು. ಪರೀಕ್ಷೆಯ ಫಲಿತಾಂಶ ಬಪ್ಪಲ್ಲಿವರೆಗಿನ ಸಮಯಲ್ಲಿ ಬೆರಳಚ್ಚು ಕಲ್ತವು.ಕಬಕ ಪೋಸ್ಟ್ ಆಫೀಸಿಲಿ ಪೋಸ್ಟ್ ಮಾಸ್ಟ್ರಾಗಿ ರಜಾ ಸಮಯ ಕೆಲಸ ಮಾಡಿದವು. 1950ರಲ್ಲಿ ಪುತ್ತೂರು ತಾಲೂಕು ಆಫೀಸಿಲಿ ಟೈಪಿಸ್ಟ್ ಆಗಿಯೂ ಕೆಲಸ ಮಾಡಿದವು.ಅಲ್ಲಿಯೂ ತೃಪ್ತಿ ಸಿಕ್ಕದ್ದೆ, ಕಲ್ಲಡ್ಕದ ಹತ್ತರೆ ಬೋಳಂತೂರು ಏಕೋಪಾಧ್ಯಾಯ ಶಾಲೆಲಿ ಬದಲಿ ಮಾಸ್ಟ್ರಾಗಿ ಕೆಲಸಕ್ಕೆ ಸೇರಿದವು.ಇವರ ಕುಟುಂಬಕ್ಕೆ ಇವರ ಸಂಪಾದನೆಯ ಅನಿವಾರ್ಯತೆ ಇಲ್ಲದ್ದರೂ,ತನ್ನ ಕಾಲ ಮೇಲೆ ತಾನು ನಿಲ್ಲೆಕ್ಕು ಹೇಳ್ತ ಉದ್ದೇಶಂದ ಸುಮಾರು ಎರಡು ವರ್ಷ ಹೀಂಗೆ ಸಣ್ಣಪುಟ್ಟ ಕೆಲಸ ಮಾಡಿಗೊಂಡು ಇತ್ತಿದ್ದವು.ಒಟ್ಟೊಟ್ಟಿಂಗೆ ಸಾಹಿತ್ಯಾಭ್ಯಾಸ,ಬರವಣಿಗೆ,ಅಲ್ಲದ್ದೆ ಪಾಂಚಜನ್ಯ ಪ್ರಕಟಣೆಯ ಕೆಲಸ ನಿರಂತರ ನಡೆಶಿಗೊಂದು ಬಂದವು.

1951ರಲ್ಲಿ ಕೊಡೆಯಾಲದ ನವಭಾರತ’ದಿನಪತ್ರಿಕೆಲಿ ಟ್ರೈನಿ ಉಪಸಂಪಾದಕ ಕೆಲಸ ಸಿಕ್ಕಿತ್ತು.ಅಲ್ಲಿ ರಾಮಚಂದ್ರರು ವರದಿಗಾರನಾಗಿಯೂ ಕೆಲಸ ಮಾಡೆಕ್ಕಾಗಿ ಬಂತು.ತಾನು ಇಷ್ಟಪಟ್ಟು ಸೇರಿದ ಕೆಲಸವಾದ ಕಾರಣ ಪೂರ್ತಿ ತನ್ಮಯತೆಂದ ದಿನಕ್ಕೆ 14ರಿಂದ 16 ಘಂಟೆ ಕೆಲಸ ಮಾಡಿದವು.ಅಲ್ಲಿ ಅವಕ್ಕೆ ಅನುಭವಿ ಪತ್ರಕರ್ತರಾದ ಕೃಷ್ಣರಾವ್,ಎಂ.ವಿ.ಹೆಗ್ಡೆ,ಮನಮೋಹನ ಕಾಮತ್,ವಿ.ಬಿ.ಹೊಸಮನೆ ಮುಂತಾದವರ ಸಹವಾಸ ಭಾಗ್ಯವೂ ಸಿಕ್ಕಿತ್ತು.ಆದರೆ ಅಲ್ಲಿ ಅವರ ಬರವಣಿಗೆ ಮಾಂತ್ರ ಹಿಂದೆ ಬಿದ್ದತ್ತು.ಆದರೂ,ನವಭಾರತಲ್ಲಿ ವಿಮರ್ಶೆಗಾಗಿ ಬಪ್ಪ ಪುಸ್ತಕಂಗಳ ಓದಿ ವಿಮರ್ಶೆ ಬರವ ಕೆಲಸವ ರಾಮಚಂದ್ರರೆ ಮಾಡಿಗೊಂಡಿತ್ತಿದ್ದವು. ಕೆಲವು ಸರ್ತಿ ಚುಟುಕು-ಚಟಾಕಿಗಳನ್ನೂ ಬರದು ತುಂಬುಸಿಗೊಂಡಿತ್ತಿದ್ದವು.ಇನ್ನೊಬ್ಬ ಹೆಸರಾಂತ ಪತ್ರಿಕೋದ್ಯಮಿ ಶ್ರೀ ಬಾಲಕೃಷ್ಣ ಕುಳಮರ್ವರ ಪರಿಚಯ,ಸ್ನೇಹಾಚಾರವೂ ದಕ್ಕಿತ್ತು.ಒಟ್ಟಾರೆ ನವಭಾರತಲ್ಲಿ ಇತ್ತಿದ್ದ ಎರಡು ವರ್ಷ (1951-52) ರಾಮಚಂದ್ರರ ಸಾಹಿತ್ಯ ರಚನೆ ಸಂಪೂರ್ಣ ನಿಂದಿದು ಹೇಳುವಷ್ಟರ ಮಟ್ಟಿಂಗೆ ಕಮ್ಮಿ ಆಗಿತ್ತು. ಇದೆ ಸಮಯಲ್ಲಿ ರಾಮಚಂದ್ರರ ಆರೋಗ್ಯ ಕ್ಷೀಣ ಆಗಿಗೊಂಡು ಬಂತು. ಮದಲಾಣ ಸಣ್ಣ ಶರೀರ ಮತ್ತೂ ಕ್ಷೀಣ ಆತು.ನವಭಾರತವ ಬಿಟ್ಟು ಮನೆಗೆ ಬಂದವು.

ಎರಡು ತಿಂಗಳು ಮನೆಲಿ ಕೂದು ಮದ್ದು ಮನಾರ ಮಾಡಿಯಪ್ಪದ್ದೆ ಆರೋಗ್ಯ ರಜ್ಜ ಸುಧಾರಣೆ ಆತು ಹೇಳಿಯಪ್ಪಗ,ಕಡೆಂಗೊಡ್ಲು ಶಂಕರ ಭಟ್ರ ರಾಷ್ಟ್ರಮತಲ್ಲಿ ಉಪಸಂಪಾದಕ ಹುದ್ದೆ ಸಿಕ್ಕುತ್ತು.ವೇಣುಗೋಪಾಲ ಕಾಸರಗೋಡು ಬರದ ಹಾಂಗೆ – ರಾಷ್ಟಮತವನ್ನು ಒಂದು ಅನುಕರಣೀಯ ವಾರಪತ್ರಿಕೆಯಾಗಿ ರೂಪಿಸುವಲ್ಲಿ ಕಡೆಂಗೊಡ್ಲು ಅವರ ಪಾತ್ರ ಎಷ್ಟಿತ್ತೋ ಅಷ್ಟೇ ರಾಮಚಂದ್ರರದೂ ಇತ್ತು. ಇವರೇ ಆರಂಭಿಸಿದ ‘ವಾರದ ವ್ಯಕ್ತಿ’ಎಂಬ ಶಿರ್ಷಿಕೆ ರಾಷ್ಟ್ರಮತದಲ್ಲಿ ಬಹಳ ಜನಪ್ರಿಯವಾಗಿತ್ತು.ಇಲ್ಲಿ ರಾಮಚಂದ್ರರ ಸಾಹಿತ್ಯ ಕೃಷಿಯೂ ಬೆಳದತ್ತು.ದೇಹಾರೋಗ್ಯ ಸೊರಗಿಗೊಂಡು ಬಂದರೂ,ಮನಸ್ಸಿಂಗೆ ಗೆಲುವಿದ್ದತ್ತು.ಆದರೂ,ಅವರ ಅನಾರೋಗ್ಯ ದಿನಂದ ದಿನಕ್ಕೆ ಏರಿಗೊಂಡೇ ಹೋತು. ಗುಟ್ಟಿಲಿ ಅಮೂಲಾಗ್ರ ದೇಹ ಪರೀಕ್ಷೆ ಮಾಡಿಸಿಗೊಂಡು ಕ್ಷಯ ಅಲ್ಲ ಹೇಳಿ ನಿಘಂಟು ಮಾಡಿಗೊಂಡು,ಕರುಳು ಸಂಬಂಧಿ ಯೇವುದೋ ಭೀಕರ ವ್ಯಾಧಿ ಹೇಳಿ ಅವಕ್ಕೆ ಗೊಂತಾತು.1954ರಲ್ಲಿ ಇದು ಉಲ್ಬಣಾವಸ್ತೆಗೆ ತಿರುಗಿಯಪ್ಪಗ ತಾನು ಹೆಚ್ಚು ಸಮಯ ಬದಿಕುಲಿಲ್ಲೆ ಹೇಳುದರ ತಿಳ್ಕೊಂಡವಡ. ಸಾವಿನ ಮುನ್ನರಿವು ಇತ್ತಿದ್ದರೂ ಮನಸ್ಸು ಹೆಚ್ಚು ಹೆಚ್ಚು ಕ್ರಿಯಾಶೀಲವಾಗಿತ್ತು ಹೇಳುದು ಅವು ಅಕೇರಿಲಿ ರಚಿಸಿದ ಕಾವ್ಯಂಗಳಲ್ಲಿ ವ್ಯಕ್ತವಾಯಿದು. 1954ರ ಆಗೋಸ್ತಿಲಿ ಕಲ್ಮಡ್ಕದ ಸಂಗಮ ಸಾಹಿತ್ಯ ಮಾಲೆಯವು ಇವರ ಹತ್ತು ಕತೆಗಳ ಸಂಕಲಿಸಿ”ಚಿಕಿತ್ಸೆಯ ಹುಚ್ಚು ಮತ್ತು ಇತರ ಕತೆಗಳು” ಹೆಸರಿಲಿ ಪ್ರಕಟಿಸಿದವು.ತನ್ನ ಶುರುವಾಣ ಪ್ರಕಟಣೆಗೆ “ಎರಡು ಮಾತು” ಹೇಳಿಗೊಂಡು ಇದರಲ್ಲಿರುವ ಕೆಲವು ಕತೆಗಳು ಕೆಲವರಿಗಾದರೂ ರುಚಿಸಿದರೆ ಈ ಕ್ಷೇತ್ರದಲ್ಲಿ ನಾನು ಮುಂದುವರಿಯಲು ನನಗೆ ಪ್ರೋತ್ಸಾಹ ಸಿಕ್ಕಿದಂತಾಗುವುದು ಎಂದಿಷ್ಟೇ ನಾನು ಹೇಳಲಿಚ್ಚಿಸುತ್ತೇನೆ.ಕತೆಗಳ ಕುರಿತು ಇದಕ್ಕಿಂತ ಹೆಚ್ಚು ನಾನೇನು ಹೇಳಲಾರೆ ಹೇಳಿ ಬರದ್ದವು.ಸಾವಿನ ದವಡೆಲಿದ್ದು ಯಾತನೆಯ ಅನುಭವಿಸಿಗೊಂಡಿದ್ದರೂ ರಾಮಚಂದ್ರರು ಆಶಾವಾದಿಗಳಾಗಿತ್ತಿದ್ದವು ಹೇಳ್ವದು ಸ್ಪಷ್ಟ.

ರಾಮಚಂದ್ರರಿಂಗೆ ಅಂಟಿದ ಉದರ ರೋಗ ಗುಣ ಆಗದ್ದಷ್ಟು ಬೆಳದು ಕರುಳು ನಿಷ್ರಿಯ ಆಗಿ ಯಾವುದನ್ನೂ ಕರಗಿಸಿಗೊಂಬ ಶಕ್ತಿಯೇ ಇಲ್ಲದ್ದ ಹಾಂಗಾತು.ತೆಕ್ಕೊಂಡ ಆಹಾರ ಹಾಂಗೇ ವಿಸರ್ಜನೆ ಆಯ್ಕೊಂಡಿದ್ದತ್ತು.ತಮ್ಮ ಬದುಕಿನ ಅಕೇರಿಯಾಣ ದಿನಂಗಳಲ್ಲಿ ಮನೋಸ್ತಿಮಿತವನ್ನೂ ಕಳಕ್ಕೊಂಡವಡ. ಒಂದು ವಾರ ಪ್ರಜ್ಞೆ ಇಲ್ಲದ್ದೆ ಹಾಸಿಗೆಲಿ ಮನುಗಿದ್ದವಡ.

10-1-1955 ರ ಸೋಮವಾರ ಉದಿಯಪ್ಪಗ ರಾಮಚಂದ್ರರು ಕೊನೆಯುಸಿರೆಳದವು.

ಅಕಾಲಲ್ಲಿ ವಿದಾಯ ಹಾಡಿದ ಕವಿ

ಮಾರಕವಾದ ಕರುಳು ಬೇನೆಂದ ಬಳಲಿ,ಅದರಿಂದಲೇ ಅಕಾಲಲ್ಲಿ ಮರಣ ಹೊಂದಿದ ರಾಮಚಂದ್ರರು,ಸಾವಿನ ಮುನ್ನರಿವಿದ್ದರೂ ವಿಚಲಿತರಾಗದ್ದೆ ನಿರ್ಲಿಪ್ತರಾಗಿ ಸ್ವೀಕರಿಸಿ ಆ ಅನುಭವವನ್ನೇ ಕಾವ್ಯವನ್ನಾಗಿಸಿದವು.

ಅಡಿಗರು ಹೇಳಿದ ಹಾಂಗೆ – ಅನುಭವಕ್ಕೆ ತಕ್ಕ ಪ್ರತಿರೂಪವನ್ನು ಭಾಷೆಯಲ್ಲಿ ಪ್ರತಿಮೆಗಳ ಮೂಲಕ ಸಿದ್ಧಗೊಳಿಸುವ ಕವಿ

ಅವರ ಅಕೇರಿಯಾಣ ಕವನಯಾರಿಲ್ಲಿಗೆ ಬಂದರು ಕಳೆದಿರುಳು” ಈ ನಿಟ್ಟಿಲಿ ಅತ್ಯಂತ ಸಫಲವಾದ ಕವನ.

ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು
ನೆನೆದು ನೆನೆದು ತನು ಪುಳಕಗೊಳ್ಳುತಿದೆ
ನುಡಿವೆನೆ ದನಿ ನಡುಗುತಿದೆ

ಸ್ಮೃತಿ ವಿಸ್ಮೃತಿಗಳ ಕಂಬನಿ ಮಾಲೆ
ಎಲ್ಲೆಲ್ಲೂ ತೂಗುತಿದೆ
ಕಳೆದಿರುಳಿನ ಬೆಳದಿಂಗಳ ಮರೆಯಲಿ
ಏನೂ ಅರಿಯದ ಮುಗ್ಧೆಯ ಕಿವಿಯಲಿ

ಯಾರೇನನು ಪಿಸು ನುಡಿದರು ಹೇಳು
ಏ ಗಾಳಿ,
ಆ ಕತೆಯನೊರೆದು ಮುಂದಕೆ ತೆರಳು……

ಅಡಿಗರು ಇದರ ದೀರ್ಘವಾಗಿ ವಿಶ್ಲೇಷಿಸಿಗೊಂಡು – ಈ ಕವನ ಸುಕುಮಾರ ಮತ್ತು ಆವಿದ್ಧಗಳ ಮಧುರಪಾಕವಾಗಿರುವುದರಿಂದ ಇಲ್ಲಿನ ಸಂಕೀರ್ಣಾನುಭವ ಗದ್ಯಾನುವಾದದ ಚೌಕಟ್ಟಿಗೆ ಸಿಕ್ಕುತಕ್ಕದಲ್ಲ……ಇಲ್ಲಿನ ಅನುಭವ ಮಧುರ ಹೇಗೋ ಹಾಗೆ ಕಟು;ಸುಕುಮಾರ ಹೇಗೋ ಹಾಗೆ ಭೀಕರ.

ಕವನದ ಅಕೇರಿ ನೋಡಿ –

ಯಾರೂ ಕಾಣದ ಆ ಮರೆಯೊಳಗೆ
ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿ ಇನ್ನೂ ಗುಣು-
ಗುಣಿಸುವ ಮಾಯೆಯಿದೆಂತದು ಹೇಳು,
ಏ ಗಾಳಿ,
ಆ ಕತೆಯನೊರೆದು ಮೂಂದಕೆ ತೆರಳು.

ರಾಮಚಂದ್ರರ ಸಣ್ಣಕತೆಗಳ ಬಗ್ಗೆ ಡಾ.ರಾಮಚಂದ್ರ ದೇವರ ವಿಶ್ಲೇಷಣೆ ಗಮನಾರ್ಹ. – ಈ ಕತೆಗಳು ಅವರ ಸಮವಯಸ್ಕ ಲೇಖಕರ ಕತೆಗಳಿಗಿಂತ ಮೇಲು ಮಟ್ಟದಲ್ಲಿವೆ.೧೯೫೪ರ ಆಸುಪಾಸಿನಲ್ಲಿ ಯು.ಆರ್.ಅನಂತಮೂರ್ತಿ,ರಾಜಲಕ್ಷ್ಮಿ ಎನ್.ರಾವ್,ರಾಮಚಂದ್ರ ಶರ್ಮ,ಕೆ. ಸದಾಶಿವ ಮೊದಲಾದವರು ಕತಾಸಂಗ್ರಹಗಳನ್ನು ಪ್ರಕಟಿಸಿದರು.ಇವರೆಲ್ಲರ ಮೊದಲ ಕತಾಸಂಗ್ರಹಗಳು ಅನಂತರದ ಬೆಳವಣಿಗೆಯ ದೃಷ್ಟಿಯಿಂದ ಮುಖ್ಯವಾಗಿವೆ.ಆದರೆ ರಾಮಚಂದ್ರ ಮೊದಲ ಸಂಗ್ರಹದಲ್ಲೇ ಬೆಳೆದಿದ್ದರು……

ರಾಮಚಂದ್ರರ ಮರಣಾ ನಂತ್ರ, 1957ರಲ್ಲಿ ಅವರ ಅಣ್ಣ ಶ್ರೀ ಶಂಕರ ಜೋಯ್ಸರು ಕೆದಿಲಲ್ಲಿ ರಾಮಚಂದ್ರ ಸ್ಮಾರಕ ಪುಸ್ತಕ ಭಂಡಾರವ ಸ್ಥಾಪಿಸಿ ಅವರ ಸಂಗ್ರಹಲ್ಲಿತ್ತಿದ್ದ 500ಪುಸ್ತಕಂಗಳೊಟ್ಟಿಂಗೆ ಮತ್ತೂ ಸಾವಿರದಷ್ಟು ಸೇರಿಸಿ, ಸಾರ್ವಜನಿಕರಿಂಗೆ ಓದುವ ಅನುಕೂಲ ಒದಗಿಸಿಕೊಟ್ಟು ಸುಮಾರು 32 ವರ್ಷ ನಡೆಶಿದವು.ಮುಂದೆ ಇದು ವಿವೇಕಾನಂದ ಕೊಲೇಜಿಂಗೆ ಹಸ್ತಾಂತರ ಆತು. ರಾಮಚಂದ್ರರ ತಮ್ಮ ಶ್ರೀ ಕೆ. ಗೋವಿಂದ ಜೋಯಿಸರು ಅವರ ಎಲ್ಲ ಹಸ್ತಪ್ರತಿ ಕೃತಿಗಳ ಸಂರಕ್ಷಿಸಿ ‘ವಿದಾಯ’ ಕವನ ಸಂಕಲನವ ಪ್ರಕಟಿಸಿದವು.

ತಮ್ಮ ಕತೆ,ಕವನಂಗಳ ಮೂಲಕ ಸಾರಸ್ವತ ಲೋಕಲ್ಲಿ ಶಾಶ್ವತವಾದ ಮುದ್ರೆ ಒತ್ತಿದ ಯರ್ಮುಂಜ ರಾಮಚಂದ್ರರ ಹೆಸರೂ ಶಾಶ್ವತವಾಗಿ ಎಲ್ಲರ ನೆಂಪಿಲಿ ಒಳಿಯಲಿ,ಒಳಿಯೆಕ್ಕು ಹೇಳ್ತ ಆಶಯದೊಟ್ಟಿಂಗೆ ಅವರ ಸಾಧನೆಗೊ ನಮ್ಮ ತರುಣ ಲೇಖಕರಿಂಗೆ ಸ್ಪೂರ್ತಿ ಕೊಡಲಿ ಹೇಳಿ ಹಾರೈಸುತ್ತೆ.

~~~*~~~

4 thoughts on “ಮುಗುಟು ಅರಳುವ ಮದಲೆ ಮುರುಟಿ ಹೋದ ಪ್ರತಿಭೆ – ಕವಿ ಯರ್ಮುಂಜ ರಾಮಚಂದ್ರ

  1. ಯರ್ಮುಂಜ ರಾಮಚಂದ್ರರ ಪರಿಚಯ ಕೊಟ್ಟದು ಲಾಯ್ಕ ಆಯಿದು.ಪ್ರತಿಭೆ ಕಾಲನ ಕೈಗೆ ಸಿಕ್ಕಿ ಮುರುಟಿಹೋತು.

  2. ಯರ್ಮುಂಜ ಹೇಳಿರೆ ನೆಂಪಪ್ಪದು ಪಂಚಾಂಗ ಒಂದೇ. ಅದೇ ಮನೆತನಲ್ಲಿ ಸಾಹಿತ್ಯ ಪ್ರತಿಭೆ ಇತ್ತಿದ್ದದು ಈ ಶುದ್ದಿಯ ಮುಖೇನ ಗೊಂತಾತು. ಅಡಿಗರ ಮಾತು ಹೃದಯಸ್ಪರ್ಶಿಯಾಗಿತ್ತು. ತೆ ಕು ಮಾವನ ಪರಿಚಯ ಶೈಲಿಗೆ ನಮೋ ನಮಃ.

  3. Lekhana odi kannilli neeru banthu. Pratibhavantha Sahitiya bagge parichaya kottiddakke dhanyavadango. Innu aparoopada Vyakthigala bagge parichayisi.

  4. ಅಸಾಧಾರಣ ಪ್ರತಿಭೆಯ ಪ್ರಕಟಿಸಿ ಸಣ್ಣ ಪ್ರಾಯಲ್ಲಿಯೇ ದೇವರ ಪಾದ ಸೇರಿದ ಯರ್ಮುಂಜರ ಕುರಿತಾದ ಲೇಖನ ಓದಿದೆ .ಹೀಂಗಿಪ್ಪ ಪ್ರತಿಭಾನ್ವಿತ ವ್ಯಕ್ತಿಗೊ ಕೆಲವರು ಸಣ್ನ ಪ್ರಾಯಲ್ಲಿ ಯೇ ದೈವಾಧೀನರಪ್ಪದಕ್ಕೆ ಎಂತ ಕಾರಣವೋ? ಲೇಖನ ಲಾಯಕ್ಕ ಆಯಿದು . ಕುಮಾರ ಮಾವಂಗೆ ಧನ್ಯವಾದಂಗೊ (ನಿಂಗೊಗೆ’ ಚೆಙಾಯಿ’ ಶಬ್ದ ಎಲ್ಲಿಂದ ಸಿಕ್ಕಿತ್ತು?)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×