Oppanna.com

ಒಯಿಶಾಕದ ಉರಿಸೆಕಗೆ ಹಾಳೆಬೀಸಾಳೆಯ ತಂಗಾಳಿ..!

ಬರದೋರು :   ಒಪ್ಪಣ್ಣ    on   16/04/2010    13 ಒಪ್ಪಂಗೊ

ಯಬಾ, ಒಯಿಶಾಕದ ಅಬ್ಬರ. ಸೆಕೆಯೋ ಸೆಕೆ – ಉರಿ ಸೆಕೆ.
ಎಂತದೂ ಬೇಡ, ಯೇವದಕ್ಕೂ ಮನಸ್ಸು ಕೇಳ್ತಿಲ್ಲೆ.
ಸೀತ ಹೋಗಿ ನೀರ ಗುಂಡಿಲಿ ಹೋಗಿ ಬಿದ್ದುಗೊಂಬ° ಕಾಣ್ತು, ತರವಾಡುಮನೆ ಗೋಣಂಗಳ ಹಾಂಗೆ!
ಚೆ, ಅವರ ಜೀವನ ಎಷ್ಟು ಆರಾಮ! – ಅಜ್ಜಕಾನ ಬಾವಂಗೆ ಬೇಜಾರಾವುತ್ತು ಒಂದೊಂದರಿ!!

ಕಾಲ ನಿಲ್ಲುತ್ತೋ – ಚಳಿಗಾಲ, ಮಳೆಗಾಲ, ಒಯಿಶಾಕ – ಮೂರನ್ನೂ ಕೊಟ್ಟೇ ಕೊಡ್ತು.
ಆಯಾ ಕಾಲಕ್ಕೆ ನಮ್ಮ ಜನಜೀವನ ಅದಕ್ಕೆ ಹೊಂದಿಗೊಳೆಕ್ಕು / ಹೊಂದಿಗೊಳ್ತು.
ಬೇಗ ಹೊಂದಿಗೊಂಡವ ಉಶಾರಿ, ನಿಧಾನಕ್ಕೆ ಹೊಂದಿಗೊಂಬವ° ಕಷ್ಟಪಡ್ತ°!
ಶಿವರಾತ್ರಿ ಕಳಾತು ಹೇಳಿ ಆದರೆ ಚಳಿ ಹೋತು ಹೇಳಿಯೇ ಅರ್ತ. ಹಾಂಗೇ ಆಯಿದುದೇ!
ಕಳುದ ವಾರ ಅಂತೂ ಬೆಶಿಲಿನ ದಗೆ ಹೇಳಿಕ್ಕಲೆಡಿಯ – ಸಿಕ್ಕಾಪಟ್ಟೆ.

ಮೊನ್ನೆ ಮೌಡ್ಯ ಕಳಿವನ್ನಾರ ನವಗೆ ಪುರುಸೊತ್ತು. ಮತ್ತೆ ಒಂದೇ ಸರ್ತಿ ಜೆಂಬ್ರಂಗೊ ಸುರು, ಕಳಾಯಿ ಕಟ್ಟಂದ ನೀರು ಹೋದಾಂಗೆ.
ಈಗ ಪುನಾ ಜೆಂಬ್ರಂಗೊ ಇಲ್ಲೆ – ಅದಿಕ ಮಾಸ ಇದಾ! ಪುನಾ ಪುರುಸೊತ್ತು.

ಎಲ್ಲೊರಿಂಗೂ ಪುರಸೊತ್ತಿದ್ದ ದಿನ ಹೊತ್ತೋಪಗ ಕಟ್ಟೆಪಂಚಾತಿಗೆ ಸೇರುಲಿದ್ದನ್ನೆ..
ಈ ಸರ್ತಿ ಸೆಕಗೆ ಒಂದೇ ದಿಕೆ ಕೂದು ಮಾತಾಡುದಕ್ಕೆ ಬೈಲಿಲೇ ಒಂದು ಸುತ್ತು ಬಂದೆಯೊ° – ಸುಮಾರು ವಿಶಯ ಸಿಕ್ಕಿತ್ತು.
ಅಂದೊಂದರಿ ಆಟಿಲಿ ಮಳೆ ಬಂದು ನಮ್ಮ ಬೈಲಿಲಿ ಪೂರಾ ವಿತ್ಯಾಸ ಆದ ಬಗ್ಗೆ ನಾವು ಮಾತಾಡಿದ್ದಲ್ಲದೋ – ಅದೇ ನಮುನೆಲಿ ಈ ಸರ್ತಿ ಈ ಒಯಿಶಾಕದ ಬರಲ್ಲಿ ನಮ್ಮ ನೆರೆಕರೆಯೋರು ಎಂತ ಮಾಡಿದವು ಹೇಳ್ತದರ ಶುದ್ದಿಗೊ.
ಈ ವಾರ ಆ ಶುದ್ದಿಗಳನ್ನೇ ಹೇಳುವೊ ಹೇಳಿ ಕಂಡತ್ತು, ಆಗದೋ?

ಬಲ್ಲೆ ಎಡಕ್ಕಿಂದ ಹಳೆಮನೆ ಅಣ್ಣ ತೆಗದ ಸೂರ್ಯನ ಪಟ
ಬಲ್ಲೆ ಎಡಕ್ಕಿಂದ ಹಳೆಮನೆ ಅಣ್ಣ ಬೆಗರಿಯೊಂಡು ತೆಗದ ಸೂರ್ಯನ ಪಟ..!

ಕುಶಾಲಿಂಗೆ ಓದಿ, ನೆಗೆಬಂದರೆ ಪಿಸುರು ಮಾಡಿಗೊಳ್ಳಿ, ಪಿಸುರು ಬಂದರೆ ಒಪ್ಪ ಕೊಡಿ!
(ಬಿಟ್ಟು ಹೋದ್ದದಿದ್ದರೆ ನಿಂಗೊ ಸೇರುಸಿ..)

  • ಹೋವುತ್ತಾ ಬತ್ತಾ ನೀರು ಕುಡುದರೂ ಆಸರಪ್ಪದು ನಿಲ್ಲುತ್ತಿಲ್ಲೆ ಹೇಳಿಗೊಂಡು, ರಂಗಮಾವ° ದಶಮೂಲಾರಿಷ್ಟದ ಕುಪ್ಪಿ ತೊಳದು, ನೀರುತುಂಬುಸಿ ತೋಟಕ್ಕೆ ಹೋಪಗ ತೆಕ್ಕೊಂಡೋವುತ್ತವು..!
  • ಮಕ್ಕೊಗೆಲ್ಲ ದೊಡ್ಡ ಪರೀಕ್ಷೆ ಮುಗುದು ದೊಡ್ಡರಜೆ ಸುರು ಆತು. ಶಾಲೆ ಮುಗುದ ಕೊಶಿಲಿ ಕೈರಂಗಳಕ್ಕೆ ಹೆರಡೆಕ್ಕಾತು, ಸೆಕಗೆ ಈ ಸರ್ತಿ ಎಂತದೂ ಮಾಡ್ಳೆಡಿಯ – ಹೇಳಿ ಬಾರದ್ವಾಜದ ಮಾಣಿಯಂಗೊ ಬೇಜಾರಲ್ಲಿದ್ದವು.
  • ಇನ್ನು ಬಪ್ಪ ತಿಂಗಳೊರೆಂಗೆ ದೊಡ್ಡಜೆಂಬ್ರ ಯೇವದೂ ಇಲ್ಲೆ, ಹೋಳಿಗೆಯೂ ಇಲ್ಲೆ.
    ಜೆಂಬ್ರದ ಮನೆಗಳಿಂದ ಕೊಟ್ಟ ಹೋಳಿಗೆ ಕಟ್ಟ ಒಂದೊಂದೇ ಪುರುಸೊತ್ತಿಲಿ ಬಿಡುಸುತ್ತಾ ಇದ್ದವು, ಗಣೇಶಮಾವ.
  • ಸೆಕೆಯ ಉರಿ ಅಂತೂ ತಡವಲೇ ಎಡಿತ್ತಿಲ್ಲೆ ಹೇಳಿಗೊಂಡು ತೋಟದ ದೊಡ್ಡ ಹಾಳೆ ಒಂದರ ಕೊರದು ಬೀಸಾಳೆ ಮಾಡಿದವು ಮಾರ್ಗದ ಮಾವ°.
    ಬೀಸಾಳೆ ಉರುಟಪ್ಪಲೆ ಅಳತೆಗೆ ಮಡಗಿದ ಬಟ್ಳು ಎಲ್ಲಿಯೋ ಮರದು ಹೋಗಿ, ಇರುಳಿಂಗೆ ಬಾಳೆಲೆಲಿ ಉಂಡದಡ ಮತ್ತೆ.
  • ತಂಪಿಂಗೆ ಹಾಲು ಕುಡಿವಲೆ ಗ್ರೇಶಿ, ಹಾಲು ತಪ್ಪಲೆ ಡೈರಿಗೆ ಹೋದ ಬೊಳುಂಬುಟೀಚರಕ್ಕನ ಮೊಬೈಲು ಇಡ್ಕಿಯೇ ಹೋತಡ.
  • ಹೊಸಮೊಬೈಲಿಂಗೆ ಅವರ ಯೆಜಮಾನ್ರು ಬೇಂಕಿಂದ ಪೋನು ಮಾಡಿರೆ “ಆರು?” ಕೇಳಿ ಬೈಗಳು ತಿಂದವಡ!
  • ದೂರದ ಗೋರ್ಮೆಂಟು ಗೆಣವತಿ ಶಾಲೆಯ ಸೆಕೆಲಿ ಕೂದಂಡು ಪೇಪರುತಿದ್ದುವಗ ಮನೆಲಿ ಸೆಕಗೆರದ ಪರಿಮ್ಮಳ ಬಂತಡ, ದೊಡ್ಡಬಾವಂಗೆ.
    ದೊಡ್ಡಕ್ಕನತ್ರೆ ಅದರ ಹೇಳಿ ನೆಗೆಮಾಡುವಗ ’ನಿಂಗೊಗೆ ಮುದಿಬ್ರಾಂತು’ ಹೇಳಿ ಪರಂಚಿತ್ತಡ ದೊಡ್ಡಕ್ಕ!
  • ದೊಡ್ಡಮಾವನ ಕಾಪಿಗೆಂಟಿಂಗೆ ಕೊಟ್ಟ ಮಡ್ಡೋಯಿಲು ಸೆಕಗೆ ನೀರಾಗಿ ಅರುದತ್ತಡ!
  • ಎಡಪ್ಪಾಡಿ ಬಾವಂಗೆ ವಿಪರೀತ ಜ್ವರ ಬಂದು ಚಳಿಯೇ ಆಗಿಯೊಂಡಿತ್ತಿದ್ದಡ. ಲಂಕೇಶ್ ಪತ್ರಿಕೆಯ ಹೊತ್ತುಸಿ ಹೊತ್ತುಸಿ ಚಳಿಕಾಸಿಗೊಂಡು ಇತ್ತಿದ್ದನಡ!
  • ಹಳೆಮನೆ ಅಣ್ಣ ಅಂತೂ, ನೀರು, ಬಾವಿ, ಕೆರೆ, ಪಳ್ಳ, ಐಸು, ಐಸ್ಕ್ರೀಮು – ಇದನ್ನೇ ಪಟ ತೆಗಕ್ಕೊಂಡಿತ್ತಿದ್ದ!
  • ಕಿದೂರು ಡಾಗುಟ್ರು ಅಂತೂ ಸೆಕೆ ಜೋರಪ್ಪದಕ್ಕೆ ಇಂಜೆಕ್ಷನು ಇದ್ದೋ – ಹೇಳಿ ಹಳೆಪುಸ್ತಕಲ್ಲಿ ಹುಡುಕ್ಕಿಗೊಂಡು ಇತ್ತಿದ್ದವು.
  • ಶೇಡಿಗುಮ್ಮೆಬಾವ° ಬೊಂಡಕುಡಿವದಡ.
    ಪ್ರತಿ ಸರ್ತಿ ಕುಡಿವಗಳೂ ‘ಒರಿಶಾವಧಿ ಕೊಡ್ತದು, ಹೆಚ್ಚುಕಮ್ಮಿ ಆಗಿಪ್ಪಲೂ ಸಾಕು, ಸಂತೋಶಲ್ಲಿ ಸ್ವೀಕರುಸೆಕ್ಕು’ ಹೇಳ್ತನಡ ಯೇನಂಕೂಡ್ಳಣ್ಣ!
  • ಸೆಕೆ ಜಾಸ್ತಿ ಆದರೆ ನೀರು ಕಮ್ಮಿ, ನೀರು ಕಮ್ಮಿ ಆದರೆ ಕರೆಂಟು ಕಮ್ಮಿ, ಕರೆಂಟು ಕಮ್ಮಿ ಆದರೆ ಪೇನು ಕಮ್ಮಿ, ಪೇನು ಕಮ್ಮಿ ಆದರೆ ಸೆಕೆ ಜಾಸ್ತಿ – ಹೇಳಿ ಮಾಷ್ಟ್ರುಮಾವ ವೃತ್ತಾಕಾರ ಮಾಡಿ ವಿವರುಸಿಗೊಂಡಿತ್ತಿದ್ದವು, ಎಲೆ ತಿಂದುಗೊಂಡು.
  • ಊರಿಲೇ ಮಾವಿನ ಮೆಡಿ ಇಲ್ಲದ್ರೂ ಮಾಷ್ಟ್ರುಮಾವನಲ್ಲಿ ಏನೂ ತೊಂದರೆ ಆಯಿದಿಲ್ಲೆಡ. ಕುಂಞ ಕೊಯಿದುಕೊಟ್ಟ ಮೆಡಿ ಒಂದೇ ದಿನಲ್ಲಿ ಸೆಕೆ ಬಯಿಂದಡ, ಈ ಸೆಕಗೆ.
  • ಕುದ್ರೆಪ್ಪಾಡಿ ಅಕ್ಕನಲ್ಲಿಂದ ಮೆಣಸು, ಸಾಸಮೆ ಹೊಡಿ ತಪ್ಪಲೆ ಗುಣಾಜೆಮಾಣಿಯ ಹತ್ರೆ ಹೇಳಿದವಡ ಮಾಷ್ಟ್ರಮನೆ ಅತ್ತೆ!
  • ಇಲ್ಲಿ ಸೆಕೆ ಜೋರಾವುತ್ತು ಹೇಳಿ ರೇಡ್ಯಲ್ಲಿ ಹೇಳುದರ ಕೇಳಿ, ಮಾಷ್ಟ್ರುಮಾವನ ಮಗ° ಅಮೇರಿಕಕ್ಕೆ ಹೋಗಿ ಕೂದನಡ!
    ಅಲ್ಲಿಗೆ ಈ ರೇಡ್ಯ ಸಿಕ್ಕದ್ದೆ, ಸೆಕೆಯ ವಿಶಯ ಗೊಂತಾಗದ್ದ ಕಾರಣ, ಅಮೇರಿಕಲ್ಲಿಪ್ಪ ಮಾಡಾವಕ್ಕನ ಮಗ – ಅವನ ಅಪ್ಪಮ್ಮನ ಕರಕ್ಕೊಂಡು ಊರಿಂಗೆ ಬಯಿಂದನಡ.
  • ಕುಂಬ್ಳೆ ಅಜ್ಜಿಯೂ, ಮಾಷ್ಟ್ರಮನೆಅತ್ತೆಯ ದೊಡ್ಡಸೊಸೆಯೂ ಪದ್ಯಾಣದ ಉಪ್ನಾಯನಕ್ಕೆ ನೆಡಕ್ಕೊಂಡು ಹೋಪಗ ಬೆಶಿಲು ತಡವಲೆಡಿಯದ್ದೆ ಬೀಜದಮರದ ಬುಡಲ್ಲಿ ಅರ್ದ ಗಳಿಗೆ ಕೂದುಗೊಂಡವಡ.
  • ಸೆಕೆ ಜೋರಪ್ಪಗ ಅಜ್ಜಕಾನಬಾವ ಒಂದರಿ ಬೈಕ್ಕಿಲಿ ಬೀಸಕ್ಕೆ ನೀರ್ಚಾಲಿಂದ ಸೂರಂಬೈಲಿಂಗೆ ಹೋಗಿ ಬಂದೊಂಡಿತ್ತಿದ್ದ.  ಪೆಟ್ರೋಲು ಮುಗುಶುದೆಂತಕೆ ಹೇಳಿ ಕಾವೇರಿಕಾನ ಮಾಣಿ ಕೇಳಿದ್ದಕ್ಕೆ ಈಗ ನೂಕಿಯೊಂಡು ಹೋಪದಡ.
  • ಸೆಕಗೆ ಬಸ್ಸಿಲಿ ಕೂಪಲೆಡಿಯದ್ದೆ ಗುಣಾಜೆಮಾಣಿ ಊರಿಂದ ಬೆಂಗುಳೂರಿಂಗೆ ಬೈಕ್ಕಿಲೇ ಹೋದ್ದಡ. ಮಾರ್ಗ ಹಾಳಾದ ಕಾರಣ ಹತ್ತು ನಿಮಿಶ ಜಾಸ್ತಿ ಬೇಕಾತು ಹೇಳಿ ಪೆರ್ಲದಣ್ಣನತ್ರೆ ಹೇಳಿದನಡ ಬೇಜಾರಲ್ಲಿ, ಹತ್ತು ಸರ್ತಿ.
  • ಗೋಕರ್ಣದ ಕೆಲವು ಮರುಳಂಗೊ ಈ ಸೆಕಗೆ ಅಂಗಿ ತೆಗದೇ ಸಿನೆಮ ಮಾಡಿದವಡ – ಎರೆಪ್ಪುಗೊ.
  • ಸಿದ್ದನಕೆರೆ ಕುಮಾರಮಾವನ ಕಂಪ್ಯೂಟರಿನ ಪೆಟ್ಟಿಗೆ ಬಿಚ್ಚಿ ಮಡಗಿದ್ದನಡ – ಕಂಪ್ಯೂಟರಿಂಗೆ ಸೆಕೆ ಅಪ್ಪದಕ್ಕೆ!

    ಪುಟ್ಟತ್ತೆ ಪುಚ್ಚಗೆ ಸೆಕೆ ಅಪ್ಪದು
    ಪುಟ್ಟತ್ತೆ ಪುಚ್ಚಗೆ ಸೆಕೆ ಅಪ್ಪದು
  • ಇರುಳು ಸೆಕಗೆ ಒರಕ್ಕು ಬಾರದ್ದಕ್ಕೆ ಗುಣಾಜೆಮಾಣಿಯ ಯೂಯಸ್ಬಿ ಪೇನು ಕೇಳಿ ತೆಕ್ಕೊಂಡನಡ, ಬೀಸ್ರೋಡು ಮಾಣಿ.
  • ತಂಪಿಂಗೆ ಹೇಳಿಗೊಂಡು ಪೆರ್ಲದಣ್ಣ ತಣ್ಕಟೆ ಪೆಟ್ಟಿಗೆ(ಪ್ರಿಜ್ಜು) ಬಾಗಿಲು ತೆಗದು ಒರಗುದಡ.
  • ಈ ಸೆಕಗೆ ಮದುವೆ ಅಪ್ಪಲಾಗ, ಇನ್ನು ಮದುವೆ ಆವುತ್ತರೆ ಚಳಿಗಾಲಲ್ಲೇ ಅಪ್ಪದು – ಹೇಳಿದ ಆಚಕರೆಮಾಣಿ ಪುಟ್ಟಕ್ಕನ ಕೈಲಿ ಮತ್ತೊಂದರಿ ಬೈಗಳು ತಿಂದನಡ.
  • ಗಂಗಾವತಿಲಿ ಬೇಂಕಿಲಿ ಕೂದ ಪಾಲಾರಣ್ಣ ಓ ಮೊನ್ನೆ ಊರಿಂಗೆ ಬಂದಿಪ್ಪಗ – ಆಹಾ, ತಂಪು! ಹೇಳಿಗೊಂಡನಡ.
    ಅವನ ಊರಿಂದ ನಮ್ಮ ಊರು ತುಂಬ ತಂಪಡ.
  • ಪಾಲಾರು ಕುಮಾರಣ್ಣ ನಿತ್ಯವೂ ಬೀಜ ಕೊಯಿವಲೆ ಹೋವುತ್ತವಡ. ಸೆಕೆಗಾಲ  ಇರಳಿ, ಮಳೆಗಾಲ ಇರಳಿ – ಅದೊಂದು ಬಗೆ ನಿಲ್ಲುಸವು ಹೇಳಿ ಗುಣಾಜೆಮಾಣಿ ನೆಗೆಮಾಡುಗು.
  • ಬಂಡಾಡಿ ಅಜ್ಜಿ ಬೆರಟಿಪಾಯ್ಸ ಮಾಡಿತ್ತು – ಗೊಂತಿದ್ದನ್ನೇ!
    ಅದು ಒಳ್ಳೆದಿದ್ದೋ ನೋಡ್ಳೆ ಕುಡುದು ಕುಡುದು ಮುಗುಶಿಯೇ ಬಿಟ್ಟತ್ತಡ. ಬಂಡಾಡಿ ಪುಳ್ಳಿ ಶುದ್ದಿ ಕೇಳುಲೆ ಬಪ್ಪಗ ಪಾಯಿಸ ಕಾಲಿ!
  • ಅಕ್ಷರದಣ್ಣನ ಮಗಳು ರಾಣಿಗೆ ಮಾಷ್ಟ್ರುಮಾವನ ಮನೆಯ ಹಾಳೆಬೀಸಾಳೆ ಸಿಕ್ಕಿತ್ತಡ!
    ಎಷ್ಟು ಸೆಕೆ ಆದರೂ ತೊಂದರೆ ಇಲ್ಲೆ -ಹೇಳಿ ಕೊಶೀಲಿ ಇದ್ದು.
  • ಮಲ್ಲಿಗೆ ಗೆಡುಗೊಕ್ಕೆ ನೀರೆರದು ನೀರೆರದು ಬಚ್ಚಿದ ಚೂರಿಬೈಲು ದೀಪಕ್ಕನ, ಮಣಿಪುರಕ್ಕೆ ಹೋಗಿ ಬಂದ ಡಾಗುಟ್ರುಬಾವಂಗೆ ಗುರ್ತವೇ ಸಿಕ್ಕಿದ್ದಿಲ್ಲೆಡ!
  • ಜೋಗಿಮೂಲೆ ಮದುವೆಲಿ ಕಜೆದೊಡ್ಡಮ್ಮಂಗೆ ಪೇನಿನ ಬುಡ ಸಿಕ್ಕಿದ್ದಡ.
    ಕುಶೀಲಿ ಕೂದ ಅವಕ್ಕೆ ಆರತ್ರೂ ಮಾತಾಡ್ಳಾಯಿದಿಲ್ಲೆ ಹೇಳಿ ಮನಗೆ ಬಂದ ಮತ್ತೆ ಬೇಜಾರು ಆತಡ.
  • ಬೆಂಗುಳೂರಿನ ಶುಬತ್ತೆಯ ಮಕ್ಕೊ ಊರಿಂಗೆ ಬಂದಿತ್ತಿದ್ದವು, ಸೆಕೆಬೊಕ್ಕೆ ಬಂದ ಕಾರಣ ಒಪಾಸು ಬೆಂಗುಳೂರಿಂಗೆ ಹೋದವಡ.
  • ಸತ್ಯಮಾವಂಗೆ ಪೂಜಗೆ ಹೂಗು ಸಿಕ್ಕದ್ದ ಬೇಜಾರಿಲಿ ಬೀಜದ ಹೂಗು ಕೊಯಿವಲೆ ಹೆರಟವಡ.
  • ಮಿಂಚಿನಡ್ಕಬಾವಂಗೆ ಅಂತೂ ಕೊಪ್ಪರ ಕಾವ ಲೆಕ್ಕಲ್ಲಿ ಜಾಲಿಲಿ ಒಣಗುದೇ ಕೆಲಸ!
  • ಬೇಂಕಿಲಿಪ್ಪ ಬೊಳುಂಬುಮಾವ ಪೈಸೆಕಟ್ಟಲ್ಲೇ ಗಾಳಿ ಹಾಕಿಗೊಳ್ತವಡ!
  • ಬೇಂಕಿನ ಪ್ರಸಾದಣ್ಣಂಗೆ ಮದುವೆ ಆಯಿದಿದಾ, ಊರಿಲಿ ಸೆಕೆ ಜೋರಾದ ಲೆಕ್ಕಲ್ಲಿ ಕಮ್ಮಿ ಸೆಕೆ ಇಪ್ಪ ಮಡಿಕೇರಿಲಿ ಕೂದವಡ!
  • ಒಪ್ಪಕ್ಕಂಗೆ ಬಚ್ಚಂಗಾಯಿ ತಿಂಬಲೆ ಸೆಕೆಗಾಲ ಒಳ್ಳೆ ನೆಪ! ಅಮ್ಮಂಗೆ ಅದರ ಓಡಿನ ದೋಸೆ ಮಾಡ್ಳುದೇ ಒಳ್ಳೆ ನೆಪ!
  • ಪದ್ಯಾಣ ಉಪ್ನಾಯನಲ್ಲಿ ಖಂಡಿಗ ದೊಡ್ಡಪ್ಪಂಗೆ ಸೆಕೆ ಜೋರಾದ್ದಕ್ಕೆ ನೆರಿಯ ದೊಡ್ಡಪ್ಪನ ಬೀಸಾಳೆ ತೆಕ್ಕೊಂಡು ಗಾಳಿ ಹಾಕಿಯೊಂಡವಡ.
  • ಮೈ ಕೈ ಬೆಗರುತ್ತ ಕೊಡೆಯಾಲಲ್ಲಿಪ್ಪ ಶರ್ಮಪ್ಪಚ್ಚಿ – ಕೈಗೆ ಇಡೀ ಪೆಟ್ರೋಲು ಮುಟ್ಟುಸಿ ತಂಪು ಮಾಡಿಗೊಂಬದಡ.
  • ಆಟ ನೋಡ್ಳೆ ಹೋದ ಚೆನ್ನಬೆಟ್ಟಣ್ಣ ಸೋಡಶರ್ಬತ್ತು ಕುಡುದೇ ಸುದಾರ್ಸಿದ್ದಡ.
  • ಆಪೀಸಿಲಿ ತಣ್ಣಂಗೆ ಕೂದ ಚೆಂಬರ್ಪುಅಣ್ಣ ಮನಗೆ ತಡವಾಗಿ ಬಪ್ಪದಡ.
  • ಈ ಬೆಶಿಯ ಎಡಕ್ಕಿಲಿದೇ ವೇಣೂರಣ್ಣಂಗೆ ಬಲಿಪ್ಪಜ್ಜನ ಪುಸ್ತಕ ಮಾಡ್ತ ತಲೆಬೆಶಿ!
  • ಹಳೆಯ ಕೇಸೆಟ್ಟುಗಳ ಕೇಳಿಗೊಂಡು ರಾಜಣ್ಣ ತಣ್ಣಂಗೆ ಇರ್ತವಡ.
  • ಕೆಲಸ ಬದಲುಸಿದ ನೀರ್ಕಜೆಅಪ್ಪಚ್ಚಿಗೆ ಯೇವ ಆಪೀಸಿಲಿ ತಣ್ಣಂಗೆ ಜಾಸ್ತಿ ಹೇಳಿ ಗೊಂತಾಗದ್ದೆ – ದೊಡಾ ಕನುಪ್ಯೂಸಿಲಿ ಇದ್ದವಡ.
  • ಚೆಳಿಗಾಲಲ್ಲಿ ಡೆಲ್ಲಿಗೆ ಹೆರಟ ಮಾಷ್ಟ್ರಣ್ಣ ಒಪಾಸು ಬಪ್ಪಗ ಸೆಕೆ!
    ಮಳೆ ಸುರು ಆಯೆಕ್ಕಾರೆ ಪುನಾ ಹೋಯೆಕಷ್ಟೆಯೋ ಗ್ರೇಶಿಗೊಂಡಿದ್ದವು.
  • ಆಚಮನೆದೊಡ್ಡಣ್ಣಂಗೆ ನೆಡಿರುಳು ಕರೆಂಟು ಹೋಪ ಕಾರಣ ಒಳ್ಳೆತ ಒಕ್ಕು ಬತ್ತಡ – ಪೇನಿನ ಹರಟೆ ಇಲ್ಲೆ ಇದಾ..!!
  • ಈಚಕರೆ ಪುಟ್ಟ ಐಸ್ಕ್ರೀಮು ಮಾಂತ್ರ ತಿಂಬದಡ, ಜೆಂಬ್ರಂಗಳಲ್ಲಿ!
  • ಗಬ್ಲಡ್ಕ ಬಾವ ಸೆಕಗೆ ಬಳುಸುಲೇ ಹೋಪಲಿಲ್ಲೆಡ – ಪಾಕಕ್ಕೆ ಉಪ್ಪು ಜಾಸ್ತಿ ಹೇಳಿ ಸುಮ್ಮನೆ ಅಡಿಗೆಯೋರಿಂಗೆ ಎಂತಕೆ ದೂರು?! ಅಲ್ಲದೋ- ಬೆಟ್ಟುಕಜೆ ಮದುವೆಲಿ ಸಕ್ಕಿ ಹೇಳಿದವು.
  • ಮಲಾರಿನ ಪೂಜೆಲಿ ಶರ್ಬತ್ತು ಮೂರು ಸರ್ತಿ ಮಾಡಿ ಕಾಲಿ ಆತಡ, ಕುಡ್ಪಲ್ತಡ್ಕ ಬಾವಂಗೆ ಶರ್ಬತ್ತು ಕೇಳಿ ಕೇಳಿಯೇ ಬೊಡುತ್ತಡ.
  • ಮೋಂತಿಮಾರು ಮಾವನ ಕೈಗೆ ಬೆಶಿನೀರು ತಾಗಿತ್ತಡ, ತಣ್ಣೀರು ಮುಟ್ಟುಸಿ ಸಮಾದಾನ ಮಾಡಿಗೊಳ್ತವಡ.
  • ಚೂರಿಬೈಲು ಶಂಬುಮಾವ° ಮೂಡಬಿದ್ರೆ ಹತ್ತರೆ ಜಾಗೆತೆಗದವಡ – ಗುರುಪುರ ಹೊಳೆ ಕರೆಲಿ, ತಂಪಿಂಗೆ!
  • ಮಂದಾರದ ಕೂಸಿಂಗೆ ಸೈಕ್ಕಾಲು ಬಿಡ್ಳೆ ಬತ್ತಿದಾ, ಸೆಕೆ ಜೋರಾದಷ್ಟು ಸೈಕ್ಕಾಲು ಜೋರು ಹೋವುತ್ತಡ.
  • ತರವಾಡು ಮನೆಗೆ ಓಡಿನ ಮಾಡು. ಆದರೂ ಸೆಕೆ ಆವುತ್ತಡ ಪಾತಿಅತ್ತೆಯ ಸೊಸಗೆ!
  • ಗೀತತ್ತೆಯ ಓಮುನಿಲಿ ಎದುರಾಣ ಕಣ್ಣಟಿ ಪೀಂಕುಸಿದ್ದವಡ, ಒಳಂಗೆ ಗಾಳಿ ಸಮಗಟ್ಟಿಂಗೆ ಬಪ್ಪಲೆ!
  • ಮರದ ಇಬ್ರಾಯಿಯ ಬ್ಯಾರ್ತಿಗೆ ಸೆಕೆ ಜೋರಪ್ಪದಕ್ಕೆ ಮೀನಿನ ಬಲೆಯ ಬುರ್ಕ ಹಾಕಿತ್ತಡ.
  • ರೋಸಮ್ಮನ ಮಗಳಿಂಗೆ ಕೃಷ್ಣಬಸ್ಸಿನ ಬ್ರೇಕುಪೈಲಪ್ಪಗ ಕುಶೀ ಆತಡ! – ಜೋರು ಗಾಳಿ ಬಂದತ್ತಿದಾ!!
  • ಕಾಂಚೋಡಿಮಾಣಿಗೆ ಸೆಕೆ ಜೋರಪ್ಪಗ ಪೇನಿನ ಚಿತ್ರ ಬಿಡುಸುದಡ. ಕುಶಿ ಆದರೆ ತಂಪಿನ ಗಾಳಿಬತ್ತನ್ನೇ!
  • ಚೆಂಬರ್ಪು ಮಾಷ್ಟ್ರಣ್ಣಂಗಳ ಶಾಲೆಲಿ ಕುಟ್ಟಂಗೊ ಸೆಕಗೆ ಟೊಪ್ಪಿ ಹಾಕುತ್ತವಿಲ್ಲೆಡ.
  • ಕರಿಪಾರೆಯ ಉರಿಗಾಳಿಗೆ ಒಣಗಿಯೇ ಹೋದವು ಪಾರೆ ಮಗುಮಾವ°!
  • ಹುಲ್ಲು ತೆಗೆತ್ತ ಮಿಶನು ಗೊಂತಿದ್ದಲ್ಲದೋ – ಕತ್ತಿ ಅಲಗಿನ ಬದಲು ಪೇನಿನ ಅಲಗು ಸಿಕ್ಕುಸಿದನಡ ಕಲ್ಮಡ್ಕ ಅನಂತ°! ಗಟ್ಟಿಗ° ಅವ°!!
  • ನೆಕ್ರಾಜೆ ಅಪ್ಪಚ್ಚಿಗೆ ಮೆಡ್ರಾಸಿಲಿಪ್ಪ ಮಗಳ ಬಗ್ಗೆಯೇ ಚಿಂತೆ – ಸೆಕಗೆ ಇನ್ನೂ ಒಣಗ್ಗೋ ಏನೋ ಹೇಳಿಗೊಂಡು.
  • ಮಾಲಚಿಕ್ಕಮ್ಮನ ಮಗಳ ತಲೆಕಸವು ಸೆಕಗೆ ಬೆಳುಲಿನ ಹಾಂಗೆ ಆಯಿದಡ. ತೆಂಗಿನೆಣ್ಣೆ ಹಿಡಿಯದ್ದಕ್ಕೆ ಗರ್ಗನ ಎಣ್ಣೆ ಮಾಡಿ ಹಾಕುದಡ ಈಗ!
  • ಪಂಜ ಚಿಕ್ಕಯ್ಯಂಗೆ ಗೋಬರುಗೇಸಿಂದೇ ಚಿಂತೆ! ಈ ಬೇಸಿಗೆಯ ಬಿಸಿಗೆ ಸೆಗ್ಣಿ ಇಲ್ಲದ್ರೆ ಗ್ಯಾಸ್ ಎಲ್ಲಿಂದ “ನಿನಿಗೆ”! ಹೇಳಿ ಕೇಳಿದವಡ ಓ ಮೊನ್ನೆ.
  • ಕಜೆ ತಮ್ಮಣ್ಣಂಗೆ ಮಳಿಬಾವನಲ್ಲಿಗೆ ಹೋಗಿ ಪುನರ್ಪುಳಿ ಶರ್ಬತ್ತು ಕುಡಿವಲೆ ಪುರುಸೊತ್ತೇ ಸಿಕ್ಕುತ್ತಿಲ್ಲೆಡ!
  • ಅರ್ನಾಡಿಬಾವಂಗೆ ಚೂಡಿದಾರದ ಹಾಂಗಿಪ್ಪ ಅಂಗಿ ಹಾಕಲೆಡಿತ್ತಿಲ್ಲೆಡ, ಈಗ ಸಣ್ಣ ಬನಿಯಾನಿನ ನಮುನೆ – – ಸಾನಿಯ ಹಾಯ್ಕೊಂಡಿತ್ತಲ್ಲ –  ಆ ನಮುನೆದರ ಹಾಕುದಡ.
  • ಪಾಡಿಕಟ್ಟಲ್ಲಿ ನೀರಿದ್ದು ಗ್ರೇಶಿ ಕುಡುದಮಲಿನ ಸಂಕಪ್ಪು ಇಳುದ್ದಡ. ನೀರಲ್ಲ ಅದು – ಮಲಂಪು ಹೇಳಿ ಬಿರುದ ಮತ್ತೆಯೇ ಗೊಂತಾದ್ದಡ!
  • ಪುತ್ತೂರು ಜಾತ್ರಗೆ ಹೋಯೆಕ್ಕಾತು, ಕಾರಿನ ಏಸಿ ಸರಿ ಇಲ್ಲದ್ದೆ ಹೋಪಲೆಡಿಯ – ಹೇಳಿ ರೂಪತ್ತೆಗೆ ಬೇಜಾರಡ, ದೀಪಕ್ಕನ ಕೈಲಿ ಹೇಳಿ ಹೇಳಿ ಬೇಜಾರು ಮಾಡ್ತಡ.

ಉಫ್..!
ಎಂತಾ ಸೆಕೆ ಎಂತಾ ಸೆಕೆ..
ಸಾಕಪ್ಪಾ ಸಾಕು, ಈ ಸರ್ತಿಂಗೆ. ಅಲ್ಲದೋ?

ಎಷ್ಟೇ ಸೆಕೆ ಆದರೂ ನಮ್ಮ ಹೆಚ್ಚಿನ ಕೆಲಸ ಸಾಗುದು ಈ ಹೊತ್ತಿಂಗೇ.
ಹಪ್ಪಳ, ಸೆಂಡಗೆ, ಬಾಳುಕು, ಇತ್ಯಾದಿ ತಿಂಡಿಗೊ, ಸೌದಿ, ಬೆರಣಿ ಇತ್ಯಾದಿ ಇಂಧನಂಗೊ, chaussure nike pas cher ವಿಭೂತಿ, ಕಾಡಿಗೆ, ಇತ್ಯಾದಿ ದ್ರವ್ಯಂಗೊ – ಎಲ್ಲವಕ್ಕೂ ಇದುವೇ ಪ್ರಶಸ್ತ ಸಮಯ.
ಈಗಳೇ ಎಲ್ಲ ಮುಗುಶಿಗೊಂಡು ಮಳೆ ಸುರು ಅಪ್ಪಮೊದಲೇ ಮನೆ ಒಳ ಹೊಕ್ಕರೆ, ಮತ್ತೆ ಹೆರಡುದು ಆಟಿ ಕಳುದ ಮೇಲೆಯೇ!!! ಮದಲಿಂಗೆ ಹಾಂಗೇ ನೆಡಕ್ಕೊಂಡಿದ್ದದು.
ನಿಂಗೊಗೂ ಎಂತಾರು ಮಾಡಿಗೊಂಬಲಿದ್ದರೆ ಬೇಗ ಬೇಗ ಮಾಡಿ ಮುಗುಶಿ.
ಸುಮ್ಮನೇ ಬೆಶಿಲು ಹಾಳುಮಾಡೆಡಿ, ಹಾಂ!
ನಿಂಗಳ ಊರಿಲಿ ಎಂತಾರು ಶುದ್ದಿ ಇದ್ದರೆ, ಒಪ್ಪಣ್ಣನ ಬೈಲಿಲಿ ಹೇಳಿಗೊಂಬಲಕ್ಕಾರೆ ಒಪ್ಪಲ್ಲಿ ಬರೆಯಿ, ಆತೋ?

ಒಂದೊಪ್ಪ: ಎಷ್ಟು ಸೆಕೆ ಆದರೂ ತಲೆಯ ತಣ್ಣಂಗೇ ಮಡಿಕ್ಕೊಳಿ ಯೇವಗಳೂ… ಆತೋ?

ಸೂ: ನಿಂಗಳ ಊರಿನ ಶುದ್ದಿ ಬಿಟ್ಟು ಹೋಯಿದೋ? ನಿಂಗೊ ಸೇರುಸಿ. ಆತೋ?
ನಿಂಗಳ ಊರಿನ ಶುದ್ದಿಗೊ ಇನ್ನೊಂಬಂಗೆ ಗುದ್ದು ಆಗದ್ರೆ ಸಮ!

13 thoughts on “ಒಯಿಶಾಕದ ಉರಿಸೆಕಗೆ ಹಾಳೆಬೀಸಾಳೆಯ ತಂಗಾಳಿ..!

  1. iga ade gathi..karnatakalli iga karent ille.fan haakulidiya..aada kaarana beesaaleye gathi..
    enthaadaroo oppanna is the GREAT..

  2. ಸೆಕೆ ತಡವಲೆಡಿಯದ್ದೆ ಒಪ್ಪಕ್ಕಂಗೆ ಆಸರ ಆಗಿ, ಮೋಹನು ಕೋಲ್ಡೌಸಿಂಗೆ ಹೋಪಾಳಿ ಒಪ್ಪಣ್ಣನತ್ತರೆ ಹಟ ಮಾಡಿತ್ತಡ.
    ಅಲ್ಲಿಂದ ವಾಪಾಸು ಬಪ್ಪಗ, ಒಪ್ಪಣ್ಣ ಮೆಲ್ಲಂಗೆ ನಾಕು ಐಸು ತುಂಡು ಕೇಳಿ ಬೇಗಿಲಿ ಹಾಕಿ ತೆಕ್ಕೊಂಡು ಬಂದನಡ, ಮಜ್ಜಿಗೆ ನೀರಿಂಗೆ ಹಾಕಿ ಕುಡಿವಲೇಳಿ. ಮನೆಗೆ ಎತ್ತಿಯಪ್ಪಗ ಐಸು ಕರಗಿ ಬೇಗಿಂಗೆ ಬೆಗರಿದ್ದಡ!

  3. ಇತ್ಲಗಿಯಣ ಹೊಡೆoಗೆ ಬಪ್ಪಲೆ ಇದ್ದರೆ…ಓಮಿನಿ ಲಿ ಬಪ್ಪಲಕ್ಕು ..ಗಾಳಿ ಒಳ್ಳೆತ ಬತ್ತು…:D

  4. ಒಪ್ಪಣ್ಣೊ ……ಬಾರಿ ಒಳ್ಳೆ ಲೇಖನ..
    ಈ ಸೆಕೆಂದಾಗಿ ಹರಿವ ಬೆಗರಿಂಗೆ ಆನು ಬರದ ಒಪ್ಪಂಗ ಎಲ್ಲಾ ಉದ್ದಿ ಹೋವ್ತಾ ಇದ್ದು, ಈ ಎರಡು ಗೆರೆಗಳ ಬಿಟ್ಟು!

  5. ಒಪ್ಪಣ್ಣನ ಸೆಕೆಗಾಲದ ಹೈ ಲೈಟ್ ಗೊ ಮನಸ್ಸಿಂಗೆ ಒಳ್ಳೆ ತಂಪು ಕೊಟ್ಟತ್ತ್ತು. ಅವ ವಿವರುಸಿದ ಪ್ರತಿಯೊಂದು ವಿಷಯಂಗಳೂ ಕಲ್ಪನೆಯೀ ಆದರೂ, ನಿಜವೇ. ಓಹ್, ಎಂತೆಂತಾ ಆಲೋಚನಗೊ, ಎಂತೆಂತ ವಿಚಾರಂಗೊ. ಕೊಡಿಂದ ಬುಡದ ವರೆಗೆ ಬಿಡದ್ದೆ ಓದುಸೆಂಡು ಹೋತು ಲೇಖನ. ಬೇಂಕಿಲ್ಲಿ ಪೈಸೆ ಕಟ್ಟಂದ ಲೋನು ಪೇಪರುಗೋ ಒಳ್ಳೆದಾವುತ್ತು ಗಾಳಿ ಹಾಕಲೆ.

    ಬೇಂಕಿಲ್ಲಿ ಕಂಪ್ಯೂಟರಿಂಗೆ ಏಸಿ ಇಲ್ಲದ್ರೆ ಆಗ ಹೇಳಿ ಏಸಿ ಹಾಕುತ್ತವಲ್ಲದೋ. ಅದರ ಹತ್ರೆ ಕೂದವಕ್ಕೂ ಏಸಿ ಸಿಕ್ಕದ್ದೆ ಹೋಕೊ ?

    ಮೊನ್ನೆ ಒಂದು ಜೆಂಬಾರಕ್ಕೆ ಹಂತಿಲಿ ಪಲ್ಯ ಬಡುಸಲೆ ಹೆರಟೆ. ಅಳಿಯ ಆಗಿ ಆಷ್ಟಾದರೂ ಮಾಡದ್ರೆ ಹೇಂಗೆ ?
    ಒಪ್ಪಣ್ಣ ಹೇದ ಹಾಂಗೆ ಬೆಗರು ನೀರು ಬಿಚ್ಚಿ ಹರಿಯಲೆ ಸುರು ಆತನ್ನೆ. ಜೋಗ ಜಲಪಾತಲ್ಲಿಯೂ ಅಷ್ಟು ನೀರು ಹರುದಿರ. ಎಂತರಲ್ಲಿ ಉದ್ದೆಳುತ್ತು ಹೇಳಿ ಗೊಂತಾತಿಲ್ಲೆ. ಉಂಬಲೆ ಕೂದವು ಎಂತ ಗ್ರಹಿಸಿದವು ಗೊಂತಿಲ್ಲೆ. ಪಲ್ಯಕ್ಕೆ ರಜಾ ಉಪ್ಪು ಜಾಸ್ತಿ ಆಯಿದು ಹೇಳೀ ಉಂಬವು ಹೇಳುವುದು ಕೇಳಿತ್ತು. ಅಡುಗೆಯವು ಉಪ್ಪು ಹದವಾಗಿಯೇ ಹಾಕಿದ್ದವಪ್ಪ. ಅವರ ತಪ್ಪು ಆಗಿರ ಅದು.

  6. * ಈ ಉರಿ ಸೆಕೆಗೆ ಒಪ್ಪಣ್ಣ ನಳಪಾಕ ಮಾಡುಲೆ ಹೆರಟವ ಯೇವದು ಬೇಡ ನೀರು ಮಜ್ಜಿಗೆ ಸಾಕು ಹೇಳಿ ನಾಕು ಕುಡ್ತೆ ಕುಡುದ್ದರ ನೋಡಿ ಬೀಸ್ರೋಡು ಮಾಣಿ ಹೊಟ್ಟೆ ಮೇಲೆ ಕೈ ಮಡಗಿಯೊಂಡು ಮಲಗಿದನಡ..

    * ಬಂಡಾಜಿ ಅಜ್ಜಿಗೆ ಕೈರಂಗಳ ಕೂಸಿನ ಮದುವೆ ತಯಾರಿಲಿ, ಬೆಶಿಲಿಂಗೆ ಮಡಗಿದ ಸೆಂಡಿಗೆ ತೆಗವಲೆ ಮರದು ಪುತ್ತೂರು ಜಾತ್ರೆ ಲೆಕ್ಕದ ಮಳೆಗೆ ಚೆಂಡಿ ಆಗಿ ತಲೆಬೆಶಿಮಾಡಿಯೊಂಡಿದ್ದಡ. ಬಂಡಾಡಿ ಪುಳ್ಳಿಗೆ ಈಗ ಒದುತ್ತದು ಇಲ್ಲೆ ಹೇಳಿ ಸೆಂಡಿಗೆ, ಹಪ್ಪಳ ಕಾವ ಕೆಲಸಡ..

    * ಈ ಉರಿ ಸೆಕೆಗೆ ಹೆದರಿ ಗಣೇಶ ಮಾವ ಉತ್ತರದ ಕಡೆಗೆ ತಂಪಿಂಗೆ ಹೋಪದ ಹೇಳಿ ಯೋಚಿಸಿಯೊಂಡಿದ್ದವಡ

    * ಗುಣಾಜೆಮಾಣಿ ಯಡ್ಯೂರಪ್ಪನ ಒಟ್ಟಿಂಗೆ ಉತ್ತರಕರ್ಣಾಟಕ ಪ್ರವಾಸ ಹೋಗಿ ಬಂದಪ್ಪಗ ಗುರ್ತವೇ ಸಿಕ್ಕಿದ್ದಿಲ್ಲೆಡ ಪೆರ್ಲದಣ್ಣಂಗೆ, ಅವ ಇಶ್ಟು ಬೇಗ ನವರಾತ್ರಿ ಸುರು ಆತ ಹೇಳಿ ತಲೆಬೆಶಿ ಮಾಡಿಯೊಂಡಿದ್ದ..

  7. ಈ ಒಯಿಶಾಕದ ಸೆಕೆಗೆ ನಿನ್ನ ಹಾಳೆ ಬೀಸಾಳೆ ರಜಾ ತಂಪು ಗಾಳಿ ತಂತದಾ… ಬೈಲಿನವು ಸೆಕೆಗೆ ಎಂತೆಲ್ಲಾ ಮಾಡಿದವು ಹೇಳಿ ತಿಳಿಶಿದೆನ್ನೇ.. ಅದರಲ್ಲಿ ಕೆಲವು…
    ಭಾರಧ್ವಜದ ಮಾಣಿ ಯಂಗೊಕ್ಕೆ ಕೈರಂಗಳಕ್ಕೆ ಹೋದರೆ ಕಟ್ಟದ ನೀರಿಲಿ ಕಲ್ಲು ಇಡುಕ್ಕುಲೇ ನೀರು ಇಕ್ಕಾ ಹೇಳಿ ಯೇಚನೆ ಅಡ್ಡ… ಅವರ ಅಮ್ಮ ಮೊನ್ನೆ ಸಿಕ್ಕಿ ಅಪ್ಪಗ ಹೇಳಿತ್ತು.. ಚೆನ್ನಬೆಟ್ಟಣ್ಣ ಸೆಕೆ ತಡೆಯದ್ದೆ ಉಲ್ಲಾಸ್ C K ತೆಗದ ಹುಣ್ಣಮೆ ಚಂದ್ರನ ಪಟಂಗಳ ದೊಡ್ಡಕ್ಕೆ ಹಾಕಿದ್ದನಡ್ಡ ಗೋಡೆಲಿ.. … ಪುತ್ತೂರಿಲಿ ಮಹಾಲಿಂಗೇಶ್ವರ ದೇವರ ಜಾತ್ರೆ ಬೆಡಿ ದಿನ ಜನಂಗ ಸೆಕೆಲಿ ಬೇವದರ ನೋಡ್ಲೆ ಎಡಿತ್ತಿಲ್ಲೇ ಹೇಳಿ ದೇವರು ಮಳೆ ಸುರಿಸಿದವು…ಸುಮಾರು ಜೆನಂಗ ವಾಪಾಸು ಮನೆಗೆ…! ದೇವರಿಂಗೆ ಬಹುಶ ಜೆನಂಗಳ ಪರೀಕ್ಷೆ ಮಾಡೆಕ್ಕು ಹೇಳಿ ಆಯಿದಾ ಕಾಣ್ತು…. ಮಳೆ ಬಂದರೂ ಜಾತ್ರೆಗೆ ಹೇಳಿ ಎಷ್ಟು ಜೆನ ಭಕ್ತಿಲಿ ನಿಲ್ತವು ಹೇಳಿ ನೋಡುವ° ಹೇಳಿ ಆದಿಕ್ಕು… ಜಾತಿ, ಮತ ಕುಲ ಇಲ್ಲದ್ದೆ ಬಪ್ಪ ಕಾಲಂಗಳ ಎಲ್ಲವನ್ನೂ ಅದರದ್ದೇ ಆದ ರೀತಿಲಿ ಅನುಭವಿಸುವ° ಅಲ್ಲದಾ ಒಪ್ಪಣ್ಣಾ?

  8. *ಒಪ್ಪಣ್ಣ ಬರದ್ದು ಒಳ್ಳೆದು ಆಯಿದು. ಓದುವವಕ್ಕೆ ಕೊಶಿ ಕೊಡ್ತು. ಅನುಭವಿಸಿದವಕ್ಕೆ ಅದರ ಕಷ್ಟ ಮರತ್ತು ಹೋವುತ್ತ ಹಾಂಗೆ ಇದ್ದು
    *ಸೆಖೆ ಆವುತ್ತು ಹೇಳಿ ಅಂಗಿಯ ಎರಡು ಬಟನ್ ತೆಗದು, ಕೂಲಿಂಗ್ ಗ್ಲಾಸ್ ಹಾಕಿಯೊಂಡು ಹೋಪ ಮಾಣಿಯ ನೋಡಿದ ಕೂಸುಗೊ ತುಂಬಾ “ಸ್ಟೈಲ್” ಇದ್ದ ಹೇಳಿದರೆ, ನೋಡ್ಲಾಗದ ಅವನ “ಕೋಲ” ಹೇಳಿದವು ಅತ್ತೆಯಕ್ಕೊ.
    *ಅಜ್ಜಿಗೆ ಬೀಸಾಳೆ ಕೊರವಗ ಸೆಖೆ ಆವುತ್ತಕ್ಕೆ ಪುಳ್ಳಿ ಮಾಣಿ ಬೀಸಾಳೆಲಿ ಗಾಳಿ ಹಾಕಿಯೊಂಡು ಇತ್ತಿದ್ದಡ.
    *ಹಾಳೆ ಬೀಸಾಳೆ ಫೇಕ್ಟರಿ ಮಾಡ್ಲೆ 400 ಎಕ್ರೆ ಜಾಗೆ ಬೇಕು ಹೇಳಿ “ಯೆಡ್ಡಿ” ಹತ್ರ “ಅಂಬಿ” ಮಾತುಕತೆ ಮಾಡಿದ್ದು ಪೇಪರ್ನವಕ್ಕೆ ಗೊಂತಾಯಿದಿಲ್ಲೆ ಅಡ.
    *ಊರಿಂದ ಬಪ್ಪಗ ಶರ್ಮಪ್ಪಚ್ಚಿ ಒಂದು ಕಟ್ಟ ಹಾಳೆ ತಯಿಂದವಡ- ಬೀಸಾಳೆ ಮಾಡ್ಲೆ. ಹತ್ರಾಣ ಮನೆಯವಕ್ಕೆ ಕೊಡುತ್ತವೋ ಗೊಂತಿಲ್ಲೆ.

  9. ಮನಸ್ಸಿoಗೆ ತಟ್ಟುವ, ವಿನೋದದ ಲೇಪನವಿಪ್ಪ ಲೇಖನoಗ ಒಪ್ಪಣ್ಣನ ಹತ್ತರೆ ನವಗೆ ಸಿಕ್ಕುತ್ತಾ ಇದ್ದು. ಪ್ರತಿ ಸರ್ತಿಯಾಣ ಹಾಂಗೆ ಈ ಸರ್ತಿಯೂ ಲೇಖನವ ತುಂಬಾ enjoy ಮಾಡಿದೆ. ಬೇಸಗೆಯ ಸೆಕೆಗೆ ತಂಗಾಳಿ ಹಲವು ರೀತಿಲಿ ಸಿಕ್ಕಿದ ಹಾಂಗೆ ಆತು. ಹಳ್ಳಿ ಸೊಗಡಿನ ಆತಿಥ್ಯ, ಪ್ರೀತಿಯ ಮಾತುಗ, ನಗು ಇತ್ಯಾದಿಗಳ ಹಳ್ಳಿಯ ಜನoಗ ಕೊಡುವಷ್ಟು ಲಾಯಿಕಲ್ಲಿ ಬೇರೆಯವ ಕೊಡಲೇ ಕಷ್ಟ ಅಲ್ದಾ ಒಪ್ಪಣ್ಣ????

  10. ಬೆಂಗಳೂರಿಲ್ಲಿ ಎರಡು ದಿನ ಒಳ್ಳೆ ಮಳೆ ಬಂದ ಗೌಜಿ ನೋಡಿ ಒಪ್ಪಣ್ಣಂಗೆ ಬೆಗರಿತ್ತಡ.
    ಮೈ ಕೈಗೆ ಪೆಟ್ರೋಲ್ ಉದ್ದಿಗೊಂಡು ಬಂದ ಶರ್ಮಪ್ಪಚ್ಚಿಯ ಹೆಂಡತಿ “ಪೆಟ್ರೋಲ್ ನಾರುತ್ತು” ಹೇಳಿ ಒಳ ಬಪ್ಪಲೆ ಬಿಟ್ಟಿದಿಲ್ಲೆ ಅಡ. ಶರ್ಮಪ್ಪಚ್ಚಿ ಪಾಪ ಬೆಶಿಲಿಂಗೆ ಹೆರ ನಿಂದದೇ ಬಂತು.
    ಮಣಿಪಾಲಕ್ಕೆ ವೋಲ್ವೋ ಬಸ್ಸಿಂಗೆ ಕಾದು ಕೂದ ಪುಟ್ಟಣ್ಣ, 2 ಬಾಟ್ಲಿ “ಬಿಸಿಲೇರಿ” ನೀರು ಕುಡುದಡ.
    ಸೆಖೆ ಹೇಳಿ ಟೇರೇಸಿನ ಮೇಗೆ ಮನುಗಿದ ಭಾವಯ್ಯ, ನುಸಿ ಕಚ್ಚಿಸಿಗೊಂಡದೇ ಬಂತು.
    ಸುಳ್ಯಲ್ಲಿ ಮಳೆ ಬಂದ ಸುದ್ದಿ ಕೇಳಿದ ಸುಬ್ಬಣ್ಣ, ಸುಳ್ಯ ಬಸ್ಸಿಂಗೆ ಕಾದೊಂಡು ಇತ್ತಿದ್ದ.
    ಒಂದೇ ದಿನಲ್ಲಿ ಹಪ್ಪಳ ಸರೀ ಒಣಗಿತ್ತು, ಇನ್ನು ಕಟ್ಟ ಕಟ್ಟಿ ಮಡುಗಲೆ ಅಕ್ಕು ಹೇಳಿ ಒಪ್ಪಕ್ಕಂಗೆ ಭಾರೀ ಕೊಶಿ ಆತು.
    ಮಳೆ ಬಂದರೆ ನೀರು ಚೇಪೆಕ್ಕು ಹೇಳಿ ಇಲ್ಲೆ. ಮಳೆ ಬಾರದ್ದರೆ ನೀರೇ ಇಲ್ಲದ್ದ ಮತ್ತೆ ಚೇಪುವದು ಎಂತರ. ಹೇಂಗೂ ಚೇಪುತ್ತ ಕೆಲಸ ಇಲ್ಲೆ ಹೇಳಿ ಕಿಟ್ಟಣ್ಣಂಗೆ ಕೊಶಿಯೇ ಕೊಶಿ.

  11. ಒಪ್ಪಣ್ಣ ಬರದ್ದರ ಓದಿ ಈ ಸುಡುವಿಲೂ ತಲೆ ತ೦ಪಾತು….ಹಾ೦ಗೇ ಇನ್ನು ಕೆಲವು ಬಿಟ್ಟು ಹೋದ್ದರ ತಿಳಿಶುವ ಅಲ್ದೋ?
    % ಕು೦ಬ್ಳೆ ಬಸ್ ಸ್ಟೇ೦ಡಿಲಿ ಇ೦ಟರ್ ಲೋಕಿ೦ಗು ಹಾಕುತ್ತಾ ಇದ್ದ ಕಾರಣ ಬಸ್ಸುಗ ಎಲ್ಲಾ ಮಾರ್ಗಲ್ಲಿ ಬೆಶಿಲಿ೦ಗೆ ನಿ೦ಬದು…ಬಚ್ಚ೦ಗಾಯಿ ಬ್ಯಾರಿಗೆ ಹಾ೦ಗಾಗಿ ಈ ವರ್ಷ ಬ೦ಪರ್ ವ್ಯಾಪಾರ..
    % ಸೆಕೆ ತಡವಲೆಡಿಯದ್ದೆ ಮಣಿಪಾಲ ಮ೦ಗ್ಳೂರು ಏಸಿ ವೋಲ್ವೋ ಬಸ್ಸಿನ ಕಾಸ್ರೋಡು ವರೆಗೆ ಓಡುಸುಲೆ ಸುರು ಮಾಡಿದವಡ…ಕು೦ಬ್ಳೆ ಅಜ್ಜ ಒ೦ದಾರಿ ಅದರ್ಲಿ ಹೋಪನೋ ಹೇಳಿ ಕೇಳಿಯೋ೦ಡಿತ್ತವು
    %ಈ ಸೆಕೆಗೆ ಎಲ್ಲದರೊಟ್ಟಿ೦ಗೆ ಇದೊ೦ದು ಕೆಲಸ ಹೇಳಿ ಖಾನೇಶುಮಾರಿ ಡ್ಯೂಟಿ ಸಿಕ್ಕಿದ ಅಬ್ಬೆ ಪರೆ೦ಚಿಗೋ೦ಡು ಇತ್ತವು…ಸದ್ಯ ಅವಕ್ಕೆ ಸೂಪರ್ವೈಸರ್ ಕೆಲಸ. ಮನೆ ಮನೆ ತಿರುಗುಲೆ ಇಲ್ಲೆ!!!…
    %ಹೀ೦ಗುದೇ ಸೆಕೆ ಹೆಚ್ಚಪ್ಪಲೆ ಭಾರತದ ದನಗ ಬಿಡುವ ಹುರಿಕ್ಕೆ ಗೇಸು(ಮೀಥೇನು) ಕಾರಣ ಹೇಳಿ ಅಮೇರಿಕದವು ಬೊಬ್ಬೆ ಹರಿತ್ತವು(ಓಝೋನು ಒಟ್ಟೆ ಆವ್ತಡ). ನಮ್ಮ ದನಗಳ ಹುರಿಕ್ಕೆ ಮೂಸುದೇ ಅವಕ್ಕೆ ಕೆಲಸವೋಳಿ? ಅವರ ಕ೦ಪೆನಿಗಳ ಹೊಗೆ ಅವಕ್ಕೆ ಕಾ೦ಬಲೇ ಇಲ್ಲೆ…
    %ಸೆಕೆಗೆ ಏ ಸಿ ಇಲ್ಲದ್ದೆ ಕಾರು ಓಡ್ಸುಲೆ ಎಡಿತ್ತಿಲ್ಲೆ…ಹಾ೦ಗಾಗಿ ಮೈಲೇಜು ಬರೇ ಮೋಸ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×