Oppanna.com

ತಾಳಮದ್ದಳೆ, ಮತ್ತೆ ಬೇರೆ ಶುದ್ದಿಗೊ..

ಬರದೋರು :   ದೊಡ್ಡಮಾವ°    on   29/03/2010    13 ಒಪ್ಪಂಗೊ

ದೊಡ್ಡಮಾವ°
Latest posts by ದೊಡ್ಡಮಾವ° (see all)

ದೊಡ್ಡಮಾವ° ಶುದ್ದಿ ಹೇಳುದು ಅಪುರೂಪ, ಹೇದರೆ ದೊಡ್ಡಶುದ್ದಿಯೇ ಹೇಳುಗು.
ಕುಂಬಳೆಸೀಮೆಯ ಹಳೇ ಹವ್ಯಕಭಾಶೆಲಿ ತಿಳಿಹಾಸ್ಯಲ್ಲಿ ಶುದ್ದಿ ವಿವರುಸುತ್ತ ಗೌಜಿಯೇ ಬೇರೆ!!
ಹಳೇ ಹವ್ಯಕ  ಭಾಷೆ? ಹ್ಮ್, ಅಪ್ಪು – ನಾವು ಈಗ ಮಾತಾಡ್ತ ಭಾಷೆ ಸುಮಾರು ಬದಲಾಯಿದು, ಕನ್ನಡ ಮತ್ತೆ ಇತರ ಭಾಶೆಗಳ ಪ್ರಭೆ ಬಿದ್ದಿದು.
ನಮ್ಮ ಅಜ್ಜಂದ್ರು, ಮತ್ತೆ ಅದರಿಂದಲೂ ಮದಲಾಣೋರು ಮಾತಾಡಿಗೊಂಡು ಇತ್ತಿದ್ದ ಪರಿಶುದ್ಧ ಭಾಶಾ ಪ್ರಯೋಗಂಗೊ, ಪ್ರತ್ಯಯಂಗೊ ‘ಹೋವುತ್ಸು, ಬತ್ಸು, ಹೇದ್ಸು..’ ಇತ್ಯಾದಿ ಬಳಕೆಗೊ ಈಗ ಕಾಂಬಲೇ ಸಿಕ್ಕ – ಬಾರೀ ಅಪುರೂಪ.
ಅಂತ ಅಪುರೂಪದ ವೆಗ್ತಗಳಲ್ಲಿ ನಮ್ಮ ಬೈಲಿನ ಹಿರಿಯರಾದ ದೊಡ್ಡಮಾವಂದೇ ಒಬ್ಬರು. ಹಳೇ ಹವ್ಯಕವ ಒಳುಶಿ, ಬೆಳೆಶುತ್ತ ಅವರ ಆಸಕ್ತಿ ನವಗೆಲ್ಲ ಮಾರ್ಗದರ್ಶನ ಆಗಲಿ.
ಪರಿಶುದ್ಧ, ಹಳೇ ಹವ್ಯಕದ ಶುದ್ದಿಯ ಓದಿ ಅರ್ತ ಮಾಡಿಗೊಂಬ°, ಸಂಶಯ ಬಂದರೆ ಅವರತ್ರೇ ಕೇಳವೊ° – ಆತೋ?
ಓದಿ, ಒಪ್ಪ ಕೊಡಿ.
ಹಳೇ ಭಾಶೆಯ ಹೊಸತ್ತು ಮಾಡುವೊ°!
ನಿಂಗಳ,
~
ಒಪ್ಪಣ್ಣ

ನವರಾತ್ರಿ ಸಮೇಲಿ ಒರಿಷಕ್ಕೂ ಆವ್ತ ಕ್ರಮ – ನೆರೆಕರೆವು, ನಂಟ್ರು ಸೇರಿ ತಾಳಮದ್ದಳೆ; ಇರುಳಿಂಗೆ – ಬೇಳ ಗ್ರಾಮದ ಕುಂಜಾರು ಹತ್ರಾಣ ಒಂದು ಮನೇಲಿ.
ಸ್ವತಃ ಆ ಮನೆವೇ ಎರಡು ಮೂರು ಜೆನ ಹವ್ಯಾಸಿಗೊ ಇದ್ದವು.
ದೊಡ್ಡಜ್ಜ ಪದ ಹೇಳ್ತವು. ದೊಡ್ಡಮಾವನದ್ದು ಚೆಂಡಗೆ ಎತ್ತಿದ ಕೈ. ಒಪ್ಪಕುಂಞಿ ಮಾವ ಚೆಂಡೆಮದ್ದಳೆ ಪೆಟ್ಟು ಎಲ್ಲ ಅಂತೆ ಇಪ್ಪಗ ಬಾರುಸುಗು – ತಾಳಮದ್ದಳೆಗೆ ಬಾರುಸ. ರಾಮಜ್ಜ ಚೆಂಡೆ ಮುಚ್ಚುಗು. (ಚೆಂಡೆ ಮುಚ್ಚುಸ್ಸು ಹೇಂಗೆ ಹೇದು ಮತ್ತೆ ಹೇಳ್ತೆ)
ಒಪ್ಪಕುಂಞಿಮಾವ ಚೆಂಡೆ ಕೋಲು ಚೆಂದಕ್ಕೆ ಕೆತ್ತಿ ಮಡಗಿದ್ದು ಇದ್ದು, ಎರಡು ಪ್ರತಿ. ವಿರಾಮಲ್ಲಿಪ್ಪಗ ಬಾಜಿರದ ಹಲಗೆಲಿ ಕೂದಂಡು ಬಾರುಸುಗು. ಹಲಗ್ಗೇ ಕುಟ್ಟಿಂಡು.
ಒಂದೊಂದಾರಿ ಮೂರು ಸಂದಿ ಹೊತ್ತಿಂಗೂ ಮಜ್ಜಾನಪ್ಪಗ ಉಂಡಿಕ್ಕಿಯೋ, ಧೀಂಗಿಣ ಹಾಕುತ್ತ ಕ್ರಮ ಇದ್ದು. ಒಬ್ಬ ಪದ ಹೇಳುಸ್ಸು, ಮದ್ದಳೆ ಚಕ್ರತಾಳ, ತೆಂಡೆ ತಾಳ ಬಾರುಸುಸ್ಸು.
ಹಾಂ, ಹೇದಾಂಗೆ ಕೇಳಿಬಡಿಸ್ಸು – ಪೀಠಿಕೆ ಅದರ ಬಾರುಸಾಣ ಎಲ್ಲ ಆದ ಮತ್ತೆ.
ಅರ್ಥ ಹೇಳ್ಳೆಯಿಲ್ಲೆ ಅಂಬಗ ಹೇಳ್ತ ಜೆನಂಗಳೂ ಇರ್ತವಿಲ್ಲೆ. ಕೇಳ್ತವೂ ಇರ್ತವಿಲ್ಲೆ.
ಇದು ಇಂದು ನೇರಂಪೋಕು – ಹೊತ್ತೋಪಲೆಯಿದ್ದ ಮೋಜು.

ದೊಡ್ಡಮಾವ
ದೊಡ್ಡಮಾವ, ತಾಳಮದ್ದಳೆಗೆ ಅಲ್ಲ, ದೊಡ್ಡಬಾವನ ಮದುವೆದಿನ ಮುಂಡಾಸು ಕಟ್ಟಿದ್ದು!

ನವರಾತ್ರಿ ಸಮೆಯಾಣ ತಾಲಮದ್ದಳೆಗೆ ಸೇರೇಕಾದವು ಉದಿಯಪ್ಪಗಾಣ ಹೊತ್ತಿಂಗೇ ಬಂದು ಸೇರುಗು.
ಈಗಾಣ ಪೈಸಗೆ ಅರ್ಥ ಹೇತವರ ಹಾಂಗೆ ಅಲ್ಲದ. ಈಗಾಣವು ಅವರ ಅರ್ಥಕ್ಕೆ ಅಪ್ಪಗ ಬಂದು ಕೂರುಗು. ಅರ್ಥ ಮುಗಿವಗ ಪರಾರಿ.
ಊಟದ ಗುಣದೋಷ ಅರಡಿಯೇಕಾದರೆ ತುಪ್ಪಂದ ತೊಡಗಿ ಮಜ್ಜಿಗೆ ವರೆಗೆ ಉಂಡು ನೋಡೆಡದೋ?
ಮದಲಾಣವರ ಕ್ರಮ ಹಾಂಗೆ. ಇಂದ್ರಾಣವರ ಕ್ರಮ ಹೀಂಗೆ – ಹೀಂಗೆ ಹೇದರೆ – ಕ್ರಮ ಇಲ್ಲದ್ದೆ ಇರುಸ್ಸೇ ಒಂದು ಕ್ರಮ!
ಊಟಕ್ಕಿದ್ದವ ಮೂರ್ತಕ್ಕಿಲ್ಲೆ, ಮೂರ್ತಕ್ಕಿದ್ದವ ಊಟಕ್ಕಿಲ್ಲೆ.
ಬಫೇಲಿ ನಿಂದಂಡು ಪಲಾವು ತಿಂದು ನಿವುರ್ತಿ ಆದರೂ ಆತು.
ಐಸ್‌ಕ್ರೀಂ ನಕ್ಕಿಕ್ಕಿ ಅರ್ಧ ಇಡ್ಕಿಕ್ಕಿ ಹೋದರೂ ಆತು. ಅವವು ಮಾಡಿದ್ಸೇ ಕ್ರಮ!
ಊಟಕ್ಕೆ ಒಂದು ಪಾಯ್ಸ ಕೊದಿಲು ಮೇಲಾರ ತಾಳು ಉಪ್ಪಿನಕಾಯಿ ಮಜ್ಜಿಗೆ – ಮನೆಹೆಮ್ಮಕ್ಕಳೇ ಉದಾಸನ ಇಲ್ಲದ್ದೆ ಮಾಡಿ ಬಡುಸುಗು.
ಈ ತಾಳಮದ್ದಳೆ ಹವ್ಯಾಸಿಗೊ ಒಬ್ಬೊಬ ಒಂದೊಂದು ತರದ ರಸಿಕರು. ಎಸಡಿ ಮಧ್ಯಸ್ಥ ರಜಾ ಕೀಟಲೆ ಸ್ವಭಾವದವ.
ಉಂಡಿಕ್ಕಿ ರಜ ವಿಶ್ರಾಂತಿ ಎಲ್ಲ ಮಾಡಿಕ್ಕಿ ಒಬ್ಬ ಬಂಗಿಸೊಪ್ಪು ಸೊಂಟಲ್ಲಿ ಸುರುಟಿ ತಂದ್ಸರ ತೆಗದ.
ಅದಕ್ಕೆ ಗಿಂಡಿ ತಂದು, ಮಡಲಿನ ಗರಿಯ ಸುರುಟಿ, ನಾಳದ ಹಾಂಗೆ ಮಾಡಿ, ಅದರ ಗಿಂಡಿಗೆ ಸಿಕ್ಕುಸಿ, ಬಂಗಿ ಸೊಪ್ಪು ಹಾಕಿ – ಕಿಚ್ಚು ಹಿಡಿಸಿ, ಗಿಂಡಿಲಿ ಅಡಿಲಿ ರಜ ನೀರು ಇರೇಕು – ಗಿಂಡಿ ಬಾಯಿಗೆ ಮಿಣಕೈ ಹೀಂಗೆ ಮಡಿಸಿ ಮುಚ್ಚಿ, ಬೇಕಾಷ್ಟು ಸೆರೆ ಒಳುಶಿ ಅಲ್ಲಿಗೆ ಬಾಯಿ ಮಡಗಿ ಹೊಗೆ ಹೇರೇಕು.
ಅದು ನೀರಿನ ದಾಂಟಿ ಗುಳು ಗುಳು ಗುಡು ಗುಡು ಶಬ್ದ ಮಾಡಿ ಅವನ ಶರೀರಕ್ಕೆ ಸೇರುತ್ತು. ಅವರವರ ತಾಕತ್ತು ಇದ್ದಷ್ಟು ಹೊಗೆ ಹಾಕುತ್ತವು. ಬ್ರಹ್ಮರಂಧ್ರಕ್ಕೆ ತಟ್ಟೇಕು.
ಹೆಚ್ಚು ಸೇದಿದವು ಗಟ್ಟಿಗರು- ಕಮ್ಮಿ ಆದರೆ ಪಡಪೋಷಿಗೊ.
ಒಬ್ಬ ಆದ ಮತ್ತೆ ಒಬ್ಬ. ಹೀಂಗೆ..!
ವಿಷ್ಣು ಭಾವ ಆ ಮನೆಯ ಅಳಿಯ. ತುಂಬ ಸಾತ್ವಿಕ. ತಾಳಮದ್ದಳೆ ಕಲಾವಿದ ಎಂತ್ಸು ಅಲ್ಲ. ಬರೀ ಪ್ರೇಕ್ಷಕ.
“ಏ ವಿಷ್ಣು ಭಾವ, ಬಾ ನವಗೆ ಒಂದು ದಂ ಹಾಕಿ ನೋಡೆಡದೋ?”
“ಏ ಇಲ್ಲೆ ಎನ ಬೇಡ, ಎನ ಎಡಿಯ”
“ಹಾಂಗೆ ಮಾಡಿರೆ ಹೇಂಗೆ – ಎಂಗೊ ಎಲ್ಲ ಇಲ್ಲೆಯಾ, ನಾಕು ಜನರ ಒಟ್ಟಿಂಗೆ ಸೇರಿಯಪ್ಪಗ ಎಂಕಿಂಚ ಹೇದರಾಗ”
“ಇಲ್ಲೆ, ಎನ ಅದು ಅಭ್ಯಾಸಯಿಲ್ಲೆ”
“ಇದ, ಆನು ಹೇದು ಹೊಡ್ತೆ”
ಒಬ್ಬ ಭಾವಯ್ಯ ಅವನ ಕೂದಲ್ಲಿಂದ ಏಳುಸಿ ಈ ಕಳಕ್ಕೆ ಕರಕ್ಕೊಂಡು ಬಂದು ಗಿಂಡಿ ಹಿಡುಶಿ, ಹೊಗೆ ಎಳವಲೆ ಹೇದು ಕೊಟ್ಟ.
ಒಂದೇ ಸರ್ತಿ ಎಳದ್ಸು…
…ತಲೆ ತಿರುಗಲೆ ಸುರುವಾತು, ಕೈಕಾಲು ನೆಡುಗಲೋ, – “ಎಂತ ಬಾವ ಕುಶಾಲು ಮಾಡುತ್ತಿಯೋ”
– ಕುಶಾಲು ಇವಂಗೆ, ಅವನ ಸಂಕಟ ಕಂಡು ಸಂತೋಷ ಪಡುತ್ತವಂಗೆ.
ವಿಷ್ಣುಭಾವ ಕಂಗಾಲು. ಹೊಟ್ಟೆ ತೊಳಸಲೂ, ತಲೆ ತಿರುಗಲೂ – ಎಂತೆಲ್ಲವೋ.
ಈ ಕುಶಾಲು ಬಾಯಿಗೊ ಒಳಂದೊಳ ಅವನ ಅವಸ್ತೆ ಕಂಡು ಸಂತೋಷ ಪಡಲೆ.
ದೊಡ್ಡತ್ತೆ ಅವನ ಮೆಲ್ಲಂಗೆ ಏಳುಸಿ ಕರಕ್ಕೊಂಡು ಹೋಗಿ, ಕೈಸಾಲೆಲಿ ಹಸೆ ತಲೆಕೊಂಬು ಕೊಟ್ಟು ಮನುಗುಸಿತ್ತು.
ಅಂತು ನೆಡು ಇರುಳಪ್ಪಗ ಅಮಲು ಬಿರುದು ಎದ್ದ – ಇವರ ಕುಶಾಲಿಂದಾಗಿ ’ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ’…!
ಎಸಡಿ ಎಂಕಪ್ಪ ಹೇಳುಸ್ಸು ಹಿಂದಂದ.  ಎಸಡಿ (ಏಡಿ) ನೀರು ಕಲಂಕುತ್ತ ಪ್ರಾಣಿ ಅಲ್ಲದೋ?
ಇವ ಒಳ್ಳೆದಿದ್ದಲ್ಲಿ ಎಂತಾರು ಮಾಡಿ ಕಲಂಕಲೆ ನೋಡುಗು. ಅದು ಅವನ ಸ್ವಭಾವ. ಹಾಂಗಾಗಿ ಅವನ ಎಸಡಿ ಹೇದು ಹಿಂದಂದ ಎಲ್ಲೊರೂ ಹೇಳುಸ್ಸು.
ಎದುರಂದ ಎಂಕಪ್ಪಣ್ಣ, ವೆಂಕಪ್ಪ ಭಾವ – ಹೀಂಗೆ.
ಹಿಂದಂದ ಹಾಂಗೆ ಹೇಳ್ತವು ಹೇದು ಇವಂಗೆ ಗೊಂತಿದ್ದು. ಹಿಂದಂದ ಹೇಳ್ಸಕ್ಕೆ ನಿವೃತ್ತಿ ಮಾಡ್ಲೆಡಿಗೋ?
ನಿಂಗೊ ಹಾಂಗೆಲ್ಲ ಎನ್ನ ಹೇಳ್ತಿರಾಡ – ಹೇದರೆ ಎಂತಕ್ಕು?
– ಕೆಸರಿಂಗೆ ಕಲ್ಲಿಡ್ಕಿ ಮೋರಗೆ ರಟ್ಟುಸಿಗೊಂಡ ಹಾಂಗಕ್ಕು.
ಒಂದಾರಿ ಎಂತಾತು ಗೊಂತಿದ್ದೋ – ಈ ಎಸಡಿಯ ಹೊಸತಾಗಿ ಪರಿಚಯಾದವ ಒಬ್ಬ – “ಓ ನಮಸ್ಕಾರ ಎಸಡ್ರೆ, ಯಾವಾಗ ಬಂದಿರಿ?” ಕೇಟ.
ಆ ಮನುಷ್ಯಂಗೆ ಇವನ ಪರಿಚಯ ಹೇದವ ’ಓ ಅವ ಅದ, ಎಸಡಿ ಎಂಕಪ್ಪ ಹೇದ್ಸು’.
ಕೇಕುಣ್ಣಾಯ ಹೇದೆಲ್ಲಾ ಇರ್ತಲ್ಲದೋ – ಹಾಂಗೇ ಆಯಿಕ್ಕು ಈ ಎಸಡಿ ಕೂಡಾ – ಜಾನ್ಸಿಂಡು ಹೇದ್ಸು.
ಎಸಡಿ ಹೇದರೆ ಏಕವಚನ ಆತಿಲ್ಯೋ – ಅದರ ಎಸಡ್ರೆ ಹೇದು ಬಹುವಚನ ಮಾಡಿ ಗೌರವಲ್ಲಿ ಮಾತಾಡಿಸಿದ್ಸು.
[ತಾಳಮದ್ದಳೆ ಸಂಭಾಷಣೆಲಿ “ಏ ಪರಮ ಪಾಪೀ..” ಹೇದೋ, “ರಾಕ್ಷಸಾಧಮಾ…” ಹೇದೋ ದಿನಿಗೇದರೆ ಗತ್ತಿಲ್ಲಿ
“ಹುಂ, ಏನು” ಹೇದು ಆ ಪಾತ್ರದ ಉತ್ತರ.
ಅಂಬಗ ಅಪ್ಪು ಹೇದು ಒಪ್ಪಿಯೊಂಡ ಹಾಂಗಾವುತ್ತಿಲ್ಯೋ? ]
ಇವಂಗೆ ತಲಗೆ ಬಡುದ ಹಾಂಗಾತು. ತುಪ್ಪಲೂ ಅಲ್ಲ, ನುಂಗಲೂ ಅಲ್ಲ.
ಆ ಮನಿಷ ಹೀಂಗೆ ದುರುಗುಟ್ಟಿ ನೋಡಿದ್ಸಲ್ಲದ್ದೆ ಎಂತ ಹೇಯಿದಯಿಲ್ಲೆ. ಮಾತೂ ಆಡಿದಯಿಲ್ಲೆ. “ಯಾಕೆ ಅವರು ಹೀಗೆ ಮಾಡ್ತಾರೆ? ನನ್ನನ್ನು ಕಂಡ್ರೆ”
“ಮತ್ತೆ ಎದುರೆದುರೇ ಎಸಡಿ ಅಂತ ಯಾರಾದ್ರೂ ಹೇಳ್ತಾರೋ?”
[ಓ ಎಂತದೋ ರತಿ ಎಲ್ಲಿಂದ ಬತ್ತಾಯಿದ್ದೆ? ಸುಬ್ರಾಯ ಬಾವನ ರತಿ ಹೇಳುಸ್ಸು. ಅವನ ರತಿ ಪಾತ್ರ ವಿಶಿಷ್ಟವಾದ್ದು. ಮೆಚ್ಚಿಕೆ ಆದ್ದು. ಕನ್ನೆಪ್ಪಾಡಿ ಅರ್ಜುನ ಮಾರಾಯರು ತಾಳಮದ್ದಳೆಂದಾಗಿ ಬಂದ ಹೆಸರು.
ಹೀಂಗೆ ಕೆಲವು ಹೆಸರುಗೊ ಗೆಳಯರ ಕೂಟಲ್ಲಿ ಚಾಲೂ ಆವುತ್ತು. ]
ಎಂಕಪ್ಪನು ಕುಂಜಾರು ಬಾವನುದೆ ಕುಳ್ಕುಂದ ಜಾತ್ರಗೆ ಹೂಡೆ ಎತ್ತುಗಳ ತಪ್ಪಲೆ ಹೋಗಿದ್ದಿದ್ದವು.
ಎಂಕಪ್ಪಂಗೆ ಕಾಪಿ ಕುಡಿಯೇಕು, ಇಲ್ಲದ್ರೆ ತಲೆಸೆಳಿಗು.
ನೆಡಕ್ಕಂಡೇ ಹೋಕು, ಸುಬ್ರಹ್ಮಣ್ಯಕ್ಕೆ ಎರಡು ದಿನಾಣ ಹಾದಿ, ಜಾನುವಾರು ಎಬ್ಬಿಂಡು ಬಪ್ಪಗ ೩ ದಿನ ಬೇಕು.
ಸರಿಗಟ್ಟಾದರೆ ಎಡೆದಾರಿಲಿ ಗುರ್ತದವರ ಮನೆಲಿ ಊಟಮಾಡಿ ಶಯನ.
ಕಾಪಿ ಹೊಡಿ ಸಕ್ಕರೆ ಇದ್ದು ಮಾರಾಪಿಲ್ಲಿ, ಮಾಡುಸುಸ್ಸು ಆರತ್ರೆ? ಕುಡಿಯದ್ದೆ ನಿವೃತ್ತಿಯಿಲ್ಲೆ.
ಎರಡು ಸಕ್ಕಣ ಹೊಡಿ ಬಾಯಿಗೆ ಹಾಕಿದ – ಹಾಳಿತಕ್ಕೆ ಇಷ್ಟು ಸಕ್ಕರೆ ಕೂಡಾ ಬೊಗಸೆ ನೀರು ತೆಗದು ಬಾಯಿಗೆ ತುಂಬುಸಿ ಕುಳು ಕುಳು ಮಾಡಿ ನುಂಗಿದ, ಬಾಯಿಲೇ ಆತಿಲ್ಯೋ ಕಾಪಿ!
ಮೂರು ಸಂದಿ ಆಯೆಕಾರೆ ತಾಳಮದ್ದಳೆಗೆ ಎಲ್ಲಾ ತಯಾರು ಮಾಡಿ ಮಡಗಲೆ ಚೆಂಡೆ ಬಳ್ಳಿ ಹಿಡಿಯಲೆ ಕೂದ ಎಸಡಿ ಎಂಕಪ್ಪ. ಎಷ್ಟು ಕಾಶಿರೂ ತೃಪ್ತಿಯಿಲ್ಲೆ – ಕಾಶುತ್ತದು.
ಟೈಂ, ಟೈಂ – ಹೇದು ಬೆರಳಿಲ್ಲಿ ಹೆಟ್ಟಿ ನೋಡುತ್ತದು. ಮತ್ತೆ ಕೋಲಿಲ್ಲಿ ಕುಟ್ಟಿ ನೋಡುತ್ತದು.
ಬಳ್ಳಿ ಕಾಯಿಸಿ ಕಾಯಿಸಿ ಅಪ್ಪಗ ಮುಚ್ಚಿಗೆ ಹರುದತ್ತು – ಚೆ, ಇನ್ನೆಂತ ಮಾಡುಸ್ಸು. ಬೇರೆ ಚೆಂಡೆ ಯಿಲ್ಲೆ, ಹತ್ತರೆ ಎಲ್ಲಿಯೂ ಇಲ್ಲೆ. ಚೆಂಡ್ರೆಯಿರುಸ್ಸು ಅನಂತಪುರಲ್ಲಿ ಮಾಂತ್ರ. ಅಲ್ಲಿಗೆ ಜೆನ ಕಳುಸಿದವು. ಎಷ್ಟು ಬೇಗ ನೆಡದರೂ ಒಂದು ಮೂರು ಗಂಟೆ ಹೊತ್ತು ಬೇಕು ಹೋಗಿಂಡು ಬಪ್ಪಲೆ.
ತಾಳಮದ್ದಳೆ ಸುರು ಮಾಡಲೆ ತಡವಾವುತ್ತು. ಅಂಬಟೆಕಾಯಿ ಗೋವಿಂದಜ್ಜ ಹೋ- ನಾವು ಸುರು ಮಾಡುವೊ, ಚೆಂಡೆ ಬಪ್ಪನ್ನಾರ ಆನು ಸುಧಾರುಸುತ್ತೆ ಹೇದು. ಕಳ ಹಾಕಿದವು,
ಕೂದವು – ಒಡ್ಡೋಲಗದ ಪದ್ಯಕ್ಕೆ ಗೋವಿಂದಜ್ಜನ ಇಂದ್ರ.ಇಂದ್ರನ ಒಡ್ಡೋಲಗ ಸುರು ಮಾಡಿದ.
ಇಂದ್ರನ ಒಡ್ಡೋಲಗಲ್ಲಿ ಎಂತಯಿದ್ದು, ಎಂತಯಿಲ್ಲೆ?!
ಅಮರಾವತಿಯ ವರ್ಣನೆ…
ಕಂಬ – ಬೋದಿಗೆ – ನೆಲಗಟ್ಟು – ಜಾಲಂದ್ರ – ಎಲ್ಲೆಲ್ಲಿ ಏವದೇವದು, ಹೇಂಗೇಂಗಿದ್ದು..
ನವರತ್ನ ಖಚಿತವಾದ್ದು – ಆಸ್ಥಾನದ ವೈಭವ, ಆರಾರು ಎಲ್ಲೆಲ್ಲಿ ವಿರಮಿಸುತ್ತವು – ಋಷಿಮುನಿಗೊ, ದಿಕ್ಪಾಲಕರು, ಅವರ ಸಾಮರ್ಥ್ಯ..
ವರ್ಣನೆಮಾಡಲೆ ವಿಷಯಕ್ಕೆ ಕಮ್ಮಿಯಿಲ್ಲೆ..
– ಸುರಾಂಗನೆಯರು – ನರ್ತನ..
ಪ್ರತಿಒಂದನ್ನು ಕಣ್ಣಿಂಗೆ ಕಟ್ಟುತ್ತ ಹಾಂಗೆ ವಿವರಿಸುತ್ತಾ ಹೋದ..!
ಹೆಮ್ಮಕ್ಕೊಗೆಲ್ಲಾ ಒರಕ್ಕು ತೂಗಲೆ ಸುರುವಾತು .
ಅನಂತಪುರಕ್ಕೆ ಹೋದವು ಸೂಟೆ ಹಿಡುಕ್ಕಂಡು ಚೆಂಡೆ ಸಮೇತ ಬಂದೆತ್ತಿದವು.
ಒಡ್ಡೋಲಗವ ಖೈದು ಮಾಡಿತ್ತು. ಚೆಂಡೆ ಪೆಟ್ಟು ಬಿದ್ದತ್ತು.
ತಾಳ ಮದ್ದಳೆ ಕ್ರಮಪ್ರಕಾರ ಮುಂದುವರುದತ್ತು.
ಉದಿಯಪ್ಪಗ ಪ್ರಸಂಗಾವಸಾನ ಮಾಡಿದವು. ಮೋರೆ ತೊಳದು ಫಲಾರಕ್ಕೆ ತಯಾರಾತು.
ಕುಮಾರಮಂಗಲ ಚಂದ್ರಣ್ಣ “ಏ ಭಾವ, ಮನ್ನೆ ಕುಂಟುಕಾನ ತಾಳಮದ್ದಳೆಲಿ ಎಂತಗಮ್ಮತ್ತು ಗೊಂತಿದ್ದೋ?
ಪೆರ್ವದ ಕೊಡ್ಯಜ್ಜನ ಹನುಮಂತ – ಲಂಕಾದಹನಕ್ಕೆ ಹೆರಟು ಎರಡು ಕೈಲಿ ಮಾವಿನ ಸೊಪ್ಪಿನ ಕಣೆ ಹಿಡುಕ್ಕಂಡು – ಕವುಂಚಿಹಾಕಿದ ಕೊಪ್ಪರಿಗೆ ಹಂಡೆಯ ಮೇಲೆ ಹತ್ತಿ ಕೊಣುದು ಒಂದರಿಂದ ಒಂದಕ್ಕೆ ಹಾರಿ ಗಮ್ಮತ್ತೋ ಗಮ್ಮತ್ತು”
ನೀರಾಳ ಮಾಪಣ್ಣ ಹೇದ – “ಬರ್ಲದ ತಾಳಮದ್ದಳೆ ಹೇದರೆ – ಕತೆ ಎಂತದು ಕೇಳೆಕ್ಕಾದ್ಸಿಲ್ಲೆ. ರೇಣುಕಾ ಮಹಾತ್ಮೆ. ವರ್ಷಕ್ಕೂ ಸತ್ಯನಾರಾಯಣ ಪೂಜೆ – ತಾಳಮದ್ದಳೆ.
ತಾಳಮದ್ದಳೆಗೆ ಬೇಕಾಗಿ ಪೂಜೆಯೋ, ಪೂಜಗೆ ಬೇಕಾಗಿ ತಾಳಮದ್ದಳೆಯೋ..!?
ಬರ್ಲಭಾವಂಗೆ ಎರಡೂ ಆಯೇಕಾದ್ಸೇ. ಜಮದಗ್ನಿ ಪಾತ್ರ ಅವಂಗೇ ನಿಘಂಟು.
ರೇಣುಕೆಯ ಪಾತಿವ್ರತ್ಯ ಶಂಕುಸಿ ಅದರ ರಟ್ಟೆ ಹಿಡುದು – ಅತ್ಲಾಗಿತ್ಲಾಗಿ ಎಳದು- ಚೆಪ್ಪರ Nike air max Pas Cher ತುಂಬಾ ಓಡುಸಿ..
ರೇಣುಕೆಯ ಮೋರೆಗೆಲ್ಲಾ ಹರುಂಕಿ ಗವುಜಿಯೋ ಗವುಜಿ.
ರೇಣುಕೆ ಮಾಡಿದ್ಸು ಪಟ್ಟಾಜೆ ರಮಣ.
ಮರದಿನ ಅವನ ಹೆಂಡತ್ತಿ ಕೇಟತ್ತಾಡ ’ಇದೆಲ್ಲ ಮೋರಗೆ ಹರುಂಕಿದ್ಸು ಎಂತದು’ ಹೇದು
ಅಡ್ಕ ಬಾಳೆ ಕೊಯಿವಲೆ ನೋಡುವಾಗ ಚೆನ್ನಾರಬಳ್ಳಿ ಹರುಂಕಿದ್ಸು ಹೇದನಾಡ.

ಮುಗಾತು

ಸೂಚನೆ:

  • ಕಂಡ್ರೆ – ಮಾತಿನ ಒಂದು ವರಸೆ. ನೀ ಹೀಂಗೆ ಹೇತು ಕಂಡ್ರೆ ಆರೂ ಗುಮಾನ ಮಾಡವು. ಮಳೆ ಬಂತು ಕಂಡ್ರೆ ಎಂತ ಮಾಡ್ತೆ?
    ವಿಶೇಷ ಅರ್ಥ ಎಂತ್ಸೂ ಇಲ್ಲೆ.
    ಒಂದು ಅವ್ಯಯ – ಹೋದರೆ ಬಂದರೆ ಹೇದಷ್ಟೆ ಅರ್ಥ.
  • ಮಿನಿಯ – ಒಂದು ಶೈಲಿ.
    ಉಚ್ಚಾರ: ಮಿನಿಯ, ಮಿಞಿಯ ಇವೆರಡರ ಮಧ್ಯದ್ದು.
    ಪಾರ್ತಿಸುಬ್ಬನ ಪ್ರಯೋಗಲ್ಲಿ ಇದ್ದು, ಲಂಕೇಶ್ವರ ರಾವಣ ಮಾತಾಡ್ಸುತ್ತಲ್ಲಿ.

13 thoughts on “ತಾಳಮದ್ದಳೆ, ಮತ್ತೆ ಬೇರೆ ಶುದ್ದಿಗೊ..

  1. ದೊಡ್ಡಮಾವನ ಈ ಶುದ್ದಿ ಈಗ ಓದಿದ್ದು.ನೆಗೆಮಾಡಿ ಸಾಕಾತು,ಚೆ೦ಡೆ ಕಾಶಿ ಮುಚ್ಚಿಗೆ ಹರುದ್ದು ಗಮ್ಮತ್ತಾಯಿದು.
    ತಾಳಮದ್ದಳೆ ಅನುಭವ೦ಗೊ ರೈಸಿದ್ದು ,ಮಾವ.

  2. ಹಾ°.. ಮುದಿಯಜ್ಜನೂ ಬರೆತ್ತವ.. nice to hear.. ಮುದಿಯಜ್ಜ ಒಪ್ಪ ಆಯಿದಾತಾ.!

    1. ಬಯಲಿಂಗೆ ಸ್ವಾಗತ ಇದ್ದು, ನಾಣಿತ್ಲು ಭಾವ ಇಲ್ಲಿವರೇಗೆ ಬಂದಪ್ಪಗ ನವಗೆ ಒಂಥರಾ ಖೊಷಿ ಇದಾ, ಹೀಂಗೇ ಬಂದೊಂಡಿರಿ, ಒಪ್ಪಂಗಳನ್ನೂ ಕೋಡುತ್ತಾ ಇರಿ, ಆಗದೋ…?

  3. ಬರದ್ದು ಒಳ್ಳೆದಾಯಿದು . ಎನ್ನ ಅಜ್ಜಿ ಉಪಯೋಗಿಸಿಕೊಂಡಿತ್ತ ಕೆಲವು ಹಳೆ ನಮ್ಮ ಭಾಷೆ ಶಬ್ದನ್ಗೋ ಓದಿ ಕೊಶಿ ಆತು. ಪಾರ್ತಿಸುಬ್ಬನ ಪ್ರಸಂಗ೦ಗಳಲ್ಲಿ ನಮ್ಮ ಭಾಷೆಯ ಶಬ್ದಂಗಳ ಪ್ರಯೋಗ ಸುಮಾರಿದ್ದು ..
    ಇನ್ನೂ ಬರೆತ್ತಾ ಇರಿ

  4. ಸಣ್ಣಾದಿಪ್ಪಗ ಬೋಳೋಡಿ ಮಾವನ ಮನೆಲಿ ಇಡೀ ಇರುಳು ಒರಕ್ಕು ಬಿಟ್ಟು ತಾಳಮದ್ದಳೆ ನೋಡಿದ್ದು ನೆಂಪಾತು.ಹಾಂಗೆ ತಾಳಮದ್ದಳೆ ಪ್ರೀತಿಲಿ ಎಂಗಳ ಬೆಂಗಳೂರಿನ ಮನೆಲಿ ವರ್ಷಾವದಿ ತಾಳಮದ್ದಳೆ ಹೋದವಾರ ಮಾಡಿದ್ದಷ್ಟೆ. ಲೇಖನ ಓದಿದಮೇಲೆ ಇನ್ನೊಂದರಿ ಫ಼್ಲಾಶ್ ಬ್ಯಾಕ್!

  5. ದೊಡ್ಡಮಾವ ಬರದ್ದು ಭಾರಿ ಲಾಯ್ಕಾಯಿದು!

  6. ಎನ್ನ ಮನೆ ಅಜ್ಜಿಯ ನೆನಪ್ಪಾತು ಎನಗೆ. ಅದು ತುಂಬಾ ’ಮಿನಿಯ’ ಹೇಳಿ ಉಪಯೋಗ್ಸುಗು. ಲಾಯಕ್ಕ ಆಯ್ದು ಬರದ್ದು. ಎನ್ನ ಅಪ್ಪಂದೇ ಒಬ್ಬ ಯಕ್ಷಗಾನ ಆರ್ಟಿಸ್ಟ್, ಹವ್ಯಾಸಿ.
    – ಉಷೈ.

    1. ತುಳುವಿಲಿ” ಉಂಬಾ” ಹೇಳಿ ಹೇಳ್ತವು-ಅಲ್ಲದೊ?

  7. ದೊಡ್ಡ ಮಾವ ಶುಧ್ದ ಹವ್ಯಕ ಭಾಷೆಲಿ ಬರದ ಲೇಖನ ಓದಿಸೊಂಡು ಹೋತು. ವಿಶಯದೊಟ್ಟಿಂಗೆ ತಮಾಷೆಯೂ ಸೇರಿ ಖುಷಿ ಕೊಟ್ಟತ್ತು. ಕಾಲ ರಜ ಹಿಂದಕ್ಕೆ ಓಡಿತ್ತು. “ಬಾಜಿರದ ಹಲಗೆಲಿ” ಹೇಳುವಲ್ಲಿ “ಬಾಜಿರ” ಹೇಳಿರೆ ಎಂತ ಹೇಳಿ ಹೇಳ್ತೀರಾ?
    ಕಾಸರಗೋಡಿನ ನಮ್ಮವು ಮಾತಾಡುವಾಗ ಮಲಯಾಳ ಶಬ್ದಂಗೊ ಸೇರಿದ ಹಾಂಗೆ ಕೇಳುತ್ತಲ್ಲದ. “ಕುಞಿ “, ಕೇಟಿದಿಲ್ಲೆ” “ಚೆಙಾಯಿ” “ಮೋನು”, “ಮೋಳು” “ಚೆರ್ಪು” ಹೀಂಗೆ ಕೆಲಾವು ಶಬ್ದಂಗೊ.

    1. ಹಳೆಮನೆಯ ಹಾಂಗಿಪ್ಪ ಹಳೇ ತರವಾಡು ಮನೆ ನೋಡಿ ಗೊಂತಿಕ್ಕು ನಿಂಗೊಗೆ. ಎದುರಾಣ ಹೊಡೆಲಿ ಒಂಡು ದೊಡ್ಡ ಚಾವಡಿ ಇಕ್ಕು. ಆನು ವಳಬೈಲು ಮನೆಲಿ ಕಂಡ ಹಾಂಗಿಪ್ಪದು. ಎದುರಾಣ ಜಗಲಿಗೂ ಈ ಚಾವಡಿಗೂ ನೆಡೂಕೆ ನೆಲಕ್ಕಲ್ಲಿ ಒಂದು ದೊಡ್ಡ ಮರವ ದಪ್ಪಕೆ ಸಿಗಿಶಿ ಹಾಕುಗು ಹಳೇ ಆಚಾರಿಗೊ. ಅದಕ್ಕೆ ತೋರದ ಕಂಬವನ್ನೂ ಸಿಕ್ಕುಸಿ ಮಾಡಿಂಗೆ ಕೊಡುಗು. ಅಡ್ಡಕೆ ನಲಕ್ಕಲ್ಲಿ ಹಾಕಿದ್ಸು ಬಾಜಿರದ ಹಲಗೆ ಕುತ್ತಕೆ ನಿಲ್ಲುಸಿದ್ಸು ಬಾಜಿರದ ಕಂಬ ಹೇಳ್ತವು ಎನ್ನ ಅಪ್ಪ°.

      1. ಈಗ ಗೊಂತಾತು. ಧನ್ಯವಾದಂಗೊ.

  8. ತಾಳ ಮದ್ದಳೆಯ ಒಟ್ಟಿಂಗೆ ಬೇರೆ ಸುದ್ದಿಗೊ, ನಡುನಡುವೆ ತಮಾಷೆಗಳೂ ಸೇರಿ ಒಳ್ಳೆ ಓದುಸೆಂಡು ಹೋತು ಲೇಖನ. ಎಂಗಳ ಊರಿನ ಅಜ್ಜಂದ್ರ ಗಮ್ಮತ್ತಿನ ಚಿತ್ರಣ ಕಣ್ಣಿಂಗೆ ಕಟ್ಟಿತ್ತು. ದೊಡ್ಡ ಭಾವಯ್ಯನ ಮುಂಡಾಸಿನ ಪಟ ಚೆಂದ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×