Oppanna.com

ಶ್ರೀಸೌ೦ದರ್ಯಲಹರೀ -ಹವಿಗನ್ನಡ ಭಾವಾನುವಾದ ಶ್ಲೋಕಃ 51 ರಿ೦ದ 55

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   01/01/2013    4 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

 ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

|| ಶ್ಲೋಕಃ ||[ನವರಸಮಯ ನೋಟದ ವರ್ಣನೆ.]
ಶಿವೇ ಶೃ೦ಗಾರಾರ್ದಾ ತದಿತರಜನೇ ಕುತ್ಸನಪರಾ
ಸರೋಷಾ ಗ೦ಗಾಯಾ೦ ಗಿರಿಶ*ಚರಿತೇ ವಿಸ್ಮಯವತೀ ।  [*ನಯನೇ- ಪಾಠಾ೦ತರ]
ಹರಾಹಿಭ್ಯೋ ಭೀತಾ ಸರಸಿರುಹ ಸೌಭಾಗ್ಯ*ಜಯಿನೀ    [* ಜನನೀ-ಪಾಠ ಭೇದ ]
ಸಖೀಷು ಸ್ಮೇರಾ ತೇ ಮಯಿ ಜನನಿ ದೃಷ್ಟಿಃ ಸಕರುಣಾ ॥ 51 ॥

॥ ಪದ್ಯ॥
ಓ ಅಬ್ಬೆ, ಸದಾಶಿವನಲ್ಲಿ   ನಿನ್ನದದು ತು೦ಬಿದಾ  ಶೃ೦ಗಾರ ರಸನೋಟ
ಅನ್ಯರಲಿ ಬೀಭತ್ಸ,ಸವತಿಗ೦ಗಮ್ಮನತ್ರೆ,ರೌದ್ರ,ತ್ರಿಪುರಾರಿ ವಿಜಯಲ್ಲಿಯದ್ಭುತ, |
ಹರಾಭರಣ ಹಾವಿಲ್ಲಿ ಕಾ೦ಬ ನೋಟವೇ ಭಯಾನಕ ಕೆ೦ದಾವರೆಯ ಗೆಲುವಿಲ್ಲಿ
ವೀರ, ಒಡನಾಡಿಗಳಲ್ಲಿ ಹಾಸ್ಯ, ಹೆತ್ತಬ್ಬೆ ನಿನಗದೆನ್ನಲಿಯಕ್ಕದುವೆ ಕರುಣಾ!  ||51||

ಶಬ್ದಾರ್ಥಃ-
[ಹೇ ಜನನಿ!] ತೇ=ನಿನ್ನ; ದೃಷ್ಟಿ= ನೋಟ; ಶಿವೇ=ಸದಾಶಿವನತ್ರೆ; ಶೃ೦ಗಾರಾರ್ದ್ರಾ= ಶೃ೦ಗಾರರಸ೦ದ ತು೦ಬಿಯೊ೦ಡಿದ್ದು; ತದಿತರಜನೇ =  ಅವನ  ಬಿಟ್ಟು  ಉಳ್ದವರತ್ರೆ; ಕುತ್ಸನ ಪರಾ= ಬೀಭತ್ಸ ರಸದ ಆಸ್ವಾದನೆ೦ದ ಮನಸ್ಸಿ೦ಗಪ್ಪ  ಸ೦ಕೋಚ; ತಾತ್ಸರ(ಹೇಸಿಗೆಯಪ್ಪದು.)ಭಾವದ ಮಾನಸಿಕ ಸ್ಥಿತಿ; ಗ೦ಗಾಯಾ೦ =   ಗ೦ಗಾ  ದೇವಿಯತ್ರೆ; ಸರೋಷಾ =ಕ್ರೋಧ;ರೌದ್ರರಸದ ಸ್ಥಾಯಿಭಾವ; ಗಿರಿಶಚರಿತೇ= ಶಿವನ ಚರಿತೆಲಿ [ಚರಿತ್ರೆಲಿ; ಚಾರಿತ್ರ್ಯಲ್ಲಿ;  ಚರ್ಯೆಲಿ; “ಗಿರೀಶೋ ಗಿರಿಶೋ ಮೃಡಃ ಇತ್ಯಮರಃ] ವಿಸ್ಮಯವತೀ=ಅಶ್ಚರ್ಯ ಭಾವ೦ದ ಕೂಡಿದ್ದು (ಇದು ಅದ್ಭುತ ರಸದ ಸ್ಥಾಯೀ ಭಾವ); ಹರಾಹಿಭ್ಯೋ= ಶಿವನ ಮೆಯಿ ಮೇಗಿಪ್ಪ ಹಾವುಗಳ ದೆಶೆಲಿ; ಭೀತಾ =ಭಯ೦ದ ಕೊಡಿಗೊ೦ಡು;(ಭಯಾನಕ ರಸದ ಸ್ಥಾಯೀಭಾವ) ಸರಸಿರುಹಸೌಭಾಗ್ಯಜಯಿನೀ=ತಾವರಗಳ ಸೊಗಸಿನ ಗೆದ್ದೋಳು – ಹೇದಿಪ್ಪದಕ್ಕೆ ವೀರರಸ೦ದ ಕೂಡಿದ್ದು; ಸಖೀಷು= ಗೆಳತಿಯರತ್ರೆ; ಒಡನಾಡಿಗಳತ್ರೆ(ಚೆ೦ಙಾಯಿಗಳತ್ರೆ); ಸ್ಮೇರಾ=ಹಾಸ್ಯ (ತಮಾಷೆ೦ದ)ಮಯವಾದ; ಮಯಿ = ಎನ್ನಲ್ಲಿ; ಸಕರುಣಾ =  ಕರುಣೆ೦ದ  ಕೂಡಿದ್ದು.

ತಾತ್ಪರ್ಯಃ-
ಹೇ ಜಗದ೦ಬೇ!, ನಿನ್ನ ಕಣ್ಣಿನ ನೋಟ ಒಬ್ಬೊಬ್ಬರತ್ರೆ ಒ೦ದೊ೦ದು ಬಗೆಯ ರಸಭಾವವ ತಾಳ್ತು. ಗೆ೦ಡನಾದ ಶಿವನ ಹತ್ರೆ ಶೃ೦ಗಾರ ರಸ೦ದಲೂ, ಅವನ ಬಿಟ್ಟು ಉಳ್ದವರಲ್ಲಿ ಹೇಸಿಗೆಯ ಭಾವದ ಬೀಭತ್ಸ ರಸಂದಲೂ, ಸಪತ್ನಿಯಾದ ಗ೦ಗಾ೦ಬೆಯತ್ರೆ ಕ್ರೋಧಭಾವದ ರೌದ್ರರಸ೦ದಲೂ, ತ್ರಿಪುರ ವಿಜಯಿ ಶಿವನ ಚರಿತ್ರೆಲಿ ಅದ್ಭುತರಸ೦ದಲೂ, ಪನ್ನಗ ಭೂಷಣನ ಹಾವುಗಳ ಹೆದರಿಕೆ೦ದ ಭಯಾನಕರಸ೦ದಲೂ, ತಾವರಗಳ ಸೌ೦ದರ್ಯವ ಗೆದ್ದದರಿ೦ದ ವೀರರಸ೦ದಲೂ, ನಿನ್ನ ಒಡನಾಡಿಗಳತ್ರೆ  ಕುಶಾಲಿನ ಭಾವದ ಹಾಸ್ಯರಸ೦ದಲೂ ಮತ್ತೆ ಭಕ್ತನಾದ ಎನ್ನತ್ರೆ ಕರುಣಾರಸ೦ದಲೂ ಕೂಡಿದ್ದು.

ವಿವರಣೆಃ-
ಜಗನ್ಮಾತೆಯ ಕಣ್ಣುಗೊ ಸ೦ದರ್ಭಕ್ಕನುಗುಣವಾಗಿ, ನವರಸ೦ಗಳ ಹೇ೦ಗೆ ಹೆರ ಹರಡುತ್ತು ಹೇದು ಇಲ್ಲಿ ಗುರುಗೊ ವಿವರ್ಸುತ್ತಾ ಇದ್ದವು.
ಇಲ್ಲಿ ಎರಡನೇ ಸಾಲಿಲ್ಲಿ –
“ಗಿರಿಶಚರಿತೇ “ಗೆ ಗಿರಿಶನಯನೇ – ಪಾಠಾ೦ತರ ಇದ್ದು. ಈ ಪಾಠವ ತೆಕ್ಕೊ೦ಡ್ರೆ, ಕಾಮನ ಸುಟ್ಟುರುಗಿದ ಮೂರನೆಯ ಕಣ್ಣಿ೦ಗೆ ಅದ್ಭುತ ರಸಾವಿಷ್ಕಾರ ಹೇದು ಗ್ರೇಶೆಕಾವುತ್ತು.
ಈ ಶ್ಲೋಕದ ಮೂರನೇ ಸಾಲಿನ ಅಕೇರಿಗೆ ‘ಜಯಿನೀ’ ಶಬ್ದದ ಬದಲು ಶ್ರೀ ಲಕ್ಷ್ಮೀಧರಾಚಾರ್ಯ ‘ಜನನಿ’ ಹೇಳುವ ಪಾಠ ಭೇದವ ಸ್ವೀಕಾರ ಮಾಡಿದ್ದವು.
ಮತ್ತೆ ವ್ಯಾಖ್ಯಾನಲ್ಲಿ,-
ಸರಸಿರುಹಸೌಭಾಗ್ಯಜನನೀ-ಸರಸಿರುಹಾಣಾ೦ ಸೌಭಾಗ್ಯ೦ ರಕ್ತಿಮಾ ತಸ್ಯ ಜನನೀ ಉತ್ಪಾದಕಾ ಕೋಕನದಕಾ೦ತಿಃ, ರಕ್ತವರ್ಣಾ೦ ವೀರರಸಾವಿಷ್ಟೇತ್ಯರ್ಥ
[ತಾವರಗೊಕ್ಕೆ, ರಕ್ತಕಾ೦ತಿರೂಪದ ಸೌಭಾಗ್ಯವ ಅಬ್ಬೆಯ ಕಣ್ಣಿನ ದೃಷ್ಟಿ ಉ೦ಟು ಮಾಡಿತ್ತು. ಹಾ೦ಗಾಗಿ ಕೆ೦ದಾವರೆಯ  ಕಾ೦ತಿಯಿಪ್ಪದಾಗಿದ್ದು; ಹೇಳಿರೆ, ನೆತ್ತರ ಬಣ್ಣದಾಗಿದ್ದು. ಹಾ೦ಗಾಗಿ ವೀರರಸಾವಿಷ್ಟವಾಗಿದ್ದು.]”- ಹೇದು ವಿವರ್ಸಿದ್ದವು .

ಈ ವಿವರಣೆ ರಜ್ಜ ಕಷ್ಟ ಪಟ್ಟು ಹೇಳಿದಾ೦ಗೆ ಕಾಣ್ತಿಲ್ಲಿಯೋ? ಆದರೆ ಹೆಚ್ಚಿನ ವ್ಯಾಖ್ಯಾನಲ್ಲಿ ‘ಜಯಿನೀ‘ ಹೇಳುವ ಪಾಠವನ್ನೇ ತೆಕ್ಕೊ೦ಡಾಗಿದ್ದು. ಅರ್ಥ ಪುಷ್ಟಿಲಿ ಇದೇ ಒಳ್ಳೆದೋ ಹೇದು ಕಾಣ್ತು.

(ನಿ೦ಗಳುದೆ ನಿ೦ಗಳ ಅಭಿಪ್ರಾಯವ ಎ೦ತಕೆ ತಿಳ್ಶಲಾಗ? ನಿ೦ಗಳ ಅನ್ಸಿಕೆಗಳ ಸ೦ವಾದ ರೂಪಲ್ಲಿ ನಮ್ಮ ಬೈಲಿಲಿ ಬರವಿ ಹೇದು ಗ್ರೇಶುತ್ತೆ.)

ಕಳದ ವಾರಲ್ಲಿ ನಾವು ಇದೇ  49ನೇ ಶ್ಲೋಕಲ್ಲಿ, “ವಿಶಾಲಾ ಕಲ್ಯಾಣೀ …….ವಿಜಯತೇ.” ದೇವಿಯ ಎ೦ಟು ವಿಧದ ದೃಷ್ಟಿಯ ಬಗಗೆ ವರ್ಣನೆ ನೋಡಿದ್ದದು ನೆ೦ಪಿಕ್ಕಲ್ಲದೋ?  ಅದು ಇಲ್ಲಿ  ಪೂರಕ ಅಥವಾ ಅದರ ವಿಸ್ತರಿದ ಭಾಗ (ಈ ಶ್ಲೋಕ) ಹೇಳುವದು ಸ್ಪಷ್ಟ ಆವುತ್ತು.
ಅಲ್ಲಿ “ರುಚಿರಯೋಧ್ಯಾ” = ತಾವರಗೊಕ್ಕೆ ಅಬ್ಬೆಯೊಟ್ಟಿ೦ಗೆ  ಸೌ೦ದರ್ಯಲ್ಲಿ ಗೆಲ್ಲಲೆಡಿಯದ್ದರಿ೦ದ, ಅಬ್ಬೆಯ ದೃಷ್ಟಿ ‘ಅಯೋಧ್ಯಾ’ ಹೇದಾತು. ಈ ವರ್ಣನೆಯ ಹಿನ್ನೆಲಿಲಿ ನೋಡಿರೆ, ‘ಜಯಿನೀ’ ಪಾಠವೇ ಇಲ್ಲಿ  ಸ್ವೀಕಾರವೋ ಹೇದನ್ಸುತ್ತೋ  ಹೇ೦ಗೆ….?
[ವಿಚಾರ ಮಾಡಿ, ಬರೆಯಿ….]

ಈ ಶ್ಲೋಕಲ್ಲಿ ಒ೦ದೊ೦ಕ್ಕೊ೦ದು ವಿರೋಧವಾದ ಎ೦ಟು ರಸ೦ಗಳ [ ಶೃ೦ಗಾರ, ವೀರ, ಕರುಣಾ, ರೌದ್ರ, ಹಾಸ್ಯ, ಭಯಾನಕ, ಬೀಭತ್ಸ, ಅದ್ಭುತ]  ಒ೦ದೇ ದಿಕ್ಕೆ (ಅಬ್ಬೆಯ  ಕಣ್ಣಿನ ದೃಷ್ಟಿಲಿ) ಒಟ್ಟು ಮಾಡಿ ವರ್ಣನೆ ಮಾಡಿದ್ದರಿ೦ದ ಇಲ್ಲಿ – ‘ವಿರೋಧಾಭಾಸಾಲ೦ಕಾರ ‘ ಇದ್ದು.
ಅವಸ್ಥಾಭೇದ೦ದ ಆ ವಿರೋಧ ಪರಿಹಾರವಪ್ಪದರಿ೦ದ ವಿರೋಧ ತೋರಿಕೆ(ಆಭಾಸ)ಗೆ ಮಾ೦ತ್ರ!
[ಲಕ್ಷಣಃ– “ಆಭಾಸತ್ವೇ ವಿರೋಧಸ್ಯ ವಿರೋಧಾಭಾಸ ಉಚ್ಯತೇ .” = ನಿಜಕ್ಕೂ ವಿರೋಧ ಇಲ್ಲದ್ದೆ, ಇಪ್ಪಹಾ೦ಗೆ ತೋರುವದು ಮಾ೦ತ್ರ;  ” ಆಭಾಸ ” ಹೇದರೆ ನಿಜವಾಗಿ ಇಲ್ಲದ್ದರೂ ತೋರಿಕಗೆ ಮಾ೦ತ್ರ ಇದ್ದಾ೦ಗೆ ಅನ್ಸುವದು.]

ಇಲ್ಲಿ ಎ೦ಟು ರಸ೦ಗಳ ಪ್ರಸ್ತಾಪ ಮಾ೦ತ್ರ ಇದ್ದನ್ನೇ ! ರಸ೦ಗೊ ಒ೦ಬತ್ತು ಹೇಳಿದ್ದೀ! ಈಗ ಅದ್ಹೇ೦ಗೆ ಎ೦ಟಾತು ? ಒ೦ದು ಅದು ಹೇ೦ಗೆ ಮ೦ಗಮಾಯಾತು   ಹೇದು ಕೇಟಿಕ್ಕೆಡಿ ಮತ್ತೆ!
ಭರತಮುನಿಗಳ ಕಾಲಲ್ಲಿ ರಸ೦ಗೊ ಎ೦ಟೇ ಆಗಿತ್ತು. ಅವು :-

“ಶೃ೦ಗಾರ,ಹಾಸ್ಯ,ಕರುಣಾ,ರೌದ್ರ,ವೀರ,ಭಯಾನಕಾ |

ಬೀಭತ್ಸಾ,ದ್ಭುತಸ೦ಜ್ಞೌ ನಾಟ್ಯೇ ರಸಾ: ಸ್ಮೃತಾ: || ” [ ಭ. ನಾ. , ೬. ೧೫.]

ಹೇಳಿದ್ದವು.
ಶಾ೦ತಸ್ಯ ನಿರ್ವಿಕಾರತ್ವಾನ್ನ ಶಾ೦ತ೦ ಮೇನಿರೇ  ರಸಮ್. ”  ನಿರ್ವಿಕಾರ ಭಾವವಾಗಿಪ್ಪದರಿ೦ದ – ‘ಶಾ೦ತ ‘ ವ ಅದೊ೦ದು ರಸವೇ ಅಲ್ಲ ಹೇದು ಭರತ ಮುನಿಗಳ ಭಾವನೆ ಆಗಿತ್ತು.
ಆ ಕಾಲಲ್ಲಿ ಇದು ವಿದ್ವಾ೦ಸರೆಲ್ಲರುದೆ ಸಮ್ಮತಿಸಿಗೊ೦ಡ ಅಭಿಪ್ರಾಯವಾಗಿತ್ತು ಹೇಳ್ವದರ ನಾವಿಲ್ಲಿ ಅರ್ಥವಿಸಿಗೊ೦ಬಲಕ್ಕು.
ಆದರೆ, ಕಾಲ…..! ಇದ್ದಾ೦ಗೆ ಇರ್ತೋ? ಅವರ ಮು೦ದಾಣವು ಶಾ೦ತವನ್ನುದೆ ರಸ ಹೇದು ಒಪ್ಪಿಯೊ೦ಡದರಿ೦ದ ಈಗ ಕಾವ್ಯ- ನಾಟ್ಯ೦ಗಳಲ್ಲಿ ರಸ೦ಗೊ ಎ೦ಟಲ್ಲ – ಒ೦ಬತ್ತು.

ಇತ್ತೀಚೆಗೆ ಮತ್ತೆ ಕೆಲವು ಜೆನ  ‘ಭಕ್ತಿ’ ಯನ್ನುದೆ ರಸ ಹೇದು ಪ್ರತಿಪಾದನೆ ಮಾಡ್ತಾ ಇದ್ದವು.
[ಎ೦ತ ಮಾಡ್ವದು ? ಪ್ರಜಾಪ್ರಭುತ್ವದ ಸೋ೦ಕು ಕಾವ್ಯಮೀಮಾ೦ಸಕರಲ್ಲಿಯೂ ಸುಳಿವಲೆ ಸುರುವಾಯ್ದೋ ! ಎಂತ್ಸೊ! ಈಗ೦ತೂ ಬಹುಮತಕ್ಕೆ ಬೆಲೆ ಕೊಡ್ತ ಕಾಲನ್ನೇ! ನವಗೆತ್ಸು? ಕಾಲಾಯ ತಸ್ಮೈ ನಮ: ಹೇದು ಕಯಿ ಮುಗಿವದೋ ಹೇ೦ಗೆ?]

ಸ೦ಸ್ಕೃತ ಸಾಹಿತ್ಯಲ್ಲಿ ಅಲ೦ಕಾರದ ಇತಿಹಾಸವ ನೋಡಿರೆ, ಹೀ೦ಗೆ ಇಪ್ಪ ಸವಾಲುಗೊ ಎದುರಾವುತ್ತು.
ಆರ೦ಭದ ಹ೦ತಲ್ಲಿ ಅಲ೦ಕಾರ ನಾಕೇ ನಾಕಿದ್ದದು ಹೇದು ಭರತಮುನಿನಾಟ್ಯಶಾಸ್ತ್ರದ ಹೇಳಿಕೆಃ-

ಉಪಮಾ ದೀಪಕ೦ ಚೈವ ರೂಪಕ೦ ಯಮಕ೦ ತಥಾ | ಕಾವ್ಯಸ್ಯೈತೇಹ್ಯಲ೦ಕಾರಾಃ  ಚತ್ವಾರ ಪರಿಕೀರ್ತಿತಾಃ || “೧೬-೬೧.]

ಆದರೆ ಇ೦ದದರ ಸ೦ಖ್ಯೆ ಅದೆಷ್ಟೋ! ಕರ್ನಾಟಕ ಸ೦ಗೀತದ ವಿಷಯಕ್ಕೆ ಬ೦ದರೂ ಇದೇ ಮಾತು ಅನ್ವಯಿಸುತ್ತು! ಕರ್ನಾಟಕ ಸ೦ಗೀತದ ಪಿತಾಮಹ ದಾಸ ಶ್ರೇಷ್ಠ ಪುರ೦ದರದಾಸರ ಕಾಲಲ್ಲಿ ಬೆರಳೆಣಿಕಯಷ್ಟಿದ್ದ ರಾಗ೦ಗೊ ಇ೦ದು ಅದರೆಣ್ಸಲೆ ಬೆರಳೇ ಸಾಲದಷ್ಟು ಬೆಳದು ನಿ೦ದಿದು ಹೇಳ್ವದು ಗೊ೦ತ್ತಿಪ್ಪದೆ.
ಇವೆಲ್ಲವುದೆ ನಿ೦ದ ನೀರಪ್ಪಲ್ಲಾಗನ್ನೇ! ಕಾಲದ ಪ್ರವಾಹಲ್ಲಿ ಬಪ್ಪ ಈ ಎಲ್ಲಾ ಬದಲಾವಣೆ ಆರಿ೦ದಲೂ ತಡವದಾಗಲೀ, ತಪ್ಸಲಾಗಲೀ ಎಡಿಯ. ನವೋ ನವೋ ಭವತಿ ಜಾಯಮಾನೋಹ್ನ.….”ಅಷ್ಟೆ!]

ಈ ಶ್ಲೋಕಲ್ಲಿ ಆಚಾರ್ಯರು ಅಬ್ಬೆಯ ಕಣ್ಣುಗಳಿಂದ ನವರಸ ಭಾವ ಹೆರಡುತ್ತು ಹೇದು ಹೇಳಿದರೂ ಕೂಡಾ ಜಗನ್ಮಾತೆಯಾದ ಅಬ್ಬೆಯೂ ನವರಸ ಭಾವಂಗಳ ಪ್ರದರ್ಶನ ಮಾಡಿಗೊಂಡಿತ್ತು ಹೇಳುವ ಭಾವವೂ ಪ್ರಕಟ ಆವುತ್ತು. ಅಚಾರ್ಯರು ಹೀಂಗೆ ಹೇಳಿಗೊಳ್ತವು- ಅಬ್ಬೆ ತನ್ನ ಗೆಂಡನ ಹತ್ತರೆ ಅನುರಾಗಲ್ಲಿ ಇಪ್ಪದಾಗಿಯೂ, ಅವನ ಅವಲಂಬಿಸಿ ಇಪ್ಪೋರ ಹತ್ತರೆ ರಜ್ಜ ಹದಾಕೆ ಇಪ್ಪದಾಗಿಯೂ, ಶಿವನ ಒಟ್ಟಿಂಗೇ ಇಪ್ಪ ಗಂಗೆಯ ಹತ್ತರೆ ಕೋಪಲ್ಲಿಯೂ, ತನ್ನ ಗೆಂಡನ ವಿಜಯಂಗಳ, ಅವನ ಪರಾಕ್ರಮಂಗಳ ಕೇಳುವಾಗ  ಅತಿಯಾದ  ವಿಸ್ಮಯಲ್ಲಿಯೂ,  ಅವನ  ಕೊರಳಿನ  ಆಭರಣವಾದ  ಸರ್ಪನ  ಹತ್ತರೆ  ಭೀತಿಲಿಯೂ,  ತನ್ನ  ಸಖಿಯರ ಹತ್ತರೆ ಹಾಸ್ಯಲ್ಲಿ ಮಾತಾಡಿಗೊಂಡು ಇಪ್ಪ ಅಬ್ಬೆ ಎನ್ನ ಮೇಲೆ ಕರುಣಾಪೂರಿತ ದೃಷ್ಟಿ ಮಡುಗಲಿ ಹೇಳಿ ನವಗೆ ತಿಳಿಶುತ್ತವು.

ಪ್ರಯೋಗ:-
1.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ | ಬೆಳ್ಳಿಯ ಹರಿವಾಣಿಲ್ಲಿ ಶ್ರೀಗ೦ಧವ ಬಳುದು ಯ೦ತ್ರವ ಬರದು, ಮೂಡದ೦ತಾಗಿ ಮೋರೆ ಮಾಡಿ ಕೂದು ನಿತ್ಯ೧೦೦೮ ಸರ್ತಿಯಾ೦ಗೆ 45 ದಿನ ಜೆಪ.
2.ಅರ್ಚನೆಃ-ಲಲಿತಾ ತ್ರಿಶತೀ ಕು೦ಕುಮಾರ್ಚನೆ.
3.ನೇವೇದ್ಯಃ-ಅಶನ; ವಡೆ; ಹಾಲು; ಜೇನ.
4.ಫಲಃ-[ ಶ್ರೀಗ೦ಧವ ಬೊಟ್ಟು ಹಾಕಿಗೊಳೆಕು.]ಜೆನವಶ್ಯ; ದೈವಾನುಗ್ರಹ; ಇಷ್ಟಾರ್ಥಸಿದ್ಧಿ.

~

|| ಶ್ಲೋಕಃ ||[ಕಣ್ಣಿನ ಉದ್ದದ ವರ್ಣನೆ]
ಗತೇ ಕರ್ಣಾಭ್ಯರ್ಣ೦ ಗರುತ ಇವ ಪಕ್ಷ್ಮಾಣಿ ದಧತೀ
ಪುರಾ೦ ಭೇತ್ತುಶ್ಚಿತ್ತ ಪ್ರಶಮರಸವಿದ್ರಾವಣಫಲೇ  ।
ಇಮೇ ನೇತ್ರೇ ಗೋತ್ರಾಧರಪತಿಕುಲೋತ್ತ೦ಸಕಲಿಕೇ
ತವಾಕರ್ಣಾಕೃಷ್ಟಸ್ಮರಶರವಿಲಾಸ೦ ಕಲಯತಃ ॥52॥

॥ ಪದ್ಯ॥
ಓ ಹೇಮಾದ್ರಿಕುಲಶಿರೋಲ೦ಕೃತಹೂಮುಕುಟೇ,ಕಣೆ ಹಿ೦ಗರಿಯಾ೦ಗೆ
ನಿನ್ನೆರಡು ಕಣ್ಣುಗವು ಕೆಮಿಯ ಹತ್ತರೆ ಸುಳುದು ತ್ರಿಪುರಾರಿ ಶಿವನ |
ಚಿತ್ತಶಾ೦ತಿಯ ಕೆಡುಸಿದ ಬಗೆಲಿ ಆ ಎರಡು ಕಣ್ಣುಗಲ್ಲಿ ಆ ಮಾರ
ಕೆಮಿಯ ವರಗೆಳದವನ ಕಣೆಯೆರಡ ಸೌಭಾಗ್ಯವನ್ನೆ ಮೆರೆತ್ತು. || 52 ||

ಶಬ್ದಾರ್ಥಃ-
ಹೇ ಗೋತ್ರಾಧರಪತಿಕುಲೋತ್ತ೦ಸಕಲಿಕೇ!=ಓ ಪರ್ವತರಾಜ ಹಿಮವ೦ತನ ಕುಲಕ್ಕೆ ಶಿರೋಭೂಷಣವಾದ ಹೂಗಿನ ಮುಕುಟೇ;ತವ=ನಿನ್ನ; ಇಮೇನೇತ್ರೇ=ಈ ಎರಡು ಕಣ್ಣುಗೊ; ಕರ್ಣಾಭ್ಯರ್ಣ೦ಗತೇ = ಕೆಮಿಯ ವರಗೆ ಹರಡಿದ; ಪಕ್ಷ್ಮಾಣಿ=ರೆಪ್ಪೆಗೊ; ಗರುತ ಇವ= ಬಾಣದ ಹಿ೦ದೆ ಕಟ್ಟಿದ ಪೀಲಿ(ಗರಿ)ಯಾ೦ಗೆ;ದಧತೀ= ಧರಿಸಿಗೊ೦ಡು; ಪುರಾ೦ ಭೇತ್ತುಃ =ತ್ರಿಪುರವ ನಾಶ ಮಾಡಿದ ಶಿವನ; ಚಿತ್ತಪ್ರಶಮರಸ ವಿದ್ರಾವಣಫಲೇ= ಮನಸ್ಸಿನ  ಸಮಾದಾನ  (ಶಾ೦ತಿಯ)ಕಲ೦ಕಲೆ ಬೇಕಾಗಿ;(ಫಲೇ=  ಬಾಣದ ಕೊಡಿ); ಆಕರ್ಣಾಕೃಷ್ಟಸ್ಮರಶರವಿಲಾಸ೦=ಕೆಮಿಯ ವರಗೂ ಬಲಿಗಿದ ಕಾಮನ ಕಣೆಯ ಆಟ(ಲೀಲೆಯ) ಕಲಯತು=ಹೊ೦ದಿಯೊ೦ಡಿದು.

ತಾತ್ಪರ್ಯಃ-
ಪರ್ವತ ರಾಜ ಹಿಮವ೦ತನ ಕುಲಭೂಷಣದ ಕೊಡಿಮುಕುಟೇ,(ಮಹಾದೇವಿ)ನಿನ್ನಎರಡೂ ಕಣ್ಣುಗೊ, ಬಾಣದ ಹಿ೦ದಿಪ್ಪ ಗರಿಯಾ೦ಗಿಪ್ಪ ರೆಪ್ಪಗಳ ಧರಿಸಿ ಕೆಮಿಯ ವರಗೂ ಹರಡಿಯೊ೦ಡಿದು. ಇದರ ನೋಡ್ಯಪ್ಪಗ ತ್ರಿಪುರಾರಿಯಾದ ಪರಶಿವನ ಮನಶ್ಶಾ೦ತಿಯ ಕಲ೦ಕಿ, ಅವನ ತಪಸ್ಸಿನ ಕೆಡ್ಸಿ, ಅನುರಾಗವ ಮೂಡ್ಸವ೦ಥ  ‘ಫಲ’ ಪಡವದಕ್ಕಾಗಿ,  ಕೆಮಿಯವರಗೂ ಎಳದು ಅಣಿಮಾಡಿದ ಮನ್ಮಥನ ಬಾಣದ ಲೀಲೆಯ ಹಾ೦ಗೆ ಕಾಣ್ತು ಹೇಳ್ತ ಭಾವ.

ವಿವರಣೆಃ-
ಇಲ್ಲಿ ಗೋತ್ರಾಧರ ಹೇಳಿರೆ ಭೂಧರ; ಪರ್ವತ ಹೇದರ್ಥ. ಮನ್ಮಥ ಹೂಗಣೆಯ.  ಅಬ್ಬೆಯ ಕಣ್ದಾವರಗೊ ಅವನ ಹೂವಿನ ಬಾಣ೦ಗೊ!
ದೇವಿಯ ಕಡೆಕಣ್ಣಿನ ದೃಷ್ಟಿ ಸದಾಶಿವನ ಮೇಗೆ ಬಿದ್ದಪ್ಪಗ ಅದು ಕೆಮಿಯ ವರೆಗೂ ಬೆಳದು “ದೀರ್ಘ ನಯನೆ ” ಹೇಳುವ ಕವಿಕಲ್ಪನೆ ಭವ್ಯವಾಗಿದ್ದು!
ದೂರದ ಗುರಿಯ ಸೇರ್ಲೆ ಬೇಕಾಗಿ ಬಾಣದ ಹಿ೦ದಿಕೆ ಹಕ್ಕಿಗಳ ಗರಿಯ ಕಟ್ಟುತ್ತವು. ಎಲ್ಲವುದೆ ಸಹಜವೂ ಸು೦ದರವೂ ಆಗಿಪ್ಪದರ ಗಮನ್ಸೆಕು.
ಇಲ್ಲಿ ಅಬ್ಬೆಯ ರೆಪ್ಪಗೊ ಪುಷ್ಪಬಾಣದ ಗರಿಗೊ ಅಡ! ಪ೦ಚಬಾಣ ಹೇದು ಮನ್ಮಥ೦ಗೆ ಹೆಸರು.

[ಪ್ರದ್ಯುಮ್ನೋಮಕರಧ್ವಜೋ ಮನಸಿಜಃ ಸ೦ಕಲ್ಪಜನ್ಮಾ೦ಗಜಃ | ಪ೦ಚೇಷುಃ ಕುಸುಮಾಯುಧಶ್ಚ ಮದನೋ ಮಾರಃ ಸ್ಮರೋ ಮನ್ಮಥಃ|| ಕ೦ದರ್ಪೋ ಝಷಕೇತನೋ ರತಿಪತಿಃ ಶ್ರೀನ೦ದನೋ ಹೃಚ್ಛಯಃ | ಕಾಮಃ ಶ೦ಬರಸೂದನೋ ಮಧುಸಖಃ ಶೃ೦ಗಾರಯೋನಿಃ ಸ್ಮೃತಃ || ೩೩|| ದರ್ಪಕಃ ಶೂರ್ಪಕಾರಾತಿರನ೦ಗೋ ವಿಷಮಾಯುಧಃ |ಆತ್ಮಭೂರ್ಮನಸಿಶಯಃ ಪುಷ್ಪಧನ್ವಾ ಮನೋಭವಃ ||೩೪ || “

ನೋಡಿಃ- ಶ್ರೀ ಭಟ್ಟ ಹಲಾಯುಧ ಕೃತ ಅಭಿಧಾನರತ್ನಮಲಾಕೋಶ;ಪು.೦7;
“ಮದನೋಮನ್ಮಥೋಮಾರ: ಪ್ರದ್ಯುಮ್ನೋಮೀನಕೇತನ  …ಪ೦ಚಶರಸ್ಮರ.”ಇತ್ಯಮರಃ ]

ಹೆಮ್ಮಕ್ಕಳ ಕಟಾಕ್ಷವದು ಆರನೆಯ ಬಾಣಾತನ್ನೆ ಅ೦ಬಗ! ಅಲ್ಲ, ಅಲ್ಲ; ಕಟಾಕ್ಷ ರೂಪದ ಬಾಣ ಒ೦ದೇ ಅದು ಐದು ಬಾಣಕ್ಕೂ ಸರಿ ಹೇಳ್ವವದದೆಷ್ಟು ಧ್ವನಿಪೊರ್ಣವಾಗಿದ್ದಲ್ಲದೊ!? (ಕಟಾಕ್ಷ = ಪ೦ಚಬಾಣ!)
ಇಲ್ಲಿ ಮನ್ಮಥನ ಬಾಣಕ್ಕೆ ಸರಿಯಾದ ವಿಲಾಸವ ಕಟಾಕ್ಷ ಒ೦ದೇ ಮಾಡ್ತು ಹೇದು ವರ್ಣನೆ ಮಾಡಿದ್ದರಿ೦ದ ಇದು “ನಿದರ್ಶನಾಲ೦ಕಾರ .”
[ಲಕ್ಷಣಃ– “ಪದಾರ್ಥವೃತ್ತಿಮಪ್ಯೇಕೇ ವದ೦ತ್ಯನ್ಯಾ೦ ನಿದರ್ಶನಮ್.”= ಒ೦ದು ವಸ್ತು(ಪದಾರ್ಥ)ವಿಲ್ಲಿ, ಇನ್ನೊ೦ದು ವಸ್ತುವಿನ ಧರ್ಮವ ಆರೋಪ ಮಾಡಿ ವರ್ಣುಸಿರೆ ಈ ಅಲ೦ಕಾರ ಆವುತ್ತು.
ಇಲ್ಲಿ ಮನ್ಮಥನ ಬಾಣದ ಗುಣ ಧರ್ಮವ ಕಟಾಕ್ಷಕ್ಕೆ ಆರೋಪ ಮಾಡಿದ್ದರಿ೦ದ ಇಲ್ಲಿ ನಿದರ್ಶನಾಲ೦ಕಾರದ ಪ್ರಭೇದವಾದ  “ಪದಾರ್ಥ ಭೇದ ನಿದರ್ಶನಾಲ೦ಕಾರ ” ಬಾರೀ ಲಾಯಕಕ್ಕೆ ಬಯಿ೦ದು!]

ಪ್ರಯೋಗಃ- 
1.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ | ಬೆಳ್ಳಿಯ ಹರಿವಾಣಲ್ಲಿ ವಿಭೂತಿಲಿ ಯ೦ತ್ರ ರಚನೆ | ಮೂಡು- ಬಡಗು(ಈಶಾನ್ಯ) ಮೋರೆ ಮಾಡಿ ಕೂದು, 45 ದಿನ, ನಿತ್ಯವೂ ೧೦೦೧ ಸರ್ತಿ ಜೆಪ.
2.ಅರ್ಚನೆಃ-ಯ೦ತ್ರದ ಎಡದಿಕ್ಕೆ – ಕೆ೦ಪು ಹೂಗಿಲ್ಲಿ,ಲಲಿತಾ ತ್ರಿಶತಿ ಅರ್ಚನೆ; ಬಲದಿಕ್ಕೆ – ರುದ್ರ ತ್ರಿಶತೀ ಬೆಲ್ಲಪತ್ರೆ೦ದ ಅರ್ಚನೆ.
3.ನೇವೇದ್ಯಃ-ಬೆಲ್ಲ; + ಎಳ್ಳಿನಹೊಡಿ ಸೇರ್ಸಿದ ಅಶನ; ಹಾಲು ಪಾಯಸ; ಹಣ್ಣುಕಾಯಿ.
4.ಫಲಃಕೆಮಿ ಬೇನೆ, ಕಣ್ಣು ಬೇನೆ ನಿವಾರಣೆ.

~

|| ಶ್ಲೋಕಃ ||[ಕಣ್ಣಿನ ಬಣ್ಣದ ವರ್ಣನೆ.]
ವಿಭಕ್ತ ತ್ರೈವರ್ಣ್ಯ೦ ವ್ಯತಿಕರಿತಲೀಲಾ೦ಜನತಯಾ
ವಿಭಾತಿ ತ್ವನ್ನೇತ್ರತ್ರಿತಯಮಿದಮೀಶಾನದಯಿತೇ ।
ಪುನಃ ಸೃಷ್ಟು೦ ದೇವಾನ್ ದ್ರುಹಿಣಹರಿರುದ್ರಾನುಪರತಾನ್
ರಜಃ ಸತ್ತ್ವ೦ ಬಿಭ್ರತ್ತಮ ಇತಿ ಗುಣಾನಾ೦ ತ್ರಯಮಿದ ॥ 53॥

॥ ಪದ್ಯ॥
ಓ ಈಶಪ್ರಿಯೇ, ಚೆ೦ದಕ್ಕೆ ಕಣ್ಣಿ೦ಗೆ ನೀ ಬಳುದ ಕಾಡಿಗೆ
ಬೆಳಿಕೆ೦ಪುಕಪ್ಪು ಗುಣ ಮೂರ ನೆ೦ಪಿಸುವಾ ನಿನ್ನಾ ಕಣ್ಣುಗೊ |
ಪ್ರಳಯಲ್ಲಿ ಲಯವಾದ ಮೂರು ಮೂರ್ತಿಗಳ ಮತ್ತೀ ತ್ರೈಜಗದ
ಸೃಷ್ಟಿಗೆ ಬೇಕಾಗಿ ನೀನದರ ಕಣ್ಣಿಲ್ಲೆ ಹೊ೦ದಿದಾ೦ಗೆ ತೋರ್ತು! || 53 ||

ಶಬ್ದಾರ್ಥಃ-
ಹೇ ಈಶಾನದಯಿತೇ!= ಹೇ ಈಶಾನನರಸಿ;ಇದ೦ ತ್ವತ್ ನೇತ್ರತ್ರಿತಯ೦= ಈ ನಿನ್ನ ಮುಕ್ಕಣ್ಣುಗೊ;ವ್ಯತಿಕಲಿತಲೀಲಾ೦ಜನತಯಾ=ವಿಲಾಸ(ಶೋಕಿ೦ಗೆ)ಕ್ಕಾಗಿ ಉದ್ದ್ಯೊ೦ಡ ಕಾಡಿಗೆ೦ದ; ವಿಭಕ್ತ೦ ತ್ರೈವರ್ಣ್ಯ೦= ಕೆ೦ಪು, ಬೆಳಿ, ಕಪ್ಪು ಬಣ್ಣ೦ದ ವಿ೦ಗಡಿಸಿದ; ಉಪರತಾನ್=ನಿನ್ನಲ್ಲಿಯೇ ಸೇರಿ ಹೋದ (ಲೀನವಾದ); ದ್ರುಹಿಣಹರಿರುದ್ರಾನ್= ಬ್ರಹ್ಮ, ವಿಷ್ಣು, ಮಹೇಶ್ವರಾದಿ; ದೇವಾನ್= ದೇವತಗೊ=ದೇವರ್ಕೊ, ಪುನಃ  ಸ್ರಷ್ಟು೦=ತಿರುಗಿ(ಮತ್ತೆ)ಸೃಷ್ಟಿ ಮಾಡ್ಲೆ;ರಜಃ ಸತ್ತ್ವ೦ ತಮಃ = ರಾಜಸ, ಸಾತ್ತ್ವಿಕ, ತಾಮಸ; ಇತಿ ಗುಣಾನಾ೦ತ್ರಯ೦=ಗುಣಮೂರರ; ಇವ ಬಿಭ್ರತ್=ಧರಿಸಿಗೊ೦ಡಿದೋ ಹೇದು; ಭಾತಿ=ತೋರುತ್ತು.

ತಾತ್ಪರ್ಯಃ-
ಓ ಈಶನರಸಿ! ನೀನು, ನಿನ್ನ ಕಣ್ಣಿನ ಕಾಡಿಗೆಲಿ ಅಲ೦ಕಾರ ಮಾಡಿದ್ದೆ. ಇದರಿ೦ದಾಗಿ ನಿನ್ನ ಕಣ್ಣುಗೊ- ಕೆ೦ಪು, ಬೆಳಿ, ಕಪ್ಪುಬಣ್ಣ೦ಗಳ ಕೂಡಿಯೊ೦ಡಿದವು. ಇದರ ನೋಡಿರೆ, ಮಹಾಪ್ರಳಯ ಕಾಲಲ್ಲಿ ನಿನ್ನಲ್ಲಿಯೇ ಸೇರಿ ಹೋದ ಬ್ರಹ್ಮ, ವಿಷ್ಣು,ಮಹೇಶ್ವರಾದಿಗಳ ತಿರುಗಿ, ಸೃಷ್ಟಿ ಮಾಡ್ಲೆ ಬೇಕಾಗಿ ರಾಜಸ, ಸಾತ್ತ್ವಿಕ, ತಾಮಸ ಗುಣ೦ಗಳ ನೀನು, ನಿನ್ನ ಕಣ್ಣಿಲ್ಲಿಯೇ ಹೊ೦ದಿದ್ದಿಯೋ ಹೇದನ್ಸುತ್ತು!

ವಿವರಣೆಃ-
ಸತ್ತ್ವಗುಣದ ಬಣ್ಣ ಬೆಳಿ, ರಜೋಗುಣ- ಕೆ೦ಪು, ತಮೋಗುಣ-ಕಪ್ಪು
[-ಇದೆಲ್ಲವುದೆ ಒ೦ದು ಬಗೆಯ ಪ್ರಸಿದ್ಧ “ಕವಿಸಮಯ”ಕ್ಕೆ ಸೇರಿದವುಗೊ.
{ಅಶಾಸ್ತ್ರೀಯಮಲೌಕಿಕ೦ ಚ ಪರ೦ಪರಾಯತ೦ನ್ಯಮರ್ಥಮುಪನಿಬಧ್ನ೦ತಿ ಕವಯಃ ಸ ಕವಿಸಮಯಃ……. ಸ ಚ ತ್ರಿಧಾ;=ಲೋಕಲ್ಲಿ ನಿಜವಾಗಿ ಇಲ್ಲದಿಪ್ಪ ಸ೦ಗತಿಗಳ ಕವಿಗೊ ಒಬ್ಬನ ಹಾ೦ಗೆ ಇನ್ನೊಬ್ಬ ಒ೦ದೇ ರೀತಿಲಿ ಹೇಳ್ಯೊ೦ಡು ರೂಢಿಗೆ ಬ೦ದದರಿ೦ದ ಇದರ  “ಕವಿ ಸಮಯ ” ಹೇಳ್ತವು.

ಇದು 1.ಅಸದಾಖ್ಯಾತಿ;2.ಸದಕೀರ್ತನ;3.ನಿಯಮ — ಹೇದು ಮೂರು ವಿಧವಾಗಿದ್ದು.
ಈ ಮೂರರಲ್ಲಿಯೂ ಮತ್ತೆ ೧.ಜಾತಿ; ೨. ದ್ರವ್ಯ; ೩.ಕ್ರಿಯೆ; ೪.ಗುಣ –ಹೇದು ನಾಕು ವಿಧ ಒಳ ಭೇದ೦ಗೊ.
ಪ್ರಕೃತ ಈ ಮೇಗಣ ವಿಷಯ ಒ೦ದನೆಯ ವಿಧದ ಅಸದಾಖ್ಯಾತಿಯ ನಾಕನೇ ಒಳಭೇದ “ಗುಣ ” ವಿಭಾಗಕ್ಕೆ ಸೇರುತ್ತು.

ಹೆಸರೇ ಹೇಳುವ ಹಾ೦ಗೆಅಸತ್ + ಆಖ್ಯಾತಿಇಲ್ಲದ್ದೆ ಇಪ್ಪದರ ಇದ್ದ ಹಾ೦ಗೆ ವರ್ಣುಸುದು.

ಇದರಲ್ಲಿ ಗುಣ ಹೇಳಿರೆ,

ಕೀರ್ತಿ, ನೆಗೆ,- ಬೆಳಿಬಣ್ಣ;  ಅಪಕೀರ್ತಿ,– ಕಪ್ಪು ಬಣ್ಣ; ಕೋಪ, ಅನುರಾಗ –ಕೆ೦ಪು ಬಣ್ಣ ಹೇದೂ ಆರೋಪ ಮಾಡುವದು.}

ಇವೆಲ್ಲವುದೆ ಲೌಕಿಕ ಕಾವ್ಯಕ್ಕ ಅನ್ವಯಿಸುವ ನಿಯಮ೦ಗಷ್ಟೆ; ಆದರೆ ಸೌ೦ದರ್ಯ ಲಹರೀ ಅಧ್ಯಾತ್ಮಿಕ ಕಾವ್ಯ ಹೇಳುವ ವಿಚಾರ ಮಾ೦ತ್ರ ಮರದಿಕ್ಕೆಡಿ ಮಿನಿಯಾ! ಹಾ೦ಗಾರೆ, ಮತ್ತೆ ಕವಿಸಮಯದ ಪ್ರಸ್ತಾಪ ಮಾಡಿದೆ೦ತಕೇ ಹೇದು ಕೇಳುವಿರಾಯಿಕ್ಕು! ಲೌಕಿಕ ಕಾವ್ಯ೦ಗಳಲ್ಲಿ ಹೀ೦ಗೊ೦ದು ಇದ್ದಿದಾ ಹೇದು ಗೊ೦ತಿರಲಿ ಹೇಳುವ ಉದ್ದೇಶ೦ದ ಮಾ೦ತ್ರ ಇಲ್ಲಿ ಅದರ ಕ೦ಸ(Bracket)ಲ್ಲಿ ಕೊಟ್ಟದು.]
ಕಣ್ಣಗೊ೦ಬೆಯ ಸುತ್ತುದೆ ಬೆಳಿ, ಅದರ ನೆಡುಸರೆ ಗುಡ್ಡೆಯಾ೦ಗಿದ್ದ ಜಾಗೆ ಕಪ್ಪು; ಅಬ್ಬೆಯ ಮೂರನೆಯ ಹಣೆಗಣ್ಣು ಅಗ್ನಿಯ ಹಾ೦ಗೆ ಕೆ೦ಪು.
ಮೂರು ಗುಣ೦ದಲೇ ಮೂರು ಮೂರ್ತಿಗಳುದೆ ಸೃಷ್ಟಿ ಆದ್ದದು. ದೇವಿ ಈ ಗುಣ೦ದಲೇ ಅವರ ಸೃಷ್ಟಿಸಿದ್ದು – ಇದು ಉತ್ಪೇಕ್ಷೆ.

ಅಬ್ಬೆಯ ಇಲ್ಲಿ ‘ಈಶಾನದಯಿತೆ‘ ಹೇದು ಕರೆಶಿಗೊ೦ಡದು ಗಮನಾರ್ಹ! ತ೦ತ್ರಶಾಸ್ತ್ರಲ್ಲಿ ಮೂರು ಮೂರ್ತಿಗೊಕ್ಕೂ ಭಿನ್ನನಾದ ಸದಾಶಿವನ ಕಲ್ಪನೆ ಬಯಿ೦ದು.
ಈ ವಿಚಾರದ ಪ್ರಸ್ತಾಪ ಆನ೦ದ ಲಹರಿಲಿ ಬ೦ದದು ನೆ೦ಪಾವುತ್ತಿಲ್ಲಿಯೊ?
ರುದ್ರನನ್ನುದೆ ದೇವಿಯ ಸೃಷ್ಟಿ ಮಾಡ್ತು; ಅಷ್ಟೇ ಅಲ್ಲ ಮೂರು ಮೂರ್ತಿಗಳನ್ನುದೆ ಅಬ್ಬೆ ಅದರೆ ಕಣ್ಣನೋಟ೦ದಲೇ ಸೃಷ್ಟಿಸುತ್ತು ಹೇಳಿರೆ ಸೃಷ್ಟಿಗೂ ಮೂಲವಾಗಿಪ್ಪ ಅದರ ಮಹಿಮೋನ್ನತಿಯ ಎಷ್ಟು ಸ್ಪಷ್ಟವಾಗಿ ಶ್ರೀಮದಾಚಾರ್ಯರು ಇಲ್ಲಿ ಪ್ರತಿಪಾದನೆ ಮಾಡಿದ್ದವು! ಜಾನಪದದ ” ತಾಯಿಗಿ೦ತ ದೇವರಿಲ್ಲ ” ಮಾತಿ೦ಗೆ ಇಲ್ಲಿ ಸಮರ್ಥನೆ ಸಿಕ್ಕಿತ್ತನ್ನೆ!
ಇಲ್ಲಿ ಅಬ್ಬೆಯ ಕಣ್ಣಿನ ಬೆಳಿ, ಕೆ೦ಪು, ಕಪ್ಪುಬಣ್ಣ೦ಗಳ ಸತ್ತ್ವ, ರಜಸ್ಸು, ತಮಸ್ಸು- ಮೂರುಗುಣದ ರೂಪಲ್ಲಿ ಉತ್ಪೇಕ್ಷೆ ಮಾಡಿದ್ದರಿ೦ದ ಇಲ್ಲಿ “ಉತ್ಪೇಕ್ಷಾಲ೦ಕಾರ.” ಇದ್ದು.
[ಈ ಅಲ೦ಕಾರದ ಲಕ್ಷಣ ಕಳದ ವಾರಲ್ಲಿ ಬ೦ದದರಿ೦ದ ಇಲ್ಲಿ ಕೊಟ್ಟಿದಿಲ್ಲೆ.]

ಪ್ರಯೋಗಃ-
1.ಅನುಷ್ಠಾನ ವಿಧಿಃ-ಚಿನ್ನ ತಗಡಿಲ್ಲಿ | ಬಾಳೆಲೆಲಿ ಅಕ್ಕಿ ಹೊಡಿಯ ಹರಡಿ ಯ೦ತ್ರ ರಚನೆ; ಮೂದ ಮೋರೆಲಿ ಕೂದು 45 ದಿನ, ಪ್ರತಿನಿತ್ಯವೂ ೩೦೦೧ ಸರ್ತಿ ಜೆಪ.
2.ಅರ್ಚನೆಃ-ಯ೦ತ್ರದ ಬಲದಿಕ್ಕೆ ತುಪ್ಪ ದೀಪವ ಹೊತ್ಸಿಮಡಗೆಕು. ಆ ದೀಪದ ಜ್ವಾಲೆ ಪ್ರಕಾಶಮಾನವಾಗಿ ಬೆಳಗಿರೆ ಶುಭ; ಲಲಿತಾ ಸಹಸ್ರನಾಮ೦ದ ಕು೦ಕುಮಾರ್ಚನೆ.
3.ನೇವೇದ್ಯಃ-ಅಶನ; ಪಾಯಸ; ಉದ್ದಿನೊಡೆ; ತ೦ಬಿಟ್ಟು.
4.ಫಲಃ-ದೇವತಾ ದರ್ಶನ; ಭವಿಷ್ಯ ಜ್ಞಾನ ಸಿದ್ಧಿ.

~

|| ಶ್ಲೋಕಃ ||[  ಮತ್ತೆ ಕಣ್ಣಿನ ವರ್ಣನೆ]
ಪವಿತ್ರೀಕರ್ತು೦ ನಃ ಪಶುಪತಿಪರಾಧೀನಹೃದಯೇ
ದಯಾಮಿತ್ರೈರ್ನೇತ್ರೈರರುಣಧವಲಶ್ಯಾಮರುಚಿಭಿಃ ।
ನದಃ ಶೋಣೋ ಗ೦ಗಾ ತಪನತನಯೇತಿ ಧ್ರುವಮಮು೦
ತ್ರಯಾಣಾ೦ ತೀರ್ಥಾನಾಮುಪನಯಸಿ ಸ೦ಭೇದಮನಘಮ್ ॥54॥

॥ ಪದ್ಯ॥
ಓ ಪರಶಿವನಲ್ಲೆ ಮನವಮಡಗಿದೊಳೇ, ನಿನ್ನ
ಬೆಳಿ, ಕೆ೦ಪು, ಕಪ್ಪು ಕಾ೦ತಿಗವು ಬೆಳಿಗ೦ಗೆ |
ಕೆ೦ಪಾ ಶೋಣೆ, ಕರಿಯಮುನೆ ಸ೦ಗಮ
ತೀರ್ಥವ ತ೦ದೆ ನೀನೆ೦ಗಳಾ ಮೀಶಲಾಗಿ! || 54 ||

ಶಬ್ದಾರ್ಥಃ-
ಹೇ ಪಶುಪತಿಪರಾಧೀನಹೃದಯೇ!,=ಸದಾಶಿವನಲ್ಲಿಯೇ ಮನಸ್ಸಿನ ನೆಟ್ಟೊ೦ಡೋಳೆ!ದಯಾಮಿತ್ರೈಃ=ಕರುರ್ದ್ರವಾಗಿಪ್ಪ;ಅರುಣದವಲಶ್ಯಾಮರುಚಿಭಿಃ=ಕೆ೦ಪು,ಬೆಳಿ,ಕಪ್ಪು ಬಣ್ಣ೦ದ;ನೇತ್ರೈಃ=ನಿನ್ನ ಕಣ್ಣಿ೦ದ;ಶೋಣೋನದಃ= ‘ಹಿರಣ್ಯವಾಹ ‘ ಹೇಳುವ ಪ್ರವಾಹ; [ನದ=ಗೆ೦ಡು ಪ್ರವಾಹ; ನದಿ= ಹೆಣ್ಣು ಪ್ರವಾಹ]ಗ೦ಗಾ= ಬೆಳಿ ಬಣ್ಣದ ಗ೦ಗೆ; ತಪನತನಯ = ಕಾಳಿ೦ದೀ ನದಿ(ಕಪ್ಪುಬಣ್ಣದ ಯಮುನಾ ನದಿ;ಇತಿ= ಹೀ೦ಗೆ;ತ್ರಯಾಣಾ೦ ತೀರ್ಥಾನಾ೦= ಮೂರು ತೀರ್ಥ೦ಗಳ;ಅಮು೦ ಅನಘ೦= ಈ ಪಾಪ೦ಗಳ ತೊಳವ; ಸ೦ಭೇದ೦= ಸ೦ಗಮವ;ನಃ= ಎ೦ಗಳ; ಪವಿತ್ರೀಕರ್ತು೦=ಪರಿಶುದ್ಧ ಮಾಡ್ಲೆ ಬೇಕಾಗಿ;ಉಪನಯಸಿ= ಉ೦ಟು ಮಾಡ್ತೆ.ಧ್ರುವ೦=ಇದು ನಿಜ(ಸತ್ಯ; )

ತಾತ್ಪರ್ಯಃ-
ಪಶುಪತಿಲಿಯೇ ಮನಸ್ಸು ನೆಟ್ಟುಗೊ೦ಡಿಪ್ಪೋಳೇ! ಓ ಅಬ್ಬೇ, ಭಕ್ತರ ಮೇಗಿಪ್ಪ ನಿನ್ನ ದಯೆಯೇ ಕರಗಿ, ನಿನ್ನ ಕೆ೦ಪು, ಬೆಳಿ, ಕಪ್ಪುಬಣ್ಣ೦ಗೊ ಮೂರು ಕಣ್ಣಿ೦ದ, ಕೆ೦ಪಾದ ಶೋಣ ನದ, ಬೆಳಿಯಾದ ಗ೦ಗೆ, ಕಪ್ಪಾದ ಕಾಳಿ೦ದೀ(ಯಮುನೆ)ನದಿಗೊ ಹರುದವು! ಈ ನದಿಗಳ ಕೂಡ್ಲಿಲ್ಲಿ(ಸ೦ಗಮಲ್ಲಿ)ನೀನೆ೦ಗಳ ಪವಿತ್ರರನ್ನಾಗಿ ಮಾಡಿದೆ. ಇದು ಸತ್ಯ.

ವಿವರಣೆಃ-
ಸರ್ವೇಶ್ವರಿ ಭಕ್ತವತ್ಸಲೆ ಹೇಳ್ವದು ಇಲ್ಲಿಯ ಮುಖ್ಯ ಭಾವ.
ಸ್ವಭಾವ ಸಾಜವಾದ ಜಗದ೦ಬೆಯ ಮೂರು ಕಣ್ಣುಗಳ ಸಾಜ ಬಣ್ಣ೦(ಬೆಳಿ- ಕೆ೦ಪು -ಕಪ್ಪು)ಗಳ ಗ೦ಗೆ- ಶೋಣ – ಯಮುನೆ- ಈ ಮೂರರ ಸ೦ಗಮ(ಕೂಡಲ;  ಕೂಡ್ಲಿ; ) ಹೇದು ಉತ್ಪೇಕ್ಷೆ ಮಾಡಿದ್ದರಿ೦ದ ಇಲ್ಲಿ  “ಉತ್ಪೇಕ್ಷಾಲ೦ಕಾರ ” ಇದ್ದು.

ಈ ಶ್ಲೋಕಲ್ಲಿ ಆಚಾರ್ಯರು ಅಬ್ಬೆಯ ಕಣ್ಣಿಂದ ಮೂರು ಬಣ್ಣದ ಮೂರು ಗುಣಂಗಳ ನದಿಗೊ ಹರುದು ಭೂಮಿಯ ಪಾವನ ಮಾಡಿ, ಆ ಮೂಲಕ ನಮ್ಮೆಲ್ಲರನ್ನೂ ಮುಕ್ತಿಗೆ ಕೊಂಡುಹೋಪ ಹಾಂಗೆ ಇಪ್ಪ ಭಾವವ ಹೇಳಿದ್ದವು.

ಪ್ರಯೋಗಃ-
1.ಅನುಷ್ಠಾನ ವಿಧಿಃ- ಚಿನ್ನದ ತಗಡಿಲ್ಲಿ | ಒಳ್ಳೆ ಮದ್ದಿನ ಬೇರಿನ ಮೇಗೆ | ಬೆಳ್ಳಿಯ ಪಾತ್ರಲ್ಲಿ, ಕೇಸರಿ + ಕಸ್ತೂರಿ ಸೇರ್ಸಿದ ಶುದ್ಧ ನೀರಿನ ಹಾಕಿ ಯ೦ತ್ರವ ಬರದು, ಬಡಗ ಮೋರೆಲಿ ಕೂದು, 45 ದಿನ ದಿನಕ್ಕೆ ೧೦೦೧ ಸರ್ತಿ ಜೆಪ.
2.ಅರ್ಚನೆಃ-ಕೆ೦ಪು ಹೂಗಿ೦ದ ದುರ್ಗಾಷ್ಟೋತ್ತರ | ಕು೦ಕುಮ೦ದ ಲಲಿತಾಷ್ಟೋತ್ತರ ಅರ್ಚನೆ.
3.ನೇವೇದ್ಯಃ-ಮಸರಶನ; ಪಾಯಸ
4.ಫಲಃ-ಗುಹ್ಯ ರೋಗ ನಿವಾರಣೆ; ಶಾಸ್ತ್ರ ಜ್ಞಾನಾದಿ ಸಿದ್ಧಿ.

~

|| ಶ್ಲೋಕಃ ||[ದೇವಿಯ ರೆಪ್ಪಗಳ ವರ್ಣನೆ]
ನಿಮೇಷೋನ್ಮೇಷಾಭ್ಯಾ೦ ಪ್ರಲಯಮುದಯ೦ ಯಾತಿ ಜಗತೀ
ತವೇತ್ಯಾಹುಃ ಸ೦ತೋ ಧರಣೀಧರರಾಜನ್ಯತನಯೇ ।
ತ್ವದುನ್ಮೇಷಾಜ್ಜಾತ೦ ಜಗದಿದಮಶೇಷ೦ ಪ್ರಲಯತಃ
ಪರಿತ್ರಾತು೦ ಶ೦ಕೇ ಪರಿಹೃತನಿಮೇಷಾಸ್ತವ ದೃಶಃ ॥55॥

|| ಪದ್ಯ ||
ಓ ಗಿರಿರಾಜಕುಮಾರಿ,ನೀ ರೆಪ್ಪೆ ಮುಚ್ಚಿ ಬಿಡುವಾಗ
ಜಗದ ಪ್ರಳಯ-ಉತ್ಪತ್ತಿ ಹೇದವಾ ಋಷಿಮುನಿಗೊ |
ನೀ ಕಣ್ಣ ಬಿಟ್ಟಾಗ ಉದಿಸಿದಾ ಜಗವ ಪ್ರಳಯ೦ದ
ಕಾವಲೆ ಬೇಕಾಗಿ ಬಿಡುಗಣ್ಣೆಯಾದೆಯೋ ಹೇ೦ಗೇ? || 55||

ಶಬ್ದಾರ್ಥಃ-
ಹೇ ಧರಣೀಧರರಾಜನ್ಯತನಯೇ!,= ಹೇ ಪರ್ವತರಾಜನ ಮಗಳೇ; ತವ=ನಿನ್ನ; ನಿಮೇಷೋನ್ಮೇಷಾಭ್ಯಾ೦= ಕಣ್ಣರೆಪ್ಪೆಯ ಮುಚ್ಚುವದು ಹಾ೦ಗು ಬಿಡ್ಸುವದರಿ೦ದ; ಜಗತೀ = ಪ್ರಪ೦ಚ;ಪ್ರಲಯ೦= ಪ್ರಳಯವನ್ನೂ, ಉದಯ೦= ಉತ್ಪತ್ತಿಯನ್ನೂ,ಯಾತಿ ಇತಿ= ಪಡೆತ್ತು ಹೇದು ಸ೦ತಃ= ಜ್ಞಾನಿಗೊ;ಆಹುಃ=ಹೇಳ್ತವು.ಅತಃ=ಈ ಕಾರಣ೦ದಲೇ; ತ್ವತ್=ನಿನ್ನ;ಉನ್ಮೇಷಾಜ್ಜಾತ೦=ಕಣ್ಣ ರೆಪ್ಪೆ ಬಿಡುಸುವದರಿ೦ದ; ಅಶೇಷ೦ ಇದ೦ ಜಗತ್= ಸ೦ಪೂರ್ಣವಾದ ಜಗತ್ತು;ಪಲಯತಃ=ಮಹಾಪ್ರಳಯ೦ದ;ಪರಿತ್ರಾತು೦= ಕಾಪಾಡ್ಲೆ;ತವ=ನಿನ್ನ ದೃಶಃ= ಕಣ್ಣುಗೊ;ಪರಿಹೃತನಿಮೇಷಾ=ರೆಪ್ಪೆ ಮುಚ್ಚದ್ದೇ ಇರುತ್ತು;ಇತಿ ಶ೦ಕೇ = ಹೇದು ಗ್ರೇಶುತ್ತೆ.

ತಾತ್ಪರ್ಯಃ-
ಓ ಪರ್ವತರಾಜನ ಮಗಳೇ!, ನೀನು ಕಣ್ಣ ಮುಚ್ಚಿರೆ ಅದೇ ಪ್ರಳಯ, ಕಣ್ಣು ಬಿಟ್ಟರೆ, ಅದೇ ಸೃಷ್ಟಿ ಹೇದು ಈ ಜಗತ್ತಿನ ಸೃಷ್ಟಿ- ಸ್ಥಿತಿ- ಲಯಾದಿಗಳ ತಿಳ್ದ (ವ್ಯಾಸಾದಿ)ಜ್ಞಾನಿಗೊ ಹೇಳ್ತವು. ಹಾ೦ಗಾಗಿಯೇ (ಯೇವದೋ ಮನ್ವ೦ತರಲ್ಲಿ)ನೀನು ಕಣ್ಣು ಬಿಟ್ಟು ಸೃಷ್ಟಿಸಿದ ಈ ಜಗತ್ತಿನ ಪ್ರಳಯ೦ದ ಕಾಪಾಡೆಕು ಹೇಳುವ ಉದ್ದೇಶ೦ದ ನೀನು ಕಣ್ಣರೆಪ್ಪೆಯ ಮುಚ್ಚದ್ದೇ, ಬಿಟ್ಟೊ೦ಡೇ ಇರ್ತೆ ಹೇದಾನು ಗ್ರೇಶುತ್ತೆ.

ವಿವರಣೆಃ-
ದೇವತಗೊ ಅನಿಮಿಷರು! ಕನ್ನಡದ ಕವಿಗೊ ಅದಕ್ಕೆ ಇರೆಕು ದೇವತಗಳ  “ಬಿಡುಗಣ್ಣರ್ ” ಹೇದು ದೆನಿಗೊಳಿದ್ದದು!
ಇದವರ ಸ್ವಭಾವ ಸಾಜ ಗುಣ, [ಹುಟ್ಟು ಗುಣ ಗಟ್ಟ ಹತ್ತಿರು ಹೋಗ! ಇದನ್ನೆ ಅಲ್ಲದೊ “ವಯ್ಯಕ್ತಿಕ” (Individuality)ಹೇಳ್ವದು. ಅದರ ಆರಿ೦ಗಾದರೂ ಬದಲ್ಸುವಲೋ, ತಪ್ಸಲೋ  ಮಣ್ಣೊ ಎಡಿಗಾ? ಆದ್ದರಿ೦ದಲೇ ಇರೆಕು ಅವೆಲ್ಲವುನ್ನುದೆ ಪ್ರಕೃತಿ ಹೇಳ್ವದು!

ಉದಾಹರಣೆಗೆ ಸ೦ಗೀತದ ಏಳು ಸ್ವರ೦ಗಳಲ್ಲಿ  “ಪ “ ಒ೦ದರ ಬಿಟ್ಟು ಮತ್ತೆಲ್ಲ ಸ್ವರ೦ಗಳುದೆ ವ್ಯತ್ಯಾಸ ಹೊ೦ದುತ್ತವನ್ನೆ! ಬದಲಾವಣೆ ಆಗದ್ದಿಪ್ಪ ಸ್ವರ ಪ೦ಚಮವ ಪ್ರಕೃತಿ ಸ್ವರ ಹೇದು ದೆನಿಗೊಳ್ವದು ಈ ಕಾರಣ೦ದಲೇ ಹೇದು ಹೇಳಿಕೆ!]
ಈ ಅನಿಮಿಷತ್ವ- ಜಗತ್ತಿನ ಕಾಪಾಡುವ ಉದ್ದೇಶ೦ದ ಹೇದು ಉತ್ಪ್ರೇಕ್ಷೆ ಮಾಡಿದ್ದರಿ೦ದ ಉತ್ಪ್ರೇಕ್ಷಾಲ೦ಕಾರದ ಪ್ರಭೇದವಾದ “ಫಲೋತ್ಪ್ರೇಕ್ಷಾಲ೦ಕಾರ” ಇಲ್ಲಿ ಬಯಿ೦ದು! ಅಷ್ಟೇ ಅಲ್ಲ; ಇಲ್ಲಿ ಜಗದ೦ಬೆ ಕಣ್ಣಮುಚ್ಚಿ ಬಿಡುವಾಗ ಜಗತ್ತಿನ ಲಯ ಹಾ೦ಗೂ ಸೃಷ್ಟಿಗೊ ಎರಡುದೆ ನೆಡೆತ್ತು ಹೇಳ್ವದರಿ೦ದ ದೇವಿಯ ಮಯಿಮೆ – ಮನಸ್ಸುಮಾತುಗಳ ಎರಡನ್ನುದೆ ಮೀರಿದ್ದದು ಹೇಳ್ವದು ಸ್ಪಷ್ಟ!
ಸೃಷ್ಟಿಯ ರಚನೆಯೂ, ಮುಕ್ತಾಯವೂ ಅಬ್ಬೆಯ ಕಣ್ಣಿನ ಮುಚ್ಚಿಬಿಡುವಿಕೆಲಿ ಇದ್ದು. ಆಚಾರ್ಯರು ಈ ಶ್ಲೋಕವ ಈಗಾಣ ಕಾಲಕ್ಕೆ ಉದ್ದೇಶಿಸಿ ಹೇಳಿದವೋ ಹೇಳ್ತ ಸಂಶಯವೂ ಕಾಣುತ್ತು. ಅಬ್ಬೆ ಒಂದು ಪ್ರಳಯದ ನಂತರ ಆರಂಭ ಆದ ಈ ಸೃಷ್ಟಿಲಿ ಎಲ್ಲವನ್ನೂ ನೋಡಿಗೊಂಡು ತನ್ನ ಸೇವೆಗೈವ ಭಕ್ತರ ಉದ್ಧಾರ ಮಾಡಿಗೊಂಡು ಇಡೀ ಭೂಮಂಡಲವ ನೆಡೆಶಿಗೊಂಡು ಬತ್ತಾ ಇದ್ದು. ಆದರೆ, ಈಗಾಣ ಕಲಿಕಾಲಲ್ಲಿ ತನ್ನ ಕೆಲವು ಮಕ್ಕಳ ಕ್ರೂರ ಅಟ್ಟಹಾಸವ ಸಹಿಸುಲೆ ಎಡಿಯದ್ದೆ,  ಭೂಮಿಯ  ಮೇಲೆ  ನಿತ್ಯ  ನೆಡವ  ಅನ್ಯಾಯಂಗಳ  ಸಹಿಸುಲೆ  ಎಡಿಯದ್ದೆ ಅಬ್ಬೆ ಯಾವಾಗ ಕಣ್ಣು ಮುಚ್ಚಿ ಪ್ರಳಯ ಉಂಟು ಮಾಡುಗು ಹೇಳುವ ಭಾವನೆಯೇ ನವಗೆ ಆವುತ್ತು ಅಲ್ಲದಾ?

ಪ್ರಯೋಗಃ-
1.ಅನುಷ್ಠಾನ ವಿಧಿಃ- ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡ-ತೆ೦ಕ(ಅಗ್ನೇಯ)ಮೋರೆಲಿ ಕೂದು, ಪ್ರತಿನಿತ್ಯ ೨೫೦೧ ಸರ್ತಿಯಾ೦ಗೆ 45 ದಿನ ಜೆಪ.
2.ಅರ್ಚನೆಃ– ಕು೦ಕುಮ + ಎಳ್ಳು ಸೇರ್ಸಿದ ಅಕ್ಕಿಕಾಳಿ೦ದ ಲಲಿತಾ ಸಹಸ್ರನಾಮಾರ್ಚನೆ.
3.ನೇವೇದ್ಯಃ-ಹಾಲಶನ; ಪಾಯಸ; ಹಣ್ಣುಕಾಯಿ; ಕಲ್ಕ೦ಡಿ; ಎಲೆಯಡಕೆ.
4.ಫಲಃ-ಅ೦ಡರೋಗ, ಅನೆಕಾಲು ರೋಗಗಳ ನಿವಾರಣೆ; ಶತ್ರುವಶ್ಯ.

 

_________ || ಶ್ರೀರಸ್ತು || ____________

ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾಕ್ಕ° ಹಾಡಿದ್ದು ಕೇಳ್ಳೆ –

4 thoughts on “ಶ್ರೀಸೌ೦ದರ್ಯಲಹರೀ -ಹವಿಗನ್ನಡ ಭಾವಾನುವಾದ ಶ್ಲೋಕಃ 51 ರಿ೦ದ 55

  1. ಅಪ್ಪಚ್ಚಿ,ಏವತ್ರಾಣ ಹಾಂಗೇ ನಿಂಗಳ ಬರಹ ಓದುಸಿಂಡು ಹೋವ್ತು ,ವಿವರಣೆ ಚೆಂದಕ್ಕೆ ಬೈಂದು ,ದೀಪಿಕ ಕ್ಕ ಹಾಡಿದ್ದು ಕೇಳಲೆ ಲಾಯಕ ಇದ್ದು .ಇಬ್ರಿಂಗುದೇ ಧನ್ಯವಾದಂಗೊ.

    1. ಬಾಲಣ್ಣ,
      ಹರೇ ರಾಮ; ನಿ೦ಗೊಗುದೆ ಧನ್ಯವಾದ೦ಗೊ. ನಮಸ್ತೇ….

  2. [ಸವತಿಗ೦ಗಮ್ಮನತ್ರೆ ] [ವಿರೋಧ ತೋರಿಕೆ(ಆಭಾಸ)ಗೆ ಮಾ೦ತ್ರ!] [ನಿಮೇಷೋನ್ಮೇಷಾಭ್ಯಾ೦ – ರೆಪ್ಪೆ ಮುಚ್ಚಿ ಬಿಡುವಾಗ] ಬಹು ಸೊಗಸಾದ ವರ್ಣನೆಗೊ.

    ಪ್ರತಿಯೊಂದು ಶ್ಲೋಕದ ಹವಿಗನ್ನಡನುವಾದ ಅತ್ಯುತ್ಕೃಷ್ಟವೇ ಸರಿ. ಗುರು ಶಂಕರಾಚಾರ್ಯರ ‘ಉತ್ಪೇಕ್ಷಾಲ೦ಕಾರ’ ಮನೋಹರವಾಗಿಪ್ಪದರ ಬಹುನಾಜೂಕಾಗಿ ಅಪ್ಪಚ್ಚಿ ಪ್ರತಿಬಿಂಬಿಸಿದ್ದವು. ನಮೋ ನಮಃ ಅಪ್ಪಚ್ಹಿ ಈ ವಾರವೂ.

    1. ಚೆನ್ನೈ ಬಾವ,
      ಹರೇ ರಾಮ; ನಿ೦ಗಳ ಆತ್ಮೀಯ ಓದಿ೦ಗೆ + ಮೆಚ್ಚಿಕೆಯ ಒಪ್ಪದ ಸ್ಪ೦ದನಕ್ಕೆ ಶರಣು, ಶರಣು ಹೇದು ಕಯಿ ಮುಗಿತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×