Oppanna.com

ಪಂಡಿತೋತ್ತಮ – ಸೇಡಿಯಾಪು ಕೃಷ್ಣ ಭಟ್ಟ

ಬರದೋರು :   ತೆಕ್ಕುಂಜ ಕುಮಾರ ಮಾವ°    on   25/04/2012    10 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

‘ಹೊಸಕನ್ನಡ ಗುರುಪರಂಪರೆಯ’ ವಿಶೇಷ ವೆಗ್ತಿಗಳ ನಮ್ಮ ಬೈಲಿಂಗೆ ಪರಿಚಯಿಸುವ ಕಾರ್ಯವ ಸಾಹಿತ್ಯಾಸಕ್ತರಾದ ತೆಕ್ಕುಂಜೆ ಕುಮಾರಮಾವ°’ ಮಾಡ್ತಾ ಇದ್ದವು.
ನಾಡಭಾಷೆ ಕನ್ನಡದ ಶಾಸ್ತ್ರೀಯ ಬೆಳವಣಿಗೆಗೆ ಕಾರಣರಾದ ನಮ್ಮ ನಾಡಿನ ಗುರುಗಳ ಬಗ್ಗೆ ತಿಳ್ಕೊಂಬ.

ಕಳುದವಾರ: ರಾಷ್ಟ್ರಕವಿ – ಮಂಜೇಶ್ವರ ಗೋವಿಂದ ಪೈಗಳ ಬಗಗೆ (ಸಂಕೊಲೆ)

ಪಂಡಿತೋತ್ತಮ – ಸೇಡಿಯಾಪು ಕೃಷ್ಣ ಭಟ್ಟ

ಸೇಡಿಯಾಪು ಕೃಷ್ಣ ಭಟ್ಟರದ್ದು ಪ್ರಕಾಂಡ ಪಾಂಡಿತ್ಯ, ಅಷ್ಟೇ ನಿರ್ಮಲ ಚಾರಿತ್ಯ.
ಸಂಖ್ಯಾದೃಷ್ಟಿಲಿ ನೋಡಿರೆ ಅವು ಬರದ ಗ್ರಂಥಂಗೊ ತುಂಬ ಕಮ್ಮಿ, ಆದರೆ ಬರದ್ದೆಲ್ಲವೂ  ಅಮೂಲ್ಯ.
ಛಂದಸ್ಸು, ವ್ಯಾಕರಣ, ವಿಮರ್ಶೆ, ಸಂಶೋಧನೆ, ಕಾವ್ಯ, ಕಥೆ – ಹೀಂಗೆ ಸಾರಸ್ವತ ಲೋಕದ  ಹೆಚ್ಚಿನ ಪ್ರಕಾರಂಗಳಲ್ಲಿ ಅವು ಮಾಡಿದ ಸಾಹಿತ್ಯ ಕೃಷಿ ತುಂಬಾ ಸತ್ವಯುತವಾಗಿಪ್ಪದು.
ಅವೆಲ್ಲವೂ, ಸ್ವತಃ  ಹೇಳಿಗೊಂಡ ಹಾಂಗೆ “ಕಣ್ಗೆ ಮಯ್ ಮೆಚ್ಚುವಂದದಿ ತಿದ್ದಿ ತೀಡಿ” ಬರದ ಬರವಣಿಗೆ.

ಸೇಡಿಯಾಪು ತಮ್ಮ ಸಾಹಿತ್ಯ ಕೃಷಿಯ ಬಗ್ಗೆ ಬರದ ಸೂತ್ರ ರೂಪದ ಷಡ್ಪದಿ ಇಲ್ಲಿ ಉದ್ದರಣೆಗೆ ಯೋಗ್ಯವಾಗಿದ್ದು – :

ಹೆಚ್ಚ ಬರೆದವನಲ್ಲ
ನಿಚ್ಚ ಬರೆದವನಲ್ಲ
ಮೆಚ್ಚಿಸಲು ಬರೆಯುವಭ್ಯಾಸವಿಲ್ಲ |
ಇಚ್ಚೆಗೆದೆಯೊಪ್ಪಿ ಬಗೆ
ಬಿಚ್ಚಿದರೆ,ಕಣ್ಗೆ ಮಯ್
ಎಚ್ಚುವಂದದಿ ತಿದ್ದಿ ತೀಡಿ ಬರೆವೆ ||

‘ಪಂಡಿತರೆಂದರೆ ಹೀಗಿರುತ್ತಾರೆ’ಎಂದು ನಾನು ಸಂತೋಷದಿಂದ ಹೆಸರೆತ್ತಿ ಹೇಳಬಹುದಾದವರು – ಸೇಡಿಯಾಪು,

– ಇದು ಶಿವರಾಮ ಕಾರಂತರ ಅಭಿಮಾನದ ನುಡಿಗೊ.

ಅವರ ವಿಚಾರಂಗೊ ಕನ್ನಡ ಛಂದಸ್ಸಿನ ಕ್ಷೇತ್ರಲ್ಲಿ ಮಾಂತ್ರ ಅಲ್ಲ, ಇಡೀ ಭಾರತೀಯ ಛಂದಃಶಾಸ್ತ್ರಕ್ಕೆ ಹೊಸ ದಿಕ್ಕುಗಳನ್ನೇ ತೋರುಸಿಕೊಡುವಷ್ಟು ಉನ್ನತಮಟ್ಟದ್ದು – ಹೇಳಿ, ಹಲವು ಭಾರತೀಯ ಭಾಷೆಗಳ ಜ್ಞಾನ ಇಪ್ಪ ಶತಾವಧಾನಿ ಗಣೇಶರು ಅಭಿಪ್ರಾಯ ಪಟ್ಟಿದವು.
ಪಂಡಿತ ಪರಮೇಷ್ಠಿ” “ಛಂದೊವಿದ” ಮುಂತಾಗಿ ಹೊಗಳುವ ಗಣೇಶರು, ಸೇಡಿಯಾಪು ಅವರ ಸಾಧನೆಗಳ ಒಂದೇ ವಾಕ್ಯಲ್ಲಿ ವಿವರಿಸಿದ ರೀತಿಲಿ ಅತಿಶಯೋಕ್ತಿ ಇಲ್ಲೆ.

“ದಿಟವಾಗಿ ಸೇಡಿಯಾಪು ಅವರ ಸ್ಥಾನವು ಆಧುನಿಕ ಛಂದೋವಿದರಾರೊಡನೆಯೂ ಇಲ್ಲ;ಅದೇನಿದ್ದರೂ ಪಿಂಗಳ,ಭರತಾದಿ ಮಹರ್ಷಿಗಳೊಡನೆ ಮಾತ್ರ ಎಂದರೆ ಸರ್ವಥಾ ಅಭಿಮಾನದ ಅತ್ಯುಕ್ತಿಯಾಗದು”

ಜನನ – ಬಾಲ್ಯ :

ಪುತ್ತೂರು ತಾಲೂಕಿನ ಒಂದು ಸಣ್ಣ ಹಳ್ಳಿ ಸೇಡಿಯಾಪು. ಸುಮಾರು ಮುನ್ನೂರು ವರ್ಷಂಗಳ ಮದಲು ಅಂಕೋಲದ ಅಚವೆ ಹೇಳ್ತಲ್ಲಿಂದ ವಲಸೆ ಬಂದು ನೆಲೆ ನಿಂದ ಕುಟುಂಬದ ಪಂಜಿಗುಡ್ಡೆ ರಾಮ ಭಟ್ಟ, ಮೂಕಾಂಬಿಕೆ ದಂಪತಿಗಳ ಎರಡನೆ ಮಗನಾಗಿ 1902 ಜೂನ್ 8 ರಂದು ಕೃಷ್ಣ ಭಟ್ಟರು ಜನ್ಮ ತಾಳಿದವು.
ಸೇಡಿಯಾಪು ಸ್ಥಳನಾಮವನ್ನೆ ತಮ್ಮ ಹೆಸರಿನೊಟ್ಟಿಂಗೆ ಸೇರ್ಸಿ, ತನ್ನ ಹುಟ್ಟೂರಿಂಗೆ ಹೆಸರು ತಂದವು.
ಮುಂದೆ ರಾಮ ಭಟ್ರು ತಮ್ಮ ಪಾಲಿನ ಆಸ್ತಿಯ ಕೊಟ್ಟು ವಿಟ್ಲದ ಹತ್ತರೆ ‘ನೀರ್ಕಜೆ’ಲಿ ಜಾಗೆ ತೆಗದು ನೆಲೆ ನಿಂದವು. ಆದರೆ ಅನಾರೊಗ್ಯ ಕಾರಣಂದ ರಾಮ ಭಟ್ರು ಬೇಗ ಕಣ್ಮುಚ್ಚಿದವು. ಆ ಸಮಯಕ್ಕೆ ಕೃಷ್ನ ಭಟ್ರಿಂಗೆ ಐದರ ಎಳೆ ಪ್ರಾಯ.
ಅಜ್ಜನ ಮನೆಲಿ ಆಶ್ರಯ ಸಿಕ್ಕಿದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆ ಆಯಿದಿಲ್ಲೆ. ಬಾಲ್ಯಾವಸ್ಥೆಂದಲೆ ಅವರದ್ದು ಅತಿ ದುರ್ಬಲ ದೇಹ ಪ್ರಕೃತಿ ಆಗಿತ್ತು, ಹಾಂಗಾಗಿ ಹತ್ತು ಹಲವು ಕಾಯಿಲೆ ಕಸಾಲೆಗೊ ಅವರ ಪೀಡುಸಿದವು.
(ಅವರ ತೊಂಬತ್ತೈದು ವರ್ಷಂಗಳ ದೀರ್ಘ ಜೀವನಲ್ಲಿ ಅರೆವಾಶಿ ರುಗ್ಣಶಯ್ಯೆಲಿಯೇ ಕಳೆಯೆಕ್ಕಾಗಿ ಬಂತು) ಆದರೆ ಅವರ ಗ್ರಹಣ-ಧಾರಣ ಮತ್ತೆ ಸ್ಮರಣ ಶಕ್ತಿ ಬಾಲ್ಯಂದಲೆ ಅಸಾಧಾರಣವಾಗಿತ್ತಿದ್ದು.
ಇಂಥಾ ವಿಶಿಷ್ಟ ಗುಣಂಗೊ ಇತ್ತಿದ್ದ ಕಾರಣಂದಲಾಗಿಯೇ ಅವು ಸ್ವಾಧ್ಯಾಯಂದ ಹೆಚ್ಚೆಚ್ಚು ಜ್ಞಾನಾರ್ಜನೆ ಮಾಡಿಗೊಂಡವು. ಕೈಗೆ ಸಿಕ್ಕಿದ ಪುಸ್ತಕಂಗಳ,ಅದು ಕನ್ನಡ,ಸಂಸ್ಕೃತ, ಹಿಂದಿ ಅಥವಾ ಇಂಗ್ಲೀಷ್ ಆಗಿರಲಿ, ಓದಿ ಮನನ ಮಾಡ್ಯೊಂಡಿರ್ತ್ತಿದ್ದವು.
ಶುರುವಾಣ ಒಂದುವರೆ ವರ್ಷ ಅಜ್ಜನ ಮನೆಲಿ, ಮತ್ತೆ ಅಲ್ಲಿ ಹತ್ತರಾಣ ಶಾಲೆಲಿ ಕಲ್ತವು. ಒಂದರಿ ಚಿಕ್ಕಯ್ಯನ ಮನೆ ಸೇಡಿಯಾಪಿಂಗೆ ಹೋಗಿತ್ತಿದ್ದ ಸಮಯಲ್ಲಿ ಮಾಳಿಗೆಲಿ ಸಿಕ್ಕಿದ ನೂರಾರು ಹಳೆ ಪುಸ್ತಕಂಗಳ ಓದಿಗೊಂಡಿತ್ತಿದ್ದ ಮಾಣಿಯ ಉತ್ಸಾಹವ ಕಂಡು, ಅವರ ಚಿಕ್ಕಪ್ಪ ಮುಂದಾಣ ವಿದ್ಯಾಭ್ಯಾಸಕ್ಕೆ ಅವರಲ್ಲಿಯೇ ನಿಲ್ಲುಸಿಗೊಂಡವು.
ಪುತ್ತೂರು, ಮಂಗಳೂರಿಲಿ ವಿದ್ಯಾಭ್ಯಾಸವ ಒಂಬತ್ತನೆ ತರಗತಿವರೆಗೆ ಕಲ್ತವು. ಅದೇ ಸಮಯಲ್ಲಿ ಎಲಿ ಕಚ್ಚಿದ ಕಾರಣಂದಾಗಿ ನಂಜು ಏರಿ, ವಿದ್ಯಾಭ್ಯಾಸವ ಅರ್ಧಕ್ಕೆ ನಿಲ್ಲುಸಿ ಮನೆಗೆ ವಾಪಾಸು ಬರೆಕ್ಕಾಗಿ ಬಂತು.
ಮನೆಲಿ ಸುಮ್ಮನೆ ಕೂದು ಕಾಲಹರಣ ಮಾಡದ್ದೆ ಅಪ್ಪ, ಅಜ್ಜನ ಹಾದಿಲಿ ಆಯುರ್ವೇದ ವಿದ್ಯೆಯ ಸ್ವಾಧ್ಯಾಯಂದ ಕಲ್ತುಗೊಂಡವು.
ಮರು ವರ್ಷ 1921 ರಲ್ಲಿ, ವಿಟ್ಲದ ಹತ್ತರೆ ಮಜಿ(ವೀರಕಂಬ) ಲಿ ಹೊಸತ್ತಾಗಿ ಶುರುವಾದ ಶಾಲೆಲಿ ಅಧ್ಯಾಪನ ವೃತ್ತಿ ಮಾಡುವ ಅವಕಾಶ ಇವಕ್ಕೆ ಸಿಕ್ಕಿತ್ತು.

ಸೇಡಿಯಾಪು ಕೃಷ್ಣ ಭಟ್ಟ

ವೃತ್ತಿ – ಪ್ರವೃತ್ತಿ.

ಇದೇ ಸಮಯಲ್ಲಿ, 1925 ರಲ್ಲಿ ಚಕ್ರಕೋಡಿ ಮನೆತನದ ಶಾಮ ಶಾಸ್ತ್ರಿಗಳ ಮಗಳು ಶಂಕರಿ ಅಮ್ಮನೊಟ್ಟಿಂಗೆ ಇವರ ವಿವಾಹ ಕಳುದತ್ತು.
ವೀರಕಂಬ ಶಾಲೆ ಮುಂದೆ ಜಿಲ್ಲಾ ಬೋರ್ಡು ಶಾಲೆಯಾಗಿ ಮಾರ್ಪಾಟದ ಮೇಲೆ, ಬೋರ್ಡು ಶಾಲೆಗಳ ಆಗಾಣ ಕಾನೂನಿನ ಪ್ರಕಾರ ಅಧ್ಯಾಪನ ತರಬೇತು ಇಲ್ಲದ್ದ ಕಾರಣಂದ ಸೇಡಿಯಾಪು ಈ ಕೆಲಸವ ಬಿಡೆಕ್ಕಾಗಿ ಬಂತು.
ಜೀವನೋಪಾಯಕ್ಕಾಗಿ  ಮಂಗಳೂರಿಂಗೆ ಬಂದು, ಪರಿಚಯದ ಆಯುರ್ವೇದ ವೈದನೊಟ್ಟಿಂಗೆ ಸೇರಿ, ಆಯುರ್ವೇದ ವೈದ್ಯಶಾಲೆ – “ಸಿದ್ದೌಷಧ ಭವನ” ಶುರು ಮಾಡಿದವು.
ಪಾರಂಪರಿಕವಾಗಿ  ಬಂದದು, ಸ್ವಾಧ್ಯಾಯಂದ ಕಲ್ತದು, ಶೋಧಕ ಬುದ್ಧಿಂದ ತಿಳ್ಕೊಂಡದು – ಈ ಮೂರರ ಸಮ್ಮಿಲನದ ಫಲರೂಪವೇ ಸೇಡಿಯಾಪರಿಂಗೆ ಉನ್ಮಾದ ಕ್ಕೊಂದು ವಿಶಿಷ್ಟ ಮದ್ದಿನ ಕಂಡು ಹಿಡಿವಲೆ ಸಾಧ್ಯ ಆತು.
ಈ ಮದ್ದು ಕೊಟ್ಟು ಎಷ್ಟೊ ಗುಣ ಕಾಣದ್ದ ಬುದ್ದಿಮಾಂದ್ಯ ಖಾಯಿಲೆಗಳ ಗುಣಪಡುಸುಲೆ ಶಖ್ಯರಾದವು. ಒಳ್ಳೆ ಹೆಸರೂ ಬಂತು, ಒಟ್ಟಿಂಗೆ ಸಂಪಾದನೆಯೂ ಆತು.

ಆದರೆ,ಇವರ ಒಟ್ಟಿಂಗೆ ಇತ್ತಿದ್ದ ಪರಿಚಯಸ್ಥ ಇವರ ವೆವಹಾರಿಕ ಸಂಬಂಧವ ಕಡುದ ಕಾರಣ “ಸಿದ್ದೌಷಧ ಭವನ”ವ ಮುಚ್ಚಿ ಮನೆಲಿದ್ದುಗೊಂಡು ವೈದ್ಯಕ ವೃತ್ತಿ ಮುಂದುವರುಸೆಕ್ಕಾಗಿ ಬಂತು.
ಸಂಪಾದನೆ ಇಳಿಮುಖ ಆದ ಕಾರಣ, ಹತ್ತರೆ ಇತ್ತಿದ್ದ ‘ರಾಷ್ಟ್ರಬಂಧು’ಪತ್ರಿಕಾ ಬಳಗವ ಸೇರಿ ಕರಡು ತಿದ್ದುವ ಕೆಲಸ ಮಾಡಿದವು.
ಮದ್ರಾಸು ಸರಕಾರ ನಡೆಶಿಗೊಂಡಿತ್ತಿದ್ದ ವಿದ್ವಾನ್ ಪರೀಕ್ಷೆ ಖಾಸಗಿಯಾಗಿ  ಕಲ್ತು  ಪಾಸು ಮಾಡಿದವು.
1929 ರಲ್ಲಿ ಅಲೋಶಿಯಸ್ ಹೈಸ್ಕೂಲಿಲಿ ಕನ್ನಡ ಪಂಡಿತ ಹುದ್ದೆ ಇವಕ್ಕೆ ಸಿಕ್ಕಿತ್ತು. ಕ್ರಮೇಣ ಮಂಗಳೂರಿಲಿ ಕೃಷ್ಣ ಭಟ್ಟರ ನೆಲೆ ಗಟ್ಟಿ ಆಯ್ಕೊಂಡು ಬಂತು. ಮುಳಿಯ ತಿಮ್ಮಪ್ಪಯ್ಯನವರ ಸಾಮಿಪ್ಯ, ಕಡೆಂಗೊಡ್ಲು ಶಂಕರ ಭಟ್ಟರ ಒಡನಾಟ, ಪಂಜೆ ಮಂಗೇಶ ರಾಯರು, ಮಂಜೇಶ್ವರ ಗೋವಿಂದ ಪೈಗಳ ಪರಿಚಯ ಇತ್ಯಾದಿ ಕಾರಣಂದಲಾಗಿ ಸೇಡಿಯಾಪು ಅವರ ವಿದ್ವತ್  ವಲಯ ವಿಸ್ತಾರವಾಗಿ ಬೆಳದತ್ತು.

ನಿವೃತ್ತಿ:

1921 ರಿಂದ 1950 ರವರೆಗೆ ಎಲೋಶಿಯಸ್ ಹೈಸ್ಕೂಲಿಲಿ ಕನ್ನಡ ಪಂಡಿತರಾಗಿ ನಿಷ್ಟೆಲಿ ಕೆಲಸ ಮಾಡಿದವು.ಆವಾಗಾವಾಗ ಪೀಡುಸಿಗೊಂಡಿತ್ತಿದ್ದ ವಾಯುಬಾಧೆ, ಪಿತ್ತ ಪ್ರಕೋಪಂದ ತುಂಬ ಕಷ್ಟ ಅನುಭವಿಸಿದವು.
ಹುಟ್ಟಿಂದಲೆ ಒಂದು ಕಣ್ಣು ಓರೆ ಇತ್ತಿದ್ದದು, ಅದೂ ಅವರ ಪೀಡುಸುಲೆ ಶುರು ಮಾಡಿತ್ತು. ಮುಕ್ಕಾಲು ಘಂಟೆ ಹೊತ್ತು ನಿಂದೊಂಡು ಪಾಠ ಮಾಡುದು ಕಷ್ಟ ಹೇಳಿಯಪ್ಪದ್ದೆ, ಅಲೋಶಿಯಸ್ ಕೊಲೇಜಿಲಿ ಟ್ಯೂಟರ್ ಆಗಿ (ಪ್ರಾಧ್ಯಾಪಕರ ಕೋಣೆಲಿ ಕೂದೊಂಡೆ ವಿಧ್ಯಾರ್ಥಿಗಳ ಪ್ರಬಂಧ ಇತ್ಯಾದಿ ತಿದ್ದುವ ಕೆಲಸ) ಸೇರಿಗೊಂಡವು.
ಒಂದು ವರ್ಷ ಅಧ್ಯಾಪನವನ್ನೂ ಮಾಡಿದವು. ಆರು ವರ್ಷ ಕೆಲಸ ಮಾಡಿ, ಅದೂ ಕಷ್ಟ ಹೇಳಿ ಅನಿಸಿಯಪ್ಪದ್ದೆ 1957ರಲ್ಲಿ ತಮ್ಮ 55ರ ಪ್ರಾಯಲ್ಲಿ ಸ್ವಯಂ ನಿವೃತ್ತರಾದವು.

ನಮ್ಮ ನಾಡು ಕಂಡ ಮಹಾನ್ ವಿದ್ವಾಂಸರಲ್ಲೊಬ್ಬರಾದ ಕೃಷ್ಣ ಭಟ್ಟರು ಕೊಲೇಜಿನ ಅಧ್ಯಾಪಕರಾಗಿ ನಿವೃತ್ತರಾದರೂ,ಅನಾರೋಗ್ಯದ ಕಾರಣ ಅಲ್ಯಾಣ ಪ್ರೌಢ ವಿದ್ಯಾರ್ಥಿಗೊಕ್ಕೆ ಅವರ ಪಾಂಡಿತ್ಯದ ಪರಿಚಯ ಅಪ್ಪ ಅವಕಾಶ ಸಿಕ್ಕಿದ್ದಿಲೆ.
ಆದರೂ ಅವರ ಪಾಂಡಿತ್ಯವ ಗೌರವಿಸಿ ತಮ್ಮ ಗುರು ಹೇಳಿ ನಂಬಿ ಕೈ ಜೋಡ್ಸುತ್ತ ಜೆನಂಗೊಕ್ಕೆ ಕಮ್ಮಿ ಇಲ್ಲೆ.
ಶ್ರೇಷ್ಟ ವಿದ್ವಾಂಸರೂ,ಅಲೋಶಿಯಸ್ ಕೊಲೇಜಿನ ಕನ್ನಡ ವಿಭಾಗದ ಮುಖ್ಯಸ್ತರೂ ಆಗಿತ್ತಿದ್ದ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಸೇಡಿಯಾಪು ಬಗ್ಗೆ  ಒಂದರಿ ಹೀಂಗೆ ಹೇಳಿತ್ತಿದ್ದವಡ – ಸೇಡಿಯಾಪರು ಕನ್ನಡ ವಿಭಾಗಕ್ಕೆ ಹೆಡ್ ಆಗಿರಲಿಲ್ಲ.ಆದರೆ ನನಗೆ ‘ಹೆಡ್’ನಂತೆಯೇ ಇದ್ದವರು”!

ನಿವೃತ್ತರಾದ ಮೇಲೆ 1964 ರ ವರೆಗೆ ಮಂಗಳೂರಿನ ಬಾಡಿಗೆ ಮನೆಲಿ ವಾಸ ಇತ್ತಿದ್ದ ಸೇಡಿಯಾಪರು,40 ವರ್ಷ ವೈದ್ಯ, ಅಧ್ಯಾಪನ ಮಾಡ್ಯೊಂಡಿತ್ತಿದ್ದ ಮಂಗಳೂರಿನ ಬಿಟ್ಟು ಒಬ್ಬನೆ ಮಗನೊಟ್ಟಿಂಗೆ ನಾಗಪುರಕ್ಕೆ ಹೋದವು.
ಮುಂದೆ 1971 ರಲ್ಲಿ ಮಗ ಜಯರಾಮರಿಂಗೆ ಮಣಿಪಾಲದ ಇಂಜಿನಿಯರಿಂಗ್ ಕೊಲೇಜಿಲಿ ಇಲೆಕ್ಟ್ರೋನಿಕ್ಸ್ ವಿಭಾಗದ ಮುಖ್ಯಸ್ಥನಾಗಿ ಉದ್ಯೋಗ ಸಿಕ್ಕಿದ ಮತ್ತೆ ಮಣಿಪಾಲಲ್ಲಿ  ವಾಸ್ತವ್ಯ ಶುರು ಮಾಡಿದವು.ಇಪ್ಪತ್ತೈದು ವರ್ಷದ ವಾಸ ಅವರ ಸಾಹಿತ್ತಿಕ್ಕ ಜೀವನಲ್ಲಿ ಮಹತ್ತರ ಘಟ್ಟ.
ದಿನಂದ ದಿನಂಕ್ಕೆ ಏರಿಗೊಂಡಿದ್ದ ಅನಾರೋಗ್ಯ,ಹುಟ್ಟಿಂದ ಬಂದ ಓರೆಗಣ್ಣು ಅವಕ್ಕೆ ಕಷ್ಟ ಕೊಟ್ಟತ್ತು. ಓರೆ ಕಣ್ಣಿನ ಪೀಡನೆ ಕಳವಲೆ ಬೇಕಾಗಿ ಅದರ ದೃಷ್ಟಿ ನರವ ತೆಗಶಿದವು.
ಇದ್ದ ಇನ್ನೊಂದು ಕಣ್ಣಿಂಗೆ ಗ್ಲುಕೋಮಾ ಬಂದು 1985 ರಿಂದ ಸಂಪೂರ್ಣವಾಗಿ ದೃಷ್ಟಿಹೀನರಾದವು. ಹತ್ತು ಹಲವು ಖಾಯಿಲೆಗೊ ಸೇಡಿಯಾಪರ ದುರ್ಬಲ ಶರೀರವ  ಹಿಂಡಿ ಹಿಪ್ಪೆ ಮಾಡಿರೂ,ಮನಸ್ಸು ದೃಢವಾಗಿ, ಚಿಂತನಶೀಲತೆ ಕ್ರಮಬದ್ಧವಾಗಿ,ಸ್ಮರಣ ಶಕ್ತಿ ಪ್ರಬಲವಾಗಿತ್ತಿದ್ದು.

ಅವರ ಪ್ರಮುಖ ವಾಙ್ಮಯ ಚಟುವಟಿಕೆಗೊ ಮಣಿಪಾಲಕ್ಕೆ ಬಂದ ಮೇಲೆ, 70 ವರ್ಷ ಪ್ರಾಯ ಆದ ಮತ್ತೆಯೇ ನಡದ್ದದು.!
ಅತಿಶಯ ಪ್ರಸಿದ್ಧಿಯನ್ನೂ,ಉನ್ನತ ಪ್ರಶಸ್ತಿಗಳನ್ನೂ ತಂದು ಕೊಟ್ಟ ಗ್ರಂಥಂಗಳ ಸೇಡಿಯಾಪರು  ದೃಷ್ಟಿಹೀನರಾದ ಮೇಲೆಯೇ ಹೇಳಿ ಬರಶಿದ್ದದು.!

ಕವನ – ಕಥನ ಕಾವ್ಯ:

ಸೇಡಿಯಾಪರಿಂಗೆ ಕಾವ್ಯಾಸಕ್ತಿ ಬಾಲ್ಯಂದಲೇ ಸಹಜವಾಗಿಯೆ ಇದ್ದತ್ತು.ಕನ್ನಡ-ಸಂಸ್ಕೃತ ಕಾವ್ಯಂಗಳ ಓದಿ ಅವುಗಳ ಛ್ಹಂದೋಸ್ವರೂಪವ ಮನನ ಮಾಡ್ಯೊಂಡು, ಛಂದೋಬದ್ಧವಾಗಿ ಕಂದ,ವೃತ್ತ,ಷಡ್ಪದಿಗಳಲ್ಲಿ ಪದ್ಯ ಬರವ ಸಾಮರ್ಥ್ಯ ಇದ್ದತ್ತು.
ಕಳುದ ಶತಮಾನದ ನಲ್ವತ್ತರ ದಶಕಂದಲೇ ವ್ಯಾಕರಣ-ಛ್ಹಂದಶ್ಯಾಸ್ತ್ರಂಗಳಲ್ಲಿ ಉದ್ದಾಮ ಪಂಡಿತರು ಹೇಳಿ ಹೆಸರುವಾಸಿ ಆಗಿತ್ತಿದ್ದ ಸೇಡಿಯಾಪರು ಒಬ್ಬ ಪ್ರತಿಭಾಸಂಪನ್ನ ಕವಿ, ಸರಸ ಕತೆಗಾರ ಹೇಳಿ ಜೆನ ಗುರುತುಸೆಕ್ಕಾರೆ ಮತ್ತೂ ಇಪ್ಪತ್ತು ವರ್ಷ ಬೇಕಾತು.

ಅವು ತಮ್ಮ ಸಾಹಿತ್ಯ ಸೂತ್ರವನ್ನೂ,ಪ್ರತಿಕೂಲ ದೇಹಸ್ಥಿತಿಯನ್ನೂ ಪದ್ಯರೂಪಲ್ಲಿ ನಿರೂಪಿಸಿದ್ದವು.ತಮ್ಮ ಮನಸ್ಥಿತಿ – ದೇಹಸ್ಥಿತಿ ಬಗ್ಗೆ  ಬರದ ಪದ್ಯ ಒಂದು ಹೀಂಗಿದ್ದು:

ಯಾವುದನು ನೋಡಲಿ ?
ಯಾವುದನು ಮಾಡಲಿ ?
ಯಾವುದನು ನಾನೆನಗೆ ಬೇಡೆನ್ನಲಿ ?
ತೆರೆಗೈಗಳಲಿ ಕರೆಯುತಿರುವುದಾಗಮಸಾಗರ
ಮಿರುಮಿರುಗಿ ಮತಿಯ ಚಮಕಿಸುತಿದೆ
ಗವೇಷಣದ ಮಣಿಯಾಗರ
ನೆಳಲ ನೀಳಿಸುತ ಕೋಕಿಲಿಸುತಿದೆ ಬಗೆಯ
ಪಲ್ಲವಿತ ಕವಿತಾಕಾನನ
ಮೈಯ್ಯೊಂದು ನರಳುತಿದೆ,ಮನನೊಂದು ಹೊರಳುತಿದೆ
ಏತರಲಿ ನೆರೆಯಲಿಹುದೋ ಜೀವನ.

ಸೇಡಿಯಾಪರು ಬರದ ಖಂಡ ಕಾವ್ಯದ ಮೂಲಕ  ಅವರ ಕಾವ್ಯಶಕ್ತಿ ಎಷ್ಟು ಹೇಳುದು ಪ್ರಕಟ ಆತು.
ನಾಲ್ಕು ಮನೋಹರ ರೂಪದ ಖಂಡ ಕಾವ್ಯಂಗೊ –
ತರುಣಧಮನಿ’,
ಶ್ವಮೇಧ’,
ಕೃಷ್ನಕುಮಾರಿ’ಮತ್ತೆ
ಪುಣ್ಯಲಹರಿ’.

1927 ರಿಂದ ಬರದ ಭಾವಗೀತೆಗಳನ್ನೂ, ನಾಲ್ಕು ಸಣ್ಣ ಕಾವ್ಯಂಗಳನ್ನೂ ಸೇರಿಸಿ ಪ್ರಕಟಿಸಿದ ‘ಚಂದ್ರಖಂಡ’ ಸಂಕಲನಕ್ಕೆ 1971 ರಲ್ಲಿ ರಾಜ್ಯ ಸಾಹಿತ್ಯ ಪ್ರಶಸ್ತಿ ಸಿಕ್ಕಿತ್ತು.
ಅವರ ‘ಪುಣ್ಯಲಹರಿ’ ವಾಲ್ಮೀಕಿ ರಾಮಾಯಣಲ್ಲಿ ಬಪ್ಪ ಶಬರಿಯ ಬಗ್ಗೆ ಬರದ ಮನೋಹರ ಕೃತಿ.
ಇದು ಅಚ್ಛ ಕನ್ನಡದ ಅತಿ ಹಳೆ ಪ್ರಕಾರದ ಪಿರಿಯಕ್ಕರ ಹೆಸರಿನ ಛಂದೋಬಂಧಲ್ಲಿ  ಬರದ ಕಾವ್ಯ.
‘ಶ್ವಮೇಧ’ ಅಥವಾ’ನಾಯಿಯ ಕತೆ’ ಉತ್ಸಾಹ ಹೆಸರಿನ ಛಂದೊಬಂದಲ್ಲಿಪ್ಪ ರಚನೆ.
ಪುತ್ತೂರಿನ ನರಿಮೊಗರಿಲಿ,ನಾಯಿಗಾಗಿ ಕಟ್ಟಿಸಿದ ದೂಪೆ(ಸ್ತೂಪ,ಸ್ಮಾರಕ)ಯೇ ಈ ಕಥನ ಕಾವ್ಯದ ಎಳೆ.
‘ತರುಣಧಮನಿ’ಗೆ ವಿಜಯನಗರದ ಅಕೇರಿಯಾಣ ದೊರೆ ರಾಮರಾಜನ ಕತೆಯೇ ಮೂಲ.
ಶರ ಷಡ್ಪದಿಯ ಅರು ಪಾದಗಳ ಕುಗ್ಗಿಸಿ ನಾಕು ಪಾದಂಗೊಕ್ಕೆ ಪರಿವರ್ತಿಸಿ ಸರಳ ರೂಪಲ್ಲಿ ಬರದ ಪದ್ಯಂಗೊ ಇದರ ವೈಶಿಷ್ಟ್ಯ.
ಕೃಷ್ನಕುಮಾರಿ ರಾಜಸ್ಥಾನದ ರಜಪೂತ ವನಿತೆ. ಅದರ ತ್ಯಾಗ ಬಲಿದಾನದ ಕತೆಯ ೧೭ ಭಾಮಿನಿಗಳಲ್ಲಿ ಬರದ ಕಾವ್ಯವೇ ‘ಕೃಷ್ಣಕುಮಾರಿ’.

ಇವಲ್ಲದ್ದೆ,ಕೆಲವು ಬಿಡಿ ಕವನಂಗಳನ್ನೂ ಬರದ್ದವು.
‘ಕಾರಸಂಪಗೆ’ ಸೇಡಿಯಾಪರು ಬರದ ಏಕಮಾಂತ್ರ ಪ್ರೇಮಗೀತೆ.ಯುಗಪುರುಷ,ಏನಿದು ಚಿತ್ರ,ಸಿಂಹರವಿ,ವಿಜಯನಗರದ ಧ್ವಂಸ,ನೌಕೆಯಲೆನ್ನ ಕುಳಿಸು,ಎಣ್ಣೆ ಹೊಯ್ಯಮ್ಮ ದೀಪಕ್ಕೆ,ತುಳುನಾಡ ಹಾಡು ಇತ್ಯಾದಿಗೊ ಅತಿ ಸುಂದರವೂ,ಬಹುಮಾನ್ಯವೂ ಆದ ರಚನೆಗೊ.

ಪಳಮೆಗಳು’ ಸೇಡಿಯಾಪರ  ಕಥಾಸಂಕಲನ.
ನಾಗರಬೆತ್ತ, ಚಿನ್ನದ ಚೇಳು,ಧರ್ಮಮ್ಮ ಮತ್ತೆ ಚೆನ್ನೆಮಣೆ – ಸಂಕಲನದ ಈ ನಾಲ್ಕು ಕತೆಗೊ ಯಾವುದೋ ಹೇಳಿಕೆ ಗಳ ಅಥವಾ ನಂಬಿಕೆಗಳ ಹಿಡುದು ಬೆಳೆಸಿದ ರಚನೆಗೊ.
ನಾಲ್ಕರ ಭಾಷಾ ಶೈಲಿ,ನಿರೂಪಣಾ ಕ್ರಮಂಗೊ ಇವುಗಳ ಕಾಲ,ವಸ್ತು, ಸನ್ನಿವೇಶಕ್ಕೆ ಅನುಗುಣವಾಗಿ ವಿಭಿನ್ನವಾಗಿದ್ದು.

ವಿದ್ವಾಂಸ – ವೈಯಾಕರಣಿ:

ಸೇಡಿಯಾಪರ ವಾಙ್ಮಯ ವೆವಸಾಯಲ್ಲಿ ಅವಕ್ಕೆ ಅತಿಶಯ ಹೆಸರು ತಂದು ಕೊಟ್ಟ ಪ್ರಬಂಧ “ಕನ್ನಡ ಛಂದಸ್ಸು”. ನಾನು ‘ಕೃಷ್ಣ ಭಟ್ಟ’ಎನಿಸಿದ್ದೇ ಅದರಿಂದ ಹೇಳಿ ಅವ್ವೇ ಹೇಳಿಗೊಂಡಿದವು.
1932 ರಲ್ಲಿ ಮಡಿಕೇರಿಲಿ ಡಿವಿಜಿ ಅಧ್ಯಕ್ಷತೆಲಿ ನಡದ ಕನ್ನಡ ಸಾಹಿತ್ಯ ಸಮ್ಮೇಳನಲ್ಲಿ ಈ ಪ್ರಬಂಧವ ಓದಿ ಸಾಹಿತ್ಯ ದಿಗ್ಗಜಂಗೊ ಚಕಿತರಾಗಿ ಮೂಗಿಂಗೆ ಬೆರಳು ಏರುಸುವ ಹಾಂಗೆ ಮಾಡಿದವು.
ಅಚ್ಚಕನ್ನಡದ ‘ಕರ್ಣಾಟಕ ವಿಷಯ ಜಾತಿ’ ಚೌಕಟ್ಟಿಲಿ ಅಡಕವಾಗಿಪ್ಪ ಮದನವತಿ, ಅಕ್ಕರ, ಚೌಪದಿ, ಗೀತಿಕೆ, ಏಳೆ, ತ್ರಿಪದಿ, ಉತ್ಸಾಹ,ಷಡ್ಪದಿ,ಅಕ್ಕರಿಕೆ, ಛಂದೋವಸಂತ ಹೇಳ್ತ ಹತ್ತು ಜಾತಿಗಳ ಲಕ್ಷಣ, ಲಕ್ಷ್ಯ ಸಮನ್ವಯಗಳೊಟ್ಟಿಂಗೆ ನಿರೂಪಿಸಿದವು.

ಮಾತ್ರೆ, ಗಣ,ಯತಿ ಮುಂತಾದ ಕ್ಲಿಷ್ಟ ಛಂದೋ ವಿಷಯಂಗಳ ವಿಷದವಾಗಿ ವಿವರಿಸಿದವು.

‘ಪಂಚಮಿ ವಿಭಕ್ತಿ’ ಲೇಖನಲ್ಲಿ ಕೃಷ್ಣ ಭಟ್ಟರು,ಕನ್ನಡಲ್ಲಿ ಪಂಚಮೀ ವಿಭಕ್ತಿ ಇದ್ದು ಹೇಳಿ ಪ್ರತಿಪಾದಿದವು.
ಪಂಚಮೀ ವಿಭಕ್ತಿ ಭಾಷಾಭ್ಯಾಸಿಗಳ ದೃಷ್ಟಿ ಪಲ್ಲಟ ಮಾಡಲು ಕಾರಣವಾಗಿದೆ.ಅದು ದ್ರಾವಿಡ ಭಾಷಾ ಶಾಸ್ತ್ರಕ್ಕೆ ಕನ್ನಡ ಪಂಡಿತರೊಬ್ಬರ ಮೌಲಿಕವ್ವದ ಕೊಡುಗೆ’ ಹೇಳಿಗೊಂಡು  ಡಾ.ರಂ.ಶ್ರೀ.ಮುಗುಳಿ ಕೊಂಡಾಡಿದ್ದವು.
ಕನ್ನಡ ವರ್ಣಗಳು’,ಕೆಲವು ದೇಶನಾಮಗಳು’ ವ್ಯಾಕರಣ ಶಾಸ್ತ್ರಕ್ಕೆ ಸಂಬಂಧಿಸಿ ಬರದ  ಮುಖ್ಯ  ಪ್ರಬಂಧಂಗೊ.
ಛಂದೋಗತಿ” ಕೃಷ್ಣ ಬಟ್ಟರು ಬರದ ಮತ್ತೊಂದು ಉನ್ನತ ಮಟ್ಟದ ಶಾಸ್ತ್ರ ಗ್ರಂಥ.
ತಥ್ಯದರ್ಶನ ‘ಲ್ಲಿ ಆರ್ಯ,ವರ್ಣ,ಜಾತಿ ಮತ್ತೆ ಲಿಂಗ -ಈ ಪದಚತುಷ್ಟಯದ ಅರ್ಥಾನುಸಂದಾನ ಮಾಡಿದ್ದವು.1923 ರಲ್ಲಿ ‘ಜಯಕರ್ನಾಟಕ’ಲ್ಲಿ ಪ್ರಕಟ ಆದ ಅವರ ಪ್ರಥಮ ಲೇಖನ’ಕರ್ನಾಟಕ ಕವಿತಾ ಪ್ರಪಂಚ’ಂದ ಶುರುವಾಗಿ 1992 ರ ವರೆಗೆ ಬರದ ಸುಮಾರು 70 ಲೇಖನಗಳ ಸಮಗ್ರ ಸಂಪುಟ ವಿಚಾರ ಪ್ರಪಂಚ’ಕ್ಕೆ(ಸಂಪಾದನೆ – ಶ್ರೀ ಪಾದೆಕಲ್ಲು ವಿಷ್ಣು ಭಟ್ಟರು), ಕರ್ನಾಟಕ ಸರ್ಕಾರದ ಅತ್ಯುಚ್ಚ ಸಾಹಿತ್ತಿಕ ಪುರಸ್ಕಾರ  ‘ಪಂಪ ಪ್ರಶಸ್ತಿ’ ಮರಣೋತ್ತರವಾಗಿ ಸಿಕ್ಕಿದ್ದು.
ಮಚ್ಚಿಮಲೆ ಶಂಕರನಾರಾಯಣ ರಾವ್ ಮತ್ತೆ ಆರ್.ಎಸ್.ನಾವೂರ್ಕಾರ್ ಹೇಳ್ತವರೊಟ್ಟಿಂಗೆ ಸೇರಿ 1951 ರಲ್ಲಿ ಕನ್ನಡ ನಿಘಂಟು’ವಿನ ಸಂಪಾದಿಸಿದ್ದವು.

ನಿರ್ಯಾಣ:

ವಿದ್ವಾಂಸರಾಗಿ, ವೈದ್ಯರಾಗಿ ಸುಮಾರು ಮೂವತ್ತಂಟು ವರ್ಷ ಮಂಗಳೂರಿಲಿದ್ದುಗೊಂಡು  ಕೃಷ್ಣ ಭಟ್ಟರು ತಮ್ಮ ವ್ಯಾಕರಣಾದಿ ಶಾಸ್ತ್ರಂಗಳಂದ ಜೆನಂಗಳ ಭಾಷಾಶುದ್ದಿಯನ್ನೂ, ಆಯುರ್ವೇದ ಶಾಸ್ತ್ರಂದ ದೇಹಶುದ್ದಿಯನ್ನೂ ಮಾಡಿದ್ದವು.
ನಿವೃತ್ತರಾದ ನಂತ್ರ ಮಗನೊಟ್ಟಿಂಗೆ ನಾಗಪುರ, ಅಕೇರಿಗೆ ಮಣಿಪಾಲಲ್ಲಿದ್ದುಗೊಂಡು ಸಾಹಿತ್ತಿಕ ಕೈಂಕರ್ಯ ಮಾಡಿದವು.
ಅನೇಕ ರೀತಿಯ ಮಾನ ಸಮ್ಮಾನಂಗೊಕ್ಕೆ ಭಾಜನರಾದವು.
ಅವರ ‘ತಥ್ಯದರ್ಶನ’ವ ಶ್ರೇಷ್ಟ ವಿದ್ವಾಂಸ ಶ್ರೀ ಪಾದೆಕಲ್ಲು ನರಸಿಂಹ ಭಟ್ಟರು ಇಂಗ್ಲೀಷಿಂಗೆ ತರ್ಜುಮೆ ಮಾಡಿ ‘Discover of Facts‘ ಹೆಸರಿಲಿ ಪ್ರಕಟಿಸಿದವು.
1996 ರ ಜೂನ್ 8 ರಂದು ಕೃಷ್ನ ಭಟ್ಟರಿಂಗೆ 95ನೆಯ ಹುಟ್ಟು ವರ್ಷಾಚರಣೆಯ ಸಂದರ್ಭಲ್ಲಿ, ಅವರ ಮನೆಲಿ ಡಾ.ಶಿವರಾಮ ಕಾರಂತರ ಕೈಂದ, ಕು.ಶಿ.ಹರಿದಾಸ ಭಟ್ಟರಾದಿಯಾಗಿ ಆತ್ಮೀಯರ ಸಮ್ಮುಖಲ್ಲಿ  ಬಿಡುಗಡೆಯೂ ಆತು.

ಅದೇ ದಿನ ಇರುಳು ಕೃಷ್ಣ ಭಟ್ಟರ ಆತ್ಮಕ್ಕೆ ಅವರ ದೇಹಂದ ಬಿಡುಗಡೆಯೂ ಸಿಕ್ಕಿತ್ತು.!

~~*~*~*~~

ಆಧಾರ :
– ’ಸೇಡಿಯಾಪು ಕೃಷ್ಣ ಭಟ್ಟ’ , ಲೇ: ಎಂ.ರಾಮಚಂದ್ರ
– ಫಟ – ಇದೇ ಪುಸ್ತಕಂದ.

10 thoughts on “ಪಂಡಿತೋತ್ತಮ – ಸೇಡಿಯಾಪು ಕೃಷ್ಣ ಭಟ್ಟ

  1. ದೂರ ವಾಣಿ ಸ೦ಖ್ಯೆ —-0820 2521159

  2. ಸೇಡಿಯಾಪು ಕೃಷ್ಣ ಭಟ್ಟರ ಪುಸ್ತಕ ಎಲ್ಲಿ ಸಿಗುತ್ತೆ ಅಂತ ದಯವಿಟ್ಟು ತಿಳಿಸಿ
    ಸಪ್ನಾ ಬುಕ್ ಹೌಸ್ ನಲ್ಲಿ ಒಂದು ಪುಸ್ತಕ ಇದೆ ಮಾತ್ರ
    ನಾನು “ತಥ್ಯದರ್ಶನ” ಪುಸ್ತಕವನ್ನ ತುಂಬಾ ದಿನದಿಂದ ಹುಡುಕುತಿದ್ದೇನೆ

    1. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರ,ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು, ಉಡುಪಿ ಇಲ್ಲಿ ವಿಚಾರಿಸಿ.

  3. ಕಾಸರಗೋಡು ಪ್ರದೇಶಲ್ಲಿ ಕನ್ನಡ ಒಳಿಶಿಗೋಡಿದ್ದ ಕಾಲಲ್ಲಿ ಒಂಬತ್ತನೇ ಕ್ಲಾಸಿಂಗೆ ಚೆನ್ನೆ ಮಣೆ ಪಾಠವ ಮಕ್ಕೊಗೆ ಕಲಿಶುವ ಸಂದರ್ಭ ಸಿಕ್ಕಿತ್ತು.ಕೃಷ್ಣ ಕುಮಾರಿ ಎಂಗಳೇ ಕಲಿವಲಿತ್ತು. ಪೂರ್ತಿ ಜೀವನ ಚರಿತ್ರೆ ಒದಗುಸಿದ್ದು ಲಾಯಿಕಾಯಿದು. ನಮ್ಮ ಪೂರಜರಾಗಿದ್ದ ಹವ್ಯಕರೂ ಸಾಹಿತ್ಯ ಸೇವೆ ಮಾಡಿ ಎಲ್ಲೋರಿಂದ ಸೈ ಎನಿಸಿಗೊಂಡದು ನಮ್ಮ ಭಾಗ್ಯ ಲೇಖನ ಲಾಯಿಕಾಯಿದು

  4. ಉತ್ತಮ ಲೇಖನ ಮಾವ. ಅವರ ಬಗ್ಗೆ ಮೊದಲು ಚೂರು ಚೂರು ಗೊಂತಿತ್ತು. ಧನ್ಯವಾದಂಗೊ ಕುಮಾರಮಾವಂಗೆ.

  5. ಸೇಡಿಯಾಪು ಕೃಷ್ಣ ಭಟ್ಟರ ಹೆಸರು ಮತ್ತು ಅವೊಬ್ಬ ಮಹಾ ವಿದ್ವಾಂಸರು ಹೇಳಿ ಅಷ್ಟೇ ಗೊಂತಿದ್ದದು ಶಾಲಾದಿನಂಗಳಲ್ಲಿ ಹೇಳಿಕೇಳಿ. ಕುಮಾರ ಮಾವನ ಈ ಶುದ್ಧಿ ಓದಿದ ಮತ್ತೆ ಮಂಗ್ಳೂರ ಮಾಣಿ ಭಾವ ಹೇಳಿದಾಂಗೆ ‘ಇಷ್ಟೆಲ್ಲ್ಲ ಮಾಡಿದ್ದವಪ್ಪೋ?’ ಎನಗೂ ಅನಿಸಿತ್ತು. ಸಾಹಿತ್ಯಾಭ್ಯಾಸಿಗೊಕ್ಕೆ, ಆಸಕ್ತರಿಂಗೆ ಅವರ ಬಗ್ಗೆ ರಜಾ ಹೆಚ್ಚಿಗೆ ಗೊಂತಿಕ್ಕು. ಈ ಮೂಲಕ ಅವರ ಬಗ್ಗೆ ಓದಿ ಹೆಮ್ಮೆ ಎನಿಸಿತ್ತು. ಧನ್ಯವಾದ ಕುಮಾರ ಮಾವಂಗೆ.

  6. ಸೇಡಿಯಾಪು ಅವರ ಚೆನ್ನೆಮಣೆ ಕತೆಯ ಆನು ಎಷ್ಟು ಸರ್ತಿ ಓದಿದ್ದೆನೋ ನೆಂಪಿಲ್ಲೆ.ತುಂಬಾ ಚೆಂದವಾದ ಶೈಲಿ ಅವರದ್ದು.ಅದು ನೈಜ ಕತೆಯೆ ಹೇಳಿ ಆನು ತುಂಬಾ ವರ್ಷ ಜಾನ್ಸಿತ್ತಿದ್ದೆ.ಅವರ ಪುಸ್ತಕ ಸಿಕ್ಕಿ ಅಪ್ಪಾಗ ಮುನ್ನುಡಿ ಓದಿ ಅಪ್ಪಗ ಗೊಂತಾದ್ದು ಅದು ಕಟ್ಟು ಕತೆ ಹೇಳಿ!
    ಅವರ ಅರೆವಾಶಿ ಆದರೂ ಸುಲಲಿತ ಶೈಲಿಲಿ ಬರೆವಲೆ ನಮ್ಮಿಂದ ಆಗಲಿ ಹೇಳಿ ಪ್ರಾರ್ಥನೆ.
    ಅವು ಪುಸ್ತಕ ಬಿಡುಗಡೆಯ ದಿನವೇ ದಿವಂಗತರಾddu ಪತ್ರಿಕೆಲಿ ಓದಿ ಬೇಜಾರಾಗಿತ್ತು.ಅವರ ಬಗ್ಗೆ ಅವರ ಮಗಳು ಶ್ರೀಮತಿ ಅಂಬಿಕೆ ಕಸ್ತೂರಿ ಮಾಸಪತ್ರಿಕೆಲಿ ಬರೆದಿತ್ತಿದ್ದವು.ಅವು ಯಾವ ಕೋಮುವಾರು,ಜಾತಿವಾರು ಭಾವನೆ ಇಲ್ಲದ್ದ ಗುಣದವು ಹೇಳಿ ವಿವರಿಸಿದ್ದವು.

  7. ಕನ್ನಡ ಸಾಹಿತ್ಯ ಲೋಕಕ್ಕೆ ಹವ್ಯಕರ ಕೊಡುಗೆ ದೊಡ್ಡದು.
    ಹಾಂಗಿಪ್ಪವರ ಪರಿಚಯ ಮಾಡಿ ಕೊಡ್ತಾ ಇಪ್ಪದು ಒಳ್ಳೆ ಕಾರ್ಯ.
    ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×