Oppanna.com

ಕುಪುತ್ರೋ ಜಾಯೇತ….. [ಒಂದು ಕಥೆ]

ಬರದೋರು :   ಸುವರ್ಣಿನೀ ಕೊಣಲೆ    on   28/12/2011    55 ಒಪ್ಪಂಗೊ

ಸುವರ್ಣಿನೀ ಕೊಣಲೆ

ಕಣ್ಣಿಲ್ಲಿ ನೀರು ತುಂಬಿ ಬಂತು ಗಣಪತಿ ಭಟ್ರಿಂಗೆ, ಜೀವನಲ್ಲಿ ಮೊದಲ ಸರ್ತಿ ಅವ್ವು ಹೀಂಗೆ ಕೂಗುದು ಅವಕ್ಕೆ ನೆಂಪಿದ್ದ ಹಾಂಗೆ. ಅದೂ ಈ ಎಪ್ಪತ್ತನೇ ವರ್ಷಲ್ಲಿ, ಇಡೀ ಜೀವನ ಸಹನೆ, ಧೈರ್ಯಲ್ಲಿ ನಡಶಿದ ಭಟ್ರಿಂಗೆ ಹೀಂಗಾಯಕಾರೆ ಅವರ ಮನಸ್ಸಿಂಗೆ ಆದ ಗಾಯ ಹೇಂಗಿದ್ದದು?

ಸುಮಾರು ವರ್ಷದ ಹಿಂದೆ ಕುಂಬ್ಳೆ ಸೀಮೆಯ ಒಂದು ಕುಗ್ರಾಮದ ಕೃಷಿಕ ಕುಟುಂಬದ ಹಿರೀಮಗ ಆಗಿದ್ದ ಗಣಪತಿ ಭಟ್ರು ಕೆಲಸ ಹುಡ್ಕಿಗೊಂಡು ದೊಡ್ಡ ಪೇಟೆಗೆ ಬಂದದು. ಮನೆಯ ಬಡತನ, ತಮ್ಮಂದ್ರು, ತಂಗೆಕ್ಕೊ, ಅಬ್ಬೆ, ಅಪ್ಪ. ಅನಿವಾರ್ಯ ಆಗಿತ್ತಿದ್ದು ಅಂಬಗ. ಹೆಚ್ಚು ಕಲಿಯದ್ದ ಭಟ್ರಿಂಗೆ ಈ ಪೇಟೆಲಿ ಸಿಕ್ಕಿದ್ದು ಪೌರೋಹಿತ್ಯದ ಕೆಲಸವೇ, ವೇದ-ಮಂತ್ರ ಎಲ್ಲ ಕಲ್ತಿದ್ದ ಕಾರಣ ಯಾವುದೇ ಸಮಸ್ಯೆ ಆತಿಲ್ಲೆ. ತುಂಬಾ ಹೆಚ್ಚು ಅಲ್ಲದ್ರೂ ಮನೆಯ ಪರಿಸ್ಥಿತಿ ಸುಧಾರ್ಸುವಷ್ಟು ಸಂಪಾದನೆ ಇತ್ತಿದ್ದು.ತಮ್ಮಂದ್ರ ವಿದ್ಯಾಭ್ಯಾಸ, ತಂಗೆಕ್ಕಳ ಮದುವೆ ಎಲ್ಲವೂ ಆತು. ಎಲ್ಲ ಸರಿ ಆದಪ್ಪಗ ಭಟ್ರೂ ಮದುವೆ ಆದವ್ವು, ಅನಸೂಯಮ್ಮ ಅವಕ್ಕೆ ಅನುರೂಪ ಜೋಡಿ. ಅಲ್ಲಿಂದಲ್ಲಿಗೆ ಇದ್ದ ಸಂಪಾದನೆಲಿ ಸಂಸಾರ ಶುರು ಆತು…ಒಬ್ಬನೇ ಒಬ್ಬ ಮಗ ಹುಟ್ಟಿದ ಸಂಭ್ರಮ..ಅವಂಗೆ ತನ್ನ ಕಷ್ಟ ಯಾವುದೂ ಬಪ್ಪಲಾಗ ಹೇಳಿ ಹೊಟ್ಟೆ-ಬಟ್ಟೆ ಕಟ್ಟಿ ಅವನ ಕಲುಶಿದವ್ವು, ದೊಡ್ಡ ಆಫೀಸರ ಮಾಡೆಕು ಹೇಳಿ ಕನಸು ಕಂಡವು. ಮಗ ಕೂಡ ಕಲಿವಲೆ ಉಷಾರಿ. ಕಲ್ತು ಬ್ಯಾಂಕಿಲ್ಲಿ ಮ್ಯಾನೇಜರ ಆದ. ಕೈತುಂಬಾ ಸಂಬಳ, ಸಮಾಜಲ್ಲಿ ಗೌರವ. ಒಂದುಕೋಣೆಯ ವಠಾರದ ಮನೇಂದ, ದೊಡ್ಡ ಬಾಡಿಗೆ ಮನೆಗೆ ಬಂದವು.ಅಬ್ಬೆ-ಅಪ್ಪಂಗೆ ಹೆಮ್ಮೆ 🙂

ಒಳ್ಳೆ ಕುಟುಂಬದ ಕೂಸಿನ ಮಗಂಗೆ ಮದುವೆ ಮಾಡಿ ತಂದವು. ತಮ್ಮದು ಸುಖೀ ಸಂಸಾರ ಹೇಳಿ ಭಟ್ರು ಎಲ್ಲರಿಂಗೂ ಹೇಳಿ ಸಂತೋಷ ಪಟ್ಟವು…ಅದರೊಟ್ಟಿಂಗೆ ಪುಳ್ಳಿಯಕ್ಕಳೂ ಆದಪ್ಪಗ ಸಂಭ್ರಮ ದ್ವಿಗುಣ ಆತು. ಈಗ ಗಣಪತಿ ಭಟ್ರು ಪೌರೋಹಿತ್ಯಕ್ಕೆ ಹೆರ ಹೊಪದು ಬಿಟ್ಟಿದವ್ವು, ಆದರೆ ಮನೆ ಹತ್ತರಾಣ ದೇವಸ್ಥಾನಲ್ಲಿ ಅರ್ಚಕರಾಗಿ ಇದ್ದವು. ಎಲ್ಲವೂ ಸರೀ ಇದ್ದು ಹೇಳಿ ಅಪ್ಪಗ, ಮನೆ ಒಳ ಎಂತದೋ ಸರಿ ಇಲ್ಲೆ ಹೇಳಿ ಕಾಂಬಲೆ ಶುರು ಆತು ಅವಕ್ಕೆ…. ಅತ್ತೆಯೊಟ್ಟಿಂಗೆ ಸೊಸೆಯ ವ್ಯವಹಾರ ಏನೋ ಹೆಚ್ಚು ಕಮ್ಮಿ ಇದ್ದದು ಕಂಡತ್ತಾದರೂ, ಎಲ್ಲರ ಮನೆಲಿಯೂ ಇದ್ದದೇ ಹೇಳಿ ದೊಡ್ಡ ವಿಷಯ ಮಾಡಿದ್ದವಿಲ್ಲೆ. ದಿನ ಕಳುದ ಹಾಂಗೆ ಅತ್ತೆ-ಮಾವ ಸೊಸೆಗೆ ಭಾರ ಆದ್ದು ಅವರ ಅನುಭವಕ್ಕೆ ಬಂತು. ಮಗ ನಮ್ಮವನೇ ಅಲ್ಲದಾ ಹೇಳಿ ಎಂತದೂ ಹೇಳದ್ದೆ ತಾವೇ ಹೊಂದಿಗೊಂಡು ಹೋದವು.

ಒಂದು ದಿನ ಅನಸೂಯಮ್ಮ ತನಗೆ ಕಾಶೀಯಾತ್ರೆ ಮಾಡೆಕು ಹೇಳಿ ಆಶೆ ವ್ಯಕ್ತಪಡ್ಸಿಯಪ್ಪಗ ಭಟ್ರು ಸಂದಿಗ್ಧಲ್ಲಿ ಸಿಕ್ಕಿಹಾಕಿಗೊಂಡವು, ತಮ್ಮ ದೇವಸ್ಥಾನದ ಅರ್ಚನೆಯ ಸಂಪಾದನೆ ಎಂತಕ್ಕೂ ಸಾಲ, ಅದಲ್ಲದ್ದೆ ಹಳೇ ಉಳಿತಾಯ ಯಾವುದೂ ಇಲ್ಲ, ಮಗನ ಭವಿಷ್ಯಕ್ಕೆ ತಮ್ಮ ಎಲ್ಲ ಸಂಪಾದನೆಯನ್ನೂ ಹಾಕಿತ್ತವು. ಮನೆ ಒಳ ಶೀತಲ ಸಮರ ಇದ್ದರೂ ಧೈರ್ಯಮಾಡಿ ಮಗನ ಹತ್ತರೆ ಕೇಳಿದವ್ವು. ಹೆಂಡತಿ ಹತ್ತರೆ ಕೇಳ್ತೆ ಹೇಳಿ ಮಗ ಹೇಳಿಯಪ್ಪಗ ಗಣಪತಿ ಭಟ್ರು ಕಾಶೀಯಾತ್ರೆಯ ಆಶೆ ಬಿಡ್ಲೆ ಹೇಳಿದವು ಹೆಂಡತಿಗೆ. ಆದರೆ ಮರುದಿನ ಮಗ ಅಗತ್ಯಂದ ಹೆಚ್ಚಿಗೆ ಪೈಸೆ ಕೊಟ್ಟು ಯಾತ್ರೆಗೆ ಎಲ್ಲ ವ್ಯವಸ್ಥೆಯೂ ಮಾಡಿಕೊಟ್ಟಪ್ಪಗ, ಸೊಸೆಯ ಮನಸ್ಸು ಒಳ್ಳೆದೇ ಹೇಳಿ ಗೆಂಡ-ಹೆಂಡತಿ ಅಭಿಪ್ರಾಯ ಪಟ್ಟವು. ಇನ್ನಾಣವಾರ ಹೋಪ ತಯಾರಿ ಮಾಡಿದವು.

ಯಾತ್ರೆಗೆ ರೈಲು ಹತ್ತುಸುಲೆ ಮಗ ಸೊಸೆ ಬಂದವು, ಒಂದು ತಿಂಗಳ ಯಾತ್ರೆ..ಮಗನ, ಪುಳ್ಳಿಯಕ್ಕಳ ಬಿಟ್ಟು ಇಪ್ಪದು ಹೇಂಗೆ ಹೇಳಿ ಕಂಡರೂ ದೇವರ ದರ್ಶನ ಆಯಕಾದ್ದೇ ಅಲ್ಲದಾ, ಹೇಳಿ ಗ್ರೇಶಿದವ್ವು. ಹೀಂಗೆ ಎಲ್ಲ ದೇವರ ದರ್ಶನ ಮಾಡಿ ದಂಪತಿಗೊ ವಾಪಾಸು ಊರಿಂಗೆ ಎತ್ತುಲಪ್ಪಗ ಅನಸೂಯಮ್ಮನ ಆರೋಗ್ಯ ರಜ್ಜ ಹದಗೆಟ್ಟು ಸೀದಾ ಆಸ್ಪತ್ರೆಗೆ ಸೇರಿದವ್ವು. ಮಗಂಗೆ ಶುದ್ದಿ ಮುಟ್ಸುಲೆ ಅವನ ಆಫೀಸಿಂಗೆ ಫೋನು ಮಾಡಿರೆ, ಆ ದಿನ ಮಗ ರಜೆಲಿ ಇದ್ದ ಹೇಳಿ ಗೊಂತಾತು. ಆ ದಿನ ಆಸ್ಪತ್ರೆಲಿಯೇ ಉಳಿಯಕಾತು.

ಮರುದಿನ ಮನೆಗೆ ಸಂಭ್ರಮಲ್ಲಿ ಮನೆಗೆ ಬಂದಪ್ಪಗ ಕಂಡದು ಬಾಗಿಲಿಂಗೆ ಬೀಗ….. ಎಲ್ಲಿಯೋ ಪೇಟೆಗೆ ಹೋಗಿಕ್ಕು ಹೇಳಿ ಕಾದು ನೋಡಿದವ್ವು. ಮತ್ತೂ ಆರೂ ಬಾರದ್ದಿಪ್ಪಗ ಹತ್ತರಾಣ ಮನೆಲಿ ಕೇಳಿಯಪ್ಪಗ ಗೊಂತಾದ್ದು… ಇವ್ವು ಯಾತ್ರೆಗೆ ಹೋಗಿ ಒಂದುವಾರಲ್ಲಿ ಮಗ ಸೊಸೆ ಈ ಮನೆ ಖಾಲಿ ಮಾಡಿಗೊಂಡು ಹೋಯ್ದವು ಹೇಳಿ, ಅಲ್ಲಿ ಆರಿಂಗೂ ಹೊಸ ವಿಳಾಸ ತಿಳುಶಿದ್ದವೇ ಇಲ್ಲೆ….. ಭಟ್ರು ಮೆಲ್ಲಂಗೆ ಕಿಟಕಿ ಹತ್ತರೆ ಬಂದು ಒಳ ನೋಡಿರೆ ಮನೆ ಒಳ ಖಾಲಿ ಖಾಲಿ….. ಮನಸ್ಸಿನ ಒಳವೂ…………………..

ಅಪ್ಪ-ಅಮ್ಮನ ಕಾಂಬಲೇ ಆಗ ಹೇಳಿ ನಿರ್ಧಾರ ಮಾಡಿದ ಮಗನ ಕಾಂಬ (ದುರ)ಅದೃಷ್ಟ ಗಣಪತಿ ಭಟ್ರಿಂಗೂ ಅನಸೂಯಮ್ಮಂಗೂ ಸಿಕ್ಕಿದ್ದಿಲ್ಲೆ….

ಅವಕ್ಕೆ ಉಳುಕ್ಕೊಂಬಲೆ ದೇವಸ್ಥಾನಲ್ಲಿಯೇ ಒಂದು ಕೋಣೆ ಕೊಟ್ಟವಾದರೂ..ಮನಸ್ಸಿನ ಖಾಲಿ ತುಂಬಿದ್ದೇ ಇಲ್ಲೆ… ಹೆಂಡತಿಯೂ ಇದೇ ಚಿಂತೆಲಿ ಹೋದಪ್ಪಗ ಭಟ್ರು ಇನ್ನೂ ಒಂಟಿ ಆದವ್ವು.  ಒಂದು ದಿನ ಉದಿಯಪ್ಪಗ ಇದೆಲ್ಲ ನೆಂಪಾಗಿ ಭಟ್ರು ಕಣ್ಣೀರಿಟ್ಟವು, ಜೀವನಲ್ಲಿ ಮೊದಲ ಸರ್ತಿ…ಅದು ಅಕೇರಿಯಾಣ ಸರ್ತಿಯೂ ಕೂಡ. ಇನ್ನು ಮೇಲೆ ನಿನಗೆ ಈ ಕಷ್ಟ ಬೇಡ ಹೇಳಿ ದೇವರು ಗಣಪತಿ ಭಟ್ರ ತನ್ನೊಳ ಸೇರ್ಸಿಗೊಂಡ.

ಸೂ: ಹಲವು ವರ್ಷಗಳ ಹಿಂದೆ ನಡದ ಒಂದು ಘಟನೆ, ಅಪ್ಪ ಅಮ್ಮನ ಯಾತ್ರೆಗೆ ಕಳ್ಸಿಕ್ಕಿ ಮಗ ಮನೆ ಖಾಲಿಮಾಡಿಗೊಂಡು ಹೋದ್ದು, ಅದರ ಇಲ್ಲಿ ಕಥೆ ಮಾಡಿ ಹಾಕಿದ್ದೆ.
ಆ ಭಟ್ರ ಹೆಸರು ಎನಗೆ ಗೊಂತಿಲ್ಲೆ ಆದರೂ ಬಾಲ್ಯದ ನೆನಪಿಲ್ಲಿ ಅವರ ಚಿತ್ರ ಇನ್ನೂ ಇದ್ದು.  ಈ ಘಟನೆಯ ಬಗ್ಗೆ ನಿಂಗಳ ಅಭಿಪ್ರಾಯ ಎಂತ?

-ನಿಂಗಳ

ಸುವರ್ಣಿನೀ ಕೊಣಲೆ

55 thoughts on “ಕುಪುತ್ರೋ ಜಾಯೇತ….. [ಒಂದು ಕಥೆ]

  1. ದುರ೦ತ ಕಥೆ,ಆದರೆ ಇ೦ದಿನ ಸಮಾಜದ ಕೈಗನ್ನದಿ

  2. ಕರುಣಾಜನಕ ಕಥೆಯ ಚೆ೦ದದ ನಿರೂಪಣೆ,ಅಕ್ಕಾ.
    ಈ ಮಕ್ಕೊ ಮನುಷ್ಯತ್ವ ಇಲ್ಲದ್ದ ಜೀವಿಗೊ ಹೇಳೊದು ಸ್ಪಷ್ಟ.
    ಇ೦ದ್ರಾಣ ಕಾಲಲ್ಲಿ ” ಅತ್ತೆ – ಮಾವ ” ಒಟ್ಟಿ೦ಗೆ ಇರ್ತರೆ ಮದುವೆ ಅಪ್ಪಲೆ ಅಥವಾ ಕೂಸು ಕೊಡುಲೆ ಯೋಚನೆ ಮಾಡುವವೂ ಇದ್ದವು.ನಾಳೆ ನಾವೂ ಆ ಸ್ಥಾನಕ್ಕೆ ಹೋಪಲಿದ್ದು ಹೇಳುವ ಸತ್ಯ ಅರ್ತುಗೊ೦ಡರೆ ಯೋಚನೆ ಬದಲಕ್ಕು,ಅಲ್ಲದೋ?

  3. ಸುವರ್ಣಿನಿ ಅಕ್ಕನ ನಿರೂಪಣಾ ಶೈಲಿ ಲಾಯಿಕಿದ್ದು.
    ಮುದಿ ಅಪ್ಪ – ಅಬ್ಬೆಯ ಸ್ಥಿತಿ ಕಂಡು ಕಣ್ಣು ಮಂಜಾತು.

  4. @Suvarnini, Ningala niroopane layika aaidu.
    @Elloringoo, Intha maga-soseyakko namma samajakke avamaana. Enna mundaana maatugo hechchu heli kaangu, aadare avashya heli ansuttu. Namma havyaka sanghatane naaku kumkumarchane, Rudra pathana maadudarattonge intha vishayangala baggeyoo rajja thale kedisigollekku. Makko, abbe-appana vridhdhashramakke kalisidare gusu-gusu mataduva namma jana, mele vivarisidantaha makkala bagge baree shaapa haaki bittu bidtavu, aadare illi aayekkaddu bereye heli enna abhipraya. Iavara namma samajanda hera haakule entha aaga? Inthavara jothe yavude vyavahaarika athava souharda sambhandava madikkombalaaga. Ningala abhipraya henge?

    1. ಸದ್ಯಕ್ಕೆ ಹಾಂಗೆ ಸಮಾಜಂದ ಹೆರ ಹಾಕುಲೆ ಹೆರಟರೆ ಹೆಚ್ಚಿನವೂ ಸಮಾಜಂದ ಹೆರ ಇರೆಕಕ್ಕೋ ಹೇಳಿ ಹೆದರಿಕೆ ಆವುತ್ತು!!!

      ಗುರುಗೋ ರಾಮಕಥೆಲಿ ಅಪ್ಪ ಮಕ್ಕಳ,ಅಮ್ಮ ಮಕ್ಕಳ, ಗಂಡ ಹೆಂಡತಿಯ,ಮಿತ್ರರ… ಹೀಂಗೆ ಎಲ್ಲಾ ಸಂಬಂಧಂಗ ಯಾವ ತರ ಆದರ್ಶವಾಗಿರೆಕ್ಕು ಹೇಳಿ ಹೇಳಿಕೊಡುತ್ತಾ ಇದ್ದವು… ಇದರ ಕೇಳಿದ ಮೇಲೆ ನಮ್ಮ ಸಮಾಜದ/ಇಡೀ ದೇಶದ ಪ್ರತಿಯೊಬ್ಬರುದೆ ಆದರ್ಶ ಸಂಬಂಧವ ಮಡಿಕ್ಕೊಮ್ಬದರಲ್ಲಿ ಸಂಶಯ ಇಲ್ಲೇ… ಹಾಂಗಾಗಿ ಸಾಧ್ಯವಿದ್ದಷ್ಟು ರಾಮಕಥೆಯ ಹೆಚ್ಚಿನವು ಕೇಳುವ/ಕೇಳಿಸುವ ಹಾಂಗೆ ನೋಡಿಗೊಂಡರೆ ಸಾಕು ಹೇಳಿ ಅನ್ನಿಸುತ್ತು…

      1. Dhanyavada ningala uttarakke 🙂
        Ningo thilisida haange praytna khandita maadulakku.

        Aadare Ramakatheya keli adara nijaarthava thiliva(praytna maaduva) eshtu jana ikku heli ondu sanna sandeha. Mele Suvarniniakka vivarisida “bhatra maga” Ramakathe kelirada?? Haange avana hendathiude..

        1. ಮಂಗಳೂರು ಮಾಣಿ ಹೇಳುತ್ತ ಹಾಂಗೆ ಪ್ರೀತಿಯ ಕೊರತೆಂದಾಗಿ ಅವರ ಜೀವನಲ್ಲಿ ಆದ ಸಮಸ್ಯೆಯ ಅವಕ್ಕೆ ಅರ್ಥ ಮಾಡುಸೆಕ್ಕಾರೆ ಪ್ರೀತಿಂದ ಮಾಂತ್ರ ಸಾಧ್ಯ…

          ರಾಮ ಕಥೆ ಕೇಳಿದ ಮೇಲೆಯೂ ಅವು ಹೀಂಗಿದ್ದ ತಪ್ಪುಗಳ ಮಾಡುತ್ತವು ಹೇಳಿದರೆ ಅದರ ಅರ್ಥ ಅವು ರಾಮಕಥೆಯ ಕೇಳೆಕ್ಕಾದ ಕ್ರಮಲ್ಲಿ ಕೇಳಿದ್ದವಿಲ್ಲೇ ಹೇಳಿ… ರಾಮಕಥೆಯ ಒಂದು ಪುರಾಣದ ಕಥೆ ಕೇಳುವ ದ್ರುಷ್ಟಿಂದಲೋ… ಒಟ್ಟಿಲ್ಲಿ ಕಾಲಹರಣಕ್ಕೆ ಖುಷಿ ಆವುತ್ತು ಹೇಳುವ ದ್ರುಷ್ಟಿಲ್ಲಿ ಕೇಳಿದ್ದರೆ ಇಷ್ಟೇ ಅಕ್ಕಷ್ಟೇ… ಗುರುಗಳ ಪ್ರತಿಯೊಂದು ಪ್ರವಚನವ ಕೇಳುವಗಳೂ… ಪ್ರತಿ ಮಾತಿನ ಕೇಳುವಗಳೂ… ಅದಕ್ಕೂ ನಮ್ಮ ಜೀವನಕ್ಕೂ ಎಂತಾರೂ ಸಂಬಂಧ ಇದ್ದ? ಹೇಳಿ ಆತ್ಮ ವಿಮರ್ಶೆ ಮಾಡಿಗೊಲ್ಳೆಕ್ಕು… ಅತ್ಯಂತ ಸುಲಭಲ್ಲಿ ನಮ್ಮ ಜೀವನದ ಎಲ್ಲ ಸಮಸ್ಯೆಗ ಪರಿಹಾರ ಆವುತ್ತು…

          1. ಪ್ರೀತಿಯ ಕೊರತೆಂದ ಆದ ಸಮಸ್ಯೆಗೊಕ್ಕೆ ಪ್ರೀತಿಂದ ಹೇಂಗೆ ಪರಿಹಾರ ಸಿಕ್ಕುತ್ತು… ಹೇಳುದಕ್ಕೆ ಕೆಲವು ಉದಾಹರಣೆಗಳ ಕೊಡುತ್ತೆ…

            ಜೀವನಲ್ಲಿ ಪ್ರೀತಿಯ ಬೆಲೆಯೇ ಗೊಂತಿಲ್ಲದ್ದವನ ಪ್ರೀತಿಲ್ಲಿ ಕರಕ್ಕೊಂಡು ಬಂದು ಈ ಒಪ್ಪಣ್ಣ ಸಾಮ್ರಾಜ್ಯಲ್ಲಿ ಕೆಲವು ದಿನ ಓಡಾಡುಲೇ ಬಿಡೆಕ್ಕು… ತನ್ನಷ್ಟಕ್ಕೆ ಅವಂಗೆ ಪ್ರೀತಿಯ ಬೆಲೆ ಗೊಂತಾವುತ್ತು…

            ಜೀವನಲ್ಲಿ ಏಕಾನ್ಗಿಯಾಯಿದ… ಅವನ ಪ್ರೀತಿಲ್ಲಿ ಈ ಒಪ್ಪಣ್ಣ ಸಾಮ್ರಾಜ್ಯಕ್ಕೆ ಕರಕ್ಕೊಂಡು ಬರೆಕ್ಕು… ಅದೆಷ್ಟು ಜೆನ ಎನ್ನ ಪ್ರೀತಿಸುವವು ಇದ್ದವು ಹೇಳಿ ಅವನೂ ಜೀವನವ ಪ್ರೀತಿಸುಲೆ ಶುರು ಮಾಡುತ್ತ…

            ಇನ್ನು ಗಣಪತಿ ಬಟ್ಟರ ಮಗನ ಹಾಂಗಿದ್ದವರ ಸಮಾಜಕ್ಕೆ ಪ್ರೀತಿಲ್ಲಿ ಕರಕ್ಕೊಂಡು ಬಂದು ಅವು ಅಜ್ಜ,ಅಜ್ಜಿ,ಮಗ,ಸೊಸೆ,ಪುಲ್ಳಿಯಕ್ಕ ಎಲ್ಲ ಜೊತೆಗೆ ಪ್ರೀತಿಲ್ಲಿ,ಖುಷಿಲಿ ಇಪ್ಪ ಮನೆಯ ನೋಡುವ ಹಾಂಗೆ ಮಾಡುದೆ ಅವು ಮಾಡಿದ ತಪ್ಪಿಂಗೆ ನಾವು ಕೊಡೆಕ್ಕಾದ ಶಿಕ್ಷೆ… ತನ್ನಷ್ಟಕ್ಕೆ ಈ ಸುಖೀ ಸಂಸಾರವ ನೋಡಿಯಪ್ಪಗ ಅವಕ್ಕೆ ಮಾಡಿದ ತಪ್ಪಿಂಗೆ ಪಶ್ಚಾತ್ತಾಪ ಆವುತ್ತು…ಮುಂದೆ ಆರುದೆ ಅವು ಮಾಡಿದ ತಪ್ಪಿನ ಮಾಡದ್ದ ಹಾಂಗೆ ಅವ್ವೆ ನೋಡಿಗೊಂಗು…

            ಈ ತರ ಸಾಧ್ಯವಾದಷ್ಟು ಸಮಸ್ಯೆಂದ ಹೊಸ ಸಮಸ್ಯೆಯ ಸೃಷ್ಟಿಸದ್ದೆ… ಸಮಸ್ಯೆಗೊಕ್ಕೆ ಪರಿಹಾರ ಕಂಡುಗೊಮ್ಬಲೇ ನಾವು ಪ್ರಯತ್ನಿಸೆಕ್ಕು… ಮತ್ತೆ ಪ್ರೀತಿಂದ ಗೆಲ್ಲುಲೆ ಎಡಿಯದ್ದು ಈ ಜಗತ್ತಿಲ್ಲಿ ಯಾವುದೂ ಇಲ್ಲೇ…

    2. ಸತ್ಯಣ್ಣನೋ ಸತ್ಯಕ್ಕನೋ ಗೊಂತಾಯಿದಿಲ್ಲೆ ಕ್ಷಮೆ ಇರಳಿ,
      ಸಮಾಜಂದ ಹೆರ ಹಾಕುಗು ಹೇಳುವ ಹೆದರಿಕೆ ಮಡಿಕ್ಕೊಂಡು ಒಟ್ಟಿಂಗೇ ಇದ್ದರೆ ಅವರೊಳ ಪ್ರೀತಿ ಇಕ್ಕೋ?

  5. ಹರೇ ರಾಮ ಅಕ್ಕಾ……….
    ದುಃಖದ ಕಥೆ……….
    “ಇ೦ದಿನ ಚಿಗುರೆಲೆಯೇ ನಾಳೆಯ ಹಣ್ಣೆಲೆ ಅಲ್ಲದಾ????”–ಇಷ್ಟು ಯೋಚಿಸುಲೆ ಎಡಿಯದ್ದವು ಎಷ್ಟು ಕಲ್ತರೂ ಅವಿದ್ಯಾವ೦ತರೇ……..

      1. ಒಯೇ ಮಂಗ್ಳೂರಣ್ಣೋ

        ಪುಟ್ಟಕ್ಕ ಬಾರೀ ಗಡಿಬಿಡಿ ತೆರಕ್ಕಿಲಿದ್ದಡೋಯೀ..

        ಮೊನ್ನೆ ಪುತ್ತೂರತ್ತೆ ಮನೆಗೆ ಹೋಪದು ಸಿಕ್ಕಿ ಹೇಳಿತ್ತು… ಒಂದು ಹದಿನೈದು ದಿನ ಬಿಟ್ಟು ಬರೆತ್ಸೆ ಹೇದು!

  6. ಓದಿ ಬೆಜಾರಾತು.ಹೀ೦ಗಿಪ್ಪವುದೇ ಇರ್ತವಾ..ಚ್ಹೆ. ಃ(
    ನಿರೂಪಣೆ ಲಾಯ್ಕಾಯಿದು

  7. ಮನಮುಟ್ಟುವ ಕಥೆ. ಆರಿಂಗೂ ಹೀಂಗಪ್ಪಲೆ ಆಗ.

    1. ನಮ್ಮ ಮಧ್ಯೆ ಹೀಂಗಿದ್ದ ಘಟನೆಗೊ ಹೆಚ್ಚಾವ್ತಾ ಇದ್ದು ಹೇಳುದು ಇನ್ನೂ ಬೇಜಾರಿನ ಸಂಗತಿ, ಅಲ್ಲದಾ ಅಕ್ಕ?

  8. ಪ್ರಾಯ ಆದ ಅಬ್ಬೆ ಅಪ್ಪ ತಿರ್ಥಯಾತ್ರೆ ಮುಗುಶಿ ಬಪ್ಪಗ ಮನೆ ಬದಲಿಸಿ, ಅವರಿಂದ ದೂರ ಆದ್ದು ಅಕ್ಷಮ್ಯ ಅಪರಾಧ.
    ಈ ಕತೆಲಿ ಅವರ ತೀರ್ಥ ಯಾತ್ರೆಗೆ ಕಳುಸಿದ ಉದ್ದೇಶವೇ ಅವರಿಂದ ದೂರ ಅಪ್ಪಲೆ.
    ಅಭಿಪ್ರಾಯ ಬೇಧ ಇಪ್ಪಲ್ಲಿ, ಮಾತುಕತೆ ಮಾಡಿ ಬಗೆಹರಿಸಲೆ ಖಂಡಿತಾ ಎಡಿಗು.
    ವೈಯಕ್ತಿಕ ಇಷ್ಟಾರ್ಥಂಗಳ ಸಂಪೂರ್ಣ ದೂರ ಮಾಡಿ ಮಕ್ಕಳ ಏಳಿಗೆಗೆ ಬೇಕಾಗಿ ಶ್ರಮಿಸಿದ ಹೆತ್ತವಕ್ಕೆ ಈ ರೀತಿ ಮಾಡುವದು ಎಷ್ಟು ಮಾತ್ರಕ್ಕೂ ಸರಿ ಅಲ್ಲ.
    ನಿರೂಪಣೆ ಲಾಯಿಕ ಆಯಿದು

    1. ಧನ್ಯವಾದ ಅಪ್ಪಚ್ಚಿ 🙂
      ಇನ್ನಾರಿಂಗೂ ಹೀಂಗಪ್ಪಲಾಗ ಹೇಳಿ ಪ್ರಾರ್ಥನೆ ಮಾಡಿಗೊಂಬ

  9. ಮನಸ್ಸಿಂಗೆ ತಟ್ಟಿದ ಕಥೆ. ಕಥೆಲಿ ಬಂದ ಪಾತ್ರಂಗೊ ನಿಜಜೀವನಲ್ಲಿಯುದೆ ಕಾಂಬಲೆ ಸಿಕ್ಕುತ್ತದು ನಿಜವಾಗಿಯೂ ಬೇಜಾರಿನ ವಿಷಯ. ಹಾಂಗಪ್ಪಲಾಗ. ಸುವರ್ಣಿನಿ ಬರದ ಕಥೆಯ ಶೈಲಿ ಲಾಯಕಿತ್ತು. ಇನ್ನುದೆ ರಜ ವಿವರುಸಿದ್ದಿದ್ದರೆ, ಕಣ್ಣಿಂದ ನೀರು ಧಾರಾಳವಾಗಿ ಹರಿತ್ತಿತು.

    1. ಧನ್ಯವಾದ, ಇನ್ನುದೇ ಹೆಚ್ಚು ವಿವರ್ಸುಲೆ ಎನಗೆ ನಿಜವಾಗಿ ನಡದ್ದರ ಬಗ್ಗೆ ಹೆಚ್ಚಿಗೆ ಗೊಂತಿಲ್ಲೆ, ಹೆಚ್ಚು ಮಸಾಲೆ ಹಾಕಿ ಬರವ ಮನಸ್ಸಾತಿಲ್ಲೆ 🙂

  10. ಘಟನೆಗೆ ವಿಷಾದ. ಮತ್ತೆ., ಅಭಿಪ್ರಾಯ ಹೇಳೆಕ್ಕಾರೆ ಗಣಪತಿ ಭಟ್ರ ಮಗ-ಸೊಸೆಯ ಮಾತ್ನಾಡಿಸಿ ಆಯೇಕ್ಕಷ್ಟೆ. ಹೀಂಗಪ್ಪಲೆ ಅವಕ್ಕೆ ಎಂತ ಸಮಸ್ಯೆಗೆ ಎದುರಾಗ್ಯೊಂಡಿತ್ತೊ ತಿಳಿಯದ್ದೆ ನಮ್ಮಷ್ಟಕ್ಕೇ ಅಭಿಪ್ರಾಯ ಹೇಳುವದೇಂಗೆ?!!
    ಸಂಸಾರಲ್ಲಿ ಯಾವಾಗ ಮನಸ್ಸು ಒಡದತ್ತೊ ಕೂಡಲೇ ಬೇರೇ ಕೂರ್ಸಿ ಚಂದಕ್ಕೆ ಇಪ್ಪಲಾವ್ತಿತ್ತು. ಒಂದರಿ ಮನಸ್ಸು ಒಡದರೆ ಮತ್ತೆ ಅದಕ್ಕೆ ತೇಪೆ ಹಚ್ಚುದು ವ್ಯರ್ಥ ಕಾರ್ಯ. ಬೂದಿ ಮುಚ್ಚಿದ ಕೆಂಡವೇ ಅದು ಮತ್ತೆ. ದೂರಲ್ಲಿದ್ದು ಚಂದಕ್ಕೆ ಇಪ್ಪದೇ ಸಮ. ಅಲ್ಲದ್ರೆ ಬಿರುಕು ಬಾರದ್ದಾಂಗೆ ಎಲ್ಲೋರು ಪರಸ್ಪರ ಸುರುವಿಂದಲೇ ಅರ್ಥಮಾಡಿರೆಕ್ಕು ಮತ್ತು ಯೇವತ್ತೂ ಆ ಬೋಧವೂ ಬೇಕು ಮನೆಲಿಪ್ಪ ಪ್ರತಿಯೊಬ್ಬಂಗೂ. ಅದಕ್ಕೆ ಎಂತ ಆಯೇಕೋ ಅದು ಮಾಡೆಕ್ಕುದೇ. ಇದು ಕಾರ್ಯರೂಪಲ್ಲಿ ಸಾಧ್ಯವೋ ಕೇಳಿರೆ -‘ನವಗರಡಿಯ’ ಎಂಬುದೇ ‘ಚೆನ್ನೈವಾಣಿ’.

    1. ಪರಸ್ಪರ ಅರ್ಥ ಮಾಡಿಗೊಳ್ಳದ್ರೂ..ಅಪಾರ್ಥ ಮಾಡಿಗೊಳ್ಳದ್ರೆ ಅಷ್ಟೇ ಸಾಕು ಈ ಕಾಲಲ್ಲಿ

  11. ನಮ್ಮ ಸುತ್ತಮುತ್ತ ಮನುಷ್ಯನ ಎಲ್ಲ ಸ್ವಭಾವಂಗೊಕ್ಕೂ ಉದಾಹರಣೆ ಸಿಕ್ಕುತ್ತು..
    ಆ ಘಟನೆ ಯ ಕಥೆ ಮಾಡಿದ್ದು ಒಳ್ಳೇದಾಯಿದು..

  12. ಮಾಡಿದ್ದುಣ್ಣೋ ಮಹರಾಯ ಅವು ಅದರ ಅವರ ಮಕ್ಕಳ ಮೂಲಕ ಅನುಭವಿಸುತ್ತವು
    ಒ೦ದು ಜೋಕ್ ಜೋಕ್ ಆದರೂ ಎಷ್ಟು ಅರ್ಥ ಇದ್ದು ನೋಡಿ
    ಒಬ್ಬ ಮಗ ತನ್ನ ಅಪ್ಪ೦ಗೆ ಮನುಗುಲೆ ಹರ್ಕಟೆ ಗೋಣಿ ಕೊಟ್ಟಿತ್ತಿದ್ದಡ ಅಷ್ಟು ಸಸಾರ ಅಪ್ಪ ಹೇಳಿರೆ
    ಒ೦ದು ದಿನ ಅ೦ವ ಆಫೀಸಿ೦ದ ಬಪ್ಪಗ ಅವನ ಸಣ್ಣ ಮಗ ಬೇರೆ ಹರ್ಕಟೆ ಗೋಣಿ ಹೇಮರ್ಸಿ ಮಡಿಕೊ೦ಡು ಇತ್ತಿದ್ದಡ
    ಅಪ್ಪ ಬೈದು ಅದರ ಇಡ್ಕುಲೆ ಹೇಳಿರೆ ಆ ಮಗ ಕೊಟ್ಟ ಉತ್ತರ ಎ೦ತರ ಗೊ೦ತಿದ್ದಾ?
    ಅದು, ನೀನು ಅಜ್ಜ೦ಗೆ ಕೊಟ್ಟ ಹಾ೦ಗೆ ನಾಳೆ ಆನು ದೊಡ್ಡ ಅಪ್ಪಗ ನಿನಗೆ ಕೊಡ್ಲೆ ಬೇಕಲ್ಲದಾ ಅಪ್ಪಾ
    ಆ ಎಳೇ ಪ್ರಾಯದ ಮಕ್ಕಳ್ಳಲ್ಲಿಯೂ ಎ೦ತಾ ಉತ್ತರ !!!!!!!!! ನೋಡಿದಿರಾ?

    1. ತುಂಬಾ ಅರ್ಥಪೂರ್ಣವಾದ ಕಥೆ ಇದು ಅಣ್ಣಾ..

    1. ಮಗ ಸೊಸೆ ತುಂಬ ಸ್ವಾರ್ಥಿಗೊ….

  13. ಒಂದು ಕಥೆ ಹೇಳಿ ಗ್ರೆಷಿ ಓದುತ್ತ ಹೋದೆ… ಕೊನೆಗೆ ನಿಜಕ್ಕೋ ನಡದ ಘಟನೆ ಹೇಳಿ ಗೊಂತಾದಪ್ಪಗ ಕಣ್ನಿಲ್ಲಿ ನೀರು ಬಂತು… ಬೇರು ಇಲ್ಲದ್ದೆ ಮರಕ್ಕೆ ಎಷ್ಟು ದಿನ ಬದುಕ್ಕುಲೇ ಎಡಿಗು…ಅಪ್ಪ,ಅಮ್ಮನ ತುಂಬು ಹೃದಯದ ಆಶೀರ್ವಾದ ಇದ್ದರೆ ಅದುವೇ ಎಲ್ಲದಕ್ಕಿಂತ ದೊಡ್ಡ ಆಸ್ತಿ…

    ಒಂದು ವೇಳೆ ಲಾಲಿಸಿ,ಪಾಲಿಸಿದವು ಹೇಳುವ ನೆನಪಿಲ್ಲದ್ದ ಕಠಿಣ ಹೃದಯದವೇ ಆಗಿರಲಿ… ಸ್ವಾರ್ಥಕ್ಕೋಸ್ಕರ ಆದರೂ ಅಪ್ಪ,ಅಮ್ಮನ ಪ್ರೀತಿಸಲೇ ಬೇಕು… ಎಂತಕೆ ಹೇಳಿದರೆ “ಅಮ್ಮನ ಮನೋಸ್ಥಿತಿ ಮಕ್ಕಳ ಮನೋಸ್ಥಿತಿಯ ಮೇಲೆ ಅತ್ಯಂತ ಪ್ರಭಾವ ಬೀರುತ್ತು ಹೇಳುದು ನೂರಕ್ಕೆ ನೂರರಷ್ಟು ಸತ್ಯ”.

    1. ಗಣಪತಿ ಬಟ್ಟರ ಮನೆಲಿ ಅದೆಂತ ಭಿನಾಭಿಪ್ರಾಯ ಇದ್ದತ್ತೋ… ಸಮಸ್ಯೆಗೋ ಇದ್ದತ್ತೋ ನಮಗೂ ಗೊಂತಿಲ್ಲೇ…
      ಹೆಚ್ಚಿನ ಎಲ್ಲ ಮನೆಗಳಲ್ಲಿಯೂ ತಲೆಮಾರಿಂದ ತಲೆಮಾರಿಂಗೆ ಭಿನ್ನಾಭಿಪ್ರಾಯ ಇಪ್ಪದು ಸಹಜ… ಎಂತಕೆ ಹೇಳಿರೆ ಅವರವರ ಕಾಲಕ್ಕೆ ಸರಿಯಾಗಿ ಅವವು ದೃಷ್ಟಿ ಬೆಳೆಸಿಗೊಂಡಿರುತ್ತವು… ಕಾಲ ಬದಲಾದರೂ ಆ ದೃಷ್ಟಿಯ ಬದಲುಸುದು ಅಷ್ಟು ಸುಲಭ ಅಲ್ಲ… “ದೃಷ್ಟಿಗೆ ಸರಿಯಾಗಿ ಸೃಷ್ಟಿ” ಕಾಂಬದು ಸಹಜ ಆದ್ದರಿಂದ ಅವಕ್ಕವಕ್ಕೆ ಕಂಡದು ಅವಕ್ಕವಕ್ಕೆ ಸರಿ ಆಗಿರುತ್ತು… ಹೀಂಗೆ ಭಿನ್ನಾಭಿಪ್ರಾಯ ಬಪ್ಪದು…

      “ಕಾಲ ಬದಲಾದರೂ ದೃಷ್ಟಿ ಬದಲಾಯಿಸುದು ಸುಲಭ ಅಲ್ಲ…” ಹೇಳುದಕ್ಕೆ ಉತ್ತಮ ಉದಾಹರಣೆ ಹೇಳಿರೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಭಾರತೀಯರಿಂಗೆ ನಮ್ಮ ಸಂಸ್ಕೃತಿ,ನಮ್ಮತನದ ಮೇಲೆ ಅತಿಯಾದ ಆಸಕ್ತಿ ಬೆಳೆತ್ತಾ ಇದ್ದು… ಆದರೂ ನಮ್ಮ ತಲೆಲಿ “ನಮ್ಮ ಸಂಸ್ಕೃತಿಯ ಮೇಲೆ ಭಾರತೀಯರಿಂಗೆ ಅಭಿಮಾನ ಇಲ್ಲೇ… ವಿದೇಶೀ ವ್ಯಾಮೋಹವೇ ಜಾಸ್ತಿ” ಹೇಳುದು ಸ್ಟೋರ್ ಆಗಿಪ್ಪದರಿಂದ ನಮಗೆ ಹಾಂಗೆ ಕಾಣುತ್ತು… ಒಂದರಿ ನಮ್ಮ ದೃಷ್ಟಿಯ ಚೂರು ಬದಲಿಸಿ ನೋಡಿರೆ ಅದೆಷ್ಟು ಜೆನ ನಮ್ಮತನವ ಅಳವಡಿಸಿಗೊಮ್ಬಲೆ ಪ್ರಯತ್ನ ಪಡುತ್ತಾ ಇದ್ದವು ಹೇಳಿ ಕಾಣುತ್ತು…

      ಹೆಚ್ಚಿನ ಮನೆಗಳಲ್ಲಿ ಭಿನ್ನಾಭಿಪ್ರಾಯ ಇದ್ದರೂ ಗಣಪತಿ ಬಟ್ಟರ ಮನೆಯ ಹಾಂಗೆ ಕೆಲವು ಮನೆಗಳಲ್ಲಿ ಮಾಂತ್ರ ಅದು ಸಮಸ್ಯೆ ಅಪ್ಪದು ಎಂತಕೆ? ‘ಪ್ರೀತಿ’ ಯ ಕೊರತೆ ಪ್ರಧಾನ ಕಾರಣ… ನಮಗೆ ಮತ್ತು ನಮ್ಮ ಮಕ್ಕೊಗೆ ಅದೆಷ್ಟು ವಿಷಯಲ್ಲಿ ಭಿನ್ನಾಭಿಪ್ರಾಯ ಇದ್ದರೂ ಸಮಸ್ಯೆ ಆವುತ್ತಿಲ್ಲೇ. ಅದೇ ಅಪ್ಪ,ಅಮ್ಮನ/ಅತ್ತೆ,ಮಾವನ ವಿಷಯಲ್ಲಿ ಭಿನ್ನಾಭಿಪ್ರಾಯ ಬಂದ ಕೂಡಲೇ ಸಮಸ್ಯೆ ಅಪ್ಪದು ಎಂತಕೆ ಹೇಳಿರೆ ನಮ್ಮ ಮಕ್ಕಳ ಮೇಲೆ ಇಪ್ಪಷ್ಟು ಪ್ರೀತಿ ಅಪ್ಪ,ಅಮ್ಮನ/ಅತ್ತೆ,ಮಾವನ ಮೇಲೆ ಇಲ್ಲದ್ದ ಕಾರಣ…

      ಸಹಜವಾಗಿಯೇ ಅಪ್ಪ,ಅಮ್ಮನ/ಅತ್ತೆ,ಮಾವನ ಮೇಲೆ ಪ್ರೀತಿ ಇಲ್ಲದ್ದರೆ ನಮ್ಮ ಸ್ವಾರ್ಥಕ್ಕೆ ಬೇಕಾಗಿ ಆದರೂ ಆ ಪ್ರೀತಿಯ ಬೆಳೆಶಿಗೊಲ್ಲೆಕ್ಕು… ಎಂತಕೆ ಹೇಳಿರೆ ಅವರ ಹೃದಯ ತುಂಬಿದ ಒಂದು ಆಶೀರ್ವಾದ ಸಾಕಾವುತ್ತು ನಮ್ಮ ಮತ್ತು ಮಕ್ಕಳ ಸಂಪೂರ್ಣ ಅಭಿವೃದ್ದಿಗೆ.

  14. ಸರಿ ಹೊಂದಾಣಿಕೆ ಆಗದ್ರೆ ಬೇರೆ ಮನೆಲಿ ಕೋರ್ಸುಲಾವ್ತಿತ್ತು. ಮಕ್ಕಳ ಯಾ ಅಪ್ಪಮ್ಮನ ಬೈವಲೆ ನವಗೆ ಹಕ್ಕಿಲ್ಲೆ. ಅದು ಮನೆ ಒಳಾಣ ವಿಚಾರ. ಊರಿಂಗೆ ಉಪಕಾರಿ ಆದ ಎಷ್ಟೋ ಜೆನ ಮನೆಲಿ ಸರಿ ನಡಕ್ಕೊಳ್ಳದ್ದೋರು ಇದ್ದವು. ಹಾಂಗಾಗಿ ಮನಗೆ ಬೀಗ ಹಾಕಿ ರಟ್ಟುವ ಬದಲು ಸರಿಯಾಗಿ ಮಾತಾಡಿ ಬೇರೆ ಬೇರೆ ಮನೆ ಮಾಡುಲಾವ್ತಿತ್ತು.

    1. ಅಪ್ಪು, ಬೇರೆ ಮನೆ ಮಾಡಿ ಕೂರ್ಸುಲಾವ್ತಿತು, ಅಥವಾ..ಹೇಳಿಕ್ಕಿ ಹೋಪಲಾವ್ತಿತು

    1. ಧನ್ಯವಾದ 🙂
      ಅಪ್ಪು, ಹೀಂಗೆ ಆರಿಂಗೂ ಅಪ್ಪಲಾಗ..
      ಆದರೆ ಹಾಮ್ಗೆ ಮಾಡಿದ ಮಗ-ಸೊಸೆಗೆ ರಜ್ಜ ಅನುಭವ ಆಯಕ್ಕು, ಅಂಬಗ ಅವ್ವು ಮಾಡಿದ್ದಕ್ಕೆ ಪಶ್ಚಾತಾಪ ಅಕ್ಕು..ಹೇಳಿ ಎನಗೆ ಕಾಣ್ತು

  15. ಅಕ್ಕಾ,
    ಕತೆಯ ನಿರೂಪಣೆ ಲಾಯಿಕಾಯಿದು. ಆದರೆ ಇದು ನಿಜಾವಾದ ಕತೆ – ಹೇಳ್ತದು ಕೇಳಿ ಬೇಜಾರಾತು.
    ಆರಪ್ಪಾ ಅಷ್ಟೊಂದು ದುರ್ಭಾಗ್ಯವಂತ ಅಪ್ಪಮ್ಮ.?

    ಆಗಲಿ, ಕಾಶಿಗೆ ಹೋದವನ್ನೇ? ಅವರ ಹೆರಿಯೋರ ಋಣ ತೀರಿತ್ತಲ್ಲದೋ.. ಅದೇ ದೊಡ್ಡ ತೃಪ್ತಿ.

    1. ಧನ್ಯವಾದ,
      ನಿಜವಾಗಿ ನಡದ್ದು, ಹೀಂಗೂ ಆವ್ತು ಹೇಳಿ ಎಲ್ಲರಿಂಗೂ ಹೇಳುವ ಮನಸ್ಸಾತು ,ಎನ್ನ ಸ್ವಂತ ಕಥೆ ಅಲ್ಲದ್ರೂ… ಈ ಅಜ್ಜ ತುಂಬಾ ಆತ್ಮೀಯವಾಗಿ ಇದ್ದದು ನೆಂಪಾವ್ತು… ಮನಸ್ಸಿನ ಒಳ ಇದ್ದು ಮುಳ್ಳಿನ ಹಾಂಗೆ ಚುಚ್ಚಿಗೊಂಡಿದ್ದ ಘಟನೆ, ಈ ರೂಪಲ್ಲಿ ಹೆರ ತಂದದು…

  16. “ತಲಗೆರದ್ದು ಕಾಲಿಂಗೆ ಇಳಿಯದ್ದೇ ಇರ” ಹೇಳುದರ ಏಕೆ ತಿಳುಕ್ಕೊಳ್ತವಿಲ್ಲೆ ಹೇಳಿ ಗೊಂತಾವುತ್ತಿಲ್ಲೆ .
    ನಾಳೆ ನಾವೂ ಅಬ್ಬೆ- ಅಪ್ಪ ,ಅತ್ತೆ- ಮಾವ ಹೇಳುದರ ನೆಂಪು ಮಡುಕ್ಕೊಂಡರೆ ಎಲ್ಲಾ ಸರಿ ಅಕ್ಕು ಅಲ್ಲದೋ………..

  17. ಹೀ೦ಗಿರ್ತ ಮಕ್ಕೊಗೆ/ ಸೊಸೆ/ ಅಳಿಯ೦ದ್ರಿ೦ಗೆ ಧಿಕ್ಕಾರವಿರಲಿ. ಯಾವ ಅಬ್ಬೆ /ಅಪ್ಪ೦ಗುದೆ ಹೀ೦ಗಿಪ್ಪ ಪರಿಸ್ಥಿತಿ ಬಾರದ್ದಿರಲಿ. 🙁
    ಬರದ್ದದು ಲಾಯಿಕಾಯಿದು. ಅಭಿನ೦ದನೆಗೊ.

    1. ಧನ್ಯವಾದ,
      ಹಾಂಗಿದ್ದವೂ ಇಪ್ಪ ಸಮಾಜಲ್ಲಿ ನಾವಿದ್ದು..

  18. ಹೀಂಗೆ ಇಪ್ಪವ್ವೂ ಇದ್ದವ?….ಅಪ್ಪ ಅಮ್ಮನ ಸರಿಯಾಗಿ ನೋಡಿಕೊಳ್ಳದ್ದ ಮಕ್ಕೋ?….ಛೆ….

    1. ಇದ್ದವು ಅಣ್ಣ…
      ಇನ್ನೊಂದು ಘಟನೆಯೂ ಇದ್ದು ಹೀಂಗಿಪ್ಪದು… ಇನ್ನೊಂದರಿ ಪುರ್ಸೊತ್ತಪ್ಪಗ ಅದನ್ನೂ ಕಥೆ ಬರೆತ್ತೆ…

  19. baraddu laayakaayidu. Now it is seen frequently all around. ಕುಪುತ್ರೂ ಜಾಯೇತ – ಕ್ವಚಿದಪಿ ಕುಮಾತಾ ನ ಭವತಿ |
    ಆವಾಗ ಆಚಾರ್ಯ ಶಂಕರರು ಈ ಶ್ಲೋಕ ರಚಿಸುವಾಗ — ಒಂದೊಮ್ಮೆ ಕೆಟ್ಟ ಪುತ್ರನು ಹುಟ್ಟಲೂ ಬಹುದು —- ಆದರೆ ಕೆಟ್ಟ ಮಾತೆಯು ಎಲ್ಲೂ ಇಲ್ಲ.
    ಆದರೆ ಈಗ ತುಂಬಾ ಕುಪುತ್ರರು ಹುಟ್ಟುತ್ತವು — ಆದ್ದರಿಂದ ಕುಪುತ್ರಾಃ ಜಾಯೇರನ್ — ಹೇಳಿ ಹೇಳುಲಕ್ಕು.

    ಇದರ ಓದಿ — ಮಗ ಸೊಸೆ “ತಾವೂ ಮುಂದೊಂದು ದಿನ ……. ” ಹೇಳಿ ಗ್ರಹಿಸುತ್ತವಿಲ್ಲೆನ್ನೇ ಹೇಳಿ ಆಶ್ಚರ್ಯ.

    1. ಅಪ್ಪು, ಹೀಂಗೆ ಅಪ್ಪಲೂ ಸಾಕು ಹೇಳಿ ಗ್ರೇಶಿದ್ದು.. ಹಾಂಗೇ ಆವ್ತು ಈಗಾಣ ದಿನಲ್ಲಿ. ಕಲಿಗಾಲ !

    1. ಅಪ್ಪು ಕಿರಣಣ್ಣ… ದುರ್ಂತವೇ. ನಮ್ಮ ಸಮಾಜಲ್ಲಿ ಹೀಂಗಿದ್ದೋರೂ ಇದ್ದವು ಹೇಳುದು ಇನ್ನೂ ದೊಡ್ಡ ದುರಂತ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×