Oppanna.com

ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ

ಸ್ವಯಂವರ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   25/05/2020    8 ಒಪ್ಪಂಗೊ

ಸ್ವಯಂವರ ಭಾಗ 50

ಜವುಳಿ ಅಂಗಡಿ ಮುಂದೆ ಕಾರು ನಿಲ್ಸಿಕ್ಕಿ ಹೆರ ಇಳುದ ಸುದೀಪ.
“ಈಗ ಎಂತ ಬೇಡ ಭಾವಾ..ನಿನ್ನೆ ಹಾಕಿದ್ದು ಇದ್ದು ,ಹೋದಾಂಗೆ ತೊಳದು ಹಾಕಿರೆ ನಾಳಂಗಪ್ಪಗ ಒಣಗ್ಗು” ಸುಪ್ರಿಯ ಕಾರಿಂದ ಇಳಿವಲೆ ಉದಾಸೀನ ಮಾಡಿತ್ತು.

“ಅದೆಲ್ಲ ಕರೇಲಿ ಇರ್ಲಿ, ಈಗ ಎನ್ನೊಟ್ಟಿಂಗೆ ಬಾ” ಹೇಳಿಕ್ಕಿ ಕಾರಿನ ಬಾಗಿಲು ತೆಗದ.
ಅವ° ಅಷ್ಟು ಹೇಳಿದ ಮತ್ತೆ ಅದಕ್ಕೆ ಇಳಿಯದ್ದೆ ನಿವೃತ್ತಿ ಇಲ್ಲದ್ದಾಂಗಾತು. ಇಬ್ರೂ ಜವುಳಿ ಅಂಗಡಿಯ ಒಳಾಂಗೆ ಹೋದವು. ಇಷ್ಟರವರೆಗೆ ಅಣ್ಣನೊಟ್ಟಿಂಗಾ,ಅಪ್ಪನೊಟ್ಟಿಂಗಾ ಮಾಂತ್ರ ಅಂಗಿ ತೆಗವಲೆ ಹೋಗಿ ಅಭ್ಯಾಸ ಇದ್ದ ಸುಪ್ರಿಯಂಗೆ ಅವನೊಟ್ಟಿಂಗೆ ಹೋಪಲೆ ರಜಾ ನಾಚಿಕೆಯೂ ಆತು.

“ನಿನಗೆ ಕೊಶಿ ಕಂಡದರ ತೆಗದಿಕ್ಕಿ ಬಾ..ಆನಿಲ್ಲಿ ನಿಲ್ಲುತ್ತೆ” ಹೇಳಿರೂ ಅದಕ್ಕೆ ಅವನ ಬಿಟ್ಟಿಕ್ಕಿ ಅಲ್ಲಿ ಒಬ್ಬನೇ ನಿಂಬಲೆ ಮನಸ್ಸು ಬಯಿಂದಿಲ್ಲೆ.
“ನೀನುದೆ ಬಾ…ಪ್ರಿಯಾ.. ಎನಗೆ ಅಂದಾಜಾವ್ತಿಲ್ಲೆ ಹೇಂಗಿದ್ದದು ತೆಗೆಕೂಳಿ” ಅವನ ಮಾತು ಹೃದಯಕ್ಕೆ ತಟ್ಟಿತ್ತು.
“ಎನಗೂ ಅಲ್ಲಿಗೆತ್ತಿರೆ ಯೇವದು ತೆಗೆಕೂಳಿ ಗೊಂತಾಗ”

“ಹ್ಹ…ಹ್ಹ….ನಿನಗೇ ಗೊಂತಾಗದ್ರೆ ಮತ್ತೆ ಎನಗೆ ಗೊಂತಿಕ್ಕಾ” ಅದರ ತಮಾಷೆ ಮಾಡಿರೂ ಅದರೊಟ್ಟಿಂಗೆ ಬಂದು ಒಂದೆರಡು ಸೆಟ್ ಡ್ರೆಸ್ ಅಜಪ್ಪಿ ಕೊಟ್ಟಿಕ್ಕಿ ಪ್ಯಾಕ್ ಮಾಡ್ಲೆ ಹೇಳಿದ°
“ಅಯ್ಯೋ ಅಷ್ಟು ಕ್ರಯದ ಅಂಗಿ ಎಂತಕೆ,ಎನಗೆಂತ ಈಗ ಮದುವಗೋಪಲಿಲ್ಲೆ” ಸುಪ್ರಿಯ ಅವ ತೆಗದು ಮಡುಗಿದ ಅಂಗಿಗಳ ನೋಡಿ ಹೇಳಿತ್ತು.

“ಮದುವೆಗೆ ಈಗ ಹೋಪಲಿಲ್ಲದ್ರೆ ಹೋಪಗ ಹಾಕು” ನೆಗೆ ಮಾಡಿದ° ಅವ.
“ಆನೀಗ ಮದುವೆಗೆಲ್ಲ ಹೋಪಗ ಸೀರೆ ಸುತ್ತುದು..ಈ ಡ್ರೆಸ್ ಎಲ್ಲ ಬೊಡುದತ್ತು”
“ವಾಹ್! ಅಂಬಗ ನಿನ್ನ ಒಂದರಿ ಸೀರೆ ಸುತ್ತಿಂಡು ನೋಡೆಕನ್ನೆ” ಹೇಳಿಂಡು ಅವ ಅದರ ಸೀರೆ ಇಪ್ಪ ಜಾಗೆಗೆ ಕರಕ್ಕೊಂಡು ಹೋದ.
“ಎನಗೀಗ ಸೀರೆ ಬೇಡ, ನಾಡ್ದು ಯುಗಾದಿ ದಿನ ಮನೆಲಿ ಪೂಜೆ ಇದ್ದು. ಅಂಬಗ ಸುತ್ತಲೆ ಹೊಸ ಸೀರೆ ಅಣ್ಣ ತೆಗದು ಮಡುಗಿದ್ದಾಡ” ಹೇಳಿತ್ತು ಸುಪ್ರಿಯ.

“ಓಹ್! ಡಾಕ್ಟರೇ ಸೀರೆ ತೆಗವಲೆ ಬಂದದಾ?” ತುಂಬಾ ಆತ್ಮೀಯತೆ ತುಂಬಿದ ಆ ಸ್ವರ ಕೇಳಿಯಪ್ಪಗ ಇಬ್ರೂ ತಿರುಗಿ ನೋಡಿದವು. ಅಲ್ಲಿ ನಿಂದೊಂಡಿದ್ದ ಜನರ ಕಂಡಪ್ಪಗ ಸುಪ್ರಿಯಂಗೆ ಆಶ್ಚರ್ಯ ಆಗಿ ತಡೆಯ!!!!!

“ಹಾ….ಅಪ್ಪು ಮೇಡಂ,ಒಂದೆರಡು ಸೀರೆ ತೆಗವ ಹೇಳಿ ಬಂದದು. ನಿಂಗೊ ಇಲ್ಲಿ…?” ಆಶ್ರಮದ ಮೆನೇಜರ್ ಸುಗುಣನತ್ರೆ ಸುದೀಪ ಭಾರೀ ಗುರ್ತಯಿಪ್ಪವರ ಹಾಂಗೆ ಮಾತಾಡುಗ ಸುಪ್ರಿಯಂಗೆ ಒಡದ ಬಾಯಿ ಮುಚ್ಚಲೇ ಮರದು ಹೋದ ಹಾಂಗಾತು.

“ಶಾಲೆ ಸುರುವಪ್ಪಲಪ್ಪಗ ಮಕ್ಕಳ ಯುನಿಫಾರ್ಮ್ ಹೊಲುದು ಸಿಕ್ಕೆಕಾರೆ ಈಗಲೇ ಆರ್ಡರ್ ಕೊಡೆಕಾವ್ತು. ಎಂಗೊ ಕಾಯಮ್ಮಿಂಗೆ ಈ ಅಂಗಡಿಯವೇ ತರ್ಸಿಕೊಡುದು. ಹಾಂಗೆ ಬಂದೆ” ಅವರ ಸ್ವರ ಎಷ್ಟು ಚಂದ ಹೇಳಿಯಾತು ಸುಪ್ರಿಯಂಗೆ.

“ಓಹ್! ಅಪ್ಪಾ.. ಎಷ್ಟು ಸೆಟ್ ಬೇಕಾವ್ತು ಮೇಡಂ, ಈ ವರ್ಷದ ಮಕ್ಕಳ ಯುನಿಫಾರ್ಮ್ ನ ಪೈಸೆ ಆನು ಕೊಡ್ತೆ” ಸುದೀಪ ಅಂಬಗಳೇ ಕೈಲಿ ಮೊಬೈಲ್ ಹಿಡ್ಕೊಂಡು ಹೇಳಿದ°

“ಎಂತ ಡಾಕ್ಟರೇ ಇದು! ಬೇಡಪ್ಪಾ..ನಿಂಗೊ ತಿಂಗಳಿಂಗೆ ಎರಡು ಸರ್ತಿ ಆಶ್ರಮಕ್ಕೆ ಬಂದು ಧರ್ಮಕ್ಕೆ ಮದ್ದು ಕೊಡುದೇ ಹೆಚ್ಚಿಗೆ. ಅದರೊಟ್ಟಿಂಗೆ ಇದೂದೆ…..ಬೇಡ,ಎಂಗೊಗೆ ಬೇರೆ ಆರಾರು ಸ್ಪೋನ್ಸರ್ ಮಾಡುಗು. ಆರೂ ಕೊಡದ್ರೆ ರಜಾ ಬಂಙ ಆವ್ತು.ಆದರೂ ತೊಂದರೆ ಇಲ್ಲೆ”
ಇಷ್ಟರವರೆಗೆ ಗೊಂತಿಲ್ಲದ್ದ ಸುದೀಪನ ಇನ್ನೊಂದು ಮೋರೆಯ ಗುರ್ತ ಆದಪ್ಪಗ ಅರಡಿಯದ್ದೆ ಮನಸ್ಸು, ಹೃದಯ ತುಂಬಿ ಬಂತು ಸುಪ್ರಿಯಂಗೆ.
‘ಇವ° ಇಷ್ಟು ಉಪಕಾರ ಮಾಡ್ತನಾ..! ತಿಂಗಳಿಲ್ಲಿ ಎರಡು ದಿನ ಆಶ್ರಮಕ್ಕೆ ಹೋಗಿ ಧರ್ಮಕ್ಕೆ ಅವರ ಪರೀಕ್ಷೆ ಮಾಡಿ,ಮದ್ದು ಕೊಡುದು ಹೇಳಿರೆ…..! ಸುಮ್ಮನೆ ಅಲ್ಲ ವಿಜಯ ಇವನ ಹೊಗಳುದು! ನಿಜವಾಗಿಯೂ ಗ್ರೇಟ್ ನೀನು…‌! ಮಾತಾಡ್ಲೆ ಶಬ್ದ ಹೆರಡದ್ದೆ ಸುಮ್ಮನೆ ಅವು ಮಾತಾಡುದರ ನೋಡಿಂಡು ನಿಂದತ್ತು.

“ಹಾಂಗೆಂತ ಇಲ್ಲೆ ಮೇಡಮ್, ನಿಂಗೊ ಹೇಳಿ.ಇಪ್ಪತ್ತು ಸಾವಿರ ಬೇಕಕ್ಕಾ. ಈ ಸರ್ತಿ ಆನು ಕೊಡ್ತೆ.ಎಲ್ಲಾ ಮಕ್ಕೊಗೂ ಹೊಸ ಡ್ರೆಸ್ ಕೊಡ್ಸಿ” ಅವನ ಮಾತು ಕೇಳಿ ಅವು ಒಂದರಿ ಮೋರೆಲಿಪ್ಪ ಕನ್ನಡ್ಕ ತೆಗದು ಕಣ್ಣುದ್ದಿಕ್ಕಿ ಪುನಾ ಮಡುಗಿದವು.

ಕನ್ನಡ್ಕ ತೆಗದಪ್ಪಗ ಎಷ್ಟು ಚಂದ ದೇವರೇ ಇವು. ಆ ಉದ್ದ ತಲೆಕಸವಿನ ಅಷ್ಟು ದೊಡ್ಡಕೆ ಜೊಟ್ಟು ಹಾಕದ್ದೆ ಜೆಡೆ ನೇಯ್ದಿದ್ದರೆ ಇವರ ಮೂವತ್ತು ವರ್ಷಂದ ಹೆಚ್ಚು ಪ್ರಾಯ ಕಾಣಲೇ ಕಾಣ. ಸುಪ್ರಿಯಂಗೆ ಅವರ ನೋಡಿದಷ್ಟು ಸಾಕಾಗದ್ದಾಂಗಾತು.. ಹಾಂಗೆ ನೋಡ್ತಾ ಇಪ್ಪಗಳೇ ಶೈಲನ ವಜಾಯ ಇಪ್ಪ ಹಾಂಗೂ ಕಂಡತ್ತು.

“ನಿನಗೆ ಬೇಕಾದ ರಂಗಿನ ಸೀರೆ ತೆಕ್ಕೊ” ಅವರತ್ರೆ ಮಾತಾಡುವ ಎಡೇಲಿ ಒಂದರಿ ಸುಪ್ರಿಯನ ಹೊಡೇಂಗೆ ತಿರುಗಿ ಹೇಳಿದ ಅವ°. ಅಷ್ಟಪ್ಪಗ ಅವುದೆ ಸುಪ್ರಿಯನ ನೋಡಿದವು.
“ಓಹ್!! ” ಅವರ ಮೋರೆಲಿ ಆಶ್ಚರ್ಯ!
ಸುಪ್ರಿಯನೂ ಫಕ್ಕನೆ ಕೈ ಮುಗುದು “ನಮಸ್ತೇ” ಹೇಳಿತ್ತು.

“ಇದೆನ್ನ ಮಾವನ ಮಗಳು,ನಿಂಗೊಗಿದರ ಮದಲೇ ಗುರ್ತಯಿದ್ದಾ” ಸುದೀಪ ಕೇಳಿಯಪ್ಪಗ ಅವು
“ವಿಜಯಶ್ರೀ ಎಂಗಳ ಆಶ್ರಮದ ಕೂಸು. ಅದರೊಟ್ಟಿಂಗೆ ಕಂಡ ಗುರ್ತ” ಅಷ್ಟೇ ಹೇಳಿದ್ದು.

‘ವಿಜಯ ಅಂಬಗ ಇವರ ಮಗಳಲ್ಲದಾ, ಆಶ್ರಮದ ಕೂಸಾ.! ಇವಕ್ಕೂ ಸುಶೀಲಂಗೂ ಎಂತ ಸಂಬಂಧ ಇಲ್ಯಾ…ಇದರ ಹಿಂದೆ ಎಂತೋ ಗುಟ್ಟು ಇದ್ದು. ಅಲ್ಲದ್ರೆ ಮನೆಯವಕ್ಕೆ ಗುರ್ತ ಸಿಕ್ಕುದು ಬೇಡ ಹೇಳಿ ಹೀಂಗಿಪ್ಪದಾ….ಇನ್ನೀಗ ಸುದೀಪನತ್ರೆ ಎಲ್ಲಾ ವಿಶಯ ಹೇಳಿರೆ ಅವನ ಸಕಾಯ ಸಿಕ್ಕುಗು. ಸುಶೀಲಂಗೆ ಬೇಕಾಗಿ ಈಗಲೂ ಕಾಯ್ತಾ ಇಪ್ಪ ಅದರ ಅಣ್ಣನ ದುಃಖ ದೂರ ಆಯೆಕು. ಎಲ್ಲದಕ್ಕೂ ಮಾರ್ಗದರ್ಶನ ಸುದೀಪನತ್ರಂದ ಸಿಕ್ಕುಗು. ಇಷ್ಟು ದಿನ ಅವನ ಬಗ್ಗೆ ಎಂತದೂ ಆಲೋಚನೆ ಮಾಡಿದ್ದಿಲ್ಲೆ. ಅವನ ವಿಶಯ ಮನೆಲಿ ಮಾತಾಡಿರೆ ಕೂಡ ಗುಮಾನ ಮಾಡದ್ದಷ್ಟು ನಿರ್ಲಕ್ಷ್ಯ ವಹಿಸಿದೆ. ಆದರೆ ಇಂದು  ಸುದೀಪನ ಬಗ್ಗೆ ಗ್ರೇಶುಗ ಎಷ್ಟು ಅಭಿಮಾನ ಆವ್ತು. ಅವನ ಮಾವನಮಗಳು ಹೇಳಿಂಡು ಅವನ ಹೆಗಲಿಂಗಟಿ ನಿಂಬಗ ಮನಸಿಂಗೆ ಎಂತೋ ಕೊಶಿ.

“ಎಂತ ಸುಮ್ಮನೆ ನಿಂದದು.‌ ನಿನಗೆ ಇಷ್ಟ ಇಪ್ಪದು ಸೆಲೆಕ್ಟ್ ಮಾಡು, ಹಾಂಗೇ ಅಮ್ಮಂಗೂ ಒಂದು ಇರಲಿ” ಅತ್ತೆಯ ಕೊಂಗಾಟದ ಮಗ’ ಹೇಳಿ ಮನಸಿಲ್ಲಿ ನೆಗೆ ಬಂತದಕ್ಕೆ.

“ನಿನಗಿವರ ಹೇಂಗೆ ಗುರ್ತ.ಭಾರೀ ಚಂದ ಇದ್ದವಲ್ಲದ ಅವು?” ಸುಗುಣ ಬೇರೆ ಹೊಡೆಂಗೆ ಹೋದಪ್ಪಗ ಸುಪ್ರಿಯ ಮೆಲ್ಲಂಗೆ ಅವನತ್ರೆ ಕೇಳಿತ್ತು‌.
“ನಿನಗೆ ಎಂತಾಯೆಕಾದ್ದು.ಅವು ಎಷ್ಟು ಚಂದ ಇದ್ದರೆ ನವಗೆಂತ? ಬಹುಶಃ ಅವರ ಸೌಂದರ್ಯವೇ ಅವಕ್ಕೆ ಮುಳ್ಳಾಗಿಪ್ಪಲು ಸಾಕು.ಇಲ್ಲದ್ರೆ ಎಲ್ಲೋರ ಹಾಂಗೆ ಮದುವೆ, ಸಂಸಾರ ಹೇಳಿ ಇರ್ತಿತವಿಲ್ಯಾ?  ಇತ್ಲಾಗಿಯಣವಲ್ಲಾಡ ಅವು. ಮುಂಬೈ ಹತ್ತರೆ ಇದ್ದದಾಡ. ಈಗ ಎರಡು ವರ್ಷ ಆಯಿದಿಲ್ಲೆ ಈ ಊರಿಂಗೆ ಬಂದು. ಹೆಚ್ಚು ಎನಗೆ ಗೊಂತಿಲ್ಲೆ.. ಬೇಕಾರೆ ಒಂದು ದಿನ ನಿನ್ನ ಅಲ್ಲಿಗೆ ಕರಕ್ಕೊಂಡು ಹೋವ್ತೆ.ಇವು ಅಲ್ಲಿಗೆ ಬಂದ ಮತ್ತೆ ಆಶ್ರಮ ಭಾರೀ ಚಂದಕೆ ನೆಡೆಶುತ್ತವು….” ಸುದೀಪ ಅವರ ಹೊಗಳಿಯಪ್ಪಗ ಸುಪ್ರಿಯಂಗೆ ಎಂತ ಹೇಳೆಕೂಳಿ ಅರ್ತಿದಿಲ್ಲೆ.

ತಲೇಲಿ ಪುನಾ ಸುಶೀಲ ಕೊಣಿವಗ ಎದುರ ಇಪ್ಪ ಸೀರೆ ರಾಶಿಂದ ಯೇವದು ತೆಗೆಕೂಳಿ ಗೊಂತಾಗದ್ದಾಂಗಾತು. ಅದು ಹಾಂಗೆ ನಿಂಬದು ಕಂಡು ಅವನೇ ಎರಡು ಸೀರೆ ಅಜಪ್ಪಿ ಮಡುಗಿದ°.
“ಒಂದು ಸೀರೆ ಅಜಪ್ಪಿ ತೆಗವಲೆ ಎಡ್ತಿಲ್ಯಾ ನಿನಗೆ.. ಹ್ಹ…ಹ್ಹ…..ಹೀಂಗಿದ್ದ ಕೂಸುಗಳೂ ಇದ್ದವಾ..ಆನು ಸುರೂ ನೋಡಿದು” ಅವ ತಮಾಷೆ ಮಾಡಿಯಪ್ಪಗ ರಜ ಮರ್ಯಾದೆ ಹೋದಾಂಗಾದರೂ ಮಾತಾಡಿದ್ದಿಲ್ಲೆ.

“ಆನು ಸುಮ್ಮನೆ ಹೇಳಿದ್ದಲ್ಲದಾ..ಬೇಜಾರಾತಾ” ಅವ ಕೇಳಿಯಪ್ಪಗ ಅದರ ಮನಸ್ಸು ಹಕ್ಕಿಯ ಹಾಂಗೆ ಹಾರಿತ್ತು. ಅಬ್ಬಾ….ಒಂದು ರಜಾ ಮನಸಿಂಗೆ ಬೇನೆ ಆದರೂ ಇವಂಗೆ ಗೊಂತಾವ್ತಾ….ಓಹ್!!

“ಡಾಕ್ಟರ್ ಹೋಳಿಗೆ ಊಟ ಹಾಕ್ಸುವ ಅಂದಾಜಿದ್ದಾ ಕಾಣ್ತು” ಇವು ಬಿಲ್ ಕೊಡ್ಲೆ ಬಂದಪ್ಪಗ ಅಲ್ಲಿ ಕೂದ ಜೆನ ಹೇಳುದು ಕೇಳಿ ಸುಪ್ರಿಯಂಗೆ ಮನಸಿನ ಒಳ ಕೊಶೀ ಆದರೂ ಹೆರಾಂದ ಸುಮ್ಮನೆ ತಲೆತಗ್ಗಿಸಿತ್ತು.

“ಹೂಂ……ನೋಡುವಾ…” ಅವ° ಅಷ್ಟೇ ಹೇಳಿದ್ದಷ್ಟೆ.

“ಮದುವೆಗೆ ಡ್ರೆಸ್ ತೆಗವಲೂ ಇಲ್ಲಿಗೇ ಬನ್ನಿ ಡಾಕ್ಟರೇ, ನಿಂಗೊಗೆ ಬೇಕಾಗಿ ಸ್ಪೆಶಲ್ ಆಗಿ ತರ್ಸಿಕೊಡುವೆ” ಹೇಳಿದ್ದಕ್ಕೆ  “ಖಂಡಿತ ಬತ್ತೆಯ” ಹೇಳಿಕ್ಕಿ ಸುಪ್ರಿಯನ ಕೈಲಿಪ್ಪ ಕಟ್ಟಂಗಳ ಅವನೇ ಕೈಲಿ ತೆಕ್ಕೊಂಡು ಇಬ್ರೂ ಹೆರ ಬಂದವು.
ಸುಗುಣಾ ಮೇಡಂ ದೆ ಹೆರ ನಿಂದೊಂಡಿದ್ದತ್ತು. ಮೊಬೈಲ್ ಇದ್ದರೆ ಇವರದ್ದೊಂದು ಪಟ ತೆಗವಲಾವ್ತಿತೂಳಿ ಆತು ಸುಪ್ರಿಯಂಗೆ. ಮೊಬೈಲ್ ಇಲ್ಲದ್ದ ಕಾರಣ ಮನಸಿನ ಆಶೆಯ ಅಲ್ಲೇ ಚೂಂಟಿ ಹಾಕಿತ್ತು.

“ಎಂಗೊ ಹೆರಡೆಕಾ ಮೇಡಂ, ನಿಂಗೊ ಹೇಂಗೆ ಬಂದದು, ಆಶ್ರಮಕ್ಕೆ ಬಿಡೆಕಾ” ಕೇಳಿದ್ದಕ್ಕೆ ಅವು ಅಲ್ಲೇ ಇಪ್ಪ ಕಾರು ತೋರ್ಸಿ “ಇದರ್ಲಿ ಬಂದದು” ಹೇಳಿದವು.

ಸುದೀಪ ಅವರ ಹತ್ತರೆ ಹೋಗಿ ಆಶ್ರಮದ  ವಿಶಯ ಮಾತಾಡಿಂಡಿತ್ತಿದ್ದ. ಸುಪ್ರಿಯ ಅವರ ಎಡೇಲಿ ಹೋಪಲೆ ಮನಸಿಲ್ಲದ್ದೆ ಕಾರಿನ ಹತ್ತರೆ ಬಂದು ನಿಂದು ಸುತ್ತೂ ಹೋಪವರ ನೋಡ್ಲೆ ಸುರು ಮಾಡಿತ್ತು.
ಅದೇ ಹೊತ್ತಿಂಗೆ ಮಾರ್ಗದ ಆಚೊಡೆಲಿ  ಹೋಪ ನಾಲ್ಕೈದು ಜನರ ಒಟ್ಟಿಂಗೆ ಇದ್ದ ಒಂದು ಜನರ ಕಾಂಬಗ ಅದರ ಮೈ ನಡುಗಿತ್ತು. ಆ ಮನುಶ್ಯನ  ಕೈಲಿಪ್ಪ ಬಾಲೆ “,ಅಪ್ಪಾ..ಅಪ್ಪಾ…” ಹೇಳಿ ಅವರ ಭಾಶೆಲಿ ಎಂತೋ ಹೇಳ್ತಾ ಇಪ್ಪದು ಕಾಂಬಗ ಒಂದು ಕ್ಷಣ ಅದರ ಮೈ ಜುಮ್ ಆತು.

‘ಅದೇ….ಟೆಂಪೋ ಡ್ರೈವರು….!!!!! ,ಇದಕ್ಕೆ ಮದುವೆಯಾಗಿ ಮಕ್ಕೊ ಕೂಡ ಇದ್ದವಾ..ದೇವರೇ….ಎನ್ನ ತಲಗೆ ಜೆಪ್ಪೆಕು. ಒಂದು ರೆಜ ಹಿಂದೆ ಮುಂದೆ ನೋಡದ್ದೆ ಅದರ ನಂಬಿದ್ದು ಸಾಕು..ಅಯ್ಯೋ ದೇವರೇ..ಎನ್ನ ಅಬ್ಬೆ ಅಪ್ಪ ಮಾಡಿದ ಪುಣ್ಯ ಎನ್ನ ಕಾಪಾಡಿದ್ದು. ವಿಜಯ ನಿನ್ನೆ ಅದರೊಟ್ಟಿಂಗೆ ಕರಕ್ಕೊಂಡು ಹೋಗದ್ರೆ….ಆನು…….!!!!
ಕಣ್ಣಿಲ್ಲಿ ನೀರು ತುಂಬಿ ಎದುರ ಇಪ್ಪದೆಂತದೂ ಕಾಣದ್ದಾಂಗಾತು.
‘ದೇವರ ಹಾಂಗಿಪ್ಪ ಸುದೀಪ ಎಲ್ಲಿ? ದಿನೇಸನ ಇನ್ನೊಂದು ಅವತಾರ ಆದ ಆ ಜೆನ ಇಲ್ಲಿ….!! ಹೆಚ್ಚು ಆಲೋಚನೆ ಮಾಡ್ಲೆ ತಲೆ ಓಡದ್ದಾಂಗಪ್ಪಗ ಅದರ ಕಣ್ಣೆದುರು ಕಸ್ತಲೆ ಕಸ್ತಲೆ ರಾಶಿಯೇ ಬಂದಾಂಗಾತು. ಈಗ ಕೆಳ ಬೀಳುಗು ಹೇಳಿ ಗೊಂತಾದರೂ ಎಂತ ಮಾಡ್ಲೂ ಎಡಿಯದ್ದೆ ಹಾಂಗೇ ನಿಂದತ್ತು.

“ಶ್ಶೋ..ನಿನಗೆ ಈ ಬೆಶಿಲಿಂಗೆ ನಿಂಬದಕ್ಕೆ ಕಾರಿನೊಳ ಕೂಬಲಾವ್ತಿತಿಲ್ಯಾ ಕೂಸೇ” ಕಿಮಿ ಬುಡಂದ ಸುದೀಪನ ದೆನಿ ಕೇಳಿ ಫಕ್ಕನೆ ಎಚ್ಚರಿಕೆ ಆತದಕ್ಕೆ.
“ಆನೀಗ ಬಾರದ್ರೆ ಈ ಮಾರ್ಗಲ್ಲಿರ್ತಿತೆ ನೀನು. ಮತ್ತೆ ಮನಗೆ ಎತ್ತಿರೆ ಎನ್ನ ಅಬ್ಬೆ ಅಪ್ಪನ ಮಂಗಳಾರತಿ ಕೂಡ ಸಿಕ್ಕುತಿತು” ಅದರ ಮೋರಗೆ ನೀರು ಹಾಕಿಕ್ಕಿ ಕುಪ್ಪಿ ಮುಚ್ಚಲು ಹಾಕಿ ಕಾರಿನೊಳ ಮಡುಗಿದ° ಅವ.

“ಎನಗೆಂತೋ ಫಕ್ಕನೆ ಗೊಂತಾಯಿದಿಲ್ಲೆ..”
ಅದರ ಕಣ್ಣು ತುಂಬಿ ಬಂತು.
“ಆತು, ಬಿಡು,ಗಂಟೆ ಹನ್ನೆರಡೂವರೆ ಕಳುದತ್ತು.ನಿನಗೆ ಹಶು ಆವ್ತಾದಿಕ್ಕು. ಬೆಶಿಲಿಲ್ಲಿ ನಿಂದದೂ ಸರೀ ಆತು.ಹೋಟೆಲ್ ಗೆ ಹೋಪನಾ” ಹೇಳಿ ಅವ ಕೇಳಿರೂ ಸುಪ್ರಿಯ ಒಪ್ಪಿದ್ದಿಲ್ಲೆ. ಅದಕ್ಕೆ ಆದಷ್ಟು ಬೇಗ ಒಂದರಿ ಮನೆಗೆ ಎತ್ತಿರೆ ಸಾಕೂಳಿ ಆಗಿಂಡಿದ್ದತ್ತು.

ಎಷ್ಟೊತ್ತಿಂಗೂ ಮೊಬೈಲ್ ಕೈಲಿ ಹಿಡ್ಕೊಂಡಿದ್ದ ಕಾರಣ ಸುತ್ತಮುತ್ತ ಎಂತ ಆವ್ತು ಹೇಳಿ ಕೂಡ ಗೊಂತಾಗದ್ದಷ್ಟು ಕುರುಡಿ ಆಗಿ ಹೋದೆನ್ನೇಳಿ ಎದೆಲಿ ಸಂಕಟ ಆವ್ತಾ ಇದ್ದತ್ತು. ಇಂದೂದೆ ಮೊಬೈಲ್ ಕೈಲಿದ್ದರೆ ಅದನ್ನೇ ನೋಡಿಂಡು ಇರ್ತಿತಷ್ಟೆ. ಆರಾರು ಮೈ ಒರಸಿಂಡು ಹೋದರೂ ಕೂಡ ಅವರ ಮೋರೆ ತಿರುಗಿ ನೋಡುವ ಕ್ರಮ ಇಲ್ಲೆ. ಅಷ್ಟೂದೇ ಮೊಬೈಲ್ ಪೋನಿನೊಳ ಇದ್ದದು. ಈ ಎರಡು ದಿನ ಮೊಬೈಲ್ ಕರೇಲಿ ಮಡುಗಿದ ಮತ್ತೆ ಬದುಕಿನ ಎಷ್ಟು ಸತ್ಯಂಗೊ ಗೊಂತಾತು. ದೇವರೇ….ನೀನೇ ಈ ಸುಪ್ರಿಯನ ಕಾಪಾಡಿದೆ.

ಸಿನೆಮಾ ನೋಡಿಂಡು ಅದರ್ಲಿ ಕಾಂಬದೇ ನಿಜವಾದ ಜೀವನ ಹೇಳಿ ಜಾನ್ಸಿಂಡು ಆ ಮನುಷ್ಯನ ಒಟ್ಟಿಂಗೆ ಹೋಪಲೆ ಹೆರಟು,ಸಮಾಜಲ್ಲಿ ಎಂತೋ ಸಾಧನೆ ಮಾಡಿ, ಒಳ್ಳೆ ಹೆಸರು ಗಳಿಸುತ್ತೆ ಹೇಳಿ ಹೆರಟ ಜನಕ್ಕೆ ಸಮಾಜಲ್ಲಿ ಒಳ್ಳೆ ಹೆಸರು ಗಳಿಸೆಕಾರೆ ಎಂತ ಮಾಡೆಕೂಳಿ ಇಂದು ಗೊಂತಾತು.
ಸುದೀಪನ ಒಳ್ಳೆ ಗುಣ,ಅವನ ದಾನ ಧರ್ಮ, ನಯವಿನಯ…..ಓಹ್….. ತುಂಬ ಪೈಸೆ ಇಪ್ಪವ° ಆದರೂ, ಇಷ್ಟು ಪ್ರತಿಭಾವಂತ ಆದರೂ ರಜವೂ ಅಹಂಕಾರ ಇಲ್ಲೆ. ಮದುವೆ ಅಪ್ಪಲಿಪ್ಪ ಕೂಸು ಹತ್ತರೆ ಇದ್ದರೂ ಯಾವುದೇ ಅತಿರೇಕದ ವರ್ತನೆ ಇಲ್ಲೆ…..ಅದೆಲ್ಲ ಗ್ರೇಶುಗ ಅದಕ್ಕೆ ದುಃಖ ಬಂದು ತಡೆವಲೇ ಎಡಿಯ.

“ಎಂತಾತೂಳಿ ಕೂಗುತ್ತೇ…..ಆನು ಕುಶಾಲಿಂಗೆ ಹೇಳಿರೂ ನಿನಗೆ ಬೇಜಾರಾವ್ತರೆ ನಿನ್ನತ್ರೆ ಮಾತಾಡುದೇಂಗಪ್ಪಾ…..” ಕಾರು ನಿಲ್ಸಿ ಅದರ ಹೊಡೆಂಗೆ ತಿರುಗಿ ಕೇಳಿದ° ಅವ°.

“ಹಾಂಗಲ್ಲ ಭಾವಾ..ಎನಗೆ ನೀನೂಳಿರೆ ತುಂಬಾ ತುಂಬಾ ಇಷ್ಟ.. ನಿನ್ನ ಒಳ್ಳೆ ಗುಣ ಗೊಂತಪ್ಪಲೆ ಮಾತ್ರ ಇಷ್ಟು ಸಮಯ ಕಾಯೆಕಾಗಿ ಬಂತು”
ಅವಂಗೆ ಅದರ ಮಾತು ಸರಿಯಾಗಿ ಅರ್ಥ ಆಗದ್ರೂ ಅದರ ಮನಸಿಲ್ಲಿದ್ದ ತಪ್ಪು ಕಲ್ಪನೆ ದೂರ ಆತನ್ನೇಳಿ ಸಮದಾನ ಆತು.

“ಆ ವಿಶಯ ಬಿಡು, ಆನು ನಿನ್ನೆ ಹೇಳಿದ್ದಿಲ್ಯಾ..ಮದುವೆ ವಿಶಯಲ್ಲಿ ಇಬ್ರಿಂಗೂ ಒಪ್ಪಿಗೆ ಇದ್ದರೆ ಮಾತ್ರ ಮುಂದುವರಿವದೂಳಿ..ನಿನಗೆ ಇಷ್ಟ ಇಲ್ಲದ್ರೆ ಎನಗೆ ಯೇವ ಒತ್ತಾಯವೂ ಇಲ್ಲೆ. ನಿನ್ನ ಮೇಗೆ ಇಪ್ಪ ಪ್ರೀತಿ ಕಮ್ಮಿಯೂ ಆಗ..ನೀನು ಯೇವಗಲೂ ಕೊಶೀಲಿ ಇರೆಕೂಳಿಯೇ ಎನಗಿಪ್ಪದು”

“ಭಾವಾ….ಸಾಕು……ಆನು ಹಾಂಗಲ್ಲ ಹೇಳಿದ್ದು…….! ” ಸುಪ್ರಿಯ ಅವನ ಮಾತು ಪೂರ್ತಿ ಮಾಡ್ಲೆ ಬಿಟ್ಟಿದಿಲ್ಲೆ. ಮನಸ್ಸಿಲ್ಲಿಪ್ಪದರ ಹೇಳದ್ರೆ ಅವನ ಹಾಂಗಿದ್ದ ಒಳ್ಳೆ ವ್ಯಕ್ತಿಗೆ ಮೋಸ ಮಾಡಿದಾಂಗಾವ್ತು. ಹೇಳಿರೇ…….ಅವ° ಎನ್ನ ಮದುವೆಪ್ಪಲೆ ಒಪ್ಪದ್ರೆ …….ದೇವರೇ……ಈ ಎದೆಯ ಸಂಕಟ ಅವನತ್ರೆ ಹೇಳದ್ರೆ ಮುಂದೆ ಅವನೊಟ್ಟಿಂಗೆ ಬದ್ಕುಲೇ ಎಡಿಯ. ಅವ ಮದುವೆಗೆ ಒಪ್ಪದ್ರೆ ಬೇಡ, ಆರನ್ನೂ ಮದುವೆ ಅಪ್ಪಲಿಲ್ಲೆ. ಸುದೀಪನಷ್ಟು  ಒಳ್ಳೆ ಜೆನಂಗೊ ರಾಶಿ ಮಡುಗಿ ಹುಡ್ಕಿರೂ ಸಿಕ್ಕವು. ಹಾಂಗೆ ಗ್ರೇಶಿಂಡು ಮನಸ್ಸು ಗಟ್ಟಿ ಮಾಡಿ ಎಲ್ಲಾ ವಿಶಯವನ್ನು ಅವನತ್ರೆ ಹೇಳಿತ್ತು..

“ವಿಜಯ ನಿನ್ನೆ ಎನ್ನ ಆಶ್ರಮಕ್ಕೆ ಕರಕ್ಕೊಂಡು ಹೋಗದ್ರೆ ನಿನ್ನೆ ಹೊತ್ತೋಪಗ ಅದರೊಟ್ಟಿಂಗೆ ತಿರುಗುಲೆ ಹೋವ್ತಿತೆ. ಆದರೆ ಅದು ಸುಶೀಲನ ಕತೆ ಹೇಳಿದ ಕೂಡ್ಲೇ ಎನ್ನ ತಪ್ಪು ಎನಗೆ ಗೊಂತಾತು ಭಾವಾ°. ಎನಗೆ ಆ ಕ್ಷಣ ನಿನ್ನ ಕಾಣೆಕು, ನಿನ್ನತ್ರೆ ಮಾತಾಡೆಕೂಳಿ ಆಯಿದು ಭಾವಾ°.. ನೀನು ವಿಜಯನ ಮದುವೆ ಆಗು ಭಾವಾ° ,ನಿನಗೆ ಹೇಳಿ ಮಾಡ್ಸಿದ ಹಾಂಗಿದ್ದ ಕೂಸದು, ನಡೆನುಡಿ ಎಲ್ಲ ಚಂದ. ಆಶ್ರಮಲ್ಲಿ ಇಪ್ಪದು ಹೇಳಿ ಬಿಟ್ರೆ ಅದಕ್ಕೆ ಬೇರೆ ಯೇವದೇ ಕೊರತೆ ಇಲ್ಲೆ. ಆನು ನಿಜವಾಗಿ ತಪ್ಪು ಮಾಡಿದ್ದೆ ಭಾವಾ…..” ಎರಡೂ ಕೈಲಿ ಮೋರೆ ಮುಚ್ಚಿಂಡು ಎಕ್ಕಿ ಎಕ್ಕಿ ಕೂಗುವ ಅದರ ಕಂಡು ಅವ ರಜ ಹೊತ್ತು ಸುಮ್ಮನೆ ನೋಡಿದ°.

ಅವನ ಪ್ರತಿಕ್ರಿಯೆ ಕಾಣದ್ದಿಪ್ಪಗ ಅದಕ್ಕೆ ಮತ್ತಷ್ಟು ಸಂಕಟ ಆತು. ಇಷ್ಟರವರೆಗೆ ಅವನ ತಾಳ್ಮೆ, ಸಹನೆ ಮಾತ್ರ ನೋಡಿ ಗೊಂತಿಪ್ಪ ಅದಕ್ಕೆ ಅವನ ಕೋಪ ಹೇಂಗಿಕ್ಕೊ ಹೇಳಿ ಆತು. ಅವಂಗೆ ಅಸಹ್ಯ ಆವ್ತಾದಿಕ್ಕು ಎನ್ನ ಮೋರೆ ನೋಡ್ಲೆ…….! ರಜ ಹೊತ್ತು ಕೂಗಿಕ್ಕಿ ತನ್ನಷ್ಟಕ್ಕೆ ಸಮದಾನ ಮಾಡಿತ್ತದು. ಅವ ಇನ್ನು ಎನ್ನತ್ರೆ ಮಾತಾಡ ಹೇಳಿ ಗ್ರೇಶಿಯಪ್ಪಗ ಈ ಕ್ಷಣ ಭೂಮಿ ಬಾಯಿ ಬಿಟ್ಟಿದ್ದರೇ ಹೇಳುವ ಭಾವನೆ ಬಂದರೂ ಅಸಹಾಯಕ ಸ್ಥಿತಿಲಿ ಇಪ್ಪ ಕಾರಣ ಚೂಡೀದಾರದ ಶಾಲಿಲ್ಲಿ ಮೋರೆ ಉದ್ದಿಕ್ಕಿ ಅವನ ಹೊಡೆಂಗೆ ಮೆಲ್ಲಂಗೆ ತಿರುಗಿ ನೋಡಿದ್ದು.

“ಆ ಶಾಲಿಲ್ಲಿ ಮೋರೆ ಉದ್ದಿ ಪ್ರಯೋಜನ ಇಲ್ಲೆ.ಇದಾ..ಇದರ್ಲಿ ಉದ್ದು” ಅವನ ಕಿಸೆಲಿಪ್ಪ ಟವೆಲ್ ತೆಗದು ಅದರ ಕೈಗೆ ಕೊಟ್ಟು ಹೇಳಿಯಪ್ಪಗ ಅದಕ್ಕೆ ರಜಾ ಸಮದಾನ ಆತು.
“ಹೆರ ಇಳಿ” ಹೇಳಿಕ್ಕಿ ಅವ ಕಾರಿನ ಬಾಗಿಲು ತೆಗದು ಹೆರ ಇಳುದಿಕ್ಕಿ ಅದರತ್ರೆ ಇಳಿವಲೆ ಹೇಳಿಕ್ಕಿ ಅದರ ಕೈಗೆ ನೀರಿನ ಕುಪ್ಪಿ ಕೊಟ್ಟು
“ಇನ್ನೊಂದರಿ ಲಾಯ್ಕಲ್ಲಿ ಮೋರೆ ತೊಳದು ಟವೆಲಿಲ್ಲಿ ಮೋರೆ ಉದ್ದಿಕ್ಕಿ ಕೂರು, ಈಗ ಬಂದೆ”ಹೇಳಿಕ್ಕಿ ಅವ ಕಾರಿನ ಹಿಂದಂಗೆ ಹೋದ°.

ಸುಪ್ರಿಯ ಮೋರೆ ತೊಳದಿಕ್ಕಿ ಅವ ಕೊಟ್ಟ ಟವೆಲಿಲ್ಲಿ ಮೋರೆ ಉದ್ದಿಕ್ಕಿ ಕಾರಿನೊಳ ಕೂದತ್ತು. ಅವ ಐದು ನಿಮಿಷಲ್ಲಿ ವಾಪಾಸು ಬಂದು ಕಾರಿನೊಳ ಕೂದ°.

” ಸೀಟು ಬೆಲ್ಟ್ ಹಾಕದ್ರೆ ಪೋಲೀಸುಗೊ ಸಿಕ್ಕಿರೆ ಎನ್ನ…..
..” ಹೇಳಿಕ್ಕಿ ಸುಪ್ರಿಯನ ಹತ್ತರೆ ಬಗ್ಗಿ ಅದರ ಸೀಟ್ ಬೆಲ್ಟ್ ಹಾಕಿಯಪ್ಪಗ ಮನಸ್ಸಿನೊಳ ಕೊಶೀ ಆತದಕ್ಕೆ.

“ಇದಾ…ಈ ಚಾಕಲೇಟ್ ತಿಂದು ನೆಗೆ ಮಾಡು ಮಾರಾಯ್ತೀ..ಅಪ್ಪ ನಾಲ್ಕೈದು ಸರ್ತಿ ಆತು ಕಾಲ್ ಮಾಡುದು. ನಿನಗೆ ಕೂಗಿ ಆಗಲೀಳಿ ಆನು ಪೋನ್ ತೆಗೆಯದ್ದದು..ಇನ್ನೀಗ ನಿನ್ನ ಕರಕ್ಕೊಂಡು ಆನು ಘಟ್ಟ ಹತ್ತಿದೇಳಿ ಗ್ರೇಶುಲಾಗನ್ನೇ..ನೀನೇ ಪೋನ್ ಮಾಡಿ ಹೇಳು.ಹತ್ತು ನಿಮಿಷಲ್ಲಿ ಎತ್ತುತ್ತೇಯ° ಹೇಳಿ” ಹೇಳಿಕ್ಕಿ ಅವನ ಪೋನ್ ಕೊಟ್ಟ°.

ಇಷ್ಟರವರೆಗೆ ಕೇಳಿದ ವಿಶಯದ ಬಗ್ಗೆ ಎಂತ ಪ್ರಶ್ನೆಯೂ ಕೇಳದ್ದೆ ಮದ್ಲಾಣಾಂಗೆ ಮಾತಾಡುವ ಅವನ ಮೇಗೆ ಅದರ ಪ್ರೀತಿ, ಅಭಿಮಾನ ಮತ್ತಷ್ಟು ಹೆಚ್ಚಿತ್ತು. ಪೋನ್ ಮಾಡಿ ಮಾವನತ್ರೆ ಮಾತಾಡಿಕ್ಕಿ, ಡ್ರೈವಿಂಗ್ ಮಾಡುವ ಸುದೀಪನನ್ನೇ ನೋಡಿಂಡು ಕೂದತ್ತದು.

” ಅಂಬಗ ಈಗ ಆರಿಂಗೆ ಮದಾಲು ಮದುವೆ ಆಯೆಕಾದ್ದು, ವಿಜಯಂಗಾ ಅಲ್ಲ…..” ಅದಕ್ಕೆ ಅವನ ಮಾತು ಕೇಳಿ ನಾಚಿಕೆ ಆತು.

“ಅದೂ…..ಮತ್ತೇ……” ಎಂತ ಹೇಳ್ಲೂ ಅರಡಿಯದ್ದೆ ಅವನ ಮೋರೆ ನೋಡಿತ್ತದು.

“ಇದಾ..ಇಷ್ಟರವರೆಗೆ ಹೇಳಿದ ವಿಶಯ ಇಲ್ಲಿಗೇ ಬಿಡು,ಅದು ಮುಗುದ ಅಧ್ಯಾಯ! ನೀನು ಯೇವಗಲೂ ಕೊಶೀಲಿರೆಕು. ಮತ್ತೇ….ನೀನು ಹೇಳಿದ ಮತ್ತೊಂದು ವಿಶಯ ಅದರ ಬಗ್ಗೆ ಆಲೋಚನೆ ಮಾಡುವ°. ಕೇಶವಣ್ಣನ ತಂಗೆಯೇ ಈ ಆಶ್ರಮದ ಮೆನೇಜರ್ ಆಗಿಪ್ಪಲೂ ಸಾಕು. ಸುಗುಣಶೀಲಾ ಹೇಳಿ ಅವರ ಹೆಸರು”

“ಹ್ಹೇಂ……” ಸುಪ್ರಿಯಂಗೆ ಆಶ್ಚರ್ಯ ತಡವಲೆಡಿಯದ್ದಾಂಗಾತು.
“ಅಂಬಗ ಅನುಮಾನವೇ ಇಲ್ಲೆ, ಸುಗುಣಶೀಲಾ ಹೇಳುವ ಹೆಸರಿನ ಸುಶೀಲಾ ಹೇಳಿದ್ದಾದಿಕ್ಕು ವಿಜಯ. ನೀನು ಮನಸ್ಸು ಮಾಡಿರೆ ನಿನಗದರ ತಿಳಿವಲೆಡಿಗು ಭಾವಾ°”

“ಆಹಾ….ಕೂಚಕ್ಕ ಈಗ ಉಶಾರಿ ಆತನ್ನೇ..ಖಂಡಿತ ಪ್ರಯತ್ನ ಮಾಡುವ°. ನಿನ್ನ ಎನಗೆ ಸಿಕ್ಕುವ ಹಾಂಗೆ ಮಾಡಿದ ಆ ಸುಶೀಲನ ಹುಡ್ಕಿಂಡು ಹೋಪದೇ ಇನ್ನು…..” ಅವ ಕುಶಾಲು ಮಾಡಿ ಮಾತಾಡುಗ ಅವನ ನೆಗೆಯ ಬೆಣಚ್ಚಿಲ್ಲಿ ಹೊಸ ಬದುಕಿನ ರಂಗೋಲಿ ಹೊಳವದು ಕಂಡತ್ತು ಸುಪ್ರಿಯಂಗೆ.

 

ಇನ್ನು ಇನ್ನಾಣ ವಾರಕ್ಕೆ>>>>>

ಪ್ರಸನ್ನಾ ಚೆಕ್ಕೆಮನೆ

8 thoughts on “ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ

  1. ಕಥೆ ಲಾಯ್ಕ ರೈಸುತ್ತಾ ಇದ್ದು.. ಇನ್ನುದೆ ಒಳ್ಳೆ ಎಪಿಸೋಡ್ ಬರಲಿ ಹೇಳಿ ಹಾರೈಸುತ್ತೇ.

  2. ಕಥೆ ಸೂಪರ್ ಆಗಿ ಹೋವುತ್ತಾ ಇದ್ದು.ಸುಶೀಲ, ಮಕ್ಕೊ, ಕೇಶವ ಎಲ್ಲ ಬೇಗ ಒಂದಾಗಲಿ.ಸುದೀಪನ ಒಳ್ಳೆ ಗುಣವೂ,ಡ್ರೈವರನ ಅಸಲಿ ಮುಖವೂ ಸುಪ್ರಿಯಂಗೆ ಒಟ್ಟೊಟ್ಟಿಂಗೆ ಗೊಂತಾದ್ದು ಒಳ್ಳೇದಾತು.ಕಥೆ ನಮ್ಮ ಕಣ್ಣೆದುರೇ ಆದ ಹಾಂಗೆ ಆವುತ್ತಾ ಇದ್ದು.ಬೇಗ ಮುಗುಶಡಿ ಪ್ರಸನ್ನಕ್ಕಾ..

  3. ಸುಶೀಲಾ ಸುಗುಣಶೀಲಾ ಇಬ್ರುದೆ ಒಂದೇ ಆಗಿರೆಕು. ಅದು ವಿಜಯನ ‘ಆಶ್ರಮದ ಒಂದು ಕೂಸು ‘ ಹೇಳಿ ಎಂತಕೆ ಹೇಳಿತ್ತಪ್ಪ. ಇನ್ನೂ ರಜ್ಜ suspense ಇದ್ದಹಾಂಗಿದ್ದು. ಜವುಳಿ ಅಂಗಡಿಲಿ ಅತ್ತಿಗೆ ಭಾವಂದ್ರ ಮಾತುಕತೆ ನೈಜವಾಗಿದ್ದು. ಬರಳಿ ಮುಂದಾಣ ಭಾಗ. ಕತೆಯ ಬೇಗ ಮುಗುಶೆಡಿ ಪ್ರಸನ್ನಕ್ಕ.

    1. ಧನ್ಯವಾದ ಅಣ್ಣಾ

  4. ತುಂಬಾ ಕುತೂಹಲ… ಕಥೆ ಈಗ ಖುಷಿ ಅಪ್ಪಾಂಗೆ ಹೋವ್ತಾ ಇದ್ದು… ಇನ್ನು ಸುಶೀಲಂದು ಮತ್ತೆ ವಿಜಯಂದು ಸರಿಯಾಗಿ ನೆಲೆ ಆದರೆ ಸಂತೋಷ ..

  5. Manassilli ಯಾವ ಕಲ್ಮಶ ಇಲ್ಲದ್ದೆ ಒಳ್ಳೇದೇ ತುಂಬಿದರೆ ಸರಿಯಾಗಿ ಎಲ್ಲವೂ ಅರ್ಥ ಅಕ್ಕು…ಹೆರ ಕಂಡದೆ ಸರಿ ಹೇಳಿ thilivadu ತಪ್ಪು…ವಿಜಯನ ಬುದ್ದಿವಾದಂದ ಸುಪ್ರಿಯಾ ಡ್ರೈವರನ ಬಿಟ್ಟ ಕಾರಣ ಈಗ ಸುದೀಪನ ಅರ್ಥ ಮಾಡಿತ್ತು….ಪ್ರಪಂಚ ಹೆಂಗಿದ್ದು ಹೇಳಿ ಸರಿಯಾಗಿ ನೊಡದ್ದೆ ಎನ್ನದೆ ಸರಿ ಹೇಳಿ nadadiddare ಅನರ್ಥ ಆವುತಿತ್ತು…ಸುಷಿಯ ಇನ್ನೊಂದು ಕಥೆ ಹುಟ್ಟುತ್ತಿತ್ತು…ಪ್ರತಿ ಒಂದು ವಾಕ್ಯಲ್ಲಿ ಬುದ್ಧಿವಾದ ಇದ್ದು ಪ್ರಸನ್ನ….ಕೇಶವ, ಸುಶಿ ಕಥೆ ಈ ರೀತಿಲಿ ಬಿಚ್ಚಿ ಬತ್ತಾ ಇದ್ದು…ಇದು ಬರೀ ಕಥೆ ಅಲ್ಲ…ಕೂಸುಗೊಕ್ಕೆ ಬುದ್ಧಿವಾದ…ಯಾವುದರ ಕುರಿತು ವಿಮರ್ಶೆ baravalu ಕೈ ಕಟ್ಟುತ್ತಾ ಇದ್ದು ಪ್ರಸನ್ನ….ಸೂಪರ್ ಸೂಪರ್ ಹೇಳಿ ಮಾತ್ರ ಹೇಳೆಕ್ಕಷ್ಟೆ….ಸ್ವಂತ ಕುಟುಂಬದ ಪುನಃ ಒಳ ಹೋಗಿ ಬಂದ ಹಾಂಗೆ ಆವುತ್ತಾ ಇದ್ದು..ಕಣ್ಣೆದುರೇ nadattha ಇಪ್ಪ ಕಥೆಯೋ…..ಹೇಳುವಷ್ಟು ತಲ್ಲೀನ ಆಗಿ ಹೋವುತ್ತು

    1. ಧನ್ಯವಾದ ಅಕ್ಕಾ

  6. Dineshana inondu avathara – tempo driver na asali bannava supriya kandadu olledathu. Ega adake prapanchada bannangala arivathu. Sudeepana olle gunangala parichayavu addu mathu olledathu. Innu susheelane ashramada madam adikkali helva kuthoohala baaki iddu.. istravarege sikku sikkagidda koodalu ondonde bidusutta iddu heli ansuttu.. katheya olle reethili tekondu hovta iddi chikki 👌👌

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×