ಸೋಮೇಶ್ವರ ಶತಕ 31-35

ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು. ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡ್ತವು.
ಕಳುದ ಸರ್ತಿ ಪ್ರಕಟ ಆದ ಐದು ಪದ್ಯಂಗೊ ಇಲ್ಲಿದ್ದು.
ಮುಂದಾಣ (31 – 35) ಈ ಸರ್ತಿ. ಎಲ್ಲೋರುದೇ ಓದಿ ಅರ್ತುಗೊಂಬೊ!

ಸೋಮೇಶ್ವರ ಶತಕ:

ಅರ್ಥ ವಿವರಣೆ: ಶರ್ಮಪ್ಪಚ್ಚಿ
ಗಮಕ ವಾಚನ
: ಶ್ರೀಶಣ್ಣ

ಗಿಡ ವೃಕ್ಷಂಗಳಿಗಾರು ನೀರನೆರೆವರ್ ನಿತ್ಯಂ ಮಹಾರಣ್ಯದೊಳ್ |
ಕಡು ಕಾರ್ಪಣ್ಯದಿ ಕೇಳ್ವವೇ ಶಿಖಿ ಜಲೋರ್ವೀ ಮಾರುತಾಕಾಶಮಂ ||
ಮೃಡ ನೀನಲ್ಲದದಾರು ಕಾಯ್ವರು ಜಗದ್ರಕ್ಷಾಕರಂ ನೀನೆಲೈ |
ಕೊಡುವರ್ ಕೊಂಬರು ಮರ್ತ್ಯರೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || ೩೧||

 ದೊಡ್ಡ ದೊಡ್ಡ ಕಾಡಿಲ್ಲಿ ಇಪ್ಪ ಮರಂಗೊಕ್ಕೆ ನಿತ್ಯ ನೀರು ಎರವವು ಆರಿದ್ದವು? ಎಂಗೊಗೆ ಕಷ್ಟ ಆವ್ತ ಇದ್ದು ಹೇಳಿ ಅವು ಪಂಚ ಭೂತಂಗಳ ಹತ್ರೆ ಹೋಗಿ ದೈನ್ಯತೆಂದ ಬೇಡಿಗೊಳ್ತವಾ? ಎಲೈ ಶಿವನೇ, ಈ  ಲೋಕವ ರಕ್ಷಿಸುವವ ನೀನಲ್ಲದ್ದೆ ಬೇರೆ ಆರು? ಎಲ್ಲದಕ್ಕೂ ನೀನೇ ಕಾರಣ ಆಗಿಪ್ಪಗ ಕೊಡುವದಕ್ಕೂ ತೆಕ್ಕೊಂಬದಕ್ಕೂ ಮನುಷ್ಯರಿಂಗೆ ಸ್ವಾತಂತ್ರ್ಯ ಎಲ್ಲಿದ್ದು?
ಶಿಖಿ= ಕಿಚ್ಚು, ಬೆಂಕಿ,         ಉರ್ವೀ= ಭೂಮಿ  ಮಾರುತ= ಗಾಳಿ

 ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನ್ಯಗ್ರೋಧಬೀಜಂ ಕೆಲಂ |
ಸಿಡಿದುಂ ಪೆರ್ಮರನಾಗದೇ ಎಳೆಗರುಂ ಎತ್ತಾಗದೇ ಲೋಕದೊಳ್ ||
ಮಿಡಿ ಪಣ್ಣಾಗದೆ ದೈವದೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ |
ಬಡವಂ ಬಲ್ಲಿದನಾಗನೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || ೩೨||

 ಬಾನಿಲ್ಲಿ ಇಪ್ಪ ಚಂದ್ರ ಕೃಷ್ಣ ಪಕ್ಷಲ್ಲಿ ಕ್ಷೀಣ ಆವ್ತಾ ಇದ್ದ ಹಾಂಗೆ ಕಂಡರೂ ಶುಕ್ಲ ಪಕ್ಷಲ್ಲಿ ಮತ್ತೆ ವೃದ್ಧಿ ಆಗಿಂಡು ಹಾಓವ್ತಾ ಇಲ್ಲೆಯಾ? ಆಲದ ಮರದ ಬೀಜ ಕಾಂಬಲೆ ತುಂಬಾ ಸಣ್ಣ. ಅದು ಸಿಡಿದು ನೆಲದ ಮೇಗೆ ಬಿದ್ದು ಮತ್ತೆ ಚಿಗುರಿ ದೊಡ್ಡ ಮರ ಆವ್ತಿಲ್ಲೆಯಾ? ಇಂದು ಸಣ್ಣ ಕಂಜಿ ಆಗಿಪ್ಪದು ಮುಂದೆ ಬೆಳದು ದೊಡ್ಡ ಹೋರಿ ಆವ್ತಿಲ್ಲೆಯಾ? ಸಣ್ಣ ಸಣ್ಣ ಮೆಡಿ ಹೇಳಿ ಕಾಂಬದು ಕೆಲವು ಸಮಯ ಕಳುದಪ್ಪಗ ಬೆಳದು ಹಣ್ಣಾವ್ತಿಲ್ಲೆಯಾ? ಹಾಂಗೆಯೇ ದೇವರ ದಯೆಯಿದ್ದರೆ ಈಗ ಬಡವ ಅಗಿಪ್ಪವ° ಒಂದಾನೊಂದು ಕಾಲಲ್ಲಿ ಭಾಗ್ಯವಂತನಾಗದ್ದೆ ಇಕ್ಕೋ?
ಉಡುರಾಜ= ಚಂದ್ರ (ನಕ್ಷತ್ರಂಗಳ ರಾಜ)        ನ್ಯಗ್ರೋಧ= ಆಲ

 ಸ್ವಕುಲೋಧ್ದಾರಕನಾಗಿ ಭಾಗ್ಯಯುತನಾಗಾಯುಷ್ಯಮುಳ್ಳಾತನಾ |
ಗಕಳಂಕಾಸ್ಪದಳಾಗಿ ಬಾಳ್ವ ಸತಿಯಿರ್ದಾನಂದಮಂ ಮಾಳ್ಪ ಬಾ ||
ಲಕನಿರ್ದೀಶ್ವರಭಕ್ತನಾಗಿ ತನುವೊಳ್ ದಾರ್ಢ್ಯಂ ಸಮಂತೊಪ್ಪುವಾ |
ಸುಖ ಪೂರ್ವಾರ್ಜಿತ ಪುಣ್ಯವೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || ೩೩||

ಪೂರ್ವಜನ್ಮದ ಪುಣ್ಯ ಫಲಂದಾಗಿ ಎಂತದೆಲ್ಲಾ ಭಾಗ್ಯ ಸಿಕ್ಕುತ್ತು ಹೇಳ್ವದರ ಇಲ್ಲಿ ಪ್ರಸ್ತುತ ಪಡಿಸಿದ್ದವು.
ತನ್ನ ಕುಲವ ಉದ್ಧಾರ ಮಾಡುವವನಾಗಿ, ಐಶ್ವರ್ಯ ಮತ್ತೆ ದೀರ್ಘಾಯುಷ್ಯ ಪಡಕ್ಕೊಂಡು, ಯಾವದೇ ಅಪವಾದಕ್ಕೆ ಗುರಿಯಾಗದ್ದೆ ನಿಷ್ಕಳಂಕಳಾಗಿ ಸಹಬಾಳ್ವೆ ಮಾಡುವ ಹೆಂಡತಿ ಮತ್ತೆ ಮನಸ್ಸಿಂಗೆ ಸಂತೋಷ ಕೊಡುವ ಮಗನಿಂದ ಕೂಡಿ, ಶಿವಭಕ್ತನಾಗಿ, ಒಳ್ಳೆ ದೇಹದಾರ್ಢ್ಯಹೊಂದಿಗೊಂಡು ಬಾಳುವ ಸುಖ ಸಿಕ್ಕೆಕ್ಕಾದರೆ ಪೂರ್ವ ಜನ್ಮದ ಪುಣ್ಯ ಬೇಕು. ಸಾಮಾನ್ಯರಿಂಗೆ ಈ ಭಾಗ್ಯ ಸಿಕ್ಕುವಂತದ್ದಲ್ಲ.
ಅಕಳಂಕಾಸ್ಪದಳು = ಅಪವಾದಕ್ಕೆ ಗುರಿಯಾಗದ್ದೆ ಇಪ್ಪವಳು,

 ಮಧುರೇಂದ್ರಂ ಕಡುದಿಟ್ಟನಾಗಲು ಬಳಿಕ್ಕೀಡೇರಿತೇ ದ್ವಾರಕಾ |
ಸದನಂ ವಾರ್ಧಿಯ ಕೂಡದೇ ಕುರುಬಲಾಂಭೋರಾಶಿಯೋಳ್ ಸೈಂಧವಂ ||
ಪುದುಗಲ್ ಬಾಳ್ವನೆ ಭೂಮಿಯಂ ಬಗಿದು ಪೊಕ್ಕೇಂ ದುಂದುಭಿ ಕ್ಷೋಣಿಯೊಳ್ |
ವಿಧಿ ಕಾಡಲ್ ಸುಖಮಾಂಪರೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || ೩೪||

 ಮಧುರಾಪುರದ ಅರಸನಾದ ಕಂಸಾಸುರ ಬಹುಶೂರ ಆದರೂ ಅವನ ಇಷ್ಟದ ಹಾಂಗೆ ನೆಡದತ್ತೋ? ದ್ವಾರಕಾ ಪಟ್ಟಣ ಸಮುದ್ರಲ್ಲಿ ಮುಳುಗಿ ಹೋಯಿದಿಲ್ಲೆಯೋ? ಸೈಂಧವ ಕೌರವರ ಸೈನ್ಯಲ್ಲಿ ಹುಗ್ಗಿ ಕೂದಿದ್ದರೂ ಬದುಕಿ ಒಳುದನೋ? ದುಂದುಭಿ ಹೇಳ್ತ ರಾಕ್ಷಸ ನೆಲವ ಬಗದು ಒಳ ಹೋಗಿ ಸೇರಿಗೊಂಡರೂ ಅವಂಗೆ ಸಾವು ತಪ್ಪಿದ್ದೋ? ಹಾಂಗಾಗಿ ವಿಧಿ ಕಾಡುವಾಗ ಸುಖವಾಗಿ ಬಾಳಲೆ ಸಾಧ್ಯ ಇಲ್ಲೆ.
ಮಧುರೇಂದ್ರ = ಕಂಸ,      ವಾರ್ಧಿ = ಸಮುದ್ರ,          ಪುದುಗಲ್ = ಹೊಕ್ಕರೂ

 ಮರಗಳ್ ಪುಟ್ಟುವ ತಾಣವೊಂದೆ ಖಗಕಂ ರಾಜ್ಯಂಗಳೇಂ ಪಾಳೇ ಭೂ |
ವರರೊಳ್ ತ್ಯಾಗಿಗಳಿಲ್ಲವೇ ಕವಿಗೆ ವಿದ್ಯಾಮಾತೃವೇಂ ಬಂಜೆಯೇ ||
ಧರೆಯೆಲ್ಲಂ ಪಗೆಯಪ್ಪುದೇ ಕರುಣಿಗಳ್ ತಾವಿಲ್ಲವೇ ಲೋಕದೊಳ್ |
ನರರಂ ಪುಟ್ಟಿಸಿ ಕೊಲ್ವನೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || ೩೫||

 ಹಕ್ಕಿಗೊಕ್ಕೆ ಅನುಕೂಲ ಆವ್ತ ಹಾಂಗಿಪ್ಪ ಮರಂಗೊ ಹುಟ್ಟುವದು ಒಂದೇ ಕಡೆ ಅಲ್ಲನ್ನೆ? ಎಲ್ಲಾ ದೇಶಂಗಳೂ ಹಾಳಾಯಿದಿಲ್ಲೆನ್ನೆ? ಕವಿಗೊಕ್ಕೆ ಆಶ್ರಯ ಕೊಟ್ಟು ಆದರುಸುವ ಒಳ್ಳೆ ಗುಣ  ಇಪ್ಪ ರಾಜಂಗೊ ಆರಾದರೂ ಇದ್ದೇ ಇರ್ತವಲ್ಲದೋ?  ವಿದ್ಯೆ ಹೇಳ್ವ ಅಬ್ಬೆ ಪಂಡಿತಂಗೊಕ್ಕೆ ಆಶ್ರಯ ಕೊಡುಸುತ್ತಲ್ಲದೋ? ಅದು  ಬಂಜೆ ಆಯಿದಿಲ್ಲೆನ್ನೆ? ಲೋಕಲ್ಲಿ ಇಪ್ಪ ಎಲ್ಲರೂ ಶತ್ರುಗೊ ಅಲ್ಲನ್ನೆ? ದಯೆ ತೋರುಸುವವು ಇದ್ದೇ ಇರ್ತವಲ್ಲದೋ?  ಮನುಷ್ಯನ ಸೃಷ್ಟಿ ಮಾಡಿದ ದೇವರು ಅವನ ರಕ್ಷಿಸದ್ದೆ ಇರ°.
ಖಗ = ಹಕ್ಕಿ,      ಭೂವರ= ರಾಜ,            ಪಗೆ = ಶತ್ರು

ಶ್ರೀಶಣ್ಣನ ವಾಚನ ಕೇಳಲೆ ಇಲ್ಲಿದ್ದು ಸಂಕೋಲೆಃ-

 

~~~***~~~

ಶರ್ಮಪ್ಪಚ್ಚಿ

   

You may also like...

4 Responses

 1. ಚೆನ್ನೈ ಭಾವ° says:

  ಅಪ್ಪಚ್ಚಿ ಬರದ್ದದೂ ಶ್ರೀಶಣ್ಣ ಹಾಡಿದ್ದದೂ ತುಂಬ ಲಾಯಕ ಆಯ್ದು. ಹರೇ ರಾಮ

 2. ಕೆ.ನರಸಿಂಹ ಭಟ್ ಏತಡ್ಕ says:

  ಬಡವಂ ಬಲ್ಲಿದನಾಗನೇ—ಶಾಲಗೆ ಹೋಪಗ ಕಲ್ತದು ನೆಂಪಾತು.ವ್ಯಾಖ್ಯಾನ,ವಾಚನ ಎರಡೂ ಲಾಯಕ ಆಯ್ದು.’ಹರ ಹರಾ ಶ್ರೀಚೆನ್ನ ಸೋಮೇಶ್ವರಾ’

 3. ಬೊಳುಂಬು ಗೋಪಾಲ says:

  ಶ್ರೀಶಣ್ಣನ ಸ್ವರ ಕೇಳದ್ದೆ ಸುಮಾರು ಸಮಯ ಆಗಿತ್ತು. . ಸೋಮೇಶ್ವರ ಶತಕವ ಶ್ರೀಶಣ್ಣನ ಸ್ವರಲ್ಲಿ ಕೇಳಿ ತುಂಬಾ ಕೊಶಿ ಆತು. ಶರ್ಮಪ್ಪಚ್ಚಿಯ ವಿವರಣೆಯೊಟ್ಟಿಂಗೆ ಸ್ವರವುದೆ ಸೇರಿಯಪ್ಪಗ ಸಂತೋಷ ಆತು.

 4. ಕೆ. ವೆಂಕಟರಮಣ ಭಟ್ಟ says:

  ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *